ಝಾನ್ಸಿ ರಾಣಿ ಲಕ್ಷ್ಮೀಬಾಯಿ

 ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜನ್ಮ ಮತ್ತು ಬಾಲ್ಯ ಎರಡನೇ ಬಾಜೀರಾವ ಪೇಶ್ವೆಯವರ ಸಂಬಂಧಿ ಚಿಮಾಜೀ ಅಪ್ಪಾರವರ ವ್ಯವಸ್ಥಾಪಕರಾಗಿದ್ದ ಮೋರೊಪಂತ ತಾಂಬೆ ಮತ್ತು ಭಗೀರಥಿ ಬಾಯಿಯವರಿಗೆ ಕಾರ್ತಿಕ ಕೃಷ್ಣ ೧೪, ೧೭೫೭ ವರ್ಷ ಅಂದರೆ ಆಂಗ್ಲ ಪಂಚಾಂಗನುಸಾರ ೧೯ ನವೆಂಬರ ೧೮೩೫ ರಂದು ರಾಣಿ ಲಕ್ಷ್ಮೀಬಾಯಿಯ ಜನನವಾಯಿತು. ಆಕೆಗೆ ‘ಮಣಿಕರ್ಣಿಕಾ’ ಎಂದು ಹೆಸರಿಟ್ಟರು. ಮೋರೋಪಂತರು ಅವಳನ್ನು ಪ್ರೀತಿಯಿಂದ ‘ಮನುತಾಯಿ’ ಎಂದು ಕರೆಯುತ್ತಿದ್ದರು. ಮನುತಾಯಿಯು ನೋಡಲು ಸುಂದರ ಮತ್ತು ತುಂಬಾ ಬುದ್ಧಿವಂತೆಯಾಗಿದ್ದಳು. ಮನುತಾಯಿಗೆ ೩-೪ ವರ್ಷವಿರುವಾಗಲೇ ಮಾತೃವಿಯೋಗ ಅನುಭವಿಸಬೇಕಾಯಿತು. ಅವಳು ಮುಂದೆ ಬ್ರಹ್ಮಾವರ್ತಾದ ಎರಡನೇ ಬಾಜೀರಾವ ಪೇಶ್ವೆಯವರ ಆಶ್ರಯದಲ್ಲಿ ಬೆಳೆದಳು.   ಲಕ್ಷ್ಮೀಬಾಯಿ ಯುದ್ಧಕಲೆಯ ಶಿಕ್ಷಣ ಬ್ರಹ್ಮಾವರ್ತಾದಲ್ಲಿ ನಾನಾಸಾಹೇಬ ಪೇಶ್ವೆ ತಮ್ಮ ಬಂಧು ರಾವಸಾಹೇಬರವರೊಂದಿಗೆ ಕತ್ತಿವರಸೆ, ಬಂದೂಕು ಚಲಾಯಿಸುವುದು ಮತ್ತು ಕುದುರೆ ಸವಾರಿಯನ್ನು ಕಲಿಯುತ್ತಿದ್ದರು. ಮನುತಾಯಿಯೂ ಸಹ ಅವರೊಂದಿಗೆ ಎಲ್ಲ ಯುದ್ಧಕಲೆಗಳನ್ನು ಕಲಿತು ಅದರಲ್ಲಿ ನೈಪುಣ್ಯ ಪಡೆದುಕೊಂಡಳು. ಅವರ ಜೊತೆಯಲ್ಲಿಯೇ ಮನುತಾಯಿ ವಿದ್ಯಾಭ್ಯಾಸವನ್ನು ಮಾಡಿದಳು.   ಝಾನ್ಸಿ ರಾಣಿ ಲಕ್ಷ್ಮೀಬಾಯಿ  ವಿವಾಹ ಮನುತಾಯಿಗೆ ೭ ವರ್ಷವಿರುವಾಗ ಝಾನ್ಸೀ ಸಂಸ್ಥಾನದ ಅಧಿಪತಿ ಗಂಗಾಧರರಾವ ನೆವಾಳಕರರವರೊಂದಿಗೆ ಅವಳ ವಿವಾಹವು ನೆರವೇರಿತು. ಮೋರೋಪಂತ ತಾಂಬೆಯವರ ಮನುತಾಯಿ ವಿವಾಹದ ನಂತರ ಝಾನ್ಸಿ ರಾಣಿಯಾದಳು. ವಿವಾಹದ ನಂತರ ಆಕೆಯನ್ನು ’ಲಕ್ಷ್ಮೀಬಾಯಿ’ ಎಂದು ಸಂಬೋಧಿಲಾಯಿತು.   ಪುತ್ರವಿಯೋಗದ ದುಃಖ ರಾಣಿ ಲಕ್ಷ್ಮೀಬಾಯಿಯು ಒಂದು ಗಂಡು ಮಗುವಿಗೆ ಜನ್ಮವಿತ್ತಳು. ಪುತ್ರನ ಜನನದಿಂದ ಅಧಿಕಾರಕ್ಕೆ ವಾರಸುದಾರ ಸಿಕ್ಕನೆಂದು ಗಂಗಾಧರರಾವಗೆ ತುಂಬಾ ಆನಂದವಾಯಿತು. ಆದರೆ ಮಗು ಮೂರು ತಿಂಗಳಿರುವಾಗಲೇ ಅಸುನೀಗಿತು. ಹಾಗಾಗಿ ರಾಣಿ ಲಕ್ಷ್ಮೀಬಾಯಿ ಮತ್ತು ಗಂಗಾಧರರಾವ ಇವರು ಪುತ್ರವಿಯೋಗ ಅನುಭವಿಸಬೇಕಾಯಿತು.   ಲಕ್ಷ್ಮೀಬಾಯಿ ಮಗನನ್ನು ದತ್ತು ತೆಗೆದುಕೊಳ್ಳುವುದು ಪುತ್ರವಿಯೋಗವನ್ನು ಸಹಿಸದೆ ಗಂಗಾಧರರಾವ ಹಾಸಿಗೆ ಹಿಡಿದರು. ಗಂಗಾಧರರಾವ ಅವರ ಇಚ್ಛೆಯಂತೆ ವಾರಸುದಾರನಾಗಿ ನೆವಾಳಕರ ವಂಶದ ಆನಂದರಾವನನ್ನು ದತ್ತು ಪಡೆದು ಅವನಿಗೆ ’ದಾಮೋದರರಾವ’ ಎಂದು ಹೆಸರಿಟ್ಟರು. ದತ್ತು ಪಡೆದ ನಂತರ ಕೆಲವು ಸಮಯದಲ್ಲೇ ಗಂಗಾಧರರಾವ ಮರಣ ಹೊಂದಿದರು. ಪತಿ ವಿಯೋಗದಿಂದ ರಾಣಿಲಕ್ಷ್ಮೀಬಾಯಿಯು ೧೮ ವರ್ಷದಲ್ಲೇ ವಿಧವೆಯಾದರು.   "ನನ್ನ ಝಾನ್ಸಿಯನ್ನು ನಾನು ಎಂದಿಗೂ ಕೊಡುವುದಿಲ್ಲ" ಆಂಗ್ಲರು ಹೊರಡಿಸಿದ ಹೊಸ ಆಜ್ಞೆಗನುಸಾರ ರಾಜ್ಯದ ಉತ್ತರಾಧಿಕಾರಿಯಾಗಿ ರಾಜನ ದತ್ತು ಪುತ್ರನಿಗೆ ಮಾನ್ಯತೆ ಇರಲಿಲ್ಲ. ಈ ಆಜ್ಞೆಯ ಕುರಿತು ರಾಣಿ ಲಕ್ಷ್ಮೀಬಾಯಿಗೆ ತಿಳಿಸಲು ಆಂಗ್ಲ ಅಧಿಕಾರಿ ಮೇಜರ ಎಲಿಸ ಭೇಟಿಯಾಗಲು ಬಂದನು. ರಾಣಿಗೆ ಸ್ವಂತ ಮಕ್ಕಳಿಲ್ಲದ ಕಾರಣ ಝಾನ್ಸಿಯನ್ನು ತಾವು ವಶಪಡೆಸಿಕೊಳ್ಳುವುದಾಗಿ ತಿಳಿಸಿದನು. ರಾಣಿಯು ಸಂತಾಪದಿಂದ ದುಃಖಿತಳಾದಳು ಆದರೆ ಮರುಕ್ಷಣವೇ ಸಿಂಹಿಣಿಯಂತೆ ಘರ್ಜಿಸುತ್ತಾ "ನನ್ನ ಝಾನ್ಸಿಯನ್ನು ನಾನು ಎಂದಿಗೂ ಕೊಡುವುದಿಲ್ಲ" ಎಂದು ಗರ್ಜಿಸಿದಳು! ಇದನ್ನು ಕೇಳಿದ ಮೇಜರ ಎಲಿಸನು ಭಯಭೀತನಾಗಿ ಬರಿಗೈಯಲ್ಲಿ ಹಿಂತಿರುಗಿದನು.   ೧೮೫೭ ಸಂಗ್ರಾಮ   ೧೮೫೭ರ ಜನವರಿಯಲ್ಲಿ ಪ್ರಾರಂಭಗೊಂಡ ಸ್ವಾತಂತ್ರ ಸಂಗ್ರಾಮವು ಮೇ ೧೦ನೇ ತಾರೀಖಿನಂದು ಮೀರತನಲ್ಲಿ ಕಾಲಿಟ್ಟಿತ್ತು. ಮೀರತ, ಬರೇಲಿಯು ಕೂಡಲೇ ಆಂಗ್ಲರಿಂದ ಸ್ವತಂತ್ರವಾಯಿತು. ರಾಣಿ ಲಕ್ಷ್ಮೀಬಾಯಿಯು ಆಂಗ್ಲರ ಸಂಭವನೀಯ ಹಲ್ಲೆಯಿಂದ ಝಾನ್ಸಿಯ ರಕ್ಷಣೆಗಾಗಿ ಸಿದ್ಧತೆಯನ್ನು ಮಾಡತೊಡಗಿದಳು. ಆಂಗ್ಲರು ರಾಣಿ ಲಕ್ಷ್ಮೀಬಾಯಿಯನ್ನು ಜೀವಂತವಾಗಿ ಹಿಡಿದು ತರಲು ಸರ್ ಹ್ಯೂ ರೋಜ್ರನ್ನು ನೇಮಿಸಿದರು. ಸರ್ ಹ್ಯೂ ರೋಜ್ ಇವರ ಸೈನ್ಯವು ಝಾನ್ಸಿಯಿಂದ ಮೂರು ಮೈಲು ದೂರದಲ್ಲಿ ಬೀಡುಬಿಟ್ಟಿತು ಮತ್ತು ರಾಣಿಗೆ ಶರಣಾಗಲು ಸಂದೇಶ ಕಳಿಸಿತು. ಆದರೆ ಝಾನ್ಸಿ ರಾಣಿಯು ಶರಣಾಗದೆ ತಾನೇ ಮುಂದೆ ನಿಂತು ಎಲ್ಲರಿಗೆ ಹೋರಾಡಲು ಸ್ಫೂರ್ತಿ ನೀಡಿದಳು. ಯುದ್ಧ ಪ್ರಾರಂಭವಾಯಿತು. ಝಾನ್ಸಿಯ ಸೈನಿಕರು ಸತತವಾಗಿ ಫಿರಂಗಿಯಿಂದ ಗುಂಡುಗಳನ್ನು ಆಂಗ್ಲರ ಮೇಲೆ ಸಿಡಿಸಲು ಪ್ರಾರಂಭಿಸಿದರು. ಮೂರು ದಿವಸದ ನಂತರವೂ ಆಂಗ್ಲರಿಗೆ ಕೋಟೆಯ ಮೇಲೆ ವಿಜಯ ಸಾಧಿಸಲು ಸಾಧ್ಯವಾಗದಿದ್ದಾಗ ಸರ್ ಹ್ಯೂ ರೋಜ್ ಮೋಸದ ಮಾರ್ಗ ಹಿಡಿದರು. ಹೀಗೆ ಆಂಗ್ಲರು ಝಾನ್ಸಿಯ ಮೇಲೆ ವಿಜಯ ಸಾಧಿಸಿದರು. ಆಗ ರಾಣಿಯು ದತ್ತು ಪುತ್ರ ದಾಮೋದರನನ್ನು ಬೆನ್ನಿಗೆ ಕಟ್ಟಿ ಕುದುರೆಯನ್ನೇರಿ ’ಜಯ ಶಂಕರ’ ಎಂಬ ಘೋಷಣೆಯನ್ನು ಮಾಡುತ್ತಾ ಆಂಗ್ಲ ಸೈನ್ಯವನ್ನು ಭೇದಿಸಿ ಮುನ್ನೆಡೆದಳು. ಈ ಸಮಯದಲ್ಲಿ ರಾಣಿ ಲಕ್ಷ್ಮೀಬಾಯಿಯ ತಂದೆ ಮೋರೋಪಂತರು ಅವಳೊಂದಿಗೆ ಇದ್ದರು. ಆದರೆ ಆಂಗ್ಲರೊಂದಿಗಿನ ಯುದ್ಧದಲ್ಲಿ ಮೋರೋಪಂತರು ಗಾಯಗೊಂಡು ಆಂಗ್ಲರ ಕೈಗೆ ಸಿಕ್ಕುಬಿದ್ದರು. ನಂತರ ಅವರಿಗೆ ಅವರನ್ನು ನೇಣಿಗೇರಿಸಲಾಯಿತು.   ಝಾನ್ಸಿ ರಾಣಿಯ ಮೂಲ ಚಿತ್ರ   ಕಾಲ್ಪಿಯ ಯುದ್ಧ ರಾಣಿ ಲಕ್ಷ್ಮೀಬಾಯಿಯು ೨೪ ಗಂಟೆಗಳಲ್ಲಿ ೧೦೨ ಮೈಲಿಗಳಷ್ಟು ದೂರ ಕುದುರೆ ಸವಾರಿ ಮಾಡಿ ’ಕಾಲ್ಪಿ’ ಎಂಬ ಊರು ತಲುಪಿದಳು. ಪೇಶ್ವೆಯವರು ಪರಿಸ್ಥಿತಿಯ ಅಭ್ಯಾಸವನ್ನು ಮಾಡಿ ರಾಣಿ ಲಕ್ಷ್ಮೀಬಾಯಿಗೆ ಎಲ್ಲ ರೀತಿಯ ಸಹಾಯ ಮಾಡಲು ತೀರ್ಮಾನಿಸಿದರು. ರಾಣಿ ಕೇಳಿದಷ್ಟು ಸೈನಿಕರನ್ನು ಅವಳಿಗೆ ನೀಡಿದರು. ಮೇ ೨೨ರಂದು ಸರ್ ಹ್ಯೂ ರೋಜ್ ಕಾಲ್ಪಿಯ ಮೇಲೆ ದಾಳಿ ಮಾಡಿದನು. ಯುದ್ಧ ಪ್ರಾರಂಭವಾದದ್ದನ್ನು ನೋಡಿ ರಾಣಿ ಲಕ್ಷ್ಮೀಬಾಯಿಯು ಕೈಯಲ್ಲಿ ಕತ್ತಿ ಹಿಡಿದು ಶರವೇಗದಿಂದ ಮುನ್ನುಗ್ಗಿದಳು. ರಾಣಿಯ ಹಲ್ಲೆಯನ್ನು ನೋಡಿ ಆಂಗ್ಲ ಸೈನ್ಯವು ಹಿಂದೆ ಓಡಿಹೋದರು. ಈ ಪರಾಭವದಿಂದ ದಿಗ್ಭ್ರಾಂತನಾದ ಸರ್ ಹ್ಯೂ ರೋಜ್ ಬಾಕಿ ಇದ್ದ ಸೈನ್ಯವನ್ನು ಯುದ್ಧಭೂಮಿಗೆ ಕೂಡಲೇ ಕರೆಸಿದನು. ಹೊಸ ಸೈನ್ಯದ ಮುಂದೆ ದಣಿದಿದ್ದ ಕ್ರಾಂತಿಕಾರರ ಆವೇಶ ಕಡಿಮೆಯಾಯಿತು. ಮೇ ೨೪ರಂದು ಕಾಲ್ಪಿಯನ್ನು ಆಂಗ್ಲರು ತಮ್ಮ ವಶಕ್ಕೆ ಪಡೆದುಕೊಂಡರು. ಕಾಲ್ಪಿಯಲ್ಲಿ ಪರಾಭವಗೊಂಡ ರಾವಸಾಹೇಬ ಪೇಶ್ವೆ, ಬಾಂದ್ಯದ ನವಾಬ, ತಾತ್ಯಾ ಟೋಪೆ, ಝಾನ್ಸೀಯ ರಾಣಿ ಮತ್ತು ಇತರ ಪ್ರಮುಖ ಸರದಾರರೆಲ್ಲರು ಗೊಪಾಳಪುರದಲ್ಲಿ ಒಂದು ಕಡೆ ಸೇರಿದರು. ಝಾನ್ಸಿ ರಾಣಿಯು ಗ್ವಾಲಿಯರನ್ನು ಆಂಗ್ಲರಿಂದ ವಶಕ್ಕೆ ಪಡೆಯಬೇಕೆಂದು ಸೂಚನೆ ನೀಡಿದಳು. ಗ್ವಾಲಿಯರನ ರಾಜ ಶಿಂದೆ ಬ್ರಿಟಿಷರ ಅನುಕರಣೆ ಮಾಡುತ್ತಿದ್ದರು. ರಾಣಿ ಲಕ್ಷ್ಮೀಬಾಯಿಯು ಮುಂದಾಳತ್ವ ವಹಿಸಿ ಗ್ವಾಲಿಯರನ್ನು ಗೆದ್ದು ಪೇಶ್ವೆಯವರ ಕೈಗಿಟ್ಟಳು.   ಸ್ವಾತಂತ್ರವೀರರ ಬಲಿದಾನ ಗ್ವಾಲಿಯರನ್ನು ರಾಣಿ ಗೆದ್ದ ಸುದ್ದಿ ಸರ್ ಹ್ಯೂ ರೋಜ್ಗೆ ತಲುಪಿತು. ಇನ್ನು ಸಮಯ ವ್ಯರ್ಥ ಮಾಡಿದರೆ ಆಂಗ್ಲರ ನಾಶವಾಗುವುದೆಂದು ಅರಿತು, ಅವನು ತನ್ನ ಸೈನ್ಯವನ್ನು ಗ್ವಾಲಿಯರನ ಕಡೆ ತಿರುಗಿಸಿದನು. ಜೂನ್ ೧೬ರಂದು ಆಂಗ್ಲರ ಸೈನ್ಯವು ಗ್ವಾಲಿಯರ‍ ತಲುಪಿತು. ರಾಣಿ ಲಕ್ಷ್ಮೀಬಾಯಿ ಮತ್ತು ಪೇಶ್ವೆಯವರು ಸರ್ ಹ್ಯೂ ರೋಜ್ನನ್ನು ಎದುರಿಸಲು ಸಿದ್ಧರಾದರು. ಗ್ವಾಲಿಯರನ ಪೂರ್ವ ಭಾಗವನ್ನು ರಕ್ಷಿಸುವ ಸಂಪೂರ್ಣ ಹೊಣೆಯನ್ನು ರಾಣಿ ತನ್ನ ಮೇಲೆ ಹೊತ್ತಳು. ಯುದ್ಧದಲ್ಲಿ ಲಕ್ಷ್ಮೀಬಾಯಿಯ ಧೈರ್ಯ ನೋಡಿ ಸೈನಿಕರಿಗೆ ಸ್ಫೂರ್ತಿ ಸಿಕ್ಕಿತು. ರಾಣಿಯ ದಾಸಿಯರಾದ ಮಂದಾರ ಮತ್ತು ಕಾಶಿಯೂ ಪುರುಷರ ವೇಷ ಧರಿಸಿ ಯುದ್ಧ ಮಾಡಲು ಬಂದರು. ರಾಣಿಯ ಶೌರ್ಯದಿಂದಾಗಿ ಆ ದಿನ ಆಂಗ್ಲರು ಪರಾಭವ ಹೊಂದಬೇಕಾಯಿತು. ಜೂನ್ ೧೮ ರಂದು ರಾಣೀ ಲಕ್ಷ್ಮೀಬಾಯಿಯ ಶೌರ್ಯದಿಂದ ಹತಾಶರಾದ ಆಂಗ್ಲರು ಗ್ವಾಲಿಯರನ್ನು ಎಲ್ಲ ದಿಕ್ಕುಗಳಿಂದ ಒಟ್ಟಿಗೆ ಆಕ್ರಮಿಸಿದರು. ಆಗ ರಾಣಿಯು ಆಂಗ್ಲರಿಗೆ ಶರಣಾಗದೆ ಅವರನ್ನು ಬೇಧಿಸಿ ಹೊರಗೆ ಹೋಗಲು ನಿರ್ಧರಿಸಿದಳು. ಶತ್ರುಗಳನ್ನು ಬೇಧಿಸಿ ಹೊರಹೋಗುವಾಗ ಒಂದು ನೀರಿನ ಪ್ರವಾಹ ನಡುವೆ ಬಂದಿತು. ರಾಣಿಯ ಬಳಿ ಯಾವಾಗಲೂ ಇರುವ ಕುದುರೆ ’ರಾಜರತ್ನ’ ಇರದ ಕಾರಣ ಮತ್ತೊಂದು ಕುದುರೆಯ ಜೊತೆ ರಾಣಿಯು ಯುಧ್ಹಕ್ಕೆ ಇಳಿದಿದ್ದಳು. ಆ ಕುದುರೆಗೆ ನೀರಿನ ಪ್ರವಾಹ ದಾಟಲು ಸಾಧ್ಯವಾಗದೆ ಅಲ್ಲಿಯೇ ಸುತ್ತಲೂ ಶುರುಮಾಡಿತು. ಮುಂದೇನಾಗಬಹುದೆಂದು ಅರಿತ ರಾಣಿ ತನ್ನನ್ನು ಬೆಂಬತ್ತಿ ಬರುತ್ತಿದ್ದ ಸೈನ್ಯವನ್ನು ಎದುರಿಸಿದಳು. ಆಕೆಗೆ ಬಿದ್ದ ಹೊಡೆತದಿಂದಾಗಿ ರಕ್ತಸಿಕ್ತಳಾಗಿ ಕೆಳಗೆ ಬಿದ್ದಳು. ಪುರುಷರ ವೇಷ ಧರಿಸಿದ್ದ ಕಾರಣ ಸೈನಿಕರಿಗೆ ಅದು ರಾಣಿ ಎಂಬುದು ತಿಳಿಯಲಿಲ್ಲ. ಹಾಗಾಗಿ ಅವಳು ಬಿದ್ದ ತಕ್ಷಣ ಆಂಗ್ಲರು ಹೊರಟು ಹೋದರು. ರಾಣಿಯ ಸೇವಕರು ಆಕೆಯನ್ನು ಸಮೀಪವಿದ್ದ ಗಂಗಾದಾಸರ ಮಠಕ್ಕೆ ಕರೆದುಕೊಂಡು ಹೋದರು ಮತ್ತು ಆಕೆಗೆ ಗಂಗಾಜಲವನ್ನು ನೀಡಿದರು. ತನ್ನ ಶರೀರ ಆಂಗ್ಲರ ಕೈಗೆ ಸಿಗಬಾರದೆಂಬ ಇಚ್ಛೆಯನ್ನು ವ್ಯಕ್ತಪಡಿಸಿ ರಾಣಿಯು ವೀರಮರಣವನ್ನಪ್ಪಿದಳು. ಜಗತ್ತಿನಾದ್ಯಂತ ಕ್ರಾಂತಿಕಾರರಿಗೆಲ್ಲ ಭಗತ ಸಿಂಗನ ತ್ಯಾಗ, ನೇತಾಜಿ ಸುಭಾಶ್ಚಂದ್ರ ಬೋಸ್ ರವರ ಸಂಘಟನಾ ಶಕ್ತಿ ಹಾಗೆಯೇ ಝಾನ್ಸಿರಾಣಿಯ ಶೌರ್ಯವು ಸ್ಫೂರ್ತಿಯನ್ನು ನೀಡಿದೆ. ಇಂತಹ ವೀರಾಂಗನೆ ರಾಣಿಲಕ್ಷ್ಮೀಬಾಯಿಯ ಚರಣಗಳಲ್ಲಿ ನಮನಗಳು. 
೧೮೫೭ ಸ್ವಾತಂತ್ರ ಸಂಗ್ರಾಮದಲ್ಲಿ ಪ್ರಾಣಾರ್ಪಣೆ ಮಾಡಿದ ವೀರರ ಗೌರವಾರ್ಥ ಭಾರತ ಸರಕಾರ ಬಿಡುಗಡೆ ಮಾಡಿದ ಅಂಚೆಚೀಟಿ      ಝಾನ್ಸಿ ರಾಣಿಯ ಗೌರವಾರ್ಥ ಭಾರತದ ಅಂಚೆಚೀಟಿ 

ಕಾಮೆಂಟ್‌ಗಳಿಲ್ಲ: