ಗುತ್ತಿ ಬಹಳ ಹೊತ್ತು ಬೆನ್ನು ಕಾಯಿಸಿರಲಿಲ್ಲ.
ಪಕ್ಕದಲ್ಲಿ ಮಲಗಿದ್ದ ಹುಲಿಯ ಸೀನತೊಡಗಿತು. ಸೀನು ಒಂದರಮೇಲೊಂದು ಬರತೊಡಗಿ ಮಲಗಿದ್ದ
ನಾಯಿ ಎದ್ದು ನಿಂತಿತು. ಮುಂದಿನ ಕಾಲುಗಳಿಂದ ಮೂಗಿನೆಡೆಯ ಮೋರೆಯನ್ನು
ಕೆರೆದುಕೊಳ್ಳುತ್ತಾ ಮತ್ತೆ ಮತ್ತೆ ಸೀನುತ್ತಾ ಕುಣಿದಾಡತೊಡಗಿತು.
ಹುಲಿಯ ಮೊದಲು ಸೀನಿದಾಗ “ಹಚಾ ನಿನ್ನ ಹುಲಿ ಹಿಡಿಯಾ!” ಎಂದು ಉದಾಸೀನತೆಯಿಂದ
ಗದರಿಸಿದ್ದ ಗುತ್ತಿ ನಾಯಿ ಕುಣಿದಾಡತೊಡಗಲು ಸ್ವಲ್ಪ ಗಾಬರಿಗೊಂಡವನಾಗಿ ಅದರ ಕಡೆಗೆ
ತಿರುಗಿ “ಇದ್ಕೆನಾಗಿದೆರೋ ಹಿಂಗೆ ಕುಣಿಯಾಕೆ?” ಎಂದು ಅದನ್ನು ಹತ್ತಿರಕ್ಕೆ ಕರೆಯುತ್ತಾ
ಕೈಚಾಚಿದನು.
“ಬಾ, ಇಲ್ಲಿ! ಬಾ ಇಲ್ಲಿ!”
ನಾಯಿ ಬರಲಿಲ್ಲ. ಮತ್ತೂ ಜೋರಾಗಿ ಮೂಗು ಕೆರೆದುಕೊಂಡು ಸೀನಿ ಕುಣಿದಾಡಿಕೊಳ್ಳುತ್ತಿತ್ತು.
“ಏನೋ? ದಾರೀಲಿ ಬಳ್ಳಿಗಿಳ್ಳಿ ಮುಟ್ಟಿತೇನೋ?” ಎಂದು ಗುತ್ತಿಯನ್ನು ಕುರಿತು ಪ್ರಶ್ನಿಸಿದ ತಿಮ್ಮಾನಾಯ್ಕನಿಗೆ ಸೇಸನಾಯ್ಕನು,
“ನಿಮಗೆ ಕಸಬಿಲ್ಲ, ತೆಗೀರಿ! ಬಳ್ಳಿ ಮುಟ್ಟಿದರೆ ಇಲ್ಲಿ ತನಕಾ ಬರಬೇಕಾ ಅದು?” ಎಂದು ಹಣತೆ ಎತ್ತಿಕೊಂಡ ಮುರುವಿನ ಒಲೆಯ ಬಳಿಗೆ ಹೋದನು.
ತಿಮ್ಮನಾಯ್ಕನು ತಾನು ಕೂತಲ್ಲಿಂದಲೆ ಪ್ರಶ್ನೆಗಳನ್ನು ಕೇಳುತ್ತಾ, ಸಲಹೆಗಳನ್ನು
ಕೊಡುತ್ತಾ, ನಡುನಡುವೆ ತನ್ನ ಅಪ್ಪಣೆಯಂತೆ ನಡೆಯದಿದ್ದಾಗ ಭರ್ತ್ಸನೆ ಮಾಡುತ್ತಾ,
ಎಲೆಯಡಿಕೆ ಹಾಕಿಕೊಳ್ಳುತ್ತಾ ವ್ಯವಹಾರ ಮಾಡುತ್ತಿದ್ದನು.
ಸೇಸನಾಯ್ಕನು ದೀಪ ತರುವಷ್ಟರಲ್ಲಿಯೆ ಗುತ್ತಿ ನಾಯಿಯ ಒದ್ದಾಟಕ್ಕೆ ಕಾರಣವನ್ನು ಅಂದಾಜಿನಿಂದಲೆ ಪತ್ತೆ ಹಚ್ಚಿದ್ದನು.
ದೀಪ ತಂದ ಸೇಸನಾಯ್ಕನನ್ನು ಉದ್ದೇಶಿಸಿ, ಅವನ ಕಡೆಗೆ ತಿರುಗದೆ, ತನ್ನ ಕೆಲಸದಲ್ಲಿಯೆ
ಮಗ್ನನಾಗಿ “ಹಡಬೇಗೆ ಹುಟ್ಟಿದ್ದಕ್ಕೆ ಮೂಗಿನ ಸೊಳ್ಳೆ ಒಳೂಗೆ ಕಚ್ಚಿಬಿಟ್ಟಾದೆ ಕಣ್ರೋ
ಇಂಬಳಾ! ಹಛಾ! ನಿನ್ನ ಕುರ್ಕ ಹೊತ್ತುಕೊಂಡು ಹೋಗಾ!” ಎಂದು ಒದ್ದಾಡುತ್ತಿದ್ದ ನಾಯಿಯನ್ನು
ಗದರಿಸಿ ಗುದ್ದಿದನು.
ಸೇಸನಾಯ್ಕನು ಗುತ್ತಿ ಹಿಡಿದುಕೊಂಡಿದ್ದ ನಾಯಿಯ ಮೋರೆಯ ಹತ್ತಿರಕ್ಕೆ ದೀಪ ಹಿಡಿದು
“ಅಯ್ಯೋ.. ಅಯ್ಯೋ.. ಎಷ್ಟು ದೊಡ್ಡ ಇಂಬಳಾನೊ? ನೆತ್ತರಾ ಕುಡ್ದು ಹಣ್ಣಾಗದಲ್ಲೋ! ಎಳದ್ದು
ತೆಗೆಯೋ! ಎಂದನು.
“ತೆಗೆಯಾಕೆ ಅದು ಸಿಗಬೇಕಲ್ಲಾ ಕೈಗೆ? ಬೆಳ್ಳು ಹಾಕಾದೇ ತಡಾ ಒಳಗೆ ಹೋತದೆ!” ಎಂದು
ಮತ್ತೆ ಪ್ರಯತ್ನಿಸುತ್ತಿದ್ದಾಗಲೆ ನಾಯಿ ಒದ್ದಾಡಿ ಕೊಂಡುದರಿಂದ ಆ ಕರೀ ಕೆಂಬಣ್ಣದ
ಲೋಳಿಲೋಳಿಯಾದ ಇಂಬಳ ನುಣುಚಿಕೊಂಡು ಮತ್ತೆ ಮೂಗಿನೊಳಗೆ ಮಾಯವಾಯಿತು.
“ಕಾಲಾಗೆ ಒತ್ತಿ ಹಿಡುಕೊಳ್ಳೊ” ಎಂದನು ಸೇಸನಾಯ್ಕ. ಗುತ್ತಿ ಎದ್ದುನಿಂತು, ಕೆಸರು
ಹಿಡಿದು ಇನ್ನೂ ಒದ್ದೆಯೊದ್ದೆಯಾಗಿದ್ದ ಆ ದೊಡ್ಡ ನಾಯಿಯ ಮೇಲೆ ಬಲಕ್ಕೊಂದು ಎಡಕ್ಕೊಂದು
ಕಾಲು ಹಾಕಿ, ತೊಡೆಯ ಸಂದಿಯಲ್ಲಿ ಒತ್ತಿ ಹಿಡಿದುಕೊಂಡು, ಇಂಬಳ ತೆಗೆಯಲು
ಪ್ರಯತ್ನಿಸಿದನು. ನಾಯಿ ಅವನನ್ನು ಹೊತ್ತುಕೊಂಡು ಚಲಿಸಲು ಪ್ರಯತ್ನಿಸಿದುದರಿಂದ ಹತಾಶನಾದ
ಗುತ್ತಿ “ಏನಾದರೂ ಸಾಯಿ!” ಎಂದು ಶಪಿಸುತ್ತಾ ದೂರ ನಿಂತನು.
“ನೆತ್ತರಾ ಕುಡಿದ ಮೇಲೆ ಅದ್ಹಾಂಗೆ ಬಿದ್ದು ಹೋಗ್ತದೋ” ಎಂದಿತು, ದೂರದಲ್ಲಿ ಕುಳಿತು ನೋಡಿ ನಗುತ್ತಿದ್ದ ತಿಮ್ಮನಾಯ್ಕನ ಸವಾರಿ.
ಪ್ರತಿಭೆ ತಟ್ಕಕನೆ ಮಿಂಚಿದವನಂತೆ ಸೇಸನಾಯ್ಕನು “ಅಲ್ಲಿ ಹೋಗೋ ಸೀತೂರು ಬಾವನ ಹತ್ತಿರ ಒಂದೀಟು ಹೊಗೆಸೊಪ್ಪು ಈಸಿಕೊಂಡು ಬಾರೋ. ನಾ ಮಾಡ್ತೀನಿ ಮದ್ದ” ಎಂದನು.
“ಹೌದು ಕಣ್ರೋ! ಹಾಂಗಂತಾ ಉಪಾಯ ಸುಲೂಬದಾಗದೆ” ಎಂದು ಗುತ್ತಿ ಎಲೆಯಡಿಕೆ
ಹಾಕುತ್ತಿದ್ದ ತಿಮ್ಮನಾಯ್ಕನಿಂದ ಹೊಗೆಸೊಪ್ಪಿನ ಚೂರೊಂದನ್ನು ತೆಗೆದುಕೊಂಡು ಬಂದು, ಅಂಗೈ
ಮೇಲೆ ಮಡ್ಡೀ ನಶ್ಯ ತಿಕ್ಕುವಂತೆ ತೀಡಿ, ಹುಡಿ ಹುಡಿ ಮಾಡಿ, ನಾಯಿಯ ಸೊಳ್ಳೆಗೆ
ಪುಸುಕ್ಕನೆ ಹಾಕಿದನು.
ಹಾಕಿದನೊ ಇಲ್ಲವೊ, ಹುಲಿಯ ಹಾರಿ ಹಾರಿ ಕುಣಿದು ಮನೆ ಮರುದನಿ ಗುಡುವಂತೆ ಸೀನುತ್ತಾ
ಮೂಲೆಯಿಂದ ಮೂಲೆಗೆ ಓಡತೊಡಗಿತು. ಮೂವರೂ ಗಟ್ಟಿಯಾಗಿ ನಗತೊಡಗಿದರು. ಇತರ ನಾಯಿಗಳೂ
ಬೆಚ್ಚಿ ಕೂಗತೊಡಗಿದುವು. ಪುಟ್ಟನ ಅತ್ತೆ ಕಾಡಿ, ರಂಗನ ತಾಯಿ ಮತ್ತು ರಂಗನ ಹೆಂಡತಿ ಚೌಡಿ
ಎಲ್ಲರೂ ಅಲ್ಲಿಗೆ ಬಂದು ಇಣಿಕಿ ನೋಡಿ ಹೋದರು.
ನಾಯಿಯ ಮೂಗಿನಿಂದ ಇಂಬಳವೇನೊ ನೆಲಕ್ಕೆ ಬಿತ್ತು. ಜೊತೆಗೆ ನೆತ್ತರು ಜೊಲ್ಲು ಸಿಂಬಳಗಳಿಂದಲೂ ನೆಲ ಗಲೀಜಾಯಿತು.
“ಇಂಬಳಾನ ಹಾಂಗೇ ಬಿಡಬಾರದ್ರೋ, ಸುಟ್ಟು ಹಾಕ್ಬೇಕು” ಎಂದು ತಿಮ್ಮನಾಯ್ಕನು ಸಲಹೆ
ಕೂಗಿ ಹೇಳಿದಂತೆ ದೀಪದ ಬೆಳಕನ್ನೊಡ್ಡಿಯೊಡ್ಡಿ ಹುಡುಕತೊಡಗಿದರು. ಕಡೆಗೂ ಆ ಇಂಬಳ
ಸಿಕ್ಕಿತು. ಗುತ್ತಿ ಅದನ್ನು ಮುರುವಿನ ಒಲೆಯ ಕೆಂಡಕ್ಕೆ ಹಾಕುತ್ತಿದ್ದಾಗಲೆ ಸೇಸನಾಯ್ಕನು
ಅವನ ಹಿಮ್ಮಡಿಯನ್ನು ನೋಡಿ “ಅಯ್ಯೋ! ನಿನ್ನ ಮನೆಹಾಳಾಯ್ತಲ್ಲೊ!” ಎಂದನು.
“ಏನಾಯ್ತಿರೋ?”
“ಏನಾಯ್ತೆ ಸೈ! ನೀನು ಬಿಡೂ ನಿನ್ನ ನಾಯಿಗಿಂತ ದೊಡ್ಡ ಕತ್ತೆ! ಅಯ್ಯೊ! ಅಯ್ಯೊ! ಇಲ್ಲಿ ನೋಡೋ ಇಲ್ಲಿ! ಇಲ್ಲೀ!” ಎಂದು ಹಿಮ್ಮಡಿಯ ಬುಡಕ್ಕೆ ದೀಪ ಹಿಡಿದನು.
ಗುತ್ತಿ ನೋಡುತ್ತಾನೆ, ಇಂಬಳಗಳ ಪಿಂಡಿ! ಮೂರು ನಾಲ್ಕು ಇಂಬಳಗಳು ಸಿಡಿದೊಡೆಯುವಷ್ಟರ
ಮಟ್ಟಿಗೆ ರಕ್ತ ಕುಡಿದು ಕೆಂಪೇರಿ ಕಚ್ಚಿಕೊಂಡು ಬಿದ್ದಿವೆ! ಒಂದು ಕಡೆ ನೆತ್ತರು ಕುಡಿದು
ಇಂಬಳ ತನಗೆ ತಾನೆ ಬಿದ್ದುಹೋದ ತಾವಿನಿಂದ ರಕ್ತ ಹರಿಯುತ್ತಿದೆ. ಮತ್ತೂ ನೋಡುತ್ತಾನೆ;
ಒಂದೆಡೆಯಲ್ಲ; ಎರಡೆಡೆಯಲ್ಲ; ಹತ್ತಾರು ಕಡೆ. ಅದೂ ಎಂತೆಂತಹ ಸ್ಥಾನಗಳಲ್ಲಿ! ಮರ್ಮ,
ಗೋಪ್ಯ ಒಂದನ್ನೂ ಲೆಕ್ಕಿಸದೆ!
“ನಿನ್ನ ಮನೆ ಮಂಟೇನಾಗಲೋ! ದೀಪ ಇಲ್ಲೇ ಇಟ್ಟು ಹೋಗ್ತೀನಿ, ಬಟ್ಟೆ ಗಿಟ್ಟೇ ಬಿಚ್ಚಿ
ಸರಿಯಾಗಿ ನೋಡ್ಕೋ!” ಎಂದು ವ್ಯಂಗ್ಯವಾಗಿ ನಗುತ್ತಾ ಸೇಸನಾಯ್ಕನು “ಇನ್ನೊಂದು ಗಂಟೇನೆ
ಬೇಕು ಅಂತ ಕಾಣ್ತದೆ ಎಲ್ಲಾ ತೆಗೆದು ಪೂರೈಸಾಕೆ! ಹ್ಹ ಹ್ಹ! ಹೊಲೆ ಮುಂಡೇಗಂಡ!” ಎಂದು
ಕಂಬಳಿ ಹೊದೆದು ಕುಳಿತನು.
ಗುತ್ತಿ ತನ್ನ ದೇಹದ ನಾನಾ ಸ್ಥಾನಗಳಿಂದಲೂ ನೆತ್ತರು ಕುಡಿದು ಕೆಂಪಾಗಿದ್ದ
ಇಂಬಳಗಳನ್ನು ಹುಡುಕಿ ತೆಗೆದು ಮುರುವಿನೊಲೆಯ ಕೆಂಡದ ರಾಶಿಯ ಮೇಲೆ ಹಾಕತೊಡಗಿದನು. ಅವು
ಚಟ್ಟಪಟ್ಟೆಂದು ಸೀದು, ಹೊಗೆದೋರಿ, ಸಿನಗು ವಾಸನೆ ಹಬ್ಬಿತು.
ಅವನು ಕೆಲಸವನ್ನೆಲ್ಲಾ ಪೂರೈಸಿ ಜಗಲಿಯ ಕಡೆಗೆ ಗಮನವಿಟ್ಟಾಗ ಸೇಸನಾಯ್ಕ
ತಿಮ್ಮನಾಯ್ಕರಿಬ್ಬರೂ ಮಾಯವಾಗಿದ್ದರು. ಮೂಗನ್ನು ಸೊಗಸುಗೊಳಿಸಿ ಸೊಂಪಾಗಿ ತೀಡುತ್ತಿದ್ದ
ತುಂಡು ಕಡುಬು ಕಳ್ಳು ಹೆಂಡಗಳ ಗುಂಪುಗಂಪಿನಿಂದ ಅವರು ಊಟಕ್ಕೆ ಹೋಗಿದ್ದಾರೆ ಎಂಬುದನ್ನು
ಅರಿತು, ಹಣತೆಯ ದೀಪವನ್ನು ತಾನೆ ತೆಗೆದುಕೊಂಡು ಹೋಗಿ ಅಂಗಳದಲ್ಲಿ ನಿಕ್ಕುಳಿಸಿ ನಿಂತು,
ತೋಳು ನೀಡಿ, ಜಗಲಿಯಂಚಿನ ಕೆಸರುಹಲಗೆಯ ಮೇಲೆ ಇಟ್ಟು, ಹಿಂತಿದುಗಿ ಬಂದು ಬೆಂಕಿಯ
ಕಾಲಿನಲ್ಲಿ ಬೆನ್ನು ಕಾಯಿಸುತ್ತಾ ಎಲೆಯಡಿಕೆ ಹಾಕಿಕೊಳ್ಳುತ್ತಾ ಕುಳಿತನು.
ಬಹಳ ಹೊತ್ತಾದ ಮೇಲೆ ತೇಗುಗಳ ಸದ್ದು ಕೇಳಿಬಂತು. ಅದನ್ನು ಹಿಂಬಾಲಿಸಿ, ಬಹಳ ಹುಮ್ಮಸ್ಸಿನಿಂದಲೆಂಬಂತೆ ಮಾತನಾಡುತ್ತಾ ನಾಯ್ಕರಿಬ್ಬರೂ ಜಗಲಿಗೆ ಬಂದರು.
“ನಾಯಿಗುತ್ತೀ” ಸೇಸನಾಯ್ಕ ಕರೆದನು.
“ಹ್ಞಾ!” ಗುತ್ತಿ ನಿಡುವಾಗಿ ಓಕೊಂಡನು.
“ಎಲ್ಲಾ ಪೂರೈಸ್ತೇನೋ?”
ಗುತ್ತಿ ಉತ್ತರವಾಗಿ ನಕ್ಕನು.
“ಅಲ್ಲಾ ಇನ್ನೂ ಬಾಕಿಯಿದೆಯೊ?” ಎಂದು ತಿಮ್ಮನಾಯ್ಕ ನಗುತ್ತಾ ಕೇಳಿದನು.
“ಇಲ್ಲಾ ಏನೂ ಬಾಕಿಯಿಲ್ಲ!”
“ಹಿತ್ತಲ ಕಡೆಗೆ ಹೋಗೋ, ಅನ್ನ ಹಾಕಿ ಕೊಡ್ತಾರೆ” ಎಂದ ಸೇಸನಾಯ್ಕ.
“ತೆಣೇ ಮ್ಯಾಲೆ ಹೋಗುವಾಗ ಜಾರಿಗೀರಿ ಬಿದ್ದೀಯ?” ಎಂದು ಮತ್ತೆ ಎಚ್ಚರಿಕೆ ಹೇಳಿದನು, ಮಳೆ ಹೊಯ್ದಿದ್ದು ನೆನಪಾಗಿ.
ಆದರೆ ಅದನ್ನು ಕೇಳಲು ಗುತ್ತಿ ಅಲ್ಲಿರಲಿಲ್ಲ. ಅವನಾಗಲೆ ಹಿತ್ತಲ ಕಡೆಗೆ ಹಾಕಿದ್ದನು.
ದನದ ಹಟ್ಟಿಯ, ಕೋಳಿಯೊಡ್ಡಿಯ ಮತ್ತು ಕುರಿಯೊಡ್ಡಿಯ ನಾತವಾವುದೂ ಹೊಲೆಯನ ಮೂಗಿಗೆ
ಅರಿವಾಗಲಿಲ್ಲ. ಹಣತೆಯ ಸೊಡರಿನ ಮಬ್ಬು ಬೆಳಕಿನಲ್ಲಿ, ಇರಿಚಲು ಬೀಸಿ
ನಸುವೊದ್ದೆಯಾದಂತಿದ್ದ. ಕರಿಬೆರಸಿ ಸಗಣಿ ಬಳಿದು ಕರ್ರಗಿದ್ದ ನೆಲದ ಮೇಲೆ ಕೂತು, ತಾನು
ಬಂದಿದ್ದೇನೆ ಎಂಬುದನ್ನು ಸೂಚಿಸುವ ಸಲುವಾಗಿ, ಕೃತಕವಾಗಿ, ಗಟ್ಟಿಯಾಗಿ ಕೆಮ್ಮಿ, ಗಂಟಲು
ಸರಿಮಾಡಿಕೊಂಡು, ತನಗೆ ಒಂದು ಮಾರು ದೂರದಲ್ಲಿ ಕುಳಿತು, ತನ್ನ ಕಡೆಗೇ ನೋಡುತ್ತಿದ್ದ
ಹುಲಿಯನ ಹೆಗ್ಗಣ್ಣುಗಳನ್ನು ನೋಡತೊಡಗಿದನು.
ಐದು ನಿಮಿಷ ಕಳೆದಿರಲಿಲ್ಲ. ಕಾಡಿ ಮೊರವೊಂದನ್ನು ಎರಡು ಕೈಯಲ್ಲಿಯೂ ಎತ್ತಿಕೊಂಡು
ಬಂದಳು. ಬಾಳೆ ಎಲೆಯ ಮೇಲೆ ಹಾಕಿಟ್ಟಿದ್ದ ಎಡೆಯನ್ನು ಮೊರದಿಂದ ಜಾರಿಸಿ, ಗುತ್ತಿಯ ಮುಂದೆ
ನೆಲದ ಮೇಲಿಡುತ್ತಲೇ ಮಾತಾಡತೊಡಗಿದಳು. ದನಿ ಪಿಸು ಮಾತಾಗಿರದಿದ್ದರೂ
ಗಟ್ಟಿಯಾಗಿರಲಿಲ್ಲ.
“ಜಟ್ಟಮ್ಮ ಹ್ಯಾಂಗಿದಾರೋ, ಗುತ್ತಿ?”
“ಹ್ಯಾಂಗಿರಾದೇನೂ? ಹಾಂಗಿದಾರೆ!” ಎಂದ ಗುತ್ತಿಯ ಕಣ್ಣು ಬಾಳೆಯೆಲೆಯನ್ನು
ಬಕಾಸುರನಂತೆ ನೋಡುತ್ತಿತ್ತು. ಮೂಗಿನ ಸೊಳ್ಳೆಗಳು ಅರಳಿ ಅರಳಿ ಗಾಳಿ ಹಿಡಿದು
ಸೊಗಸುತ್ತಿದ್ದವು. ತುಂಡೂ (ಮಾಂಸದ ಪಲ್ಯ) ಕಡುಬೂ ಕಾಡಿಯ ಕಣ್ಣಿಗೆ ಯಥೇಚ್ಛವಾಗಿ
ಕಾಣುತ್ತಿದ್ದರೂ ಗುತ್ತಿಗೆ ಬಹಳ ಸ್ವಲ್ಪವಿದ್ದಂತೆ ಭಾಸವಾಗಿ ಅವನಿಗೆ ಸ್ವಲ್ಪ
ಅಸಮಾಧಾನವಾಗಿತ್ತು.
“ಅಲ್ಲಾ, ಅವರಿಗೆ ಯಾವಾಗಲೂ ಏನೋ ಜಡಾ ಅಂತಾ ಹೇಳ್ತಿದ್ರು, ಹೌದೇನೂ ಅಂತೆ ಕೇಳ್ದೆ.” ಕಾಡಿ ಎಡೆತಂದಿದ್ದ ಮೊರವನ್ನು ಬಲಗೈಯಲ್ಲಿ ಹಿಡಿದು ನಿಂತಿದ್ದಳು.
“ಜಡಾನೂ ಇಲ್ಲ ಗಿಡಾನೂ ಇಲ್ಲ. ತುಂಡು ದೊಣ್ಣೆ ಇದ್ದ್ಹಾಂಗ ಇದಾರೆ” ಎಂದ ಗುತ್ತಿ
ಮೊಗವೆತ್ತಿ ನೋಡದೆ, ಸಿಟ್ಟಿನಿಂದ ಯಾರನ್ನೊ ಕತ್ತು ನುಲಿಯುವಂತೆ ಕಡುಬು
ನುರಿಯತೊಡಗಿದನು.
“ಗಸಿ ಸಾಲದು ಅಂತ ಕಾಣ್ತದೊ, ತಡಿ, ಬಂದೆ” ಎನ್ನುತ್ತಾ ಕಾಡಿ ಒಳಗೆ ಹೋದಳು. ಅವಳಿಗೂ ಗುತ್ತಿಯ ಅತೃಪ್ತಿ ಅವನ ಧ್ವನಿಯಿಂದ ಗೊತ್ತಾಗಿತ್ತು.
ಒಳಗೆ ಹೋದವಳು ಮರದ ಕೈಬಟ್ಟಲಲ್ಲಿ ರಾಶಿ ಕಡುಬನ್ನೂ ದೊಡ್ಡದೊಂದು ಮಣ್ಣಿನ
ಗುಂಡಾಲದಲ್ಲಿ ತುಂಬಿ ತುಳುಕುವಷ್ಟಿದ್ದ ಮಾಂಸದ ಪಲ್ಯವನ್ನೂ ತಂದಳು. ನೋಡಿದ ಗುತ್ತಿ
ಹಲ್ಲುಬಿಟ್ಟು, ಮುಖ ಅಗಲಿಸಿ “ಒಂದು ಚೂರು ಗಸಿ ಸಾಕ್ರೋ; ಹಮಾ ಬ್ಯಾಡ” ಎಂದನು.
ಕಾಡಿ ತಂದದ್ದನ್ನೆಲ್ಲಾ ಇಕ್ಕಿದಳು.
“ಸಾಕ್ರಾ! ಸಾಕ್ರಾ! ನೆಲಕ್ಕೆ ಬೀಳ್ತದೆ! ಹಾಳು ಬಳ್ಳೆ!” ಎಂದು ಗುತ್ತಿ ಗಸಿಯನ್ನು
ತಡೆಗಟ್ಟಲು ಎಡಗೈಯ ಸಹಾಯವನ್ನೂ ನಿರ್ವಾಹವಿಲ್ಲದೆ ತೆಗೆದುಕೊಳ್ಳುತ್ತಾ “ಈವತ್ತೇನ್ರೋ
ಹೆಚ್ಚುಗಟ್ಲೆ?” ಎಂದು ಕೇಳಿದನು.
“ನೆಂಟರು ಬಂದಿದ್ರೊ!” ಎಂದು ಉದಾಸೀನತೆಯನ್ನು ನಟಿಸಿ ಉತ್ತರವಿತ್ತ ಕಾಡಿ ಬೇಗ ಬೇಗನೆ ಎಂದಳು, “ನಿಮ್ಮ ಹೆಗ್ಗಡೇರಿಗೆ ಮತ್ತೊಂದು ಮದುವೆಯಂತೆ ಹೌದೇನೊ?”
“ನಂಗೇನ್ರೋ ಗೊತ್ತು?” ಎನ್ನುತ್ತಾ ಗುತ್ತಿ ಮಾಂಸದ ಗಡಿಯಲ್ಲಿ ಒದ್ದೆಯಾಗಿದ್ದ ನುರಿದ
ಕಡುಬಿನ ದೊಡ್ಡ ಮುದ್ದೆಯೊಂದನ್ನು ತೆಗೆದು, ಬಾಯನ್ನು ಸಾಧ್ಯವಾದಷ್ಟೂ ತೆರೆದು, ಒಳಗೆ
ನುಗ್ಗಿಸಿದನು.
“ನನ್ನ ಹತ್ರ ಸುಳ್ಳು ಹೇಳ್ತಿಯಲ್ಲಾ!ಸುಳ್ಳೋ ಬದ್ದೋ? ಹೇಳು!”
ಗುತ್ತಿ ಉತ್ತರವಾಗಿ ತಲೆಯಲ್ಲಾಡಿಸುತ್ತಾ, ಕೆನ್ನೆಗಳನ್ನುಬ್ಬಿಸಿ ಮೀಸೆ ಮೇಲಕ್ಕೂ
ಕೆಳಕ್ಕೂ ಸರ್ಕಸ್ಸು ಮಾಡುವಂತೆ ಮುಕ್ಕುತ್ತಿದ್ದುದನ್ನು ಕಂಡು “ಪೂರ ಹುಡಿಯಾಯ್ತೇನೊ?
ಸ್ವಲ್ಪ ಗಸಿ ಹಾಕ್ತೀನಿ. ಕಲಸಿಕೊ” ಎಂದು ಕಾಡಿ ಗಸಿ ಹನಿಸಿದಳು. ಹಲೆಯನೂ ಬೇಡ ಎಂದು
ಸನ್ನೆ ಮಾಡುತ್ತಲೇ ಕಲಸಿಕೊಳ್ಳತೊಡಗಿದನು.
ಹಸಿದಿದ್ದ ಹುಲಿಯನೂ ಬಾಲವಲ್ಲಾಡಿಸುತ್ತಾ ಒಮ್ಮೆ ಕೂರುತ್ತಾ, ಒಮ್ಮೆ ನಿಲ್ಲುತ್ತಾ,
ಒಮ್ಮೆ ಒಡೆಯನ ಕಡೆಗೂ, ಒಮ್ಮೆ ಕಾಡಿಯ ಕಡೆಗೂ ಕಣ್ಣು ಕಣ್ಣು ಬಿಡುತ್ತಾ
ಅಸ್ಥಿರವಾಗಿದ್ದುದನ್ನು ಗಮನಿಸಿ ಗುತ್ತಿ “ಹಛೀ ನಿನ್ನ ಹೊಟ್ಟೆ ಕಡಿಯಾ! ಏನು ಬೇಗ್ತದೋ
ಹಡಬೇಗ್ಹುಟ್ಟಿದ್ದು!” ಎಂದು ಹೆದರಿಸಿದನು. ನಾಯಿ ಸುಮ್ಮನೆ ಕುಳಿತು ಒಡೆಯನಿಗಿಂತಲೂ
ಹೆಚ್ಚು ಸಂಯಮಿಯಾಯಿತು.
ಕಾಡಿಯ ಔದಾರ್ಯಕ್ಕೆ ಗುತ್ತಿಯ ಮನಸ್ಸು ಸಮಾಧಾನವಾಗಿತ್ತು. ತೃಪ್ತಿಸೂಚಕವಾದ
ಧ್ವನಿಯಿಂದ “ನಿಮಗೆ ಹ್ಯಾಂಗೆ ಗೊತ್ತಾಯ್ತೂ ಆ ಇಚಾರ?” ಎಂದು, ಮಾಂಸವನ್ನೆಲ್ಲ ಸಿಗಿದು
ತಿಂದು ಉಳಿದಿದ್ದ ಎಲುಬಿನ ತುಂಡೊಂದನ್ನು ನಾಯಿಯ ಕಡೆಗೆ ಎಸೆದನು. ಹುಲಿಯನು ಹಾರಿ
ಅದನ್ನು ತುಡುಕಿ ಹಿಡಿದು ಕಟಕಟಕಟನೆ ಅಗಿಯತೊಡಗಿತು.
“ಹೌದೇನು ಹೇಳು!” ಎಂದಳು ಕಾಡಿ.
“ಯಾರಿಗೂ ಹೇಬ್ಬ್ಯಾಡಿ ಮತ್ತೆ” ಎಂದು ಗುತ್ತಿ ವಿಷಯದ ಗಾಂಭೀರ್ಯವನ್ನು ಮುಖದಲ್ಲಿ ತೋರಿಸಲು ಯತ್ನಿಸಿದನು.
“ನಾನ್ಯಾರಿಗೆ ಹೇಳೋಕೆ ಹೋಗ್ತೀನೋ?”
“ಅಲ್ಲಾ ಮಾರಾಯ್ರ, ನಮಗ್ಯಾಕೆ ದೊಡ್ಡೋರ ಇಚಾರ ಬಡವರಿಗೆ?- ಹಾಂಗೇನೋ ವರ್ತಮಾನ ಇತ್ತಪ್ಪಾ.”
ಹೊಲೆಯನ ಬಾಯಿಂದ “ವರ್ತಮಾನ” ಎಂಬ ಮಾತನ್ನು ಕೇಳಿದ ಕಾಡಿಗೆ ಅವನು ಹೆಗ್ಗಡೆಯವರ ನೆಚ್ಚಿನ ತಳವಾರ ಎಂಬುದು ಮನಸ್ಸಿಗೆ ಬಂದಿತು.
“ಹೆಣ್ಣು ಎಲ್ಲೀದಂತೆ? ನಿಂಗೆ ಗೊತ್ತೇನು?”
“ಕುಡೀಬೇಕು ಕಣ್ರೋ. ಕಡುಬು ಗಂಟಲಾಗೆ ಇಳಿಯಾದಿಲ್ಲ!”
“ಅಯ್ಯಯ್ಯೊ! ಮರ್ತಿದ್ದೆ ಕಣೊ!” ಎಂದು ಕಾಡಿ ಒಳಗೆ ಹೋಗಿ ಒಂದು ಬಳ್ಳೆ ಕೀತನ್ನೂ,
ಒಂದು ದೊಡ್ಡ ತಾಲಿಯಲ್ಲಿ ಹೆಂಡವನ್ನೂ ತಂದಳು. ಬಾಳೆಯೆಲೆಯ ಕೀತನ್ನು ದೊನ್ನೆಯಾಗಿ ಮಾಡಿ,
ಮುಂದಿಟ್ಟು, ಹೆಂಡ ಬೊಗ್ಗಿಸಿದಳು. ಗುತ್ತಿ ಎರಡೂ ಕೈಗಳಿಂದಲೂ ಎತ್ತಿ ಗೊಟಗೊಟನೆ
ಕುಡಿದು ಕೆಳಗಿಟ್ಟನು. ಕಾಡಿ ಮತ್ತೆ ಬೊಗ್ಗಿಸಿದಳು. ಮತ್ತೆ ಕುಡಿದಿಟ್ಟನು. ಮತ್ತೆ
ತಟಕ್ಕನೆ ಬೊಗ್ಗಿಸಲಿಲ್ಲ.
“ಹೆಣ್ಣು ಗೊತ್ತಾಗಿದೆಯೇನೊ?” ಎಂದಳು.
ಗುತ್ತಿ ಎಲೆಯ ಮೂಲೆಯಲ್ಲಿ ರಾಶಿ ಹಾಕಿದ್ದ ಎಲುಬನ್ನೆಲ್ಲಾ ಒಟ್ಟಿಗೆ ಒತ್ತಿ ಹುಲಿಯನ
ಮುಂದೆ ಹಾಕುತ್ತಾ “ಹಳೇಮನೇ ದೊಡ್ಡ ಹೆಗ್ಗಡೇರ ಮಗಳೂ ಅಂತಾ ಕಾಣ್ತದಪ್ಪಾ!” ಎಂದನು.
“ಯಾರು? ಸಣ್ಣ ಹೆಗ್ಗಡೇರ ತಂಗೀನೇನೋ?”
“ತಿಮ್ಮಪ್ಪ ಹೆಗ್ಗಡೇರ ತಂಗಿ”
“ಮಂಜಮ್ಮೋರೇನೊ?”
“ಅವರನ್ನೇ ಅಂತಾ ಮಾತಾಡ್ತಿದ್ರು!” ಎಂದ ಗುತ್ತಿ ಕಾಡಿಯ ಮುಖದ ಕಡೆಗೆ ನೋಡುತ್ತಾ,
ಆಗತಾನೆ ಹೊಸದಾಗಿ ಕಂಡುಹಿಡಿದವನಂತೆ ಬೆರಗಾಗಿ ಕೇಳಿದನು: “ನಿಮಗೇನು ಜಡಾಗಿಡಾ
ಆಗಿತ್ತೇನ್ರೊ? ಬಾಳ ಬಡಕಟ್ಟೆ ಆಗಿ ಕಾಣ್ತೀರಿ!”
“ಹೌದು, ಪುಣ್ಯಾತ್ಮಾ, ಹೋದ ಗದ್ದೆ ಕೊಯಿಲಿನಿಂದ ಒಡಲಜರ, ಮೂರಕ್ಕೆ ನಾಕಕ್ಕೆ ಬರ್ತಾನೇ ಅದೆ!”
ಅವಳ ಮೋರೆಯನ್ನೇ ನೋಡುತ್ತಿದ್ದ ಗುತ್ತಿಗೆ ಇದ್ದಕ್ಕಿದ್ದಹಾಗೆ ಏನೋ ಜ್ಞಾಪಕಕ್ಕೆ
ಬಂದಂತಾಗಿ, ಜುಗುಪ್ಸೆಯಿಂದ ಮುಖ ಅಸಹ್ಯ ವಿಕಾರವಾಯಿತು. ಅದನ್ನು ಕಂಡ ಕಾಡಿ “ಏನೋ?
ಕಲ್ಲು ಗಿಲ್ಲು ಸಿಗ್ತೇನೋ?” ಎಂದಳು.
“ಇಲ್ಲ! ಇಲುಗಿನ ಚೂರು ಅಂತಾ ಕಾಣ್ತದೆ!” ಎಂದು ಗುತ್ತಿ ಹುಸಿನುಡಿದು ತನ್ನ ಬಾಯಿಗೆ
ಬೆರಳು ಹಾಕಿಕೊಂಡು ಎಲುಬಿನ ಚೂರನ್ನು ತೆಗೆದು ಬಿಸಾಡುವವನಂತೆ ನಟಿಸಿದನು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ