ಮಲೆಗಳಲ್ಲಿ ಮದುಮಗಳು-೩೩

ಬೆಟ್ಟಳ್ಳಿಯ ಹೊಲೆಯರ ಕೇರಿಯಲ್ಲಿ ಆಗತಾನೆ ಒಡ್ಡಿಗಳಿಂದ ಹೊರಟ ಊರುಹಂದಿಗಳು, ಸಲಗ – ದಡ್ಡೆ – ಮಣಕ – ಮರಿಗಳು, ಗುರುಗಳು ಕುಂಯಿಕುಂಯಿ ಸದ್ದು ಮಾಡುತ್ತಾ ಗುಡಿಸಲು ಗುಡಿಸಲಿನ ನಡುವಣ ಸಂಧಿಗಳಲ್ಲಿ ದಿನನಿತ್ಯದ ಪದ್ಧತಿಯಂತೆ ಆಹಾರಾನ್ವೇಷನೆಯಲ್ಲಿ ತೊಡಗಿದ್ದುವು. ಕೋಳಿಗಳೂ, ಹುಂಜ – ಹೇಟೆ – ಸಳಗ – ಮರಿ – ಹೂಮರಿ, ಗೂಡುಗಳಿಂದ ಗೊತ್ತುಗಳಿಂದ ಹೊರಗೆ ಹಾರಿ ಕೊಚ್ಚೆಯ ಸ್ಥಳಗಳಲ್ಲಿ ಕೆದಕುವ ಕೆಲಸಕ್ಕೆ ಕಾಲು ಕೊಕ್ಕು ಹಾಕಿದ್ದುವು. ಅಡುಗೆ ಒಲೆಗಳಿಂದ ಹೊಮ್ಮಿದ ನೀಲಿ ಹೊಗೆ ಗುಡಿಸಲುಗಳಿಗೆ ಹೊದಿಸಿದ್ದ ಹುಲ್ಲಿನ ಬಿರುಕುಗಳಿಂದ ಮೆಲ್ಲಗೆ ಹೊರಟು ಗಾಳಿಯಲ್ಲಿ ತಿಳ್ಳೆಯಾಟವಾಡಲು ಮೊದಲುಮಾಡಿತ್ತು. ಬೆಳಗಿನ ಹೊತ್ತಿನಲ್ಲಿ ಅಂತಹ ಕೇರಿಗಳಿಗೆ ಸ್ವಾಭಾವಿಕವಾಗಿರುತ್ತಿದ್ದ ದುರ್ವಾಸನೆಗಳ ಒಕ್ಕೂಟ ಆ ಕೇರಿಯವರ ಮೂಗಿಗೆ ಅಗೋಚರವಾಗಿದ್ದರೂ ಹೊರಗಿನಿಂದ ಬರುವವರಿಗೆ ಮೂಗು ಮುಚ್ಚಿಕೊಳ್ಳುವಂತೆ ತುಂಬಿ ಹಬ್ಬಿತ್ತು.
ಆದ್ದರಿಂದಲೆ ದೇವಯ್ಯಗೌಡರು ಕಳಿಸಿದ್ದ ಗಟ್ಟದ ತಗ್ಗಿನ ಸೆಟ್ಟಿಯಾಳು ಮೂಗು ಮುಚ್ಚಿಕೊಂಡು ಬಾಯಿಂದಲೆ ಉಸಿರಾಡುತ್ತಾ ನಿಂತಿದ್ದು, ಬಚ್ಚನ ಬಿಡಾರದ ಮುಂದೆ. ಬಚ್ಚನಿಗೆ ಗೌಡರು ಕಳಿಸಿದ್ದ ಸಂದೇಶವನ್ನು ನೀಡಿ, ಹೆಚ್ಚುಹೊತ್ತು ನಿಲ್ಲಲು ಸಾಧ್ಯವಾಗದೆ, ಅವನು ಹೊರಟುಹೋದ ಅನಂತರ, ತನ್ನ ಸಾರಥಿತ್ವದ ಸಮವಸ್ತ್ರವನ್ನು ಧರಿಸಿ, ತನಗೆ ಹೆಣ್ಣು ಕೊಡಬೇಕಾಗಿದ್ದ ಭಾವಿ ಮಾವ ದೊಡ್ಡಬೀರನ ಬಿಡಾರಕ್ಕೆ ನಡೆದು, ಗೌಡರು ಈ ಕೂಡಲೆ ಬರಬೇಕೆಂದು ಹೇಳಿಕಳುಹಿಸಿದ್ದ ವಾರ್ತೆಯನ್ನು ಠೀವಿಯಿಂದ ತಿಳಿಸಿ, ಹೆಚ್ಚಿನ ಸಂಭಾಷಣೆಗೆ ತೊಡಗುವುದಕ್ಕೆ ಅವಕಾಶವಿಲ್ಲದಷ್ಟು ಬಿಗುಮಾನದಿಂದಲೂ ಬೇಗದಿಂದಲೂ ಹಿಂದಿರುಗಿ, ಒಡೆಯರ ಮನೆಯ ಕಡೆಗೆ ಬಿರುಬಿರನೆ ಕಾಲುಹಾಕಿದ್ದನು.
ಹಿಂದಿನ ದಿನ ಸಾಯಂಕಾಲ ದೇವಯ್ಯಗೌಡರ ಬೈಸಿಕಲ್ಲು ಕಲಿಕೆಯ ಸಾಹಸದಲ್ಲಿ ಭಾಗಿಯಾಗಿ, ಬಿದ್ದು, ಗಾಯವಾಗಿ, ಮೈಕೈ ನೋವಿನಿಂದ ನರಳುತ್ತಿದ್ದ ಮುದುಕ, (ಆ ಕಾಲದಲ್ಲಿದ್ದ ಮಲೆನಾಡಿಗರ ಆಯುಃಪ್ರಮಾಣದ ದೃಷ್ಟಿಯಿಂದ ಅವನನ್ನು ‘ವಯಸ್ಸಾದವನು’ ಎಂದು ಹೇಳುವುದಕ್ಕಿಂತ ‘ಮುದುಕ’ ಎಂದು ಹೇಳಿದರೇ ಸತ್ಯಕ್ಕೆ ಹೆಚ್ಚು ನಿಕಟವಾಗುತ್ತದೆ.) ದೊಡ್ಡಬೀರ, ಇನ್ನೂ ತನ್ನ ಕಂಬಳಿಹಾಸಗೆಯಿಂದ ಎದ್ದಿರಲಿಲ್ಲ. ಅಲ್ಲದೆ ತನ್ನ ಮಗಳು ತಿಮ್ಮಿ, ಮದುಮಗಳಾಗಿರಬೇಕಾಗಿದ್ದವಳು, ಹಠಾತ್ತನೆ ಕಾಣೆಯಾಗಿದ್ದದ್ದೂ, ಅವಳಿಗಾಗಿ ಕೆರೆ ಬಾವಿ ಕಾಡುಗಳಲ್ಲಿ ನಡುರಾತ್ರಿಯವರೆಗೆ ಹುಡುಕಿ ಹತಾಶರಾಗಿದ್ದದ್ದೂ ಮುದುಕನ ಮನಸ್ಸನ್ನು ಕದಡಿ, ದಣಿಸಿ, ಅದನ್ನು ದೈನ್ಯ ಸ್ಥಿತಿಗೆ ತಂದಿತ್ತು.
ಗೌಡರು ಹೇಳಿಕಳುಹಿಸಿದ್ದು ಏತಕ್ಕೆ ಎಂಬುದನ್ನು ಒಡನೆಯೆ  ಊಹಿಸಿ, ದೊಡ್ಡಬೀರ ಹೆಂಡತಿಯನ್ನು ಕರೆದು “ಹೋಗೆ, ಸಣ್ಣಬೀರನ್ನ ಬರಾಕ್ಹೇಳೆ” ಎಂದನು. ಹಿರಿಯಮಗ ಸಣ್ಣಬೀರ ಬರಲು “ಗೌಡರು ಹೇಳಿಕಳಿಸ್ಯಾರೆ. ನಂಗೆ ಮೈಕೈ ನೋವು. ಏಳಾಕೆ ಆಗದಿಲ್ಲ. ನೀನೆ ಹೋಗಿ ಬಾ” ಎನ್ನಲು ಸಣ್ಣಬೀರ ತಾನೊಬ್ಬನೆ ಹೋಗಲು ಒಪ್ಪಲಿಲ್ಲ. ತಿಮ್ಮಿ ಕಣ್ಮರೆಯಾಗುವ ವಿಚಾರಕ್ಕಾಗಿಯೆ ತನ್ನ ಅಪ್ಪನನ್ನು ಕರೆಯಿಸುತ್ತಿರುವುದು ಎಂಬುದೂ ಅವನಿಗೂ ಗೊತ್ತಾಯಿತು. ತಿಮ್ಮಿ ಕಾಣೆಯಾದುದಕ್ಕೆ ನಿಜವಾದ ಕಾರಣ ಅವಳು ಕೆರೆ ಬಾವಿಗಳಲ್ಲಿ ಆತ್ಮಹತ್ಯೆ ಮಾಡಿಕೊಂಡದ್ದಲ್ಲ. ಕಿಲಸ್ತರ ಜಾತಿಗೆ ಸೇರಲಿರುವ ಬಚ್ಚನಿಗೆ ಮದುವೆ ಮಾಡಿಕೊಡಲು ಇಷ್ಟವಿಲ್ಲದೆ ಅವಳ ತಂದೆತಾಯಿಯವರು ಅವಳನ್ನು ಗುಟ್ಟಾಗಿ ಅಡಗಿಸಿಟ್ಟು, ಅವಳೆಲ್ಲಿಯೊ ಕಾಣೆಯಾಗಿದ್ದಾಳೆ ಎಂಬ ಗುಲ್ಲು ಹಬ್ಬಿಸಿದ್ದಾರೆ ಎಂಬ ಗುಸುಗುಸು ಸುದ್ದಿಯೂ ಗುಡಿಸಲುಗಳಲ್ಲಿ ಹಬ್ಬಿತ್ತು. ಜೊತೆಗೆ ಹಿಂದಿನ ದಿನ ಸಂಜೆ ಬೈಸಿಕಲ್ಲು ಸವಾರಿಯಾಗುತ್ತಿದ್ದಾಗ ಬೆಟ್ಟಳ್ಳಿ ಹಕ್ಕಲಿನಲ್ಲಿ ನೆರೆದಿದ್ದ ಜನಸಂದಣಿಯಲ್ಲಿ ಗುತ್ತಿಯನ್ನು ಕಂಡಿದ್ದವರನೇಕರು ತಿಮ್ಮಿ ಕಾಣೆಯಾಗಿದ್ದುದಕ್ಕೆ ಅವನೇ ಕಾರಣವಾಗಿರಬೇಕೆಂದೂ ಊಹಿಸಿ ನಂಬಿದ್ದರು. ಏಕೆಂದರೆ, ಸಿಂಬಾವಿ ಗುತ್ತಿಯೆ ತಿಮ್ಮಿಯನ್ನು ಮದುವೆಯಾಗುತ್ತಾನೆ ಎಂದೂ, ತಿಮ್ಮಿಯೂ ಅವಳ ತಾಯಿ ಸೇಸಿಯೂ ಗುತ್ತಿಯ ಪರವಾಗಿಯೆ ಇದ್ದಾರೆಂದೂ ಕೇರಿಯವರಿಗೆ ಸಾಧಾರಣವಾಗಿ ತಿಳಿದ ವಿಷಯವಾಗಿತ್ತು. ದೊಡ್ಡಬೀರ ಮೊದಮೊದಲು ಗೌಡರ ಹೆದರಿಕೆಗೆ ತನ್ನ ಮಗಳನ್ನು ಕೇರಿಯ ಹೊರಗೆ ಕೊಡುವುದಿಲ್ಲ ಎಂದು ಬಚ್ಚನಿಗೆ ಕೊಡಲು ಸಮ್ಮತಿಸಿದ್ದರೂ ಅವನು ದೇವಯ್ಯಗೌಡರೊಡನೆ ಕಿಲಸ್ತರನಾಗುತ್ತಾನೆ ಎಂಬ ವದಂತಿ ಹಬ್ಬಿದ ಮೇಲೆ ಮನಸ್ಸು ಬದಲಾಯಿಸಿದ್ದನು. ಈ ಎಲ್ಲ ಒಳಗುಟ್ಟಿನ ವಿಷಯಗಳನ್ನೂ ಬಚ್ಚನಿಂದ ಕೇಳಿ ತಿಳಿದಿದ್ದ ದೇವಯ್ಯ ತನ್ನ ತಂದೆ ಕಲ್ಲಯ್ಯಗೌಡರಿಗೆ ಹೇಳಿ, ದೊಡ್ಡಬೀರನಿಗೆ ಕರೆಕಳಿಸಿದ್ದನು. ಏನಾದರೂ ಹೆಚ್ಚು ಕಡಿಮೆಯಾದರೂ ದೊಡ್ಡಬೀರ ಮುದುಕನಾದ್ದರಿಂದ ಅವನಿಗೆ ದೇಹ ದಂಡನೆಯಾಗುವ ಸಂಭವ ಅಷ್ಟಾಗಿರಲಿಲ್ಲ. ಆದರೆ ಸಣ್ಣಬೀರನಿಗೆ ತನ್ನ ವಯೋಧರ್ಮದಿಂದ ಆ ರಕ್ಷೆ ಪಡೆಯುವ ಧೈರ್ಯವಿರಲಿಲ್ಲ. ಅವನಿಗೆ ಕಲ್ಲಯ್ಯಗೌಡರ ಮತ್ತು ದೇವಯ್ಯಗೌಡರ ಸಿಟ್ಟಿನ ಬೆತ್ತದ ರುಚಿಯನ್ನು ಅನುಭವಿಸುವ ಸಂದರ್ಭಗಳೂ ಹಿಂದೆ ಒಂದೆರಡು ಸಾರಿ ದೊರೆಕೊಂಡಿದ್ದುವು. ಆದ್ದರಿಂದಲೆ ಅವನು ತಾನೊಬ್ಬನೆ ಹೋಗಿ ಗೌಡರ ಕೋಪಕ್ಕೆ ಎದುರಾಗಲು ಒಪ್ಪಲಿಲ್ಲ.
ಅಂತೂ ಕಡೆಗೆ ತಂದೆಮಕ್ಕಳಿಬ್ಬರೂ ಹೋಗುವುದೆಂದು ನಿರ್ಣಯವಾಯಿತು. ಕಿರಿಯ ಮಗನಿಗೆ ಹೇಳಿಕಳಿಸಿದರೆ ಅವನು ಬಿಡಾದಿಂದಲೆ ಹೊರಡಲಿಲ್ಲ. ತನ್ನ  ಹೆಂಡತಿ ಚಿಕ್ಕಪುಟ್ಟಿಯ ಕೈಲಿ ತನಗೆ ‘ಸಣ್ಣಕೆ ಒಡಲ ಜರ ಬಂದದೆ’ ಎಂದು ಹೇಳಿ ಕಳುಹಿಸಿ ನುಣುಚಿಕೊಂಡಿತು.
ದೊಡ್ಡಬೀರನನ್ನು ಮೆಲ್ಲಗೆ ನಡೆಸಿಕೊಂಡು ಸಣ್ಣಬೀರನು ಬೆಟ್ಟಳ್ಳಿ ಮನೆಯ ಹೊರ ಚಾವಡಿಗೆ ಸೇರಿ, ಅಲ್ಲಿ ಕಂಬದ ಬುಡದಲ್ಲಿ ಕಂಬಳಿ ಹಾಕಿಕೊಂಡು ಇಬ್ಬರೂ ಕೂತರು. ಆಗಲೆ ಚಾವಡಿಯಲ್ಲಿ ಬೀಡಿಯ ವಾಸನೆಯಿದ್ದುದನ್ನು ಗಮನಿಸಿ, ಸಣ್ಣಬೀರನಿಗೆ ಭಯಾಶಂಕೆಯಾಗಿ, ದೊಡ್ಡಬೀರನನ್ನು ಕುರಿತು “ಅಪ್ಪಾ, ಯಾಕೋ ಬೀಡಿವಾಸನೆ ನೋಡಿದ್ರೆ, ಸಾಬರನ್ನ ಕರೆಸಿದ್ಹಾಂಗೆ ಕಾಣ್ತದೋ! ಹೊತಾರೆ ಎಡದ ಮಗ್ಗುಲಾಗೆ ಎದ್ದಡನೋ ಏನೋ ನಾನು? ಏನು ಗಿರಾಚಾರ ಕಾದಿದೆಯೋ? ಅವತ್ತು ಹೊಡೆಸಿದ್ರಲ್ಲಾ ಮಗ್ಗಲು ಮುರಿಯ ಹಾಂಗೆ, ಹೊನ್ನಳ್ಳಿಹೊಡ್ತಾ….” ಎನ್ನುತ್ತಿದ್ದವನು ಬೆಚ್ಚಿ ಬೆದರಿ ದೂರ ನೋಡಿ ಹೇಳಿದನು “ನೋಡಿದ್ಯಾ? ನಾ ಹೇಳಿದ್ದು ಸುಳ್ಳೊ ಬದ್ದೋ? ಆ ಇಜಾರದ ಸಾಬ್ರು, ಲುಂಗೀಸಾಬ್ರು ಇಬ್ರೂ ಬಂದಾರೆ!”
ಅಷ್ಟರಲ್ಲಿ ಒಳಗಿನ ಅಂಗಳದಿಂದ ಆ ಇಬ್ಬರು ಹೊನ್ನಾಳಿ ಸಾಬಿಗಳೂ ಈ ಇಬ್ಬರೂ ಕುಳಿತಿದ್ದಲ್ಲಿಗೆ ಬಂದು ಸ್ವಲ್ಪ ದೂರದಲ್ಲಿ ನಿಂತರು. ಕಟುಕನು ತಾನು ಕಡಿಯಲಿರುವ ಕುರಿಗಳು ಪುಷ್ಟವಾಗಿವೆಯೋ ಇಲ್ಲವೋ ಎಂಬುದನ್ನು ಅರಿಯಲು ಅವುಗಳನ್ನು ನೋಡುವಂತೆ ದೊಡ್ಡಬೀರ ಸಣ್ಣಬೀರನನ್ನು ದುರುದುರುದುರನೆ ನೋಡಿದರು. ಸಿಂಡಮೂಗಿನ ಕುಳ್ಳ ಲುಂಗೀಸಾಬಿಯ ಮುಖದಲ್ಲಿ ಪರಿಹಾಸ್ಯದ ನಗೆ ತನ್ನನ್ನು ಮೊದಲಿಸುತ್ತಿದ್ದಂತೆ ಭಾಸವಾಯಿತು.ಸಣ್ಣಬೀರನಿಗೆ. ಆದರೆ ಬಲಿಷ್ಠಕಾಯನೂ ದೀರ್ಘದೇಹಿಯೂ ಆಗಿದ್ದ ಇಜಾರದ ಸಾಬಿಯ ಮುಖದಲ್ಲಿ ದೌಷ್ಟಕ್ರೌರ್ಯಗಳ ಭಯಾಕನತೆಯ ಮುದ್ರೆಗೊಂಡಂತಿದ್ದುದನ್ನು ಕಂಡ ತಂದೆ ಮಕ್ಕಳಿಬ್ಬರೂ ನಿರಾಶಾಹತರಾದಂತೆ ಸುಮ್ಮನೆ ನಿಷ್ಕಾರಣ ಕೃತಕ ಬೆಪ್ಪುನಗೆ ನಗುತ್ತಾ ಮಿಳ್ಮಳನೆ ನೋಡುತ್ತಾ ಕುಳಿತಿದ್ದರು.
“ಓಹೋಹೋ! ಸರದಾರ ಮಕ್ಕಳು! ಏನು ದೌಲತ್ತೋ ನಿಮಗೆ? ನವಾಬರು ಕೂತಹಾಂಗೆ ಕೂತಿದಾರೆ! ಏಳ್ರೋ! ಎದ್ದು ನಿಲ್ರೋ! ಏನು ಜಂಭ ಇವಕ್ಕೆ? ಕೂತೇ ಒದಾವೆ!” ಹಂದಿ ಹೂಂಕರಿಸಿ ತಿವಿಯುವಂತೆ ಗದರಿದನು ಇಜಾರದ ಸಾಬಿ.
ಅನೈಚ್ಛಿಕವೆಂಬಂತೆ ದಿಗಿಲುಬಿದ್ದು ತಟಕ್ಕನೆ ಎದ್ದು ನಿಂತುಬಿಟ್ಟನು ಸಣ್ಣಬೀರ!
ಲುಂಗೀಸಾಬಿ ನಕ್ಕನು: “ಗಮಾರ! ಹಳ್ಳಿಗಮಾರ!”
“ಏ, ಸುಮ್ನೆ ಕೂತ್ಕೂಬಾರ್ದೇನೋ, ಹುಡುಗಾ?” ದೊಡ್ಡಬೀರ ಕೂತಲ್ಲಿಂದ ಒಂದು ಚೂರೂ ಹಂದದೆ, ಎದ್ದು ನಿಂತಿದ್ದ ಸಣ್ಣಬೀರನನ್ನು ರಟ್ಟೆಹಿಡಿದೆಳೆದು ಕೂರಿಸಿ, ಹುಸಿನಗು ನಗುತ್ತಾ “ಈ ಇಜಾರದ ಸಾಬಣ್ಣಗೆ ಕದಬಿಲ್ಲ. ಹೋದಲ್ಲಿತನಕ ದುಂಡಾವರ್ತಿ, ದರ್ಬಾರು, ಜಬರದಸ್ತು! ಅದಕ್ಕೇ ಮತ್ತೆ, ಕಮ್ಮಾರಸಾಲೇಲಿ ಪುಟ್ಟಾಚಾರ ಮೇಲೆ ಕೈಮಾಡಿ, ಹೂವಳ್ಳಿ ನಾಯಕರ ಹತ್ರ ಗನಾಗಿ ಕನಾತಿ ತಿಂದದ್ದು!” ಎಂದು ಇಜಾರದ ಸಾಬಿಯನ್ನು ತಿರಸ್ಕಾರದಿಂದ ನೋಡುತ್ತಾ ಮೂದಲಿಸಿದನು.
ಇಜಾರದ ಸಾಬಿ ಲುಂಗೀಸಾಬಿಯ ಕಡೆ ತಿರುಗಿ ತುರುಕಮಾತಿನಲ್ಲಿ “ಇವನಿಗೆ ಏನಂತೀಯಾ ಸೊಕ್ಕು! ಕೇರಿಗೆ ಯಜಮಾನ ಅಂತಾ ಬಹಳ ದಿಮಾಕು. ಆವೊತ್ತು ನಾನೂ ಅಜೀಜು ಚಮಡಕ್ಕಾಗಿ ಕುದುರೆ ತಟ್ಟು ತೆಗೆದುಕೊಂಡು ಇವರ ಕೇರಿಗೆ ಹೋದರೆ ‘ನೀವು ಕೇರಿ ಒಳಗೆಲ್ಲ ಬರಬಾರದು. ನಮಗೂ ದೇವರು ದಿಂಡರೂ ಇದಾವೆ. ನಮ್ಮ ಜಾತಿ ಕೆಟ್ಟುಹೋಗ್ತದೆ’ ಅಂತಾ ಏನೇನೋ ಬೊಗಳಿಬಿಟ್ಟ…. ಇವತ್ತು ಇವನ, ಇವನ ಮಗನ, ಸೊಕ್ಕನೆಲ್ಲ ಇಳಿಸಿಬಿಡ್ತೀನಿ; ಗೌಡರು ಬೆತ್ತ ತಗೋ ಅನ್ನಲಿ!” ಎಂದು ದೊಡ್ಡಬೀರನ ಕಡೆ ನೋಡಿ, ಮೀಸೆ ಕುಣಿಸುತ್ತಾ ಮುಂದುವರೆಸಿದನು ಕನ್ನಡದಲ್ಲಿ: “ನಿನಗೆ ಇವತ್ತು; ನಾಳೆ, ನಿನ್ನ ಹೂವಳ್ಳಿ ನಾಯಕರಿಗೆ; ಜಾಸ್ತಿಯಾಗಿದ್ದ ಚರ್ಬಿ ಎಲ್ಲಾ ಕರಗ್ತದೆ, ನೋಡ್ತಾ ಇರು.”
“ಈವತ್ತು ಗೊತ್ತಾಗ್ತದ್ಯೋ ನಿಮ್ಮಿಬ್ಬರಿಗೂ, ಹೊನ್ನಳ್ಳಿ ಹೊಡೆತದ ರುಚಿ! ಮದುವೆ ಮಾಡಿಕೊಡುತ್ತೇನೆ ಎಂದು ಹುಡುಗೀನೆ ಪರಾರಿ ಮಾಡಿಸಿದ್ದೀಯಲ್ಲಾ, ನೀನೆಂಥ ದಗಲಬಾಜಿ?” ಎಂದನು ಲುಂಗೀಸಾಬು.
“ಜಕಣಿಗೆ ಸರಿಯಾಗಿ ಹರಕೆ ನಡೆಸ್ಲಿಲ್ಲ ಅಂತಾ ಕಾಣ್ತದೆ. ಜಕಣಿ ಅಡಗಿಸಿಟ್ರೆ ಯಾರೇನು ಮಾಡಾಕೆ ಆಗ್ತದೆ? ಸರಿಯಾಗಿ ಹರಕೆಮಾಡ್ತೀವಿ ಅಂತಾ ಹೇಳಿಕೊಂಡ್ರೆ, ಹುಡುಗೀನೇನು ಮುಚ್ಚಿಟ್ಟುಕೊಳ್ತದೆಯೆ?” ರಾಗವಾಗಿ ದನಿಎಳೆದ ದೊಡ್ಡಬೀರನನ್ನು ಮೂದಲಿಸುವಂತೆ ಅಣುಕು ದನಿಯಲ್ಲಿ ಇಜಾರದ ಸಾಬಿ ಹಂಗಿಸಿದನು;
“ಆಗ್ತದೆ! ಆಗ್ತದೆ! ಸರ್ರೀಯಾಗಿ ಹರಕೆ ಆಗ್ತದೆಯೋ ಇವತ್ತು! ಜಕಿಣಿ… ನುಂಗಿದ ಹುಡುಗೀನ ವಾಂತಿ ಮಾಡಿಬಿಡಬೇಕು…. ಹಂಗಾಗ್ತದೆ ಇವತ್ತಿನ ಹರಕೆ!”
ಅಷ್ಟರಲ್ಲಿ ಜಗಲಿಯಿಂದ ‘ಯಜಮಾನ ಕೆಮ್ಮು’ ಕೇಳಿಸಿತು; ಸೊಂಟಕ್ಕೆ ಸದಾ ನೇತು ಹಾಕಿಕೊಂಡೇ ಇರುತ್ತಿದ್ದ ಬೀಗದ ಕೈ ಗೊಂಚಲಿನ ಸದ್ದೂ ಸಮೀಪಿಸಿತು. ನಾಲ್ವರೂ ಆ ಕಡೆ ನೋಡುತ್ತಿದ್ದಂತೆ, ಮೊಣಕಾಲಿನವರೆಗೆ ಕಚ್ಚೆಪಂಚೆ ಹಾಕಿದ್ದು, ಕಸೆ ಅಂಗಿಯ ಮೇಲೆ ಹಸುರು ಶಾಲು ಹೊದೆದಿದ್ದು, ವೃದ್ಧರಾದರೂ ಸೊಂಟಬಾಗದಿರುವ ಸುದೃಡಕಾಯದ ಬಲಿಷ್ಠ ವ್ಯಕ್ತಿ ಕಲ್ಲಯ್ಯಗೌಡರು ಚಾವಡಿಗೆ ಬಂದು ಕಲ್ಲುಮಂಚದ ಮೇಲೆ ಒರಗಿ ಕೂತರು. ಅವರು ಬರುತ್ತಿದ್ದಂತೆಯೆ ದೊಡ್ಡಬೀರ ಸಣ್ಣಬೀರರು ಎದ್ದು ನಿಂತು, ಸೊಂಟಬಾಗಿ, ನೆಲಮುಟ್ಟಿ, ನಮಸ್ಕಾರ ಸಲ್ಲಿಸಿದರು. ಸಾಬರಿಬ್ಬರೂ ಗೌರವಸೂಚಕವಾಗಿ ಸಲಾಂ ಮಾಡಿ, ಸರಿದು, ದೂರ ನಿಂತರು. ‘ಎಲೆ’ಯಲ್ಲಿ ಹುಳುವಾಗಿದ್ದ ಕರೆಯುವ ಹಸುವೊಂದಕ್ಕೆ ಔಷಧಿ ಹಾಕಿಸಿ ಆಗತಾನೆ ಕೊಟ್ಟಿಗೆಯಿಂದ ಹಿಂದಿರುಗಿದ್ದ ಗೌಡರ ಮೈಯಿಂದ ಬರುತ್ತಿದ್ದ ಸೆಗಣಿ ಗಂಜಲ ಮಿಶ್ರವಾದ ಕೊಟ್ಟಿಗೆಯ ವಾಸನೆ ಸಾಬಿಗಳಿಗೆ ತುಸು ಅಹಿತಕರವಾಗಿಯೆ ತೋರಿತು; ಹೊಲೆಯರಿಗೆ ಅದರ ಪರಿವೆಯೆ ಇರಲಿಲ್ಲ. ಜೀವವಿರುವ ದನಗಳನ್ನು ಕೊಂದು ತಿನ್ನುವವರಿಗೂ ಸತ್ತ ಬಡು ತಿನ್ನುವವರಿಗೂ ಅಷ್ಟಾದರೂ ಬೇಡವೆ ವ್ಯತ್ಯಾಸ?
“ಏನೋ? ನಿನ್ನ ಮಗಳು ಸಿಕ್ಕಲಿಲ್ಲೇನೋ?” ಗೌಡರ ಧ್ವನಿಯಲ್ಲಿ ಉಗ್ರಗಾಂಭೀರ್ಯವಿತ್ತೆ ವಿನಾ ಕಾತರತೆಯಿರಲಿಲ್ಲ.
“ಇಲ್ಲ, ನನ್ನೊಡೆಯಾ.” ನಿಂತೆ ಇದ್ದ ದೊಡ್ಡಬೀರ ಮತ್ತೊಮ್ಮೆ ಸೊಂಟ ಬಗ್ಗಿಸಿ ಕೈಮುಗಿದು ಹೇಳಿದನು.
“ಯಾವ ಯಾವ ಕೆರೆ ಬಾವಿ ಹಳ್ಳ ಗುಂಡಿ ಎಲ್ಲ ಹುಡುಕಿ ಆಯಿತೋ?” ಗೌಡರ ಧ್ವನಿ ನಿಷ್ಠುರವಾಗಿತ್ತು; ಸತ್ತುಹೋದವಳು ಸಿಕ್ಕಿದಳೊ ಇಲ್ಲವೊ ಎಂಬ ವಿಚಾರದಲ್ಲಿ ಇರಬೇಕಾಗಿದ್ದ ಯಾವ ತರಹದ ಉದ್ವೇಗವೂ ಇರಲಿಲ್ಲ. ಜೊತೆಯಲ್ಲಿ ವ್ಯಂಗ್ಯದ ಛಾಯೆ ಇಣುಕುತ್ತಿತ್ತು.
ದೊಡ್ಡಬೀರ, ಅದಾವುದನ್ನೂ ಅರಿಯದವನಂತೆ, ಪ್ರಶ್ನೆಗೆ ಸರಿಯಾದ ಉತ್ತರಕೊಡುವ ಮನಸ್ಸಿನಿಂದ ಹಾಡ್ಯದ ಕೆರೆ, ಮಕ್ಕಿಗದ್ದೆಯ ಬಾವಿ, ಕೋಡ್ಲುಗುಂಡಿ ಎಂದು ಮೊದಲಾಗಿ ಒಂದು ಪಟ್ಟಯನ್ನೆ ನಿವೇದಿಸತೊಡಗಿದ್ದನು. ಗೌಡರು ಜಿಗುಪ್ಸೆಯಿಂದ ಮುಖ ಕಂತ್ರಿಸಿಕೊಂಡು, ದೊಡ್ಡಬೀರ ನನ್ನು ನಡುವೆ ತಡೆದು, ವ್ಯಂಗ್ಯ ಸ್ಪಷ್ಟವಾಗುವಂತೆ ನಿಧಾನವಾಗಿ, ಶುದ್ಧ ಸಾಹಿತ್ಯರೀತಿಯಿಂದ ಕೇಳಿದರು: “ಅಡಕೆ ಮರದ ಚೊಂಡೀಲಿ ಹುಡುಕಿದರೇನೋ?:
ಈ ಸಾರಿಯ ಪ್ರಶ್ನೆಯಲ್ಲಿ ಉಗ್ರತೆ ವ್ಯಂಗ್ಯ ಎರಡೂ ಸ್ಪಷ್ಟವಾಗಿದ್ದುದು ಮುದುಕನಿಗೆ ಅರ್ಥವಾಯಿತೆಂದು ತೊರುತ್ತದೆ. ಅವನು ಮುಂದೆ  ಮಾತಾಡದೆ ನೆಲ ನೋಡತೊಡಗಿದನು. ಸಾಬಿಗಳಿಬ್ಬರೂ ನಗೆ ತಡೆಯಲಾರದೆ ಮುಖ ತಿರುಗಿಸಿಕೊಂಡರು. ನೋಡತೊಡಗಿದನು. ಸಾಬಿಗಳಿಬ್ಬರೂ ನಗೆ ತಡೆಯಲಾರದೆ ಮುಖ ತಿರುಗಿಸಿಕೊಂಡರು.
ಸಣ್ಣಬೀರನಿಗೆ ಆಗಲೆ ತೊಳ್ಳೆ ನಡುಗತೊಡಗಿತ್ತು!
“ಯಾರ ಹತ್ರವೂ ತನ್ನ ಈ ಪಡಪೋಸಿ?” ಗೌಡರ ಇಂಗಿತವರಿತ ಇಜಾರದ ಸಾಬಿ ದೊಡ್ಡಬೀರನಿಗೆ ನೇರವಾಗಿ ಪ್ರಶ್ನೆ ಹಾಕಿದನು.
“ಯಾಕೋ ಕಾಲು ನಡುಗಿಸುತ್ತಾ ನಿಂತೀಯ? ನೀನಾದರೂ ನಿಜ ಹೇಳೋ. ನಿನ್ನ ತಂಗೀನ ಎಲ್ಲಿ ಮುಚ್ಚಿಟ್ಟಿದ್ದಾರೋ? ಎಲ್ಲಿಗೆ ಕಳ್ಸಿದ್ರೋ?” ಮಿಳ್ಮಳನೆ ಮಾತು ಹೊರಡದೆ ಕಣ್ಣು ಕಣ್ಣು ಬಿಡುತ್ತಿದ್ದ ಸಣ್ಣಬೀರನನ್ನು ನಿರ್ದೇಶಿಸಿ ಲುಂಗೀಸಾಬು ಮತ್ತೆ ಎಚ್ಚರಿಕೆ ಹೇಳಿದನು “ಹೇಳುತ್ತಿದ್ದರೆ ಒಳ್ಳೆ ಮಾತಿನಲ್ಲಿ ಹೇಳು. ಇಲ್ಲದಿದ್ದರೆ, ನಿನಗೆ ಗೊತ್ತೆ ಇದೆಯಲ್ಲಾ ಕಂಬಕ್ಕೆ ಕಟ್ಟಿ ಬಾಯಿ ಬಿಡಿಸುತ್ತಾರೆ.”
ಸಣ್ಣಬೀರ ನಡುಕುದನಿಯಲ್ಲಿ ಕೈಕೈ ಮುಗಿಯುತ್ತಾ “ಅಯ್ಯಾ, ನಿಮ್ಮ ಉಪ್ಪು ಅನ್ನ ತಿಂದು ನಿಮಗೆ ನಾ ಸುಳ್ಳು ಹೇಳಾದಿಲ್ಲ. ಧರ್ಮಸ್ಥಳದ ದೇವ್ರಾಣೆಗೂ ನಂಗೊತ್ತಿಲ್ಲ….” ಅವನಿನ್ನೂ ಹೇಳಿ ಮುಗಿಸಿರಲಿಲ್ಲ; ಗೌಡರು ಲುಂಗೀ ಸಾಬುವನ್ನು ಕುರಿತು “ಹೇಗೊ, ಬುಡನ್, ಒಂದಷ್ಟು ಹುಣಿಸೇ ಬರಲು ಮುರುಕೊಂಡು ಬಾರೊ!” ಎಂದು ಇಜಾರದ ಸಾಬಿಯ ಕಡೆ ನೋಡಿ “ಏನೋ ನೋಡ್ತೀಯಾ? ಕಟ್ಟೋ ಅವನ್ನ ಕಂಬಕ್ಕೆ!” ಎಂದು ಕಠಿಣಧ್ವನಿಯಲ್ಲಿ ಆಜ್ಞಾಪಿಸಿದರು.
ಇಜಾರದ ಸಾಬು ತನ್ನ ಕೈಯಿಂದ ಉಗ್ರಸನ್ನೆ ಮಾಡಿ ತಲೆಯಾಡಿಸಿ ಕರೆದೊಡನೆಯೆ, ಗಾಡಿಯ ನೊಗಕ್ಕೆ ಹೆಗಲು ಕೊಟ್ಟೂ ಕೊಟ್ಟೂ ಅಭ್ಯಾಸವಿದ್ದ ಗಾಡಿಯೆತ್ತು ಗಾಡಿ ಹೊಡೆಯುವವನು ಮೂಕಿಗೆ ಕೈಹಾಕಿ ಎತ್ತಿ ಲೊಚಗುಟ್ಟಿದೊಡನೆಯೆ ನೊಗಕ್ಕೆ ವಿಧೇಯತೆಯಿಂದ ಹೆಗಲು ಕೊಡುವಂತೆ, ಸಣ್ಣಬೀರ ನಡುನಡುಗುತ್ತಲೆ, ನಾಲಗೆ ಬಿದ್ದುಹೋಗಿ ಮಾತು ಸತ್ತವನಂತೆ, ಮೂಕಪಶುವಿನಂತೆ, ಒಮ್ಮೆ ಕೆರಳಿ ಕುಳಿತಿದ್ದ ಗೌಡರನ್ನೂ ಒಮ್ಮೆ ದುಃಖದೀನನಾಗಿ ಪರಿತಪಿಸುತ್ತಿದ್ದ ತನ್ನ ತಂದೆಯನ್ನೂ ನೋಡುತ್ತಾ ಶಿಕ್ಷಾ ಸ್ತಂಭದ ಕಡೆ ಮುಂದುವರಿದನು. ಅವನು ಹೋದ ರೀತಿ, ಆ ಕಂಬವನ್ನು ತಬ್ಬಿ ನಿಂತ ರೀತಿ, ಎರಡು ಕೈಗಳನ್ನೂ ಜೋಡಿಸಿ ಹಗ್ಗ ಬಿಗಿದುಕೊಂಡ ರೀತಿ, ಹೇಗಿತ್ತು ಎಂದರೆ ಆ ಯೂಪಸ್ತಂಭಕ್ಕೆ ಬಲಿ ಕಟ್ಟಿಸಿಕೊಳ್ಳುವ ಯಜ್ಞವಿಧಾನ ಅವನಿಗೆ ಪೂರ್ವ ಪರಿಚಿತವಾದದ್ದು ಎಂಬುದು ಚೆನ್ನಾಗಿ ಗೊತ್ತಾಗುವಂತಿತ್ತು. ತಾನು ಮಾತ್ರವೆ ಅಲ್ಲದೆ ಇತರ ಅಪರಾಧಿಗಳೂ ಗೌಡರ ಕ್ರೋಧಕ್ಕೆ ಪಾತ್ರರಾಗಿ ಆ ಯೂಪಸ್ತಂಭಕ್ಕೆ ಯಜ್ಞಪಶುಗಳಾಗಿದ್ದುದನ್ನು ಅವನು ಹಿಂದೆ ಎಷ್ಟೋ ಸಾರಿ ಕಂಡೂ ಇದ್ದನು, ಅನುಭವಿಸಿಯೂ ಇದ್ದನು. ಆಜ್ಞಯಾದೊಡನೆಯೆ ಹೋಗಿ, ನೊಗಕ್ಕೆ ಹೆಗಲು ಕೊಡುವಂತೆ ಕಂಬವನ್ನು ತಬ್ಬಿ ನಿಂತು ಕೈ ಕಟ್ಟಿಸಿಕೊಳ್ಳಲು ಒಪ್ಪದೆ ಪ್ರತಿಭಟಿಸಿದವರಿಗೆ ಏನು ಯಮಶಿಕ್ಷೆ ಒದಗುತ್ತಿತ್ತು ಎಂಬುದೂ ಅವನಿಗೆ ಗೊತ್ತಿದ್ದ ವಿಷಯವೇ ಆಗಿತ್ತು. ಆದ್ದರಿಂದಲೆ ಅವನು ಚಕಾರವೆತ್ತದೆ ಬೇಗಬೇಗ ಹೋಗಿ ಕಂಬವನ್ನಪ್ಪಿ ಕೈ ಕಟ್ಟಿಸಿಕೊಂಡದ್ದು!
ಲುಂಗೀಸಾಬು ತಂದು ಒಟ್ಟಿದ ಹುಣಿಸೆಬರಲುಗಳಲ್ಲಿ ಒಂದನ್ನು ತಜ್ಞನಂತೆ. ಪರಿಶೀಲಿಸಿ ಆರಿಸಿಕೊಂಡ ಇಜಾರದ ಸಾಬು ಸಣ್ಣಬೀರನ ಬತ್ತಲೆಯ ಬೆನ್ನಮೇಲೆಯೂ (ಹೊದೆದಿದ್ದ ಕಂಬಳಿಯನ್ನು ಸಣ್ಣಬೀರನೆ ಕಂಬ ತಬ್ಬಲು ಹೋಗುವ ಮುನ್ನ ಅನಿವಾರ್ಯ ರೂಢಿಗೆ ವಶನಾಗಿ ತೆಗೆದುಹಾಕಿದ್ದನು.) ಕೊಳಕಲಾಗಿದ್ದ ಹರಕಲು ಪಂಚೆ ಸುತ್ತಿದ್ದ ಅಂಡಿನ ಮೇಲೇಯೂ ಸಶಬ್ದವಾಗಿ ಪ್ರಯೋಗ ಮಾಡಿದನು. ಚಿಟಾರನೆ ಕೂಗಿಕೊಂಡು ಕೀರಿ ರೋಧಿಸುತ್ತಾ “ದಮ್ಮಯ್ಯ, ಸಾಬ್ರೆ, ಹೊಡೀಬ್ಯಾಡಿ. ನಾ ಸಾಯ್ತೀನಿ. ನನ್ನ ಹೆಂಡ್ರು ಮಕ್ಕಳ ಬಾಯ್ಗೆ ಮಣ್ಣು ಹಾಕಬ್ಯಾಡಿ. ನಿಮ್ಮ…. (ಒಂದು ಅಸಹ್ಯ ಪದ ಪ್ರಯೋಗ ಮಾಡಿ) ತಿನ್ತೀನಿ! ಅಯ್ಯೋ ಅಪ್ಪಾ ಬಿಡಿಸೋ! ನಂಗೊತ್ತಿಲ್ಲೋ, ತಿಮ್ಮಿ ಎಲ್ಲಿ ಹೋದ್ಲು ಅಂತಾ! ಅಯ್ಯೋ ಅಯ್ಯೋ ಅಯ್ಯೋ!” ಎಂದು ಸಣ್ಣಬೀರ ಒದ್ದಾಡಿಕೊಂಡು ಒರಲುತ್ತಿದ್ದ ಹಾಗೆಯೆ ಇಜಾರದ ಸಾಬಿ ಮತ್ತೂ ಒಂದು ಎರಡು ಮೂರು ಸಾರಿ ಬರಲನ್ನು ಬೀಸಿಬೀಸಿ ಹೊಡೆದೇಬಿಟ್ಟನು.
ಮೊದಲಬಾರಿಯ ಹೊಡೆತಕ್ಕೇ ಬಾಸುಂಡೆಗಳೆದ್ದಿದ್ದ ಬೆನ್ನು ಎರಡನೆಯ ಸುತ್ತಿನ ಪೆಟ್ಟುಗಳಿಗೆ ಇದ್ದಕಿದ್ದಹಾಗೆ ಕೆಂಪಾಯಿತು, ನೆತ್ತರು ಚಿಮ್ಮಿ! ಅವನು ಉಟ್ಟಿದ್ದ ಪಂಚೆ ಒದ್ದೆಯಾಗಿ ಕಾಲಮೇಲೆ ಇಳಿದ ಉಚ್ಚೆಗೆ ತೊಯ್ದಿತು. ಅಂಡಿನ ಬಟ್ಟೆಯೂ ರಕ್ತದಿಂದ ಕೆಂಪಾಯಿತು. ಅವನ ಕೂಗೂ ಒಮ್ಮೆಗೆ ನಿಂತುಬಿಟ್ಟಿತು! ತಲೆ ಕತ್ತಿನ ಮೇಲೆ ನಿಲ್ಲಲೊಲ್ಲದೆ ಜೋಲಿತು!
ದೊಡ್ಡಬೀರ ಗದ್ಗದಿಸುತ್ತಾ ಎದ್ದು ಓಡಿಹೋಗಿ ಗೌಡರ ಕಾಲಬಳಿ ದೊಪ್ಪನೆ ಬಿದ್ದು “ಒಡೆಯಾ, ನನ್ನ ಮಗನ್ನ ಉಳಿಸಿಕೊಡೀ!”ಎಂದು ಕೂಗಿಕೊಂಡನು.
ಅಷ್ಟರಲ್ಲಿ ತನ್ನ ಗಂಡಗೂ ಮಗಗೂ ಏನು ಗತಿಯಾಗುತ್ತದೆಯೊ ಎಂದು ಹೆದರಿ, ಬಿಡಾರದಿಂದ ಓಡೋಡಿ ಬಂದು, ಬಚ್ಚನೊಡನೆ ದೂರದಲ್ಲಿ ಮರೆಯಾಗಿ ನಿಂತಿದ್ದ ಸೇಸಿಯೂ ಎದೆಎದೆ ಬಡಿದುಕೊಳ್ಳುತ್ತಾ ಬಂದು, ಇಜಾರದ ಸಾಬಿಯ ಕೈಲಿದ್ದ ಹುಣಿಸೆಯ ಬರಲನ್ನು ಕಸಿದೆಸೆದು, ಅವನನ್ನು ತಳ್ಳಿ, ತಲೆ ಜೋಲುತ್ತಿದ್ದ ತನ್ನ ಮಗನನ್ನು ಆತುಕೊಂಡಳು!
ದಾಂಡಿಗನೂ ಬಲಿಷ್ಠನೂ ಕ್ರೂರಿಯೂ ಆಗಿ, ಇಂತಹ ಧೂರ್ತಕರ್ಮಗಳಲ್ಲಿ ನುರಿತು ನಿಷ್ಠುರನಾಗಿದ್ದ ಇಜಾರದ ಸಾಬುಗೆ ಅದೇನಾಯಿತೀ ಏನೋ? ಇದ್ದಕ್ಕಿದ್ದಂತೆ ಸತ್ವಹೀನನಾದವನಂತೆ ನಿರ್ಬಲವಾಗಿ, ಸೇಸಿ ದುಃಖಾರ್ತೆಯಾಗಿ ಓಡಿಬಂದು ಎಳೆದೊಡನೆ ಅವನ ಕೈಲಿದ್ದ ಹುಣಸೆಬರಲು ತನಗೆ ತಾನೆ ಎಂಬಂತೆ ಕೈಬಿಟ್ಟುಹೋಗಿತ್ತು! ಅವಲು ತಳ್ಳುದೊಡನೆ ಒಂದಲ್ಲ, ಎರಡು ಮಾರು, ಹಿಂಜರಿದು ಸ್ತಂಭೀಭೂತನಾದಂತೆ ನಿಂತು ಬಿಟ್ಟನು! ಹೊಲೆಯಳಾದರೂ, ಬಡವಳಾದರೂ, ಯಾವ ವಿಧವಾದ ವ್ಯಕ್ತಿತ್ವ ವಿಶೇಷವೂ ಲವಲೇಶವೂ ಇಲ್ಲದವಳಾದರೂ, ಸಂಕಟತಪ್ತ ತಾಯ್ತನ ಎಂತಹ ಅಲ್ಪ ಸ್ತ್ರೀಯನ್ನಾದರೂ ಭೂಮಪಟ್ಟಕ್ಕೇರಿಸಿಬಿಡುತ್ತದೆಯೋ ಏನೋ ಎಂಬಂತೆ, ಅವಳ ಮಾತೃ ದುಃಖ ಜನ್ಯಕ್ರೋಧದ ಸಾನ್ನಿಧ್ಯಭೀಷಣೆಗೆ ಕ್ಷಣಮಾತ್ರ ಭೀತಚೇತಸನಾದನು ಇಜಾರದ ಸಾಬಿ! ಗೌಡರ ಆಜ್ಞೆಯನ್ನು ಮರೆತು, ಸೇಸಿಯ ಮಾತಿಲ್ಲದ ಆಭತಿಗೆ ಒಳಗಾದವನಂತೆ, ಬೇಗಬೇಗನೆ ಸಣ್ಣಬೀರನನ್ನು ಬಿಗಿದಿದ್ದ ಹಗ್ಗದ ಕಟ್ಟುಗಳನ್ನೆಲ್ಲ ಬಿಚ್ಚಿಹಾಕಿದನು. ಪ್ರಜ್ಞೆ ತಪ್ಪಿದ್ದ ಪ್ರಾಯದ ಮಗನ ಭಾರವನ್ನು ಆತೂ  ಆನಲಾರದೆ ನೆಲದ ಮೇಲೆ ಮಲಗಿಸಿದಳು ಸೇಸಿ.
ಮೈಮೇಲೆ ಜಕಣಿ ಬಂದಿತೋ ಎಂಬಂತೆ, ಗೌಡರನ್ನು ಕಂಡರೆ ನೂರುಮಾರು ದೂರದಲ್ಲಿಯೆ ಕುಗ್ಗಿ ಹೆದರಿ ಹದುಗಿ ಹುದುಗಿಕೊಳ್ಳುವ ಸ್ವಭಾವದ ಸಹಜಭೀರು, ಆ ಹೊಲತಿ, ಏದುತ್ತಾ ನೀಡಿದಾಗಿ ಉಸಿರೆಳೆದು ಬಿಡುತ್ತಾ ಗೌಡರ ಕಡೆ ತಿರುಗಿ ಕೈಮುಗಿದಿಕೊಂಡು ರೋದನ ಮಿಶ್ರವಾದ ತಾರಸ್ವರದಲ್ಲಿ “ಸ್ವಾಮಿ, ನನ್ನ ಬೇಕೆಂದರೆ ಹೊಡೆದು ಹಾಕಿಸಿ! ನನ್ನ ಗಂಡ ಮಕ್ಕಳನ್ನು ಕೊನ್ನಬ್ಯಾಡಿ, ದಮ್ಮಯ್ಯ, ನನ್ನ ತಂದೇ!…. ತಿಮ್ಮಿ ಮತ್ತೆಲ್ಲಿಗೂ ಹೋಗಿಲ್ಲ. ಅವಳ ಮಾವನ ಮನೆಗೆ, ಸಿಂಬಾವಿ ಕೇರಿಗೇ ಹೋಗಿರಬೈದು. ನಿನ್ನೆ ಅವಳ ಬಾವ ಬಂದಿದ್ದ…. ಅರಿಯದ ಮಗು…. ನಾ ಹೋಗಿ ಅವಳನ್ನೂ ಕರಕೊಂಡು ಬತ್ತೀನಿ…. ನಿಮ್ಮ ಉಪ್ಪು ಅನ್ನದ ರುಣ ತೀರಿಸ್ತೀವಿ, ನನ್ನ ಗಂಡನ್ನ ಮಗನ್ನ ಹೊಡೆದಬ್ಯಾಡೀ. ನನ್ನೊಡೆಯಾ, ತಪ್ಪಾಯ್ತು, ಕಾಲಿಗೆ ಬಿದ್ದೇ!” ಎಂದು, ಮೂರ್ಛಿತನಾಗಿ ಬಿದ್ದಿದ್ದ ಮಗನ ಪಕ್ಕದಲ್ಲಿಯೆ, ಗೌಡರು ಕೂತಿದ್ದ ಕಲ್ಲುಮಂಚದ ದಿಕ್ಕಿಗೆ ಉದ್ದುದ್ದವಾಗಿ ಅಡ್ಡಬಿದ್ದಳು.
ಬೆಟ್ಟಳ್ಳಿಯ ಕಲ್ಲಯ್ಯಗೌಡರು ಕಲ್ಲುಮಂಚದ ಮೇಲೆ ಕಲ್ಲಾಗಿಯೆ ಕುಳಿತಂತೆ ತೋರುತ್ತಿದ್ದರು, ತೋರುತ್ತಿದ್ದರು ಮಾತ್ರ. ವಾಸ್ತವವಾಗಿ ಅವರು ಸ್ವಭಾವತಃ ಕಲ್ಲೆದೆಯವರಾಗಿರಲಿಲ್ಲ. ಅವರು ನಡುವಯಸ್ಸಿನವರೆಗೂ ಮೆಲ್ಲದೆಯವರಾಗಿಯೆ ಇದ್ದು, ತಮ್ಮ ಮೆಲ್ಲೆದೆತನದ ದುರುಪಯೋಗ ಮಾಡಿಕೊಂಡು ತಮಗೂ ತಮ್ಮ ಸಂಸಾರಕ್ಕೂ ಕಷ್ಟನಷ್ಟಗಳನ್ನು ಉಂಟುಮಾಡಿದ್ದವರಿಂದ ರಕ್ಷಣೆ ಪಡೆಯುವ ಸಲುವಾಗಿ ಕಲ್ಲೆದೆತನವನ್ನು ಆರೋಪಿಸಿಕೊಂಡು, ಕಠೋರತೆಯನ್ನು ರಕ್ಷಾಕವಚದಂತೆ ತೊಟ್ಟುಕೊಂಡಿದ್ದರಷ್ಟೆ! ಬುದ್ದಿಪೂರ್ವಕವಾಗಿ, ಒಂದು ಉದ್ದೇಶ ಸಾಧನೆಗಾಗಿ, ತಮ್ಮ ಮೃದುತ್ವವನ್ನು ಅಪಾಯದಿಂದ ಪಾರುಮಾಡುವುದಕ್ಕಾಗಿ ಕಠಿಣತೆಯ ಖರ್ಪರವನ್ನು ಅದರ ಸುತ್ತ ಬೆಳೆಸಿಕೊಂಡ ಮೇಲೆ ಅವರ ದರ್ಪಕ್ಕೆ ಹೆದರಿದ ಜನರಿಂದ ಅವರ ಕೆಲಸಗಳೆಲ್ಲ ಸುಸೂತ್ರವಾಗಿ ನಡೆಯತೊಡಗಿದ್ದುವು. ಆದರೆ ಕ್ರೌರ್ಯವನ್ನು ಪ್ರಯೋಗಿಸಿದ ಮೇಲೆ ಪ್ರತಿಸಲವೂ ತಪ್ಪದೆ ಅದರ ಪ್ರತೀಕಾರಕ್ಕೆ ಒಳಗಾಗುತ್ತಿದ್ದರು, ಹೊಟ್ಟೆನೋವು, ತಲೆನೋವು, ಹಲ್ಲುನೋವು, ವಾಂತಿ, ದುಃಸ್ವಪ್ನಗಳಿಂದ ನಿದ್ದೆಗೇಡು, ವಿಕಾರರೂಪಗಳನ್ನು ಕಂಡು ಬೆದರುವ ಮಾನಸಿಕ ಭ್ರಾಂತಿ, ಏನೋ ಅಚಿಂತ್ಯ ಅಧೈರ್ಯ, ಏನೋ ಗೊತ್ತುಗುರಿಯಿಲ್ಲದ ಮನಃಕ್ಲೇಶ – ಇತ್ಯಾದಿಯಾಗಿ ಒಂದಲ್ಲ ಒಂದು ತೊಂದರೆಯಿಮದ ನರಳುತ್ತಿದ್ದರು.
ಈ ಕ್ರೌರ್ಯಪ್ರಯೋಗಕ್ಕೂ ತರುವಾಯ ಸಂಭವಿಸುತ್ತಿದ್ದ ದೈಹಿಕ ಅಥವಾ ಮಾನಸಿಕ ವ್ಯಾಧಿಗಳಿಗೂ ಕಾರ್ಯಕಾರಣ ಸಂಬಂಧವಿರಬಹುದೆಂಬುದನ್ನೂ ಕಲ್ಲಯ್ಯ ಗೌಡರು ಆಲೋಚಿಸಿರಲಿಲ್ಲ. ಯಾರಾದರೂ ಹೇಳಿದ್ದರೂ ಅವರು ನಂಬಲೂ ಸಿದ್ಧರಿರಲಿಲ್ಲ. ಅದಕ್ಕೆ ಬದಲಾಗಿ ದೆವ್ವ ದೇವರು ಭೂತ ಜಕಿಣಿ ಗ್ರಹ ಪಿಶಾಚಾದಿ ಅಲೌಕಿಕ ಮತ್ತು ಅತೀಂದ್ರಿಯ ಶಕ್ತಿಗಳ ಚೇಷ್ಟೆಯನ್ನೆ ಅವರು ನಿಜವಾದ ಕಾರಣ ಎಂದು ನಂಬಿ, ಅದಕ್ಕೆ ಅನುಗುಣವಾದ ಪರಿಹಾರೋಪಾಯಗಳನ್ನೆ ಕೈಗೊಳ್ಳುತ್ತಿದ್ದರು. ಆದರೆ ಪ್ರಾಜ್ಞೆಯಾಗಿದ್ದ ಅವರ ಹೆಂಡತಿ, ದೊಡ್ಡಮ್ಮ ಹೆಗ್ಗಡಿತಿಯವರು, ದೆಯ್ಯದ್ಯಾವರುಗಳಲ್ಲಿ ಇತರರಂತೆ ಶ್ರದ್ಧೆಯಿದ್ದವರಾದರೂ, ತನ್ನ  ಗಂಡನ ಕ್ರೂರ ವರ್ತನೆಗೂ ತರುವಾಯ ಒದಗುತ್ತಿದ್ದ ದೈಹಿಕ ಮಾನಸಿಕ ವ್ಯಾಧಿ ವ್ಯಾಪಾರಗಳಿಗೂ ಸಂಬಂಧವಿರುವುದನ್ನು ಅನುಭವದಿಂದ ಕಂಡುಕೊಂಡಿದ್ದರು. ಅದಕ್ಕಾಗಿ ಅವರು ತನ್ನ ಗಮಡನನ್ನು ಕ್ರೌರ್ಯಪ್ರಯೋಗದಿಂದ ಪರಾಙ್ಮಖಿಯನ್ನಾಗಿ ಮಾಡಲು ಸತತವೂ ಪ್ರಯತ್ನಿಸುತ್ತಿದ್ದರು. ಸೂಚನೆ ಕೊಟ್ಟಿದ್ದರು; ಬುದ್ಧಿವಾದ ಎಂದು ತೋರದಿರುವಂತೆ ಬುದ್ಧಿಹೇಳಿದ್ದರು; ಯಾವುದೂ ಪರಿಣಾಮಕಾರಿಯಾಗದಿರಲು ಕೆಲವು ದಿನಗಳು ಮಾತು ಬಿಟ್ಟಿದ್ದರು; ಕಡೆಗೆ ಉಪವಾಸವನ್ನೂ ಮಾಡತೊಡಗಿದ್ದರು. ಹೆಂಡತಿ ಮಾತುಬಿಟ್ಟಾಗ ಮತ್ತು ಉಪವಾಸಕ್ಕೆ ತೊಡಗಿದಾಗ ಗೌಡರು ಹೆದರಿ ಹಿಂಜರಿಯುತ್ತಿದ್ದರು. ಆದರೂ ಅನಿವಾರ್ಯವೆಂದು ಅವರಿಗೆ ತೋರಿದಾಗ ತಮ್ಮ ಹೆಂಡತಿಗೆ ತಿಳಿಯದಂತೆ ದಂಡನಕಾರ್ಯದಲ್ಲಿ ತೊಡಗುತ್ತಿದ್ದರು. ಆ ದಿನ ಅವರು ತೊಡಗಿದ್ದ ದಂಡನ ಕಾರ್ಯವೂ ಗೋಪ್ಯ ಸ್ವರೂಪದ್ದೇ ಆಗಿತ್ತು.
ಆದ್ದರಿಂಲೇ ಇಜಾರದ ಸಾಬಿಯ ಹೊನ್ನಳ್ಳಿಹೊಡೆತಕ್ಕೆ ಸಣ್ಣಬೀರನು ಚಿಟಾರನೆ ಚೀರಿಚೀರಿ ಗೋಳಿಟ್ಟುದನ್ನು ಕೇಳಿದಾಗ ಅವರ ಸಹಜ ಮರುಕ ಹೃದಯದ ಅಂತರಾಳದಲ್ಲಿ ಇಣಿಕಿಬಂದರೂ ಅದನ್ನು ದರ್ಪಹೀನತೆಯ ದೌರ್ಬಲ್ಯವೆಂದು ದಮನಮಾಡಿ, ಅವನ ರೋದನ ಎಲ್ಲಿಯಾದರೂ ದೂರದ ಒಳಗೆ ಅಡುಗೆಮನೆಯಲ್ಲಿರುವ ತಮ್ಮ ಹೆಂಡತಿಗೆ ಕೇಳಿಸಿಬಿಟ್ಟೀತಲ್ಲಾ ಎಂದು ಸಿಟ್ಟಿಗೆದ್ದು “ಏನು ಒರಲ್ತಾನೊ ಹೊಲೆಮುಂಡೆಗಂಡ? ಅವನ ಬಾಯಿಗೆ ಒಂದು ಬಟ್ಟೆನಾದ್ರೂ ತುರುಕೋ!” ಎಂದು ಸಿಡುಕಿದರು. ತನ್ನ ಕಾರ್ಯದಲ್ಲಿಯೇ ಮಗ್ನನಾಗಿದ್ದ ಇಜಾರದ ಸಾಬಿಗೆ ಅದು ಕೇಳಿಸಿರಲಿಲ್ಲವಾದ್ದರಿಂದ ಆ ಬಾಯಿಗೆ ಬಟ್ಟೆ ತುರುಕುವ ರೋದನನಿರೋಧ ಕಾರ್ಯ ನಡೆದಿರಲಿಲ್ಲ!
ಸಣ್ಣಬೀರನ ರೋದನ ತಕ್ಕಮಟ್ಟಿಗೆ ದೂರಗಾಮಿಯಾಗಿಯೆ ಇದ್ದಿತಾದರೂ ಬೆಟ್ಟಳ್ಳಿ ಮನೆ ನೂರಾರು ವರ್ಷಗಳ ಹಿಂದಿನ ಭದ್ರ ರಚನೆಯಾಗಿ, ಸುವಿಶಾಲ ವಾಗಿದ್ದುದರಿಂದ ಚಾವಡಿಗೂ ಅಡುಗೆ ಮನೆಗೂ ಸುಮಾರು ದೂರವಿದ್ದು, ಚಾವಡಿಯಲ್ಲಿ ನಡೆಯುವ ಗದ್ದಲ ಸಾಧಾರಣವಾಗಿ ಅಲ್ಲಿಗೆ ತಲುಪುತ್ತಲೆ ಇರಲಿಲ್ಲ.
ಆದರೂ ದೊಡ್ಡಮ್ಮ ಹೆಗ್ಗಡತಿಯವರಿಗೆ ಅದು ಗೊತ್ತಾಯಿತು! ಯಾರ ಚಾಡಿಯ ಪರಿಣಾಮವಾಗಿಯೇ ದೊಡ್ಡಬೀರ ಸಣ್ಣಬೀರರು ಈಗ ಚಾವಡಿಶಿಕ್ಷೆಗೆ ಗುರಿಯಾಗಿದ್ದರೋ ಆ ಬಚ್ಚನೆ ಓಡಿಹೋಗಿ ಹಿತ್ತಲುಕಡೆಯ ಬಾಗಿಲಲ್ಲಿ ದೊಡ್ಡಮ್ಮಹೆಗ್ಗಡತಿಯವರಿಗೆ ದೂರು ಕೊಟ್ಟಿದ್ದನು. ತನ್ನ ಮದುವೆಗೆ ಗೊತ್ತಾಗಿದ್ದ ಹೆಣ್ಣನ್ನು ಅನ್ಯರ ಪಾಲುಮಾಡಲು ಹವಣಿಸಿದ್ದ ದೊಡ್ಡಬೀರನಿಗೆ ಗೌಡರಿಂದ ಗದರಿಸಿ ಬುದ್ದಿ ಹೇಳಿಸಿ, ತಿಮ್ಮಿಯನ್ನು ಹಿಂದಕ್ಕೆ ಎಳೆಯಿಸಿ ತಂದು ತಾನೆ ಮದುವೆಯಾಗಬೇಕು ಎಂಬ ಆಶೆಯಿಂದ ಅವನು ಆ ಚಾಡಿಯ ಕೆಲಸದಲ್ಲಿ ತೊಡಗಿದ್ದನೆ ವಿನಾ ‘ಹೊನ್ನಳ್ಳಿಹೊಡೆತ’ಕ್ಕೆ ತನ್ನ ಮಾವ ಬಾವಂದಿರನ್ನು ಗುರಿಪಡಿಸಬೇಕೆಂದು ಎಂದಿಗೂ ಅವನ ‘ಇರಾದೆ’ ಆಗಿರಲಿಲ್ಲ. ಆದ್ದರಿಂದ ಸಣ್ಣಬೀರನನ್ನು ಕಂಬಕ್ಕೆ ಕಟ್ಟಿಸಿ ಸಾಬರಿಂದ ಹೊಡೆಯಿಸುತ್ತಾರೆಂದು ಗೊತ್ತಾದೊಡನೆ ಮರೆಯಲ್ಲಿ ನಿಂತು ವೀಕ್ಷಿಸುತ್ತಿದ್ದ ಅವನು ತನ್ನ ಅತ್ತೆ ಸೇಸಿಗೆ ಆ ದುರಂತ ವಾರ್ತೆಯನ್ನು ತಿಳಿಸಲೆಂದು ಕೇರಿಯ ಕಡೆಗೆ ಓಡುತ್ತಿದ್ದವನಿಗೆ ತನ್ನ ಇದಿರಾಗಿ ಏದುತ್ತಾ ಬೇಗಬೇಗನೆ ಕುಕ್ಕೋಟದಿಂದ ಧಾವಿಸಿ ಬರುತ್ತಿದ್ದ ಸೇಸಿಯ ಇದಿರಾಗಿದ್ದಳು. ಮಗಳನ್ನು ಗುತ್ತಿಯೊಡನೆ ಓಡಿಹೋಗುವಂತೆ ಮಾಡಿ. ಅದನ್ನು ಗುಟ್ಟಾಗಿಟ್ಟಿದ್ದ ತನ್ನ ವರ್ತನೆಯಿಂದ ತನ್ನ ಗಂಡನಿಗೂ ಹಿರಿಯ ಮಗನಿಗೂ ಏನು ಗತಿಯಾಗುತ್ತದೆಯೋ ಎಂದು ಹೆದರಿ, ಪಶ್ಚಾದವಿವೇಕದಿಂದ ಪ್ರಚೋದಿತಳಾಗಿ ಅವಳು “ಮನೆ” ಗೆ ಓಡಿಬರುತ್ತಿದ್ದಳು. ಬಚ್ಚನಿಂದ ನಡೆಯುತ್ತಿದ್ದ ಸಂಗತಿಯನ್ನೆಲ್ಲ ತಿಳಿಯುತ್ತಾ ಅವರೊಡನೆ ಅವನ ಹಿಂದೆಯೆ ಓಡೋಡಿ ಬಂದು ಚಾವಡಿಗೆ ತುಸು ದೂರದಲ್ಲಿದ್ದ ಹೆಬ್ಬಸಿರಿ ಮರದ ಬುಡದಲ್ಲಿ ಮರೆಯಾಗಿ ನಿಂತು ನೋಡುತ್ತಿದ್ದಂತೆಯೆ ಮಗನ ಒರಲು ಕಿವಿಗೆ ಬಿದ್ದು ತಾಯಿಯ ಕರುಳನ್ನೆ ಇರಿದು ಕೊರಲನ್ನೆ  ಕೊಯ್ದಂತಾಗಲು, ಪುತ್ರಮೋಹಾವೇಶವಶಳಾಗಿ ಸಣ್ಣಬೀರನ ರಕ್ಷೆಗೆ ನುಗ್ಗಿದಳು!
ಸೇಸಿ ಅತ್ತ ನುಗ್ಗಿದೊಡನೆ ಬಚ್ಚ ಇತ್ತ ಹಿತ್ತಲು ಕಡೆಯ ಬಾಗಿಲಿಗೆ  ಧಾವಿಸಿ ಆಸ್ತಾನದಲ್ಲಿ ಆಗುತ್ತಿದ್ದ ಅನಾಹುತವನ್ನು ತಪ್ಪಿಸಲು ಅಂತಃಪುರಕ್ಕೆ ದುರುಕೊಟ್ಟಿದ್ದನು.
ಅಡುಗೆಯ ಮನೆಯಲ್ಲಿ, ಒಲೆಗಳಿದ್ದ ಸ್ಥಳದಿಂದ ಸ್ವಲ್ಪದೂರದಲ್ಲಿ, ಮರದ ಸರಳುಗಳ ಬೆಳಕಂಡಿಯಿಂದ ತೂರಿಬರುತ್ತಿದ್ದ ಎಳಬಿಸಿಲಿನ ಪಟ್ಟೆಪಟ್ಟೆ ರಂಗೋಲಿಯಂತಹ ಬೆಳಕು ನೆಳಲಿನ ಜಾಗದಲ್ಲಿ ‘ಉರುಡು ಹಾಸಗೆ’ಯ ಮೇಲೆ ಅಂಗಾತನೆ ‘ಉರುಡುಹಾಕಿದ್ದ’ ಬತ್ತಲೆ ಮೆಯ್ಯ ಮೊಮ್ಮಗ ಚೆಲುವಯ್ಯನನ್ನು ಆಡಿಸುವ ಸುಖದಲ್ಲಿ ಸಂಪೂರ್ಣವಾಗಿ ಮಗ್ನರಾಗಿದ್ದ ದೊಡ್ಡಮ್ಮ ಹೆಗ್ಗಡಿತಿಯವರು ಬಚ್ಚನು ಕಿಟಕಿಯಾಚೆಯಿಂದಲೆ ಕೂಗಿ ಹೇಳಿದ್ದನ್ನು ಕೇಳಿ “ತಮ್ಮಾ, ತಮ್ಮಾ, ಅಲ್ಲಿ ಓಡಿಹೋಗಪ್ಪಾ! ಏನಾದ್ರೂ ಆದಲಾರದ್ದು ಆಗಿಬಿಟ್ಟಾತು! ಅವರಿಗೆ ಸಿಟ್ಟು ಬಂದಾಗ ಮೈಮೇಲೆ ಎಚ್ಚರಿರಾದಿಲ್ಲ. ಅಯ್ಯೋ ದೇವರೆ!” ಎಂದು, ಅಂಕಟದನಿಯಲ್ಲಿ, ಒಲೆಯ ಬಳಿ ತನ್ನ ಹೆಂಡತಿ ದೇವಮ್ಮಗೆ ಕಾಫಿಗೆ ಹಾಕುವ ಹಿಟ್ಟಿನ ಪ್ರಮಾಣವನ್ನೂ ಕಾಫಿ ತಯಾರಿಸುವ ರೀತಿಯನ್ನೂ ತೋರಿಸಿ ಕೊಡುತ್ತಿದ್ದ ದೇವಯ್ಯನಿಗೆ ಹೇಳಿದರು. ಮದ್ದು ಮೊಮ್ಮಗನ ಮಿದುವಾದ ನಸುಗೆಂಪಿನ ಮೆಯ್ಯ ಕೋಮಲತೆಯನ್ನು ತನ್ನ ಮುದಿ ಒರಟು ಅಂಗೈಯಿಂದ ಮುಟ್ಟಿ ನೀವಿ ದಿವ್ಯಸುಖಾನುಭವ ಮಾಡುತ್ತಿದ್ದ ಅಜ್ಜಮ್ಮಗೆ ಬಚ್ಚನು ಕೊಟ್ಟ ಸುದ್ದಿ ಕಡು ಕಠಿನ ಕರ್ಕಶದಂತೆ ತೋರಿತ್ತು. ಹಿಂದೊಮ್ಮೆ ಜೀತದಾಳು ಹೊಲೆಯನೊಬ್ಬನ ಎದೆಯಮೇಲೆ ಹಲಗೆ ಹಾಕಿಸಿ ಮೆಟ್ಟಿಸಿ, ಅವನು ರಕ್ತಕಾರಿಕೊಂಡು, ತರುವಾಯ ಮೃತನಾಗಿದ್ದ ಕಹಿನೆನಪು ಮರುಕೊಳಿಸಿ ಅವರಿಗೆ ಅಸಹ್ಯವೇದನೆ ಯಾಯಿತು. ಶಿಶು ಚೆಲುವಯ್ಯನ ಕೈ ಕಾಲು ಒದರಾಟ, ತೊದಲು ತೊದಲು ಉಲಿದಾಟ, ತಿಳಿಯಾದ ಮುಗ್ಧ ಕಣ್ಣುಗಳ ಸುಳಿದಾಟ – ಇವುಗಳ ತಮ್ಮ ಗಂಡನನ್ನೂ ತನ್ನನ್ನೂ ಕ್ರೂರಕರ್ಮಗಳಿಗಾಗಿ ಭರ್ತ್ಸನೆಮಾಡುವಂತೆ ಭಾಸವಾಯಿತು. ಮತ್ತೊಮ್ಮೆ ದೇವಯ್ಯನಿಗೆ ಅಂಗಲಾಚಿದರು: “ಹೋಗೋ, ತಮ್ಮಾ, ಬ್ಯಾಗ ಆ ದುಣ್ಣ ಮುಂಡೇಗಂಡ, ಸಾಬಿ, ಹೊಡೆದು ಕೊಂದೇ ಬಿಟ್ಟಾನು! ಆ ಪಾಪ ಹೊತ್ತುಕೊಂಡು ನಾವು ಎಲ್ಲಿ ತೀರಿಸಾನ? ಆ ಸಣ್ಣಬೀರನೊ ಮೊನ್ನೆ ಮೊನ್ನೆ ಮದುವೆ ಆಗ್ಯಾನೆ! ಅಯ್ಯೋ ದೇವರೆ!”
ಬೆಟ್ಟಳ್ಳಿಮನೆಗೆ ಕಾಫಿ ಪ್ರವೇಶವಾಗಿ ಬಹಳಕಾಲ ಆಗಿರಲಿಲ್ಲ. ತನ್ನ ತಾಯಿಗೂ ಹೆಂಡತಿಗೂ ಕಾಫಿ ಸರಿಯಾಗಿ ತಯಾರಿಸಲು ಬರುವುದಿಲ್ಲ ಎಂಬುದು ದೇವಯ್ಯನ ಮತವಾಗಿತ್ತು. ಅವನ ಪಾಲಿಗೆ ಉತ್ತಮ ಕಾಫಿಗೆ ಒರೆಗಲ್ಲು ಎಂದರೆ ಪಾದ್ರಿ ಜೀವರತ್ನಯ್ಯನ ಮಗಳು, ಜೋತಿರ್ಮಣಿಯಮ್ಮ, ಅವರು ತೀರ್ಥಹಳ್ಳಿಗೆ ಹೋದಾಗಲೆಲ್ಲ ಅವನಿಗೆ ಮಾಡಿಕೊಡುತ್ತಿದ್ದ ಕಾಫಿ. ದೇವಮ್ಮ ಗಂಡನ ಉಪದೇಶಾತ್ಮಕ ಉಪನ್ಯಾಸವನ್ನು ಪರಿಹಾಸಾಂಚಿತ ಕಿರು ನಗೆಯಿಂದ ಸುಮ್ಮನೆ ಹೂಂಗುಡುತ್ತಿದ್ದಳು. ಅವಳಿಗೆ ಅವನ ಬೋಧನೆಯಿಂದ ಯಾವ ಪ್ರಯೋಜನವೂ ಆಗುವಂತಿರಲಿಲ್ಲ. ತನ್ನ ಗಂಡನಿಗಿಂತಲೂ ತನಗೇ ಅದರಲ್ಲಿ ಹೆಚ್ಚು ಅಭಿರುಚಿಯೂ ಅನುಭವವೂ ಇದೆ ಎಂಬುದು ಅವಳ ನಂಬಿಕೆಯಾಗಿತ್ತು. ಜೋತಿರ್ಮಣಿಯ ಕಾಫಿಯ ರುಚಿಗೆ ಏನು ಕಾರಣ ಎಂಬುದೂ ಅವಳ ಹೆಣ್ಣೆದೆಗೆ ಗೋಚರವಾಗಿತ್ತು! ಆದ್ದರಿಂದಲೆ ಅವಲು ಸ್ವಲ್ಪ ವಿಡಂಬನ, ಸ್ವಲ್ಪ ಪರಿಹಾಸ, ಸ್ವಲ್ಪ ತಿರಸ್ಕಾರ, ಸ್ವಲ್ಪ ಮಾತ್ಸರ್ಯಗಳಿಂದ ಹಾಸುಹೊಕ್ಕಾಗಿ ಕಿರುನಗೆಯನ್ನು ಬೀರುತ್ತಾ ಪಾತ್ರೆಯ ಮೇಲೆ ಬಾಗಿ ಗಂಡನ ಮಾತಿಗೆ ಕಿವಿಗೊಡುವಂತೆ ನಟಿಸುತ್ತಿದ್ದಳು. ಅವಲ ಮನಸ್ಸೆಲ್ಲ ‘ಉರುಡು ಹಾಸಿಗೆ’ಯ ಮೇಲಿದ್ದ ಮುದ್ದು ಕಂದನಿಗೆ ಮೊಲೆಕೊಡಲು ಹೊತ್ತಾಯಿತಲ್ಲಾ ಎಂಬುದರ ಕಡೆಗೇ ಇದ್ದಿತು. ಅತ್ತೆ ಗಂಡನಿಗೆ ಬೇಗ ಚಾವಡಿಗೆ ಹೋಗುವಂತೆ ಬೆಸನಿತ್ತಾಗ, ಅವಳು ಅದ್ಯಕ್ಕೆ ಉಪದೇಶ ಮುಗಿಯುವುದಲ್ಲಾ ಎಂದು ಸುಯ್ಯುತ್ತಾ ನೆಟ್ಟಗೆ ನಿಂತಳು, ಕೊರಳಿನಿಂದ ನೇತುಬಿದ್ದಿದ್ದ ಕರಿಮಣಿ ತಾಳಿಯ ಸರವೂ ಕಟ್ಟಾಣಿಯೂ ಎದೆಗವುಚಿ ಗೊಬ್ಬೆ ಸೆರಗಿನಲ್ಲಿ ಹುದುಗುವಂತೆ.
ಅವ್ವನ ಆಣತಿಗೆ ದೇವಯ್ಯ “ಇರಲವ್ವಾ, ಹೋಗ್ತೀನಿ…. ಆ ಬಟ್ಟಿ ಮಕ್ಕಳಿಗೆ ಬೆನ್ನು ಮುರಿಯೋ ಹಾಂಗೆ ಒಂದೆರಡು ಬೀಳಲಿ!…. ಬಚ್ಚನಿಗೆ ಹೇಳಿದ್ರಂತೆ ಆ ದೊಡ್ಡಬೀರನ ಬಿಡಾರದವರು….” “ಏ, ನೀ ಎತ್ತಲಾಗಿ ನೋಡ್ತಿದ್ದೀಯೆ? ನಾ ಹೇಳಾದನ್ನ ಸ್ವಲ್ಪ ಕಿವಿ ಮೇಲೆ ಹಾಕಿಕೊ! ಸುಮ್ಮನೆ ದಿನಾ ಬೋರುಗಾಫಿ ಮಾಡಬ್ಯಾಡ!” ಎಂದು ಆಗತಾನೆ ನೆಟ್ಟಗೆ ನಿಂತಿದ್ದ ಹೆಂಡತಿಯ ಕಡೆ ಮುನಿದು ನುಡಿದು, ಮತ್ತೆ ತಾಯಿತನ್ನು ನಿರ್ದೇಶಿಸಿ ಹೇಳಿದನು: “ಹೇಳಿದ್ರಂತೆ ಆ ದೊಡ್ಡಬೀರನ ಕಡೆಯವರು ನಮ್ಮ ಗಾಡಿ ಬಚ್ಚನಿಗೆ ‘ನಿನಗ್ಯಾರೋ  ಹೆಣ್ಣುಕೊಡ್ತಾರೆ? ಸಣ್ಣಗೌಡ್ರು ತಾಂವೂ ಜಾತಿ ಕೆಡೋದಲ್ಲದೆ, ನಿನ್ನೂ ಜಾತಿ ಕೆಡಿಸಾಕೆ ಹೊಲ್ಟಾರೆ! ನಮಗೆ ಇಷ್ಟಾ ಇಲ್ಲಪ್ಪ, ಜಾತಿ ಕೆಡಾಕೆ!’ ಅಂತ….”
“ಕಾಫಿ ಹಿಟ್ಟು, ಈಗೇನು ಎಲ್ಲಿಗೂ ಓಡಿಹೋಗೋದಿಲ್ಲ! ಆಮೇಲೆ ಹೇಳಿಕೊಡಬಹುದಂತೆ! ಈಗ ಹೋಗಿ; ಬಿಡಿಸಿ ಅವನ್ನ!” ಎಂದಳು ದೇವಮ್ಮ, ತನ್ನ ಕಡೆ ನೋಡುತ್ತಿದ್ದ  ಗಂಡನ ಕಣ್ಣನ್ನು ಒಲವಿನಿಂದಿರಿದು ನೋಡಿ.
ದೇವಯ್ಯ ನಿರುಪಾಯನಾದವನಂತೆ ಸರಕ್ಕನೆ ಎದ್ದು ಚಾವಡಿಗೆ ಧಾವಿಸಿದನು.
ಅವನು ಹೋಗಿ ಎರಡು ಮೂರು ನಿಮಿಷ ಆಗಿರಲಿಲ್ಲ. ಮತ್ತೆ ಓಡುತ್ತಲೆ ಒಳಗೆ ಬಂದು  “ಅವ್ವಾ, ಅವ್ವಾ, ಒಂದು ಸ್ವಲ್ಪ ತೆಂಗಿನೆಣ್ಣೆ ಕೊಡು….” ಎಂದು ಬರಿದಾಗಿದ್ದ ಉರುಡು ಹಾಸಗೆಯ ಬಳಿಯಿದ್ದ ತಾಯಿಗೆ ಹೇಳಿ, ತನ್ನ ಹೆಂಡತಿಯನ್ನು ಹುಡುಕುವವನಂತೆ ಅತ್ತ ಇತ್ತ ನೋಡಿ “ಅವಳೇಲ್ಲಿ? ಆ ಪಾದ್ರಿ ಕೊಟ್ಟಿದ್ದ ಗಾಯಕ್ಕೆ ಹಾಕುವ ಔಷಧ, ಬಿಳಿಪುಡಿ, ಬೇಕಿತ್ತಲ್ಲಾ!” ಎಂದನು.
ತುಸು ಕತ್ತಲಾಗಿದ್ದೆಡೆಯಲ್ಲಿ ಚೆಲುವಯ್ಯನಿಗೆ ಮೊಲೆ ಕೊಡುತ್ತಾ ಆ ಸುಖಾನುಭವದಲ್ಲಿ ಮಗ್ನೆಯಾಗಿ ಕುಳಿತಿದ್ದ ದೇವಮ್ಮ ತನ್ನ ಬಿಳಿ ಮೈ ಕಾಣಿಸುತ್ತಿದ್ದ ವಕ್ಷಭಾಗವನ್ನು, ಮಗನಿಗೆ ಮೊಲೆ ಉಣ್ಣಲು ತೊಂದರೆಯಾಗದಂತೆ, ಬೇಗಬೇಗನೆ ಸೆರಗೆಳೆದು ಓರೆಮಾಡಿಕೊಂಡು ಹೇಳಿದಳು: “ಆ ಬಿಳಿಪುಡಿ ಪುಟ್ಣಾನೆ? ನಮ್ಮ ಕೋಣೆ ನಾಗಂದಿಗೆ ಮೇಲೆ ಇರಬೇಕು. ಹುಡುಕಿನೋಡಿ ನೀವೇ ತಗೊಳ್ಳಿ” ತಾನು ಆಗತಾನೆ ಕೈಗೊಂಡಿದ್ದ ಕೆಲಸದ ಮಹತ್ತು ಗಂಡನಿಗೆ ಮನದಟ್ಟಾಗಲಿ ಎಂಬುದು ಅವಳ ಇಂಗಿತವಾಗಿತ್ತು.
“ಏನಾಗಿದೆಯೋ, ತಮ್ಮಾ?” ದೊಡ್ಡಮ್ಮ ಹೆಗ್ಗಡತಿಯರು ಆದಷ್ಟು ಸರಭಸವಾಗಿ ಕಾತರತೆಯಿಂದಲೆ ಎದ್ದು ಎಣ್ಣೆ ಕುಡಿಕೆಯನ್ನು ಮೂಲೆಯಲ್ಲಿದ್ದ ಸಿಕ್ಕದಿಂದ ತೆಗೆದುಕೊಡುತ್ತಾ ಕೇಳಿದರು.
“ಆಗೋದೇನು? ಆ ಕೋಣೆಯ, ಇಜಾರದ ಸಾಬಿ, ಅಡಸಲಾ ಬಡಸಲಾ ಹೊಡೆದು ಬಿಟ್ಟಿದ್ದಾನೆ!” ಎನ್ನುತ್ತಾ ಎಣ್ಣೆಕುಡಿಕೆ ಈಸಿಕೊಂಡು, ಗಾಯಕ್ಕೆ ಹಾಕುವ ಔಷಧಿಯನ್ನು ತೆಗೆದುಕೊಳ್ಳಲು ತಮ್ಮ ಮಲಗುವ ಕೋಣೆಗೆ ಓಡಿದನು, “ನಮ್ಮ ಅಪ್ಪಯ್ಯಗೆ ಯಾವಾಗ ಬುದ್ದಿ ಬರ್ತದೆಯೋ? ನಾ ಕಾಣೆ!” ಎಂದುಕೊಳ್ಳುತ್ತಾ.
ಅದನ್ನಾಲಿಸಿದ ಅವನ ತಾಯಿ, ಹಿಂದೊಮ್ಮೆ ದೇವಯ್ಯ ತುಳಸಿಕಟ್ಟೆಯನ್ನು ಮೀಟಿ ತೆಗೆಯಲು ಸವೆಗೋಲು ತೆಗೆದುಕೊಂಡು ಅಂಗಳಕ್ಕಳಿದಾಗ ಬಾರುಮಾಡಿದ್ದ ಕೋವಿಯನ್ನೆ ಮಗನ ಕಡೆಗೆ ಗುರಿಹಿಡಿದು, ತಾನು ಅದನ್ನು ತಡೆದಿದ್ದಾಗ ಇದ್ದ ತನ್ನ ಗಂಡನ ಉಗ್ರ ಸ್ವರೂಪವನ್ನು ನೆನೆದುಕೊಂಡು “ಅಯ್ಯೋ! ದೇವರೇ!” ಎಂದು ದೀರ್ಘವಾಗಿ ಸುಯ್ದರು!
ಆದರೆ ಅಡುಗೆಮನೆಯ ಒಂದು ಕಂಬಕ್ಕೆ ಬೆನ್ನು ಆನಿಸಿ ಇರಗಿ ಚಿಕ್ಕಾಲು ಬಕ್ಕಾಲು ಹಾಕಿ ಅರೆಗತ್ತಲಲ್ಲಿ ಕುಳಿತಿದ್ದ ಅಮ್ಮನ ತೊಡೆಯ ಮೇಲೆ  ಮಲಗಿ ಮೃದು ಸಶಬ್ದವಾಗಿ ಮೊಲೆಯುಣ್ಣುತ್ತಿದ್ದ ಕಂದನ ಆನಂದವನ್ನು ಸಾಸಿರ್ಮಡಿಯಾಗಿ ಸವಿಯುತ್ತಾ ಸುಖಮೂರ್ಛೆಗೆ ಸದೃಶವಾದ ಚಿತ್ತಸ್ಥಿತಿಯಲ್ಲಿದ್ದ ಚೊಚ್ಚಲುತಾಯಿ ದೇವಮ್ಮನ ಪ್ರಜ್ಞೆಗೆ ಹೊರಗಣ ಲೋಕದ ಕಠೋರತೆಯಾಗಲಿ ಕ್ರೌರ್ಯವಾಗಲಿ ತಮ್ಮ ತೀಕ್ಷ್ಣವಾಸ್ತವ ರೂಪದಲ್ಲಿ ಪ್ರವೇಶಿಸುವಂತಿರಲಿಲ್ಲ. ಕಾವ್ಯ ಪ್ರಪಂಚದಲ್ಲಿ ಯಾತ್ರಿಯಾಗುವ  ರಸಾಸ್ವಾದಿ ಸಹೃದಯನ ಪ್ರಜ್ಞೆಗೆ ಸಂಭವಿಸುತ್ತದೆ ಎಂದು ಹೇಳಲಾಗುವ ಒಂದು ಸದ್ಯಃಪರವಾದ ನಿರ್ವೃತಿ ಅವಳ ಚೇತನವನ್ನು ತನ್ನ ವಕ್ಷಸ್ಥಲದಲ್ಲಿಟ್ಟುಕೊಂಡು ರಕ್ಷಿಸಿತ್ತು. ತನ್ನ ಜೀವದ ಸಾರಸರ್ವಸ್ವವೆ ಬಹಿರ್ಭೂತವಾಗಿ ಮುದ್ಧಿನ ಮುದ್ದೆಯಾದಂತಿದ್ದ ತನ್ನ ಕಂದನ ಮಿದು ತುಟಿ ತನ್ನೆದೆಯ ಪೀಯೂಷಕಲಶದ ತೊಟ್ಟಿಗೆ ಸೋಕಿ ಅದನ್ನು ಚೀಪುತ್ತಿರುವಾಗ ಸಂಸಾರದ ಯಾವ ಕೋಟಲೆಯೂ ಅವಳ ರಸನಿದ್ರಾ ಸಮಾಧಿಗೆ ಭಂಗ ತರಲು ಸಮರ್ಥವಾಗಿರಲಿಲ್ಲ: ಸಣ್ಣಬೀರನ ಸಂಕಟವಾಗಲಿ, ತನ್ನ ಗಂಡನ ಬಹು ಪ್ರಣಯಾಶಂಕೆಯಾಗಲಿ, ತನ್ನ ಹಳೆಮನೆಯ ಅಕ್ಕಯ್ಯಗೆ ಒದಗಿದ್ದ ಮಹಾವಿಪತ್ತಾಗಲಿ! ತಾಯಿ ಕೊಟ್ಟಳು; ಮಗು ಈಂಟಿತು: ಜಗತ್ತಿನ ಇತರ ಕರ್ಮಗಳೆಲ್ಲ ತತ್ಕಾಲದಲ್ಲಿ ಸ್ಥಗಿತಗೊಂಡಂತಿದ್ದುವು, ವಿಶ್ವಗೌರವಭಾಜನವಾದ ಆ ಜಗದ್ಭವ್ಯ ಘಟನೆಯ ಮುಂದೆ!
*****

ಕಾಮೆಂಟ್‌ಗಳಿಲ್ಲ: