ಭಗವದ್ಗೀತೆ ಅಧ್ಯಾಯ - 5
· ಶ್ಲೋಕ - 01
ನಾಲ್ಕನೆ
ಅಧ್ಯಾಯದಲ್ಲಿ ಕೃಷ್ಣ ಕರ್ಮಯೋಗದ ಬಗ್ಗೆ ಹೇಳಿದ ಹಾಗು ಕೊನೆಯಲ್ಲಿ ಕರ್ಮಸನ್ಯಾಸದ ಬಗ್ಗೆಯೂ
ಹೇಳಿದ. ಇಲ್ಲಿ ನಮಗೆ
ಸ್ವಲ್ಪ ಗೊಂದಲವಾಗುತ್ತದೆ. ಇದನ್ನು ಸಂಪೂರ್ಣ ಅರ್ಥ ಮಾಡಿಕೊಳ್ಳಬೇಕಾದರೆ ಮೊದಲು ಕರ್ಮಯೋಗ
ಮತ್ತು ಕರ್ಮಸಂನ್ಯಾಸ ಅಂದರೆ ಏನು ಎಂದು ತಿಳಿಯಬೇಕು. ಮೇಲ್ನೋಟಕ್ಕೆ ನಮಗೆ ಕರ್ಮಸಂನ್ಯಾಸ ಅಂದರೆ 'ಕರ್ಮತ್ಯಾಗ' ಎನ್ನುವಂತೆ ಕಾಣುತ್ತದೆ. ಆದರೆ ಕೃಷ್ಣ
ನಾಲ್ಕನೇ ಅಧ್ಯಾಯದ
ಕೊನೆಯಲ್ಲಿ "ಎದ್ದು ನಿಲ್ಲು- ಯುದ್ಧ ಮಾಡು" ಎಂದು ಅರ್ಜುನನನ್ನು ಕರ್ಮ ಮಾಡುವಂತೆ
ಹುರಿದುಂಬಿಸಿದ್ದನ್ನು ನಾವು ಕಂಡಿದ್ದೇವೆ. ಇದರಿಂದ ಕರ್ಮಸಂನ್ಯಾಸ ಅಂದರೆ
ಕರ್ಮತ್ಯಾಗವಲ್ಲ
ಎನ್ನುವುದು ನಮಗೆ ಸ್ಪಷ್ಟವಾಗುತ್ತದೆ. ಶಾಸ್ತ್ರೀಯವಾಗಿ ಕರ್ಮಸಂನ್ಯಾಸ ಎಂದರೆ ದ್ವಂದ್ವಾತೀತವಾಗಿ,
ಕರ್ಮಫಲದ
ಬಯಕೆಯಿಲ್ಲದೆ-ಕರ್ಮ ಮಾಡುವುದು. ಇಲ್ಲಿ ರಾಗ-ದ್ವೇಷಗಳಿಗೆ, ಕಾಮ-ಕ್ರೋಧಗಳಿಗೆ ಎಡೆಯಿಲ್ಲ. ಈ ಬಗ್ಗೆಯೂ
ವಿಶೇಷವಾಗಿ ಕೃಷ್ಣ ಹಿಂದೆ ವಿವರಿಸಿದ್ದ. ಆದ್ದರಿಂದ ಕರ್ಮಸಂನ್ಯಾಸ ಎಂದರೆ
ಕರ್ಮವನ್ನು ಬಿಡುವುದಲ್ಲ, ಕರ್ಮದಲ್ಲಿ
ಕಾಮ ಕ್ರೋಧಗಳನ್ನು ಬಿಡುವುದು. "ಕಾಮಕ್ರೋಧಗಳ ಅತೀತನಾಗಿ
ಯುದ್ಧಮಾಡು ಮತ್ತು
ಜ್ಞಾನಯೋಗದ ದಾರಿಯಲ್ಲಿ ನಡೆ" ಎನ್ನುವುದು ಅರ್ಜುನನಿಗೆ ಕೃಷ್ಣನ ಸಂದೇಶ. ಆದರೆ ಕಾಮ-ಕ್ರೋಧಗಳ
ಅತೀತನಾಗಿ ಜ್ಞಾನಮಾರ್ಗದಲ್ಲಿ ಯುದ್ಧ ಮಾಡುವುದು ಹೇಗೆ? ಇದನ್ನು ಅರ್ಥ ಮಾಡಿಕೊಳ್ಳುವುದು ನಮಗೆ ಸ್ವಲ್ಪ ಕಷ್ಟ. ಈ
ಕುರಿತು ಅರ್ಜುನ ಕೃಷ್ಣನಲ್ಲಿ ವಿವರಣೆಯನ್ನು ನಮ್ಮ ನಿಮ್ಮೆಲ್ಲರ ಪರವಾಗಿ ಕೇಳುವುದರೊಂದಿಗೆ
ಐದನೇ ಅಧ್ಯಾಯ ಆರಂಭವಾಗುತ್ತದೆ. ಈ ಅಧ್ಯಾಯದಲ್ಲಿ ಕರ್ಮಸಂನ್ಯಾಸದ ಬಗ್ಗೆ
ವಿಶೇಷವಾದ ವಿವರಣೆಯನ್ನು ಕೃಷ್ಣ ನಮ್ಮ ಮುಂದಿಟ್ಟಿದ್ದಾನೆ.
ಅರ್ಜುನ ಉವಾಚ ।
ಸಂನ್ಯಾಸಂ ಕರ್ಮಣಾಂ ಕೃಷ್ಣ ಪುನರ್ಯೋಗಂ ಚ ಶಂಸಸಿ ।
ಯಚ್ಛ್ರೇಯ ಏತಯೋರೇಕಂ ತನ್ಮೇ ಬ್ರೂಹಿ ಸುನಿಶ್ಚಿತಮ್ ॥೧॥
ಸಂನ್ಯಾಸಂ ಕರ್ಮಣಾಂ ಕೃಷ್ಣ ಪುನರ್ಯೋಗಂ ಚ ಶಂಸಸಿ ।
ಯಚ್ಛ್ರೇಯ ಏತಯೋರೇಕಂ ತನ್ಮೇ ಬ್ರೂಹಿ ಸುನಿಶ್ಚಿತಮ್ ॥೧॥
ಅರ್ಜುನಃ ಉವಾಚ-ಅರ್ಜುನ
ಕೇಳಿದನು :
ಸಂನ್ಯಾಸಂ
ಕರ್ಮಣಾಮ್ ಕೃಷ್ಣ
ಪುನಃ ಯೋಗಮ್ ಚ
ಶಂಸಸಿ ।
ಯತ್ ಶ್ರೇಯಃ ಏತಯೋಃ
ಏಕಮ್ ತತ್ ಮೇ ಬ್ರೂಹಿ ಸುನಿಶ್ಚಿತಮ್ -- ಕೃಷ್ಣ, ಒಮ್ಮೆ ಕರ್ಮಸಂನ್ಯಾಸವನ್ನು ಹೊಗಳುತ್ತಿ; ಮತ್ತೊಮ್ಮೆ ಕರ್ಮಯೋಗವನ್ನು. ಇವೆರಡರಲ್ಲಿ
ಯಾವುದು ಮಿಗಿಲು
ಅದನ್ನು ನನಗೆ ಖಚಿತವಾಗಿ ಹೇಳು.
ಅರ್ಜುನ ಕೇಳುತ್ತಾನೆ
: "ಓ
ಕೃಷ್ಣ, ನೀನು ಒಮ್ಮೆ ಹೋರಾಡು ಎನ್ನುತ್ತಿ,
ಇನ್ನೊಮ್ಮೆ
ಕರ್ಮಸಂನ್ಯಾಸ ಮಾಡು ಅನ್ನುತ್ತಿ . ಒಂದು ವೇಳೆ ಕರ್ಮಸಂನ್ಯಾಸ ಅಂದರೆ ಕರ್ಮತ್ಯಾಗವಾದರೆ ಇದು
ಒಂದಕ್ಕೊಂದು ವಿರುದ್ಧ. ಇದರಲ್ಲಿ ಯಾವುದು ಶ್ರೇಯಸ್ಕರ ಎನ್ನುವುದನ್ನು ನಿಶ್ಚಿತವಾಗಿ ಹೇಳು"
ಎಂದು ಅರ್ಜುನ ಕೃಷ್ಣನನ್ನು ಕೇಳುತ್ತಾನೆ. ಯುದ್ಧ ಮಾಡುವಾಗ ದ್ವಂದ್ವ ಅನ್ನುವುದು ಇದ್ದೇ ಇದೆ.
ದ್ವಂದ್ವತ್ಯಾಗದಿಂದ ಯುದ್ಧ ಮಾಡುವುದು ಹೇಗೆ? ಕರ್ಮಸಂನ್ಯಾಸ ಮತ್ತು ಕರ್ಮಯೋಗ ಇವೆರಡೂ
ಒಟ್ಟಿಗೆ ಹೇಗೆ ಸಾಧ್ಯ? ಯುದ್ಧವೆಂದಮೇಲೆ ರಾಗ-ದ್ವೇಷ
ಇದ್ದೇ ಇರುತ್ತದೆ. ಈ ಕಾರಣದಿಂದ ಕೃಷ್ಣನ ಮಾತು ನಮಗೆ ಖಚಿತವಾಗಿ ಅರ್ಥವಾಗುವುದಿಲ್ಲ. ಅದಕ್ಕಾಗಿ ಅರ್ಜುನ
ಕೃಷ್ಣನಲ್ಲಿ ವಿವರವನ್ನು ಕೇಳುತ್ತಿದ್ದಾನೆ.
ಇಲ್ಲಿ
ಅರ್ಜುನ ತನ್ನ ಪ್ರಶ್ನೆಯ
ನಡುವೆ "ಕೃಷ್ಣ" ಎನ್ನುವ ಸಂಬೋಧನೆಯನ್ನು ಬಳಸಿದ್ದಾನೆ. 'ಕರ್ಷತಿ ಇತೀ ಕೃಷ್ಣಃ' ಎಲ್ಲರನ್ನೂ ತನ್ನೆಡೆಗೆ ಸೆಳೆಯುವ ಪಾದರಸ,
ಸಂಸಾರದಿಂದ ಎತ್ತರಕ್ಕೆ
ಕೊಂಡೊಯ್ಯುವ ಕರ್ಷಣಶಕ್ತಿಯಾದ ಸೌಂದರ್ಯಮೂರ್ತಿ ಭಗವಂತ ಕೃಷ್ಣಃ. ಅಜ್ಞಾನದಿಂದ ಬರುವ ಸಂಶಯವನ್ನು ಕರ್ಷಣೆಮಾಡಿ ಜ್ಞಾನದ ಮಡಿಲಿಗೆ
ಸೆಳೆಯುವ ನೀನು ನನಗೆ ಖಚಿತವಾಗಿ ಯಾವುದು ಶ್ರೇಯಸ್ಸು ಎನ್ನುವುದನ್ನು ತಿಳಿಸು ಎನ್ನುವ ಭಾವ ಈ ಸಂಬೋಧನೆಯಲ್ಲಿದೆ.
· ಶ್ಲೋಕ - 02
ಭಗವಾನುವಾಚ ।
ಸಂನ್ಯಾಸಃ ಕರ್ಮಯೋಗಶ್ಚ ನಿಃಶ್ರೇಯಸಕರಾವುಭೌ ।
ತಯೋಸ್ತು ಕರ್ಮಸಂನ್ಯಾಸಾತ್ ಕರ್ಮಯೋಗೋ ವಿಶಿಷ್ಯತೇ ॥೨॥
ಸಂನ್ಯಾಸಃ ಕರ್ಮಯೋಗಶ್ಚ ನಿಃಶ್ರೇಯಸಕರಾವುಭೌ ।
ತಯೋಸ್ತು ಕರ್ಮಸಂನ್ಯಾಸಾತ್ ಕರ್ಮಯೋಗೋ ವಿಶಿಷ್ಯತೇ ॥೨॥
ಭಗವಾನುವಾಚ-
ಭಗವಂತ ಹೇಳಿದನು
ಸಂನ್ಯಾಸಃ
ಕರ್ಮಯೋಗಃ ಚ ನಿಃಶ್ರೇಯಸ ಕರೌ ಉಭೌ ।
ತಯೋಃ
ತು ಕರ್ಮ ಸಂನ್ಯಾಸಾತ್ ಕರ್ಮಯೋಗಃ ವಿಶಿಷ್ಯತೇ -- ಕರ್ಮಸಂನ್ಯಾಸ ಮತ್ತು ಕರ್ಮಯೋಗ
ಎರಡೂ ಒಳಿತಿನ ದಾರಿಗಳೆ. ಅವುಗಳಲ್ಲಿ ಕರ್ಮಸಂನ್ಯಾಸಕ್ಕಿಂತ ಕರ್ಮಯೋಗ ಮಿಗಿಲು.
· ಶ್ಲೋಕ - 03
ಜ್ಞೇಯಃ ಸ ನಿತ್ಯಸಂನ್ಯಾಸೀ ಯೋ ನ ದ್ವೇಷ್ಟಿ ನ
ಕಾಂಕ್ಷತಿ ।
ನಿರ್ದ್ವಂದ್ವೋ ಹಿ ಮಹಾಬಾಹೋ ಸುಖಂ ಬಂಧಾತ್ ಪ್ರಮುಚ್ಯತೇ ॥೩॥
ನಿರ್ದ್ವಂದ್ವೋ ಹಿ ಮಹಾಬಾಹೋ ಸುಖಂ ಬಂಧಾತ್ ಪ್ರಮುಚ್ಯತೇ ॥೩॥
ಜ್ಞೇಯಃ
ಸ ನಿತ್ಯಸಂನ್ಯಾಸೀ ಯಃ ನ ದ್ವೇಷ್ಟಿ ನ ಕಾಂಕ್ಷತಿ ।
ನಿರ್ದ್ವಂದ್ವಃ ಹಿ ಮಹಾಬಾಹೋ
ಸುಖಮ್ ಬಂಧಾತ್
ಪ್ರಮುಚ್ಯತೇ --ದ್ವೇಷಿಸದವನು, ಮತ್ತು
ಬಯಸದವನು ನಿಜವಾದ
ಸಂನ್ಯಾಸಿಯೆಂದರಿಯಬೇಕು. ಮಹಾವೀರ, ಇಂಥ
ದ್ವಂದ್ವಗಳನ್ನು ಗೆದ್ದವನು ಹಾಯಾಗಿ ಕರ್ಮ ಸೆರೆಯಿಂದ ಪಾರಾಗುತ್ತಾನೆ.
ಇಲ್ಲಿ
ಅರ್ಜುನನ ಪ್ರಶ್ನೆಗೆ ಕೃಷ್ಣನ ಉತ್ತರ ಒಗಟಿನ ರೂಪದಲ್ಲಿದೆ. ಈ ಶ್ಲೋಕವನ್ನು ಎಚ್ಚರಿಕೆಯಿಂದ
ಬಿಡಿಸಿ ಅರ್ಥೈಸಿಕೊಳ್ಳಬೇಕು. ಇಲ್ಲಿ ಹೇಳುವ ಸಂನ್ಯಾಸ ಸಂನ್ಯಾಸಾಶ್ರಮವಲ್ಲ.
ಯಾರು ರಾಗ ದ್ವೇಷವನ್ನು ದಾಟಿ ನಿಲ್ಲುತ್ತಾನೋ ಅವನು ಸಂನ್ಯಾಸಿ. ಸ+ಅಹಂ+ನ್ಯಾಸ-ಸಂನ್ಯಾಸ. 'ಸ' ಅಂದರೆ ಸಂಪೂರ್ಣವಾದ, ಸಮೀಚೀನವಾದ, ದೋಷರಹಿತ ಮತ್ತು ಗುಣಪೂರ್ಣನಾದ ಭಗವಂತ. ಅವನಲ್ಲಿ ನಮ್ಮ
ಅಹಂ(ರಾಗ ದ್ವೇಷ-ಅಹಂಕಾರ)ನ್ನು ನ್ಯಾಸ ಮಾಡುವುದು ಸಂನ್ಯಾಸ. ಕೃಷ್ಣ ಹೇಳುತ್ತಾನೆ:
"ಕರ್ಮಯೋಗ ಕರ್ಮಸಂನ್ಯಾಸಕ್ಕಿಂತ ಮಿಗಿಲು" ಎಂದು. ಏಕೆಂದರೆ ಇಲ್ಲಿ ಅರ್ಜುನ 'ನನಗೆ ಕೌರವರ ಮೇಲೆ ದ್ವೇಷವಿಲ್ಲ, ನಾವೇ ಗೆಲ್ಲಬೇಕು ಎನ್ನುವ ಬಯಕೆ ಇಲ್ಲ,
ನನಗೆ ಯಾವ ಫಲದ ಆಸೆಯೂ
ಇಲ್ಲ' ಎಂದು ಯುದ್ಧ ಮಾಡದೇ ನಿರ್ಲಿಪ್ತನಾಗಿ-ನಿಷ್ಕ್ರೀಯನಾಗಿ
ಕುಳಿತರೆ ಅದು ಕರ್ಮಸಂನ್ಯಾಸವಾಗುತ್ತದೆ. ಆದರೆ ಹೀಗೆ ಸುಮ್ಮನೆ ಕುಳಿತರೆ ಕರ್ತವ್ಯಕರ್ಮ(ಕರ್ಮಯೋಗ)
ಮಾಡಿದಂತಾಗುವುದಿಲ್ಲ . ಇದರಿಂದಾಗಿ ಅಧರ್ಮಕ್ಕೆ ಜಯವಾಗುತ್ತದೆ. ಆದ್ದರಿಂದ
ಕರ್ಮಸಂನ್ಯಾಸ ಮತ್ತು ಕರ್ಮಯೋಗ ಜೊತೆ-ಜೊತೆಯಾಗಿರಬೇಕು. ಕರ್ಮಯೋಗವಿಲ್ಲದ
ಕರ್ಮಸಂನ್ಯಾಸ ಎಂದೂ ಶ್ರೇಯಸ್ಸನ್ನು ತರುವುದಿಲ್ಲ ಎನ್ನುವುದು ಕೃಷ್ಣನ ಉತ್ತರ.
ಸಂನ್ಯಾಸ ಅನ್ನುವುದು
ಅರ್ಥಪೂರ್ಣವಾಗಬೇಕಾದರೆ ಕಾಮ ಕ್ರೋಧಗಳ ತ್ಯಾಗದ ಜೊತೆಗೆ ಕ್ರಿಯೆ ಇರಬೇಕು. ಹೋರಾಡಬೇಕು-ಆದರೆ
ರಾಗದ್ವೇಷದಿಂದಲ್ಲ. ಕ್ರಿಯೆ ಇಲ್ಲದೆ ರಾಗ-ದ್ವೇಷ ತ್ಯಾಗಕ್ಕೆ ಅರ್ಥವಿಲ್ಲ. ಆದ್ದರಿಂದ
ದ್ವಂದ್ವಾತೀತವಾಗಿ ಕರ್ಮ ಮಾಡಬೇಕು ಎನ್ನುವುದು ಕೃಷ್ಣನ ಸಂದೇಶ.
ನಮ್ಮ
ಜೀವನವೇ ಒಂದು ಹೋರಾಟ. ಇಲ್ಲಿ ನಮ್ಮ ಕರ್ತವ್ಯಕರ್ಮದಿಂದ ದೂರ ಸರಿದು, ರಾಗ-ದ್ವೇಷ, ಕಾಮ-ಕ್ರೋಧವನ್ನು ಬಿಟ್ಟು, ನಿಷ್ಕ್ರೀಯನಾಗಿ, ‘ಕರ್ಮಸಂನ್ಯಾಸವನ್ನು ಸಾಧಿಸಿದೆ’ ಎಂದುಕೊಂಡರೆ ನಮ್ಮ ಜೀವನ ವ್ಯರ್ಥ. ಅದರಿಂದ ಎಂದೂ
ಶ್ರೇಯಸ್ಸಿಲ್ಲ ಮತ್ತು ಮೋಕ್ಷವಿಲ್ಲ. ರಾಗ-ದ್ವೇಷ ತ್ಯಾಗದ ಜೊತೆಗೆ, ಬದುಕು ಎನ್ನುವ ಜೀವನ ಸಂಗ್ರಾಮದಲ್ಲಿ ನಮ್ಮ
ಕರ್ತವ್ಯಕರ್ಮದ ಮುಖೇನ ಹೋರಾಟ ಮಾಡುವುದೇ ನಿಜವಾದ ಜೀವನಧರ್ಮ. ಈ ರೀತಿ ದ್ವಂದ್ವಾತೀತ ಬದುಕನ್ನು
ಬಾಳುವವನು ಕರ್ಮದ ಸೆರೆಯಿಂದ ಪಾರಾಗುತ್ತಾನೆ.
ಇಲ್ಲಿ
ಕೃಷ್ಣ ಅರ್ಜುನನ್ನು ಮಹಾಬಾಹು ಎಂದು ಸಂಬೋಧಿಸಿದ್ದಾನೆ. ಹಿಂದೆ ಹೇಳಿದಂತೆ ಮಹಾಬಾಹು ಎಂದರೆ ಮಹಾವೀರ ಎನ್ನುವುದು ಮೇಲ್ನೋಟದ
ಅರ್ಥ.ಇಲ್ಲಿ ಈ ವಿಶೇಷಣಕ್ಕೆ
ವಿಶೇಷ ಅರ್ಥವಿದೆ.
'ಮಹಾಬಾ' ಅಂದರೆ ರಾಗ-ದ್ವೇಷ, ಮತ್ತು ಕಾಮನೆಗಳ ಮಡುವಿನಲ್ಲಿರುವವ. ಇಂತಹ ಮಹತ್ತರವಾದ
ರಾಗ-ದ್ವೇಷಗಳನ್ನು ತ್ಯಾಗ ಮಾಡಿದವ ಮಹಾಬಾಹು. "ನಿನ್ನಲ್ಲಿ ಕರ್ಮಸಂನ್ಯಾಸವಿದೆ, ಅದರ ಜೊತೆಗೆ ಕರ್ಮಯೋಗ ಮಾಡಲು ಅರ್ಹತೆಯುಳ್ಳ
ಮಹಾವೀರ ನೀನು" ಎನ್ನುವ ಧ್ವನಿ ಈ ಸಂಬೋಧನೆಯಲ್ಲಿದೆ. ನಮ್ಮ ಜೀವನ ಸಂಗ್ರಾಮದಲ್ಲಿ ರಾಗ-ದ್ವೇಷಗಳನ್ನು ಬಿಟ್ಟು
ಕರ್ಮ ಮಾಡಬೇಕು. ಕರ್ಮಸಂನ್ಯಾಸ ಮತ್ತು ಕರ್ಮಯೋಗ ಎರಡೂ ಒಟ್ಟಿಗಿರಬೇಕು ಎನ್ನುವುದು ಮೂಲ ಸಂದೇಶ. ಅದಕ್ಕೆ
ಹೊಂದಿಕೆಯಾಗುವಂತೆ ಇಲ್ಲಿ 'ಮಹಾಬಾಹು'
ಎನ್ನುವ ವಿಶೇಷಣ
ಬಳಕೆಯಾಗಿದೆ
· ಶ್ಲೋಕ - 04
ಸಾಂಖ್ಯಯೋಗೌ ಪೃಥಗ್ ಬಾಲಾಃ ಪ್ರವದದಂತಿ ನ
ಪಂಡಿತಾಃ ।
ಏಕಮಪ್ಯಾಸ್ಥಿತಃ ಸಮ್ಯಗುಭಯೋರ್ವಿಂದತೇ ಫಲಮ್ ॥೪॥
ಏಕಮಪ್ಯಾಸ್ಥಿತಃ ಸಮ್ಯಗುಭಯೋರ್ವಿಂದತೇ ಫಲಮ್ ॥೪॥
ಸಾಂಖ್ಯ
ಯೋಗೌ ಪೃಥಕ್ ಬಾಲಾಃ
ಪ್ರವದಂತಿ ನ
ಪಂಡಿತಾಃ ।
ಏಕಮ್
ಅಪಿ ಅಸ್ಥಿತಃ ಸಮ್ಯಕ್ ಉಭಯೋಃ ವಿಂದತೇ ಫಲಮ್- ಜ್ಞಾನ ಮತ್ತು ಕರ್ಮದ ದಾರಿ ಬೇರೆ
ಬೇರೆ [ಒಂದು ಸಂನ್ಯಾಸಿಗಳಿಗೆ ಹಾಗು ಇನ್ನೊಂದು ಸಂಸಾರಿಗಳಿಗೆ] ಎಂದು ನುಡಿದವರು ಬಾಲಿಷರು[ತಿಳಿಗೇಡಿಗಳು];
ತಿಳಿದವರಲ್ಲ. ಯಾವುದೋ
ಒಂದು ದಾರಿಯಲ್ಲಿ ಸರಿಯಾಗಿ ನಡೆದವನು ಎರಡರ ಫಲವನ್ನೂ ಪಡೆಯುತ್ತಾನೆ.
ಹಿಂದೆ
ಕರ್ಮಸಂನ್ಯಾಸ ಮತ್ತು
ಕರ್ಮಯೋಗವನ್ನು ವಿವರಿಸಿದಂತೆ ಕೃಷ್ಣ ಇಲ್ಲಿ ಸಾಖ್ಯವನ್ನು(ಜ್ಞಾನ-Spiritual
Wisdom) ಮತ್ತು
ಯೋಗವನ್ನು(ಅನುಷ್ಠಾನ-Spiritual Practice) ವಿವರಿಸುತ್ತಾನೆ. ಶಾಸ್ತ್ರದಲ್ಲಿ ಸಾಂಖ್ಯ(ಸಮ್ಯಕ್ ಖ್ಯಾತಿ) ಎಂದರೆ ಗಣಿತವಲ್ಲ,
ಅದು ಶುದ್ಧ
ಆತ್ಮತತ್ವವಿಜ್ಞಾನ-ಭಗವಂತನ ಜ್ಞಾನ. ಯಾರ ಅಂಕೆಯಲ್ಲಿ ಈ ಇಡೀ ಜಗತ್ತು ನಡೆಯುತ್ತಿದೆಯೋ ಅವನ ಅರಿವು. ಇದನ್ನು
ತಿಳಿಯದೇ ಇರುವವರನ್ನು ಕೃಷ್ಣ ಬಾಲಿಷರು ಹಾಗು ಅಂತವರ ಮಾತಿಗೆ ಮೂಲ ಆಧಾರ
ಎನ್ನುವುದಿಲ್ಲ ಎನ್ನುತ್ತಾನೆ. ಇಷ್ಟು ಹೇಳಿ ಕೃಷ್ಣ ಹೇಳುತ್ತಾನೆ "ಏಕಮಪ್ಯಾಸ್ಥಿತಃ
ಸಮ್ಯಗುಭಯೋರ್ವಿಂದತೇ ಫಲಮ್" ಎಂದು. ಅಂದರೆ ಯಾವುದೇ ಒಂದನ್ನು ನೀನು ಚೆನ್ನಾಗಿ ಆಚರಣೆಗೆ ತಂದರೆ
ಎರಡರ ಫಲವನ್ನೂ ಪಡೆಯುತ್ತಿ ಎಂದರ್ಥ. ಇಲ್ಲಿ ಪುನಃ ನಮಗೆ ಗೊಂದಲವಾಗಬಹುದು. ಇದರರ್ಥ
ಜ್ಞಾನವನ್ನು ಮಾತ್ರ ಅಥವಾ ಕರ್ಮವನ್ನು ಮಾತ್ರ ಆಚರಣೆ ಮಾಡುವುದು ಎಂದಲ್ಲ. ನಾವು ಕರ್ಮವನ್ನು
ಚನ್ನಾಗಿ ಮಾಡುವದು ಎಂದರೆ ತಿಳಿದು ಜ್ಞಾನಪೂರ್ವಕವಾಗಿ ಮಾಡುವದು, ಅದೇ ರೀತಿ ಜ್ಞಾನ ಚನ್ನಾಗಿರುವುದು ಎಂದರೆ ತಿಳಿದಿದ್ದನ್ನು
ಅನುಷ್ಠಾನಗೊಳಿಸುವುದು. ಆದ್ದರಿಂದ ಒಂದು 'ಜ್ಞಾನಪ್ರಧಾನ' ಇನ್ನೊಂದು
'ಕರ್ಮ ಪ್ರಧಾನ'ವಾಗಿರಬಹುದು ಆದರೆ ಒಂದು ಇನ್ನೊಂದಕ್ಕೆ ಪೂರಕ.
ಯಾರು ಇದನ್ನು ತಿಳಿದಿದ್ದಾರೆ
ಅವರು ಪಂಡಿತರು ಹಾಗು ಅವರು ನಿಜವಾದ ಫಲವನ್ನೂ ಪಡೆಯುತ್ತಾರೆ.
· ಶ್ಲೋಕ - 05
ಯತ್ ಸಂಖ್ಯೈಃ ಪ್ರಾಪ್ಯತೇ ಸ್ಥಾನಂ ತದ್ ಯೊಗೈರಪಿ
ಗಮ್ಯತೇ ।
ಏಕಂ ಸಾಂಖ್ಯಂ ಚ ಯೋಗಂ ಚ ಯಃ ಪಶ್ಯತಿ ಸ ಪಶ್ಯತಿ ॥೫॥
ಏಕಂ ಸಾಂಖ್ಯಂ ಚ ಯೋಗಂ ಚ ಯಃ ಪಶ್ಯತಿ ಸ ಪಶ್ಯತಿ ॥೫॥
ಯತ್ ಸಂಖ್ಯೈಃ
ಪ್ರಾಪ್ಯತೇ ಸ್ಥಾನಮ್ ತತ್ ಯೋಗ್ಯೆಃ ಅಪಿ ಗಮ್ಯತೇ ।
ಏಕಮ್ ಸಾಂಖ್ಯಮ್ ಚ
ಯೋಗಮ್ ಚ
ಯಃ ಪಶ್ಯತಿ ಸಃ ಪಶ್ಯತಿ-ಜ್ಞಾನ
ಯೋಗಿಗಳು ಪಡೆಯುವ ತಾಣದೆಡೆ ಕರ್ಮ ಯೋಗಿಗಳೂ ನಡೆಯುತ್ತಾರೆ. ಜ್ಞಾನ ಮತ್ತು ಕರ್ಮದ ದಾರಿಗಳ
ಗುರಿ ಒಂದೆ ಎಂದು
ತಿಳಿದವನೆ ನಿಜವಾಗಿ ತಿಳಿದವನು.
ಜ್ಞಾನಿಗಳು
ತಮಗೋಸ್ಕರ ಅಲ್ಲದೆ ಲೋಕಕ್ಕೆ ಮಾರ್ಗದರ್ಶನ ಮಾಡುವ ಸಲುವಾಗಿಯೂ ಕರ್ಮ ಮಾಡಬೇಕಾಗುತ್ತದೆ. ಏಕೆಂದರೆ ಸಮಾಜ ಅವರನ್ನು
ಅನುಸರಿಸುತ್ತದೆ. ಇದು ಅವರ ಮೇಲಿರುವ ಸಾಮಾಜಿಕ ಜವಾಬ್ದಾರಿ. ಆದ್ದರಿಂದ ಜ್ಞಾನ
ಮತ್ತು ಕರ್ಮ ಒಂದಕ್ಕೊಂದು ಪೂರಕ. ಜ್ಞಾನಪ್ರದ ಮತ್ತು ಕರ್ಮಪ್ರದ ಈ ಮಾರ್ಗದ ಗುರಿ ಒಂದೆ.
ಜ್ಞಾನಪ್ರಧಾನವಾಗಿ ಕರ್ಮ ಮಾಡುವ ಋಷಿಗಳು, ದೇವತೆಗಳು, ಮತ್ತು
ಕರ್ಮಪ್ರಧಾನವಾಗಿ ಜ್ಞಾನದಿಂದ ಕರ್ಮಮಾಡುವವರು ಸೇರುವ ಗುರಿ ಒಂದೆ-ಅದು ಆ ಭಗವಂತನನ್ನು. ಇಲ್ಲಿ
ಕರ್ಮಸಂನ್ಯಾಸವೇ ಬೇರೆ ಮತ್ತು ಕರ್ಮಯೋಗವೇ ಬೇರೆ ಎನ್ನುವುದು ಅರ್ಥ ಶೂನ್ಯ. ಇವೆರಡೂ
ಒಂದಕ್ಕೊಂದು ಪೂರಕ. ಯಾರು ಈ ಸತ್ಯವನ್ನು ತಿಳಿಯುತ್ತಾರೋ ಅವರು'ತಿಳಿದವರು'
· ಶ್ಲೋಕ - 06
ಸಂನ್ಯಾಸಸ್ತು ಮಹಾಬಾಹೋ ದುಃಖಮಾಪ್ತುಮಯೋಗತಃ ।
ಯೋಗಯುಕ್ತೋ ಮುನಿರ್ಬ್ರಹ್ಮನ ಚಿರೇಣಾಧಿಗಚ್ಛತಿ ॥೬॥
ಯೋಗಯುಕ್ತೋ ಮುನಿರ್ಬ್ರಹ್ಮನ ಚಿರೇಣಾಧಿಗಚ್ಛತಿ ॥೬॥
ಸಂನ್ಯಾಸಃ
ತು ಮಹಾಬಾಹೋ
ದುಃಖಮ್ ಆಪ್ತುಮ್ ಅಯೋಗತಃ ।
ಯೋಗ
ಯುಕ್ತಃ ಮುನಿಃ ಬ್ರಹ್ಮ ನ ಚಿರೇಣ ಅಧಿಗಚ್ಛತಿ-ಓ ಮಹಾವೀರ,ಕರ್ಮಯೋಗವಿರದ ಬರಿಯ ಸಂನ್ಯಾಸ [ದ್ವಂದ್ವ ತ್ಯಾಗ] ಬನ್ನವನ್ನೇ
ತಂದೀತು.[ಭಗವಂತನ ಪೂಜೆಯೆಂದು ಕರ್ಮ ಮಾಡುವ ಬದಲು ಕರ್ಮವನ್ನೇ ತೊರೆಯುವುದು ನರಕದ ದಾರಿ].
ಕರ್ಮ ಮಾಡುತ್ತ ದ್ವಂದ್ವವನ್ನು ಗೆದ್ದವನು ಭಗವಂತನನ್ನು ಪಡೆಯಲು ತಡವಾಗದು.
ಕರ್ಮಯೋಗವಿಲ್ಲದ ಬರಿಯ
ದ್ವಂದ್ವತ್ಯಾಗ [ಸಂನ್ಯಾಸ] ವ್ಯರ್ಥ.ಶಾಸ್ತ್ರವನ್ನು ಓದಿ ನನಗೆ ಜ್ಞಾನ ಬಂತು, ನಾನು ದ್ವಂದ್ವಾತೀತ, ನನಗೆ ಯಾವ ಕರ್ಮವೂ ಬೇಕಾಗಿಲ್ಲ ಎಂದು ತಿಳಿದು ನಿಷ್ಕ್ರೀಯನಾದರೆ
ಅದು ನಮ್ಮನ್ನು ಅದೋಗತಿಗೆ ತಳ್ಳುತ್ತದೆ. ಆದರೆ ದ್ವಂದ್ವಾತೀತನಾಗಿ ಕಾಮಕ್ರೋಧವನ್ನು ಗೆದ್ದು ಜ್ಞಾನಪೂರ್ವಕವಾಗಿ
ಕರ್ಮ ಮಾಡಿದರೆ ಅದರಿಂದ ಮೋಕ್ಷ ನಿಶ್ಚಿತ.
· ಶ್ಲೋಕ - 07
ಯೋಗಯುಕ್ತೋ ವಿಶುದ್ಧಾತ್ಮಾ ವಿಜಿತಾತ್ಮಾ
ಜಿತೇಂದ್ರಿಯಃ ।
ಸರ್ವಭೂತಾತ್ಮಭೂತಾತ್ಮಾ ಕುರ್ವನ್ನಪಿ ನ ಲಿಪ್ಯತೇ ॥೭॥
ಸರ್ವಭೂತಾತ್ಮಭೂತಾತ್ಮಾ ಕುರ್ವನ್ನಪಿ ನ ಲಿಪ್ಯತೇ ॥೭॥
ಯೋಗಯುಕ್ತಃ
ವಿಶುದ್ಧ ಆತ್ಮಾ ವಿಜಿತ ಆತ್ಮಾ ಜಿತ ಇಂದ್ರಿಯಃ ।
ಸರ್ವ
ಭೂತ ಆತ್ಮಭೂತ ಆತ್ಮಾ ಕುರ್ವನ್ ಅಪಿ ನ ಲಿಪ್ಯತೇ-ಕರ್ಮ ಯೋಗದಲ್ಲಿ ತೊಡಗಿದವನು, ತಿಳಿಯಾದ ಬಗೆಯವನು, ಬಗೆಯ ಗೆದ್ದವನು. ಇಂದ್ರಿಯಗಳನ್ನೂ ಗೆದ್ದವನು.
ಎಲ್ಲಾ ಜೀವಿಗಳನ್ನು
ಪೊರೆವ ಭಗವಂತ ತನ್ನ ದೊರೆಯೆಂದು ತಿಳಿದವನು.[ಭಗವಂತನಲ್ಲೆ ಬಗೆ ನೆಟ್ಟವನು]. ಮಾಡಿದರೂ
ಅಂಟಿಸಿಕೊಳ್ಳುವುದಿಲ್ಲ.
ಕರ್ಮಯೋಗದಲ್ಲಿ
ತೊಡಗಿದವನು ತನ್ನ ಮನೋನಿಗ್ರಹ ಮಾಡಿ ಶುದ್ಧವಾದ ಮನಸ್ಸಿನಿಂದ ಶುದ್ಧ ಕರ್ಮವನ್ನು
ಮಾಡಬೇಕು. ಮನಸ್ಸನ್ನು ಗೆಲ್ಲಬೇಕಾದರೆ ಭಗವಂತನ ಒಲವು ಬೇಕು. ಮನಸ್ಸನ್ನು ಗೆದ್ದವನು
ಇಂದ್ರಿಯಗಳನ್ನು ಗೆಲ್ಲುತ್ತಾನೆ-ಅದರಿಂದ ಆತ್ಮ ಶುದ್ಧಿಯಾಗುತ್ತದೆ. ಆಗ
ಸರ್ವಭೂತಗಳಿಗೂ
ಆತ್ಮಭೂತನಾದ ಭಗವಂತನೇ ನನ್ನ ಆತ್ಮ ಎನ್ನುವ ಅರಿವಾಗುತ್ತದೆ. ಸರ್ವಗತ, ಸರ್ವನಿಯಾಮಕ ಭಗವಂತ ನನ್ನೊಳಗೂ ಇದ್ದಾನೆ ಅವನೇ
ವಿಶ್ವನಿಯಾಮಕನಾಗಿ ವಿಶ್ವದಲ್ಲಿ ತುಂಬಿದ್ದಾನೆ. ಜಗತ್ತನ್ನು ನಿಯಂತ್ರಿಸುವ
ಅನಂತ ಶಕ್ತಿ ಅಣೋರ್ಣಿಯವಾಗಿ ನನ್ನ ಜೀವ ಸ್ವರೂಪದೊಳಗೂ ತುಂಬಿದೆ ಎನ್ನುವ ಅನುಷ್ಠಾನದಿಂದ, ಸರ್ವ ಭೂತಗಳಲ್ಲಿ ಅಂತರ್ಯಾಮಿಯಾದ ಭಗವಂತನಲ್ಲಿ
ಮನಸ್ಸನ್ನು ನೆಲೆಗೊಳಿಸಿ ಕರ್ಮ ಮಾಡಿದಾಗ ನಮಗೆ ಕರ್ಮ ಅಂಟಿಕೊಳ್ಳುವುದಿಲ್ಲ.
· ಶ್ಲೋಕ - 08 & 09
ಕರ್ಮ
ಸಂನ್ಯಾಸ ಮತ್ತು
ಕರ್ಮಯೋಗ ಎರಡನ್ನು ಬೆರಸಿ ಜೀವನದಲ್ಲಿ ಕರ್ಮಾನುಷ್ಠಾನ ಮಾಡಬೇಕು ಎಂದು ವಿವರಿಸಿದ ಕೃಷ್ಣ ನಮ್ಮ
ದೈನಂದಿನ ಜೀವನದಲ್ಲಿ ಈ ರೀತಿಯ ಕರ್ಮಾನುಷ್ಠಾನ ಅಂದರೆ ಏನು ಎನ್ನುವುದರ ವಿವರಣೆಯನ್ನು ಮುಂದಿನ
ಶ್ಲೋಕದಲ್ಲಿ ಕೊಡುತ್ತಾನೆ.
ನೈವ ಕಿಂಚಿತ್ ಕರೋಮೀತಿ ಯುಕ್ತೋ ಮನ್ಯೇತ
ತತ್ತ್ವವಿತ್ ।
ಪಶ್ಯನ್ ಶೃಣ್ವನ್ ಸ್ಪೈಶನ್ ಜಿಘ್ರನ್ನಶ್ನನ್ ಗಚ್ಛನ್ ಸ್ವಪನ್ ಶ್ವಸನ್ ॥೮॥
ಪ್ರಲಪನ್ ವಿಸೃಜನ್ ಗೃಹ್ಣನ್ನುನ್ಮಿಷನ್ ನಿಮಿಷನ್ನಪಿ ।
ಇಂದ್ರಿಯಾಣೀಂದ್ರಿಯಾರ್ಥೇಷು ವರ್ತಂತ ಇತಿ ಧಾರಯನ್ ॥೯॥
ಪಶ್ಯನ್ ಶೃಣ್ವನ್ ಸ್ಪೈಶನ್ ಜಿಘ್ರನ್ನಶ್ನನ್ ಗಚ್ಛನ್ ಸ್ವಪನ್ ಶ್ವಸನ್ ॥೮॥
ಪ್ರಲಪನ್ ವಿಸೃಜನ್ ಗೃಹ್ಣನ್ನುನ್ಮಿಷನ್ ನಿಮಿಷನ್ನಪಿ ।
ಇಂದ್ರಿಯಾಣೀಂದ್ರಿಯಾರ್ಥೇಷು ವರ್ತಂತ ಇತಿ ಧಾರಯನ್ ॥೯॥
ನ
ಏವ ಕಿಂಚಿತ್
ಕರೋಮಿ ಇತಿ ಯುಕ್ತಃ ಮನ್ಯೇತ ತತ್ತ್ವವಿತ್ ।
ಪಶ್ಯನ್ ಶೃಣ್ವನ್ ಸ್ಪೈಶನ್ ಜಿಘ್ರನ್ ಅಶ್ನನ್ ಗಚ್ಛನ್ ಸ್ವಪನ್ ಶ್ವಸನ್ ||
ಪ್ರಲಪನ್ ವಿಸೃಜನ್ ಗೃಹ್ಣನ್ ಉನ್ಮಿಷನ್ ನಿಮಿಷನ್ ಅಪಿ ।
ಪಶ್ಯನ್ ಶೃಣ್ವನ್ ಸ್ಪೈಶನ್ ಜಿಘ್ರನ್ ಅಶ್ನನ್ ಗಚ್ಛನ್ ಸ್ವಪನ್ ಶ್ವಸನ್ ||
ಪ್ರಲಪನ್ ವಿಸೃಜನ್ ಗೃಹ್ಣನ್ ಉನ್ಮಿಷನ್ ನಿಮಿಷನ್ ಅಪಿ ।
ಇಂದ್ರಿಯಾಣಿ
ಇಂದ್ರಿಯ ಅರ್ಥೇಷು ವರ್ತಂತ ಇತಿ ಧಾರಯನ್ - ನಿಜವರಿತ ಸಾಧಕ ತಾನಾಗಿ ಏನೂ ಮಾಡುತ್ತಿಲ್ಲ ಎಂದು ತಿಳಿಯಬೇಕು- ಕಾಣುವಾಗ,ಕೇಳುವಾಗ,ಮುಟ್ಟುವಾಗ,ಮೂಸುವಾಗ,ತಿನ್ನುವಾಗ,ತಿರುಗುವಾಗ,ಮಲಗುವಾಗ, ಉಸಿರುವಾಗ,ಉಸುರುವಾಗ,ಕಳೆಯುವಾಗ,ಕೊಳ್ಳುವಾಗ,ಎವೆ ಮುಚ್ಚುವಾಗ,ಎವೆ ಬಿಚ್ಚುವಾಗ ಕೂಡಾ-ಇಂದ್ರಿಯಗಳು ತಮ್ಮ ಕೆಲಸದಲ್ಲಿ ತೊಡಗಿವೆ
ಎಂದು ಭಾವಿಸುತ್ತ.
ನಮ್ಮ
ಜೀವನದಲ್ಲಿ ದೇವರಪೂಜೆ ಮಾತ್ರ ಅನುಷ್ಠಾನವಲ್ಲ. ನಮ್ಮ ಪ್ರತಿಯೊಂದು ನಡೆಯೂ ಒಂದು
ಕರ್ಮಯೋಗವಾಗಬೇಕು. ಯಾವುದೋ ಕಾಲ ವಿಶೇಷದಲ್ಲಿ ಮಾತ್ರ ದೇವರ ಪೂಜೆ ಮಾಡುವುದಲ್ಲ. ಇಡೀ
ಬದುಕೇ ಒಂದು ಯಜ್ಞವಾಗಬೇಕು. ಯಜ್ಞವನ್ನು ಕನ್ನಡದಲ್ಲಿ ಬೇಳುವೆ ಎನ್ನುತ್ತಾರೆ. ನಮ್ಮ
ಬಾಳುವೆಯೇ ಒಂದು ಬೇಳುವೆಯಾಗಬೇಕು.
ಕರ್ಮಾನುಷ್ಠಾನ
ಮಾಡುವವನು "ನಾನು ನಾನಾಗಿ ಏನನ್ನೂ ಮಾಡುತ್ತಿಲ್ಲ, ನಾನು ಮಾಡುವ ಕ್ರಿಯೆಯಲ್ಲಿ ನಾನು ಸ್ವತಂತ್ರನಲ್ಲ, ನನ್ನದು ಇಚ್ಛಾಪೂರ್ವಕ ಕೃತಿ ಆದರೆ ಇಲ್ಲಿ
ನನಗೆ ಸ್ವಾತಂತ್ರವಿಲ್ಲ"
ಎನ್ನುವ ಸತ್ಯವನ್ನು ಅರಿತಿರಬೇಕು. ನಾವು ಮಾಡಬೇಕು ಎಂದುಕೊಂಡಿದ್ದನ್ನು ನಮ್ಮಿಂದ ಮಾಡಲು
ಆಗುವುದಿಲ್ಲ, ನಾವು
ಬಯಸಿದ್ದು ಸಿಗುವುದಿಲ್ಲ, ಫಲದಲ್ಲಿ
ನಮಗೆ ಸ್ವಾತಂತ್ರ್ಯವಿಲ್ಲ. ಇದು ಪ್ರತಿಯೊಬ್ಬರ ಅನುಭವಕ್ಕೆ ಬರುವ ವಿಷಯ. ಆದರೆ ಕ್ರಿಯೆ
ಮಾತ್ರ ನಮ್ಮ ಮುಖೇನ ಆಗುತ್ತದೆ.
'ನಾನು
ಇಂಥದ್ದೇ ಸಿಗಬೇಕು,
ಇಂಥದ್ದು ಸಿಗಬಾರದು
ಎನ್ನುವ ಇಚ್ಛೆಯಿಂದಾಗಲಿ, ನಾನು ಮಾಡುತ್ತಿದ್ದೇನೆ
ಎನ್ನುವ ಅಹಂಕಾರದಿಂದಾಗಲಿ ಮಾಡುತ್ತಿಲ್ಲ; ನನ್ನೊಳಗಿರುವ ಭಗವಂತ ಇದನ್ನು ಮಾಡಿಸುತ್ತಿದ್ದಾನೆ' ಎಂದು ತತ್ವಜ್ಞಾನಿ ತಿಳಿದಿರುತ್ತಾನೆ. ಆದ್ದರಿಂದ ಯಾವುದರಲ್ಲೂ "ನಾನು, ನನ್ನದು" ಎನ್ನುವ ಅಹಂಕಾರವಿಲ್ಲ. ಅವನು
ಏನು ಒದಗಿಸಿ ಕೊಟ್ಟ ಹಾಗೆ ನಡೆಯುತ್ತದೆ ಹೊರತು ಇಲ್ಲಿ ನಾವು ಸ್ವತಂತ್ರ
ಕರ್ತಾರರಲ್ಲ. ಇದನ್ನು ತತ್ವವನ್ನು ಅರಿತವನು ತನ್ನ ಪ್ರತಿಯೊಂದು ಕ್ರಿಯೆಯಲ್ಲಿ
ಅನುಸರಿಸುತ್ತಾನೆ.
ಪಶ್ಯನ್-ನೋಡುವಾಗ,
ಶೃಣ್ವನ್-ಕೇಳುವಾಗ,
ಸ್ಪೈಶನ್-ಸ್ಪರ್ಶದಲ್ಲಿ,
ಜಿಘ್ರನ್-ಮೂಸುವಾಗ,
ಅಶ್ನನ್-ತಿನ್ನುವಾಗ,
ಗಚ್ಛನ್-ತಿರುಗುವಾಗ,
ಸ್ವಪನ್-ಮಲಗುವಾಗ,
ಶ್ವಸನ್-ಉಸಿರಿನಲ್ಲಿ,
ಪ್ರಲಪನ್-ಮಾತಿನಲ್ಲಿ,
ವಿಸೃಜನ್-ವಿಸರ್ಜಿಸುವಾಗ,
ಗೃಹ್ಣನ್-ಸ್ವೀಕರಿಸುವಾಗ,
ಉನ್ಮಿಷನ್-ತೆರೆಯುತ್ತ,
ನಿಮಿಷನ್-ಮುಚ್ಚುತ್ತ
ಹೀಗೆ ತನ್ನೆಲ್ಲಾ
ಕ್ರಿಯೆಯಲ್ಲಿ ತಾನೇನೂ ಮಾಡುತ್ತಿಲ್ಲ ಅನ್ನುವ ಅರಿವನ್ನು ತತ್ವಜ್ಞಾನಿ ತಿಳಿದಿರುತ್ತಾನೆ. ಉದಾಹರಣೆಗೆ-ನಾವು ಒಂದು
ಹೂವಿನ ಅಂದವನ್ನು ಕಣ್ಣಿನಿಂದ ಸವಿಯುತ್ತೇವೆ, ಅದರ ಪರಿಮಳವನ್ನು ಮೂಗಿನಿಂದ
ಆಸ್ವಾಧಿಸುತ್ತೇವೆ, ಆ
ಹೂವನ್ನು ಮುಟ್ಟಿ-ಮುಡಿದು
ಸಂತೋಷ ಪಡುತ್ತೇವೆ. ಈ ಹೂವನ್ನು ಸೃಷ್ಟಿಸಿದವ, ಅದಕ್ಕೆ ಅಂದವನ್ನು ಕೊಟ್ಟವ ಆ ಭಗವಂತ. ಆ ಹೂವನ್ನು ನೋಡುವ
ಕಣ್ಣನ್ನು ನಮಗೆ ಕೊಟ್ಟವ ಆತ(ಹುಟ್ಟು ಕುರುಡನಿಗೆ ಈ ಯೋಗವಿಲ್ಲ). ಈ
ಅನುಸಂಧಾನವಿದ್ದರೆ ನೋಡುವ-ಮುಟ್ಟುವ-ಮೂಸವ ಕ್ರಿಯೆಯಲ್ಲಿ 'ನನ್ನದು' ಎನ್ನುವ ಅಹಂಕಾರಕ್ಕೆ ಎಡೆಯಿಲ್ಲ. ಅದೇ ರೀತಿ
ತಿನ್ನುವುದು: ಈ
ಪ್ರಪಂಚದಲ್ಲಿ ಎಷ್ಟೋ
ಜನ ಒಂದು ಹೊತ್ತಿನ ಆಹಾರಕ್ಕೂ ಗತಿ ಇಲ್ಲದೆ ಇನ್ನೊಬ್ಬರ ಮುಂದೆ ಕೈಚಾಚಿಕೊಂಡು ಬದುಕುತ್ತಾರೆ.
ಆದರೆ ನಮಗೆ ಭಗವಂತ ಮೂರು ಹೊತ್ತಿನ ತುತ್ತಿಗೆ ಅನುಕೂಲ ಮಾಡಿ ಕೊಟ್ಟಿದ್ದಾನೆ ಅನ್ನುವ ಅನುಸಂಧಾನದಿಂದ ಊಟ
ಮಾಡಿದಾಗ ಅದೊಂದು ಯಜ್ಞವಾಗುತ್ತದೆ. ಇನ್ನು ನಿದ್ದೆ: ನಿದ್ದೆಯಲ್ಲಿ ನಾವು ಭಗವಂತನ
ಸಮೀಪದಲ್ಲಿರುತ್ತೇವೆ. ಆದರೆ ಆ ಎಚ್ಚರ ನಮಗಿರುವುದಿಲ್ಲ. ಒಂದು ವೇಳೆ ನಿದ್ದೆಯೇ
ಬಾರದಿದ್ದರೆ? ಇಡೀ
ರಾತ್ರಿ ಕನಸಿನಲ್ಲೇ ಕಳೆದರೆ? ಇದನ್ನು
ನಮ್ಮಿಂದ ಉಹಿಸುವುದೂ ಕಷ್ಟ. ಹುಟ್ಟಿದಾಗ ನಮಗರಿವಿಲ್ಲದಂತೆ ಉಸಿರಾಟ ಆರಂಭವಾಯಿತು, ನಿದ್ದೆಯಲ್ಲೂ ನಮಗರಿವಿಲ್ಲದಂತೆ ನಮ್ಮ ಉಸಿರಿನ
ಕ್ರಿಯೆ ನಿರಂತರ. ಆದರೆ ಈ ಉಸಿರು ಯಾವಾಗ ನಿಲ್ಲುತ್ತದೆ ಎನ್ನುವುದು ನಮಗೆ
ತಿಳಿದಿಲ್ಲ. ಹೀಗೆ ಪ್ರತಿಯೊಂದು ಕ್ರಿಯೆಯಲ್ಲಿ ಆ ವಿಶ್ವಶಕ್ತಿಯ ಅನುಸಂಧಾನ.
ಭಗವಂತ
ನಮಗೆ ಅಮೂಲ್ಯವಾದ ಕೈ ಕೊಟ್ಟಿದ್ದಾನೆ. ಪ್ರಾಣಿಗಳಿಗೆ ನಾಲ್ಕೂ ಕಾಲೇ, ಕೈ ಇಲ್ಲ. ತನ್ನ ಮೈ ಮೇಲೆ ಯಾವುದೋ ಜೀವಿ ಕುಳಿತು
ರಕ್ತ ಹೀರುತ್ತಿದ್ದರೂ ಅದನ್ನು ಓಡಿಸುವ ಕೈ ಅವುಗಳಿಗಿಲ್ಲ. ಇಂತಹ ಅಮೂಲ್ಯವಾದ ಕೈಯನ್ನು
ಭಗವಂತ ನಮಗೆ ಕರುಣಿಸಿದ್ದಾನೆ. ಅತ್ಯಂತ ಸೂಕ್ಷ್ಮ ಇಂದ್ರಿಯವಾದ ಕಣ್ಣನ್ನು ರಕ್ಷಿಸುವ
ರೆಪ್ಪೆಗಳು, ಅವು
ನಿರಂತರ ತೆರೆಯವುದು-ಬಿಚ್ಚುವುದರಿಂದ
ಕಣ್ಣಿನ ರಕ್ಷಣೆ. ಒಂದು ವೇಳೆ, ಕಣ್ಣಿಗೆ
ಏನಾದರೂ ಕಸ ಬಿದ್ದರೆ
ನಮಗರಿವಿಲ್ಲದಂತೆ ಕಣ್ಣಿಗೆ ನೀರಿನ ಸರಬರಾಜಾಗಿ ಕಣ್ಣು ರಕ್ಷಣೆ ಆಗುತ್ತದೆ. ಈ ಅಪೂರ್ವ
ಯಂತ್ರದ ವಿನ್ಯಾಸ ಮಾಡಿದ ಶಿಲ್ಪಿ ಆ ಭಗವಂತ.
ನಮ್ಮ
ಪ್ರತಿಯೊಂದು ಇಂದ್ರಿಯಗಳನ್ನೂ ಇಂದ್ರಿಯಾಭಿಮಾನಿ ದೇವತೆಗಳು ನಿಯಂತ್ರಿಸುತ್ತಾರೆ ಎನ್ನುವ ವಿಚಾರವನ್ನು
ನಾವು ಈ ಹಿಂದೆ ವಿಶ್ಲೇಷಿಸಿದ್ದೇವೆ. ಉದಾಹರಣೆಗೆ ಸೂರ್ಯ ಕಣ್ಣಿನ, ಚಂದ್ರ ಕಿವಿಯ ದೇವತೆ.
ಸುಪರ್ಣಿ-ವಾರುಣಿ-ಪಾರ್ವತಿ ಶಬ್ದ-ಸ್ಪರ್ಶ-ಗಂಧದ ಅಭಿಮಾನಿ ದೇವತೆಯರು.
ಮನೋಭಿಮಾನಿ ದೇವತೆಯಾಗಿ ಗರುಡ ಶೇಷ ರುದ್ರ. ಹೀಗೆ ನಮ್ಮ ಕ್ರಿಯೆಯ ಹಿಂದೆ ಅದ್ಭುತವಾದ
ಆಧ್ಯಾತ್ಮಿಕ ಶಕ್ತಿ ಕೆಲಸ ಮಾಡುತ್ತಿದೆ.
· ಶ್ಲೋಕ - 10
ಬ್ರಹ್ಮಣ್ಯಾಧಾಯ ಕರ್ಮಾಣಿ ಸಂಗಂ ತ್ಯಕ್ತ್ವಾ
ಕರೋತಿ ಯಃ ।
ಲಿಪ್ಯತೇ ನ ಸ ಪಾಪೇನ ಪದ್ಮಪತ್ರಮಿ ಮಿವಾಂಭಸಾ ॥೧೦॥
ಲಿಪ್ಯತೇ ನ ಸ ಪಾಪೇನ ಪದ್ಮಪತ್ರಮಿ ಮಿವಾಂಭಸಾ ॥೧೦॥
ಬ್ರಹ್ಮಣಿ
ಆಧಾಯ ಕರ್ಮಾಣಿ ಸಂಗಮ್ ತ್ಯಕ್ತ್ವಾ ಕರೋತಿ ಯಃ ।
ಲಿಪ್ಯತೇ
ನ ಸಃ ಪಾಪೇನ ಪದ್ಮಪತ್ರಮ್ ಇವ ಅಂಭಸಾ-ಕರ್ಮಗಳನ್ನು ಭಗವಂತನಲ್ಲಿ ಒಪ್ಪಿಸಿ, ನಂಟು ನೀಗಿ ಮಾಡುವವನು ಪಾಪದಿಂದ
ಅಂಟಿಸಿಕೊಳ್ಳುವುದಿಲ್ಲ-ತಾವರೆ ಎಲೆ ನೀರಿನಿಂದ ಹೇಗೆ ಹಾಗೆ.
ನಾವು
ಪೂಜೆಯ ಕೊನೆಯಲ್ಲಿ "ಶ್ರೀ ಕೃಷ್ಣಾರ್ಪಣ ಮಸ್ತು" ಎಂದು ಹೇಳುತ್ತೇವೆ. ಇದರ ಅರ್ಥ
" ಆ ಭಗವಂತನಲ್ಲಿ ಅರ್ಪಿತ". ಅರ್ಪಿಸುವುದು ಎಂದರೆ " ಈ ಕರ್ಮವನ್ನು ಭಗವಂತ ತನ್ನ ಪೂಜಾರೂಪವಾಗಿ
ನನ್ನ ಮೂಲಕ ನನ್ನ ಉದ್ಧಾರಕ್ಕಾಗಿ ಅವನೇ ಮಾಡಿಸಿಕೊಂಡ" ಎನ್ನುವ ಸಂಕಲ್ಪ. ಹೀಗೆ
ನಾವು ಕರ್ಮವನ್ನು ಮಾಡಿದಾಗ ಯಾವ ಕರ್ಮದ ಲೇಪವೂ ನಮಗೆ ಅಂಟುವುದಿಲ್ಲ. 'ನಾನು, ನನ್ನದು, ನನ್ನಿಂದ' ಎನ್ನುವ ಅಹಂಕಾರ ಹೊರಟುಹೋಗುತ್ತದೆ. ಇದು
ಆನಂದಮಯವಾದ ವಿಸ್ಮಯ. ತಾವರೆ ಎಲೆ ನೀರಿನಲ್ಲೇ ಇದ್ದರೂ ಕೂಡಾ ಹೇಗೆ ನೀರನ್ನು ತನಗೆ
ಅಂಟಿಸಿಕೊಳ್ಳುವುದಿಲ್ಲ ಹಾಗೆ ಕರ್ಮದ ಜೊತೆಗೇ ಇದ್ದು, ಕರ್ಮ ಮಾಡಿ, ಕರ್ಮವನ್ನು ಅಂಟಿಸಿಕೊಳ್ಳದೆ ಇರುವುದು
ಈ ಅನುಸಂಧಾನದಿಂದ
ಮಾತ್ರ ಸಾಧ್ಯ.
· ಶ್ಲೋಕ - 11
ಕಾಯೇನ ಮನಸಾ ಬುದ್ಧ್ಯಾ ಕೇವಲೈರಿಂದ್ರಿಯೈರಪಿ
।
ಯೋಗಿನಃ ಕರ್ಮ ಕುರ್ವಂತಿ ಸಂಗಂ ತ್ಯಕ್ತ್ವಾSSತ್ಮಶುದ್ಧಯೇ ॥೧೧॥
ಯೋಗಿನಃ ಕರ್ಮ ಕುರ್ವಂತಿ ಸಂಗಂ ತ್ಯಕ್ತ್ವಾSSತ್ಮಶುದ್ಧಯೇ ॥೧೧॥
ಕಾಯೇನ
ಮನಸಾ ಬುದ್ಧ್ಯಾ ಕೇವಲೈಃ ಇಂದ್ರಿಯೈಃ ಅಪಿ ।
ಯೋಗಿನಃ
ಕರ್ಮ ಕುರ್ವಂತಿ ಸಂಗಮ್ ತ್ಯಕ್ತ್ವಾ ಆತ್ಮ ಶುದ್ಧಯೇ-ಯೋಗಿಗಳು ಮೈಯಿಂದ, ಮನದಿಂದ, ಬುದ್ಧಿಯಿಂದ ಮತ್ತು ಬರಿಯ ಇಂದ್ರಿಯಗಳಿಂದ
ಕರ್ಮ ಮಾಡುತ್ತಾರೆ. ನಂಟು ನೀಗಿ, ಬಗೆಯ
ಶುದ್ಧಿಗಾಗಿ.
ಶಾಸ್ತ್ರದ ಸಂಪ್ರದಾಯದಂತೆ
ಒಂದು ವಿಷಯವನ್ನು ಹೇಳಿ ಕೊನೆಗೆ ಆ ರೀತಿ ಅನುಷ್ಠಾನ ಮಾಡಿದವರ ಬಗ್ಗೆ ಹೇಳಿ, ನಮಗೆ ಆ ವಿಷಯದಲ್ಲಿ ಭರವಸೆ ಬರುವಂತೆ
ಮಾಡುತ್ತಾರೆ. ಇದನ್ನು 'ಅರ್ಥವಾದ'
ಎನ್ನುತ್ತಾರೆ. ಯಾವುದೇ
ವಿಷಯವನ್ನು ನಾವೇ ಮೊದಲು ಆರಂಭಿಸುವುದು ಅಂದರೆ ಸ್ವಲ್ಪ ಕಷ್ಟ. ಆದರೆ 'ಅದು ಹಿಂದಿನಿಂದಲೂ ನಡೆದುಕೊಂಡು ಬಂದ ವಿಚಾರ' ಎಂದಾಗ ಆ ವಿಷಯದ ಬಗ್ಗೆ ನಮಗೆ ಧೈರ್ಯ ಹೆಚ್ಚು. ಹಾಗೇ
ಕೃಷ್ಣ ಇಲ್ಲಿ ಜ್ಞಾನಿಗಳು
ಸಂನ್ಯಾಸಯುಕ್ತವಾದ ಕರ್ಮಯೋಗ ಮಾಡುವುದನ್ನು ಪ್ರಸ್ತಾಪಿಸುತ್ತಾನೆ.
ಯೋಗಿಗಳು ದ್ವಂದ್ವಾತೀತವಾದ,
ಫಲಕಾಮನೆ ಇಲ್ಲದೆ,
'ನನ್ನೊಳಗೆ ಭಗವಂತ ತನ್ನ ಪೂಜೆಯನ್ನು
ನನ್ನ ಮೂಲಕ ನನ್ನ ಉದ್ಧಾರಕ್ಕೋಸ್ಕರ ಮಾಡಿಸುತ್ತಿದ್ದಾನೆ' ಎಂದು ತಿಳಿದು ಕರ್ತವ್ಯ ದೃಷ್ಟಿಯಿಂದ ಕರ್ಮ ಮಾಡುತ್ತಾರೆ,
ಅವರಿಗೆ ಅಹಂಕಾರ-ಮಮಕಾರ
ಇರುವುದಿಲ್ಲ; ಇದರಿಂದ
ಮನಸ್ಸು ಶುದ್ಧವಾಗುತ್ತದೆ. ಶುದ್ಧಮನಸ್ಸಿಗೆ ಶುದ್ಧ ವಿಷಯ ಗ್ರಹಣ ಮಾಡಲು ಸಾಧ್ಯ.
ಶುದ್ಧ ವಿಷಯ ಗ್ರಹಣ
ಎಂದರೆ ಶಾಸ್ತ್ರಕಾರರು ಯಾವ ಅರ್ಥದಲ್ಲಿ ಹೇಳಿದ್ದಾರೆ ಅದೇ ಅರ್ಥದಲ್ಲಿ ಗ್ರಹಿಸುವುದು. ಹೀಗೆ ಅರ್ಥ
ಮಾಡಿಕೊಳ್ಳಬೇಕಾದರೆ ನಮ್ಮ ಮನಸ್ಸು ಶಾಸ್ತ್ರಕಾರರ ಮನಸ್ಸಿಗೆ ಶ್ರುತಿಗೂಡಬೇಕು(tuning)
ಅಥವಾ ನಾವು ಅವರ
ಸ್ಥಾನಕ್ಕೇರಬೇಕು ಹಾಗು ಅವರ ಸ್ಥಾನದಲ್ಲಿ ನಿಂತು ಯೋಚಿಸಬೇಕು.
ಇಲ್ಲದಿದ್ದರೆ ನಿಜವಾದ ವಿಷಯ ಗ್ರಹಣವಾಗುವುದಿಲ್ಲ. ಇಲ್ಲಿ ಕೃಷ್ಣ
ಹೇಳುತ್ತಾನೆ "ಯೋಗಿಗಳೂ ಕೂಡಾ ಅಹಂಕಾರ-ಮಮಕಾರ ತೊರೆದು (ಸಂಗಂ ತ್ಯಕ್ತ್ವಾ) ಭಗಾವದರ್ಪಣ
ಬುದ್ಧಿಯಿಂದ- ಮೈಯಿಂದ, ಮನದಿಂದ,
ಬುದ್ಧಿಯಿಂದ ಮತ್ತು
ಇಂದ್ರಿಯಗಳಿಂದ ಕರ್ಮನುಷ್ಠಾನವನ್ನು ಮಾಡುತ್ತಾರೆ" ಎಂದು. ಈ ವಿಚಾರವನ್ನು ಮತ್ತಷ್ಟು
ಒತ್ತು ಕೊಟ್ಟು ಮುಂದಿನ ಶ್ಲೋಕದಲ್ಲಿ ಕೃಷ್ಣ ವಿವರಿಸುತ್ತಾನೆ.
· ಶ್ಲೋಕ - 12
ಯುಕ್ತಃ ಕರ್ಮಫಲಂ ತ್ಯಕ್ತ್ವಾ ಶಾಂತಿಮಾಪ್ನೋತಿ
ನೈಷ್ಠಿಕೀಮ್ ।
ಅಯುಕ್ತಃ ಕಾಮಕಾರೇಣ ಫಲೇ ಸಕ್ತೋ ನಿಬದ್ಧ್ಯತೆ ॥೧೨॥
ಅಯುಕ್ತಃ ಕಾಮಕಾರೇಣ ಫಲೇ ಸಕ್ತೋ ನಿಬದ್ಧ್ಯತೆ ॥೧೨॥
ಯುಕ್ತಃ
ಕರ್ಮಫಲಮ್ ತ್ಯಕ್ತ್ವಾ
ಶಾಂತಿಮ್ ಆಪ್ನೋತಿ ನೈಷ್ಠಿಕೀಮ್ ।
ಅಯುಕ್ತಃ
ಕಾಮ ಕಾರೇಣ ಫಲೇ ಸಕ್ತಃ ನಿಬದ್ಧ್ಯತೆ-ಯೋಗ ಬಲ್ಲವನು ಕರ್ಮಫಲದ ನಂಟು ತೊರೆದು ನಿಚ್ಚಳವಾದ ನೆಮ್ಮದಿಯನ್ನು
ಪಡೆಯುತ್ತಾನೆ. ಯೋಗಿಯಲ್ಲದವನು ಫಲದಲ್ಲೆ ಕಣ್ಣಿರಿಸಿ ಆಸೆಪಟ್ಟು ಮಾಡುತ್ತಾ ಅದರ
ಬಂದಿಯಾಗುತ್ತಾನೆ.
ಕರ್ಮಯೋಗಕ್ಕೆ ತನ್ನನ್ನು
ತೊಡಗಿಸಿಕೊಂಡವ, ಭಗವದ್ಪ್ರಜ್ಞೆಯಲ್ಲಿ
ಕರ್ಮ ಮಾಡತಕ್ಕವ-ಜ್ಞಾನಾನಂದದ
ಅಂತವಾದ ಮೋಕ್ಷವನ್ನು ಪಡೆಯುತ್ತಾನೆ. ನಾವು ಯಾವುದೊ ಒಂದು ಫಲ ಕಾಮನೆಯಿಂದ ಕರ್ಮ ಮಾಡಿದರೆ ಅದರಿಂದ ಯಾವುದೇ
ಫಲ ಸಿಗುವುದಿಲ್ಲ ಎಂದಲ್ಲ, ಆದರೆ
ಆ ಫಲ ನಮಗೆ
ಎಷ್ಟು ಉಪಯುಕ್ತ ಎನ್ನುವ ಅರಿವು ನಮಗೆ ಇರುವುದಿಲ್ಲ ಹಾಗು ಅದು ಪೂರ್ಣವಾದ ಫಲವಾಗಿರುವುದಿಲ್ಲ.
ಫಲಕಾಮನೆ ಇಲ್ಲದೆ ಕರ್ಮ ಮಾಡಿದರೆ ನಾವು ನಮಗೆ ಅಗತ್ಯವಾದ ಎಲ್ಲವನ್ನು ಪಡೆಯುತ್ತೇವೆ. ನಾವು ಕರ್ಮ ಫಲದ
ಆಸೆ ಇಲ್ಲದೆ ಕರ್ಮದಲ್ಲಿ ತೊಡಗಿಸಿಕೊಂಡರೆ, ಕರ್ಮದಲ್ಲೇ ಮುಂದುವರಿದು ಅದರಿಂದ ಜ್ಞಾನಪಡೆದು, ಅಂತಃಕರಣ ಶುದ್ಧಿಯಿಂದ ಭಗವಂತನ ಅನುಗ್ರಹಕ್ಕೆ ಪಾತ್ರರಾಗಿ ಮೋಕ್ಷವನ್ನು ಪಡೆಯುಬಹುದು.
ಕರ್ಮಯೋಗವಿಲ್ಲದೆ
'ನನಗೋಸ್ಕರ ನಾನು
ದುಡಿಯುತ್ತಿದ್ದೇನೆ, ಇದು
ನನ್ನ ಸಂಪತ್ತು, ನಾನು
ದುಡಿದಿದ್ದನ್ನು ನನ್ನ ಸುಖಕ್ಕಾಗಿ ಖರ್ಚು ಮಾಡುತ್ತೇನೆ, ಯಾವ ದೇವರೂ ನಮಗೆ ಸಹಾಯ ಮಾಡುವುದಿಲ್ಲ'
ಇತ್ಯಾದಿ ಆತ್ಮ
ಕೇಂದ್ರಿತವಾದ ಭಾವನೆಯಿಂದ ಕರ್ಮ ಮಾಡಿದಾಗ ಕರ್ಮ ನಮಗೆ ಬಂದಿಯಾಗುತ್ತದೆ. ಒಂದು ಮೂಕಪ್ರಾಣಿ ಕೂಡಾ ಹೀಗೆ
ಬದುಕುವುದಿಲ್ಲ. ಉದಾಹರಣೆಗೆ ಕಾಗೆ: ಅದಕ್ಕೆ ಒಂದು ತಿನ್ನುವ ವಸ್ತು ಕಾಣಿಸಿದರೆ, ತನ್ನೆಲ್ಲಾ ಬಳಗವನ್ನು ಕರೆದು ಹಂಚಿಕೊಂಡು
ತಿನ್ನುತ್ತದೆ. ಹುಲಿ-ಸಿಂಹಗಳಂತಹ ಕ್ರೂರ ಮೃಗಗಳೂ ಕೂಡಾ ಒಮ್ಮೆ ತಮ್ಮ ಹೊಟ್ಟೆ ತುಂಬಿದ ಮೇಲೆ ಎಂದೂ ಸ್ವಾರ್ಥದಿಂದ
ಕಾರ್ಯ ನಿರ್ವಹಿಸುವುದಿಲ್ಲ. ಆದರೆ ಮಾನವರಾದ ನಾವು ಸ್ವಾರ್ಥದಿಂದ ಬದುಕುತ್ತೇವೆ, ನಮಗೆ ಎಷ್ಟು ಪಡೆದರೂ ಮತ್ತಷ್ಟರಾಸೆ! ಈ ರೀತಿ ಬದುಕುವವನು ಸಂಸಾರ
ಚಕ್ರದಲ್ಲಿ ಸಿಕ್ಕಿ ಅದೋಗತಿಯನ್ನು ಪಡೆಯುತ್ತಾನೆ.
· ಶ್ಲೋಕ - 13
ಸರ್ವಕರ್ಮಾಣಿ ಮನಸಾ ಸಂನ್ಯಸ್ಯಾsಸ್ತೇ ಸುಖಂ ವಶೀ ।
ನವದ್ವಾರೇ ಪುರೇ ದೇಹೀ ನೈವ ಕುರ್ವನ್ ನ ಕಾರಯನ್ ॥೧೩॥
ನವದ್ವಾರೇ ಪುರೇ ದೇಹೀ ನೈವ ಕುರ್ವನ್ ನ ಕಾರಯನ್ ॥೧೩॥
ಸರ್ವ
ಕರ್ಮಾಣಿ ಮನಸಾ ಸಂನ್ಯಸ್ಯ ಆಸ್ತೇ ಸುಖಮ್ ವಶೀ ।
ನವ
ದ್ವಾರೇ ಪುರೇ ದೇಹೀ ನ ಏವ ಕುರ್ವನ್ ನ ಕಾರಯನ್-ಮಾನಸಿಕವಾಗಿ ಎಲ್ಲಾ ಕರ್ಮಗಳ ನಂಟು
ತೊರೆದು ಇಂದ್ರಿಯಗಳನ್ನು ಗೆದ್ದವನು ಹಾಯಾಗಿರುತ್ತಾನೆ-ಒಂಭತ್ತು ಬಾಗಿಲ ಈ ಪುರದಲ್ಲಿ; ಏನನ್ನೂ ಮಾಡದೆ, ಏನನ್ನೂ ಮಾಡಿಸದೆ.
ಎಲ್ಲಾ
ಕರ್ಮವನ್ನು ಮಾನಸಿಕವಾಗಿ ಸಂನ್ಯಾಸ ಮಾಡು ಎನ್ನುತ್ತಾನೆ ಕೃಷ್ಣ. ಇದು ಬಹಳ ಮುಖ್ಯವಾದ
ಮಾತು. ಇಲ್ಲಿ 'ಕರ್ಮವನ್ನು
ತ್ಯಾಗ ಮಾಡು' ಎಂದು
ಕೃಷ್ಣ ಹೇಳುತ್ತಿಲ್ಲ, ಕೇವಲ ಮನಸ್ಸಿನಲ್ಲಿ
ಬಿಡು ಎನ್ನುತ್ತಿದ್ದಾನೆ. ಅಂದರೆ ಕರ್ಮಗಳ ಬಗ್ಗೆ ಮನಸ್ಸಿನಲ್ಲಿರುವ ಫಲದ ಸಂಗ,
ಮಾನಸಿಕವಾಗಿ
ಸ್ವಾತಂತ್ರ್ಯ ಎನ್ನುವ ಭ್ರಮೆಯನ್ನು ಬಿಡುವುದು. 'ನನಗೆ', 'ನನಗೋಸ್ಕರ'
ಎನ್ನುವ ವಿಚಾರವನ್ನು
ಮಾನಸಿಕವಾಗಿ ಬಿಡುವುದು. 'ಜೀವನಿಗೆ
ಯಾವ ಕಾಲದಲ್ಲೂ ಯಾವ
ಕರ್ತೃತ್ವದಲ್ಲೂ ಸ್ವಾತಂತ್ರ್ಯವಿಲ್ಲ'. ಇದನ್ನು
ಮಧ್ವಾಚಾರ್ಯರು ತಮ್ಮ ಎಲ್ಲಾ ಗ್ರಂಥಗಳಲ್ಲಿ ಸಾರಿ-ಸಾರಿ ಹೇಳಿದ್ದಾರೆ.
ಇದನ್ನು ಮಾನಸಿಕವಾಗಿ ಅಳವಡಿಸಿಕೊಳ್ಳುವುದೇ ನಿಜವಾದ ಕರ್ಮಸಂನ್ಯಾಸ.
ಭಗವಂತ
ಈ ಒಂಭತ್ತು ಬಾಗಿಲಿನ ಪುರದೊಳಗೆ(ಪೂರ್ಣತೆಯನ್ನು ಪಡೆದ ಮನುಷ್ಯ ಶರೀರ) ನಮ್ಮನ್ನು ಕೂರಿಸಿ ನಮ್ಮಿಂದ ಕರ್ಮ ಮಾಡಿಸುತ್ತಿದ್ದಾನೆ.
'ನನ್ನನ್ನು ಈ
ಪುರದಲ್ಲಿಟ್ಟು, ನನ್ನೊಂದಿಗೆ
ನನ್ನ ಆತ್ಮೀಯ ಗೆಳೆಯನಾಗಿ ನಿಂತು ನನ್ನ ಉದ್ಧಾರಕ್ಕಾಗಿ ಆ ಭಗವಂತ ಕರ್ಮ ಮಾಡಿಸುತ್ತಿದ್ದಾನೆ'
ಎನ್ನುವ ಎಚ್ಚರ
ಕರ್ಮಯೋಗ.
ಕರ್ಮಯೋಗದ
ಬಗ್ಗೆ ಕೃಷ್ಣ ವಿವರಿಸಿದ
ಅಪೂರ್ವವಾದ ಜ್ಞಾನಯೋಗವನ್ನು ನೋಡಿದೆವು. ಹೀಗೆ ಕರ್ಮ ಮಾಡುವುದರಿಂದ ಅದು ಭಗವಂತನ ಆರಾದನೆಯಾಗುತ್ತದೆ
ಹಾಗು ಜ್ಞಾನಮಾರ್ಗದ ಒಂದು ಅಂಗವಾಗುತ್ತದೆ. ಜ್ಞಾನದಿಂದ ಕರ್ಮ ಮಾಡಿದಾಗ
ಯಾವ ಕ್ಷುದ್ರ ಕೆಲಸ ಕೂಡಾ ವ್ಯರ್ಥವಾಗುವುದಿಲ್ಲ, ಅದು ಯೋಗವಾಗುತ್ತದೆ.
ಇಲ್ಲಿ
'ಏನನ್ನೂ ಮಾಡದೆ,
ಏನನ್ನೂ ಮಾಡಿಸದೆ'
ಎಂದಿದ್ದಾನೆ ಕೃಷ್ಣ.
ಸಾಮಾನ್ಯವಾಗಿ ನಾವು
ಒಂದು ಕೆಲಸ ಮಾಡಿದರೆ 'ಅದನ್ನು
ನಾನು ಮಾಡಿದೆ', 'ನಾನು
ಹೇಳಿದ್ದರಿಂದ ಆ ಕಾರ್ಯ ಆಯಿತು' ಎಂದು
ಎಲ್ಲಾ ಕಡೆ ಹೇಳಿಕೊಂಡು ಬರುತ್ತೇವೆ. ಹಾಗೆ ನಾಲ್ಕು ಜನ ಹೇಳಲಿ ಎಂದು ಬಯಸುತ್ತೇವೆ. ಆದರೆ ಜ್ಞಾನಿಗಳು ಹಾಗೆ
ಹೇಳುವುದಿಲ್ಲ. 'ಏನೋ
ದೇವರು ನನ್ನ ಕೈಯಲ್ಲಿ ಮಾಡಿಸಿದ' , 'ನನ್ನೊಳಗಿದ್ದು
ಆ ದೇವರು ಮಾಡಿಸಿದ', 'ಭಗವಂತ
ಅವರಿಗೆ ಪ್ರೇರಣೆ ಮಾಡಿದ' ಇತ್ಯಾದಿಯಾಗಿ
ಮಾತನಾಡುತ್ತಾರೆ. ಇದಕ್ಕೆ ಕಾರಣ ಜ್ಞಾನಿಗಳು ಎಂದೂ 'ನಾನು ಸ್ವತಂತ್ರ ಕರ್ತಾ' ಎನ್ನುವ ಪ್ರಜ್ಞೆಯನ್ನು
ಬೆಳೆಸಿಕೊಂಡಿರುವುದಿಲ್ಲ. ಇದು ಜ್ಞಾನಿಗಳ ಮತ್ತು ಅಜ್ಞಾನಿಗಳ ಕರ್ಮದ ಅನುಸಂಧಾನದಲ್ಲಿರುವ
ವೆತ್ಯಾಸ.
ಈ ಎಲ್ಲಾ
ವಿಚಾರವನ್ನು ತಿಳಿದ ಮೇಲೆ ನಮಗೆ ಒಂದು ಪ್ರಶ್ನೆ ಮೂಡುತ್ತದೆ. ಎಲ್ಲವನ್ನೂ ದೇವರೇ ಮಾಡಿಸುವುದಾದರೆ ಆತ ನಮ್ಮ
ಕೈಯಲ್ಲಿ ಒಳ್ಳೆಯ ಕೆಲಸವನ್ನೇ ಮಾಡಿಸಲಿ, ಕೆಟ್ಟ
ಕೆಲಸ ಏಕೆ ಮಾಡಿಸುತ್ತಾನೆ? ಕೆಟ್ಟಕೆಲಸ
ಮಾಡಿಸುವವ ಅವನೇ
ಆದರೆ ನಮಗೇಕೆ ಅದರ ಶಿಕ್ಷೆ? ನಮಗೇಕೆ
ದುಃಖ? ನಾನು ಬಯಸಿ
ಬುದ್ಧಿಪೂರ್ವಕವಾಗಿ ಮಾಡಿದಾಗ ನಾನು ಏಕೆ ಕರ್ತಾ ಅಲ್ಲ? ಅದರಿಂದ ಏಕೆ ನನಗೆ ಫಲ ಬರುವುದಿಲ್ಲ? ಎಲ್ಲಾ ದೇವರೇ ಮಾಡಿಸುವುದಾದರೆ ನನಗೆ ಫಲ ಹೇಗೆ
ಬರುತ್ತದೆ? ಇತ್ಯಾದಿ
ಪ್ರಶ್ನೆ. ಇದು ಪ್ರತಿಯೊಬ್ಬರನ್ನೂ ಕಾಡುವ ಪ್ರಶ್ನೆ. ಇವು ಕಾಡುವ ಪ್ರಶ್ನೆಗಳೇನೋ ಸರಿ ಆದರೆ ಸರಿಯಾದ
ಪ್ರಶ್ನೆಗಳಲ್ಲ. ಶಾಸ್ತ್ರದ ತಿರುಳು ತಿಳಿಯದಾಗ ಈ ಪ್ರಶ್ನೆಗಳು ಬರುತ್ತವೆ. ಮುಂದಿನ
ಶ್ಲೋಕಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಈ ನಮ್ಮ ಪ್ರಶ್ನೆಗೆ ಉತ್ತರ
ಸಿಗುತ್ತದೆ.
· ಶ್ಲೋಕ - 14
ನ ಕರ್ತೃತ್ವಂ ನ ಕರ್ಮಾಣಿ ಲೋಕಸ್ಯ ಸೃಜತಿ
ಪ್ರಭುಃ ।
ನ ಕರ್ಮಫಲಸಂಯೋಗಂ ಸ್ವಭಾವಸ್ತು ಪ್ರವರ್ತತೇ ॥೧೪॥
ನ ಕರ್ಮಫಲಸಂಯೋಗಂ ಸ್ವಭಾವಸ್ತು ಪ್ರವರ್ತತೇ ॥೧೪॥
ನ
ಕರ್ತೃತ್ವಮ್ ನ
ಕರ್ಮಾಣಿ ಲೋಕಸ್ಯ ಸೃಜತಿ ಪ್ರಭುಃ ।
ನ
ಕರ್ಮಫಲ ಸಂಯೋಗಮ್ ಸ್ವಭಾವಃ ತು ಪ್ರವರ್ತತೇ-ಜೀವ ಜಡದಂತಲ್ಲ; ಕ್ರಿಯೆ ಮಾಡಬಲ್ಲ. ಆದರೂ ಅವನು ಹೊಣೆಗಾರನಲ್ಲ- ಲೋಕದ ಯಾವ
ಕ್ರಿಯೆಗೂ, ಪುಣ್ಯ-ಪಾಪಗಳಿಗೂ,ಅದರಿಂದೊದಗುವ ಫಲಕ್ಕೂ. [ಕ್ರಿಯೆಯ,ಪುಣ್ಯಪಾಪಗಳ, ಮತ್ತು ಕರ್ಮಫಲ ಪಡೆಯುವ ಒಡೆತನವನ್ನು ಜೀವ
ಲೋಕಕ್ಕೆ ಭಗವಂತ
ನೀಡಲಿಲ್ಲ. ಜೀವದ ಸ್ವಭಾವ ತನ್ನ ಕೆಲಸ ಮಾಡುತ್ತಿರುತ್ತದೆ.[ಭಗವಂತ ಈ ಎಲ್ಲವನ್ನೂ ಮಾಡುತ್ತಿರುತ್ತಾನೆ].
ಈ
ಹಿಂದೆ ವಿಶ್ಲೇಷಿಸಿದ ಸಮಸ್ತ ಪ್ರಶ್ನೆಗಳಿಗೂ ಉತ್ತರ ಒಗಟಿನ ರೂಪದಲ್ಲಿ ಈ ಶ್ಲೋಕದಲ್ಲಡಗಿದೆ. ಮೇಲ್ನೋಟಕ್ಕೆ
ಇದು ತಿಳಿಯುವುದಿಲ್ಲ; ಶಾಸ್ತ್ರದ
ಅನುಭಾವದಿಂದ ಒಂದೊಂದು ಶಬ್ಧವನ್ನು
ಮನನ ಮಾಡಿದಾಗ ಮಾತ್ರ ಅಲ್ಲಿ ಉತ್ತರ ಸಿಗುತ್ತದೆ.
ಜಡಲೋಕಕ್ಕೆ
ಜೀವ ಪ್ರಭು, ಅದರಲ್ಲಿ
ಇಚ್ಚಾಪೂರ್ವಕಕ್ರಿಯೆ ಇದೆ, ಆದರೆ
ಅದು ಕರ್ತೃತ್ವವಲ್ಲ.
ಜೀವವನ್ನು ಜಡಕ್ಕೆ ಹೋಲಿಸಿದಾಗ: ಜಡಕ್ಕೆ ಯೋಚನೆ ಮಾಡುವ ಶಕ್ತಿ ಇಲ್ಲ-ಆದರೆ ಜೀವಕ್ಕೆ ಯೋಚನೆ ಮಾಡುವ ಶಕ್ತಿ
ಇದೆ; ಜಡಕ್ಕೆ ಬುದ್ಧಿ
ಇಲ್ಲ-ಆದರೆ ಜೀವಕ್ಕಿದೆ;
ಎರಡಕ್ಕೂ
ಕರ್ತೃತ್ವವಿಲ್ಲ. ಕ್ರಿಯೆಯ,ಪುಣ್ಯಪಾಪಗಳ,
ಮತ್ತು ಕರ್ಮಫಲ ಪಡೆಯುವ
ಒಡೆತನವನ್ನು ಜೀವ ಲೋಕಕ್ಕೆ ಭಗವಂತ ನೀಡಿಲ್ಲ. ಜೀವನಿಗೆ ದತ್ತಸ್ವಾತಂತ್ರ್ಯ ಕೂಡಾ
ಇಲ್ಲ. [ಉದಾಹರಣೆಗೆ: ಒಬ್ಬ ರಾಜ ತನ್ನ ಮಗನಿಗೆ ದೇಶದ ಒಂದು ಭಾಗವನ್ನು ಸ್ವತಂತ್ರವಾಗಿ ಆಳುವ ಅಧಿಕಾರ ಕೊಡುವುದು
ದತ್ತಸ್ವಾತಂತ್ರ್ಯ]. ಕರ್ತೃತ್ವವನ್ನು ಸರಿಯಾಗಿ ತಿಳಿದುಕೊಳ್ಳಬೇಕಾದರೆ ಅದರ
ಹಿಂದಿರುವ ಸ್ವಾರಸ್ಯವಾದ ಶಾಸ್ತ್ರೀಯ ಪ್ರಕ್ರಿಯೆಯನ್ನು ತಿಳಿದುಕೊಳ್ಳಬೇಕು.
ಪ್ರಪಂಚದಲ್ಲಿ
ಮೂರು ತರಹದ ಕರ್ತೃತ್ವವಿದೆ.
ಕೇವಲ ಕ್ರಿಯೆ ಇರುವುದೂ ಒಂದು ವಿಧದ ಕರ್ತೃತ್ವ. ಇದು ಜಡಕ್ಕೂ ಇದೆ. ಉದಾಹರಣೆಗೆ 'ಕೆಚ್ಚಲು ಹಾಲು ಕೊಡುತ್ತದೆ'; ಇಲ್ಲಿ ಕೆಚ್ಚಲಿನಿಂದ ಹಾಲು ಸುರಿಯುವ ಕೃತಿ ಇದೆ ಆದರೆ
ಅದು ಅತ್ಯಂತ ಅಮುಖ್ಯವಾದ ಕರ್ತೃತ್ವ. ಎರಡನೆಯದು ಬುದ್ಧಿ ಪೂರ್ವಕವಾದ ಕೃತಿ.
ಸ್ವತಂತ್ರ್ಯವಲ್ಲದ ಇಚ್ಚಾಪೂರ್ವಕ ಕೃತಿ-ಇದು ಜೀವರಿಗಿದೆ, ಆದರೆ ನಿಜವಾದ ಪ್ರಮುಖ ಕರ್ತೃತ್ವ ಇದಲ್ಲ.
ಸ್ವತಂತ್ರವಾದ ಇಚ್ಛಾಪೂರ್ವಕ ಕ್ರಿಯೆ ನಿಜವಾದ ಕರ್ತೃತ್ವ. ಇದು ಇರುವುದು
ಕೇವಲ ಭಗವಂತನಲ್ಲಿ ಮಾತ್ರ. ಜೀವನಿಗೆ ಕರ್ಮದಲ್ಲಿ ದತ್ತಸ್ವಾತಂತ್ರ್ಯ ಕೂಡಾ ಇಲ್ಲ.
ಜೀವ ಭಗವಂತನ
ಪರಾಧೀನ ಆದ್ದರಿಂದ ಆತ ಕರ್ತಾ ಅಲ್ಲ.
ಉದಾಹರಣೆಗೆ
ತೊಟ್ಟಿಲಲ್ಲಿರುವ ಮಗು, ಅದಕ್ಕೆ
ಬುದ್ಧಿ ಇದೆ, ತಿನ್ನಬೇಕು
ಎನ್ನುವ ಇಚ್ಛೆ
ಇದೆ, ಆದರೆ
ಸ್ವಾತಂತ್ರ್ಯವಿಲ್ಲ. ತಾಯಿ ಬಾಯಿಗಿಟ್ಟಿದ್ದನ್ನು ಅದು ತಿನ್ನುತ್ತದೆ. ಇದು ಇಚ್ಛಾಪೂರ್ಣ ಕ್ರಿಯೆ
ಆದರೆ ಸ್ವತಂತ್ರ-ಇಚ್ಚಾಪೂರ್ಣ ಕ್ರಿಯೆ ಅಲ್ಲ. ಇನ್ನು ಫಲದ ಬಗ್ಗೆ ಇದೇ ದೃಷ್ಟಾಂತದೊಂದಿಗೆ ನೋಡಿದಾಗ:
ತಂದೆ-ತಾಯಿ ಮಗುವಿಗೆ 'ದೇವರಿಗೆ
ನಮಸ್ಕಾರ ಮಾಡು' ಎಂದು
ಹೇಳುತ್ತಾರೆ, ಆಗ
ಆ ಮಗು ಮಾಡುವುದಿಲ್ಲ, ಇಂಥಹ ಸಂದರ್ಭದಲ್ಲಿ
ತಂದೆ ತಾಯಿ, ಮಗುವನ್ನು
ತಿದ್ದಿ-ತೀಡಿ ಅಥವಾ ಅಗತ್ಯಬಿದ್ದರೆ ಶಿಕ್ಷಿಸಿ ದೇವರಿಗೆ ನಮಸ್ಕರಿಸುವಂತೆ ಮಾಡುತ್ತಾರೆ,
ಆಗ ಆ ಮಗು
ಮಾಡುತ್ತದೆ.ಇಲ್ಲಿ ನಮಸ್ಕಾರ ಮಾಡಿಸಿದ್ದು ತಂದೆ-ತಾಯಿಯಾದರೂ ಸಹ ಫಲ
ಮಗುವಿಗೆ. ಇದೇ ರೀತಿ ಜೀವನೊಳಗೆ ಕುಳಿತ ಕಣ್ಣಿಗೆ ಕಾಣದ ಭಗವಂತ 'ಜೀವನ' ಕ್ರಿಯೆಯನ್ನು ನಿಯಂತ್ರಿಸುತ್ತಾನೆ. ನಮ್ಮ
ಮೂಲಕ ಕರ್ಮ ಮಾಡಿಸುವವನು
ಭಗವಂತನಾದರೂ ಕೂಡಾ ಕರ್ಮದ ಫಲ ನಮಗೇ ಹೊರತು ಭಗವಂತನಿಗಲ್ಲ.
ಈ ದೃಷ್ಟಾಂತದೊಂದಿಗೆ
ಮುಂದುವರಿದಾಗ ನಮಗೆ ಇನ್ನೊಂದು ಪ್ರಶ್ನೆ ಕಾಡುತ್ತದೆ. ಭಗವಂತ ನಮ್ಮ ಮುಖೇನ ಏಕೆ ಕೆಟ್ಟ ಕೆಲಸ ಮಾಡಿಸುತ್ತಾನೆ?
ತಂದೆ-ತಾಯಿ ಎಂದೂ
ಮಗುವಿನಲ್ಲಿ ಕೆಟ್ಟ ಕೆಲಸ ಮಾಡಿಸುವುದಿಲ್ಲ, ಅದೇ ರೀತಿ ಏಕೆ ಭಗವಂತ ನಮ್ಮಲ್ಲಿ ಕೇವಲ ಒಳ್ಳೆಯ ಕೆಲಸ ಮಾಡಿಸಬಾರದು?
ಇದು
ಲೋಕದಲ್ಲಿರುವುದಕ್ಕಿಂತ ವಿಲಕ್ಷಣವಾಗಿ ಕಾಣುವ ಕ್ರಿಯೆ. ಉದಾಹರಣೆಗೆ ಒಬ್ಬ ಉಪಾಧ್ಯಾಯ, ಆತ ತನ್ನ ಪಾಠ ಪ್ರವಚನವನ್ನು ಎಲ್ಲಾ ಮಕ್ಕಳಿಗೂ
ಒಂದೇ ರೀತಿಯಾಗಿ, ಭೇದ ಭಾವವಿಲ್ಲದೆ ಕಲಿಸುತ್ತಾನೆ.
ಆದರೆ ಒಬ್ಬ ಪಾಠವನ್ನು ಬಹುಬೇಗ ಅರ್ಥ ಮಾಡಿಕೊಂಡರೆ ಇನ್ನೊಬ್ಬ ಅರ್ಥವಾಗದೆ ತಳಮಳಿಸಬಹುದು;
ಮತ್ತೊಬ್ಬ ಅಪಾರ್ಥ
ಮಾಡಿಕೊಳ್ಳಬಹುದು. ಇದಕ್ಕೆ ಉಪಾಧ್ಯಾಯರು ಕಾರಣರಲ್ಲ, ಇದು ವಿಧ್ಯಾರ್ಥಿಯ ಸ್ವಭಾವಕ್ಕೆ ಸಂಭಂದಪಟ್ಟ
ವಿಚಾರ. ಕೃಷ್ಣ ಹೇಳುತ್ತಾನೆ
"ಸ್ವಭಾವಸ್ತು ಪ್ರವರ್ತತೇ" ಎಂದು. ಇದು ಅಪೂರ್ವವಾದ ಸಂಗತಿ. ಹಿಂದೆ ಹೇಳಿದಂತೆ
ಜೀವ ಅನಾಧಿನಿತ್ಯ ಅದನ್ನು ಭಗವಂತ ಸೃಷ್ಠಿ ಮಾಡಿಲ್ಲ. ಈ ಅನಾಧಿನಿತ್ಯವಾದ ಜೀವಕ್ಕೆ
ಅನಾಧಿನಿತ್ಯವಾದ ಒಂದು ಅಸಾಧಾರಣ ಸ್ವಭಾವವಿದೆ(Exclusive Quality), ಆ ಸ್ವಭಾವದಂತೆ ಆ ಜೀವ ನಡೆದುಕೊಳ್ಳುತ್ತದೆ.
ಜೀವಸ್ವಭಾವದಂತೆ
ಜೀವ ನಡೆದುಕೊಳ್ಳುವುದು ಅಂದರೆ: ಉದಾಹರಣೆಗೆ ಮಾವಿನ ಬೀಜ, ಅದು ಮರವಾಗಿ ಮಾವಿನ ಹಣ್ಣನ್ನೆ ಕೊಡುತ್ತದೆ
ಹೊರತು ಹಲಸಿನ ಹಣ್ಣನ್ನಲ್ಲ, ಇದು
ಆ ಬೀಜದ ಸ್ವಭಾವ. ಜೀವ
ಎನ್ನುವುದು ಶರೀರ ಎನ್ನುವ ವೃಕ್ಷದ ಬೀಜ. ಆ ಶರೀರದ ಮೂಲಕ ವ್ಯಕ್ತವಾಗುವುದು ಆ ಬೀಜದ ಮೂಲ ಗುಣವೇ ಹೊರತು
ಇನ್ನೇನೂ ಅಲ್ಲ. ಜೀವ ಮೊದಲನೆಯದಾಗಿ ತನ್ನ ಸ್ವಭಾವಕ್ಕೆ ಅಧೀನ. ನಾವು ನಮಗೆ ತೋಚಿದಂತೆ
ಮಾಡಲು ಸಾಧ್ಯವಿಲ್ಲ, ನಮ್ಮ ಸ್ವಭಾವ
ಎಂತೋ ಅಂತೆಯೇ
ನಮ್ಮ ತೀರ್ಮಾನ. ಮೂಲತಃ ನಿಜವಾದ ಸ್ವಭಾವದಂತೆ ನಮ್ಮ ಅನಿಸಿಕೆ; ಅದಕ್ಕೆ ವಿರುದ್ಧವಾಗಿ ನಾವು ಕೆಲಸ ಮಾಡುವುದಿಲ್ಲ. ಈ
ಕಾರಣದಿಂದ ಸ್ವಭಾವತಃ ಸಾತ್ವಿಕನಾದರೆ ಆತನ ವಿಚಾರಧಾರೆಗಳೆಲ್ಲವೂ ಸಾತ್ವಿಕ ಗುಣದ
ಪ್ರಭಾವದಲ್ಲೇ ಇರುತ್ತದೆ, ರಾಜಸನಾದವನ
ವಿಚಾರಧಾರೆ ರಾಜಸ
ಗುಣದ ಪ್ರಭಾವದಲ್ಲಿರುತ್ತದೆ. ಸ್ವಭಾವದ ಜೊತೆಗೆ ಹುಟ್ಟಿ ಬೆಳೆದ ಸಮಾಜದ
ಪ್ರಭಾವವಿದ್ದರೂ ಸಹ ಅದರ
ಅಭಿವ್ಯಕ್ತತೆ ಕ್ಷಣಿಕ ಅದು ಹೆಚ್ಚೆಂದರೆ ಒಂದು ಜನ್ಮಕ್ಕೆ ಸೀಮಿತ, ಆದರೆ ಕೊನೆಗೆ ಉಳಿಯುವುದು ಜೀವಸ್ವಭಾವ ಮಾತ್ರ.
ಜೀವಕ್ಕೆ
ಅನಾಧಿನಿತ್ಯವಾಗಿ ಅಂಟಿದ ಸ್ವಭಾವ ಸಾತ್ವಿಕ ರಾಜಸ ಮತ್ತು ತಾಮಸಗಳ ಸಮ್ಮಿಶ್ರಣ. ಸಾತ್ವಿಕರು ಎಂದರೆ ಅವರಲ್ಲಿ
ಸಾತ್ವಿಕ ಗುಣ ಪ್ರಮಾಣ ಹೆಚ್ಚು. ಯಾರಲ್ಲಿ ಯಾವ ಗುಣ ಪ್ರಧಾನವೋ ಆತ ಆ ಗುಂಪಿಗೆ
ಸೇರುತ್ತಾನೆ. ಈ ಮೂರು ವಿಧವಾದ ಜೀವಜಾತ ತನ್ನ ಸ್ವಭಾವಕ್ಕೆ ಅಧೀನವಾಗಿ ನಡೆದುಕೊಳ್ಳುತ್ತದೆ
ಹೊರತು ತಾನು ಹೇಗೆ ಮಾಡಬೇಕು ಎಂದು ತೀರ್ಮಾನ ಮಾಡಿ ತನ್ನನ್ನು ರೂಪಿಸಿಕೊಳ್ಳುವ
ಸ್ವತಂತ್ರ ಕರ್ತೃತ್ವ ಅದಕ್ಕಿರುವುದಿಲ್ಲ.
ಸ್ವಭಾವ
ನಮ್ಮ ಅಧೀನ ಅಲ್ಲ, ಅಂದಮೇಲೆ
ಆ ಸ್ವಭಾವದ ಅಭಿವ್ಯಕ್ತಿ ನನ್ನ ಸ್ವಾತಂತ್ರ್ಯದಲ್ಲಿಲ್ಲ. ಮತ್ತೆ ಆ ಸ್ವಭಾವದ
ಅಭಿವ್ಯಕ್ತಿ ಹೇಗೆ? ಸ್ವಭಾವಕ್ಕೆ
ತಕ್ಕಂತೆ ಬೆಳೆಯುವುದು
ಯಾರ ಅಧೀನವಾಗಿ? ಸ್ವಭಾವಕ್ಕೆ
ಆ ಶಕ್ತಿ ಎಲ್ಲಿಂದ ಬಂತು? ಈ
ಎಲ್ಲಾ ಪ್ರಶ್ನೆಗೆ
ಇದೇ ಶ್ಲೋಕದಲ್ಲಿ ಉತ್ತರವಿದೆ. ಅದಕ್ಕಾಗಿ ನಾವು ಈ ಶ್ಲೋಕದಲ್ಲಿ ಅಡಗಿರುವ ಇನ್ನೊಂದು
ಅರ್ಥವನ್ನು ನೋಡಬೇಕು. ನಮಗೆ ಕರ್ತೃತ್ವವಿಲ್ಲ ಹಾಗು ಕರ್ಮದಲ್ಲಿ ಇಂತದ್ದೇ ಫಲ ಬರಬೇಕು
ಎನ್ನುವ ಸ್ವಾತಂತ್ರ್ಯವಿಲ್ಲ. ತಾನೇ ತಾನಾಗಿ ತನ್ನನ್ನು ಬಿತ್ತಿಕೊಂಡು ತಾನೇ ಮರವಾಗಿ
ಬೆಳೆದು ಹಣ್ಣನ್ನು ಕೊಡುವ ಶಕ್ತಿ ಜೀವಕ್ಕಿಲ್ಲ. ಸ್ವತಂತ್ರನಾದ ಭಗವಂತ ಸೃಷ್ಠಿ
ಎನ್ನುವ ತೋಟ ನಿರ್ಮಿಸಿ, ಅಲ್ಲಿ
ಒಬ್ಬ ತೋಟಗರನಂತೆ, ಜೀವ
ಎನ್ನುವ ಬೀಜವನ್ನು ಬಿತ್ತಿ ಬೆಳೆಸುತ್ತಾನೆ. ಅದರಿಂದ ನಮಗೆ ದೇಹ ಎನ್ನುವ ಮರ ಬೆಳೆಯುತ್ತದೆ
ಮತ್ತು ಅದರಿಂದ ಕಹಿಯಾದ,
ಹುಳಿಯಾದ ಅಥವಾ
ಸಿಹಿಯಾದ ಹಣ್ಣು ಜೀವ ಸ್ವಭಾವದಂತೆ ಅಭಿವ್ಯಕ್ತವಾಯಿತು. ಆದ್ದರಿಂದ ಕೆಟ್ಟಕೆಲಸ(ಕಹಿ)
ಒಳ್ಳೆಯಕೆಲಸ(ಸಿಹಿ) ಎನ್ನುವುದು ನಮ್ಮ ಸ್ವಭಾವವನ್ನವಲಂಬಿಸಿದೆ ಹೊರತು
ಭಗವಂತನನ್ನಲ್ಲ. ತೋಟಗಾರ ಎಂದೂ ಮೆಣಸಿನ ಗಿಡಕ್ಕೆ ಖಾರವಾದ ನೀರನ್ನು ಹರಿಸುವುದಿಲ್ಲ. ಎಲ್ಲಾ
ಗಿಡದಂತೆ ಆ ಗಿಡವನ್ನೂ ಪೋಷಿಸಿ ಬೆಳೆಸುತ್ತಾನೆ. ಆದರೆ ಅದು ಖಾರವಾದ ಹಣ್ಣನ್ನು
ತನ್ನ ಸ್ವಭಾವದಂತೆ ಕೊಡುತ್ತದೆ ಹಾಗೇ ಭಗವಂತ ಅನಾಧಿನಿತ್ಯವಾದ ಜೀವದ ಸ್ವಭಾವಕ್ಕೆ
ತಕ್ಕಂತೆ ಕ್ರಿಯೆ ಮಾಡಿಸಿದ ಹಾಗೆ ಕ್ರಿಯೆ ನಡೆಯಿತು.
ಕೆಲವೊಮ್ಮೆ
ನಾವು ಯೋಚಿಸಿದ್ದಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತೇವೆ. ಏಕೆಂದರೆ ನಮ್ಮ ಮನಸ್ಸು ಮತ್ತು ಬುದ್ಧಿಯ ವಿಚಾರ ಸರಣಿ(Intellectual
approach) ಬೇರೆ, ನಾವು ಮಾಡುವುದು ಬೇರೆ. ಈ ಕಾರಣಕ್ಕಾಗಿ ಕೆಲವರು
ಹೊರಗಿನಿಂದ ಒಂದು ಮಾತನಾಡಿ ಒಳಗಿನಿಂದ ಅದಕ್ಕೆ ವ್ಯತಿರಿಕ್ತವಾದುದ್ದನ್ನು
ಮಾಡುತ್ತಾರೆ. ದುರ್ಯೋಧನ ಕೂಡಾ "ನಾನು ಮಾಡುತ್ತಾ ಇರುವುದು
ತಪ್ಪು ಎನ್ನುವುದು ನನಗೆ ತಿಳಿದಿದೆ" ಎಂದು ಹೇಳಿರುವುದನ್ನು ಇಲ್ಲಿ ನಾವು ಗಮನಿಸಬೇಕು.
ಆತನಿಗೆ ಧರ್ಮ ಯಾವುದು ಎಂದು ತಿಳಿದಿತ್ತು. ಆದರೂ ಆತ ತನ್ನ ಸ್ವಭಾವದಂತೆ ನಡೆದ. ಆದ್ದರಿಂದ ನಮ್ಮ ತಿಳುವಳಿಕೆ ಬೇರೆ,
ನಮ್ಮ ಕ್ರಿಯೆ ಬೇರೆ.
ನಮ್ಮ ಸ್ವಭಾವ ನಮ್ಮೆಲ್ಲ
ಅಧ್ಯಯನ, ಬುದ್ಧಿ,
ವಿಚಾರವಾದವನ್ನು
ಬದಿಗೊತ್ತಿ ನಮ್ಮಿಂದ ಸ್ವಭಾವಕ್ಕನುಗುಣವಾದ ಕೆಲಸವನ್ನು ಮಾಡಿಸಿ ಬಿಡುತ್ತದೆ. ಇದನ್ನೇ ಕೃಷ್ಣ
ಇಲ್ಲಿ " ಸ್ವಭಾವಸ್ತು
ಪ್ರವರ್ತತೇ" ಎಂದಿರುವುದು. ನಿನ್ನ ಸ್ವಭಾವ ಎಂಥದ್ದೋ ಅಂತದ್ದೇ ನಿನ್ನ ಪ್ರವೃತ್ತಿ.
ಅದಕ್ಕನುಗುಣವಾಗಿ ಭಗವಂತ ನಿನ್ನನ್ನು ಬೆಳೆಸುತ್ತಾನೆ. ಯಾರಲ್ಲಿ ಯಾವ ಸ್ವಭಾವವಿದೆಯೋ ಅದೇ ರೀತಿ ಅವರಿರಬೇಕೇ ಹೊರತು
ಇನ್ನೊಬ್ಬರಂತಲ್ಲ. ಮಾವಿನ ಹಣ್ಣು ಹುಳಿಯಾದರೆ ಅದು ಕೆಟ್ಟ ಹಣ್ಣು, ಅದೇ ಹುಣಸೆ ಹಣ್ಣು ಹೆಚ್ಚು ಹುಳಿಯಾದಂತೆ
ಹೆಚ್ಚು ಉತ್ತಮ.
ಆದ್ದರಿಂದ ತಾಮಸರು ತಾಮಸರಂತಿರುವುದು ಅವರ ಸಹಜ ಧರ್ಮ. ಯಾರ್ಯಾರ ಸಹಜ ಸ್ವಭಾವ ಎಂಥದ್ದೋ
ಅಂತೆಯೇ ಸಹಜ ಸ್ವಭಾವದಲ್ಲಿ ಬೆಳೆಸುವ ಕ್ರಿಯೆಯನ್ನು ಸ್ವತಂತ್ರನಾದ ಭಗವಂತ ಮಾಡಿದ.
ಎಲ್ಲವುದರ ಫಲವನ್ನು ಕೊಡುವವನೂ ಅವನೆ. ಅವನಿಗೆ ಎಂದೂ ಬಂದನವಿಲ್ಲ.
ಹೀಗೆ
ಈ ಶ್ಲೋಕ ನಮ್ಮೆಲ್ಲ ಸಂಶಯಗಳಿಗೆ ಉತ್ತರರೂಪದಲ್ಲಿದೆ. ನಮ್ಮ ಸಂಶಯ ಅತ್ಯಂತ ಗಾಢ. ಮನಸ್ಸಿಗೆ ಬರುವ ಸಂಶಯವನ್ನು
ನಿವಾರಿಸಬಹುದು ಆದರೆ ಬುದ್ಧಿಗೆ ಬರುವ ಸಂಶಯ (Intellectual doubt)ವನ್ನು ನಿವಾರಿಸುವುದು ಕಷ್ಟ. ಪ್ರಾಚೀನ
ಶಾಸ್ತ್ರಕಾರರು ಮನಃಶಾಸ್ತ್ರದ
ಪ್ರಕಾರ ಇದನ್ನು 'ಸ್ಥಿರಸಂಶಯ'
ಎಂದು ಕರೆದರು.
ನಮ್ಮಲ್ಲಿರುವ ಬೌದ್ಧಿಕ ಕೊಳೆ ಜಗತ್ತಿನಲ್ಲಿ 'ಎಲ್ಲರಿಗಿಂತ ನಾನು ಬುದ್ಧಿವಂತ' ಎಂದು ತಿಳಿದುಕೊಳ್ಳುವಂತೆ ಮಾಡುತ್ತದೆ.
ಇದರಿಂದ ನಾವು ಸತ್ಯದ ಕಡೆಗೆ ಮನಸ್ಸನ್ನು ಒಗ್ಗಿಸಿಕೊಳ್ಳುವುದಿಲ್ಲ ಹಾಗು ಅದರಿಂದ
ನಮಗೆ ನಂಬಿಕೆ ಬರುವುದಿಲ್ಲ. ನಾವು ಯಾವುದೇ ಕೆಲಸ ಮಾಡಿದರೂ ಅದನ್ನು ತಿಳಿದು-ನಂಬಿ ಮಾಡಬೇಕು, ಅದಕ್ಕೋಸ್ಕರ ಪ್ರತೀ ಹೆಜ್ಜೆಯಲ್ಲೂ ಶಾಸ್ತ್ರೀಯ
ಅನುಭಾವ ಮುಖ್ಯ. ನಾನು
ಅಂದರೇನು, ಸ್ವಭಾವ
ಅಂದರೇನು, ನನ್ನ
ಸ್ವಭಾವವನ್ನು ನಿಯಂತ್ರಿಸುವ ಆ ಶಕ್ತಿ ಯಾವುದು, ಕೈಹಿಡಿದು ನಡೆಸುವವ ಮತ್ತು ಫಲ ಕೊಡುವವ ಯಾರು,
ಇತ್ಯಾದಿ ವಿಚಾರ ತಿಳಿದಾಗ
ಅಲ್ಲಿ ಅಹಂಕಾರಕ್ಕೆ ಎಡೆಯಿಲ್ಲ.
ಇಲ್ಲಿ
ನಮಗೆ ಒಂದು ಪ್ರಶ್ನೆ ಬರಬಹುದು. ಭಗವಂತ ನಮಗೆ ಶಿಕ್ಷೆ ಏಕೆ ಕೊಡುತ್ತಾನೆ ಎಂದು.
ದೇವರು ನಮಗೆ ಶಿಕ್ಷೆ ಕೊಡುವುದು ದ್ವೇಷದಿಂದಲ್ಲ, ಅದರ ಹಿಂದಿರುವುದು ಅಪಾರ-ಅನಂತವಾದ ಕಾರುಣ್ಯ. ತಾಯಿ ಮಗುವಿಗೆ
ಶಿಕ್ಷೆ ಕೊಡುವ ಹಿಂದಿರುವ ಕಾರುಣ್ಯ ಹೇಗೋ ಹಾಗೆ. ಜೀವನದಲ್ಲಿ ಬರುವ ದುಃಖ ದುರಿತಗಳಿಂದ
ಜೀವ ಪಾಕವಾಗುತ್ತದೆ. ಜೀವನದಲ್ಲಿ ನಮಗೆ ಬರುವ ತಾಪತ್ರಯಗಳ ತಾಪಕ್ಕೆ ನಾವು ಬೇಯಬೇಕು,
ಬೆಂದು ಪಕ್ವವಾಗಬೇಕು.
ಜೀವನದಲ್ಲಿ ಕಷ್ಟವನ್ನು
ನೋಡದವನು ಎಂದೂ ಬೆಳೆಯುವುದಿಲ್ಲ.ಅವರಿಗೆ ಇನ್ನೊಬ್ಬರ ಸುಖ-ದುಃಖ ಅರ್ಥವಾಗುವುದಿಲ್ಲ.ಜೀವ ಪಕ್ವವಾಗುವುದೇ
ಕಷ್ಟಗಳು ಬಂದಾಗ. ಇದು ಭಗವಂತ ನಮಗೆ ಕೊಡುವ ಶಿಕ್ಷೆಯ ಹಿಂದಿರುವ ಕಾರುಣ್ಯ. ನಮ್ಮ
ಪತನದ ಹಿಂದೆ ಒಂದು ಉದ್ಧಾರದ ಬೀಜವಿರುತ್ತದೆ. ದುಃಖದ ಹಿಂದೆ ಸುಖದ ಬೀಜವಿರುತ್ತದೆ. ಹೀಗೆ
ಶಾಸ್ತ್ರೀಯವಾಗಿ ನೋಡಿದಾಗ ಇಡೀ ಪ್ರಪಂಚದ ಹಿಂದೆ ಇರುವ ವಿಶ್ವಶಕ್ತಿ, ಮಹಾ ಕಾರುಣ್ಯಮೂರ್ತಿಯಾಗಿ ನಮ್ಮನ್ನು
ರಕ್ಷಿಸುತ್ತಿದೆ ಎನ್ನುವ ಎಚ್ಚರ ಬರುತ್ತದೆ. ಏಳಲು ಬಲವಿಲ್ಲದ ಮಗುವನ್ನು ತಾಯಿ ಹೇಗೆ ನೋಡಿಕೊಳ್ಳುತ್ತಾಳೆ,
ಹಾಗೆ ಭಗವಂತ ನಮ್ಮನ್ನು
ಪ್ರತಿಕ್ಷಣ ರಕ್ಷಿಸುತ್ತಿದ್ದಾನೆ. ಇದು ಆಧ್ಯಾತ್ಮ ಮಾರ್ಗದಲ್ಲಿ ನಿರಂತರ ಇರಬೇಕಾದ
ಅಂತಃಪ್ರಜ್ಞೆ.
· ಶ್ಲೋಕ - 15
ನಾSದತ್ತೇ ಕಸ್ಯಚಿತ್ಪಾಪಂ ನ ಚೈವ ಸುಕೃತಂ ವಿಭುಃ
।
ಅಜ್ಞಾನೇನಾSವೃತಂ ಜ್ಞಾನಂ ತೇನ ಮುಹ್ಯಂತಿ ಜಂತವಃ ॥೧೫॥
ಅಜ್ಞಾನೇನಾSವೃತಂ ಜ್ಞಾನಂ ತೇನ ಮುಹ್ಯಂತಿ ಜಂತವಃ ॥೧೫॥
ನ
ಆದತ್ತೇ ಕಸ್ಯಚಿತ್ ಪಾಪಮ್ ನ ಚ ಏವ ಸು ಕೃತಮ್ ವಿಭುಃ ।
ಅಜ್ಞಾನೇನ
ಆವೃತಮ್ ಜ್ಞಾನಮ್ ತೇನ
ಮುಹ್ಯಂತಿ ಜಂತವಃ -ಜಡಕ್ಕಿಂತ ಮಿಗಿಲೆನಿಸಿದ ಜೀವ ಯಾರ ಪಾಪವನ್ನೂ ತೊಡೆಯಲಾರ; ಪುಣ್ಯವನ್ನು ಕೂಡಾ. [ಯಾವ ಜೀವಿಯ
ಪಾಪ-ಪುಣ್ಯಗಳ ನಂಟೂ ಭಗವಂತನಿಗಿಲ್ಲ.]ಅರಿವಿಗೆ ಅವಿದ್ಯೆಯ ಮಸುಕಿದೆ. ಅದರಿಂದ ಜನರು
ಮೈಮರೆಯುತ್ತಾರೆ.
ಈ
ಶ್ಲೋಕವನ್ನು 'ಜೀವದ'
ಪರವಾಗಿ ಮತ್ತು 'ಭಗವಂತ'ನ ಪರವಾಗಿ ಎರಡು ರೂಪದಲ್ಲಿ ನೋಡಬಹುದು.
ಜೀವನ ಪರದಲ್ಲಿ ನೋಡಿದಾಗ ವಿಭುಃ ಅಂದರೆ ವಿಶಿಷ್ಟ, ವೈವಿಧ್ಯ, ವಿವಿಧ ಇತ್ಯಾದಿ ಅರ್ಥವನ್ನು ಕೊಡುತ್ತದೆ. ಜಡಕ್ಕಿಂತ
ವಿಶಿಷ್ಟನಾಗಿ-ಇಚ್ಛೆ, ಯೋಚನೆ,
ಜ್ಞಾನ ಇರುವ
ಜೀವ ವಿಶಿಷ್ಟ. ಬೇರೆ ಬೇರೆ ಜನ್ಮದಲ್ಲಿ ಬೇರೆ ಬೇರೆ ಜೀವಿಯಾಗಿ ಹುಟ್ಟಬಹುದಾದ ಜೀವ,
ಒಂದು ಜನ್ಮದಲ್ಲೇ ಅನೇಕ
ವೈವಿಧ್ಯತೆಯನ್ನು ಕಾಣಬಹುದು. ಉದಾಹರಣೆಗೆ ಮನುಷ್ಯನಾದವನು ಶ್ರೀಮಂತನಾಗಿ ಸುಖದ ಸುಪ್ಪತ್ತಿಗೆಯಲ್ಲಿ
ಬದುಕಬಹುದು, ದಾರಿದ್ರ್ಯದಲ್ಲಿರಬಹುದು. ದೊಡ್ಡ
ವಿದ್ವಾಂಸನಾಗಿ ಬದುಕಬಹುದು ಅಥವಾ ಏನೂ ಅರಿವಿಲ್ಲದ ಮೂಢನಾಗಿ ಬದುಕಬಹುದು.ಈ ರೀತಿಯ
ವೈವಿದ್ಯತೆ ಜೀವದಲ್ಲಿದೆ-ಅದಕ್ಕಾಗಿ ಜೀವ ವಿಭುಃ. ಒಂದೇ ಜನ್ಮದಲ್ಲಿ ಹುಟ್ಟಿ ಸಾಯುವ
ತನಕ ಅನೇಕ ಮಜಲುಗಳಲ್ಲಿ ಅನೇಕ ವೈವಿಧ್ಯತೆಯನ್ನು ನಾವು ಅನುಭವಿಸಬಹುದು.
ಶ್ರೀಮಂತನಾಗಿದ್ದವನು
ಎಲ್ಲವನ್ನು ಕಳೆದುಕೊಂಡು ದಾರಿದ್ರ್ಯವನ್ನು ಪಡೆಯಬಹುದು. ಹೀಗಾದಾಗ ನಾವು ಅದರ ಹಿಂದೆ ಏನೇನೋ ಕಾರಣಗಳನ್ನು
ಹುಡುಕುತ್ತೇವೆ. ಸಾಮಾನ್ಯವಾಗಿ ನಾವು ಮಾಡುವ ಮೊದಲ ಕೆಲಸ ಯಾವುದೋ ಜೋತಿಷಿಗಳಲ್ಲಿ ಹೋಗಿ ಪ್ರಶ್ನೆ
ಹಾಕುವುದು. ಹಾಗೆ
ಕೇಳಿದಾಗ ಅವರು ಯಾರೋ
ವಾಮಾಚಾರ(Witchcraft) ಮಾಡಿದ್ದರಿಂದ
ನೀನು ನಷ್ಟ ಅನುಭವಿಸುತ್ತಿರುವುದು ಇತ್ಯಾದಿಯಾಗಿ ಹೇಳುತ್ತಾರೆ. ಆದರೆ ಇಲ್ಲಿ
ಕೃಷ್ಣ ಹೇಳುತ್ತಾನೆ "ಯಾರ ಪಾಪವನ್ನು ನೀನು ತೆಗೆದುಕೊಳ್ಳಲು ಬರುವುದಿಲ್ಲ ಹಾಗು
ಇನ್ನೊಬ್ಬರ ಪುಣ್ಯ ನಮಗೆ ಬರುವುದಿಲ್ಲ; ನಾವು
ಏನು ಅನುಭವಿಸುತ್ತೇವೆ
ಅದು ನಾವು ಮಾಡಿದ ಕರ್ಮ ಫಲ" ಎಂದು. ಈ ಕಾರಣದಿಂದ ಇನ್ನೊಬ್ಬರಿಂದ ನಾವು
ಹಾಳಾದೆವು ಎನ್ನುವುದು ತಪ್ಪು ಎನ್ನುವುದು ಇಲ್ಲಿ ಸ್ಪಷ್ಟ. ಹಾಗಿದ್ದರೆ ವಾಮಾಚಾರ ಇತ್ಯಾದಿ
ಮಾಡಲು ಬರುವುದಿಲ್ಲವೋ, ಅದರಿಂದ
ತೊಂದರೆ ಆಗುವುದು ಸುಳ್ಳೋ, ಎಂದರೆ
-ನಮ್ಮ ಸುಕೃತದ
ಫಲ ನಮ್ಮನ್ನು ರಕ್ಷಣೆ ಮಾಡುವಷ್ಟು ಕಾಲ ಯಾವ ವಾಮಾಚಾರವೂ ನಮ್ಮನ್ನು ಏನೂ ಮಾಡುವುದಿಲ್ಲ.
ಇದನ್ನು ಜೋತಿಷಿಗಳು "ನಿಮ್ಮ ಗ್ರಹಗತಿ ಚನ್ನಾಗಿತ್ತು ಆದ್ದರಿಂದ ಈವರೆಗೆ ಏನೂ
ಆಗಿಲ್ಲ, ಆದರೆ
ಈಗ ಅದು ಕೆಟ್ಟಿದೆ" ಇತ್ಯಾದಿಯಾಗಿ ಹೇಳುತ್ತಾರೆ. ಇಲ್ಲಿ ಗ್ರಹಗತಿ ಕೆಟ್ಟಿದೆ
ಅಂದರೆ ನಮ್ಮ ಪಾಪದ ಫಲ ಪಕ್ವವಾಗಿದೆ ಎಂದರ್ಥ. ಆದ್ದರಿಂದ ಯಾರು ನಮ್ಮ ಮೇಲೆ ಕೃತ್ರಿಮ
ಪ್ರಯೋಗ ಮಾಡಿದರೂ, ಅದರಿಂದ
ನಮಗೆ ಅನಿಷ್ಠವಾಗಬೇಕಾದರೆ ನಾವು ಹಿಂದೆ ಅನಿಷ್ಠಕರ್ಮ ಮಾಡಿರಬೇಕು, ಅದರ ಫಲವಾಗಿ ಇಲ್ಲಿ ನಮಗೆ ಅದು ಅನುಭವಕ್ಕೆ
ಬರುತ್ತದೆ. ನಮ್ಮ ದೋಷಗಳು, ನಮ್ಮ
ಬಡತನ, ನಮ್ಮ ಅಜ್ಞಾನ, ರೋಗ-ರುಜಿನ ಇತ್ಯಾದಿಗಳಿಗೆ ಇನ್ನೊಬ್ಬರನ್ನು ತೋರಿಸುವುದು,
ಅವರಿಂದ ಹೀಗಾಯ್ತು
ಎನ್ನುವುದು ತಪ್ಪು. ನಮಗೆ ರೋಗ ಉಲ್ಬಣವಾಗಿ ಅದನ್ನು ಅನುಭವಿಸುವ ಪ್ರರಾಬ್ಧ ಕರ್ಮ ಇದ್ದರೆ ಅದನ್ನು
ಯಾರಿಂದಲೂ ತಪ್ಪಿಸಲು ಬರುವುದಿಲ್ಲ. ಇದಕ್ಕಾಗಿ ಇನ್ನೊಬ್ಬರ ಮೇಲೆ ಗೂಬೆ
ಕೂರಿಸುವುದು ತಪ್ಪು. ಯಾರೋ ಮಾಡಿದ ಪಾಪಕರ್ಮದ ಫಲವನ್ನು ನಾನು ಅನುಭವಿಸುವುದಿಲ್ಲ. ನಾನು
ಮಾಡಿದ ಪಾಪ ಕರ್ಮದ ಫಲವನ್ನೇ ನಾನು ಅನುಭವಿಸುವುದು.
ಭಕ್ತನ
ಪರ ಪುರೋಹಿತ ಮಾಡುವ ಕರ್ಮ ಭಕ್ತನಿಗೆ, ತಂದೆಯ
ಪರ ಮಗ ಮಾಡುವ ಕರ್ಮ ತಂದೆಗೆ ಬರಬಹುದು. ಇದು ಒಬ್ಬರ ಪರ ಇನ್ನೊಬ್ಬರು ಮಾಡಿದ
ಕರ್ಮ. ಈ ವಿಚಾರವನ್ನು ಹೊರತುಪಡಿಸಿದರೆ(Exception) ನಾವು ಅನುಭವಿಸುವುದು ನಾವೇ ಮಾಡಿದ ಕರ್ಮಫಲ
ಹೊರತು ಇನ್ನೊಬ್ಬರದ್ದಲ್ಲ.
ಜನರಿಗೆ
ಸರಿಯಾದ ಅರಿವಿಲ್ಲದ ಕಾರಣ 'ಇನ್ನೊಬ್ಬರಿಂದ
ನನಗೆ ತೊಂದರೆ ಆಯ್ತು' ಎಂದು ತಿಳಿಯುತ್ತಾರೆ.
ಇದಕ್ಕೆಲ್ಲಾ ಮೂಲಕಾರಣ ಕರ್ಮದ ಬಗ್ಗೆ, ಜೀವದಬಗ್ಗೆ,
ಪರಮಾತ್ಮನ ಬಗ್ಗೆ ಸರಿಯಾದ
ಅರಿವು ಇಲ್ಲದಿರುವುದು. ಜ್ಞಾನವೆನ್ನುವುದು ಅಜ್ಞಾನದ ಮುಸುಕಿನಲ್ಲಿ ಮುಚ್ಚಿಹೋಗಿ ಅದರಿಂದ ತಪ್ಪು ತಿಳುವಳಿಕೆ ಹಾಗು
ಮೋಹದ ಭ್ರಾಂತಿ ನಮ್ಮನ್ನು ಆವರಿಸಿರುವುದು.
ಈ
ಶ್ಲೋಕದ ಇನ್ನೊಂದು
ಮುಖ ನೋಡಿದರೆ 'ವಿಭುಃ'
ಅಂದರೆ ಸರ್ವ ಸಮರ್ಥನಾದ,
ಸರ್ವಗತನಾದ ಭಗವಂತ.
ಈ ಅರ್ಥದಲ್ಲಿ ನೋಡಿದಾಗ: ಭಗವಂತನಿಗೆ ಯಾವ ಕರ್ಮದ ಲೇಪವೂ ಇಲ್ಲ. ಆತ ಜೀವ ಸ್ವರೂಪದಲ್ಲಿನ
ಅಂತರವನ್ನು ಗುರುತಿಸಿ ಅದಕ್ಕೆ ತಕ್ಕಂತೆಯೇ ಬೆಳವಣಿಗೆಯನ್ನು ಕೊಡುತ್ತಾನೆ. ಆತ ಎಂದೂ ಪಕ್ಷಪಾತಿ ಅಲ್ಲ. (Equal
treatment of unequal is discrimination). ಪಾಪದ-ಪುಣ್ಯದ
ಎರಡರ ಲೇಪವೂ ಆತನಿಗಿಲ್ಲ. ಆದರೆ ಭಗವಂತನ ಈ ಕರ್ಮಸಿದ್ಧಾಂತ, ಆತನ ಸರ್ವಸಮರ್ಥತೆ ಮತ್ತು ಅವನ ನಿರ್ಲಿಪ್ತತೆ
ಇದರ ಅರಿವು ಬಹಳ ಜನಕ್ಕೆ ತಿಳಿದಿಲ್ಲ-ಆದ್ದರಿಂದ ಭಗವಂತನ ಬಗೆಗೆ
ಗೊಂದಲಕ್ಕೊಳಗಾಗುತ್ತಾರೆ.
'ನಮಗೆ
ಸ್ವತಂತ್ರವಾದ ಕರ್ತೃತ್ವವಿಲ್ಲ, ನಾವು
ಆತನ ಅಧೀನ' ಎನ್ನುವ
ವಿಚಾರದಲ್ಲಿ ನಾವು
ಸದಾ ಗೊಂದಲಕ್ಕೊಳಗಾಗುತ್ತೇವೆ. ಎಲ್ಲವನ್ನೂ ಭಗವಂತನೇ ಮಾಡುವುದಾದರೆ ಪಾಪ ಕರ್ಮಗಳು ನಮಗೇಕೆ
ಅನ್ನುವ ಪ್ರಶ್ನೆ ಹೆಚ್ಚಿನವರನ್ನು ಕಾಡುತ್ತದೆ. ಎಷ್ಟು ಅಧ್ಯಯನ ಮಾಡಿದರೂ ಈ ಕರ್ಮಸಿದ್ಧಾಂತ
ಅರ್ಥವಾಗುವುದಿಲ್ಲ. ಇದಕ್ಕೆ ಕಾರಣ ಅರಿವಿನ ಅಭಾವ. ಈ ಅರಿವು ಕೇವಲ ಓದುವುದರಿಂದ ಬರುವುದಿಲ್ಲ. ಅದನ್ನು
ಗ್ರಹಿಸಿ-ಗ್ರಹಿಸಿ, ಅನುಭವಿಸಿ
ಮನವರಿಕೆ ಮಾಡಿಕೊಳ್ಳಬೇಕು.
ಇದನ್ನು ಕೃಷ್ಣ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಮುಂದಿನ ಶ್ಲೋಕದಲ್ಲಿ ವಿವರಿಸಿದ್ದಾನೆ.
· ಶ್ಲೋಕ - 16
ಜ್ಞಾನೇನ ತು ತದಜ್ಞಾನಂ ಯೇಷಾಂ ನಾಶಿತಮಾತ್ಮನಃ ।
ತೇಷಾಮಾದಿತ್ಯವಜ್ ಜ್ಞಾನಂ ಪ್ರಕಾಶಯತಿ ತತ್ ಪರಮ್ ॥೧೬॥
ತೇಷಾಮಾದಿತ್ಯವಜ್ ಜ್ಞಾನಂ ಪ್ರಕಾಶಯತಿ ತತ್ ಪರಮ್ ॥೧೬॥
ಜ್ಞಾನೇನ
ತು ತತ್ ಅಜ್ಞಾನಮ್ ಯೇಷಾಮ್ ನಾಶಿತಮ್ ಆತ್ಮನಃ ।
ತೇಷಾಮ್
ಆದಿತ್ಯ ವತ್ ಜ್ಞಾನಮ್ ಪ್ರಕಾಶಯತಿ
ತತ್ ಪರಮ್-ಭಗವಂತನ ಅರಿವಿನಿಂದ ಅವಿದ್ಯೆಯನ್ನು ಅಳಿಸಿಕೊಂಡವರ ಆ ಅರಿವು
ಸೂರ್ಯನಂತೆ ಪರತತ್ವವನ್ನು ಬೆಳಗಿಸುತ್ತದೆ.
ನಾವು
ನಮ್ಮ ಗೊಂದಲವನ್ನು ಪರಿಹರಿಸಿಕೊಳ್ಳಲು ಇರುವುದು ಕೇವಲ ಒಂದೇ ಮಾರ್ಗ. ಜ್ಞಾನ ಮಾರ್ಗದಲ್ಲಿ
ಸಾಧನೆ ಮಾಡಿ ಸತ್ಯವನ್ನು ತಿಳಿದುಕೊಳ್ಳುವುದು. ನಮ್ಮ ಸಮಸ್ಯೆ ಅಂದರೆ ನಮ್ಮೊಳಗೆ ಇರುವ ಜೀವ ಸ್ವರೂಪದಲ್ಲಿ
ಜ್ಞಾನವಿದೆ-ಆದರೆ ಅದನ್ನು ಅಜ್ಞಾನವೆಂಬ ಮುಸುಕು ಕವಿದಿದೆ. ನಾವು ನಮ್ಮ ಜೀವ ಸ್ವರೂಪವನ್ನು
ಅಜ್ಞಾನವೆಂಬ ಪೆಟ್ಟಿಗೆಯೊಳಗೆ ಭದ್ರವಾಗಿ ಮುಚ್ಚಿಟ್ಟಿದ್ದೇವೆ. ಜ್ಞಾನಕ್ಕೆ
ಮುಚ್ಚಳ-ಅಜ್ಞಾನದ್ದು ಹಾಗು ನಮಗೆ ಆ ಮುಚ್ಚಳವನ್ನು ತೆಗೆಯಲು ಇಷ್ಟವಿಲ್ಲ.
ನಾವು ಮೊದಲು
ತಿಳಿಯಬೇಕಾದ ಸಂಗತಿ 'ನಾನು
ಅಂದರೆ ಏನು' ಎನ್ನುವುದನ್ನು.ಅದು ಗೊತ್ತಾದಾಗ
ನನ್ನ ಸೀಮಿತತೆ ಏನು, ನನ್ನ
ಶಕ್ತಿ ಏನು, ನನ್ನ
ಅಲ್ಪತ್ವವೇನು ಎನ್ನುವುದು ತಿಳಿಯುತ್ತದೆ. ನಮ್ಮ ಇಂದ್ರಿಯದ ಒಡೆತನ
ನಮಗಿಲ್ಲ; ನಮ್ಮ
ಮನಸ್ಸು ನಾವು ಹೇಳಿದಂತೆ ಕೇಳುವುದಿಲ್ಲ. ಆದ್ದರಿಂದ ನಾನು ಇವೆಲ್ಲವುದರ
ಜೊತೆಗಿದ್ದೇನೆ, ಯಾರೋ
ಇದನ್ನೆಲ್ಲ ಇಲ್ಲಿ ಇಟ್ಟಿದ್ದಾರೆ; ಇಂದ್ರಿಯದಿಂದ
ಅನುಭವ ಬರುತ್ತದೆ ನಾನು ಅನುಭವಿಸುತ್ತೇನೆ ಎನ್ನುವ ಅರಿವು ಮೂಡುತ್ತದೆ. ಈ ಇಂದ್ರಿಯಗಳನ್ನು ಕೊಟ್ಟವನ್ಯಾರು, ಅದರಿಂದ ಅನುಭವ ಕೊಡುವವನ್ಯಾರು ಎನ್ನುವುದು ಅರ್ಥವಾದಾಗ,
ತಾನು ಕೇವಲ ಪ್ರತಿಬಿಂಬ
ಮತ್ತ ಮೂಲ ಬಿಂಬ ಭಗವಂತ ಎನ್ನುವ ಅರಿವು ಮೂಡುತ್ತದೆ.
ನಾವು
ಹೇಗೆ ನಮ್ಮ ಅಜ್ಞಾನದ ಪರದೆಯನ್ನು ಕಳಚಿ ಜ್ಞಾನದ ಮಾರ್ಗವನ್ನು ಹಿಡಿಯಬಹುದು ಎನ್ನುವುದನ್ನು
ಕೃಷ್ಣ ಇಲ್ಲಿ ವಿವರಿಸಿದ್ದಾನೆ. "ಜ್ಞಾನ ಎನ್ನುವುದು ಬೆಂಕಿಯಂತೆ. ಒಳಗಿರುವ
ಜ್ಞಾನದ ಕಿಡಿಯನ್ನು ಸತತ ಅಂತರಂಗದ ಮನನದಿಂದ ಪ್ರಜ್ವಲಿಸು. ಆಗ ಅದು ಈ ಅಜ್ಞಾನವೆಂಬ ಪರದೆಯನ್ನು
ಸುಟ್ಟುಬಿಡುತ್ತದೆ". ನಿರಂತರ ಅಂತರಂಗದ ಮನನ ಮಾತ್ರ ನಮ್ಮ ಅಂತರಂಗದ ಜ್ಞಾನವನ್ನು ಪ್ರಜ್ವಲಿಸಬಲ್ಲದು.
ಹೊರಗಿನ ಶ್ರವಣ, ಅಧ್ಯಯನ
ಇದಕ್ಕೆ ಪೂರಕ. ಒಮ್ಮೆ
ಅಜ್ಞಾನದ ಪರದೆ ಸುಟ್ಟು ನಾಶವಾದಾಗ ನಮಗೆ ಸತ್ಯದ ಸಾಕ್ಷಾತ್ಕಾರವಾಗುತ್ತದೆ. ಇದರಿಂದ
'ನಾನು ಮಾಡಿದೆ' ಎನ್ನುವ ಅಹಂಕಾರ ಬರಲು ಸಾಧ್ಯವೇ ಇಲ್ಲ. ಈ
ಜ್ಞಾನದ ಬೆಂಕಿ ಸೂರ್ಯ
ಪ್ರಕಾಶಕ್ಕಿಂತ ದೊಡ್ಡದು ಎನ್ನುತ್ತಾನೆ ಕೃಷ್ಣ. ಹೇಗೆ ಹೊರ ಪ್ರಪಂಚವನ್ನು ಸೂರ್ಯ ಬೆಳಗಿಸುತ್ತಾನೋ ಹಾಗೇ
ಈ ಜ್ಞಾನ ಅಂತರಂಗ ಪ್ರಪಂಚವನ್ನು ಬೆಳಗಿಸುತ್ತದೆ. ಇದು ಅಪರೋಕ್ಷ ಜ್ಞಾನ ಹಾಗು ಈ ಜ್ಞಾನ ಭಗವಂತನ
ಸಾಕ್ಷಾತ್ಕಾರ ಮಾಡಿಸುತ್ತದೆ.
ಕೃಷ್ಣನ ಈ
ವಿವರಣೆಯನ್ನು ಕೇಳಿದಾಗ ನಮಗೆ ನಾವೂ ಅಪರೋಕ್ಷ ಜ್ಞಾನವನ್ನು ಪಡೆಯಬೇಕು ಅನ್ನಿಸುತ್ತದೆ. ಆದರೆ ಅದು ಹೇಗೆ? ಅಪರೋಕ್ಷ ಜ್ಞಾನ ಬರಬೇಕಾದರೆ ನಾವು ಏನು
ಮಾಡಬೇಕು? ಇದನ್ನು
ಮುಂದಿನ ಶ್ಲೋಕದಲ್ಲಿ ಕೃಷ್ಣ ವಿವರಿಸಿದ್ದಾನೆ.
· ಶ್ಲೋಕ - 17
ತದ್ ಬುದ್ಧಯಸ್ತದಾತ್ಮಾನಸ್ತನ್ನಿಷ್ಠಾಸ್ತತ್
ಪರಾಯಣಾಃ ।
ಗಚ್ಛಂತ್ಯ ಪುನರಾವೃತ್ತಿಂ ಜ್ಞಾನನಿರ್ಧೂತಕಲ್ಮಷಾಃ ॥೧೭॥
ಗಚ್ಛಂತ್ಯ ಪುನರಾವೃತ್ತಿಂ ಜ್ಞಾನನಿರ್ಧೂತಕಲ್ಮಷಾಃ ॥೧೭॥
ತತ್
ಬುದ್ಧಯಃ ತತ್ ಆತ್ಮಾನಃ ತತ್ ನಿಷ್ಠಾಃ ತತ್ ಪರಾಯಣಾಃ ।
ಗಚ್ಛಂತಿ ಅಪುನಃ
ಆವೃತ್ತಿಮ್ ಜ್ಞಾನ ನಿರ್ಧೂತ ಕಲ್ಮಷಾಃ -ಅವನಲ್ಲೆ ಬಗೆ ನೆಟ್ಟವರು, ಅವನೆ ಸ್ವಾಮಿಯೆಂದು ನಂಬಿದವರು, ಅವನಲ್ಲೆ ನೆಲೆಗೊಡವರು, ಅವನಿಗೇ ಶರಣಾದವರು, ಅವನನ್ನು ಕಂಡು ಬಾಳ ಕೊಳೆಯನ್ನು ಕಳೆದುಕೊಂಡವರು ಮತ್ತೆ ಮರಳಿಬಾರದ
ತಾಣಕ್ಕೆ ತೆರಳುತ್ತಾರೆ.
ಅಜ್ಞಾನವನ್ನು
ಅಳಿಸುವ ಮಾರ್ಗವನ್ನು ಕೃಷ್ಣ ಇಲ್ಲಿ ಸೊಗಸಾಗಿ ವಿವರಿಸಿದ್ದಾನೆ. ಮೊದಲನೆಯದಾಗಿ ಭಗವಂತನಲ್ಲೇ ಬುದ್ಧಿಯನ್ನಿಡುವುದು(ತತ್
ಬುದ್ಧಯಃ); ನಮ್ಮ
ಮನಸ್ಸು ಎಲ್ಲಾ
ವಿಷಯಗಳನ್ನು ಗ್ರಹಿಸುತ್ತದೆ, ಬುದ್ಧಿ
ತೀರ್ಮಾನ ಮಾಡುತ್ತದೆ. ನಾವು ಭಗವಂತನಲ್ಲಿ ಸ್ಥಿರವಾಗಿ ನಮ್ಮ ಬುದ್ಧಿಯನ್ನು ಇಟ್ಟರೆ ಆತ
ನಮ್ಮ ಬುದ್ಧಿಯಲ್ಲಿ ಬಂದು ಕೂರುತ್ತಾನೆ. ಇದಕ್ಕಾಗಿ ನಾವು ಭಗವಂತನ ಕುರಿತಾಗಿ ನಮ್ಮ
ಅರಿವನ್ನು ಬೆಳೆಸಿಕೊಳ್ಳಬೇಕು. ಭಗವಂತನ ವಿಷಯದ ನಿರಂತರ ಸಾಧನೆಯಿಂದ ನಾವು ಭಗವಂತನಲ್ಲಿ
ನಮ್ಮ ಬುದ್ಧಿಯನ್ನು ನೆಲೆಗೊಳಿಸಿದಾಗ, ಭಗವಂತ
ನಮ್ಮ ಬುದ್ಧಿಯಲ್ಲಿ ನೆಲೆಗೊಳ್ಳುತ್ತಾನೆ.
ಭಗವಂತನಿಗೆ
ನಿನ್ನ ಆತ್ಮವನ್ನು,
ನಿನ್ನ ಮನಸ್ಸನ್ನು
ಅರ್ಪಿಸು(ತತ್ ಆತ್ಮಾನಃ), ಅವನು
ನಿನ್ನ ಸ್ವಾಮಿಯಾಗಲಿ,
ನೀನು 'ಭಗವಂತನೇ ಸದಾ ನನ್ನನ್ನು ಮಾರ್ಗದರ್ಶನ ಮಾಡುವ ಪ್ರಭು',
ಅವನ ನಿಯಂತ್ರಣದಲ್ಲಿ
ನನ್ನ ಬದುಕು ಮಾಂಗಲಿಕವಾಗಿ ನಡೆಯಲಿ ಎಂದು ನಿರಂತರ ಪ್ರಾರ್ಥನೆ ಮಾಡು.
ಭಗವಂತನಲ್ಲಿ
ನಿಷ್ಠೆ(ತತ್ ನಿಷ್ಠಾಃ) ಇಲ್ಲದೆ ಇದ್ದರೆ ಏನನ್ನೂ ಮಾಡಲು ಸಾಧ್ಯವಿಲ್ಲ.
ನಿಷ್ಠಾ ಅಂದರೆ ಭಕ್ತಿ.
ಆದ್ದರಿಂದ ಭಗವಂತನಲ್ಲಿ ಸದಾ ಭಕ್ತಿ ಇರಬೇಕು. ಭಕ್ತಿ ಇಲ್ಲದೆ ಧ್ಯಾನ, ಪೂಜೆ ಮಾಡುವುದರಿಂದ ಯಾವುದೇ ಉಪಯೋಗವಿಲ್ಲ.
ಒಮ್ಮೆ ನಮಗೆ ಭಗವಂತನ ಬಗ್ಗೆ ಜ್ಞಾನ ಬಂದರೆ ಭಕ್ತಿ ತನ್ನಷ್ಟಕ್ಕೆ ತಾನೇ ಬರುತ್ತದೆ.
ಜ್ಞಾನವಿಲ್ಲದ ಭಕ್ತಿ-ಮೂಡಭಕ್ತಿ. ಜ್ಞಾನವಿದ್ದು ಭಕ್ತಿ
ಇಲ್ಲದಿದ್ದರೆ(ಅಹಂಕಾರದಿಂದ) ಆ ಜ್ಞಾನದಿಂದ ಯಾವ ಉಪಯೋಗವೂ ಇಲ್ಲ, ಅದು ಶುಷ್ಕ ಪಾಂಡಿತ್ಯವೆನಿಸುತ್ತದೆ.
ಹೀಗೆ
ಮನಸ್ಸು-ಬುದ್ಧಿಯನ್ನು ಭಗವಂತನಲ್ಲಿ ನೆಲೆಸಿ ಜ್ಞಾನಪೂರ್ವಕ ಭಕ್ತಿಯನ್ನು ರೂಢಿಸಿಕೊಂಡಾಗ
ಎಲ್ಲಕ್ಕಿಂತ ದೊಡ್ಡ ಆಶ್ರಯ ಭಗವಂತ(ತತ್ ಪರಾಯಣಾಃ) ಎನ್ನುವ ಅರಿವು ಬರುತ್ತದೆ. ಇದರಿಂದ ಸಂಸಾರವೆ ಸರ್ವಸ್ವ
ಎನ್ನುವ ಭ್ರಮೆ ಹೊರಟು ಹೋಗುತ್ತದೆ. ಪುರಂದರದಾಸರು ಹೇಳಿದಂತೆ "ಅಲ್ಲಿದೆ
ನಮ್ಮನೆ, ಇಲ್ಲಿರುವುದು
ಸುಮ್ಮನೆ" ಅಂದರೆ ಈ ಸಂಸಾರ ಶಾಶ್ವತ ಅಲ್ಲ ಹಾಗು ಯಾವಾಗ ಇಲ್ಲಿಂದ
ಹೊರಡಬೇಕೋ ನಮಗೆ ಗೊತ್ತಿಲ್ಲ. ಹಾಗಿರುವಾಗ 'ನನ್ನದು' ಎನ್ನುವ
ಅಹಂಕಾರ ಏಕೆ? ಇದು
ಪಲಾಯನವಾದವಲ್ಲ, ನಾವು
ಯಾವುದನ್ನೂ ಬಿಡಬೇಕಾಗಿಲ್ಲ,ಆದರೆ ಅದೇ ಸರ್ವಸ್ವ ಎನ್ನುವ ಭ್ರಮೆಯನ್ನು
ಬಿಡುವುದು ಅಷ್ಟೇ. ಭಗವಂತ ಕೊಟ್ಟಿದ್ದಾನೆ, ಕೊಟ್ಟಷ್ಟು ಕಾಲ ಇಟ್ಟಷ್ಟು ಕಾಲ ಇರುವುದು.
ಅದೇ ರೀತಿ ಯಾವ ತತ್ವಾಭಿಮಾನಿ
ದೇವತೆಗಳನ್ನೂ ನಾವು ತಿರಸ್ಕರಿಸಬಾರದು. ಅವರು ನಮಗೆ ಭಗವಂತನನ್ನು ಸೇರುವ ಮಾರ್ಗ
ತೋರಿಸುವ ಭಗವಂತನ ಪರಿವಾರ, ಆದರೆ
ಅವರೇ ಸರ್ವಸ್ವ ಅಲ್ಲ.
ಎಲ್ಲಕ್ಕಿಂತ
ಮೇಲೆ ಎಲ್ಲರಿಗೂ ಆಶ್ರಯವಾಗಿರತಕ್ಕಂತಹ ಪರತತ್ವದ ಎಚ್ಚರದೊಂದಿಗೆ ನಿನ್ನ
ಪಾಲಿಗೆ ಬಂದ
ಕರ್ತವ್ಯವನ್ನು ಭಗವಂತನ ಪ್ರಸಾದವೆಂದು ಮಾಡು. ಓಡಿಹೋಗಬೇಡ, ಸಂಸಾರದಲ್ಲಿ ಬದುಕು, ಭಗವಂತ ಕೊಟ್ಟಿದ್ದನ್ನು ಸ್ವೀಕರಿಸು.
ನಿನ್ನೆಲ್ಲಾ ಸರ್ವಸ್ವವನ್ನು 'ಪರಮ
ರಕ್ಷಕ ಭಗವಂತ'
ಎಂದು ಅವನಲ್ಲಿ
ಅರ್ಪಿಸು. ಹೀಗೆ ಬದುಕುವುದರಿಂದ, ನಮ್ಮ
ಆತ್ಮಕ್ಕೆ ಅಂಟಿದ ಕೊಳೆ ತೊಳೆದು ಹೋಗುತ್ತದೆ, ಮನಸ್ಸು ಸ್ವಚ್ಛವಾಗುತ್ತದೆ. ಆಗ ಜ್ಞಾನ ಬೆಳಗುತ್ತದೆ-ಭಗವಂತನ
ಸಾಕ್ಷಾತ್ಕಾರವಾಗುತ್ತದೆ. ಇದರಿಂದ ಮತ್ತೆ ಮರಳಿ ಬಾರದ ಶಾಶ್ವತ ಮೋಕ್ಷವನ್ನು ಜೀವ ಪಡೆಯಬಲ್ಲ.
· ಶ್ಲೋಕ - 18
ವಿದ್ಯಾವಿನಯಸಂಪನ್ನೇ
ಬ್ರಾಹ್ಮಣೇ ಗವಿ
ಹಸ್ತಿನಿ ।
ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ ॥೧೮॥
ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ ॥೧೮॥
ವಿದ್ಯಾ
ವಿನಯ ಸಂಪನ್ನೇ ಬ್ರಾಹ್ಮಣೇ
ಗವಿ ಹಸ್ತಿನಿ ।
ಶುನಿ
ಚ ಏವ ಶ್ವಪಾಕೇ
ಚ ಪಂಡಿತಾಃ ಸಮದರ್ಶಿನಃ
–ನಿಜವಾದ ಪಂಡಿತ-ವಿದ್ಯಾವಿನಯಸಂಪನ್ನ,
ಬ್ರಾಹ್ಮಣವರ್ಣ,
ಆಕಳು,ಆನೆ, ನಾಯಿ,ಹೊಲಗೇಡಿ ಹೀನ ಮಾನವನಲ್ಲಿ ಕೂಡ ಏಕರೂಪನಾದ ಭಗವಂತನನ್ನು
ಕಾಣಬಲ್ಲ.
ಈ
ಶ್ಲೋಕ ಬಹಳ ಮಂದಿಗೆ ಅರ್ಥವಾಗುವುದಿಲ್ಲ ಅಥವಾ ಅರ್ಥವಾಗದೆ ಅಪಾರ್ಥ ಮಾಡಿಕೊಳ್ಳುವವರೇ ಹೆಚ್ಚು. ಒಬ್ಬ ಸಾಧಕನ
ಉಪಾಸನೆಯಲ್ಲಿ ಇರಬೇಕಾದ ಇನ್ನೊಂದು ಮುಖವನ್ನು ಕೃಷ್ಣ ಇಲ್ಲಿ ವಿವರಿಸಿದ್ದಾನೆ. ಇದು ತುಂಬಾ
ಒಳ ನೋಟವನ್ನು ಅಪೇಕ್ಷಿಸುವ ಶ್ಲೋಕ. ಇಲ್ಲಿ ಮೂರು ತರಹದ ಮನುಷ್ಯನ ಸ್ಥಿತಿಯನ್ನು ಮತ್ತು
ಮೂರು ತರಹದ ಪ್ರಾಣಿಗಳ ಸ್ಥಿತಿಯನ್ನು ಕೃಷ್ಣ ವಿವರಿಸಿದ್ದಾನೆ. ಮಾನವರಲ್ಲಿ:
ವಿದ್ಯಾವಿನಯಸಂಪನ್ನ, ಬ್ರಾಹ್ಮಣ
ಮತ್ತು ಶ್ವಪಾಕ.
ಪ್ರಾಣಿಗಳಲ್ಲಿ: ಗೋವು, ಆನೆ
ಮತ್ತು ನಾಯಿ.
ಮನುಷ್ಯರಲ್ಲಿ
ಜ್ಞಾನದ ತುತ್ತ ತುದಿಯನ್ನು ತಲುಪಿದವ ಮತ್ತು ಅತ್ಯಂತ ಶ್ರೇಷ್ಠ ‘ವಿದ್ಯಾ ವಿನಯಸಂಪನ್ನ’. ವೇದದ ಕೆಲವು ಭಾಗವನ್ನು ಪ್ರಾಮಾಣಿಕವಾಗಿ ಮನನ ಮಾಡಿ ಉಪಾಸನೆ ಮಾಡುವವ
ಬ್ರಾಹ್ಮಣ. (ಇಲ್ಲಿ ಹೇಳುವ ಬ್ರಾಹ್ಮಣ ಬ್ರಾಹ್ಮಣವರ್ಣ; ಜಾತಿ ಅಲ್ಲ. ಈ ಬಗ್ಗೆ ವಿಶೇಷವಾಗಿ
ಹಿಂದಿನ ಅಧ್ಯಾಯದಲ್ಲಿ ವಿಶ್ಲೇಶಿಸಿದ್ದೇವೆ). ಸಮಸ್ತ ವೇದವನ್ನು ಓದಿ ಆ
ವೇದೋಕ್ತವಾದ
ವಿಧಾನವನ್ನು ಜೀವನದಲ್ಲಿ ಅಳವಡಿಸಿಕೊಂಡವ ವೇದಜ್ಞ. ವೇದದ ಅಂತರಂಗದ ಅರ್ಥವನ್ನು ತಿಳಿದವ 'ವೇದ ಅರ್ಥಜ್ಞ'-ಆತನೇ ‘ವಿದ್ಯಾ ವಿನಯಸಂಪನ್ನ’
ಇನ್ನು
ಮಾನವರಲ್ಲಿ ಅತೀ ಕೀಳು ಅಂದರೆ ಶ್ವಪಾಕ. ಶ್ವಪಾಕ ಎಂದರೆ ನಾಯಿಯ ಮಾಂಸ ತಿನ್ನುವವ ಎಂದರ್ಥ. ಅಂದರೆ ಆತನಿಗೆ ಯಾವ
ಸಂಸ್ಕಾರವೂ ಇಲ್ಲ, ಹೊಟ್ಟೆಗಾಗಿ
ಏನನ್ನಾದರೂ ತಿನ್ನುವವ.
ಇದು ಮನುಷ್ಯನ ಅಧಃಪಾತದ ಪರಾಕಾಷ್ಠೆಯನ್ನು ಹೇಳುವಂತದ್ದು. ಹೀಗೆ ಅತ್ಯಂತ ಎತ್ತರಕ್ಕೇರಿದ
ವಿದ್ಯಾವಿನಯಸಂಪನ್ನ, ಅದರಿಂದ
ಕೆಳಗೆ ಬ್ರಾಹ್ಮಣವರ್ಣ, ಅತ್ಯಂತ
ಕೆಳಗೆ ಶ್ವಪಾಕ.
ಪ್ರಾಣಿಗಳಲ್ಲಿ
ಗವಿ(ಗೋವು) ಅತ್ಯಂತ ಶ್ರೇಷ್ಠ ಪಾಣಿ. ಅದರ ನಂತರ ಮಧ್ಯಮ ಹಸ್ತಿನಿ(ಆನೆ), ಕೊನೆಗೆ ನಾಯಿ. ಪ್ರಾಚೀನರು ಮನಸ್ಸನ್ನು
ಯಾವುದು ಶುದ್ಧಗೊಳಿಸುತ್ತದೆ ಅದನ್ನು ಶುದ್ಧ ಎಂದು ತೀರ್ಮಾನ ಮಾಡಿದರು.
ಉದಾಹರಣೆಗೆ ಜಿಂಕೆ ಮತ್ತು ಹುಲಿ ಚರ್ಮ ಮನಸ್ಸನ್ನು ಏಕಾಗ್ರ ಮಾಡಲು ಸಹಕರಿಸುತ್ತದೆ.
ಆದ್ದರಿಂದ ಅದು ಶುದ್ಧ ಮತ್ತು ಶ್ರೇಷ್ಠ. ಅದೇ ರೀತಿ ಗೋವು; ಈ ಪ್ರಾಣಿಯಲ್ಲಿ ಯಾವಾಗಲೂ ಸಾತ್ವಿಕವಾದ ಸ್ಪಂದನ(Vibration)ವಿರುತ್ತದೆ. ಹಸುವಿನಲ್ಲಿರುವ ಇನ್ನೊಂದು
ಶ್ರೇಷ್ಠ ಅಂಶ ಎಂದರೆ: ಈ ಪ್ರಪಂಚದಲ್ಲಿ ಎಲ್ಲ ಪ್ರಾಣಿಗಳ ಮಲ-ಮೂತ್ರ
ವರ್ಜ್ಯ, ಆದರೆ
ಹಸುವಿನ ಮಲ ಮೂತ್ರ ಶ್ರೇಷ್ಠ. ಹೀಗೆ ಪ್ರಾಣಿಗಳಲ್ಲಿ ಹಸು ಅತ್ಯಂತ ಶ್ರೇಷ್ಠ.
ಪ್ರಾಚೀನರು ನಾಯಿಯನ್ನು ಅತ್ಯಂತ ಕೆಳವರ್ಗ ಎಂದು ಪರಿಗಣಿಸಿದರು. ನಮಗೆ
ತಿಳಿದಂತೆ ನಾಯಿ ತನ್ನ ಯಜಮಾನನಿಗಾಗಿ ತನ್ನ ಪ್ರಾಣವನ್ನೇ ಕೊಡಲು ಸಿದ್ಧವಿರುವ ಸಾಕು
ಪ್ರಾಣಿ. ಆದರೆ ಇದು ಅತಿ ಹೆಚ್ಚು ತಾಮಸಿಕ ಸ್ಪಂದನ(Vibration)ವಿರುವ ಪ್ರಾಣಿ. ಆದ್ದರಿಂದ ನಾಯಿಯಿಂದ ನಮ್ಮ
ಮಾನಸಿಕ ಅಭಿವೃದ್ಧಿಗೆ ಏನೂ ಪೋಷಣೆ ಇಲ್ಲ. ಈ ಕಾರಣದಿಂದ ನಾಯಿಯನ್ನು ಪ್ರಾಚೀನರು ಅತ್ಯಂತ
ಕನಿಷ್ಠ ಸ್ಥಾನದಲ್ಲಿರಿಸಿದರು.
ಹೀಗೆ ಪ್ರಾಣಿಗಳಲ್ಲಿ ಹಸು ಶ್ರೇಷ್ಠ, ಆನೆ
ಮಧ್ಯಮ ಮತ್ತು ನಾಯಿ ಕನಿಷ್ಠ.
ಇಲ್ಲಿ
ಕೃಷ್ಣ ಹೇಳುತ್ತಾನೆ: “ಪಂಡಿತಾಃ ಸಮದರ್ಶಿನಃ”
ಎಂದು. ಅಂದರೆ ಪಂಡಿತರು ಸಮದೃಷ್ಟಿ
ಉಳ್ಳವರಾಗಿರುತ್ತಾರೆ ಎಂದರ್ಥ. ಅವರು ಪ್ರತಿಯೊಂದರಲ್ಲೂ, ಅದರೊಳಗಿರುವ ಭಗವಂತನ ವಿಶೇಷ ಅಭಿವ್ಯಕ್ತವನ್ನು
ಕಾಣುತ್ತಾರೆ. ಹಸುವಾಗಿರಲಿ, ನಾಯಿಯಾಗಿರಲಿ,
ವಿದ್ಯಾವಿನಯಸಂಪನ್ನರಾಗಿರಲಿ
ಏನೇ ಇರಲಿ. ಏಕೆಂದರೆ
ಭಗವಂತ ಸರ್ವಾಂತರ್ಯಮಿ, ಆತ
ಎಲ್ಲರ ಒಳಗೂ
ಇದ್ದಾನೆ. ಆತನ ಅಭಿವ್ಯಕ್ತಿ ಮಾತ್ರ ಬೇರೆ ಬೇರೆ. ಆತ ಒಂದೊಂದು ಜೀವಿಯಲ್ಲೂ ಒಂದೊಂದು
ಅನನ್ಯ ಅಸಾಧಾರಣ ಗುಣಧರ್ಮ(Exclusive Quality)ದಿಂದ ಅಭಿವ್ಯಕ್ತನಾಗುತ್ತಾನೆ. ಉದಾಹರಣೆಗೆ:
ಮುಟ್ಟಿದರೆ ಮುನಿ ಗಿಡ (Touch me not); ಯಾರಿಗೂ ಬೇಡವಾಗಿ ಬೆಳೆಯುವ ಈ ಗಿಡದಲ್ಲಿ ಅಮೋಘವಾದ ಔಷಧೀಯ ಗುಣವಿದೆ. ಈ
ಗಿಡವನ್ನು (ಹೂ ರಹಿತ)
ಜಜ್ಜಿ ಬಟ್ಟೆಯಲ್ಲಿ ಕಟ್ಟಿ ಗಂಜಿಯ ಜೊತೆಗೆ ಬೇಯಿಸಿ, ಆ ಗಂಜಿಯನ್ನು ಸೇವಿಸಿದರೆ ಅಥವಾ
ಈ ಗಿಡದ ಕಷಾಯಮಾಡಿ ಕುಡಿದರೆ, ಯಾವುದೇ
ಶಸ್ತ್ರಚಿಕಿತ್ಸೆ ಇಲ್ಲದೆ ಮೂಲವ್ಯಾದಿ(Piles) ಗುಣಮುಖವಾಗುತ್ತದೆ. ಅದೇ ರೀತಿ ಜೇನುನೊಣ:
ಹೂವಿಂದ ರಸವನ್ನು ಹೀರಿ ಜೇನನ್ನು ತಯಾರಿಸುವ ಅಸಾಧಾರಣ ಶಕ್ತಿ ಇರುವುದು ಈ ಪುಟ್ಟ ಹುಳದಲ್ಲಿ.
ನಮ್ಮ ತಾಂತ್ರಿಕತೆಯಿಂದ ಕೃತಕವಾಗಿ
ಜೇನನ್ನು ತಯಾರಿಸಲು ಬರುವುದಿಲ್ಲ.
ಈ
ಪ್ರಪಂಚದಲ್ಲಿ ಏನೇನು ಹುಟ್ಟಿದೆ ಅದರೊಳಗೆ ವಿಶಿಷ್ಟ ಶಕ್ತಿಯಾಗಿ ತುಂಬಿರುವ, ನಿಯಾಮಕ ಶಕ್ತಿಯಾದ ಜನೇಶ್ವರ ಭಗವಂತನನ್ನು
ಅಪರೋಕ್ಷ ಜ್ಞಾನಿಗಳು ಪ್ರತ್ರಿಯೊಂದರಲ್ಲೂ ಕಾಣುತ್ತಾರೆ. ನಾಯಿ ಇರಲಿ, ಹಸು ಇರಲಿ, ಶ್ವಪಾಕನಿರಲಿ, ವಿದ್ಯಾವಿನಯಸಂಪನ್ನನಿರಲಿ. ಪಂಡಿತ
ಎಲ್ಲವುದರಲ್ಲೂ ಆ ಭಗವಂತನ ಮಹಿಮೆಯನ್ನೇ ಕಾಣುತ್ತಾನೆ.
ತಾನು
ಎಲ್ಲವುದರಲ್ಲೂ ಅಂತರ್ಯಾಮಿಯಾಗಿ ಅತ್ಯಂತ ಶುದ್ಧನಾಗಿ ತುಂಬಿದ್ದು, ನಿರ್ಲಿಪ್ತನಾಗಿ, ಒಂದೊಂದು ವಸ್ತುವಿಗೆ ಒಂದೊಂದು ರೀತಿಯ
ವಿಶಿಷ್ಟ ಶಕ್ತಿಯನ್ನು ಕೊಡುವ
ಭಗವಂತ, ಈ ಅನಂತ ಪ್ರಪಂಚವನ್ನು
ಸೃಷ್ಟಿ ಮಾಡಿ ನಮ್ಮ ಕಣ್ಣ ಮುಂದೆ ಇಟ್ಟ. ಇಂತಹ ಭಗವಂತನ ಮಹಿಮೆಯನ್ನು ಪ್ರತಿಯೊಂದು
ವಸ್ತುವಿನಲ್ಲೂ ನೋಡುತ್ತ ಅನುಸಂಧಾನ ಮಾಡಬೇಕು. ಆತ ಎಲ್ಲ ಕಡೆಯೂ ಜ್ಞಾನಾನಂದಪೂರ್ಣನಾಗಿ, ಸರ್ವಗುಣಪೂರ್ಣ-ಸರ್ವಗತನಾಗಿ, ಪ್ರತಿಯೊಂದು ಅಣು-ಕಣದೊಳಗೆ ತುಂಬಿದ್ದಾನೆ ಎನ್ನುವ
ಅನುಸಂಧಾನ -ಅಪರೋಕ್ಷ ಜ್ಞಾನಕ್ಕೆ ಬೇಕಾದ ಸಮದರ್ಶನ.
· ಶ್ಲೋಕ - 19
ಇಹೈವ ತೈರ್ಜಿತಃ ಸರ್ಗೋ ಯೇಷಾಂ ಸಾಮ್ಯೇ
ಸ್ಥಿತಂ ಮನಃ ।
ನಿರ್ದೋಷಂ ಹಿ ಸಮಂ ಬ್ರಹ್ಮ ತಸ್ಮಾದ್ ಬ್ರಹ್ಮಣಿ ತೇ ಸ್ಥಿತಾಃ ॥೧೯॥
ನಿರ್ದೋಷಂ ಹಿ ಸಮಂ ಬ್ರಹ್ಮ ತಸ್ಮಾದ್ ಬ್ರಹ್ಮಣಿ ತೇ ಸ್ಥಿತಾಃ ॥೧೯॥
ಇಹ
ಏವ ತೈಃ ಜಿತಃ ಸರ್ಗಃ ಯೇಷಾಮ್ ಸಾಮ್ಯೇ ಸ್ಥಿತಮ್ ಮನಃ ।
ನಿರ್ದೋಷಮ್ ಹಿ
ಸಮಮ್ ಬ್ರಹ್ಮ
ತಸ್ಮಾತ್ ಬ್ರಹ್ಮಣಿ
ತೇ ಸ್ಥಿತಾಃ –ಭಗವಂತನ
ಏಕ ರೂಪಾತೆಯಲ್ಲಿ
ಬಗೆ ನೆಟ್ಟವರು ಇಲ್ಲಿದ್ದೇ ಈ ಬಾಳನ್ನು ಗೆದ್ದವರು. ಭಗವಂತ ಎಲ್ಲೆಡೆಯೂ
ದೋಷದ ನಂಟಿರದ ಏಕರೂಪಿ.
ಆದ್ದರಿಂದ ಹೀಗೆ ತಿಳಿದವರು ಭಗವಂತನಲ್ಲಿ ನೆಲೆಗೊಂಡವರು.
ಎಲ್ಲ
ಕಡೆ ಇರುವ ಸರ್ವಗುಣಪೂರ್ಣ ಭಗವಂತ ಎಲ್ಲ ವಸ್ತುವಿನಲ್ಲಿಯೂ ತುಂಬಿದ್ದಾನೆ ಎನ್ನುವ
ಅನುಸಂಧಾನದಲ್ಲಿ ನಮ್ಮ ಮನಸ್ಸು ನೆಟ್ಟಾಗ ಹುಟ್ಟು ಸಾವಿನ ಆಚೆಗಿನ ಮೋಕ್ಷದ ಬಾಗಿಲು
ನಮಗೆ ತೆರೆದಂತೆ. ಭಗವಂತ ಯಾವ ವಸ್ತುವಿನಲ್ಲಿದ್ದರೂ ಅವನಿಗೆ ದೋಷವಿಲ್ಲ, ಆತ ಎಲ್ಲ ಕಡೆ ನಿರ್ದುಷ್ಟನಾಗಿದ್ದಾನೆ. ಯಾವ
ಅಧಿಷ್ಠಾನದಲ್ಲಿದ್ದರೂ ಕೂಡಾ ಆತ ನಿರ್ಲಿಪ್ತನಾಗಿ ಅಲ್ಲಿ ತುಂಬಿದ್ದಾನೆ. ಇದನ್ನು ತಿಳಿದವರ
ಮನಸ್ಸು ಭಗವಂತನಲ್ಲಿ ನೆಲೆ ನಿಂತಿರುತ್ತದೆ. ಆದ್ದರಿಂದ ಅವರು ಮರಳಿ
ಬಂಧನಕ್ಕೊಳಗಾಗದೆ ಶಾಶ್ವತ ಮೊಕ್ಷವನ್ನು ಪಡೆಯುತ್ತಾರೆ.
· ಶ್ಲೋಕ - 20
ಹಿಂದಿನ
ಶ್ಲೋಕದಲ್ಲಿ ಕೃಷ್ಣ ಅಧ್ಯಾತ್ಮಿಕವಾಗಿ ಭಗವಂತನ ರೂಪದ ಸಮದೃಷ್ಟಿ ಬಗ್ಗೆ
ವಿವರಿಸಿದ. ಮುಂದಿನ
ಶ್ಲೋಕದಲ್ಲಿ ಅದಕ್ಕೆ ಪೂರಕವಾಗಿ ಸಾಮಾಜಿಕವಾಗಿ ನಮ್ಮ ಬದುಕಿನಲ್ಲಿ ಹೇಗೆ ಸಮದೃಷ್ಟಿ ಬೆಳೆಸಿಕೊಳ್ಳಬೇಕು
ಎನ್ನುವುದನ್ನು ವಿವರಿಸುತ್ತಾನೆ.
ನ ಪ್ರಹೃಷ್ಯೇತ್ ಪ್ರಿಯಂ ಪ್ರಾಪ್ಯ
ನೋದ್ವಿಜೇತ್ ಪ್ರಾಪ್ಯ ಚಾಪ್ರಿಯಮ್ ।
ಸ್ಥಿರಬುದ್ಧಿರಸಮ್ಮೂಢೋ ಬ್ರಹ್ಮವಿದ್ ಬ್ರಹ್ಮಣಿ ಸ್ಥಿತಃ ॥೨೦॥
ಸ್ಥಿರಬುದ್ಧಿರಸಮ್ಮೂಢೋ ಬ್ರಹ್ಮವಿದ್ ಬ್ರಹ್ಮಣಿ ಸ್ಥಿತಃ ॥೨೦॥
ನ
ಪ್ರಹೃಷ್ಯೇತ್ ಪ್ರಿಯಮ್ ಪ್ರಾಪ್ಯ ನ ಉದ್ವಿಜೇತ್ ಪ್ರಾಪ್ಯ ಚ ಅಪ್ರಿಯಮ್ ।
ಸ್ಥಿರ
ಬುದ್ಧಿಃ ಅಸಮ್ಮೂಢಃ
ಬ್ರಹ್ಮವಿತ್ ಬ್ರಹ್ಮಣಿ
ಸ್ಥಿತಃ –ಸುಖ
ಬಂದಾಗ ಹಿಗ್ಗಬಾರದು;
ದುಃಖ ಬಂದಾಗ
ಕುಗ್ಗಬಾರದು. ಇಂಥವನು ಬಗೆಗಟ್ಟಿಗೊಂಡವನು. ಎಚ್ಚರ ತಪ್ಪದವನು. ಭಗವಂತನನ್ನರಿತವನು.ಭಗವಂತನಲ್ಲೇ
ನೆಲೆ ನಿಂತವನು.
ನಮ್ಮ
ಜೀವನ ಎನ್ನುವುದು ಸುಖ-ದುಃಖದ ಚಕ್ರಭ್ರಮಣ. ಯಾರಿಗೂ ಕೇವಲ ಸುಖ ಎಂದಾಗಲಿ, ಕೇವಲ ದುಃಖ ಎಂದಾಗಲಿ ಇಲ್ಲ. ಎಂತಹ ಸಂಪತ್ತಿನ
ಸುಪ್ಪತ್ತಿಗೆಯಲ್ಲಿದ್ದರೂ ಜೀವನದಲ್ಲಿ ಕಷ್ಟದ ಕ್ಷಣಗಳು ಇದ್ದೇ ಇರುತ್ತವೆ. ಅದೇ ರೀತಿ
ಕಷ್ಟದಲ್ಲಿರುವವನಿಗೂ ಸುಖದ ಕ್ಷಣಗಳು ಇದ್ದೇ ಇದೆ. ಬದುಕು ಎನ್ನುವುದು ಸುಖ ದುಃಖಗಳ
ಪ್ರವಾಹ. ಈ ಶ್ಲೋಕದಲ್ಲಿ ಕೃಷ್ಣ ಹೇಳುತ್ತಾನೆ “ನಮಗೆ ಸುಖ-ದುಃಖವೆಂಬ ದ್ವಂದ್ವದಲ್ಲಿ
ಸಮದೃಷ್ಟಿ ಇರಬೇಕು” ಎಂದು. ಸಾಮಾನ್ಯವಾಗಿ
ನಮಗೆ ಇಷ್ಟವಾದದ್ದು ಫಲಿಸಿದಾಗ ನಾವು ಹಿಗ್ಗುತ್ತೇವೆ, ನಮಗೆ ಅಪ್ರೀಯವಾದದ್ದು, ನಾವು ಬಯಸದಂತಹ ಘಟನೆಗಳು ಸಂಭವಿಸಿದಾಗ
ಉದ್ವೆಗಕ್ಕೊಳಗಾಗಿ ಕುಸಿದುಬಿಡುತ್ತೇವೆ, ತಳಮಳಿಸುತ್ತೇವೆ. ಇದು ಸಹಜವಾಗಿ ನಮ್ಮ ಬದುಕಿನಲ್ಲಿ ನಾವು ನೋಡತಕ್ಕಂತಹ
ಸ್ಥಿತಿ. ಕೃಷ್ಣ ಹೇಳುತ್ತಾನೆ “ಇವೆರಡೂ
ಆಗದಂತೆ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳಬೇಕು” ಎಂದು. ಯಾವುದು ಅನಿವಾರ್ಯವೋ ಅದನ್ನು ಸಹಜವಾಗಿ ಸ್ವೀಕರಿಸಬೇಕು.
ಅದನ್ನು ಬಿಟ್ಟು ‘ಹೀಗಾಗಬಾರದು,
ಹಾಗಾಗಬಾರದು’ ಎಂದು ಕುಳಿತರೆ ಮನಸ್ಸು ಗೊಂದಲಕ್ಕೊಳಗಾಗುತ್ತದೆ. ಇದು
ಮನಃಶಾಸ್ತ್ರ. ಇದರ ಅರ್ಥ ಸುಖ ಬಂದಾಗ ಅದನ್ನು ಅನುಭವಿಸಬಾರದು ಎಂದಲ್ಲ. ಯಾವುದು ಬಂತೋ
ಅದನ್ನು ಹಾಗೇ ಸ್ವೀಕರಿಸು, ಆದರೆ
ಅತಿಯಾದ ಹಾರಾಟ
ಬೇಡ. ಬದುಕಿನಲ್ಲಿ ಎಲ್ಲವೂ ಬರುತ್ತದೆ ಹೋಗುತ್ತದೆ ಯಾವುದೂ ಶಾಶ್ವತವಲ್ಲ ಎನ್ನುವ ಮನೋವೃತ್ತಿ
ಬೆಳೆಸಿಕೊಳ್ಳಬೇಕು. ಯಾವುದೋ ಒಂದನ್ನು ಅತಿಯಾಗಿ ಹಚ್ಚಿಕೊಂಡರೆ ಒಂದು ವೇಳೆ ಅದು
ನಮ್ಮಿಂದ ದೂರವಾದರೆ ತಡೆದುಕೊಳ್ಳಲಾಗುವುದಿಲ್ಲ. ಇದರಿಂದ ನಾವು ಮಾನಸಿಕವಾಗಿ ವ್ಯಾಕುಲತೆಗೊಳಗಾಗುತ್ತೇವೆ.
ಅದರಿಂದ ಚಿಕ್ಕ ಚಿಕ್ಕ ವಿಷಯಕ್ಕೆ ಆತ್ಮಹತ್ಯೆಯಂತಹ ಘೋರ ಪಾಪವನ್ನು ಮಾಡಲು ನಮ್ಮ ಮನಸ್ಸು
ಮುಂದಾಗುತ್ತದೆ. ಆದ್ದರಿಂದ ಬದುಕಿನ ಯಶಸ್ವೀ ಸೂತ್ರ ಎಂದರೆ ಯಾವುದನ್ನೂ ತಲೆಕೆಡಿಸಿಕೊಳ್ಳದೆ
ಬಂದಿದ್ದನ್ನು ಬಂದಂತೆ ಅನುಭವಿಸುವುದು. ನಾವು ಬಯಸಿದಂತೆ ಪ್ರಪಂಚವಿಲ್ಲ-ಪ್ರಪಂಚವಿದ್ದಂತೆ
ನಾವು. ಅದನ್ನು ಸ್ವಾಗತಿಸಿ ಯಾವ ಉದ್ವೇಗ ಇಲ್ಲದೆ ಬದುಕುವುದನ್ನು ಕಲಿತಾಗ ಮನಸ್ಸು
ಗಟ್ಟಿಯಾಗುತ್ತದೆ.
ಆಧ್ಯಾತ್ಮಿಕವಾಗಿ
ನೋಡಿದಾಗ ನಮಗೆ ಪ್ರಿಯವಾದದ್ದು-ಅಪ್ರೀಯವಾದದ್ದು ಎಂದು ನಾವು ಯಾವುದಕ್ಕೆ ಹೇಳುತ್ತೇವೆ- ಅದು ನಿಜವಾಗಿಯೂ
ಒಳ್ಳೆಯದು ಎಂದು ಹೇಳಲು ಬರುವುದಿಲ್ಲ. ಇಷ್ಟವಾದದ್ದು ಒಳ್ಳೆಯದು ಎಂದು ಹೇಳಲು
ಬರುವುದಿಲ್ಲ. ಕೆಲವೊಮ್ಮೆ ನಮಗೆ ಅಪ್ರೀಯವಾದದ್ದು ನಮಗೆ ಹಿತವನ್ನು ಕೊಡುತ್ತದೆ. ಆದರೆ ಅದು ನಮಗೆ
ತಿಳಿಯುವುದು ಮಾತ್ರ ತಡವಾಗಿ. ನಮ್ಮ ಜೀವನದಲ್ಲಿ ಬರುವ ಪ್ರತಿಯೊಂದು ಘಟನೆ ನಮ್ಮ
ಮುಂದಿನ ಬೆಳವಣಿಗೆಗೆ ಪೂರಕವಾಗಿರುತ್ತದೆ. ಒಬ್ಬ ಮನುಷ್ಯ ಅಧಃಪಾತ ಹೊಂದುವ
ಪ್ರಾರಾಬ್ಧಕರ್ಮ ಹೊಂದಿದ್ದರೆ ಆತನಿಗೆ ಬೇಕಾದಷ್ಟು ಸುಖ ಬರಬಹುದು! ಅವನು ಆ ಸುಖದಲ್ಲಿ ಮೈಮರೆತು
ಮಾಡಬಾರದ್ದನ್ನು ಮಾಡಿ ಅಧಃಪಾತ ಹೊಂದಬಹುದು; ಕಷ್ಟದಲ್ಲಿ ಜೀವ ಪಕ್ವವಾಗಬಹುದು. ಉಪನಿಷತ್ತಿನಲ್ಲಿ ಈ ವಿಚಾರವನ್ನು
ವ್ಯಂಗ್ಯವಾಗಿ ಹೀಗೆ ಹೇಳಿದ್ದಾರೆ: “ಹಿತವಾದದ್ದು
ಮತ್ತು ಇಷ್ಟವಾದದ್ದು ಎರಡೂ ಮುಂದೆ ಬಂದಾಗ ಇಷ್ಟವಾದುದ್ದನ್ನು ಆಯ್ಕೆ ಮಾಡುತ್ತಾರೆ-ಅವರು
ತಿಳಿಗೇಡಿಗಳು” ಎಂದು.
ನಮಗೆ
ಇಷ್ಟವಾದದ್ದು ಹಿತವಾಗಿರಬೇಕೆಂದಿಲ್ಲ, ಅದಕ್ಕಾಗಿ
ಹಾರಾಡುವುದು ಅರ್ಥಶೂನ್ಯ. ಅದೇ ರೀತಿ ಜೀವನದಲ್ಲಿ ಯಾವುದೋ ಒಂದು ಅನಿಷ್ಠ
ಘಟನೆ ನೆಡೆದಾಗ ಅದಕ್ಕಾಗಿ ಎಂದೂ ಗೊಂದಲಕ್ಕೊಳಗಾಗಬೇಕಿಲ್ಲ. ಅದರಿಂದಲೇ ಮುಂದೆ
ನಮಗೆ ಹಿತವಾಗಬಹುದು. ಈ ವಿಚಾರ ಹೆಚ್ಚಿನವರಿಗೆ ಅನುಭವಕ್ಕೆ ಬಂದಿರುತ್ತದೆ. ‘ಹೀಗೇಕೆ-ಹೀಗಾಗಬಾರದಿತ್ತು’ ಎಂದು ಯೋಚಿಸುತ್ತಿರುತ್ತೇವೆ ಆದರೆ ಮುಂದೆ ಹಾಗೆ
ಆದುದರಿಂದಲೇ ನಮ್ಮ
ಸಮಸ್ಯೆಗೊಂದು ದಾರಿ ಕಾಣುತ್ತದೆ. ಆದರೆ ಅದು ತಿಳಿಯುವುದು ಮಾತ್ರ ತಡವಾಗಿ.ಈ ಎಲ್ಲಾ ಕಾರಣದಿಂದ
ಸುಖಬಂದಾಗ ಸುಖದ
ಭ್ರಮೆ ಬೇಡ, ದುಃಖ
ಬಂದಾಗ ವ್ಯಾಕುಲತೆ ಬೇಡ. ಎರಡರ ಬಗ್ಗೆಯೂ ಸಮದೃಷ್ಟಿ ಇರಲಿ. ಭಗವಂತ ಕೊಟ್ಟಿದ್ದನ್ನು ಪ್ರಾಮಾಣಿಕವಾಗಿ
ಅನುಭವಿಸುತ್ತೇನೆ ಎನ್ನುವ ಅನುಸಂಧಾನವಿರಲಿ. ಮಾನಸಿಕ ಗೊಂದಲ ಬೇಡ.ಬದುಕಿನಲ್ಲಿ ಯಾವುದು
ಹಿತ-ಯಾವುದು ಅಹಿತ ಎನ್ನುವುದು ಭಗವಂತನಿಗೆ ಗೊತ್ತಿದೆ ಎನ್ನುವ ಎಚ್ಚರ ಉಳ್ಳವನು ತನ್ನ
ಮನಸ್ಸನ್ನು ಸುಖ-ದುಃಖದಲ್ಲಿ ನೆಟ್ಟಿರುವುದಿಲ್ಲ ಬದಲಾಗಿ ಅವನ ಮನಸ್ಸು
ಭಗವಂತನಲ್ಲಿ ನೆಟ್ಟಿರುತ್ತದೆ. ಭಗವಂತ ನಮ್ಮನ್ನು ತಾಯಿ ಮಗುವನ್ನು ನೋಡಿಕೊಂಡಂತೆ
ನೋಡಿಕೊಳ್ಳುತ್ತಾನೆ. ತಾಯಿಯಿಂದ ಬರುವ ಎಲ್ಲಾ ವಿಚಾರ ಮಗುವಿಗೆ ಇಷ್ಟವಾಗುವುದಿಲ್ಲ.
ಆದರೆ ತಾಯಿ ಮಗುವಿನ ಉದ್ಧಾರಕ್ಕೋಸ್ಕರ ಮಗುವಿನಲ್ಲಿ ಆ ಕೆಲಸವನ್ನು ಮಾಡಿಸುತ್ತಾಳೆ.
ಅಲ್ಲಿ ಇಷ್ಟ ಮುಖ್ಯವಲ್ಲಿ, ಯಾವುದು
ಹಿತ ಅದು
ಮುಖ್ಯ.
· ಶ್ಲೋಕ - 21
ಬಾಹ್ಯಸ್ಪರ್ಶೇಷ್ವಸಕ್ತಾತ್ಮಾ ವಿಂದತ್ಯಾತ್ಮನಿ
ಯತ್ ಸುಖಮ್ ।
ಸ ಬ್ರಹ್ಮಯೋಗಯುಕ್ತಾತ್ಮಾ ಸುಖಮಕ್ಷಯಮಶ್ನುತೇ ॥೨೧॥
ಸ ಬ್ರಹ್ಮಯೋಗಯುಕ್ತಾತ್ಮಾ ಸುಖಮಕ್ಷಯಮಶ್ನುತೇ ॥೨೧॥
ಬಾಹ್ಯಸ್ಪರ್ಶೇಷು ಅಸಕ್ತ
ಆತ್ಮಾ ವಿಂದತಿ ಆತ್ಮನಿ ಯತ್ ಸುಖಮ್ ।
ಸಃ ಬ್ರಹ್ಮಯೋಗ
ಯುಕ್ತ ಆತ್ಮಾ ಸುಖಮ್ ಅಕ್ಷಯಮ್ ಅಶ್ನುತೇ- ಹೊರಗಣ ಭೋಗಗಳಲ್ಲಿ ನಂಟು ಇರದವನು ಬಗೆಯೊಳಗೆ [ಭಗವಂತನನ್ನು
ನೆನೆದಾಗೊಮ್ಮೆ] ಎಂಥ ಸುಖವನ್ನು ಪಡೆಯುತ್ತಾನೆ ಅದೇ ಸುಖವನ್ನು ಸದಾ ಭಗವಂತನಲ್ಲಿ ಬಗೆನೆಟ್ಟ ಸಾಧಕ
ನಿರಂತರ ಸವಿಯುತ್ತಾನೆ.
ಪ್ರಪಂಚದಲ್ಲಿ
ಸುಖಕ್ಕೆ ಇರುವ ಸಾಧನ ಐದು-ರೂಪ,ರಸ,ಗಂಧ,ಸ್ಪರ್ಶ, ಶಬ್ದ. ಇದರ ಮುಖೇನ ಅನುಭವಿಸುವುದು ತಪ್ಪಲ್ಲ. ಬೇಕು ಅನ್ನುವ
ವಸ್ತುವನ್ನು ಪಡೆಯುವುದರಲ್ಲಿ ಆನಂದವಿದೆ, ಆದರೆ ಅದಕ್ಕಿಂತ ಮುಖ್ಯವಾಗಿ ಅದನ್ನು ತೊರೆಯುವುದರಲ್ಲಿ ಹೆಚ್ಚಿನ
ಆನಂದವಿದೆ. ಇದು ತಿಳಿದಾಗ ಬದುಕಿನ ಒಂದು ಮುಖ್ಯ ಸೂತ್ರ ತಿಳಿದಂತೆ. ನಾವು ಬದುಕುವ ರೀತಿ
ಎಂದರೆ ‘ನಾಳಿನ ಸುಖಕ್ಕಾಗಿ
ಇಂದು ಕಷ್ಟಪಡುವುದು’. ಅಂದರೆ
ಆ ನಾಳೆ ಎಂದೂ ಬರುವುದಿಲ್ಲ. ಸಾಯುವ ತನಕ ನಾಳೆಗಾಗಿ ಕಷ್ಟಪಡುವುದು ನಮ್ಮ
ಜೀವನವಾಗಬಾರದು. ಭಗವಂತನನ್ನು ಪಡೆಯುವುದರಲ್ಲಿ ಮಹದಾನಂದವಿದೆ ಹಾಗು ಅದು ನಮ್ಮನ್ನು ಸದಾ
ಸುಖವಾಗಿಡುತ್ತದೆ ಎನ್ನುವ ಸತ್ಯವನ್ನು ಕೃಷ್ಣ ಇಲ್ಲಿ ವಿವರಿಸಿದ್ದಾನೆ. ಒಮ್ಮೆ ನಾವು ನಮ್ಮ
ಅಂತರಂಗದ ಆತ್ಮಸ್ವರೂಪದ ಸುಖವನ್ನು ಅನುಭವಿಸಲು ಪ್ರಾರಂಭಿಸಿದರೆ, ಬಾಹ್ಯ ಸುಖದಲ್ಲಿ ಏನೂ ಇಲ್ಲ ಎನ್ನುವ ವಿಚಾರ ತಿಳಿಯುತ್ತದೆ.
ನಮ್ಮೊಳಗೇ ಆನಂದ ಅಡಗಿದೆ, ಅದು
ಬಾಹ್ಯ ಸುಖದ ತ್ಯಾಗದಿಂದ ಕಾಣಬಹುದಾದ ಆನಂದ.
ನಮಗೆ
ನಮ್ಮ ಒಳಗಿರುವ ಆನಂದ ಕೆಲವೊಮ್ಮೆ ಅನುಭವಕ್ಕೆ ಬರುತ್ತದೆ. ಒಮ್ಮೊಮ್ಮೆ ‘ಅದೇಕೋ ಗೊತ್ತಿಲ್ಲ ಆದರೆ ಬಹಳ ಖುಷಿ’ ಎನ್ನುವ ಅನುಭವ ಪ್ರತಿಯೊಬ್ಬರೂ ಅನುಭವಿಸಿರುತ್ತಾರೆ.
ಇದು ನಮ್ಮ ಅಂತರಂಗದ ಆನಂದ ಉಕ್ಕಿ ಬರುವುದು. ಈ ಆನಂದವನ್ನು ಗುರುತಿಸಿ ಅದನ್ನು ಅನುಭವಿಸಲು ಕಲಿತಾಗ ಬಾಹ್ಯ
ಸುಖ ಕನಿಷ್ಠವಾಗಿ ಕಾಣಿಸುತ್ತದೆ. ಹೇಗೆ ನಿದ್ದೆಯಲ್ಲಿ ನಾವು ಬಾಹ್ಯ ಸುಖದ
ಸ್ಪರ್ಶವಿಲ್ಲದೆ ನಮಗರಿವಿಲ್ಲದಂತೆ ಆನಂದದಲ್ಲಿರುತ್ತೇವೋ ಹಾಗೆ ಎಚ್ಚರದಲ್ಲಿ
ಅಂತರಂಗದ ಆನಂದವನ್ನು ಅನುಭವಿಸಲು ಕಲಿತುಕೊಳ್ಳಬೇಕು. ಇದರಿಂದ ಬಾಹ್ಯ
ಸುಖದ ಪ್ರಜ್ಞೆ ದೂರವಾಗುತ್ತದೆ.
ಉಪನಿಷತ್ತಿನಲ್ಲಿ
ಹೇಳುವಂತೆ “ಬಾಹ್ಯ
ಸುಖವನ್ನು ತ್ಯಾಗ ಮಾಡುವುದರಿಂದ, ಒಳಗಿನ ಆನಂದದ
ಅರಿವು ಮೂಡುತ್ತದೆ ಹಾಗು ಇದರಲ್ಲಿ ಅಮೃತತ್ವವಿದೆ”. ನಾವು ‘ಬೇಡ’ ಎನ್ನುವುದರಲ್ಲಿ ಇರುವ ಆನಂದ ‘ಬೇಕು’ ಅನ್ನುವುದರಲ್ಲಿಲ್ಲ. ಬೇಕು ಎನ್ನುವುದು ಸದಾ
ನಮಗೆ 'ಬೇಡಿ(ಸಂಕೋಲೆ)'.
ಬೇಕು ಅನ್ನುವುದು ನಮ್ಮ
ಮುಂದೆ ಸಮಸ್ಯೆಗಳ ಸರಮಾಲೆಯನ್ನು ತಂದು ನಿಲ್ಲಿಸುತ್ತದೆ. “ಎಲ್ಲ ಬಾಹ್ಯ ಬಯಕೆಗಳನ್ನು
ಕಳೆದುಕೊಳ್ಳುವುದರಲ್ಲೇ ಮನುಷ್ಯನ ಆನಂದದ ಸೆಲೆ ಅಡಗಿದೆ” ಎನ್ನುತ್ತಾನೆ ಕೃಷ್ಣ. ಬೇಕುಗಳು ಕಮ್ಮಿ ಆದಂತೆ
ಮನುಷ್ಯ ಆನಂದದಿಂದ ಬದುಕುತ್ತಾನೆ.
ಕೇವಲ
ಬಾಹ್ಯ ಸುಖವನ್ನು ಬಿಡುವುದಷ್ಟೇ ಅಲ್ಲ, ಅದರ
ಜೊತೆಗೆ ಒಳಗಿನ ಆನಂದವನ್ನು ಹಿಡಿಯಬೇಕು, ಅದು ಅನಂತವಾದ ಆನಂದ. ಕೃಷ್ಣ ಹೇಳುತ್ತಾನೆ “ಬ್ರಹ್ಮಯೋಗಯುಕ್ತಾತ್ಮಾ ಸುಖಮಕ್ಷಯಮಶ್ನುತೇ”
ಎಂದು. ಭಗವಂತನ
ಧ್ಯಾನದಲ್ಲಿ ಒಳಗಿನಿಂದ ಆನಂದದ ಅನುಭವವಾಗುತ್ತದಲ್ಲ- ಅದನ್ನು ಒಬ್ಬ ಸಾಧಕ
ಪಡೆಯುತ್ತಾನೆ. ಅಂತರಂಗದಲ್ಲಿ ಭಗವದ್ ಸ್ಪರ್ಶವಾಗಿ ಅದರಿಂದ
ಅನಂತ ಸುಖವನ್ನು ಸಾಧಕ
ನಿರಂತರ ಸವಿಯುತ್ತಾನೆ.
ಸುಖ
ಎನ್ನುವುದು ನಮ್ಮೊಳಗೇ ಇದೆ. ಇದೊಂದು ಮಾನಸಿಕ ಸ್ಥಿತಿ. ನಾವು ನಮ್ಮೊಳಗಿನ ಸುಖವನ್ನು
ಗುರುತಿಸದೆ ಬಾಹ್ಯ ಸುಖದ ಬೆನ್ನು ಹತ್ತಿ ಕಷ್ಟ ಪಡುತ್ತೇವೆ. ಜಾನಪದ ಕಥೆಯೊಂದು ಹೀಗೆ ಹೇಳುತ್ತದೆ. ಒಬ್ಬ ಮುದುಕಿ
ತನ್ನ ಮನೆಯಲ್ಲಿ ರಾತ್ರಿ ಹೊತ್ತು ಸ್ವಲ್ಪ ಹಣವನ್ನು ಕೆಳಗೆ ಬೀಳಿಸಿಕೊಳ್ಳುತ್ತಾಳೆ. ಆದರೆ
ಆಕೆಯ ಮನೆಯಲ್ಲಿ ದೀಪ ಹಚ್ಚಲು ಎಣ್ಣೆ ಇರುವುದಿಲ್ಲ. ಬೀದಿಯಲ್ಲಿ ಬೀದಿದೀಪದ
ಬೆಳಕನ್ನು ಕಂಡ ಮುದುಕಿ ಬೀದಿಯಲ್ಲಿ ಬಂದು ತಾನು ಮನೆಯಲ್ಲಿ ಬೀಳಿಸಿಕೊಂಡ ಹಣವನ್ನು
ಹುಡುಕುತ್ತಿರುತ್ತಾಳೆ. ಏಕೆ ಹೀಗೆ ಎಂದು ಕೇಳಿದಾಗ “ಮನೆಯಲ್ಲಿ ಬೆಳಕಿಲ್ಲ ಆದರೆ ಇಲ್ಲಿ ಬೆಳಕಿದೆ
ಅದಕಾಗಿ ಇಲ್ಲಿ ಹುಡುಕುತ್ತಿದ್ದೇನೆ” ಎನ್ನುವುದು
ಆ ಮುದುಕಿಯ ಉತ್ತರ! ನಾವೆಲ್ಲರೂ ಹೀಗೆ. ನಿಜವಾದ ಆನಂದ ಇರುವುದು ಅಂತರಂಗದಲ್ಲಿ, ಆದರೆ ನಾವು ಸುಖವನ್ನು ಅರಸುವುದು
ಹೊರಪ್ರಪಂಚದಲ್ಲಿ!
· ಶ್ಲೋಕ - 22
ಯೇ ಹಿ ಸಂಸ್ಪರ್ಶಜಾ ಭೋಗಾ ದುಃಖಯೋನಯ ಏವ ತೇ ।
ಆದ್ಯಂತವಂತಃ ಕೌಂತೇಯ ನ ತೇಷು ರಮತೇ ಬುಧಃ ॥೨೨॥
ಆದ್ಯಂತವಂತಃ ಕೌಂತೇಯ ನ ತೇಷು ರಮತೇ ಬುಧಃ ॥೨೨॥
ಯೇ
ಹಿ ಸಂಸ್ಪರ್ಶ ಜಾಃ ಭೋಗಾಃ ದುಃಖ ಯೋನಯಃ ಏವ ತೇ ।
ಆದಿ
ಅಂತ ವಂತಃ ಕೌಂತೇಯ
ನ ತೇಷು ರಮತೇ ಬುಧಃ –ವಿಷಯದ
ನಂಟಿನಿಂದ ಬರುವ ಸುಖಗಳು ಬನ್ನದ ತವರು. ಬಂತು ಎನ್ನುವಷ್ಟರಲ್ಲೇ
ಬರಿದಾಗುವಂಥವು. ಕೌಂತೇಯ, ಬಲ್ಲವರು
ಅವನ್ನು ಮೆಚ್ಚುವುದಿಲ್ಲ.
ಬಾಹ್ಯ
ವಿಷಯ ಸ್ಪರ್ಶದಿಂದ ಸಿಗುವ ಸುಖಭೋಗದ ಅನುಭವ(ಸಂಸ್ಪರ್ಶ)ದಿಂದ ನಮಗೆಷ್ಟು ಸುಖ ಸಿಕ್ಕೀತು?
ಒಂದು ಗುಲಗಂಜಿಯಷ್ಟು
ಸುಖಕ್ಕಾಗಿ ಕುಂಬಳಕಾಯಿಯಷ್ಟು ದುಃಖವನ್ನು ಅನುಭವಿಸಲು ನಾವು ಸಿದ್ಧರಾಗಿರುತ್ತೇವೆ.
ಇಂದಿನ ಎಲ್ಲಾ ಪ್ರಾಪಂಚಿಕ ಅಪರಾಧಗಳಿಗೆ ಇದೇ ಕಾರಣ. ಕ್ಷಣಿಕ ಸುಖದ ಆಸೆಗೆ ಬಿದ್ದು ಇಡೀ
ಜೀವನವನ್ನೇ ಹಾಳು ಮಾಡಿಕೊಳ್ಳುವವರನ್ನು ನಮ್ಮ ದೈನಂದಿನ ಜೀವನದಲ್ಲಿ ನಾವು ಕಾಣುತ್ತೇವೆ.
ನಮಗೆ ಬಾಹ್ಯವಾಗಿ ಸುಖ ಎಂದು ಕಾಣುವುದು ದುಃಖವನ್ನು ಮರಿ ಹಾಕುವ ಮೊಟ್ಟೆ ಎನ್ನುವ
ಸತ್ಯವನ್ನರಿಯದೆ ಅದೇ ಸುಖ ಎಂದು ಅದರ ಬೆನ್ನು ಹಿಡಿಯುತ್ತೇವೆ. ಪ್ರತಿಯೊಂದು ಬಾಹ್ಯಸುಖದ
ಹಿಂದೆ ದುಃಖವೆಂಬ ಕಗ್ಗತ್ತಲು ಮಡುಗಟ್ಟಿರುತ್ತದೆ. ಬಾಹ್ಯ ಸುಖ-ಆನಂದ
ಎನ್ನುವುದು ಕೇವಲ ಒಂದು ಮಿಂಚು. ಅದು ಬಂತು ಎನ್ನುವಷ್ಟರಲ್ಲಿ ಬರಿದಾಗುತ್ತದೆ. ತಿಳುವಳಿಕೆ
ಉಳ್ಳವರು ಈ ಬಾಹ್ಯ ಸುಖದ ಆಸೆಯಲ್ಲಿ ಬದುಕುವುದಿಲ್ಲ.
ಅಧ್ಯಾತ್ಮದ
ಬಗ್ಗೆ ಕೆಲವರು
ಹೇಳುವುದಿದೆ “ಈಗಾಗಲೇ
ನಮಗೇಕೆ ಅಧ್ಯಾತ್ಮ, ಅದೆಲ್ಲಾ ಅರವತ್ತರ
ಶಾಂತಿ ಆದ ಮೇಲೆ” ಎಂದು.
ಇದು ಏಕೆ ಸರಿಯಲ್ಲ ಎನ್ನುವುದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.
· ಶ್ಲೋಕ - 23
ಶಕ್ನೋತೀಹೈವ ಯಃ ಸೋಢುಂ ಪ್ರಾಕ್
ಶರೀರವಿಮೋಕ್ಷಣಾತ್ ।
ಕಾಮಕ್ರೋಧೋದ್ಭವಂ ವೇಗಂ ಸ ಯುಕ್ತಃ ಸ ಸುಖೀ ನರಃ ॥೨೩॥
ಕಾಮಕ್ರೋಧೋದ್ಭವಂ ವೇಗಂ ಸ ಯುಕ್ತಃ ಸ ಸುಖೀ ನರಃ ॥೨೩॥
ಶಕ್ನೋತಿ
ಇಹ ಏವ ಯಃ ಸೋಢುಮ್ ಪ್ರಾಕ್ ಶರೀರ ವಿಮೋಕ್ಷಣಾತ್
ಕಾಮ
ಕ್ರೋಧ ಉದ್ಭವಮ್ ವೇಗಮ್ ಸಃ ಯುಕ್ತಃ ಸಃ ಸುಖೀ ನರಃ –ಒಲುಮೆ-ಸಿಡುಕುಗಳ ಸೆಳೆತವನ್ನು ಇಲ್ಲೇ, ಈ ನರದೇಹ ಕಳಚುವ ಮುನ್ನವೆ ಯಾರು ತಾಳಬಲ್ಲ ಅಂಥ
ಮಾನವನೇ ನಿಜವಾದ ಯೋಗಿ; ನಿಜವಾದ
ಸುಖಿ.
ನಾವು
ನಮ್ಮ ಪ್ರಾಪಂಚಿಕ ಸುಖ-ಸ್ಪರ್ಶದ ಮೋಹವನ್ನು ಗೆಲ್ಲಲು ಸಾಧ್ಯವಾಗುವುದು ಈ ದೇಹ ಇರುವಾಗಲೇ.
ವಿಷಯಗಳ ಸ್ಪರ್ಶ ಇರುವುದು ದೇಹಕ್ಕೆ ಹಾಗು ವಿಷಯಗಳನ್ನು ಗೆಲ್ಲಲು ಸಾಧ್ಯವಾಗುವುದು ಈ ದೇಹವಿರುವಾಗಲೇ. ಭಗವಂತ
ನಮಗೆ ಯಾವುದು ಸರಿ, ಯಾವುದು
ತಪ್ಪು ಎನ್ನುವ ವಿಚಾರ
ಮಾಡುವ ಬುದ್ಧಿಶಕ್ತಿಯನ್ನು ಕೊಟ್ಟಿದ್ದಾನೆ. ಇಂತಹ ವಿಚಾರ ಶಕ್ತಿಯನ್ನು
ಬಳಸಿಕೊಂಡು ಶರೀರ ಬಿದ್ದುಹೋಗುವ
ಮೊದಲೇ ಇಂದ್ರಿಯ ನಿಗ್ರಹವನ್ನು ಅಭ್ಯಾಸ ಮಾಡಬೇಕು. ಇದು ಮುಂದಕ್ಕೆ ಹಾಕುವ ಮತ್ತು ಒಂದು ದಿನದಲ್ಲಿ
ಸಾಧಿಸುವ ವಿಷಯವಲ್ಲ. ಇದಕ್ಕೆ ನಿರಂತರ ಸಾಧನೆ ಅಗತ್ಯ. ಈ ದೇಹ ಗಟ್ಟಿಯಾಗಿರುವಾಗಲೇ ಈ
ಸಾಧನೆ ಮಾಡಬೇಕು.
ಮನುಷ್ಯನನ್ನು
ಕಾಡುವ ಮೂಲಭೂತ ಸಮಸ್ಯೆ ಕಾಮ ಮತ್ತು ಕ್ರೋಧ. ಈ ಕಾಮ ಕ್ರೋಧದ ವೇಗ ನಮ್ಮೆಲ್ಲಾ ವಿವೇಕವನ್ನು ತಳ್ಳಿ ಮುಂದೆ ಬಂದು
ನಿಲ್ಲುವಷ್ಟು ಬಲಿಷ್ಠ. ಅದು ಮಳೆಗಾಲದ ಹುಚ್ಚು ಹೊನಲಂತೆ ನಿನ್ನ ವಿಚಾರಧಾರೆಯನ್ನು
ಕೊಚ್ಚಿಕೊಂಡು ಹೋಗುವ ಮೊದಲು ಅದನ್ನು ತಡೆ. ಯಾರು ಇದನ್ನು ತಡೆಯಬಲ್ಲರೋ ಅವರು “ಸ ಯುಕ್ತಃ ಸ ಸುಖೀ ನರಃ” ಎನ್ನುತ್ತಾನೆ ಕೃಷ್ಣ. ಯಾರು
ಕಾಮ-ಕ್ರೋಧದ ಬೆನ್ನುಹತ್ತದೆ, ಬಾಹ್ಯ
ಸ್ಪರ್ಶವನ್ನು ತಡೆದು ಅಂತರಂಗದ ಅನುಭವಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳುತ್ತಾನೆ ಅವನು
ನಿಜವಾದ ಸುಖಿ.
ನಮ್ಮ
ಅಂತರಂಗದ ಅನುಭವ ಎಂಥದ್ದು? ಒಬ್ಬ
ಸಾಧಕ ತನ್ನ ಅಂತರಂಗದಲ್ಲಿ ಕಾಣತಕ್ಕಂತಹ ಆನಂದದ ಅನುಭವವನ್ನು ಕೃಷ್ಣ ಮುಂದಿನ
ಶ್ಲೋಕದಲ್ಲಿ ವಿವರಿಸಿದ್ದಾನೆ.
· ಶ್ಲೋಕ - 24
ಯೋSನ್ತಃ ಸುಖೋSನ್ತರಾರಾಮಸ್ತಥಾSನ್ತರ್ಜ್ಯೋತಿರೇವ ಯಃ
।
ಸ ಯೋಗೀ ಬ್ರಹ್ಮ ನಿರ್ಬಾಣಂ ಬ್ರಹ್ಮಭೂತೋSಧಿಗಚ್ಛತಿ ॥೨೪॥
ಸ ಯೋಗೀ ಬ್ರಹ್ಮ ನಿರ್ಬಾಣಂ ಬ್ರಹ್ಮಭೂತೋSಧಿಗಚ್ಛತಿ ॥೨೪॥
ಯಃ
ಅಂತಃ ಸುಖಃ ಅಂತಃ ಆರಾಮಃ ತಥಾ ಅಂತಃ ಜ್ಯೋತಿಃ ಏವ ಯಃ ।
ಸಃ ಯೋಗೀ
ಬ್ರಹ್ಮ ನಿರ್ಬಾಣಂ ಬ್ರಹ್ಮಭೂತಃ ಅಧಿಗಚ್ಛತಿ-ಬಯಕೆಯಳಿದು ಒಳಬಗೆಯ ಸುಖ ಕಂಡವನು , ಭಗವಂತನನ್ನು ಕಂಡು ಒಳಗೊಳಗೇ ಖುಷಿಗೊಂಡವನು,
ಭಗವಂತನ ಬೆಳಕನ್ನೆ
ಒಳಗೆಲ್ಲ ತುಂಬಿಕೊಂಡವನು,
ಭಗವಂತನಲ್ಲೆ ನೆಲೆ ನಿಂತ
ಇಂಥ ಸಾಧಕ ಅಳಿವಿರದ ಮೈ ತಳೆದ ಭಗವಂತನನ್ನೇ ಸೇರುತ್ತಾನೆ.
ಮನುಷ್ಯ
ಸುಖ ಬೇಕು ಎಂದು ಬಯಸದೆ ಅಂತಃಸುಖ ಬೇಕು ಎಂದು ಬಯಸಬೇಕು. ಈ ಶ್ಲೋಕದಲ್ಲಿ ‘ಸುಖ’ ಮತ್ತು ‘ಆರಾಮ’ ಎನ್ನುವ ಎರಡು ಶಬ್ದಗಳು ಬಳಕೆಯಾಗಿವೆ. ಈ ಎರಡು
ಶಬ್ದಗಳ ನಡುವೆ ಸೂಕ್ಷ್ಮ
ವೆತ್ಯಾಸವಿದೆ. ನಮ್ಮ ಬಯಕೆಗಳು ಈಡೇರುವುದು ಅಥವಾ ಬಯಸಿದ್ದು ಸಿಕ್ಕಿದಾಗ ಆಗುವುದು
‘ಆರಾಮ’ ; ಬಯಕೆಗಳೇ ಇಲ್ಲದಿರುವುದು ಸುಖ. ಯಾವುದೋ ಕೊರತೆ,
ತೊಂದರೆ, ಕಷ್ಟ ಪರಿಹಾರವಾದಾಗ, ಯಾವುದೋ ತಾಪತ್ರಯದಿಂದ ಪಾರಾದಾಗ ಆಗುವುದು
ಸುಖ. ಇಲ್ಲಿ ಕೃಷ್ಣ ಹೇಳುತ್ತಾನೆ “ಅಧ್ಯಾತ್ಮ
ಯೋಗದ ಸಾಧಕ, ಸಾಧನೆ
ಮಾಡಿ ಫಲ ಪಡೆದವನು- ಮಾನಸಿಕವಾಗಿ ಭಗವಂತನಲ್ಲೇ ನೆಲೆಸಿರುತ್ತಾನೆ. ಆತ ಒಳಗಿಂದೊಳಗೆ
ಆರಾಮವಾಗಿರುತ್ತಾನೆ” ಎಂದು. ಅಂತರಂಗದಲ್ಲಿ
ಭಗವಂತನನ್ನು ನೋಡುತ್ತಾ ಆರಾಮವಾಗಿರುವುದು. ಕಾಮ ಕ್ರೋಧವನ್ನು ಬಿಟ್ಟು ಸುಖಪಡುವುದು. ಸಾಧಕ ತನ್ನೊಳಗಿರುವ ಆ
ಜ್ಯೋತಿಯನ್ನು ಅರಿತು ತನ್ನೊಳಗಿರುವ ಆ ಮಹಾ ಬೆಳಕಾದ ಭಗವಂತನನ್ನು ಕಂಡು ಭಗವಂತನಲ್ಲೇ
ನೆಲೆಸಿಬಿಡುತ್ತಾನೆ.
· ಶ್ಲೋಕ - 25
ಲಭಂತೇ ಬ್ರಹ್ಮನಿರ್ಬಾಣಮೃಷಯಃ ಕ್ಷೀಣಕಲ್ಮಷಾಃ ।
ಛಿನ್ನದ್ವೈಧಾಯತಾತ್ಮಾನಃ ಸರ್ವಭೂತಹಿತೇ ರತಾಃ ॥೨೫॥
ಛಿನ್ನದ್ವೈಧಾಯತಾತ್ಮಾನಃ ಸರ್ವಭೂತಹಿತೇ ರತಾಃ ॥೨೫॥
ಲಭಂತೇ ಬ್ರಹ್ಮನಿರ್ಬಾಣಮ್
ಋಷಯಃ ಕ್ಷೀಣ ಕಲ್ಮಷಾಃ ।
ಛಿನ್ನ
ದ್ವೈಧಾಃ ಯತಆತ್ಮಾನಃ ಸರ್ವಭೂತಹಿತೇ ರತಾಃ –ಕೊಳೆಗಳನೆಲ್ಲ ಕಳೆದು, ಇಬ್ಬಂದಿತನವಳಿದು ತಿಳಿವಿನ ಕೊಳವಾದವರು.[ಬಗೆಯನ್ನು ಹದಗೊಳಿಸಿದವರು],
ಎಲ್ಲ ಜೀವಿಗಳಿಗು ಒಳಿತನ್ನೆ
ಬಯಸುವ ಬಲ್ಲವರು ನಿತ್ಯ ಸ್ವರೂಪನಾದ ಭಗವಂತನನ್ನೇ ಪಡೆಯುತ್ತಾರೆ.
ತನ್ನಲ್ಲಿ
ಉದ್ಭವವಾಗುವ ಸಂದೇಹವನ್ನು, ದ್ವಂದ್ವವನ್ನು
ಮೀರಿ ನಿಂತವರು ನಿಜವಾದ ಸಾಧಕರು. ಇವರು ಸದಾ ತಮ್ಮ ಮನಸ್ಸನ್ನು ಅಂತರಂಗದಲ್ಲಿ
ನೆಲೆಗೊಳಿಸಿರುತ್ತಾರೆ. ಇವರು ಬಯಸುವ ಸುಖ ‘ಅಂತರಂಗದ ಸುಖ’. ಬಾಹ್ಯ ಸುಖದ ಬೆನ್ನುಹತ್ತದೆ, ಎಲ್ಲ ಜೀವಿಗಳಿಗೆ ಒಳಿತನ್ನೇ ಬಯಸುವ ಇವರು ಸದಾ ನಿತ್ಯ ಸ್ವರೂಪನಾದ
ಭಗವಂತನಲ್ಲೇ ನೆಲಸಿ ಅವನನ್ನೇ ಸೇರುತ್ತಾರೆ.
· ಶ್ಲೋಕ - 26
ಕಾಮಕ್ರೋಧವಿಯುಕ್ತಾನಾಂ ಯತೀನಾಂ ಯತಚೇತಸಾಮ್ ।
ಅಭಿತೋ ಬ್ರಹ್ಮನಿರ್ಬಾಣಂ ವರ್ತತೇ ವಿದಿತಾತ್ಮನಾಮ್ ॥೨೬॥
ಅಭಿತೋ ಬ್ರಹ್ಮನಿರ್ಬಾಣಂ ವರ್ತತೇ ವಿದಿತಾತ್ಮನಾಮ್ ॥೨೬॥
ಕಾಮ
ಕ್ರೋಧ ವಿಯುಕ್ತಾನಾಮ್ ಯತೀನಾಮ್ ಯತಚೇತಸಾಮ್ ।
ಅಭಿತಃ ಬ್ರಹ್ಮನಿರ್ಬಾಣಮ್ ವರ್ತತೇ
ವಿದಿತ ಆತ್ಮನಾಮ್-ಪ್ರಯತ್ನಶೀಲರಾಗಿ ಒಲುಮೆ-ಸಿಡುಕುಗಳನ್ನು ಓದ್ದವರಿಗೆ, ಬಗೆಯನ್ನು ಗೆದ್ದವರಿಗೆ ಭಗವಂತನನ್ನು
ಬಲ್ಲವರಿಗೆ ಎಲ್ಲೆಡೆಯು
ನಿತ್ಯ ಸ್ವರೂಪನಾದ ಭಗವಂತ ತುಂಬಿರುತ್ತಾನೆ.
ಕಾಮ-ಕ್ರೋಧವನ್ನು
ಸಂಪೂರ್ಣ ತೊರೆದು,
ಪೂರ್ಣವಾಗಿ
ಇಂದ್ರಿಯನಿಗ್ರಹ ಸಾಧಿಸಿದವರಿಗೆ ಎಲ್ಲೆಡೆಯೂ ಎಲ್ಲ ಜೀವ ಜಂತುವಿನಲ್ಲೂ ಭಗವಂತ
ಕಾಣಿಸುತ್ತಾನೆ. ಯಾವುದೇ ಐಹಿಕ ಕ್ಲೇಶದ ನೋವು ಇವರಿಗಿರುವುದಿಲ್ಲ. ಇವರ ಮನದಲ್ಲಿ
ಸರ್ವಾಂತರ್ಯಾಮಿಯಾದ, ನಿತ್ಯ
ಸ್ವರೂಪನಾದ ಭಗವಂತ
ನೆಲೆನಿಂತಿರುತ್ತಾನೆ.
· ಶ್ಲೋಕ - 27 & 28
ಬಾಹ್ಯ
ಸುಖದಿಂದ ಅಂತರಂಗದ ಸ್ವರೂಪಭೂತವಾದ ಸಹಜ ಸುಖದ ಕಡೆ ತಿರುಗುವ ಸಂದೇಶವನ್ನು ಕೊಟ್ಟ
ಕೃಷ್ಣ, ಅದಕ್ಕೆ ಪೂರಕವಾದ
ಧ್ಯಾನದ ಬಗ್ಗೆ ಸಂಕ್ಷಿಪ್ತವಾಗಿ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.
ಸ್ಪರ್ಶಾನ್ ಕೃತ್ವಾ
ಬಹಿರ್ಬಾಹ್ಯಾಂಶ್ಚಕ್ಷುಶ್ಚೈವಾಂತರೇ ಭ್ರುವೋಃ ।
ಪ್ರಾಣಾಪಾನೌ ಸಮೌ ಕೃತ್ವಾ ನಾಸಾಭ್ಯಂತರಚಾರಿಣೌ ॥೨೭॥
ಯತೇಂದ್ರಿಯಮನೋವೃತ್ತಿರ್ಮುನಿರ್ಮೋಕ್ಷಪರಾಯಣಃ ।
ವಿಗತೇಚ್ಛಾಭಯಕ್ರೋಧೋ ಯಃ ಸದಾ ಮುಕ್ತ ಏವ ಸಃ ॥೨೮॥
ಪ್ರಾಣಾಪಾನೌ ಸಮೌ ಕೃತ್ವಾ ನಾಸಾಭ್ಯಂತರಚಾರಿಣೌ ॥೨೭॥
ಯತೇಂದ್ರಿಯಮನೋವೃತ್ತಿರ್ಮುನಿರ್ಮೋಕ್ಷಪರಾಯಣಃ ।
ವಿಗತೇಚ್ಛಾಭಯಕ್ರೋಧೋ ಯಃ ಸದಾ ಮುಕ್ತ ಏವ ಸಃ ॥೨೮॥
ಸ್ಪರ್ಶಾನ್
ಕೃತ್ವಾ ಬಹಿಃ ಬಾಹ್ಯಾನ್ ಚಕ್ಷುಃ ಚ ಏವ ಅಂತರೇ ಭ್ರುವೋಃ ।
ಪ್ರಾಣ
ಅಪಾನೌ ಸಮೌ ಕೃತ್ವಾ ನಾಸ ಅಭ್ಯಂತರ ಚಾರಿಣೌ ||
ಯತ
ಇಂದ್ರಿಯ ಮನಃ ವೃತ್ತಿಃ ಮುನಿಃ ಮೋಕ್ಷ ಪರಾಯಣಃ ।
ವಿಗತ
ಇಚ್ಛಾ ಭಯ ಕ್ರೋಧಃ ಯಃ ಸದಾ ಮುಕ್ತಃ ಏವ ಸಃ –ಹೊರಗಣ ವಿಷಯ ಸಂಬಂಧಗಳನ್ನು ಹೊರಗಟ್ಟಿ,
ನೋಟವನ್ನು ಹುಬ್ಬುಗಳ
ನಡುವಿರಿಸಿ, ಹೊರಳೆಯೊಳಗೆ
ಚರಿಸುವ ಪ್ರಾಣಾಪಾನಗಳನ್ನು ಕುಂಭಕದಲ್ಲಿ ಸಮಗೊಳಿಸಿ, ಇಂದ್ರಿಯಗಳ ಮತ್ತು ಮನದ ಚೆಲ್ಲಾಟವನ್ನು
ಹಿಡಿತದಲ್ಲಿಟ್ಟವನು, ಬಿಡುಗಡೆಗಾಗಿ
ಕಾತರಿಸುವವನು, ಬಯಕೆ-ಅಂಜಿಕೆ-ಸಿಡುಕುಗಳನ್ನು
ತೊಡೆದುಕೊಂಡವನು-ಇಂಥ ಸಾಧಕನು ಸದಾ ಮುಕ್ತನೇ ಸರಿ.
ನಾವು
ನಮ್ಮ ಮನಸ್ಸನ್ನು ನಿಯಂತ್ರಿಸಬೇಕಾದರೆ ಮೊದಲು ನಮ್ಮ ಇಂದ್ರಿಯಗಳು ಹೊರ ಪ್ರಪಂಚದಲ್ಲಿ ಸಂಚರಿಸುವುದನ್ನು
ನಿಯಂತ್ರಿಸಬೇಕು. “ಸ್ಪರ್ಶಾನ್
ಕೃತ್ವಾ ಬಹಿಃ ಬಾಹ್ಯಾನ್”-
ಬಾಹ್ಯೇಂದ್ರಿಯ
ನಿಯಂತ್ರಣ ಮಾಡದೆ ಮನಸ್ಸನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಹೊರ ಪ್ರಪಂಚದ
ರೂಪ-ರಸ-ಸ್ಪರ್ಶ-ಶಬ್ದ-ಗಂಧ ಎನ್ನುವ ಸುಖದ ಭ್ರಮೆಯನ್ನು ಹೊರಗೇ ಬಿಡಬೇಕು, ಜೊತೆಗೆ ಅನಪೇಕ್ಷಿತವಾಗಿ ನಮ್ಮೊಳಗೆ ತುಂಬಿರುವ,
ಸತ್ಯವನ್ನು
ಕಾಣುವುದಕ್ಕೆ ಅಡ್ಡಗೋಡೆಯಾಗಿರುವ, ಈ
ಪ್ರಪಂಚದ ಅನುಭೂತಿಯನ್ನು ಹೊರಹಾಕಬೇಕು. ಸಾಮಾನ್ಯವಾಗಿ ನಮಗೆ ಧ್ಯಾನಕ್ಕೆ
ಕುಳಿತಾಗ ಏನೇನೊ ಕಾಣಲು ಆರಂಭವಾಗುತ್ತದೆ. ಸುಂದರವಾದದ್ದು, ಭಯಾನಕವಾದದ್ದು, ಇತ್ಯಾದಿ. ಇದಕ್ಕಾಗಿ ಭಯಪಡುವ ಅಗತ್ಯವಿಲ್ಲ.
ಇವೆಲ್ಲವೂ ನಾವು ನಮ್ಮೊಳಗೆ ತುಂಬಿಕೊಂಡಿರುವ ಅನಗತ್ಯ ವಿಚಾರಗಳು. ಅವು ಹೊರ ಹೋಗುವಾಗ ಈ ರೀತಿ ನಮಗೆ ದರ್ಶನ
ಕೊಡುತ್ತವೆ. ಹಠಬಿಡದೆ ಸಾಧನೆ ಮುಂದುವರಿಸಿದಾಗ ಕ್ರಮೇಣವಾಗಿ ಈ ಎಲ್ಲಾ ವಿಚಾರಗಳು
ಹೊರಹೋಗಿ ಮನಸ್ಸು ನಿರ್ಮಲವಾಗುತ್ತದೆ. ಇದು ಒಂದೇ ದಿನದಲ್ಲಿ ಆಗುವಂತದ್ದಲ್ಲ, ಇದಕ್ಕೆ ನಿರಂತರ ಸಾಧನೆ ಅಗತ್ಯ. ಒಮ್ಮೆ
ಅಂತಃಕರಣ ಸ್ವಚ್ಛವಾದರೆ
ಅದರಲ್ಲಿ ಏನನ್ನು ಬೇಕಾದರೂ ಪ್ರತಿಬಿಂಬಿಸಬಹುದು.
ಧ್ಯಾನಕ್ಕೆ
ಬೇಕಾದ ಇನ್ನೊಂದು ಮುಖ್ಯವಾದ ಅಂಶ ಅನ್ನಮಯಕೋಶ(ದೇಹ) ಸ್ಥಿರಗೊಳಿಸುವುದು. ದೇಹ
ಚಲಿಸಿದರೆ ಮನಸ್ಸು ಚಲಿಸುತ್ತದೆ-ಆಗ ಏಕಾಗ್ರತೆ ಸಾಧ್ಯವಿಲ್ಲ. ಅದಕ್ಕಾಗಿ ನಾವು ನೆಟ್ಟಗೆ(erect
and straight body), ನಮಗೆ
ಸಾಧ್ಯವಾದ ಆಸನ(Posture)ದಲ್ಲಿ
ನಮ್ಮ ದೇಹವನ್ನು
ಸ್ಥಿರಗೊಳಿಸಬೇಕು. ಕೃಷ್ಣ ಹೇಳುತ್ತಾನೆ “ಚಕ್ಷುಃ
ಚ ಏವ ಅಂತರೇ ಭ್ರುವೋಃ”
ಎಂದು. ಅಂದರೆ ನಮ್ಮ
ದೃಷ್ಟಿಯನ್ನು ನಮ್ಮ ಎರಡು ಹುಬ್ಬಿನ ನಡುವೆ ನೆಡುವುದು.(ಇದು ಕಷ್ಟವಾದರೆ ಮೂಗಿನ ತುದಿಯನ್ನೂ
ಆರಿಸಿಕೊಳ್ಳಬಹುದು ಎಂದು ಶಾಸ್ತ್ರಕಾರರು ಹೇಳುತ್ತಾರೆ). ನಮ್ಮ ಎರಡು ಹುಬ್ಬಿನ ನಡುವೆ ಆಜ್ಞಾಚಕ್ರವಿದೆ,
ಅಲ್ಲಿ ನಾವು ನಮ್ಮ
ದೃಷ್ಟಿಯನ್ನು ನೆಟ್ಟಾಗ
ಈ ಶಕ್ತಿ ಕೇಂದ್ರ ಜಾಗೃತವಾಗುತ್ತದೆ. ಇದರಿಂದ ಅನ್ನಮಯ ಕೋಶ ಸ್ಥಿರವಾಗುತ್ತದೆ.
ಅನ್ನಮಯಕೋಶದ
ನಂತರ ಪ್ರಾಣಮಯಕೋಶ. “ಪ್ರಾಣ
ಅಪಾನೌ ಸಮೌ ಕೃತ್ವಾ ನಾಸ ಅಭ್ಯಂತರ ಚಾರಿಣೌ”-ನಮ್ಮೊಳಗೆ ನಿರಂತರ ವಾಯುವಿನ ಚಲನೆ ಇರುತ್ತದೆ;
ಈ ಚಲನೆಯನ್ನು ಸ್ಥಿರಗೊಳಿಸುವುದು-ಇದನ್ನು
ಕುಂಭಕ ಎನ್ನುತ್ತಾರೆ. ಇದರಲ್ಲಿ ಎರಡು ವಿಧ. ಒಂದು ಅಂತಃಕುಂಭಕ ಹಾಗು ಇನ್ನೊಂದು ಬಾಹ್ಯಕುಂಭಕ.
ಅಂತಃಕುಂಭಕದಲ್ಲಿ ಮೊದಲು ಸಂಪೂರ್ಣ ಒಳಗಿರುವ ಗಾಳಿಯನ್ನು ಹೊರಹಾಕಿ ನಂತರ ಎಷ್ಟು
ಹೆಚ್ಚುಸಾಧ್ಯವೋ ಅಷ್ಟು ಶುದ್ಧ ಗಾಳಿಯನ್ನು ಒಳಗೆ ತೆಗೆದುಕೊಂಡು, ಉಸಿರನ್ನು ಸ್ಥಗನಗೊಳಿಸಬೇಕು. [ಈ ರೀತಿಯ
ಪ್ರಾಣಾಯಾಮವನ್ನು ಗುರುವಿನಿಂದ ಕಲಿತು ಮಾಡಬೇಕು ಇಲ್ಲದಿದ್ದರೆ ಇದರಿಂದ ಅಪಾಯವಿದೆ].
ಬಾಹ್ಯಕುಂಭಕದಲ್ಲಿ ಒಳಗಿನ ಗಾಳಿಯನ್ನು ಸಂಪೂರ್ಣ ಹೊರಹಾಕಿ ಅದೇ
ಸ್ಥಿತಿಯಲ್ಲಿ ಉಸಿರನ್ನು ಸ್ಥಗನಗೊಳಿಸುತ್ತಾರೆ. ಸಾಮಾನ್ಯವಾಗಿ ಹೃದಯ
ರೋಗವಿದ್ದವರಿಗೆ ಅಂತಃಕುಂಭಕ ಅಪಾಯಕಾರಿ, ಅವರು ಬಾಹ್ಯಕುಂಭಕ ಮಾಡಬಹುದು. ಹೀಗೆ ಕುಂಭಕದಿಂದ
ಪ್ರಾಣಮಯಕೊಶ ಸ್ಥಿರವಾಗುತ್ತದೆ. ನಂತರದ ಹೆಜ್ಜೆ ಮನೋಮಯ ಮತ್ತು ವಿಜ್ಞಾನಮಯಕೋಶ.
ನಮ್ಮ ಮನಸ್ಸು ಚಂಚಲ, ಅದು
ಒಂದುಕಡೆ ನಿಲ್ಲುವುದಿಲ್ಲ,
ಅದನ್ನು
ಸ್ಥಿರಗೊಳಿಸಬೇಕು. ‘ಈ
ದಾರಿಯಲ್ಲಿ ನಾನು ಸಾಗಿ-ಸಾಧಿಸಿ ಸಿದ್ಧಿ ಪಡೆದೇ ಪಡೆಯುತ್ತೇನೆ’ ಎನ್ನುವ ಹಠತೊಟ್ಟು ಮನಸ್ಸನ್ನು ಅದಕ್ಕೆ
ಅಣಿಗೊಳಿಸಬೇಕು. ಇದರಿಂದ ಚಿತ್ತ ಭಗವಂತನ ಕಡೆ ಏಕಾಗ್ರವಾಗುತ್ತದೆ. ಈ ಸ್ಥಿತಿ
ಪಂಚಬೌತಿಕವಾಗಿ ನಾವು ತಲುಪಬಹುದಾದ ಅತ್ಯಂತ ಮಹತ್ತಾದ ಸ್ಥಿತಿ. ಇಲ್ಲಿರುವ ಆನಂದ ಅಪರಿಮಿತ. ಈ ಸ್ಥಿತಿಯಲ್ಲಿರುವ
ಸುಖವನ್ನು ಅನುಭವಿಸಿದರೆ ಮುಂದೆ ಬಾಹ್ಯ ಪ್ರಪಂಚದಲ್ಲಿನ ಸುಖದ ಹಿಂದೆ ನಮ್ಮ ಮನಸ್ಸು ಎಂದೂ ಹರಿಯುವುದಿಲ್ಲ.ಮನಸ್ಸು
ಭಗವಂತನಲ್ಲಿ ನೆಲೆನಿಲ್ಲುತ್ತದೆ. ಇದರಿಂದ ನಮ್ಮ ಆಸೆ-ಭಯ-ಕ್ರೋಧ ಎಲ್ಲವೂ
ಇಲ್ಲವಾಗುತ್ತದೆ. “ಇಂತಹ
ಸಾಧಕ ಸದಾ
ಮುಕ್ತನೇ ಸರಿ” ಎನ್ನುತ್ತಾನೆ
ಕೃಷ್ಣ.
ಕೃಷ್ಣ
ಅನ್ನಮಯಕೋಶ, ಪ್ರಾಣಮಯಕೋಶ,
ಮನೋಮಯಕೋಶ ಮತ್ತು ವಿಜ್ಞಾನಮಯಕೋಶವೆಂಬ ಚತುರ್ವಿದ
ಅಂತಃಕರಣವನ್ನು ಪಕ್ವಗಳಿಸಿ ಹೇಗೆ ನಾವು ನಮ್ಮೊಳಗಿನ ಭಗವಂತನ ದರ್ಶನವನ್ನು
ಪಡೆಯಬಹುದು
ಎನ್ನುವುದನ್ನು ವಿವರಿಸಿದ. ಮುಂದಿನ ಶ್ಲೋಕದಲ್ಲಿ ನಾವೆಂದೂ ಕಾಣದ ಆ ಭಗವಂತನನ್ನು ಯಾವ ರೀತಿ ಕಾಣಬೇಕು
ಎನ್ನುವುದನ್ನು ವಿವರಿಸುತ್ತಾನೆ.
· ಶ್ಲೋಕ - 29
ಭೋಕ್ತಾರಂ ಯಜ್ಞತಪಸಾಂ ಸರ್ವಲೋಕಮಹೇಶ್ವರಮ್ ।
ಸುಹೃದಂ ಸರ್ವಭೂತಾನಾಂ ಜ್ಞಾತ್ವಾ ಮಾಂ ಶಾಂತಿಮೃಚ್ಛತಿ ॥೨೯॥
ಸುಹೃದಂ ಸರ್ವಭೂತಾನಾಂ ಜ್ಞಾತ್ವಾ ಮಾಂ ಶಾಂತಿಮೃಚ್ಛತಿ ॥೨೯॥
ಭೋಕ್ತಾರಮ್ ಯಜ್ಞ
ತಪಸಾಮ್ ಸರ್ವಲೋಕ
ಮಹಾ ಈಶ್ವರಮ್ ।
ಸುಹೃದಮ್ ಸರ್ವ
ಭೂತಾನಾಮ್ ಜ್ಞಾತ್ವಾ
ಮಾಮ್ ಶಾಂತಿಮ್ ಋಚ್ಛತಿ-ಹೊಮಗಳನ್ನು-ವೃತಗಳನ್ನು
ಉಣ್ಣುವವನೆಂದು, ಎಲ್ಲ
ಲೋಕಗಳ ಒಡೆಯರಿಗು ಹಿರಿಯೊಡೆಯನೆಂದು, ಎಲ್ಲ ಜೀವಿಗಳ ನೇಹಿಗನೆಂದು ನನ್ನನ್ನು ತಿಳಿದವನು ಸುಖದ ಸೆಲೆಯಾದ ಮುಕ್ತಿಯನ್ನು
ಪಡೆಯುತ್ತಾನೆ.
ಆ
ಭಗವಂತ ಸರ್ವ ಯಜ್ಞಗಳ ಭೋಕ್ತಾರ. [ಇಲ್ಲಿ ಯಜ್ಞ ಅಂದರೆ ಅಗ್ನಿಮುಖದಲ್ಲಿ ಮಾಡುವ ಯಜ್ಞ
ಮಾತ್ರವಲ್ಲ, ಹಿಂದೆ
ವಿವರಿಸಿದ ಎಲ್ಲಾ ರೀತಿಯ ಯಜ್ಞ]. ನಾವು ಯಜ್ಞದಲ್ಲಿ ದೇವತೆಗಳ ಹೆಸರಿನಲ್ಲಿ ಅರ್ಪಿಸುವ ಹವಿಸ್ಸೂ ಕೂಡಾ ಆ
ದೇವತೆಯೊಳಗೆ ಅಂತರ್ಯಾಮಿಯಾಗಿರುವ ಭಗವಂತನಿಗೆ ಅರ್ಪಿತ ಎನ್ನುವ ಭಾವನೆಯಿಂದ
ಅರ್ಪಿಸಬೇಕು. ಭಗವಂತನಿಗೆ ಅರ್ಪಿಸದೆ ಅರ್ಪಿಸುವ ಯಾವ ಹವಿಸ್ಸನ್ನೂ ದೇವತೆಗಳು
ಸ್ವೀಕರಿಸುವುದಿಲ್ಲ. ನಮ್ಮ ಪ್ರತಿಯೊಂದು ನಡೆಯಲ್ಲಿಯೂ ಭಗವಂತನ ಅನುಸಂಧಾನವಿರಬೇಕು. ಆತ
ಸರ್ವಸಮರ್ಥ, ಸರ್ವಕ್ರಿಯೆಗಳ
ನಿಯಾಮಕ, ಎಲ್ಲವೂ
ಅವನಿಗೆ ಸಂದದ್ದು ಎನ್ನುವ ಅನುಸಂಧಾನ ಧ್ಯಾನದಲ್ಲಿ ಬಹಳ ಮುಖ್ಯ. ದೈಹಿಕವಾಗಿ, ಮಾನಸಿಕವಾಗಿ, ವಾಚಕವಾಗಿ ಅಚಲವಾದ ದೀಕ್ಷೆ ಬಹಳ ಮುಖ್ಯ. ಯಾವ
ಕಾಲಕ್ಕೂ ಅಪ್ರಾಮಾಣಿಕನಾಗಿ ಮಾತನಾಡುವುದಿಲ್ಲ ಎನ್ನುವ ದೀಕ್ಷೆ, ಸದಾ ಮನಸ್ಸಿನಲ್ಲಿ ಸತ್ಯದ ಬಗ್ಗೆ ಆಳವಾದ
ಚಿಂತನೆ, ಸದಾ
ಎಲ್ಲರ ಬಗ್ಗೆ ಸದ್ಭಾವ- ಹೀಗೆ ಇದೊಂದು ತಪಸ್ಸು. ಭಗವಂತನನ್ನು ಮರೆತು
ಯಾರನ್ನು ಪೂಜಿಸಿದರೂ
ಅದು ವ್ಯರ್ಥ.
ಕೆಲವರಿಗೆ
ಭಗವಂತ ಎಂದರೆ ಭಯ! ಇಲ್ಲಿ ಕೃಷ್ಣ ಹೇಳುತ್ತಾನೆ ‘ಸುಹೃದಮ್ ಸರ್ವ ಭೂತಾನಾಮ್’ ಎಂದು. ಭಗವಂತನ ಬಗ್ಗೆ ಎಂದೂ ಭಯಪಡಬೇಕಾಗಿಲ್ಲ.
ಆತನಿಗಿಂತ ಆತ್ಮೀಯ ಗೆಳೆಯ ಇನ್ನೊಬ್ಬನಿಲ್ಲ. ನಮ್ಮನ್ನು ಸದಾ ಪ್ರೀತಿಸುವ,ನಿರಂತರ ನಮ್ಮ ಒಳಗೆ-ಹೊರಗೆ ತುಂಬಿ ಸದಾ ರಕ್ಷಿಸುವ
ಶಕ್ತಿ ಭಗವಂತ.ಪ್ರತಿಯೊಬ್ಬರನ್ನು ಅವರವರ ಯೋಗ್ಯತೆಗೆ ತಕ್ಕಂತೆ ಬೆಳೆಸುವ, ತಪ್ಪು ಮಾಡಿದಾಗ ಕೇವಲ ತಿದ್ದುವುದಕ್ಕೊಸ್ಕರ
ಶಿಕ್ಷೆ ಕೊಟ್ಟು ದಾರಿ ತೋರುವ, ಸದಾ ಕಾರುಣ್ಯದಿಂದ
ಮೇಲೆತ್ತುವ ‘ಸುಹೃತ್’
ಆ ಭಗವಂತ. ಇಂತಹ
ಕರುಣಾಳು ಇನ್ನೊಬ್ಬನಿಲ್ಲ ಎನ್ನುವ ಜ್ಞಾನ ಧ್ಯಾನದಲ್ಲಿ ಬಹಳ ಮುಖ್ಯ. ಈ
ವಿಚಾರವನ್ನು ತಿಳಿದು ಅನುಸರಿಸಿದವ ಜ್ಞಾನಾನಂದದ ಪರಾಕಾಷ್ಠೆಯಾದ
ಮೋಕ್ಷವನ್ನುಪಡೆಯುತ್ತಾನೆ ಎನ್ನುತ್ತಾನೆ ಕೃಷ್ಣ.
2 ಕಾಮೆಂಟ್ಗಳು:
ಈ ಅನುವಾದಗಳ ಕರ್ತೃ ಯಾರು ಎಂಬುದನ್ನು ತಿಳಿಸುವಿರಾ? ಅನುವಾದ ಉತ್ತಮವಾಗಿ ಬಂದಿದೆ
ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.
ಕಾಮೆಂಟ್ ಪೋಸ್ಟ್ ಮಾಡಿ