ಮಲೆಗಳಲ್ಲಿ ಮದುಮಗಳು-೫೫

ದಟ್ಟಗಾಡಿನ ಮಲೆಗಳ ನಡುವೆ ಹುಟ್ಟಿ ಬೆಳೆದ ಮಲೆನಾಡಿನ ಮಲೆಗಳ ಮಗಳಾಗಿದ್ದರೂ ಚಿನ್ನಮ್ಮ ಎಂದೂ ಅಂತಹ ಮೇಘಚುಂಬಿ ಘೋರಾರಣ್ಯದ ಶಿಖರ ಪ್ರದೇಶದಲ್ಲಿ, ಅದರಲ್ಲಿಯೂ ಅಂತಹ ಗಾಳಿಮಳೆಗಳ ಬಿರುಬಿನ ಸನ್ನಿವೇಶದಲ್ಲಿ, ಇರುಳನ್ನು ಕಳೆದವಳಾಗಿರಲಿಲ್ಲ. ಅಜ್ಜಿಯ ಅಕ್ಕರೆಯ ಬೆಚ್ಚನೆಯ ಮಗ್ಗುಲಲ್ಲಿಯೆ ಅವಳ ಬದುಕು ಬೆಳೆದಿತ್ತು, ಬಾಳು ಸಾಗಿತ್ತು. ತನಗೆ ವಿಷಮಯವಾಗಿದ್ದ ವಿಷಮ ವಿವಾಹದಿಂಗ ಪಾರಾಗಿ,ಅಮೃತಮಯವಾಗಿದ್ದು ತಾನೊಲಿದವನನ್ನೆ ತನ್ನ ಬದುಕಿನ ಸಂಗಿಯನ್ನಾಗಿ ಪಡೆಯುವ ಹೃದಯದ ಹಂಬಲವೋಂದೆ ಅವಳನ್ನು ಆ ರಾತ್ರಿ ಅಂತಹ ಅಪೂರ್ವ ಸಾಹಸಕ್ಕೆ ಪ್ರಚೋದಿಸಿತ್ತು. ಅವಳ ಚೇತನದ ಸಹಜ ಸ್ವರೂಪವಾಗಿದ್ದ ಕುಸುಮಕೋಮಲತೆ ಕೆಲವು ಮುಹೂರ್ತಕಾಲದ ಮಟ್ಟಿಗೆ ವಜ್ರಕಠೋರವಾಗಿ ಪರಿವರ್ತಿತವಾಗಿತ್ತು. ಅಂತಹ ಪರಿವರ್ತನೆ ಏಕದೇಶನಿಷ್ಠವಾದ ಅಂಶದೃಷ್ಟಿಗೆ ಆಕಸ್ಮಿಕ, ಅಸಾಧ್ಯ, ಅತ್ಯಂತ ಅಪೂರ್ವ, ಅಸ್ವಾಭಾವಿಕ ಎಂಬಂತೆ ಭಾಸವಾದರೂ, ಚಿನ್ನಮ್ಮನ ಹೊಟ್ಟೆಯಲ್ಲಿ ಮಗಳಾಗಿ ಹುಟ್ಟುವವಳ ಅಥವಾ ಆ ಮಗಳ ಹೊಟ್ಟೆಯಲ್ಲಿ ಮಗನಾಗಿ ಹುಟ್ಟಿ ಮುಂದೆ ಜಗಜ್ಜೀವನ ವಿಕಾಸಕ್ಕೆ ತನ್ನ ಕಾಣಿಕೆಯನ್ನು ಸಲ್ಲಿಸುವ ಅದಾವುದೊ ಒಂದು ಗುರುಚೇತನದ ಚಿತ್ತಪಸ್ಸಿನ ಪ್ರಭಾವವನ್ನರಿಯುವ ತ್ರಿಕಾಲಜ್ಞವಾದ ಪೂರ್ಣದೃಷ್ಟಿಗೆ ಅದು ಅತ್ಯಂತ ಅನಿವಾರ್ಯ ಧರ್ಮವಾಗಿಯೆ ಕಾಣಿಸುವುದರಲ್ಲಿ ಸಂದೇಹವಿಲ್ಲ.
ಹುಲಿಕಲ್ಲು ನೆತ್ತಿಯ ಕಲ್ಲುಮಂಟಪಕ್ಕೆ ಬಂದು, ಬಟ್ಟೆ ಬದಲಾಯಿಸಿ, ಬೆಂಕಿ ಕಾಯಿಸಿಕೊಂಡು, ಬುತ್ತಿಯೂಟ ಉಣ್ಣುವ ಶಾಸ್ತ್ರ ಮಾಡಿ, ಮುಕುಂದಯ್ಯನ ಮುಂಗಾಣ್ಕೆ ಒದಗಿಸಿದ್ದ ಬೆಚ್ಚನೆಯ ಕಂಬಳಿಯ ಮೇಲೆ ಬೆಚ್ಚಗೆ ಹೊದೆದುಕೊಂಡು ಮಲಗಿದ ಮೇಲೆಯೆ ಆ ಚಿತ್ತಪ್ಪಸ್ಸಿನ ಪ್ರಭಾವ ತಿರೋಹಿತಮಾದಂತಾದಿ ಚಿನ್ನಮ್ಮನ ಹೃದಯ ಅಳುಕತೊಡಗಿದ್ದು! ತನ್ನಂತಹ ಪುಕ್ಕಲೆದೆಯ ಹಳ್ಳಿಯ ಹುಡುಗಿ, ಅತ್ತಕಡೆಯ ಜನರು ಕಥೆಗಳಲ್ಲಲ್ಲದೆ ಕಂಡು ಕೇಳರಿಯದ, ಅಂತಹ ಮಹಾ ಅಪವಾದಕರವಾದ ಅಪರಾಧ ಸದೃಶವಾದ ಭಯಂಕರ ಸಾಹಸಕ್ಕೆ ಕೈಹಾಕಿದ್ದಾದರೂ ಹೇಗೆ ಎನ್ನುವುದು ಅವಳಿಗೆ ಅರ್ಥವಾಗಲಿಲ್ಲ. ನೆನೆದಂತೆಲ್ಲ ಹೆದರಿಕೆಯಾಗತೊಡಗಿತು.ಇನ್ನೂ ಬುದ್ಧಿರೂಪಕ್ಕಿಳಿಯದೆ ಭಾವರೂಪ ಮಾತ್ರವಾಗಿದ್ದ  ಆ ಚಿಂತನೆ ಚಿನ್ನಮ್ಮನ ಚೇತನದಲ್ಲಿ ತನ್ನ ಅಜ್ಜಿಯ ಪರವಾದ ಯೋಚನೆಯಾಗಿ ಪರಿಣಮಿಸಿ, ಅಜ್ಜಿಯನ್ನು ನೆನೆನೆನೆದು ಮುಸುಗಿನೊಳಗೆ ಸದ್ದಿಲ್ಲದೆ ಅಳತೊಡಗಿದಳು.
ಚಿನ್ನಮ್ಮ ಮಲಗಿದ್ದ ಜಾಗಕ್ಕೆ ಸಮೀಪದಲ್ಲಿದ್ದ ಕಲ್ಲುಗೋಡೆಯ ಬಿರುಕಿನಲ್ಲಿ ಕೀಟವೊಂದು ಟಿಪಿಟ್ಟಿಪಿಟ್ಟಿಪಿಟ್ಟಿ ಎಂದು ಬಿಡದೆ ಕೂಗಿಕೊಳ್ಳುತ್ತಿತ್ತು. ಅದು ಮೂದಮೂದಲು ಕಿನಿಸಿಗೆ ಉಂಟುಮಾಡಿದರೂ ಬರಬರುತ್ತಾ ಒಂದು ತೆರನಾದ ಜೋಗುಳದುಲಿಯಂತಾಗಿ, ಅಳುತ್ತಳುತ್ತಲೆ, ಹಿಂದೆಂದೂ ದಣಿಯದಷ್ಟು ದಣಿದಿದ್ದ ಕುಮಾರಿ ನಿದ್ದೆಹೋದಳು.
ಮನೆಯಲ್ಲಿ ಗದ್ದಲವೋ ಗದ್ದಲ! ಮದುವೆಗೆ ಬಂದಿದ್ದ ನಂಟರು, ದಿಬ್ಬಣದವರು, ಊಟಕ್ಕಾಗಿಯೆ ಬಂದಿದ್ದ ಕೀಳುಜಾತಿಯ ಆಳುಕಾಳುಗಳು, ಧಾರೆಯ ನೋಟಕ್ಕಾಗಿಯೂ ಬಂದಿದ್ದವರೂ ಎಲ್ಲರೂ ಓಡಾಡುತ್ತಿದ್ದಾರೆ: ಹುಡುಕುತ್ತಿದ್ದಾರೆ! ಕರೆಯುತ್ತಿದ್ದಾರೆ!…. ಇದೇನಿದು? ಕುಂಟನ ಹುಣ್ಣು ವಿಷಮಿಸಿ ಏಳಲಾರದೆ, ಮಾತು ಕೂಡ ನಿಂತುಹೋಗುವಷ್ಟು ಜ್ವರದಿಂದ ನರಳುತ್ತಿದ ಅಪ್ಪಯ್ಯ ಕೋಣೆಯಿಂದೆದ್ದು ಬಂದು, ಮದುವೆಗೆ ನೆರೆದಿದ್ದ ಗರತಿಯರ ನಡುವೆ ನುಗ್ಗಿ, ಯಾರನ್ನೊ ಹೊಡೆಯುತ್ತಿದ್ದಾನೆ! ಚಿನ್ನಮ್ಮ ನಡುಗುತ್ತ ಮೈ ಬೆವರಿ ನೋಡುತ್ತಾಳೆ: ರೌದ್ರಾವೇಶದ ತನ್ನ ಅಪ್ಪಯ್ಯ ನಾಗಕ್ಕನ ಜಡೆ ಹಿಡಿದು, ಗುದ್ದಿ ಗುದ್ದಿ ಎತ್ತಿಯೆತ್ತಿ ಕುಕ್ಕಿ, ಒದೆಯುತ್ತಿದ್ದಾನೆ. ನಾಗಕ್ಕ ಕೆಳಗೆ ಬಿದ್ದು, ಏಳಲು ಪ್ರಯತ್ನಿಸುತ್ತಾ, ಒಂದೊಂದು ಒದೆಗೂ ತತ್ತರಿಸಿ ಮತ್ತೆಮತ್ತೆ ನೆಲಕ್ಕೆ ಬೀಳುತ್ತಿದ್ದಾಳೆ! ಚಿನ್ನಮ್ಮ ತಡೆಯಲಾರದೆ “ದಮ್ಮಯ್ಯ ಅಪ್ಪಯ್ಯಾ! ಹೊಡೀಬ್ಯಾಡ, ಬಿಡು! ಎಂದು ಕೂಗಿ ಮುನ್ನುಗ್ಗಿದವಳು, ಅಪ್ಪಯ್ಯ ತನ್ನ ಹೊಟ್ಟೆಗೇ ಝಾಡಿಸಿ ಒದ್ದ ಹೊಡೆತಕ್ಕೆ ಅರಚಿಕೊಂಡು ನೆಲಕ್ಕೊರಗುತ್ತಾಳೆ!
ಗಡಗಡನೆ ನಡುಗುತ್ತಾ, ಮೈ ಬೆವರಿ, ಕುಮುಟಿ ಬಿದ್ದು, ಚಿನ್ನಮ್ಮ ತಟಕ್ಕನೆ ಕಣ್ಣು ತೆರೆಯುವುದಕ್ಕೂ, ಹತ್ತಿರವೆ ಬೇರೆ ಚಾಪೆಯ ಮೇಲೆ, ಅತಿ ಆಯಾಸದಿಂದಾಗಿದ್ದ ತನ್ನ ಬಸಿರಿನ ನೋವನ್ನು ಯಾರಿಗೂ  ಹೇಳದೆ, ನಿದ್ದೆಯಿಲ್ಲದೆ, ಬಿದ್ದುಕೊಂಡಿದ್ದ ಪೀಂಚಲು ಚಿನ್ನಮ್ಮ ಕೂಗಿಕೊಂಡದ್ದನ್ನು ಕೇಳಿ, “ ಚಿನ್ನಕ್ಕಾ, ಬಲಮಗ್ಗುಲಿಗೆ ತಿರುಗಿಕೊಳ್ಳಿ! ಅಂಗಾತನೆ ಮಲಗಿದ್ರೆ ಒತ್ತುಗ ಅಗ್ರದೆ!” ಎಂದು ಕರೆಯುವುದಕ್ಕೂ ಸರಿಹೋಯಿತು.
ಚಿನ್ನಮ್ಮ ಪೀಂಚಲು ಹೇಳಿದಂತೆ ಮಾಡಿ, ಮೆಲುದನಿಯಲ್ಲಿ ಕೇಳಿದನು: “ನಾನು ಕೂಗಿಕೊಂಡೆನೇನೇ?”
“ಹೌದು…. ಅಂಗಾತನೆ ಮನಗಿದ್ರೇ ಹಾಂಗಾಗಾದು.”
ಮಗ್ಗುಲಿಗೆ ತಿರುಗಿ ಮಲಗಿಕೊಂಡ ಚಿನ್ನಮ್ಮ ಕಣ್ಣುಬಿಟ್ಟುಕೊಂಡೆ ಇದ್ದಳು, ಬಹಳ ಹೊತ್ತು, ತಾನು ಕಂಡ ಕನಸನ್ನು ನೆನೆಯುತ್ತಾ. ಅವಳೂ ಪೀಂಚಲೂ ಇಬ್ಬರೂ ತಟ್ಟಿಕಟ್ಟಿ ಮರೆಮಾಡಿದ್ದ ಕೋಣೆಯಂತಹ ಜಾಗದಲ್ಲಿ ಮಲಗಿದ್ದರು, ಒಬ್ಬರಿಂದೊಬ್ಬರು ಸುಮಾರು ಒಂದು ಮಾರು ದೂರವಾಗಿ. ಆಚೆಗೆ ಹತ್ತಾರು ಮಾರು ದೂರದಲ್ಲಿ ‘ನಂದಾಬೆಂಕಿ’ಯ ಸುತ್ತಲೂ ಕುಳಿತು ಮಾತಾಡುತ್ತಿದ್ದ ಮುಕುಂದಯ್ಯ ಐತ ಗುತ್ತಿಯರ ಆಕೃತಿಗಳು ಕೆಂಡಗಾಂತಿಯಲ್ಲಿ ಮಬ್ಬಾಗಿ ಕಾಣಿಸುತ್ತಿದ್ದುವು.
ತಾನು ಕನಸಿನಲ್ಲಿ ಕಂಡಂತೆಯೆ ಆಗಿಬಿಟ್ಟಿರಬಹುದೆ ಮನೆಯಲ್ಲಿ? ತನಗಾಗಿ ನಾಗಕ್ಕಗೆ ಏನೇನು ಕಷ್ಟವೋ? ಅಪ್ಪಯ್ಯನಿಗೆ ಕಾಯಿಲೆ ಜೋರಾಗಿ, ಅವನು ಏಳದಿರುವಂತೆ ಆಗಿದ್ದರೆ ಎಂದು ತನ್ನ ಒಳಮನಸ್ಸು ಹಾರೈಸುತ್ತಿರುವುದನ್ನು ಗೊತ್ತುಹಚ್ಚಿದ ಅವಳ ಮಗಳುತನದ ಪಿತೃಪ್ರೀತಿ ಜುಗುಪ್ಸೆಯಿಂದ ಇಸ್ಸಿ ಎಂದುಕೊಂಡಿತು. ಆಲೋಚಿಸುತ್ತಿದ್ದ ಹಾಗೆಯೆ ದಣಿದ ಓಡಲು ಮತ್ತೆ ಕಣ್ಣುಮುಚ್ಚಿತ್ತು.
ಚಿನ್ನಮ್ಮ ತಮ್ಮ ಮನೆಯ ತುಳಸಿಕಟ್ಟೆಯ ದೇವರಿಗೆ ಮನದಲ್ಲಿಯೆ ಅಡ್ದಬಿದ್ದು ನಿದ್ದೆ ಮಾಡಿದವಳು ಚೆನ್ನಾಗಿಯೆ ನಿದ್ರಿಸಿದ್ದಳು: ಅವಿಚಾರ ಭಕ್ತಿಯ ಅಂಧಶ್ರದ್ಧೆಯಿಂದ ಅವಳಿಗೆ ಭಗವಂತನಲ್ಲಿ ಶರಣಾಗತಿ ಸುಲಭವಾಗಿಯೆ ಸಿದ್ದಿಸಿತ್ತು. ಮದುವೆ ಗೊತ್ತಾದ ದಿನವೇ ಅವಳು ಮುಕುಂದಯ್ಯನೊಡನೆ ಓಡಿ ಬಂದು, ಎಂತಹ ಕಂಟಕಮಯ ಜಟಿಲ ಸಮಸ್ಯೆಗಳ ಶತಶತ ಜಾಲವನ್ನೆ ನೆಯ್ದು, ಭಗವಂತನ ಮುಂದೆ ಪರಿಹಾರಕ್ಕಾಗಿ ಒಡ್ಡಿದ್ದಾಳೆ ಎಂಬುದರ ಅರಿವು ಅವಳಿಗೆ ಇನಿತೂ ಇರಲಿಲ್ಲ! ಅದನ್ನೆಲ್ಲ ಕಟ್ಟಿಕೊಂಡು ಅವಳಿಗೇನು? ಸರ್ವ ಶಕ್ತನೂ ಸರ್ವಜ್ಞಾನಿಯೂ ಪರಮಕೃಪಾನಿಧಿಯೂ ಆಗಿರುವ ಅವನಿಗೆ ಅದೊಂದು ದೊಡ್ಡ ವಿಷಯವೇನು? ಅದನ್ನೆಲ್ಲಾ ಚಿಂತಿಸಿ ಭಕ್ತೆ ಅವಳೇಕೆ ತಲೆ ಕೆಡಿಸಿಕೊಳ್ಳಬೇಕು! ಹೂವಳ್ಳಿ ಮನೆಯ ಬದುಕಿನಲ್ಲಿ, ಸಿಂಬಾವಿ ಮನೆಯ ಬದುಕಿನಲ್ಲಿ, ಹಳೆಮನೆ ಕೋಣೂರುಗಳ ಮನೆ ಬದುಕಿನಲ್ಲಿ, ಭರಮೈಹೆಗ್ಗಡೆ ವೆಂಕಪ್ಪನಾಯಕ ರಾದಿಯಾಗಿ ಹಲವಾರು ವ್ಯಕ್ತಿಗಳ ಮತ್ತು ಸಾಮಾಜಿಕ ಜೀವನದಲ್ಲಿ ಏನೇನು ಭೂಕಂಪಗಳಾಗುತ್ತವೆ? ಏನೇನು ಜ್ವಾಲಾಮುಖಿಗಳೇಳುತ್ತವೆ? ಏನೇನು ವಿಪ್ಲವ ಪ್ರವಾಹಗಳು ನುಗ್ಗಿ ಯಾರು ಯಾರು ಮುಳುಗುತ್ತಾರೆ? ಯಾರು ಯಾರು ಕೊಚ್ಚಿಹೋಗುತ್ತಾರೆ? ಅದನ್ನೆಲ್ಲ ಕಟ್ಟಿಕೊಂಡು ಅವಳಿಗೇನು? ಅದೆಲ್ಲ ಅವಳು ಯಾರಿಗೆ ಅಡ್ಡಬಿದ್ದು ಶರಣಾಗತಳಾದಳೊ ಆ ಭಗವಂತನ ಭಾರ!
ಚಿನ್ನಮ್ಮ ತಕ್ಕಮಟ್ಟಿಗೆ ಚೆನ್ನಾಗಿಯೆ ನಿದ್ದೆಮಾಡಿದ್ದಳು. ಆದರೆ ಬೆಳಗಿನ ಮುಂಜಾವಿನಲ್ಲಿ:
ಅಜ್ಜಿ ಅಳುತ್ತಾ ಕುಳಿತಿದ್ದಾಳೆ. ನಾಗಕ್ಕ ಅವಳ ಸುತ್ತಲೂ ಕೋಟೆಯ ಗೋಡೆ ಎಬ್ಬಿಸುವಂತೆ ಸೌದೆ ಒಟ್ಟುತ್ತಿದ್ದಾಳೆ. ಚಿನ್ನಮ್ಮ ನೋಡುತ್ತಿದ್ದಂತೆ ಸೌಧೆಯ ಗೋಡೆ ಅಜ್ಜಿಯ ಶೀರ್ಣಮುಖ ಮಾತ್ರ ಕಾಣುವಂತೆ, ಸುತ್ತಲೂ ಎದ್ದು ಅವಳನ್ನು ಮುಚ್ಚಿತು. ಚಿನ್ನಮ್ಮನಿಗೆ ಅಜ್ಜಿಯ ನೆರವಿಗೆ ಹೋಗುವ ತುರಾತುರಿ: ಆದರೆ ಹೆಜ್ಜೆ ಹಾಕಲಾಗುತ್ತಿಲ್ಲ! ಕೂಗಿ ನಾಗಕ್ಕನಿಗೆ ಹಾಗೆ ಮಾಡದಿರಲು ಹೇಳುವಾಶೆ: ಆದರೆ ಬಾಯೇ ಹೊರಡುತ್ತಿಲ್ಲ! ನಿಸ್ಸಹಾಯಳಾಗಿ ನಿಂತಿದ್ದಾಳೆ. ಅಯ್ಯೋ ಸೌಧೆಯ ಕೋಟೆ ಅಜ್ಜಿಯನ್ನು ಸಂಪೂರ್ಣವಾಗಿ ಮುಚ್ಚಿಯೆ ಬಿಟ್ಟಿತೆ?  ನಾಗಕ್ಕ ಎಲ್ಲಿಯೂ ಕಾಣಿಸುತ್ತಿಲ್ಲ!… ಆದರೆ ಅಪ್ಪಯ್ಯ! ‘ಅಯ್ಯೋ, ಬೇಡಾ ಬೇಡಾ, ಅಪ್ಪಯ್ಯ’ ಎಂದು ಒರಲುತ್ತಾಳೆ. ದನಿ ಹೊರಡದು! ಹೂವಳ್ಳಿ ವೆಂಕಪ್ಪನಾಯಕರು, ಕುಂಟಿನ ಹುಣ್ಣಿಲ್ಲ, ಕಾಯಿಲೆ ಇಲ್ಲ್, ಸಂಪೂರ್ಣ ಆರೋಗ್ಯದಿಂದಿದ್ದಾರೆ, ಅಜ್ಜಿಯನ್ನು ಮುಚ್ಚಿರುವ ಆ ಸೌದೆ ರಾಶಿಗೆ ಬೆಂಕಿಯಿಟ್ಟರು! ಜ್ವಾಲೆ ಧಗಧಗನೆ ಉರಿದೇಳುತ್ತಿದೆ!…
ಬೆವರಿ, ತತ್ತರಿಸಿ ಕುಮುಟಿಬಿದ್ದೆದ್ದಳು ಚಿನ್ನಮ್ಮ! ನೋಡುತ್ತಾಳೆ, ಎಲ್ಲರೂ ಮಲಗಿ ನಿದ್ರಿಸುತ್ತಿದ್ದಾರೆ. ದೂರದಲ್ಲಿ ಕುಂಟೆಯ ಬೆಂಕಿ ಕೆಂಡವಾಗಿ ಮಾತ್ರ ಝಗಝಗಿಸುತ್ತಿದೆ.
ಬಳಿಯ ಬೂದಿಯ ರಾಶಿಯಲ್ಲಿ ಹುಲಿಯ ಅಂಡೂರಿ ಕುಳಿತು ಮೈ ಕೆರೆದುಕೊಳ್ಳುತ್ತಿದೆ. ಗಾಳಿ ಸುಯ್ಯನೆ ಬೀಸುತ್ತಿದೆ. ಮಳೆ ಸುರಿಯುತ್ತಿದೆ. ಪೀಂಚಲು ತನ್ನ ಬಳಿಯೆ ತುಸು ದೂರದಲ್ಲಿ ಮಲಗಿ ನಿದ್ದೆಯಲ್ಲಿದ್ದಾಳೆ. ತಟ್ಟೆಯ ಕೋಣೆಯ ಆಚೆ ದೂರದಲ್ಲಿ ಮುಕುಂದಯ್ಯ ಐತರು ಮಲಗಿರುವುದು ಚಿನ್ನಮ್ಮನ ಹೃದಯ ಹೇಳಿಕೊಂಡಿತು: “ ಮುಕುಂದಭಾವನಿಗೆ ಎಷ್ಟು ನಾಚಿಕೆ! ಎಷ್ಟು ಮರ್ಯಾದೆ! ನನ್ನ ಮಾನ ಮರ್ಯಾದೆ ಅಂದರೆ ಅವರಿಗೆ ಎಷ್ತು ಮುತುವರ್ಜಿ!… ಅಷ್ಟು ದೂರದಲ್ಲಿ ಮಲಗಿದ್ದಾರಲ್ಲಾ!….
ತರುವಾಯ ಅವಳಿಗೆ ನಿದ್ದೆ ಮಾಡಲಾಗಲಿಲ್ಲ. ಎಲ್ಲದಕ್ಕಿಂತಲೂ ಹೆಚ್ಚಾಗಿ ಅಜ್ಜಿಯ ಚಿಂತೆಯ ಅವಳ ಹೃದಯವನ್ನು ಆಕ್ರಮಿಸತೊಡಗಿತು! ನಾಗಕ್ಕ ಅಜ್ಜಿಗೆ ಏನಾದರೂ ಸಮಾಧಾನ ಹೇಳಿದಳೋ ಇಲ್ಲವೋ? ನನಗೆ ಈ ಮದುವೆಯಲ್ಲಿ ಇಷ್ಟ ಸ್ವಲ್ಪವೂ ಇರಲಿಲ್ಲ ಎಂಬುದು ಅಜ್ಜಿಗೆ ಗೊತ್ತೆಇತ್ತು. ನಾನೆಲ್ಲಿ ಪ್ರಾಣ ಕಳೆದುಕೊಂಡುಬಿಟ್ಟೆನೋ ಎಂದು ಅಜ್ಜಿ ಎಷ್ಟು ಗೋಳಿಡುತ್ತಾಳೋ? ಅಥವಾ…? ತಾನು ಕಂಡ ಕನಸು ಏನಾದರೂ ನಡೆದಿದ್ದ ನಿಜವನ್ನೆ ಸೂಚಿಸಿತೊ? ನಾನು ಸತ್ತೇಹೋದೆ ಎಂದು ಹೆದರಿ ಅಜ್ಜಿಯ ಪ್ರಾಣವೆ ಹಾರಿ ಹೋಗಿದ್ದರೆ? ಚಿನ್ನಮ್ಮಗೆ ಅದನ್ನು ನೆನೆದ ಮಾತ್ರದಿಂದಲೆ ಬದುಕು ಶೂನ್ಯವಾದಂತಾಗಿ ಸುಮ್ಮನೆ ಕಣ್ಣೀರು ಸುರಿಸುತ್ತಾ ಮಲಗಿದ್ದಳು: ‘ಅಯ್ಯೋ ಅಜ್ಜಿಗೆ ನಾನೇನು ಮಾಡಿಬಿಟ್ಟೆನೋ, ಸ್ವಾಮಿ? ಸರೂ ತಪ್ಪಾಯ್ತು! ನಿನ್ನ ಪಾದಕ್ಕೆ ಬೀಳ್ತಿನಿ: ಇದೊಂದು ಸಾರಿ ಕಾಪಾಡು!…
ಬೆಳಗ್ಗೆ ಎಚ್ಚರವಾದಾಗ ಯಾರೊ ಗೊಣಗೊಣನೆ ಮಾತಾಡುತ್ತಿದ್ದದು ಚಿನ್ನಮ್ಮನ ಕಿವಿಗೆ ಬಿತ್ತು. ಕಣ್ಣುಬಿಟ್ಟು ನೋಡಿದಾಗ ‘ನಂದಾಬೆಂಕಿ’ಯ ಹತ್ತಿರ ಮುಕುಂದಯ್ಯನೊಡನೆ ಯಾರೊ ಮಾತಾಡುತ್ತಾ ಇದ್ದದ್ದು ಮಂಜು ಮಂಜಾಗಿ ಕಾಣಿಸಿತು. ಉಡುಗೆ ತೊಡುಗೆ ರೀತಿಗಳಿಂದ ಗುತ್ತಿ ಐತರಂತಿರಲಿಲ್ಲ. ಯಾರು ಎಂಬುದು ಸ್ವಷ್ಟವಾಗದಂತಹ ಹೊಗೆ ಮುಸುಗಿತ್ತು. ಇದೇನು ಹೊಗೆ? ಎಲ್ಲಿಂದ ಬಂತು? ‘ನಂದಾಬೆಂಕಿ’ಯ ಕುಂಟೆಗಳು ಚೆನ್ನಾಗಿ ಉರಿಯುತ್ತಿದ್ದುದರಿಂದ ಅಲ್ಲಿಂದ ಹೊಗೆ ಏಳುವ ಸಂಭವವೆ ಇರಲಿಲ್ಲ. ಚಿನ್ನಮ್ಮಗೆ ಮೊದಲು ಆಶ್ಚರ್ಯವಾಗಿ, ಕಡೆಗೆ ಹೆದರಿಕೆಯಾಯ್ತು: ಎಂಥದಕ್ಕಾದರೂ ಬೆಂಕಿ ಬಿದ್ದಿದೆಯೊ?
ಹತ್ತಿರ ಮಲಗಿದ್ದ ಪೀಂಚಲುಗೆ ಹೇಳಿದಳು. ಅವಳು ನಿಧಾನವಾಗಿ ಎದ್ದು ಕುಳುತು ಸುತ್ತಲೂ ನೋಡಿದಳು. ಮೇಲಕ್ಕೇಳುವುದಕ್ಕೆ ತುಸು ಸಂಕೋಚಪಟ್ಟುಕೊಂಡಂತೆ ಸೀರೆಯನ್ನೆಲ್ಲ ಸರಿಮಾಡಿಕೊಂಡು ಎದ್ದುನಿಂತಳು. ಗಟ್ಟಿದ ಮೇಲಿನವರಂತೆ ಗೊಬ್ಬೆ ಸೆರಗು ಕಟ್ಟಿ, ಸೊಂಟಕ್ಕೆ ಸೀರೆ ಬಿಗಿದು ಸುತ್ತಿ, ಕಳೆದ ರಾತ್ರಿ ತನ್ನೊಡನೆ ಬಂದಿದ್ದಳಲ್ಲವೆ? ಗೌಡರ ಹುಡುಗಿಯಂತೆ? ಈಗೇನು ಗಟ್ಟಿದ ಕೆಳಗಿನವರಂತೆ ಸೀರೆ ಉಟ್ಟಿದ್ದಾಳಲ್ಲ? ಸೆಟ್ಟರ ಹುಡುಗಿಯಂತೆ? ಏನು ರಾತ್ರಿ ಸೀರೆ ಬದಲಾಯಿಸಿ ಉಟ್ಟುಕೊಂಡಳೆ? ಒದ್ದೆಯಾಗಿದ್ದುದನ್ನು ಬದಲಾಯಿಸು ಎಂದು ನಾನೇ ಹೇಳಿದರೆ, ಬೇಡಾ ಎಂದು ಉಟ್ಟುದನ್ನೇ ಬೆಂಕಿಕಾಯಿಸಿ ಆರಿಸಿಕೊಂಡಿದ್ದಳಲ್ಲ ಮತ್ತೆ?
“ಯಾವಾಗ್ಲೆ ಸೀರೆ ಬದಲಾಯಿಸಿ ಉಟ್ಟಿದ್ದು? “ ಕೇಳಿದಳು ಚಿನ್ನಮ್ಮ.
“ರಾತ್ರೇಲಿ ಹೊರಗೆ ಹೋಗಿ ಬಂದೆ. ಆವಾಗ…”ಎಂದು ನಿಲ್ಲಿಸಿ, ಹೊಗೆಗೆ ಕಾರಣ ಕಂಡುಹಿಡಿಯಲು ಒಲೆಯ ಹತ್ತಿರಕ್ಕೆ ಹೋಗುತ್ತಿದ್ದ ಪೀಂಚಲು, ತುಸು ಅನುಮಾನಿಸಿ ನಿಂತು, ತಾನು ಹೇಳಿದ್ದ ಉತ್ತರ ಸಾಲದಾಗಬಹುದು ಎಂಬಂತೆ ಮತ್ತೆ ಸೇರಿದಳು: “ ನನಗೆ ನಾಲ್ಕು ಐದು ತಿಂಗಳಾಗಿದೆ, ಚಿನ್ನಕ್ಕ. ನಿನ್ನೆ ಗುಡ್ಡ  ಹತ್ತುವಾಗ ಬಹಳ ಕಷ್ಟವಾಯಿತು ಕಾಣಿ. ರಾತ್ರಿ ನೀವು ಕನವರಿಸಿ ಕೂಗಿಕೊಂಡಾಗಳೂ ನಾನು ಹೊಟ್ಟೆ ಬೇನೆಯಿಂದ ಹೊರಳಾಡುತ್ತಿದ್ದೆ. ಮತ್ತೆ ಸೊಂಟಕ್ಕೆ ಬಿಗಿದು ಸುತ್ತಿದ್ದ ನಿಮ್ಮ ರೀತಿಯ ಉಡುಗೆ ಬಹಳ ತೊಂದರೆ ಕೊಟ್ಟಿತ್ತು. ಅದಕ್ಕೇ ಬಿಚ್ಚಿ ನಮ್ಮ ರೀತಿ ಉಟ್ಟುಕೊಂಡು ಮಲಗಿದೆನಲ್ಲಾ? “
“ಛೆ ಪಾಪ! ನನ್ನ ದೆಸೆಯಿಂದ ನಿಂಗೆಷ್ಟು ಕಷ್ಟ?” ಎಂದಳಷ್ಟೆ ಮುಗ್ದೆ ಚಿನ್ನಮ್ಮ. “ಮೋಡ ಮುಚ್ಚಿತ್ತು, ಚಿನ್ನಕ್ಕ. ಹೊಗೆ ಅಲ್ಲ. ಹೊರಗಂತೂ ಏನೊಂದೂ ಕಾಣುವುದಿಲ್ಲ. ನಾವೂ ಮೋಡದ ಮೂಡದ ಮೂಟ್ಟೆ ಒಳಗೇ ಇದ್ದೇವಲ್ಲಾ?”
“ಅದು ಯಾರೆ ಮುಕುಂದಬಾವನ ಸಂಗಡ ಮಾತಾಡ್ತಿರೋರು?”
“ಹಳೆಮನೆ ತಿಮ್ಮಪ್ಪಯ್ಯೋರು ಅಂತಾ ಕಾಣ್ತದೆ.”
“ಚಿನ್ನಮ್ಮನ ಹೃದಯ ಒಮ್ಮಗೆ ಹರ್ಷಭಯಗಳಿಂದ ತಾಡಿದ ವಾಯಿತು: ತಿಮ್ಮಪ್ಪಣ್ಣಯ್ಯನಿಂದ ಅಜ್ಜಿಯ ಸುದ್ದಿ ತಿಳಿಯಬಹುದೆಂದು: ಆ ಸುದ್ದಿ ಮಂಗಳದ್ದೊ? ಅಥವಾ…?…
* * *
ಕಲ್ಲುಮಂಟಪದ ಗೋಡೆಗಳೆಲ್ಲ ಅನುರಣಿತವಾಗುವಂತೆ ಹುಲಿಯ ಕರ್ಕಶವಾಗಿ ಬೊಗಳಿದುದನ್ನು ಕೇಳಿ, ತಟಕ್ಕನೆ ಎಚ್ಚರಗೊಂಡು ಗುತ್ತಿ, ಪಕ್ಕದಲ್ಲಿ ಮಲಗಿದ್ದ ತಿಮ್ಮಿ ದಿಗಿಲುಗೊಳ್ಳುವಂತೆ ಹೌಹಾರಿ ಎದ್ದು, ತಾನೂ ತನ್ನ ಹೆಂಡತಿಯೂ ಅಲಾಯಿದವಾಗಿ ದೂರ ಮಲಗಿದ್ದ ಮೂಲೆಯಿಂದ ಓಡಿಬಂದು ನೋಡಿದಾಗ ಕಂಬಳಿಕೊಪ್ಪೆ ಹಾಕಿಕೊಂಡು, ಕೈಯಲ್ಲಿ ಲಾಟೀನನೊಂದನ್ನು ಹಿಡಿದುಕೊಂಡು ಬರುತ್ತಿದ್ದ ಒಂದು ಆಕೃತಿ ಕಾಣಿಸಿತು. ಆ ಆಕೃತಿ ನಾಯಿಗೆ ಸ್ವಲ್ಪವೂ ಹೆದರದೆ ಹಿಂಜರಿಯದೆ ನಿರ್ಲಕ್ಷವಾಗಿ ಮುಂಬರಿಯುತ್ತಿದ್ದು, ಹತ್ತಿರ ಬಂದಮೇಲೆ “ಹಛೀ ನಿನ್ನ ಹುಲಿ ಹಿಡಿಯ! ಈ ನಾಯಿಗೇನು ಗುರುತೇ ಸಿಕ್ಕಾದೆಲ್ಲೇನು?” ಎಂದು ಗದರಿತು. ಹುಲಿಯ ಧ್ವನಿಯನ್ನೊ ವಾಸನೆಯನ್ನೊ ಒಡನೆಯೆ ಗುರುತಿಸಿದಂತೆ ಬಾಲವಳ್ಳಾಡಿಸಿತು. ಗುತ್ತಿಯೂ ಗುರುತಿಸಿದನು: ಹಳೆಮನೆ ತಿಮ್ಮಪ್ಪಹೆಗ್ಗಡೆ!
ಇನ್ನೂ ಬೆಳಕು ಬಿಡುವುದಕ್ಕೆ ಒಂದು ಗಂಟೆಯಾದರೂ ಇರಬಹುದು: ಇಷ್ಟು ಕಪ್ಪಿನಲ್ಲೇ ಈ ಮಳೆಯಲ್ಲಿ ಗುಡ್ಡಹತ್ತಿ ಯಾಕೆ ಬಂದರೂ? ಗುತ್ತಿ ಸೋಜಿಗಪಡುವಷ್ಟರಲ್ಲಿ ಎಚ್ಚರಗೊಂಡಿದ್ದ ಮುಕುಂದಯ್ಯ ಮಲಗಿದ್ದಲ್ಲಿಂದಲೆ ಕೇಳಿದನು; “ ಏನೋ ಅದು ಗುತ್ತೀ?”
“ಹಳೇಮನೆ ಸಣ್ಣ ಅಯ್ಯ ಬಂದಾರೆ….”
ಮುಕುಂದಯ್ಯಗೆ ಮೈಮೇಲೆ ಕುದಿನೀರು ಹೊಯ್ದಂತಾಗಿ ಎದ್ದುಕೊತನು! ಹೂವಳ್ಳಿಯಲ್ಲಿ ಏನೋ ಅನಾಹುತವಾಗಿರಬೇಕು ಎಂಬುದರಲ್ಲಿ ಅವನಿಗೆ ಅನುಮಾನವೇ ಉಳಿಯಲಿಲ್ಲ.
ತಿಮ್ಮಪ್ಪಹೆಗ್ಗಡೆ ನಂದಾಬೆಂಕಿಗೆ ಸಮೀಪವಾಗಿಯೆ ಕುಳಿತು ಮೆಲುದನಿಯಲ್ಲಿ, ರಹಸ್ಯ ಹೇಳುವಂತೆ, ಹೂವಳ್ಳಿಯಲ್ಲಿ ರಾತ್ರಿ ನಡೆದದ್ದನ್ನೆಲ್ಲ ವರದಿ ಮಾಡಿದನು:
ಚಿನ್ನಮ್ಮ ಕಣ್ಮರೆಯಾದ ಮೇಲೆ ನಡೆದ ಹುಡುಕಾಟವನ್ನೂ; ಆ ಸುದ್ದಿ ಕಿವಿಗೆ ಬಿದ್ದೊಡನೆ ಸ್ವರತಪ್ತನಾಗಿ ಅರ್ಧ ಪ್ರಜ್ಞಾವಸ್ಥೆಯಲ್ಲಿ ಬಿದ್ದು ಕೊಂಡಿದ್ದ ವೆಂಕಟಣ್ಣ ನಾಗಕ್ಕನ್ನನ್ನು ದುರ್ಭಾಷೆಗಳಿಂದ ಶಪಿಸುತ್ತ ಅವಳನ್ನು ಹೊಡೆಯಲೆಂದು ಎದ್ದು, ತತ್ತರಿಸಿ ಬಿದ್ದು, ತಲೆಗೆ ಮಂಚದ ಏಣು ತಗುಲಿ, ತೀರಿಕೊಂಡಿದ್ದನ್ನೂ; ಅಪಶಕುನವಾಯಿತೆಂದು ಮದುವೆಯ ಗಂಡು ರಾತ್ರಾರಾತ್ರಿಯೆ ಹೂವಳ್ಳಿಯನ್ನು ತ್ಯಜಿಸಿ, ಹಳೆಮನೆಗೆ ಬಂದು, ತನ್ನ ಭಾವ ಹೆಂಚಿನಮನೆಯ ಶಂಕರಪ್ಪಹೆಗ್ಗಡೆಯ ಮನೆಯಲ್ಲಿ ತನ್ನ ಹೆಂಡತಿಯೊಡನೆ ತಂಗಿರುವುದನ್ನೂ; ಮದುವೆಗೆ ಬಂದವರೂ ದಿಬ್ಬಣದವರೂ ಎಲ್ಲ ಬೆಳಗಿನ ಜಾವದಲ್ಲಿ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿದುದನ್ನೂ ತಿಳಿಸಿ “ಬೆಳಗಾದ ಮ್ಯಾಲೆ ಬೆಟ್ಟಳ್ಳಿ ದ್ಯಾವಣ್ಣಯ್ಯನೇ ಮುಂದೆ ನಿಂತು ಮುಂದಿನ ಕೆಲಸ ಎಲ್ಲ ಮಾಡಿಸ್ತಾನಂತೆ. ಹೆಣಾ ತೆಗೆದು, ಸುಟ್ಟು, ಎಲ್ಲ ಪೂರೈಸಿದ ಮೇಲೆ, ಇವತ್ತೇ, ಬೈಗಿನ ಹೊತ್ತು, ಚಿನ್ನಕ್ಕನ್ನ ಮನೆಗೆ ಕರಕೊಂಡು ಬರಲಿ ಅಂತಾ ಹೇಳಿ ಕಳಿಸ್ಯಾನೆ.” ಎಂದು ಹೇಳಿ, ಮುಕುಂದಯ್ಯ ಏನು ಹೇಳುತ್ತಾನೆಯೊ ಎಂಬುದನ್ನು ನಿರೀಕ್ಷಿಸುವಂತೆ, ಅವನ ಮುಖದ ಕಡೆ ನೋಡುತ್ತಾ ಕುಳಿತನು, ತಿಮ್ಮಪ್ಪಹೆಗ್ಗಡೆ.
ಆದರೆ ಮುಕುಂದಯ್ಯ ಬೆಂಕಿಯ ಕಡೆ ನೋಡುತ್ತಿದ್ದನೆ ಹೊರತು ಮಾತಾಡಲೂ ಇಲ್ಲ, ಮುಖವೆತ್ತಲೂ ಇಲ್ಲ. ಅವನು ಕಟ್ಟಿಕೊಂಡಿದ್ದ ವ್ಯೂಹವೆಲ್ಲ ತಲಕೆಳಗಾಗಿತ್ತು. ಅವನ ಮನಸ್ಸು  ಈ ಅನಿರೀಕ್ಷಿತಕ್ಕೆ ಅಣಿಯಾಗಿರಲಿಲ್ಲ. ಮುಂದೇನು ಮಾಡಬೇಕೋ? ಯಾವ ರೀತಿ ನಡೆದರೆ ತನ್ನ ಮತ್ತು ಚಿನ್ನಮ್ಮನ ಇಷ್ಟಾರ್ಥ ಕೈಗೂಡುತ್ತದೆಯೋ ಒಂದೂ ಅವನಿಗೆ ತೋರಲಿಲ್ಲ. ಅವನ ಬುದ್ಧಿಗೆ ಕತ್ತಲುಗಟ್ಟಿದಂತಾಗಿತ್ತು.
ಸ್ವಲ್ಪ ಹೊತ್ತು ಉತ್ತರಕ್ಕಾಗಿ ಕಾದು, ಉತ್ತರ ಏನು ಹೊರಡುವಂತೆ ತೋರದಿರಲು, ತಿಮ್ಮಪ್ಪ ಹೆಗ್ಗಡೆ: “ಚಿನ್ನಕ್ಕನ್ನೆ ಕೇಳಿ ನೋಡಾನೇನು?” ಎಂದನು.
“ಅದಕ್ಕೇನು ಗೊತ್ತಾಗ್ತದೆ? ಅದಾದ್ರೂ ಏನು ಹೇಳ್ತದೆ?”
“ಏನಾದ್ರಾಗಲಿ ಕೇಳಿ ನೋಡ್ತಿನಿ.”
“ನೋಡಾದಾದ್ರೆ ನೋಡು!”
ಮುಕುಂದಯ್ಯನ ನಿರುತ್ಸಾಹಕರವಾದ ಔದಾಸೀನ್ಯದ ಒಪ್ಪಿಗೆ ದೊರೆಯಲು, ತಿಮ್ಮಪ್ಪಹೆಗ್ಗಡೆ ತಟ್ಟಿಗೋಡೆಯ ಒಳಗೆ ಹೋಗಿ, ಸ್ವಲ್ಪ ಹೊತ್ತು ಚಿನ್ನಮ್ಮನೊಡನೆ ಮಾತಾದುತ್ತಿದ್ದು, ಹೊರಗೆ ಬಂದು ಹೇಳಿದನು: “ ಅವಳು ಹೇಳ್ತಾಳೆ,‘ಈಗ್ಲೇ ಮನೀಗೆ ಹೋಗ್ತೀನಿ!.’ಅಂತಾ. ಅಪ್ಪಯ್ಯ ಹೋಗಿದ್ದಕ್ಕಿಂತಲೂ ಅಜ್ಜೀ ಚಿಂತೇನೆ ಬಾಳಾ ಆಗ್ಯದೆ ಅಂತಾ ಕಾಣ್ತದೆ.”
“ಅಪ್ಪ ಇದ್ದು ಮಾಡದೂ ಅಷ್ಟರೊಳಗೇ ಇತ್ತು!” ಮುಕುಂದಯ್ಯನ ಉದಾಸಭಾವ ಮತ್ತೆ ಕ್ರಿಯಾಶೀಲತೆಗೆ ತಿರುಗಿತ್ತು. ಅವನು ಆಡಿದ ಮಾತಿನ ಒಳ ಅರ್ಥ ‘ಅಪ್ಪ ಸತ್ತಿದ್ದು ಒಳ್ಳೆಯದೆ ಆಯ್ತು, ಮಗಳ ಕ್ಷೇಮಕ್ಕೆ!’ ಎಂಬಂತಿತ್ತು.
ತುಸು ಹೊತ್ತು ಯೋಚಿಸುತ್ತಾ ಕುಳಿತಿದ್ದು, ಏನನ್ನೂ ಮನದಲ್ಲಿ ನಿರ್ಣಯಿಸಿ,,ಮುಕುಂದಯ್ಯ ಮೇಲೆದ್ದು ಚಿನ್ನಮ್ಮ ಇದ್ದಲ್ಲಿಗೆ ತಟ್ಟೆಮರೆಯ ಒಳಗೆ ಹೋದನು.ಅವಳೊಡನೆ ಸ್ವಲ್ಪ ಕಾಲವೆ ಮಾತನಾಡುತ್ತಿದ್ದು, ಹೊರಗೆ ಬಂದು ಹೇಳಿದನು ತಿಮ್ಮಪ್ಪಹೆಗ್ಗಡೆಗೆ: “ಬೆಟ್ಟಳ್ಳಿ ಬಾವಗೆ ಹೇಳು, ಬೈಗಿನ ಹೊತ್ತಿಗೆ ಕರಕೊಂಡು ಬರ್ತಾನೆ ಅಂತಾ, ಅಜ್ಜಿಗೂ ಹೇಳು,ಹೂವಳ್ಳೀಲೇ ಇರೋ ಹಾಂಗೆ…ನೀನೂ ಇರು…ಮುಂದಿಂದೆಲ್ಲಾ ಒಂದು ಇತ್ಯರ್ಥ ಆಗೇಬಿಡ್ಲಿ… ನಮ್ಮ ರಂಗಪ್ಪಣ್ಣಯ್ಯ ಏನೇನೊ ಹೇಳ್ತಿದ್ದನಂತೆ. ಅವನ ಪಾಲು ಅವನು ತಗೊಂಡು ಏನಾರೂ ಮಾಡಲಿ, ಎಲ್ಲಿಗಾರೂ ಹೋಗಲಿ, ಅಂತಾ: ಪಾಲುಮುಖಂಡರೆಲ್ಲ ಸೇರಿ ನಮಗೆ ಬಹಿಷ್ಕಾರ ಹಾಕ್ತಾರಂತೆ!”
“ಅವರ ಮುಂಡಾಮೋಚ್ತು! ಯಾರಿಗೋ? ಬಹಿಷ್ಕಾರ ಹಾಕೋದು? ಯಾರೊ? ಯಾಕಂತೋ?… “ ತಿಮ್ಮಪ್ಪ ಹೆಗ್ಗಡೆಯ ಮಾತಿನಲ್ಲಿ ಹೊಣೆಗಾರಿಕೆ ಸಾಲದ ಹುಡುಗತನದ ಧೂರ್ತತೆ ಎದ್ದು ಕಾಣುತ್ತಿತ್ತು. “ ಹಾಂಗಾರೆ ಈಗ ನಾ ಹೋಗ್ತೀನಿ. ಸಾಯಂಕಾಲ ಇರ್ತಿನಿ ಹೂವಳ್ಳೀಲಿ. ದ್ಯಾವಣ್ಣಯ್ಯಗೂ ಹೇಳ್ತಿನಿ, ನೀ ಹೇಳಿದ್ನೆಲ್ಲಾ. ಬಾ, ಅಮ್ಯಾಲೆ ಮಾತಾಡಾನ….”
ಕಡೆಯಪಕ್ಷ ಒಂದೆರಡು ವಾರಗಳಾದರೂ ಚಿನ್ನಮ್ಮ ಅಡಗಿರಬೇಕಾಗಬಹುದು ಎಂದು ಮುಕುಂದಯ್ಯ ಅದಕ್ಕೆ ತಕ್ಕ ಸಿದ್ಧತೆ ಮಾಡಿದ್ದನು, ಹುಲಿಕಲ್ಲು ನೆತ್ತಿಯ ಕಲ್ಲುಮಂಟಪದಲ್ಲಿ. ಆದರೆ ಈಗ ಅವಳು ಅಲ್ಲಿ ಒಂದು ದಿನವನ್ನೂ ಪೂರ್ತಿ ಕಳೆಯಲಾಗಲಿಲ್ಲ. ಅವಳ ತಂದೆ ವೆಂಕಣ್ಣನ ನಿಧನದಿಂದ ಘಟನಾವ್ಯೂಹದ ದಿಕ್ಕೆ ಬದಲಾಯಿಸಿಹೋಗಿತ್ತು.
ಮುಕುಂದಯ್ಯ ಗುತ್ತಿಗೂ ಐತನಿಗೂ ಹೂವಳ್ಳಿಯಲ್ಲಿ ನಡೆದ ಸಮಾಚಾರವನ್ನೆಲ್ಲ ತಿಳಿಸಿ, ತಾನು ಚಿನ್ನಮ್ಮನನ್ನು ಬೈಗಿನ ಹೊತ್ತಿನಲ್ಲಿ ಕರೆದುಕೊಂಡು ಹೋಗಿ ಹೂವಳ್ಳಿಗೆ ಬಿಡುವುದಾಗಿಯೂ; ಪೀಂಚಲು ಗುಡ್ಡ ಇಳಿಯಲು ಸಧ್ಯಕ್ಕೆ ಅಸಮರ್ಥೆಯಾಗಿರುವುದರಿಂದ ಅವಳಿಗೆ ಮೈ ಸರಿಯಾಗುವ ತನಕ ಅಲ್ಲಿಯೆ ವಿಶ್ರಾಂತಿಯಿಂದಿದ್ದು, ಐತ ಅವಳನ್ನು ಕೋಣೂರಿನ ಅವರ ಬಿಡಾರಕ್ಕೆ ಕರೆದುಕೊಂಡು ಹೋಗುವಂತೆಯೂ ಹಿಂದಕ್ಕೆ ಸಾಗಿಸಬೇಕಾದ ಕೆಲವು ಸಾಮಾನುಗಳನ್ನು ಸಾಗಿಸಿದ ಮೇಲೆ, ಗುತ್ತಿ ಸಿಂಬಾವಿಗೆ ಹಿಂತಿರುಗುವಂತೆಯೂ ಸಲಹೆಮಾಡಿದನು. ತಾನೂ ತನ್ನ ಹೆಂಡತಿಯೂ ಸಿಂಬಾವಿಗೆ ಹಿಂದಿರುಗುವ ವಿಚಾರದಲ್ಲಿ ಗುತ್ತಿ ತನ್ನ ಒಡೆಯರ ಆಜ್ಞೆಯನ್ನೂ ತನ್ನ ಮಾವನ ಕಡೆಯವರಿಂದ ಒದಗಬಹುದಾದ ಕಿರುಕುಳವನ್ನೂ ಮತ್ತು ಪೋಲಿಸರ ಭಯವನ್ನೂ ಸೂಚಿಸಲು, ಮುಕುಂದಯ್ಯ ಅವನಿಗೆ ತಾನು ಹಿಂದೆ ತಿಳಿಸಿದಂತೆಯೆ ಧೈರ್ಯ ಹೇಳಿದನು.ಎಲ್ಲವನ್ನೂ ಆಲಿಸಿದ ಮೇಲೆ ಗುತ್ತಿ ಅನುಮಾನಿಸಿ ಹೇಳಿದನು ನಿಧಾನವಾಗಿ “ಏನೋ ನೋಡ್ತಿನಿ, ಅಯ್ಯಾ…. ನಂಗೇನಾದ್ರೂ ನೀವು ಒಂದಿಟು ದುಡ್ದು ಕೊಟ್ಟಿದ್ರೆ, ಆಪತ್ತಿಗೆ ಅನುವಾಗ್ತಿತ್ತೇನೋ? ದೇಸಾಂತ್ರ ಹೋಗಿ ಬಂದ ಮ್ಯಾಲಾದ್ರು ನಿಮ್ಮ ರುಣ ತೀರಿಸದೆ ಇಟ್ಟುಕೊಳ್ಳಾದಿಲ್ಲ. ನಾನೂ ನನ್ನ ಹೆಂಡ್ತೀನೂ ಇಬ್ರೂ ಗೆಯ್ದಾದ್ರೂ ತೀರಿಸ್ತೀಂವೆ!.”
“ದುಡ್ಡೇನೋ ಕೊಡಾನ. ಆದರೆ ನೀ ದೇಶಾಂತರೆ ಹೋಗಾದ್ಯಾಕೆ?”
“ದೂರಾ ಏನು ಹೋಗಾದಿಲ್ಲಯ್ಯಾ….! “ ಮುಂದುವರಿದನು ಗುತ್ತಿ ಇಂಗಿತವಾಗಿ ನಗುತ್ತಾ “ನಿಮ್ಮಾ-ಚಿನ್ನಕ್ಕೋರಾ ಲಗ್ನಕ್ಕೆ ಹಾಜರಿದ್ದು, ಮದುವೆ ಚಪ್ಪರ ಹಾಕೋ ಸೇವೆನಾದ್ರೂ ಮಾಡೇಮಾಡ್ತೀನಿ ಬಿಡಿ!…”
ನಡೆದೆಲ್ಲ ಘಟನೆಗಳಿಂದ ಅದುವರೆಗೂ ಮ್ಲಾವವಾಗಿದ್ದ ಮುಕುಂದಯ್ಯನ ಮುಖದ ಮಬ್ಬು ತೊಲಗಿದಂತಾಯ್ತು. ಗುತ್ತಿಯ ಲೋಕಾಭಿರಾಮದ ಮಾತು ಅವನಲ್ಲಿ ಹುದುಗಿದ್ದ ಆಶಾಕಿರಣಗಳನ್ನು ಮೂಡಿಸಿ ಬೆಳೆಸಿತು. ನಗುತ್ತಲೆ ವಿನೋದದಿಂದೆಂಬಂತೆ ಹೇಳಿದನು: “ಹಾಂಗೆ ಆಗಲಿ ಬಿಡು, ನಿನಗೆ ನಮ್ಮ ಸೇವೆ ಮಾಡುವ ಯೋಗ ಇರೋದರಿಂದಾದ್ರೂ ಹಾಂಗಾದ್ರೆ ಸಂತೋಷಾನೆ!”
ಉಲ್ಲಸಿತವಾದ ಮುಕುಂದಯ್ಯನ ಮನಸ್ಸು ತನ್ನ ಸಂಕಲ್ಪನಾ ವಿಲಾಸವನ್ನು ಮುಂದುವರಿಸಿತು.ಯಃಕಶ್ಚಿತರಾದ ಗುತ್ತಿ ಐತರಲ್ಲದಿದ್ದರೆ ಯಾವ ವಿಚಾರವನ್ನು ಇತರರೊಡನೆ ಬಾಯಿಬಿಡಲು ಹಿಂಜರಿಯುತ್ತಿತ್ತೋ ಆ ಗೋಪ್ಯ ವಿಷಯವನ್ನು, ತನಗೆ ತಾನೆ ಗಟ್ಟಿಯಾಗಿ ಹೇಳಿಕೊಳ್ಳುವಂತೆ, ಮುಕುಂದಯ್ಯನ ಜಿಹ್ವೆ ಅವನ ಹೃದಯದ್ವಾರವನ್ನು ತೆರೆದಿತ್ತು: ಮತ್ತೆ ಲಘುವಾಗಿಯೇ ಹೇಳಿದನು, ಅರ್ಧ ವಿನೋದಕ್ಕೆಂಬಂತೆ: “ಹೂವಳ್ಳಿ ಮಾವನೂ ತೀರಿಕೊಂಡಾಯ್ತು. ಇನ್ನು ಆ ಮನೆ ನಡಸೋ ಭಾರವನ್ನೆಲ್ಲಾ ನಾನೆ ಹೊರಬೇಕಾಗ್ತದೆಯೋ ಏನೋ? ನಮ್ಮ ರಂಗಪ್ಪಣ್ಣಯ್ಯನೂ ಹಿಸ್ಸೆ ಕೊಟ್ಟು, ನನ್ನ ಬ್ಯಾರೆ ಹಾಕೋ ಹುನಾರಿನಲ್ಲಿದಾನೆ… ಅಲ್ಲೋ ಗುತ್ತಿ?”
ತನ್ನೊಳಗೆ ತಾನೆ ಮಾತಾಡಿಕೊಳ್ಳುತ್ತಿದ್ದಂತೆ ಹೇಳುತ್ತಿದ್ದ ಮುಕುಂದಯ್ಯ ಇದ್ದಕ್ಕಿದ್ದಂತೆ ತನ್ನನ್ನು ಸಂಬೋಧಿಸಲು, ಗುತ್ತಿ ಎಚ್ಚತ್ತವನಂತೆ ಹರ್ಷಗೊಂಡು “ಆ” ಎಂದು ಸಮೀಪಸ್ಥನಾಗುವವನಂತೆ ಮುಖವನ್ನು ಮುಂದಕ್ಕೆ ಚಾಚಿ ವಿಶೇಷಾಸಕ್ತಿಯಿಂದ ಕಿವಿಗೊಟ್ಟನು.
“ಅಲ್ಲಾ? ಒಂದು ವೇಳೆ ಹೂವಳ್ಳೀಲಿ ಮಸಲಾ ನಾನೆ ನಿಂತು ಗದ್ದೆ ತೋಟಕ ಕೆಲಸ ಎಲ್ಲಾ ಮುಗಿಸಬೇಕಾಗಿ ಬಂದರೆ…. ಅಲ್ಲೀಗೆ ಬರ್ತಿರೇನೊ ನೀನೂ ನಿನ್ನ ಹೆಂಡ್ತಿ?”
“ಭಗವಂತ ನಡೆಸಿದ್ರೆ ಖಂಡಿತಾ ಬತ್ತೀನಿ, ನನ್ನೊಡೆಯಾ? ನಿಮ್ಮ ಪಾದದಾಗೆ ಗೆಯ್ದುಕೊಂಡು ಬಿದ್ದಿರ್ತಿನಿ…” ಇನ್ನೇನು ಆ ಸನ್ನಿವೇಶವೂ ಸಾಕ್ಷಾತ್ಕಾತಕ್ಕೆ ಸನ್ನಿಕಟವಾಗಿಯೇ ಬಿಟ್ಟಿತೆಂಬಂತೆ ಮುಕುಂಕಯ್ಯನ ಪ್ರಶ್ನೆಗೆ ಹಿಗ್ಗಿನಿಂದ ಉತ್ತರ ಕೊಟ್ಟಿದ್ದನು ಗುತ್ತಿ!
ಅವರ ಸಂವಾದವನ್ನು ಆಲಿಸುತ್ತಾ ಕಿರುನಗೆವೆರೆಸಿ ಕುಳಿತಿದ್ದ ಐತ ಪರಿಹಾಸ್ಯಕೆಂಬಂತೆ: “ಮುಕುಂದಣ್ಣಗೆ ಗುತ್ತೀನ ಕಂಡರೇ ಅಷ್ಟು ಇಷ್ಟ. ನಾವು? ನಾನೂ ಪೀಂಚಲು?…”
“ನೀವಾ?… ನೀನು ಯಾದೆ? ಖಳ್ಳ! ಬರೀ ಕೂಳು ಖರ್ಚಿಗೆ!… ಪೀಂಚಲು ಒಬ್ಬಳೇ ಸಾಕು!… “ ಗಹಗಹಿಸಿ ನಕ್ಕನು ಮುಕುಂದಯ್ಯ.
ಪೀಂಚಲು ಒಬ್ಬಳೇ ನಮ್ಮಿಬ್ಬರ ಪಾಲು ಕೆಲಸಕ್ಕೂ ಸಾಕಲ್ದಾ? ನಿಮಗೇನು ನಷ್ಟ ಆಗಲಿಕ್ಕಿಲ್ಲ, ನಾನೂ ಅವಳ ಜೊತೆ ಬಂದಿದ್ದರೆ!” ನಗುನಗುತ್ತಲೆ ಹೇಳಿದನು ಐತ.
ಮೂವರೂ ಒಟ್ಟಿಗೆ ನಕ್ಕರು! ತಟ್ಟಿಕೋಣೆಯ ಒಳಗಡೆ ತಮ್ಮ ತಮ್ಮ ಕೆಲಸದಲ್ಲಿದ್ದ ಮೂವರು ಹೆಣ್ಣುಗಳೂ ಅಂತಹ ದುಃಖಭಾರದ ವಿಷಮಸನ್ನಿವೇಶದಲ್ಲಿಯೂ ಆ ರೀತಿ ಲಘುಹೃದಯರಾಗಿ ನಗುತ್ತಿದ್ದ ಗಂಡುಗಳನ್ನು ಕಂಡು ಅಚ್ಚರಿಗೊಂಡಿದ್ದರು!
*****

ಕಾಮೆಂಟ್‌ಗಳಿಲ್ಲ: