ಮಲೆಗಳಲ್ಲಿ ಮದುಮಗಳು-೨೬

ಕೋಣೂರಿನಲ್ಲಿದ್ದುಕೊಂಡು ಐಗಳ ಕೂಲಿಮಠದಲ್ಲಿ ಓದುತ್ತಿದ್ದ ಹುಡುಗರೆಲ್ಲ ಬೆಳಿಗ್ಗೆ ಗಂಜಿಯುಂಡಾದ ಮೇಲೆ ಎಂದಿನಂತೆ ಕೆಳಗರಡಿಗೆ ಬಂದರು. ಹಲಗಣೆಯ ಕಂಡಿಯಲ್ಲಿ ನೋಡಿದಾಗಲೆ ಅವರಿಗೆ ನೆನಪಾದದ್ದು.
“ಓಹೋ, ಇವತ್ತು ಆಡಿಕೆ ಕಣ್ರೋ, ಐಗಳು ಇಲ್ಲ.”
“ಮುಂದಿನ ಬೇಸ್ತುವಾರದತನಕ ಅಲ್ಲೇನೋ ಆಡಿಕೆ?”
“ಬೇಸ್ತುವಾರದ ತನಕ ಅಂತಾನೆ! ಆಯಿತುವಾರದ ತನಕ ಕಣೋ!”
“ಬನ್ರೋ, ಲಗ್ಗೆಮಣೆ ಆಡಾನ.”
“ನೀವೆಲ್ಲಾ ಕಣಕ್ಕೆ ಹೋಗ್ರೋ, ನಾ ಲಗ್ಗೆ ಚಂಡು ಮಣೆ ಹುಡುಕಿ ತರತೀನಿ…. ನಿನ್ನೆ ಆಡಿದಮೇಲೆ ಎಲ್ಲಿಟ್ಟೆಯೊ ಅವನ್ನ, ಏ ತಿಮ್ಮೂ?”
“ನಾನಲ್ಲ ಕಣೋ ಇಟ್ಟಿದ್ದು; ಧರ್ಮು ಅಂತಾ ಕಾಣ್ತದೆ.”
“ಎಲ್ಲಿಟ್ಟೀಯೋ, ಧರ್ಮು?”
“ಅಂವ ಇಲ್ಲಿ ಇಲ್ಲಲ್ಲೋ! ಎಲ್ಲಿ ಹೋದನೋ?….”
“ಮತ್ತೆಲ್ಲಿ ಹೋಗ್ತಾನೆ? ಗಂಜಿ ಉಂಡಾಂವ ಹಳ್ಳದ ಕಡೆಗೆ ಹೊರಟಾ ಅಂತಾ ಕಾಣ್ತದೆ!”
ಹುಡುಗರೆಲ್ಲ ನಕ್ಕರು. ಲಗ್ಗೆಮಣೆ ಚಂಡು ತರಲು ಹೊರಟಿದ್ದವನು ಅವನ್ನು ಹುಡುಕಿ ತರಲು ಮನೆಯೊಳಗೆ ಓಡಿದನು. ಉಳಿದವರು ಕೇಕೆ ಹಾಕುತ್ತಾ ಕಣದ ಅಂಗಳಕ್ಕೆ ಓಡಿದರು.
ಮಣೆ ಚೆಂಡು ಎರಡನ್ನೂ ಹುಡುಕಿ ತಂದಮೇಲೆ, ಎಳಬಿಸಿಲು ಮನೋಹರವಾದ ಮರದಳಿರಿನಿಂದ ಸೋಸಿ ಬಂದು ನೆಳಲು ಬೆಳಕಿನ ರಂಗೋಲಿ ಎರಚಿದಂತಿದ್ದ ಕಣದ ವಿಶಾಲವಾಗಿದ್ದ ಅಂಗಳದಲ್ಲಿ ಮಣೆಯನ್ನು ಕಟ್ಟಿಯ ಆಪುಕೊಟ್ಟು ಹೂಡಿ, ಲಗ್ಗೆಯಾಟ ಪ್ರಾರಂಭಿಸುವ ಮೊದಲು ಎರಡು ಪಕ್ಷಗಳನ್ನು ವಿಂಗಡಿಸತೊಡಗಿದರು. ತಿಮ್ಮು ಒಂದು ಕಡೆಯ ಮುಖಂಡನೆಂದೂ ಕಾಡು ಮತ್ತೊಂದು ಕಡೆಯ ಮುಖಂಡನೆಂದೂ ಗೊತ್ತಾಗಿ, ತಮಗೆ ಬೇಕಾದವರನ್ನು ಹೆಸರು ಹಿಡಿದು ಕೂಗಿದರು. ಲಗ್ಗೆಯಾಟದಲ್ಲಿ ಮಣೆಗಾಗಲಿ ಹಗೆಗಾಗಲಿ ಚೆಂಡನ್ನು ಗುರಿಯಿಟ್ಟು ಹೊಡೆಯುವುದರಲ್ಲಿ ಎತ್ತಿದಕ್ಕೆ ಆಗಿದ್ದ ಧರ್ಮುವ ಹೆಸರನ್ನು ತಿಮ್ಮು ಮೊದಲು ಕೂಗಿದಾಗ, ಕಾಡು ಅದಕ್ಕೆ ತಕರಾರು ಮಾಡಿದರು. ಧರ್ಮುವ ಹೆಸರನ್ನು ಕೂಗುವುದಾದರೆ ತನಗೇ ಆ ಮೊದಲ ಸರದಿ ಬೇಕೆಂದು, ಹುಡುಗರೆಲ್ಲ ಅತ್ತ ಇತ್ತ ಕಣ್ಣು ತಿರುಗಿಸಿ ಹುಡುಕಿನೋಡಿದಾಗಿ ತಮ್ಮ ಗುಂಪಿನಲ್ಲಿ ಧರ್ಮು ಇಲ್ಲದಿರುವುದು ಮತ್ತೆ ಅವರೆಲ್ಲರ ಗಮನಕ್ಕೆ ಬಂತು.
“ಅಯ್ಯೋ ಧರ್ಮು ಎಲ್ಲಿ ಹೋದನೊ? ಕರೆಯೊ!”
“ಹೊರಕಡೆಗೆ ಹೋಗಿರಬೇಕೊ, ಬರ್ತಾನೊ. ನಿನ್ನೆ ಹೊಟ್ಟೆನೋವು ಅಂತಾ ಅಳ್ತಿದ್ದ ಕಣೋ.”
“ಹೊಟ್ಟೆನೋವು ಗಿಟ್ಟೆನೋವು ಎಲ್ಲ ಬರೀ ನೆವ ಕಣೋ….”
“ಮತ್ತೆ?”
“ಅವನ ಅಪ್ಪಯ್ಯನ್ನ ನೆನಸಿಕೊಂಡಾ ಅಂತಾ ಕಾಣ್ತದೆ. ಆಗಾಗ ಕದ್ದುಕೂತು ಅಳ್ತಿರ್ತಾನೆ. ಫಕ್ಕನೆ ಯಾರಾದ್ರೂ ಕಂಡ್ರೆ ಕೇಳಿದ್ರೆ, ಹೊಟ್ಟೆನೋವು ತಲೆನೋವು ಅಂತಾ ಸುಳ್ಳುಸುಳ್ಳೆ ಹೇಳ್ತಾನೆ….”
ಇದ್ದಕ್ಕಿದ್ದ ಹಾಗೆ ಮಕ್ಕಳ ಗುಂಪು ನಿಃಶಬ್ದವಾಯಿತು. ಎಲ್ಲರ ಮುಖದಲ್ಲಿಯೂ ಏನೊ ಸಂಕಟದ ಸಹಾನುಭೂತಿಯ ಛಾಯೆ ಸುಳಿಯಿತು. ಅವರಲ್ಲಿ ಒಬ್ಬೊಬ್ಬರಿಗೂ ಆ ಗುಟ್ಟು ಗೊತ್ತಿತ್ತು ಎಂಬುದು ಸ್ಪಷ್ಟವಾಗಿತ್ತು. ಅಲ್ಲದೆ ಮೇಲೆಮೇಲೆ ಏನೂ ಗೊತ್ತಿಲ್ಲದವರಂತೆ ನಿಶ್ಚಿಂತರಾಗಿ ಕ್ರೀಡಾಮಗ್ನರಾಗಿ ತೋರುತ್ತಿದ್ದರೂ ಒಬ್ಬೊಬ್ಬರೂ ಅದರ ವಿಚಾರವಾಗಿ ಗುಟ್ಟಾಗಿ ಆಲೋಚಿಸಿದ್ದರು, ವ್ಯಸನಪಟ್ಟಿದ್ದರು, ಆಗೊಮ್ಮೆ ಈಗೊಮ್ಮೆ ಪರಸ್ಪರ ವಿಚಾರ ವಿನಿಮಯವನ್ನೂ ಮಾಡಿಕೊಂಡಿದ್ದರು. ಧರ್ಮುವಿನ ಗುಣ ಸಾಮರ್ಥ್ಯಗಳಿಗೆ ಮಾತ್ರವಲ್ಲದೆ ಈ ಕಾರಣಕ್ಕಾಗಿಯೂ ಎಲ್ಲರೂ ಅವನನ್ನು ವಿಶೇಷವಾದ ಅಕ್ಕರೆಯಿಂದ ಕಾಣುತ್ತಿದ್ದರು; ಅವನ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದ್ದರಿಂದಲೆ ತಿಮ್ಮು ಕೈಯಲಿದ್ದ ಲಗ್ಗೆಯ ಚೆಂಡನ್ನು ಯಾಂತ್ರಿಕವಾಗಿ ತಿರುಗಿಸುತ್ತಾ ಹೇಳಿದನು, ಅತ್ತ ಇತ್ತ ನೋಡುತ್ತಾ, ಗೆಳೆಯರಿಗೆ ಮಾತ್ರ ಯಾವುದೋ ರಹಸ್ಯವನ್ನು ಬಯಲುಮಾಡುವಂತೆ: “ಹೌದು ಕಣ್ರೋ! ಅವತ್ತೊಂದು ದಿವ್ಯ, ರಾತ್ರಿ, ನಾವೆಲ್ಲ ಮಲಗಿಕೊಳ್ತೀವಲ್ಲ ಒಟ್ಟಿಗೆ ಜಗಲೇಲಿ ಅಲ್ಲಿ. ನೀವೆಲ್ಲ ನಿದ್ದೆ ಮಾಡ್ತಿದ್ರಿ; ನಂಗೆ ಎಚ್ಚರಿತ್ತು…. ಚಿಕ್ಕಯ್ಯ, – ಮುಕುಂದಚಿಕ್ಕಯ್ಯ, – ಧರ್ಮುನ ಪಕ್ಕದಾಗೆ ಮಲಗಿಸಿಕೊಳ್ತಾರಲ್ಲಾ? ಯಾಕೆ ಅಂತೀರಿ? ಅದಕ್ಕೇ! ಧರ್ಮು ನಿದ್ದೆ ಮಾಡ್ತಾನೇ ಎದ್ದು ಬಿಡ್ತಾನೆ ಒಂದೊಂದು ಸಾರಿ. ‘ಅವ್ವಾ ಅವ್ವಾ, ಅಪ್ಪಯ್ಯ ಬಂದ್ರು, ನೋಡಿಲ್ಲಿ!’ ಅಂತಾ ದಡ ದಡ ಹೋಗ್ತಾ ಹೇಳ್ತಾನೆ: ‘ಬಾಗಿಲು ತೆಗಿ, ಅವ್ವಾ, ಅಪ್ಪಯ್ಯ ಕರೀತಾನೆ!’ ಅಂತಾ! ನಾನು ‘ಚಿಕ್ಕಯ್ಯಾ ಚಿಕ್ಕಯ್ಯಾ’ ಅಂತಾ ಕರೀಬೇಕು ಅಂತಾ ಮಾಡಿದ್ದೆ. ಅಷ್ಟರಲ್ಲಿ ಅವರಿಗೇ ಫಕ್ಕನೆ ಎಚ್ಚರಾಯ್ತು. ಎದ್ದು ಓಡಿಹೋಗಿ ಅವನ್ನ ಹಿಡುಕೊಂಡು ಬಂದು ಕೂರಿಸಿ ಎಚ್ಚರಮಾಡಿದ್ರು: ‘ಧರ್ಮು! ಧರ್ಮು! ಕಣ್ಣು ಬಿಡೋ! ನಾನು ಕಣೋ ನಿನ್ನ ಸಣ್ಣಮಾವ! ಎಚ್ಚರ ಮಾಡಿಕೊಳ್ಳೋ!’ ಅಂತಾ ಹೇಳಿ, ಅವನ್ನ ಅಳ್ಸಾಡ್ಸಿ ಎಚ್ಚರಮಾಡಿದ್ರು!”
ತಿಮ್ಮು ಮುಗಿಸುವುದನ್ನೆ ಕಾಯುತ್ತಿದ್ದ ಕಾಡು ಅಳುಮೊಗ ಮಾಡಿಕೊಂಡು ಹೇಳಿದನು: “ಮತ್ತೇ! ಮತ್ತೇ! ನಾ ಹೇಳ್ತೇನಿ ಕೇಳ್ರೋ! ಮತ್ತೇ! ಮತ್ತೇ!” ಉಗುಳು ನುಂಗಿಕೊಂಡು ಮುಂದುವರೆಸಿದನು: “ಅವತ್ತೊಂದು ದಿವ್ಸ ಕಣೋ! ನಾ ಬಾಯಿತಪ್ಪಿ ಹಳೆಮನೆ ಅತ್ತೆಮ್ಮನ್ನ, ಎಲ್ಲರೂ ಕರೀತಾರೆ ಅಂತಾ ನಾನೂ, – ಬಾಯಿತಪ್ಪಿ ಅಂದೆ ಅಂತಾ ಇಟ್ಟುಗೊ, – ‘ಹುಚ್ಚು ಹೆಗ್ಗಡ್ತಿ’ ಅಂತಾ ಅಂದ್ಬಿಟ್ಟೆ! ಧರ್ಮು ಹಿಂದುಗಡೆ ಇದ್ದದ್ದು ಮರೆತೇಹೋಗಿತ್ತು ಕಣೋ! ಎಂಥಾ ಕೆಲ್ಸಾ ಆಯ್ತು ಅಂತೀಯ? ಧರ್ಮು ಬಿಕ್ಕಿಬಿಕ್ಕಿ ಅಳಾಕೆ ಸುರುಮಾಡಿಬಿಟ್ಟ! ನಾನು ‘ದಮ್ಮಯ್ಯ! ತಪ್ಪಾಯ್ತೊ! ಇನ್ನೆಂದಿಗೂ ಹೇಳಾದಿಲ್ಲ ಹಾಂಗೆ.’ ಅಂತಾ ತಬ್ಬಿಕೊಂಡು ದಮ್ಮಯ್ಯಗುಡ್ಡೆ ಹಾಕಿದ ಮ್ಯಾಲೇ ಸೊಲ್ಪ ಸಮಾಧಾನಕ್ಕೆ ಬಂದ!….”
ಇನ್ನೊಂದು ಕೀಚಲುಗಂಟಲು ನಡುವೆ ಬಾಯಿಹಾಕಿ ಕೆಳದನಿಯಲ್ಲಿ ಹೇಳತೊಡಗಿತು: ಹಿಂದಿನ ಹಿರಿಯರಿಬ್ಬರು ಪ್ರಾರಂಭಮಾಡಿದ ರೀತಿ ಆವಾಗಲೆ ಆರ್ಷೇಯ ಸಂಪ್ರದಾಯವಾಗಿಬಿಟ್ಟಿತ್ತು: “ಆವತ್ತೊಂದು ದಿವ್ಸ, ‘ಭಗವಂತ ಪ್ರಾರ್ಥಿಸಿದರೆ ಭಕ್ತ ಕೊಡ್ತಾನೆ’ ಅಂತಾ ಐಗಳು ಹೇಳಿದ್ರಲ್ಲಾ?” ಅಲ್ಲಲ್ಲಿ ನಗೆಯೆದ್ದು ಕೀಚಲುಗಂಟಲು ತಬ್ಬಿಬ್ಬಾಯಿತು!
“ಥೂ ನಿನ್ನ! “ಭಕ್ತ ಪ್ರಾರ್ಥಿಸಿದರೆ ಭಗವಂತ ಕೊಟ್ಟೇಕೊಡುತ್ತಾನೆ!” ಅಂತಾ ಹೇಳಿದ್ದಲ್ಲೇನೋ ಐಗಳು?”
“ಹ್ಞೂ ಹ್ಞೂ ಹ್ಞೂ! ಹಾಂಗೆ ಹಾಂಗೆ ಹಾಂಗೆ!…. ಅವತ್ತೂ, ಅಲ್ಲ, ಅಲ್ಲ, ಅವತ್ತಲ್ಲ, ಅದರ ಮರುದಿವ್ಸ, ಮುಕುಂದಣ್ಣ ಹೋಗಿದ್ರಲ್ಲಾ ಗೋಸಾಯಿಗಳು ಬೀಡುಬಿಟ್ಟಲ್ಲಿಗೆ?”
ನಡುವೆ ಬಾಯಿಹಾಕಿತು ಮತ್ತೊಂದು ದನಿ. ಮೇಲಿನ ಮತ್ತು ಕೆಳಗಿನ ಎರಡೂ ಸಾಲಿನಲ್ಲಿ ಮುಂಬಲ್ಲು ಮುರಿದು ಬಿದ್ದು ಇನ್ನೂ ಹೊಸ ಹಲ್ಲು ಹುಟ್ಟಿರಲಿಲ್ಲ ಅದಕ್ಕೆ. ಮಾತಾಡಿದರೆ ಪದಗಳೆಲ್ಲ ಮಧ್ಯೆ ಮಧ್ಯೆ ಪುಸ್‌ ಪುಸ್‌ ಎನ್ನುವಂತೆ ತೋರುತ್ತಿತ್ತು: “ಹೌದೌದು, ಆ ಗೋಸಾಯಿಗಳ ಸಂಗದ ಧರ್ಮಣ್ಣಯ್ಯನ ಅಪ್ಪಯ್ಯ ಗದ್ದ ಬಿತ್ತೊಕೊಂದು ಬಂದಾರೆ ಅಂತಾ ಯಾರೋ ಬಂದು ಹೇಳಿದರಂತೆ….”
“ಕಣ್ಣಾಪಂಡಿತರಂತೆ ಕಣೋ, ಹೇಳ್ದೋರು.”
“ಅದನ್ನೇ, ನೋಡಿಕೊಂಡು ಬರಾಕೆ ಹೋಗಿದ್ರಲ್ಲಾ ಮುಕುಂದಣ್ಣ” ಕೀಚಲು ಗಂಟಲು ಮತ್ತೆ ಮುಂಬರಿಯಿತು: “ಆವತ್ತು ಧರ್ಮಣ್ಣಯ್ಯ ಅಂಗಳದ ತುಳಸಿಕಲ್ಲ ದೇವರ ಹತ್ರ ಅಳ್ತಾ ಪ್ರಾರ್ಥನೆ ಮಾಡ್ತಿದ್ದ ಕಣೋ.”
“ಯಾರನ್ನೋ ಏನೋ?  ಧರ್ಮು ಅಪ್ಪಯ್ಯ ಅಂತಾ ಹೇಳಿಬಿಟ್ಟದ್ರಂತೆ ಆ ಕಣ್ಣಾಪಂಡಿತ್ರು.”
ಲಗ್ಗೆ ಆಟ ಪ್ರಾರಂಭಿಸುವ ಮೊದಲು ಧರ್ಮುವನ್ನು ಹುಡುಕಿ ಕರೆತರಲು ಹೊರಟರು ಹುಡುಗರೆಲ್ಲ. ಒಬ್ಬೊಬ್ಬರು ಒಂದೊಂದು ಕಡೆಗೆ. ಧರ್ಮು ಸ್ವಲ್ಪ ಹೊತ್ತು ಕಣ್ಣು ತಪ್ಪಿದ್ದರೆ ಅವರಿಗೆಲ್ಲಾ ಏನೋ ಅನುಮಾನ, ಯಾವುದೋ ಹೆದರಿಕೆ, ಅವನ ಕ್ಷೇಮದ ಹೊರೆ ಹೊಣೆಗೆ ತಾವೆಲ್ಲರೂ ಅನಧಿಕೃತವಾಗಿ ಜವಾಬುದಾರರೊ ಎಂಬಂತೆ.
ಅವರು ‘ಕದ್ದಡಗೋ ಆಟ’ ಆಡುವ ಮುಚ್ಚುಮರೆಯ ಸಂದಿಗೊಂದಿಗಳಲ್ಲೆಲ್ಲ ಧರ್ಮುಗಾಗಿ ಹುಡುಕಾಡಿದರು. ‘ಧರ್ಮೂ! ಓ ಧರ್ಮೂ! ಓ ಧರ್ಮಣ್ಣಯ್ಯ!’ ಎಂಬ ಕರೆಕೂಗುಗಳು ಸೌದೆಕೊಟ್ಟಿಗೆ, ದನದ ಕೊಟ್ಟಿಗೆ, ಪಣ್ತದ ಕೊಟ್ಟಿಗೆ, ಬಚ್ಚಲು ಕೊಟ್ಟಿಗೆ, ಕೋಳಿಒಡ್ಡಿ, ಕುರಿಒಡ್ಡಿಗಳಿಂದಲೂ ಹೊಮ್ಮಿದುವು. ಕಡೆಗೆ ರಂಗಪ್ಪಗೌಡರ ಹೆಂಡತಿಯ ಹೆರಿಗೆ ಸಂದರ್ಭದಲ್ಲಿ ಸೂಲಗಿತ್ತಿಯಾಗಿ ಬಂದಿದ್ದ ಹಳೇಪೈಕದ ಯೆಂಕಿಯನ್ನು ಬಚ್ಚಲು ಕೊಟ್ಟಿಗೆಯ ಹತ್ತಿರ ಇದಿರುಗೊಂಡ ತಿಮ್ಮು ‘ಧರ್ಮು ಎಲ್ಲಿ ಹೋದನೆ? ಎಲ್ಲಾದರೂ ನೋಡಿದ್ಯೇನೆ? ನಮ್ಮ ಸಂಗಡ ಗಂಜಿ ಉಂಡು ಹೊರಗೆ ಬಂದಂವ ಪತ್ತೇನೆ ಇಲ್ಲ! ಹುಡುಕೀ ಕರೆದೂ ಸಾಕಾಯ್ತು ನಮಗೆಲ್ಲ.’ ಎಂದು ಗಾಬರಿಗೊಂಡ ದನಿಯಿಂದಲೆ ಕೇಳಿದನು.
ಅವಳು ಸ್ವಲ್ಪವೂ ಕುತೂಹಲವನ್ನಾಗಲಿ ಆಸಕ್ತಿಯನ್ನಾಗಲಿ ತೋರಿಸಲಿಲ್ಲ. ಇವರ ಅನ್ವೇಷಣೆಯನ್ನೂ ಅವನ ಕಾಣೆಯಾಗಿರುವಿಕೆಯನ್ನೂ ಸಮತೋಲನವಾಗಿ, ಮಕ್ಕಳ ಆಟವನ್ನು ಕಾಣಬೇಕಾದಂತೆ ಕಂಡು, ಉದಾಸೀನ ಧ್ವನಿಯಿಂದ “ಯಾರ್ರೋ? ಹಳೆಮನೆ ತಿರುಪತಿ ದೊಡ್ಡಯ್ಯನ ಮಗನಾ? ನಿಮ್ಮ ಅವ್ವನ ಹತ್ರ ಹೆರಿಗೆ ತಟ್ಟಿಕೋಣೇಲಿ ಮಾತಾಡ್ತಾ ಕೂತಾರಲ್ಲಾ?” ಎನ್ನುತ್ತಾ ಕೆಲಸಕ್ಕೆ ಅವಸರವಾಗಿ ಹೊರಟೇ ಹೋದಳು. ತಿಮ್ಮುಗೆ ತನಗೆ ತಂಗಿ ಹುಟ್ಟಿರುವುದನ್ನು ಫಕ್ಕನೆ ನೆನಪು ಕೊಟ್ಟಂತಾಗಿ ತಟ್ಟಿಕೋಣೆಗೆ ಓಡಿದನು.
ಹೆರಿಗೆಮನೆಯಾಗಿದ್ದ ಕೆಳಗರಡಿಯ ತಟ್ಟಿಕೋಣೆಗೆ ಹೋದ ತಿಮ್ಮು ಅದರ ಬಾಗಿಲಲ್ಲಿಯೆ ನಿಂತುಬಿಟ್ಟನು. ಒಳಗಿದ್ದ ಕತ್ತಲೆಯಲ್ಲಿ ಅವನಿಗೆ, ಅಗ್ಗಿಷ್ಟಿಕೆಯ ರೂಪದಲ್ಲಿ ಒಂದು ಮೂಲೆಯಲ್ಲಿ ಸಣ್ಣಗೆ ಉರಿಯುತ್ತಿದ್ದ ಬೆಂಕಿ ಹೊರತು, ಇನ್ನೇನೂ ಸ್ಪಷ್ಟಾಗಿ ಕಾಣಿಸಲಿಲ್ಲ. ಅಲ್ಲದೆ ಆ ಕೋಣೆಯ ವಾಸನೆಯೂ ವಿಚಿತ್ರತರಹದ್ದಾಗಿತ್ತು: ಬೆಳ್ಳುಳ್ಳಿ, ಮೆಂತೆ, ಬ್ರಾಂದಿ, ಮೆಣಸು ಇತ್ಯಾದಿ ಕಟುತ್ವದೊಂದಿಗೆ ಧೂಪದ ಪರಿಮಳವೂ ಮಿಳಿತವಾಗಿತ್ತು. ಕೂಸು ಅಳುತ್ತಿದ್ದುದೂ ಬಹು ಮೃದುಸ್ವರವಾಗಿತ್ತು. ಯಾರೂ ಅಸ್ಪಷ್ಟವಾಗಿ ಕಾಣಿಸದಿದ್ದರೂ ಯೆಂಕಿ ಹೇಳಿದುದರ ಆಧಾರದ ಮೇಲೆ ಧರ್ಮುವನ್ನು ಹೆಸರುಹಿಡಿದು ಕೂಗಿದನು.
“ಯಾರು? ತಮ್ಮನೇನೋ?” ಬಾಣಂತಿಯಾಗಿದ್ದ ತಾಯಿ ಮಗನನ್ನು ಮುದ್ದಾಗಿ ಮಾತನಾಡಿಸಿದಳು, ತುಂಬ ದಣಿದಿದ್ದ ಕೆಳದನಿಯಿಂದ.
“ಧರ್ಮು ಇದಾನೇನವ್ವಾ?” ನಿಂತಲ್ಲಿಂದಲೆ ಕೇಳಿದನು ತಿಮ್ಮು.
“ಇಲ್ಲಿದಾನೋ; ಬಾರೋ!
“ಮೊನ್ನೆ ಕಾಲು ತೊಳಕೊಳ್ಳದೆ ಬರಬ್ಯಾಡ ಅಂದಿದ್ದೀ, ತಂಗೀಗೆ ಮುಟ್ಚಿಟ್ಟಾಗ್ತದೆ ಅಂತಾ? ನಾನೀಗ ಕಣದಾಗೆ ಆಡ್ತಾ ಇದ್ದಾಂವ ಹಿಂಗೇ ಬಂದೀನಿ, ಧರ್ಮೂನ ಕರಕೊಂಡು ಹೋಗಾಕೆ….” ಎನ್ನುತ್ತಾ ಜೊತೆಗಾರನನ್ನು ಕೂಗಿದನು: “ಬಾರೋ, ಧರ್ಮೂ, ಲಗ್ಗೆ ಆಟಕ್ಕೆ” ಇಷ್ಟರಲ್ಲಿ ಕೋಣೆಯೊಳಗಣ ಮಬ್ಬಿಗೆ ಹೊಂದಿಕೊಂಡಿದ್ದ ತಿಮ್ಮುವಿನ ಕಣ್ಣಿಗೆ ಅಲ್ಲಿ ಕೂತಿದ್ದ ಧರ್ಮು, ಅವನ ಪಕ್ಕದಲ್ಲಿ ಮಲಗಿದ್ದ ತನ್ನ ತಾಯಿ, ಬಳಿಯೆ ಮೊರದಲ್ಲಿದ್ದ ಶಿಶು ಎಲ್ಲ ಮಾಸಲುಮಾಸಲಾಗಿ ಕಾಣಿಸತೊಡಗಿದ್ದರು.
“ಹೋಗಪ್ಪಾ, ಧರ್ಮೂ, ಆಟಕ್ಕೆ ಕರೀತಾನೆ, ಅಳಬ್ಯಾಡ; ಮಜ್ಜಾನದ ಮ್ಯಾಲೆ ಊಟಮಾಡಿಕೊಂಡು ಹೋಗಬಹುದಂತೆ. ನಾ ಹೇಳ್ತೀನಿ, ನಿನ್ನ ಸಂಗಡ ಐತನ್ನ ಕಳಿಸಾಕೆ; ಹಳೆಮನೆ ತಂಕಾ ಹೋಗಿ ಬಿಟ್ಟುಬರ್ತಾನೆ: ಅಳಬ್ಯಾಡಪ್ಪಾ, ಹೋಗು.”
ಅತ್ತೆಮ್ಮ ಭರವಸೆ ಕೊಟ್ಟಮೇಲೆ ಧರ್ಮು ಎದ್ದು ಕಣ್ಣೊರೆಸಿಕೊಳ್ಳುತ್ತಾ ತಿಮ್ಮುವನ್ನು ಹಿಂಬಾಲಿಸಿದನು.
ಬೆಳಿಗ್ಗೆ ಗಂಜಿ ಉಂಡಮೇಲೆ ಧರ್ಮು ಇತರ ಹುಡುಗರೊಡನೆ ಹೋಗದೆ ನೆಟ್ಟಗೆ ತಟ್ಟಿ ಕೋಣೆಗೆ ಹೋಗಿದ್ದುದಕ್ಕೆ ಕಾರಣ, ಅತ್ತೆಮ್ಮನ್ನು ಹೇಗಾದರೂ ಒಪ್ಪಿಸಿ, ತನ್ನ ತಾಯಿಯನ್ನು ನೋಡಲು ಹಳೆಮನೆಗೆ ಹೋಗಬೇಕು ಎಂಬುದೆ.
ರಾತ್ರಿ ಅವನು ಇತರ ಬಾಲಕರೊಡನೆ ‘ಸಣ್ಣಮಾವ’ ಮುಕುಂದಯ್ಯನ ಹತ್ತಿರವೆ ಎಂದಿನಂತೆ ಮಲಗಿದ್ದನು. ಬಹಳ ಹೊತ್ತಾದರೂ ಅವನಿಗೆ ನಿದ್ದೆ ಬಂದಿರಲಿಲ್ಲ. ತಿರುಪತಿಗೆ ಹೋಗಿ ಹಿಂದುರುಗದೆ ಇದ್ದ ತಂದೆಗಾಗಿ ಪರಿತಪಿಸುತ್ತಿದ್ದ ತಾಯಿಯ ಯೋಚನೆ ಬಲವಾಗಿ ಗುಟ್ಟಾಗಿ ಕಣ್ಣೀರು ಸುರಿಸುತ್ತಲೆ ಮಲಗಿದ್ದನು. ಮುಕುಂದಯ್ಯ ತನಗೆ ಸನಿಹದಲ್ಲಿಯೆ ಬೇರೆಯ ಹಾಸಿಗೆಯಲ್ಲಿ ಮಲಗಿದ್ದ ಐಗಳೊಡನೆ ಏನೇನೋ ಮಾತಾಡುತ್ತಿದ್ದನು. ಆದರತೆ ಅದೆಲ್ಲ ಧರ್ಮುವಿಗೆ ಮೀರಿತ್ತು ಮಾತ್ರವಲ್ಲದೆ ಅವನ ಕುತೂಹಲದ ಕ್ಷೇತ್ರದಿಂದಾಚೆಗಿತ್ತು. ನಡುವೆ ಒಂದೆರಡು ಸಾರಿ ಮುಕುಂದಯ್ಯ ಧರ್ಮುವಿಗೆ ನಿದ್ದೆ ಬಂದಿದೆಯೊ ಇಲ್ಲವೊ ಎಂದು ಗೊತ್ತುಮಾಡಿಕೊಳ್ಳುವುದಕ್ಕಾಗಿ ಅವನನ್ನು ಕರೆದಿದ್ದನು. ಧರ್ಮು ಮಾತಾಡಿರಲಿಲ್ಲ. ಬಹುಶಃ ಹುಡುಗನಿಗೆ ನಿದ್ದೆ ಬಂತು ಎಂದು ನಿಶ್ಚಯಿಸಿಕೊಂಡನೆಂದು ತೋರುತ್ತದೆ, ಮುಕುಂದಯ್ಯ ಮೆಲ್ಲನೆ ಗುಸುಗುಸು ದನಿಯಲ್ಲಿ ಐಗಳು ಅನಂತಯ್ಯನವರೊಡನೆ ಬೇರೆಯ ವಿಷಯ ಪ್ರಸ್ತಾಪಿಸತೊಗಿದನು. ಅದನ್ನಾಲಿಸಿ ಧರ್ಮುಗೆ ಚೇತನ ಸಮಸ್ತವೂ ಮುಳ್ಳಮೇಲೆ ನಿಂತಂತಾಯಿತು: ಅದು ತನ್ನ ತಂದೆಯನ್ನೆ ಕುರಿತದ್ದಾಗಿತ್ತು!
“ಹಾಗಾಂದ್ರೆ ನಾಳೆ ಹೊತಾರೆ ಮುಂಚೇನೆ ಹೊರಟುಬಿಡಿ. ತೀರ್ಥಹಳ್ಳಿಗೆ ಹೋದಮೇಲೆ ಜೀವರತ್ನಯ್ಯನ್ನೂ ವಿಚಾರಿಸಿ, ದಾಸಯ್ಯನ ಜತೇಲಿ ಮಂಡಗದ್ದೆಗೂ ತೂದೂರಿಗೂ ಹೋಗಿ ನೋಡಿಕೊಂಡು ಬನ್ನಿ, ಇದೊಂದು ಸಲ ನೋಡಿಬಿಡಾನ…. ನಮ್ಮ ದೊಡ್ಡಕ್ಕಯ್ಯನ ಗೋಳು ನೋಡಾಹಾಂಗಿಲ್ಲ. ಅನ್ನ ನೀರು ಬಿಟ್ಟು ಇವತ್ತೊ ನಾಳೆಯೊ ಸಾಯ್ತದೆ ಅಂತಾ ಕಾಣ್ತದೆ…. ನಿಮಗೆ ಗುರ್ತು ಸಿಗ್ತದಲ್ಲಾ? ಹಳೆಮನೆ ದೊಡ್ಡಬಾವನ ಗುರ್ತು ನಿಮಗೆ ಚೆನ್ನಾಗೇ ಇರಬೇಕು ಅಲ್ಲೇನು?”
“ಇದೇನು ಹೀಂಗನ್ತೀಯಾ?….” ಐಗಳು ಅನಂತಯ್ಯ ಮುಕುಂದಯ್ಯನ ಪ್ರಶ್ನೆಯನ್ನೆ ಮೂದಲಿಸಿ ನಕ್ಕು ಪ್ರಶ್ನಿಸಿದರು.
“ಅದಕ್ಕೆಲ್ಲಾ….? ಅಂವ ತಿರುಪತಿಯಾತ್ರೆಗೆ ಹೋಗಿ ಏಳೆಂಟು ವರ್ಷಾನೆ ಆಯ್ತು, ನಿಮಗೆ ಫಕ್ಕನೆ ಗುರ್ತು ಸಿಕ್ತದೆಯೋ ಇಲ್ಲೋ ಅಂತಾ ಹೇಳಿದೆ, ಅಷ್ಟೆ….ಅದೂ ಅಲ್ವೆ ಅಂವ ಸನ್ನೇಸಿಗಳೋ ಬೈರಾಗಿಗಳೋ ಗೋಸಾಯಿಗಳೋ ಯಾರ ಜೊತೇಲೋ ಅವರಹಾಂಗೆ ಗಡ್ಡಗಿಡ್ಡ ಬಿಟ್ಕೊಂಡು ಇದಾನೆ ಅಂತಾ ಹೇಳ್ತಾರೆ….”
“ಅವರು ಗಡ್ಡ ಬಿಟ್ಟಿರ್ಲಿ, ವೇಷ ಕಟ್ಟಿರ್ಲಿ, ನನ್ನ ಕಣ್ಣಿಗೆ ಮಣ್ಣೆರಚಾಕೆ ಆಗೋದಿಲ್ಲ ಬಿಡು….ನನಗೆ ಅವರನ್ನ ಮುಖ ನೋಡುವುದೂ ಬೇಡ; ಅವರು ನಡೆಯುವುದು ನೋಡಿದರೇ ಸಾಕು. ಕಂಡುಹಿಡಿದು ಬಿಡ್ತೀನಿ…. ಅವರು ಯಾತ್ರೆ ಹೋದಾಗ ನೀನಿನ್ನೂ ಹುಡುಗ; ಒಂಬತ್ತೋ ಹತ್ತೋ ವರ್ಷ ನಿನಗೆ ಆಗ…. ಎಷ್ಟು ಸಾರಿ ನಾವು ಒಟ್ಟಿಗೆ ಬೇಟೆಗೆ ಹೋಗಿದ್ದೆವು? ಹಳೆಮನೇಲಿ ಒಂದು ಹಬ್ಬ, ಹರಿದಿನ, ಮಾಲಾಯಾ ಆದರೆ ನಾವೆಲ್ಲ ಅಲ್ಲಿ ತಯಾರು! ಒಂದೊಂದು ಬಾರಿ ಇರುಳುಬೆಳಗೂ ಇಸ್ಪೀಟು ಆಡಿದ್ದೂ ಉಂಟು…. ದೊಡ್ಡಣ್ಣ ಹೆಗ್ಗಡೇರು ಭಾರಿ ಧೈರ್ಯದ ಮನುಷ್ಯ ಕಾಣಯ್ಯ. ಆವೊತ್ತು ಅವರಿಲ್ಲದಿದ್ರೆ ಹೂವಳ್ಳಿ ವೆಂಕಟಣ್ಣ ಬದುಕ್ತಿದ್ನಾ? ಮಿಣಿಬಲೆಗೆ ಬಿದ್ದ ಒಂಟಿಗ ಹಂದೀನ ಭರ್ಜೀಲಿ ತಿವಿಯಾಕೆ ಹೋಗಿ, ಕಾಲುಜಾರಿ ಬಿದ್ದನಲ್ಲಾ! – ದೊಡ್ಡಣ್ಣ ಹೆಗ್ಗಡೇರು ಎಲ್ಲಿದ್ರೋ ಏನೋ ನುಗ್ಗಿಬಂದು, ಗುಂಡು ಹೊಡೆದು, ಅದನ್ನ ಉರುಳಿಸದೆ ಇದ್ದಿದ್ರೆ, ವೆಂಕಟಣ್ಣ ಸೀಳಿ ಸಿಗಿದುಹಾಕಿಬಿಡ್ತಿತ್ತು….”
“ಅವನಿಗೆ ಸಿಕ್ಕಬೇಕಲ್ಲಾ ನಿಮ್ಮ ಗುರುತು?”
“ನಾನೇನು ಗಡ್ಡ ಬಿಟ್ಟಿದ್ದೇನೆಯೆ? ವೇಷಕಟ್ಟಿದ್ದೇನೆಯೆ? ಅವರಿಗೆ ಸಿಕ್ಕದೆ ಏನು ನನ್ನ ಗುರುತು?”
“ಗೋಸಾಯಿಗಳು ಮದ್ದು ಕೊಟ್ಟು ಹಿಂದಿನದೆಲ್ಲ ಮರೆತೇಹೋಗೋಹಾಂಗೆ ಮಾಡ್ತಾರಂತೆ – ಹಾಂಗಾದೋರಿಗೆ ಅವರ ಹೆಂಡ್ತಿ ಮಕ್ಕಳೇ ಹೋದ್ರೂ ಗುರ್ತೇ ಸಿಕ್ಕದಿಲ್ಲಾ ಅಂತಾ ಹೇಳ್ತಾರೆ?….” ಮುಕುಂದಯ್ಯ ತನ್ನ ಸಂದೇಹವನ್ನು ಸಂಕಟದಿಂದ ಹೇಳಿಕೊಂಡನು.
ಅದಕ್ಕೆ ಐಗಳು ಶ್ರದ್ಧಾವಾಣಿಯಿಂದ ಹೇಳಿದ್ದರು: ನೋಡುವ, ದೇವರಿದ್ದಾನೆ…. ಅವರ ಹೆಂಡತಿ ಮಕ್ಕಳಿಗೆ ಪುಣ್ಯ ಇದ್ದರೆ ಕಣ್ಣುಬಿಟ್ಟು ನೋಡಿಯೆ ನೋಡುತ್ತಾನೆ…. ಮದ್ದು ಹೆಚ್ಚೊ, ದೇವರು ಹೆಚ್ಚೋ? ಮದ್ದು ಮರೆಯಿಸಿದ್ದನ್ನ ದೇವರು ನೆನೆಯಿಸಲಾರನೇ?”
ಸಣ್ಣಮಾವ ಮುಕುಂದಯ್ಯ ಮತ್ತು ಐಗಳು ಅನಂತಯ್ಯನವರ ಆ ರಹಸ್ಯ ಸಂವಾದವನ್ನು ಹೃತ್ಪೂರ್ವಕವಾದ ಶ್ರದ್ಧೆಯಿಂದ ಆಲಿಸಿದ್ದ ಧರ್ಮು ದೇವರನ್ನು ನೆನೆಯುತ್ತಾ ಪ್ರಾರ್ಥಿಸುತ್ತಾ ನಿದ್ದೆಹೋದನು. ಆದರೆ ಅಲ್ಲಿಯೂ ಕನಸು ಅವನನ್ನು ಬಿಡಲಿಲ್ಲ. ಕನಸ್ಸಿನಲ್ಲಿಯೇ ಅವನ ಅವ್ವ ಅಳುತ್ತಾ ಬಂದು ರೋದಿಸಿದ್ದರು, ಅವನ ತಲೆಯನ್ನು ಸವರುತ್ತಾ ‘ತಮ್ಮಾ, ನಿನ್ನ ಅಪ್ಪಯ್ಯನ್ನ ಕರಕೊಂಡು ಬರಾದಿಲ್ಲೇನೋ? ಅವರು ಊಟಾಮಾಡದೆ ಎಷ್ಟೋ ದಿವಸ ಆಯಿತಲ್ಲಪ್ಪಾ? ಹಸುಕೊಂಡು ಕೊರಗ್ತಿದ್ದಾರಲ್ಲೋ! ನಿನ್ನ ದಮ್ಮಯ್ಯ ಅಂತೀನಿ: ಹೋಗಿ ಏನಾದರೂ ಮಾಡಿ ಕರಕೊಂಡು ಬಾರಪ್ಪಾ!’ ಎಂದು. ಅದೆಲ್ಲದರ ಪರಿಣಾಮವಾಗಿಯೆ ಧರ್ಮು ಬೆಳಿಗ್ಗೆ ಎದ್ದು ಗಂಜಿ ಉಂಡವನೆ ಅತ್ತೆಮ್ಮನ ಬಳಿಗೆ ಹೋಗಿ ಅತ್ತು ಕರೆದು ತನ್ನ ಅವ್ವನ ಹತ್ತಿರಕ್ಕೆ ಹೋಗಲು ದೊಡ್ಡ ಮಾವನನ್ನು ಒಪ್ಪಿಸುವಂತೆ ಮಾಡಿದ್ದನು.
ಗೆಳೆಯರಿಗೆ ಮನಸ್ಸು ನೋಯಿಸಬಾರದೆಂದು ಧರ್ಮು ಲಗ್ಗೆಯಾಟಕ್ಕೆ ಸೇರಿದ್ದನು. ಆದರೆ ಅವನ ಮನಸ್ಸೆಲ್ಲ ಅವ್ವನನ್ನೆ ನೆನೆಯುತ್ತಿತ್ತು. ಲಗ್ಗೆಮಣೆಗೆ ಗುರಿಯಿಡುವಾಗಲೂ ‘ಈ ಸಾರಿ ಈ ಚೆಂಡು ಲಗ್ಗೆಮಣೆಗೆ ಸರಿಯಾಗಿ ಗುರಿಬಿದ್ದು ಅದನ್ನು ಉರುಳಿಸಿದರೆ, ಅಪ್ಪಯ್ಯ ಬಂದೆ ಬರುತ್ತಾನೆ.’ ಎಂದು ಸಂಕಲ್ಪಸಿ ಗುರಿಯಿಟ್ಟಿದ್ದನು. ಲಗ್ಗೆಮಣೆ ಉರುಳಿಬಿದ್ದು ತನ್ನ ಪಕ್ಕದವರೆಲ್ಲ ಘೇ ಎಂದು ಜಯಘೋಷ ಮಾಡಿದಾಗ ಧರ್ಮುವು ಸಂತೋಷದಿಂದ ಕುಣಿದಾಡಿದನು. ಆದರೆ ಅವನ ಹಿಗ್ಗಿಗೆ ಕಾರಣವೆ ಬೇರೆಯಾಗಿತ್ತು!
ಧರ್ಮು ಹಳೆಮನೆಗೆ ಹೋಗುತ್ತಾನೆ ಎಂದು ತಿಳಿದಾಗ ಹುಡುಗರೆಲ್ಲರೂ ಸೇರಿ ಅವನನ್ನು ಕೋಣೂರಿನಲ್ಲಿಯೆ ಇರುವಂತೆ ಮಾಡಲು ಪ್ರಯತ್ನಿಸಿದರು. ಎಂತಿದ್ದರೂ ಮಗಳು ಏಳೆಂಟು ದಿನಗಳಾದರೂ ಹೊರಗೆಲ್ಲಿಗೋ ಹೋದವರು ಬರುವುದಿಲ್ಲವಂತೆ. ಆಡಿಕೆಯ ದಿನಗಳಲ್ಲಿ ಮಾಡಲು ಬೇಕಾದಷ್ಟು ಸಾಹಸಗಳಿವೆ; ಆಡಲು ಆಟಗಳಿವೆ; ಹಗಲೆಲ್ಲ ಗದ್ದೆ ತೋಟ ಕಾಡುಗುಡ್ಡಗಳಲ್ಲಿ ಅಲೆದಾಡಬಹುದು: ಹಕ್ಕಿ ಹಿಡಿಯಬಹುದು; ಹಣ್ಣು ಕುಯ್ಯಬಹುದು; ಪಂಜರ ಕಟ್ಟಿ ಸಾಕಬಹುದು; ಹೊಂಡ ತೊಣಕಬಹುದು; ಜೇನು ಕೀಳಬಹುದು; ಗಾಣ ಹಾಕಬಹುದು; ಮುಕುಂದಣ್ಣನ ಜೊತೆ ಷಿಕಾರಿಗೆ ಹೋಗಬಹುದು – ಇತ್ಯಾದಿ ಇತ್ಯಾದಿ ಎಲ್ಲವನ್ನೂ ಸೊಗಸುವಂತೆ ಹೇಳಿದರು. ಕಡೆಗೆ ಬೆಟ್ಟಳ್ಳಿಯಿಂದ ಜೋಡೆತ್ತಿನ ಕಮಾನು ಗಾಡಿ ಬರುತ್ತದೆಂದೂ ಅದರಲ್ಲಿ ಕುಳಿತು ಎಲ್ಲರೂ ಕಲ್ಲೂರು ದೇವಸ್ಥಾನಕ್ಕೆ ಪೂಜೆಯ ಉತ್ಸವಕ್ಕೆ ಹೋಗಬಹುದೆಂದೂ ಹೇಳಿದರು. ಆದರೆ ಯಾವುದೂ ಪ್ರಯೋಜನಕಾರಿಯಾಗಲಿಲ್ಲ. ಮಧ್ಯಾಹ್ನ ಊಟವಾದೊಡನೆ ಐತ ಬರುವುದನ್ನೆ ಇದಿರು ನೋಡುತ್ತ ಕುಳಿತಿದ್ದ ಧರ್ಮುಗೆ ಜಗತ್ತಿನ ಅತ್ಯಂತ ಮುಖ್ಯ ವ್ಯಕ್ತಿ ಆಗಿದ್ದನು ಐತ; ಲೋಕದಲ್ಲಿ ನಡೆಯುತ್ತಿದ್ದ ವ್ಯಾಪಾರಗಳಲೆಲ್ಲ ಅತ್ಯಂತ ಸಜೀವಘಟನೆಯಾಗಿತ್ತು ಐತನ ಆಗಮನ!
ಅಜ್ಜಮ್ಮ ಅತ್ತೆಮ್ಮ ದೊಡ್ಡಮಾವ ಸಣ್ಣಮಾವರಿಗೆ ‘ಹೋಗಿಬರುತ್ತೀನಿ!’ ಹೇಳಿ ಬೀಳ್ಕೊಂಡು ಐತನೊಡನೆ ಹೊರಟಾಗ, ಧರ್ಮುವನ್ನು ಸ್ವಲ್ಪದೂರ ಹಳ್ಳದವರೆಗೆ ಕಳಿಸಿ ಬರುತ್ತೇನೆ ಎಂದು ತಿಮ್ಮು ಕಾಡು ಇತರ ಹುಡುಗರೂ ಜೊತೆ ಹೊರಟರು. ಎದುರಿಗೆ ಬಿಡಾರದಿಂದ ಮನೆಯ ಕಡೆಗೆ ಬರುತ್ತಿದ್ದ ಪೀಂಚಲುವನ್ನು ಕಂಡು ತಿಮ್ಮು “ನೀನೂ ಹೋಗ್ತೀಯೇನೆ, ಐತನ ಸಂಗಡ, ಧರ್ಮುನ ಕಳಿಸಾಕೆ?” ಎಂದು ನಗುತ್ತಾ ಕೇಳಲು, ಅವಳು ನಾಚುತ್ತಾ ಬಳುಕಿ, ಪಕ್ಕಕ್ಕೆ ದಾರಿಬಿಡುವ ನೆವದಿಂದ ಸರಿದು ನಿಂತು “ಈ ತಿಮ್ಮಯ್ಯಗೆ ಯಾವಾಗ್ಲೂ ಚಾಷ್ಟೇನೆ!” ಎಂದು ಐತನಕಡೆ ತಿರುಗಿ “ದೊಡ್ಡಮ್ಮ ಅಕ್ಕಿ ಬೀಸಾಕೆ ಬರಾಕೆ ಹೇಳಿದ್ರು” ಎಂದಳು. ಅವರೆಲ್ಲರೂ ತಿರುಗಣೆಯಲ್ಲಿ ಕಣ್ಮರೆಯಾಗುವವರೆಗೂ ನೋಡುತ್ತಾ ನಿಂತಿದ್ದು.
“ಏ ಐತಾ ಈ ಸಾರಿ ಎಷ್ಟು ಜೇನು ನೋಡಿಟ್ಟೀಯೊ?”
“ಸುಮಾರು ನೋಡಿಟ್ಟೀನಿ….”
“ಮತ್ತೆ ಯಾವಾಗ್ಲೋ ಕಿತ್ತುಕೊಡಾದು?”
“ನನ್ನಿಂದ ಆಗೋದಿಲ್ಲಾಪ್ಪ ಕೀಳಾಕೆ. ಪೀಂಚಲು ಕೀಳ್ತಾಳೆ; ಅವಳಿಗೆ ಎಲೆಮದ್ದು ಗೊತ್ತು.”
“ಥೂ ನಿನ್ನ! ನಿಂಗೆ ನಾಚಿಕೆ ಆಗಾದಿಲ್ಲೇನೋ? ನಿನ್ನ ಹೆಂಡ್ತಿ ಮಾಡಿದ್ದನ್ನ ಮಾಡಾಕೆ ನಿನ್ನ ಕೈಲಾಗದಿಲ್ಲೇನೋ?….”
“ಜೇನು ಹುಡುಕಿ ಕಂಡುಹಿಡಿಯೋದೇನು ಬಿಟ್ಟಿ ಆಯ್ತಾ? ಪೀಂಚಲು ಕೈಲಿ ಆಗ್ತದೇನು ಅದು?….”
ಅಷ್ಟರಲ್ಲಿ ಅವರೆಲ್ಲ ಹಳ್ಳದ ಹತ್ತಿರಕ್ಕೆ ಬಂದಿದ್ದರು.
“ಏ ಐತಾ, ಈ ಹೊಂಡ ತೊಣಕಬೇಕು ಅಂತಾ ಮಾಡಿದ್ದುವಲ್ಲೊ. ಅವತ್ತಿನ ಮಾರಿಮಳೇಲಿ ನೀರು ಆಗಿಹೋಗಿಬಿಟ್ಟಿದೆ, ಏನು ಮಾಡೋದೋ?….
“ಮತ್ತೊಂದು ಮಳೆ ಬೀಳಾದ್ರೊಳಗೆ ನೀರು ಬತ್ತಬೈದು. ಆವಾಗ ನೋಡಾನ…. ಹಳ್ಳ ಬಂತಲ್ಲ, ತಿಮ್ಮಯ್ಯ!” ಐತ ಅವರೆಲ್ಲರೂ ಹಿಂತಿರುಗುವುದಕ್ಕೆ  ಸೂಚಾನೆ ಕೊಟ್ಟಿದ್ದ. ಆದರೆ ಕಾಡು “ಆ ಅರೆಕಲ್ಲಿನವರೀಗೆ ಬರ್ತೀಂವೊ” ಎಂದನು.
ಸ್ವಲ್ಪ ಹೊತ್ತಿಗೆ ಅರೆಕಲ್ಲೂ ಸಮೀಪಿಸಿತ್ತು. ಆಗ ತಿಮ್ಮು “ಇನ್ನೊಂದು ಸೊಲ್ಪದೂರ ಬರ್ತೀಂವೋ.” ಎಂದು ತನ್ನ ಯಜಮಾನತ್ವದ ಗಾಂಭೀರ್ಯವನ್ನು ಮರೆತೋ ತೊರೆದೋ ಅಂಗಲಾಚುವ  ದನಿಯಲ್ಲಿ ಐತನನ್ನೂ ಕೇಳಿಕೊಂಡನು.
ಆದರೆ ಐತ ಮುಂದುವರೆಯದೆ ನಿಂತುಬಿಟ್ಟನು. ಹೇಳಿದನು: “ಆಮ್ಯಾಲೆ ನನ್ನ ಬರ್ತಾರೆ ಕಣ್ರೋ ಅಮ್ಮ, ಹುಡುಗೂರ್ನ ಅಷ್ಟುದೂರ ಯಾಕೆ ಕರಕೊಂಡು ಹೋದೆ ಅಂತಾ. ನಿಮ್ಮ ದಮ್ಮಯ್ಯ ಅಂತೀನ್ರೋ: ಮನೀಗೆ ಹೋಗಿ. ಈಗ ಬೈಗಾಗಿಬಿಡ್ತದೆ.”
ಮನಸ್ಸಿಲ್ಲದ ಮನಸ್ಸಿನಿಂದ ಐತನ ನಿರೋಧಕ್ಕೆ “ಧರ್ಮೂ. ಹೋಗಿ ಬತ್ತೀಯಾ?” ಎಂದು ನಾಲ್ಕಾರು ಬಾಲವಾಣಿಗಳು ಕೀರಲು ದನಿಯಲ್ಲಿ ಕೂಗಿ ಬೀಳ್ಕೊಂಡು ಮನೆಯ ಕಡೆಗೆ ಹಿಂತಿರುಗಿದುವು.
ಗುಡ್ಡನಾಡಿನ ಕಾಲುದಾರಿಯಲ್ಲಿ ಧರ್ಮು ಮುಂದೆ ಐತ ಹಿಂದೆ ಆಗಿ ಸ್ವಲ್ಪದೂರ ಇಬ್ಬರೂ ಮಾತಿಲ್ಲದೆ ನಡೆದರು. ಇಳಿಬಿಸಲು; ಕಗ್ಗಾಡಿನ ನಿಃಶಬ್ದ; ಅಲ್ಲೊಮ್ಮೆ ಇಲ್ಲೊಮ್ಮೆ ಹಕ್ಕಿದನಿ: ಎಲ್ಲಿಯೋ ಮೇಯುತ್ತಿದ್ದ ದನಗಳ ಕೊರಳ ದೊಂಟೆಯ ಸದ್ದು.
ಇದ್ದಕ್ಕಿದ್ದಂತೆ ಧರ್ಮು “ಐತಾ, ನಿಂಗೆ ನಮಪ್ಪಯ್ನ ಗುರ್ತು ಚೆನ್ನಾಗಿತ್ತೇನೋ?”
“ಚೆನ್ನಾಗಿತ್ತಯ್ಯಾ… “ ಐತ ಇನ್ನೂ ಏನನ್ನೊ ಹೇಳಬೇಕು ಎಂದಿದ್ದನು. ಅಷ್ಟರಲ್ಲಿ ಧರ್ಮು
“ಅವರನ್ನ ನೋಡಿದ್ರೆ ಈಗ್ಲೂ ನಿಂಗೆ ಗುರ್ತು ಸಿಗ್ತದಾ?” ಎಂದು  ಕೇಳಿದನು.
“ಸಿಗ್ತದೆ ಏನ್ರಯ್ಯಾ? ನಂಗೆ ಚೆನ್ನಾಗಿ ಬುದ್ದಿ ಬಂದಮ್ಯಾಲೆ ಅಲ್ಲೇನು ಅವರು ತಿರುಪತಿಗೆ ಹೋಗಿದ್ದು? ಅವರು ಹೋಗಾಕೆ ಮುಂಚೆ ನಂಟರು ಇಷ್ಟರು ಎಲ್ಲರ್ನೂ  ಕರೆದು ಔಂತ್ಲ ಮಾಡಿಸಿದ್ರು ನಿಮ್ಮ ಮನೇಲಿ. ನಾನೂ ಗಡದ್ದಾಗಿ ಉಂಡಿದ್ದೆ. ನೀವು ಆಗ ಬಾಳ ಸಣ್ಣೋರು…”
“ನಂಗೂ ಸೊಸೊಲ್ಪ ನೆನಪು ಅದೆಯೊ ಅವರದ್ದು. ಮೀಸೆ ಬಿಟ್ಟಿದ್ರಲ್ಲೇನೋ? ಬೆಳ್ಳಗಿದ್ರು! ಕುತ್ತಿಗೀಗೆ ಒಂದು ನೆಪ್ಪು ಇರಾದೆ ಆಚ್ಚರ್ಯ!….
“ಹಾಂಗಾರೆ ಈಗ್ಲೂ ಅವರನ್ನ ಕಂಡ್ರೆ ಗುರ್ತು ಹಿಡೀತೀಯಾ ನೀನು?”
“ಖಂಡಿತಾ ಹಿಡೀತೀನಿ…. ಅವರ ಹೆಗಲ ಹತ್ರ ಬೆನ್ನಮ್ಯಾಲೆ, ಷಿಕಾರೀಲಿ ಹುಲಿ ಗಿಬ್ರಿದ್ದು ಅಂತಿದ್ರಪ್ಪ. ಒಂದು ಇಷ್ಟುದ್ದ ಇಷ್ಟಗಲ ಗಾಂಯದ ಕಲೆ ಇತ್ತು. ನಂಗೆ ಚನ್ನಾಗಿ ಗೊತ್ತು…. ಅಯ್ಯೊ ಅದೊಂದು ಕತೆ!” ಎಂದವನೆ ಐತ ತಡೆಯಲಾರದೆ ನಗತೊಡಗಿದನು. ಕಡೆಕಡೆಗೆ ಬಿದ್ದುಬಿದ್ದು ನಗತೊಡಗಿದನು. ನಕ್ಕೂ ನಕ್ಕೂ ಕಣ್ಣಲ್ಲಿ ನೀರೂ ಬಂದಿತು.
ಧರ್ಮು ಮೊದಲು ತುಸು ಕಕ್ಕಾವಿಕ್ಕಿಯಾದನು. ಗಂಭೀರ ಸನ್ನಿವೇಶದಲ್ಲಿ ದುಃಖದ ವಿಷಯ ಕುರಿತು ಮಾತನಾಡುತ್ತಿದ್ದಾಗ ತಟಕ್ಕನೆ ಐತ ನಗತೊಡಗಿದ್ದು ಅನನ್ವಯದಿಂದ ವಿಕಾರದ ಛಾಯೆಗೂ ತಿರುಗಿತ್ತು. ಆದರೆ ಐತನ ನಿರ್ವಿಕಾರವಾದ ತಿಳಿಯಾದ ಮುಗ್ಧ ಹಾಸ್ಯಾನುಭವ ಸೆಳವಿಗೆ ಸಿಕ್ಕ ಧರ್ಮುವೂ ತನ್ನ ಸಂಕಟವನ್ನೆಲ್ಲ ಮರೆತು ನಗತೊಡಗಿದ್ದನು. ಅಷ್ಟು ಸಾಂಕ್ರಾಮಿಕವಾಗಿತ್ತು ಅವನ ನಗೆ!
ನಕ್ಕು ನಕ್ಕು ದಣಿದು ಸಾಕಾಗಿ ಐತ ಸ್ಥಿಮಿತಕ್ಕೆ ಬಂದಮೇಲೆ ತನ್ನ ಕಡೆ ಬೆರಗಾಗಿ ನೋಡುತ್ತಿದ್ದ ಧರ್ಮುಗೆ “ಮತ್ತೆ ನೀವು ಯಾರ ಹತ್ರಾನಾದ್ರೂ ಹೇಳಗೀಳೀರಿ! ನಿಮ್ಮ ಅಪ್ಪಯ್ಯನೂ, ಹುಡುಗನ ಮಾನಹೋಗ್ತದೆ ಅಂತಾ, ಯಾರ ಹತ್ರಾನು ಹೇಳಬ್ಯಾಡಿ, ಅಂತಾ, ಯಾರ ಹತ್ರಾನೂ ಹೇಳಿರಲಿಲ್ಲ. ನೀವೂ ಯಾರ ಹತ್ರಾನು ಹೇಳಬ್ಯಾಡಿ, ಆಯ್ತಾ?” ಎಂದು ನಡೆದ ಸಂಗತಿಯನ್ನು ಹೇಳಲು ಪ್ರಾರಂಭಿಸಿದ್ದನೊ ಇಲ್ಲವೊ ಮತ್ತೆ ಬಟ್ಟೆ ಹರಿದಂತೆ ನಗತೊಡಗಿದನು. ಬಾಯಲ್ಲಿ ಎಂಜಲೂ ಜೊಲ್ಲೂ ಸುರಿಯತೊಡಗಿತು. ಕಡೆಗೆ ಗುಡ್ಡದ ಕಲ್ಲುಮಣ್ಣಿನಲ್ಲಿ ಇಣಗಿದ್ದ ಕರಡದಮೇಲೆ ಬಿದ್ದು ಹೊರಳಾಡಿಯೂ ಬಿಟ್ಟನು. ಆ ನಗೆಯ ಹೊನಲಿನಲ್ಲಿ ಧರ್ಮುವ ಮನಸ್ಸಿನ ದುಗುಡವೆಲ್ಲ ಕೊಚ್ಚಿಹೋಗಿತ್ತು. ಅವನ ಅಪ್ಪಯ್ಯ ಹಿಂತಿರುಗಿ ಬಂದಂತೆಯೆ ಆಗಿತ್ತು!
“ಹೇಳ್ತಾನೆ ಹೋಗ್ತೀನಿ ಬನ್ರೋ, ಹೊತ್ತಾಗ್ತದೆ.” ಐತ ಎದ್ದುನಿಂತು ಬಟ್ಟೆಗೆ ಹಿಡಿದಿದ್ದ ಮಣ್ಣು ಹುಲ್ಲುಚೂರುಗಳನ್ನೆಲ್ಲ ಕೊಡಹಿ ಮುಂದಕ್ಕೆ ಹೊರಟನು.
“ಅವರು ಯಾರ ಹತ್ರಾನೂ  ಹೇಳಲಿಲ್ಲ. ಆದರೆ ನನ್ನ ಕಂಡಾಗಲೆಲ್ಲ ಹಾಸ್ಯ ಮಾಡ್ತಿದ್ರು “ಮರಸಿಗೆ ಬರ್ತಿಯೇನೋ, ಹುಡುಗಾ?” ಅಂತಾ. ಅವರು ಹಾಂಗೆ ಕೇಳ್ದಾಗಲೆಲ್ಲ ನಾನು ನಾಚ್ಕೊಂಡು ನೆಲಾ ಹಿಡಿದುಹೋಗ್ತಿದ್ದೆ! ಕಂಡೋರಿಗೆಲ್ಲ ಆಚರ್ಯ ‘ಇದೇನು ಹೀಂಗೆ ಮಾಡ್ತದೆ ಈ ಹುಡುಗ, – ಮರಸಿಗೆ ಬರ್ತಿಯೇನೋ – ಅಂತಾ ಅವರು ಕೇಳಿದ್ರೆ?’ ಅಂತಾ! ಗುಟ್ಟು ನಮ್ಮಿಬ್ಬರಿಗೇ ಗೊತ್ತಿದ್ದು!”
ಐತ ದೊಡ್ಡಣ್ಣ ಹೆಗ್ಗಡೆಯವರೊಡನೆ ಮರದ ಮೇಲೆ ಕಟ್ಟಿದ್ದ ಅಟ್ಟಣೆಯ ಮೇಲೆ, ಒಂದು ಹೂಡುವ ಎತ್ತನ್ನು ಹಿಡಿದಿದ್ದ ಹುಲಿಯ ಬೇಟೆಗಾಗಿ, ರಾತ್ರಿ ಮರಸಿಗೆ ಕೂತಿದ್ದ ಸ್ವಾರಸ್ಯ ಕಥೆ ಹೇಳತೊಡಗಿದನು.
“ನಾನು ನಿಮ್ಮ ಹಾಂಗಿದ್ದೆ ಆವಾಗ. ಷಿಕಾರಿಗೆ ಹೋಗಾದು ಅಂದರೆ ಬಾಳ ಹುಚ್ಚು… ಒಂದಿನ ಒಂದು ಹೂಡಕ್ಕೆ ಕಟ್ಟಾ ಎತ್ತನ್ನೆ ಹಿಡ್ದುಬಿಡ್ತು, ಹುಲಿ! ದೊಡ್ಡ ಎತ್ತು ಕಣ್ರೋ! ನಿಮ್ಮ ದೊಡ್ಡ ಮಾವನ ಮದುವೇಲಿ ಹಳೆಮನೆಯಿಂದ ನಿಮ್ಮ  ಅತ್ತೆಮ್ಮಗೆ ಬಳ್ಳೊಳ್ಳಿ ಕೊಟ್ಟಿದಂತೆ…. ಹೇಳಿಕಳಿಸಿದ್ರು. ನಿಮ್ಮ ದೊಡ್ಡಮಾವ, ನಿಮ್ಮ ಅಪ್ಪಯ್ಯಗೆ. ಹುಲಿ ಹೊಡಿಯಾದು ಅಂದ್ರೆ ನಿಮ್ಮ ಅಪ್ಪಯ್ಯಗೆ ನೀರು ಕುಡಿದ್ಹಾಂಗೆ! ಈ ಪರಾಂತಕ್ಕೆಲ್ಲ ಭಾರಿ ಈಡುಗಾರರು; ಇಟ್ಟಗುರಿ ತಪ್ಪಿರ್ತಿಲ್ಲಂತೆ. ಹೇಳಿಕಳ್ಸಿದ್ದೆ ಸೈ, ಬಂದೇ ಬಂದ್ರು, ಜೋಡುನಳಿಗೆ ಕೇಪಿನಕೋವೀನ ಹೆಗಲಮೇಲೆ ಹೇರಿಕೊಂಡು, ಕೋಣೂರಿಗೆ. ಎಂಥಾ ಆಳು ಅಂತೀರಿ? ಬರ್ದ್ದಂಡಾಳು! ಅವರನ್ನ ಕಂಡ್ರೇ ಹುಲಿ ನಡುಗಬೇಕು, ಹಾಂಗಿದ್ರು… ಅವತ್ತು ಬೈಗಿನ ಹೊತ್ತು ನಾ ಸುಮ್ನೆ ನಿಮ್ಮ ಸಣ್ಣಮಾವನ ಜೊತೆ ಚಿಟ್ಟುಬಿಲ್ಲು ಹಿಡುಕೊಂಡು ಹಕ್ಕಿ ಹೊಡಿಯಾಕೆ ಹೋಗಾಕೆ ಮುಕುಂದಯ್ಯನೆ ಹೊರಟಿದ್ರು. ಆದರೆ ದೊಡ್ಡಮ್ಮ – ‘ಅವನಿಗೆ ಎರಡು ಜರ ಬಂದು ಇವತ್ತೆ ಬಿಟ್ಟದೆ; ಹೋಗಾದು ಬ್ಯಾಡ.’ ಅಂದು ಬಿಟ್ರಂತೆ…. ನಾ ಮುಕುಂದಯ್ಯನ ಹತ್ರಾನೆ ತೆಣೆ ಕೆಳಗೆ ಅಂಗಳದಾಚೆ ನಿಂತಿದ್ದೆ. ನನ್ನಾರೂ ಕರೆದಿದ್ರೆ ಹೋಗ್ತಿದ್ನೆಲ್ಲಾ ಅಂತಾ ಮನಸ್ಸಿನಾಗೆ ಹಾರೈಸ್ತಾ. ನಿಮ್ಮ ಅಪ್ಪಯ್ಯ ಜಗಲಿಮೇಲೆ ಕೂತಿದ್ದವರು. ಹಾಂಗೆ ನನ್ನ ಕಡೆ ನೋಡಿದ್ರು. ನಾ ನೆಗ್ತಾ ನಿಂತಿದ್ದೆ. ‘ಬತ್ತಿಯೇನೋ ಮರಸೀಗೆ?’ ಅಂತಾ ಕರೆದೇಬಿಟ್ರು! ನಂಗೇನು? ಸಂತೋಷವೇ ಸಂತೋಷ! ‘ಹ್ಞೂ ಬತ್ತೀನ್ರಯ್ಯಾ!’ ಅಂದೇಬಿಟ್ಟೆ. ‘ಹುಲಿಗಿಲಿ ಬಂದ್ರೆ ಹೆದರಿಕೋಬಾರ್ದು. ಪಟ್‌ಪಿಟ್‌ ಅನ್ನದೆ ಸುಮ್ನೆ ಕೂತುಗೋತಿಯಾ?’ ಅಂದ್ರು. ‘ಹ್ಞೂ, ನಾನೇನು ಹೆದರೋದಿಲ್ಲ!’ ಅಂದೆ.
“ನಂಗೂ ಇಷ್ಟು ಊಟ ಹಾಕ್ಸಿದ್ರು; ಅವರೂ ಒಳಗೆ ಹೋಗಿ ಉಂಡ್ರು. ಕತ್ತಲಾಗಾಕೆ ಮುಂಚೇನ
*****

ಕಾಮೆಂಟ್‌ಗಳಿಲ್ಲ: