ಮಹಾಸಾಹಸಿ ಮ್ಯಾಕ್ಸ್ವೆಲ್

ಜೇಮ್ಸ್‌ ಮ್ಯಾಕ್ಸ್‌ವೆಲ್‌ ಮಹಾಸಾಹಸಿ. ವೀರಯೋಧರ ಮನೆತನದಲ್ಲಿ ಹುಟ್ಟಿದ್ದ. ಉಗಿಹಡಗ ಒಂದರಲ್ಲಿ ಚಾಲಕನಾಗಿ ಆತ ದುಡಿಯುತ್ತಿದ್ದ. ಟರ್ನರ್ ಎಂಬ ದಕ್ಷ ಅಧಿಕಾರಿ ಹಡಗದ ನಾಯಕನಾಗಿದ್ದ.
ಒಂದು ದಿನ ಹಡಗವು ಇಂಗ್ಲೆಂಡಿನಿಂದ ಐರ್ಲೇಂಡಿನ ಪಶ್ಚಿಮ ಕರಾವಳಿಯ ಕಡೆಗೆ ಸಾಗುತ್ತಿತ್ತು. ಸುಮಾರು ಎಂಭತ್ತರಷ್ಟು ಗಂಡಸರೂ ಹೆಂಗಸರೂ ಹಡಗದಲ್ಲಿದ್ದರು.
ಹಡಗು ಸಾಕಷ್ಟು ದೂರ ಸಾಗಿತ್ತು. ಆಗ ಫಕ್ಕನೆ ಮ್ಯಾಕ್ಸ್‌ವೆಲನಿಗೆ ಹೊಗೆಯ ವಾಸನೆ ಬರತೊಡಗಿತು. ಹಡಗದ ಯಾವುದೋ ಭಾಗದಲ್ಲಿ ಬೆಂಕಿ ಹತ್ತಿಕೊಂಡಿದೆ ಎನಿಸಿತು ಅವನಿಗೆ. ತಕ್ಷಣ ಹಡಗದ ನಾಯಕನಿಗೆ ವಿಷಯ ತಿಳಿಸಿದ. ತನಗೂ ಹೊಗೆಯ ವಾಸನೆ ಬರುತ್ತಿದೆ ಎಂದು ಹೇಳಿದ ನಾಯಕ. ಇತರರೂ ಅದಕ್ಕೆ ದನಿಗೂಡಿಸಿದರು. ಆದರೆ ಅಷ್ಟರಲ್ಲಿ ಹೊಗೆಯ ವಾಸನೆ ನಿಂತುಬಿಟ್ಟಿತು. ಸ್ವಲ್ಪ ಹೊತ್ತು ಹಾಗೇ ಕಳೆಯಿತು. ಕೆಲವೇ ಕ್ಷಣಗಳಲ್ಲಿ ಮತ್ತೊಮ್ಮೆ ಕಟ್ಟಿಗೆ ಸುಟ್ಟ ವಾಸನೆ! ತುಸು ಹೊತ್ತು ಅದು ಮುಂದುವರಿಯಿತು. ಇದ್ದಕ್ಕಿದ್ದಂತೆ ಅದು ಮತ್ತೆ ನಿಂತಿತು. ಎಲ್ಲೂ ಏನೂ ಆಗಿಲ್ಲ ಎನ್ನುವ ಭಾವನೆ ಅವರಲ್ಲಿ ಮೂಡಿತು. ನಿಶ್ಚಿಂತೆಯಿಂದ ಎಲ್ಲರೂ ನಿದ್ದೆ ಹೋದರು.
ಮಧ್ಯರಾತ್ರಿಯ ಸಮಯ ಮ್ಯಾಕ್ಸ್‌ವೆಲನಿಗೆ ಫಕ್ಕನೆ ಎಚ್ಚರಾಯಿತು. ಈಗ ಅವನಿಗೆ ಹೊಗೆಯ ವಾಸನೆ ಜೋರಾಗಿ ಬರತೊಡಗಿತು. ಹಡಗಿಗೆ ಬೆಂಕಿ ಬಿದ್ದಿದೆ ಎನ್ನುವುದು ಅವನಿಗೆ ಖಚಿತವಾಯಿತು. ಹಡಗದ ತಳ ಭಾಗದಲ್ಲಿ ಉರಿಯ ಕೆನ್ನಾಲಗೆ ಕಾಣಿಸಿಕೊಂಡಿತು.
ಮ್ಯಾಕ್ಸ್‌ವೆಲ್‌ ತಕ್ಷಣ ಹಡಗದ ನಾಯಕನನ್ನು ಎಬ್ಬಿಸಿದ. ಅವನಿಗೆ ವಿಷಯ ತಿಳಿಸಿ, ತನಗೇನು ಅಪ್ಪಣೆ ಎಂದು ಕಾತರದಿಂದ ವಿಚಾರಿಸಿದ.
“ಹಡಗು ಸಮುದ್ರ ಮಧ್ಯದಲ್ಲಿದೆ. ತೀರಪ್ರದೇಶ ದೂರದಲ್ಲಿದೆ. ಯಾವ ಸಂದರ್ಭದಲ್ಲೂ ಹಡಗನ್ನು ನಿಲ್ಲಿಸುವಂತಿಲ್ಲ. ಸಾಧ್ಯವಿದ್ದಷ್ಟು ಹಡಗನ್ನು ಮುನ್ನಡೆಸು” ಎಂದು ಆತ ಅಪ್ಪಣೆ ನೀಡಿದ.
ಮ್ಯಾಕ್ಸ್‌ವೆಲನಿಗೆ ಪರಿಸ್ಥಿತಿಯ ಅರಿವಾಯಿತು. ಯಾವ ಸಂದರ್ಭದಲ್ಲೂ ಸಾವು ಎದುರಾಗಬಹುದು. ಸಾಯುವುದು ತಾನೊಬ್ಬನೇ ಅಲ್ಲ. ಹಡಗದಲ್ಲಿದ್ದ ಎಂಬತ್ತು ಮಂದಿಯೂ ಸಾಯುತ್ತಾರೆ. ಅವರೆಲ್ಲರ ಪ್ರಾಣ ಉಳಿಸುವ ಹೊಣೆ ತನ್ನ ಮೇಲಿದೆ. ಹೀಗೆ ಯೋಚಿಸಿದ ಆತ ಬಾಗಿಲಿನತ್ತ ನೋಡಿದ. ಮತ್ತೆ ಕೈಮುಗಿದು ತಲೆಬಾಗಿ “ಓ ದೇವರೇ,ನನ್ನ ಕರ್ತವ್ಯ ನೆರವೇರಿಸಲು ನನಗೆ ಶಕ್ತಿ ಕೊಡು. ನನ್ನ ಅನಂತರ ನನ್ನ ಹೆತ್ತವರನ್ನೂ ಕುಟುಂಬವನ್ನೂ ರಕ್ಷಿಸು” ಎಂದು ದೇವರಿಗೆ ಮೊರೆಯಿಟ್ಟ.
ಹಡಗಿಗೆ ಹತ್ತಿದ ಬೆಂಕಿ ನಿಮಿಷ ನಿಮಿಷಕ್ಕೆ ದೊಡ್ಡದಾಗುತ್ತಿತ್ತು. ಒಂದರ ಅನಂತರ ಒಂದಾಗಿ ವಿವಿಧ ಭಾಗಗಳಿಗೆ ಅದು ಹರಡುತ್ತಿತ್ತು. ಮ್ಯಾಕ್ಸ್ವೆಲ್ ಅತ್ಯಂತ ವೇಗವಾಗಿ ಹಡಗು ನಡೆಸುತ್ತಿದ್ದ. ಆ ಹೊತ್ತಿಗಾಗಲೆ ಅಲ್ಲಿದ್ದ ಜನರೆಲ್ಲ ಎಚ್ಚರಗೊಂಡಿದ್ದರು. ತಮಗೊದಗಿರುವ ಅಪಾಯವನ್ನು ಅವರು ಮನಗಂಡಿದ್ದರು. ನಾಯಕನ ಸೂಚನೆಯಂತೆ ಅವರೀಗ ಹಡಗದ ಅತ್ಯಂತ ಸುರಕ್ಷಿತ ಭಾಗಕ್ಕೆ ಧಾವಿಸುತ್ತಿದ್ದರು. ಹಾಗೆ ಧಾವಿಸುವಾಗಲೂ ಕೆಲೊವರು ಕೂಗಾಡುತ್ತಿದ್ದರು, ಕೆಲವರು ದೇವರಿಗೆ ಮೊರೆಯಿಡುತ್ತಿದ್ದರು. ಮ್ಯಾಕ್ಸ್ ವೆಲ್‌ ಮಾತ್ರ ಚಾಲಕನ ಸ್ಥಾನದಲ್ಲಿ ಕುಳಿತೇ ಇದ್ದ. ಹಡಗುಒಂದೇ ಸವನೆ ಮುಂದೆ ಚಲಿಸುತಿತ್ತು. ಆದಷ್ಟು ಬೇಗನೆ ಅದನ್ನು ಸುರಕ್ಷಿತ ಸ್ಥಾನಕ್ಕೆ ತಲುಪಿಸುವುದೇ ಅವನ ಉದ್ದೇಶವಾಗಿತ್ತು. ಆದರೆ ಅಷ್ಟರಲ್ಲೇ ಉರಿಯ ಜ್ವಾಲೆಗಳು ಮೇಲೆ ಮೇಲೆ ಏರತೊಡಗಿದವು. ಅವನು ಕಾಲಿಡುವ ಜಾಗವೂ ಬಿಸಿಯೇರತೊಡಗಿತು. ಸುತ್ತ ಮುತ್ತಲೂ ಉರಿಯ ಬೇಗೆ ಹರಡಿತು. ನಿಮಿಷದಲ್ಲಿ ಅವನಿದ್ದ ಚಿಕ್ಕ ಕೋಣೆಗೂ ಬೆಂಕಿ ಹತ್ತಿಕೊಂಡಿತು. ಆದರೂ ಮ್ಯಾಕ್ಸ್ವೆಲ್ ಅತ್ತಿತ್ತ ನೋಡಲಿಲ್ಲ. ಕುಳಿತ ಜಾಗದಿಂದ ಒಂದಿಂಚು ಸಹ ಕದಲಲಿಲ್ಲ. ಅತ್ಯಂತ ವೇಗವಾಗಿ ಹಡಗನ್ನು ಮುನ್ನಡೆಸುತ್ತಲೇ ಇದ್ದ.
ಅಷ್ಟರಲ್ಲಿ ಹಡಗವು ತೀರಪ್ರದೇಶದ ಹತ್ತಿರಕ್ಕೆ ಬಂದಿತ್ತು. ಅಲ್ಲಿನ ಜನ ಬೆಂಕಿಹತ್ತಿ ಉರಿಯುತ್ತಿದ್ದ ಹಡಗನ್ನು ಕಂಡರು. ಒಡನೆ ಅವರು ದೊಡ್ಡ ದೊಡ್ಡ  ದೊಂದಿಗಳನ್ನು ಸಿದ್ಧಗೊಳಿಸಿದರು. ಕಡಲ ಕರೆಯ ಬಂಡೆಕಲ್ಲನ್ನು ಏರಿ, ಉರಿವ ದೊಂದಿಗಳನ್ನು ಎತ್ತಿ ಹಿಡಿದರು. ಹಡಗದಲ್ಲಿದ್ದವರಿಗೆ ತೀರಪ್ರದೇಶ ಹತ್ತಿರದಲ್ಲಿದೆ ಎನ್ನುವುದು ಈಗ ಖಚಿತವಾಯಿತು. ಬೆಳಕಿ ತೋರಿ ಬಂದ ಕಡೆ ಹಡಗು ಧಾವಿಸಹತ್ತಿತು.
ಮ್ಯಾಕ್ಸ್ವೆಲನ ಸುತ್ತಮುತ್ತ ಬೆಂಕಿ ಹಬ್ಬುತಿತ್ತು. ಹೊಗೆ ಆವರಿಸುತಿತ್ತು. ಅವನ ಪಾದಗಳ ಅಡಿಭಾಗದ ಚರ್ಮ ಸುಟ್ಟುಹೋಯಿತು. ಉರಿಯ ಬೇಗೆ, ಸುಟ್ಟ ನೋವು ಇವನ್ನು ಸಹಿಸುವುದೇ ಕಷ್ಟವೆನಿಸಿತು. ಆದರೂ ಅವನು ಕೂತಲ್ಲಿಂದ ಮಿಸುಕಾಡಲಿಲ್ಲ. ಕರ್ತವ್ಯವನ್ನು ಮರೆಯಲಿಲ್ಲ. ವೇಗವಾಗಿ ಹಡಗನ್ನು ಓಡಿಸುತ್ತಲೇ ಇದ್ದ. ಈಗ ಬೆಂಕಿ ಹಡಗದ ಮೇಲುಭಾಗವನ್ನೂ ಆವರಸಿತೊಡಗಿತು; ಇಂಜಿನಿನ ಕೊಠಡಿಗೂ ನುಗ್ಗಿತು. ಇಂಜಿನಿಗೆ ಧಕ್ಕೆ ಉಂಟಾಯಿತು. ಮರುಕ್ಷಣದಲ್ಲಿ ಹಡಗವು ಗಕ್ಕನೆ ನಿಂತುಬಿಟ್ಟಿತು. ಆದರೆ ಅಷ್ಟರಲ್ಲಿ ಅದು ಕಡಲ ಕರೆಯ ಬಂಡೆಕಲ್ಲಿಗೆ ತಾಗಿ ನಿಂತಿತ್ತು.
ಹಡಗು ನಿಂತುದೇ ತಡ, ಒಳಗಿದ್ದ ಜನ ಬಡಬಡನೆ ಕೆಳಗಿಳಿದರು. ಎಲ್ಲರೂ ಇಳಿದರೆಂಬುದು ಖಚಿತವಾದ ಬಳಿಕ ಮ್ಯಾಕ್ಸ್ವೆಲ್ ಇಳಿದು ಬಂದ. ಆಗಲೆ ಒಬ್ಬನು ಹಡಗದಲ್ಲಿ ತನ್ನ ಹಣದ ಪೆಟ್ಟಿಗೆ ಉಳಿದುಹೋಯಿತೆಂದು ಅಳತೊಡಗಿದ. ಇನ್ನೊಬ್ಬನು ತನ್ನ ಅಮೂಲ್ಯ ವಸ್ತುಗಳ ಗಂಟು ಅಲ್ಲಿದೆ ಎಂದು ಗೋಳಾಡಿದ. ತಕ್ಷಣ ಮ್ಯಾಕ್ಸ್ವೆಲ್‌ ಮತ್ತೊಮ್ಮೆ ಹಡಗದ ಮೇಲೇರಿದ. ಪ್ರಯಾಣಿಕರ ಪೆಟ್ಟಿಗೆಗಳನ್ನೆಲ್ಲ ಬೇಗಬೇಗನೆ ಕೆಳಗೆಸೆದ. ಮತ್ತೆ ಬೆಂಕಿಯ ಮಧ್ಯದಿಂದಲೆ ಓಡಿ ಬಂದು ಕೆಳಕ್ಕೆ ಜಿಗಿದ.
ಮ್ಯಾಕ್ಸ್ವೆಲ್‌ ಎಂಬತ್ತು ಜನರ ಜೀವ ಉಳಿಸಿದ್ದ. ಆ ಯತ್ನದಲ್ಲಿ ಅವನು ಜೀವ ಕಳೆದುಕೊಳ್ಳಲಿಲ್ಲ ನಿಜ. ಆದರೆ ಅವನ ಪಾದಗಳು ಸಂಪೂರ್ಣ ಸುಟ್ಟುಹೋಗಿದ್ದವು. ಕಾಲುಗಳು ಶಕ್ತಿಗುಂದಿದ್ದವು. ಕೆಲವು ಅಂಗಾಂಗಗಳು ನಿರುಪಯುಕ್ತವಾಗಿದ್ದವು. ಸುಂದರವಾದ ಅವನ ದೇಹ ವಿರೂಪಗೊಂಡಿತ್ತು. ದುಡಿವ ಶಕ್ತಿಯನ್ನೆ ಅವನು ಕಳೆದುಕೊಂಡಿದ್ದ.
ಆದರೆ ಅವನ ದಕ್ಷತೆ ಮತ್ತು ಕರ್ತವ್ಯ ಪ್ರಜ್ಞೆಗಳನ್ನು ಜಗತ್ತು ಕೊಂಡಾಡಿತು. ಹಡಗದ ಮಾಲಿಕರು ಅವನಿಗೆ ನಿವೃತ್ತಿ ವೇತನ ಕರುಣಿಸಿದರು. ಅವನ ಸಹಾಯಾರ್ಥ ದಾನಗಳೂ ದೇಣಿಗೆಗಳೂ ಹರಿದು ಬಂದವು. ಏನಾದರೇನು? ಅವನ ತ್ಯಾಗಕ್ಕೆ, ಅವನ ಸಾಹಸಕ್ಕೆ, ಅವನ ನಿಸ್ವಾರ್ಥ ಸೇವೆಗೆ ಬೆಲೆಕಟ್ಟುವುದು ಸಾಧ್ಯವಾದೀತೆ?
* * *

ಕಾಮೆಂಟ್‌ಗಳಿಲ್ಲ: