ದಕ್ಷ ನ್ಯಾಯಾಧೀಶ
ನಾಲ್ಕನೆಯ ಹೆನ್ರಿ ಇಂಗ್ಲೆಂಡಿನ ರಾಜ. ವೇಲ್ಸಿನ ರಾಜಕುಮಾರನು ಅವನ ಮಗ. ಅವನು
ಒಳ್ಳೆಯವನೇ. ಯಾವುದು ಸರಿ ಯಾವುದು ತಪ್ಪು ಎಂದು ತಿಳಿವ ವಿವೇಕ ಆವನಿಗಿತ್ತು. ಆದರೆ
ಅವನಿಗೆ ತಾಳ್ಮೆ ಕಡಿಮೆ. ಬಲು ಬೇಗ ಅವನು ಸಿಟ್ಟುಗೊಳ್ಳುತ್ತಿದ್ದ. ಕೆಲವು ಪೋಲಿಗಳ
ಸಹವಾಸವೂ ಆತನಿಗಿತ್ತು.
ಒಮ್ಮೆ ರಾಜಕುಮಾರನ ಮಿತ್ರನೊಬ್ಬ ಏನೋ ಅಪರಾಧ ಮಾಡಿದ. ಅವನು ವಿಚಾರಣೆ
ಎದುರಿಸಬೇಕಾಯಿತು. ಅವನ ವಿಚಾರಣೆ ನಡೆಸಿದವನು ಸರ್ ವಿಲಿಯಮ್ ಗಾಸ್ಕೊಗ್ನೆ. ಆತ ಬಹಳ
ದಕ್ಷ ಮತ್ತು ಪ್ರಾಮಾಣಿಕ. ಆದರೆ ನ್ಯಾಯಾಧೀಶನು ತನ್ನ ಮಿತ್ರನಿಗೆ ರಿಯಾಯಿತಿ
ತೋರಬೇಕೆಂಬುದು ರಾಜಕುಮಾರನ ಬಯಕೆಯಾಗಿತ್ತು. ನ್ಯಾಯಾಧೀಶನು ಅದಕ್ಕೆ ಸಿದ್ಧನಿರಲಿಲ್ಲ.
ಅಪರಾಧಿಗೆ ತಕ್ಕ ಶಿಕ್ಷೆ ದೊರೆಯಿತು. ರಾಜಕುಮಾರ ಅಸಮಾಧಾನಗೊಂಡ. ಅವನ ತಾಳ್ಮೆ ತಪ್ಪಿತು.
ಸಿಟ್ಟು ನೆತ್ತಿಗೇರಿತು ತಾನೇನು ಮಾಡುತ್ತಿದ್ದೇನೆ ಎನ್ನುವುದು ಅವನಿಗೆ ಮರೆತು
ಹೋಯಿತು. ಮರುಕ್ಷಣದಲ್ಲೆ ಆತ ನ್ಯಾಯಾಧೀಶನ ಮೇಲೆ ಏರಿ ಹೋಗಿದ್ದ. ನ್ಯಾಯಾಲಯದಲ್ಲೆ
ನ್ಯಾಯಾಧೀಶನಿಗೆ ಏಟು ಬಿಗಿದಿದ್ದ.
ಬಹಳ ಜನ ಅಲ್ಲಿ ನೆರೆದಿದ್ದರು. ಅವರೆಲ್ಲ ಉಸಿರು ಬಿಗಿ ಹಿಡಿದು ನೋಡುತ್ತಿದ್ದರು.
ನ್ಯಾಯ ಸ್ಥಾನದಲ್ಲೆ ಅನ್ಯಾಯ ನಡೆದಿತ್ತು. ರಾಜಕುಮಾರನೆ ಅಪರಾಧ ಮಾಡಿದ್ದ. ಅವನಿಗೆ ಅಥವಾ
ಅವನ ತಂದೆಗೆ ಹೆದರಿ ಉಳಿದ ಯಾರೇ ಆದರು ಸುಮ್ಮನೆ ಇದ್ದುಬಿಡುತ್ತಿದ್ದರು. ಆದರೆ
ನ್ಯಾಯಾಧೀಶ ವಿಲಿಯಮ್ ಹಾಗೆ ಮಾಡಲಿಲ್ಲ. ರಾಜಕುಮಾರನ ಮೇಲೆ ತಕ್ಷಣ ಕಾನೂನು ಕ್ರಮ
ಕೈಗೊಂಡ. ಅವನಿಗೆ ಜೈಲು ಶಿಕ್ಷೆ ವಿಧಿಸಿಯೇ ಬಿಟ್ಟ.
ರಾಜಕುಮಾರನ ಸಿಟ್ಟು ಹೆಚ್ಚು ಹೊತ್ತು ಉಳಿಯಲಿಲ್ಲ. ಸಿಟ್ಟು ಇಳಲಿದುದೇ ತಡ ಅವನಿಗೆ
ತಾನು ಮಾಡಿದ ತಪ್ಪಿನ ಅರಿವಾಯಿತು. ಮನದಲ್ಲಿ ಪಶ್ಚಾತ್ತಾಪ ಮೂಡಿತು. ಅವನು ಚಕಾರವೆತ್ತದೆ
ನ್ಯಾಯಾಧೀಶನ ಅಪ್ಪಣೆಯನ್ನು ಪಾಲಿಸಿದ. ತಾನೇ ಸೆರೆಮನೆಯತ್ತ ನಡೆದು ಜೈಲು ಶಿಕ್ಷೆಗೆ
ಒಳಗಾದ.
ಮಿಂಚಿನ ವೇಗದಲ್ಲಿ ವಾರ್ತೆ ಹರಡಿತು. ರಾಜನಿಗೂ ವಿಷಯ ತಿಳಿಯಿತು. “ನಿರ್ಭೀತನಾಗಿ,
ನಿಷ್ಪಕ್ಷಪಾತವಾಗಿ ಕರ್ತವ್ಯ ನೆರವೇರಿಸುವ ಧೀರನೂ, ನ್ಯಾಯ ನಿಷ್ಠುರಿಯೂ ಆದ
ನ್ಯಾಯಾಧೀಶನೊಬ್ಬ ನಮ್ಮಲ್ಲಿ ಇದ್ದಾನೆ ಎಂಬುದಕ್ಕಾಗಿ ಹೆಮ್ಮೆಪಡುತ್ತೇನೆ. ಹಾಗೆಯೇ
ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ಮತ್ತು ಅದಕ್ಕಾಗಿ ಶಿಕ್ಷೆ ಅನುಭವಿಸಲು ಸಿದ್ಧನಾದ
ಮಗನಿರುವುದಕ್ಕಾಗಿ ಇನ್ನಷ್ಟು ಸಂತೋಷ ಪಡುತ್ತೇನೆ” ಎಂದು ಉದ್ಗಾರ ಅವನಿಂದ
ಹೊರಹೊಮ್ಮಿತು.
* * *
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ