ಭಗವದ್ಗೀತೆ ಅಧ್ಯಾಯ – 7
· ಶ್ಲೋಕ - 01
ಹಿಂದಿನ ಆರು ಅಧ್ಯಾಯ
(ಮೊದಲ ಷಟ್ಕ)ದಲ್ಲಿ ಕೃಷ್ಣ ಸಾಧಕನಾದವನು ಯಾವ ರೀತಿ ಸಾಧನೆಗೆ ತೊಡಗಬೇಕು, ಕರ್ಮ ಹೇಗಿರಬೇಕು, ಧ್ಯಾನ ಹೇಗಿರಬೇಕು, ಇತ್ಯಾದಿ ಭಗವಂತನನ್ನು ತಿಳಿಯುವ ಸಾಧನದ ಬಗ್ಗೆ ಹೇಳಿದ. ಎರಡನೇ ಷಟ್ಕ (ಅ-೭ರಿಂದ
೧೨) ಸಾಧನೆಯ ಮೂಲಕ ನಾವು ತಿಳಿದುಕೊಳ್ಳಬೇಕಾದ
ಭಗವಂತನ ಸ್ವರೂಪವನ್ನು, ವಿಭೂತಿಯನ್ನು, ವೈಭವವನ್ನು, ಆತನ ಮಹಿಮೆಯನ್ನು ಹೇಳುವ ಸಾಧ್ಯಾಧ್ಯಾಯ.
ಏಳನೇ ಅಧ್ಯಾಯ
ಭಗವಂತನ ಅಮೃತ ನುಡಿಯಿಂದ ಪ್ರಾರಂಭವಾಗುತ್ತದೆ.
ಭಗವಾನುವಾಚ ।
ಮಯ್ಯಾಸಕ್ತಮನಾಃ ಪಾರ್ಥ ಯೋಗಂ ಯುಂಜನ್ ಮದಾಶ್ರಯಃ ।
ಅಸಂಶಯಂ ಸಮಗ್ರಂ ಮಾಂ ಯಥಾ ಜ್ಞಾಸ್ಯಸಿ ತಚ್ಛೃಣು ॥೧॥
ಮಯ್ಯಾಸಕ್ತಮನಾಃ ಪಾರ್ಥ ಯೋಗಂ ಯುಂಜನ್ ಮದಾಶ್ರಯಃ ।
ಅಸಂಶಯಂ ಸಮಗ್ರಂ ಮಾಂ ಯಥಾ ಜ್ಞಾಸ್ಯಸಿ ತಚ್ಛೃಣು ॥೧॥
ಭಗವಾನ್ ಉವಾಚ-ಭಗವಂತ
ಹೇಳಿದನು :
ಮಯಿ ಆಸಕ್ತ ಮನಾಃ
ಪಾರ್ಥ ಯೋಗಮ್ ಯುಂಜನ್ ಮತ್ ಆಶ್ರಯಃ ।
ಅಸಂಶಯಮ್ ಸಮಗ್ರಮ್ ಮಾಮ್ ಯಥಾ ಜ್ಞಾಸ್ಯಸಿ ತತ್ ಶೃಣು –ಪಾರ್ಥ, ನನ್ನನ್ನೆ ಬಗೆ ತುಂಬಿ ಪ್ರೀತಿಸುತ್ತ, ನನ್ನನ್ನೆ ಮೊರೆಹೊಕ್ಕು, ಯೋಗ ಸಾಧನೆಯಲ್ಲಿ ತೊಡಗುತ್ತ ಖಚಿತವಾಗಿ, ಅರಿವಿನ ತೆಕ್ಕೆ
ತುಂಬಾ ನನ್ನನ್ನು ಹೇಗೆ ಅರಿಯಬಲ್ಲೆ ಅದನ್ನು ಕೇಳು.
ಮದ್ದಾನೆ ಅಥವಾ
ಗೂಳಿಯಂತಹ ನಮ್ಮ ಮನಸ್ಸನ್ನು ಮಣಿಸಿ, ಸಾಧನೆಯ ಹಾದಿಯಲ್ಲಿ
ಅದನ್ನು ಪಕ್ವಗೊಳಿಸಿದ ಮೇಲೆ, ಭಗವಂತನಲ್ಲಿ ಮತ್ತೆಂದೂ ಕದಲದ, ಸುದೃಡ ಮತ್ತು ಗಾಢವಾದ ಭಕ್ತಿಯಿಂದ, ಅಹಂಕಾರ ತೊರೆದು, ಸಂಪೂರ್ಣ ಶರಣಾಗತಿಯಿಂದ (ಎಲ್ಲಾ ಕಾಲದಲ್ಲೂ
ನಾವು ಭಗವಂತನ ಅಧೀನ ಎನ್ನುವ ಎಚ್ಚರದಿಂದ), ಭಗವಂತನಲ್ಲಿ ಸಂಪೂರ್ಣವಾಗಿ ತನ್ನನ್ನು ತಾನು ಅರ್ಪಿಸಿಕೊಂಡು, ಧ್ಯಾನಯೋಗದಲ್ಲಿ ತೊಡಗಿದ ಮೇಲೆ, ‘ಅರಿವಿನ ಪೂರ್ಣ ಸಾಮರ್ಥ್ಯದಷ್ಟು ಭಗವಂತನನ್ನು ಹೇಗೆ ತಿಳಿಯಬಹುದು’ ಅದನ್ನು ಕೇಳು ಎನ್ನುತ್ತಾನೆ ಕೃಷ್ಣ.
· ಶ್ಲೋಕ - 02
ಜ್ಞಾನಂ ತೇSಹಂ ಸವಿಜ್ಞಾನಮಿದಂ ವಕ್ಷ್ಯಾಮ್ಯಶೇಷತಃ ।
ಯಜ್ ಜ್ಞಾತ್ವಾ ನೇಹ ಭೂಯೋSನ್ಯಜ್ ಜ್ಞಾತವ್ಯಮವಶಿಷ್ಯತೇ ॥೨॥
ಯಜ್ ಜ್ಞಾತ್ವಾ ನೇಹ ಭೂಯೋSನ್ಯಜ್ ಜ್ಞಾತವ್ಯಮವಶಿಷ್ಯತೇ ॥೨॥
ಜ್ಞಾನಮ್ ತೇ ಅಹಮ್ ಸ ವಿಜ್ಞಾನಮ್ ಇದಮ್ ವಕ್ಷ್ಯಾಮಿ ಅಶೇಷತಃ ।
ಯತ್ ಜ್ಞಾತ್ವಾ ನ ಇಹ ಭೂಯಃ ಅನ್ಯತ್ ಜ್ಞಾತವ್ಯಮ್ ಅವಶಿಷ್ಯತೇ –ತಿಳಿಯಬೇಕಾದ ನನ್ನ ಹಿರಿಮೆಯನ್ನು ಅದರ ಬಿತ್ತರದ ಜತೆಗೆ ನಿನಗೆ ನಾನು ಪೂರ್ತಿಯಾಗಿ
ಹೇಳುತ್ತೇನೆ. ಇದನ್ನು ತಿಳಿದರೆ ಮತ್ತೆ ಈ ವಿಷಯದಲ್ಲಿ ಬೇರೆ
ತಿಳಿಯುವಂಥದೇನೂ ಉಳಿದಿರುವುದಿಲ್ಲ.
ಯಾವುದನ್ನು ತಿಳಿದರೆ
ಎಲ್ಲವನ್ನೂ ತಿಳಿದಂತಾಗುತ್ತದೋ ಅದನ್ನು ನಿನಗೆ ಹೇಳುತ್ತೇನೆ ಎನ್ನುತ್ತಾನೆ ಕೃಷ್ಣ. ಉಪನಿಷತ್ತಿನಲ್ಲಿ ಒಂದು ಮಾತಿದೆ “ಯಸ್ಮಿನ್ ವಿಜ್ಞಾತೇ ಸರ್ವ೦ ಇದ೦ ವಿಜ್ಞಾತ೦ ಭವತಿ” ಎಂದು. ಅಂದರೆ ಯಾವುದನ್ನು ತಿಳಿದರೆ ಎಲ್ಲವೂ ತಿಳಿಯುತ್ತದೋ ಅದನ್ನು ಮೊದಲು ತಿಳಿಯಬೇಕು. ನಾವು ಭಗವಂತನನ್ನು ತಿಳಿದರೆ ಈ ಪ್ರಪಂಚವನ್ನು
ತಿಳಿದಂತೆ. ಅದನ್ನು ಬಿಟ್ಟು ಪ್ರಪಂಚವನ್ನು ತಿಳಿದು
ಭಗವಂತನನ್ನು ತಿಳಿಯಬೇಕು ಅಂದುಕೊಂಡರೆ ಅದು ಅಸಾಧ್ಯ. ಇಲ್ಲಿ ಕೃಷ್ಣ ಹೇಳುತ್ತಾನೆ “ಯಾವ ಸಂಗತಿಯನ್ನು ತಿಳಿದರೆ ಮತ್ತೆ ಬೇರೆ ತಿಳಿದುಕೊಳ್ಳಬೇಕಾದ ಸಂಗತಿ ಉಳಿಯುವುದಿಲ್ಲವೋ ಅಂತಹ ವಿಜ್ಞಾನವನ್ನು ನಿನಗೆ ಕೊಡುತ್ತೇನೆ” ಎಂದು. ಜ್ಞಾನ ವಿಜ್ಞಾನವಾದಾಗಲೇ ಅದು
ಸಮಗ್ರವಾಗುವುದು. ವಿಜ್ಞಾನ ಅಂದರೆ ವಿ+ಜ್ಞಾನ. ಇಲ್ಲಿ ‘ವಿ’ ಉಪಸರ್ಗ, ‘ವಿ’- ವಿಲಕ್ಷಣವಾದ, ವಿಶಿಷ್ಟವಾದ, ವಿಶೇಷವಾದ, ಇತ್ಯಾದಿ ಅರ್ಥವನ್ನು ಕೊಡುತ್ತದೆ. ಒಂದು ವಿಷಯವನ್ನು ತಳಸ್ಪರ್ಶಿಯಾಗಿ
ತಿಳಿಯುವುದು ವಿಜ್ಞಾನ. ಇಲ್ಲಿ ಕೃಷ್ಣ ಹೇಳುತ್ತಿರುವುದು
ವಿಜ್ಞಾನದ ಬಗ್ಗೆ. ‘ದೇವರು ಇದ್ದಾನೆ, ಅವನು ಸರ್ವಸಮರ್ಥ, ಸರ್ವಾಂತರ್ಯಾಮಿ’ ಎನ್ನುವುದು ಜ್ಞಾನ; ಆತ ಎಲ್ಲೆಲ್ಲಿ ಹೇಗಿದ್ದಾನೆ, ಯಾವ ವಸ್ತುವಿನಲ್ಲಿ ಯಾವ ವಿಭೂತಿಯಾಗಿದ್ದಾನೆ, ಎಂದು ವಿವರವಾಗಿ ತಿಳಿಯುವುದು ವಿಜ್ಞಾನ.
· ಶ್ಲೋಕ - 03
ಮನುಷ್ಯಾಣಾಂ
ಸಹಸ್ರೇಷು ಕಶ್ಚಿದ್ ಯತತಿ ಸಿದ್ಧಯೇ ।
ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ವೇತ್ತಿ ತತ್ತ್ವತಃ ॥೩॥
ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ವೇತ್ತಿ ತತ್ತ್ವತಃ ॥೩॥
ಮನುಷ್ಯಾಣಾಮ್ ಸಹಸ್ರೇಷು ಕಶ್ಚಿತ್ ಯತತಿ ಸಿದ್ಧಯೇ ।
ಯತತಾಮ್ ಅಪಿ
ಸಿದ್ಧಾನಾಮ್ ಕಶ್ಚಿತ್ ಮಾಮ್ ವೇತ್ತಿ ತತ್ತ್ವತಃ –ಸಾವಿರಾರು ಮಂದಿಯಲ್ಲಿ ಯಾರೋ ಒಬ್ಬ ಸಿದ್ಧಿಗಾಗಿ ಪ್ರಯತ್ನಿಸುತ್ತಾನೆ. ಪ್ರಯತ್ನಿಸಿದವರಲ್ಲಿ, ಪ್ರಯತ್ನಿಸಿ ಗುರಿಮುಟ್ಟಿದವರಲ್ಲಿ ಯಾರೋ ಒಬ್ಬ
ನನ್ನನ್ನು ಸರಿಯಾಗಿ ಅರಿತುಕೊಳ್ಳುತ್ತಾನೆ.
ಭಗವಂತನನ್ನು ಯಾರು
ತಳಸ್ಪರ್ಶಿಯಾಗಿ ತಿಳಿಯಲು ಸಾಧ್ಯ? ಕೃಷ್ಣ ಹೇಳುತ್ತಾನೆ “ಸಾವಿರಾರು ಮಾನವರಲ್ಲಿ ಕೆಲವರು ಸಿದ್ಧಿಗಾಗಿ
ಪ್ರಯತ್ನಿಸುತ್ತಾರೆ. ಈ ರೀತಿ ಯೋಗದಲ್ಲಿ ತೊಡಗಿಸಿಕೊಂಡು ಅದರಲ್ಲಿ ಗುರಿಮುಟ್ಟಿದ ಅನೇಕರಲ್ಲಿ, ‘ಒಬ್ಬನು ನನ್ನನ್ನು ನಿಜವಾಗಿ ಅರ್ಥ ಮಾಡಿಕೊಂಡಿದ್ದಾನೆ’ ಎಂದು ಹೇಳುವುದು ಕಷ್ಟ”. ಎಂದು. ಅಪರೋಕ್ಷ ಜ್ಞಾನದಲ್ಲಿ ಎತ್ತರಕ್ಕೇರಿದ ಸಿದ್ಧಪುರುಷರಲ್ಲೂ ಕೂಡಾ ಭಗವಂತನನ್ನು ತತ್ವತಃ ತಿಳಿದುಕೊಳ್ಳುವವರು ಬಹಳ ವಿರಳ.
· ಶ್ಲೋಕ - 04
ಭೂಮಿರಾಪೋSನಲೋ ವಾಯುಃ ಖಂ ಮನೋ ಬುದ್ಧಿರೇವ ಚ ।
ಅಹಂಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ ॥೪॥
ಅಹಂಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ ॥೪॥
ಭೂಮಿಃ ಆಪಃ ಅನಲಃ
ವಾಯುಃ ಖಮ್ ಮನಃ ಬುದ್ಧಿಃ ಏವ ಚ ।
ಅಹಂಕಾರಃ ಇತಿ ಇಯಮ್ ಮೇ ಭಿನ್ನ ಪ್ರಕೃತಿ ಅಷ್ಟಧಾ- ಮಣ್ಣು, ನೀರು, ಬೆಂಕಿ, ಗಾಳಿ, ಆಕಾಶ, ಮನಸ್ಸು, ಬುದ್ಧಿ,[ಸುಪ್ತಪ್ರಜ್ಞೆಯಿಂದ ಕೂಡಿದ] ಅಹಂಕಾರ ಹೀಗೆ
ನನ್ನ ಅಧೀನವಾದ ಈ ಜಡ ಪ್ರಕೃತಿ ಎಂಟು ಬಗೆಯಾಗಿದೆ.
ಈ ಶ್ಲೋಕ ಭಗವಂತನ
ಪ್ರಪಂಚ ಸೃಷ್ಟಿಯ ವಿರಾಟ ರೂಪವನ್ನು ಸಮಷ್ಟಿಯಾಗಿ ತಿಳಿಸುತ್ತದೆ. ನಮಗೆ ತಿಳಿದಂತೆ ಸೃಷ್ಟಿ ಪೂರ್ವದಲ್ಲಿ ಈ ಸಂಪೂರ್ಣ ಜಗತ್ತು ಸೂಕ್ಷ್ಮ
ರೂಪದಲ್ಲಿ ಆ ಭಗವಂತನ ಉದರದಲ್ಲಿ ನೆಲೆಗೊಂಡಿದ್ದು, ನಂತರ ಭಗವಂತ ಈ ಸೃಷ್ಟಿಯನ್ನು ನಿರ್ಮಿಸಿದ. ಹೀಗೆ ಮೊದಲು ನಿರ್ಮಾಣವಾದುದು ಈ ಜಡ ಪ್ರಕೃತಿ. ಇಲ್ಲಿ
ಪಂಚಭೂತಗಳು(ಮಣ್ಣು, ನೀರು, ಬೆಂಕಿ, ಗಾಳಿ, ಆಗಸ) ಜೊತೆಗೆ ಮನಸ್ಸು, ಬುದ್ಧಿ ಮತ್ತು ಅಹಂಕಾರ. ಇವು ಒಟ್ಟಿಗೆ ಎಂಟು
ಬಗೆ. ಈ ಇಡೀ ಸ್ಥೂಲಪ್ರಪಂಚ ಮಣ್ಣು ನೀರು ಬೆಂಕಿ ಗಾಳಿ
ಆಕಾಶ ಇದರ ವಿಕಾರ. ಆದ್ದರಿಂದ ಈ ಪ್ರಪಂಚದಲ್ಲಿರುವ ಸಮಸ್ತ ಜಡಪದಾರ್ಥಗಳ ಮೂಲದ್ರವ್ಯ ಪಂಚಭೂತಗಳು.
ಇಲ್ಲಿ ನಮಗೆ ಒಂದು
ಪ್ರಶ್ನೆ ಕಾಡಬಹುದು. ಅದೇನೆಂದರೆ ಪಂಚಭೂತಗಳ ಸೃಷ್ಟಿಯಲ್ಲಿ ಆಕಾಶದ ಸೃಷ್ಟಿ ಅಂದರೇನು? ಎಂದು. ಮೂಲತಃ ಆಕಾಶದ ಸೃಷ್ಟಿ ವಾಸ್ತವ ಅಲ್ಲ ಇದು ಸಾಪೇಕ್ಷವಾಗಿ . ಅಂತರಿಕ್ಷ (Space) ಮೊದಲೇ ಇತ್ತು.
ಅದರಲ್ಲಿ ಭಗವಂತ ತನ್ನ ರೂಪವನ್ನು ಆವಿರ್ಭಾವ ಗೊಳಿಸುವುದೇ ಆಕಾಶ ಸೃಷ್ಟಿ. ಬಣ್ಣವಿಲ್ಲದ ಅಂತರಿಕ್ಷದಲ್ಲಿ ‘ಕಣ್ಣಿಗೆ ಕಾಣದ ನೀಲ ವರ್ಣದ(Ultraviolet)’ ಆಕಾಶ ಸೃಷ್ಟಿಯಾಯಿತು.(ಇದನ್ನು ಹದಿಮೂರನೇ ಶತಮಾನದಲ್ಲಿ ಮಧ್ವಾಚಾರ್ಯರು ಉಲ್ಲೇಖಿಸಿದ್ದಾರೆ) ಅಲ್ಲಿ
ಕಂಪನ ಉಂಟಾಗಿ ಅದರಿಂದ ಗಾಳಿ ಹುಟ್ಟಿತು. ಗಾಳಿಯ ಕಂಪನದಿಂದ ಬೆಂಕಿ ಹಾಗು ಬೆಂಕಿಯಿಂದ ನೀರಿನ ಸೃಷ್ಟಿಯಾಯಿತು. ಈ ನೀರು ಗಟ್ಟಿಯಾಗಿ ಕಾಲ ಕ್ರಮೇಣ ಭೂಮಿಯಾಗಿ ವಿಕಾರಗೊಂಡಿತು. ಹೀಗೆ
ಈ ಪಂಚಭೂತಗಳಿಂದ ಅನಂತ ವಸ್ತುಗಳ ನಿರ್ಮಾಣವಾಯಿತು. ಇದು ನಮ್ಮ ‘ಅನ್ನಮಯಕೋಶ’. ಬೆಂಕಿ ಗಾಳಿ ಆಕಾಶದಿಂದ ಪ್ರಾಣಮಯಕೋಶದ ಸೃಷ್ಟಿ. ಈ ಪ್ರಾಣಮಯಕೋಶದ ಒಳಗೆ ಮನಸ್ಸು ಮತ್ತು
ಬುದ್ಧಿಯಿಂದಾದ ಮನೋಮಯಕೋಶ. ನಂತರ ನಮ್ಮ ನೆನಪಿನ ಶಕ್ತಿಯ ಅಹಂಕಾರತತ್ವ(awareness of self, ಚಿತ್ತ, ಚೇತನ)ದಿಂದಾದ ವಿಜ್ಞಾನಮಯಕೋಶ ಸೃಷ್ಟಿಯಾಯಿತು. ಇಲ್ಲಿ ಮನಸ್ಸು ಸೃಷ್ಟಿಯಾಯಿತು
ಎಂದರೆ ಮನಸ್ಸಿನ ಅಭಿಮಾನಿ ದೇವತೆಯ ಸೃಷ್ಟಿಯಾಯಿತು ಎಂದರ್ಥ; ಭೂಮಿ ಸೃಷ್ಟಿಯಾಯಿತು ಎಂದರೆ ಈ ಜಡವಾದ ಭೂಮಿಯ ಜೊತೆಗೆ ಭೂಮಿಯ ಅಭಿಮಾನಿ ದೇವತೆಯ
ಸೃಷ್ಟಿಯಾಯಿತು ಎಂದರ್ಥ. ಅದೇ ರೀತಿ ವಾಯುವಿನ ಸೃಷ್ಟಿ ಎಂದಾಗ ಅಲ್ಲಿ ವಾಯುವಿನ ಜೊತೆಗೆ ನಲವತ್ತೊಂಬತ್ತು ದೇವತೆಗಳ ಸೃಷ್ಟಿಯಾಯಿತು ಎಂದರ್ಥ. ನಮಗೆ ತಿಳಿದಂತೆ ಭೂಮಿಯನ್ನು ಆವರಿಸಿರುವ ವಾಯುವಿನ ಪದರು ನಲವತ್ತೊಂಬತ್ತು. ಭೂಮಿಯಿಂದ ವಿವಿಧ ದೂರದಲ್ಲಿ ಗಾಳಿಯ ವಿವಿಧ
ಒತ್ತಡಕ್ಕನುಗುಣವಾಗಿ ಈ ವಿಭಾಗ. ಇದನ್ನು ನಿಯಮಿತವಾಗಿ ಆಯಾ ಅಭಿಮಾನಿ ದೇವತೆಗಳು ನಿರ್ವಹಿಸುತ್ತಾರೆ. (‘ಭಾರದ್ವಾಜ ಸಂಹಿತದಲ್ಲಿ ಈ ಬಗ್ಗೆ ಮತ್ತು ವಿಮಾನ ತಾಂತ್ರಿಕತೆ ಬಗ್ಗೆ
ಸಂಪೂರ್ಣ ವಿವರವನ್ನು ಕಾಣಬಹುದು). ಹೀಗೆ ಭಗವಂತನ ಅಧೀನವಾಗಿ ಅಷ್ಟರೂಪದ ಅಕ್ಷರಪ್ರಕೃತಿ ರೂಪುಗೊಂಡಿತು. ಈ ಅಷ್ಟ ವಿಧದ ಪ್ರಪಂಚದಲ್ಲಿ ಅಷ್ಟಾಕ್ಷರ ವಾಚ್ಯನಾಗಿ ಭಗವಂತ ತುಂಬಿದ.
ನಾದಸೃಷ್ಟಿಯ ಮೊದಲ
ಸೃಷ್ಟಿ ಓಂಕಾರ. ಓಂಕಾರದಲ್ಲಿ ಎಂಟು ಅಕ್ಷರಗಳಿವೆ. ನಾಭಿಯಿಂದ ಹೊರಟು ಉಚ್ಚಾರದ ಕೊನೆಯ ತನಕ ಒಟ್ಟು ಎಂಟು ಅಕ್ಷರಗಳು. ಅವುಗಳೆಂದರೆ:
ಅಕಾರ , ಉಕಾರ, ಮಕಾರ, ನಾದ, ಬಿಂದು, ಕಲೆ, ಶಾಂತ, ಅತಿಶಾಂತ. ಹೀಗೆ ಎಂಟು ಅಕ್ಷರದಿಂದ ವಾಚ್ಯನಾಗಿ; ವಿಶ್ವ, ತೈಜಸ, ಪ್ರಾಜ್ಞ, ತುರೀಯ , ಆತ್ಮ, ಅಂತರಾತ್ಮ, ಪರಮಾತ್ಮ ಮತ್ತು ಜ್ಞಾನಾತ್ಮ ಎನ್ನುವ ಎಂಟು ರೂಪದಲ್ಲಿ ಭಗವಂತ ಈ ಅಷ್ಟವಿಧ ಪ್ರಕೃತಿಯಲ್ಲಿ ತುಂಬಿದ. ಹೀಗೆ ಇಡೀ ಪ್ರಪಂಚ ಅಷ್ಟ ವಿಧದಲ್ಲಿ ವಿಕಾರಗೊಂಡಿತು.
(ಅಧ್ಯಾತ್ಮದಲ್ಲಿ ಪ್ರತಿಯೊಂದು ಸಂಖ್ಯಯ ಹಿಂದೆ
ಒಂದು ವೇದಾಂತವಿದೆ. ಸೃಷ್ಟಿ ಪ್ರಕ್ರಿಯೆಯಲ್ಲಿ
ಎಂಟರ ಮಹತ್ವವನ್ನು ಇಲ್ಲಿ ನೋಡಿದೆವು. ಬನ್ನಂಜೆಯವರ ‘ಅಂಕೆಯಲ್ಲಿ ಅಧ್ಯಾತ್ಮ’ ಎನ್ನುವ ಪುಟ್ಟ
ಪುಸ್ತಕ ಈ ವಿಷಯದ ಮೇಲೆ ಬೆಳಕು
ಚಲ್ಲುತ್ತದೆ).
· ಶ್ಲೋಕ - 05
ಅಪರೇಯಮಿತಸ್ತ್ವನ್ಯಾಂ
ಪ್ರಕೃತಿಂ ವಿದ್ಧಿ ಮೇ ಪರಾಮ್ ।
ಜೀವಭೂತಾಂ ಮಹಾಬಾಹೋ ಯಯೇದಂ ಧಾರ್ಯತೇ ಜಗತ್ ॥೫॥
ಜೀವಭೂತಾಂ ಮಹಾಬಾಹೋ ಯಯೇದಂ ಧಾರ್ಯತೇ ಜಗತ್ ॥೫॥
ಅಪರಾ ಇಯಮ್ ಇತಃ ತು
ಅನ್ಯಾಮ್ ಪ್ರಕೃತಿಮ್ ವಿದ್ಧಿ ಮೇ ಪರಾಮ್ ।
ಜೀವಭೂತಾಮ್ ಮಹಾಬಾಹೋ ಯಯಾ ಇದಮ್ ಧಾರ್ಯತೇ ಜಗತ್- ಎರಡು
ಪ್ರಕೃತಿಗಳಲ್ಲಿ ಇದು ಕೆಳಮಟ್ಟದ್ದು. ನನ್ನ ಅಧೀನವಾದ ಇನ್ನೊಂದು
ಪ್ರಕೃತಿ ಇದಕ್ಕಿಂತ ಮಿಗಿಲಾದದ್ದು. ಅದೇ ಚೇತನ ಪ್ರಕೃತಿ; ಶ್ರಿತತ್ವ. ಎಲ್ಲ ಜೀವರಿಗೆ ಆಸರೆಯಾಗಿ ಎಂದೆಂದೂ
ಇರುವಂಥದು. ಮಹಾವೀರ, ಅದು ಈ ಜಗವನ್ನು ಹೊತ್ತುಕೊಂಡಿದೆ.
ಅಚೇತನ ಸೃಷ್ಟಿಗೆ
ಒಬ್ಬ ನಿಮಿತ್ತ ಕಾರಣ ಮತ್ತು ಒಂದು ಉಪಾದಾನ ಕಾರಣ. ಜಡಪ್ರಕೃತಿ ಪ್ರಪಂಚಕ್ಕೆ ಉಪಾದಾನ ಕಾರಣ ಹಾಗು ಅದರ ಮೂಲಕ ಭಗವಂತ ಸಮಸ್ತ ಸೃಷ್ಟಿಗೆ
ನಿಮಿತ್ತ ಕಾರಣ. ಚೇತನದಲ್ಲಿ ಎರಡು ವಿಧ, ಚರ ಮತ್ತು ಅಚರ. ಅಚರವಾದ ಚೇತನ(ಉದಾ-ಮರ
ಗಿಡಗಳು)ದ ಸೃಷ್ಟಿಗೆ ಮೇಲೆ ಹೇಳಿದಂತೆ ಒಬ್ಬ ನಿಮಿತ್ತ ಕಾರಣ ಮತ್ತು
ಒಂದು ಉಪಾದಾನ ಕಾರಣ ಸಾಕು. ಆದರೆ ಚೇತನದಲ್ಲಿ ಚರವಾದ ಚೇತನ(ಅಂಡಜ ಮತ್ತು
ಜರಾಯು) ಸೃಷ್ಟಿಗೆ ಒಂದು ನಿಮಿತ್ತ ಕಾರಣ ಸಾಲದು. ಇಲ್ಲಿ ಎರಡು ನಿಮಿತ್ತ ಕಾರಣ ಬೇಕು. ಒಂದು ತಂದೆ, ಒಂದು ತಾಯಿ. ಎರಡು ಚೇತನದಿಂದ ಒಂದು ಚೇತನ ಸೃಷ್ಟಿ. ಇದರ ಪ್ರಾರಂಭ ಮೂಲ
ಸೃಷ್ಟಿಯಲ್ಲಿಯೇ ಆಗಿದೆ. ಹೀಗೆ ಎರಡು ಚೇತನ ಹಾಗು ಒಂದು ಜಡ ಸೇರಿ ಈ ಸಮಸ್ತ ಸೃಷ್ಟಿಯಾಗಿರುವುದು. ಹಿಂದೆ ಹೇಳಿದಂತೆ ವಸ್ತುತಃ ಪ್ರಳಯಕಾಲದಲ್ಲಿ ಇಡೀ ಪ್ರಪಂಚ ಭಗವಂತನ
ಉದರದಲ್ಲೇ ಇದ್ದದ್ದು. ಆದ್ದರಿಂದ ಅವನೇ ತಂದೆ, ಅವನೇ ತಾಯಿ. ಆದರೂ ಈ ಪ್ರಪಂಚದಲ್ಲಿರುವ ಜೀವ ಜಾತದ ಸೃಷ್ಟಿಗೆ ಮುಂದೆ
ಹೇಗೆ ತಂದೆ ತಾಯಿ ಎನ್ನುವ ಎರಡು ಚೇತನ ಬೇಕೋ ಅದನ್ನು ಸೃಷ್ಟಿಯ ಆದಿಯಲ್ಲೇ ಭಗವಂತ ಮಾಡಿದ. ಪ್ರಪಂಚದಲ್ಲಿ ಯಾವ ರೀತಿ ಜೀವದ ಸೃಷ್ಟಿ ಪ್ರಕ್ರಿಯೆ
ಮುಂದುವರಿಯುತ್ತದೋ ಅದೇ ರೀತಿ ಪ್ರಾರಂಭದಿಂದ ಆ ವ್ಯವಸ್ಥೆ ಮಾಡಿದ ಭಗವಂತ. ಅದರದ್ದೇ ಮುಂದುವರಿಕೆ ಈ ಸೃಷ್ಟಿ.
ಈ ಶ್ಲೋಕದಲ್ಲಿ ಕೃಷ್ಣ ಹೇಳುತ್ತಾನೆ “ನಾನು ಹಿಂದೆ ಹೇಳಿದ ಪ್ರಕೃತಿ ‘ಜಡಪ್ರಕೃತಿ’ ; ಆದರೆ ಅದಕ್ಕಿಂತ ಬಿನ್ನವಾದ ಮತ್ತು ಶ್ರೇಷ್ಠವಾದ ಇನ್ನೊಂದು ಪ್ರಕೃತಿ ಇದೆ” ಎಂದು. ಅದೇ ಇಡೀ ಪ್ರಪಂಚಕ್ಕೆ ಮಾತೃ ಸ್ಥಾನ ಕೊಟ್ಟಿರುವ ಚಿತ್ ಪ್ರಕೃತಿ.
ವೇದದಲ್ಲಿ ಹೇಳುವಂತೆ ಜಡಪ್ರಕೃತಿ ‘ಅಕ್ಷರ’, ಅದಕ್ಕಿಂತ ಭಿನ್ನವಾದ
ಚೇತನಪ್ರಕೃತಿ-‘ಪರಮಾಕ್ಷರ’. ಭಗವಂತ ‘ಪರತ-ಪರಮಾಕ್ಷರ’. ಹೀಗೆ ಭಗವಂತನಿಗೂ ಮತ್ತು ಪ್ರಪಂಚಕ್ಕೂ ಮಾಧ್ಯಮವಾಗಿ ಶ್ರೀತತ್ವ(ಶ್ರೀಲಕ್ಷ್ಮಿ)ವಿದೆ. ಈ ಕಾರಣದಿಂದ
ಲಕ್ಷ್ಮಿಯನ್ನು ಲೋಕಮಾತೆ ಎನ್ನುತ್ತಾರೆ. ಈ ಜಗತ್ತನ್ನು ಸೃಷ್ಟಿ ಮಾಡುವಾಗ ಜಡ ಪ್ರಕೃತಿಯನ್ನು ಉಪಾದಾನ ಕಾರಣವಾಗಿ ಬಳಸಿದರೆ, ಆ ಜಡವಾದ ಶರೀರ(ಪಿಂಡಾಂಡ)ದಲ್ಲಿ ಜೀವದ ಸೃಷ್ಟಿಯಾಗಬೇಕಾದರೆ ಜೀವಭೂತಳಾದ ಚೇತನಾ ಶಕ್ತಿ ಹೊಂದಿರುವ ಚಿತ್ ಪ್ರಕೃತಿಯನ್ನು ಕಾರಣವಾಗಿ ಬಳಸಿದ ಭಗವಂತ. ಹೀಗೆ ಜಗತ್ತಿನ ಮೊದಲ ಜೀವ ಚತುರ್ಮುಖನ ಸೃಷ್ಟಿ ಶ್ರಿತತ್ವದಿಂದಾಯಿತು.
ಹೀಗೆ ಜಗತ್ತಿನ
ಮೂಲದಲ್ಲೇ ಪ್ರಕೃತಿ ಮತ್ತು ಪುರುಷ ಎನ್ನುವ ಎರಡು ವಿಧದ
ಚೇತನವನ್ನು ನಾವು ಕಾಣುತ್ತೇವೆ. ಜೀವ ಸ್ವರೂಪದಲ್ಲೂ ಗಂಡು
ಮತ್ತು ಹೆಣ್ಣು ಎನ್ನುವ ಎರಡು ಪ್ರಭೇದವಿದೆ ಎನ್ನುವುದು ಸೃಷ್ಟಿಯ ಆದಿಯಿಂದಲೇ ತಿಳಿಯುತ್ತದೆ. ಪುರುಷ ಮತ್ತು ಪ್ರಕೃತಿ ಎನ್ನುವ ಭಗವಂತನ ಎರಡು ಮುಖದಿಂದ ಈ
ಸೃಷ್ಟಿಯಾಯಿತು. ಜಡಕ್ಕೆ ಲಿಂಗ ಭೇದವಿಲ್ಲ. ಆದರೂ ನಾವು ಕೆಲವು ಜಡ ವಸ್ತುವನ್ನು ಹೆಣ್ಣಾಗಿ ಮತ್ತು ಗಂಡಾಗಿ ಗುರುತಿಸುತ್ತೇವೆ. ಇದು ಆ ವಸ್ತುವಿನ ಅಭಿಮಾನಿ ದೇವತೆಯ
ಲಿಂಗಕ್ಕನುಗುಣವಾಗಿ ಗುರುತಿಸಲ್ಪಟ್ಟಿರುವುದು. ಉದಾಹರಣೆಗೆ ನದಿ: ನದಿಯ ಅಭಿಮಾನಿ ದೇವತೆಗಳಲ್ಲಿ ಹೆಚ್ಚಿನವರು ಸ್ತ್ರೀಲಿಂಗ; ಅದೇ ರೀತಿ ಭೂಮಿಯ ಅಭಿಮಾನಿ ದೇವತೆ ಕೂಡಾ ಹೆಣ್ಣು. ಈ ಕಾರಣಕ್ಕಾಗಿ ನದಿಯನ್ನು, ಭೂಮಿಯನ್ನು ನಾವು ತಾಯಿ ರೂಪದಲ್ಲಿ ಕಾಣುತ್ತೇವೆ.
ಹೀಗೆ ಜಗತ್ತಿನ ಮೂಲ
ಸಂಗತಿ ಭಗವಂತ(ಪುರುಷ) ಮತ್ತು ಆತನ ಅಧೀನವಾಗಿ ಜಡ ಪ್ರಕೃತಿ ಮತ್ತು ಚಿತ್ ಪ್ರಕೃತಿ. ಇವು ಸದಾ ನಿತ್ಯ -ಎಂದೂ ನಾಶವಿಲ್ಲದವು. ಆಕಾರದ(ವಿಕೃತಿಯ) ನಾಶವಾಗುತ್ತದೆ ಹೊರತು ಮೂಲದ್ರವ್ಯ ಉತ್ಪತ್ತಿ
ನಾಶ ಜಗತ್ತಿನಲ್ಲಿಲ್ಲ. ಆದ್ದರಿಂದ ಇವು ‘ಅ-ಕ್ಷರ’ ಸಂಗತಿಗಳು. ಈ
ಮೂರರಿಂದ ‘ಕ್ಷರ’ ವಾದ ಪ್ರಪಂಚ ಸೃಷ್ಟಿಯಾಗುತ್ತದೆ.
· ಶ್ಲೋಕ - 06
ಏತದ್ಯೋನೀನಿ ಭೂತಾನಿ
ಸರ್ವಾಣೀತ್ಯುಪಧಾರಯ ।
ಅಹಂ ಕೃತ್ಸ್ನಸ್ಯ ಜಗತಃ ಪ್ರಭವಃ ಪ್ರಳಯಸ್ತಥಾ ॥೬॥
ಅಹಂ ಕೃತ್ಸ್ನಸ್ಯ ಜಗತಃ ಪ್ರಭವಃ ಪ್ರಳಯಸ್ತಥಾ ॥೬॥
ಏತತ್ ಯೋನೀನಿ ಭೂತಾನಿ ಸರ್ವಾಣಿ ಇತಿ ಉಪಧಾರಯ ।
ಅಹಮ್ ಕೃತ್ಸ್ನಸ್ಯ ಜಗತಃ ಪ್ರಭವಃ ಪ್ರಳಯಃ ತಥಾ-ಈ
ಎರಡು ಪ್ರಕೃತಿಗಳಿಂದಲೆ ಎಲ್ಲ ಜೀವಿಗಳೂ ರೂಪುಗೊಂಡಿವೆ ಎಂದು ತಿಳಿ. ನಾನೇ ಎಲ್ಲ ಜಗದ ಹುಟ್ಟು-ಸಾವುಗಳಿಗೆ ಕಾರಣನಾಗಿದ್ದೇನೆ.
ಜಡ ಪ್ರಕೃತಿ ಮತ್ತು
ಚಿತ್ ಪ್ರಕೃತಿ ಇವೇ ಇಡೀ ಜಗತ್ತಿನ ಎಲ್ಲಾ ಜೀವಜಾತಕ್ಕೆ ಮೂಲ ಕಾರಣ. ಭಗವಂತ ಜೀವಜಾತದ ಹಿಂದೆ ತಂದೆಯಾಗಿ, ಲಕ್ಷ್ಮೀದೇವಿ ತಾಯಿಯಾಗಿ ನಿಂತು ಈ ಜಗತ್ತನ್ನು ಸೃಷ್ಟಿ ಮಾಡಿದರು. ತಾಯಿಯ
ಗರ್ಭದಲ್ಲಿ ಬೆಳೆಯುವ ಭ್ರೂಣದಂತೆ ಜಡಪ್ರಕೃತಿ ವಿಕಾರಗೊಂಡಿತು. ಹೀಗೆ ಚಿತ್ ಪ್ರಕೃತಿ ಜಡ ಪ್ರಕೃತಿಗೆ ರೂಪ ಕೊಟ್ಟಳು, ಕೊಟ್ಟು ಧಾರಣೆ ಮಾಡಿದಳು, ಅದೇ ಜಗತ್ತಾಯಿತು.
ಭಗವಂತನ ಶಕ್ತಿ
ಆಧಾನದಿಂದ, ಪ್ರೇರಣೆಯಿಂದ, ಜಡ ಮತ್ತು ಚಿತ್ ಪ್ರಕೃತಿಯ ಮೂಲಕ ಈ ಜಗತ್ತಿನ ಹುಟ್ಟಿಗೆ ಭಗವಂತ ಹೇಗೆ ಕಾರಣನೋ ಹಾಗೇ
ಇಡೀ ಜಗತ್ತಿನ ಪ್ರಳಯ ಕೂಡಾ ಭಗವಂತ. ಕೃಷ್ಣ ಹೇಳುತ್ತಾನೆ “ ಸಮಸ್ತ ಜಗತ್ತಿನ ಉತ್ಪತ್ತಿಗೆ ಮೂಲ ಕಾರಣ ನಾನು, ಜಗತ್ತಿನ ಸಂಹಾರಕ್ಕೆ ಕಾರಣ ನಾನು” ಎಂದು. ಈ ಜಗತ್ತಿನ ಹುಟ್ಟಿನ ಮೊದಲಿದ್ದವ, ಹುಟ್ಟಿಗೆ ಕಾರಣ, ಸಂಹಾರಕ್ಕೆ ಕಾರಣ, ಸಂಹಾರದ ನಂತರ ಇರುವವ ಆ ಭಗವಂತ.
ನಮ್ಮಲ್ಲಿ ಕೆಲವರು
ಕೇಳುವುದಿದೆ: ಜಡಪ್ರಕೃತಿಗೆ ನಿಯಾಮಕ ಶಕ್ತಿ- ಚೇತನಪ್ರಕೃತಿ, ಚೇತನ ಪ್ರಕೃತಿಯನ್ನು ಪ್ರೇರಣೆ ಮಾಡಿ ಸೃಷ್ಟಿ ಸಂಹಾರದಲ್ಲಿ
ತೊಡಗಿಸುವವ ‘ಪುರುಷ’ ನಾಮಕ ಭಗವಂತ. ಹಾಗಾದರೆ ಈ ಭಗವಂತನನ್ನು ನಿಯಂತ್ರಿಸುವವರು ಯಾರು? ಎಂದು. ಇದಕ್ಕೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಉತ್ತರಿಸುತ್ತಾನೆ.
· ಶ್ಲೋಕ - 07
ಮತ್ತಃ ಪರತರಂ
ನಾನ್ಯತ್ ಕಿಂಚಿದಸ್ತಿ ಧನಂಜಯ ।
ಮಯಿ ಸರ್ವಮಿದಂ ಪ್ರೋತಂ ಸೂತ್ರೇ ಮಣಿಗಣಾ ಇವ ॥೭॥
ಮಯಿ ಸರ್ವಮಿದಂ ಪ್ರೋತಂ ಸೂತ್ರೇ ಮಣಿಗಣಾ ಇವ ॥೭॥
ಮತ್ತಃ ಪರತರಂ
ನಾನ್ಯತ್ ಕಿಂಚಿದಸ್ತಿ ಧನಂಜಯ ।
ಮಯಿ ಸರ್ವಮಿದಂ
ಪ್ರೋತಂ ಸೂತ್ರೇ ಮಣಿಗಣಾ ಇವ-ಧನಂಜಯ, ನಾನಲ್ಲದೆ ಇನ್ನೊಂದು ಪರತರ ವಸ್ತು ಇಲ್ಲ. ಈ ಎಲ್ಲ ನನ್ನಲ್ಲೆ
ಹೆಣೆದುಕೊಂಡಿದೆ-ದಾರದಲ್ಲಿ ಮಣಿಗಳ ರಾಶಿ ಹೇಗೆ ಹಾಗೆ.
ಕೃಷ್ಣ ಹೇಳುತ್ತಾನೆ “ ನನ್ನನ್ನು ಮೀರಿ ನನ್ನಿಂದ ಹಿರಿದಾದ, ನನಗಿಂತ ಬೇರೆಯಾದ ಇನ್ನೊಂದು ವಸ್ತುವಿಲ್ಲ” ಎಂದು. ಚಿತ್ ಪ್ರಕೃತಿ, ಜಡ ಪ್ರಕೃತಿ, ಇದರಿಂದ ದೇಹ ಧಾರಣೆ ಮಾಡಿದ ಜೀವಜಾತ, ವಾಸಿಸುವ ಬ್ರಹ್ಮಾಂಡ, ಈ ಪಿಂಡಾಂಡ, ಎಲ್ಲವೂ ಕೂಡ ಭಗವಂತನಲ್ಲಿ ದಾರದಲ್ಲಿ ಮಣಿಗಳು ಹೆಣೆದುಕೊಂಡಂತೆ ಹೆಣೆದುಕೊಂಡಿವೆ. ಇಡೀ
ವಿಶ್ವವನ್ನು ಜೀವಜಾತವನ್ನು ಹೆಣೆದ ಸೂತ್ರ ಆ ಭಗವಂತ.
ಮುಂದೆ ಕೃಷ್ಣ
ಒಂದೊಂದು ವಸ್ತುವಿನಲ್ಲಿ ಯಾವರೀತಿ ಭಗವಂತನ ವಿಭೂತಿ ಅಡಗಿದೆ ಎನ್ನುವ ವಿಜ್ಞಾನವನ್ನು
ಸುವಿವರವಾಗಿ ವಿವರಿಸುತ್ತಾನೆ.
· ಶ್ಲೋಕ - 08
ರಸೋSಹಮಪ್ಸು ಕೌಂತೇಯ ಪ್ರಭಾSಸ್ಮಿ ಶಶಿಸೂರ್ಯಯೋಃ ।
ಪ್ರಣವಃ ಸರ್ವವೇದೇಷು ಶಬ್ದಃ ಖೇ ಪೌರುಷಂ ನೃಷು ॥೮॥
ಪ್ರಣವಃ ಸರ್ವವೇದೇಷು ಶಬ್ದಃ ಖೇ ಪೌರುಷಂ ನೃಷು ॥೮॥
ರಸಃ ಅಹಮ್ ಅಪ್ಸು
ಕೌಂತೇಯ ಪ್ರಭಾ ಅಸ್ಮಿ ಶಶಿ ಸೂರ್ಯಯೋಃ |
ಪ್ರಣವಃ ಸರ್ವವೇದೇಷು
ಶಬ್ದಃ ಖೇ ಪೌರುಷಮ್ ನೃಷು – ಕೌಂತೇಯ ನೀರಿನಲ್ಲಿ ರಸವಿರುವುದು ನನ್ನಿಂದ[ನೀರಿನಲ್ಲಿದ್ದು ರಸದ ಸವಿಯನ್ನುಣ್ಣಿಸುವುದರಿಂದ ‘ರಸ’ ನಾಮಕ.] ಚಂದ್ರ-ಸೂರ್ಯರಲ್ಲಿ ಬೆಳಕಿರುವುದು ನನ್ನಿಂದ [ಚಂದ್ರ –ಸೂರ್ಯರಲ್ಲಿದ್ದು ಬೆಳಗಿಸುವುದರಿಂದ ‘ಪ್ರಭಾ’ ನಾಮಕ.]ಎಲ್ಲ ವೇದಗಳಲ್ಲಿ ‘ಓಂಕಾರ’ ಸಾರವಾದದ್ದು ನನ್ನಿಂದ.[ಎಲ್ಲ ವೇದಗಳಲ್ಲಿದ್ದು ನಾನೇ ಸ್ತುತಿಸುವುದರಿಂದ ‘ಪ್ರಣವ’ ನಾಮಕ] ಆಗಸದಲ್ಲಿ ಸದ್ದು ಮೂಡುವುದು ನನ್ನಿಂದ [ಆಗಸದಲ್ಲಿ ಸದ್ದು
ಹೊರಡಿಸುವುದರಿಂದ ‘ಶಬ್ದ’ ನಾಮಕ.] ಗಂಡಸರಲ್ಲಿ ಬೀರ ನನ್ನಿಂದ[ಗಂಡಸರಲ್ಲಿದ್ದು ಬೀರವನ್ನಿತ್ತುದರಿಂದ ‘ಪೌರುಷ’ ನಾಮಕ].
ಭಗವಂತ ಈ
ಪ್ರಪಂಚವನ್ನು ಸೃಷ್ಟಿ ಮಾಡಿದ, ಆನಂತರ ಪ್ರಪಂಚದೊಳಗೆ ಪ್ರವೇಶ ಮಾಡಿದ ಎನ್ನುವುದನ್ನು ಶಾಸ್ತ್ರಗಳು ಹೇಳುತ್ತವೆ.
ಇಲ್ಲಿ ನಮಗೆ ಸ್ವಲ್ಪ ಗೊಂದಲವಾಗುತ್ತದೆ. “ಭಗವಂತ ಸರ್ವವ್ಯಾಪ್ತ , ಆತ ಪ್ರವೇಶ ಮಾಡುವುದು ಅಂದರೇನು?” ಇದು ನಮ್ಮ ಪ್ರಶ್ನೆ. ಇದು ಅರ್ಥವಾಗಬೇಕಾದರೆ ಸರ್ವವ್ಯಾಪ್ತ ಭಗವಂತನಿಗೆ ಅನಂತ ರೂಪ ಎನ್ನುವ
ವಿಚಾರವೂ ನಮಗೆ ತಿಳಿದಿರಬೇಕು. ಆತ ವ್ಯಾಪ್ತವಾದ ಒಂದು
ರೂಪದಲ್ಲಿ ಸರ್ವತ್ರ ಇದ್ದಾನೆ ಮತ್ತು ಒಂದೊಂದು ವಸ್ತುವಿನಲ್ಲೂ ವಿಶೇಷ ಶಕ್ತಿಪ್ರದನಾಗಿ, ವಿಶೇಷ ಶಕ್ತಿ ಅಭಿವ್ಯಂಜಕನಾದ ಒಂದು ವಿಭೂತಿ ರೂಪದಲ್ಲಿ ಅಲ್ಲಿ ಪ್ರವೇಶ ಮಾಡುತ್ತಾನೆ. ಹೀಗೆ
ಒಂದು ವಸ್ತುವಿನಲ್ಲೇ ಭಗವಂತನ ಅನೇಕ ರೂಪಗಳಿರಬಹುದು. ಒಂದು ವಸ್ತುವಿಗೆ ಆ ಶಕ್ತಿವಿಶೇಷವನ್ನು ಕೊಟ್ಟ ಭಗವಂತನ ರೂಪವನ್ನು ಆತನ ವಿಭೂತಿ ರೂಪ ಎನ್ನುತ್ತಾರೆ, ಇದು ಅವನ ಲೀಲೆ. ಭಗವಂತ ವಿಭೂತಿ ರೂಪದಲ್ಲಿ ಒಂದು ವಸ್ತುವಿನೊಳಗೆ ಪ್ರವೇಶಿಸಿ, ಆ ವಸ್ತುವಿನಲ್ಲಿ ಒಂದು ಶಕ್ತಿವಿಶೇಷವನ್ನು ಅಭಿವ್ಯಕ್ತಗೊಳಿಸುತ್ತಾನೆ-ಇದು ವಿಭೂತಿ
ವಿಜ್ಞಾನ.
ಈ ಶ್ಲೋಕದ
ಪ್ರಾರಂಭದಲ್ಲಿ ಕೃಷ್ಣ ಪಂಚಭೂತಗಳಲ್ಲಿ ಬಹಳ ಮುಖ್ಯವಾದ ನೀರಿನಲ್ಲಿನ ತನ್ನ ವಿಭೂತಿಯನ್ನು ವಿವರಿಸುತ್ತಾನೆ. ನಮ್ಮ ಉಪಾಸನೆಯಲ್ಲಿ ಭಗವಂತನನ್ನು ಜಲದಲ್ಲಿ
ಉಪಾಸನೆ ಮಾಡುವುದು ಬಹಳ ವಿಶೇಷ. ಎಲ್ಲಾ
ಅನುಷ್ಠಾನಕ್ಕೂ(ಸ್ನಾನ, ಅರ್ಗ್ಯ, ತರ್ಪಣ ಇತ್ಯಾದಿ) ಕೂಡಾ ಬೇಕಾಗಿರುವುದು ನೀರು. ಅರ್ಘ್ಯಂ ಸಮರ್ಪಯಾಮಿ। ಗಂದಾಕ್ಷತಂ ಸಮರ್ಪಯಾಮಿ। ಪುಷ್ಪಂ ಸಮರ್ಪಯಾಮಿ। ನೈವೇದ್ಯಂ ಸಮರ್ಪಯಾಮಿ। ತಾಂಬೂಲಂ
ಸಮರ್ಪಯಾಮಿ। ಎಂದು ಸಮರ್ಪಣೆ ಮಾಡುವುದು ಒಂದು ಉದ್ಧರಣೆ ನೀರು! ಹೀಗೆ ಏನೂ ಇಲ್ಲದಾಗ
ಎಲ್ಲವುದಕ್ಕೂ ಪ್ರತಿನಿಧಿಯಾಗಿ ನೀರನ್ನು ಅರ್ಪಿಸುತ್ತೇವೆ. ಏಕೆಂದರೆ ಭಗವಂತನ ಸೃಷ್ಟಿಯ ವಿಸ್ತಾರಕ್ಕೆ ನೀರು ಮೂಲದ್ರವ್ಯ. ಅದನ್ನು ಭಕ್ತಿಯಿಂದ ಅರ್ಪಿಸಿದರೆ ಎಲ್ಲವನ್ನು ಅರ್ಪಿಸಿದಂತೆ.
ಇಲ್ಲಿ ಕೃಷ್ಣ
ಹೇಳುತ್ತಾನೆ “ರಸಃ ಅಹಮ್ ಅಪ್ಸು ಕೌಂತೇಯ” ಎಂದು. ಅಂದರೆ “ರಸ ನಾಮಕನಾಗಿ ನೀರಿನಲ್ಲಿ ನಾನು ರಸವಾಗಿದ್ದೇನೆ” ಎಂದು. ಸಂಸ್ಕೃತದಲ್ಲಿ ರಸ ಅಂದರೆ ಸಾರಭೂತವಾದದ್ದು, ಹರಿಯುವಿಕೆ, ಇತ್ಯಾದಿ ಅನೇಕ ಅರ್ಥಗಳಿವೆ. ಹರಿಯುವ ಶಕ್ತಿ ನೀರಿನ ವಿಶಿಷ್ಟ ಗುಣ(exclusive quality). ಹರಿಯುವ ಶಕ್ತಿಯಾಗಿ ‘ಹರಿ’ ನೀರಿನಲ್ಲಿ ಕುಳಿತಿರುವುದರಿಂದ ನೀರಿಗೆ ಆ ಶಕ್ತಿ ಬಂತು. ಉಪಾಸನೆಯಲ್ಲಿ ಈ ಜ್ಞಾನ
ಬಹಳ ಮುಖ್ಯ. ಶಾಸ್ತ್ರೀಯವಾಗಿ ಗುಹ್ಯ ಭಾಷೆಯಲ್ಲಿ ನೀರಿಗೆ ‘ವಿಷ್ಣುಃ’ ಎನ್ನುತ್ತಾರೆ. ‘ವಿಷಂತಿ ಅತ್ರ ಇತಿ ವಿಷ್ಣುಃ’- ಅಂದರೆ ಯಾವುದರ ಒಳಗೆ ಹೋಗಿ ಹೊರಗೆ ಬರಲು
ಸಾಧ್ಯವೋ ಅದು ವಿಷ್ಣುಃ.
ಭಗವಂತ ನೀರಿನಲ್ಲಿ
ರಸವಾಗಿ(ರುಚಿಯಾಗಿ) ಕುಳಿತ. ನಮಗೆ ರುಚಿಯ ಅನುಭವವನ್ನು ಕೊಟ್ಟು ಅವನು ನೀರಿನಲ್ಲಿ ರಸವಾಗಿ ಕೂರದೇ ಇದ್ದಿದ್ದರೆ ನಮಗೆ ನಾಲಿಗೆ ಇದ್ದೂ
ಏನೂ ಉಪಯೋಗವಾಗುತ್ತಿರಲಿಲ್ಲ. ಪ್ರತಿಯೊಂದರಲ್ಲೂ
ಸಾರಭೂತವಾದ ಇಂತಹ ಅಸಾಧಾರಣ ಶಕ್ತಿ ಏನಿದೆ-ಅದು ಆ ಭಗವಂತನ ವಿಭೂತಿ. ಆತ ರಸಃ-‘ರ’ ಎಂದರೆ ಆನಂದ ; ‘ಸ’ ಎಂದರೆ ಜ್ಞಾನ-ಆದ್ದರಿಂದ ರಸಃ ನಾಮಕ ಭಗವಂತ ಜ್ಞಾನಾನಂದಪೂರ್ಣ.
ನೀರಿನ ನಂತರ ಕೃಷ್ಣ
ಸೂರ್ಯ ಮತ್ತು ಚಂದ್ರನ ಉದಾಹರಣೆಯನ್ನು ತೆಗೆದುಕೊಳ್ಳುತ್ತಾನೆ. ಕೃಷ್ಣ ಹೇಳುತ್ತಾನೆ-“ಪ್ರಭಾ ಅಸ್ಮಿ ಶಶಿ ಸೂರ್ಯಯೋಃ” ಎಂದು. ಅಂದರೆ “ಸೂರ್ಯ ಚಂದ್ರರೊಳಗೆ ಪ್ರಭಾ ನಾಮಕನಾಗಿದ್ದು ಬೆಳಗಿಸುವವ ನಾನು”. ನಮಗೆ ಪ್ರಾಣಶಕ್ತಿ ಹರಿದು ಬರುವುದು ಸೂರ್ಯ ಮತ್ತು ಚಂದ್ರನಿಂದ. ಮನುಷ್ಯನ ಜೀವನಕ್ಕೆ ವಿಶೇಷವಾಗಿ
ಸೌರ ಶಕ್ತಿ ಕಾರಣವಾದರೂ ಕೂಡಾ ಸಮಸ್ತ ವನಸ್ಪತಿಗಳಿಗೆ ಚಂದ್ರನ ವಿಶೇಷ ಸಂಬಂಧವಿದೆ. ಈ ಕಾರಣಕ್ಕಾಗಿ ವನಸ್ಪತಿ ತಜ್ಞರು ಯಾವ ಯಾವ ಮರದಲ್ಲಿ ಎಂತೆಂಥಾ
ಶಕ್ತಿ ಬೆಳದಿಂಗಳಿಂದ ನಿಷ್ಪನ್ನವಾಗುತ್ತದೆ ಎನ್ನುವುದನ್ನು ಅಧ್ಯಯನ
ಮಾಡಿ ಚಂದ್ರನ ಗತಿಗನುಗುಣವಾಗಿ ವನಸ್ಪತಿಗಳನ್ನು ಕತ್ತರಿಸುತ್ತಿದ್ದರು. ಹಿಂದಿನ ಕಾಲದಲ್ಲಿ ಮನೆ ಕಟ್ಟಲು ಬಳಸುವ ಮರವನ್ನು ಚಂದ್ರನ ಗತಿಗನುಗುಣವಾಗಿ ಅಧ್ಯಯನ
ಮಾಡಿ ಕತ್ತರಿಸುತ್ತಿದ್ದರು. ಇದನ್ನು ತಿಳಿಯದೇ ಮರವನ್ನು ಕತ್ತರಿಸಿದರೆ ಆ ಮರ ಬಾಳಿಕೆ ಬಾರದು. ಭಗವಂತ ಚಂದ್ರ ಸೂರ್ಯರಿಂದ ನಿರಂತರ ಶಕ್ತಿ
ಹರಿಸುವುದರಿಂದ ಈ ಜೀವಲೋಕ ಬದುಕಿದೆ. ಸೂರ್ಯ ಚಂದ್ರರ ಶಕ್ತಿಪಾತವಾಗದೇ ಇದ್ದರೆ ನಮಗೆ ಬದುಕೇ ಇಲ್ಲ. ಇದಕ್ಕಾಗಿ ಭಗವಂತನನ್ನು ‘ಕೇಶವ’ ಎನ್ನುತ್ತಾರೆ.
ಸೂರ್ಯ ಚಂದ್ರರ ಕಿರಣದಲ್ಲಿದ್ದು, ಆ ಪ್ರಕಾಶದ ಮೂಲಕ, ಬಿಸಿಲು ಮತ್ತು ಬೆಳದಿಂಗಳ ಮೂಲಕ ನಮಗೆ ಬದುಕನ್ನು ಕೊಡುವವ ಕೇಶವ. ಚಂದ್ರನ ಬೆಳಕಿನಲ್ಲಿ, ಸೂರ್ಯನ ಬೆಳಕಿನಲ್ಲಿ ಆ ಬೆಳಗುವ ಶಕ್ತಿಯನ್ನು ಕೊಟ್ಟು, ಆ ಬೆಳಕಿನಲ್ಲಿ ಬೆಳಕಾಗಿ ‘ಪ್ರಭಾ’ ಶಬ್ದವಾಚ್ಯ ಭಗವಂತ ಕೂತಿದ್ದಾನೆ. ‘ಪ್ರ’ ಎಂದರೆ ಪ್ರಕೃಷ್ಟವಾದ, ‘ಭ’ ಎಂದರೆ ಜ್ಞಾನಾನಂದಮಯವಾದ. ಭಗವಂತ ಜ್ಞಾನಾನಂದಮಯವಾದ ಬೆಳಕಾಗಿ ಸೂರ್ಯ ಚಂದ್ರರಲ್ಲಿದ್ದು ಜೀವಜಾತಕ್ಕೆ ನಿರಂತರ ಪ್ರಾಣಶಕ್ತಿಯನ್ನು ಹರಿಸುತ್ತಿದ್ದಾನೆ.
ಕೃಷ್ಣ ಮುಂದುವರಿದು
ಹೇಳುತ್ತಾನೆ “ಎಲ್ಲಾ ವೇದಗಳಲ್ಲೂ, ವೇದ ಶಬ್ದ ವಾಚ್ಯನಾಗಿ ನಾನು ತುಂಬಿದ್ದೇನೆ” ಎಂದು. ‘ವೇದ’ ಎಂದರೆ 'ಅರಿವು ಕೊಡುವಂತಹದ್ದು' ಎಂದರ್ಥ. ಎಲ್ಲರಿಗೂ ಅರಿವು ಕೊಡುವವ ಭಗವಂತ. ಸ್ವಯಂ ಪೂರ್ಣನಾಗಿ ಸರ್ವರಿಗೂ ಜ್ಞಾನಪ್ರದನಾಗಿ, ಸರ್ವಶಬ್ದವಾಚ್ಯನಾಗಿ, ಸರ್ವ ವೇದಗಳಲ್ಲಿ ಭಗವಂತ ನೆಲೆಸಿದ್ದಾನೆ. ವೇದದ
ಅರ್ಥ ತಿಳಿದವನ ಬದುಕು ಸದಾ ಮಂಗಳಮಯ. ಅಂತಹ ವೇದದ ಸಾರ 'ಓಂಕಾರ'-ಅದೇ ಪ್ರಣವಃ.
ಇಲ್ಲಿ ನಾವು ಒಂದು
ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು. ಓಂಕಾರ ಸರ್ವ ವೇದಗಳ ಸಾರ ಎನ್ನುತ್ತಾರೆ. ಅದು ಹೇಗೆ ಎಂದು. ವೇದಗಳು ಅನೇಕ. ಋಗ್ವೇದದಲ್ಲಿ 24 ಶಾಖೆ, ಯಜುರ್ವೇದದಲ್ಲಿ 101 ಶಾಖೆ, ಸಾಮವೇದದಲ್ಲಿ 1000 ಶಾಖೆ, ಅಥರ್ವವೇದದಲ್ಲಿ 12 ಶಾಖೆ. ಹೀಗೆ ಒಟ್ಟು 1137 ಸಂಹಿತೆಗಳು. ಅದಕ್ಕೆ ಅಷ್ಟೇ ಬ್ರಾಹ್ಮಣಗಳು, ಅರಣ್ಯಕಗಳು, ಉಪನಿಷತ್ತುಗಳು. ಹೀಗೆ ವೇದವೆಂದರೆ ವಿಪುಲವಾದ ವೈದಿಕ ವಾಙ್ಮಯ. ಎಷ್ಟೇ
ವೇದಗಳಿದ್ದರೂ ಕೂಡಾ ಮೂಲತಃ ವೇದದಲ್ಲಿ ಪ್ರಮುಖವಾಗಿ ಮೂರು
ವಿಭಾಗವಿದೆ. ಪದ್ಯರೂಪ(ಋಗ್ವೇದ), ಗದ್ಯರೂಪ(ಯಜುರ್ವೇದ)
ಮತ್ತು ಗಾನರೂಪ(ಸಾಮವೇದ). ಈ ಮೂರು ವೇದಗಳ ಮೂರು
ಅಕ್ಷರಗಳನ್ನು ತೆಗೆದುಕೊಂಡು ನಿರ್ಮಾಣವಾಗಿರುವುದು ಓಂಕಾರ. “ಓಂಕಾರಕ್ಕೆ ಸಾರತ್ವವನ್ನು ಕೊಟ್ಟು ಸಾರಭೂತನಾಗಿ ‘ಪ್ರಣವಃ’ ಶಬ್ದವಾಚ್ಯನಾಗಿ ನಾನು ಓಂಕಾರದಲ್ಲಿ
ನೆಲೆಸಿದ್ದೇನೆ” ಎನ್ನುತ್ತಾನೆ ಕೃಷ್ಣ. ಇದು ಬಹಳ ವಿಚಾರಗರ್ಭಿತ
ಸಂಗತಿ. ಪ್ರಾಚೀನರು ಮೂರು ವೇದಗಳನ್ನು ಭಟ್ಟಿಇಳಿಸಿ ಅದರ ಸಾರವಾದ ಮೂರು ವರ್ಗಗಳ ಒಂದು ಸೂಕ್ತ ಮಾಡಿದರು. ಅದೇ ಪುರುಷಸೂಕ್ತ. ಈ ಕಾರಣದಿಂದ ವೇದಸೂಕ್ತಗಳಲ್ಲೇ ಪುರುಷಸೂಕ್ತ
ಅತ್ಯಂತ ಶ್ರೇಷ್ಠವಾದ ಸೂಕ್ತ. ಈ ಸೂಕ್ತವನ್ನು ಮತ್ತೆ ಭಟ್ಟಿಇಳಿಸಿ ಮೂರು ಪಾದಗಳ ಗಾಯತ್ರಿ ಮಂತ್ರ(ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್)
ನಿರ್ಮಾಣವಾಯಿತು. ‘ತತ್ ಸವಿತುರ್ ವರೇಣ್ಯಂ’ ಋಗ್ವೇದಕ್ಕೆ ಸಂಬಂಧಪಟ್ಟಿದ್ದು, ‘ಭರ್ಗೋ ದೇವಸ್ಯ ಧೀಮಹಿ’ ಯಜುರ್ವೇದಕ್ಕೆ ಸಂಬಂಧಪಟ್ಟಿದ್ದು, ‘ಧೀಯೊ ಯೊ ನಃ ಪ್ರಚೋದಯಾತ್’ ಸಾಮವೇದಕ್ಕೆ ಸಂಬಂಧಪಟ್ಟಿದ್ದು. ಹೀಗೆ ಮೂರು ವೇದಗಳ ಸಾರ ಗಾಯತ್ರಿಯ ಮೂರುಪಾದಗಳುಳ್ಳ ಒಂದು ಮಂತ್ರದಲ್ಲಿದೆ.
ಇದಕ್ಕಾಗಿ ಗಾಯತ್ರಿ ಮಂತ್ರವನ್ನು ‘ವೇದಮಾತ’ ಎನ್ನುತ್ತಾರೆ. ಈ
ಗಾಯತ್ರಿಯಿಂದ ರಸ ತೆಗೆದಾಗ ಮೂರು ಪಾದಗಳಿಂದ ಮೂರು ಪದಗಳುಳ್ಳ ವ್ಯಾಹೃತಿ “ಭೂಃ ಭುವಃ ಸ್ವಃ”; ಈ ಮೂರು ಪದಗಳ ಸಾರ ಮೂರು ಅಕ್ಷರದ(ಅ, ಉ, ಮ) ಓಂಕಾರ-ॐ.
ಓಂಕಾರದಲ್ಲಿ ‘ಅ’ಕಾರ ಋಗ್ವೇದಕ್ಕೆ, ‘ಉ’ಕಾರ ಯಜುರ್ವೇದಕ್ಕೆ ಮತ್ತು ‘ಮ’ಕಾರ ಸಾಮವೇದಕ್ಕೆ ಸಂಬಂಧಪಟ್ಟಿದ್ದು. ಋಗ್ವೇದ " ಅಗ್ನಿಮೀ”ಳೇ ಪುರೋಹಿತಂ ಯಜ್ಞಸ್ಯ ದೇವಂ-ಋತ್ವಿಜಂ” | ಹೋತಾ”ರಂ ರತ್ನ ಧಾತಮಂ |..." ಎಂದು ‘ಅ’ ಕಾರದಿಂದ ಪ್ರಾರಂಭವಾಗುತ್ತದೆ. ಮತ್ತು “....ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ಹಃ: | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ ॥” ಎಂದು ‘ಇ’ಕಾರದಲ್ಲಿ ಕೊನೆಗೊಳ್ಳುತ್ತದೆ. ಅಲ್ಲಿಂದ ಮುಂದುವರಿದು ಯಜುರ್ವೇದ “ಇಷೇ ತ್ವೋರ್ಜೆ ತ್ವಾ …” ಎಂದು ‘ಇ’ಕಾರದಿಂದ ಪ್ರಾರಂಭವಾಗಿ “……..ಸಮುದ್ರೋ ಬಂಧುಃ” ಎಂದು ‘ಉ’ಕಾರದಲ್ಲಿ ಕೊನೆಗೊಳ್ಳುತ್ತದೆ. ಹೀಗೆ ಓಂಕಾರದಲ್ಲಿನ ‘ಅ’ಕಾರ ಮತ್ತು ‘ಉ’ಕಾರ ಋಗ್ವೇದ ಮತ್ತು ಯಜುರ್ವೇದವನ್ನು
ಪೂರ್ಣವಾಗಿ ಸೂಚಿಸುವ ಸಂಕ್ಷೇಪಣಾ(abbreviation)ರೂಪ. ಇಲ್ಲಿಂದ ಮುಂದೆ ಸಾಮವೇದ. ಸಾಮವೇದ “ಅಗ್ನ ಆ ಯಾಹಿ ………” ಎಂದು ‘ಅ’ಕಾರದಿಂದ ಆರಂಭವಾಗಿ “……ಬ್ರ್ಹಸ್ಪತಿರ್ದಧಾತು” ಎಂದು ‘ಉ’ಕಾರದಲ್ಲಿ ಕೊನೆಗೊಳ್ಳುತ್ತದೆ. ಆದ್ದರಿಂದ
ಇಲ್ಲಿ ‘ಮ’ ಕಾರ ಬಂದಿಲ್ಲ. ಆದರೆ ನಮಗೆ ತಿಳಿದಂತೆ ಸಾಮವೇದ ನಾದ ರೂಪದಲ್ಲಿದೆ. ಓಂಕಾರದಲ್ಲಿ ಕೂಡಾ ‘ಮ’ ಎನ್ನುವುದು ನಾದರೂಪದಲ್ಲಿ ಹೊರ ಹೊಮ್ಮುವ ಅಕ್ಷರ- ಅದು ಸಂಗೀತ. ಹೀಗೆ ಓಂಕಾರ ವೇದದ
ಸಂಕ್ಷೇಪಣಾರೂಪ ಬೀಜಾಕ್ಷರ. ಇದು ನಮಗೆ ವೇದವನ್ನು ಗುರುತಿಸುವ
ಮಾರ್ಗದರ್ಶಿ. ಆದ್ದರಿಂದ ಇದು ಭಗವಂತನನ್ನು ಸ್ತೋತ್ರ ಮಾಡುವ ಮಂತ್ರಗಳಲ್ಲಿ ಅತ್ಯಂತ ಪ್ರಕೃಷ್ಟವಾದುದ್ದು. ಇದಕ್ಕಿಂತ ದೊಡ್ಡ ಸ್ತೋತ್ರಮಾಡುವ ಶಬ್ದ ಈ
ಪ್ರಪಂಚದಲ್ಲಿಲ್ಲ.
ಒಂದು ಮಂತ್ರದ
ಕೊನೆಯಲ್ಲಿ ಹೇಳುವ ಓಂಕಾರಕ್ಕೆ ವ್ಯಾಕರಣದ ಪರಿಭಾಷೆಯಲ್ಲಿ ‘ಪ್ರಣವಃ’ ಎನ್ನುತ್ತಾರೆ. ಆದಿಯಿಂದ ಅಂತದ ತನಕ ಸಮಸ್ತ ನಾಮ
ಪ್ರತಿಪಾದ್ಯ ‘ಭಗವಂತ’ ಎಂದು ತೋರಿಸುವುದಕ್ಕೆ ಓಂಕಾರವನ್ನು ಆದಿ-ಅಂತದಲ್ಲಿ ಉಚ್ಛಾರ ಮಾಡುತ್ತಾರೆ. ಈ ಕಾರಣಕ್ಕಾಗಿ ಮಂತ್ರದ ಆದಿಯಲ್ಲಿ ಮತ್ತು ಅಂತದಲ್ಲಿ ಬಳಸುವ
ಓಂಕಾರವನ್ನು ಎಂದೂ ಪ್ರತ್ಯೇಕವಾಗಿ ಹೇಳಬಾರದು. ಉದಾಹರಣೆಗೆ ವಿಷ್ಣು ಸಹಸ್ರನಾಮದ ಕೊನೆಯಲ್ಲಿ “ಸರ್ವಪ್ರಹರಣಾಯುಧಃ ಓಂ ನಮ ಇತಿ” ಎಂದು ಹೇಳದೆ “ಸರ್ವಪ್ರಹರಣಾಯುಧೋಂ ನಮ ಇತಿ” ಎಂದು ಹೇಳಬೇಕು. ಆಯುಧಃ ಎನ್ನುವಲ್ಲಿನ ವಿಸರ್ಗ(ಃ)ವನ್ನು ತೆಗೆದು ಅಲ್ಲಿ
‘ಓಂ’ ಸೇರಿಸಿ ಅದನ್ನು ಸಮಸ್ತವಾಗಿ ಹೇಳಬೇಕು.
“ವೇದದ ಸಾರಭೂತವಾದ ‘ಪ್ರಣವಃ’ ನಾನು” ಎನ್ನುತ್ತಾನೆ ಕೃಷ್ಣ. ಪ್ರಣವಃ ವಿಸ್ತೃತಯಾದಾಗ ವ್ಯಾಹೃತಿ, ವ್ಯಾಹೃತಿ ವಿಸ್ತಾರವಾಗಿ ಗಾಯತ್ರಿ, ಗಾಯತ್ರಿ ವಿಸ್ತಾರವಾಗಿ ಕುರುಡ ಸೂಕ್ತ, ನಂತರ ಮೂರು ವೇದಗಳು, ಅಲ್ಲಿಂದ ಸಮಸ್ತ ವೇದಗಳು. ಹೀಗೆ ಪ್ರಣವದಲ್ಲಿ, ವ್ಯಾಹೃತಿಯಲ್ಲಿ, ಪುರುಷ ಸೂಕ್ತದಲ್ಲಿ, ಸಮಸ್ತವೇದಗಳಲ್ಲಿ ಭಗವಂತ ನೆಲೆಸಿದ್ದಾನೆ.
ವೇದದ ಶಬ್ದಗಳಿಂದಲೇ
ಹುಟ್ಟಿ ಬಂದ ಪ್ರಪಂಚದ ಎಲ್ಲಾ ಶಬ್ದದಲ್ಲೂ, ಎಲ್ಲಾ ಲೌಕಿಕ ನಾದದಲ್ಲೂ ತುಂಬಿದ ಭಗವಂತ, ಆಕಾಶದಲ್ಲಿ ಅನಂತ ಶಬ್ದಗಳನ್ನೂ, ಅನಂತ ನಾದಗಳನ್ನು ಸೃಷ್ಟಿ ಮಾಡಿದ. ನಮಗೆ ಶಬ್ದದಿಂದ ಅನಂತ ಅನುಭವವನ್ನು
ಕೊಟ್ಟು, ಆ ಶಬ್ದವನ್ನು ಗ್ರಹಿಸುವ ಮತ್ತು ಗ್ರಹಿಸಿ ಪುನರುಚ್ಛರಿಸುವ ವಿಶೇಷ ಶಕ್ತಿಯನ್ನು
ಕರುಣಿಸಿದ. ಜ್ಞಾನದ ಮೂಲಕ ಈ ಶಬ್ದ ನಾಮಕ ಭಗವಂತನನ್ನು ತಿಳಿಯುವ ವಿಶೇಷ ಶಕ್ತಿ ಮಾನವನಿಗೆ ಭಗವಂತನ ವಿಶೇಷ ಕೊಡುಗೆ. ಜೀವಲೋಕಕ್ಕೆ ನಾನಾ ವಿಧದ ಪೌರುಷವನ್ನು ಕೊಟ್ಟ
ಭಗವಂತ, ‘ಪುರುಷ’ ಶಬ್ದ ವಾಚ್ಯನಾಗಿ ಮಾನವರ ಬಹುವಿಧ ಪೌರುಷದಲ್ಲಿ ತುಂಬಿದ.
· ಶ್ಲೋಕ - 09
ಪುಣ್ಯೋ ಗಂಧಃ
ಪೃಥಿವ್ಯಾಂ ಚ ತೇಜಶ್ಚಾಸ್ಮಿ ವಿಭಾವಸೌ ।
ಜೀವನಂ ಸರ್ವಭೂತೇಷು ತಪಶ್ಚಾಸ್ಮಿ ತಪಸ್ವಿಷು ॥೯॥
ಜೀವನಂ ಸರ್ವಭೂತೇಷು ತಪಶ್ಚಾಸ್ಮಿ ತಪಸ್ವಿಷು ॥೯॥
ಪುಣ್ಯಃ ಗಂಧಃ
ಪೃಥಿವ್ಯಾಮ್ ಚ ತೇಜಃ ಚ ಅಸ್ಮಿ ವಿಭಾವಸೌ ।
ಜೀವನಮ್ ಸರ್ವ ಭೂತೇಷು ತಪಃ ಚ ಅಸ್ಮಿ ತಪಸ್ವಿಷು –ಮಣ್ಣಿನಲ್ಲಿ ನರುಗಂಪೂ ನನ್ನಿಂದ.
[ಪವಿತ್ರನಾಗಿ ಮಣ್ಣಿನಲ್ಲಿದ್ದು ಗಂಧದ ಅರಿವು ನೀಡುವುದರಿಂದ ‘ಪುಣ್ಯ’ ಮತ್ತು ‘ಗಂಧ’ ನಾಮಕ]. ಬೆಂಕಿಯಲ್ಲಿ ಸುಡುವ ಶಕ್ತಿಯೂ ನನ್ನಿಂದ.[ಬೆಂಕಿಯಲ್ಲಿದ್ದು ಸುಡುವವನಾದ್ದರಿಂದ ‘ತೇಜಸ್’ ನಾಮಕ]. ಎಲ್ಲ
ಜೀವಿಗಳಲ್ಲಿ ಬದುಕು ನನ್ನಿಂದ. [ಎಲ್ಲ ಜೀವಿಗಳಲ್ಲಿದ್ದು ಬದುಕಿಸುವುದರಿಂದ ‘ಜೀವನ’ನಾಮಕ]. ತಾಪಸರಲ್ಲಿ ತಪಃಶಕ್ತಿ ನನ್ನಿಂದ. [ತಾಪಸರಲ್ಲಿದ್ದು ತಪದ ಶಕ್ತಿ ನೀಡುವುದರಿಂದ ‘ತಪಸ್’ ನಾಮಕ].
ಕೃಷ್ಣ ಹೇಳುತ್ತಾನೆ “ಪುಣ್ಯೋ ಗಂಧಃ ಪೃಥಿವ್ಯಾಂ”- ನೆಲದಲ್ಲಿ ಸುಗಂಧ ನನ್ನಿಂದ ಎಂದು. ಯಾವ ಗಂಧ ನಮ್ಮ ಮೂಗಿಗೆ ಅಹ್ಲಾದವನ್ನು ಕೊಡುತ್ತದೋ ಅದು ‘ಪುಣ್ಯ ಗಂಧ’. ಇಲ್ಲಿ ಪುಣ್ಯ ಎಂದರೆ ಪವಿತ್ರ ಅಥವಾ ಸುಂದರ ಎನ್ನುವ
ಅರ್ಥವನ್ನು ಕೊಡುತ್ತದೆ. ಈ ಭೂಮಿಯಲ್ಲಿ, ಭೂಮಿಯ ಮೇಲೆ ಹುಟ್ಟುವ ಪ್ರತಿಯೊಂದು ವಸ್ತುವಿಗೆ ಸುಗಂಧ ಕೊಟ್ಟವನು ‘ಪುಣ್ಯ’ ನಾಮಕ ಭಗವಂತ. ಆತ ತನ್ನ ವಿಶೇಷ ರೂಪದಲ್ಲಿ ‘ಗಂಧ’ ನಾಮಕನಾಗಿ ಆ ವಸ್ತುವಿನಲ್ಲಿ ಸೇರಿಕೊಂಡಿರುವುದರಿಂದ ವಸ್ತುವಿಗೆ ಒಂದು ವಿಶೇಷ ಗುಣ ಬಂತು. ಈ ಭೂಮಿಯಲ್ಲಿ ಹುಟ್ಟುವ ಗಿಡಬಳ್ಳಿಗಳು , ವನಸ್ಪತಿಗಳು, ಅನಂತ ಬಗೆಯ ಹೂಗಳು, ಹಣ್ಣುಗಳು, ಎಲ್ಲವುದರಲ್ಲೂ ಆ ವಿವಿಧತೆ-ಕಂಪು ಆ ಭಗವಂತನಿಂದ. ಭೂಮಿಯ ಅಭಿಮಾನಿ ದೇವತೆ(ಪ್ರಥ್ವೀ ದೇವತೆ)ಯೊಳಗಿದ್ದು, ಪ್ರಥ್ವಿಯಲ್ಲಿ ಗಂಧ ಶಬ್ದ ವಾಚ್ಯನಾಗಿ ಗಂಧದಲ್ಲಿ
ನೆಲೆಸಿದ್ದಾನೆ ಭಗವಂತ. ನೆಲ ಎಲ್ಲವುದಕ್ಕೂ ನೆಲೆ, ಭಗವಂತ ನೆಲದಲ್ಲಿ ನೆಲೆ ನಿಂತುದರಿಂದ ನೆಲದಲ್ಲಿ
ಮೂಡಿಬರುವ ಪ್ರತಿಯೊಂದು ವಸ್ತುವೂ ಕೂಡಾ ಒಂದೊಂದು ಬಗೆಯ
ವಿಶಿಷ್ಟ ಸುಗಂಧವನ್ನು ಹೊತ್ತು ತರುತ್ತದೆ. ಹೀಗೆ ಭಗವಂತ ತನ್ನ ಸೃಷ್ಟಿಯಲ್ಲಿ ಸೌಂದರ್ಯಭರಿತ ವಿಶಿಷ್ಟ ಗಂಧದ ಪ್ರಪಂಚವನ್ನೇ ನಮ್ಮ ಮೂಗಿನ ಮುಂದೆ ತೆರೆದಿಟ್ಟ.
ಹಿಮಾಲಯದ ‘ಹೂಗಳ ಕಣಿವೆಯಲ್ಲಿ(Valley of Flower) ಅನಂತ ಪ್ರಕಾರದ ಹೂವಿನ ಪ್ರಪಂಚವಿದೆ. ಒಂದು ಹೂವಿನ ಪರಿಮಳ ಇನ್ನೊಂದಕ್ಕಿಂತ ಭಿನ್ನ. ಎಲ್ಲಾ ಗಿಡಗಳೂ ಕೂಡಾ ಒಂದೇ ಮಣ್ಣಿನಿಂದ ಬೆಳೆಯುವುದಾದರೂ ಕೂಡಾ, ಭಗವಂತ ಒಂದೊಂದು ಗಿಡದಲ್ಲಿ ಒಂದೊಂದು ವಿಶಿಷ್ಟಗುಣವನ್ನು(exclusive quality) ತುಂಬಿದ. ಕೆಲವು ಹೂವಿನಲ್ಲಿ ನಾವು ಗುರುತಿಸಲು ಸಾಧ್ಯವಾಗುವ ಸುವಾಸನೆ
ಇರುವುದಿಲ್ಲ. ಸಾಮಾನ್ಯವಾಗಿ ಇಂತಹ ಹೂವನ್ನು ದೇವರಿಗೆ ಅರ್ಪಿಸುವುದಿಲ್ಲ. ಇದಕ್ಕೆ ಕಾರಣ ದೇವರ ಪೂಜೆಯ ಪ್ರತಿಯೊಂದು ಕ್ರಿಯೆಯೂ ಕೂಡಾ ಆನಂದಮಯವಾಗಿರಬೇಕು ಎನ್ನುವ ಅನುಸಂಧಾನ. ಪೂಜೆ
ಮಾಡುವಾಗ ಆ ಹೂವಿನ ಅಹ್ಲಾದಕರ ಕಂಪು ಮೂಗಿಗೆ ಬಡಿದಾಗ ನಮಗೆ ‘ಪುಣ್ಯ’ ಅಥವಾ ‘ಗಂಧ’ ನಾಮಕ ಭಗವಂತನ ಅರಿವು ಮೂಡಬೇಕು.
ನೀರು, ಸೂರ್ಯ, ಚಂದ್ರ, ಆಕಾಶ ಹಾಗು ಭೂಮಿಯ
ಬಗ್ಗೆ ಹೇಳಿದ ಭಗವಂತ ಮುಂದುವರಿದು ಭೂಮಿಯಲ್ಲಿ ಭಗವಂತನ ಆರಾಧನೆಗೆ ಮುಖ್ಯ ಪ್ರತಿಷ್ಠಾನವಾದ ಅಗ್ನಿ(ವಿಭಾವಸು)ಯಲ್ಲಿ ತನ್ನ ವಿಭೂತಿ ವಿಜ್ಞಾನವನ್ನು ವಿವರಿಸುತ್ತಾನೆ. ವಿಭಾವಸು ಭೂಮಿಯಲ್ಲಿ ಅಗ್ನಿಯ ಅಭಿಮಾನಿ ದೇವತೆ. ಈತ ಅಷ್ಟವಸುಗಳಲ್ಲಿ[ದ್ರೋಣ, ಪ್ರಾಣ, ಧ್ರುವ, ಅರ್ಕ, ಅಗ್ನಿ(ವಿಭಾವಸು), ದೋಷ, ವಸ್ತು, ದ್ಯುವಸು] ಐದನೆಯವ.
ಈತನಿಗೆ ಅನೇಕ ನಾಮಗಳು: ವೈಶ್ವಾನರ, ವಹ್ನಿ, ಜಾತವೇದ, ಹುತಾಶನ, ಪಾವಕ, ಅನಲ, ದಹನ ಇತ್ಯಾದಿ. ನಮಗೆ ಭೂಮಿಯಲ್ಲಿ ಅಗ್ನಿ ಎನ್ನುವುದು ಬಹಳ ಮುಖ್ಯವಾದ ಭಗವಂತನ ಪ್ರತೀಕ. ವೇದ
ಪ್ರಾರಂಭವಾಗುವುದೂ ಕೂಡಾ “ಅಗ್ನಿಮೀ”ಳೇ ಪುರೋಹಿತಂ ಯಜ್ಞಸ್ಯ ದೇವಂ-ಋತ್ವಿಜಂ” ಎಂದು ಅಗ್ನಿ ನಾಮದಿಂದ. ನೆಲದಲ್ಲಿ ಭಗವಂತನನ್ನು
ಪೂಜಿಸಲು ಅಗ್ನಿಗಿಂತ ಉತ್ತಮ ಪ್ರತೀಕ ಇನ್ನೊಂದಿಲ್ಲ.
ಅಗ್ನಿ ಬೆಳಕಿನ ರೂಪ, ಅಗ್ನಿ ಪವಿತ್ರ. ಕೊಟ್ಟಿದ್ದನ್ನು ಸ್ವೀಕರಿಸುವ ಭಗವಂತನ ಏಕೈಕ ಪ್ರತೀಕ ಅಗ್ನಿ. ಇಲ್ಲಿ
ಕೃಷ್ಣ ಹೇಳುತ್ತಾನೆ “ತೇಜಶ್ಚಾಸ್ಮಿ ವಿಭಾವಸೌ” ಎಂದು. ಅಂದರೆ “ಇಂತಹ ಅಗ್ನಿದೇವತೆಯೊಳಗೆ ದಾಹಕ, ಪಾಚಕ, ಪ್ರಕಾಶಕ ಶಕ್ತಿಯಾಗಿ, ತೇಜಸ್ಸಾಗಿ-ನಾನಿದ್ದೇನೆ” ಎಂದು.
ಹೊರ ಪ್ರಪಂಚದಲ್ಲಿ
ಉರಿಯುವ ಬೆಂಕಿಯಲ್ಲಿ ಭಗವಂತನಿದ್ದರೆ ನಮ್ಮ ನಾಲಿಗೆಯಲ್ಲಿ ಕುಳಿತ ಅಗ್ನಿ ನಾಮಕ ಭಗವಂತ(ಅಗ್ನಿನಾರಾಯಣ) ನಮಗೆ ಮಾತು ಎನ್ನುವ ಬೆಳಕನ್ನು
ಕೊಟ್ಟು ನಮ್ಮೊಳಗೆ ವಾಙ್ಮಯನಾಗಿರುವ ದೊಡ್ಡ ಬೆಳಕು. ಹಾಗೇ
ವೈಶ್ವಾನರನಾಗಿ ನಮ್ಮ ಪಚನ ಕ್ರಿಯೆಯನ್ನು ನಿಯಂತ್ರಿಸುವವನೂ ಆತನೇ. [ಈ ಬಗ್ಗೆ ಮುಂದೆ ವಿಶೇಷವಾಗಿ ಭಗವಂತನ ವಿಭೂತಿಯ ಬಗ್ಗೆ ಹೇಳುವ ಅಧ್ಯಾಯದಲ್ಲಿ ಹೆಚ್ಚಿನ ವಿವರವನ್ನು
ಕಾಣಬಹುದು].
ಮುಂದುವರಿದು ಕೃಷ್ಣ
ಹೇಳುತ್ತಾನೆ “ವಾಯುವಿನಲ್ಲಿ ತುಂಬಿ ಪ್ರತಿಯೊಂದು ಜೀವಜಾತದ ಉಸಿರಾಗಿ, ಜೀವಕ್ಕೆ ಉಸಿರಿನ ಶಕ್ತಿ ಕೊಟ್ಟು ನಾನು ನಿಂತಿದ್ದೇನೆ” ಎಂದು. ಜೀವನಪ್ರದ ಅಭಿಮಾನಿ ದೇವತೆ “ಪ್ರಾಣದೇವರು”. ನಾವು ಇತರ ಇಂದ್ರಿಯ ಕೆಲಸ ಮಾಡದೇ ಇದ್ದರೆ ಬದುಕಬಹುದು. ಆದರೆ ಪ್ರಾಣಶಕ್ತಿ(ಉಸಿರಾಟ) ಕೆಲಸ
ಮಾಡದೇ ಇದ್ದರೆ ಬದುಕಲು ಸಾಧ್ಯವಿಲ್ಲ. ನಿದ್ದೆಯಲ್ಲಿ ನಮ್ಮ ಇತರ ತತ್ವಾಭಿಮಾನಿ ದೇವತೆಗಳು ನಿದ್ರಿಸಬಹುದು ಆದರೆ ಪ್ರಾಣದೇವರು ನಿದ್ರಿಸಿದರೆ ನಾವು ಪುನಃ ಎಚ್ಚರವಾಗಲು ಸಾಧ್ಯವಿಲ್ಲ! ಭಗವಂತ ಅಹೋರಾತ್ರಿ ಜೀವನಪ್ರದನಾದ ಪ್ರಾಣಶಕ್ತಿ ಒಳಗೆ ಪ್ರಾಣನಾಗಿ ನಿಂತು ನಮ್ಮನ್ನು ಬದುಕಿಸುತ್ತಾನೆ.
ಪಂಚಭೂತಗಳ ಬಗ್ಗೆ
ವಿವರಿಸಿದ ಕೃಷ್ಣ ಮುಂದೆ ಮಾನಸ ಪ್ರಪಂಚದ ಬಗ್ಗೆ ವಿವರಿಸುತ್ತಾನೆ. ಮನೋಮಯ ಪ್ರಪಂಚದಲ್ಲಿ ಬದುಕುವವರು ತಪಸ್ವಿಗಳು(ತಪ-ಆಲೋಚನೆ –Great thinkers).ಮನಸ್ಸಿನ ಆಳವಾದ ಚಿಂತನೆಗೆ ತಪಸ್ಸು ಎನ್ನುತ್ತಾರೆ.
ಇದರ ಅಭಿಮಾನಿ ಶಿವ. ನಾವು ಮಾತನಾಡುವುದು ನಮ್ಮ ಮನಸ್ಸಿಗೆ ಹೊಳೆಯುವ
ವಿಚಾರಗಳನ್ನು. ನಮ್ಮ ಮನಸ್ಸಿಗೆ ಅಂತಹ ಅದ್ಭುತ ಆಲೋಚನಾಶಕ್ತಿ ಕೊಟ್ಟು ಮನೋಮಯಕೊಶದಲ್ಲಿ ನಿಂತು ನಮಗೆ ಆನಂದದ ಅನುಭವವನ್ನು ಕೊಡುವವ ಆ ಭಗವಂತ. ಹೀಗೆ ಪಂಚಭೂತಗಳಲ್ಲಿ; ಅನ್ನಮಯಕೋಶದಿಂದ ಹಿಡಿದು ಆನಂದಮಯಕೋಶದ ತನಕ ಹೇಗೆ ಭಗವಂತ ವಿಭೂತಿರೂಪದಲ್ಲಿ ನಿಂತಿದ್ದಾನೆ
ಎನ್ನುವ ಅದ್ಭುತ ಅಧ್ಯಾತ್ಮ ವಿಜ್ಞಾನ(divine science)ವನ್ನು ಈ ಎರಡು ಶ್ಲೋಕ(೮ ಮತ್ತು ೯)ದಲ್ಲಿ ಕೃಷ್ಣ ವಿವರಿಸಿದ.
ಕೃಷ್ಣ
ಪಿಂಡಾಂಡ-ಬ್ರಹ್ಮಾಂಡದಲ್ಲಿ ನಿಂತು ಹೇಗೆ ವಿಭೂತಿಯಾಗಿ ಬೇರೆ ಬೇರೆ ವಸ್ತುವಿನಲ್ಲಿ ವಿಶಿಷ್ಟ ಶಕ್ತಿಯನ್ನು ತುಂಬುತ್ತಾನೆ ಎನ್ನುವ ಮಾತಿನ
ಸಂಕ್ಷಿಪ್ತ ಉಪಾಸನೆಯನ್ನು ನೋಡಿದೆವು. ಈ ವಿಭೂತಿಯ ವಿಸ್ತಾರ
ಮುಂದಿನ ಅಧ್ಯಾಯದಲ್ಲಿ ಪುನಃ ಬರುತ್ತದೆ. ಇಲ್ಲಿ
ಕೃಷ್ಣ ಅದನ್ನು ಕ್ರೂಡೀಕರಣ ಮಾಡಿ ಸಮಷ್ಟಿಯಾಗಿ ವಿಭೂತಿಯ ಅನುಸಂಧಾನ ಹೇಗಿರಬೇಕು ಎಂದು ವಿವರಿಸಿದ್ದಾನೆ.
· ಶ್ಲೋಕ - 10
ಕೃಷ್ಣ
ಪಿಂಡಾಂಡ-ಬ್ರಹ್ಮಾಂಡದಲ್ಲಿ ನಿಂತು ಹೇಗೆ ವಿಭೂತಿಯಾಗಿ ಬೇರೆ ಬೇರೆ ವಸ್ತುವಿನಲ್ಲಿ ವಿಶಿಷ್ಟ ಶಕ್ತಿಯನ್ನು ತುಂಬುತ್ತಾನೆ ಎನ್ನುವ ಮಾತಿನ
ಸಂಕ್ಷಿಪ್ತ ಉಪಾಸನೆ ನೋಡಿದೆವು. ಈ ವಿಭೂತಿಯ ವಿಸ್ತಾರ
ಮುಂದೆ ಪುನಃ ಬರುತ್ತದೆ. ಇಲ್ಲಿ ಕೃಷ್ಣ ಅದನ್ನು ಕ್ರೂಡೀಕರಣ ಮಾಡಿ ಸಮಷ್ಟಿಯಾಗಿ ವಿಭೂತಿಯ ಅನುಸಂಧಾನ ಹೇಗಿರಬೇಕು ಎಂದು ವಿವರಿಸಿದ್ದಾನೆ.
ಬೀಜಂ ಮಾಂ
ಸರ್ವಭೂತಾನಾಂ ವಿದ್ಧಿ ಪಾರ್ಥ ಸನಾತನಮ್ ।
ಬುದ್ಧಿರ್ಬುದ್ಧಿಮತಾಮಸ್ಮಿ ತೇಜಸ್ತೇಜಸ್ವಿನಾಮಹಮ್ ॥೧೦॥
ಬುದ್ಧಿರ್ಬುದ್ಧಿಮತಾಮಸ್ಮಿ ತೇಜಸ್ತೇಜಸ್ವಿನಾಮಹಮ್ ॥೧೦॥
ಬೀಜಮ್ ಮಾಮ್ ಸರ್ವಭೂತಾನಾಮ್ ವಿದ್ಧಿ ಪಾರ್ಥ ಸನಾತನಮ್ ।
ಬುದ್ಧಿ
ಬುದ್ಧಿಮತಾಮ್ ಅಸ್ಮಿ ತೇಜಃ ತೇಜಸ್ವಿನಾಮ್ ಅಹಮ್- ಓ ಪಾರ್ಥ, ಎಲ್ಲ ಜೀವಿಗಳ ಅಳಿವಿರದ ಬೀಜ [ಸ್ವಭಾವದ ಅಭಿವ್ಯಕ್ತಿಗೆ ಕಾರಣನಾಗಿ ‘ಬೀಜ’ ನಾಮಕ] ನಾನೆಂದು ತಿಳಿ. ತಿಳಿದವರ ತಿಳಿವು ನನ್ನಿಂದ.
[ತಿಳಿದವರೊಳಗಿದ್ದು ತಿಳಿವು ನೀಡುವುದರಿಂದ ‘ಬುದ್ಧಿ’ನಾಮಕ ]. ಪರಾಕ್ರಮಿಗಳ ಸೋಲರಿಯದ ಶಕ್ತಿ ನನ್ನಿಂದ. [ಪರಾಕ್ರಮಿಗಳೊಳಗಿದ್ದು
ಸೋಲರಿಯದ ಶಕ್ತಿ ನೀಡುವುದರಿಂದ ‘ತೇಜಸ್’ ನಾಮಕ].
ಕೃಷ್ಣ ಹೇಳುತ್ತಾನೆ “ಬೀಜಮ್ ಮಾಮ್ ಸರ್ವಭೂತಾನಾಮ್ “ ಎಂದು. ಅಂದರೆ ‘ಎಲ್ಲಾ ಜೀವಗಳ ಬೀಜ’ ನಾನು ಎಂದು. ಬೀಜ ಎಂದಾಗ ನಮಗೆ ಸಾಮಾನ್ಯವಾಗಿ
ನೆನಪಿಗೆ ಬರುವುದು ಮರಗಿಡದ ಬೀಜ. ಈ ಬೀಜವನ್ನು
ಬಿತ್ತಿದಾಗ ಅದು ಮರವಾಗಿ ಬೆಳೆಯುತ್ತದೆ. ಅಂದರೆ ಮರಕ್ಕೆ ಬೀಜ ಉಪಾದಾನ ಕಾರಣ. ಹಾಗೇ ಭಗವಂತ ಕೂಡಾ ಈ ಜಗತ್ತಿಗೆ ಉಪಾದಾನ ಕಾರಣವೆ? ಇದು ನಮ್ಮ ಮುಂದೆ ಬರುವ ಮೊದಲ ಪ್ರಶ್ನೆ. ಇದನ್ನು ತಿಳಿಯಬೇಕಾದರೆ ಮೊದಲು ನಾವು ‘ಬೀಜ’ ಅನ್ನುವ ಪದದ ಅಧ್ಯಾತ್ಮಿಕ ಅರ್ಥವಿಶೇಷವನ್ನು(etymological meaning) ಅರಿಯಬೇಕು. ಬೀಜ ಎನ್ನುವುದು ‘ಅಂಜು’ ಧಾತುವಿನಿಂದ ಬಂದಿರುವುದು. ಇಲ್ಲಿ ‘ವಿ’ ವಿಸರ್ಗ. ಯಾವುದು ವ್ಯಂಜನ (ವ್ಯಂಜನಾತ್) ಅದು ಅಭಿವ್ಯಂಜನ. ಅಂದರೆ ಯಾರಿಂದ
ಅಭಿವ್ಯಕ್ತವಾಯಿತೋ ಅದು ಬೀಜ. ಯಾವುದು(ಮೂಲವಸ್ತು) ಇದ್ದೂ ಕಾಣಿಸುತ್ತಿರಲಿಲ್ಲವೋ ಅದಕ್ಕೆ ಕಾಣುವಂತಹ ಆಕಾರಕೊಟ್ಟವನು ಆ ಭಗವಂತ. ಅಂದರೆ ಸೂಕ್ಷ್ಮ ರೂಪದಲ್ಲಿ ತುಂಬಿದ್ದ
ಈ ಅವ್ಯಕ್ತ ಪ್ರಪಂಚಕ್ಕೆ ವ್ಯಕ್ತವಾದ ರೂಪ ಕೊಟ್ಟವ. ಆದ್ದರಿಂದ ಇಡೀ ಪ್ರಪಂಚದಲ್ಲಿರುವ ಜೀವಜಾತಕ್ಕೆ ಅಭಿವ್ಯಕ್ತವನ್ನು ಕೊಟ್ಟವನು ಯಾರೋ ಅವನು ಸರ್ವಭೂತಗಳಿಗೆ ಬೀಜ. ಈ
ಜಗತ್ತಿಗೆ ತಂದೆಯೂ ತಾಯಿಯೂ ಆದ ಆ ಭಗವಂತ ಬೀಜ. ಪ್ರಳಯ ಕಾಲದಲ್ಲಿ ಕಣ್ಣಿಗೆ ಕಾಣದ(ಅವ್ಯಕ್ತ), ಸೂಕ್ಷ್ಮರೂಪದಲ್ಲಿ ಇದ್ದ ಈ ಪ್ರಪಂಚಕ್ಕೆ-ವ್ಯಕ್ತವಾದ ರೂಪವನ್ನು ಕೊಟ್ಟವ ‘ಸರ್ವಭೂತಾನಾಂ ಬೀಜ’.
ಜಗತ್ತಿನ ಸಮಸ್ತ
ಜೀವಜಾತಕ್ಕೆ ಅಂದರೆ- ಚತುರ್ಮುಖ-ಪ್ರಾಣ-ಗರುಡ-ಶೇಷ-ರುದ್ರ-ಇಂದ್ರ-ಕಾಮ-ಸರ್ವ
ದೇವತೆಗಳು, ಮಾನವರು, ವನಸ್ಪತಿಗಳು, ಇತ್ಯಾದಿ. ಹೀಗೆ ಸಮಸ್ತ ಜೀವಕೋಟಿಗೆ ದೇಹಕೊಟ್ಟು, ಆಕಾರ ಕೊಟ್ಟು, ಅಭಿವ್ಯಕ್ತಿಕೊಟ್ಟು, ಇಡೀ ಜೀವಜಾತದ ಹಿಂದೆ ತಂದೆಯಾಗಿ ನಿಂತವ ಆ
ಭಗವಂತ. ಈ ಪ್ರಪಂಚದಲ್ಲಿ ಯಾವ-ಯಾವ ಜೀವಜಾತವಿದೆ, ಆ ಜೀವಜಾತದಲ್ಲಿರುವ ವಿಶೇಷ ಶಕ್ತಿ(exclusive quality) ಹಿಂದೆ ಕಾರಣ ಪುರುಷನಾಗಿ, ವ್ಯಕ್ತಿತ್ವ ವಿಕಸನಕ್ಕೆ (ಅಭಿವ್ಯಕ್ತಿಗೆ) ಮೂಲಕಾರಣನಾಗಿ ಆ ಭಗವಂತ ನಿಂತಿದ್ದಾನೆ.
ನಮಗಿರುವ ಬೀಜದ
ಇನ್ನೊಂದು ಕಲ್ಪನೆ –ಅದು ಮರವಾಗಿ ಬೆಳೆದಾಗ ತನ್ನ ಆಕಾರವನ್ನು ಕಳೆದುಕೊಳ್ಳುತ್ತದೆ ಎನ್ನುವುದು. ಆದರೆ ಭಗವಂತ ‘ಸನಾತನ’. ಇಲ್ಲಿ ಕೃಷ್ಣ
ಹೇಳುತ್ತಾನೆ “ನಾನು ನಾನಾಗಿಯೇ ಇದ್ದು ಪ್ರಪಂಚಕ್ಕೆ ಆಕಾರ
ಕೊಡುತ್ತೇನೆ” ಎಂದು. ಅಂದರೆ ಭಗವಂತ ಎಂದೂ ಬದಲಾಗುವುದಿಲ್ಲ-ಆದರೆ ಪ್ರಪಂಚ ಬದಲಾಗುತ್ತದೆ.
ಭಗವಂತ ಪ್ರಪಂಚಕ್ಕೆ ಬೇರೆ ಬೇರೆ ಆಕಾರದ ಅಭಿವ್ಯಕ್ತ ಕೊಡುತ್ತಾನೆ. ಹೊಸ ಶಕ್ತಿ ಕೊಡುತ್ತಾನೆ. ಇದರಿಂದ ಅದು ಬದಲಾಗುತ್ತಾ, ಹೊಸ ರೂಪ ಪಡೆಯುತ್ತಾ ಇರುತ್ತದೆ. ಇದಕ್ಕೆ ಕಾರಣಪುರುಷನಾದ ಭಗವಂತ ಮಾತ್ರ
ಎಲ್ಲಾ ಕಾಲದಲ್ಲೂ ಏಕರೂಪದಲ್ಲಿರುತ್ತಾನೆ. ಹೀಗೆ ಭಗವಂತ ಸಮಸ್ತ
ಭೂತಗಳಿಗೆ(ಜಡ, ಚೇತನ, ಮುಕ್ತರು)ಬೀಜ ಮತ್ತು ಆತ ಸನಾತನ.
ಕೃಷ್ಣ ಹೇಳುತ್ತಾನೆ “ಬುದ್ಧಿರ್ಬುದ್ಧಿಮತಾಮಸ್ಮಿ ತೇಜಸ್ತೇಜಸ್ವಿನಾಮಹಮ್” ಎಂದು. ಅಂದರೆ “ಬುದ್ಧಿವಂತರ
ಬುದ್ಧಿಮತ್ತೆ ಏನಿದೆ ಅದು ನನ್ನ ಕೊಡುಗೆ; ಹಾಗೇ ತೇಜಸ್ವಿಗಳಿಗೆ ತೇಜಸ್ವಿ ನಾನು”. ಜ್ಞಾನಪ್ರದ ಜೀವರಲ್ಲಿ ಜ್ಞಾನಶಕ್ತಿಯನ್ನು ಭಗವಂತ ಅಭಿವ್ಯಕ್ತ ಗೊಳಿಸಿದ. ಇದರಿಂದ ಅವರು ಜ್ಞಾನ ಯೋಗಿಗಳಾದರು ಮತ್ತು ಸಂಸಾರದಲ್ಲಿ
ಜ್ಞಾನ ಪರಂಪರೆಯನ್ನು ಬೆಳೆಸಿ ಮುಕ್ತಿಯನ್ನು ಪಡೆದರು. ಅದೇ ರೀತಿ
ಕರ್ಮಪ್ರಧಾನವಾಗಿರುವ ಕರ್ಮಯೋಗಿಗಳಿಗೆ ತೇಜಸ್ಸಾಗಿ ನಿಂತು ಮುನ್ನೆಡೆಸಿದ ಭಗವಂತ, ಅವರಿಗೆ ‘ತೇಜಸ್ಸಾಗಿ’ ಮುಕ್ತಿ ಕರುಣಿಸುವವ. ಬುದ್ಧಿಃ ಮತ್ತು ತೇಜಃ ಎನ್ನುವುದು ಭಗವಂತನ ಹೆಸರು. ಜ್ಞಾನದ ಅಪಾರ
ಮತ್ತು ಅನಂತ ಕಡಲಾಗಿರುವ ಭಗವಂತ ‘ಬುದ್ಧಿಃ’. ದೇಹಬಲ, ಆತ್ಮಬಲ ಎಲ್ಲವೂ ಪೂರ್ಣಪ್ರಮಾಣದಲ್ಲಿರುವ ಸರ್ವಸಮರ್ಥ ಭಗವಂತ ತೇಜಃ.
· ಶ್ಲೋಕ - 11
ಬಲಂ ಬಲವತಾಂ ಚಾಹಂ
ಕಾಮರಾಗವಿವರ್ಜಿತಮ್ ।
ಧರ್ಮಾವಿರುದ್ಧೋ ಭೂತೇಷು ಕಾಮೋSಸ್ಮಿ ಭರತರ್ಷಭ ॥೧೧॥
ಧರ್ಮಾವಿರುದ್ಧೋ ಭೂತೇಷು ಕಾಮೋSಸ್ಮಿ ಭರತರ್ಷಭ ॥೧೧॥
ಬಲಮ್ ಬಲವತಾಂ ಚ ಅಹಮ್ ಕಾಮ ರಾಗ ವಿವರ್ಜಿತಮ್ ।
ಧರ್ಮ ಅವಿರುದ್ಧಃ ಭೂತೇಷು ಕಾಮಃ ಅಸ್ಮಿ ಭರತ ಋಷಭ- ಬಲವಂತರ
ಬಯಕೆ-ಒಲವುಗಳಿಲ್ಲದ ಬಲ ನನ್ನಿಂದ.
[ಬಲವಂತರೊಳಗಿದ್ದು ಬಲ ನೀಡುವುದರಿಂದ ಮತ್ತು ಕಾಮನೆಯಿಲ್ಲದ, ಆಸ್ಥಾನದಲ್ಲಿ ಬಳಸದ ಬಲರೂಪನಾದ್ದರಿಂದ ‘ಕಾಮ ವಿವರ್ಜಿತ’ ಮತ್ತು ‘ಬಲ’ ನಾಮಕ.] ಭರತಶ್ರೇಷ್ಠ, ಜೀವಿಗಳಲ್ಲಿ ಧರ್ಮಕ್ಕೆ ಅನುಗುಣವಾದ ಬಯಕೆ
ನನ್ನಿಂದ. [ಜೀವಿಗಳಲ್ಲಿದ್ದು ಧರ್ಮ ವೃದ್ಧಿಗೆ ನೆರವಾಗಿ ಎಲ್ಲರಿಂದಲೂ ಕಾಮಿತನಾದ್ದರಿಂದ ‘ಧರ್ಮಾವಿರುದ್ಧ’ ಮತ್ತು ‘ಕಾಮ’ನಾಮಕ.]
ವಿಭೂತಿಯ ಸಮಸ್ತ
ಮುಖಗಳನ್ನು ಕ್ರೂಡೀಕರಿಸಿ ಸಮಷ್ಟಿಯಾಗಿ ಹೇಳಿದ ಕೃಷ್ಣ, ಇಲ್ಲಿ ಮೂಲಭೂತವಾಗಿ ಬದುಕಿನ ಎರಡು ಮುಖವನ್ನು ವಿವರಿಸುತ್ತಾನೆ. ಕೃಷ್ಣ ಚೇತನದಲ್ಲಿರುವ ಬಲವನ್ನು ಈ ಶ್ಲೋಕದಲ್ಲಿ ಉಲ್ಲೇಖಿಸುತ್ತಾನೆ.
ಬಲದಲ್ಲಿ ಅನೇಕ ವಿಧ. ಮುಡಕೋಪನಿಷತ್ತಿನಲ್ಲಿ ಹೇಳುವಂತೆ:
ನಾಯಮಾತ್ಮಾ
ಪ್ರವಚನೇನ ಲಭ್ಯೋ ನ ಮೇಧಯಾ ನ ಬಹುನಾ ಶ್ರುತೇನ ।
ಯಮೇವೈಷ ವೃಣುತೇ ತೇನ ಲಭ್ಯಸ್ತಸ್ಯೈಷ ಆತ್ಮಾ ವಿವೃಣುತೇ ತನೂಂ ಸ್ವಾಮ್ ॥೩-೨-೩॥
ನಾಯಮಾತ್ಮಾ ಬಲಹೀನೇನ ಲಭ್ಯೋ ನ ಚ ಪ್ರಮಾದಾತ್ ತಪಸೋ ವಾಪ್ಯಲಿಙ್ಗಾತ್ ।
ಏತೈರುಪಾಯೈರ್ಯತತೇ ಯಸ್ತು ವಿದ್ವಾಂಸ್ತಸ್ಯೈಷ ಆತ್ಮಾ ವಿಶತೇ ಬ್ರಹ್ಮಧಾಮ ॥೩-೨-೪॥
ಯಮೇವೈಷ ವೃಣುತೇ ತೇನ ಲಭ್ಯಸ್ತಸ್ಯೈಷ ಆತ್ಮಾ ವಿವೃಣುತೇ ತನೂಂ ಸ್ವಾಮ್ ॥೩-೨-೩॥
ನಾಯಮಾತ್ಮಾ ಬಲಹೀನೇನ ಲಭ್ಯೋ ನ ಚ ಪ್ರಮಾದಾತ್ ತಪಸೋ ವಾಪ್ಯಲಿಙ್ಗಾತ್ ।
ಏತೈರುಪಾಯೈರ್ಯತತೇ ಯಸ್ತು ವಿದ್ವಾಂಸ್ತಸ್ಯೈಷ ಆತ್ಮಾ ವಿಶತೇ ಬ್ರಹ್ಮಧಾಮ ॥೩-೨-೪॥
“ನ ಅಯಂ ಆತ್ಮಾ ಬಲಹೀನೇನ ಲಭ್ಯಃ” ಅಂದರೆ ಭಗವಂತನನ್ನು ಪಡೆಯುವುದು ದುರ್ಬಲರಿಗೆ ಸಾಧ್ಯವಿಲ್ಲ ಎಂದರ್ಥ. ಇಲ್ಲಿ ಬಂದಿರುವ ಬಲ
ದೇಹಬಲವಲ್ಲ. ಇದು ಭಗವಂತನ ಅನುಗ್ರಹದ ಬಲ, ಸ್ವರೂಪ ಯೋಗ್ಯತೆ ಮತ್ತು ಜೊತೆಗೆ ಮನೋಬಲ. ಈ ಶ್ಲೋಕದಲ್ಲಿ
ಹೇಳುವಂತೆ-ಅಧ್ಯಯನದಿಂದ, ಶಾಸ್ತ್ರ ಶ್ರವಣದಿಂದ ‘ಮನೋಬಲ’ ವೃದ್ಧಿಯಾಗಬಹುದು, ಆದರೆ ಆತ್ಮಬಲವಿಲ್ಲದೆ ಭಗವಂತನನ್ನು ಕಾಣಲು ಸಾಧ್ಯವಿಲ್ಲ.
"ಯಸ್ಯ ದೇವೇ ಪರಾ ಭಕ್ತಿರ್ಯಥಾ ದೇವೇ ತಥಾ ಗುರೌ|
ತಸ್ಮೈತೇ ಕಥಿತಾ ಹ್ಯರ್ಥಾಃ ಪ್ರಕಾಶಂತೇ ಮಹಾತ್ಮನಃ"
ತಸ್ಮೈತೇ ಕಥಿತಾ ಹ್ಯರ್ಥಾಃ ಪ್ರಕಾಶಂತೇ ಮಹಾತ್ಮನಃ"
ಜ್ಞಾನದ ಬಲವಿದ್ದರೆ
ಸಾಲದು,ಭಕ್ತಿಯ ಬಲಬೇಕು. ಭಗವಂತನ ಅನುಗ್ರಹಕ್ಕೆ
ನಮ್ಮಲ್ಲಿ ಭಕ್ತಿಯನ್ನು ಜಾಗೃತಗೊಳಿಸುವ ಗುರು ಅನುಗ್ರಹದ
ಬಲವೂ ಮುಖ್ಯ. ಹೀಗೆ ಆತ್ಮ ಯೋಗ್ಯತೆಯ ಬಲ, ಸಾಧನೆಯ ಬಲ, ಭಕ್ತಿಯ ಬಲ,ಶಾಸ್ತ್ರಾಧ್ಯಾಯನದ ಬಲ, ಗುರುಗಳ ಅನುಗ್ರಹದ ಬಲ, ಇವನ್ನೆಲ್ಲವನ್ನೂ ನಮಗೆ ಕೊಡುವವ ಆ ಭಗವಂತ. ಆತ ಅನೇಕರೂಪದಲ್ಲಿ ‘ಬಲ’ ನಾಮಕನಾಗಿ ನಿಂತು ಜೀವ ಯೋಗ್ಯತೆಗನುಗುಣವಾಗಿ ವಿಶೇಷ ಬಲವನ್ನು ಅನುಗ್ರಹಿಸುತ್ತಾನೆ.
ಸಾಮಾನ್ಯವಾಗಿ ಬಲದ
ಹಿಂದೆ ಒಂದು ದೋಷವಿರುತ್ತದೆ. ಬಲ ಬಂದಾಗ ನಮಗೆ ಕೆಟ್ಟ ಕಾಮನೆ ಹುಟ್ಟುತ್ತದೆ. ಆದರೆ ಭಗವಂತ ಕಾಮ-ರಾಗ ವಿವರ್ಜಿತ ಬಲ ಸ್ವರೂಪ. ನಮಗೆ ಕಾಮವರ್ಜಿತ ಬಲ ಕಲ್ಪನಾತೀತ. ಇಲ್ಲಿ ಕೃಷ್ಣ ‘ಕಾಮನೆ’ ಬೇಡ ಎಂದು ಹೇಳುತ್ತಿಲ್ಲ. ‘ಭಗವಂತನನ್ನು ತಿಳಿಯಬೇಕು’, ‘ಭಕ್ತಿಯಿಂದ ಶಾಸ್ತ್ರಾಧ್ಯಾಯನ ಮಾಡಬೇಕು’ ಇತ್ಯಾದಿ ಕಾಮನೆಗಳು ನಮಗೆ ಅಗತ್ಯವಾಗಿ ಬೇಕು. ಯಾವ ಬಯಕೆ ನಮಗೆ ಧಾರಕ ಶಕ್ತಿಯಾಗಿ ನಿಲ್ಲುತ್ತದೋ
ಅಲ್ಲಿ ‘ಕಾಮ ವಿವರ್ಜಿತನಾಗಿ’ ಭಗವಂತ ನಿಂತ. ಇಲ್ಲಿ ಕೃಷ್ಣ ಹೇಳುತ್ತಾನೆ “ಸಮಸ್ತ ಜೀವಜಾತದಲ್ಲಿ ಧರ್ಮಕ್ಕೆ ಅವಿರುದ್ಧವಾಗಿರುವ ಕಾಮನೆಯ ಹಿಂದೆ ನಾನಿದ್ದೇನೆ” ಎಂದು.
ಈ ಶ್ಲೋಕದಲ್ಲಿ ಕೃಷ್ಣ ಅರ್ಜುನನನ್ನು ‘ಭರತ ಋಷಭ’ ಎಂದು
ಸಂಬೋಧಿಸುತ್ತಾನೆ. ಜ್ಞಾನಾನಂದದಲ್ಲಿ ರಥನಾದವ ‘ಭರತರ್ಷಭ’; ಭರತ(ವಾಯು)
ಋಷಭ(ಅಣ್ಣ)ನಾಗಿ ಉಳ್ಳವ ಭರತರ್ಷಭ.
ಈ ಮೇಲಿನ
ಶ್ಲೋಕದಲ್ಲಿ ಒಳ್ಳೆಯ ಅಂಶದಲ್ಲಿ ಇರತಕ್ಕಂತಹ ತನ್ನ ವಿಭೂತಿಯನ್ನು ಕೃಷ್ಣ ವಿವರಿಸಿದ. ಈ ಅನುಸಂಧಾನದಲ್ಲಿ ಗೀತೆಯನ್ನು
ನೋಡಿದಾಗ, ಇಲ್ಲಿ ಕೆಲವರಿಗೆ ಒಂದು ಸಂಶಯ ಬರಬಹುದು. “ಒಳ್ಳೆಯದನ್ನು ಮಾಡಿಸುವವನು ದೇವರು, ಕೆಟ್ಟದ್ದನ್ನು ಮಾಡಿಸುವುದು ಯಾವುದೋ ದುಷ್ಟಶಕ್ತಿ” ಎಂದು. ಅಂದರೆ ಎಲ್ಲವನ್ನೂ ಭಗವಂತ ಮಾಡಿಸುವುದಲ್ಲ ಎನ್ನುವ ಸಂಶಯ ನಮ್ಮನ್ನು ಕಾಡಬಹುದು. ಈ ನಮ್ಮ ಸಂಶಯಕ್ಕೆ ಕೃಷ್ಣನ ಉತ್ತರ ಮುಂದಿನ ಶ್ಲೋಕ.
· ಶ್ಲೋಕ - 12
ಯೇ ಚೈವ ಸಾತ್ತ್ವಿಕಾ
ಭಾವಾ ರಾಜಸಾಸ್ತಾಮಸಾಶ್ಚ ಯೇ ।
ಮತ್ತ ಏವೇತಿ ತಾನ್ ವಿದ್ಧಿ ನ ತ್ವಹಂ ತೇಷು ತೇ ಮಯಿ ॥೧೨॥
ಮತ್ತ ಏವೇತಿ ತಾನ್ ವಿದ್ಧಿ ನ ತ್ವಹಂ ತೇಷು ತೇ ಮಯಿ ॥೧೨॥
ಯೇ ಚ ಏವ
ಸಾತ್ತ್ವಿಕಾಃ ಭಾವಾ ರಾಜಸಾಃ ತಾಮಸಾಃ ಚ ಯೇ ।
ಮತ್ತ ಮತ್ತಃ ಏವ ಇತಿ
ತಾನ್ ವಿದ್ಧಿ ನ ತು ಅಹಮ್ ತೇಷು ತೇ ಮಯಿ-ಯಾವ ವಸ್ತುಗಳು ಸತ್ವಗುಣದ ಪ್ರಭಾವಕ್ಕೆ ಒಳಗಾದವು ಮತ್ತು ಯಾವವು
ರಜೋಗುಣ ಮತ್ತು ತಮೋಗುಣದ ಪ್ರಭಾವಕ್ಕೆ-ಅವೆಲ್ಲವೂ
ನನ್ನಿಂದಾಗಿಯೇ ಆಗಿವೆ ಎಂದು ತಿಳಿ. ನಾನು ಅವುಗಳ ಹಂಗಿನಲ್ಲಿಲ್ಲ. ಅವು ನನ್ನ ಹಂಗಿನಲ್ಲಿವೆ.
ಈ ಪ್ರಪಂಚ ಎಂದರೆ
ಅಂತರಂಗ ಮತ್ತು ಬಹಿರಂಗ. ಅಂತರಂಗ ಪ್ರಪಂಚದಲ್ಲಿ ತ್ರೈಗುಣ್ಯದ ಭಾವನೆಗಳು, ಬಾಹ್ಯ ಪ್ರಪಂಚದಲ್ಲಿ ತ್ರೈಗುಣ್ಯ ಪದಾರ್ಥಗಳು. ಸತ್ವ, ರಜಸ್ಸು ಮತ್ತು ತಮಸ್ಸು ಈ ಮೂರರ ಸಮಾವೇಶವೇ ಈ ಪ್ರಪಂಚ. ಮಣ್ಣು ತಮೋಗುಣದ, ನೀರು ರಜೋಗುಣದ ಮತ್ತು ಬೆಂಕಿ ಸತ್ವ ಗುಣದ ಸಂಕೇತ. ಆದ್ದರಿಂದ ಈ ಪ್ರಪಂಚದಲ್ಲಿ
ನಮಗೆ ಕಾಣುವ ಪ್ರತಿಯೊಂದು ವಸ್ತುವೂ ಕೂಡಾ ಈ ಮೂರರ ಸಮಾವೇಶ. ನಮ್ಮ ಅಂತರಂಗದ ಭಾವನೆಗಳೂ ಕೂಡಾ ಈ ಮೂರು ಗುಣದ ಸಮಾವೇಶ. ನಮ್ಮಲ್ಲಿರುವ ವರ್ಣ ಪದ್ಧತಿ ಕೂಡಾ ತ್ರೈಗುಣ್ಯ
ಆಧಾರಿತ. ಎಲ್ಲರಲ್ಲಿಯೂ ಕೂಡಾ ಈ ಮೂರು ಗುಣಗಳಿವೆ. ಆದರೆ ಸತ್ವದ ಅಂಶ ಹೆಚ್ಚಾಗಿದ್ದು, ರಜಸ್ಸು ಮತ್ತು ತಮಸ್ಸು ಕಡಿಮೆ ಇರುವವ ಬ್ರಾಹ್ಮಣ ವರ್ಣ; ರಜಸ್ಸಿನ ಅಂಶ ಹೆಚ್ಚಾಗಿದ್ದು ಅದರ ನಂತರ ಸತ್ವ ಮತ್ತು ತಮಸ್ಸು ಇರುವವ ಕ್ಷತ್ರಿಯ; ರಜಸ್ಸು ಹೆಚ್ಚಾಗಿದ್ದು ಅದರ ನಂತರ ತಮಸ್ಸು ಮತ್ತು ಸತ್ವ ಗುಣ ಉಳ್ಳವ ವೈಶ್ಯ; ತಮೋಗುಣ ಹೆಚ್ಚಾಗಿದ್ದು, ಅದರ ನಂತರ ರಜಸ್ಸು ಮತ್ತು ಸತ್ವ ಗುಣ ಉಳ್ಳವ ಶೂದ್ರ. ಈ ಎಲ್ಲಾ ವರ್ಣದವರೂ ಮೋಕ್ಷ ಯೋಗ್ಯರೆ. ಸೃಷ್ಟಿಯ
ಆದಿಯಲ್ಲಿ ಈ ಮೂರು ಗುಣಗಳ ಮಿಶ್ರಣವಾಗಿಯೇ
ಸೃಷ್ಟಿ ಪ್ರಾರಂಭವಾಯಿತು. ಇಲ್ಲಿ ಶುದ್ಧ ಸತ್ವ ಅನ್ನುವುದೊಂದಿಲ್ಲ. (ಗಣಿತಬದ್ಧವಾಗಿ ಹೇಗೆ ತ್ರೈಗುಣ್ಯದಿಂದ ಈ
ಪ್ರಪಂಚ ನಿರ್ಮಾಣವಾಯಿತು ಎನ್ನುವುದನ್ನು ಮಧ್ವಾಚಾರ್ಯರು ತಮ್ಮ ಭಾಗವತ ತಾತ್ಪರ್ಯನಿರ್ಣಯ ಗ್ರಂಥದಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ. ಇದೊಂದು ಸೃಷ್ಟಿಯ ಪ್ರಮೇಯ).
ಹೀಗೆ ಪ್ರತಿಯೊಂದು
ಪದಾರ್ಥದಲ್ಲಿ ಮೂರು ಅಂಶಗಳಿವೆ ಮತ್ತು ನಮ್ಮ ಭಾವದಲ್ಲಿಯೂ ಮೂರು ಅಂಶಗಳಿವೆ. ಈ ಮೂರು ಗುಣಗಳ
ಸಂಕೀರ್ಣ ಪ್ರಪಂಚ ಬಹಳ ವಿಚಿತ್ರ. ಇವು
ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ಮನುಷ್ಯ ತೀರ್ಮಾನ ಮಾಡಲಾಗದಷ್ಟು ಗೊಂದಲಗೆಡಿಸುತ್ತವೆ. ಆದರೆ ಇಲ್ಲಿ ಕೃಷ್ಣ
ಹೇಳುತ್ತಾನೆ “ತ್ರೈಗುಣ್ಯ ವರ್ಜಿತನಾಗಿ ಈ ಮೂರು ಗುಣಗಳನ್ನುಕೊಡುತ್ತಿರುವವನು ನಾನು” ಎಂದು! ಪ್ರತಿಯೊಂದು ಜೀವದ ಜೀವ ಸ್ವಭಾವಕ್ಕನುಗುಣವಾಗಿ, ಅದಕ್ಕೆ ಬೇಕಾದ ಗುಣ ಪ್ರವೃತ್ತಿಯನ್ನು ಕೊಡುವವ
ಆ ಭಗವಂತ. ಯಾರಲ್ಲೂ ಯಾವ ಕ್ರಿಯೆಯೂ ಭಗವಂತನ ಪ್ರೇರಣೆ ಇಲ್ಲದೆ ಆಗುವುದಿಲ್ಲ.
ಹಿಂದೆ ವಿವರಿಸಿದಂತೆ ಜೀವನಿಗೆ ಸ್ವತಂತ್ರ ಇಚ್ಛಾಪೂರ್ವಕ ಕ್ರಿಯೆ
ಇಲ್ಲ. “ನಹಿ ಪ್ರತಿಬಿಂಬಸ್ಯ ಕ್ರಿಯಾ | ಸ ಹಿ ಬಿಂಬ ಕ್ರಿಯೈವ ಕ್ರಿಯಾವಾನ್ ||”. ಬಿಂಬದಲ್ಲಿ ಕ್ರಿಯೆ
ಇಲ್ಲದೆ ಪ್ರತಿಬಿಂಬದಲ್ಲಿ ಕ್ರಿಯೆ ಇಲ್ಲ.
ಭಗವಂತನ ಅಧೀನವಾಗಿ ಈ ಮೂರು ಗುಣಗಳು ಈ ಪ್ರಪಂಚದಲ್ಲಿ ತುಂಬಿಕೊಂಡಿವೆ. ಇದು ನಮ್ಮ ಜೀವ ಪಕ್ವವಾಗಿ ಮೋಕ್ಷವನ್ನು ಸೇರಲು ಭಗವಂತ ನಿರ್ಮಿಸಿರುವ
ಪಾಠಶಾಲೆ.
ಭಗವಂತ ತ್ರೈಗುಣ್ಯ
ವರ್ಜಿತ. ಆತ ತ್ರಿಗುಣದ ನಿಯಂತ್ರಣಕ್ಕೊಳಪಟ್ಟಿಲ್ಲ. ಅದಕ್ಕಾಗಿ ಭಗವಂತನನ್ನು “ತ್ರಿಗುಣಾತೀತ ವಿದಾರಕ-ಪರಿತೋ ತೇಹಿಸುಭಕ್ತಿಂ-
ಕರುಣಾಪೂರ್ಣ
ಪರಪ್ರದ-ಚರಿತಂ ಜ್ಞಾಪಯಮೇತೇ” ಎಂದು ಸ್ತುತಿಸುತ್ತಾರೆ. ಇಡೀ ಜಗತ್ತು
ತ್ರಿಗುಣದ ನಿಯಂತ್ರಣಕ್ಕೊಳಪಟ್ಟಿದೆ ಆದರೆ ಭಗವಂತ ತ್ರಿಗುಣಾತೀತ.
· ಶ್ಲೋಕ - 13
ತ್ರಿಭಿರ್ಗುಣಮಯೈರ್ಭಾವೈರೇಭಿಃ
ಸರ್ವಮಿದಂ ಜಗತ್ ।
ಮೋಹಿತಂ ನಾಭಿಜಾನಾತಿ ಮಾಮೇಭ್ಯಃ ಪರಮವ್ಯಯಮ್ ॥೧೩॥
ಮೋಹಿತಂ ನಾಭಿಜಾನಾತಿ ಮಾಮೇಭ್ಯಃ ಪರಮವ್ಯಯಮ್ ॥೧೩॥
ತ್ರಿಭಿಃ ಗುಣ ಮಯೈಃ
ಭಾವೈಃ ಏಭಿಃ ಸರ್ವಮ್ ಇದಮ್ ಜಗತ್ ।
ಮೋಹಿತಮ್ ನ
ಅಭಿಜಾನಾತಿ ಮಾಮ್ ಏಭ್ಯಃ ಪರಮ್ ಅವ್ಯಯಮ್-ತ್ರಿಗುಣಾತ್ಮಕವಾದ ಈ ಸೋತ್ತುಗಳಿಂದ ಮೋಹಗೊಂಡ ಈ ಎಲ್ಲ ಜೀವಜಾತ ಇವುಗಳಿಂದಾಚೆಗಿರುವ, ಅಳಿವಿರದ ನನ್ನನ್ನು ತಿಳಿಯದಾಗಿದೆ.
ಇಡೀ ಜಗತ್ತು
ತ್ರಿಗುಣಗಳಿಂದ ಮೋಹಿತವಾಗಿರುವುದರಿಂದ ಮತ್ತು ಈ ಮೂರು ಗುಣಗಳು ಎಲ್ಲಾ ಕಡೆ ತುಂಬಿರುವುದರಿಂದ ನಮಗೆ ತ್ರಿಗುಣಾತೀತವಾದ ಯೋಚನೆ ಅಸಾಧ್ಯ. ಈ
ಕಾರಣದಿಂದ ತ್ರಿಗುಣಾತೀತನೂ ಅವ್ಯಯನೂ ಆದ ಆ ಭಗವಂತನನ್ನು ಪೂರ್ಣ ಗ್ರಹಿಸಲು ಜೀವನಿಗೆ ಸಾಧ್ಯವಿಲ್ಲ. ಭಗವಂತನನ್ನು ಅರಿಯಬೇಕಾದರೆ ನಾವು ಈ ತ್ರಿಗುಣದ ಚಕ್ರದಿಂದ ಹೊರಕ್ಕೆ ಬರಬೇಕು. ಆದರೆ ಹೊರ ಬರುವ ಮಾರ್ಗ ಎಂತು? ಉತ್ತರ ಮುಂದಿನ ಶ್ಲೋಕ.
· ಶ್ಲೋಕ - 14
ದೈವೀ ಹ್ಯೇಷಾ
ಗುಣಮಯೀ ಮಮ ಮಾಯಾ ದುರತ್ಯಯಾ ।
ಮಾಮೇವ ಯೇ ಪ್ರಪದ್ಯಂತೇ ಮಾಯಾಮೇತಾಂ ತರಂತಿ ತೇ ॥೧೪॥
ಮಾಮೇವ ಯೇ ಪ್ರಪದ್ಯಂತೇ ಮಾಯಾಮೇತಾಂ ತರಂತಿ ತೇ ॥೧೪॥
ದೈವೀ ಹಿ ಏಷಾ ಗುಣಮಯೀ ಮಮ ಮಾಯಾ ದುರತ್ಯಯಾ ।
ಮಾಮ್ ಏವ ಯೇ
ಪ್ರಪದ್ಯಂತೇ ಮಾಯಾಮ್ ಎತಾಮ್ ತರಂತಿ ತೇ-ಗುಣಮಯವಾದ ನನ್ನ
ಮಾಯೆ ತುಂಬಾ ಶಕ್ತಿಶಾಲಿ. ಅದನ್ನು ದಾಟುವುದು ಸುಲಭವಲ್ಲ.
ಯಾರು ನನ್ನಲ್ಲಿ ಮೊರೆ ಹೋಗುತ್ತಾರೆ ಅವರು ಈ ಮಾಯೆಯನ್ನು ದಾಟುತ್ತಾರೆ.
ತ್ರಿಗುಣಾತ್ಮಕವಾದ ಈ
ಮೂರು ಭಾವಗಳಲ್ಲಿ ಇನ್ನೊಂದು ಮುಖವಿದೆ. ತ್ರಿಗುಣದ ಮಾನಿನಿ(ಶ್ರೀ ಲಕ್ಷ್ಮಿ)ಯೂ ಕೂಡಾ ಮೂರು ಮುಖದವಳು. ಶ್ರೀ-ಭೂ-ದುರ್ಗ-ಇವು ತ್ರಿಗುಣವನ್ನು ನಿಯಂತ್ರಿಸುವ ಮೂರು ರೂಪಗಳು. ಈ ಗುಣಮಯೀ ತಾಯಿ
ಮಾಯೆಯಾಗಿ ಜಗತ್ತಿನಲ್ಲಿ ತುಂಬಿದ್ದಾಳೆ. ಇಡೀ
ಜಗತ್ತನ್ನು ನಿಯಂತ್ರಿಸಬಲ್ಲ ಮಹಾ ಶಕ್ತಿ ಸ್ವರೂಪ ಆ ಮಾಯೆ ಭಗವಂತನ ಅಧೀನ. ನಾವು ಭಗವಂತನನ್ನು ಕಾಣಬೇಕಾದರೆ
ಈ ಮಾಯಾ ಪರದೆಯನ್ನು ಸರಿಸಿ ಕಾಣಬೇಕು. ಆದರೆ ನಮ್ಮಿಂದ ಅದು ಅಸಂಭವ. ಈ ಕಾರಣದಿಂದ ಭಗವಂತನನ್ನು ಸೇರುವ ಏಕೈಕ ಮಾರ್ಗ ಭಗವಂತನಲ್ಲಿ ಪೂರ್ಣ ಶರಣಾಗತಿ. ಆತ ಈ ಮಾಯಾ
ಪರದೆಯನ್ನು ಸರಿಸಿ ದರ್ಶನ ಕೊಡಬಲ್ಲ. ಈ ಹಿಂದೆ ಹೇಳಿದಂತೆ ಸಂಸಾರದ ಮೋಹ ಪಾಶದಿಂದ ದೂರ ಸರಿದು ನಾರಾಯಣನಲ್ಲಿ ಶರಣಾದಲ್ಲಿ ಆತ ನಮ್ಮನ್ನು ಈ ಮಾಯಾ ಪರದೆಯಿಂದ ದಾಟಿಸುತ್ತಾನೆ.
ಭಗವಂತನಲ್ಲದೆ ನನಗೆ ಬೇರೆ ಅಸ್ತಿತ್ವವಿಲ್ಲ ಎನ್ನುವ
ಎಚ್ಚರದಿಂದ ನಾವು ನಮ್ಮನ್ನು ಆತನಿಗೆ
ಅರ್ಪಿಸಿಕೊಳ್ಳಬೇಕು. ನವವಿಧ ಭಕ್ತಿಯಲ್ಲಿ ಇದು ಶ್ರೇಷ್ಠವಾದ ಭಕ್ತಿ. ಇದನ್ನು ಆತ್ಮನಿವೇದನ ಎನ್ನುತ್ತಾರೆ.ಮೊದಲು
ನಮ್ಮೊಳಗಿರುವ ಭಗವಂತನನ್ನು ಅರಿತು, ಅಹಂಕಾರ ಮಮಕಾರವನ್ನು ತೊರೆದು ನಮ್ಮನ್ನು ಸಂಪೂರ್ಣವಾಗಿ
ಭಗವಂತನಲ್ಲಿ ಅರ್ಪಿಸಿಕೊಂಡಾಗ ಭಗವದ್ ಸಾಕ್ಷಾತ್ಕಾರವಾಗುತ್ತದೆ. ಇಲ್ಲಿ ಮುಖ್ಯವಾಗಿ ಬೇಕಾಗಿರುವುದು ಏಕ ಭಕ್ತಿ ಮತ್ತು ಏಕ ಶರಣಾಗತಿ. ಕೃಷ್ಣ ಹೇಳುತ್ತಾನೆ "ಯಾರು
ನನಗೇ ಶರಣಾಗುತ್ತಾರೋ ಅವರು ಪಾರಾಗಿಯೇ ಆಗುತ್ತಾರೆ" ಎಂದು. ಕೃಷ್ಣನ ಈ ಮಾತನ್ನು ಕೇಳಿದಾಗ ನಮ್ಮನ್ನು ಕೆಲವು ಪ್ರಶ್ನೆಗಳು ಕಾಡಬಹುದು. "ಎಲ್ಲರೂ ಏಕೆ ಭಗವಂತನಲ್ಲಿ
ಶರಣಾಗುವುದಿಲ್ಲ? ಕೆಟ್ಟತನ ಜನರಲ್ಲಿ ಹೇಗೆ ಬರುತ್ತದೆ?" ಇತ್ಯಾದಿ. ಬನ್ನಿ ನಮ್ಮ ಪ್ರಶ್ನೆಗೆ
ಉತ್ತರವನ್ನು ಮುಂದಿನ ಶ್ಲೋಕದಲ್ಲಿ ಹುಡುಕೋಣ.
· ಶ್ಲೋಕ - 15
ನ ಮಾಂ ದುಷ್ಕೃತಿನೋ
ಮೂಢಾಃ ಪ್ರಪದ್ಯನ್ತೇ ನರಾಧಮಾಃ ।
ಮಾಯಯಾSಪಹೃತಜ್ಞಾನಾ ಆಸುರಂ ಭಾವಮಾಶ್ರಿತಾಃ ॥೧೫॥
ಮಾಯಯಾSಪಹೃತಜ್ಞಾನಾ ಆಸುರಂ ಭಾವಮಾಶ್ರಿತಾಃ ॥೧೫॥
ನ ಮಾಂ ದುಷ್ಕೃತಿನಃ
ಮೂಡಾಃ ಪ್ರಪದ್ಯನ್ತೇ ನರ ಅಧಮಾಃ ।
ಮಾಯಯಾ ಅಪಹೃತ
ಜ್ಞಾನಾಃ ಆಸುರಮ್ ಭಾವಮ್ ಆಶ್ರಿತಾಃ – ಕೆಡು ನಡೆಯ ತಿಳಿಗೇಡಿ ಹುಲು ಮನುಜರು, ಮೈಯ ಸುಖದಲ್ಲೆ ಮೈಮರೆತು ಮಾಯೆಯಿಂದ ತಿಳಿವು ಮಂಕಾದವರು. ಇವರು ನನಗೆ ಶರಣಾಗುವುದಿಲ್ಲ.
ಕೃಷ್ಣ ಈ
ಶ್ಲೋಕದಲ್ಲಿ ದುಷ್ಕೃತಿಗಳ ಬಗ್ಗೆ ಹೇಳುತ್ತಾನೆ. ಇವರಲ್ಲಿ ಎರಡು ವಿಧ. ಯಾವುದೋ ಪ್ರಾರಬ್ಧ ಕರ್ಮಕ್ಕೊಳಗಾಗಿ-ಪರಿಸರದ ಪ್ರಭಾವದಿಂದ ಪಾಪದ ದಾರಿಯಲ್ಲಿ ಸಾಗುವವರು(ಉದಾ: ಕರ್ಣ , ಅಜಾಮಿಳ) ಹಾಗು ಸ್ವಭಾತಃ ಪಾತಕಿಗಳು(ಉದಾ: ದುರ್ಯೋಧನ). ಕೃಷ್ಣ ಹೇಳುತ್ತಾನೆ “ನಾನೇ ನಾನು ನನಗೆ ಶರಣಾದವರನ್ನು ಮಾಯೆಯಿಂದ ಬಿಡಿಸುತ್ತೇನೆ. ಆದರೂ
ಕೂಡಾ ಎಲ್ಲರೂ ನನಗೆ ಶರಣಾಗುವುದಿಲ್ಲ” ಎಂದು. ಸ್ವಭಾವತಃ ದುಷ್ಕೃತಿಗಳಾದವರು ಎಂದೂ ಭಗವಂತನನ್ನು ಒಪ್ಪಿಕೊಳ್ಳುವುದಿಲ್ಲ. ಅವರಿಗೆ
ಎಷ್ಟೇ ಬುದ್ಧಿವಾದ ಹೇಳಿದರೂ ಅರ್ಥವಾಗುವುದಿಲ್ಲ.
ಇಂತವರು ಮಾಯೆಯ ಬಲೆಯಲ್ಲಿ ಬಿದ್ದು ಇಂದ್ರಿಯದಲ್ಲೇ ಎಲ್ಲಾ ಸುಖವಿದೆ ಎಂದು ತಿಳಿದು ಬದುಕುತ್ತಾರೆ. ಪ್ರಭಾವದಿಂದ ಮಾಯೆಯ ಬಲೆಗೆ
ಬೀಳುವ ಸಜ್ಜನರಿಗೆ ಮರಳಿ ಸರಿದಾರಿಗೆ ಬರುವ ವ್ಯವಸ್ಥೆ ಸೃಷ್ಟಿಯಲ್ಲಿದೆ. ಜೀವ ಸ್ವಭಾವವೇ
ನೀಚವಾಗಿದ್ದರೆ ಅಂತವರನ್ನು ಎಂದೂ ತಿದ್ದಲು ಸಾಧ್ಯವಿಲ್ಲ. ಅವರು
ಎಂದೂ ಭಗವಂತನನ್ನು ತಿಳಿಯಲು ಪ್ರಯತ್ನಿಸುವುದಿಲ್ಲ.
ಇವರು ದುಷ್ಕೃತ್ಯವೇ ತಮ್ಮ ಕರ್ತವ್ಯ ಎಂದು
ತಿಳಿದ ತಿಳಿಗೇಡಿಗಳೆನಿಸುತ್ತಾರೆ. ಇಂಥವರನ್ನು ಇಲ್ಲಿ
ಕೃಷ್ಣ ‘ನರಾಧಮಃ’ ಎಂದು ಸಂಬೋಧಿಸಿದ್ದಾನೆ. ಇವರನ್ನು ಸದಾ ಮಾಯೆ ಆವರಿಸಿರುತ್ತದೆ. ಅವರಿಗೆ ತಮಗೆ ಬುದ್ಧಿ ಇಲ್ಲ ಎಂದೂ ತಿಳಿದಿರುವುದಿಲ್ಲ! ಅವರು ಎಂದೂ
ಭಗವಂತನಲ್ಲಿ ಶರಣಾಗುವುದಿಲ್ಲ ಮತ್ತು ಭಗವಂತನನ್ನು ಸೇರುವುದಿಲ್ಲ.
ಪ್ರಭಾವದಿಂದ
ದುಷ್ಕೃತ್ಯಕ್ಕಿಳಿದವರ ಬುದ್ಧಿಯನ್ನು ಮಾಯೆ ಆವರಿಸಿರುತ್ತದೆ. ಕಾಲ ಪಕ್ವವಾದಾಗ ಅವರು ಪರಿಸರ ಪ್ರಭಾವದಿಂದ ಕಳಚಿಕೊಂಡು ಮರಳಿ ಭಗವಂತನಿಗೆ
ಶರಣಾಗುತ್ತಾರೆ. ಇದಕ್ಕೆ ಉತ್ತಮ ದೃಷ್ಟಾಂತ ಅಜಾಮಿಳನ ಜೀವನ ಕಥನ.
ಭಗವಂತ ಅವರವರ
ಸ್ವಭಾವಕ್ಕೆ ತಕ್ಕಂತೆ ಅವರವರ ವ್ಯಕ್ತಿತ್ವ ವಿಕಾಸಗೊಳಿಸುತ್ತಾನೆ. ಜೀವ ಸ್ವಭಾವವನ್ನು ಆತ ಎಂದೂ ಬದಲಿಸುವುದಿಲ್ಲ. ಪಾಪಿಗಳಾದವರಿಗೆ ಪಾಪದ
ಫಲ, ಪುಣ್ಯವಂತರಿಗೆ ಪುಣ್ಯದ ಫಲ. ಈ ವ್ಯವಸ್ಥೆ ಎಂದೂ
ಬದಲಾಗುವುದಿಲ್ಲ. ಈ ಕಾರಣದಿಂದ ಪ್ರಪಂಚದಲ್ಲಿ ನಾವು ಎಲ್ಲಾ ವಿಧದ ಜನರನ್ನು ಕಾಣುತ್ತೇವೆ. ಸಾಮಾನ್ಯವಾಗಿ ಪ್ರಪಂಚದಲ್ಲಿ ಭಗವದ್ಭಕ್ತರು ಮತ್ತು ಜ್ಞಾನಿಗಳು
ಅಲ್ಪಸಂಖ್ಯಾತರು. ಯಾವ ಕಾಲದಲ್ಲೂ ಕೂಡಾ ಇವರು ಬಹು ಸಂಖ್ಯೆಯಲ್ಲಿ ಇರುವುದಿಲ್ಲ.
ಹರಿಕಥಾಮೃತಸಾರದಲ್ಲಿ
ದಾಸರು ಸತ್ವರು, ತಾಮಸರು ಮತ್ತು ರಾಜಸರ ಬಗ್ಗೆ ಈ ರೀತಿ ಸೊಗಸಾಗಿ
ಹಾಡಿದ್ದಾರೆ:
ಸತ್ವಸತ್ವರು
ಸತ್ವರಾಜಸ ಸತ್ವತಾಮಸ ಮೂವರೂ-
ರಜ ಸತ್ವಾಧಿಕಾರಿಗಳು ಭಗವದ್ಭಕ್ತರೆನಿಸುವರು |
ನಿತ್ಯಬದ್ಧರು ರಜೋರಜರುತ್ಪತ್ತಿ ಭೂಸ್ವರ್ಗದೊಳು-
ನರಕದಿ ಪ್ರಥ್ವಿಯೊಳು ಸಂಚರಿಸುತಿಪ್ಪರು ರಾಜಸ್ತಾಮಸರು||
ತಮಸ್ಸಾತ್ವಿಕರೆನಿಸಿಕೊಂಬರು ಅಮಿತನಾಖ್ಯಾತಾಸುರರಗಣ-
ತಮೋರಾಜಸರೆನಿಸಿಕೊಂಬರು ದೈತ್ಯ ಸಮುದಾಯ |
ತಮಸ್ತಾಮಸ ಕಲಿ ಪುರಂಧ್ರಿಯು ಅಮಿತ ದುರ್ಗುಣಪೂರ್ಣ-
ಸರ್ವಧರ್ಮರೊಳಧಮಾಧಮದುರಾತ್ಮನು ಕಲಿಯೆನಿಸಿಕೊಂಬ ||
ರಜ ಸತ್ವಾಧಿಕಾರಿಗಳು ಭಗವದ್ಭಕ್ತರೆನಿಸುವರು |
ನಿತ್ಯಬದ್ಧರು ರಜೋರಜರುತ್ಪತ್ತಿ ಭೂಸ್ವರ್ಗದೊಳು-
ನರಕದಿ ಪ್ರಥ್ವಿಯೊಳು ಸಂಚರಿಸುತಿಪ್ಪರು ರಾಜಸ್ತಾಮಸರು||
ತಮಸ್ಸಾತ್ವಿಕರೆನಿಸಿಕೊಂಬರು ಅಮಿತನಾಖ್ಯಾತಾಸುರರಗಣ-
ತಮೋರಾಜಸರೆನಿಸಿಕೊಂಬರು ದೈತ್ಯ ಸಮುದಾಯ |
ತಮಸ್ತಾಮಸ ಕಲಿ ಪುರಂಧ್ರಿಯು ಅಮಿತ ದುರ್ಗುಣಪೂರ್ಣ-
ಸರ್ವಧರ್ಮರೊಳಧಮಾಧಮದುರಾತ್ಮನು ಕಲಿಯೆನಿಸಿಕೊಂಬ ||
ಮಾಯೆಯ ಪ್ರಭಾವ ನಮ್ಮ
ಮೇಲೆ ಕಾಲಕ್ಕನುಗುಣವಾಗಿರುತ್ತದೆ. ಸಾತ್ವಿಕ ಯುಗದಲ್ಲಿ ಸಾತ್ವಿಕ ಸ್ವಭಾವ ಎಷ್ಟು ಬಲಿಷ್ಟ ಎಂದರೆ ಅದು ಸಾತ್ವಿಕರು ತಾಮಸ
ಪ್ರಭಾವಕ್ಕೆ ಒಳಗಾಗದೆ ಶುದ್ಧವಾಗಿರುವಂತೆ
ಮಾಡುತ್ತದೆ. ಆದರೆ ಕಲಿಯುಗದಲ್ಲಿ ಎಲ್ಲರೂ ಬಹಳ ಸುಲಭವಾಗಿ ತಾಮಸ ಪ್ರಭಾವಕ್ಕೊಳಗಾಗುತ್ತಾರೆ.
ಒಂದು ವೇಳೆ ಅದನ್ನು ಮೀರಿ ಭಗವಂತನತ್ತ ಮನಸ್ಸು ಹರಿದರೆ ಅದು ಪರಮ ಶ್ರೇಷ್ಠ. ಇದಕ್ಕಾಗಿ ‘ಕಲಿಯುಗದಲ್ಲಿ ಹರಿನಾಮ ನೆನೆದರೆ ಕುಲಕೋಟಿ ಉದ್ಧಾರವಾಗುವುದು’ ಎನ್ನುತ್ತಾರೆ. ಕಲಿಯುಗದಲ್ಲಿ ತಾಮಸ
ಪ್ರಭಾವಕ್ಕೊಳಗಾಗಿ ಮಾಡುವ ತಪ್ಪಿಗೆ ಶಿಕ್ಷೆ
ಕಡಿಮೆ. ಹಾಗೇ ಪುಣ್ಯಕ್ಕೆ ಮಹಾ ಫಲ.
ದುಷ್ಕೃತಿಗಳ ಬಗ್ಗೆ
ವಿವರಿಸಿದ ಕೃಷ್ಣ, ಪುಣ್ಯವಂತ ಸಜ್ಜನರ ವಿಧವನ್ನು ಮುಂದಿನ
ಶ್ಲೋಕದಲ್ಲಿ ವಿವರಿಸುತ್ತಾನೆ.
1 ಕಾಮೆಂಟ್:
ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.
ಕಾಮೆಂಟ್ ಪೋಸ್ಟ್ ಮಾಡಿ