ಮಲೆಗಳಲ್ಲಿ ಮದುಮಗಳು-೨೭

ಕೆಂಬೈಗು ಭಯಗುಗಪ್ಪಗೆ ತಿರುಗಿತ್ತು. ಇರುಳ ರಕ್ಷೆಗೋಸ್ಕರವೂ ಆಶ್ರಯ ಸಂಪಾದನೆಗೂ ಅವಸರವಾಗಿ ಗೊತ್ತು ಸೇರಿಕೊಳ್ಳಲು ಕಾತರವಾಗಿದ್ದ ಪ್ರಾಣಿ ಪಕ್ಷಿ ಸಮೂಹದಿಂದ ಶಬ್ದಮಯವಾಗಿದ್ದ ಕೋಳಿಒಡ್ಡಿ, ಕುರಿಒಡ್ಡಿ, ಹಂದಿಒಡ್ಡಿ, ದನದಕೊಟ್ಟಿಗೆ ಇವುಗಳ ದುರ್ಗಂಧಮಯ ಮಾಯುಮಂಡಲವನ್ನು ಹಾದು ಐತನೊಡನೆ ಧರ್ಮು ಸೋಗೆವಿಭಾಗದ ತಮ್ಮ ಮನೆಯ ಮೆಟ್ಟಲನ್ನೇರಿ ನಿಂತಾಗ, ಅವನನ್ನು ಸ್ವಾಗತಿಸಲು ಯಾರು ಇರಲಿಲ್ಲ; ಯಾರೂ ಬರಲಿಲ್ಲ. ಮಲಗಿದ್ದ ನಾಯಿಗಳು ಮಾತ್ರ ಬೊಗಳಿ, ಗುರುತು ಸಿಗಲು ಬಾಲವನ್ನಾಡಿಸಿ, ಮೈಮೇಲೆ ನೆಗೆದಾಡಿದ್ದುವು. ಯಾರೂ ಅವನನ್ನು ನಿರೀಕ್ಷಿಸಿಯೂ ಇರಲಿಲ್ಲ. ಅಷ್ಟೇ ಅಲ್ಲ; ಮನೆಯಲ್ಲಿ ಅವನ ತಾಯಿಯ ನೆವದಿಂದ ಆಗುತ್ತಿದ್ದ ರಂಪಾಟದ ದೃಷ್ಟಿಯಿಂದ ಅವನು ತನ್ನ ಮಾವನಮನೆ ಕೋಣೂರಿನಿಂದ ತಮ್ಮ ಮನೆ ಹಳೆಮನೆಗೆ ಬರುವುದೆ ಒಂದು ಸಂಕಟವಾಗಿ ಪರಿಣಮಿಸುತ್ತಿತ್ತು ಮನೆಯವರಿಗೆ.
‘ಬಂದೆಯಾ!’ ಎನ್ನುವವರು ಒಬ್ಬರೂ ಇಲ್ಲದೆ ಬೆಕೋ ಬಿಮ್ ಎನ್ನುತ್ತಿದ್ದ ಮನೆಯ ಅಂಗಳಕ್ಕೆ ಪ್ರವೇಶಿಸುವುದೇ ಅವನಿಗೊಂದು ಸುಯ್ಯುವ ಸಂಗತಿಯಾಗಿತ್ತು. ಮನಸ್ಸು ಅಳಬೇಕು ಎನ್ನುವಷ್ಟರ ಮಟ್ಟಿಗೆ ಖಿನ್ನವಾಯಿತು. ಆ ಖಿನ್ನತೆಗೆ ಒಂದೇ ಒಂದು ಸಂತೋಷದ ಕಿರಣ ಪ್ರವೇಶಿಸದೆ ಇದ್ದಿದ್ದರೆ ಧರ್ಮು ಕಣ್ಣೊರಸಿಕೊಳ್ಳಬೇಕಾಗಿತ್ತು. ನೆರೆಯ ಹೆಂಚಿನ ಮನೆಯ ನಿರಾವರಣ ಅಂಗಳದಲ್ಲಿ, ಸೊಂಟ್ ತಾಯಿತಿ ಕಟ್ಟಿದ್ದ ಉಡಿದಾರ ವಿನಾ ಸಂಪೂರ್ಣ ನಿರ್ವಾಣವಾಗಿ ಮಣ್ಣಿನಲ್ಲಿ ಆಟವಾಡುತ್ತಿದ್ದ ರಾಮು, ಶಂಕರ ಹೆಗ್ಗಡೆಯ ಮಗ, ‘ಧರ್ಮಣ್ಣಯ್ಯ’ನನ್ನು ನೋಡಿದವನು, ‘ನೀನು ಎಲ್ಲಾದ್ರೂ ಆಚೆಮನೀಗೆ ಹೋದ್ರೆ ನಿನ್ನ ಬೆನ್‌ಚಮ್ಡ ಸಿಲಿಯಾ ಹಾಂಗೆ ಹೊಡೆದುಬಡ್ತೀನಿ!’ ಎಂದಿದ್ದ ಅವನ ಅಪ್ಪಯ್ಯನ ಬೆದರಿಕೆಯನ್ನೂ ಸಂಪೂರ್ಣವಾಗಿ ಮರೆತು, ‘ಧರ್ಮಣೈ ಬಂದಾ! ಧರ್ಮಣೈ ಬಂದಾ!’ ಎಂದು ಕೇಕೆ ಹಾಕುತ್ತಾ ಓಡಿಬಂದು ಅವನನ್ನು ತಬ್ಬಿಹಿಡಿದನು. ಪುಟ್ಟ ರಾಮುವ ಆ ಸುಸ್ವಾಗತವನ್ನು ಆಸ್ವಾದಿಸಿದ ಧರ್ಮುವ ಚೇತನ ತನ್ನ ಮುನ್ನಿನ ಕುಗ್ಗನ್ನು ವಿಸರ್ಜಿಸಿ ಹಿಗ್ಗಿತು. ದಾರಿಯಲ್ಲಿ ಬರುವಾಗ ಕುಯ್ದು ಅಂಗಿಜೇಬಿಗೆ ಹಾಕಿಕೊಂಡಿದ್ದ ಕಾಕಿಯ ಹಣ್ಣುಗಳನ್ನು ತೆಗೆದು ರಾಮುವಿಗೆ ಕೊಟ್ಟನು. ಆಟಕ್ಕೆ ಜೊತೆಯಿಲ್ಲದೆ ಬೇಸರದ ಒಂಟಿಬಾಳು ಸಾಗಿಸುತ್ತಿದ್ದ ಆ ಬಾಲಕನಿಗೆ  ಧರ್ಮುವ ಆಗಮನ ಒಂದು ಮಹತ್ವಪೂರ್ಣ ಆನಂದದ ಸಂಗತಿಯಾಗಿತ್ತು. ಈಗ ಧರ್ಮು ಕೊಟ್ಟ ಆ ಎಂಟೊ ಹತ್ತೊ ಕರಿಯ ಕಾಕಿ ಹಣ್ಣುಗಳೆ ಅವನಿಗೆ ಪರಮೈಶ್ವರ್ಯವಾಗಿ ಪರಿಣಮಿಸಿತ್ತು.
ಆ ಆನಂದದ ಸನ್ನವೇಶದಲ್ಲಿಯೂ ಧರ್ಮುಗೆ ಫಕ್ಕನೆ ಎಚ್ಚರಿಕೆಯುಂಟಾಗಿ “ಈಗ ಮನೀಗೆ ಹೋಗಪ್ಪಾ, ರಾಮು. ಆಮ್ಯಾಲೆ ನಾನೇ ಬತ್ತೀನಿ, ನಿನ್ನ ಹತ್ರ ಆಡಾಕೆ. ದೊಡ್ಡಚಿಗಪ್ಪಯ್ಯ – ನಿನ್ನ ಅಪ್ಪಯ್ಯ – ಕಂಡರೆ….” ಎಂದು ಅರ್ಧದಲ್ಲಿಯೇ ನಿಲ್ಲಿಸಿದನು.
ರಾಮೂಗೂ ಧರ್ಮಣ್ಣಯ್ಯನ ಎಚ್ಚರಿಕೆ ಅರ್ಥವಾಯಿತು. ಆದರೂ ಅವನು ವಿಚಲಿತನಾಗದೆ “ಅಪ್ಪಯ್ಯ ಮನೇಲಿ ಇಲ್ಲ ಕಣೋ. ಸಿದ್ದರಮಠಕ್ಕೆ ಹೋಗ್ಯಾನೆ, ಚೀಟಿ ಈಬೂತಿ ತರಾಕಂತೆ!” ಎಂದನು.
“ಆಗಲಿ ನೀ ಹೋಗಪ್ಪಾ, ಯಾರಾದರೂ ನೋಡಿ ಹೇಳಿದ್ರೆ?” ಎಂದು ಅವನನ್ನು ಕಳಿಸಿ, ಧರ್ಮು ತಮ್ಮ ಮನೆಯ ಅಂಗಳಕ್ಕೆ ಕಾಲಿಟ್ಟನು.
ಜಗಲಿಯ ಕೆಳತೆಣೆಯಲ್ಲಿ ಕುಳಿತು ‘ಸಣ್ಣಚಿಗಪ್ಪಯ್ಯ’ – ತಿಮ್ಮಪ್ಪ ಹೆಗ್ಗಡೆ – ಹೊಲೆಯರಿಗೂ ಗಟ್ಟದಾಳುಗಳಿಗೂ ‘ಬಾಯಿಗೆ’ ಕೊಡುತ್ತಿದ್ದನು. ಅವನ ಪಕ್ಕದಲ್ಲಿ ಒಮದು ಬುಟ್ಟಿ ತುಂಬ ಅಡಕೆ ಮತ್ತು ಹೊಗೆಸೊಪ್ಪಿನ ಸಣ್ಣ ಪಿಂಡಿ ಇದ್ದುವು. ಹೊಗೆಸೊಪ್ಪಿನ ವಾಸನೆಯೂ ಅಲ್ಲೆಲ್ಲ ಹಬ್ಬಿತ್ತು. ಅಜ್ಜಯ್ಯ – ಸುಬ್ಬಣ್ಣ ಹೆಗ್ಗಡೆಯವರೂ – ಎಲ್ಲಯೂ ಕಾಣಲಿಲ್ಲ…. ‘ಓ ಬೈಗಿನ ಕಳ್ಳುಗೊತ್ತಿಗೆ ಹೋಗಿರಬೇಕು!’ ಎಂದುಕೊಂಡನು ಧರ್ಮು, ಅಜ್ಜಯ್ಯನ ಚಾಳಿಯನ್ನು ನೆನೆಪಿಗೆ ಚಾಳಿಯನ್ನು ನೆನಪಿಗೆ ತಮದುಕೊಂಡು.
ತಿಮ್ಮಪ್ಪ ಹೆಗ್ಗಡೆ ಕಣ್ಣೆತ್ತಿ ನೋಡಿ “ಓಹೋಹೋಹೋ ಸಣ್ಣ ಹೆಗ್ಗಡೆ ಸವಾರಿ ಬಂದುಬಿಡ್ತಲ್ಲಾ!” ಎಂದು ವ್ಯಂಗ್ಯವಾಗಿ ನಕ್ಕು “ಆಡಿಕೇನೋ? ಕಳ್ಳತಪ್ಪಿಸಿಕೊಂಡು ಬಂದ್ಯೋ?” ಎಂದು ಪ್ರಶ್ನಿಸಿ, ಹಿಂದೆ ಇದ್ದ ಐತನನ್ನು ಕಂಡು “ಓಹೋಹೋಹೋ ಈ ಪೀಂಚಲು ಗಂಡನೂ ಬಂದುಬಿಟ್ಟಾನೆ! ನಿನ್ನ ಹೆಂಡ್ತಿ ಬರಲಿಲ್ಲೇನೋ?” ಎಂದು ತನ್ನ ಕರಿಮುಖದ, ಎಲೆಯಡಿಕೆ ಜಗಿದು ಕೆಂಪಾಗಿದ್ದ, ಹಲ್ಲಿನ ಸಾಲುಗಳನ್ನು ಪ್ರದರ್ಶಿಸಿ, ಆಳುಗಳಿಗೆ ಎಲೆ ಅಡಿಕೆ ಹೊಗೆಸೊಪ್ಪುಗಳನ್ನು ವಿನಿಯೋಗ ಮಾಡುತ್ತಲೆ “ ಏ ಐತಾ, ನೀನೇನೋ ಜೇನು ಕಂಡು ಹಿಡಿಯೋದರಲ್ಲಿ ಬಾಳ ಗಟ್ಟಿಗನಂತೆ?…. ಎಲ್ಲಾ ಹೇಳ್ತಾರೆ…. ನಮ್ಮ ಕಾಡಾಗೆ ಒಂದಷ್ಟು ಹುಡುಕಿ ಕೊಡ್ತೀಯೇನೋ?…. ನಿನ್ನ ಹೆಂಡ್ತೀನೂ ಗಟ್ಟಿಗೆಯಂತೆ ಜೇನು ಕೀಳೋದರಲ್ಲಿ. ಹೌದೇನೊ? ಅವಳನ್ನೂ ಕರಕೊಂಡು ಬಾ, ನಿನ್ನ ಜೊತೆಗೆ. ಬ್ಯಾಡ ಅನ್ನಾದಿಲ್ಲ” ಎಂದು ಉತ್ತರ ನಿರೀಕ್ಷಿಸದೆ ಮಾತಾಡಿದನು. ಐತನ ಹೆಂಡತಿಯನ್ನು ಕರಕೊಂಡು ಬರುವ ವಿಚಾರದಲ್ಲಿ ತಿಮ್ಮಪ್ಪಹೆಗ್ಗಡೆ ಮಾತಾಡಿದ ಧ್ವನಿಗೆ. ಎಳೆ ಹೆಣ್ಣುಗಳ ಸಂಬಂಧದಲ್ಲಿ ಅವನ ಸ್ವಭಾವವನ್ನು ಅರಿತಿದ್ದ ಆಳುಗಳೆಲ್ಲಾ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು ನಗೆಯಾಡಿದರು.
ಜಗಲಿಗೆ ಹತ್ತಿ ಒಳಗೆ ಹೋಗುತ್ತಿದ್ದ ಧರ್ಮುಗೆ ತಿಮ್ಮಪ್ಪಹೆಗಡೆ:
“ಏನೋ? ಹೊರಗಿನಿಂದ ಬಂದವ ಕೈಕಾಲು ತೊಳೆದುಕೊಳ್ಳದೆ ಒಳಗೆ ಹೋಗ್ತೀಯಲ್ಲಾ?” ಎಂದನು. ತಿಮ್ಮಪ್ಪಹೆಗ್ಗಡೆಗೆ ಶುಚಿಯ ನಿಷ್ಠೆಯಾಗಲಿ ಶಿಷ್ಟಾಚಾರದಲ್ಲಿ ಗೌರವವಾಗಲಿ ಇಷ್ಟೂ ಇರದಿದ್ದರೂ ತನ್ನ ಹಿರಿತನದ ಅಧಿಕಾರಿವಾಣಿಯನ್ನು ಮೆರೆಯಲು ಆಳುಗಳ ಮುಂದೆ ಹಾಗೆ ಹೇಳಿದ್ದನಷ್ಟೆ! ಆದರೂ ಧರ್ಮು ಮರೆತುದನ್ನು ನೆನಪಿಗೆ ತಂದುಕೊಂಡತೆ, ಜಗಲಿಯಿಂದಿಳಿದು ಬಚ್ಚಲಿಗೆ ಹೋಗಿ ಕೈಕಾಲು ಮುಖ ತೊಳೆದುಕೊಂಡು ಅಡುಗೆ ಮನೆಗೆ ಹೋದನು.
ಅಲ್ಲಿ ಅವನು ನಿರೀಕ್ಷಿಸಿದಂತೆ ಒಲೆಯ ಅವನ ಅವ್ವ ಕಾಣಿಸಲಿಲ್ಲ. ಮಂಜತ್ತೆ ಸೀರೆಯ ಸೆರಗನ್ನು ಬಿಗಿದು ಕಟ್ಟಿಕೊಂಡು, ಒಲೆಯ ಮೇಲೆ ತಕಪಕಿಸುತ್ತಿದ್ದ ಅನ್ನದ ಹಿತ್ತಾಳೆ ಚರಿಗೆಯನ್ನು ಒಲೆಯ ಪಕ್ಕದಲ್ಲಿಟ್ಟಿದ್ದ ತಾಮ್ರದ ಬಾಗುಮರಿಗೆಗೆ ಎತ್ತಿ ಇಳಿಸಿ, ಸಿಬ್ಬಲ ಮರಚಟ್ಟಿಗಳನ್ನು ಚರಿಗೆಯ ಬಾಯಿಗೆ ಆನಿಸಿ ಒತ್ತಿ, ಅನ್ನ ಬಸಿಯಲು ಅಣಿಯಾಗುತ್ತಿದ್ದಳು.
ಧರ್ಮುವನ್ನು ಕಂಡವಳೆ ಸಂತೋಷಾಶ್ಚರ್ಯ ಭಾವದಿಂದ ಹರ್ಷಿತಳಾಗಿ “ಈಗ ಬಂದ್ಯೇನೋ? ಕೋಣೂರಿನಿಂದ ಬಂದ್ಯೇನೋ? ನಿನ್ನ ಅತ್ತೆಮ್ಮ – ಬಾಲೆಬಾಣ್ತಿ ಹ್ಯಾಂಗಿದ್ದಾರೋ?” ಎಂದು ಕೇಳಿದಳು.
“ಎಲ್ಲ ಚಂದಾಗಿದಾರೆ, ಮಂಜತ್ತೆ…. ನನ್ನ ಜೊತೆ ಬಂದ ಐತಗೆ ಬಂದ ಐತಗೆ ಸೊಲ್ಪ ಬೆಲ್ಲ ನೀರು ಕೊಡತ್ತೆ. ಹಿತ್ತಲು ಕಡೆಗೆ ಬರಾಕೆ ಹೇಳ್ತೀನಿ ಅವನಿಗೆ. ಅಂವ ಈಗ್ಲೆ ಹಿಂದಕ್ಕೆ ಹೊರಡ್ತಾನೆ. ಕತ್ತಲಾಗಬೇಕಾದ್ರೆ ಬಿಡಾರ ಸೇರಿಸಿಕೊಳ್ಳಬೇಕಂತೆ” ಎಂದವನೆ ಜಗಲಿಗೆ ಓಡಿ ಹೋಗಿ ಐತನನ್ನು ಕರೆದುಬಂದನು.
ಅನ್ನ ಬಯಸುವ ಕೆಲಸವನ್ನು ಮುಂದುವರೆಸಿದ್ದ ಮಂಜಮ್ಮ “ನೀನೇ ಕೊಡಣ್ಣಾ. ನಾ ಅನ್ನ ಬಸೀತ ಇದ್ದೀನಿ. ನೋಡಲ್ಲೆ ನಾಗಂದಿಗೆ ಮ್ಯಾಲದೆ ಬೆಲ್ಲದ ಚರಿಗೆ…. ಕೈ ನಿಣುಕದಿದ್ರೆ ಒಂದೆರಡು ಮಣೆ ಹಾಕಿಕೊಳ್ಳಣ್ಣಾ…. ಆಮೇಲೆ ಬಸಿಯಾದು ತಡ ಆಗಿ, ಅನ್ನ ಗಂಜಿಗಲಾದ್ರೆ, ನಿನ್ನ ಸಣ್ಣಚಿಕ್ಕಪ್ಪಯ್ಯ ನಿನ್ನೆ ನಿನ್ನ ಅವ್ವಗೆ ಗುದ್ದಿದ್ಹಾಂಗೆ ನನಗೂ ಗುದ್ದುತಾನೆ ಇವತ್ತು!” ಕೊನೆಯ ವಾಕ್ಯವನ್ನು ತನಗೆ ತಾನೆ ಹೇಳಿಕೊಳ್ಳುವಂತೆ ಮಂಜಮ್ಮ ಹೇಳಿದ್ದರೂ ಅದರ ಒಂದೆರಡು ಮಾತು ಧರ್ಮುಗೆ ಕೇಳಿಸಿತ್ತು! ಸಣ್ಣಗಪ್ಪಯ್ಯನ ಉದ್ದಂಡತನದ ಒರಟು ನಡತೆ ಧರ್ಮುಗೆ ಪೂರ್ವಪರಿಚಿತವಾದದ್ದೆ. ಹಾಗೆಯೆ ಏನಾದರೂ ನಡೆದಿರಬೇಕೆಂದು ಊಹಿಸಿದ್ದನು. ಆದರೆ ನಿಜವಾಗಿ ನಡೆದದ್ದು ಅವನ ಊಹೆಗೂ ಮೀರಿದುದಾಗಿತ್ತು.
ಬೆಲ್ಲ ನೀರು ಕುಡಿದ ಮೇಲೆ ಐತ ಕೋಣೂರಿಗೆ ಹಿಂದಿರುಗಲು ಹೊರಟು ನಿಂತಾಗ ಧರ್ಮು “ಐತಾ, ನಿನಗೆ ನನ್ನ ಅಪ್ಪಯ್ಯನ ಗುರುತು ಚೆನ್ನಾಗದೆ ಹೇಳಿದೆ. ನಾನೆಲ್ಲಾದರೂ ಅವರನ್ನ ಹುಡುಕಾಕೆ ಹೊರಟರೆ, ನೀನೂ ಬರಬೇಕು ನನ್ನ ಸಂಗಡ” ಎಂದುದಕ್ಕೆ ಐತ ನಗೆಯೊಪ್ಪಿಗೆ ಸೂಚಿಸಿದ್ದನು.
ಐತನ್ನನು ಬೀಳ್ಕೊಂಡು ಅಡುಗೆಮನೆಗೆ ಹಿಂದಿರುಗಿದ ಧರ್ಮು “ಮಂಜತ್ತೆ, ಅವ್ವ ಎಲ್ಲಿ?” ಎಂದು ಕೇಳಿದನು.
ಮಂಜಮ್ಮ ಉತ್ತರ ಕೊಡಲೂ ಇಲ್ಲ; ಮುಖ ಎತ್ತಿ ಧರ್ಮುವನ್ನು ನೋಡಲೂ ಇಲ್ಲ. ತಾನು ಮಾಡುತ್ತಿದ್ದ ಕೆಲಸವನ್ನು ಮುಂದುವರಿಸಿದಳು, ಧರ್ಮು ಹೇಳಿದ್ದು ಕೇಳಿಸಲಿಲ್ಲ ಎಂಬಂತೆ. ಆದರೆ ಅದು ಕೇಳಿಸಿಯೇ ಅವಳು ಹಾಗೆ ಮಾಡಿದ್ದಳು. ಏನೆಂದು ಉತ್ತರ ಕೊಡುವುದು? ಹೇಗೆ ಉತ್ತರ ಪ್ರಾರಂಭಿಸುವುದು? ಧರ್ಮುವ ಮುಗ್ಧಹೃದಯಕ್ಕೆ ಅಪಘಾತವಾಗದಂತೆ ಸತ್ಯವನ್ನು, ಕಠೋರವಾಗಿದ್ದ ಸತ್ಯವನ್ನು, ಹೇಗೆ ತಿಳಿಸುವುದು? ಎಂದೆಲ್ಲ ಯೋಚಿಸುತ್ತಿದ್ದಳೆಂದು ತೋರುತ್ತದೆ. ಧರ್ಮುವ ಪ್ರಶ್ನೆಗೆ ದುಃಖವಿಕ್ಕಿ ಬರುತ್ತಿದ್ದ ತನ್ನ ಮುಖಭಾವವನ್ನು ಮರೆಮಾಚಲೆಂದೆ ಅವಳು ಅವನ ಕಡೆ ನೋಡುವ ಸಾಹಸ ಮಾಡಿರಲಿಲ್ಲ.
ತನ್ನ ಕಡೆಗೂ ತಿರುಗಿ ನೋಡದಿದ್ದ ಮಂಜತ್ತೆಯ ಭಂಗಿಯನ್ನೂ ನಿಷ್ಠುರ ಎನ್ನುವಂತಿದ್ದ ಅವಳ ಮೌನವನ್ನೂ ಗ್ರಹಿಸಿ ಧರ್ಮು ತುಸು ಅಳುದನಿಯಿಂದಲೆ ಕೇಳಿದನು: “ಯಾಕೆ, ಮಂಜತ್ತೆ, ಮಾತಾಡಾದಿಲ್ಲ?”
ಮುಗ್ಧಬಾಲಕನ ಮುಗ್ಧಹೃದಯದ ಆ ಮುಗ್ಧಪ್ರಶ್ನೆ ಮಂಜಮ್ಮನ ಶೋಕಭಾವದ ಕಟ್ಟೆಯ ಬಾಗಿಲನ್ನೆ ಎತ್ತಿತ್ತೊ ಎಂಬಂತೆ ಆಯಿತು. ಮಾಡುತ್ತಿದ್ದ ಕೆಲಸ ನಿಲ್ಲಿಸಿ, ಎದ್ದುನಿಂತು, ಧರ್ಮುವ ಕಡೆ ನೋಡುತ್ತಾ ಕಣ್ಣೀರು ಸುರಿಸತೊಡಗಿದಳು. ಉಸಿರ ಎಳೆದಾಟ ಹೆಚ್ಚಿತು. ಬಿಕ್ಕಿಬಿಕ್ಕಿ ಅಳುವುದನ್ನು ತುಂಬ ಪ್ರಯತ್ನದಿಂದ ತಡೆಯುತ್ತಿದ್ದಂತೆ ತೋರಿತು. ಬೇರೆ ಯಾರಾದರೂ ಅಡಿಗೆಮನೆಗೆ ಬಂದುಬಿಟ್ಟಾರೊ ಎಂದು ಅಂಜುವಂತೆ ಬಾಗಿಲಿದ್ದ ಕಡೆಗೆ ಕಣ್ಣು ಒಮ್ಮೆ ಇಮ್ಮೆ ಕಳ್ಳನೋಟ ಹಾಯಿಸಿತು: “ಯಾರು? ಅತ್ತಿಗಮ್ಮನಾ? ನಿಮ್ಮ ಕೋಣೇಲಿದಾರೆ!” ಎಂದಳು, ತುಟಿ ಅದುರುತ್ತಾ.
ಹಲವು ವರ್ಷಗಳಿಂದಲೂ ತನ್ನ ಅವ್ವಗೆ ಬಂದೊದಗಿದ್ದ ಮಹಾ ವಿಪತ್ತಿನ ದುಃಖವನ್ನು ಅನುಭವಿಸಿ ಅರಿತಿದ್ದ ಆ ಮಾಲಕನಿಗೆ ತನ್ನ ತಾಯಿಯ ಕ್ಷೇಮವಿಚಾರದಲ್ಲಿ ಯಾವಾಗಲೂ ಅವನ ಅರಿತಿದ್ದ ಆ ಬಾಲಕನಿಗೆ ತನ್ನ ತಾಯಿಯ ಕ್ಷೇಮವಿಚಾರದಲ್ಲಿ ಯಾವಾಗಲೂ ಅವನ ಕಲ್ಪನೆ ಭಯಂಕರವಾದ ಚಿತ್ರಗಳನ್ನೆ ತಂದೊಡ್ಡಿ ಕಣ್ಣೀರಿನ ಕೋಡಿ ಹರಿಯುವಂತೆ ಮಾಡುತ್ತಿತ್ತು. ಅದು ಕೆಟ್ಟಕೆಟ್ಟ ಕನಸುಗಳಲ್ಲಿಯೂ ಪ್ರತಿಫಲಿತವಾಗಿ ಅವನ ನಿದ್ದೆನ್ನೆಲ್ಲ ಕಡಹುತ್ತಿತ್ತು. ಒಮ್ಮೊಮ್ಮೆ ನಿದ್ದೆಗಣ್ಣಿಲ್ಲಿಯೆ ತಾಯಿಯ ಸಹಾಯಕ್ಕೊ ಸೇವೆಗೊ ಅಥವಾ ಅವಳಿಗೊದಗಲಿದ್ದ ಯಾವುದೋ ಭಯಂಕರ ಅನಿಷ್ಟವನ್ನು ತಪ್ಪಿಸುವ ಸಲುವಾಗಿಯೊ ಎದ್ದು ಓಡುತ್ತಲೊ ಇದ್ದನು. ಅದಕ್ಕಾಗಿಯೆ ಅವನು ಎಲ್ಲಿಯೆ ಮಲಗಲಿ ಯಾರಾದರೂ ದೊಡ್ಡವರು ಅವನ ಪಕ್ಕದಲ್ಲಿ ಮಲಗುತ್ತಿದ್ದುದು ಅಭ್ಯಾಸವಾಗಿ ಹೋಗಿತ್ತು. ಈಗಲೂ ತನ್ನ ಪ್ರಶ್ನೆಗೆ ನೇರವಾಗಿ ಉತ್ತರ ಕೊಡದೆ, ತಡೆಗೂ ತಡೆದೂ, ಕಡೆಗೆ ಏನೋ ಒಂದನ್ನು ಹೇಳಬೇಕಲ್ಲಾ ಎಂದು ಹೇಳಿದಂತೆ ಮಾಡಿ, ಅಳತೊಡಗಿದ್ದ ಮಂಜತ್ತೆಯನ್ನು ಕಂಡು ಧರ್ಮುವಿನ ಕಲ್ಪನೆ ಹುಚ್ಚು ಹುಚ್ಚಾಗಿ ಕೆರಳಿತು. ತನ್ನ ತಾಯಿ ಏನೊ ಆಗಿದ್ದಾಳೆ; ಏನೊ ಆಗಿಹೋಗಿದೆ: ಬೆಂಕಿ ಹೊತ್ತಿಸಿಕೊಂಡು ಸತ್ತಳೊ? ಬಾವಿಗೆ ಬಿದ್ದಳೊ? ನೇಣು ಹಾಕಿಕೊಂಡಳೊ? ವಿಷ ತಿಂದಳೊ? ಅಥವಾ ಅಪ್ಪಯ್ಯನನ್ನು ಹುಡುಕಿ ತರುತ್ತೇನೆಂದು ತಾನೊಬ್ಬಳೆ ಹೋಗಿಬಿಟ್ಟಳೊ? – ಅವನೂ ಅಳತೊಡಗಿ, ಬಿಕ್ಕಿಬಿಕ್ಕಿ ತೊದಲುತ್ತಾ “ಯಾ – ಯಾಕೆ ಮಂಜ – ತ್ತೆ, ಅಳ್ತೀಯಾ?” ಎಂದು ಅವಳ ಹತ್ತಿರಕ್ಕೆ ಸರಿದನು. ಅವಳು ತಡೆಯಲಾರದೆ ಮುನ್ನುಗ್ಗಿ ತನ್ನ ಕೆಲಸದ ಕೈ ಒದ್ದೆಯಾಗಿರುವುದನ್ನೂ ಸೀರೆ ಕೊಳೆಯಾಗಿರುವುದನ್ನೂ ಲೆಕ್ಕಿಸಿದೆ ಅವನನ್ನು ತಬ್ಬಕೊಂಡು, ತನ್ನ ಹೃದಯದಲ್ಲಿ ಸುಪ್ತವಾಗಿದ್ದ ತಾಯ್ತನವನ್ನೆಲ್ಲ ಸೂರೆಗೊಡುವ ರೀತಿಯಲ್ಲಿ ಅವನ ಮುಖದ ಮೇಲೆ ಕೈಯಾಡಿಸಿ, ಸೆರಗಿನಿಂದ ಕಣ್ಣೊರಸುತ್ತಾ “ಅಳಬ್ಯಾಡ, ತಮ್ಮಯ್ಯಾ” ಎಂದು, ಅವನ ತಾಯಿ ಅವನನ್ನು ಸಂಭೋದಿಸುತ್ತಿದ್ದ ರೀತಿಯನ್ನು ಅನುಕರಿಸಿ, “ನಿಮ್ಮ ಕೋಣೇಲಿ ಇದ್ದಾರೆ ತೋಳಿನಿಂದ ತಬ್ಬಿಕೊಂಡೆ ಕರೆದೊಯ್ದಳು.
ಕೋಣೆಯ ಬಾಗಿಲು ಬಳಿಸಾರಿದಂತೆಲ್ಲ ಮಂಜಮ್ಮನ ಉದ್ವೇಗ ಹಚ್ಚತೊಡಗಿತು: ‘ಅಣ್ಣಯ್ಯ ಹಾಕಿದ್ದ ಬೀಗ ತೆಗೆದಿದ್ದಾನೆಯೊ ಇಲ್ಲವೊ?’ ಎಂದು.
“ಯಾಕತ್ತೆ ನಮ್ಮ ಕೋಣೆ ಬಾಗಿಲಿಗೆ ಬೀಗ ಹಾಕ್ಯದೆ? ಅವ್ವ ಒಳಗಿಲ್ಲೇನು?” ಧರ್ಮು ಕೇಳಿದ ಪ್ರಶ್ನೆಗೆ ಅವಳು ತಲೆಗೆ ಕಲ್ಲೇಟು ಬಿದ್ದಂತೆ ಕತ್ತರಿಸಿದಳು.
ಒಡನೆಯ ಉತ್ತರ ಹೇಳುವ ಸಂಕಟದಿಂದ ತಪ್ಪಿಸಿಕೊಳ್ಳಲೊ ಎಂಬಂತೆ ಮಂಜಮ್ಮ “ನಿನ್ನ ಸಣ್ಣಚಿಗಪ್ಪಯ್ಯನ ಹತ್ತಿರ ಬೀಗದ ಕೈ ಅದೆ. ತರ್ತಿನಿ, ತಡಿ” ಎಂದು ಧರ್ಮುವನ್ನು ಸರಪಳಿಯ ಚಿಲಕಕ್ಕೆ ಬೀಗ ಹಾಕಿ ಭದ್ರಪಡಿಸಿದ್ದ ಅವರ ಕೇಣೆಯ ಬಾಗಿಲೆಡೆಗೆ ನಿಲ್ಲಿಸಿ ಜಗಲಿಗೆ ಓಡಿದಳು.
ನಗೆಯಾಡುತ್ತಾ ತಣ್ಣಗೆ ಕುಳಿತು ಆಳುಗಳಿಗೆ ಬಾಯಿಗೆ ಕೊಡುವ ಮಹಾಕಾರ್ಯದಲ್ಲಿ ಮಗ್ನನಾದಂತಿದ್ದ ತಿಮ್ಮಪ್ಪಹೆಗ್ಗಡೆ ಬೀಗದಕ್ಕೆ ಕೇಳಿದ ತನ್ನ ತಂಗಿಗೆ “ನೋಡು, ಬುಚ್ಚೀ, ಮತ್ತೆ ಅವರೇನಾದ್ರು ಕೆರೆ ಬಾವಿ ಬೀಳ್ತೀನಿ ಅಂತಾ ಹೋದರೋ? ನನ್ನಿಂದ ಮಾತಿಲ್ಲ! ನೀನೆ ಜವಾಬುಗಿತ್ತಿ! ಆ ಮುಂಡಿಗೇಲಿ ಕಡಿನ ಕೋಡಿಗೆ ಸಿಕ್ಕಹಾಕಿದ್ದೆ ಬೀಗದ ಕೈನ!” ಎಂದು ಆ ಜಾಗವನ್ನು ಕಣ್ಣಿಂದಲೆ ನಿರ್ದೇಶಿಸಿ, ಮತ್ತೆ ನಿರುದ್ವಿಗ್ನವಾಗಿ ತನ್ನ ಕೆಲಸದತ್ತ ತಿರುಗಿದನು.
ಬೀಗದ ಕೈ ತೆಗೆದುಕೊಂಡು  ಓಡಿಬಂದು ಅಂಜಮ್ಮ ಬಾಗಿಲು ಬೀಗ ತೆಗೆದಳು. ಧರ್ಮು ಬಾಗಿಲು ದಬ್ಬಿದನು. ಬಾಗಿಲು ತೆರೆಯಲಿಲ್ಲ. ಬಲವಾಗಿ ತಳ್ಳಿದನು, ತೆರೆಯಲಿಲ್ಲ. ಮಂಜಮ್ಮನೂ ತನ್ನೊಂದು ಕೈಯಿಂದಲೆ ಧರ್ಮುಗೆ ನೆರವಾಗಿ ನೂಕಿದಳು. ಆದರೂ ಬಾಗಿಲು ತೆರೆಯಲಿಲ್ಲ.
ಕೋಣೂರು ರಂಗಪ್ಪಗೌಡರ ತಂಗಿ, ಮುಕುಂದಯ್ಯನ ದೊಡ್ಡಕ್ಕ, (ಹಳೆಮನೆಗೆ ಕೊಟ್ಟಿದ್ದ ಹಿರಿಯ ಅಕ್ಕನನ್ನು ದೊಟ್ಟಕ್ಕ ಎಂದೂ ಬೆಟ್ಟಳ್ಳಿಗೆ ಕೊಟ್ಟಿದ್ದ ಕಿರಿಯ, (ಹಳೆಮನೆಗೆ ಕೊಟ್ಟಿದ್ದ ಹಿರಿಯ ಅಕ್ಕನನ್ನು ದೊಡ್ಡಕ್ಕ ಎಂದೂ ಬೆಟ್ಟಳ್ಳಿಗೆ ಕೊಟ್ಟಿದ್ದ ಕಿರಿಯ ಅಕ್ಕನನ್ನು ಪುಟ್ಟಕ್ಕ ಎಂದೂ ಕರೆಯುತ್ತಿದ್ದುದು ವಾಡಿಕೆ). ರಂಗಮ್ಮ, ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರ ಹಿರಿಯ ಮಗ ದೊಡ್ಡಣ್ಣ ಹೆಗ್ಗಡೆಯವರನ್ನು ಮದುವೆಯಾದದ್ದೆ ಒಂದು ಕಥೆಯಾಗಿತ್ತು. ದೊಡ್ಡಣ್ಣ ಹೆಗ್ಗಡೆಯವರಿಗೆ ರಂಗಮ್ಮ ವೀರಪಣವಾಗಿ ಲಭಿಸಿ, ಹೆಮ್ಮೆಯಿಂದ ಅವರ ಕೈಹಿಡಿದಿದ್ದಳು. ಕೋಣೂರು ರಂಗಪ್ಪಗೌಡರೂ ಹಳೆಮನೆ ದೊಡ್ಡಣ್ಣ ಹೆಗ್ಗಡೆಯವರೂ (ಆಗಿನ್ನೂ ಪಾಲಾಗಿರಲಿಲ್ಲ) ಆಗತಾನೆ ಪ್ರಾಯಕ್ಕೆ ಬಂದ ಯುವಕರಾಗಿದ್ದಾಗ ಒಮ್ಮೆ ಸಾರಿಕೆ ಬೇಟೆಗೆ ಹೋಗಿದ್ದರಂತೆ. ದಟ್ಟಕಾಡಿನ ನಡುವೆ ಒಂದು ಕುಳುಂಪೆಯ ಪಕ್ಕದ ಹೊದರಿನಲ್ಲಿ, ಆಗತಾನೆ ಹುಟ್ಟಿದುವೋ ಅಥವಾ ಹುಟ್ಟಿ ಕೆಲವೆ ಗಂಟೆಗಳಾಗಿದ್ದಿಬಹುದೋ ಗೊತ್ತಿಲ್ಲ, ಮೂರು ಪುಟ್ಟ  ಹುಲಿಮರಿಗಳಿದ್ದುವಂತೆ.ತಾಯಿ ಹುಲಿ ಅಲ್ಲೆಲ್ಲಿಯೂ ಸಮೀಪದಲ್ಲಿದ್ದುದು ಗೋಚರಿಸಲಿಲ್ಲ. ದೊಡ್ಡಣ್ಣ  ಹೆಗ್ಗಡೆಯವರು ಮರಿಗಳನ್ನು ಮನೆಗೆ ಎತ್ತಿಕೊಂಡು ಹೋಗೋಣ ಎಂದರಂತೆ.  ರಂಗಪ್ಪಗೌಡರು ‘ಖಂಡಿತ ಬೇಡ, ತಾಯಿಹುಲಿ ನಮ್ಮಿಬ್ಬರನ್ನೂ ಸಿಗಿದುಹಾಕಿಬಿಡ್ತದೆ’ ಎಂದರಂತೆ. ‘ನೀನು ಬರಿ ಪುಕ್ಕಲ!’ ಎಂದು ಮೂದಲಿಸಿದರಂತೆ ದೊಡ್ಡಣ್ಣ ಹೆಗಡೆ. “ನೀನು ಭಾರಿ ಧೈರ್ಯಗಾರ?” ಎಂದು ಅಣಕಿಸಿದರಂತೆ ರಂಗಪ್ಪಗೌಡರು. ‘ನಾನು ಮನೆಗೆ ತಗೊಂಡೇ ಹೋದರೆ ಏನು ಕೊಡ್ತೀಯಾ?’ ಎಂದರಂತೆ ದೊಡ್ಡಣ್ಣ ಹೆಗಡೆ. ‘ನೀ ಕೇಳಿದ್ದು ಕೊಡ್ತೀನೊ!’ ಎಂದರು ರಂಗಪ್ಪಗೌಡರು. ‘ಕೈಮೇಲೆ ಕೈಯಿಟ್ಟು ಭಾಷೆ ಕೊಡು!’ ಎಂದು ಮುಡಿಗೆಯಿಟ್ಟು ದೊಡ್ಡಣ್ಣಹೆಗ್ಗಡೆ ಚಾಚಿದ ಬಲಅಂಗೈಯ ಮೇಲೆ ರಂಗಪ್ಪಗೌಡರು ತಮ್ಮ  ಬಲಗೈಯನ್ನು ಅಪ್ಪಳಿಸಿ ಶಪಥಮಾಡಿದರಂತೆ!
ದೊಡ್ಡಣ್ಣಹೆಗ್ಗಡೆ ಮೂರು ಹುಲಿಮರಿಗಳನ್ನೂ ಕಂಬಳಿಯೊಳಗಿಟ್ಟುಕೊಂಡು ಮನೆಯ ಕಡೆಗೆ ವೇಗವಾಗಿಯೆ ಹೊರಟರಂತೆ. ಅವರು ತಕ್ಕಮಟ್ಟಿಗೆ ದೂರವಾಗಿಯೆ ಸಾಗಿದ್ದರಂತೆ. ಹಿಂದೆ ದೂರದಲ್ಲಿ ಕೇಳಿಸಿತಂತೆ ತಾಯಿ ಹುಲಿಯ ಭಯಂಕರ ಘರ್ಜನೆ!
“ಕೆಟ್ಟೆವೋ, ದೊಡ್ಡಣ್ಣ! ಬಿಟ್ಟು ಬಿಡೋ ಹುಲಿಮರೀನ! ಓಡಿಹೋಗಾನ!” ಎಂದು ಕೂಗಿ ಹೇಳಿ ಓಡತೊಡಗಿದರಂತೆ ರಂಗಪ್ಪಗೌಡರು.
“ನೀನೇನು ಗಂಡಲ್ಲೇನೋ? ನಿಲ್ಲೋ! ಗೌಡನ ಹಿಂದೆ ಓಡೋನಲ್ಲ ಕಣೋ ಹೆಗ್ಗಡೆ!” ಎಂದು ದೊಡ್ಡಣ್ಣಹೆಗ್ಗಡೆ ತನ್ನ ಜೋಡುನಲ್ಲಿ ಕೇಪಿನ ಕೋವಿಯನ್ನು ಅಣಿಮಾಡಿಕೊಂಡು, ಗರ್ಜನೆ ಬರುವ ಕಡೆ ತಿರುಗಿ ತಿರುಗಿ ನೋಡುತ್ತಾ, ಆದಷ್ಟು ಬೇಗನೆ ನಡೆಯತೊಡಗಿದರಂತೆ.
ಧೈರ್ಯಕ್ಕಲ್ಲದಿದ್ದರೂ ದಾಕ್ಷಿಣ್ಯಕ್ಕೆ ಸಿಕ್ಕಿದಂತಾಗಿ ಓಡುವುದನ್ನು ನಿಲ್ಲಿಸಿ ರಂಗಪ್ಪಗೌಡರೂ ತಮ್ಮ ಒಂಟಿನಲ್ಲಿ ಕೇಪಿನ ಕೋವಿಯನ್ನು ಅಣಿಮಾಡಿಕೊಂಡು, ಬಾವನ ಸಂಗಡವೆ ನಡೆಯತೊಡಗಿದರು, ದೇವರು ಮಾಡಿಸಿದ್ದಾಗಲಿ ಎಂದುಕೊಂಡು, ಬಾವನ ಸಂಗಡವೆ ನಡೆಯತೊಡಿದರು, ದೇವರು ಮಾಡಿಸಿದ್ದಾಗಲಿ ಎಂದುಕೊಂಡು.
ಸ್ವಲ್ಪ ಹೊತ್ತಿನೊಳಗಾಗಿಯೆ ಹೆಣ್ಣುಹುಲಿ ಇವರನ್ನು ಹಿಂಬಾಲಿಸಿ ಬಂದು ಮೇಲೆ ಬೀಳಲು ನುಗ್ಗಿತಂತೆ. ಜೋಡುನಲ್ಲಿಯ ಎರಡು ಈಡುಗಳೂ ಒಂಟಿನಲ್ಲಿಯ ಒಂದು ಈಡೂ ಹಾರಿ, ಹುಲಿಗೆ ಮೂರು ಗುಂಡೂಗಳೂ ತಗುಲಿ ಪಲ್ಟಿಹೊಡೆಯಿತಂತೆ! ಆದರೆ ಪೆಟ್ಟು ಅಂತಹ ಆಯಕ್ಕೆ ಬಿದ್ದಿರಲಿಲ್ಲವಾದ್ದರಿಂದ ಮತ್ತೆ ತೆವಳಿಬಂದೇ ಇವರ ಮೇಲೆ ಹಾರಿತಂತೆ. ಆಗ ದೊಡ್ಡಣ್ಣಹೆಗ್ಗಡೆ ತನ್ನ ಸೊಂಟಕ್ಕೆ ತಗುಲಿಸಿದ್ದ ಉದ್ದಗತಿಯಿಂದ ಹುಲಿಯ ಮಂಡೆಗೆ ಹೊಡೆದು ಬೀಳಿಸಿದರಂತೆ. ಆದರೂ ಹೋರಾಟದಲ್ಲಿ ಹುಲಿಯ ಒಂದು ಕೈ – ಅವರ ಹೆಗಲಿನ ಬಳಿ ಬೆನ್ನಿಗೆ, ಬಗೆದುಹಾಕಿದಂತೆ ದೊಡ್ಡ ಗಾಯವಾಗಿ. ರಕ್ತ ಸುರಿದು ರಾಣಾರಂಪವಾಯಿತಂತೆ! ( ಆ ಗಾಯದ ಕಲೆಯನ್ನೆ ಕುರಿತು ಐತ ಧರ್ಮುಗೆ ಹೇಳಿದ್ದು, ಧರ್ಮುವ ಅಪ್ಪಯ್ಯನನ್ನು ಈ ಕಲೆಯಿಂದಲೂ ತಾನು ಗುರುತಿಸಬಲ್ಲೆ ಎಂದು.)
ಹುಲಿಯ ಮರಿಗಳನ್ನೇನೊ ಮನೆಗೆ ತಂದರು. ಆದರೆ ಅವು ಬದುಕದೆ ಹೋದುವು. ಕೆಲವು ತಿಂಗಳೆ ಬೇಕಾಯಿತು, ದೊಡ್ಡಣ್ಣಹೆಗ್ಗಡೆಯ ಗಾಯ ಮಾಯುವುದಕ್ಕೆ.
ಈ ಪ್ರಸಂಗ ಮುಗಿದ ಮೇಲೆ, ಒಂದು ದಿನ ದೊಡ್ಡಣ್ಣ ಕೋಣೂರಿನ ಮಾಲಾಯಕ್ಕೆ ನಂಟನಾಗಿ ಹೋಗಿದ್ದಾ, ಊಟದ ಸಮಯದಲ್ಲಿ, ಇಕ್ಕುವುದಕ್ಕೆ ಬಂದಿದ್ದ ಹೆಣ್ಣುಗಳ ಮಧ್ಯೆ ರಂಗಮ್ಮನನ್ನು ನೋಡಿ. ಪಕ್ಕದಲ್ಲಿಯೆ ಊಟಕ್ಕೆ ಕುಳಿತಿದ್ದ ರಂಗಪ್ಪನಿಗೆ “ಏನೋ ಬಾವ, ನಾನೇನೂ ಹುಲೀಮರೀನ ಮನೆಗೆ ತಂದೇಬಿಟ್ಟೆ. ನೀನು ಮಾತ್ರ ಕೈಮೇಲೆ ಕೈಹೊಡೆದು ಕೊಟ್ಟಭಾಷೇನೆ ಮರತೇಬಿಟ್ಟೆ!” ಎಂದನಂತೆ.
“ನೀ ಕೇಳಲಿಲ್ಲ ನಾ ಕೊಡಲಿಲ್ಲ!” ಎಂದು, ರಂಗಪ್ಪ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದ ನಂಟರಿಗೆಲ್ಲ ಕಥೆ ಹೇಳಿದನಂತೆ.
ನಂಟರೆಲ್ಲರೂ “ಮತ್ತೆ ಇವತ್ತೆ ಕೇಳಿಬಿಡಲಿ. ನಾವೂ ಎಲ್ಲ ಸಾಕ್ಷಿನೆರೆದ ಹಾಂಗೆಯೂ ಆಗ್ಯದೆ” ಎಂದರಂತೆ.
ರಂಗಪ್ಪಗೌಡನಿಗೆ ‘ಏನು ಕೇಳಿಬಿಡುತ್ತಾನೊ ಬಾವ’ ಎಂದು ಗಿದಿಲು. ಆದರೆ ದೊಡ್ಡಣ್ಣಹೆಗ್ಗಡೆ ಅವನ ಕಿವಿಯಲ್ಲಿ ತನ್ನ ವೀರಪಣವನ್ನು ಉಸುರಿದಾಗ, ಅವನ ಆನಂದಕ್ಕೆ ಪಾರವೇ ಇಲ್ಲವೆಂಬಂತೆ ಅಟ್ಟಹಾಸಮಾಡಿ ನಕ್ಕನು: ಯಾವುದನ್ನು ಕೊಡಬೇಕಾಗಿತ್ತೋ ಅದಕ್ಕೆ ನೂರುಮಾಡಿ ತಾನೇ ಪಡೆದಂತಾಗಿತ್ತು.
ಊಟಕ್ಕೆ ಕೂತಿದ್ದ ನಂಟರೆಲ್ಲ “ಏನು? ಏನು?” ಎಂದು ಕುತೂಹಲದಿಂದ ಕೇಳಿದರು.
ರಂಗಪ್ಪನು ನಗುತ್ತಾ “ಹೆಣ್ಣುಹುಲಿ ಹೊಡೆದವನು ನನ್ನ ಬಾವ ಇನ್ನೇನು ಕೇಳ್ತಾನೆ?” ಎಂದು ಹಾಸ್ಯಮಾಡಿ, ಓಡಿಸಲು ಬಂದಿದ್ದ ತನ್ನ ತಂಗಿ ರಂಗಮ್ಮನ ಕಡೆ ಇಂಗಿತವಾಗಿ ನೋಡಿದ್ದನು. ಎಲ್ಲರಿಗೂ ವಿಷಯ ಹೊಳೆದು, ನಗೆಯ ಘೋಷದಿಂದ ಭೋಜನಶಾಲೆ ಭೋರ್ಗರೆದಂತಾಗಿತ್ತು. ರಂಗಮ್ಮಗೂ ಗುಟ್ಟು ಹೊಳೆದು, ನಾಚಿ, ಕೆಂಪೇರಿ, ಬೇಗ ಬೇಗನೆ ಹೊರಟು ಹೋಗಿದ್ದಳು ಮತ್ತೆ ಬಡಿಸಲು ಬಂದಿರಲಿಲ್ಲಂತೆ ಆವೊತ್ತು!
ಸ್ವಭಾವತಃ ಹಿಡಿತದ ಕೈಯವರಾದರೂ ಹಿರಿಯ ಮಗನ ಮದುವೆಯನ್ನು ವಿಜೃಂಭಣೆಯಿಂದಲೆ ನೆರವೇರಿಸಿದ್ದರು ಹಳೆಮನೆ ಸುಬ್ಬಣ್ಣಹೆಗ್ಗಡೆಯವರು. ಆದರೆ ಅವರ ಹುಟ್ಟುಗುಣವಾದ ಉಳಿತಾಯದ ಮನೋಧರ್ಮ, ಅದೇ ಸಮಯದಲ್ಲಿಯೆ ಹೆಣ್ಣು ಕೊಟ್ಟು ಹೆಣ್ಣು ತರುವ ಉಪಾಯವನ್ನೂ ಕಂಡುಹಿಡಿದಿತ್ತು. ತಮ್ಮ ಮಗಳು ದೊಡ್ಡಣ್ಣಹೆಗ್ಗಡೆಯ ತಂಗಿಯನ್ನು ಕೋಣೂರು ರಂಗಪ್ಪಗೌಡರಿಗೆ ಧಾರೆಯೆರೆಯುವ ಶುಭಕಾರ್ಯವನ್ನೂ ಜೊತೆಜೊತೆಗೆ ನೆರವೇರಿಸಿ. ಆ ಮದುವೆಯ ವಿಜೃಂಭಣೆಗಾಗಿ ಅವರು ಧಾರಾಳವಾಗಿ ಖರ್ಚುಮಾಡಿದಂತೆ ತಮ್ಮ ಗತಿಸಿದ್ದ ಅಣ್ಣನ ಮಗ ಶಂಕರಹೆಗ್ಗಡೆಯ ಮತ್ತು ಅವನ ತಂಗಿ ಸಿಂಬಾವಿ ಭರಮೈಹೆಗ್ಗಡೆಗೆ ಕೊಟ್ಟಿದ್ದ ಜಟ್ಟಮ್ಮನ ಮದುವೆಗೂ ಖರ್ಚುಮಾಡಲಿಲ್ಲ ಎಂಬುದೂ ಮುಂದೆ ಮನೆ ಪಾಲಾಗುವುದಕ್ಕೆ ಕಾರಣವಾದ ಮನಸ್ತಾಪಕ್ಕೆ ಬಿತ್ತಿದ್ದ ಒಂದು ಬೀಜಪ್ರಾಯವಾಗಿತ್ತು.
ರಂಗಮ್ಮ ಮತ್ತು ದೊಡ್ಡಣ್ಣ ಹೆಗ್ಗಡೆಯವರ ದಾಂಪತ್ಯಜೀವನ ಆ ಹತ್ತೊಂಬತ್ತನೆ ಶತಮಾನದ ತುದಿಗಾಲದಲ್ಲಿ ಮಲೆನಾಡಿನ ಶ್ರೀಮಂತ ಅವಿಭಕ್ತ ಕುಟುಂಬದಲ್ಲಿ ಸಾಗುತ್ತಿದ್ದ ಇತರ ಅನೇಕರ ದಾಂಪತ್ಯ ಜೀವನದಂತೆ ಉಬ್ಬು ತಗ್ಗು ಏರು ಇಳಿತಗಳಿಂದ ಕೂಡಿ ಸಾಗಿತ್ತು, ತಕ್ಕಮಟ್ಟಿಗೆ ಸುಖಮಯವಾಗಿ, ನೆಮ್ಮದಿಯಿಂದಲೆ ಎಂದು ಹೇಳಬಹುದಾದಷ್ಟು. ರಂಗಮ್ಮ ಧರ್ಮುವನ್ನು ಹೊಟ್ಟೆಯಲ್ಲಿ ಹೊತ್ತು ಗರ್ಭಿಣಿಯಾಗಿದ್ದಾಗ ಆಕೆಗೆ ದೀರ್ಘಕಾಲದ ಅಸ್ವಸ್ಥತೆಯಾಯಿತು. ಪದ್ದತಿಯಂತೆ ದೇವರು ಕೇಳುವುದು, ಗಣ ಬರಿಸುವುದು, ಕಣ್ಣಾ ಪಂಡಿತರಂತಹರಿಂದ ಗಿಡಮೂಲಿಕೆ ಔಷಧ ಕೊಡಿಸುವುದು, ಹರಕೆ ಹೂರುವುದು, ದೆಯ್ಯಗಳಿಗೆ ಕೋಳಿ ಕುರಿ ಆಯಾರ ಕೊಡಿಸುವುದು ಎಲ್ಲ ತರಹದ ಚಿಕಿತ್ಸೆ ನಡೆಯಿತು. ಆದರೆ ಏನೂ ಉತ್ತಮ ಆಗಲಿಲ್ಲ. ಆಗ ದೊಡ್ಡಣ್ಣಹೆಗ್ಗಡೆ, ನಿಮಿತ್ತ ಹೇಳುವುದರಲ್ಲಿ ಹೆಸರುವಾಸಿಯಾಗಿದ್ದ, ಕಲ್ಲೂರು ಜೋಯಿಸರ ಹತ್ತಿರಕ್ಕೆ ಹೋದರು. ಅವರು ಜಾತಕ ನೋಡಿ, ಹೆಗ್ಗಡೆಗೆ ಅಷ್ಟೇನೂ ಅರ್ಥವಾಗದ ‘ಕುಜರಾಹು ಸಂಧಿ’ ’ಗುರು ಅಲಂಕಾರಕರ ಕ್ರೂರ ಕೂಟ’ ಇತ್ಯಾದಿ ಜೋತಿಷ್ಯ ಹೇಳಿ, ರಂಗಮ್ಮಗೆ ಒಂದು ಕೆಟ್ಟ ಕಂಟಕವಿದೆಯೆಂದೂ ಮಗುವಿನ ತಾಯಿಯಾಗಲಿ ತಂದೆಯಾಗಲಿ ಅದಕ್ಕೆ ತುತ್ತಾಗಬಹುದೆಂದೂ, ಹೊನ್ನಿನ ಗೋದಾನ ಅಥವಾ ತೀರ್ಥಯಾತ್ರೆಯಂತಹ ದೊಡ್ಡ ಹರಕೆ ಹೊತ್ತು ನೆರವೇರಿಸುವ ಪಕ್ಷದಲ್ಲಿ ವಿಧಿಯ ಕ್ರೌರ್ಯ ಸೌಮ್ಯತರವಾಗಬಹುದೆಂದೂ ಸೂಚಿಸಿದರು.
ಅನುಭವದಿದಂದ ತನ್ನ ತಂದೆಯ ಕಾರ್ಪಣ್ಯವನ್ನರಿತಿದ್ದುದರಿಂದಲೂ, ತನಗೂ ಪ್ರವಾಸ ರೂಪದ ಸಾಹಸದಲ್ಲಿ ಆಸಕ್ತಿ ಹುಟ್ಟಿದುದರಿಂದಲೂ ಬೊನ್ನಿ ಗೋದಾನದ ಸೂಚನೆಯನ್ನು ವಿಸರ್ಜಿಸಿ, ತೀರ್ಥಯಾತ್ರೆಗೆ ಮನಸ್ಸುಮಾಡಿ, ದೊಡ್ಡಣ್ಣಹೆಗ್ಗಡೆ ತಿರುಪತಿ ಯಾತ್ರೆ ಮಾಡುವುದಾಗಿ ಹರಕೆ ಹೊತ್ತರು. ಹೆಂಡತಿಗೂ ವಿಷಯವೆಲ್ಲವನ್ನೂ ತಿಳಿಸಿ ಆಕೆಯನ್ನೂ ಒಪ್ಪಿದರು. ಆ ಶ್ರದ್ಧಾಭಕ್ತಿಗಳ ಮಹಿಮೆಯಿಂದಲೋ ಔಷಧೋಪಚಾರಗಳ ಪ್ರಭಾವದಿಂದಲೋ ರಂಗಮ್ಮನಿಗೆ ರೋತೆ ತಪ್ಪಿ, ಕ್ಷೇಮದಿಂದಲೆ ಗಂಡುಮಗುವನ್ನು ಹೆತ್ತಳು. ಧರ್ಮು ನಾಲ್ಕನೆಯ ವರ್ಷದವನಾಗಿದ್ದಾಗ ಆ ಪ್ರಾಂತದ ಒಂದು ತಂಡ ತಿರುಪತಿಯಾತ್ರೆಗೆ ಹೊರಡಲು ಸಿದ್ಧತೆ ಮಾಡಿತು. ದೊಡ್ಡಣ್ಣಹೆಗ್ಗಡೆಯೂ ದೇವರಿಗೆ ಒಪ್ಪಿಸುವ ತಮ್ಮ ಮನೆಯ ಕಾಣಿಕೆಯೊಡನೆ ಯಾತ್ರಿಕರೊಡನೆ ಹೊರಟರು.
ಹೋದವರು ಹಿಂದಕ್ಕೆ ಬರಲಿಲ್ಲ.
ಜ್ಯೋತಿಷ್ಯ ನೋಡಿಸಿ ಅದರಂತೆ ಆಚರಿಸುವವರಿಗೆ ಎಲ್ಲ ಕಾಲದಲ್ಲಿಯೂ ಎಲ್ಲೆಲ್ಲಿಯೂ ಏನು ಗತಿಯಾಗುವುದೋ ಅದೇ ಗತಿ ಆಯಿತು ದೊಡ್ಡಣ್ಣ ಹೆಗ್ಗಡೆಯವರಿಗೂ. ಅದರಿಂದ ಉದ್ಬುದ್ದವಾಗುವ ಶ್ರದ್ಧಾಶಕ್ತಿಯ ಅಂಶದಿಂದ ಒಳ್ಳಿತಾದರೂ ಅವೈಚಾರಿಕ ಮತ್ತು ಅವೈಜ್ಞಾನಿಕವಾದ ಅದರ ಕ್ರಿಯಾಚಾರದ ಅಂಶವನ್ನು ಅಂಧಹೃದಯದಿಂದ ಅನುಸರಿಸುವುದರಿಂದ ಹಾನಿ ತಪ್ಪುವುದಿಲ್ಲ. ಜೋಯಿಸರು ಸೂಚಿಸಿದ್ದ ಅಮಂಗಳ ಪರಿಹಾರದ ಮಾರ್ಗವೆ ಅಮಂಗಳಕಾರಣವಾಗಿ ಪರಿಣಮಿಸಿಬಿಟ್ಟಿತು. ಅವರೇನೊ ‘ತಾಯಿಯಾಗಲಿ ತಂದೆಯಾಗಲಿ ವಿಪತ್ತು’ ಎಂದು ಹೇಳಿದ್ದ ತಮ್ಮ ‘ನಿಮಿತ್ತ’ದ ಸತ್ಯವನ್ನೆ ಸಮರ್ಥಿಸಿಕೊಂಡಿದ್ದರು, ದೊಡ್ಡಣ್ಣಗೆ ಒದಗಿದ್ದ ಆಪತ್ತಿನಲ್ಲಿ!
ಹೋದ ಯಾತ್ರಿಕರಲ್ಲಿ ಹಿಂತಿರುಗದಿದ್ದವರು ದೊಡ್ಡಣ್ಣಹೆಗಡೆ ಒಬ್ಬರೆ ಆಗಿರಲಿಲ್ಲ. ತಿರುಪತಿ ತಿಮ್ಮಪ್ಪ ಅನೇಕ ಮನೆಗಳಿಂದ ಕಾಣಿಕೆಯನ್ನು ಮಾತ್ರವಲ್ಲದೆ ಜೀವಕಾಣಿಕೆಯನ್ನೂ ತೆಗೆದುಕೊಂಡಿದ್ದನು.
ಆದರೆ ದೊಡ್ಡಣ್ಣಹೆಗ್ಗಡೆ ತೀರಿಕೊಂಡ ವಿಚಾರದಲ್ಲಿ ಒಮ್ಮತವಿರಲಿಲ್ಲ: ಮೊದಲು ಹಿಂದಿರುಗಿದ್ದ ತಂಡದವರು – ಅವರು ವಾಂತಿಭೇದಿಯಾಗಿ ಸಾಯುವುದರಲ್ಲಿದ್ದರೆಂದೂ ತಾವು ಶುಶ್ರೂಷೆ ಮಾಡುವುದಾಗಿ ಹೇಳಿದರೂ ಒಪ್ಪದೆ, ಸಾಂಕ್ರಾಮಿಕ ರೋಗದಿಂದ ತಮ್ಮೆಲ್ಲರನ್ನೂ ಪಾರುಮಾಡುವುದಕ್ಕೋಸ್ಕರವೆ, ತಮ್ಮನ್ನು ಬಲಾತ್ಕಾರವಾಗಿ ಊರಿಗೆ ಬೇಗ ಹಿಂದಿರುಗುವುದಕ್ಕೆ ಹೇಳಿ ಕಳುಹಿಸಿಬಿಟ್ಟರೆಂದೂ, ತಮ್ಮ ಹೆಂಡತಿ ರಂಗಮ್ಮಗೆ ತಮ್ಮ ಕೊನೆಯ ಕಾಣಿಕೆಯಾಗಿ ಕೊಡಲು ಹೇಳಿ, ಒಂದು ತಿರುಪತಿ ತಿಮ್ಮಪ್ಪನ ಪಟವನ್ನು ಕೊಟ್ಟಿದ್ದಾರೆಂದೂ ವರದಿಯನ್ನೊಪ್ಪಿಸಿ, ಆ ಪಟವನ್ನು ಸುಬ್ಬಣ್ಣಹೆಗ್ಗಡೆಯವರ ಕೈಲಿ ದೊಡ್ಡಣ್ಣಹೆಗ್ಗಡೆಯವರ ಸಹಧರ್ಮಿಣಿಗೆ ಒಪ್ಪಿಸುವಂತೆ ಹೇಳಿ, ಕೊಟ್ಟಿದ್ದರು. ತರುವಾಯ ಬಂದ ಎರಡನೆ ತಂಡದವರು – ಅವರು ತೀರಿ ಹೋದರೆಂದೇ ಹೇಳಿದ್ದರು. ಮೂರನೆ ತಂಡದವರು – ಗೋಸಾಯಿಗಳು ಔಷಧಿಕೊಟ್ಟು ಅವರನ್ನು ಬದುಕಿಸಿ ನೋಡಿಕೊಳ್ಳಿತ್ತಿದ್ದಾರೆಂದೂ ಸಂಪೂರ್ಣ ಗುಣವಾಗಿ ತಿರುಗಾಡಲು ಸಾಮರ್ಥ್ಯ ಬಂದಮೇಲೆ ಊರಿಗೆ ಕಳುಹಿಸುತ್ತಾರೆಂದೂ ಹೇಳಿದ್ದರು. ಆಮೇಲೆ ಬಿಡಿಬಿಡಿಯಾಗಿ ಬಂದಿದ್ದ ಇತರ ಯಾತ್ರಿಕರು – ತೀರ್ಥಹಳ್ಳಿಯ ದಾಸಯ್ಯನೂ ಅವರೊಳಗೊಬ್ಬನಾಗಿದ್ದನು, – ದೊಡ್ಡಣ್ಣಹೆಗ್ಗಡೆಗೆ ವೈರಾಗ್ಯ ಬಂದು ಸನ್ಯಾಸಿಯಾಗಿ ಹೋಗಿಬಿಟ್ಟನೆಂದೂ, ಗೋಸಾಯಿಗಳು ಮದ್ದುಕೊಟ್ಟು ಅವನಿಗೆ ತನ್ನ ಹಿಂದಿನದೆಲ್ಲ ಮರೆಯುವಂತೆಮಾಡಿ ತಮ್ಮ ಸೇವೆಗೆ ಇಟ್ಟುಕೊಂಡಿದ್ದಾರೆಂದೂ ನಾನಾ ವಿಧವಾದವಾರ್ತೆ ಹಬ್ಬಿಸಿದ್ದರು. ಅಲ್ಲದೆ ಅವರನ್ನು ಪತ್ತೆಹಚ್ಚಿ ಕರೆತರುವುದಾಗಿ ಭರವಸೆಕೊಟ್ಟು ಅನೇಕರು ಅನೇಕ ರೀತಿಯಿಂದ ಸುಬ್ಬಣ್ಣಹೆಗ್ಗಡೆಯವರಿಂದಲೂ ರಂಗಮ್ಮನಿಂದಲೂ ಇತರ ಹತ್ತಿರದ ಬಂಧು ಬಾಂಧವರಿಂದಲೂ ಹಣ ಹೊನ್ನು ಸುಲಿಗೆಮಾಡಿಯೂ ಇದ್ದರು.
ಧರ್ಮುವ ತಾಯಿ. ರಂಗಮ್ಮ ತನಗಾಗಿ ಯಾತ್ರೆ ಕೈಕೊಂಡಿದ್ದ ತನ್ನ ಗಂಡಗೆ ಒದಗಿದ್ದ ವಿಪತ್ತನ್ನು ಕೇಳಿ ಹೌಹಾರಿದಳು. ಎದೆ ಬೆಂದಳು; ದೆವ್ವ ದೇವರು ಮನುಷ್ಯ ಎಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಹೇಳಿಕೊಂಡಳು, ಬೇಡಿಕೊಂಡಳು, ಅಂಗಲಾಚಿದಳು, ಕಾಣಿಕೆ ತೆತ್ತಳು, ತನ್ನ ಗಂಡನನ್ನು ಹೇಗಾದರೂ ಮಾಡಿ ಹುಡುಕಿ ಹಿಂದಕ್ಕೆ ತನ್ನಿ ಎಂದು. ತನ್ನ ಗಂಡನ ಕೊನೆಯ ಕಾಣಿಕೆಯೆಂದು ಕಳಸಿಕೊಟ್ಟಿದ್ದ ತಿರುಪತಿ ತಿಮ್ಮಪ್ಪನ ಪಟವನ್ನು ತಮ್ಮ ಕೋಣೆಯಲ್ಲಿಟ್ಟು ಹೂಮುಡಿಸಿ ಧೂಪಹಾಕಿ ಅಡ್ಡಬಿದ್ದು ಬಾಯಿಗೆ ಬಂದಂತೆ ವಾಚಾಮಗೋಚರವಾಗಿ ಶಪಿಸಿ ಬಯ್ಯುವ ಪೂಜೆಯೂ ಸಾಗುತ್ತಿತ್ತು!
ಒಂದು ವರುಷವಾಯ್ತು. ಎರಡೂ ಆಯಿತು. ಕೆಲವರು ದೊಡ್ಡಣ್ಣ ಬದುಕಿದ್ದರೆ ಬರದೆ ಇರುತ್ತಿದ್ದರೇ? ಅವರು ಸತ್ತದ್ದೆ ನಿಜವಿರಬೇಕೆಂದು ಹೇಳಿ, ಉತ್ತರ ಕ್ರಿಯಾದಿಗಳನ್ನು ಮಾಡಲು ತಗಾದೆ ಮಾಡಲಾರಂಭಿಸಿದರು. ಕೆಲವು ಕಂದಾಚಾರದ ಸಂಪ್ರದಾಯಬದ್ದ ಮುದಿ ವಿಧವೆಯರಂತೂ ರಂಗಮ್ಮನ ಐದೆತನದ ಚಿಹ್ನೆಗಳನ್ನು ಸಹಿರಲಾರದೆ ಅಸಹನೀಯವಾಗಿ ಮಾತಾಡಿಕೊಳ್ಳಲಾರಂಭಿಸಿದರು. ರಂಗಮ್ಮನ ಹೃದಯಕ್ಕೆ ತನ್ನ ಗಂಡ ಸತ್ತದ್ದನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಅದು ಸಾಧ್ಯವಾಗಿದ್ದರೆ ಒಡನೆಯೆ ಅವಳು ತನ್ನ ಆಯ್ದೆತನದ ಚಿನ್ಹೆಗಳನ್ನು ವಿಸರ್ಜಿಸುವುದಕ್ಕೆ ಇತರರಿಗೆ ಅವಕಾಶಕೊಡುವುದಕ್ಕೆ ಮುನ್ನವೆ ಕೆರೆಯನ್ನೊ ನೇಣನ್ನೊ ಆಶ್ರಯಿಸಿರುತ್ತಿದ್ದಳು.
ಅವಳು ಆಶೆನಿರಾಶೆಗಳ ಉರಿಯಲ್ಲಿ ಬೆಂದು ಒಮ್ಮೊಮ್ಮೆ ತಲೆ ಕೆಟ್ಟಳಂತೆ ವರ್ತಿಸಲೂ ಪ್ರಾರಂಭಮಾಡಿದಳು. ಕೋಣೂರು ರಂಗಪ್ಪಗೌಡರು ತಮ್ಮ ತಾಯಿಯೊಡನೆ ಹಳೆಮನೆಗೆ ಬಂದು ನಾನಾ ವಿಧವಾಗಿ ಬೋಧಿಸಿ ತಂಗಿಯನ್ನು ತವರಿಗೆ ಕರೆದೊಯ್ದರು. ಅಲ್ಲಿ ಸ್ವಲ್ಪ ಕಾಲ ಶಮನವಾದಂತಿದ್ದ ಉನ್ಮಾದ ಇದ್ದಕ್ಕಿದ್ದಹಾಗೆ ಉಲ್ಬಣಗೊಂಡಿತು. ರಂಗಮ್ಮ ತಾನು ಗಂಡನ ಮನೆಗೆ ಹೋಗಬೇಕೆಂದೂ ತಮ್ಮ ಕೋಣೆಯಲ್ಲಿರುವ ತಿಮ್ಮಪ್ಪ ಕರೆಯುತ್ತಿದ್ದಾನೆಂದೂ ಹೇಳಿ ಹಳೆಮನೆಗೆ ಹಿಂತಿರುಗಿದಳು.
ದಿನದಿನದ ಕೆಲಸಕಾರ್ಯಗಳಲ್ಲಿ ತೊಡಗಿದರೆ ಮನಸ್ಸು ಒಂದು ಹಿಡಿತಕ್ಕೆ ಬರಬಹುದೆಂದು ಭಾವಿಸಿ, ಅದುವರೆಗೆ ಅವಳಿಗೆ ಮಾಡಗೊಡದಿದ್ದ ಅಡುಗೆ ಕೆಲಸವನ್ನೂ ಕೊಟ್ಟು ನೋಡಿದರು. ಆಗಲೂ ಮಂಜಮ್ಮಗೆ ಹೆದರಿಕೆ, ಎಲ್ಲಿ ಸೀರೆಗೆ ಬೆಂಕಿ ಹೊತ್ತಿಸಿಕೊಂಡೊ ಮೈಮೇಲೆ ಕುದಿ ಎಸರು ಹಾಕಿಕೊಂಡೊ ಅತ್ತಿಗೆಮ್ಮ ಅನಾಹುತಕ್ಕೆ ಒಳಗಾದಾರು ಎಂದು.
ದುಃಖಾತಿಶಯದಿಂದ ಮನಸ್ಸು ಸೀಳುಸೀಳಾಗಿ ಹೋದಂತಿದ್ದ ರಂಗಮ್ಮ ಕೆಲವು ದಿನ ಬುದ್ಧಿ ಸರಿಯಾದವಳಂತೆ ನಡೆದುಕೊಳ್ಳುತ್ತಿದ್ದು ಹಠಾತ್ತನೆ ಹುಚ್ಚುಹುಚ್ಚಾಗಿ ನಡೆದುಕೊಳ್ಳುತ್ತಿದ್ದರು. ಆದ್ದರಿಂದ ಯಾವುದರಲ್ಲಿಯೂ ಅವಳನ್ನು ನೆಚ್ಚುವಹಾಗಿರಲಿಲ್ಲ.ಸದಾ ಒಂದು ಕಣ್ಣು ಇಟ್ಟಿರಲೆಬೇಕಾಗುತ್ತಿತ್ತು ಅವಳ ಮೇಲೆ ಮನೆಯವರೆಲ್ಲ ಹಾಗೆ ಮಾಡುತ್ತಿದ್ದುದನ್ನು ಕಂಡು, ಎಲ್ಲರೂ ತನ್ನನ್ನು ಸಂಶಯದಿಂದ ನೋಡುತ್ತಿದ್ದಾರೆ ಎಂದು ಹೇಳಿಕೊಂಡು ಅಳುತ್ತಿದ್ದಳು, ಬುದ್ದಿ ಸರಿಯಾದ ಸ್ಥಿತಿಗೆ  ಬಂದ ಸಮಯಗಳಲ್ಲಿ. ತನ್ನ ಅವ್ವ ಏನಾದರೂ ಅಪಘಾತ ಮಾಡಿಕೊಂಡುಬಿಟ್ಟಾಳು ಎಂದು, ತಂದೆತಾಯಿಗಳಿಬ್ಬರನ್ನೂ ಕರೆದುಕೊಂಡು ತಬ್ಬಲಿಯಾಗುವ ಹೆದರಿಕೆಯಿಂದ ಧರ್ಮುವೂ ಗುಟ್ಟಾಗಿ ತನ್ನಮ್ಮನ ಚಲನವಲನಗಳನ್ನು ಕದ್ದು ನೋಡುತ್ತಿದ್ದುದನ್ನು ಕಂಡು ರಂಗಮ್ಮ, ತನ್ನ ಮಗನೂ ಇತರರಂತೆ ತನ್ನ ಮೇಲೆ ಕಣ್ಣುಕಾವಲು ಹಾಕಿದ್ದಾನೆ ಎಂದು, ಸಂಕಟಪಟ್ಟುಕೊಳ್ಳುತ್ತಿದ್ದಳು ಒಮ್ಮೊಮ್ಮೆ, ಕೆಟ್ಟ ಗಳಿಗೆಯಲ್ಲಿ ಹುಟ್ಟಿ ತಂದೆಯ ವಿಪತ್ತಿಗೆ ಅವನೇ ನಿಮಿತ್ತವಾದನೆಂದೂ ಅವನನ್ನು ಶಪಿಸುತ್ತಿದ್ದಳು. ಆದರೆ ಸಾಮಾನ್ಯವಾಗಿ ಧರ್ಮು ಮನೆಯಲ್ಲಿದ್ದದಾಗಲೆ ಅವಳ ಬುದ್ದಿ ಸ್ವಲ್ಪಮಟ್ಟಿಗಾದರೂ ಸಾಧಾರಣಸ್ಥತಿಗೆ ಬಂದು, ಮಂಜಮ್ಮಗೆ ಮನಸ್ಸಿನ ನೆಮ್ಮದಿ ಹೆಚ್ಚುತ್ತಿತ್ತು. ಆದ್ದರಿಂದಲೆ ಧರ್ಮು ಮನೆಗೆ ಬರುವುದನ್ನು ಮಂಜಮ್ಮ ಅಷ್ಟೊಂದು ಪ್ರೀತ್ಯಾದರಗಳಿಂದ ಹಾರೈಸುತ್ತಿದ್ದದ್ದು.
ಈ ಸಾರಿ ಧರ್ಮು ಮನೆಗೆ ಬಂದ ದಿನಕ್ಕೆ ಹಿಂದಿನ ದಿನದಲ್ಲಿ ರಂಗಮ್ಮ ತಾನೇ ಅಡುಗೆ ಒಗೆತನ ಮಾಡುತ್ತೇನೆ ಎಂದು ಕೇಳಿಕೊಂಡಾಗ ಮಂಜಮ್ಮ ಅತ್ತಿಗೆಯ ಮನಸ್ಸಿಗೆ ನೋವಾಗದಿರಲಿ ಎಂದು ಒಪ್ಪಿದಳು. ಎಷ್ಟೊಂದರೂ ರಂಗಮ್ಮನೇ ಮನೆಗೆ ನಿಜವಾದ ಯಜಮಾನಿಯಲ್ಲವೆ? ಬಹುಕಾಲ ಮನೆಗೆ ಹೆಗ್ಗಡತಿಯಾಗಿದ್ದವಳಿಗೆ, ಎಲ್ಲರ  ವಿಧೇಯತೆಯನ್ನೂ ಸ್ವೀಕರಿಸಿ ಅಧಿಕಾರ ನಡೆಸಿದ್ದವಳಿಗೆ, ತನ್ನನ್ನು ಸಂಪೂರ್ಣವಾಗಿ ಮೂಲೆಗೊತ್ತಿಬಿಟ್ಟಿದ್ದಾರೆ ಎಂಬ ಭಾವನೆ ಮೂಡುವಂತೆ ವರ್ತಿಸಿದರೆ ಹುಚ್ಚು ಇನ್ನೂ ಹೆಚ್ಚಾಗಿ ಕೆರಳಬಹುದೆಂದು ಸುಬ್ಬಣ್ಣಹೆಗ್ಗಡೆಯವರು ತಮ್ಮ ಕಿರಿಯ ಮಗಳಿಗೆ ಹೇಳಿದ್ದರು: “ಬುಚ್ಚೀ, ನಿನ್ನತ್ತಿಗೆಗೆ ತಲೆ ನೆಟ್ಟಗಾದಾಗ ಅವಳು ಹಿಂದೆ ಮಾಡುತ್ತಿದ್ದಂತೆ ಏನಾದರೂ ಕೆಲಸಗಿಲಸ ಮಾಡುತ್ತೇನೆಂದು ಮುಂದೆ ಬಂದರೆ ‘ಆಗದು’ ಅನ್ನಬೇಡ. ಸ್ವಲ್ಪ ಹುಷಾರಾಗಿ ನೋಡಿಕೋ ಅಷ್ಟೆ” ಎಂದು. ಅದರಂತೆ ಮಂಜಮ್ಮ ಅತ್ತಿಗೆಗೆ ಅಡುಗೆಯ ಕೆಲಸ ವಹಿಸಿದಳು, ತಾನು ಸಹಾಯಕಳಾಗಿ ಸೇವೆಮಾಡಲು ನಿಶ್ಚಯಿಸಿ.
ಅಡುಗೆಯ ಕೆಲಸವನ್ನೇನೊ ಹುಚ್ಚಿಲ್ಲದಿದ್ದಾಗ ಹೇಗೆ ಮಾಡುತ್ತಿದ್ದಳೋ ಹಾಗೆಯೆ ನೆರವೇರಿಸಿದ್ದಳು ರಂಗಮ್ಮ. ಆದರೆ ಗಂಡಸರು ಊಟಕ್ಕೆ ಕೂತಾಗ ಯಾವ ಪದಾರ್ಥವನ್ನೂ ತಿನ್ನಲಾಗಲಿಲ್ಲ! ಬಾಯಿಗೆ ಹಾಕಲಾರದಷ್ಟು ಉಪ್ಪಾಗಿಬಿಟ್ಟಿತ್ತು!  ರಂಗಮ್ಮನೆ ಕೈತಪ್ಪಿ ಎರಡು ಮೂರು ಸಾರಿ ಉಪ್ಪು ಹಾಕಿದ್ದಳೋ? ಅಥವಾ ಮಂಜಮ್ಮನೂ ಉಪ್ಪು ಹಾಕಿ, ಆಮೇಲೆ ಅದನ್ನರಿಯದೆ ರಂಗಮ್ಮನೂ ಇನ್ನಷ್ಟು ಉಪ್ಪು ಹಾಕಿದ್ದಳೋ? ಅಥವಾ ರಂಗಮ್ಮಗೆ ಆಗದಿದ್ದವರು ಯಾರಾದರೂ ಹಾಗೆ ಮಾಡಿದ್ದರೋ? ಅಥವಾ ರಂಗಮ್ಮಗೆ ಆಗದಿದ್ದವರು ಯಾರಾದರೂ ಹಾಗೆ ಮಾಡಿದ್ದಳೋ? ಅಂತೂ ಊಟವೆಲ್ಲ ಉಪ್ಪೋ ಉಪ್ಪಾಗಿತ್ತು!
ಸುಬ್ಬಣ್ಣಹೆಗ್ಗಡೆಯವರೇನೊ ತಾಳ್ಮೆಯಿಂದ ಎದ್ದು ಹೋಗಿ, ಮತ್ತೊಮ್ಮೆ ಅಡುಗೆಯಾದ ಮೇಲೆ ಬಂದು ಊಟಮಾಡಿದ್ದರು. ಆದರೆ ತಮ್ಮಪ್ಪಹೆಗ್ಗಡೆ, ಗದ್ದೆ ತೋಟಗಳಲ್ಲಿ ಆಳುಗಳೊಡನೆ ಇದ್ದು ಅವರಿಂದ ಕೆಲಸಮಾಡಿಸಿ ದಣಿದು ಹಸಿದು ಬಂದಿದ್ದವನು, ರೇಗಿ ಮಂಜಮ್ಮಗೆ ಬಾಯಿಗೆ ಬಂದಂತೆ ಬಯ್ದು, ತನಗೆ ಬಡಿಸಲು ಬಂದಿದ್ದ ರಂಗಮ್ಮ ಹಿಡಿದಿದ್ದ ಕೈಬಟ್ಟಲನ್ನು ನೂಕಿ ತಟ್ಟಿಹಾರಿಸಿ, ಅಡುಗೆಮನೆಯೆಲ್ಲ ಅನ್ನಪಲ್ಯವಾಗುವಂತೆ ಮಾಡಿ ಎದ್ದು ಹೋಗಿದ್ದನು. ರಂಗಮ್ಮ ಅತ್ತು ಕರೆದು ಊಟಮಾಡದೆ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಳು.
ಮರುದಿನ, ಅಂದರೆ ಧರ್ಮು ಕೋಣೂರಿನಿಂದ ಹಳೆಮನೆಗೆ ಐತನೊಡನೆ ಹೋದ ದಿನ, ಬೆಳಿಗ್ಗೆ. ರಂಗಮ್ಮ ಎಂದಿನಂತಲ್ಲದೆ ಬಹಳ ಮುಂಚೆಯೆ ಎದ್ದುಬಂದು ಅಡುಗೆಯ ಕೆಲಸಕ್ಕೆ ತೊಡಗಿದ್ದಳು. ಮಂಜಮ್ಮಗೆ ಸೋಜಿಗವಾಯಿತು, ನಿನ್ನೆ ತನ್ನ ಸಣ್ಣಸಣ್ಣಯ್ಯನ ಒರಟಾದ ವರ್ತನೆಗೆ ಒಳಗಾಗಿ, ಅವಮಾನಿತಳಾಗಿ, ಊಟಮಾಡದೆ ಹೋಗಿ, ಕೋಣೆ ಬಾಗಿಲು ಹಾಕಿಕೊಂಡು ಮಲಗಿ, ಎಷ್ಟು ಕರೆದರೂ ಅಂಗಲಾಚೆ ಬೇಡಿಕೊಂಡರೂ ಬಾಗಿಲು ತೆರೆಯದಿದ್ದ ಅತ್ತಿಗೆ ಇವತ್ತು ಹೊತ್ತಾರೆಮುಂಚೆ ಎದ್ದು ಅಡುಗೆ ಕೆಲಸಕ್ಕೆ ಬಂದದ್ದು ಅತ್ಯಂತ ಅಸಾಧಾರಣ ಸಂಗತಿಯಾಗಿ ಅದ್ಭುತಕ್ಕೆಣೆಯಾಗಿತ್ತು. ಆದರೆ ಏನು ಮಾಡುತ್ತಾಳೆ? ಬೇಡ ಎನ್ನುವ ಹಾಗಿಲ್ಲ. ಉಪ್ಪುಗಿಪ್ಪು ಹಾಕುವ ವಿಚಾರದಲ್ಲಿ ಎಚ್ಚರಿಕೆಯಿಂದ ಒಂದು ಕಣ್ಣಿಟ್ಟಿರಲು ನಿಶ್ಚಯಿಸಿ ಸುಮ್ಮನಾದಳು.
ರಂಗಮ್ಮ ಮರುದಿನವೂ ಅಡುಗೆ ಮಾಡಲು ಬಂದುದಕ್ಕೂ ಅಂತಹುದೇ ಕಾರಣವಾಗಿತ್ತು. ಪದಾರ್ಥಗಳಿಗೆ ಹಾಕಿದ್ದ ಉಪ್ಪು ಆ ಪರಿಮಾಣದಲ್ಲಿ ಹೆಚ್ಚಾದದ್ದು ಹೇಗೆ? ಎಂಬುದೆ – ಅವಳಿಗೂ ಬಿಡಿಸದ ಒಗಟಾಗಿತ್ತು! ಅದನ್ನು ಈ ದಿನ, ಎಚ್ಚರಿಕೆಯಿಂದ ಗಮನಿಸಿ, ಕಂಡುಹಿಡಿಯಬೇಕೆಂದು ಅವಳು ಕೆಲಸಕ್ಕೆ ಬಂದಿದ್ದಳು.
ಆದರೆ ತಿಮ್ಮಪ್ಪಹೆಗಡೆ ಆಳುಗಳನ್ನು ಕೆಲಸಕ್ಕೆ ಕರೆತರಲು ಹೋಗುವ ಮುನ್ನ ಗಂಜಿಯುಂಡು ಹೆಂಡ ಕುಡಿದು ಸಿದ್ಧನಾಗಲೆಂದು ಒಳಗೆ ಬಂದವನು ಅಡುಗೆ ಮಾಡಲು ತೊಡಗಿದ್ದ ‘ಅತ್ತಿಗೆ’ ಯನ್ನು ಕಂಡು ಕ್ರುದ್ಧನಾದನು. “ಬುಚ್ಚೀ!” ಎಂದು ತನ್ನ ತಂಗಿಯನ್ನು ಕೂಗಿ “ಏನು ನಮ್ಮನ್ನೆಲ್ಲ ಕೊಲ್ಲಿಸಬೇಕು ಅಂತಾ ಮಾಡೀಯಾ, ಅತ್ತಿಗೆ ಕೈಲಿ ಅಡಿಗೆ ಮಾಡಿಸಿ? ಅವರು ಅಡಿಗೆ ಮಾಡೋದು ಬ್ಯಾಡವೆ ಬ್ಯಾಡ! ಅಡಿಗೆ ಮನೆಗೆ ಕಾಲಿಡಕೂಡದು ಅವರು! ನಿನ್ನೆ ಉಪ್ಪು ಹಾಕಿದ್ರು; ಇವತ್ತು ವಿಷ ಹಾಕ್ತಾರೆ! ತಲೆ ಕೆಟ್ಟೋರ ಕೈಲೆಲ್ಲಾ ಅಡಿಗೆ ಮಾಡಿಸ್ತೀಯಲ್ಲಾ? ನಿನಗೂ ತಲೆ ಕೆಟ್ಟಿದೆಯೋ?” ಎಂದು ಕೂಗಾಡಿದನು.
ರಂಗಮ್ಮಗೂ ಸಿಟ್ಟುಬಂದು “ನಾಲಿಗೆ ಸೊಲ್ಪ ಹಿಡಿದು ಮಾತಾಡಿ! ತಲೆ ಕೆಟ್ಟಿದ್ದು ಯಾರಿಗೆ? ನನಗೋ ನಿಮಗೋ? ಏನು, ನಿಮ್ಮಣ್ಣಯ್ಯ ಸತ್ತೇಹೋದ್ರು ಅಂತಾ ಮಾಡಿ ಹೀಂಗೆಲ್ಲ ಮಾಡ್ತೀರೋ?  ನನಗೂ ಹಕ್ಕಿದೆ ಈ ಮನೇಲಿ? ನನಗೂ ಅಣ್ಣ ತಮ್ಮ ತಾಯಿ ತವರು ಇದೆ: ನನಗೂ ಒಬ್ಬ ಮಗ ಇದಾನೆ, ಮನೆಗೆ ಹಕ್ಕುದಾರನಾಗಿ!” ಎಂದು ಮಂಜಮ್ಮನೂ ಬೆರಗಾಗುವಂತೆ ಮಾತಾಡಿಬಿಟ್ಟಳು.
ತಿಮ್ಮಪ್ಪಹೆಗ್ಗಡೆ ಎರಗಿಬಂದು ರಂಗಮ್ಮನ ರಟ್ಟೆಹಿಡಿದೆಳೆದು, ಕೂದಲು ಹಿಡಿದು ಬೆನ್ನ ಮೇಲೆ ಹೆಗಲ ಮೇಲೆ ರೋಷಾಂಧನಾಗಿ ಗುದ್ದಿ ಗುದ್ದಿ, ತಡೆಯಲು ಬಂದ ತಂಗಿಯನ್ನೂ ತಳ್ಳಿ, ಅತ್ತಿಗೆಯನ್ನು ಅಡುಗೆ ಮನೆಯಿಂದ ಹೊರಗೆ ನೂಕಿದನು: “ಮುಂಡೆಯಾದ್ರೂ ಮುತ್ತೈದೆ ಹಾಂಗೆ ಮಾಡಿಕೊಂಡು ಮನೇಗೆಲ್ಲಾ ಅನಿಷ್ಟ ತರ್ತದೆ, ಹಾಳು ಶನಿ!” ಎಂದು ಶಾಪಹಾಕಿ, ತಾನೂ ಹೊರಹೊರಟನು.
ಮೊದಲೇ ದುಃಖದಿಂದ ಜರ್ಜರಿತಳಾಗಿದ್ದವಳು, ನಿದ್ದೆ ಊಟ ಇಲ್ಲದೆ ಕೃಶಳಾಗಿದ್ದವಳು. ರಂಗಮ್ಮ ತತ್ತರಿಸಿಹೋಗಿ ನೆಲಕ್ಕೆ ಬಿದ್ದಳು. ಮಂಜಮ್ಮ ಅವಳನ್ನು ಹಿಡಿದೆತ್ತಿ ಸಂತೈಸಿದಳು. ಮೆಲ್ಲಗೆ ಅವರ ಕೋಣೆಗೆ ಕರೆದೊಯ್ದು ಹಾಸಗೆಯ ಮೇಲೆ ಮಲಗಿಸಿದಳು.
ಅಷ್ಟರಲ್ಲಿ ಹೊರಗೆ ಹೋಗಿದ್ದ ತಿಮ್ಮಪ್ಪ ಹೆಗ್ಗಡೆ ಮತ್ತೆ ಬಂದು, ಮಂಜಮ್ಮನನ್ನು ಹೊರಗೆ ಕರೆದು, ಕೋಣೆಗೆ ಚಿಲಕ ಇಕ್ಕಿ, ಕೈಲಿ ತಂದಿದ್ದ ಬೀಗಹಾಕಿ, ಹೋಗುತ್ತಾ ಹೇಳಿದನು, ತನಗೆ ತಾನೆ ಹೇಳಿಕೊಳ್ಳುವಂತೆ, ಆದರೆ ಮಂಜಮ್ಮಗೆ ಕೇಳಿಸುವಂತೆ; “ಮತ್ತಿನ್ನೆಲ್ಲಾ ಬಾವಿ ಹಾರಿದ್ರೆ? ನನ್ನ ಮ್ಯಾಲೇಕೆ ಪುಕಾರು?”
ಸ್ವಲ್ಪ ಹೊತ್ತಾದ ಮೇಲೆ ತಿಮ್ಮಪ್ಪಹೆಗ್ಗಡೆ ಆಳುಗಳನ್ನು ಕರೆದುಕೊಂಡು ಕೆಲಸಕ್ಕೆ ಹೋದುದನ್ನು ಕಾದುನೋಡಿ, ಮಂಜಮ್ಮ ಅವನು ಗುಪ್ತ ವೆಂದು ಸಿಕ್ಕಹಾಕಿದ್ದ ಬೀಗದ ಕೈಯನ್ನು ಕಡಿನಕೋಡಿಯಲ್ಲಿ ಪತ್ತೆ ಹಚ್ಚಿ ತಂದು, ಅತ್ತಿಗೆಯ ಕೋಣೆಗೆ ಹಾಕಿದ್ದ ಬೀಗ ತೆಗೆದು ಬಾಗಿಲು ನೂಕಿದಳು. ಆದರೆ ಬಾಗಿಲು ತೆರೆಯಲಿಲ್ಲ. ಕರೆದಳು; ಬೇಡಿದಳು; ಹೊಟ್ಟೆಗೇನಾದರೂ ಸ್ವಲ್ಪ ತೆಗೆದುಕೊಳ್ಳಿ ಎಂದು ಅಂಗಲಾಚಿದಳು. ಆದರೂ ಬಾಗಿಲು ತೆಗೆಯಲಿಲ್ಲ. ಒಳಗಣಿಂದ ಭದ್ರವಾಗಿ ತಾಳಹಾಕಿಕೊಂಡಿದ್ದಳು ರಂಗಮ್ಮ. ಮತ್ತೆ ಮೊದಲಿನಂತೆ ಬೀಗ ಹಾಕಿ, ಬೀಗದ ಕೈಯನ್ನು ಇದ್ದಲ್ಲಿಯೇ ಇರಿಸಿದ್ದಳು ರಂಗಮ್ಮ. ಮತ್ತೆ ಮೊದಲಿನಂತೆ ಬೀಗ ಹಾಕಿ, ಬೀಗದ ಕೈಯನ್ನು ಇದ್ದಲ್ಲಿಯೇ ಇರಿಸಿದ್ದಳು ಮಂಜಮ್ಮ.
ಊಟದ ಹೊತ್ತು ಬಂದಾಗಲೂ ಹಾಗೆಯೆ ಮಾಡಿದ್ದಳು. ಆಗಲೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಅಪ್ಪಯ್ಯಗೆ ಹೇಳೋಣವೆಂದು ಜಗಲಿಗೆ ಹೋದಳು. ಸುಬ್ಬಣ್ಣ ಹೆಗ್ಗಡೆಯವರು ಅಲ್ಲಿರಲಿಲ್ಲ. ಅವರು ಊಟಕ್ಕೆ ಬಂದಾಗ ಹೇಳೋಣವೆಂದುಕಾದಳು. ಅವರು ಊಟಕ್ಕೂ ಬರಲಿಲ್ಲ. ಎಲ್ಲಿಗಾದರೂ ಕೆಲಸಕ್ಕೊ ನೆಂಟರ ಮನೆಗೊ ಹೋಗಿದ್ದಾರೆಂಬುದೂ ಅವಳಿಗೆ ತಿಳಿಯದು.ಮಂಜಮ್ಮನ ಕಳವಳ ಹೇಳತೀರದು! ಅತ್ತಿಗೆಮ್ಮನಿಗೆ ಏನಾದ್ರೂ ಮಂಡೆಗೂ ಪೆಟ್ಟು ತಗುಲಿದ್ದರೆ ಏನು ಗತಿ? ಅಥವಾ ಎಲ್ಲಿಯಾದರೂ – (ಮಂಜಮ್ಮನಿಗೆ ಆ ಯೋಚನೆ ಬಂದಕೂಡಲೆ ಮೈನಡುಗಿ ಹೋಗಿತ್ತು) – ಅತ್ತಿಗೆಮ್ಮ ಪ್ರಾಣ ತೆಗೆದುಕೊಂಡಿದ್ದರೆ? ತಿಮ್ಮಪ್ಪಹೆಗ್ಗಡೆ ಮಧ್ಯಾಹ್ನದ ಮೇಲೆ ಊಟಕ್ಕೆ ಬಂದಾಗ ಬೀಗ ತೆಗೆದು ಬಾಗಿಲು ತೆಗೆಯುವಂತೆ ಕೇಳಿಕೊಂಡಳು. ಅದರೆ ಅವನು “ಸತ್ತರೆ ಸಾಯಲಿ! ಶನಿ ತೊಲಗ್ತದೆ!” ಎಂದಿದ್ದನು. ಏನು ಮಾಡುವುದಕ್ಕೂ ತೋರದೆ ಮಂಜಮ್ಮ ತಾನೂ ಊಟಮಾಡಿರಲಿಲ್ಲ. ಒಮ್ಮೆ ಆ ಕೋಣೆಗೆ ಹೊರಗಣಿಂದ ಇದ್ದ ಒಂದೇ ಒಂದು ಬೆಳಕಂಡಿಯಲ್ಲಿ ನೋಡಲು ಪ್ರಯತ್ನಿಸಿದ್ದಳು. ಅದು ತುಂಬಾ ಚಿಕ್ಕದಾಗಿ, ಕಬ್ಬಿಣದ ಸಣ್ಣ ಸರಳುಗಳಿಗೆ ಬದಲಾಗಿ ದಪ್ಪವಾದ ಮರದ ರೀಪುಗಳನ್ನು ಹಾಕಿದ್ದರಿಂದ ಒಳಗಡೆಯ ಕತ್ತಲೆಯಲ್ಲಿ ಏನೂ ಸರಿಯಾಗಿ ಕಾಣಿಸುತ್ತಿರಲಿಲ್ಲ. ಕೆಲಸದ ಹುಡುಗಿ ಹಳೆಪೈಕದ ಹೂವಿಗೂ ಹೇಳಿದ್ದಳು. ಬೆಳಕಂಡಿಯಲ್ಲಿ ನೋಡುವುದಕ್ಕೆ. ಅವಳು ನೋಡಿದಂತೆ ಮಾಡಿ ಉದಾಸೀನದಿಂದ “ಏನೂ ಆಗಿಲ್ಲ ಕಣ್ರೊ. ಅವರಿಗೇನು? ಸುಮ್ಮನೆ ಮನಗಿಕೊಂಡಿದ್ದಾರೆ” ಎಂದು ಹೇಳಿದ್ದಳು. ಅವಳಿಗೂ ತಿಮ್ಮಪ್ಪಹೆಗ್ಗಡೆಗೂ ಇದೆ ಎಂದು ಹೇಳಲಾಗುತ್ತಿದ್ದ ರಹಸ್ಯ ಸಂಬಂಧದ ನೆನಪಾಗಿ, ಮಂಜಮ್ಮ ಜಿಗುಪ್ಸೆಯಿಂದ ಮತ್ತೆ ಅಡುಗೆಮನೆ ಒಳಗೆ ಹೋಗಿದ್ದಳು.
ಆದ್ದರಿಂದಲೆ, ಧರ್ಮು ಆಕಸ್ಮಾತ್ತಾಗಿ ಕೋಣೂರಿನಿಂದ ಬಂದದ್ದು ಮಂಜಮ್ಮಗೆ ಜೀವ ಬಂದಂತಾಗಿತ್ತು. ತಾನೊಬ್ಬಳೆ ಸಹಿಸಲಾರದೆ ಸಹಿಸಬೇಕಾಗಿದ್ದ ಮೂಕಯಾತನೆಗೆ ತನ್ನ ಪರವಾಗಿದ್ದ ಒಬ್ಬ ಪಾಲುಗಾರ ದೊರೆತ ಹಾಗಾಗಿತ್ತು. ಚಿಕ್ಕ ಹುಡುಗನಾಗಿದ್ದರೂ ಧರ್ಮು ಗಂಡಸಲ್ಲವೆ? ಅತ್ತಿಗೆಮ್ಮನ ಮಗನಲ್ಲವೆ? ಸಾಮಾನ್ಯವಾಗಿ, ಅವನು ಹಳೆಮನೆಯಲ್ಲಿ ಇದ್ದಾಗಲೆಲ್ಲ ಅವನ ಅವ್ವನ ಮನಸ್ಸು ಸ್ವಲ್ಪ ಪ್ರಶಾಂತವಾದಂತಾಗಿ ಹಿಡಿತದಲ್ಲಿರುತ್ತದೆಯಲ್ಲವೆ? ಅಲ್ಲದೆ ಧರ್ಮು ಮನೆಯಲ್ಲಿರುವಾಗಲೆಲ್ಲ ತಿಮ್ಮಪ್ಪಹೆಗ್ಗಡೆಯ ಧೂರ್ತವರ್ತನೆಯಲ್ಲಿಯೂ ತುಸು ಸಂಯಮ ಉಂಟಾಗುತ್ತಿದ್ದುದನ್ನೂ ಗಮನಿಸಿದ್ದಳಲ್ಲವೆ ಮಂಜಮ್ಮ?
*****

ಕಾಮೆಂಟ್‌ಗಳಿಲ್ಲ: