ಭಗವದ್ಗೀತೆ ಅಧ್ಯಾಯ-10 (ಶ್ಲೋಕ 21 ರಿಂದ 30)



ಭಗವದ್ಗೀತೆ ಅಧ್ಯಾಯ-10 (ಶ್ಲೋಕ 21 ರಿಂದ 30) 

·  ಶ್ಲೋಕ - 21
ಆದಿತ್ಯಾನಾಮಹಂ ವಿಷ್ಣುರ್ಜ್ಯೋತಿಷಾಂ ರವಿರಂಶುಮಾನ್।
ಮರೀಚಿರ್ಮರುತಾಮಸ್ಮಿ ನಕ್ಷತ್ರಾಣಾಮಹಂ ಶಶೀ ॥೨೧॥
ಆದಿತ್ಯಾನಾಮ್ ಅಹಮ್ ವಿಷ್ಣುಃ ಜ್ಯೋತಿಷಾಮ್ ರವಿಃ ಅಂಶುಮಾನ್।
ಮರೀಚಿಃ ಮರುತಾಮ್ ಅಸ್ಮಿ ನಕ್ಷತ್ರಾಣಾಮ್ ಅಹಮ್ ಶಶೀಹನ್ನೆರಡು ಮಂದಿ ಅದಿತಿಯ ಮಕ್ಕಳಲ್ಲಿ [ಎಲ್ಲೆಡೆ ಹಬ್ಬಿರುವುದರಿಂದ, ಎಲ್ಲದರೊಳಗೂ ತುಂಬಿರುವುದರಿಂದ] ವಿಷ್ಣುನಾಮಕ[ವಾಮನ]ನಾನು. ಬೆಳಗಿಸುವ ಶಕ್ತಿಗಳಲ್ಲಿ ಕಿರಣಗಳಿಂದ ಬೆಳಗುವ ಹಿರಿಯ ಬೆಳಕು ರವಿ ನಾನು.[ರವ=ನಾದಗಳಿಂದ, ಇ=ಜ್ಞೇಯನಾಗಿ ರವಿಎಂಬ ಹೆಸರಿನಿಂದ ರವಿಯಲ್ಲಿದ್ದೇನೆ.] ಮರುತ್ತುಗಳ ಸಂತತಿಯಲ್ಲಿ ಮರೀಚಿ ನಾನು, [ಮರಿ=ನೀರು ತುಂಬಿದ ಮೊಡಗಳನ್ನು, ಚಿ=ಪ್ರಚೋದಿಸುವುದರಿಂದ ಮರೀಚಿಎನ್ನಿಸಿ ಪ್ರವಹವಾಯುತನಯ ಮರೀಚಿಯಲ್ಲಿದ್ದೇನೆ.] ನಕ್ಷತ್ರಗಳ ಒಡೆಯ ಚಂದ್ರ [ಶ =ಎಲ್ಲ ಸುಖಗಳಿಗಿಂತ, ಶಿ=ಅಧಿಕ ಸುಖರೂಪನಾಗಿ ಶಶಿಎನಿಸಿ ಚಂದ್ರನಲ್ಲಿದ್ದು ಅವನಿಗೆ ನಕ್ಷತ್ರಗಳ ಒಡೆತನವಿತ್ತವನು ನಾನು.
ತನ್ನ ವಿಭೂತಿಗಳ ಬಗ್ಗೆ ಹೇಳುತ್ತ ಕೃಷ್ಣ ಮೊಟ್ಟಮೊದಲು ನಿತ್ಯ ಉಪಾಸನೆಯಲ್ಲಿ ಬಹಳ ಮುಖ್ಯವಾದ ತನ್ನ ಸ್ವರೂಪ ವಿಭೂತಿಯನ್ನು ಹೇಳುತ್ತಾನೆ. ಅದಿತಿಯ ಹನ್ನೆರಡು ಮಂದಿ ಪುತ್ರರಲ್ಲಿ (ದ್ವಾದಶಾದಿತ್ಯರು-ವಿವಸ್ವಾನ್(ಸೂರ್ಯ), ಅರ್ಯಮಾ, ಪೂಷಾ, ತ್ವಷ್ಟಾ, ಸವಿತಾ, ಭಗ, ಧಾತಾ, ವಿಧಾತ, ವರುಣ, ಮಿತ್ರ, ಇಂದ್ರ, ಮತ್ತು ವಾಮನರೂಪಿ ವಿಷ್ಣು ) ಒಬ್ಬ ಭಗವಂತನ ಸಾಕ್ಷಾತ್ ವಿಭೂತಿ. ಆತನೇ ವಾಮನ ರೂಪಿ ವಿಷ್ಣು. ಆದ್ದರಿಂದ ಕೃಷ್ಣ ಹೇಳುತ್ತಾನೆ ದ್ವಾದಶಾದಿತ್ಯರಲ್ಲಿ ವಿಷ್ಣು ನಾನುಎಂದು. ಇನ್ನು ಆದಿತ್ಯರು ಎಂದರೆ ಸಮಸ್ತ ದೇವತೆಗಳು ಎನ್ನುವ ಅರ್ಥವಿದೆ. ಸರ್ವ ದೇವತೆಗಳಲ್ಲಿ ದೇವೋತ್ತಮ ವಿಷ್ಣು ಭಗವಂತ.
ಇಲ್ಲಿ ಬರುವ ಪ್ರತಿಯೊಂದು ಭಗವಂತನ ಹೆಸರಿಗೆ ಒಂದು ಅರ್ಥನಿಷ್ಪತ್ತಿ(etymological meaning) ಇದೆ. ವಿಷ್ಣುಎನ್ನುವ ನಾಮ ಏನನ್ನು ಹೇಳುತ್ತದೆ ಎಂದು ಸಂಕ್ಷಿಪ್ತವಾಗಿ ನೋಡೋಣ: ಪುರಾಣದಲ್ಲಿ, ಭಾರತದಲ್ಲಿ ಬಂದಿರತಕ್ಕಂತಹ ಪೌರಾಣಿಕ ಅರ್ಥ ನೋಡಿದರೆ ಮೂರು ಧಾತುವಿನಿಂದ ವಿಷ್ಣುಃಶಬ್ದ ನಿಷ್ಪನ್ನವಾಗಿದೆ ಎನ್ನುವುದು ತಿಳಿಯುತ್ತದೆ. (೧) ವಿಷಲ್-ವ್ಯಾಪ್ತೋ (೨) ವಿಷತಿ-ಪ್ರವೇಶೇ (೩) ವೇತಿ- ಪ್ರಜನಯತಿ, ಗತಿ, ಕಾಂತಿ, ಕಾದನೇಷು, ಗಚ್ಛತಿ. ಈ ಧಾತುವಿನ ಅರ್ಥದಲ್ಲಿ ನೋಡಿದಾಗ-ವಿಷ್ಣುಃ ಎಂದರೆ ಎಲ್ಲ ಕಡೆ ತುಂಬಿದವನು(ವ್ಯಾಪ್ತ). ಆತ ಎಲ್ಲದರ ಹೊರಗೂ ಮತ್ತು ಎಲ್ಲದರ ಒಳಗೂ(ಪ್ರವೇಶ) ತುಂಬಿರುವುದರಿಂದ ಆತ ವಿಷ್ಣುಃ. ಇದನ್ನು ನಾರಾಯಣ ಸೂಕ್ತದಲ್ಲಿ ಅಂತರ್ ಬಹಿಶ್ಚ ತತ್ ಸರ್ವಂ ವ್ಯಾಪ್ಯ ನಾರಾಯಣ ಸ್ಥಿತಃಎಂದಿದ್ದಾರೆ. ಇನ್ನು ವೇತೀತಿ-ವಿಷ್ಣುಃ’. ಎಲ್ಲರು ಯಾರನ್ನು ಆಶ್ರಯಿಸಿಕೊಂಡಿದ್ದಾರೋ ಅವನು ವಿಷ್ಣು-ಸರ್ವಾಶ್ರಯಧಾತ ಭಗವಂತ.ವೇತಿ-ಪ್ರಜನಯತಿ’-ಯಾರು ಇಡೀ ಪ್ರಪಂಚವನ್ನು ಸೃಷ್ಟಿ ಮಾಡಿದನೋ ಅವನು ವಿಷ್ಣು.ವೇತಿ-ಗತಿ’- ಎಲ್ಲರನ್ನು ರಕ್ಷಣೆ ಮಾಡುವ ಸರ್ವ ರಕ್ಷಕ ಭಗವಂತ ವಿಷ್ಣು.ವೇತಿ-ಕಾಂತಿ(ಇಚ್ಛೆ)’-ಇಡೀ ಜಗತ್ತನ್ನು ರಕ್ಷಿಸಿ ಉದ್ಧಾರ ಮಾಡಬೇಕು ಎನ್ನುವ ಸತ್ಯ ಸಂಕಲ್ಪ ಇರುವವ ವಿಷ್ಣು. ವೇತಿ-ಕಾದನೇಶು’-ಸಮಸ್ತ ಜಗತ್ತನ್ನು ಯಾರು ಸಂಹಾರ ಮಾಡುತ್ತಾನೋ ಅವನು ವಿಷ್ಣು. ವೇತಿ-ಗಚ್ಛತಿ’- ಮೂರು ಹೆಜ್ಜೆಯಿಂದ ತ್ರಿವಿಕ್ರಮನಾಗಿ ಮೂರು ಲೋಕವನ್ನು ಯಾರು ವ್ಯಾಪಿಸುತ್ತಾನೋ ಅವನು ವಿಷ್ಣು. ಸಮಷ್ಟಿಯಾಗಿ ವಿಷ್ಣು ಎಂದರೆದೇವರುಎನ್ನುವ ಅರ್ಥವನ್ನು ಕೊಡುತ್ತದೆ. ಇವು ನಾವು ವಿಷ್ಣುಃ ಶಬ್ದದಿಂದ ಅನುಸಂಧಾನ ಮಾಡಬೇಕಾದ ಕೆಲವು ಅರ್ಥಗಳು. ಇದನ್ನು ಮಹಾಭಾರತದಲ್ಲಿ ಒಂದು ಕಡೆ ನಾಮಗಳ ನಿರ್ವಚನದಲ್ಲಿ ಹೇಳಿದ್ದಾರೆ. ಈ ನಿರ್ವಚನ ಭಾರತದಲ್ಲಿ ಅರ್ಜುನನಿಗೆ ಕೃಷ್ಣನೇ ಹೇಳಿದ ನಿರ್ವಚನ. ಒಟ್ಟಿನಲ್ಲಿ ಎಲ್ಲರಿಗೂ ಆಶ್ರಯನಾದ, ಎಲ್ಲರ ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣನಾದ, ಎಲ್ಲದರ ಒಳಗೂ-ಹೊರಗೂ ತುಂಬಿರುವ, ಮೂರು ಹೆಜ್ಜೆಯಿಂದ ಮೂರು ಲೋಕವನ್ನು ಅಳೆದ ವಿಷ್ಣು ನಾನುಎಂದು ತನ್ನ ಸ್ವರೂಪ ವಿಭೂತಿಯನ್ನು ಕೃಷ್ಣ ವಿವರಿಸಿದ್ದಾನೆ.
ಸ್ವರೂಪ ವಿಭೂತಿಯನ್ನು ಹೇಳಿದ ಕೃಷ್ಣ, ನಂತರ ವಿಷ್ಣುವಿನ ಉಪಾಸನೆಗೆ ಅತ್ಯಂತ ಹಿರಿದಾದ ಪ್ರತೀಕ ಸೂರ್ಯನಲ್ಲಿ ತನ್ನ ವಿಭೂತಿಯನ್ನು ವಿವರಿಸುತ್ತಾನೆ. ನಾವು ಗಾಯತ್ರಿ ಪ್ರತಿಪಾದ್ಯನಾದ ವಿಷ್ಣುವನ್ನು ಸೂರ್ಯನಲ್ಲಿ ಉಪಾಸನೆ ಮಾಡುತ್ತೇವೆ. ಇದು ಸೌರಶಕ್ತಿಯಲ್ಲಿ ಭಗವಂತನ ಉಪಾಸನೆ. ಇದು ಭಗವಂತನ ವಿಭೂತಿಯ ಎರಡನೇ ಮಜಲು. ಅದಕ್ಕಾಗಿ ವಿಷ್ಣುವಿನ ನಂತರ ರವಿಯನ್ನು ಕೃಷ್ಣ ಪ್ರಸ್ತಾಪಿಸುತ್ತಾನೆ. ಸೂರ್ಯ ನಮ್ಮ ಕಣ್ಣಿಗೆ ಕಾಣುವ ಜ್ಯೋತಿಗಳಲ್ಲೇ ಅತ್ಯಂತ ದೊಡ್ಡ ಜ್ಯೋತಿ. ಸೂರ್ಯನಲ್ಲಿ ರವಿನಾಮಕನಾಗಿ ತುಂಬಿರುವ ಭಗವಂತ ಸೌರಶಕ್ತಿಯಾಗಿ ವಿಶ್ವದಲ್ಲಿ ವ್ಯಾಪಿಸಿದ್ದಾನೆ.
ಇಲ್ಲಿ ಬಂದಿರುವ ಭಗವಂತನ ನಾಮ ರವಿಃ’. ರವ+ಇ-ರವದಿಂದ ತಿಳಿಯಲ್ಪಡುವವನು-ರವಿ. ರವಎಂದರೆ ನಾದ. ಯಾರು ಗಾಯತ್ರಿ ರವದಿಂದ ಜ್ಞೇಯನೊ ಅವನು ರವಿಃ. ಬೆಳಕುಗಳಿಗೆ ಬೆಳಕು ಕೊಡುವ ಭಗವಂತ, ಗಾಯತ್ರಿ ಪ್ರತಿಪಾದ್ಯನಾಗಿ, ‘ರವಿನಾಮಕನಾಗಿ ಸೂರ್ಯನಲ್ಲಿ, ಸೂರ್ಯ ಕಿರಣದಲ್ಲಿ ಸನ್ನಿಹಿತನಾಗಿದ್ದಾನೆ.
ಕೃಷ್ಣ ಹೇಳುವ ಮುಂದಿನ ವಿಭೂತಿ ಆಕಾಶದಲ್ಲಿ ವಾತಾವರಣದ ಬೇರೆಬೇರೆ ಪದರನ್ನು ನಿಯಮಿಸುವ ಮರುತ್ತುಗಳ ಸಂತತಿಯ ಮರೀಚಿ. ಮೂಲಭೂತವಾಗಿ ಮರುತ್ತುಗಳು ನಲವತ್ತೊಂಬತ್ತು ಮಂದಿ. ಇವರಲ್ಲಿ ಹತ್ತು ಮಂದಿ ನಮ್ಮ ಪಿಂಡಾಂಡ ನಿಯಮನ ಮಾಡುವವರು. ಈ ಮರುತ್ತುಗಳ ನಿಯಮನ ಮಾಡುವವ ಪ್ರವಹವಾಯು. ಪುರಾಣಗಳಲ್ಲಿ ಎಲ್ಲಿಯೂ ಈ ನಲವತ್ತೊಂಬತ್ತು ಮರುತ್ತುಗಳಲ್ಲಿ ಮರೀಚಿ ಎನ್ನುವ ಹೆಸರು ಬಂದಿಲ್ಲ. ಆದ್ದರಿಂದ ಇಲ್ಲಿ ಮರೀಚಿ ಈ ನಲವತ್ತೊಂಬತ್ತು ಮರುತ್ತುಗಳಲ್ಲಿ ಒಬ್ಬ ಎಂದು ಹೇಳುವುದು ಕಷ್ಟ. ಆದರೆ ಆತ ಪ್ರವಹವಾಯುವಿನ ಪುತ್ರ ಎನ್ನುವುದು ಸ್ಪಷ್ಟ. ಮಧ್ವಾಚಾರ್ಯರ ಐತರೇಯ ಉಪನಿಷತ್ತಿನ ಭಾಷ್ಯ ಮತ್ತು ಗೀತಾ ತಾತ್ಪರ್ಯವನ್ನು ಸಮನ್ವಯ ಮಾಡಿ ನೋಡಿದರೆ-ಮರೀಚಿ ಹದಿನೆಂಟನೇ ಕಕ್ಷೆಯಲ್ಲಿರುವ ಭೂತವಾಯು ದೇವತೆ. ಆದ್ದರಿಂದ ಈತ ಆಕಾಶ ಅಭಿಮಾನಿ ದೇವತೆ(ಗಣಪತಿ)ಯ ಸಮಾನಸ್ಕಂದ. ಭಗವಂತ ಮರೀಚಿನಾಮಕನಾಗಿ ಭೂತವಾಯುವಿನ ಅಭಿಮಾನಿ ದೇವತೆಯೊಳಗೆ ವಿಭೂತಿಯಾಗಿ ನಿಂತಿದ್ದಾನೆ.
ಇಲ್ಲಿ ಬಂದಿರುವ ಭಗವಂತನ ನಾಮ ಮರೀಚಿ’. ಮರ ಎಂದರೆ ನೀರು. ಮರಿ ಎಂದರೆ ನೀರು ತುಂಬಿರುವ ಮೋಡ. ಈ ಮೊಡವನ್ನು ಎಲ್ಲಿಗೆ ಕಳುಹಿಸಬೇಕೋ ಅಲ್ಲಿಗೆ ಸೇರಿಸುವ ವಾಯುವಿನಲ್ಲಿ ಸನ್ನಿಹಿತನಾಗಿ, ಮಳೆ ಬರಿಸುವ ಶಕ್ತಿಯನ್ನು ಮರೀಚಿಗೆ ಕೊಟ್ಟು, ಅವನಲ್ಲಿ ವಿಭೂತಿ ರೂಪದಲ್ಲಿ ಕೂತ ಭಗವಂತ ಮರೀಚಿ’.
ಆಕಾಶದಲ್ಲಿ ಸೂರ್ಯ ಮತ್ತು ವಾಯುವಿನಲ್ಲಿ ತನ್ನ ವಿಭೂತಿಯನ್ನು ಹೇಳಿದ ಕೃಷ್ಣ, ಮುಂದೆ ನಕ್ಷತ್ರಗಳ ರಾಜ ಚಂದ್ರನಲ್ಲಿ ತನ್ನ ವಿಭೂತಿಯನ್ನು ಹೇಳುತ್ತಾನೆ. ಇದು ವಿಜಾತಿಯ ಸ್ರಷ್ಟಪ್ರಭ ವಿಭೂತಿ. ನಕ್ಷತ್ರಗಳ ಒಡೆಯ ಚಂದ್ರ. ಚಂದ್ರನಲ್ಲಿ ಎಲ್ಲ ನಕ್ಷತ್ರಗಳನ್ನು ನಿಯಮಿಸುವ ಶಕ್ತಿಯಾಗಿ ಶಶಿಶಬ್ದವಾಚ್ಯ ಭಗವಂತ ಕೂತು ಅವನಿಗೆ ಆ ಶಕ್ತಿಯನ್ನು ಕೊಟ್ಟ.
ಇಲ್ಲಿ ಬಂದಿರುವ ಭಗವಂತನ ನಾಮ ಶಶಿಃ’. ಶಶ ಉಳ್ಳವನು ಶಶಿ. ಎಂದರೆ ಆನಂದ. ಶಶ ಎಂದರೆ ಆನಂದದಆನಂದಪರಮಾನಂದ. ಇಂತಹ ಪರಮಾನಂದ ಉಳ್ಳ ಭಗವಂತ ಆನಂದ ಮೂರ್ತಿಯಾಗಿ ಚಂದ್ರನಲ್ಲಿ ಕೂತ. ಈ ಕಾರಣದಿಂದ ನಮಗೆ ಬೆಳದಿಂಗಳು ಆನಂದವನ್ನು ಕೊಡುತ್ತದೆ.
·  ಶ್ಲೋಕ - 22
ವೇದಾನಾಂ ಸಾಮವೇದೋSಸ್ಮಿ ದೇವಾನಾಮಸ್ಮಿ ವಾಸವಃ ।
ಇಂದ್ರಿಯಾಣಾಂ ಮನಶ್ಚಾಸ್ಮಿ ಭೂತಾನಾಮಸ್ಮಿ ಚೇತನಾ ೨೨॥
ವೇದಾನಾಮ್ ಸಾಮ ವೇದಃ ಅಸ್ಮಿ ದೇವಾನಾಮ್ ಅಸ್ಮಿ ವಾಸವಃ ।
ಇಂದ್ರಿಯಾಣಾಮ್ ಮನಃ ಚ ಅಸ್ಮಿ ಭೂತಾನಾಮ್ ಅಸ್ಮಿ ಚೇತನಾ ವೇದಗಳಲ್ಲಿ ಸಾಮವೇದ ನಾನು. [ಸಾಮ= ಎಲ್ಲೆಡೆಯು ಸಮನಾಗಿದ್ದು, ವೇದ= ಜ್ಞಾನರೂಪನಾದ್ದರಿಂದ ಸಾಮವೇದಎನ್ನಿಸಿ ಸಾಮವೇದದಲ್ಲಿದ್ದೇನೆ.] ದೇವತೆಗಳಲ್ಲಿ ಇಂದ್ರ ನಾನು. [ವಾಸ= ಎಲ್ಲ ನೆಲೆಗಳಲ್ಲು, ವ=ಇರುವವನಾಗಿ- ವಾಸವಎನ್ನಿಸಿ ದೇವೇಂದ್ರನಲ್ಲಿದ್ದೇನೆ.] ಇಂದ್ರಿಯಗಳಲ್ಲಿ ಮನಸ್ಸು ನಾನು. [ಅರಿವು ನೀಡುವುದರಿಂದ ಮನಸ್ಎನ್ನಿಸಿ ಮನಸ್ಸಿನಲ್ಲಿದ್ದೇನೆ.] ಜೀವಿಗಳ ಚೈತನ್ಯ ನಾನು. [ಚೇತಸ್ =ಎಲ್ಲ ಜೀವಿಗಳ ನೆನಪಿನ ಗಂಟನ್ನು, ನಾ=ಬಿಡಿಸುವುದರಿಂದ ಚೇತನಾಎನ್ನಿಸಿ ಚೇತನಾಶಕ್ತಿಯಲ್ಲಿದ್ದೇನೆ.]
ಆಕಾಶದಲ್ಲಿ-ಸೂರ್ಯ, ಚಂದ್ರ, ನಕ್ಷತ್ರ, ಗಾಳಿಯಲ್ಲಿ ತನ್ನ ವಿಭೂತಿಯನ್ನು ಹೇಳಿದ ಕೃಷ್ಣ, ಇಲ್ಲಿ ಆಕಾಶದ ವಿಶೇಷ ಗುಣವಾದ ಶಬ್ದದ ಬಗ್ಗೆ ಹೇಳುತ್ತಾನೆ. ಶಬ್ದದ ವಿಭೂತಿ-ವೇದ. ವೇದದಲ್ಲಿ ವಿಶಿಷ್ಟ-ಸಾಮವೇದ. ವೇದಗಳೆಲ್ಲವೂ ಅಪೂರ್ವವಾಗಿದ್ದರೂ ಕೂಡಾ, ಸಾಮವನ್ನು ಏಕೆ ವಿಶೇಷವಾಗಿ ಹೇಳಿದ್ದಾರೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಬರಬಹುದು. ವೇದದಲ್ಲಿ ತಾರತಮ್ಯವಿಲ್ಲ. ಆದರೆ ವೇದಾಭಿಮಾನಿಗಳಲ್ಲಿ ತಾರತಮ್ಯವಿದೆ. ಸಾಮವೇದದ ಅಭಿಮಾನಿ ಪ್ರಾಣದೇವರು. ಶಾಸ್ತ್ರಕಾರರು ಹೇಳುವಂತೆ ಸಾಮಗಾನವನ್ನು ಅತ್ಯಂತ ಮಧುರವಾಗಿ ಹಾಡುವವರು ಪ್ರಾಣದೇವರು. ಪ್ರಾಣದೇವರ ಹಾಡು 'ಸಾಮಗಾನ' ಭಗವಂತನಿಗೆ ಅತೀ ಇಷ್ಟ. ಸಾಮವೇದದ ವೈಶಿಷ್ಟ್ಯ ನಾದ’. ಒಂದು ಶಬ್ದವನ್ನು ಹೇಗೆ ಒಡೆದರೂ, ಅದನ್ನು ಹೇಗೆ ಪದಪಾಠ ಮಾಡಿದರೂ, ಅದರಲ್ಲಿ ಯಾವ ನಾದ ತುಂಬಿದರೂ, ಅದು ಭಗವಂತನ ನಾಮದೇಯವಾಗುತ್ತದೆ ಎನ್ನುವ ಪ್ರಯೋಗ ಸಾಮವೇದ. ಋಗ್ವೇದ ಮತ್ತು ಯಜುರ್ವೇದದಲ್ಲಿ ಮಂತ್ರಗಳ ಹಾಗು ಶಬ್ದಗಳ ಮುಖೇನ ಭಗವಂತನ ಸ್ತುತಿಯಾದರೆ, ಸಾಮವೇದದಲ್ಲಿ ಶಬ್ದದ ಜೊತೆಗೆ ನಾದವನ್ನು ಭಗವಂತನಲ್ಲಿ ಸಮನ್ವಯಗೊಳಿಸುವ ಅಪೂರ್ವ ಗುಣಧರ್ಮವಿದೆ(Exclusive quality). ಶಬ್ದಗಳ ಹಿಂದಿನ ನಾದದಿಂದ ಭಗವಂತನನ್ನು ಕಾಣುವ ನಾದೋಪಾಸನೆ ಇರುವ ವೇದ ಸಾಮವೇದವಾದ್ದರಿಂದ-ಭಗವಂತ ಸಾಮದಲ್ಲಿ ವಿಶೇಷವಾಗಿ ಸನ್ನಿಹಿತನಾಗಿದ್ದಾನೆ. ಆದ್ದರಿಂದ 'ಸಾಮ' ಭಗವಂತನ ಅನ್ವರ್ಥ ನಾಮ. ಎಲ್ಲ ಶಬ್ದಗಳು ಭಗವದ್ ಪರ ಎನ್ನುವುದನ್ನು ಋಗ್ವೇದ ತೋರಿಸಿದರೆ, ಶಬ್ದವಷ್ಟೇ ಅಲ್ಲ, ಎಲ್ಲ ಘೋಷಗಳೂ ಭಗವಂತನನ್ನು ಹೇಳುತ್ತವೆ ಎನ್ನುವುದನ್ನು ಸಾಮವೇದ ತೋರಿಸುತ್ತದೆ.
ಭಗವಂತ ಸಾಮಃಮತ್ತು ಆತ 'ವೇದಃ'. ಇಲ್ಲಿ ಸಾಮಃಎಂದರೆ ಎಲ್ಲೆಡೆಯು ಸಮನಾಗಿರುವವ ಎಂದರ್ಥ. ವೇದಃಎಂದರೆ ಜ್ಞಾನ ರೂಪ. ಭಗವಂತ ನಾದವಾಗಿ ಸಾಮವೇದದಲ್ಲಿ ತುಂಬಿ ಅದನ್ನು ವಿಭೂತಿಯಾಗಿ ಮಾಡಿದ.
ವೇದದ ನಂತರ ವೇದಪ್ರತಿಪಾದ್ಯ ದೇವತೆಗಳು. ದೇವತೆಗಳಲ್ಲಿ ಮುಖ್ಯವಾಗಿ ತತ್ವಾಭಿಮಾನಿ ದೇವತೆಗಳು. ಭಗವಂತನ ಅಧಿಷ್ಠಾನವಾಗಿ ಇಂದ್ರಿಯಯಗಳನ್ನು ನಿಯಮಿಸುವ ದೇವತೆಗಳಲ್ಲಿ ಮುಖ್ಯನಾದವ ವಾಸವ’(ಇಂದ್ರ). ಈತ ಬಾಹ್ಯೇಂದ್ರಿಯಾಭಿಮಾನಿ ದೇವತೆಗಳಲ್ಲಿ ಶ್ರೇಷ್ಠ. ಈತ ಐದು ಜ್ಞಾನೇಂದ್ರಿಯ(ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ) ಮತ್ತು ಐದು ಕರ್ಮೇಂದ್ರಿಯ(ಕೈ, ಕಾಲು, ಬಾಯಿ, ಪಾಯು, ಉಪಸ್ಥ)ಗಳಲ್ಲಿ ಅತ್ಯಂತ ವಿಶಿಷ್ಟವಾದ ಕೈ(ಹಸ್ತ)ಯ ಅಭಿಮಾನಿ ದೇವತೆ. ಇತರ ಎಲ್ಲಾ ಇಂದ್ರಿಯಗಳು ಬೇರೆ ಪ್ರಾಣಿಗಳಿಗೂ ಇದೆ. ಆದರೆ ಕುಸುರಿ ಕೆಲಸ, ನಾಟ್ಯಭಂಗಿ, ಶಿಲ್ಪ ಇತ್ಯಾದಿ ಅತ್ಯದ್ಭುತ ಹಸ್ತಕೌಶಲ ಭಗವಂತ ಕೇವಲ ಮಾನವರಿಗೆ ಮಾತ್ರ ಕೊಟ್ಟಿದ್ದಾನೆ. ಮಹಾಭಾರತದಲ್ಲಿ ನಮ್ಮ ಕೈಯ ವಿಶಿಷ್ಟತೆಯನ್ನು ಹೇಳುವ ಒಂದು ಕಥೆ ಇದೆ. ಒಬ್ಬ ನಿರುದ್ಯೋಗಿ ವಿದ್ವಾಂಸ ತನ್ನ ನಿರುದ್ಯೋಗದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ತೀರ್ಮಾನ ಮಾಡಿ ನಿಂತಿರುವಾಗ, ಒಂದು ನರಿ ಆತನಲ್ಲಿ ಹೇಳುತ್ತದೆ: ಅಲ್ಲಯ್ಯ, ನಿನಗೆ ದೇವರು ದುಡಿಯಲು ಎರಡು ಕೈ ಕೊಟ್ಟಿದ್ದಾನೆ. ಆದರೆ ನಮಗೆ ಸಿಕ್ಕಿದ ಆಹಾರವನ್ನು ತಿನ್ನಲು ಕೂಡ ಕೈ ಇಲ್ಲ. ಮೈಯಲ್ಲಿ ಕುಳಿತು ರಕ್ತ ಹೀರುವ ನೊಣವನ್ನು ಓಡಿಸಲು ಕೈ ಇಲ್ಲ. ಆದರೂ ನಾವು ಬದುಕುತ್ತೇವೆ. ನಿಮಗೆ ಇಂತಹ ಅಮೂಲ್ಯ ಕೈ ಇದ್ದರೂ ನೀವು ಸಾಯಲು ಮುಂದಾಗುತ್ತಿದ್ದೀರಲ್ಲ-ನೀವೆಂಥಾ ಬುದ್ಧಿಗೇಡಿಗಳುಎಂದು. ಈ ಮಾತನ್ನು ಕೇಳಿ ಆ ವಿದ್ವಾಂಸ ಮರಳಿ ಬರುತ್ತಾನೆ. ಈ ಕಥೆಯಲ್ಲಿ ಕೈಯ ಮಹತ್ವವನ್ನು ತಿಳಿ ಹೇಳಿದ್ದಾರೆ. ಕೈಯ ಅಭಿಮಾನಿಯಾದ ಆ ವಾಸವನಲ್ಲಿ ಭಗವಂತ ವಾಸ ಮಾಡಿ, ಇತರ ಎಲ್ಲಾ ತತ್ವಾಭಿಮಾನಿ ದೇವತೆಗಳನ್ನು ನಿಯಂತ್ರಿಸುವ ಶಕ್ತಿಯನ್ನು ತುಂಬಿದ. ಇಂತಹ ವಾಸವನಾಮಕ ಭಗವಂತ ವಿಭೂತಿಯಾಗಿ ಇಂದ್ರನಲ್ಲಿ ತುಂಬಿರುವುದರಿಂದ ಇಂದ್ರನನ್ನು ವಾಸವಎಂದು ಕರೆಯುತ್ತಾರೆ.
ಇಲ್ಲಿ ಬಂದಿರುವ ಭಗವಂತನ ನಾಮ ವಾಸವಃ’. ‘ವಾಸವಎಂದರೆ ವಸುಗಳ ಸಮುದಾಯ. ವಸುಗಳೆಂದರೆ-"ದೇವತೆಗಳ ಸಮುದಾಯ". ಬ್ರಹ್ಮಾಂಡದಲ್ಲಿದ್ದು-ಬ್ರಹ್ಮಾಂಡವನ್ನು, ಪಿಂಡಾಂಡದಲ್ಲಿದ್ದು-ಪಿಂಡಾಂಡವನ್ನು ನಿಯಂತ್ರಿಸುವ ತತ್ವಾಭಿಮಾನಿ ದೇವತೆಗಳ ನಿಯಾಮಕನಾದ ಭಗವಂತ ವಾಸವಃ. ಎಲ್ಲ ನೆಲೆಗಳಲ್ಲು, ಇರುವವನಾಗಿ ಭಗವಂತ ವಾಸವಃ’.
ಬಾಹ್ಯೇಂದ್ರಿಯದ ನಂತರ ಕೃಷ್ಣ ನಮ್ಮ ಅಂತರಂಗ ಪ್ರಪಂಚದಲ್ಲಿ ತನ್ನ ವಿಭೂತಿಯನ್ನು ವಿವರಿಸುತ್ತಾನೆ. ಮನುಷ್ಯನ ಎಲ್ಲ ಕಾರುಬಾರಿಗೆ ಕಾರಣ ಮನಸ್ಸು. ಮನಸ್ಸಿಲ್ಲದಿದ್ದರೆ ಎಲ್ಲವೂ ಶೂನ್ಯ. ಇದು ಇಂದ್ರಿಯಗಳ ಚಟುವಟಿಕೆಗಳಿಗೆ ಮೂಲ ಪ್ರೇರಣೆ. ಹೊರಗಿನ ಎಲ್ಲ ವಸ್ತುವನ್ನು ಒಳಗಿನ ಆತ್ಮಕ್ಕೆ ಮುಟ್ಟಿಸುವ ಮಾಧ್ಯಮ ಮನಸ್ಸು’. ಇಂದ್ರಿಯ ಇರುವುದು ಸಾರ್ಥಕವಾಗುವುದು ಮನಸ್ಸಿನ ಮೂಲಕ. ಶಾಸ್ತ್ರ ಓದಿದಾಗ ನಮಗೆ ವಿಷಯ ಹೊಳೆಯುವುದು ಮನಸ್ಸಿನ ಮೂಲಕ. ಭಗವಂತ ಮನನಕ್ಕೆ ಕಾರಣನಾಗಿ ಮನಃಶಬ್ದ ವಾಚ್ಯನಾಗಿ ನಮ್ಮಲ್ಲಿ ಕೂತಿರುವುದರಿಂದ ನಮಗೆ ಈ ಶಕ್ತಿ ಬಂತು. ಮನುತೇ ಇತಿ ಮನಃ. ಜ್ಞಾನಸ್ವರೂಪನಾದವ, ಎಲ್ಲವನ್ನು ತಿಳಿಯುವವ, ಎಲ್ಲವನ್ನು ಬಲ್ಲವನು ಮನಸ್ಶಬ್ದ ವಾಚ್ಯ ಭಗವಂತ.
ಮನಸ್ಸಿನ ನಂತರ, ಮನಸ್ಸಿನ ಮೂಲಕ ಬರುವ ವಿಷಯವನ್ನು ಗ್ರಹಣ ಮಾಡುವ ಶಕ್ತಿ- ಅರಿವು(Awareness). ಭಗವಂತ ನಮ್ಮೊಳಗಿದ್ದು, ಮನಸ್ಸು ಕಂಡದ್ದನ್ನು ಅರಿವಾಗಿ-ವಿಷಯವನ್ನು ಸ್ವೀಕರಿಸುವ ಗ್ರಹಣ ಶಕ್ತಿಯಾಗಿ ಕೂತ. ಇದರಿಂದ ಪ್ರಪಂಚವನ್ನು ಗ್ರಹಣ ಮಾಡುವ ಶಕ್ತಿ ಜೀವಕ್ಕೆ ಬಂತು. ಇಡೀ ವಿಶ್ವವನ್ನು ತನ್ನ ಅರಿವಿನಿಂದ ಗ್ರಹಣ ಮಾಡಿ, ವ್ಯಾಪಿಸುವ ವಿಸ್ಮಯ ಭಗವಂತ ಚೇತನಃ’. ‘ಚೇತಸ್ಎಂದರೆ ನಮ್ಮ ಸುಪ್ತಪ್ರಜ್ಞೆ. ನಮ್ಮ ಪ್ರತಿಯೊಂದು ಅನುಭವ ನಮ್ಮ ಸುಪ್ತಪ್ರಜ್ಞೆಯಲ್ಲಿ ಸಂಗ್ರಹವಾಗಿರುತ್ತದೆ. ಚಿತ್ತಕ್ಕೆ ಎಲ್ಲವನ್ನು ಗ್ರಹಿಸುವ ಶಕ್ತಿ ಕೊಟ್ಟವ ಚೇತನಾನಾಮಕ ಭಗವಂತ. ಇದು ಭಗವಂತನ ವಿಭೂತಿ.
·  ಶ್ಲೋಕ - 23
ರುದ್ರಾಣಾಂ ಶಂಕರಶ್ಚಾಸ್ಮಿ ವಿತ್ತೇಶೋ ಯಕ್ಷರಕ್ಷಸಾಮ್
ವಸೂನಾಂ ಪಾವಕಶ್ಚಾಸ್ಮಿ ಮೇರುಃ ಶಿಖರಿಣಾಮಹಮ್ ೨೩॥
ರುದ್ರಾಣಾಮ್ ಶಂಕರಃ ಚ ಅಸ್ಮಿ ವಿತ್ತ ಈಶಃ ಯಕ್ಷರಕ್ಷಸಾಮ್ ।
ವಸೂನಾಮ್ ಪಾವಕಃ ಚ ಅಸ್ಮಿ ಮೇರುಃ ಶಿಖರಿಣಾಮ್ ಅಹಮ್ರುದ್ರರಲ್ಲಿ [ಹನ್ನೊಂದು ಮಂದಿ] ಪ್ರಧಾನ ರುದ್ರ ನಾನು. [ಶಂ=ಸುಖವನ್ನು, ಕರ=ಕರುಣಿಸುವುದರಿಂದ ಶಂಕರಎನ್ನಿಸಿ ಶಂಕರನಲ್ಲಿದ್ದೇನೆ.] ಯಕ್ಷ-ರಾಕ್ಷಸರ ಪಡೆಯ ಒಡೆಯ ಕುಬೇರ [ವಿತ್ತ=ಸಿರಿಗೆ, ಈಶ=ಒಡೆಯನಾದ್ದರಿಂದ ವಿತ್ತೇಶಎನ್ನಿಸಿ ಕುಬೇರನಲ್ಲಿದ್ದು ಅವನಿಗೆ ಯಕ್ಷ-ರಾಕ್ಷಸರ ಒಡೆತನವನ್ನಿತ್ತವನು] ನಾನು. [ಎಂಟು ಮಂದಿ] ವಸುಗಳಲ್ಲಿ ಅಗ್ನಿದೇವ ನಾನು. [ಪಾವನಗೊಳಿಸುವುದರಿಂದ ಪಾವಕಎನ್ನಿಸಿ ಅಗ್ನಿಯಲ್ಲಿದ್ದೇನೆ.] ಚೆಲುಕೋಡಿನ ಬೆಟ್ಟಗಳಲ್ಲಿ ಮೇರು ನಾನು. [ಈರು=ಬೇರೊಬ್ಬ ಪ್ರೇರಕ, ಮಾ=ಇರದ್ದರಿಂದ ಮೇರುಎನ್ನಿಸಿ ಮೇರು ಗಿರಿಯಲ್ಲಿದ್ದೇನೆ.]
ಮನಸ್ಸಿನಲ್ಲಿನ ತನ್ನ ವಿಭೂತಿಯನ್ನು ಹೇಳಿದ ಕೃಷ್ಣ, ಇಲ್ಲಿ ಮನಸ್ಸಿನ ಅಭಿಮಾನಿಯಾದ ಶಿವನಲ್ಲಿ ತನ್ನ ವಿಭೂತಿಯನ್ನು ವಿವರಿಸುತ್ತಾನೆ. ಕೃಷ್ಣ ಹೇಳುತ್ತಾನೆ: ರುದ್ರರಲ್ಲಿ ಶಂಕರ ನಾನುಎಂದು. ರುದ್ರರು ಹನ್ನೊಂದು ಮಂದಿ. ರೈವತ, ಓಜ, ಭವ, ಭೀಮ, ವಾಮದೇವ, ಉಗ್ರ, ವೃಷಾಕಪಿ, ಅಜೈಕಪಾತ್, ಅಹಿರ್ಬುದ್ನಿ, ವಿರೂಪಾಕ್ಷ, ಮತ್ತು ಗಣಪ್ರಧಾನನಾದ ಮಹಾದೇವ. (ಈ ಏಕಾದಶ ರುದ್ರರಿಗೆ ಒಬ್ಬೊಬ್ಬರಿಗೂ ಅನೇಕ ಹೆಸರುಗಳುಂಟು. ಬೇರೆಬೇರೆ ಕಡೆ ಬೇರೆಬೇರೆ ಹೆಸರು ಉಲ್ಲೇಖ ಮಾಡಿದ್ದಾರೆ). ನಮ್ಮ ಮನಸ್ಸನ್ನು ನಿಯಂತ್ರಿಸುವ ರುದ್ರ’-ಮಹಾದೇವ ಅಥವಾ ಶಿವ. ಆತನಿಗೆ ಶಂಕರಎಂದು ಹೆಸರು. ರುದ್ರ ಎಂದರೆ ರೋದಯತಿ ಇತಿ ರುದ್ರಃ-ದುಃಖ ಕೊಡುವವನು ಎನ್ನುವ ಒಂದು ಅರ್ಥ. ಭಗವಂತ ದುಃಖ ಕೊಡುವುದು ಕೇವಲ ದುಷ್ಟರಿಗೆ. ಇನ್ನೊಂದು ಅರ್ಥದಲ್ಲಿ ನೋಡಿದರೆ- ರುಜಂ ದ್ರಾವಯತಿ ಇತಿ ರುದ್ರಃ. ಅಂದರೆ ನಮ್ಮಲ್ಲಿರುವ ರೋಗವನ್ನು ಪರಿಹಾರ ಮಾಡಿ ಸುಖಕೊಡುವವನು. ಮೂಲತಃ ರೋಗ ಮಾನಸಿಕ. ನಮ್ಮ ಮನಸ್ಸು ದೃಢವಾಗಿದ್ದರೆ ಕಾಯಿಲೆ ಬರುವುದಿಲ್ಲ. ಒಂದು ವೇಳೆ ಕಾಯಿಲೆ ಬಂದರೆ ಅದನ್ನು ಎದುರಿಸಬಲ್ಲೆ ಎನ್ನುವ ದೃಢಮನಸ್ಸು ಇದ್ದರೆ-ಮನಸ್ಸೇ ಆ ರೋಗವನ್ನು ಗುಣಪಡಿಸಬಲ್ಲದು.
ಶಂಕರಎಂದರೆ ಸುಖವನ್ನು, ಸಂತೋಷವನ್ನು ಕೊಡುವವ. ಆರೋಗ್ಯವಂತ ದೇಹವೇ ಜೀವನದಲ್ಲಿ ಬಹಳ ದೊಡ್ಡ ಸುಖ. ಯಾವುದೇ ಪುಣ್ಯ ಕರ್ಮ ಸಾಧನೆ ಮಾಡಲು ಆರೋಗ್ಯವಂತ ದೇಹ ಬೇಕು.ರುದ್ರಶರೀರಪುರುಷ. ಈ ದೇಹ ನಿಂತು ನಡೆದಾಡಬೇಕಾದರೆ ದೇಹದಲ್ಲಿ ಶರೀರಪುರುಷನಾದ ಶಿವಶಕ್ತಿ ಕಾರಣ. ನಮ್ಮ ಮನಸ್ಸಿನಲ್ಲಿ ಕೂತು ಮಾನಸಿಕ ತುಮುಲವನ್ನು ಹೋಗಲಾಡಿಸಿ, ಆರೋಗ್ಯವಂತ ಶರೀರ ಕೊಟ್ಟು, ಆನಂದ ಕೊಡುವವ ರುದ್ರ. ಋಗ್ವೇದದ ಶಿವಸ್ತುತಿಯಲ್ಲಿ ಶಿವನನ್ನು ಭಿಶಕ್ತಮಾಂ ತ್ವ ಭಿಶಜಮ್ಎಂದು ಸ್ತುತಿಸಿದ್ದಾರೆ. ಅಂದರೆ ನೀನು ವೈದ್ಯರ ವೈದ್ಯಎಂದರ್ಥ. ಈ ಕಾರಣಕ್ಕಾಗಿ ಶಿವನನ್ನು ವೈದ್ಯನಾಥಎಂದೂ ಕರೆಯುತ್ತಾರೆ.
ರುದ್ರನನ್ನು ಮಹಾದೇವ ಎಂದು ಕರೆಯಲು ಅನೇಕ ಕಾರಣವಿದೆ. ಇಲ್ಲಿ ದೇವಅಂದರೆ ಇಂದ್ರಿಯ.(ದೇವತೀತಿ ದೇವಂ ಇಂದ್ರಿಯಂ). ಶಿವ ಇಂದ್ರಿಯಾಭಿಮಾನಿ ದೇವತೆಗಳಲ್ಲಿ ಎಲ್ಲರಿಗಿಂತ ದೊಡ್ಡವ. ದೇವತಾ ತಾರತಮ್ಯದಲ್ಲಿ ನೋಡಿದರೆ-ಹನ್ನೊಂದು ಮಂದಿ ರುದ್ರರಲ್ಲಿ ಹತ್ತುಮಂದಿ ರುದ್ರರು ಹದಿನೆಂಟನೇ ಕಕ್ಷೆಯಲ್ಲಿದ್ದರೆ, ಶಿವ ಅದಕ್ಕಿಂತ ಬಹಳ ಎತ್ತರದಲ್ಲಿ ಐದನೇ ಕಕ್ಷೆಯಲ್ಲಿದ್ದಾನೆ. ಶಿವ ಭಗವಂತನ ಸಂಹಾರ ಕರ್ಮದಲ್ಲಿ ವಾಯುದೇವರೊಂದಿಗೆ ಅಂಗಭೂತನಾಗಿ ಸಹಾಯಕಾರಿಯಾಗಿರುವ ಬಹಳ ದೊಡ್ಡ ಶಕ್ತಿ. ಭಗವಂತ ಶಂಕರನಾಮಕನಾಗಿ ಶಿವನಲ್ಲಿ ನಿಂತಿದ್ದಾನೆ. ನಮ್ಮನ್ನು ಭಗವಂತನ ಉಪಾಸನೆಯ ದಾರಿಯಲ್ಲಿ ಕರೆದೊಯ್ದು, ಭಗವತ್ ಸಾಕ್ಷಾತ್ಕಾರಕ್ಕೆ ಮನಸ್ಸನ್ನು ಅಣಿಮಾಡುವವರೇ ರುದ್ರದೇವರು. ಆದ್ದರಿಂದ ಇದು ಭಗವಂತನ ಬಹಳ ದೊಡ್ಡ ವಿಭೂತಿ.
ಇಲ್ಲಿ ಬಂದಿರುವ ಭಗವಂತನ ನಾಮ ಶಂಕರಃ’. ‘ಶಂಎಂದರೆ ಸುಖ, ‘ಕರಎಂದರೆ ಕರುಣಿಸುವವ. ಸ್ವಯಂ ಆನಂದ ಸ್ವರೂಪನಾಗಿದ್ದು, ದುಃಖಮಯವಾದ ಸಂಸಾರವನ್ನು ಖಂಡಿಸಿ- ನಮಗೆ ಮುಕ್ತಿ ಕೊಡುವ ಭಗವಂತ ಶಂಕರಃ’.
ನಮ್ಮ ಅಂತರಂಗದ ಸಂಪತ್ತಿನ ಅಭಿಮಾನಿಯಾದ ಶಿವನ ಬಗ್ಗೆ ಹೇಳಿದ ಕೃಷ್ಣ, ಮುಂದೆ ನಮಗೆ ಬಾಹ್ಯವಿತ್ತವನ್ನು ಕೊಡುವ ಕುಬೇರನಲ್ಲಿ ತನ್ನ ವಿಭೂತಿಯನ್ನು ವಿವರಿಸುತ್ತಾನೆ. ನಮ್ಮ ದೇಹದ ಅಭಿಮಾನಿ ಮತ್ತು ಬಾಹ್ಯವಿತ್ತದ ಅಭಿಮಾನಿ ಕುಬೇರ. ಆತನ ಆಡಳಿತದಲ್ಲಿರುವವರು ಯಕ್ಷರು ಮತ್ತು ರಾಕ್ಷಸರು. ಯಕ್ಷರು ಎಂದರೆ ನರ ಮಾಂಸವನ್ನು ನಿರ್ದಯವಾಗಿ ಭಕ್ಷಣೆ ಮಾಡುವವರು. ರಾಕ್ಷಸರು ಯಕ್ಷರಿಗಿಂತ ಉತ್ತಮರು. ಆದರೆ ಇವರೂ ಕ್ರೂರಿಗಳು. ಇವರಿಂದ ನಾವು ನಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕು.
ಇಲ್ಲಿ ಬಂದಿರುವ ಭಗವಂತನ ನಾಮ ವಿತ್ತೇಶಃ’. ವಿತ್ತ ಎಂದರೆ ಸಿರಿ, ಈಶ ಎಂದರೆ ಒಡೆಯ. ಭಗವಂತ ವಿತ್ತೇಶಎನ್ನಿಸಿ ಕುಬೇರನಲ್ಲಿದ್ದು, ಅವನಿಗೆ ಯಕ್ಷ-ರಾಕ್ಷಸರ ಒಡೆತನವನ್ನು ಕೊಟ್ಟ ಮತ್ತು ಆತನನ್ನು ಬಾಹ್ಯ ಸಂಪತ್ತಿನ ಒಡೆಯನನ್ನಾಗಿ ಮಾಡಿದ. ಇದು ಕುಬೇರನಲ್ಲಿ ಭಗವಂತನ ವಿಶೇಷ ವಿಭೂತಿ.
ವೇದದಲ್ಲಿ ಬರುವ ದೇವತಾಗಣವನ್ನು ಪರಿಗಣನೆ ಮಾಡುವಾಗ, ಆದಿತ್ಯ-ವಸು-ರುದ್ರಗಣ ಮೂರು ಜೊತೆಜೊತೆಯಾಗಿ ಬರುತ್ತವೆ. ಮೂರು ಹೊತ್ತಿನ ಸವನದಲ್ಲಿ ಭಗವಂತನಿಗೆ ಆಹುತಿ ಕೊಡುವುದು ಕೂಡ ಈ ದೇವತಾಗಣದಲ್ಲಿರುವ ಭಗವಂತನಿಗೆ. ಅಷ್ಟವಸುಗಳಲ್ಲಿ ಇರತಕ್ಕ ಭಗವಂತನಿಗೆ ಪ್ರಾತಃಕಾಲದಲ್ಲಿ ಅಷ್ಟಾಕ್ಷರ ಮಂತ್ರ ಗಾಯತ್ರಿ ಮೂಲಕ ಆಹುತಿ ಕೊಡುತ್ತಾರೆ. ಮದ್ಯಾಹ್ನದ ಸವನ ಏಕಾದಶ ರುದ್ರರಿಗೆ ಸಂಬಂಧಪಟ್ಟಿದ್ದು. ಇದಕ್ಕಾಗಿ ಇಲ್ಲಿ ಹನ್ನೊಂದು ಅಕ್ಷರದತ್ರಿಷ್ಟುಪ್ಬಳಸುತ್ತಾರೆ. ಸಂಜೆಯ ಸವನ ದ್ವಾದಶಾದಿತ್ಯರಿಗೆ ಸಂಬಂಧಪಟ್ಟಿದ್ದು. ಅದಕ್ಕಾಗಿ ಅಲ್ಲಿ ದ್ವಾದಶಾಕ್ಷರದ ಜಗತಿಯನ್ನು ಬಳಸುತ್ತಾರೆ. ಕೃಷ್ಣ ಆದಿತ್ಯ ಮತ್ತು ರುದ್ರರ ಬಗ್ಗೆ ಹೇಳಿದ. ಈಗ ಇಲ್ಲಿ ವಸುಗಳ ಬಗ್ಗೆ ಹೇಳುತ್ತಾ ಹೇಳುತ್ತಾನೆ:ವಸುಗಳಲ್ಲಿ ಅಗ್ನಿನಾನುಎಂದು. ವಸುಗಳು ಎಂಟು ಮಂದಿ. ದ್ರೋಣ, ಪ್ರಾಣ, ಧ್ರುವ, ಅರ್ಕ, ಅಗ್ನಿ ದೋಷ, ವಸ್ತು ಮತ್ತು ವಿಭಾವಸು. ಇವರಿಗೆ ಇನ್ನೂ ಅನೇಕ ಹೆಸರಿದೆ. ಐದನೆಯವನಾದ ಅಗ್ನಿಗೆ ವೈಶ್ವಾನರ, ವಹ್ನಿ, ಜಾತವೇದ, ಹುತಾಶನ, ಪಾವಕ, ಅನಲ, ದಹನ ಇತ್ಯಾದಿ ಹೆಸರಿದೆ. ಇತರ ವಸುಗಳೆಲ್ಲರೂ ದೇವತಾ ತಾರತಮ್ಯದಲ್ಲಿ ಹದಿನೆಂಟನೇ ಕಕ್ಷೆಯಲ್ಲಿದ್ದರೆ, ‘ಅಗ್ನಿಅವರಿಗಿಂತ ಎತ್ತರದಲ್ಲಿ ಹದಿನೈದನೆ ಕಕ್ಷೆಯಲ್ಲಿದ್ದಾನೆ. ಭೂ ಸ್ತರದಲ್ಲಿ ಭಗವಂತನನ್ನು ಆರಾಧನೆ ಮಾಡುವ ಶ್ರೇಷ್ಠ ಪ್ರತೀಕ ಅಗ್ನಿ. ಇಡೀ ಜಗತ್ತನ್ನು ಪಾವನಗೊಳಿಸುವ ಶಕ್ತಿಯಾದ ಭಗವಂತ ಅಗ್ನಿಯಲ್ಲಿ ಪಾವಕಃನಾಮಕನಾಗಿ ಕೂತು ಆತನಿಗೆ ಈ ಶ್ರೇಷ್ಠ ಸ್ಥಾನವನ್ನು ಕೊಟ್ಟ.
ಅಗ್ನಿಯಲ್ಲಿ ಭಗವಂತನ ತೇಜಸ್ಸಿದೆ. ತೇಜಸ್ಸಿನಲ್ಲಿ ಬೆಳಕಿನ ಶಕ್ತಿಯಿದೆ, ಶಾಖ ಕೊಡುವ ಶಕ್ತಿಯಿದೆ ಹಾಗು ಸುಡುವ ಶಕ್ತಿಯೂ ಇದೆ. ಇಷ್ಟೇ ಅಲ್ಲದೆ ಈ ತೇಜಸ್ಸಿನಲ್ಲಿ ಪಚನ ಶಕ್ತಿಯಿದೆ. ಅಗ್ನಿಯ ಸಂಪರ್ಕಕ್ಕೆ ಬರುವ ವಸ್ತು ಪಾವನವಾಗುತ್ತದೆ. ಅಗ್ನಿಯಲ್ಲಿದ್ದು ಅಗ್ನಿಗೆ ಇಂತಹ ತೇಜಸ್ಸನ್ನು ಕೊಟ್ಟ ಭಗವಂತ ಜಗತ್ತನ್ನು ಪಾವನಗೊಳಿಸುವ ಪಾವಕಃ. ಎಲ್ಲರನ್ನು ಪಾವನಗೊಳಿಸುವ ಭಗವಂತ ದೇವತೆಗಳಿಗೂ ಕೂಡಾ ಅವಕ(ರಕ್ಷಕ).
ವಿತ್ತೇಶ ಕುಬೇರನ ಬಗ್ಗೆ ಹೇಳಿದ ಕೃಷ್ಣ ಮುಂದೆ ಭೂಮಿಯಲ್ಲಿ ಸಂಪತ್ತಿನ ನೆಲೆಯಾದ ಮೇರು ಪರ್ವತದಲ್ಲಿ ತನ್ನ ವಿಭೂತಿಯನ್ನು ವಿವರಿಸುತ್ತಾನೆ. ಮೇರು ಪರ್ವತವನ್ನು ಹೇಮಾದ್ರಿ(ಚಿನ್ನದ ಬೆಟ್ಟ) ಎಂದು ಕರೆಯುತ್ತಾರೆ. ಅದು ವಸುಗಳ ನೆಲೆ. ಕೃಷ್ಣ ಹೇಳುತ್ತಾನೆ: ಬೆಟ್ಟಗಳಲ್ಲಿ ಮೇರು ನಾನುಎಂದು. ಹಿಮಾಲಯದಲ್ಲಿನ ಪರ್ವತ ಶ್ರೇಣಿಯಲ್ಲಿರುವ, ಮನುಷ್ಯ ಮಾತ್ರಕ್ಕೆ ಗೊತ್ತಿರದ ಸಂಪತ್ತಿನ ಬಗ್ಗೆ ಸ್ವಾಮಿರಾಮ್ ಅವರುಲಿವಿಂಗ್ ವಿತ್ ಹಿಮಾಲಯನ್ ಮಾಸ್ಟರ್ಸ್ ಎನ್ನುವ ಪುಸ್ತಕದಲ್ಲಿ ತಮ್ಮ ಸ್ವತಃ ಅನುಭವವನ್ನು ಹಂಚಿಕೊಂಡಿದ್ದಾರೆ. ಯುದ್ಧದಲ್ಲಿ ಪೂರ್ಣ ಸಂಪತ್ತು ನಾಶವಾದಾಗ ಧರ್ಮರಾಯ ಬೆಟ್ಟಗಳ ಸಾಲಿನಲ್ಲಿ ಹುದುಗಿಟ್ಟ ಸಂಪತ್ತನ್ನು ತರಿಸಿ ಯಜ್ಞ ಮಾಡಿದ ಎಂದು ಮಹಾಭಾರತದಲ್ಲಿ ಹೇಳುತ್ತಾರೆ. ಈ ವಿಚಾರ ಹಿಮಾಲಯದಲ್ಲಿ ತಪಸ್ಸು ಮಾಡುವ ಕೆಲವು ಯೋಗಿಗಳಿಗೂ ತಿಳಿದಿದೆ. ಇಂಥಹ ಸಂಪತ್ತಿನ ನೆಲೆ ಮೇರು.
ಇಲ್ಲಿ ಬಂದಿರುವ ಭಗವಂತನ ನಾಮ ಮೇರುಃ’. ಮಾ+ಈರು-ಮೇರು. ಸಮಸ್ತ ಚೈತನ್ಯದಲ್ಲಿ ಸರ್ವ ಶ್ರೇಷ್ಠಳಾದ ತಾಯಿ ಮಹಾಲಕ್ಷ್ಮಿಗೂ ಸಹ ಪ್ರೇರಕನಾಗಿ ನಿಂತಿರುವವ ಭಗವಂತ. ಇಂತಹ ಭಗವಂತನಿಗೆ ಇನ್ನೊಬ್ಬ ಪ್ರೆರಕನಿಲ್ಲ. ಆದ್ದರಿಂದಮೇರುಃಭಗವಂತನ ಅನ್ವರ್ಥನಾಮ.
·  ಶ್ಲೋಕ - 24
ಪುರೋಧಸಾಂ ಚ ಮುಖ್ಯಂ ಮಾಂ ವಿದ್ಧಿ ಪಾರ್ಥ ಬೃಹಸ್ಪತಿಮ್ ।
ಸೇನಾನೀನಾಮಹಂ ಸ್ಕಂದಃ ಸರಸಾಮಸ್ಮಿ ಸಾಗರಃ ॥೨೪॥
ಪುರೋಧಸಾಮ್ ಚ ಮುಖ್ಯಮ್ ಮಾಮ್ ವಿದ್ಧಿ ಪಾರ್ಥ ಬೃಹಸ್ಪತಿಮ್ ।
ಸೇನಾನೀನಾಮ್ ಅಹಮ್ ಸ್ಕಂದಃ ಸರಸಾಮ್ ಅಸ್ಮಿ ಸಾಗರಃ -- ಓ ಪಾರ್ಥಾ, ಪುರೋಹಿತರಲ್ಲಿ ಹಿರಿಯನಾದ ಬೃಹಸ್ಪತಿ ನಾನು.[ಬೃಹತ್=ಹಿರಿಯರಿಗು, ಪತಿ=ಒಡೆಯನಾಗಿಬೃಹಸ್ಪತಿಯಲ್ಲಿದ್ದೇನೆ.] ದಳವಾಯಿಗಳಲ್ಲಿ ಸ್ಕಂದ ನಾನು.[ಅರಿಗಳ ಬೀರವನ್ನು ಹೀರಿಸ್ಕಂದಎನ್ನಿಸಿ ನಾನು ಸೇನಾಪತಿ ಸ್ಕಂದನಲ್ಲಿದ್ದೇನೆ.] ನೀರಾಸರೆಗಳಲ್ಲಿ ಕಡಲು ನಾನು. [ಸಾ=ಸಾರವನ್ನು ಗರ=ಉಣ್ಣುವುದರಿಂದ, ‘ಸಾಗರಎನ್ನಿಸಿ ಕಡಲಿನಲ್ಲಿದ್ದೇನೆ.]
ನಾವು ಪೂಜಿಸುವ ಭಗವಂತನ ಪ್ರತೀಕವನ್ನು ಹೇಳಿದಮೇಲೆ ಎಲ್ಲವುದಕ್ಕೂ ಮುಖ್ಯವಾಗಿ ಬೇಕಾಗಿರುವ ಪುರೋಹಿತರ ಬಗ್ಗೆ ಇಲ್ಲಿ ಹೇಳಲಾಗಿದೆ. ಕೃಷ್ಣ ಹೇಳುತ್ತಾನೆ ಪುರೋಹಿತರಲ್ಲಿ ನನ್ನ ಸನ್ನಿಧಾನವಿದೆಎಂದು. ಋಗ್ವೇದದ ಪ್ರಥಮ ಸೂಕ್ತದಲ್ಲಿ ಹೇಳುವಂತೆ: " ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಂ-ಋತ್ವಿಜಂ” | ಹೋತಾರಂ ರತ್ನ ಧಾತಮಂ |” ಇಲ್ಲಿ ಹೇಳುವ ಹೋತಾಋಗ್ವೇದದ ಪುರೋಹಿತ. ಹಿಂದೆ ಒಂದು ಯಾಗ ಮಾಡುವಾಗ ಅಲ್ಲಿ ಹದಿನಾರು ಮಂದಿ ಪುರೋಹಿತರಿರುತ್ತಿದ್ದರು. ಋಗ್ವೇದಕ್ಕೆ: ಹೋತಾಪ್ರಧಾನ ಮತ್ತು ಆತನಿಗೆ ಮೂರು ಮಂದಿ(ಮೈತ್ರಾವರುಣ, ಅಚ್ಛಾವಾಕ, ಗ್ರಾಮಸ್ತುತ್) ಸಹಾಯಕರು. ಯಜುರ್ವೇದಕ್ಕೆ: ಅಧ್ವರ್ಯು ಪ್ರಧಾನ ಮತ್ತು ಆತನಿಗೆ ಮೂರು ಮಂದಿ(ಪ್ರತಿಪ್ರಸ್ಥುತಾ, ನೇಷ್ಟಾ, ಉನ್ನೇತಾ) ಸಹಾಯಕರು. ಸಾಮವೇದಕ್ಕೆ: ಉದ್ಗಾತಾ ಪ್ರಧಾನ ಮತ್ತು ಆತನಿಗೆ ಮೂರು ಮಂದಿ(ಪ್ರಸ್ತೋತಾ, ಪ್ರತಿಹರ್ತಾ, ಸುಬ್ರಹ್ಮಣ್ಯ) ಸಹಾಯಕರು. ಈ ಎಲ್ಲರ ಮೇಲ್ವಿಚಾರಕರಾಗಿ, ಯಜ್ಞದಲ್ಲಿ ಯಾವುದೇ ಲೋಪದೋಷ ಬರದಂತೆ ನೋಡಿಕೊಳ್ಳುವವರು ಸರ್ವವೇದ ಪಾರಂಗತ ಪ್ರಧಾನ ಪುರೋಹಿತರು. ಅವರಿಗೆ ಬ್ರಹ್ಮಾಎಂದು ಹೆಸರು. ಇವರಿಗೂ ಮೂರು ಮಂದಿ(ಬ್ರಾಹ್ಮಾಣಾಇಚ್ಛಂಸಿ, ಅಗ್ನೀಧ್ರ, ಪೋತಾ) ಸಹಾಯಕರು. ಹೀಗೆ ಭಗವಂತನ ವಿಶೇಷ ಸನ್ನಿಧಾನವಿರುವ ಹದಿನಾರು ಮಂದಿ ಪುರೋಹಿತರು ಸೇರಿ ಯಜ್ಞ ನೆರವೇರಿಸುತ್ತಿದ್ದರು. ಪುರೋಹಿತರ ಸ್ಥಾನ ಸಮಾಜದಲ್ಲಿ ಅತ್ಯಂತ ಹಿರಿದು. ಆದರೆ ಇಂದಿನ ಪುರೋಹಿತರು ಹಿಂದಿನಷ್ಟು ಸ್ಥಾನಮಾನವನ್ನು ಸಮಾಜದಲ್ಲಿ ಗಳಿಸುತ್ತಿಲ್ಲ. ಪುರೋಹಿತರು ನಮಗೆ ಹಿತವಾದುದ್ದನ್ನು ನಮ್ಮಿಂದ ಮೊದಲೇ ತಿಳಿದು ನಮ್ಮನ್ನು ತಿದ್ದಿ ಆ ದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡುವವರು. ನಮ್ಮ ಅಭಿವೃದ್ಧಿಗೆ ಪೂರಕವಾಗಿರತಕ್ಕಂತಹ ಕ್ರಿಯೆಗಳನ್ನು ಮಾಡಿ ನಾವು ಅಭಿವೃದ್ಧಿಹೊಂದುವಂತೆ ಮುಂಜಾಗ್ರತೆ ಕೊಡುವ ಗುರುಸ್ಥಾನದಲ್ಲಿರುವ ಸಲಹೆಗಾರರು. ಇಡೀ ಸಮಾಜಕ್ಕೆ ಇವರು ಮಾರ್ಗದರ್ಶಕರು. ಪೌರೋಹಿತ್ಯ ಬಹಳ ಜವಾಬ್ದಾರಿಯುತ ಕೆಲಸ. ಒಂದು ಧಾರ್ಮಿಕ ನಡೆಯಲ್ಲಿ ಸಂಶಯಬಂದಾಗ ಸಮಾಜಕ್ಕೆ ಮಾರ್ಗದರ್ಶಿಯಾಗಿ ಕೆಲಸ ಮಾಡುವ ಪುರೋಹಿತನ ಜವಾಬ್ದಾರಿ ಬಹಳ ದೊಡ್ಡದು. ಮಂತ್ರ ಹೇಳುವಾಗ ಯಾವುದಾದರು ಲೋಪವಾದರೆ, ತಪ್ಪು ಮಾಡಿದರೆ, ಅದಕ್ಕೆ ಪುರೋಹಿತ ಕಾರಣನಾಗುತ್ತಾನೆ. ಆದ್ದರಿಂದ ಭಗವಂತನ ವಿಶೇಷ ಸನ್ನಿಧಾನ ಅಲ್ಲಿದೆ. ಭೂಮಿಯ ಎಲ್ಲಾ ಪುರೋಹಿತರಿಗಿಂತ ದೊಡ್ಡ ಪುರೋಹಿತರು ಇಬ್ಬರು. ದೈತ್ಯ ಪುರೋಹಿತರಾದ ಶುಕ್ರಾಚಾರ್ಯರು ಮತ್ತು ದೇವತೆಗಳ ಪುರೋಹಿತರಾದ ಬೃಹಸ್ಪತಿಯಾಚಾರ್ಯರು. ಬೃಹಸ್ಪತಿ ದೇವತಾ ತಾರತಮ್ಯದಲ್ಲಿ ಹತ್ತನೇ ಕಕ್ಷೆಯಲ್ಲಿದ್ದಾರೆ. ಇವರು ದೇವಲೋಕದಲ್ಲಿ ದೇವತೆಗಳಿಗೆ ಮತ್ತು ದೇವೇಂದ್ರನಿಗೆ ಸಲಹೆಗಾರರು. ದೇವತೆಗಳಿಗೆ ಪುರೋಹಿತರಾಗಿರುವ ಇವರಲ್ಲಿ ಭಗವಂತನ ವಿಶೇಷ ಸನ್ನಿಧಾನವಿದೆ. ದೇವತಾ ತಾರತಮ್ಯದಲ್ಲಿ ಎಂಟನೇ ಕಕ್ಷೆಯಲ್ಲಿರುವ ಇಂದ್ರ ಹತ್ತನೇ ಕಕ್ಷೆಯಲ್ಲಿರುವ ಬೃಹಸ್ಪತಿಯಾಚಾರ್ಯರಿಗೆ ನಮಸ್ಕರಿಸಿ ಅವರ ಮಾರ್ಗದರ್ಶನದಂತೆ ನಡೆಯಲು ಅವರಲ್ಲಿರುವ ಭಗವಂತನ ಸನ್ನಿಧಾನವೇ ಕಾರಣ. ಇದನ್ನು ನೆನಪಿಸುವಂತೆ ಕೃಷ್ಣ ದೇವೇಂದ್ರನ ಅವತಾರವಾದ ಅರ್ಜುನನನ್ನು ಇಲ್ಲಿ ಪಾರ್ಥಾಎಂದು ಸಂಬೋಧಿಸಿದ್ದಾನೆ.
ಇನ್ನೊಂದು ಮುಖದಲ್ಲಿ ನೋಡಿದರೆ ವೇದಗಳಲ್ಲಿ ಬೃಹಸ್ಪತಿ ಎಂದರೆ ಪ್ರಾಣದೇವರು. ಸರಸ್ವತಿ ಭಾರತಿಯರ ಪತಿ-ಬೃಹಸ್ಪತಿಗಳು. ಇವರೇ ಬ್ರಹ್ಮ-ವಾಯು. ಇವರು ಸಮಸ್ತ ದೇವತೆಗಳಿಗೂ ಪುರೋಹಿತರು. ಭಗವಂತ ಪ್ರಾಣದೇವರಲ್ಲಿ ಗಾನದ(ಕಂಠಸಿರಿ) ವಿಶೇಷ ವಿಭೂತಿಯಾಗಿ ನೆಲೆಸಿದ್ದಾನೆ.
ಇಲ್ಲಿ ಬಂದಿರುವ ಭಗವಂತನ ನಾಮ ಬೃಹಸ್ಪತಿ’. ಬೃಹತ್ ಅಂದರೆ ಹಿರಿಯರು, ಪತಿ ಅಂದರೆ ಒಡೆಯ. ಬ್ರಹ್ಮಾದಿ ಸಕಲ ದೇವತೆಗಳಿಗೂ ಒಡೆಯನಾದ, ಪುರೋಹಿತರಿಗೂ ಪುರೋಹಿತ ಭಗವಂತಬೃಹಸ್ಪತಿ’.
ಅಧ್ಯಾತ್ಮ ಯೋಧರಾದ ಪುರೋಹಿತರ ಬಗ್ಗೆ ಹೇಳಿದ ಕೃಷ್ಣ, ಈಗ ಯುದ್ಧದಲ್ಲಿ ವಿಜಯ ತಂದುಕೊಟ್ಟು ರಕ್ಷಣೆ ಮಾಡುವ ಯೋಧರಲ್ಲಿ ತನ್ನ ವಿಶೇಷ ವಿಭೂತಿಯನ್ನು ವಿವರಿಸುತ್ತಾನೆ. ದೇವತೆಗಳು ಬೃಹಸ್ಪತಿಯಾಚಾರ್ಯರ ಮಾರ್ಗದರ್ಶನದಲ್ಲಿ ಸಂಪಾದಿಸಿದ ಸಂಪತ್ತನ್ನು ಅಸುರರು ಅಪಹರಿಸಿದಾಗ, ಅವರ ವಿರುದ್ಧ ಹೋರಾಡಿ ಅದನ್ನು ಹಿಂದಕ್ಕೆ ತಂದುಕೊಟ್ಟವ ಸ್ಕಂದಃ. ಭಗವಂತಸ್ಕಂದಃ ನಾಮಕನಾಗಿ ಸೇನಾನಿಯಲ್ಲಿ ನಿಂತು ನಡೆಸುತ್ತಾನೆ. ಸ್ಕಂದನಿಗೆ ಸೇನಾಧಿಪತಿಯಾಗಿ ತಾರಕಾಸುರನನ್ನು ಸಂಹಾರ ಮಾಡುವಂತಹ ಶಕ್ತಿ ಕೊಟ್ಟಂತಹ, ಅಂತರಂಗದ ಒಳಗೆ ಕುಳಿತ ಅಂತರ್ಯಾಮಿ ತತ್ವ-ಭಗವಂತ. ಸೇನಾನಿಯ ಬಗ್ಗೆ ಹೇಳುವಾಗ ಇಲ್ಲಿ ಸೇನಾನಿಯಾಗಿ ಕೀರ್ತಿ ಪಡೆದ ಕರ್ನಾಟಕದ ಹೆಮ್ಮೆಯ ಪುತ್ರಕಾರ್ಯಪ್ಪಅವರನ್ನು ನೆನೆಸಿಕೊಳ್ಳಬಹುದು. ಭಗವಂತನ ವಿಶೇಷ ಸನ್ನಿದಾನದಿಂದಾಗಿ ಸೇನಾಧಿಪತಿಯಲ್ಲಿ ಅಂಥಹ ವಿಶೇಷ ಶಕ್ತಿ ಬರುತ್ತದೆ.
ಇಲ್ಲಿ ಬಂದಿರುವ ಭಗವಂತನ ನಾಮ ಸ್ಕಂದಃ. ಸ್ಕಂದಃಎಂದರೆ ಇಡೀ ಜಗತ್ತನ್ನು ಸಂಹಾರ ಮಾಡುವ ಶಕ್ತಿ. ಅರಿಗಳ ಬೀರವನ್ನು ಹೀರಿ ಸ್ಕಂದಎನ್ನಿಸಿ ನಾನು ಸೇನಾಪತಿಸ್ಕಂದನಲ್ಲಿದ್ದೇನೆಎಂದಿದ್ದಾನೆ ಕೃಷ್ಣ.
ಮುಂದುವರಿದು ಕೃಷ್ಣ ಹೇಳುತ್ತಾನೆ: ಸರಸಾಮಸ್ಮಿ ಸಾಗರಃಎಂದು. ಭೂಮಿಯ ಮೇಲಿನ ಅಪಾರ ಸಂಪತ್ತಿನ ತಾಣ ಮೇರು ಪರ್ವತವಾದರೆ, ರಸದಿಂದ ಸಹಿತವಾದ, ಜಲಾಶಯಗಳಲ್ಲಿ ಬಹಳ ದೊಡ್ಡದಾಗಿರುವುದು ಸಾಗರ. ಅದರಲ್ಲಿ ವಿಭೂತಿಯಾಗಿ ನಾನಿದ್ದೇನೆಎನ್ನುತ್ತಾನೆ ಕೃಷ್ಣ. ಭೂಮಿಯ ಯಾವಭಾಗದಲ್ಲಿ ಬಾವಿ ತೋಡಿದರೂ ಸಿಹಿ ನೀರು. ಆದರೆ ಅಪರಂಪಾರವಾದ ಸಾಗರದ ನೀರು ಉಪ್ಪು. ಇದು ಏಕೆ ಎಂದು ನಮಗೆ ಗೊತ್ತಿಲ್ಲ. ರಷ್ಯದ ವಿಖ್ಯಾತ ಮನಃಶಾಸ್ತ್ರಜ್ಞ ವಿಲಿಕೋ^ಸ್ಕಿ(Velikovsky) ತನ್ನ ‘Worlds in Collision’ ಎನ್ನುವ ಪುಸ್ತಕದಲ್ಲಿ ಹೇಳುತ್ತಾರೆ: ನಾವು ವಿಶ್ವದ ವಿಸ್ಮಯವನ್ನೆಲ್ಲ ಭೇದಿಸಿದ ಭ್ರಮೆಯಲ್ಲಿದ್ದೇವೆ, ಆದರೆ ನಮಗೆ ಏನೂ ಗೊತ್ತಿಲ್ಲಎಂದು. ಇಂದು ಸಮುದ್ರದ ನೀರು ಉಪ್ಪು ಏಕೆ, ಬಾವಿಯ ನೀರು ಸಿಹಿ ಏಕೆ ಎನ್ನುವುದೂ ನಮಗೆ ಗೊತ್ತಿಲ್ಲ. ಭಗವಂತ ಇತರ ಎಲ್ಲಾ ರಸವನ್ನು ಹಣ್ಣಿನಲ್ಲಿಟ್ಟ. ಆದರೆ ರಸದ-ರಸ ಲವಣರಸ ಉಪ್ಪನ್ನು ಮಾತ್ರ ಯಾವ ಹಣ್ಣಿನಲ್ಲೂ ಇಡದೆ-ಸಮುದ್ರದ ನೀರಿನಲ್ಲಿಟ್ಟ. ಈ ಸಮುದ್ರ ಒಂದು ವಿಸ್ಮಯ. ಭೂಮಿ ಮೇಲಿನ ಪ್ರಾಣಿ ವೈವಿದ್ಯಕ್ಕಿಂತ ಹೆಚ್ಚು ವೈವಿದ್ಯ ಸಮುದ್ರದಲ್ಲಿದೆ. ಭಗವಂತ ಸಮುದ್ರವನ್ನು ಸೃಷ್ಟಿ ಮಾಡಿ ಅದರಲ್ಲಿ ಸಾಗರಃ ಶಬ್ದವಾಚ್ಯನಾಗಿ ತುಂಬಿದ್ದಾನೆ.
ಇಲ್ಲಿ ಬಂದಿರುವ ಭಗವಂತನ ನಾಮ ಸಾಗರಃ. ಸಾರ+ಗರ-ಸಾಗರ. ಸಾರವಾಗಿರುವುದನ್ನು ಸ್ವೀಕರಿಸುವ ಭಗವಂತ ಸಾರಃ. ಎಲ್ಲಕ್ಕಿಂತ ಮಹತ್ತಾದ ಸಾರ-ಲವಣ, ಅದರಲ್ಲಿ ತುಂಬಿರುವ ಭಗವಂತ ಸಾಗರಃ. ಸಾರಂ ಗರತಿ ದದಾತೀತಿ ಸಾಗರಃ. ಜಗತ್ತಿಗೆ ಜೀವನದ ಸಾರ ಸರ್ವಸ್ವವನ್ನು ಕೊಡುವ ಭಗವಂತ ಸಾಗರಃ.


ಶ್ಲೋಕ – 25
ಮಹರ್ಷೀಣಾಂ ಭೃಗುರಹಂ ಗಿರಾಮಸ್ಮ್ಯೇಕಮಕ್ಷರಮ್।
ಯಜ್ಞಾನಾಂ ಜಪಯಜ್ಞೋSಸ್ಮಿ ಸ್ಥಾವರಾಣಾಂ ಹಿಮಾಲಯಃ ॥೨೫॥

ಮಹಾ ಋಷೀಣಾಮ್ ಭೃಗುಃ ಅಹಮ್ ಗಿರಾಮ್ ಅಸ್ಮಿ ಏಕಮ್ ಅಕ್ಷರಮ್
ಯಜ್ಞಾನಾಮ್ ಜಪಯಜ್ಞಃ ಅಸ್ಮಿ ಸ್ಥಾವರಾಣಾಮ್ ಹಿಮಾಲಯಃಮಹರ್ಷಿಗಳಲ್ಲಿ ಭೃಗು ನಾನು. [ಕೆಟ್ಟವರನ್ನು ಸುಟ್ಟುರಿದು, ‘ಭೃಗುಎನ್ನಿಸಿ, ‘ಭೃಗುಮುನಿಯಲ್ಲಿದ್ದೇನೆ.] ವಾಙ್ಮಯಗಳಲ್ಲಿ ಓಂಕಾರವೆಂಬ ಒಂದಕ್ಷರ ನಾನು. [ಎಲ್ಲಕ್ಕಿಂತ ಮಿಗಿಲಾಗಿಏಕಎನ್ನಿಸಿ, ಅಳಿವಿರದ್ದರಿಂದಅಕ್ಷರಎನ್ನಿಸಿ ಓಂಕಾರವಾಚ್ಯನಾಗಿದ್ದೇನೆ.] ಯಜ್ಞಗಳಲ್ಲಿ ಜಪಯಜ್ಞ ನಾನು.[=ಹುಟ್ಟಿದ್ದನ್ನೆಲ್ಲ, =ಪಾಲಿಸುವುದರಿಂದಜಪಎನ್ನಿಸಿ, ಎಲ್ಲರ ಎಲ್ಲ ಪೂಜೆಗಳನ್ನು ಕೊಳ್ಳುವುದರಿಂದಯಜ್ಞಎನ್ನಿಸಿ ಜಪಯಜ್ಞದಲ್ಲಿದ್ದೇನೆ.] ಘನವಾದ ಬೆಟ್ಟಗಳಲ್ಲಿ ಹಿಮಾಲಯ ನಾನು. [ಹ್ರೀ=ಲಕ್ಷ್ಮಿಯಹ್ರೀನಾಮಕ ರೂಪಕ್ಕೆ ಮತ್ತು ಮಾ=’ಶ್ರೀನಾಮಕ ರೂಪಕ್ಕೆ ಆಲಯ=ನೆಲೆಯಾದ್ದರಿಂದಹಿಮಾಲಯಎನ್ನಿಸಿ ಹಿಮಗಿರಿಯಲ್ಲಿದ್ದೇನೆ.]
ಹಿಂದೆ ನಾವು ದೇವರ್ಷಿ ಬೃಹಸ್ಪತಿಯ ಬಗ್ಗೆ ನೋಡಿದೆವು. ಇವರು ದೇವಲೋಕಕ್ಕೆ ಸಂಬಂಧಪಟ್ಟವರು. ಇವರನ್ನು ಬಿಟ್ಟು ಇತರ ಮಹರ್ಷಿಗಳನ್ನು ನೋಡಿದರೆ-ಭಗವಂತನನ್ನು ಕಂಡ ವಿಶಿಷ್ಟರಲ್ಲಿ ಅತ್ಯಂತ ಶ್ರೇಷ್ಠರಾದವರು ಭೃಗು ಮಹರ್ಷಿಗಳು. ವಿಶ್ವಾಮಿತ್ರ-ವಸಿಷ್ಠರು ತಾರತಮ್ಯ ಕಕ್ಷೆಯಲ್ಲಿ ಹದಿನಾರನೇ ಸ್ಥಾನದಲ್ಲಿದ್ದರೆ, ಭೃಗುಮುನಿಗಳು ಇವರಿಂದ ಎತ್ತರದಲ್ಲಿ ಹದಿನೈದನೇ ಕಕ್ಷೆಯಲ್ಲಿ ಅಗ್ನಿಗೆ ಸಮಾನರಾಗಿದ್ದಾರೆ. ಇವರು ಭೂಮಿಯಲ್ಲಿ ಋಷಿಗಳ ಮಾಲಿಕೆಯಲ್ಲಿ ಹೊಸ ಆವಿಷ್ಕಾರ ಮಾಡಿದವರು. ಭಾಗವತದಲ್ಲಿ ಬರುವ ಒಂದು ಕಥೆಯಂತೆ ತ್ರಿಮೂರ್ತಿಗಳಲ್ಲಿ ಯಾರು ಅತ್ಯಂತ ಶ್ರೇಷ್ಟರು ಎಂದು ಅಳೆಯುವ ನಿಯೋಗಶ್ರೇಷ್ಠರಾಗಿ ಹೋಗಿ, ‘ನಾರಾಯಣಸರ್ವ ಶ್ರೇಷ್ಠ ಎಂದು ಜಗತ್ತಿಗೆ ಸಾರಿದ ಬಹಳ ದೊಡ್ಡ ಮುನಿ ಭೃಗು. ಕಥೆಯಲ್ಲಿ ಹೇಳುವಂತೆ- ನಿಯೋಗ ಶ್ರೇಷ್ಠರಾಗಿ ಭೃಗು ಮೊದಲು ಶಿವನಲ್ಲಿಗೆ, ನಂತರ ಬ್ರಹ್ಮನಲ್ಲಿಗೆ ಹೋಗುತ್ತಾರೆ. ಅಲ್ಲಿ ಅವರಿಗೆ ಯಾವ ಪುರಸ್ಕಾರವೂ ದೊರೆಯದಿದ್ದಾಗ, ಭೃಗು ಸಿಟ್ಟಿನಿಂದಲೇ ನಾರಾಯಣನಲ್ಲಿಗೆ ಹೋಗುತ್ತಾರೆ. ಅಲ್ಲಿ ವಿಷ್ಣು ಕೂಡಾ ಇವರನ್ನು ಗಮನಿಸದೇ ಇದ್ದಾಗ, ಸಿಟ್ಟಿನಿಂದ ವಿಷ್ಣುವಿನ ಎದೆಗೆ ಒದೆಯುತ್ತಾರೆ. ಆಗ ಭಕ್ತವತ್ಸಲ ನಾರಾಯಣ: “ನೀವು ಕರೆದಿದ್ದರೆ ನಾನು ಬರುತ್ತಿದ್ದೆ, ರೀತಿ ಒದೆದುದರಿಂದ ನಿಮ್ಮ ಕಾಲಿಗೆ ಅದೆಷ್ಟು ನೋವಾಯಿತೋಎಂದು ಅವರ ಕಾಲನ್ನು ಉಜ್ಜಲು ಆರಂಭಿಸುತ್ತಾನೆ. ಆಗ ಭೃಗು ತನ್ನ ತಪ್ಪನ್ನು ಅರಿತು ನಾರಾಯಣನಲ್ಲಿ ಶರಣಾಗುತ್ತಾರೆ. ಕಥೆಯನ್ನು ನೋಡಿದಾಗ ನಮಗೆ ಮುನಿಗಳಿಗೆ ಭಗವಂತನ ಮಹತ್ವ ಗೊತ್ತಿರಲಿಲ್ಲವೇ ಎನ್ನುವ ಪ್ರಶ್ನೆ ಮೂಡುತ್ತದೆ. ಖಂಡಿತವಾಗಿ ಅವರಿಗೆ ಭಗವಂತನ ಪೂರ್ಣ ಮಹತ್ವ ತಿಳಿದಿದೆ. ಇದು ಕೇವಲ ಜನಸಾಮಾನ್ಯರಿಗೆ ಕ್ರಿಯೆಯ ಮೂಲಕ ವಿಷಯನ್ನು ತಿಳಿಸುವ ಒಂದು ಕಾರ್ಯ ಅಷ್ಟೆ. ಇದೇ ರೀತಿನೀನು ಭೂಮಿಯ ಮೇಲೆ ಹತ್ತು ಬಾರಿ ಅವತಾರ ತಾಳುಎಂದು ಭಗವಂತನಿಗೆ ಶಾಪ ಕೊಟ್ಟವರು ಭೃಗು. ಅವರ ಶಾಪಕ್ಕೆ ಪುರಸ್ಕಾರ ಕೊಡುವುದಕ್ಕೆ ಭಗವಂತ ಭೂಮಿಯ ಮೇಲೆ ಹತ್ತು ಅವತಾರ ತಾಳಿದ. ಲಕ್ಷ್ಮಿ ಭಾರ್ಗವಿಯಾಗಿ ಭೃಗು ಮುನಿಯಲ್ಲಿ ಮಗಳಾಗಿ ಹುಟ್ಟಿದಳು. ರೀತಿ ಭೃಗುವಿನಲ್ಲಿ ಅನೇಕ ವೈಶಿಷ್ಟ್ಯವನ್ನು ಕಾಣುತ್ತೇವೆ. ಇದಕ್ಕೆಲ್ಲ ಕಾರಣ ಭೃಗುವಿನಲ್ಲಿ ಭಗವಂತನ ವಿಶೇಷ ಸನ್ನಿದಾನ.
ಇಲ್ಲಿ ಬಂದಿರುವ ಭಗವಂತನ ನಾಮಭೃಗುಃ’. ಭರ್ಜನಾತ್ ಇತಿ ಭೃಗುಃ. ಪ್ರಳಯ ಕಾಲದಲ್ಲಿ ಎಲ್ಲವನ್ನು ಭರ್ಜನೆ ಮಾಡುವ ಭಗವಂತ, ಮುಖ್ಯವಾಗಿ ಭಕ್ತರ ಪಾಪವನ್ನು ಭರ್ಜನೆ(ನಾಶ)ಮಾಡುವ ಭೃಗುಃ. ಭಗವಂತ ತನ್ನ ಭಕ್ತರ ಜೀವನದಲ್ಲಿ ಅಡ್ಡಿ ಮಾಡುವ ದುಷ್ಟ ಶಕ್ತಿಗಳನ್ನು ಭರ್ಜನೆ ಮಾಡುವವ. ದುಷ್ಟರನ್ನು ಮತ್ತು ಅಧರ್ಮವನ್ನು ಭರ್ಜನೆ ಮಾಡಿ, ಧರ್ಮ ಸಂಸ್ಥಾಪನೆ ಮಾಡುವ ಭಗವಂತ ಭೃಗುಃ ಶಬ್ದ ವಾಚ್ಯ. ಋಷಿಗಳಲ್ಲಿ ಅತ್ಯಂತ ಎತ್ತರ ಸ್ಥಾನ ಭೃಗುವಿಗೆ ಬರುವಂತೆ ಮಾಡಿ, ಅವರಲ್ಲಿ ಭೃಗು ಶಬ್ದ ವಾಚ್ಯನಾಗಿ ಭಗವಂತ ಸನ್ನಿಹಿತನಾಗಿದ್ದಾನೆ. ಇದು ನಾವು ಉಪಾಸನೆಯಲ್ಲಿ ತಿಳಿದಿರಬೇಕಾದ ಮುಖ್ಯವಾದ ಅಂಶ.
ಋಷಿಗಳ ಬಗ್ಗೆ ಹೇಳಿದಾಗ ಋಷಿಗಳು ಭಗವಂತನಿಗೆ ಹತ್ತಿರ ಹೇಗಾದರು ಎನ್ನುವ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಇದಕ್ಕೆ ಕಾರಣ- ಉಪಾಸನೆ, ಮಂತ್ರ-ಜಪ ಸಿದ್ಧಿ. ಕ್ಷತ್ರಿಯನಾದ ವಿಶ್ವಾಮಿತ್ರ ಕೂಡ ವೇದಮಂತ್ರ ಜಪ ಸಿದ್ಧಿಯಿಂದ ಬ್ರಹ್ಮರ್ಷಿಯಾದ. ಋಷಿಯಾಗಬೇಕಿದ್ದರೆ, ಋಷಿತ್ವ ಪಡೆಯಬೇಕಿದ್ದರೆ ಓಂಕಾರದ ಉಪಾಸನೆಯಿಂದ ಭಗವಂತನನ್ನು ಸಾಕ್ಷಾತ್ಕಾರಗಳಿಸಿಕೊಳ್ಳಬೇಕು. ಪ್ರಪಂಚದಲ್ಲಿರುವ ಅತ್ಯಂತ ಮಹತ್ವವಾದ ಮತ್ತು ಶ್ರೇಷ್ಠ ಶಬ್ದ ಓಂಕಾರ. ಓಂಕಾರದಲ್ಲಿ ಅಕ್ಷರಃ ನಾಮಕ ಭಗವಂತನ ವಿಶೇಷ ಸನ್ನಿದಾನವಿದೆ. ಓಂಕಾರ ಭಗವಂತನ ವಿಶೇಷ(Exclusive)ನಾಮ. [ಓಂಕಾರಕ್ಕೆ ಕೃಷ್ಣ ಇಷ್ಟು ಮಹತ್ವ ಏಕೆ ಕೊಟ್ಟ, ಓಂಕಾರದಲ್ಲಿರುವ ಅಸಾಧಾರಣ ವೈಶಿಷ್ಟ್ಯ ಏನು ಎನ್ನುವುದರ ವಿಶೇಷ ಅರ್ಥ ವಿವರಣೆಯನ್ನು, ನಾವು ಏಳನೇ ಅಧ್ಯಾಯದಲ್ಲಿ ಈಗಾಗಲೇ ನೋಡಿದ್ದೇವೆ(-, ಶ್ಲೋಕ-)]. ಎಂದೂ ನಾಶವಿಲ್ಲದ(-ಕ್ಷರ) ಭಗವಂತ ಎಲ್ಲರಿಗಿಂತ ಹಿರಿದಾದ ಏಕಮಾತ್ರ ತತ್ವ. ಆದ್ದರಿಂದ ಆತ ಏಕಃ.
ಓಂಕಾರದ ನಂತರ ಇಲ್ಲಿ ಜಪಯಜ್ಞದ ಬಗ್ಗೆ ಕೃಷ್ಣ ಹೇಳುತ್ತಾನೆ. “ಯಜ್ಞಾನಾಮ್ ಜಪಯಜ್ಞಃ ಅಸ್ಮಿಎನ್ನುತ್ತಾನೆ ಕೃಷ್ಣ. ಎಲ್ಲಕ್ಕಿಂತ ದೊಡ್ಡ ಯಜ್ಞ ಅಂದರೆ ಜಪಯಜ್ಞ. ಹಿಂದೆ ಹೇಳಿದಂತೆ ಅಗ್ನಿ ಮುಖದಲ್ಲಿ ಮಾಡುವ ಪೂಜೆ ಮಾತ್ರ ಯಜ್ಞವಲ್ಲ. ಕೊಡುವಿಕೆ, ಪೂಜೆಯಂತಹ ಒಳ್ಳೆಯ ಕಾರ್ಯಕ್ಕೆ ಒಂದು ಕಡೆ ಸೇರುವಿಕೆ(ಸಂಗತೀಕರಣ), ಜ್ಞಾನದಾನ, ಅನ್ನದಾನ, ನಮ್ಮಲ್ಲಿ ಹೆಚ್ಚಿಗೆ ಇರುವುದನ್ನು ಇಲ್ಲದವರಿಗೆ ಹಂಚಿ ಬದುಕುವುದು, ಎಲ್ಲವೂ ಒಂದು ಯಜ್ಞವೆ. ಸಾಮಾನ್ಯವಾಗಿ ಯಜ್ಞದಲ್ಲಿ ಎರಡು ವಿಧ. ಒಂದು ಅಂತರಂಗ ಯಜ್ಞ ಇನ್ನೊಂದು ಬಾಹ್ಯಯಜ್ಞ. ಅಂತರಂಗದಲ್ಲಿ ಭಗವಂತನ ನಿರಂತರ ಪೂಜೆ(ದೇವಪೂಜಾ); ಚಿತ್ತ-ಮನಸ್ಸು ಭಗವಂತನ ಜೊತೆಗೆ ಸೇರುವುದು(ಸಂಗತೀಕರಣ) ಮತ್ತು ನಮ್ಮನ್ನು ನಾವು ಭಗವಂತನಿಗೆ ಅರ್ಪಿಸಿಕೊಳ್ಳುವುದು-ಪರಿಪೂರ್ಣವಾದ ಮಾನಸ ಯಜ್ಞ. ರೀತಿ ಮನಸ್ಸಿನಲ್ಲಿ ಮಾಡುವ ಜಪಯಜ್ಞ ಅತ್ಯಂತ ಶ್ರೇಷ್ಠ. ಇದಕ್ಕೆ ಕಾರಣ ಜಪಯಜ್ಞದಲ್ಲಿನ ಭಗವಂತನ ವಿಭೂತಿ.
ಇಲ್ಲಿ ಬಂದಿರುವ ಭಗವಂತನ ನಾಮಜಪಃಮತ್ತುಯಜ್ಞಃ’. ಜಗತ್ತಿನಲ್ಲಿ ಹುಟ್ಟಿಬರುವ ಪ್ರತಿಯೊಂದು ಜೀವವನ್ನು ಪಾಲಿಸುವ ಭಗವಂತಜಪಃ’. ಇಂತಹ ಭಗವಂತ ಎಲ್ಲರ ಎಲ್ಲ ಪೂಜೆಗಳನ್ನು ಕೊಳ್ಳುವುದರಿಂದಯಜ್ಞಎನ್ನಿಸಿ ಜಪಯಜ್ಞದಲ್ಲಿದ್ದಾನೆ.
ಜಪದ ಬಗ್ಗೆ ಹೇಳಿದ ಮೇಲೆ, ಭೂಮಿಯ ಮೇಲೆ ಸಾತ್ವಿಕ ಕಂಪನ ಇರುವ ಅತ್ಯಂತ ಶ್ರೇಷ್ಠ ಸ್ಥಾವರದ ಬಗ್ಗೆ ಕೃಷ್ಣ ಹೇಳುತ್ತಾನೆ. ಹಿಂದೆ ಮನೆ ಕಟ್ಟುವಾಗ ಅಲ್ಲಿ ಹೆಚ್ಚು ಸಾತ್ವಿಕ ಕಂಪನ ಇರುವ ಸ್ಥಳದಲ್ಲಿ ದೇವರ ಕೋಣೆಯನ್ನು ನಿರ್ಮಿಸುತ್ತಿದ್ದರು. ಒಂದು ಊರಿನಲ್ಲಿ ಅತಿ ಹೆಚ್ಚು ಸಾತ್ವಿಕ ಕಂಪನ ಇರುವ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸುತ್ತಿದ್ದರು. ಭೂಮಿಯಲ್ಲಿ ಅತಿ ಹೆಚ್ಚು ಸಾತ್ವಿಕ ಕಂಪನ ಇರುವ ಏಕ ಮಾತ್ರ ಸ್ಥಳ ಹಿಮಾಲಯ. ಇಲ್ಲಿ ಎಲ್ಲಿ ಕುಳಿತರೂ ನಮ್ಮ ಮನಸ್ಸು ಬಹು ಸುಲಭದಲ್ಲಿ ಭಗವಂತನಲ್ಲಿ ಶ್ರುತಿಗೂಡುತ್ತದೆ. ಹಿಮಾಲಯಕ್ಕೆ ಶಕ್ತಿ ಭಗವಂತನ ವಿಶೇಷ ಸನ್ನಿದಾನದಿಂದ ಬಂತು. ಭಗವಂತಹಿಮಾಲಯಃನಾಮಕನಾಗಿ ಇಲ್ಲಿ ನೆಲೆಸಿದ್ದಾನೆ. ಭಗವಂತನ ನಾಮಕ್ಕೆ ವಿಶೇಷ ಅರ್ಥವಿದೆ. ಹ್ರೀ+ಮಾ+ಆಲಯ=ಹಿಮಾಲಯ. ಹ್ರೀ ಅಂದರೆ ಶ್ರೀಲಕ್ಷ್ಮಿ, ಮಾ ಅಂದರೆ ಭೂದೇವಿ. ಶ್ರೀದೇವಿ ಮತ್ತು ಭೂದೇವಿಯರ ಆಲಯನಾದ ಭಗವಂತ ಹಿಮಾಲಯಃ. ಭಗವಂತನ ವಿಶೇಷ ವಿಭೂತಿಯಿಂದಾಗಿ ಹಿಮಾಲಯದ ಕಣಕಣವೂ ಅಧ್ಯಾತ್ಮದ ವಿಸ್ಮಯದಿಂದ ತುಂಬಿದೆ. ಮನುಷ್ಯನ ಮನಃಪರಿವರ್ತನೆ ಮಾಡಿ ಆತನನ್ನು ಅಧ್ಯಾತ್ಮದತ್ತ ತಿರುಗಿಸುವ ವಿಶೇಷಶಕ್ತಿ ಹಿಮಾಲಯಕ್ಕಿದೆ. ವೇದವ್ಯಾಸರು, ನರ-ನಾರಾಯಣರು, ಆಚಾರ್ಯ ಮಧ್ವರು ನೆಲೆಸಿರುವ ತಾಣ ಹಿಮಾಲಯ. ಅನೇಕ ದೇವತೆಗಳು ನೆಲೆಸಿರುವ ನಿಗೂಢ ತಾಣ ಹಿಮಾಲಯ. ಭಗವಂತನ ವಿಭೂತಿ ನೆಲಕ್ಕೆ ಅದ್ಭುತ ಶಕ್ತಿಯನ್ನು ತಂದುಕೊಟ್ಟಿದೆ. 


·  ಶ್ಲೋಕ - 26
ಅಶ್ವತ್ಥಃ ಸರ್ವವೃಕ್ಷಾಣಾಂ ದೇವರ್ಷೀಣಾಂ ಚ ನಾರದಃ
ಗಂಧರ್ವಾಣಾಂ ಚಿತ್ರರಥಃ ಸಿದ್ಧಾನಾಂ ಕಪಿಲೋ ಮುನಿಃ ೨೬॥
ಅಶ್ವತ್ಥಃ ಸರ್ವ ವೃಕ್ಷಾಣಾಮ್ ದೇವರ್ಷೀಣಾಮ್ ಚ ನಾರದಃ ।
ಗಂಧರ್ವಾಣಾಮ್ ಚಿತ್ರರಥಃ ಸಿದ್ಧಾನಾಮ್ ಕಪಿಲಃ ಮುನಿಃ ಎಲ್ಲ ಮರಗಳಲ್ಲಿ ಅರಳಿಮರ ನಾನು.[ಅಶ್ವ=ಕುದುರೆಯ ರೂಪದಲ್ಲಿ ಸ್ಥ=ಇದ್ದುದರಿಂದ, ‘ಅಶ್ವತ್ಥಎನಿಸಿ ಅರಳಿಮರದಲ್ಲಿದ್ದೇನೆ.] ದೇವಲೋಕದ ಋಶಿಗಳಲ್ಲಿ ನಾರದ ನಾನು. [ನಾರ=ನರರ ಬಯಕೆಯೆಲ್ಲವನ್ನು ದ=ಕೊಡುವವನಾಗಿ ನಾರದಎನ್ನಿಸಿ ನಾರದನಲ್ಲಿದ್ದೇನೆ.] ಗಂಧರ್ವರ ದೊರೆ ಚಿತ್ರರಥ ನಾನು. [ಚಿತ್ರ=ಅಚ್ಚರಿಯ, ರಥ=ತೇರಿನಲ್ಲಿ ಚರಿಸುವುದರಿಂದ ಚಿತ್ರರಥಎನ್ನಿಸಿ ಗಂದರ್ವ ರಾಜ ಚಿತ್ರರಥನಲ್ಲಿದ್ದೇನೆ.] ಯೋಗಸಿದ್ಧರಲ್ಲಿ[ಕ=ಸುಖರೂಪನಾಗಿ, ಪಿ=ಪಾಲಿಸುವುದರಿಂದ, ಮತ್ತು ಲ=ಲಯಗೊಳಿಸುವುದರಿಂದ] ಕಪಿಲ ಮುನಿ ನಾನು.
ಕೃಷ್ಣ ಹೇಳುತ್ತಾನೆ: ಸರ್ವ ವೃಕ್ಷಗಳಲ್ಲಿ ಅಶ್ವತ್ಥ ನಾನುಎಂದು. ಅಶ್ವತ್ಥಮರ ಇಂದು ಮೇಲ್ನೋಟದಲ್ಲಿ ನೋಡುವವರಿಗೆ ಯಾವುದಕ್ಕೂ ಉಪಯೋಗವಿಲ್ಲದ ಮರ. ಭಗವಂತ ಈ ಮರಕ್ಕೆ ಮಹತ್ವ ಕೊಟ್ಟು ಹೇಳದಿದ್ದರೆ ಈ ಮರದ ಬಗ್ಗೆ ನಮಗೆ ಏನೂ ತಿಳಿದಿರುತ್ತಿರಲಿಲ್ಲ. ಏಕೆಂದರೆ ಈ ಮರ ನಮಗೆ ತಿನ್ನುವ ಹಣ್ಣನ್ನಾಗಲಿ, ಸುಗಂಧವಾದ ಹೂವನ್ನಾಗಲಿ ಕೊಡುವುದಿಲ್ಲ. ಈ ಮರದಿಂದ ಪೀಠೊಪಕರಣ ಮಾಡಲು ಸಾಧ್ಯವಿಲ್ಲ. ವಿಶಾಲವಾಗಿ ಬೆಳೆದು ತನ್ನ ಸುತ್ತಲಿನ ಪ್ರದೇಶವನ್ನು ಆಕ್ರಮಿಸಿ ನಿಲ್ಲುವ ಈ ಮರ, ಮೇಲ್ನೋಟಕ್ಕೆ ಜನರಿಗೆ ಕಾಟ ಕೊಡುವ ಮರ! ಆದರೆ ಇಲ್ಲಿ ಕೃಷ್ಣ ಹೇಳುತ್ತಾನೆ ವೃಕ್ಷಗಳ ಸಮುದಾಯದಲ್ಲಿ ಶ್ರೇಷ್ಠ ವೃಕ್ಷ ಅಶ್ವತ್ಥಎಂದು. ಏಕೆ ಈ ಮರಕ್ಕೆ ಇಷ್ಟು ಪ್ರಾಧಾನ್ಯ ಎನ್ನುವುದು ತಿಳಿಯದೆ ಇಂದು ನಾವು ಅದನ್ನು ಪೂಜಿಸುತ್ತೇವೆ ಅಥವಾ ಇನ್ನು ಕೆಲವರು ನಿರ್ಲಕ್ಷಿಸುತ್ತಾರೆ. ಈ ಮರವನ್ನು ನೆಟ್ಟರೆ ಪುಣ್ಯಬರುತ್ತದೆ ಎನ್ನುವ ಕಾರಣಕ್ಕೆ ಮನೆಯಿಂದ ದೂರದಲ್ಲಿ ಎಲ್ಲೋ ದೇವಸ್ಥಾನದಲ್ಲಿ ಅರಳಿ ಮರ ನೆಡುವುವವರಿದ್ದಾರೆ. ಇಂದು ಈ ಮರದ ಮಹತ್ವ ಹೆಚ್ಚಿನವರಿಗೆ ತಿಳಿದಿಲ್ಲ. ಹಿಂದಿನವರು ಆಲ, ಅರಳಿ ಮತ್ತು ಅತ್ತಿ ಈ ಮೂರು ಮರಗಳಿಗೆ ಬಹಳ ಮಹತ್ವ ಕೊಟ್ಟರು. [ಬೇಂದ್ರೆಯವರು ತಮ್ಮ ತೋಟದಲ್ಲಿ ಮೂಡಿಬಂದ ಈ ಮೂರು ಗಿಡಗಳನ್ನು ನೋಡಿ- ನಮ್ಮ ತೋಟದಲ್ಲಿ ಭಗವಂತ ಮೂರು ರೂಪದಲ್ಲಿ ಬಂದಿದ್ದಾನೆಎಂದು ಹೃದಯತುಂಬಿ ಹೇಳಿದ್ದನ್ನು ಇಲ್ಲಿ ಬನ್ನಂಜೆಯವರು ನೆನಪಿಸಿಕೊಂಡಿದ್ದಾರೆ]. ಹಿಂದೆ ಯಜ್ಞ ಮಾಡುವಾಗ ಶಮಿ ಮತ್ತು ಅರಣಿ(ಅರಳಿ) ಸಮಿತೆಯನ್ನು ಮಥನ ಮಾಡಿ ಅದರಿಂದ ಅಗ್ನಿ ಕಿಡಿ ತರಿಸಿ, ಅಗ್ನಿ ಸೃಷ್ಟಿ ಮಾಡುತ್ತಿದ್ದರು. ಯಜ್ಞದಲ್ಲಿ ಅರಳಿಯ ಸಮಿತೆಯನ್ನು ಮುಖ್ಯವಾಗಿ ಉಪಯೋಗಿಸುತ್ತಾರೆ. ಅಶ್ವತ್ಥಮರದ ಸಮಿತೆಯನ್ನು ಕಾಷ್ಟವಾಗಿ ಯಜ್ಞದಲ್ಲಿ ಉಪಯೋಗಿಸಿದರೆ, ಅಲ್ಲಿ ಉರಿಯುವ ಬೆಂಕಿಯ ಜ್ವಾಲೆಯಲ್ಲಿ ಒಂದು ವಿಶಿಷ್ಠ ಶಕ್ತಿ ಹೊರ ಹೊಮ್ಮುತ್ತದೆ. ಹೇಗೆ ಸೂರ್ಯನ ಕಿರಣದಲ್ಲಿ ಏಳು ಬಣ್ಣವಿದೆಯೋ ಹಾಗೆ ಅಗ್ನಿಯಲ್ಲಿ ಏಳು ಬಣ್ಣವಿದೆ. ಮುಂಡಕ ಉಪನಿಷತ್ತಿನಲ್ಲಿ ಅಗ್ನಿಯ ಜ್ವಾಲೆಯಿಂದ ಹೊಮ್ಮುವ ಏಳು ಬಣ್ಣವನ್ನು ಕಾಳಿ, ಕರಾಳಿ, ಮನೋಜವಾಚ, ಸುಲೋಹಿತಾಯಾಚ, ಸುಧೂಮ್ರವರ್ಣಾ, ಸ್ಫುಲಿಂಗಿನೀ, ವಿಶ್ವರುಚಿ ಎಂದು ಕರೆದಿದ್ದಾರೆ. ಅಗ್ನಿಯ ಈ ಏಳು ಬಣ್ಣವನ್ನು ಸೂರ್ಯ ಕಿರಣದ ಏಳು ಬಣ್ಣದೊಂದಿಗೆ ಸಂಕ್ರಾಂತಗೊಳಿಸಿ ವಾತಾವರಣದಲ್ಲಿ ಅದರ ಪ್ರಭಾವ ತರುವುದೇ ಯಜ್ಞ. ಈ ಕ್ರಿಯೆಗೆ ಅಶ್ವತ್ಥಸಮಿತೆ ಒಂದು ಪ್ರಮುಖ ಸಾಧನ.
ಇಂದು ಹಲವರು ಅಶ್ವತ್ಥಮರದಲ್ಲಿ ದೇವತಾ ಸನ್ನಿಧಾನವಿದೆ ಎಂದು ಅದಕ್ಕೆ ಪ್ರದಕ್ಷಿಣೆ ಬರುತ್ತಾರೆ. ಮಕ್ಕಳಾಗದಿದ್ದಾಗ ಜೋತಿಷಿಗಳು ಅಶ್ವತ್ಥ ಪ್ರದಕ್ಷಿಣೆ ಬರುವಂತೆ ಹೇಳುತ್ತಾರೆ. ಇದು ಏಕೆ ಎನ್ನುವ ಕಲ್ಪನೆ ಇಲ್ಲದ ಜನ ಇದೆಲ್ಲವೂ ಮೂಢನಂಬಿಕೆ ಎಂದು ಮಾತನಾಡಿಕೊಳ್ಳುತ್ತಾರೆ. ಜಗತ್ತಿನಲ್ಲಿರುವ ಎಲ್ಲ ಮರಗಳಿಗಿಂತ ಹೆಚ್ಚು ಆಮ್ಲಜನಕ ಕೊಡುವ ವೃಕ್ಷ ಅಶ್ವತ್ಥ. ಇಂತಹ ಶುದ್ಧ ವಾಯುವಿನ ಉಸಿರಾಟದಿಂದ ಗರ್ಭದೋಷ ಸರಿಹೋಗುವ ಸಾಧ್ಯತೆ ಇದೆ ಎಂದು ಇಂದು ವಿಜ್ಞಾನ ಕೂಡ ಒಪ್ಪಿಕೊಂಡಿದೆ. ಹಿಂದಿನ ಕಾಲದಲ್ಲಿ ಋಷಿಗಳು ಅಶ್ವತ್ಥ ಮರದ ಬುಡದಲ್ಲಿ ಕುಳಿತು ವೇದಾಧ್ಯಾಯನ ಮಾಡುತ್ತಿದ್ದರು. ಹೀಗೆ ಅಶ್ವತ್ಥ ಮರದಲ್ಲಿ ಭಗವಂತನ ವಿಶೇಷ ವಿಭೂತಿ ಆ ಮರಕ್ಕೆ ಇಂಥಹ ಅನೇಕ ವಿಶೇಷ ಶಕ್ತಿಯನ್ನು ಕೊಟ್ಟಿದೆ.
ಇಲ್ಲಿ ಬಂದಿರುವ ಭಗವಂತನ ನಾಮ ಅಶ್ವತ್ಥಃ’. ವೇದವನ್ನು ಉಪದೇಶ ಮಾಡಿದ ಭಗವಂತನ ವಿಶೇಷ ಅವತಾರ ಅಶ್ವರೂಪ ಹಯಗ್ರೀವ. ಅಶ್ವದ ಹಾಗೆ ಇದ್ದು ವೇದೋಪದೇಶ ಮಾಡಿದ ಭಗವಂತನನ್ನುಅಶ್ವತ್ಥಃಎಂದು ಕರೆಯುತ್ತಾರೆ.
ಮುಂದುವರಿದು ಕೃಷ್ಣ ಹೇಳುತ್ತಾನೆ ದೇವರ್ಷೀಣಾಂ ಚ ನಾರದಃಎಂದು. ನಾರದ ಗಂಧರ್ವರಲ್ಲಿ ಒಬ್ಬ. ಆದರೆ ಭಗವಂತನ ವಿಶೇಷ ಸನ್ನಿಧಾನದಿಂದ ಆತ ತುಂಬಾ ಎತ್ತರಕ್ಕೇರಿ ದೇವರ್ಷಿಯಾದ. ನಾರದ ಭಗವಂತನನ್ನು ಪಡೆದದ್ದು ಮಹಾ ಸಾಧನೆಯಿಂದ. ಹಿಂದಿನ ಬ್ರಹ್ಮಕಲ್ಪದಲ್ಲಿ ನಾರದ ಒಂದು ಬಡ ಕುಟುಂಬದಲ್ಲಿ ಹುಟ್ಟಿದ್ದ. ಆತನ ತಾಯಿ ಋಷಿ-ಮುನಿಗಳ ಆಶ್ರಮದಲ್ಲಿ ಕೆಲಸ ಮಾಡಿಕೊಂಡು ಬದುಕುತಿದ್ದಳು. ಪುಟ್ಟ ಮಗುವಾಗಿದ್ದ ಈತ ಋಷಿಗಳ ಅಧ್ಯಾತ್ಮ ಸಂಭಾಷಣೆಯನ್ನು ಕೇಳುತ್ತ ಬೆಳೆದ. ಈತ ಐದು ವರ್ಷದವನಿದ್ದಾಗ ಆತನ ತಾಯಿ ಹಾವು ಕಚ್ಚಿ ಸಾಯುತ್ತಾಳೆ. ತಿಳಿದವರು ಹೇಳುವಂತೆ- ನಮಗೆ ದೇವರೇ ನಾಥಎಂದು ಗೊತ್ತು ಮಾಡಿಸಲು ಭಗವಂತ ನಮ್ಮನ್ನು ಮೊದಲು ಅನಾಥಮಾಡುತ್ತಾನೆ”. ಹಾಗೆ ಅನಾಥನಾದ ಈತ ತನ್ನ ಐದನೇ ವರ್ಷದಿಂದಲೇ, ಋಷಿಗಳಿಂದ ತಿಳಿದ ಜ್ಞಾನದಿಂದ ಸಾಧನೆ ಆರಂಭಿಸುತ್ತಾನೆ. ಆದರೆ ಆತನಿಗೆ ಆ ಜನ್ಮದಲ್ಲಿ ಭಗವಂತನ ದರ್ಶನವಾಗುವುದಿಲ್ಲ. ಆದರೆ ಆತ ಭಗವಂತನ ವಾಣಿಯನ್ನುಕೇಳಿದ’. “ಈ ಜನ್ಮದಲ್ಲಿ ನನ್ನನ್ನು ಕಾಣುವ ಪ್ರಯತ್ನ ಮಾಡಬೇಡ. ನೀನು ಮುಂದಿನ ಕಲ್ಪದಲ್ಲಿ ಸದಾ ನನ್ನನ್ನು ಕಾಣುವೆಎಂದು. ನಂತರ ಈತ ಈ ಬ್ರಹ್ಮಕಲ್ಪದಲ್ಲಿ ನಾರದನಾಗಿ ಹುಟ್ಟಿ ಭಗವಂತನ ಮಹಾ ಅನುಗ್ರಹಕ್ಕೆ ಪಾತ್ರನಾದ.
ನಾರದರು ನಮ್ಮ ಅಂತಃಪ್ರಜ್ಞೆಯ ಅಭಿಮಾನಿ ದೇವತೆ. ಹಿಂದಿನ ಕಾಲದ ಕಥೆಗಳಲ್ಲಿ ಕಾಣುವಂತೆ ಯಾವುದಾದರು ಒಳ್ಳೆಯ ಕೆಲಸವಾಗಬೇಕಾದರೆ ಅಲ್ಲಿ ನಾರದರು ಬಂದು ಹೇಳಿ ಹೋಗುತ್ತಿದ್ದರು. ಉದಾಹರಣೆಗೆ ವಾಲ್ಮೀಕಿ ರಾಮಾಯಣ ಬರೆಯುವಂತೆ ಹೇಳಿ ಹೋದವರು ನಾರದರು. ಇಲ್ಲಿ ನಮಗೆ ಒಂದು ಪ್ರಶ್ನೆ ಬರುತ್ತದೆ. ಈಗ ಏಕೆ ನಾರದರು ಬರುವುದಿಲ್ಲ, ಏಕೆ ನಮಗೆ ಮಾರ್ಗದರ್ಶನ ಸಿಗುವುದಿಲ್ಲ ಎಂದು. ನಾರದರನ್ನು ನಾವು ಕರೆದರೆ ಖಂಡಿತ ಇವತ್ತಿಗೂ ಬರುತ್ತಾರೆ!ನಾರದಅಂದರೆ ನಮ್ಮ ಅಂತರಂಗದ ಧ್ವನಿ(intuitional flash). ನಾವು ನಮ್ಮ ಆತ್ಮದ ಕರೆಗೆ ಕಿವಿ ಕೊಟ್ಟರೆ ಅಲ್ಲಿ ನಾರದರು ಮಾತನಾಡುತ್ತಾರೆ. ನಾವು ನಮ್ಮ ಒಳಗಿನ ಸಂದೇಶವನ್ನು ಆಲಿಸಲು ಅಭ್ಯಾಸ ಮಾಡಿದರೆ ಆಗ ನಮ್ಮ ಆಜ್ಞಾಚಕ್ರ ತೆರೆದುಕೊಳ್ಳುತ್ತದೆ. ಇದರಿಂದ 'ಈ ರೀತಿ ಮಾಡು' ಎನ್ನುವ ಸಂದೇಶ(Divine Message) ಬರುತ್ತದೆ. ಇದೇ ಅಶರೀರವಾಣಿ ಅಥವಾ ಅಂತಃರ್ವಾಣಿ. ಇದೇ ನಾರದ. ಪ್ರತ್ಯಕ್ಷ ಕಾಣಲಾಗದಿದ್ದರೂ ಕೂಡ ಅವರನ್ನು ಕೇಳಬಹುದು. ನಾರದರಿಗೆ ಈ ಎಲ್ಲಾ ವಿಶಿಷ್ಠ ಶಕ್ತಿ ಭಗವಂತನ ವಿಶೇಷ ಸನ್ನಿಧಾನದಿಂದ ಬಂತು.
ಇಲ್ಲಿ ಬಂದಿರುವ ಭಗವಂತನ ನಾಮ ನಾರದಃ’. ನರರ ಅಜ್ಞಾನವನ್ನು ಕಳೆದು(ನಾರ-ಧ್ಯತಿ), ಅವರು ಬಯಸಿದ್ದನ್ನು ದಾರೆ ಎರೆಯುವ(ನಾರ-ದದಾತಿ) ಭಗವಂತ ನಾರದಃ.
ನಾರದರ ನಂತರ ಗಂಧರ್ವರಲ್ಲಿ ತನ್ನ ವಿಶೇಷ ವಿಭೂತಿಯನ್ನು ಕೃಷ್ಣ ವಿವರಿಸುತ್ತಾನೆ. ಕೃಷ್ಣ ಹೇಳುತ್ತಾನೆ ಗಂಧರ್ವರಲ್ಲಿ ಚಿತ್ರರಥ ನಾನುಎಂದು. ದೇವಲೋಕದ ಪರಿಚಾರಿಕೆ ಮಾಡುವ ಉಪದೇವತಾ ಗಣ ಗಂಧರ್ವರು. ಇವರು ಅವಾಂತರ ದೇವತೆಗಳು. ಈ ಗಣದ ರಾಜ ಚಿತ್ರರಥ.ರಾಜಾ ಪ್ರತ್ಯಕ್ಷ ದೇವತಾಎನ್ನುವಂತೆ ಭಗವಂತ ಚಿತ್ರರಥನಲ್ಲಿ ವಿಶೇಷ ವಿಭೂತಿಯಾಗಿ ಸನ್ನಿಹಿತನಾಗಿದ್ದಾನೆ. ಇಲ್ಲಿ ಬಂದಿರುವ ಭಗವಂತನ ನಾಮ ಚಿತ್ರರಥಃ’. ವಿಚಿತ್ರವಾದ ರಥ ಉಳ್ಳ ಭಗವಂತ ಚಿತ್ರರಥಃ. ಭಗವಂತನ ವಾಹನ-ಗರುಡ. ಇದು ಇತರ ಎಲ್ಲ ವಾಹನಗಳಿಗಿಂತ ವಿಶಿಷ್ಠ. ಇಂಥಹ ರಥದಲ್ಲಿ ಸಂಚರಿಸುವ ಭಗವಂತ ಚಿತ್ರರಥಃ.
ಕೃಷ್ಣ ಹೇಳುತ್ತಾನೆ ಸಿದ್ಧಾನಾಂ ಕಪಿಲೋ ಮುನಿಃಎಂದು. ಇತಿಹಾಸದಲ್ಲಿ ಇಬ್ಬರು ಕಪಿಲಮುನಿಗಳು ಬರುತ್ತಾರೆ. ಇವರಿಬ್ಬರೂ ಸಾಂಖ್ಯವನ್ನು ಹೇಳಿದವರು. ಆದರೆ ಒಬ್ಬ ಭಗವಂತನನ್ನು ನಂಬದವ. ಆದ್ದರಿಂದ ಇಲ್ಲಿ ಬಂದಿರುವ ಕಪಿಲಮುನಿ-ಕಪಿಲ ವಾಸುದೇವ. ಸಾಂಖ್ಯವನ್ನು ಮೂಲತಃ ಜಗತ್ತಿಗೆ ಕೊಟ್ಟ ಸಾಕ್ಷಾತ್ ಭಗವಂತನ ಅವತಾರ. ಸ್ವಾಯಂಭುವ ಮನುವಿನ ಮಗಳು ದೇವಭೂತಿ ಹಾಗು ಕರ್ಧಮ ಪ್ರಜಾಪತಿಯ ದಾಂಪತ್ಯ ಫಲದಲ್ಲಿ ಮೂಡಿಬಂದ ಭಗವಂತನ ಅವತಾರ. ವೇದವ್ಯಾಸರು ಕೂಡಾ ಕಪಿಲ ಹೇಳಿರುವುದನ್ನೇ ನಮ್ಮ ಮುಂದೆ ಪ್ರಸ್ತುತಿ ಮಾಡಿರುವುದು. ಹೊಸತನ್ನು ಜಗತ್ತಿಗೆ ಕೊಟ್ಟ ಭಗವಂತನ ಅವತಾರ ಕಪಿಲಾವತಾರ’.
ಇಲ್ಲಿ ಬಂದಿರುವ ಭಗವಂತನ ನಾಮ ಕಪಿಲಃ’. ಕ-ಪಿ-ಲ; ಇಡೀ ಜಗತ್ತನ್ನು ಪಾಲಿಸುವ(ಪಿ), ಮತ್ತು ಲಯಗೊಳಿಸುವ(ಲ), ಆನಂದಮೂರ್ತಿ(ಕ) ಭಗವಂತ ಕಪಿಲಃ. ಸದಾ ಆನಂದವನ್ನು ಪಾನಮಾಡುವ, ಅದ್ಭುತವಾದ ಸಾಂಖ್ಯದ ಮೂಲಕ ವಿಶ್ವದ ರಹಸ್ಯವನ್ನು ತೆರೆದಿಟ್ಟ ಭಗವಂತ ಕಪಿಲಃ’.
·  ಶ್ಲೋಕ - 27
ಋಷಿ, ಬ್ರಹ್ಮರ್ಷಿ, ದೇವರ್ಷಿ, ಮಹರ್ಷಿಗಳು ಹೀಗೆ ಬ್ರಹ್ಮ ತೇಜಸ್ಸು ಮತ್ತು ಅವರು ಮಾಡುವ ವೇದಾಧ್ಯಾಯನ, ತಪಸ್ಸು, ಯಜ್ಞ-ಎಲ್ಲದರ ಬಗ್ಗೆ ಹೇಳಿದ ಕೃಷ್ಣ, ಮುಂದಿನ ಶ್ಲೋಕದಲ್ಲಿ ಕ್ಷಾತ್ರತೇಜಸ್ಸಿನ ಬಗ್ಗೆ ಹೇಳುತ್ತಾನೆ.
ಉಚ್ಚೈಃಶ್ರವಸಮಶ್ವಾನಾಂ ವಿದ್ಧಿ ಮಾಮಮೃತೋದ್ಭವಮ್
ಐರಾವತಂ ಗಜೇಂದ್ರಾಣಾಂ ನರಾಣಾಂ ಚ ನರಾಧಿಪಮ್ ೨೭॥
ಉಚ್ಚೈಃಶ್ರವಸಮ್ ಅಶ್ವಾನಾಮ್ ವಿದ್ಧಿ ಮಾಮ್ ಅಮೃತ ಉದ್ಭವಮ್
ಐರಾವತಮ್ ಗಜೇಂದ್ರಾಣಾಮ್ ನರಾಣಾಮ್ ಚ ನರಾಧಿಪಮ್ಕುದುರೆಗಳಲ್ಲಿ ಕಡಲಲ್ಲಿ ಮೂಡಿಬಂದ ಉಚ್ಚೈಃಶ್ರವಸ್ಸನ್ನು, ಹಿರಿಯಾನೆಗಳಲ್ಲಿ ಐರಾವತವನ್ನು, ಮನುಜರಲ್ಲಿ ಒಡೆಯನಾದ ಅರಸನನ್ನು[ಉನ್ನತಕೀರ್ತಿ ಪಡೆದು ಉಚ್ಚೈಃಶ್ರವಸ್ಎನ್ನಿಸಿ ಉಚ್ಚೈಃಶ್ರವದಲ್ಲಿರುವವನು, ಐರಾ=ಲಕ್ಷ್ಮಿಗೆ, ಅವನ=ರಕ್ಷಕನಾಗಿ ಐರಾವತಎನ್ನಿಸಿ ಐರಾವತದಲ್ಲಿರುವವನು, ನರರಿಗೆಲ್ಲ ಒಡೆಯನಾದ್ದರಿಂದ ನರಾಧಿಪಎನ್ನಿಸಿ ಅರಸನಲ್ಲಿರುವವನು] ನಾನೆಂದು ತಿಳಿ.
ಹಿಂದೆ ಸೇನೆಯಲ್ಲಿ ಮುಖ್ಯವಾದ ಅಂಗಗಳಾಗಿ ಕುದುರೆ ಮತ್ತು ಆನೆಗಳನ್ನು ರಾಜರು ಬಳಸುತ್ತಿದ್ದರು. ಕೃಷ್ಣ ಈ ಶ್ಲೋಕದಲ್ಲಿ ಕುದುರೆ, ಆನೆ ಮತ್ತು ರಾಜರಲ್ಲಿ ತನ್ನ ವಿಶೇಷ ವಿಭೂತಿಯನ್ನು ಹೇಳಿದ್ದಾನೆ. ಕೃಷ್ಣ ಹೇಳುತ್ತಾನೆ ಸಮುದ್ರ ಮಥನದಲ್ಲಿ ಅಮೃತದ ಜೊತೆಗೆ ಹುಟ್ಟಿದ ಅಶ್ವ ಉಚ್ಚೈಃಶ್ರವಸ್ಸುಮತ್ತು ಹಿರಿಯಾನೆ ಐರಾವತನಾನೆಂದು ತಿಳಿಎಂದು. ಈ ಎರಡೂ ಪ್ರಾಣಿಗಳು ಬಹಳ ವಿಶೇಷ ಪ್ರಾಣಿಗಳು. ಕುದುರೆ ಮತ್ತು ಆನೆ ಸ್ವಾಮಿನಿಷ್ಠೆಗೆ ಹೆಸರಾದ ಪ್ರಾಣಿಗಳು. ಇವು ತನ್ನನ್ನು ಪ್ರೀತಿಯಿಂದ ಸಾಕುವ ಧನಿಗೆ ಎಂದೂ ಮೋಸ ಮಾಡುವುದಿಲ್ಲ. ಇನ್ನು ನರರಲ್ಲಿ ಶ್ರೇಷ್ಠ ನರಾಧಿಪ’. ಮನುಕುಲಕ್ಕೆ ನಾಯಕರಾಗಿ ನಿಂತು ಧರ್ಮನಿಷ್ಠರಾಗಿ ಜನಪಾಲನೆ ಮಾಡುವ ಮುಖಂಡರಲ್ಲಿ ಭಗವಂತನ ವಿಶೇಷ ಸನ್ನಿಧಾನವಿರುತ್ತದೆ. ಹಿಂದೆ ರಾಜ್ಯಭಾರ ಮಾಡಿದ ಧರ್ಮರಾಜ, ಪರೀಕ್ಷಿತ ಇತ್ಯಾದಿ ರಾಜರನ್ನು ಇಲ್ಲಿ ನಾವು ನೆನಪಿಸಿಕೊಳ್ಳಬಹುದು.
ಇಲ್ಲಿ ಬಂದಿರುವ ಭಗವಂತನ ಹೆಸರು ಉಚ್ಚೈಃಶ್ರವಸ್ಸು, ಐರಾವತಃ ಮತ್ತು ನರಾಧಿಪಃ.ಶ್ರವಸ್ಸುಎಂದರೆ ಕೀರ್ತಿ, ಜ್ಞಾನ, ಕರ್ಮ. ಹಬ್ಬಿರುವ ಕೀರ್ತಿ ಹೊಂದಿರುವ, ಮಹಾಜ್ಞಾನಿಯಾದ ಭಗವಂತ ಈ ಸೃಷ್ಟಿ-ಸ್ಥಿತಿ-ಸಂಹಾರವೆಂಬ ಮಹಾಕರ್ಮವನ್ನು ಸದಾ ಮಾಡುತ್ತಿರುವ ಉಚ್ಚೈಃಶ್ರವಸ್ಸು’ . ಐರಾ ಎಂದರೆ ಭೂದೇವಿಯಲ್ಲಿ ಸನ್ನಿಹಿತಳಾಗಿರುವ ಲಕ್ಷ್ಮಿ. ಇಂತಹ ಲಕ್ಷ್ಮಿಗೆ ಪತಿಯಾಗಿರುವ ಭಗವಂತ ಐರಾವತಃ’. ನರರಿಗೆ, ಸರ್ವ ಜೀವಜಾತಕ್ಕೆ ಅಧಿಪತಿಯಾಗಿ, ಅರಸರಲ್ಲಿ ಸನ್ನಿಹಿತನಾಗಿರುವ ಭಗವಂತ ನರಾಧಿಪಃ’.
·  ಶ್ಲೋಕ - 28
ಆಯುಧಾನಾಮಹಂ ವಜ್ರಂ ಧೇನೂನಾಮಸ್ಮಿ ಕಾಮಧುಕ್ ।
ಪ್ರಜನಶ್ಚಾಸ್ಮಿ ಕಂದರ್ಪಃ ಸರ್ಪಾಣಾಮಸ್ಮಿ ವಾಸುಕಿಃ ॥೨೮॥
ಆಯುಧಾನಾಮ್ ಅಹಮ್ ವಜ್ರಮ್ ಧೇನೂನಾಮ್ ಅಸ್ಮಿ ಕಾಮಧುಕ್ ।
ಪ್ರಜನಃ ಚ ಅಸ್ಮಿ ಕಂದರ್ಪಃ ಸರ್ಪಾಣಾಮ್ ಅಸ್ಮಿ ವಾಸುಕಿಃ ಆಯುಧಗಳಲ್ಲಿ ವಜ್ರಾಯುಧ ನಾನು. [ಅರಿವರ್ಜಿತನಾದ್ದರಿಂದ ವಜ್ರಎನ್ನಿಸಿ ವಜ್ರಾಯುಧದಲ್ಲಿದ್ದೇನೆ.] ಹಸುಗಳಲ್ಲಿ ಕಾಮಧೇನು ನಾನು. [ಕಾಮ=ಬಯಸಿದ್ದನ್ನು, ಧುಕ್=ಕರೆಯುವುದರಿಂದ ಕಾಮಧುಕ್ಎನ್ನಿಸಿ ಕಾಮಧೇನುವಿನಲ್ಲಿದ್ದೇನೆ.] ಸಂತಾನವನ್ನೀಯುವ ಕಾಮದೇವ [ಕಂ=ಸುಖದ, ದರ=ಹಲವು ಬಗೆಗಳನ್ನು, ಪ=ಉಣ್ಣಿಸುವುದರಿಂದ ಕಂದರ್ಪಎನ್ನಿಸಿ ಕಾಮದೇವನಲ್ಲಿದ್ದು ಅವನಿಗೆ ಹುಟ್ಟಿನ ಸೆಳೆತದ ಶಕ್ತಿಯನ್ನಿತ್ತವನು] ನಾನು. ಹಾವುಗಳಲ್ಲಿ ವಾಸುಕಿ ನಾನು. [ವಾಸು=ಎಲ್ಲೆಡೆ ವಾಸಮಾಡಿ, ಕಿ=ಸುಖವನ್ನೀಯುವುದರಿಂದ ವಾಸುಕಿಎನ್ನಿಸಿ ವಾಸುಕಿಯಲ್ಲಿದ್ದೇನೆ.]
ಆಯುಧಗಳಲ್ಲಿ ಸರ್ವಶ್ರೇಷ್ಠ ಆಯುಧ ಭಗವಂತ ಧರಿಸುವ ಸುದರ್ಶನ. ಭಗವಂತನ ಆಯುಧವನ್ನು ಬಿಟ್ಟರೆ ಶ್ರೇಷ್ಠ ಆಯುಧ ವಜ್ರಾಯುಧ. ಕೃಷ್ಣ ಹೇಳುತ್ತಾನೆ ಆಯುಧಗಳಲ್ಲಿ ವಜ್ರಾಯುಧ ನಾನುಎಂದು. ಈ ವಜ್ರಾಯುಧ ಇಂದ್ರನ ಆಯುಧ. ಇದಕ್ಕೆ ಮೂರು ಲೋಕವನ್ನು ನಿಯಂತ್ರಿಸುವ ಶಕ್ತಿಯನ್ನು ಭಗವಂತ ಕೊಟ್ಟ. ವ್ರತ್ರನನ್ನು ಸಂಹಾರ ಮಾಡಲು ಭಗವಂತನ ಆದೇಶದಂತೆ ದಧೀಚಿ ಎನ್ನುವ ಮುನಿಯ ಪೂರ್ಣ ತಪಸ್ಸಿನ ಫಲವನ್ನು ಆವಾಹನೆ ಮಾಡಿ ನಿರ್ಮಾಣಗೊಂಡ ಆಯುಧ ವಜ್ರಾಯುಧ. ಮಳೆ ಬಂದಾಗ ಕಾಣುವ ಸಿಡಿಲು-ಮಿಂಚನ್ನು ವಜ್ರಾಯುಧದ ಪ್ರತೀಕವೆನ್ನುತ್ತಾರೆ. ಈ ಆಯುಧದಲ್ಲಿ ಭಗವಂತ ವಜ್ರಃನಾಮಕನಾಗಿ ಸನ್ನಿಹಿತನಾಗಿದ್ದಾನೆ. ವರ್ಜನಾತ್ ಇತಿ ವಜ್ರಃ’. ಶತ್ರುಗಳನ್ನು, ಸಮಸ್ತ ದೋಷವನ್ನು, ವರ್ಜನೆ ಮಾಡುವ ಭಗವಂತ ವಜ್ರಃ.
ಅಸ್ತ್ರದ ಬಗ್ಗೆ ಹೇಳಿದ ಕೃಷ್ಣ ಮುಂದೆ ವಿಶ್ವಾಮಿತ್ರನ ಸಮಸ್ತ ಅಸ್ತ್ರವನ್ನು ನಾಶಮಾಡಿದ ವಸಿಷ್ಠಮುನಿಯ ಕಾಮಧೇನುವಿನ ಬಗ್ಗೆ ಹೇಳುತ್ತಾನೆ. ಪ್ರಾಣಿಗಳಲ್ಲೇ ಶ್ರೇಷ್ಠ ಪ್ರಾಣಿ-ಧೇನು(ಹಸು). ನಮ್ಮ ಜೀವಮಾನವಿಡೀ ನಮಗೆ ಹಾಲುಣಿಸಿ ಪೋಷಿಸುವ ಭಗವಂತನ ವಿಶಿಷ್ಠ ವಿಭೂತಿ ಹಸು. ಈ ಕಾರಣಕ್ಕಾಗಿ ಕೃಷ್ಣ ಬಾಲಕನಿದ್ದಾಗಿ ಗೋಪೂಜೆಯನ್ನು ಚಾಲ್ತಿಗೆ ತಂದ. ಹಸುವಿನ ಮಲ-ಮೂತ್ರ ಕೂಡ ತ್ಯಾಜ್ಯವಲ್ಲ. ಯಾವುದರಿಂದಲೂ ಗುಣವಾಗದ ಚರ್ಮರೋಗಕ್ಕೆ ಗೋಮಯ ಮತ್ತು ಮೃತ್ತಿಕೆ(ಕೆಂಪು ಮಣ್ಣು)ಯಿಂದ ಸ್ನಾನ ಮಾಡಿದರೆ ಆ ರೋಗ ಗುಣವಾಗುತ್ತದೆ. ಮನೆ ಮುಂದೆ ಸಗಣಿ ಸಾರಿಸುವುದರಿಂದ ಅಲ್ಲಿ ಕ್ರಿಮಿ ಕೀಟ ಇಲ್ಲವಾಗುತ್ತದೆ. ಗೋಮಯದಲ್ಲಿ ಲಕ್ಷ್ಮಿಯ ಸನ್ನಿಧಾನವಿದೆ ಎಂದು ಮಹಾಭಾರತದಲ್ಲಿ ಬರುವ ಒಂದು ಕಥೆಯಲ್ಲಿ ಹೇಳಲಾಗಿದೆ. ಹೀಗೆ ಅನೇಕಾನೇಕ ಉಪಯೋಗ ಹಸುವಿನಿಂದ. ಭಗವಂತ ಬಯಸಿದ್ದನ್ನು ಕೊಡುವ ಕಾಮಧುಕ್ನಾಮಕನಾಗಿ ಕಾಮಧೇನುವಿನಲ್ಲಿ ವಿಭೂತಿಯಾಗಿ ನಿಂತ.
ಈ ಪ್ರಪಂಚದಲ್ಲಿರುವ ಜೀವಿಗಳಲ್ಲಿ ಗಂಡು-ಹೆಣ್ಣಿನ ನಡುವೆ ಹುಟ್ಟಿನ ಸೆಳೆತ(Sexual desire)ವಾಗಿ ನಿಂತಿರುವವ- ಸಂತಾನವನ್ನೀಯುವ ಕಾಮದೇವ. ಈ ಕಾಮದೇವ(ಕಂದರ್ಪ)ನಲ್ಲಿ ಭಗವಂತನ ವಿಶಿಷ್ಠ ಶಕ್ತಿ ಅಡಗಿದೆ. ಸೃಷ್ಟಿಯಲ್ಲಿ ಸಂತಾನ ಕ್ರಿಯೆ ನಡೆಯುವುದಕ್ಕೋಸ್ಕರ ಅಧಮ್ಯ ಬಯಕೆಯನ್ನು ಎಲ್ಲರೊಳಗೆ ತುಂಬಿ, ಅಲ್ಲಿ ಭಗವಂತ ಕೂತ. ಈ ಕಾರಣದಿಂದ ಭಗವಂತನ ಅನುಗ್ರಹವಿಲ್ಲದೆ ಲೀಲಾಜಾಲವಾಗಿ ಯಾರೂ ಕೂಡ ಈ ಶಕ್ತಿಯಿಂದೀಚೆಗೆ ಬರಲಾರರು. ಬಲವಂತವಾಗಿ ಅದನ್ನು ಬಿಡಲಾಗದು. ಭಗವಂತ ಕಂದರ್ಪಃ ನಾಮಕನಾಗಿ ಕಾಮದೇವನಲ್ಲಿ ತುಂಬಿದ್ದಾನೆ. ಮನುಷ್ಯನಿಗೆ ಅನೇಕ ರೀತಿಯ ಬಯಕೆಗಳನ್ನು ಕೊಟ್ಟು, ಆ ಬಯಕೆಯಿಂದ ಅವರನ್ನು ಸಂತೃಪ್ತಿಗೊಳಿಸಿ, ವಿಚಿತ್ರ ಸುಖದ ಸುಪ್ಪತ್ತಿಗೆಯಲ್ಲಿ ಓಲಾಡಿಸುವ ಭಗವಂತ ಕಂದರ್ಪಃ’.
ಕಾಮದೇವ-ಮನ್ಮಥನ ನಂತರ ಕಾಮದ ಸಂಕೇತವಾದ ಸರ್ಪದ ಬಗ್ಗೆ ಕೃಷ್ಣ ವಿವರಿಸುತ್ತಾನೆ. ಹೊಟ್ಟೆಯನ್ನು ಹೊಸೆದುಕೊಂಡು ಹೋಗುವ ಸರೀಸೃಪವನ್ನು ಸರ್ಪ ಎನ್ನುತ್ತಾರೆ. ಸರೀಸೃಪಗಳಿಗೆಲ್ಲ ರಾಜ ವಾಸುಕಿ. ಭಗವಂತ ವಾಸುಕಿಃನಾಮಕನಾಗಿ ನಿಂತು, ವಾಸುಕಿಗೆ ಈ ಸ್ಥಾನವನ್ನು ಕೊಟ್ಟ. ಭಗವಂತ ಇಲ್ಲದ ಸ್ಥಳವಿಲ್ಲ. ಎಲ್ಲೆಡೆ ವಾಸಮಾಡುವ ಭಗವಂತವಾಸುಕಿಃ.’.
·  ಶ್ಲೋಕ - 29
ಅನಂತಶ್ಚಾಸ್ಮಿ ನಾಗಾನಾಂ ವರುಣೋ ಯಾದಸಾಮಹಮ್
ಪಿತೄಣಾಮರ್ಯಮಾ ಚಾಸ್ಮಿ ಯಮಃ ಸಂಯಮತಾಮಹಮ್ ॥೨೯॥
ಅನಂತಃ ಚ ಅಸ್ಮಿ ನಾಗಾನಾಮ್ ವರುಣಃ ಯಾದಸಾಮ್ ಅಹಮ್
ಪಿತೄಣಾಮ್ ಅರ್ಯಮಾ ಚ ಅಸ್ಮಿ ಯಮಃ ಸಂಯಮತಾಮ್ ಅಹಮ್ ನಾಗರಹಾವುಗಳಲ್ಲಿ ಶೇಷ ನಾನು. [ಅಳಿವಿರದ್ದರಿಂದ ಅನಂತಎನ್ನಿಸಿ ಶೇಷನಲ್ಲಿದ್ದೇನೆ.] ಜಲಚರಗಳ ಒಡೆಯ ವರುಣ [ವರ=ಹಿರಿದಾದ, ಣ=ಆನಂದಸ್ವರೂಪನಾದ್ದರಿಂದ ವರುಣಎನ್ನಿಸಿ ವರುಣನಲ್ಲಿದ್ದು ಅವನಿಗೆ ಜಲಚರಗಳ ಒಡೆತನವನ್ನಿತ್ತವನು] ನಾನು. ಪಿತೃದೇವತೆಗಳಲ್ಲಿ ಅರ್ಯಮ ನಾನು. [ಅರ್ಯ=ಅರಿಯಬೇಕಾದವನು ಮತ್ತು ಮಾ=ಅರಿತವನು ಆದ್ದರಿಂದ ಅರ್ಯಮನ್ಎನ್ನಿಸಿ, ಪಿತೃಪತಿಯಾದ ಅರ್ಯಮನೆಂಬ ಆದಿತ್ಯನಲ್ಲಿದ್ದೇನೆ.] ದಂಡಿಸುವವರಲ್ಲಿ ಯಮ[ನಿಯಮಿಸುವುದರಿಂದಯಮಎನ್ನಿಸಿ, ಯಮನಲ್ಲಿದ್ದು ಅವನಿಗೆ ಪಾಪಿಗಳನ್ನು ದಂಡಿಸುವ ಹೊಣೆಯಿತ್ತವನು]ನಾನು.
ಸರ್ಪಗಳ ಜಾತಿಯಲ್ಲಿ ಹೆಡೆ ಉಳ್ಳದ್ದು ನಾಗರ’. ನಾಗರದಲ್ಲಿ ಅತ್ಯಂತ ಶ್ರೇಷ್ಠಶೇಷ’. ಬಲರಾಮನಾಗಿ, ಲಕ್ಷ್ಮಣನಾಗಿ, ಸದಾ ಭಗವಂತನ ಹಾಸಿಗೆಯಾಗಿ ಇರುವ ಬಹಳ ದೊಡ್ಡ ದೇವತೆ ಶೇಷ. ಶೇಷ ಭೂಮಿಯ ಆಕರ್ಷಣ ಶಕ್ತಿಯಾದ(Gravity) ಸಂಕರ್ಷಣ. ಹೀಗಾಗಿ ಭೂಮಿಯನ್ನು ಶೇಷ ಹೊತ್ತಿದ್ದಾನೆ ಎನ್ನುತ್ತಾರೆ. ಇಂತಹ ಶೇಷನಲ್ಲಿ ಭಗವಂತ ವಿಶೇಷವಾಗಿ ಸನ್ನಿಹಿತನಾಗಿದ್ದಾನೆ. ಹೆಡೆಯಿರುವ ಹಾವುಗಳಿಗೆಲ್ಲ ಮೂಲಶಕ್ತಿಯಾಗಿ ಶೇಷನಲ್ಲಿ ತುಂಬಿದ, ಎಂದೂ ಅಳಿವಿರದ ಶೇಷಶಯನ ಭಗವಂತ ಅನಂತಃ’.
ಜಲಚರ ಪ್ರಾಣಿಗಳಲ್ಲಿ ಅವುಗಳ ಒಡೆಯ ವರುಣನಾನುಎನ್ನುತ್ತಾನೆ ಕೃಷ್ಣ. ನೀರಿನ ಆವರಣದಲ್ಲಿ ಅನೇಕ ಜಲಚರ ಪ್ರಾಣಿಗಳಿಗೆ ಬದುಕು ಕೊಡುವ ವರುಣನೊಳಗೆ ವಿಶೇಷ ವಿಭೂತಿಯಾಗಿ ಭಗವಂತ ತುಂಬಿದ. ಇಲ್ಲಿ ಬರುವ ಭಗವಂತನ ನಾಮ ವರುಣಃ. ಹಿರಿದಾದ ಆನಂದ ಸ್ವರೂಪನಾದ್ದರಿಂದವರುಣಎನ್ನಿಸಿ ವರುಣನಲ್ಲಿದ್ದು, ಅವನಿಗೆ ಜಲಚರಗಳ ಒಡೆತನವಿತ್ತ ಭಗವಂತ ವರುಣಃ’.
ಭೂಮಿಯಿಂದ ದೇಹತ್ಯಾಗ ಮಾಡಿ ಹೋದ ಜೀವಗಳನ್ನು ನಿಯಂತ್ರಿಸುವ ದೇವತಾ ಶಕ್ತಿ-ಪಿತೃದೇವತೆಗಳು. ಅವರಲ್ಲಿ ಅವರ ಮುಖಂಡನಾದ, ದ್ವಾದಶಾದಿತ್ಯರಲ್ಲಿ ಒಬ್ಬ ಅರ್ಯಮನಲ್ಲಿ ಭಗವಂತ ವಿಶೇಷ ಶಕ್ತಿಯಾಗಿ ನಿಂತ. ಅರಿಯಬೇಕಾದವನು(ಅರ್ಯ) ಮತ್ತು ಅರಿತವನು(ಮಾ) ಆದ್ದರಿಂದ ಅರ್ಯಮನ್ಎನ್ನಿಸಿ, ಪಿತೃಪತಿಯಾದ ಅರ್ಯಮನೆಂಬ ಆದಿತ್ಯನಲ್ಲಿದ್ದೇನೆಎನ್ನುತ್ತಾನೆ ಕೃಷ್ಣ.
ಪಾಪ ಮಾಡಿದ ಜೀವಗಳನ್ನು ನಿಯಂತ್ರಿಸುವವ ಯಮ. ಯಮನೊಳಗೆ ಭಗವಂತನ ವಿಶೇಷ ಸನ್ನಿಧಾನವಿದೆ. ಯಮನಲ್ಲಿದ್ದು ನಿಯಮಿಸುವ ಭಗವಂತ ಯಮಃ’. ಯೋಗಶಾಸ್ತ್ರದಲ್ಲಿ ಯಮ ಎನ್ನುವ ಪದವನ್ನು ವಿಶಿಷ್ಟ ಅರ್ಥದಲ್ಲಿ ಬಳಸಿದ್ದಾರೆ. ಅದು ನಾವು ಮಾಡಬಾರದ ಐದು ನಿಯಮಗಳನ್ನು ಹೇಳುತ್ತದೆ. (೧) ಹಿಂಸೆ, (೨) ಸುಳ್ಳು ಹೇಳುವುದು,(೩) ಕದಿಯುವುದು,(೪) ಅತಿಯಾದ ಕಾಮ ಮತ್ತು (೫) ಇನ್ನೊಬ್ಬರ ಮುಂದೆ ಕೈಚಾಚುವುದು. ಭಗವಂತನ ಉಪಾಸನೆಯ ಮಾರ್ಗದಲ್ಲಿ ಬಿಡಬೇಕಾದ ಈ ಐದು ನಿಯಮಗಳನ್ನು ಕೊಟ್ಟ ಭಗವಂತ ಯಮಃ. ಇಡೀ ಜಗತ್ತನ್ನು ನಿಯಂತ್ರಿಸುವ, ಯಮಧರ್ಮನನ್ನೂ ನಿಯಂತ್ರಿಸುವ ಭಗವಂತ ಯಮಃ.
·  ಶ್ಲೋಕ - 30
ಪ್ರಹ್ಲಾದಶ್ಚಾಸ್ಮಿ ದೈತ್ಯಾನಾಂ ಕಾಲಃ ಕಲಯತಾಮಹಮ್
ಮೃಗಾಣಾಂ ಚ ಮೃಗೇಂದ್ರೋSಹಂ ವೈನತೇಯಶ್ಚ ಪಕ್ಷಿಣಾಮ್ ॥೩೦॥
ಪ್ರಹ್ಲಾದಃ ಚ ಅಸ್ಮಿ ದೈತ್ಯಾನಾಮ್ ಕಾಲಃ ಕಲಯತಾಮ್ ಅಹಮ್
ಮೃಗಾಣಾಮ್ ಚ ಮೃಗೇಂದ್ರಃ ಅಹಮ್ ವೈನತೇಯಃ ಚ ಪಕ್ಷಿಣಾಮ್ ದಿತಿಯ ವಂಶದವರಲ್ಲಿ ಹಿರಿಯನಾದ ಪ್ರಹ್ಲಾದ ನಾನು [ಹಿರಿಯ ಆನಂದದಿಂದ ಪ್ರಹ್ಲಾದಎನ್ನಿಸಿ ಪ್ರಹ್ಲಾದನಲ್ಲಿದ್ದೇನೆ.] ಲೆಕ್ಕಿಗರಲ್ಲಿ ಕಾಲ ನಾನು. [ಕೊಲ್ಲುವವನಾದ್ದರಿಂದ ಕಾಲಎನ್ನಿಸಿ ಕಾಲದೇವತೆಯಲ್ಲಿದ್ದೇನೆ.] ಮೃಗಗಳಲ್ಲಿ ಸಿಂಹ ನಾನು. [ಮೃಗ=ಭಗವಂತನನ್ನರಸುವ ಭಕ್ತರಿಗೆ, ಇಂದ್ರ =ಒಡೆಯನಾದ್ದರಿಂದ ಮೃಗೇಂದ್ರಎನ್ನಿಸಿ ಸಿಂಹದಲ್ಲಿದ್ದೇನೆ.] ಹಕ್ಕಿಗಳಲ್ಲಿ ಗರುಡ ನಾನು. [ವಿನತ =ಶರಣಾದವರಿಗೆ ಆಸರೆಯಾಗಿ ವೈನತೇಯಎನ್ನಿಸಿ ಗರುಡನಲ್ಲಿದ್ದೇನೆ.]
ಭಗವಂತನ ಸನ್ನಿಧಾನ ಸಜ್ಜನರಲ್ಲೂ ಇದೆ, ದುರ್ಜನರಲ್ಲೂ ಇದೆ. ದೈತ್ಯರಿಗೆ ಬಲವನ್ನು ಕೊಡುವವನೂ ಭಗವಂತ. ಸಾಮಾನ್ಯವಾಗಿ ದೈತ್ಯರು ಇನ್ನೊಬ್ಬರ ಬದುಕನ್ನು ಹಾಳುಗೆಡುವವರು. ಆದರೆ ಇಂಥಹ ದೈತ್ಯವಂಶದ ಆದಿಯಲ್ಲಿ ಹುಟ್ಟಿದ ಪ್ರಹ್ಲಾದ-ಎಲ್ಲರಿಗಿಂತ ಭಿನ್ನ. ಇದಕ್ಕೆ ಕಾರಣ ಭಗವಂತ ಈತನಲ್ಲಿ ವಿಶೇಷವಾಗಿ ಸನ್ನಿಧಾನವಿತ್ತಿರುವುದು. ದೈತ್ಯ ವಂಶದಲ್ಲಿ ಹುಟ್ಟಿ, ಆ ಸ್ವಭಾವದಿಂದ ಕಳಚಿಕೊಂಡು ಬಹಳ ಎತ್ತರಕ್ಕೇರಿದವ ಪ್ರಹ್ಲಾದ. ಈ ಕಾರಣದಿಂದ ದೈತ್ಯರಲ್ಲೇ ವಿಶೇಷ ವಿಭೂತಿ ಈತ. ಪ್ರಹ್ಲಾದನ ಮೇಲೆ ಭಗವಂತನ ವಿಶೇಷ ಅನುಗ್ರಹ. ಆತ ಗರ್ಭದಲ್ಲಿದ್ದಾಗಲೇ ಆತನಿಗೆ ದೇವರ್ಷಿ ನಾರದರ ಮೂಲಕ ಅಧ್ಯಾತ್ಮ ಉಪದೇಶ ಪಡೆಯುವ ಭಾಗ್ಯ ದೊರೆಯಿತು. ಈತ ದ್ರುವನಂತೆ ತನ್ನ ಐದನೇ ವಯಸ್ಸಿನಲ್ಲಿ ದೇವರನ್ನು ಕಂಡ ಸಾಧಕ. ಪ್ರಹ್ಲಾದನ ಮುಖೇನ ಪ್ರಪಂಚಕ್ಕೆ ಭಗವಂತ ಬಹಳ ಮುಖ್ಯವಾದ ಸಂದೇಶವನ್ನು ನೀಡಿದ್ದಾನೆ.ಭಗವಂತ ಭಯಾನಕ ಅಲ್ಲ, ಪ್ರೀತಿಯಿಂದ ಭಗವಂತನ ಬಳಿಗೆ ಹೋದರೆ ಆತ ನಮ್ಮನ್ನು ಅಷ್ಟೇ ಪ್ರೀತಿಯಿಂದ ಕಾಣುತ್ತಾನೆ; ಭಗವಂತನ ಪೂಜೆ ಒಂದು ವ್ಯಾಪಾರವಲ್ಲ, ನಮ್ಮ ಯಾವುದೋ ಬಯಕೆಯನ್ನು ಸಾಧಿಸಿಕೊಳ್ಳುವುದಕ್ಕೋಸ್ಕರ ನಾವು ದೇವರ ಪೂಜೆ ಮಾಡಬಾರದು; ನಮ್ಮ ನಿಷ್ಕಾಮ ಭಕ್ತಿ ಭಗವಂತನಿಗೆ ಇಷ್ಟ; ಈ ರೀತಿ ಭಗವಂತನನ್ನು ಪೂಜಿಸುವುದರಿಂದ ನಾವು ಸದಾ ಆನಂದದಿಂದಿರಬಹುದುಎನ್ನುವ ಸತ್ಯವನ್ನು ಪ್ರಹ್ಲಾದ ಪ್ರಪಂಚಕ್ಕೆ ತೋರಿಸಿಕೊಟ್ಟ. ಇಲ್ಲಿ ಬರುವ ಭಗವಂತನ ನಾಮ ಪ್ರಹ್ಲಾದಃ. ಎಂದೂ ದುಃಖವಿಲ್ಲದ ಪೂರ್ಣವಾದ ಆನಂದಮೂರ್ತಿ ಭಗವಂತ ಪ್ರಹ್ಲಾದಃ.
ಕೃಷ್ಣ ಹೇಳುತ್ತಾನೆ: ಕಾಲಃ ಕಲಯತಾಮ್ ಅಹಮ್ಎಂದು. ಈ ಜಗತ್ತಿನಲ್ಲಿ ಅನಾಧಿ ಅನಂತ ಕಾಲದಲ್ಲಿ ನಡೆಯತಕ್ಕ ಪ್ರತಿಯೊಂದು ಹುಟ್ಟು-ಸಾವು ಪೂರ್ವನಿಶ್ಚಿತ. ಇದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಇಲ್ಲಿ ಕಾಲ ಎನ್ನುವ ಪದ ಲೆಕ್ಕ, ಮೃತ್ಯು, ಶಿವ, ದುರ್ಗೆ, ಕಾಲಾಗ್ನಿ, ಇತ್ಯಾದಿ ಅನೇಕ ಅರ್ಥವನ್ನು ಕೊಡುತ್ತದೆ. ಇವೆಲ್ಲದರಲ್ಲೂ ಭಗವಂತನ ವಿಶೇಷ ವಿಭೂತಿ ಅಡಗಿದೆ. ಭಗವಂತ ಕಾಲಃ ನಾಮಕನಾಗಿ ಕಾಲದಲ್ಲಿ ತುಂಬಿದ್ದಾನೆ. ಕಾಲ ಎನ್ನುವುದು 'ಕಲ' ಎನ್ನುವ ಧಾತುವಿನಿಂದ ಬಂದ ಪದ. ಎಲ್ಲಾ ಗುಣಗಳನ್ನು, ಎಲ್ಲಾ ಸಾಮರ್ಥ್ಯವನ್ನು ತನ್ನೊಳಗೆ 'ಕಲೆ' ಹಾಕಿದವನು ಕಾಲಃ. ಭಗವಂತ ಸಮಸ್ತ ಸದ್ಗುಣಗಳಿಂದ ಪರಿಪೂರ್ಣವಾದ ತತ್ವ. ಈ ತತ್ವವನ್ನು ನಾವು ಅರಿಯದೆ ಅಹಂಕಾರಿಗಳಾದಾಗ, ಅದೇ ತತ್ವ 'ಕಾಲ ಪುರುಷನಾಗಿ' ನಮ್ಮ ಸಂಹಾರಕ್ಕೆ ಕಾರಣವಾಗುತ್ತದೆ. ನಮ್ಮ ಉದ್ಧಾರ ಕೆಲವೊಮ್ಮೆ 'ಬದುಕಿನಲ್ಲಿ'ದ್ದರೆ ಇನ್ನು ಕೆಲವೊಮ್ಮೆ ನಮ್ಮ 'ಸಾವಿನಲ್ಲಿ'; ಕೆಲವೊಮ್ಮೆ ನಮ್ಮ 'ಮಾನದಲ್ಲಿ', ಇನ್ನು ಕೆಲವೊಮ್ಮೆ ನಮ್ಮ 'ಅವಮಾನದಲ್ಲಿ'.; ಕೆಲವೊಮ್ಮೆ ನಮ್ಮ 'ಜ್ಞಾನದಲ್ಲಿ' ನಮ್ಮ ಉದ್ಧಾರವಿದ್ದರೆ, ಇನ್ನು ಕೆಲವೊಮ್ಮೆ ನಮ್ಮ 'ಅಜ್ಞಾನದಲ್ಲಿ' ನಮ್ಮ ಉದ್ಧಾರವಿರುತ್ತದೆ. ಆದರೆ ನಮ್ಮ 'ಅಹಂಕಾರದಲ್ಲಿ' ಎಂದೆಂದೂ ಉದ್ಧಾರವಿಲ್ಲ. ಜಗತ್ತಿನಲ್ಲಿ ಅಹಂಕಾರ ಭರಿತ ಅಜ್ಞಾನ ತುಂಬಿದಾಗ ಭಗವಂತ 'ಕಾಲ ಪುರುಷನಾಗಿ' ಬೆಳೆದು ನಿಲ್ಲುತ್ತಾನೆ. ಕಾಲ ಎನ್ನುವುದಕ್ಕೆ ಇನ್ನೊಂದು ಅರ್ಥ 'ಸಮಯ'. ಪ್ರತಿಯೊಂದು ಕ್ರಿಯೆಯ ಹಿಂದೆ 'ಕಾಲ' ಸರ್ವ ಕಾರಣವಾಗಿರುತ್ತದೆ. ಕಾಲನಿಯಾಮಕ ಭಗವಂತ ಕಾಲಃ. ಜ್ಞಾನಕಾರಕವಾದ ಅವತಾರಗಳಿಂದ (ವ್ಯಾಸ,ಕಪಿಲ,ದತ್ತಾತ್ರಯ, ನರ-ನಾರಾಯಣ, ಇತ್ಯಾದಿ) ಅಜ್ಞಾನಕ್ಕೆ 'ಕಾಲವಾದ' ಭಗವಂತ, ಬಲಕಾರಕ ಅವತಾರಗಳಿಂದ(ನರಸಿಂಹ, ವರಾಹ, ರಾಮ,ಪರಶುರಾಮ, ಇತ್ಯಾದಿ) ಅಹಂಕಾರಕ್ಕೆ 'ಕಾಲನಾದ'. ಹೀಗೆ ಸರ್ವ ಗುಣಪೂರ್ಣ, ಸರ್ವ ಸಂಹಾರಕ ಹಾಗು ಕಾಲನಿಯಾಮಕ ಭಗವಂತ ಕಾಲಃ.
ಸಂಹಾರ ಶಕ್ತಿಯಾಗಿ ತನ್ನ ವಿಭೂತಿಯನ್ನು ಹೇಳಿದ ಕೃಷ್ಣ, ಮುಂದೆ ಪ್ರಾಣಿಗಳಲ್ಲಿ ಬಹಳ ಉಗ್ರ ಮತ್ತು ಬಲಿಷ್ಠ ಪ್ರಾಣಿಯಲ್ಲಿ ತನ್ನ ವಿಭೂತಿಯನ್ನು ವಿವರಿಸುತ್ತಾನೆ. ಭೂಮಿಯಲ್ಲಿ ಹೆಚ್ಚು ಬಲಿಷ್ಠ ಮತ್ತು ದೊಡ್ಡ ಪ್ರಾಣಿ ಆನೆ. ಆದರೆ ಇಂಥಹ ಆನೆಯನ್ನೂ ಕೂಡಾ ಸಂಹಾರ ಮಾಡಬಲ್ಲ ಕಾಡಿನ ರಾಜ ಮೃಗೇಂದ್ರ-ಸಿಂಹ. ಮೃಗಗಳಲ್ಲೇ ಶ್ರೇಷ್ಠ ಮೃಗ ಎನ್ನಿಸಿಕೊಳ್ಳುವ ವಿಭೂತಿಯಾಗಿ ಭಗವಂತ ಸಿಂಹದಲ್ಲಿ ಕೂತ. ಇಲ್ಲಿ ಬರುವ ಭಗವಂತನ ನಾಮ ಮೃಗೇಂದ್ರಃ’. ಭಗವಂತನ ಸಾಧನೆಯಲ್ಲಿ ನಿಂತವರಿಗೆ ಮಾರ್ಗದರ್ಶಕನಾಗಿ ನಿಲ್ಲುವ(ಮೃಗ) ಸರ್ವಶ್ರೇಷ್ಠ ಭಗವಂತ ಮೃಗೇಂದ್ರಃ’.
ಪ್ರಾಣಿಯ ನಂತರ ಪಕ್ಷಿಗಳಲ್ಲಿ ಭಗವಂತನ ವಿಭೂತಿ. ಪಕ್ಷಿಗಳಲ್ಲೇ ಅತ್ಯಂತ ಶ್ರೇಷ್ಠ ಪಕ್ಷಿ ಗರುಡ’. ಹೊಟ್ಟೆಯ ಭಾಗ ಬೆಳ್ಳಗಿರುವ ಹದ್ದಿನ ಜಾತಿಯ ಪಕ್ಷಿ ಗರುಡ. ಭಗವಂತನ ವಾಹನ ಗರುಡ ವಿನುತೆಯ ಮಗ ಆದ್ದರಿಂದ ಈತನನ್ನು ವೈನತೇಯ ಎನ್ನುತ್ತಾರೆ. ತನಗೆ ಶರಣಾಗುವ ಭಕ್ತರಿಗೆ(ವಿನತ) ಆಸರೆಯಾಗಿ ವೈನತೇಯಎನ್ನಿಸಿ ಭಗವಂತ ಗರುಡನಲ್ಲಿ ಸನ್ನಿಹಿತನಾಗಿದ್ದಾನೆ. ಭಗವಂತನನ್ನು ತನ್ನ ಹೆಗಲ ಮೇಲೆ ಹೊತ್ತು ಓಡಾಡುವ ಗರುಡ-ಭಗವಂತನ ವಿಶೇಷ ವಿಭೂತಿ.

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.