ಚಾವುಂಡರಾಯ (ಕ್ರಿ.ಶ.೯೪೦-೯೮೯)

ಚಾವುಂಡರಾಯನು ಸಾಹಿತ್ಯ ಮತ್ತು ಸಂಸ್ಕೃತಿಗಳ ಪೋಷಕನೆಂದು ಪ್ರಸಿದ್ಧನಾಗಿರುವ ಹಾಗೆ, ಸಾಹಿತಿಯೆಂದು ಹೆಸರುವಾಸಿಯಾಗಿಲ್ಲ. ಅವನು, ತನ್ನ ಹುಟ್ಟು ಮತ್ತು ಆಸಕ್ತಿಗಳಿಂದ ಜೈನಧರ್ಮಕ್ಕೆ ಸೇರಿದವನು. ಆದರೆ, ತಾನು ಮೊದಲು ಬ್ರಹ್ಮಕ್ಷತ್ರಿಯವಂಶಕ್ಕೆ ಸೇರಿದ್ದು, ಅನಂತರ ಕ್ಷತ್ರಿಯಧರ್ಮಕ್ಕೆ ಸೇರಿದೆನೆಂದು ಹೇಳಿಕೊಳ್ಳುತ್ತಾನೆ. ಯುದ್ಧತಂತ್ರದಲ್ಲಿ ಪರಿಣಿತನಾಗಿದ್ದ ಚಾವುಂಡರಾಯನು, ಮಾರಸಿಂಹ-,(೯೬೩-೯೭೪) ಮತ್ತು ನಾಲ್ಕನೆಯ ರಾಚಮಲ್ಲರ (೯೭೪-೯೯೯) ಆಳ್ವಿಕೆಯಲ್ಲಿ ಕಾರ್ಯನಿರತನಾಗಿದ್ದನೆಂದು ಹೇಳಲಾಗಿದೆ. ಕ್ರಿ.. ೯೯೯-೧೦೦೪ ಅವಧಿಯಲ್ಲಿ ರಾಜ್ಯಭಾರ ಮಾಡಿದ ರಾಚಮಲ್ಲ- ಅಥವಾ ರಕ್ಕಸಗಂಗನ ಕಾಲದಲ್ಲಿಯೂ ಸ್ವಲ್ಪ ಸಮಯ ಚಾವುಂಡರಾಯನು ಇದ್ದಿರಬಹುದೆಂಬ ಊಹೆಗೆ ಕೆಲವು ಪುರಾವೆಗಳಿವೆ. ರಾಜರುಗಳು, ದಕ್ಷಿಣ ಕರ್ನಾಟಕದ, ಪಶ್ಚಿಮ ತಲಕಾಡು ಗಂಗರ ಪ್ರಸಿದ್ಧವಾದ ವಂಶಕ್ಕೆ ಸೇರಿದವರುಚಾವುಂಡರಾಯನು, ಮಂತ್ರಿಯೂ ಸೇನಾನಾಯಕನೂ ಆಗಿದ್ದರಿಂದ, ಬಹಳ ಪ್ರಭಾವಶಾಲಿಯಾಗಿದ್ದನು. ರಾಜಾದಿತ್ಯ, ವಜ್ಜಳದೇವ, ಗೋವಿಂದ ಮುಂತಾದ ರಾಜರುಗಳೊಂದಿಗೆ, ಬಾಗೆಯೂರಕೋಟೆ, ಉಚ್ಚಂಗಿಕೋಟೆ, ಗೋಣಿಯೂರ ಬಯಲು ಇತ್ಯಾದಿ ಊರುಗಳಲ್ಲಿ, ಅವನು ನಡೆಸಿದ ಯುದ್ಧಗಳನ್ನು ಕುರಿತ ವಿವರಗಳು ಶಾಸನಗಳು ಹಾಗೂ ಸಾಹಿತ್ಯಕೃತಿಗಳಲ್ಲಿ ದಾಖಲೆಯಾಗಿವೆ. ಅವನು, ತನ್ನ ಪರಾಕ್ರಮದ ಕುರುಹಾಗಿ ರಣರಂಗಸಿಂಗ, ಸಮರ ಪರಶುರಾಮ ಮುಂತಾದ ಬಿರುದುಗಳನ್ನೂ ಪಡೆದಿದ್ದಾನೆ. ಆದರೂ, ಇಂಥ ದಾಖಲೆಗಳು ಚಾವುಂಡರಾಯನ ಪರಾಕ್ರಮದ ಪ್ರಶಂಸೆಯಲ್ಲಿ ನಿರತವಾಗಿರುವಷ್ಟು, ಯುದ್ಧಗಳ ಬಗೆಗಿನ ವಿವರಗಳನ್ನು ದಾಖಲೆ ಮಾಡುವ ಆಸಕ್ತಿ ತೋರಿಸುವುದಿಲ್ಲ.
 ಚಾವುಂಡರಾಯನ ಸಾಹಿತ್ಯಸೃಷ್ಟಿಯು, ಕ್ರಿ.. ೯೭೮ ರಲ್ಲಿ ರಚಿತವಾದಚಾವುಂಡರಾಯಪುರಾಣಕ್ಕೆಸೀಮಿತವಾಗಿದೆ. ಇದನ್ನುತ್ರಿಷಷ್ಠಿಲಕ್ಷಣಮಹಾಪುರಾಣವೆಂದೂ ಕರೆಯಲಾಗಿದೆ. ಇದು, ಪಂಡಿತರಲ್ಲದ ಸಾಮಾನ್ಯ ಜೈನರಿಗಾಗಿ ರಚಿತವಾಗಿರುವ ಪುಸ್ತಕ. ಇದರಲ್ಲಿ, ಇಪ್ಪತ್ನಾಲ್ಕು ಜೈನ ತೀರ್ಥಂಕರರುಗಳ ಜೀವನವನ್ನು ಸರಳವಾದ ಗದ್ಯದಲ್ಲಿ ನಿರೂಪಿಸಲಾಗಿದೆ. ವೃಷಭನಾಥನಿಂದ ಮೊದಲಾಗಿ ವರ್ಧಮಾನ ಮಹಾವೀರನವರೆಗೆ, ಎಲ್ಲ ತೀರ್ಥಂಕರರೂ ಇದರ ವ್ಯಾಪ್ತಿಯೊಳಗೆ ಬರುತ್ತಾರೆ. ಇಪ್ಪತ್ನಾಲ್ಕರ ಸಂಖ್ಯೆಗೆ, ಇತರ ಜೈನಮಹನೀಯರನ್ನೂ ಸೇರಿಸುವುದರಿಂದ ೬೩ ಜನರಾಗುತ್ತಾರೆ. ಚಾವುಂಡರಾಯಪುರಾಣವು, ಸಂಸ್ಕೃತದಲ್ಲಿ ಜಿನಸೇನಾಚಾರ್ಯ ಮತ್ತು ಗುಣಭದ್ರಾಚಾರ್ಯರು ರಚಿಸಿರುವ ಮಹಾಪುರಾಣ ಮತ್ತು ಪಂಪನ ಆದಿಪುರಾಣಗಳಿಂದ ಪ್ರಭಾವಿತವಾಗಿದೆ. ದೊಡ್ಡ ವಿದ್ವಾಂಸನಾಗಿದ್ದ ಚಾವುಂಡರಾಯನು, ಅನೇಕ ಸಂಸ್ಕೃತ ಮತ್ತು ಪ್ರಾಕೃತ ಕೃತಿಗಳಿಂದ, ಹಲವು ವಾಕ್ಯಗಳನ್ನು ಉದ್ಧರಿಸುತ್ತಾನೆ. ಚಾವುಂಡರಾಯಪುರಾಣದಲ್ಲಿ ಜೈನ ಮಾದರಿಯನ್ನು ಅನುಸರಿಸುವ ರಾಮಾಯಣದ ಕಥೆಯೂ ಸಂಗ್ರಹ ರೂಪದಲ್ಲಿ ಬಂದಿದೆ.
 ಅಲ್ಲೊಂದು ಇಲ್ಲೊಂದು ಪದ್ಯವು ಬಂದರೂ, ಕೂಡ ಚಾವುಂಡರಾಯಪುರಾಣವು ಕನ್ನಡದ ಮೊದಮೊದಲ ಗದ್ಯಕೃತಿಗಳಲ್ಲಿ ಒಂದು. ಅದು ತನ್ನ ಕಾಲದ ಒಂದು ಬಗೆಯ ಕನ್ನಡಕ್ಕೆ, ಕನ್ನಡಿ ಹಿಡಿಯುತ್ತದೆ. ಸಾಹಿತ್ಯದ ವಿದ್ಯಾರ್ಥಿಗೆ ಪುಸ್ತಕವು ಬಹಳ ನೀರಸವಾಗಿದೆಯೆಂದು ಹೇಳದೆ ವಿಧಿಯಿಲ್ಲ. ಅದು, ತಾನು ಹೇಳಬೇಕಾದ ಸಂಗತಿಗಳನ್ನು ಗದ್ಯೀಯ(ಪ್ರೊಸಾಯಿಕ್) ಎನ್ನಬಹುದಾದ ಶೈಲಿಯಲ್ಲಿ ಹೇಳುತ್ತದೆ.
 ಚಾವುಂಡರಾಯನು ಬರೆದಿರುವ ಇನ್ನೊಂದು ಕೃತಿಯು, ‘ಚರಿತ್ರಸಾರ’. ಅದು ಸಂಸ್ಕೃತದಲ್ಲಿದೆ. ಅದು ಜೈನಧರ್ಮಕ್ಕೆ ಸೇರಿದ ಸನ್ಯಾಸಿಗಳು ಮತ್ತು ಗೃಹಸ್ಥರ ಗುಣ-ಲಕ್ಷಣಗಳನ್ನೂ ವರ್ತನೆಯನ್ನೂ ವಿವರಿಸುವ ಪುಸ್ತಕ.
 ಹೀಗೆ, ಒಂದೆರಡು ಗ್ರಂಥಗಳನ್ನು ಬರೆದಿದ್ದರೂ ಚಾವುಂಡರಾಯನು ಪ್ರಸಿದ್ಧವಾಗಿರುವುದು, ಶ್ರವಣಬೆಳಗೊಳದಲ್ಲಿರುವ ಭಗವಾನ್ ಬಾಹುಬಲಿಯ ಏಕಶಿಲಾ ವಿಗ್ರಹದ ಸ್ಥಾಪನೆಗೆ ಕಾರಣನಾದವನೆಂದು. ಚಂದ್ರಗಿರಿ ಬೆಟ್ಟದ ಮೇಲೆ ನಿಂತಿರುವ ಭವ್ಯವಿಗ್ರಹದ ಪಾದಮೂಲದಲ್ಲಿರುವ ಶಾಸನಗಳು, ಸಂಗತಿಯನ್ನು ಖಚಿತಪಡಿಸುತ್ತವೆ. ಶಾಸನಗಳು ಮರಾಠೀ, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಇರುವುದು, ಕುತೂಹಲಕಾರಿಯಾದ ಸಂಗತಿ. ಚಾವುಂಡರಾಯನು ವಿಗ್ರಹದ ಪೂಜೆ ಮತ್ತು ನಿರ್ವಹಣೆಗಳಿಗೆ ಅಗತ್ಯವಾದ ದಾನ ದತ್ತಿಗಳನ್ನೂ ಉದಾರವಾಗಿ ನೀಡಿದನು. ಸೇವೆಯನ್ನು ನಂತರ ಬಂದಿರುವ ಅನೇಕ ಪುಸ್ತಕಗಳು ದಾಖಲಿಸಿವೆ ಮತ್ತು ಪ್ರಶಂಸಿವೆ.
 ರನ್ನ, ನಾಗಚಂದ್ರ, ನೇಮಿಚಂದ್ರಯತಿ ಮುಂತಾದ ಕವಿಗಳು ಚಾವುಂಡರಾಯನ ಸಾಹಿತ್ಯಪ್ರೇಮವನ್ನು ಪ್ರಶಂಸಿದ್ದಾರೆ.
 ಹೀಗೆ, ಮಧ್ಯಕಾಲೀನ ಕರ್ನಾಟಕದ ಇತಿಹಾಸದಲ್ಲಿ ರಾಜಕಾರಣಿ ಮತ್ತು ಕಲಾಪೋಷಕನಾಗಿ ಚಾವುಂಡರಾಯನ ಸ್ಥಾನವು ಭದ್ರವಾಗಿದೆ.

ಕಾಮೆಂಟ್‌ಗಳಿಲ್ಲ: