​ಔರಂಗಜೇಬನನ್ನು ೨೭ ವರ್ಷ ಉತ್ತರ ಹಿಂದೂಸ್ಥಾನದಿಂದ ದೂರವಿಡುವ ಸಂಭಾಜಿರಾಜ ! ಸಂಭಾಜಿರಾಜರು ತಮ್ಮ ಅಲ್ಪಾಯುಷ್ಯದಲ್ಲಿ ಮಾಡಿರುವ ಅಲೌಕಿಕ ಕಾರ್ಯಗಳ ಪರಿಣಾಮವು ಸಂಪೂರ್ಣ ಹಿಂದೂಸ್ಥಾನದ ಮೇಲಾಯಿತು. ಆದುದರಿಂದ ಪ್ರತಿಯೊಬ್ಬ ಹಿಂದೂ ಬಾಂಧವರು ಅವರ ಬಗ್ಗೆ ಕೃತಜ್ಞರಾಗಿರಬೇಕು. ಅವರು ಔರಂಗಜೇಬನ ಎಂಟು ಲಕ್ಷ ಸೈನ್ಯವನ್ನು ಧೈರ್ಯದಿಂದ ಎದುರಿಸಿದರು ಹಾಗೂ ಬಹಳಷ್ಟು ಮೊಘಲ್ ಸರದಾರರನ್ನು ಯುದ್ಧದಲ್ಲಿ ಸೋಲಿಸಿ ಅವರಿಗೆ ಓಡಲು ಭೂಮಿ ಸಾಲದಂತೆ ಮಾಡಿದರು. ಇದರಿಂದ ಔರಂಗಜೇಬನು ಮಹಾರಾಷ್ಟ್ರದಲ್ಲಿ ದೀರ್ಘಕಾಲದವರೆಗೆ ಹೋರಾಡುತ್ತಿದ್ದನು ಹಾಗೂ ಸಂಪೂರ್ಣ ಉತ್ತರ ಹಿಂದೂಸ್ಥಾನವು ಅವನ ದಬ್ಬಾಳಿಕೆಯಿಂದ ಮುಕ್ತಗೊಂಡಿತು. ಇದು ಸಂಭಾಜಿರಾಜರ ಅತ್ಯಂತ ಮಹತ್ವಪೂರ್ಣ ಕಾರ್ಯ ಎಂದು ಹೇಳಬಹುದು. ಅವರು ಒಂದು ವೇಳೆ ಔರಂಗಜೇಬನೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೆ, ಅಥವಾ ಅವನ ಗುಲಾಮಗಿರಿಯನ್ನು ಸ್ವೀಕರಿಸಿದ್ದರೆ, ಅವನು ಎರಡು-ಮೂರು ವರ್ಷಗಳಲ್ಲಿ ಪುನಃ ಉತ್ತರ ಹಿಂದೂಸ್ಥಾನಕ್ಕೆ ಹೋಗುತ್ತಿದ್ದನು; ಆದರೆ ಸಂಭಾಜಿರಾಜರ ತೀವ್ರ ಹೋರಾಟದಿಂದ, ೨೭ ವರ್ಷಗಳ ಕಾಲ ಔರಂಗಜೇಬನು ದಕ್ಷಿಣದಲ್ಲಿ ಸಿಕ್ಕಿಬಿದ್ದನು ಹಾಗೂ ಇದರಿಂದ ಉತ್ತರದಲ್ಲಿ ಬುಂದೇಲಖಂಡ, ಪಂಜಾಬ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಹಿಂದೂಗಳ ಹೊಸ ಅಧಿಕಾರದ ಉದಯವಾಗಿ ಹಿಂದೂ ಸಮಾಜಕ್ಕೆ ಸಂರಕ್ಷಣೆ ಲಭಿಸಿತು. 

 ಸಂಭಾಜಿರಾಜರ ಸಾಮರ್ಥ್ಯದ ಬಗ್ಗೆ ಪೋರ್ತುಗೀಜರಿಗಿದ್ದ ಭಯ! 

 ಸಂಭಾಜಿರಾಜರು ಗೋವಾದ ಮೇಲೆ ಆಕ್ರಮಣ ಮಾಡಿ ಧರ್ಮಾಂಧ ಪೋರ್ತುಗೀಜರನ್ನು ವಶಕ್ಕೆ ತೆಗೆದುಕೊಂಡರು. ಅವರೊಂದಿಗೆ ಒಪ್ಪಂದ ಮಾಡಿ ಗೋವಾದ ಅವರ ಧರ್ಮಪ್ರಸಾರಕ್ಕೆ ತಡೆಯೊಡ್ಡಿದ್ದರಿಂದ ಗೋವಾ ಪ್ರದೇಶದಲ್ಲಿನ ಹಿಂದೂಗಳ ರಕ್ಷಣೆಯಾಯಿತು ಎಂಬುದು ಮರೆಯಲು ಅಸಾಧ್ಯವಾದ ಸಂಗತಿ. ಪೋರ್ತುಗೀಜರಿಗೆ ಸಂಭಾಜಿರಾಜರ ಬಗ್ಗೆ ಬಹಳ ಭಯವಿತ್ತು. ಅವರು ಆಂಗ್ಲರಿಗೆ ಬರೆದ ಪತ್ರದಲ್ಲಿ ‘ಸದ್ಯದ ಪರಿಸ್ಥಿತಿಯಲ್ಲಿ ಸಂಭಾಜಿ ಮಹಾರಾಜರೇ ಸರ್ವಶಕ್ತಿಮಾನರಾಗಿದ್ದಾರೆ, ಇದು ನಮ್ಮ ಅನುಭವವಾಗಿದೆ !’ ಎಂದು ನಮೂದಿಸಿದ್ದಾರೆ. ಶತ್ರುವಿನ ಈ ಪ್ರಮಾಣ ಪತ್ರವು ಮಹಾರಾಜರ ಸಾಮರ್ಥ್ಯದ ಕಲ್ಪನೆ ನೀಡುತ್ತದೆ. 

ನಿರಾಧಾರ ಮತಾಂತರಗೊಂಡವರಿಗೆ ಅಧಾರ ಸಂಭಾಜಿ ಮಹಾರಾಜರು!

ಶಿವಾಜಿ ಮಹಾರಾಜರು ನೇತಾಜಿ ಪಾಲಕರರನ್ನು ಪುನಃ ಹಿಂದೂ ಧರ್ಮಕ್ಕೆ ಬರಮಾಡಿಕೊಂಡ ವಿಷಯ ಎಲ್ಲರಿಗೂ ತಿಳಿದಿದೆ; ಆದರೆ ಸಂಭಾಜಿರಾಜರು ತಮ್ಮ ರಾಜ್ಯದಲ್ಲಿ ‘ಶುದ್ಧೀಕರಣಕ್ಕಾಗಿ’ ಸ್ವತಂತ್ರ ವಿಭಾಗವನ್ನು ಸ್ಥಾಪಿಸಿರುವುದು ಮಹತ್ತ್ವದ ವಿಷಯವಾಗಿದೆ. ಹರಸೂಲ ಎಂಬ ಊರಿನ ಕುಲಕರ್ಣಿ ಮನೆತನದ ಬ್ರಾಹ್ಮಣನ ಕಥೆಯು ಸಂಭಾಜಿರಾಜರ ಇತಿಹಾಸದಲ್ಲಿ ಬರೆದಿಡಲಾಗಿದೆ. ಒತ್ತಾಯಪೂರ್ವಕವಾಗಿ ಮುಸಲ್ಮಾನನಾಗಿದ್ದ ಈ ಕುಲಕರ್ಣಿಯು ಹಿಂದೂ ಧರ್ಮಕ್ಕೆ ಮರಳಲು ಬಹಳ ಪ್ರಯತ್ನಿಸುತ್ತಿದ್ದನು; ಆದರೆ ಸ್ಥಳೀಯ ಬ್ರಾಹ್ಮಣರು ಅವನಿಗೆ ಸಹಾಯ ಮಾಡುತ್ತಿರಲಿಲ್ಲ. ಕೊನೆಗೆ ಈ ಬ್ರಾಹ್ಮಣನು ಸಂಭಾಜಿರಾಜರನ್ನು ಭೇಟಿಯಾಗಿ ತನ್ನ ವ್ಯಥೆಯನ್ನು ಅವರ ಎದುರು ಮಂಡಿಸಿದನು. ಮಹಾರಾಜರು ತಕ್ಷಣ ಅವನ ಶುದ್ಧೀಕರಣದ ವ್ಯವಸ್ಥೆ ಮಾಡಿ ಅವನಿಗೆ ಪುನಃ ಸ್ವಧರ್ಮದಲ್ಲಿ ಪ್ರವೇಶ ನೀಡಿದರು. ರಾಜನ ಔದಾರ್ಯದಿಂದ ಬಹಳಷ್ಟು ಹಿಂದೂಗಳು ಪುನಃ ಸ್ವಧರ್ಮಕ್ಕೆ ಮರಳಿದರು!

ಸಂಭಾಜಿ ರಾಜರ ಜ್ವಲಂತ ಧರ್ಮಾಭಿಮಾನ!

ಜನರಿಗೆ ಸಂಭಾಜಿ ರಾಜರ ಬಲಿದಾನದ ಇತಿಹಾಸದ ಸರಿಯಾದ ಮಾಹಿತಿ ಇಲ್ಲ. ಸಂಭಾಜಿರಾಜರು ಫೆಬ್ರವರಿ ೧, ೧೬೮೯ ರಂದು ಸಂಗಮೇಶ್ವರದಲ್ಲಿ ಕೆಲವರ ಆಸ್ತಿಯ ಬಗೆಗಿನ ಜಗಳದ ಬಗ್ಗೆ ತಿಳಿದುಕೊಳ್ಳುತ್ತಿದ್ದಾಗ, ಗಣೋಜಿ ಶಿರ್ಕೆಯ ಪಿತೂರಿಯಿಂದ ಬಂಧಿಸಲ್ಪಟ್ಟರು. ಆಗ ಮೋಘಲರು ಲಕ್ಷಾಂತರ ಸೈನಿಕರ ಬಂದೋಬಸ್ತಿನಲ್ಲಿ ರಾಜರ ಮೆರವಣಿಗೆ ಮಾಡಿದರು. ಅವರಿಗೆ ಶಾರೀರಿಕ ಹಾಗೂ ಮಾನಸಿಕ ಯಾತನೆ ನೀಡಿದರು. ವಿದೂಷಕನ ಬಟ್ಟೆ ಹಾಕಿಸಿ, ಕಟ್ಟಿಗೆಯ ಪಂಜರದಲ್ಲಿ ಕೈ ಕಾಲುಗಳನ್ನು ಸಿಕ್ಕಿಸಲಾಯಿತು. ಆ ಕಾಲದ ಚಿತ್ರಕಾರನು ಬಿಡಿಸಿದ ರಕ್ತದಿಂದ ತುಂಬಿದ ಸ್ಥಿತಿಯಲ್ಲಿರುವ ಸಂಭಾಜಿರಾಜರ ಚಿತ್ರವು ಕರ್ನಾವತಿ (ಅಹಮದಾಬಾದ) ನಗರ್ ಎಂಬಲ್ಲಿ ಸಂಗ್ರಹಾಲಯದಲ್ಲಿ ಇಂದಿಗೂ ಇದೆ. ಆ ಚಿತ್ರದಲ್ಲಿ ಅಸಂಖ್ಯ ಯಾತನೆಗಳನ್ನು ಸಹಿಸುವ ಈ ತೇಜಸ್ವಿ ಹಿಂದೂ ರಾಜನ ದೃಷ್ಟಿಯು ಅತ್ಯಂತ ಕ್ರುದ್ಧವಾಗಿದೆ, ಎಂಬುದು ಕಾಣುತ್ತದೆ. ಸಂಭಾಜಿರಾಜರ ಸ್ವಾಭಿಮಾನದ ಪರಿಚಯವು ಆ ಕ್ರುದ್ಧ ದೃಷ್ಟಿಯಿಂದಲೇ ತಿಳಿಯುತ್ತದೆ. ಫೆಬ್ರವರಿ ೧೫, ೧೬೮೯ ರಂದು ಪೇಡಗಾವನ ಕೋಟೆಯಲ್ಲಿ ಔರಂಗಜೇಬನನೊಂದಿಗೆ ರಾಜರ ಮುಖತ ಭೇಟಿ ಆಯಿತು. ‘ಕಾಫೀರರ ರಾಜ ಸಿಕ್ಕಿದನು’ ಎಂದು ಔರಂಗಜೇಬನು ನಾಮಾಜು ಪಠಿಸಿ ಅಲ್ಲಾನ ಉಪಕಾರವೆಂದು ತಿಳಿದು ಅತ್ಯಾನಂದ ವ್ಯಕ್ತಪಡಿಸಿದನು. ಆಗ ಔರಂಗಜೇಬನ ಪ್ರಧಾನ ಮಂತ್ರಿ ಇರವಲಾಸಖಾನನು ಸಂಭಾಜಿರಾಜರಿಗೆ ಶರಣಾಗಲು ತಿಳಿಸಿದನು. ಸಂತಪ್ತಗೊಂಡ ಸಂಭಾಜಿ ರಾಜರು ಔರಂಗಜೇಬನಿಗಾಗಿ 'ಮುಜರಾ' ಮಾಡಲು ನಿರಾಕರಿಸಿದರು. ಅದೊಂದು ನಿರ್ಣಾಯಕ ಕ್ಷಣವಾಗಿತ್ತು. ಮಹಾರಾಜರು ವೈಯಕ್ತಿಕ ಸುಖದ ಅಭಿಲಾಷೆಗಿಂತಲೂ ಹಿಂದುತ್ವದ ಅಭಿಮಾನವನ್ನು ಮಹತ್ತ್ವದ್ದೆಂದು ತಿಳಿದಿದ್ದರು. ತಮ್ಮ ತಂದೆ ನಿರ್ಮಿಸಿದ ಸ್ವಾಭಿಮಾನದ ಮಹಾನ ಪರಂಪರೆಯನ್ನು ಅವರು ಕಾಪಾಡಿದರು. ಇದರ ನಂತರ ಎರಡು ದಿನಗಳಲ್ಲಿ ಔರಂಗಜೇಬನ ಅನೇಕ ಸರದಾರರು ಅವರ ಮನ ಒಲಿಸಲು ಪ್ರಯತ್ನಿಸಿದರು. ಅವರಿಗೆ ‘ಮುಸಲ್ಮಾನರಾದರೆ ಜೀವದಾನ ಸಿಗುವುದು’, ಎಂಬುದಾಗಿ ಹೇಳಲಾಯಿತು; ಆದರೆ ಸ್ವಾಭಿಮಾನಿ ಸಂಭಾಜಿ ರಾಜರು ಸತತವಾಗಿ ಈ ಮುಸಲ್ಮಾನ ಸರದಾರರನ್ನು ಅವಮಾನಗೊಳಿಸಿದರು. 

ಧರ್ಮಕ್ಕಾಗಿ ಬಲಿದಾನ ನೀಡಿ ಇತಿಹಾಸದಲ್ಲಿ ಅಮರರಾದ ಸಂಭಾಜಿ ರಾಜರು ! 

ಕೊನೆಗೆ ಆ ಪಾಪೀ ಔರಂಗಜೇಬ ಅವರ ಕಣ್ಣು ಕುಕ್ಕಿಸಿದನು, ನಾಲಿಗೆ ಕತ್ತರಿಸಿದನು ಆದರೂ ಮೃತ್ಯುವು ರಾಜನನ್ನು ಸ್ಪರ್ಷಿಸಲಿಲ್ಲ. ದುಷ್ಟ ಮೊಘಲ ಸರದಾರರು ಅವರಿಗೆ ಪ್ರಚಂಡ ಯಾತನೆ ನೀಡಿದರು. ಅವರ ದಿವ್ಯ ಧರ್ಮಾಭಿಮಾನದಿಂದಾಗಿ ಅವರಿಗೆ ಈ ಎಲ್ಲ ಕಷ್ಟಗಳನ್ನು ಅನುಭವಿಸಲೇಬೇಕಾಯಿತು. ಮಾರ್ಚ ೧೨, ೧೬೮೯ ರಂದು ಯುಗಾದಿ ಹಬ್ಬವಿತ್ತು. ಹಿಂದೂಗಳ ಹಬ್ಬದಂದು ಅವರನ್ನು ಅಪಮಾನಗೊಳಿಸಲು ಮಾರ್ಚ ೧೧ ಫಾಲ್ಗುಣ ಅಮಾವಾಸ್ಯೆಯಂದು ಸಂಭಾಜಿರಾಜರ ಕೊಲೆ ಮಾಡಲಾಯಿತು. ಅವರ ಮಸ್ತಕವನ್ನು ಬರ್ಚಿಗೆ ಚುಚ್ಚಿ ಮೊಘಲರು ಅವರನ್ನು ಅಪಮಾನಗೊಳಿಸಿ ಮೆರವಣಿಗೆ ಮಾಡಿದರು. ಈ ರೀತಿ ಫೆಬ್ರುವರಿ ೧ ರಿಂದ ಮಾರ್ಚ ೧೧ ರವರೆಗೆ ಹೀಗೆ ೩೯ ದಿನಗಳ ಯಮಯಾತನೆಯನ್ನು ಸಹಿಸಿ ಸಂಭಾಜಿರಾಜರು ಹಿಂದುತ್ವದ ತೇಜವನ್ನು ಬೆಳೆಸಿದರು. ಧರ್ಮಕ್ಕಾಗಿ ಬಲಿದಾನ ಮಾಡಿದ ಈ ರಾಜನು ಇತಿಹಾಸದಲ್ಲಿ ಅಮರನಾದನು. ಔರಂಗಜೇಬನು ಮಾತ್ರ ರಾಜಧರ್ಮವನ್ನು ತುಳಿಯುವ ಇತಿಹಾಸದ ದರಬಾರಿನಲ್ಲಿ ಅಪರಾಧಿಯಾದನು. 

 ಸಂಭಾಜಿ ರಾಜರ ಬಲಿದಾನದ ನಂತರ ಮಹಾರಾಷ್ಟ್ರದಲ್ಲಿ ನಡೆದ ಕ್ರಾಂತಿ!
 ಸಂಭಾಜಿ ರಾಜರ ಈ ಬಲಿದಾನದಿಂದ ಸಂಪೂರ್ಣ ಮಹಾರಾಷ್ಟ್ರವು ಹೊತ್ತಿ ಉರಿಯಿತು ಹಾಗೂ ಪಾಪಿ ಔರಂಗಜೇಬನ ಜೊತೆ ಮರಾಠರ ನಿರ್ಣಾಯಕ ಹೋರಾಟ ಪ್ರಾರಂಭವಾಯಿತು. ಆ ಕಾಲವನ್ನು ‘ಹುಲ್ಲಿನ ಕಡ್ಡಿಗೆ ಬರ್ಚಿಗಳು ಹುಟ್ಟಿಕೊಂಡವು ಹಾಗೂ ಮನೆಮನೆಗಳು ಕೋಟೆಗಳಾದವು, ಮನೆ ಮನೆಯಲ್ಲಿ ಮಾತೆ ಭಗಿನಿಯರೆಲ್ಲರೂ ತಮ್ಮ ಗಂಡಸರಿಗೆ ರಾಜನ ಹತ್ಯೆಯ ಸೇಡು ತೀರಿಸಲು ಹೇಳತೊಡಗಿದರು’, ಎಂದು ವರ್ಣಿಸಿದ್ದಾರೆ. ಸಂಭಾಜಿ ಮಹಾರಾಜರ ಬಲಿದಾನದಿಂದ ಮರಾಠರ ಸ್ವಾಭಿಮಾನವು ಪುನಃ ಜಾಗೃತವಾಯಿತು. ಇದು ಮುನ್ನೂರು ವರ್ಷಗಳ ಹಿಂದಿನ ರಾಷ್ಟ್ರ ಜೀವನದಲ್ಲಿನ ಅತ್ಯಂತ ಮಹತ್ತ್ವದ ಅಂಗವಾಗಿತ್ತು. ಇದರಿಂದ ಇತಿಹಾಸದಲ್ಲಿ ತಿರುವು ಮೂಡಿತು. ಜನರ ಬೆಂಬಲದಿಂದ ಮರಾಠರ ಸೈನ್ಯ ಬೆಳೆಯುತ್ತ ಹೋಯಿತು ಹಾಗೂ ಸೈನ್ಯದ ಸಂಖ್ಯೆಯು ಎರಡು ಲಕ್ಷದವರೆಗೆ ತಲುಪಿತು. ಅಲ್ಲಲ್ಲಿ ಮೊಘಲರಿಗೆ ಪ್ರಖರವಾದ ವಿರೋಧ ಪ್ರಾರಂಭವಾಯಿತು ಹಾಗೂ ಕೊನೆಗೆ ಮಹಾರಾಷ್ಟ್ರದಲ್ಲಿಯೇ ೨೭ ವರ್ಷಗಳ ನಿಷ್ಫಲ ಯುದ್ಧದ ನಂತರ ಔರಂಗಜೇಬನ ಅಂತ್ಯವಾಯಿತು. ಮೊಘಲರ ಅಧಿಕಾರ ಕ್ಷೀಣಸಿ ಹಿಂದೂಗಳ ಶಕ್ತಿಶಾಲಿ ಸಾಮ್ರಾಜ್ಯವು ಉದಯಗೊಂಡಿತು.  

೨೭ ವರ್ಷ ಔರಂಗಜೇಬನ ಪಾಶವಿ ಆಕ್ರಮಣದ ವಿರುದ್ಧ ಮರಾಠರು ಮಾಡಿದ ಹೋರಾಟದಲ್ಲಿ ಹಂಬೀರರಾವ, ಸಂತಾಜಿ, ಧನಾಜಿಯಂತಹ ಅನೇಕ ಯೋಧರಿದ್ದರು; ಆದರೆ ಈ ಹೋರಾಟಕ್ಕೆ ತಿರುವು ಮೂಡಿದ್ದು ಸಂಭಾಜಿ ರಾಜರ ಬಲಿದಾನದಿಂದ ಆಗಿರುವ ಜಾಗೃತಿಯಿಂದಲೇ ಎಂಬುದನ್ನು ಮರೆಯುವಂತಿಲ್ಲ.





ಕಾಮೆಂಟ್‌ಗಳಿಲ್ಲ: