ಭಗವದ್ಗೀತೆ ಅಧ್ಯಾಯ-13 (ಶ್ಲೋಕ 21 ರಿಂದ 34)



ಭಗವದ್ಗೀತೆ  ಅಧ್ಯಾಯ-13 (ಶ್ಲೋಕ 21 ರಿಂದ 34)
·  ಶ್ಲೋಕ - 21
ಪುರುಷಃ ಪ್ರಕೃತಿಸ್ಥೋ ಹಿ ಭುಂಕ್ತೇ ಪ್ರಕೃತಿಜಾನ್ ಗುಣಾನ್
ಕಾರಣಂ ಗುಣಸಂಗೋSಸ್ಯ ಸದಸದ್ಯೋನಿಜನ್ಮಸು ೨೧॥
ಪುರುಷಃ ಪ್ರಕೃತಿಸ್ಥಃ ಹಿ ಭುಂಕ್ತೇ ಪ್ರಕೃತಿಜಾನ್ ಗುಣಾನ್
ಕಾರಣಮ್ ಗುಣಸಂಗಃ ಅಸ್ಯ ಸತ್ ಅಸತ್ ಯೋನಿ ಜನ್ಮಸು ಪ್ರಕೃತಿಯ ಕಟ್ಟಿಗೊಳಗಾದ ಜೀವ, ಪ್ರಕೃತಿ ಕಾರ್ಯಗಳಾದ ಸುಖ-ದುಃಖಾದಿಗಳನ್ನು ಅನುಭವಿಸುತ್ತಾನೆ. ಒಳ್ಳೆಯ ಮತ್ತು ಕೆಟ್ಟ ಬಸಿರಿನಲ್ಲಿ ಹುಟ್ಟಿಬರಲು ಜೀವನಿಗೆ ತ್ರಿಗುಣಗಳ ನಂಟೇ ಕಾರಣ.
ಪ್ರಕೃತಿ ನಿರ್ಮಿತವಾದ ದೇಹದಲ್ಲಿ ಭಗವಂತನಿದ್ದಾನೆ, ದೇವತೆಗಳಿದ್ದಾರೆ. ಆದರೆ ದೇಹದಲ್ಲಿದ್ದು ಸುಖ-ದುಃಖದ ಭೋಗವನ್ನು ಅನುಭವಿಸುವವನು-ಜೀವ. ದೇಹ ಪ್ರಕೃತಿಯ ಗುಣದಿಂದ ನಿರ್ಮಾಣವಾಗಿರುತ್ತದೆ. ಜೀವ ತನ್ನ ಸ್ವಭಾವಕ್ಕನುಗುಣವಾಗಿ, ಪೂರ್ವ ಜನ್ಮದ ಕರ್ಮಫಲಕ್ಕನುಗುಣವಾಗಿ ಈ ಜನ್ಮದಲ್ಲಿ ದೇಹವನ್ನು ಪಡೆಯುತ್ತದೆ. ಹಿಂದೆ ಹೇಳಿದಂತೆ ಜೀವ ತನ್ನ ದೇಹವನ್ನು ಬಿಟ್ಟು ಹೊರಬರುವಾಗ ಯಾವುದನ್ನು ಗಾಢವಾಗಿ ನೆನೆಯುತ್ತದೋ -ಅದಕ್ಕನುಗುಣವಾಗಿ ಅದರ ಮುಂದಿನ ಜನ್ಮ ನಿರ್ಧಾರವಾಗುತ್ತದೆ. ಉತ್ತಮ ಅಥವಾ ಹೀನ ಯೋನಿಯಲ್ಲಿ ಹುಟ್ಟಿಬರಲು ಜೀವನಿಗೆ ತ್ರಿಗುಣಗಳ ನಂಟೇ ಕಾರಣ.
·  ಶ್ಲೋಕ - 22
ಉಪದ್ರಷ್ಟಾSನುಮಂತಾ ಚ ಭರ್ತಾ ಭೋಕ್ತಾ ಮಹೇಶ್ವರಃ ।
ಪರಮಾತ್ಮೇತಿ ಚಾಪ್ಯುಕ್ತೋ ದೇಹೇSಸ್ಮಿನ್ ಪುರುಷಃ ಪರಃ ೨೨॥
ಉಪದ್ರಷ್ಟಾ ಅನುಮಂತಾ ಚ ಭರ್ತಾ ಭೋಕ್ತಾ ಮಹೇಶ್ವರಃ ।
ಪರಮಾತ್ಮ ಇತಿ ಚ ಅಪಿ ಉಕ್ತಃ ದೇಹೇ ಅಸ್ಮಿನ್ ಪುರುಷಃ ಪರಃ ಎಲ್ಲದರ ಮೇಲಿದ್ದು ಎಲ್ಲವನು ನೋಡುವವನು, ತನ್ನಿಷ್ಟದಂತೆ ಎಲ್ಲವನು ನಡೆಸುವವನು, ಎಲ್ಲವನು ಹೊತ್ತವನು, ಸಾರವನುಣ್ಣುವವನು-ಸರ್ವಶಕ್ತನಾದ ಪರಮಾತ್ಮ. ಅವನೆ ಈ ದೇಹದಲ್ಲಿ ಜೀವನ ಜೊತೆಗಿರುವ ಪರಮಪುರುಷ.
ಚಿತ್ ಪ್ರಕೃತಿ ಜಡಪ್ರಕೃತಿಯಿಂದ ದೇಹ ನಿರ್ಮಿಸುವಾಗ, ಜೀವ ಆ ದೇಹದಲ್ಲಿದ್ದು ಇಂದ್ರಿಯಗಳ ಮುಖೇನ ಸುಖ ದುಃಖವನ್ನು ಭೋಗಿಸುವಾಗ- ಎಲ್ಲದಕ್ಕೂ ಪ್ರೇರಕನಾಗಿ, ಎಲ್ಲವುದಕ್ಕಿಂತ ಎತ್ತರದಲ್ಲಿದ್ದು ಎಲ್ಲವನ್ನು ಹತ್ತಿರದಿಂದ ಸಾಕ್ಷಾತ್ ಕಾಣುವ ಭಗವಂತ ಪರಮಪುರುಷ. ಆತ ನಮ್ಮ ಕರ್ಮವನ್ನು ಬಲ್ಲವನು. ಯಾವ ರೀತಿಯ ಕರ್ಮದಿಂದ ಏನಾಗಬೇಕು ಎಂದು ತಿಳಿದವನು. ಆತ ಒಳಗೆ ಕೂತು ಪ್ರೇರಣೆ ಮಾಡುವುದರಿಂದ ಈ ದೇಹ ನಿಂತಿದೆ. ಆತ ಹೊರಟು ಹೋದರೆ ದೇಹ ಬಿದ್ದು ಹೋಗುತ್ತದೆ. ಆತ ನಮ್ಮೊಳಗಿದ್ದು ಯಾವ ದುಃಖದ ಸ್ಪರ್ಶವೂ ಇಲ್ಲದೆ ಸದಾ ಆನಂದದಿಂದಿರುವ ಆನಂದ ಭೋಕ್ತ.
·  ಶ್ಲೋಕ - 23
ಯ ಏವಂ ವೇತ್ತಿ ಪುರುಷಂ ಪ್ರಕೃತಿಂ ಚ ಗುಣೈಃ ಸಹ ।
ಸರ್ವಥಾ ವರ್ತಮಾನೋSಪಿ ನ ಸ ಭೂಯೋSಭಿಜಾಯತೇ ೨೩॥
ಯಃ ಏವಮ್ ವೇತ್ತಿ ಪುರುಷಮ್ ಪ್ರಕೃತಿಮ್ ಚ ಗುಣೈಃ ಸಹ ।
ಸರ್ವಥಾ ವರ್ತಮಾನಃ ಅಪಿ ನ ಸಃ ಭೂಯಃ ಅಭಿಜಾಯತೇ ಹೀಗೆ ಪ್ರಕೃತಿ-ಪುರುಷರನ್ನು ಗುಣಗಳ ಜತೆಗೆ ಅರಿತವನು ಹೇಗೆ ಬದುಕಿದರೂ ಮತ್ತೆ ಮರಳಿ ಹುಟ್ಟುವುದಿಲ್ಲ.
ಅನಾಧಿನಿತ್ಯವಾದ ಪ್ರಕೃತಿ(ಜಡ ಮತ್ತು ಚೇತನ), ಎಲ್ಲವುದಕ್ಕೂ ಕಾರಣ ಪುರುಷನಾದ ಪರಮಾತ್ಮ, ಆತನ ಅಧೀನವಾಗಿರುವ ಜೀವಜಾತ ಇದನ್ನು ಗುಣಗಳ ಜೊತೆಗೆ ಅರಿತವನು ಜ್ಞಾನಿ. ಇಂಥಹ ಜ್ಞಾನಿ ಬಾಹ್ಯವಾಗಿ ಹೇಗೆ ಕಾಣಿಸಿಕೊಂಡರೂ ಕೂಡ, ಸತ್ಯದ ಸಾಕ್ಷಾತ್ಕಾರದಿಂದ ಆತ ಮೋಕ್ಷವನ್ನು ತಲುಪುತ್ತಾನೆ. ಇಲ್ಲಿ ಬಾಹ್ಯ ಸಂಸ್ಕಾರಕ್ಕಿಂತ ಜ್ಞಾನ ಎಷ್ಟು ಮುಖ್ಯ ಎನ್ನುವುದನ್ನು ಕೃಷ್ಣ ಒತ್ತಿ ಹೇಳಿದ್ದಾನೆ. ಮುಖವಾಡದ ಬದುಕಿನಿಂದ ಏನೂ ಉಪಯೋಗವಿಲ್ಲ. ಅದಕ್ಕಿಂತ ಮಿಗಿಲಾದದ್ದು ಸತ್ಯದ ಸಾಕ್ಷಾತ್ಕಾರ. ಸತ್ಯದ ಸಾಕ್ಷಾತ್ಕಾರವಾದಾಗ ತಾನಾಗಿಯೇ ಲೌಕಿಕ ಪ್ರಪಂಚ ಎಷ್ಟು ಅರ್ಥಹೀನ ಎನ್ನುವುದು ತಿಳಿಯುತ್ತದೆ. ಜ್ಞಾನಕ್ಕಿಂತ ಮಿಗಿಲಾದ ಇನ್ನೊಂದು ಪವಿತ್ರಸಾಧನವಿಲ್ಲ. ಕರ್ಮಾನುಷ್ಠಾನದಲ್ಲಿ ಅಕಾಸ್ಮಾತ್ ಚ್ಯುತಿಯಾದರೂ ಜ್ಞಾನ ಮಾರ್ಗದಲ್ಲಿ ಸಾಗುವವನಿಗೆ ಅದು ಬಾಧಕವಾಗುವುದಿಲ್ಲ. ಜ್ಞಾನ ಅವನನ್ನು ಸರಿದಾರಿಗೆ ತಂದು ನಿಲ್ಲಿಸುತ್ತದೆ ಮತ್ತು ಆತ ಮೋಕ್ಷವನ್ನು ಪಡೆಯುತ್ತಾನೆ.
·  ಶ್ಲೋಕ - 24
ಕೃಷ್ಣ ಪ್ರಕೃತಿ ಮತ್ತು ಪುರುಷನನ್ನು ಗುಣ ಸಹಿತ ತಿಳಿಯುವುದು ಮೋಕ್ಷಮಾರ್ಗ ಎಂದು ಹೇಳಿದ. ಹಾಗಿದ್ದರೆ ಇದನ್ನು ತಿಳಿಯುವ ಬಗೆ ಯಾವುದು? ಇದನ್ನು ಕೃಷ್ಣ ಮುಂದಿನ ಎರಡು ಶ್ಲೋಕಗಳಲ್ಲಿ ವಿವರಿಸುತ್ತಾನೆ. ಭಗವಂತನನ್ನು ಸೇರಲು ಅನೇಕ ವಿಧಾನಗಳಿವೆ. ಎಲ್ಲರಿಗೂ ಎಲ್ಲವೂ ಅಲ್ಲ. ಏಕೆಂದರೆ ಒಬ್ಬರು ತಿಳಿದಂತೆ ಇನ್ನೊಬ್ಬರು ತಿಳಿದುಕೊಳ್ಳಲು ಆಗುವುದಿಲ್ಲ. ಬನ್ನಿ ಈ ಕುರಿತು ಕೃಷ್ಣನ ವಿವರಣೆಯನ್ನು ಆಲಿಸೋಣ.
ಧ್ಯಾನೇನಾSತ್ಮನಿ ಪಶ್ಯಂತಿ ಕೇಚಿದಾತ್ಮಾನಮಾತ್ಮನಾ ।
ಅನ್ಯೇ ಸಾಂಖ್ಯೇನ ಯೋಗೇನ ಕರ್ಮಯೋಗೇನ ಚಾಪರೇ ೨೪॥
ಧ್ಯಾನೇನ ಆತ್ಮನಿ ಪಶ್ಯಂತಿ ಕೇಚಿತ್ ಆತ್ಮಾನಮ್ ಆತ್ಮನಾ ।
ಅನ್ಯೇ ಸಾಂಖ್ಯೇನ ಯೋಗೇನ ಕರ್ಮಯೋಗೇನ ಚ ಅಪರೇ ಕೆಲವರು ಧ್ಯಾನದ ಮೂಲಕ ಪರಮಾತ್ಮನನ್ನು ತನ್ನಲ್ಲಿ ಬಗೆಗಣ್ಣಿನಿಂದ ಕಾಣುತ್ತಾರೆ. ಕೆಲವರು ಶಾಸ್ತ್ರದ ಅರಿವಿನ ಮೂಲಕ. ಕೆಲವರು ಕರ್ಮಯೋಗದ ಮೂಲಕ.
ಸಾಧನೆ ಮಾಡಲು ಮೊದಲು ನಮಗೆ ಸಾಧನಾ ಶರೀರ ಬೇಕು. ಹೀನಯೋನಿಯಲ್ಲಿ ಪೂರ್ಣತೆ ಪಡೆಯದ ಶರೀರದಲ್ಲಿ ಹುಟ್ಟಿ ಬಂದರೆ ಸಾಧನೆ ಸಾಧ್ಯವಿಲ್ಲ. ಮೊದಲು ನಾವು ಮಾನವರಾಗಬೇಕು(ಪೂರ್ಣತೆಯನ್ನು ಪಡೆದ ಶರೀರದಲ್ಲಿ ನೆಲೆಸುವ ಪುರುಷರಾಗಬೇಕು). ಇದಕ್ಕಾಗಿ "ಮಾನವ ಜನ್ಮ ದೊಡ್ಡದು ಅದನ್ನು ಹಾಳು ಮಾಡಬೇಡಿರಿ ಹುಚ್ಚಪ್ಪಗಳಿರಾ" ಎಂದು ದಾಸರು ಹಾಡಿರುವುದು. ಸಾಧನೆಗೆ ಬೇಕಾದ ಸಾಧನಾ ಶರೀರ ಇಲ್ಲದಿದ್ದರೆ ಯಾವಸಾಧನೆಯೂ ಸಾಧ್ಯವಿಲ್ಲ.
ಕೆಲವರು ತಮ್ಮ ಸ್ವರೂಪ ಯೋಗ್ಯತೆಯಿಂದ ಮತ್ತು ಭಗವದನುಗ್ರಹದಿಂದ ಜನ್ಮತಃ ಜ್ಞಾನ ಪಡೆದು ಹುಟ್ಟುತ್ತಾರೆ. ಇವರಿಗೆ ಜ್ಞಾನ ನಿಚ್ಛಳ. ಇಂಥವರು ತಮ್ಮ ಜೀವ ಯೋಗ್ಯತೆಯಿಂದ ತಮ್ಮ ಜೀವ ಸ್ವರೂಪದೊಳಗೆ- ಬಿಂಬರೂಪಿ ಭಗವಂತನನ್ನು ಕಾಣಬಲ್ಲರು. ಇಂಥವರು ಯಾವುದೇ ಅಧ್ಯಯನ ಮಾಡದೆ ಸದಾ ಭಗವಂತನನ್ನು ಅಂತರಂಗದಲ್ಲಿ ಕಾಣುತ್ತಾ-ಭಗವಂತನನ್ನು ಸೇರುತ್ತಾರೆ. ಬ್ರಹ್ಮಾದಿ ಸಕಲ ದೇವತೆಗಳು, ದೇವಾಂಶ ಸಂಭೂತರು ಈ ರೀತಿ ಕಣ್ಮುಚ್ಚಿ ಭಗವಂತನನ್ನು ಕಾಣಬಲ್ಲರು, ಕಂಡು ಆತನನ್ನು ಸೇರಬಲ್ಲರು.
ಕೆಲವರು ಶುದ್ಧ ಆತ್ಮತತ್ವ ವಿಜ್ಞಾನದಿಂದ ಮೊದಲು ಭಗವಂತನನ್ನು ತಿಳಿಯುತ್ತಾರೆ. ಜೀವನನ್ನು ಪರಮಾತ್ಮನನ್ನು ತಿಳಿಯುವುದೇ ಸಾಂಖ್ಯಯೋಗ. ಈ ರೀತಿ ಜ್ಞಾನಗಳಿಸಿ, ಜ್ಞಾನಸ್ಪುರಣವನ್ನು ಗಳಿಸಿ, ಧ್ಯಾನದ ಮೂಲಕ ಇವರು ಭಗವಂತನನ್ನು ಕಂಡು ಭಗವಂತನನ್ನು ಸೇರುತ್ತಾರೆ.
ಇನ್ನು ಕೆಲವರು ತಮ್ಮ ನಿರಂತರ ಕರ್ಮಾನುಷ್ಠಾನದಿಂದ ದೇಹ ಶುದ್ಧಿ ಸಾಧಿಸಿ, ಅದರಿಂದ ಭಗವಂತನ ಒಲುಮೆಗೆ ಪಾತ್ರರಾಗಿ, ಜ್ಞಾನಗಳಿಸಿ, ಧ್ಯಾನದಲ್ಲಿ ಭಗವಂತನನ್ನು ಕಂಡು ಭಗವಂತನನ್ನು ಸೇರುತ್ತಾರೆ.
·  ಶ್ಲೋಕ - 25
ಅನ್ಯೇ ತ್ವೇವಮಜಾನಂತಃ ಶ್ರುತ್ವಾSನ್ಯೇಭ್ಯ ಉಪಾಸತೇ ।
ತೇSಪಿ ಚಾತಿತರಂತ್ಯೇವ ಮೃತ್ಯುಂ ಶ್ರುತಿಪರಾಯಣಾಃ ೨೫॥
ಅನ್ಯೇ ತು ಏವಂ ಅಜಾನಂತಃ ಶ್ರುತ್ವಾ ಅನ್ಯೇಭ್ಯಃ ಉಪಾಸತೇ ।
ತೇ ಅಪಿ ಚ ಅತಿತರಂತಿ ಏವ ಮೃತ್ಯುಮ್ ಶ್ರುತಿಪರಾಯಣಾಃ ಹೀಗೆ ಭಗವಂತನನ್ನರಿಯಲಾರದ ಇನ್ನು ಕೆಲವರು ಬಲ್ಲವರಿಂದ ಕೇಳಿ ಉಪಾಸನೆ ಮಾಡುತ್ತಾರೆ. ಶ್ರವಣವನ್ನೆ ನಂಬಿ ನಡೆವ ಅವರೂ ಸಾಧನೆಯಿಂದ ಬೆಳೆದು ಸಾವನ್ನು ಗೆಲ್ಲುತ್ತಾರೆ.
ಜನಸಾಮಾನ್ಯರು, ಮೇಲಿನ ಯಾವ ವಿಧದಲ್ಲೂ ಸಾಧನೆ ಮಾಡಲಾರದವರು-ಇನ್ನೊಬ್ಬರಿಂದ ಕೇಳಿ ತಿಳಿದು ಸಾಧನೆಯ ಮೊದಲ ಮೆಟ್ಟಿಲನ್ನು ಹತ್ತಬಲ್ಲರು. ಇದು ಸಾಧನೆಯ ಮಾರ್ಗದಲ್ಲಿನ ಅತ್ಯಂತ ಕೆಳಗಿನ ಮೆಟ್ಟಿಲಾದರೂ ಸಹ, ಇವರು ನಿರಂತರ ಶ್ರವಣ, ಮನನ, ನಿಧಿಧ್ಯಾಸನದಿಂದ, ಅಹಂಕಾರವಿಲ್ಲದೆ, ಜ್ಞಾನ ಸಂಪಾದಿಸಿ, ಆ ಜ್ಞಾನದಿಂದ-ಧ್ಯಾನದಲ್ಲಿ ಭಗವಂತನನ್ನು ಕಾಣಬಲ್ಲರು. ಇದು ಸಾಮಾನ್ಯ ಮಾನವನಿಗೆ ಕೃಷ್ಣ ತೋರಿಸಿದ ಮೋಕ್ಷ ಮಾರ್ಗ. ಹೀಗೆ ಇವರು ಶ್ರವಣ ಮತ್ತು ಉಪಾಸನೆಯಿಂದ ಮೃತ್ಯುವನ್ನು ಗೆದ್ದು ಭಗವಂತನನ್ನು ಸೇರಬಲ್ಲರು.
·  ಶ್ಲೋಕ - 26
ಯಾವತ್ ಸಂಜಾಯತೇ ಕಿಂಚಿತ್ ಸತ್ವಂ ಸ್ಥಾವರಜಂಗಮಮ್
ಕ್ಷೇತ್ರಕ್ಷೇತ್ರಜ್ಞಸಂಯೋಗಾತ್ ತದ್ ವಿದ್ಧಿ ಭರತರ್ಷಭ ೨೬॥
ಯಾವತ್ ಸಂಜಾಯತೇ ಕಿಂಚಿತ್ ಸತ್ವಮ್ ಸ್ಥಾವರ ಜಂಗಮಮ್
ಕ್ಷೇತ್ರ ಕ್ಷೇತ್ರಜ್ಞ ಸಂಯೋಗಾತ್ ತದ್ ವಿದ್ಧಿ ಭರತರ್ಷಭ -- ಭರತರ್ಷಭ, ಸ್ಥಿರ-ಚರ ಜೀವಿಯಲ್ಲಿ ಯಾವುದು ಹುಟ್ಟಿದರೂ ಅದು ಕ್ಷೇತ್ರ[ಶ್ರೀತತ್ವ] ಮತ್ತು ಕ್ಷೇತ್ರಜ್ಞನಾದ ಭಗವಂತನ ಸಹಯೋಗದಿಂದಲೆ ಎಂದು ತಿಳಿ.
ಈ ಪ್ರಪಂಚದಲ್ಲಿ ಏನೆಲ್ಲ ಹುಟ್ಟುತ್ತದೋ, ಚಲಿಸುವ-ಚಲಿಸದಿರುವ ಸಮಸ್ತ ಜೀವ ಜಡಾತ್ಮಕ ಪ್ರಪಂಚ ಮತ್ತು ಅದರ ಅಭಿಮಾನಿನಿಯಾದ ಪ್ರಕೃತಿದೇವಿ-ಇಷ್ಟನ್ನು ಒಟ್ಟಿಗೆ ಕ್ಷೇತ್ರವೆನ್ನುತ್ತಾರೆ. ಇವೆಲ್ಲವನ್ನು ಬಲ್ಲವ ಕ್ಷೇತ್ರಜ್ಞನಾದ ಭಗವಂತ. ಆದ್ದರಿಂದ ಕ್ಷೇತ್ರವೆಂದರೆ ಭಗವಂತನಿಂದ ನಿರ್ಮಾಣವಾದ ಸಮಸ್ತ ಜೀವ ಜಡಾತ್ಮಕ ಪ್ರಪಂಚ. ಸಮಸ್ತ ಸೃಷ್ಟಿ ಲಕ್ಷ್ಮೀ ನಾರಾಯಣರ ಸಮಾಗಮದಿಂದ ನಿರ್ಮಾಣವಾಯಿತು. ಅವರು ಈ ಪ್ರಪಂಚದ ಮೊದಲ ದಂಪತಿಗಳು. ಆದ್ದರಿಂದ ಎಲ್ಲರ ತಂದೆ ತಾಯಿ ನಾರಾಯಣ ಮತ್ತು ಶ್ರೀಲಕ್ಷ್ಮಿ. ಇದನ್ನು ತಿಳಿದಾಗ ನೀನು ನಿಜವಾದ ಭರತರ್ಷಭನಾಗುತ್ತೀಯಎನ್ನುತ್ತಾನೆ ಕೃಷ್ಣ. ಭಗವಂತನಲ್ಲಿ ರಥನಾದವನು, ಭಗವಂತನಲ್ಲಿ ಪೂರ್ಣಭಕ್ತಿ ಉಳ್ಳವನು ಭರತರ್ಷಭ.
·  ಶ್ಲೋಕ - 27
ಸಮಂ ಸರ್ವೇಷು ಭೂತೇಷು ತಿಷ್ಠಂತಂ ಪರಮೇಶ್ವರಮ್
ವಿನಶ್ಯತ್ಸ್ವವಿನಶ್ಯಂತಂ ಯಃ ಪಶ್ಯತಿ ಸ ಪಶ್ಯತಿ ೨೭॥
ಸಮಮ್ ಸರ್ವೇಷು ಭೂತೇಷು ತಿಷ್ಠಂತಂ ಪರಮೇಶ್ವರಮ್
ವಿನಶ್ಯತ್ಸು ಅವಿನಶ್ಯಂತಂ ಯಃ ಪಶ್ಯತಿ ಸಃ ಪಶ್ಯತಿ ಎಲ್ಲ ಜೀವಿಗಳಲ್ಲು ಏಕರೂಪದಿಂದಿರುವವನು ಸರ್ವಶಕ್ತನಾದ ಭಗವಂತ-ಅವು ಅಳಿದಾಗಳೂ ಅಳಿಯದೆ ಉಳಿದವನು. ಅವನನ್ನು ತಿಳಿದವನೆ ನಿಜವಾಗಿ ತಿಳಿದವನು’.
ಎಲ್ಲ ಜೀವರೊಳಗೂ ಏಕರೂಪದಿಂದಿರುವ ಸರ್ವಶಕ್ತ ಭಗವಂತ ಪರಮ-ಈಶ-ವರ. ಯಾರ ಆಜ್ಞೆಯನ್ನು ನಾವು ಪಾಲಿಸದೇ ಇರಲಾರೆವೋ; ಪಾಲಿಸುವುದು ನಮ್ಮ ಕರ್ತವ್ಯವೋ; ನಮಗರಿವಿಲ್ಲದೆ ನಮ್ಮೊಳಗಿದ್ದು ಪಾಲಿಸುವ ಅಜ್ಞಾತಶಕ್ತಿ- ಈಶ-ವರ’. ಅಂದರೆ ತತ್ವಾಭಿಮಾನಿ ದೇವತೆಗಳು. ಇಂತಹ ತತ್ವಾಭಿಮಾನಿ ದೇವತೆಗಳನ್ನೂ ನಿಯಂತ್ರಿಸುವ ಭಗವಂತ ಪರಮೇಶ್ವರ. ಇಂಥ ಭಗವಂತ ಎಲ್ಲೋ ಕೂತು ನಮ್ಮನ್ನು ನಿಯಮಿಸುತ್ತಿಲ್ಲ. ಆತ ನಮ್ಮೊಳಗಿದ್ದು ನಮ್ಮನ್ನು ನಿಯಂತ್ರಿಸುತ್ತಿದ್ದಾನೆ. ಆತ ನಮ್ಮೊಳಗೆ ಸ್ವತಂತ್ರವಾಗಿದ್ದು ನಮ್ಮನ್ನು ಹೊತ್ತು ನಡೆಸುತ್ತಿದ್ದಾನೆ [ಹಿಂದಿನ ಕಾಲದವರು ಜನರಿಗೆ ಈ ಸಂದೇಶವನ್ನು ದೇವಸ್ಥಾನದಲ್ಲಿ ತಟ್ಟಿರಾಯನ ಮೂಲಕ ಕೊಟ್ಟರು]. ಭಗವಂತ ಮುಕ್ತಾSSಮುಕ್ತ ನಿಯಾಮಕ. ಎಲ್ಲರನ್ನು ಎಲ್ಲ ಕಾಲದಲ್ಲಿ ಅವರವರ ಯೋಗ್ಯತೆಗನುಗುಣವಾಗಿ, ಆಯಾ ವಸ್ತುವಿನ ಸ್ವಭಾವಕ್ಕನುಗುಣವಾಗಿ ಒಳಗಿದ್ದು ಪ್ರೇರಣೆ ಮಾಡುವವ ಭಗವಂತ. ಭಗವಂತನ ಶಕ್ತಿಯಲ್ಲಿ ಮೇಲು ಕೀಳು ಇಲ್ಲ. ಆನೆಯಲ್ಲಿರುವ ಭಗವಂತ ಇರುವೆಯಲ್ಲಿರುವ ಭಗವಂತ ಬೇರೆಬೇರೆ ಅಲ್ಲ. ಆದರೆ ಆತನ ಸನ್ನಿಧಾನದಲ್ಲಿ ವೆತ್ಯಾಸವಿರುವುದರಿಂದ ಆ ಸನ್ನಿಧಾನದ ಅಧಿಷ್ಠಾನದಲ್ಲಿ ವೆತ್ಯಾಸ ಬರುತ್ತದೆ. ನಮ್ಮ ದೇಹದಲ್ಲಿರುವ ಬಿಂಬ ರೂಪಿ ಭಗವಂತ ಅವಿನಾಶಿ. ಆತನಿಗೆ ದೇಹನಾಶ, ಸ್ವರೂಪನಾಶವಿಲ್ಲ. ದುಃಖಪ್ರಾಪ್ತಿ ಇಲ್ಲ. ಆತ ಅಪೂರ್ಣನಲ್ಲ. ಈ ಸತ್ಯವನ್ನು ತಿಳಿದವನು ಯಥಾರ್ಥ ಜ್ಞಾನವುಳ್ಳವನು.
ಈ ಶ್ಲೋಕದಲ್ಲಿ ಹೇಳಿದ ವಿಚಾರವನ್ನು ಇನ್ನೂ ಬಿಡಿಸಿ ಮತ್ತೆ ಮುಂದಿನ ಶ್ಲೋಕದಲ್ಲಿ ಕೃಷ್ಣ ವಿವರಿಸುತ್ತಾನೆ:
·  ಶ್ಲೋಕ - 28
ಸಮಂ ಪಶ್ಯನ್ ಹಿ ಸರ್ವತ್ರ ಸಮವಸ್ಥಿತಮೀಶ್ವರಮ್ ।
ನ ಹಿನಸ್ತ್ಯಾತ್ಮನಾSSತ್ಮಾನಂ ತತೋ ಯಾತಿ ಪರಾಂ ಗತಿಮ್ ೨೮॥
ಸಮಮ್ ಪಶ್ಯನ್ ಹಿ ಸರ್ವತ್ರ ಸಮವಸ್ಥಿತಮ್ ಈಶ್ವರಮ್ ।
ನ ಹಿನಸ್ತಿ ಆತ್ಮನಾ ಆತ್ಮನಮ್ ತತಃ ಯಾತಿ ಪರಾಮ್ ಗತಿಮ್ ಸರ್ವ ಶಕ್ತನಾದ ಭಗವಂತ ಎಲ್ಲೆಡೆಯು ಏರುಪೇರಿಲ್ಲದೆ ಏಕರೂಪನಾಗಿದ್ದಾನೆ ಎಂದು ತಿಳಿದವನು ತನ್ನ ಏಳಿಗೆಗೆ ತಾನೇ ತಾನು ಅಡ್ಡಿಯನ್ನೂಡ್ಡಿಕೊಳ್ಳುವುದಿಲ್ಲ. ಮುಂದೆ ಪರಮ ಪದವನ್ನು ಪಡೆಯುತ್ತಾನೆ.
ನಾವು ನಮ್ಮ ದೇಹದಲ್ಲಿ ಸ್ಥಿತರು. ಆದರೆ ಭಗವಂತ ಸಂಸ್ಥಿತ’ . ಈ ದೇಹದೊಳಗಿರುವ ನಮಗೆ ಈ ದೇಹದ ಜ್ಞಾನ ಕೂಡ ಇಲ್ಲ. ಏಕಿದ್ದೇವೆ ಎಂದೂ ಗೊತ್ತಿಲ್ಲ. ನಾವು ಒಳಗಿದ್ದು ಆನಂದ ದುಃಖವನ್ನು ಅನುಭವಿಸುತ್ತಿರುತ್ತೇವೆ. ಆದರೆ ಭಗವಂತ ದುಃಖ ಅಜ್ಞಾನದ ಸ್ಪರ್ಶವಿಲ್ಲದ ಆನಂದಮೂರ್ತಿ. ಆತ ನಮ್ಮೊಳಗಿರುವ ಸರ್ವ ತತ್ವಾಭಿಮಾನಿ ದೇವತೆಗಳಿಗೆ ಸಮವಸ್ಥಿತನಾಗಿ ಎತ್ತರದಲ್ಲಿದ್ದಾನೆ. ದುಃಖ ಅಜ್ಞಾನದ ಸ್ಪರ್ಶವಿಲ್ಲದ ಭಗವಂತ ಯಾರನ್ನೂ ಮೇಲು-ಕೀಳು ಭಾವದಿಂದ ನೋಡುವುದಿಲ್ಲ. ಪ್ರತಿಯೊಬ್ಬರನ್ನೂ ಅವರವರ ಕರ್ಮ ಮತ್ತು ಜೀವಯೋಗ್ಯತೆಗೆ ತಕ್ಕಂತೆ ಸಮನಾಗಿ ಕಾಣುತ್ತಾನೆ. ಭಗವಂತ ಸಮಸ್ತ ಜಡ-ಚೇತನದೊಳಗೆ ಜಗದೀಶ್ವರನಾಗಿ ನಿಂತು ನಮ್ಮ ಜೀವ ಸ್ವಭಾವಕ್ಕೆ ತಕ್ಕಂತೆ, ಕರ್ಮಕ್ಕನುಗುಣವಾಗಿ ನಮ್ಮನ್ನು ನಡೆಸುತ್ತಿದ್ದಾನೆ. ಈ ಸತ್ಯ ತಿಳಿದಾಗ ನೀನು ನಿನಗೆ ಹಿಂಸೆ ಮಾಡದೆ ಬದುಕಬಹುದುಎನ್ನುತ್ತಾನೆ ಕೃಷ್ಣ. ನಿನ್ನ ಅರಿವಿಲ್ಲದೆ, ಭಗವಂತನ ಅರಿವಿಲ್ಲದೆ ಬದುಕುವುದು ಒಂದು ಆತ್ಮಹಿಂಸೆ. ಒಮ್ಮೆನಾನುಅಂದರೇನು, ನನ್ನೊಳಗಿರುವ ಭಗವಂತನಂದರೇನು ಎನ್ನುವ ವಸ್ತುಃಸ್ಥಿತಿ ತಿಳಿದರೆ ಹಿಂಸೆಯಾಗುವುದಿಲ್ಲ. ಅದು ತಿಳಿಯದೆ ಬದುಕುವುದು ಅಜ್ಞಾನದ ಮತ್ತು ದುಃಖದ ಬದುಕು. ಜೀವನದಲ್ಲಿ ಬರುವ ಪ್ರತಿಯೊಂದು ಸಂಗತಿಯನ್ನು-ನಾನು ಹಿಂದೆ ಮಾಡಿದ ಕರ್ಮದ ಫಲ-ಅದನ್ನು ಭಗವಂತ ಮಾಡಿಸಿದಎಂದು ತಿಳಿದುಕೊಂಡರೆ ದುಃಖವಿಲ್ಲದೆ ಆನಂದದಿಂದ ಬದುಕಬಹುದು. ನಮ್ಮ ಮನಸ್ಸೇ ನಮಗೆ ದುಃಖ ಕೊಡುವುದು. ಅದೇ ಆನಂದ ಕೊಡುವುದು. ನಮಗೆ ದುಃಖವಾಗುವುದು ನಮ್ಮ ತಿಳುವಳಿಕೆಯಿಂದ ಹೊರತು ಇನ್ಯಾವುದರಿಂದಲೂ ಅಲ್ಲ. ಉದಾಹರಣೆಗೆ ಒಬ್ಬ ಶ್ರೀಮಂತ ಯಾವುದೋ ಕಾರಣದಿಂದ ತನ್ನಲ್ಲಿರುವ ಎಲ್ಲ ಸಂಪತ್ತನ್ನು ಕಳೆದುಕೊಳ್ಳುತ್ತಾನೆ. ಆಗ ಆತ ನನ್ನ ಪೂರ್ವ ಜನ್ಮದ ಕರ್ಮಕ್ಕನುಗುಣವಾಗಿ ಈ ಘಟನೆ ನಡೆಯಿತು. ಎಲ್ಲವೂ ಭಗವಂತನ ಲೀಲೆ; ಕೊಡುವವನೂ ಅವನೆ, ತೆಗೆದುಕೊಳ್ಳುವವನೂ ಅವನೆ; ಪಾಲಿಸುವವನೂ ಅವನೆ; ಇದಕ್ಕಾಗಿ ನಾನೇಕೆ ಚಿಂತಿಸಬೇಕುಎಂದು ತಿಳಿದುಕೊಂಡರೆ ಆತ ಆನಂದದಿಂದಿರಬಹುದು. ಇದನ್ನು ಬಿಟ್ಟು ಬ್ರಹ್ಮಾಂಡವೇ ತಲೆಮೇಲೆ ಬಿದ್ದಂತೆ ವರ್ತಿಸಿದರೆ ಅದು ನಮ್ಮನ್ನು ನಾವು ಹಿಂಸಿಸಿಕೊಂಡಂತೆ. ನಾವು ಎಲ್ಲವನ್ನು ಪ್ರೇಕ್ಷಕರಾಗಿ ಕಾಣಲು ಅಭ್ಯಾಸ ಮಾಡಿಕೊಳ್ಳಬೇಕು. ಭಗವಂತನ ಅರಿವಿನೊಂದಿಗೆ ಶಾಂತವಾದ ಇಂತಹ ಬದುಕು ನಮ್ಮನ್ನು ಪರಮಪದವಾದ ಮೊಕ್ಷದತ್ತ ಕೊಂಡೊಯ್ಯಬಲ್ಲದು.
·  ಶ್ಲೋಕ - 29
ಭಗವಂತನ ಚಿಂತನೆಯ ಇನ್ನೊಂದು ಅನುಸಂಧಾನವನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ನಮ್ಮ ಮುಂದಿಟ್ಟಿದ್ದಾನೆ. ಎಚ್ಚರಿಕೆಯಿಂದ ಈ ಶ್ಲೋಕವನ್ನು ನಾವು ನೋಡಿದರೆ ನಮಗೆ ಸತ್ಯ ತಿಳಿಯುತ್ತದೆ. ನಮ್ಮಲ್ಲಿ ಎಲ್ಲರಲ್ಲೂ ಇರುವ ಒಂದು ಗೊಂದಲ ಎಂದರೆ- ಕ್ರಿಯೆಯನ್ನು ನಾನು ಮಾಡುವುದೇ ಅಥವಾ ನನ್ನಿಂದ ಭಗವಂತ ಮಾಡಿಸುವುದೇ? ಭಗವಂತ ಮಾಡಿಸುವುದಾದರೆ ಏಕೆ ನನ್ನಿಂದ ಕೆಟ್ಟ ಕೆಲಸವನ್ನು ಮಾಡಿಸುತ್ತಾನೆ?”ಎಂಬುದು. ಈ ಪ್ರಶ್ನೆಗೆ ಕೃಷ್ಣ ಈ ಶ್ಲೋಕದಲ್ಲಿ ಅಡಕವಾಗಿ ಉತ್ತರ ಕೊಟ್ಟಿದ್ದಾನೆ. ಇಲ್ಲಿ ಹಿಂದೆ ಕೃಷ್ಣ ಹೇಳಿದ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಈ ಶ್ಲೋಕವನ್ನು ನಾವು ನೋಡಬೇಕಾಗಿದೆ.
ಪ್ರಕೃತ್ಯೈವ ಚ ಕರ್ಮಾಣಿ ಕ್ರಿಯಮಾಣಾನಿ ಸರ್ವಶಃ ।
ಯಃ ಪಶ್ಯತಿ ತಥಾSSತ್ಮಾನಮಕರ್ತಾರಂ ಸ ಪಶ್ಯತಿ ೨೯॥
ಪ್ರಕೃತ್ಯಾ ಏವ ಚ ಕರ್ಮಾಣಿ ಕ್ರಿಯಮಾಣಾನಿ ಸರ್ವಶಃ ।
ಯಃ ಪಶ್ಯತಿ ತಥಾ ಆತ್ಮಾನಮ್ ಅಕರ್ತಾರಮ್ ಸಃ ಪಶ್ಯತಿ -- ಪ್ರಕೃತಿಯಿಂದಲೆ ಎಲ್ಲ ಕಾರ್ಯಗಳೂ ನಡೆಯುತ್ತಿವೆ[ಜೀವನ ಕರ್ಮಕ್ಕನುಗುಣವಾಗಿ ಭಗವಂತನೆ ತೊಡಗಿ ಎಲ್ಲ ಕಾರ್ಯಗಳಲ್ಲು ಮುನ್ನೆಡೆಸುತ್ತಾನೆ] ಎಂದು ತಿಳಿದವನು ಮತ್ತು ಏನು ಮಾಡುವುದಕ್ಕೂ ತಾನು ಸ್ವತಂತ್ರನಲ್ಲ[ಭಗವಂತನಿಗೆ ಇನ್ನೊಬ್ಬ ಕಾರಣ ಪುರುಷನಿಲ್ಲ] ಎಂದು ತಿಳಿದವನು ನಿಜವಾಗಿ ತಿಳಿದವನು’.
ಕೃಷ್ಣ ಹೇಳುತ್ತಾನೆ ಯಾರಿಗೆ ನಾನುಮಾಡುತ್ತಿಲ್ಲ ಎಂದು ಗೊತ್ತಿದೆಯೋ ಅವನು ತಿಳಿದವನುಎಂದು. ಆದ್ದರಿಂದ ಮೊದಲು ನಾವು ನಾನು ಮಾಡುತ್ತಿದ್ದೇನೆಎನ್ನುವ ಅಹಂಕಾರವನ್ನು ಬಿಟ್ಟುಬಿಡಬೇಕು. ನಾನು ಮಾಡುತ್ತಿದ್ದೇನೆ ಎನ್ನುವುದು ಕೇವಲ ವ್ಯವಹಾರಿಕ ಸತ್ಯ ಹೊರತು ಪಾರಮಾರ್ಥಿಕ ಸತ್ಯವಲ್ಲ. ಉದಾಹರಣೆಗೆ: ನಾನು ಮಾತನಾಡುತ್ತಿದ್ದೇನೆ”. ಇಲ್ಲಿ ನಾನು ಮಾತನಾಡಬೇಕಾದರೆ ಮೊದಲು ನಾನು ಮೂಗನಾಗಿರಬಾರದು. ಅದಕ್ಕೆ ಸರಿಯಾದ ಅಂಗಾಂಗವಿರುವ ಮಾನವ ಶರೀರವಿರಬೇಕು. ಮಾತನಾಡಬೇಕಾದರೆ ನನ್ನ ಮನಸ್ಸು ವಿಷಯಗಳನ್ನು ಸಮಯಕ್ಕೆ ಸರಿಯಾಗಿ ಯೋಚಿಸಿ ಸಂದೇಶವನ್ನು ರವಾನಿಸಬೇಕು. ಅಂದರೆ ಇದಕ್ಕೆ ಸರಿಯಾದ ಮೆದುಳಿನ ಶಕ್ತಿ ನನಗೆ ಬೇಕು. ಮಾತನಾಡುವ ಧೈರ್ಯ ನನಗೆ ಬೇಕು. ಈಗ ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳೋಣ: ನನಗೆ ಮಾತನಾಡಬಲ್ಲ ಮಾನವ ದೇಹವನ್ನು ಕೊಟ್ಟವನ್ಯಾರು? ನನಗೆ ಯೋಚಿಸಬಲ್ಲ ಮೆದುಳನ್ನು ವಿನ್ಯಾಸಗೊಳಿಸಿ ಕರುಣಿಸಿದನ್ಯಾರು? ಸಮಯಕ್ಕೆ ಸರಿಯಾಗಿ ಈ ಮೆದುಳಿನಿಂದ ಸಂದೇಶವನ್ನು ರವಾನಿಸಿದವನ್ಯಾರು? ಮಾತನಾಡುವ ಅದ್ಭುತ ಕಲೆಯನ್ನು ನನಗೆ ದಯಾಪಾಲಿಸಿದವನ್ಯಾರು? ಈ ಎಲ್ಲಾ ಪ್ರಶ್ನೆಯಿಂದ ನಮಗೆ ತಿಳಿಯುವುದೇನೆಂದರೆ:ನನ್ನೊಳಗಿರುವ ಭಗವಂತ ನುಡಿಸಿದ-ನಾನು ನುಡಿದೆಎನ್ನುವ ಸತ್ಯ. ಇದನ್ನೇ ಇಲ್ಲಿ ಭಗವಂತ ವಿವರಿಸುತ್ತ ಹೇಳುತ್ತಾನೆ ಪ್ರಕೃತ್ಯೈವ ಚ ಕರ್ಮಾಣಿ ಕ್ರಿಯಮಾಣಾನಿ ಸರ್ವಶಃಎಂದು. ಅವರವರ ಜೀವಪ್ರಕೃತಿ(ಜೀವ ಸ್ವಭಾವ)ಗೆ ಅನುಗುಣವಾಗಿ, ಪ್ರಕೃತಿ(ತ್ರಿಗುಣಗಳ) ಪ್ರಭಾವದಿಂದ, ಪ್ರಕೃತಿಪುರುಷರು(ಲಕ್ಷ್ಮೀನಾರಾಯಣರು) ನಮ್ಮಿಂದ ಕರ್ಮವನ್ನು ಮಾಡಿಸುತ್ತಾರೆ. ಆದ್ದರಿಂದ ಜೀವನಿಗೆ ಅನಾಧಿನಿತ್ಯವಾಗಿ ಬಂದ ಜೀವಸ್ವಭಾವಕ್ಕನುಗುಣವಾಗಿ ಆತನ ದೇಹ ಸೃಷ್ಟಿ; ಅದಕ್ಕನುಗುಣವಾಗಿ ಆತನ ಮೇಲೆ ವಾತಾವರಣದಲ್ಲಿನ ತ್ರಿಗುಣಗಳ ಪ್ರಭಾವ; ತ್ರಿಗುಣಗಳ ಪ್ರಭಾವದಂತೆ ಆತನ ಎಲ್ಲಾ ವಿಧದ ಕರ್ಮ. ಇದೆಲ್ಲವನ್ನು ಮಾಡಿಸುವವ- ಸರ್ವದೇವತೆಗಳ ಅಧಿಪತಿಯಾದ, ಲಕ್ಷ್ಮೀ ಸಮೇತನಾದ ನಾರಾಯಣ.
·  ಶ್ಲೋಕ - 30
ಯದಾ ಭೂತಪೃಥಗ್ ಭಾವಮೇಕಸ್ಥಮನುಪಶ್ಯತಿ
ತತ ಏವ ಚ ವಿಸ್ತಾರಂ ಬ್ರಹ್ಮ ಸಂಪದ್ಯತೇ ತದಾ ೩೦॥
ಯದಾ ಭೂತ ಪೃಥಕ್ ಭಾವಮ್ ಏಕಸ್ಥಮ್ ಅನುಪಶ್ಯತಿ
ತತಃ ಏವ ಚ ವಿಸ್ತಾರಂ ಬ್ರಹ್ಮ ಸಂಪದ್ಯತೇ ತದಾ ಬಗೆಬಗೆಯ ಜೀವರಾಶಿ ಒಬ್ಬ ಭಗವಂತನಲ್ಲಿ ನೆಲೆಸಿದೆ ಎಂದು, ಅವನಿಂದಲೆ ಈ ಬಗೆಬಗೆಯ ಬಿತ್ತರ ಎಂದು ತಿಳಿದಾಗ ಭಗವಂತನನ್ನೇ ಸೇರುತ್ತಾನೆ.
ಜೀವ ಅನಾಧಿನಿತ್ಯ. ಸೃಷ್ಟಿಯಾಗುವುದು, ಸಂಹಾರವಾಗುವುದು ಕೇವಲ ಕಾಣುವ ರೂಪ ಅಷ್ಟೆ. ಜೀವಜಾತಗಳು ಒಂದೊಂದೂ ಪೃಥಕ್ ಭಾವ. ಯಾವ ಎರಡು ಜೀವಜಾತವೂ ನೂರಕ್ಕೆ ನೂರು ಸದೃಶವಾಗಿಲ್ಲ. ಈ ಅನೇಕ ಜೀವ ಸಮುದಾಯ ಏಕನಾದ ಭಗವಂತನಲ್ಲಿದೆ. ಸೃಷ್ಟಿ ಕಾಲದಲ್ಲಿ ಭಗವಂತನ ಉದರದಿಂದ ಹೊರ ಬಂದು ಆಕಾರ ಪಡೆಯುವ ಜೀವ ಜಾತಗಳು ಪ್ರಳಯ ಕಾಲದಲ್ಲಿ ಮರಳಿ ಸೂಕ್ಷ್ಮ ರೂಪದಲ್ಲಿ ಭಗವಂತನ ಉದರವನ್ನು ಸೇರುತ್ತವೆ. ಇದನ್ನು ನಾವು ವಸ್ತುಃಸ್ಥಿತಿಗೆ ಅನುಗುಣವಾಗಿ ಗ್ರಹಣ ಮಾಡಬೇಕು. ಯಾರು ಈ ಸತ್ಯವನ್ನು ಗ್ರಹಣ ಮಾಡಬಲ್ಲನೋ ಆತ ಮೋಕ್ಷವನ್ನು ಪಡೆಯಬಲ್ಲ.
·  ಶ್ಲೋಕ - 31
ಅನಾದಿತ್ವಾನ್ನಿರ್ಗುಣತ್ವಾತ್ ಪರಮಾತ್ಮಾSಯಮವ್ಯಯಃ ।
ಶರೀರಸ್ಥೋSಪಿ ಕೌಂತೇಯ ನ ಕರೋತಿ ನ ಲಿಪ್ಯತೇ ೩೧॥
ಅನಾದಿತ್ವಾತ್ ನಿರ್ಗುಣತ್ವಾತ್ ಪರಮ ಆತ್ಮಾ ಅಯಮ್ ಅವ್ಯಯಃ ।
ಶರೀರಸ್ಥಃ ಅಪಿ ಕೌಂತೇಯ ನ ಕರೋತಿ ನ ಲಿಪ್ಯತೇ --ಕೌಂತೇಯ, ಪರಮಾತ್ಮ ಎಂದೂ ಹುಟ್ಟದವನು; ಗುಣಗಳು ಅಂಟದವನು; ಅದರಿಂದ ಅವನಿಗೆ ಅಳಿವೂ ಇಲ್ಲ. ಅವನು ದೇಹದೊಳಗಿದ್ದೂ ಏನನ್ನೂ ಮಾಡುವುದಿಲ್ಲ; ಏನನ್ನೂ ಅಂಟಿಸಿಕೊಳ್ಳುವುದಿಲ್ಲ.[ಅಳಿವಿರದ ಈ ಪರಮಾತ್ಮ ಸಂಸಾರಿ ಜೀವನಲ್ಲ; ಜಡದ ಮಾತೇನು! ಅವನು ಎಲ್ಲವನ್ನೂ ಮಾಡುತ್ತಾನೆ; ಏನನ್ನೂ ಅಂಟಿಸಿಕೊಳ್ಳುವುದಿಲ್ಲ.]
ನಿರ್ವೀಕಾರನಾಗಿರುವ ಏಕಮೇವ ವಸ್ತು ಎಂದರೆ ಭಗವಂತ. ಆತ ಎಂದೂ ಯಾವ ಕಾರಣ ವಿಶೇಷದಿಂದ ಕೂಡ ಹುಟ್ಟಿಲ್ಲ. ಭಗವಂತ ತ್ರೈಗುಣ್ಯವರ್ಜಿತ. ಇದರಿಂದ ಆತ ಎಂದೂ ಬದಲಾವಣೆಗೆ, ವಿಕಾರಕ್ಕೆ ಒಳಪಡುವುದಿಲ್ಲ. ಭಗವಂತ ಎಲ್ಲ ಜೀವರೊಳಗೆ ಬಿಂಬರೂಪನಾಗಿದ್ದರೂ ಕೂಡ ಆತನಿಗೆ ದೇಹದ ಬದ್ಧತೆ ಇಲ್ಲ. ಆತ ಎಲ್ಲವನ್ನು ನಮ್ಮಿಂದ ಮಾಡಿಸುತ್ತಾನೆ ಆದರೆ ಏನನ್ನೂ ಅಂಟಿಸಿಕೊಳ್ಳುವುದಿಲ್ಲ. ಆತ ನಿರ್ಲಿಪ್ತನಾಗಿ ಎಲ್ಲವನ್ನೂ ಮಾಡುತ್ತಾನೆ ಆದರೆ ಯಾವುದರ ಲೇಪವೂ ಆತನಿಗಿಲ್ಲ. ಇದು ಯಾವ ರೀತಿ ಎಂದು ಅರ್ಥ ಮಾಡಿಕೊಳ್ಳುವುದಕ್ಕೆ- ಕೃಷ್ಣ ಒಂದು ಉದಾಹರಣೆಯನ್ನು ಕೊಟ್ಟು ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.
·  ಶ್ಲೋಕ - 32
ಯಥಾ ಸರ್ವಗತಂ ಸೌಕ್ಷ್ಮ್ಯಾದಾಕಾಶಂ ನೋಪಲಿಪ್ಯತೇ
ಸರ್ವತ್ರಾವಸ್ಥಿತೋ ದೇಹೇ ತಥಾSSತ್ಮಾ ನೋಪಲಿಪ್ಯತೇ ೩೨॥
ಯಥಾ ಸರ್ವಗತಮ್ ಸೌಕ್ಷ್ಮ್ಯಾತ್ ಆಕಾಶಮ್ ನ ಉಪಲಿಪ್ಯತೇ
ಸರ್ವತ್ರ ಅವಸ್ಥಿತಃ ದೇಹೇ ತಥಾ ಆತ್ಮಾ ನ ಉಪಲಿಪ್ಯತೇ ಆಕಾಶ ಎಲ್ಲೆಡೆ ತುಂಬಿದ್ದರೂ ಏತಕ್ಕೂ ತಡೆಯಾಗದಷ್ಟು ನವುರಾದ್ದರಿಂದ ಏತರಿಂದಲೂ ಅಂಟಿಸಿಕೊಳ್ಳುವುದಿಲ್ಲ ಹೇಗೆ ಹಾಗೆ- ಪರಮಾತ್ಮ ಕೂಡ ಎಲ್ಲ ದೇಹಗಳಲ್ಲಿ ತುಂಬಿದ್ದರೂ ಅಂಟಿಕೊಳ್ಳುವುದಿಲ್ಲ.
ಎಲ್ಲ ಕಡೆ ಆಕಾಶವಿದೆ. ಅದಿಲ್ಲದ ಸ್ಥಳವಿಲ್ಲ. ಇಂಥಹ ಆಕಾಶ ಎಲ್ಲೆಡೆ ಇದ್ದೂ ಹೇಗೆ ಏನನ್ನೂ ಅಂಟಿಸಿಕೊಳ್ಳದೆ ಇರುತ್ತದೋ- ಹಾಗೆ ಭಗವಂತ ಎಲ್ಲ ದೇಹದಲ್ಲಿದ್ದರೂ ಏನನ್ನೂ ಅಂಟಿಸಿಕೊಳ್ಳದೆ ನಿರ್ಲಿಪ್ತನಾಗಿದ್ದಾನೆ.
·  ಶ್ಲೋಕ - 33
ಯಥಾ ಪ್ರಕಾಶಯತ್ಯೇಕಃ ಕೃತ್ಸ್ನಂ ಲೋಕಮಿಮಂ ರವಿಃ
ಕ್ಷೇತ್ರಂ ಕ್ಷೇತ್ರೀ ತಥಾ ಕೃತ್ಸ್ನಂ ಪ್ರಕಾಶಯತಿ ಭಾರತ ೩೩॥
ಯಥಾ ಪ್ರಕಾಶಯತಿ ಏಕಃ ಕೃತ್ಸ್ನಮ್ ಲೋಕಮ್ ಇಮಮ್ ರವಿಃ
ಕ್ಷೇತ್ರಮ್ ಕ್ಷೇತ್ರೀ ತಥಾ ಕೃತ್ಸ್ನಮ್ ಪ್ರಕಾಶಯತಿ ಭಾರತ ಭಾರತ, ಒಬ್ಬ ಸೂರ್ಯ ಇಡಿಯ ಈ ಭೂಮಿಯನ್ನು ಬೆಳಗುವಂತೆ ಕ್ಷೇತ್ರಜ್ಞನಾದ ಭಗವಂತನೊಬ್ಬನೆ ಇಡಿಯ ವಿಶ್ವವೆಂಬಕ್ಷೇತ್ರವನ್ನು ಬೆಳಗುತ್ತಾನೆ.
ಏಕ ಸೂರ್ಯ ಹೇಗೆ ಇಡೀ ವಿಶ್ವವನ್ನು ಬೆಳಗಿಸುತ್ತಾನೋ ಹಾಗೆ, ಇಡೀ ಕ್ಷೇತ್ರವನ್ನು ಕ್ಷೇತ್ರಜ್ಞನಾದ ಭಗವಂತ ಬೆಳಗಿಸುತ್ತಾನೆ. ನಾವು ಮೊದಲು ಭಗವಂತನ ಬೆಳಕನ್ನು(ಜ್ಞಾನವನ್ನು) ತಿಳಿಯಬೇಕು. ಆಗ ನಮ್ಮೊಳಗಿನ ಬೆಳಕು ನಮಗೆ ಅರ್ಥವಾಗುತ್ತದೆ.
·  ಶ್ಲೋಕ - 34
ಕ್ಷೇತ್ರಕ್ಷೇತ್ರಜ್ಞಯೋರೇವಮಂತರಂ ಜ್ಞಾನಚಕ್ಷುಷಾ ।
ಭೂತಪ್ರಕೃತಿಮೋಕ್ಷಂ ಚ ಯೇ ವಿದುರ್ಯಾಂತಿ ತೇ ಪರಮ್ ೩೪॥
ಕ್ಷೇತ್ರ ಕ್ಷೇತ್ರಜ್ಞಯೋಃ ಏವಮ್ ಅಂತರಮ್ ಜ್ಞಾನೊ ಚಕ್ಷುಷಾ ।
ಭೂತ ಪ್ರಕೃತಿ ಮೋಕ್ಷಮ್ ಚ ಯೇ ವಿದುಃ ಯಾಂತಿ ತೇ ಪರಮ್ ಕ್ಷೇತ್ರ-ಕ್ಷೇತ್ರಜ್ಞರೊಳಗಣ ಈ ಅಂತರವನ್ನು, ಪಂಚಭೂತಗಳಿಂದ ಮತ್ತು ಪ್ರಕೃತಿಯಿಂದ [ಜೀವರಿಗೆ ಚೇತನ ಪ್ರಕೃತಿಯಿಂದ] ಬಿಡುಗಡೆಗೆ ಕಾರಣವಾದ ತಿಳಿವಿನ ದಾರಿಯನ್ನು ತುಳಿದವರು ಪರಮಾತ್ಮನನ್ನು ಪಡೆಯುತ್ತಾರೆ.
ಈ ಶ್ಲೋಕ ಈ ಅಧ್ಯಾಯದ ಉಪಸಂಹಾರ. ಕ್ಷೇತ್ರ ಅಂದರೇನು, ಕ್ಷೇತ್ರಜ್ಞ ಅಂದರೇನು, ಕ್ಷೇತ್ರ ಮತ್ತು ಕ್ಷೇತ್ರಜ್ಞರ ನಡುವಿನ ವೆತ್ಯಾಸವೇನು; ಜೀವಜಾತ ಜಡದಿಂದ ಬಿಡುಗಡೆ ಹೊಂದಲು ಇರಬೇಕಾದ ಮೋಕ್ಷ ಸಾಧಕ ಗುಣಗಳು-ಇವೆಲ್ಲವನ್ನು ಅರಿತು ಆಚರಣೆಗೆ ತಂದು ಬದುಕುವವರು ಸರ್ವಶ್ರೇಷ್ಠನಾದ ಭಗವಂತನನ್ನು ಸೇರುತ್ತಾರೆ.
ಇತಿ ತ್ರಯೋದಶೋSಧ್ಯಾಯಃ
ಹದಿಮೂರನೆಯ ಅಧ್ಯಾಯ ಮುಗಿಯಿತು

2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.

ಅನಾಮಧೇಯ ಹೇಳಿದರು...

sanjay