ಶ್ರೀ ಸಂಪುಟಂ: ಸಂಚಿಕೆ 4 - ಮಡಿದನಿಂದ್ರಜಿತು ಐಂದ್ರಾಸ್ತ್ರದಿಂ!

ಶ್ರೀ ಸಂಪುಟಂ: ಸಂಚಿಕೆ 4 - ಮಡಿದನಿಂದ್ರಜಿತು ಐಂದ್ರಾಸ್ತ್ರದಿಂ!
ಇರುಳ್ಮುತ್ತುಗದ ಮರಂ ಇದ್ದಕಿದ್ದಂದದಿಂ
ಕಿಕ್ಕಿರಿದು ಪೂತುದೆನೆ, ಅಗ್ನಿಚಿತ್ರಿತವಾಯ್ತು
ತೆಕ್ಕನೆ ತಮೋಮಯ ಚಿದಂಬರಂ ಲಂಕಾ
ನಿಶೀಥಿನಿಗೆ. ಪೊಂಜುಗಳ್ ದೊಂದಿಗಳ್ ಕೊಳ್ಳಿಗಳ್
ಸುತ್ತುವರಿದುವು; ಮುತ್ತಿ, ಲಗ್ಗೆನುಗ್ಗಿದುವಸುರ
ದುರ್ಗಕ್ಕೆ, ಪೊತ್ತಿದುವು ಸೌಧಗಳ್, ಧಗಿಸಿದುವು
ಪೊಗೆಯುಗುಳ್ವಾಪಣಶ್ರೇಣಿಗಳ್; ಮನೆಮನೆಯ
ನೆತ್ತಿಯಂ ಪತ್ತಿ, ಸಾಕಿದ ಬೆಕ್ಕುಗಳ್ ಕೂಗಿ
ಕರೆಯುತಿರ್ದುವು ರಕ್ಷೆಯಂ; ಬೀದಿಬೀದಿಯಲಿ
ಗೋಳ್ಮೊರೆಯನೆಬ್ಬಿಸುತೆ ನುಗ್ಗಿ ಪರಿದುದು ಬೆಂಕೆ ೧೦
ಪೊನಲವೋಲುರಿತೆರೆಗಳಲೆಯೆ.
ಅತಿಕಾಯನಂ,
ಧಾನ್ಯಮಾಲಿನಿಯದರದಲಿ ತನಗೆ ಸಂಭವಿಸಿ
ಪತಿದೊರೆಯಾದಾ ಪತಿವ್ರತೆಯ ಸಂಕಟದ
ಜೀವಿತಕೆ ಜೀವಾತುವೋಲಿರ್ದ ತನ್ನದ್ಭುತ
ಕುಮಾರನಂ, ಬ್ರಹ್ಮ ವರಬಲ ಸಮರ ಶೂರನಂ,
ಗಿರಿಶಿರೋಪಮ ರುಂದ್ರನಂ ಕರೆದು ಬೆಸಸಿದನ್
ರಾಕ್ಷಸೇಂದ್ರಂ; “ವಿಷಯ ಸಮಯಮಂ ನೆನೆದೀ
ನಿಶಾಯುದ್ಧಮಂ ಪೂಡಿದರ್ ಶತ್ರುಗಳ್, ವತ್ಸ,
ಕುಂಭಕರ್ಣಂ ಮಡಿದನಿಂದ್ರಜಿತು ತಾಂ ಪೂಣ್ದು
ಪೊಕ್ಕನ್ ನಿಕುಂಭಿಲಾ ಯಾಮಂಟಪಕೆ ನೀಂ ೨೦
ಪಗೆಗೆ ಕಾಳೆಗಗೊಡಲ್‌ವೇಳ್ಕುಮೀ ಒಂದಿರುಳ್
ಲಂಕೆಯಂ ಬೆಂಕೆಯಿಂ ಪೊರೆದು. ಈ ಒಂದಿರುಳ್‌
ನಿರ್ವಿಘ್ನಮಾಗೆ; ಕೈಸಾರ್ವುದದ್ಭುತ ಸಿದ್ದಿ
ಪೊಳ್ತರೆಗೆ, ಮೇಘನಾದನ ಯಾಗ ಯೋಗಕ್ಕೆ.
ಮೇಲೆ ನಿನ್ನಣ್ಣನೇಂ ಮುನಿದ ಮುಕ್ಕಣ್ಣನಂ
ಲೆಕ್ಕಿಪನೆ? ಕಪಿರಿಪುಗಳಂತಿರ್ರೆ‍ಕೆ! ರಾಮನಂ
ರಣಕೆ ಹೋಮಂಗೊಳ್ವೆವದು ದಿಟಂ
ನಾಳಿನಮಹೋಗ್ರ ಸಂಗ್ರಾಮ ಯಜ್ಞದಲಿ! ನೀನನ್ನೆಗಂ
ರಕ್ಷೆಯಾಗಿರು ನಮ್ಮ ಭಾಗ್ಯಕ್ಕೆ, ದುರ್ಗಕ್ಕೆ.
ಮೇಣ್‌ದೈತ್ಯ ಸ್ವರ್ಗಕ್ಕೆ! ನಡೆ, ಕಂದ, ತಡೆ ಹಗೆಯ
ಮುನ್ನಡೆಯನಾ ಕಾಣ್ಬ ಕೇಸುರಿವೋಟಮಂ.”                         ೩೦
ಬಾಗಿ
ತಂದೆಯಾಣತಿಯೆಸಗೆ ಪೋಗಲಿರ್ದಾ ತನ್ನ
ಕಿರಿವೆಂಡಿತಿಯ ಉಸಿರಿಗುಸಿರಾದ ಕುವರನಂ
ಮರಳಿ ಕರೆದನು ಸುರಾರಾತಿ. ಮಮತೆಯೊಳವನ
ಮೊಗ ನೋಡಿ ನುಡಿದನೆದೆಯೊಳಗೇನೊ ತನಗಾದ
ಭಯ ಚಲನಮಂ: “ವೀರನಹುದಾದೊಡಂ, ನಿನಗೆ
ಸಾವೆಂಬುದೊಂದು ನಗೆವಿಷಯಮಾದೊಡಮೊಂದು
ಬಗೆಯ ಬಿನ್ನಪವೊರೆಯ ತವಕಿಸುತ್ತಿರ್ಪುದೆರ್ದೆ.
ರಾಜಾಜ್ಞೆಯಲ್ತು, ಪೆತ್ತವರೊಂದು ಬಿನ್ನಪಂ:
ನಿನ್ನ ತಾಯ್‌ಧಾನ್ಯಮಾಲಿನಿಯುಸಿರ್ ನಿನ್ನಿಂದೆ,
ನಿನಗಾಗಿ, ತಡೆದಿರ್ಪುದಿಲ್ಲಿ, ಮರೆಯದಿರದನ್‌’                        ೪೦
ಸಮರ ಸಂಭ್ರಮದಿ.”
ಆತಿಕಾಯನಾಯತ ತನು
ಕುನುಂಗಿದತ್ತಾ ನುಡಿಗಳಿಂಗಿತಕೆ: ತನ್ನ ತಾಯ್‌
ತನಗೆ ತಾಯಹ ಮುನ್ನಮಿನ್ನೊರ್ವನರಸಿಯುಂ
ಹದಿಬದೆಯುಮಾಗಿರ್ದುದಂ ದಾದಿಯರ ಮೊಗದೆ,
ಪರ್ಚುನುಡಿಯಾಡುತಿರದ್ದವರ ಕಣ್‌ಮಿಸುಗಿನಿಂ,
ಗ್ರಹಿಸಿರ್ದನೆಳವರೆಯದೊಳ್‌. ತನ್ನ ತಾಯೇಗಳುಂ.
ಅದಾವುದೊ ವಿಷಾದದಂತರ್ ಜ್ವಾಲೆಯಿಂ ಬೆಂದು
ಕೃಶಳಾದೊಡಂ, ತನದಂ ತೋರಗೊಡದಂತೆ
ಮೇಲ್ನಗುತ್ತಿರ್ದುದನರಿತು, ಕೇಳ್ದನೊರ್ ದಿನಂ             ೫೦
ತನ್ನಬ್ಬೆಯನೆ, ದಾದಿಯರ ಮಾತಿನಾ ಮರ್ಮಮಂ
ತನಗರುಹಬೇಕೆಂದು. ಒರೆಯದೇನೊಂದುಮಂ
ಮಗನ ಮುದ್ದಿನ ಮೊಗಕೆ ಮೊಗವಿಟ್ಟು, ಸುಯ್ಯಳ್ತು,
ಮಿಸಿಸಿರ್ದಳದನಶ್ರುತೀರ್ಥದಲಿ, ಪೆತ್ತಳಾ
ಮೂಗಳ್ಕೆ ಕೈಶೋರ ಮುಗ್ಧಹೃದಯಕೆ ವಾಗ್ಮಿ
ತಾನಾಯ್ತು, ನೂರುಪನ್ಯಾಸಂಗಳಿಂ ಮಿಗಿಲ್‌
ಧ್ವನಿಪೂರ್ಣಮೆಂಬಂತೆವೋಲ್‌. ಅಂದು ಮೊದಲಾಗಿ
ಅತಿಕಾಯನಂಬೆಯ ಅಳಲ್ಗೆ ಸಂತೈಕೆಯಂ
ತರಲೆಳಸಿದನು ತನ್ನ ಇರ್ಮಡಿಸಿದಳ್ಕರೆಯ
ಅಮರ್ದು ಮರ್ದ್ದಿಂದೆ. ತಾಯ್‌ಸುತಮೋಹದಿಂಪಿನಲಿ               ೬೦
ತನ್ನಾತ್ಮದುರಿಗೆ ಸಿಂಪಿಸಿ ತಂಪನೆಳಸಿದಳ್‌
ತನ್ನ ಮುನ್ನೊಲ್ಮೆಯಂ ಮುಳುಗಿಸಲ್‌ವಿಸ್ಮೃತಿಯ
ವೈತರಣಿಯೊಳ್‌. ಪತಿವ್ರತೆಗದೇಂ ಸುಲಭಮೇನ್‌
ಮರೆಯಲಾ ಪ್ರಥಮಮಂ ಪ್ರೇಮಮಂ, ದಶಕಂಠ
ದುರ್ಮೋಹ ವಜ್ರಘಾತಕೆ ಕೆಡೆದ ಸಂಸಾರ
ಗೋಪುರ ಪವಿತ್ರಮಂ? ಮನವೊಪ್ಪದಿರ್ದುದಕೆ
ತನುವೊಪ್ಪಿದವಳ ಬಾಳ್‌ನರಕಮಾದುದು. ಸುತನ
ಸುಸ್ಮಿತ ಸ್ವರ್ಗದಿಂದಾ ನರಕ ಕೂಪಮಂ
ಬಾಸಣಿಸಿ ಬದುಕುತಿರ್ದಳು ಧಾನ್ಯಮಾಲಿನಿ,
ದಶಗ್ರೀವನವನಿಜಾರೂಪಿ ಧರ್ಮಸ್ಮರಣ
ಪುಣ್ಯ ಪಶ್ಚಾತ್ತಾಪಮಂ ತಂದು ಸದ್ಗತಿಗೆ
ತನ್ನನೆಳ್ಚರಿಪನ್ನೆಗಂ. ಸೀತೆಯಂ ಕಂಡಂದು
ಧಾನ್ಯಮಾಲಿನಿಗೆ; ಸಿದ್ಧಿಯನಾಂತ ಯೋಗಿಯಂ
ಕಾಣ್ಬ ಯೋಗಭ್ರಷ್ಟನಂತಾಗೆ, ಪೂರ್ವಮಂ
ನೆನೆದು ಕೊರಗಿದೊಳೊದಗಿದಾತ್ಮ ಪತನಕೆ; ಮತ್ತೆ,                 ೭೦
ಅನ್ಯರರಿಯದವೋಲೆ ತೊಡಗಿದಳ್‌ತನ್ನೊಳೆ
ತಪಶ್ಚರ್ಯಂ! ಮಾಸಿದುದು ಮೊಗದ ಮೋದರುಚಿ;
ಮೂಡಿತು ವಿಷಾದಕಳೆ; ದನಿ ಕುಗ್ಗಿ, ನುಡಿ ತಗ್ಗಿ.
ಸುತ್ತಿ ಸುಳಿದುದು ನೀರವತೆ ಮಿಳ್ತು ನೆಳಲಂತೆ.
ರಾವಣಪ್ರಣಯವಂತಿರಲಿ, ಸುತ ವಾತ್ಸಲ್ಯ
ಮಧುವುಮಾಕೆಗೆ ಗರಳ ರೂಪಮಂ ತಳೆದುದೆನೆ,
ಧಾನ್ಯಮಾಲಿನಿ ಹೃದಯ ಸಂಕಟದ ಮರ್ಮಮಂ
ತಿಳಿವರಾರ್, ಹದಿಬದೆಯಂತಸ್ಥಮಂ? ಸುತಂ
ವೀರನತಿಕಾಯನಮ್ಮನ ಮನೋವ್ಯಥೆಯಂ
ನಿವಾರಿಸಲುಪಾಯಮಂ ಕಾಣದೆಯೆ, ಪುಲಿದರಿಯ
ನಡುವೆ ನಿಂದಿರ್ದವಮಗಾ ತಂದೆಯಾಣತಿಯ
ಕಾಳಗದ ಕಣಿವೆ ಬಿಡುತೆಗೆ ಬಾಗಿಲಾಗಿರಲ್‌
ತೊರೆವನೇನ್‌ವೀರೋಚಿತದ ರಣದ ಮರಣದ
ಸುಯೋಗಮಂ?
“ನನ್ನಿಂದೆ, ನನಗಾಗಿ, ನನ್ನ ತಾಯ್‌
ಬರ್ದುಕಿ ಬೇಯುತ್ತಿಹಳ್‌? ನನ್ನ ಸಾವಿರ್ವರ್ಗೆ,             ೯೦
ತಾಯ್ಗೆನಗೆ, ಶಾಂತಿಯಂ ದಯೆಗೆಯ್ವೊಡಿಂದಿನ
ರಣಂ ತರಲ್‌ವೇಳ್ಕುಮಾ ಶಾಂತಿಯಂ!”
ತನ್ನೊಳಗೆ
ಇಂತು ತರಿಸಂದ ಉ ಅತಿಕಾಯನಯ್ಯಂಗೆರಗಿ,
ಪರಕೆಯಂ ಪಡೆದು, ತೇರೇರಿದನು ರಾತ್ರಿಯ
ರಣಾಂಗಣದ ನಾಕಮುಖ ಸೋಪಾನಮಯ ರಜತ
ಪರ್ವತಾರೋಹಣೋದ್ಯಮಕೆ!-ಬೇಸಗೆವಗಲ್‌,
ಮಲೆಯನಾಡಿನ ಕಾಡಿನಂತರದಿ, ಬಿದಿರಮೆಳೆ
ಚೀರಿಡಲ್‌ತೀಡುವ ಸಮೀರಣನ ಪೀಡನೆಗೆ,
ಪೆಣೆದ ಪಿಂಡಿಲ ನಡುವೆ ಕಿಡಿ ಚಿಮ್ಮಿ ಪೊಗೆಯುಣ್ಮಿ
ಹೆಡೆ ಬಿಚ್ಚಿ ಸುಯ್ವುದು ಸುಷುಪ್ತ ದಾವಾಗ್ನಿ ಫಣಿ
ಸುರುಳಿ ಬಿಚ್ಚುತೆ ಹೊರಳಿ ಕೆರಳಿ; ಮೆಳೆಯಿಂ ಮೆಳೆಗೆ                ೧೦೦
ಭೀಕರದುರಿಯ ನಾಲಗೆಯ ನಿಮಿರಿ, ನೆಗೆ ನೆಗೆದು
ತಬ್ಬಿ, ಭೋರಿಡುತುಬ್ಬಿ, ಹಬ್ಬುವುದಡವಿ ತಪಿಸಿ
ಚಕಿತ ಮೃಗ ಪಕ್ಷಿರಾವದ ರೂಪದಿಂದೊರಲಿ
ಚೀತ್ಕರಿಸೆ, ಕರಿಕುವರಿಸುತ್ತಟವಿಯಂ, ಕೃಷ್ಣಮಂ
ವರ‍್ತ್ರಮಂ ನಿರ್ಮಿಸುತೆ, ದಾಳಿಡುವುದಾ ಕಿರ್ಚು
ಮಲೆನೆತ್ತಿಯಿಂ ಕಣಿವೆಗೊಕ್ಕಲಿಗರಿರ್ಪೊಂದು
ಪಳ್ಳಿವೀಡೆಡೆಗೆ, ಹಾಹಾಕಾರವೇಳುವುದು;
ಕಾಕು ಕೂಗುಗಳೇಳ್ವುವೋರೊರ್ವರಂ ಕರೆವ
ದನಿ ಮರುದನಿಗಳಿಂ, ದವಾಗ್ನಿಗಿದಿರಗ್ನಿಯಂ                           ೧೧೦
ಪಡಿವೊತ್ತಿಸಲ್‌ಮನುದಂದು ನಡೆವುದು ಪಳ್ಳಿ
ಕೈಗೊಳ್ಳಿಗಳನಾಂತು ಕರಡವುಲ್‌ಬೆಳೆದೊಣಗಿ
ನಿಂದ ತುರುಮೇವು ಮೀಸಲ ಸಿರಿಯ ತಪ್ಪಲಿಗೆ,
ಗೋಧನಕ್ಕಾಹಾರಮಾಗಿರ್ದೊಡೇಂ? ಪೊತ್ತಿಪರ್
ಪ್ರತ್ಯಗ್ನಿಯಂ ಪಳ್ಳಿಯಂ ಪೊರೆವ ಸಾಧನೆಗೆ!
ಪೇಳಾದೊಡೇನಾಂಕೆಗೊಳ್ವುದೆ ಗ್ರಾಮ್ಯಮೀ ಬೆಂಕೆ
ಪ್ರಕೃತಿಭೀಮಮಂ ಆ ದವಾನಲೋದ್ದಾಮಮಂ?
ನುಗ್ಗುವುದು. ಕಾಡಿನಿಂದೇಳ್ವ ಗಾಳಿಯ ಬಲದಿ,
ಗದ್ದೆ ತೋಟಗಳೆಡೆಯೆ ಹುಲ್ಲು ಸೋಗೆಯ ಹೊದೆದು
ಹದುಗಿದ ಸುಲಭದೂರದೂರೆಡೆಗೆ, ಕೆಟ್ಟೆವೋ!                         ೧೨೦
ಕಂಗೆಟ್ಟೆವೋ! ಮನೆಗೆಟ್ಟೆವೋ! ಬಾಳ್ಗೆಟ್ಟೆವೋ!
ಎನುತೆ ಬಾಯ್ವಿಡುತೆ, ತಮ್ಮಳುವ ಮಕ್ಕಳನಿರುಕಿ
ಕೌಂಕುಳಕಿ, ಮೊರ ಮಡಕೆ ಅರುವೆ ಅಕ್ಕಿಯನುರಿಯ
ಅಣಲಿನಿಂದುಳಿಸಿಕೊಳ್ಳುವ ಯತ್ನಶೀಲೆಯರ್
ಗ್ರಾಮೀಣಬಾಲೆಯರ್ ಗ್ರಾಮದೇವರ್ಕಳಂ
ಪೆಸರಿಟ್ಟು ಕೂಗುವರ್; ಕೂಗಿ ಪರಿದಾಡುವರ್;
ಪರಿದಾಡಿ ಬೇಡುವರ್; ಮುಡಿಪು ಕಟ್ಟುವರವಕೆ
ತೆಂಗುಗಾಯ್‌ಬಾಳೆಗಾಯ್‌ಕೋಳಿಮರಿ ಕುರಿಯಮರಿ
ಮಕೇಣಿಷ್ಟ ನೈವೇದ್ಯನಿವಹಂಗಳು, ಇಂತುಟಾ
ಪೆಣ್ಣಿಂತು ಗಂಡಂತು, ಕಾಡುಗಿಚ್ಚಂ ತಡೆವ                              ೧೩೦
ಸಾಹಸದೊಳಿರೆ, ತೆಕ್ಕನೆ ದಿಗಂತದತ್ತಣಿಂ,
ದೇವರ್ಕಳಾ ರೂಪಮಂ ತಳೆದು ಕೃಪೆದೋರೆ
ಬರ್ಪರದೊ ನೋಡೆಲಾ ಎಂದೆಲ್ಲರುಲಿವಂತೆ,
ಕಾರ್ಗಾಳಿ ಕರ್ಮುಗಿಲ್ಗಳಂ ಪೊತ್ತು ಬೀಸಿತ್ತು.
ಬಾನ್ನೆತ್ತಿ ಕತ್ತಲಿಸೆ, ಮುಂಗಾರ್ ಮಹಾಕಾಳಿ
ಹುಬ್ಬುಗಂಟಿಕ್ಕಿದೋಲ್‌! ಮುಚ್ಚಿ ತೆರೆವನಿತರೊಳ್‌
ಕಣ್‌, ಸಿಡಿಲ್‌ಗುಡುಗು ಮಿಂಚುಗಳೊಡನೆ ಸುರಿವಾಲಿ
ಕಲ್ಲುಗಳ ಸರಿಯೊಡನೆ-ಸೋರ‍್ವುದು ಮಹಾವೃಷ್ಟಿ:
ಕರೆವುದು ಮುಸಲಧಾರೆ, ನಂದುವುದು ಕಾಳ್ಗಿಚ್ಚು
ನಿಶ್ಶೇಷಮಾಗಿ, ಕೆರೆಗಿಕ್ಕಿದೋಲ್‌ಕೆಂಗೆಂಡಮಂ!
ಅಂತೆವೋಲ್‌, ಮುಂಗಾರ್ ಗಾಳಿಮುಗಿಲಂತೆವೋಲ್‌,              ೧೪೦
ಕುಂಭ ಮಕರಾಕ್ಷರ್ ನಿಕುಂಭಾದಿಗಳ್‌ವೆರಸಿ
ರುಂದ್ರತನುವತಿಕಾಯನುರಿಯಿಕ್ಕುವರಿದಳಕೆ
ನಡೆದನಿದಿರಾಗಿ, ಜಳಯಂತ್ರವರ್ಷಸ್ರೋತ
ವೇಗಕಾ ವೈರಿವಾಹಿನಿ ಕೆಚ್ಚುಗೆಟ್ಟವೋಲ್‌
ಕಿಚ್ಚುಗಿಡುವಂತೆ. ಮೈಂದದ್ವಿವಿದರಂ ಕೂಡಿ
ವಾಲಿಯ ತನೂಭವಂ ತನ್ನಾಯ್ದ ಪಡೆವೆರಿಸಿ
ತಡೆದನತಿಕಾಯನ ಪತಾಕಿನಿಯ ಮುನ್ನಡೆಯ
ಮದಗಜದ ಮಾರ್ಗಕೆ ಅಗಳ್ತೆಯನಗೆಯುವಂತೆ.
ತೊಡಗಿದುದು ತುಮುಲ ಯುದ್ಧಂ! ರಾತ್ರಿ ನಿಡುದಾರಿ                            ೧೫೦
ನಡೆದು ಕಡೆಜಾವಮಂ ಸೇರುತಿರೆ, ಕಪಿಸೇನೆ
ಧಾನ್ಯಮಾಲಿನಿಯಾತ್ಮಜಪ್ರಲಯ ಪೌರುಷಕೆ
ಸರಿಸರಿದು ಹಿಂಜರಿದು ತೊರೆದುದು ದಶಗ್ರೀವ
ದುರ್ಗವನ್‌, ‘ಅಪ್ಪುವೊಲ್‌ವೀರಸ್ವರ್ಗಮಂ , ಕೆಲರ್,
ಪಡೆಯಳಿದು ತಾಮುಳಿದ ವರ ಬಲಿಷ್ಠರ್ ಕೆಲರ್
ಪಿರಿಯ ಸೇನಾನಿಗಳ್‌, ದುರ್ವಾರ್ತೆಯಂ ಪೊತ್ತು
ಬಾಗಿ, ಬಿಡಿಬಿಡಿಯೆ ನಡೆದರು ತಮ್ಮ ಶಿಬಿರಕ್ಕೆ.
ಸೊಡರ ಕುಡಿಯಂ ನಂದಿಸಲ್‌ನುಗ್ಗುವ ಪತಂಗಂ
ದೀಪದುರಿಯಂ ಮಳ್ಗಿಸುತೆ ತಾನುಮಾ ಶಿಖಿಗೆ
ಸುಟ್ಟು ಸೀಕರಿವೋಗಿ ಬೇಳ್ವೆಯಪ್ಪಂದದಿಂ                             ೧೬೦
ವಾನರಗ್ನಿಯನಾರಿಸಿದ ಧಾನ್ಯಮಾಲಿನಿಯ
ಕಂದನತಿಕಾಯನುಳಿದನ್‌ಸ್ಥೂಲಕಾಯಮಂ
ರಣಮೇದಿನಿಯ ಮಧ್ಯೆ; ಮೆರೆದನ್‌ಯಶೋದಿವದಿ
ಕೀರ್ತಿಯಕ್ಷಯ ಸೂಕ್ಷ್ಮಕಾಯದಲಿ.
ಇತ್ತಲ್‌,
ಇರುಳ್ಮುತ್ರಿಗೆಯನೊಡ್ಡಿ , ಲಂಕೆಯ ಮನವನೆಳೆದು,
ರಾಕ್ಷಸಬಲವನೆಳೆತಟಂ ಮಾಡಿ, ಅಂಗದನ
ಸೇನೆ ಅತಿಕಾಯಬಲದೊಡನೆ ಹೋರಾಡುತಿರೆ;
ಅತ್ತಲ್‌, ವಿಭೀಷಣನ ಹಿತಮಂತ್ರಣಂಗೇಳ್ದು,
ಶ್ರೀರಾಮನಾಜ್ಞೆಯಾಶೀರ್ವಾದರಕ್ಷೆಯಂ
ತಾಳ್ದು, ಜಾಂಬವ ಹನುಮ ನೀಲ ನಳರಂ ಕೂಡಿ                     ೧೩೦
ಸುಮಿತ ಪರಿವಾರ ಪರಿವೇಷ್ಟಿತ ಸುಮಿತ್ರಾತ್ಮಜಂ
ಅನಲೆಯಯ್ಯನ ಸನ್ನೆಯಲಿ ನಡೆದನಿಂದ್ರಜಿತು
ಮೇಘನಾದಂ ನಿಕುಂಭಿಲೆಯ ಯಾಗದೊಳಿರ್ದ
ನ್ಯಗ್ರೋಧ ಮೂಲದ ಗುಹಾರಹಸ್ಯವನರಸಿ,
ರಜನಿ ಮುಗಿಯುವ ಮುನ್ನಮಾ ಕ್ರತುಪ್ರಯತ್ನಮಂ
ಕಿಡಿಸಿ , ಭಂಗಿಸೆ ಕೂಟಯೋಧಿಯಂ.
ತ್ರಿಕೂಟಗಿರಿ
ಗಹ್ವರ ಗಹನ ನಿಭೃತ ಕಂದರದೊಳಿರ್ದೊಂದು
ನ್ಯಗ್ರೋಧ ಮೂಲದ ಸುವಿಸ್ತೃತ ಗುಹೋದರದಿ
ರಚಿಸಿದನು ಮಂತ್ರಮಂಟಪಮಂ ಮಹೇಂದ್ರಾರಿ,
ದೇವ ದಾನವ ದೃಗುಭಯಂಕರಮೆನಲ್‌, ದೂರ,
ಹೊರವಳಯದಲಿ, ಕಾಪಿರಿಸಿದನು ನಚ್ಚಿನ ತನ್ನ
ಸುಭಟಶ್ರೇಷ್ಠರಂ ಕೇಳ್‌, ಜಡಪ್ರಾಪಂಚಿಕದ
ಪಂಚ ಭೌತಾನ್ನಮಯದಲ್ಲಿ; ಮೇಣ್‌ಸೂಕ್ಷ್ಮದಲಿ
ಕಾಪುವಿರವೇಳ್ದನು ಪಿಶಾಚರಿಗೆ; ಪ್ರಾಣಮಯ
ಚಕ್ರದೊಳ್‌ನಿಲಿಸಿದನು ಭೂತಂಗಳಂ ಮೇಣ್‌
ಪರೇತಂಗಳು,ಮೇಣ್‌ಮಹಚ್ಛಕ್ತಿ ಹಯಂತ್ರಂಗಳಂ.
ಪ್ರಾಣಮಯದಾಚೆಯ ಮನೋಮಯದ ಲೋಕದಲಿ
ತನ್ನಯ ತಪಶ್ಯಕ್ತಿಯಿಂದಾಗ್ನಿ ಶರಧಿಯಂ
ನಿರ್ಮಿಸುತ್ತದರ ಪರಿಧಿಯ ಮಧ್ಯೆ. ಪದ್ಮದೊಲ್‌
ದಲಸಹಸ್ರದಿ ಮೆರೆವ ವಜ್ರಮಯ ವೇದಿಯಂ              ೧೯೦
ಕಲ್ಪಿಸಿದನಾತ್ಮ ಸಂಕಲ್ಪದಿಂ. ತನ್ಮಧ್ಯೆ, ಕೇಳ್‌,
ಕುಳ್ತನಾ ದೈತ್ಯ ದುರ್ಮಂತ್ರ ತಾಂತ್ರಿಕ ವರೇಣ್ಯಂ
ದುರ್ ವಿಜ್ಞಾನ ಶಕ್ತಿಯಾಹ್ವಾನ ದೀಕ್ಷಿತನಾಗಿ.
ಕಳವಳಿಸೆ ಕಾತರಿಸೆ ಭುವನತ್ರಯಂ! ರೇಚಕಂ
ಪೂರಕಂ ಕುಂಭಕ ವಿಧಾನದಿಂ ಪ್ರಾಣಂಗಳಂ
ಸ್ತಂಭಿಸುತೆ, ಜಡಭೌತ ನಿಯಮಾನ್ನಮಯ ಜಗನ್‌
ನಿಯತಿಗಳನತಿಗಳೆದು ಸೇರ್ದನು ಅವಿದ್ಯಾಮಾಯೆ,
ತನ್ನ ವಿದ್ಯಾಬಲವನಾದ್ಯಶಕ್ತಿಯ ಸೇವೆಯೊಳ್‌
ಲೀಲಾರ್ಥಮೆನೆ ಸಾರ್ಥಕಂಗೆಯ್ದಿರ್ದ ಸರ್ವಾರ್ಥ,
ಸಿದ್ಧಿಲೋಕಕ್ಕೆ. ಚಿತ್‌ಕುಂಡದೊಳ್‌ಪ್ರಜ್ವಲಿಸಿ                ೨೦೦
ಇಚ್ಛಾಗ್ನಿಯಂ, ಬಲಿದು ದೃಢಚಿತ್ತ ಯೂಪಮಂ.
ಬಿಗಿದನಿಂದ್ರಿಯ ಪಶುಗಳಂ ಕಡಿದು ಬೇಳಲ್ಕೆ.
ಸರ್ವೇಂದ್ರಿಯಂಗಳಂ ತಮ್ಮ ಸರ್ವಸ್ವಮಂ
ಪ್ರತಿಮಿಸಿದುವೆನಲೊಂದು ಬಂದು ನಿಂದುದು ಮುಂದೆ
ದಿಕ್ಕರಿಗಳೆಂಟುಮೊಂದಾದ ಗಾತ್ರದ ಮಹಾ
ಬೃಹನ್‌ಮೇಷಿ! ಮಿಂಚುತಿರೆ ಪೊನ್ನುಣ್ಣೆ ಸುತ್ತಣದಗ್ನಿ
ಬಣ್ಣಂಗೆಡಲ್‌, ಯೋಜನದೀರ್ಘ ಕಾಲಾಯಸದ
ಖಡುಗದಿನದಂ ತುಂಡರಿಸಿದನು ಮಹೇಂದ್ರಜಿತು,
ಕೆನ್ನೀರ್ವೊನಲ್‌ಕೋಡಿವರಿದು ಮಖಶಿಖಿಯುರಿಯೆ
ಜಗದ ಕಡೆಗಿರ್ಚವೋಲ್‌! ಕವಿಯ ವರ್ಣನೆಗಳವೆ                     ೨೧೦
ಚಿತ್ರಿಸಲತೀಂದ್ರಿಯವ್ಯಾಪಾರಮಂ ಮನುಜ
ಕಲ್ಪಿತ ಮರ್ತ್ಯಭಾಷೆಯ ಪಂಗುಲಿಪಿಯಲ್ಲಿ?
ಕೇಳಾದೊಡಂ ಪೇಳ್ದೆನೆನ್ನ ಕಣ್‌ಮುಚ್ಚಲಾಂ
ಕಾಣ್ಬಂಗಳಂ; ರಾವಣಿ ಅಥರ್ವ ವೇದೋಕ್ತ
ತಾಂತ್ರಿಕ ವಿಧಾನದಿಂದಾಮಂತ್ರಿಸಲ್‌ಮಹಾ
ಶಕ್ತಿಮಾತೃಕೆಯರಂ, ಕುದಿಯತೊಡಗಿದುದೊಡನೆ
ಪರಿಧಿಯಾಗಿರ್ದಗ್ನಿಶರಧಿ! ಗಂಧಕ ಗಂಧಮಯ
ಧೂಮ ಮೇಘಂಗಳೆದ್ದುವು ವಿಕಾರಾಕೃತಿಯ
ವಿನ್ಯಾಸದಿಂ ಚಿದಾಕಾಶಮಂ ತೀವಿ! ಮೇಣ್‌,
ಕಲಿಯುಗಾಭೀಳ ಯುದ್ಧೋದ್ಯಮಕೆ ಪಾಶ್ಚಾತ್ಯ
ಭೌತವೈಜ್ಞಾನಿಕ ಯಮಾಸಕ್ತಿ ನಿರ್ಮಿಸುವ
ಮಂತ್ರಕರ್ಮಾಗಾರ ಭೂತಚೀತ್ಕಾರಮಂ
ಕೀಳ್‌ಗೈವ ನಾರಕ ಬೃಹಚ್ಛಬ್ದಕೋಟಿಗಳ್‌
ಪೊಣ್ಮಿದುವು, ತಲ್ಲಣಂಗೊಳ್ಳಲಸು ಆ ಅಸುರ
ವೈಜ್ಞಾನಿಗುಂ! ಅಗ್ನಿಮಯ ಅಗ್ನಿವಾರ್ಧಿಯ
ತರಂಗಾಗ್ನಿ ಅಗ್ನಿ ಕುತ್ಕೀಲಂಗಳೋಲುರ್ಬ್ಬಿ
ಪಾಯ್ದುವಂಬರದೇಶಮಂ ತಿವಿದು! ಪೇಳ್ವುದೇಂ?
ಬೆಂಕಿಯ ಬಸಿರ್ ಬೆಸಲೆಯಾದುದೆನೆ, ಮಾನಸ
ಮಹಾಕಾಶದೊಳ್‌ಮೂಡಿದುವು ಮಹಾಮಂತ್ರಗಳ್‌,
ಅನ್ನಮಯ ಯಂತ್ರಮೂಲದ ಸೂಕ್ಷ್ಮತಂತ್ರಗಳ್‌                      ೨೩೦
ಪಶ್ಯಂತಿಗಳ್‌, ಅತೀಂದ್ರಿಯಮೊಯ್ಯನೊಯ್ಯನೆ
ಮನೋಮಯಕ್ಕವತರಿಸಲಿಂದ್ರಜಿತುವಿನ ಮನದಿ
ಮಧ್ಯಮಾ ರೂಪದಿಂ ಬುದ್ಧಿಗೋಚರವಾಗಿ
ಮೇಘನಾದನ ಜಿಹ್ವೆಗಿಳಿದುವಯ್‌ಶ್ರುತಿಸಾಧ್ಯ
ವೈಖರಿಯ ವಾಙ್ಞಯತೆಯಿಂ!
ಶಕ್ತಿಸಾಧಕನಿಂತು
ರೌದ್ರ ವಿದ್ಯಾಶಕ್ತಿಯಂ ಸಾಧಿಪ ಪ್ರದ್ಯೋಗದೊಳ್‌
ಯೋಗಿಯಾಗಿರಲತ್ತಲಾ ತಪಸ್ವಿನೀಧವಂ,
ಊರ್ಮಿಳೇಶಂ, ಕಳ್ತಲೆಯ ಮರೆಯೊಳೈತಂದನಯ್‌
ನ್ಯಗ್ರೋಧ ಕುದರಕೆ. ಮೇಘನಾದಾಜ್ಞೆಯಿಂ
ಯಾಗ ರಕ್ಷಣೆಗಡಗಿ ನಿಂತಿರ್ರ‍ವಕಾಪಿನ ಭಟರ್             ೨೪೦
ಮೇಲ್ವಾಯಲವರನಶ್ರಮದಿಂದೆ ನಿಗ್ರಹಸಿ,
ನೀಲ ನೇತೃತ್ವದಲಿ ತಂದ ಪರಿವಾರಮಂ
ಕಾಪಿರಲ್‌ವೇಳದ್ದು, ಮುನ್ನಡೆದನಾ ಲಕ್ಷ್ಮಣಂ
ಹನುಮ ಜಾಂಬವ ನಳ ವಿಭೀಷಣ ಸುಷೇಣರಂ
ಕೂಡಿ, ಕೊಂಡದೊಂದುರಿವಗ್ನಿಯಲ್ಲದೇನುಂ
ಕಂಡಂದಿಲ್ಲಲ್ಲಿ: “ಅಸುರೇಂದ್ರ, ನೀಂ ಪೇಳ್ದಾ
ನಿಕುಂಭಿಲಾ ಯಾಗಶಾಲೆಯದೆಲ್ಲಿ? ಕಣ್ಗಲ್ಲಿ
ಗೋಚರಿಸದಾ ಬೆಂಕೆಯಲ್ಲದೇನೊಂದುಮುಂ!”
ಕೇಳದ್ದ ರಾಮಾನುಜಗೆ ರಾವಣಾನುಜನಿಂತು
ಕುರಿತೊರೆದನಿಂದ್ರಜಿತುವೈಂದ್ರಜಾಲದ ತಂತ್ರ
ವಿಸ್ಮಯ ವಿಧಾನಮಂ; “ದಶರಥಕುಮಾರ, ಕೇಳ್‌                    ೨೫೦
ದಶಶಿರಾತ್ಮಜನತಿಪ್ರವೀಣಂ ಕಣಾ, ಕೂಟ
ವಿದ್ಯಾ ಕುಶಲ ಕಲೆಯಲ್ಲಿ, ನಿಕುಂಭಿಲಾ ಯಾಗಮಂ
ರಚಿಸಿಹನತೀಂದ್ರಿಯ ಪಥದೊಳನ್ನತತ್ತ್ವಕೆ
ಅತೀತಮಿರ್ಪುನ್ನತಾಮರ್ತದೀಪ್ತಿಯ ಭುವರ್
ಲೋಕದಲಿ; ಈ ಅಗ್ನಿ ಅದಕೆ ಬಾಗಲ್‌ದಿಟಂ!
ಯೋಗನಿಪುಣಂ ಮರುತ್‌ಸೂನು; ತಾನರಿವಂ
ಪುಗಲ್ಕ ಈ ಕೃಶಾನುಮುಖಮಾರ್ಗದಿಂದಿಂದ್ರಜಿಕತು ತಾಂ
ಕ್ರತುಗೈವ ಪೊತ್ತ ಸತ್ತ್ವದ ಬಲದಿ ಸೌಮಿತ್ರಿ,
ಸಾಹಸದಿನೆಳಸಲ್‌, ಸಮರ್ಥನಪ್ಪನ್‌, ಮೇಣ್‌                        ೨೬೦
ಅಗ್ನಿಶಕ್ತಿಯನಾತ್ಮ ಚಿಚ್ಛಿಕ್ತಿಯಿಂ ಗೆಲಲ್‌
ನನಗಲ್ತಸದಳಂ, ಅಮಂಗಳಮದಲ್ಲದಿರೆ
ಲಂಕಾಭ್ಯುದಯಕೆ, ರಾವಣಿಯ ವಧೆ ಲಕ್ಷ್ಮಣಗೆ
ಮೀಸಲಾದುದರಿಂದೆ ಮೊದಲ ಈ ಸುಮಿತ್ರಾತ್ಮಜಂ
ಪುಗಲಿ: ತದನಂತರಂ ಆಂಜನೇಯಂ; ಮೇಲೆ
ನಮ್ಮೊಳಾರಳವೋ ನೋಳ್ಪಂ”.
ವಿಭೀಷಣ ಮತಂ
ನಡೆವ ಪಥಮಾಗೆ ಲಕ್ಷ್ಮಕಣ ಚಿತ್ತಮೇರ್ದುದು
ಮನೋರಥಕೆ. ಚಿತ್ತಪಸ್ತೇಜಕೆ ಭಯಂಗೊಂಡು
ವಾರಿನಿಧಿ ಹಿಂಜರಿದು ಕೈಮುಗಿದ ರಾಮನ                             ೨೭೦
ಋತಪ್ರಭುತ್ವದ ಪಾದಪದ್ಮಂಗಳಂ ಸ್ಮರಿಸಿ
ನಡೆದು ಕಾಲಿಟ್ಟನಾ ಅಗ್ನಿಚಕ್ರಕ್ಕಹಾ
ಬ್ರಹ್ಮಾಂಢಮೊಡೆದುದೊ ಸಿಡಿಲ್ಗೆನಲ್‌ಸದ್ದೆದ್ದು
ಲಕ್ಷ್ಮಣ ಕಳೇಬರಂ ಸಿಡಿದು ಕೆಡೆದುದು ಸೀದ
ಶವದಂತೆ! ನಡುಗಿತು ವಿಭೀಷಣನೊಡಲ್‌; ನಳಂ
ಮೂರ್ಛೆಗಿಳಿದನ್‌; ಜಾಂಬವಗೆ ತನಗೆ ತಾನಾಯ್ತು
ಕುಂಭಕಂ; ಕವಿದುದಯ್‌ದಿಗ್‌ಭ್ರಮೆ ಸುಷೇಣಂಗೆ;
ವಿಸ್ಮಯಮಮರ್ದ್ದುದು ಸಮುದ್ರಸಾಹಸದದ್ರಿ
ಚೇತನದಂಜನಾ ಸುತಗೆ. ತೀವಿದುದು ಪೊಗೆಮುಗಿಲ್‌
ಪ್ರಾಣ ಪೀಡಾಕರಮೆನಲ್‌ಘ್ರಾಣಸಹನಾತೀತ              ೨೮೦
ದುರ್ಗಂಧಮಂ ಸ್ರವಿಸಿ ಫೂತ್ಕರಿಸಿ , ಸೈಪಲಾ
ಬರ್ದುಕಿದುದಿವರ್! ದೈವೀ ಸಹಾಯದೋಲಂತೆ
ತೀಡಿದುದೆಲರ್, ವಿಷವನೋಸರಿಸುತಮೃತಮಂ
ತಂದು ಬೀಸಿದ ಗಂಧವಹನಿಂದೈವರುಂ
ಸಪ್ರಾಣಿಸುತ್ತಲೈತಂದು ಸೌಮಿತ್ರಿಯಂ
ಕಂಡರಪಮೃತ್ಯುವಿಗೆ ತುತ್ತಾದನಂ; ಪೇಳ್ವುದೇಂ?
ಗುರುತಿಸಲ್ಕಸದಳಮೆನಲ್ಕೆ ರವಿವಂಶಜನ
ಮೆಯ್ಗಡರ್ದತ್ತು ಕಾಜಾಣವಕ್ಕಿಯ ಗರಿಯ
ಕಾಡಿಗೆಯ ಕರ್ಪುಬಣ್ಣಂ. ಪಿಸುಳ್ದಂತೆವೋಲ್‌
ಕಣ್‌ಬರಳ್‌ಪೊರಪೊಣ್ಮಿ ವಿಕೃತಮಾದುದು ವದನ                    ೨೯೦
ಮಂಡಲಂ. ಬೆಳ್ಪೆಸೆಯುತಲ್ಲಲ್ಲಿ ಸುಲಿದ ಮೆಯ್‌
ಪೇಸಿದೊಲ್‌ಸೋರ್ದತ್ತು ಗಾಯಂಗಳಿಂದೊಸರಿ
ದುರ್ನೀರ್ಗಳಂ. ನೋಡಬಾರದಾ ನೋಟಮಂ
ನೋಡಲಾರದೆ ನೋಡಿ ಹಮ್ಮಯ್ಸಿ, ಕಣ್ಮುಚ್ಚಿ
ತುಳ್ಕಿದರ್ ಕಣ್ಣೀರ್ಗಳಂ, ನೆನೆದು ತಂತಮ್ಮ
ದೈವಂಗಳಂ. ಕಡೆಗೆ ಮಾಂತ್ರಿಕ ಮಹಾ ಭಿಷಗ್‌
ಗುರು ಸುಷೇಣಂ ಪರೀಕ್ಷಿಸಿದನಂತರಮಿಂತು
ಪೇಳ್ದನಯ್‌ತನ್ನ ದೀರ್ಘಧ್ಯಾನಫಲಿತಮಂ:
“ಇದಭೌತಶಕ್ತಿಯಾಘಾತಮ್‌, ಇದಕಿನ್ನಿಲ್ಲಿ
ಭೌತ ಭೇಷಜಮಿಲ್ಲಮಾವುದುಂ, ಮಂತ್ರಮಂ                         ೩೦೦
ಬಲ್ಲೆನಾದೊಡಮದಕೆ ಓಷಧೀಯಂತ್ರದ
ಸಹಾಯ ಸೇವಾ ಸ್ಫೂರ್ತಿಯಿರವೇಳ್ಕುಮದರಿಂದೆ
ತಳ್ವದೆಯದು ತರ್ಪೊಡೀ ರಾಘವಾನುಜಂ
ಬರ್ದುಕುವನ್‌,  ಪೊಳ್ತು ಮೀರ್ವೊಡೆ ಹಿಂಚಲರಿಯದು
ಹರಣಮ್‌, ಒಡಲ್‌ತನ್ನ ಜೀವ ಸಾಮರ್ಥ್ಯದಿಂ
ವಿಮುಖವಾಗುವ ಮುನ್ನವೀತನಸುವಂ ನಾಂ
ಬಹಿಃಪ್ರಜ್ಞೆಗೆಳೆಯದಿರೆ, ಮಸುಳ್ವಂ ಕಪಿಧ್ವಜ
ಯಶಃಸೂರ್ಯಂ; ಕೆಡುಗುಮಾ ರಾಮಕಾರ್ಯಂ! ಪೋಪರಾರ್?
ತರ್ಪರಾರ್? ಬಹುಯೋಜನಂಗಳಂ ದಾಂಟುತಾ
ಹಿಮವಂತನಂ ಮೀರಿ, ಕೈಲಾಸ ಋಷಭಾದ್ರಿಗಳ                     ೩೧೦
ನಡುವೆ, ನಿರುಪಮ ಕಾಂತಿಯಿಂ ದ್ವಲಿಸುವೋಷಧೀ
ಪರ್ವತವ ಸೇರಿ ಮೃತಸಂಜೀವಿನೀ ಲತೆಯ
ಬೇರ್ಗಳಂ ತರುವರಾರ್? ಬೇಗದಿಂ ಬರುವರಾರ್?
ಪೇಳುಮೃತವೆರೆವರಾರ್?”
ಆಲಿಸಿ ಸುಷೇಣನಂ
ಸಮುದ್ರದೋಲುರ್ಬ್ಬಿದನ್‌; ಗಿರಿಯವೋಲ್‌ಕೊರ್ಬ್ಬಿದನ್‌;
ಗಗನದೋಲ್‌ಪರ್ಬ್ಬಿದನ್‌, ಕೇಳ್‌ಸಮೀರಾತ್ಮಜಂ!
“ಪೋಪೆನಾಂ, ತರ್ಪೆನಾಂ!” ಎನುತೆ ಉದ್ಘೋಷಿಸುತೆ
ಅಣಿಯಾಗುತಿರ್ದಾಂಜನೇಯಂಗೆ ಸುಷೇಣಂ:
“ಸಂಚರಿಸೆ ನೀನನ್ನಮಯ ಕಾಲದೇಶದ
ಜಗನ್ಮಾರ್ಗದಿಂ, ನಿನಗೆ ಬೇಹುದು ದಿನಂ, ಪೋಗಿ                    ೩೨೦
ಬರ್ಪುದಕೆ. ಚರಿಸೆ ನೀಂ ಪ್ರಾಣಮಯಮಾರ್ಗದಿಂ,
ಬೇಹುದು ಮುಹೂರ್ತಕಾಲಂ. ಸಮೀರಕುಮಾರ,
ನಿನಗಿದು ಅಸಾಧ್ಯಮಲ್ತದರಿಂದೆ ಪೇಳ್ವೆನೀ
ಕಷ್ಟಸಾಧ್ಯವನಾವುದೆಂಬೆಯೊ? ಮನೋಮಯದಿ
ಚರಿಸೆ ನೀನತಿಶೀಘ್ರದಿಂದೆ ಕೃತಕೃತ್ಯನಹೆ:
ಬದುಕಿದೀ ಸೌಮಿತ್ರಿ ತಾನಾಗುವಂ ದಿಟಂ
ಮೇಘನಾದಧ್ವಂಸಿ! ತರಿಸಲ್‌ಶುಭಾಧ್ವಮಂ!”
ತರಿಸಂದನಾ ಯೋಗಿ ಚರಿಸಲ್‌ಮನೋಮಯದ                    ೩೩೦
ಪಥದಿಂ. ಸುಷೇಣಾದಿಗಳ್‌ನೋಡೆನೋಡೆ, ಕಣ್‌
ತಮಗೆ ಮಂಜಾದವೋಲ್‌, ಮಸುಗಾದುದಂಜನಾ
ಸುತಶರೀರಂ, ಮತ್ತೆ ಕಣ್ಮಾಯೆ ಕವಿದವೊಲ್‌,
ಕಾಣಿಸದವೋಲಾದನಾಂಜನೇಯಂ!
ತ್ಯಜಿಸಿ
ಮೃಣ್ಮಯವನದಕೆ ಬೆಂಬಲಮಾಗಿ ಪಿಂದಿರ್ಪ
ಸೂಕ್ಷ್ಮಾನ್ನಮಯಕೋಶದೇಶಕೆ ದಾಂಟಿದುದೆ ತಡಂ
ಕಂಡುದದ್ಭುತಮೆನಲ್ಕೀ ಪ್ರಕೃತಿಲೋಕಕೆ
ವಿರಿಂಚಿ ಸಮೆದಾದರ್ಶ  ಮೂಲಕೃತಿಯೆನಿಸುವಾ
ತತ್ತ್ವತನು ಪೃಥಿವಿ. ಜಡತಾ ನಿಯತಿ ಭಾರದಿಂ
ಬಿಡುತೆಗೊಂಡಣುವಂ ಲಘುತರಪ್ರಪಂಚದೊಳ್‌
ಮಿಂಚಿನೊಲ್‌ಸಂಚರಿಸಿ ಮಿಂಚೆನಲ್‌ತಳತಳಿಸಿ                      ೩೪೦
ಪೊಕ್ಕಂ ಪರೇತಪ್ರಪಂಚಮಂ, ಸುತ್ತಲಿಂ
ಮುತ್ತುತೈತರೆ ದುರಭಿಸಂಧಿಯ ಪಿಶಾಚಗಳ್‌
ತನ್ನ ತೇಜದಿನವುಗಳಂ ಭಯಂಗೊಳಿಸುತ್ತೆ
ಬರಬರಲ್‌, ಕೇಳ್ಡುದಿರ್ಕೆಲದಲ್ಲಿ ಜಯರವಂ,
ತನ್ನುಜ್ಜುಗಕೆ ಬಯಸಿ ಗೆಲ್ಲಮಂ, ಸ್ವಸ್ತಿಯಂ
ವಾಚಿಸುವ ಸತ್‌ಪ್ರೇತ ಕಂಠಂಗಳಿಂ, ತನ್ನ
ಹರ್ಷಮಂ ವರ್ಣವೈಖರಿಯಿಂ ಪ್ರದರ್ಶಿಸುತೆ,
ಪ್ರಾಣದೇವನ ಕುಮಾರಂ ಪ್ರವೇಶಿಸಿದನಯ್‌
ಪ್ರಾಣಶಕ್ತಿಗಳಿಂ ಮಹದ್‌ಭವ್ಯಮಾದಾ
ಅತೀಂದ್ರಿಯ ಪ್ರಾಣಮಯದಾಕಾಶಮಂ. ಕಾಣುತ                   ೩೫೦
ದಿಗಂತಗಳ್‌ಧ್ಯಾನಮುದ್ರೆಯೊಳಿರ್ಪವೋಲಿರ್ದ
ಪ್ರಾಣದೇವರ್ಕಳಾ ಪರ್ವತೋಪಮ ಬೃಹತ್‌
ಪ್ರಾಣರೂಪಂಗಳಂ, ಕೈಮುಗಿದು, ಪರಕೆಯಂ
ಪಡೆದು, ಮುಂದುತ್ತರಿಸುತಿರ್ದಾ ಕಪಿಧ್ವಜಂ
ಧುಮುಕಲ್‌ಮನೋಮಯಕೆ, ನಿಂದುದು ಬೃಹಚ್ಛಾಯೆ
ತಡೆಗಟ್ಟಿ ತನ್ನ ನಡೆಯಂ! ಮರಕತಾಗ್ನಿಯಂ
ನಗುವ ಕಾಂತಿಯ ದೇವನಾ ಆಕಾರವಲ್ಲದಾ
ರೂಪಮಂ ಕಂಡಿದೇನೆಂದು ಬೆರಗಾಗಿರಲ್‌:
“ನಿನಗೆ ಕೇಡಂಬಗೆಯ ತಡೆಯಿಕ್ಕಿದವನಲ್ತು
ನಾಂ, ಕೇಳ್‌, ಮರತ್‌ಸೂನು. ಮಾರೀಚವೆಸರಿಂದೆ                  ೩೬೦
ಬರ್ದುಕಿರ್ದ್ದನೆಂ, ತಪಃಪುಣ್ಯದಿಂದುತ್ತಮದ
ಲೋಕಂಗಳಂ ಪಡೆವೆನೆಂದಿರ್ದೆನಾಂ, ಪೇಳ್ವೆನೇಂ?
ಭ್ರಾಂತಿಯೊಂದೆನ್ನನೀ ಪ್ರಾಣಮಯದೊಳ್‌ಪಿಡಿದು
ಬಂಧಿಸಿದೆ. ಮರ್ತ್ಯರಾಲಿಸಬಾರದಾದೊಡಂ,-
ಮರ್ತ್ಯವಲ್ಲದ ವಿಧಾನಂ ಮರ್ತ್ಯಕರ್ಥಮೇಂ?”
ಎನುತಾಂಜನೇಯಂಗೆ ಮಾರೀಚನಸುಛಾಯೆ
ವಚನೀಯವಲ್ಲದ ಅಚಿಂತ್ಯರೀತಿಯಿನೇನೊ
ತನ್ನಾಸೆಯಂ ಪೇಳ್ದು, ಆ ಪ್ರಾಣಮಯ ಜಗನ್‌
ನಿಯತಿ ಪ್ರಕಾರದಿಂದಾತನಿಂ ತಣಿವಡೆದು,
ಬಟ್ಟೆಗೊಟ್ಟುದು ಮನೋಮಯ ಲೋಕಮಾರ್ಗಿತಕೆ.                 ೩೭೦
ಮಾರೀಚನಾತ್ಮದಾ ಪ್ರಾಣಮಯ ರೂಪಮಂ
ಬೀಳ್ಕೊಂಡು, ಹಳೆ ಪೊರೆಯನಹಿ ಕಳಚಿ ತೊರೆವಂತೆ
ಪ್ರಾಣಮಯ ಕೋಶಮಂ ಸುಲಿದಿಕ್ಕುತಾ ಯೋಗಿ
ಪ್ರಾಣತತ್ತ್ವದ ರಜೋಮಯ ನಭೋವಲಯದಿಂ
ಪೊಕ್ಕನು ಮನೋಮಯದ ಸಾತ್ತ್ವಿಕಾಕಾಶಕೆ
ಚಿದಾಕಾರಮಂ ಧರಿಸಿ! ಕಾಣಲರಿವುದದಾವ
ಕಲ್ಪನೆಯ ಕಣ್‌? ಕಂಡುದಂ ಬಣ್ಣಿಸುವನಾವ
ಕಬ್ಬಿಗಂ? ಚಿದ್‌ರೂಪಿಯಾಂಜನಯೇಯಂಗಾಯ್ತು
ಚಿತ್‌ಸಮುದ್ರವನಲೆವ ಚಿದ್‌ವೀಚಿಯನುಭವಂ,
ತನ್ನ ಭಿನ್ನತೆಯುಳಿದುಮಳಿದಂತೆ! ಅನ್ನಮಯ                        ೩೮೦
ಪ್ರಾಣಮಯ ಭೂಮಿಕೆಗಳಂ ತುಂಬಿ, ಆವರಿಸಿ,
ಕಣಕಣದೊಳಿರ್ದುಮಂತರ‍್ಯಾಮಿಯಾಗಿಯುಂ
ಅತೀತಮೆನಲಿರ್ಪಾ ಮನೋಮಯದ ದರ್ಶನಕೆ
ರಸವಶನಾದನಾಂಜನೇಯಂ. ಶುದ್ಧತತ್ತ್ವದೊಳ್‌
ಚಿತ್ತವೃತ್ತಿಗಳೆಂದುಮರಿಯದಿಹ ಶಾಂತಿಯಂ
ತಳೆದು ಚಲಿಸಿದುವಲ್ಲಿ ಸ್ವಾತಂತ್ಯ್ರಮಂ ಸವಿವ
ವಿಶ್ವತಂತ್ರದಲ್ಲಿ ತಾನೆಲ್ಲವಾದಂತೆ ಮೇಣ್‌
ತನ್ನೊಳಾದಂತೆಲ್ಲಮುಂ ವಿರಾಣ್‌ಮನನಾಗಿ
ತನ್ನ ಸಿದ್ಧಿಗೆ ತಾನೆ ಬೆರಗಾದನಂಜನಾ
ಪ್ರಿಯ ಕುಮಾರಂ. ಚಿದಾಕಾರದಾಗರವೊ?ಮೇಣ್‌                    ೩೯೦
ಚಿಜ್ಜ್ಯೋತಿ ಸಾಗರವೊ? ನಾಮರೂಪದ ನಿಧಿಯೊ?
ಸರ್ವಸೃಷ್ಟಿಯ ವಿಧಿಯೊ? ಇದ್ದುವು ಸಮಾಧಿಯಲಿ
ಯೋಗಸಿದ್ಧಿಗಳಲ್ಲಿ. ಮನುಜಬುದ್ದಿಯೊಳೆಸೆವ
ಭವ್ಯಮಪ್ಪಾಲೋಚನೆಗಳಾತ್ಮಗಳ್‌ತಮ್ಮ
ಮೂಲರೂಪಂಗಲಿಂದುಜ್ವಲಿಸಿರ್ದುವಲ್ಲಿ.
ಪ್ರತಿಭೆಗಳ್‌ಧ್ಯಾನಗಳ್‌ಭಾವಗಳ್‌ತಂತ್ರಗಳ್‌
ಮಂತ್ರಗಳ್‌ಯಂತ್ರಗಳ್‌, ಅನ್ನಮಯದೊಳ್‌ಪಿಂತೆ
ಪರಿಣಾಮಗೊಂಡು ಪೃಥ್ವಿಯೊಳೊಗೆದ ತತ್ತ್ವಂಗಳಲುಂ,
ಮಕೇಣಿನ್ನುಮಲ್ಲಿ ಮೈದೋರದೆಯೆ ಪರಿಣಾಮದೊಳ್‌
ಮುಂದೆ ಮರ್ತ್ಯಕ್ಕಿಳಿವ ದಿವ್ಯ ತತ್ತ್ವಂಗಳುಂ                            ೪೦೦
ಚಿತ್‌ತಪಸ್‌ಶಕ್ತಿಯ ತುರೀಯ ವಿನ್ಯಾಸದಿಂ
ಸ್ವಸ್ವರೂಪದೊಳೆಸೆದುವಲ್ಲಲ್ಲಿ!
ಚಿದ್ರೂಪಿ ಆ
ಅನಿಲಜಂ ದಿವ್ಯಾನುಭವಕೆ ರಸವಶಿಯಾಗಿ
ತನ್ನಹಂಕರಾಲಯವಾಗುತಿರ್ದುದನರಿತು
ಬೆಚ್ಚಿದನ್‌: “ಇದೆ ಸುಷೇಣಂ ಪೇಳ್ದಪಾಯಂ ಕಣಾ
ಸ್ವಾರ್ಥಸಾಧನೆಗೀ ಮನೋಮಯದಿ ಸಂಚರಿಪ
ಸಾಹಸಿಗೆ!” ಎನುತೆ ನಿಶ್ಚಯಿಸಿದನು ರಕ್ಷಿಸಲ್‌
ತನ್ನ ಪ್ರತ್ಯೇಕತಾ ವ್ಯಕ್ತಿತ್ವಮಂ; ಮೊದಲ್‌
ತನ್ನತನವನ್ಯತನವಾಗದೊಲ್‌ಜಪಿಸಿದನ್‌
ತನ್ನಹಂಕಾರಮಂ ಬಲಿವ ಕೀರ್ತಿಯ ತನ್ನ                              ೪೧೦
ನಾಮಂಗಳಂ ತಾನೆ! ಮತ್ತೆ, ತನ್ನ ಭಿನ್ನತೆ
ವಿರಾಡಭಿನ್ನತೆಗಿಳಿದು ಅದ್ವಯಪ್ರಲಯಕೆ
ನಿಮಗ್ನವಾಗದ ತೆರದಿ ರಾವಣದ್ವೇಷಮಂ
ಬಲಿದನಂತಃಕರಣ ಕಟುತೆಯೊಳಹಂಬುದ್ಧಿ
ಪಟುವಪ್ಪಂತೆವೋಲ್‌! ಆ ಎರಡರಿಂ ಮಿಗಿಲೊ‌,
ವಾಯುಜಂಗಾದುದೊಂದತಿ ಭಯಂಕರಮೆನಲ್‌
ತನ್ನ ಕಜ್ಜದ ಕೊರಳ್ಗುರುಳಿಕ್ಕುವನುಪಮದ
ವಿದ್ಯಾನುಭೂತಿ: ರಾಮಾಯಣದ ಮಹಿಮೆಯ
ಮಸುಳ್ವಂತೆ ತಮ್ಮ ನಿರುಪಮ ದಿವ್ಯದೀಪ್ತಿಯಿಂ
ರಾರಾಜಿಸಿದುವಲ್ಲಿ ಜೀವನೋದ್ದೇಶಗಳ್‌,                               ೪೨೦
ಜೀವನ ಚರಿತ್ರಗಳ್‌, ಸಾಹಸಗಳಾತ್ಮಗಳ್‌,
ಮೇಣ್‌ಸಿದ್ಧಿಸಾಧನೋದ್ಭಾಸಗಳ್‌! ಅವರೆದುರ್
ತಾನುಮಂತೆಯೇ ತನ್ನ ಸಾಹಸೋದ್ಯೋಗಮುಂ
ಕಿರಿದಾಗಿಕೀಳಾಗಿ ತೋರಲನಿಲಜ ಮನಂ
ವೈರಾಗಿಯಾದುದು ಜಿಹಾಸೆಯಿ; “ಭೂಮವಿರೆ
ಅಲ್ಪ ಸಾಹಸಕಾತ್ಮಮಂ ನಿವೇದಿಸುವೆನ್ನ ಈ
ಮೂರ್ಖತೆಗೆ ಧಿಕ್ಕಾರ! ತೊರೆವೆನಾ ಅಲ್ಪಮಂ;
ಕಯಕೊಳ್ವೆನೊಂದನೀ ಭೂಮಸಾಧನೆಗಳಲಿ
ಮೇಲಾದುದಂ!” ಸ್ವಾತ್ಮಸಿದ್ಧಿಯ ಲೋಭವಿಂತೀ
ಪ್ರಲೋಭನಕೆ ಮನಸೆಳೆಯುತ್ತಿರಲಾತ್ಮ ಬುದ್ಧಿಯ
ವಿವೇಕಮೆಳ್ಚರಿಸಿದುದು ಜನ್ಮಧರ್ಮದ ಕರ್ಮ                          ೪೩೦
ಕರ್ತವ್ಯಮಂ; “ಲೋಕಲೀಲೆಗೊಪ್ಪಿಗೆಯಿತ್ತು
ಆ ಲೋಕಕಯತರಲ್‌, ಲೀಲೆ ಕೊನೆಗೊಳ್ಳುವಾ
ಮುನ್ನಮಲ್ಲಿಂದನ್ಯಲೋಕಕಾಶಿಸುವವನೆ
ನಿತ್ಯಂ ಬದ್ಧಂ! ಲೋಕಮಾವುದಾದೊಡಮೇನ್‌?
ಪೆರ್ಚ್ಚು ಕಡಮೆಗೊಳವೆ ಸಚ್ಚಿದಾನಂದದೀ
ಲೀಲಾ ವಿನೋದದೊಳ್‌?” ಎಂಬಾತ್ಮವಾಣಿಯಿಂ
ಬೋಧೆವೆತ್ತಾ ರಾಮದೂತಂ ಪ್ರಜ್ಞೆಚೇತರಿಸಿ
ಮುಂದೊತ್ತಿದನು ಪೊತ್ತ ಕಜ್ಜಕೆ ಮನಂದಂದು,
ಲಜ್ಜಿಸಿ ತನ್ನ ಮುನ್ನಿನಜ್ಞತೆಗೆ.
ಅನೇಕತಾ                                                                      ೪೪೦
ಮೋಹಮಯ ಚಂಚಲೆಯಂ ಜಯಿಸುತೇಕಾಗ್ರ
ಮತಿಯಿಂದಚಲಮನಂ ಹಾರಿದನು ಗುರಿಗೆ,
ಗರಮೂಡಿದೋಲ್‌. ಹಿಮಾಚಲವನುತ್ತರಿಸಿದನ್‌;
ತಾರಾಗಮಂ ದಾಂಟಿ, ಋಷಭಾದ್ರಿಯಂ ನೋಡಿ,
ಗುರುತಿಸಿದನಿಳಿದನೋಷಧಿಗಿರಿಯ ಮೇಘಾಚ್ಛನ್ನ
ಜ್ಯೋತಿಃಶೃಂಗ ರಂಗದಲಿ. ತರತರದ ಬಣ್ಣಗಳ
ಬೆಳಕುಗಳ ಕಂಪುಗಳ ಕಾಂತಿಗಳ ಜೀವದಲಿ
ತಾನುಮದೆಯದೆಯಾಗಿ ಚರಿಸುತೆ ಮನೋಮಯ
ಶರೀರಿ, ಯೌಗಿಕವಿಧಾನದೊಳರಸಿ, ಕಂಡನಾ
ಸಂಜೀವಿನೀಲತೆಯ ತಾತ್ತ್ವಿಕ ಮಹತ್ತ್ವದ                   ೪೫೦
ಲಸದ್ರೂಪಮಂ, ಕಂಡರಿಸಿದಿಂದ್ರಜಾಪವೆನೆ
ವರ್ಣಮಯ ಚಾರುದೀಪ್ತಸ್ವರ್ಣ ಪರ್ಣಗಳ್‌
ಮಿರುಮಿರುಗಿದವು ಜೀವಸತ್ತ್ವಂಗಳೋಲ್‌. ಮರ್ತ್ಯ
ಜೀವರಾಘ್ರಾಣ ಸಾಮರ್ಥ್ಯಗಳವಡದೊಂದು
ಸ್ಪರ್ಧಿಸಿರ್ದುದು ದಿವ್ಯ ಪರಿಮಳಮಾಂಜನೇಯಂ
ಸುಖೋನ್ಮಾದಿಯಪ್ಪಂತೆ. ಸಸ್ಯತನುವೆತ್ತೊಡಂ,
ಋತಚಿದ್‌ರಹಸ್ಯಶಕ್ತಿಯನಂತರಂಗದಲಿ
ಮಂತ್ರರೂಪದಿನಾಂತು, ಸಚ್ಚಿದಾನಂದಮಯ
ಪರಶಿವನ ಶಕ್ತಿಯಿಚ್ಛಾವ್ಯಕ್ತಿಯಾಗಿರ್ದ
ಸಂಜೀವಿನೀ ಲತಾದೇವತೆಗೆ ಕೈಮುಗಿದು
ಬಿನ್ನಯ್ಸಿದನು ಕೃಪಾಕಾಂಕ್ಷಿ;
“ಕರುಣಿಸು, ದೇವಿ!                                               ೪೬೦
ಕೃಪೆದೋರೆನಗೆ, ತಾಯಿ! ದಯಗೆಯ್‌, ಜಗಜ್ಜನನಿ!
ಸರ್ವಮಂಗಳೆ ನೀನು; ರಕ್ಷಿಸೌ, ಕಲ್ಯಾಣಿ,
ಊರ್ಮಿಳಾ ಮಾಂಗಲ್ಯಮಂ, ನಿನ್ನ ಸನ್ನಿಧಿಯ
ಅಮೃತಮಿರೆ, ಮರ್ತ್ಯಮಾದೊಡಮದಂ ಜೀವಮಂ
ಸೋಂಕಲರಿವುದೆ ಮೃತ್ಯು? ನಿಯತಿಯ ನಿಯಾಮಕನ
ಹೃದಯೇಶ್ವರಿಯೆ, ನಿನ್ನ ಶಕ್ತಿಗೆಲ್ಲಿಹುದೆಲ್ಲಿ?
ನೀನಾದ್ಯಶಕ್ತಿ: ನಿನ್ನಿಚ್ಛಾ ಪ್ರಕಾರಗಳೆ
ನಿಯಮಗಳ್‌ಪ್ರಕೃತಿಗೆ, ಗುಣಂಗಳ್‌ನಿಸರ್ಗಕೆ,
ವಿವೇಕನಿಷ್ಠೆಗಳೆಮ್ಮ ಬುದ್ಧಿಗೆ, ವಿಚಾರಜಂ                   ೪೭೦
ಮತಿಮಿತಿಯ ತತ್ತ್ವಸಿದ್ಧಾಂತಗಳಂ ಮೀರ್ವ
ಯೋಗಸಿದ್ಧಿಗಳಾತ್ಮಸಾಧಕಗೆ! ಮೃತ್ಯು ನೀಂ;
ನೀನಮೃತೆ! ನಿಯಮಮಯಿಯಾದೊಡಂ ಸ್ವಚ್ಛಂದೆ,
ಸರ್ವನಿಯಮಾತೀತೆ! ದೇವಿ, ಕರುಣಿಸು; ತಾಯೆ,
ಕೃಪೆಗೆಯ್‌! ಜಗನ್ಮಾತೆ, ನಿರ್ವಘ್ನಮಪ್ಪಂತೆ
ರಾಮಕಾರ್ಯಂ, ಸುಮಿತ್ರಾತ್ಮಜಪ್ರಾಣಮಂ
ಚೀತನಂಗೊಳಿಪ ಮೃತಸಂಜೀವಿನಿಯುನಿನ್ನ
ಔಷಧಾಶೀರ್ವಾದಗಳನೆನಗೆ ಕೃಪೆಮಾಡಿ
ನೀಡಮ್ಮ: ಮಣಿವನಿದೊ ಮರುತಾತ್ಮಜಂ!”
ಕೊಂಬೆ
ಕೈಯಾಯ್ತುಇ; ಪಸುರೆಲೆಗಳುಡೆಯ ಗಿಡವಾಯ್ತು ಮೆಯ್‌;                     ೪೮೦
ಪಾದರೂಪವನಾಂತುದದರ ಮೂಲಂ; ತುದಿಯೆ
ತಳೆದುದು ಮುಖಾಕೃತಿಯ, ಹಣೆಮಣಿದು ವಿನಯದಲಿ
ನಸು ಬಾಗಿದಾಂಜನೇಯನ ಕರಪುಟಾಂಜಲಿಗೆ
ಜಗುಳಿದುದು ಸಂಜೀವಿನಿಯ ಸುಧಾನುಗ್ರಹಂ,
ಸ್ಮಿತರೋಚಿಯೋಲುಜ್ವಲಿಸೆ ಓಷಧೀಗಿರಿಯ
ದಿವೌಕಸಜ್ಯೋತಿ!
ಕ್ಷಣಮಾದೊಡಂ ಅಸಹಿಷ್ಣು
ತಾನಲ್ತೆ ಉತ್ಕಟ ನಿರೀಕ್ಷೆ? ತುದಿಗಾಲಿನೊಳ್‌
ನಿಂದು ಕುದಿಕಲುದಿಯುತಿರ್ದಾ ಸುಷೇಣಾದಿಗಳ್‌
ಪರಮ ಪರಿತೋಷ ಪುಲಕಿತ ಗಾತ್ರರಪ್ಪಂತೆ,
ಜಯ ಕಪಿಧ್ವಜಕೆ ಜಯವೆಂಬುಲಿಯೆ ಘನಿಸಿತೆನೆ,                                  ೪೯೦
ಮಕೈದೋರ್ದನಾಂಜನೇಯಂ ಸಿದ್ಧಹಸ್ತದಲಿ.
ದಿವ್ಯ ಮಂತ್ರಂಗಳಿಂ ದಿವ್ಯೌಷಧಿಯ ಬಲದಿ
ಲಕ್ಷ್ಮಣನ ಮೆಯ್ಗೆ ಮೊದಲಿನ ವರ್ಣಮೊಯ್ಯನೆಯೆ
ಮೂಡಿತು ಸುಷೇಣಪ್ರಯೋಗದಿಂ. ನೋಡುತಿರೆ
ಜೀವಕಳೆ ಮಲರಿದುದು ಮೊಗಕೆ . ಉಸಿರಾಡಿದುದು.
ಹರಣಂ ಮರಳ್ದುದು ಕಳೇಬರಕೆ. ಚೇತರಿಸಿಸಪ್ರಜ್ಞನೆದ್ದನಕ್ಷತನೆನಲ್‌, “ಊರ್ಮಿಳಾ!
ಊರ್ಮಿಳಾ!” ಎನುತೆ ಪೆಂಡಿತಿಯ ಪೆಸರಂ ಕರೆದು,
ಕಾಣಲೆಳಸುವನಂತೆ ಕಣ್‌ಸುಳಿಸಿ ಸುತ್ತಣ್ಗೆ
ನೋಡಿ, ಜಾಂಬವನ ನುಡಿಗಳಿನರಿತು ನಡೆದುದಂ.                              ೫೦೦
ಪೇಳ್ದನೊಂದಾಶ್ಚರ್ಯಮಂ: “ಕಂಡೆನಾಂ, ದಿಟಂ,
ವಲ್ಕಲವನುಟ್ಟಿರ್ದಳಂ ನನ್ನ ಸತಿಯಂ,
ತಪಶ್ಚರ್ಯೆಯಿಂ ಪೂಜ್ಯೆಯಾಗಿರ್ದಳಂ! ತನ್ನ
ದಿವ್ಯ ಶಕ್ತಿಯೊಳೆನ್ನ ಹೃದಯಕಮೃತವನೆರೆದು,
ಮೇಘನಾದಾಭಿಚಾರಿಕ ಯಾಗಕೆನ್ನಾಯು
ತವಿಯದಂದದಿ ತೊಡಿಸಿದಳ್‌ತಪಃಕವಚಮಂ.
ಪೂಜ್ಯೆಯಂ ಪ್ರಾಣವಲ್ಲಭೆಯಾಗಿ ಪಡೆದ ನಾಂ
ಧನ್ಯನೈಸಲೆ ಧನ್ಯರೊಳ್‌! ಭಂಘಮಿನ್ನುಂಟೆ
ನಮ್ಮ ಸಂಗ್ರಾಮ ಸಿದ್ಧಿಗೆ? ನಡೆವಮೀ ಅಗ್ನಿ
ತಡೆಯನಿನ್‌!”
ಶತ್ರು ಸಂಹಾರ ದೀಕ್ಷಿತನಾ
ಸುಮಿತ್ರಾತ್ಮಜಂ ಪೂಣ್ದು ಪೊಕ್ಕನಾ ಪಾವಕನ                                    ೫೧೦
ಚಕ್ರಕೆ. ವಿಭೀಷಣಾದಿಗಳವನ ಬೆಂಬಿಡಿದು
ನಡೆದು ದಾಂಟಿದರನ್ನಮಯಮಂ. ನಿಶಾಚರಂ
ಕಾವಲಿಟ್ಟಾ ಪಿಶಾಚಗಳಲ್ಲಿ ಮುತ್ತಿಬರೆ.
ಪರಿಹರಿಸಿ, ಪೊಕ್ಕರಯ್‌ಪ್ರಾಣಮಯ ದುರ್ಗಮಂ
ಪ್ರೇತ ಭೂತಂಗಳಿಂ ಶಕ್ತಿಯಂತ್ರಂಗಳಿಂ
ದುರ್ಭೇದ್ಯಮಂ: ಚಿತ್ತವೈಕಲ್ಯಮುಣ್ಮಿದು
ಮದೋನ್ಮತ್ತನಾದಂ ನಳಂ. ಕಾಮತೃಷೆಯುಕ್ಕಿ
ರತಿಭಾವದಾವೇಗದಿಂ ವೃದ್ಧಜಾಂಬವಂ
ತೊರದನುದ್ಯೋಗಮಂ. ಕೀರ್ತಿಯಾಕಾಂಕ್ಷೆಯ                                   ೫೨೦
ಅಹಂಕಾರ ಭೂತ ಹೂಂಕಾರದ ವಿಕಾರಕೆ
ಅವಶಿಯಾದನಯ್‌ಸುಷೇಣಂ. ಸ್ಥಿರಪ್ರಜ್ಞನಾ
ಸಾತ್ತ್ವಿಕ ಮಹಾಮತಿ ವಿಭೀಷಣಂಗಾದುದು,
ಅನಯಚ್ಛಿಕಮೆನಲ್‌, ದೈತ್ಯ ಸಿಂಹಾಸನವನೇವ್ರ
ಲಂಕಾ ಕಿರೀಟ ಮೋಹಂ; ಬಯ್ಯತೊಡಗಿದನು
ಸುಗ್ರೀವನಂ ನಳಂ! ಪ್ರಣಯಾಭಿನಯಗಳಿಂ
ನರ್ತಿಸಿದನಾ ನರೆತ ಜಾಂಬವಂ! ಹನುಮನಂ
ಕರೆದು ಕರುಬಿಂ ಮೂದಲಿಸಿದನು ಸುಷೇಣಂ,
ತಿರಸ್ಕರಿಸುತಾತನ ಯಶೋವಿಭವ ಕಾರಣದ
ಸಾಸಂಗಳಂ! ಬ್ರಹ್ಮಚರ್ಯದ ಬಲಂ ಕಣಾ,                                        ೫೩೦
ವಜ್ರಾತ್ಮರಾಗಿರ್ದರಾಂಜನೇಯನುಮಂತೆ
ಸೌಮಿತ್ರಿಯುಂ! ಸಮಯವದು ವಿಷಮವಲ್ಲದಿರೆ
ನಗುತಿರ್ದರಳ್ಳೆಬಿರಿಯಲ್‌, ನಾಟ್ಯರಂಗದಲಿ
ಭಾವಾನುಭಾವಂಗಳಿಂ ವಿಭಾವಂಗಳಿಂ
ರಸವನಾಸ್ವಾದಿಸುವ ರಸಿಕ ಕೋವಿದರಂತೆ,
ಹಾಸ್ಯಾಭಿನಯಕಾ ನಳ ಸುಷೇಣ ಜಾಂಬವ
ವಿಭೀಷನರ ವಿಪರೀತ ವರ್ತನೆಗೆ! ಬೆರಗಾಗಿ
ನೋಡುತಿರೆ ರಾಮಾನುಜಂ , ಶಾಸ್ತ್ರವೇತ್ತನಾ                         ೫೪೦
ಯೋಗಸಿದ್ಧಂ ಪೇಳ್ದನಾತಂಗಾಂಜನೇಯಂ
ಬ್ರಹ್ಮವಿಜ್ಞಾನ: “ಚಿತ್ತದ ಅಧೋಲೋಕಮಂ
ಆತ್ಮಾವಲೋಕನ ವಿಚಾರಪಥದಿಂ ಪೊಕ್ಕು,
ಬೀಡುಗೊಂಡಿಹ ಜಟಿಲತಾ ಕುಟಿಲತಾ ತಮೋ
ವಿಕೃತಿಗಳನಧ್ಯಾತ್ಮದಾಲೋಕದಿಂ ತವಿಸದೀ
ಪ್ರಾಣದೂರ್ಧ್ವಕೆ ಪುಗುವರಂ ಪೀಡಿಸುವುವೀ
ದುರಾಠಶಾ ಪಿಶಾಚಗಳ್‌. ಜಯಿಸದಿವುಗಳನಿವರ್
ಬರಲರಿಯರೆಮ್ಲಮೊಡನೆ. ಸುಲಭಮಲ್ತಾ ಜಯಂ.
ಇಂದ್ರಜಿತು ಬಲ್ಲನೀ ಹದನನದರಿಂದಿದಂ
ತಂದೊಡ್ಡಿಹಂ. ತಳುವಿದರೆ ಬೆಳಗಪ್ಪುದಿರುಳ್‌;
ರಾಮಕಾರ್ಯಕೆ ಹಾನಿ; ಮತ್ತೆ, ಧರ್ಮಗ್ಲಾನಿ.
ಕರ್ಮ ಸವೆವಂತಿಲ್ಲಿ ಹೋರಾಡುತಿರಲಿವರ್,                                       ೫೫೦
ಪಿಂತಿರುಗಿ ಬರ್ಪಾಗಳಿವರಿಗೆ ವಿವೇಕಮಂ
ಬೋಧಿಸಿದೊಡೆಳ್ಚರ್ತು ಶುದ್ಧಬುದ್ಧಿಗಳಾಗಿ
ಕ್ಷೇಮ ಕರ್ಮಿಗಳಪ್ಪರಲ್ಲದಿರೆ ಮುಂದೆಮ್ಮ
ಕಜ್ಜಕಿವರಿಂದೆಡರ್ ತಪ್ಪದು ದಿಟಂ!”
ಮುಂದೆ
ಬೀಳ್ಕೊಳುತ್ತಿವರನಾ ಸೌಮಿತ್ರಿ ಮರುತಜರ್,
ಕಲ್ಪನೆಯ ಜಿಹ್ವೆ ತೊದಲುವ ಮಹಾದ್ಭುತಂಗಳಂ
ಧೃತಿಯಿನುಲ್ಲಂಘಿಸಿ, ಮನೋಮಯಪ್ರಾಕಾರ
ಭೀಕರ ಮಹಾಗ್ನಿಯಬುಧಿಯ ಕಂಡರಿಂದ್ರಜಿತು
ಕೃತಿಸಿರ್ದುದಂ. ಕರಗಿ ನೀರಾದ ಕರ್ಬುನದ
ಕಾಂತಿಯಂ ಕೀಳ್‌ಗೆಯ್ದುದದರ ಕಣ್ಣಿರಿದುರಿವ                                      ೫೬೦
ದೀಪ್ತಿ. ರವಿಮಂಡಲದ ಹೃದಯಪಿಂಡದೊಳಲೆವ
ವಿಲಯದೂಷ್ಮೆಯ ಭಯಂಕರಕೆ ತಾಂ ತಾಯೆನಲ್‌
ಝಾಡಿಸಿತು ಕೆಡುಝಳಂ. ಅದ್ರಿಯುನ್ನತಗಳೆನೆ
ಉಕ್ಕಿ ಚಲಿಸಿದುವಗ್ನಿಯೂರ್ಮಿಗಳ್‌, ಧೂಮಗಳ್‌
ಘ್ರಾಣಕಟು ವಾಸನೆಗಳಿಂ ಸೂಸಿ ಚಲಿಸಿದವು
ವಿವಿಧ ವರ್ಣಚ್ಛಾಯೆಗಳನುಗುವ ಭೀಕರ
ಮನೋಹರಾಭೀಳ ವಿನ್ಯಾಸದಿಂ. ನಿಂದರಾ
ಯೋಜನೋನ್ನತ ಮನೋಮಯ ಶರೀರಿಗಳಲ್ಲಿ
ಮಲೆಯನಾಡಿನ ಮಲೆಯ ನೆತ್ತಿಗಳ್‌ಮುಗಿಲಣೆದು
ನಿಲ್ದಂದದಿಂದಾ ಶಿಖಿಸಮುದ್ರನೇಮಿಯಲಿ. ಮೇಣ್‌                               ೫೭೦
ವೀಕ್ಷಿಸಿದರಲ್ಲಿಂದಮಾ ಸಮುದ್ರದ ಮಧ್ಯೆ
ಮೇಘನಾದನ ಗಿರಿಬೃಹದ್‌ಭೀಮಮೂರ್ತಿಯಂ
ದ್ವೀಪೋಪಮದ ವೇದಿಕಾಗ್ರದಲಿ. “ಅಲಂಘ್ಯಮೀ
ಅನಲಾಬ್ಧಿ, ಕಾಣ್‌, ಅಸುರವಿದ್ಯಾಪ್ರವೀಣನದೊ
ಸೃಷ್ಟಿಸುತ್ತಿರ್ಪನು ಲಯೋಗ್ರ ಯಂತ್ರಂಗಳಂ
ತಾಂಥ್ರಿಕ ಕರಾಳ ಮಂತ್ರಂಗಳಿಂ! ಮೂಡುತಿವೆ
ನೋಡದೊ ಹುತವಹಾಬ್ಧಿಯಿಂ. ಮೂಡುವುದೆ ತಡಂ
ಚಿತ್ತ ತತ್ತ್ವಾಧೀನಮಹ ಸೂಕ್ಷ್ಮರೂಪಂಬೆತ್ತು
ದೈತ್ಯವಿಜ್ಞಾನಿಯ ಮಹನ್‌ಮನಃಕೋಶಮಂ
ಪುಗುತಲಿವೆ ಮರಳಿ, ಮಂತ್ರವನುಸುರಿ, ತಂತ್ರತನು                            ೫೮೦
ನಾರಾಚಮಂ ಪೂಡಿ ಬಿಡಲೀ ಮನೋಜವದ
ಚಿಚ್ಛಕ್ತಯಂತ್ರಂಗಳುಣ್ಮಿ, ಬೆಂಕಿಯ ಮಳೆಯ
ಕಾರಿ, ಸಿಡಿಲಂ ಬಡಿದು, ಕಾಳಕೂಟವ ಚೆಲ್ಲಿ
ಕೊಲ್ವುವು ಕೋಟಿಕೋಟಿಯಂ, ಸಿದ್ಧಿಯಶ್ವಮಂ
ಬೆನ್ನೇರುವಾ ಕೋಟಿಕೋಟಿಯಂ,  ಸಿದ್ಧಿಯಶ್ವಮಂ
ಬೆನ್ನೇರುವಾ ಮುನ್ನಮೀ ಕಲಿ ನಿಶಾಚರಂ,
ಮುನಿ ದತ್ತ ಮಂತ್ರಾಸ್ತ್ರತತಿಗಳಂ ತುಡು; ನಿನ್ನ
ಸರ್ವ ಸಿದ್ಧಿಯನಿವನ ಮೋಕ್ಷಕ್ಕೆ ಬೇಳದಿರೆ
ನೀನದಂ ಪಡೆದುದೆ ನಿರರ್ಥಕಂ!”
ಲಕ್ಷ್ಮಣಗೆ
ಇಂತೆಂದ ಮರುತಜನ ಮಾತು ಹಿಂಚುವ ಮೊದಲ್‌                             ೫೯೦
ಗೋಚರಿಸಿದುವು ಮೇಘನಾದನ ಮನಃಶಕ್ತಿ
ಜಾತಂಗಳಗ್ನಿಭೂತಂಗಳಿವರಂ ಪಾಯ್ವ.
ಮೃಡದೃಢಪ್ರಲಯ ಜವಂಜವಿ. ಹೊಗೆವೆಂಕೆಯೆಂ
ಓಕರಿಸಿದುವು. ಮೀಳ್ತುವೋಕುಳಿಯುಗುಳ್ವವೋಲ್‌,
ಜೀರ್ಕೋವಿಗಳವೋಲ್‌ಸುದೀರ್ಘ ದೂರಕೆ ನೀಳ್ದ
ನಾಸಾ ಪುಟಂಗಳಿಂ. ತೇರು ಗಾಲಿಯ ತೆರನ
ಚಕ್ರ ಶತ ಶತಪಂಕ್ತಿ ಉರುಳ್ದುವಡಿಯಿಡುವಂತೆ
ಜವರವ ಭಯಾನಕಂ. ಸಿಡಿಗುಂಡು ಮಳೆಗಳಂ
ಕ,ಆರಿದುವು; ಸಿಡಿದುವು ಸಿಡಿಲ್‌ಮಿಂಚನಾಲಿಸುವ
ಕಣ್‌ಕೊಡಂಕೆಗಳುಡುಗುವಂತೆ. “ತಲ್ಲಣಿಸದಿರ್”
ಬಲ್ಲೆನಿದಕಾಂ ಪ್ರತೀಕಾರಮಂ. ಬಿಡುವೆನೀ                             ೬೦೦
ಕರ್ಬುರ ಕುಲಕುಠಾರ ಜಿಂಹವಿದ್ಯಾಬಲದ
ಬೆನ್ಗೆ ಬಡಿಗೆಗಳಪ್ಪ ದಿವ್ಯ ಬಲಗಳನೆನ್ನ
ಸಿದ್ಧಿ ಸಂಜಾತಂಗಳಂ. ತಳುವದೆಯೆ ನೀಂ
ಸರಳ್ಗಳಂ ತೊಡು; ಕೊರಳ್ಗಿಡು; ದಶಶಿರಾತ್ಮಜ
ಪ್ರಾಣಪ್ರದೀಪ ನಿರ್ವಾಣ ಸಿದ್ಧಿಯನಾಂತು
ಸಾರ್ಥಕಂಗೊಳಿಸು ಜನ್ಮಾರ್ಥಮಂ!” ಇಂತಾರ್ದು
ತೊಡಗಿದನು ಪಡಿಮಾಯೆಯಿಂ ಕೂಟರಣಮಂ
ಸಮೀರಜಂ. ತೊಟ್ಟನಸ್ತ್ರಂಗಳಂ ಸೌಮಿತ್ರಿ; ಮೇಣ್‌
ಬಿಟ್ಟನಿಂದ್ರನ ವೈರಿಗಾದೊಡೇನ್‌? ಆದ್ರಿಯೋಲ್‌
ತಾನಿರ್ದನಸ್ಖಲಿತ ಧೈರ್ಯದ್ರುಮಂಬೋಲ್‌                           ೬೧೦
ಮಹೇಂದ್ರಾರಿ. ಗತಿಗೆಡುತ್ತಿರ್ದ್ದಸ್ತ ತತಿಗಳಂ
ಕಂಡು ಧೃತಿಗೆಡುತಿರ್ಪ ಲಕ್ಷ್ಮಣಂಗಾಕಾಶವಾಕ್‌
ನುಡಿದಿಂದ್ರ ಪ್ರೇರಿತಂ; “ಊರ್ಮಿಳಾ ರಮಣ, ಕೇಳ್‌,
ವ್ಯರ್ಥ ಪ್ರಯತ್ನದಿಂ ಕಾಲಹರಣಂಗೆಯ್ದು
ಕಿಡಿಸದಿರಮರ ಕಾರ್ಯಮಂ. ರಜನಿ ತೀರ್ದುದೆನೆ
ತೀರ್ದುದೆಂದರಿ ಭುವನದಾಯ್ತು! ಯಾಮದ್ವಯಂ
ತೀರ್ದುವಾಗಳೆ! ದೇವ ದೇವರ್ಕಳೀ ನಿನ್ನ
ಸಾಹಸವನುತ್ಕಂಠರಾಗಿ ನೋಡುತ್ತಿಹರು, ಕಾಣ್‌,
ತಮ್ಮಳಿವುಳಿವು ನಿನ್ನ ಸಿಂಜಿನೀ ಸ್ಪಂದನದಿ
ಕಂಪಿಸುತಿಹುದನರಿತು! ಇಂದ್ರಜಿತುವೀತನಂ
ಕೊಲುವುವೇನನ್ಯಾಸ್ತ್ರತತಿ? ದೇವಶಕ್ತಿಗಳ್‌
ತಮ್ಮಾತ್ಮಸರ್ವಬಲಮಂ ನಿವೇದಿಸಲೆಂದು
ಕಾದಿಹರೊ ನಿನಗೆ; ಆ ನೆರವಿನಾಸೆಯಿರೆ, ತೆಗೆ
ಹೂಡು ಐಂದ್ರಾಸ್ತ್ರಮಂ! ಸರ್ವ ದೇವರ್ಕಳುಂ
ಪುಗುವರಾ ಬಾಣಮಂ; ತೆಗೆವರೀ ರಾಕ್ಷಸನ
ಲೋಕ ಸಂಕಟಕರಂ ಪ್ರಾಣಮಂ!” ಕೈಮುಗಿದು
ಗಗನದೇವತೆಗೆ, ಕೈಕೊಂಡನ್ಯಬಾಣಮಂ
ಬತ್ತಳಿಕೆಗಿಡಿದು, ಸೆಳೆದನೈಂದ್ರಾಸ್ತ್ರಮಂ, ಕೇಳ್‌,
ಬೆಳಗೆ ಭುವನಗಳಾಸ್ಯಮೆಳನಗೆ ತುಳುಂಕಿದೋಲ್‌!
ತೊಟ್ಟಿಲಿಗೆ ಕೈಗೆಯ್ದ ಹೊಂಗಗ್ಗರದ ಸರಂ                               ೬೩೦
ಘಲಿರೆನಲ್‌ಬೆಚ್ಚುತೆಳ್ಚರ್ತುಳುತ್ತಿರ್ದನಂ,
ಕಂದನಂ, ವಜ್ರಾರಿಯಂ ವಕ್ಷಕವುಂಚಿದಳ್‌
ಲಂಕೇಶ್ವರನ ಸೊಸೆ! ವಿಕಂಪಿಸಿತ್ತವಳ ತನು
ಮಾಗಿಯ ಕುಳಿರ್ಗಾಳಿ ಸೋಂಕಿಗೆ ಮಿಳಿರ್ವೆಳೆಯ
ಪೂವಳ್ಳಿಯೋಲ್‌. ಕದಡಿತಂತಃಕರಣಮಂ
ಅನಿರ್ದೇಶ್ಯಮೊರ್ ಭಯಂ. ನೆನೆದಳ್‌ನಿಜೇಶನಂ,
ತಡೆತಡೆದಮಂಗಳಾಶಂಕೆಯಂ. ನಡುನಡುಗಿ
ತನ್ನರ್ದೆಯೊಳಿರ್ದ್ದೈದೆದಾಳಿಯಸ್ಥಿರತೆಯಂ
ತಡೆಯುವಂತೊತ್ತಿದಳ್‌ಕಂದನೊಡಲಂ ತನ್ನ
ವಕ್ಷಕೆ ಸಹಸ್ರಾಕ್ಷಜೇತನರ್ಧಾಂಗಿಯಾ
ತರಳೆ ತಾರಾಕ್ಷಿ! ಕಂಬನಿ ನೇತ್ರಪಾತ್ರಮಂ                            ೬೪೦
ತುಂಬಿ ತುಳುಕುತೆ ತೊಯ್ಯುತಿರೆ ಕಪೋಲಾಂಬುಜದ
ಶೈವಲ ದುಕೂಲಮಂ, ಚಂಬಿಸಿದಳರ್ಭಕನ
ಮುಖಮಂ ಮುಹುರ್ರು‍ಹುರ್ ಮೂಕ ಶೋಕ ಭಯಾಗ್ನಿ
ಸಂತಪ್ತೆ!
ಸ್ವಪ್ನ ವಿದ್ಯುತ್‌ಕಶಾಘಾತಕೆನೆ
ಮಂಚದಿಂದುರುಳಿ ಬೀಳ್ವನಿತರೊಳಗೆಚ್ಚರ್ತ್ತು
ಕುಳ್ತ ಮಂಡೋದರಿಗೆ ಮನೆ ನಡುಗಿದಂತಾಯ್ತು, ಕೇಳ್‌,                        ೭೪೧
ಅಣುಘೋರಮಸ್ತ್ರಂ ಸಿಡಿಯಲಾ ಮಹಾಸ್ಫೋಟಕೆ
ಸುದೂರ ಪುಟಭೇದನಂ ಭಿತ್ತಿಭೂಕಂಪಿಪೋಲ್‌!
ಹೃದಯಗಿರಿ ನಡುಗಿತ್ತು; ಬುಡ ಸಡಿಲ್ದುರುಳ್ದುದು                                   ೬೫೦
ದಶಗ್ರೀವ ಧೈರ್ಯಾದ್ರಿ ಶಿಖರದ್ರುಮಂ! ನಡುಗಿತು
ಕನಕಲಂಕೆ; ಗೃಹಶಿರಗಳದಿರಿದುವು; ಉದುರಿದುವು
ದೈತ್ಯಧ್ವಜಾಳಿ! ಗಹ್ವರಕಲಂಠ ಘೋಷದಿಂ
ಕಂಪನಕೊರಲ್ದುವಯ್‌ಲಂಬತ್ರಿಕೂಟಗಿರಿ
ಭೂವಿಪಿನಗಳ್‌, ವಿಪತ್‌ಸೂಚಕಮೆನಲ್‌! ಕಡಲ್‌
ಕುದಿಗೊಂಡವೋಲುಕ್ಕಿ, ಕಡೆಗೊಂಡವೋಲ್‌! ಮೊರೆದು,
ನೊರೆತೆರೆಯನವ್ವಳಿಸಿದುದು ವೇಲೆ ಹಮ್ಮೈಸೆ!
ಬಂದುದತಿಕಾಯನಳಿವಿನ ವಾರ್ತೆಯಂ ಬಿಡದೆ
ಬೆಂಬತ್ತಿ ಮೇಘನಾದನ ಮಂತ್ರಮಂಟಪ
ಮಹಾಸ್ಫೋಟ ರಾವ ಭೀಕರ ವಾರ್ತೆಯುಂ, ಲಂಕೆ                   ೬೬೦
ಮಿಳ್ಮಿಳನೆ ಬೆಬ್ಬಳಿಸೆ, ಭಯಕೆ ನೆತ್ತರ್ ತಣ್ತವೋಲ್‌!

ಕಾಮೆಂಟ್‌ಗಳಿಲ್ಲ: