ಸ್ವಲ್ಪ ಹೊತ್ತಾದಮೇಲೆ ಕಣ್ಣಾಪಂಡಿತರು ಹೊರಗೆ
ಬಂದು ಕರೆದರು; “ಏ ಕುತ್ತೀ!” ಗುತ್ತಿ ಎಲೆಯಡಿಕೆಯನ್ನು ಯಾಂತ್ರಿಕವಾಗಿ ಎಂಬಂತೆ
ಜಿಗಿಯುತ್ತಾ ನೆಲದ ಕಡೆ ನೋಡುತ್ತಾ ಕುಳಿತವನು ತಲೆ ಎತ್ತಲಿಲ್ಲ. ಮರದಳಕಲಿನ ಎಳಬಿಸಿಲು
ಅವನ ಸುತ್ತಲೂ ಬಲೆಬಲೆ ನೆಯ್ದಿತ್ತು
ಅಲ್ಲಾಡುತ್ತಿದ್ದ ದವಡೆಯೊಂದು ವಿನಾ ವಿಗ್ರಹದೋಪಾದಿಯಲ್ಲಿ ಕುಳಿತಿದ್ದ ಹೊಲೆಯನನ್ನು
ನೋಡಿ ಮಲೆಯಾಳಿ ಪಂಡಿತನಿಗೆ ಸೋಜಿಗವಾಯಿತು. ಅರೆನಗೆಗೂಡಿ ಮತ್ತೊಮ್ಮೆ ತುಸು
ಗಟ್ಟಿಯಾಗಿಯೆ ಕೂಗಿದರು: “ಏ ನಾಯೀ ಕುತ್ತೀ!” ಆದರೂ ಗುತ್ತಿ ಮೊದಲಿನಂತೆಯೆ
ಕುಳಿತಿದ್ದುದನ್ನು ಕಂಡು ಪಂಡಿತರು ವಕ್ರವಕ್ರವಾಗಿ ದರಿಸಿಹೋಗಿದ್ದ ಕಲ್ಲು ಕಟ್ಟಣೆಯ
ಮೆಟ್ಟಲುಗಳನ್ನು ಕಾಲು ಜಾರೀತೆಂದು ನಿಧಾನವಾಗಿ ಎಚ್ಚರಿಕೆಯಿಂದ ಇಳಿಯತೊಡಗಿದರು.
ಗುತ್ತಿ ನೆಲದ ಕಡೆ ನೋಡುತ್ತಿದ್ದುದೇನೋ ಹೌದು. ಹೋದ ರಾತ್ರಿಯ ಮಾರಿ ಮಳೆಯಲ್ಲಿ
ತೇಲಿಬಂದು ಕುತ್ತುರೆಯಾದಂತಿದ್ದ ಹಲಸಿನ ತರಗಿನ ನಡುವೆ ಬಿದ್ದಿದ್ದ ಒಂದುಸ ಗಣಿ
ಮುದ್ದೆಯಿಂದ ಒಂದು ಓಡುಹುಳು ಸಣ್ಣದೊಂದು ಉಂಡೆಯನ್ನು ಅದನ್ನು ಹಿಂದುಮುಂದಾಗಿ ತನ್ನ
ಹಿಂಗಾಲುಗಳಿಂದ ನೂಕಿಕೊಂಡು ಹೋಗುತ್ತಿತ್ತು. ಅತ್ಯಮೂಲ್ಯವಾದ ಪದಾರ್ಥವನ್ನು
ಅತಿಪ್ರಯಾಸದಿಂದ ಸಾಗಿಸುವ ಸಾಹಸದಲ್ಲಿ ತೊಡಗಿದಂತಿತ್ತು ಅದರ ದೃಢಪ್ರಯತ್ನ. ಆ ಉಂಡೆ
ಒಂದು ಸಣ್ಣ ದಿಬ್ಬವನ್ನು ಹತ್ತಿ ಅದರ ನೆತ್ತಿಗೆ ಬಂದೊಡನೆ ಮತ್ತೆ ಕೆಳಕ್ಕುರುಳಿತು.
ಓಡುಹುಳು ಮತ್ತೆ ಅದನ್ನು ಬಳಿಸಾರಿ ತನ್ನ ಹಿಂಗಾಲುಗಳಿಂದ ತಬ್ಬಿಹಿಡಿದು ದಬ್ಬತೊಡಗಿತು.
ಹೀಗೆ ಒಂದೆರಡು ಗೇಣು ಹೋಗುವುದರೊಳಗಾಗಿ ನಾನಾ ಅಡಚಣೆಗಳಿಗೆ ಒಳಗಾದರೂ ಧೃತಿಗೆಡದೆ
ನಿರಾಶವಾಗದೆ ಕಿನಿಸಿಕೊಳ್ಳದೆ ಪ್ರಶಾಂತವಾಗಿಯೆ ತನ್ನ ಕೆಲಸವನ್ನು ಸಾಗಿಸುತ್ತಿತ್ತು.
ಗುತ್ತಿಯ ಕಣ್ಣೇನೋ ಅದನ್ನೆ ಕುತೂಹಲದಿಂದ ನೋಡುತ್ತಿತ್ತು. ಅವನ ಮನಸ್ಸಿನ ಹೊರ ಅಂಚು ಅದರ
ದೃಢತೆಯ ವಿಚಾರವಾಗಿ ಚಿಂತಿಸಿ ಶ್ಲಾಘಿಸುತ್ತಲೂ ಇತ್ತು. ಆದರೆ ಅಷ್ಟರಿಂದಲೆ ಅವನು ಆ
ಪರಿ ತಲ್ಲೀನನಾಗಿ ಕುಳಿತಿರಲು ಸಾಧ್ಯವಾಗುತ್ತಿರಲಿಲ್ಲ. ಕಣ್ಣಾಪಂಡಿತರು ಎರಡು ಸಾರಿ
ಕರೆದೂ ಓಕೊಳ್ಳದಿರುವಷ್ಟು. ಅವನ ಮನಸ್ಸಿನ ಕೇಂದ್ರವನ್ನೆಲ್ಲಾ ವ್ಯಾಪಿಸಿದ್ದ ವಿಚಾರ
ಬೇರೆಯಾಗಿತ್ತು. ಓಡುಹುಳುವಿನ ಸೆಗಣಿ ಉಂಡೆಯ ಸಾಹಸ ಒಳಗಿನ ಏಕಾಗ್ರತೆಗೆ ಆಲಂಬನರೂಪವಾದ
ಬಹಿರಿಂದ್ರಿಯ ಘಟನೆ ಮಾತ್ರವಾಗಿತ್ತು. ಅವನ ಅಂತಃಕರಣವನ್ನೆಲ್ಲ ಆಕ್ರಮಿಸಿದ್ದ
ವಿಚಾರವೆಂದರೆ ತಿಮ್ಮಿಯ ಅಪಹರಣ! ಅದರ ಸಾಧ್ಯಸಾಧ್ಯತೆ, ಅದರ ಅಪಾಯ, ಅದರಿಂದ
ತಪ್ಪಿಸಿಕೊಳ್ಳುವ ಉಪಾಯ, ತಿಮ್ಮಿಯ ಅವ್ವ ಸೇಸಿಯಿಂದ ಒದಗಬಹುದಾದ ಸಹಾಯ, ತಿಮ್ಮಿಯ ಅಪ್ಪ
ದೊಡ್ಡ ಬೀರನಿಂದ ಸಂಭವಿಸಬಹುದಾದ ಅಡಚಣೆ, ಎಲ್ಲಿಯಾದರೂ ಸಿಕ್ಕಿ ಬಿದ್ದರೆ ಗೌಡರಿಂದ
ತನಗೆ….
“ಏನೋ, ಕುತ್ತಿ, ಹೀಗೆ ಕೂತುಬಿಟ್ಟಿದ್ದೀಯಲ್ಲಾ?”
ಗುತ್ತಿ ದಿಗಿಲುಬಿದ್ದವನಂತೆ ಎದ್ದುನಿಂತು ಅಚ್ಚರಿಯಿಂದ “ಅಯ್ಯೊ ಯಾವ ಮಾಯಕದಾಗೆ ಬಂದುಬಿಟ್ರಿ ಈಟು ಹತ್ರ?” ಎಂದು ಹಲ್ಲುಬಿಟ್ಟನು.
“ಏನು ನೋಡುತ್ತಾ ಇದ್ದೆಯಲ್ಲಾ? ನಾನು ಎರಡು ಸಲ ಕೂಗಿದೆ; ನಿನಗೆ ಇತ್ತ ಧ್ಯಾಸವೇ ಇರಲಿಲ್ಲಾ?”
ಪಂಡಿತರು ಕೇಳಿದ ಪ್ರಶ್ನೆಯನ್ನೇ ಗಮನಿಸದೆ ಗುತ್ತಿ ಅವರ ಕೈಯಲ್ಲಿದ್ದ ಅಂತ್ರವನ್ನೆ
ಬಯಸಿ ನೋಡುತ್ತಾ ತನ್ನ ಎರಡು ಕೈಗಳನ್ನೂ ಅಂಜಲಿಬದ್ದವನ್ನಾಗಿ ಮಾಡಿ ಯಾಚಿಸುವಂತೆ
ನೀಡಿದನು. ಹಾಗೆ ಮಾಡುವಾಗ ಅವನ ಕೈಯಲ್ಲಿದ್ದ ಬಗನಿ ದೊಣ್ಣೆ ಕಂಕುಳು ಸೇರಿತ್ತು.
“ಕೈಯಲ್ಲಿ ಶರಣಾರ್ತಿ ಬಗಲಲ್ಲಿ ದೊಣ್ಣೆ” ಎಂಬ ಗಾದೆ ನಿನ್ನದು…. ಮತ್ತೆ ನಾನು
ಹೇಳಿದ್ದು ಮರೆಯಬೇಡ. ತಿಳಿಯಿತೇ?” ಎನ್ನುತ್ತಾ ಕಣ್ಣಾ ಪಂಡಿತರು ಅವನ ಕೈಗೆ ಅಂತ್ರ
ಹಾಕಿದರು, ಕೈ ಸೋಕೀತೆಂದು ಹೆದರಿ ತುಸು ಎತ್ತರದಿಂದಲೆ!
ತುಂಬ ಗೌರವದಿಂದಲೂ ಆ ಪವಿತ್ರ ವಸ್ತುವನ್ನು ಬೊಗಸೆ ಕೈಯಲ್ಲಿ ಅಪ್ಪಿಹಿಡಿದು, ಆ
ಜೋಡಿಸಿದ್ದ ಕೈಯಿಂದಲೆ ಸೊಂಟಬಗ್ಗಿ ನಮಸ್ಕಾರ ಮಾಡಿ, ಹೊರಟೇಬಿಟ್ಟನು ಗುತ್ತಿ. ಪಂಡಿತರು
“ಏನೋ ಅಮಸರ? ಓಡುತ್ತಿದ್ದೀಯಲ್ಲಾ?” ಎಂದು ಕೇಳಿದರೂ ನಿಲ್ಲದೆ “ಹೊತ್ತಾಯ್ತು ಕಣ್ರಾ;
ಬತ್ತೀನಿ” ಎನ್ನುತ್ತಾ ಬಿರುಬಿರನೆ ಕುಳ್ಳುಗಾಲು ಹಾಕಿದನು.
ತುಸು ವಯಸ್ಸಾಗಿದ್ದ ಕಣ್ಣಾಪಂಡಿತರು ಕುಳ್ಳಗೆ ಗಟ್ಟಿಮುಟ್ಟಾಗಿದ್ದ ತರುಣ
ಗುತ್ತಿಯನ್ನೆ ನೋಡುತ್ತಾ ನಗುತ್ತಾ ‘ಲವಡೀ ಮಗನಿಗೆ ಹೆಣ್ಣಿನ ಹುಚ್ಚು ಅಮರಿತ್ತಲ್ದಾ?”
ಎಂದುಕೊಂಡು ಮನೆಗೆ ಹಿಂತಿರುಗಿದರು.
ಗುತ್ತಿ ‘ಹೊತ್ತಾಯ್ತು ಕಣ್ರಾ’ ಎಂದು ಒಡೋಡುತ್ತಲೆ ಅವಸರವಸರವಾಗಿ ಅಂತ್ರ ದಾನಮಾಡಿದ
ಕಣ್ಣಾಪಂಡಿತರನ್ನು ಬೀಳುಕೊಂಡಿದ್ದರೂ ಹತ್ತುಮಾರು ಹೋಗುವುದರೊಳಗೆ ಅವನ ವೇಗ
ಕಡಿಮೆಯಾಗುತ್ತಾ ಬಂದು ಅಂತಕ್ಕಸೆಟ್ತಿಯ ಮನೆಯ ಸಮೀಪದಲ್ಲಿ ನಿಂತೇ ಹೋಯಿತು. ಅಷ್ಟು
ಹಿತಕರವಾಗಿ ಅವನ ಮೂಗನ್ನು ಆಹ್ವಾನಿಸುತ್ತಿತ್ತು ದೋಸೆಯ ವಾಸನೆ!” ಬೆಳಗಿನಿಂದ ಏನನ್ನೂ
ತಿಂದು ಕುಡಿದು ಮಾಡದೆ ಇದ್ದ ಅವನಿಗೆ ಆ ದೋಸೆಯ ಕಂಪಿನ ಪ್ರಲೋಭನೆಯನ್ನು ಮೀರಿ ಮುಂದೆ
ಅಡಿಯಿಡಲು ಆಗಲಿಲ್ಲ. ಇನ್ನೊಂದು ನಾಲ್ಕುಮಾಡು ಮುಂದುವರಿದಿದ್ದರೆ ಕೋಣೂರಿಗೆ
ಹೆದ್ದಾರಿಯಿಂದ ಅಗಚುವ ಕಾಲುದಾರಿ ಸಿಕ್ಕುತ್ತಿತ್ತು. ಕಾಲುನಡಿಗೆಯಲ್ಲಿ ಹೋಗುವವರೆಲ್ಲ
ಕೋಣೂರಿನ ಮೇಲೆಯೆ ಹಾದು ಹೋಗಬೇಕಾಗಿತ್ತು ಹಳೆಮನೆಗೆ. ಆದರೆ ಗುತ್ತಿಯ ಮನಸ್ಸು ಅಥವಾ
ಹೊಟ್ಟೆ ಅಥವಾ ಬಾಯಿ-ಅವನ ಮಟ್ಟಿಗೆ ಅವುಗಳಲ್ಲಿ ಅಂತಹ ಭೇದವೇನಿರಲಿಲ್ಲ!- ‘ಉಂದು ಚೂರು
ಬಾಯಿ ಹುಳ್ಳಗೆ ಮಾಡಿಕೊಂಡೇ ಹೋಗಾನ’ ಎಂದು ವಾದಿಸಿತು. ಮನೆಯ ಎದುರು ಹೆದ್ದಾರಿಯ ಅಂಚಿಗೆ
ಹಾಕಿದ್ದ ಬಿದಿರಡ್ಡೆಯ ಬೇಲಿಯನ್ನು ಉಣುಗೋಲಿನ ಬದಿಯೆ ಇದ್ದ ತಡಬೆಯ ಮೇಲೆ ಹತ್ತಿ ದಾಟಿ
ಮುಂಚೆಕಡೆಯ ಅಂಗಳಕ್ಕೆ ಹೋದನು.
ಅಂತಕ್ಕಸೆಟ್ತಿಯ ಮನೆ ಒಂದು ರೀತಿಯಲ್ಲಿ ಅರವಟ್ಟಿಗೆ, ಅನ್ನಸತ್ರ, ಭೋಜನಗೃಹ,
ಕಳ್ಳಂಗಡಿ, ಜೂಜಿನ ಕಟ್ಟೆ, ಆಟದಮನೆ, ಇತ್ಯಾದಿ ಇತ್ಯಾದಿ ಸಂಸ್ಥೆಗಳ ಸಂಸ್ಕಾರಗಳನ್ನೆಲ್ಲ
ಒಳಗೊಂಡ ಸಾಮೂಹಿಕ ಕ್ಷೇತ್ರವಾಗಿತ್ತು. ಆಗದವರು ಕೆಲವರು ಇನ್ನೂ ಏನೇನೋ ಆಗಿದೆ ಎಂದು
ಕಿವಿ ಮಾತು ಹೇಳುತ್ತಿದ್ದರು. ಆದರೆ ಗುತ್ತಿಯ ಮಟ್ಟಿಗೆ ಅದು ‘ಮೇಗ್ರೊಳ್ಳಿ ಹಲಸಿನ ಮರದ
ಮನೆ’, ಆ ಮನೆಯ ಎದುರಿಗಿದ್ದ ಹೆಬ್ಬಲಸಿನ ಮರವನ್ನು ಎಂದೋ ಕಡಿದುಹಾಕಿದ್ದರೂ ಅದು
ಕೀರ್ತಿಶೇಷವಾಗಿ ಆ ರೀತಿ ಹೆಸರುಳಿಸಿಕೊಂಡಿತ್ತು.
ಅವನು ಸಿಂಬಾವಿಯಿಂದ ಕೋಣೂರು, ಹಳೆಮನೆ, ಹೂವಳ್ಳಿ, ಬೆಟ್ಟಳ್ಳಿ ಮೊದಲಾದೆಡೆಗಳಿಗೆ
ಹೋಗಿ ಬರುವಾಗಲೆಲ್ಲ ‘ಹಲಸಿನಮರದ ಮನೆಯಲ್ಲಿ’ ತುಸುಕಾಲವಾದರೂ ತಂಗಿ ಬಾಯಾರಿಕೆಯನ್ನೊ
ಹಸಿವೆಯನ್ನೊ ಆಯಾಸವನ್ನೊ ಪರಿಹರಿಸಿಕೊಂಡು ಹೋಗುತ್ತಿದ್ದುದು ವಾಡಿಕೆ. ಬೆಲ್ಲ
ನೀರುಗಳನ್ನೊ, ಹೆಂಡ ಕರಿಮೀನು, ಚಟ್ನಿಯನ್ನೊ, ಕಳ್ಳು ಸ್ವಾರ್ಲು ಮೀನನ್ನೊ, ಕಡೆಗೆ
ಮಜ್ಜಿಗೆ ಉಪ್ಪಿನಕಾಯಿಯನ್ನೊ ಸವಿದೆ ಮುಂದುವರಿಯುತ್ತಿದ್ದನು. ಅದಕ್ಕೆ ಬದಲಾಗಿ ಅವನು
ಇತರ ಪ್ರಯಾಣಿಕರಂತೆ ದುಡ್ಡು ಕಾಸು ಕೊಡುತ್ತಿರಲಿಲ್ಲ. ಅವನ ಹತ್ತಿರ ಆ ಪದಾರ್ಥ
ಇರುತ್ತಿದ್ದುದೂ ಅಷ್ಟಕ್ಕಷ್ಟೇ! ಜಾತ್ರೆಗೊ ತೇರಿಗೊ ಹೋಗುವಾಗ ಹೆಗ್ಗಡೇರ ಹತ್ತಿರ
ಗೋಗರೆದು ಒಂದೆರಡಾಣೆ ದಕ್ಕಿಸಿಕೊಂಡರೆ ಅದೇ ಯಥೇಚ್ಛ. ಆದರೆ ಕಾಡಿನಲ್ಲಿ ಬರುವಾಗ, ಅದು
ಸಮಯವಾಗಿದ್ದರೆ, ಒಳ್ಳೆಯ ಎಲೆ ಕಳಲೆ ಮುರಿದು ತಂದುಕೊಡುತ್ತಿದ್ದನು. ಪಯಣ ಕೈಕೊಳ್ಳುವ
ಸಮಯದಲ್ಲಿ ತಾನು ಒಡ್ಡಿದ ಶೆಬೆಗೆ ಕಾಡುಕೋಳಿಯೊ ಚಿಟ್ಟಿಕೋಳಿಯೊ ಸಿಕ್ಕಿಬಿದ್ದರೆ ಅದನ್ನೂ
ಎಷ್ಟೋ ಸಾರಿ ತಂದುಕೊಟ್ಟಿದ್ದನು. ಅಣಬೆಯ ಕಾಲದಲ್ಲಿ ಅಕ್ಕಿಅಳಿಬಿ, ಹೆಗ್ಗಾಲಳಿಬಿ,
ಚುಳ್ಳಳಿಬಿ, ಕಾಸರ್ಕನಳಿಬಿ ಇವುಗಳನ್ನೂ ತಂದುಕೊಡುತ್ತಿದ್ದನು. ಒಮ್ಮೊಮ್ಮೆ ಇತರರ ಅಡಕೆ
ಬಾಳೆ ತೋಟಗಳಲ್ಲಿ ಹಾದು ಬೇಲಿಯ ತಡಬೆ ದಾಟಿ ಬರುವ ಪ್ರಮೇಯ ಒದಗಿದಾಗ ಬಾಳೆಯ ಗೊನೆಗಳನ್ನೂ
ತಂದುಕೊಡುತ್ತಿದ್ದುದೂ ಉಂಟು! ಅಲ್ಲದೆ ತಾನು ಅಲ್ಲಿಗೆ ಬಂದಾಗ ಅಂತಕ್ಕಸೆಟ್ತಿಯವರಿಗೆ
ಏನಾದರೂ ತುರುತ್ತಾಗಿ ಆಗಬೇಕಾದ ಸಣ್ಣಪುಟ್ಟ ಕೆಲಸಗಳನ್ನೂ ಮಾಡಿಕೊಡುತ್ತಿದ್ದನು.
ಅಂಗಳಕ್ಕೆ ಹೋದವನು ಮುಂದುಗಡೆ ನೇತುಹಾಕಿದ್ದ ಮಂತ್ರದ ತೆಂಗಿನಕಾಯಿಯನ್ನು ನೋಡಿ
ದೂರದಲ್ಲಿಯೆ ನಿಂತನು. ಹುಲ್ಲಿನ ಮಾಡು ಕುಸಿಯಾಗಿದ್ದುದರಿಂದ ಜಗಲಿ ಕಿರುಜಲಿಗಳಲ್ಲಿ
ಕವಿದಿದ್ದ ಅರೆ ಗತ್ತಲೆಯಲ್ಲಿ ಯಾರು ಯಾರೊ ಮೇಲುಜಾತಿಯವರು ಚಾಪೆಯ ಮೇಲೆ ಮಲಗಿಯೊ ಕಂಬಳಿಯ
ಮೇಲೆ ಕುಳಿತೋ ಮೂಲೆಯಲ್ಲಿ ಕರಿಹಿಡಿದು ಕೊಳೆಯಾಗಿದ್ದ ಬೆಂಚಿನ ಮೇಲೆ ಒರಗಿಯೊ
ಇದ್ದುದರಿಂದ ಅಲ್ಲಿ ತನಗೆ ಸ್ವಾಗತವಾಗಲಿ ಪ್ರವೇಶವಾಗಲಿ ಎಂದೆಂದೂ ದೊರೆಯದೆಂದು
ಹುಟ್ಟಿನಿಂದಲೆ ಅರಿತಿದ್ದ ಗುತ್ತಿ ಮಾಡು ಸಂದಿಯ ಕಡೆಯಿಂದ ಮೂಗುಮುಚ್ಚಿ ಹಿಡಿದುಕೊಂಡು
ಹಿತ್ತಲುಕಡೆಯ ಅಂಗಳಕ್ಕೆ ಬೇಗಬೇಗನೆ ಜಾರಿದನು. ಅಷ್ಟೊಂದು ಮಲಮೂತ್ರಾದಿ ಸಂಮಿಶ್ರಣದ
ದುರ್ಗಂಧವಿತ್ತು ಅಲ್ಲಿ.
ಹಿತ್ತಲುಕಡೆಯಿದ್ದ ಒಂದು ಹುಲ್ಲು ಜೋಪಡಿ ದನದ ಕೊಟ್ಟಿಗೆಯಾಗಿತ್ತು. ಅದಕ್ಕೆ
ಗೋಡೆಯಿರಲಿಲ್ಲ. ಕಂಬದಿಂದ ಕಂಬಕ್ಕೆ ಬಿದಿರಡ್ಡೆಗಳನ್ನು ಕಟ್ಟಿ ಬೇಲಿಯ ತರಹದ ಒಡ್ಡು
ಹಾಕಿದ್ದರು. ಬಡಕಲು ಬಡಕಲು ಆದ ಒಂದೆರಡು ದನಗಳೂ ಒಂದು ಸುಪುಷ್ಟವೆನ್ನಬಹುದಾದ ಎಮ್ಮೆಯೂ
ಇದ್ದುವು.
ಗುತ್ತಿಯ ಕಣ್ಣಿಗೆ ತಟಕ್ಕನೆ ಗೋಚರವಾದುದೆಂದರೆ ಕೊಟ್ಟಿಗೆಯ ತುಂಬಾ ತುಂಬಿದ್ದ
ಬೆಳಕು. ನೋಡುತ್ತಾನೆ: ಅದರ ಹುಲ್ಲು ಮಾಡೆಲ್ಲ ಹಾರಿಹೋಗಿದೆ! ಹಾರಿದ ಹುಲ್ಲು ಅಲ್ಲಿಯೆ
ಅಲ್ಲಲ್ಲಿ ಕೆದರಿ ಬಿದ್ದಿದೆ. ಕಳೆದ ರಾತ್ರಿಯ ಮಳೆಗಾಳಿಯ ಪ್ರಭಾವ ಸಿಂಬಾವಿ,
ಸೀತೂರುಗುಡ್ಡ, ಲಕ್ಕುಂದಗಳಲ್ಲಿ ಮಾತ್ರವಲ್ಲದೆ ಮೇಗರವಳ್ಳಿಯಲ್ಲಿಯೂ ಪೂರಾ ಕೆಲಸ ಮಾಡಿದೆ
ಎಂದುಕೊಂಡು, ತನ್ನ ಆಗಮನದ ಸೂಚನಾರ್ಥವಾಗಿ ಒಂದೆರಡು ಬಾರಿ ಕೆಮ್ಮಿದನು.
ಪರಿಣಾಮವಾಗಿ ಹಿತ್ತಲುಕಡೆ ಅಂಗಳಕ್ಕೆ ತೆರೆಯುವ ಬಾಗಿಲು ಸಶಬ್ದವಾಗಿ ಅಲ್ಲಾಡಲು
ಪ್ರಾರಂಭವಾಯಿತು. ಕಿರ್ರೊ ದಡಾರ್ ಬಡಾರ್ ಎಂದು ಹಿಂದಕ್ಕೂ ಚಲಿಸಿತು. ಬಳೆ ತೊಟ್ಟಿದ್ದ
ಬಿಳಿಯ ಕೈಯೊಂದು ಬಾಗಿಲನ್ನು ಸಶ್ರಮವಾಗಿ ಎತ್ತಿ, ನೂಕಿ, ಅಲುಗಿಸಿ, ದಬ್ಬುತ್ತಿದ್ದುದು
ಕಾಣಿಸಿತು. ಗುತ್ತಿ ನೋಡುತ್ತಿದ್ದಂತೆ ಅಂತಕ್ಕನ ಮಗಳು ಕಾವೇರಿ ಹೊರಗೆ ತಲೆ ಹಾಕಿ
ನೋಡಿದಳು.
ನೋಡಿ, ಗುರುತಿಸಿ, ನಗುಮೊಗಳಾಗಿ “ಇದೇನೋ, ಗುತ್ತೀ, ಇಷ್ಟು ಹೊತ್ತಾರೆ? ಎಲ್ಲಿಂದ
ಬಂದೆಯೋ? ಹಳೆಮನೆಯಿಂದಲೋ ಬೆಟ್ಟಳ್ಳಿಯಿಂದಲೋ?” ಎಂದು ಪ್ರಾಯದ ಹೆಣ್ಣಿನ ಇನಿದನಿಯಿಂದ
ಮುದ್ದಾಗಿ ಕೇಳಿದಳು. ಮತ್ತು, ತನಗಿಂತಲೂ ಕುಳ್ಳಾಗಿದ್ದರೂ ಬೆಳ್ಳಗೆ, ಜಟ್ಟಿಯಂತೆ
ದೃಢಕಾಯನಾಗಿ, ಲಕ್ಷಣವಾಗಿದ್ದ ಹೊಲೆಯನನ್ನು ಪ್ರಶಂಸನೀಯ ದೃಷ್ಟಿಯಿಂದ ಈಕ್ಷಿಸಿದಳು.
ಹೊಲೆಯನಾಗಿದ್ದುದರಿಂದಲೆ ಹಾಗೆ ಈಕ್ಷಿಸುವುದರಲ್ಲಿ ಕಾವೇರಿಗೆ ಅಭ್ಯಂತರವೇನೂ
ಕಾಣಲಿಲ್ಲ. ತನ್ನ ವರ್ಗಕ್ಕೆ ಸೇರದಿರುವ ಮತ್ತೊಂದು ಸ್ಫುರದ್ರೂಪಿ ಗಂಡುಪ್ರಾಣಿಯನ್ನು,
ಒಂದು ಮನೋಹರವಾದ ಪಕ್ಷಿಯನ್ನೊ ಒಂದು ಸುಲಕ್ಷಣವಾದ ಅಂಕದ ಕೋಳಿ ಹುಂಜನನ್ನೊ ಒಂದು
ಸುಪುಷ್ಟವಾದ ಸುಂದರ ಗೂಳಿಯನ್ನೊ ನೋಡುವುದರಲ್ಲಿ ತಪ್ಪೇನು? ಅಸ್ಪೃಶ್ಯನಾದ ಹೊಲೆಯ
ಮನುಷ್ಯಜಾತಿಯವನಾಗಿದ್ದರೂ ತನ್ನ ಜಾತಿಯೂ ಅಲ್ಲದೆ, ತನಗೆ ಸರಿಸಮಾನ ಜಾತಿಯೂ ಅಲ್ಲದೆ,
ಅತ್ಯಂತ ಕೊನೆಯ ಕೀಳುಜಾತಿಯವನಾಗಿದ್ದುದರಿಂದ ಹರೆಯರೆಯ ಕೊಂಬಿನ ಚೆಲುವಿನ ಹೋರಿಮಿಗವನ್ನು
ಮೆಚ್ಚಿ ನೋಡುವಂತೆ ನೋಡಿದಳು. ತನಗೂ ಅವನಿಗೂ ಮಾನವೀಯವಾದ ಗಂಡು-ಹೆಣ್ಣಿನ ಸಂಬಂಧ
ಭಾವನೆಯ ಸುಳಿವೂ ಸರ್ವಥಾ ಅಸಂಭವ, ನಿಸರ್ಗ ವಿರುದ್ಧ, ಅಸ್ವಾಭಾವಿಕ, ಅಸಾಧ್ಯ ಎಂಬ
ಪ್ರಚ್ಛನ್ನ ಧೈರ್ಯ ಅವಳ ನೋಟಕ್ಕೆ ನಿಸ್ಸಂಕೋಚತೆಯೀಯುವ ಧರ್ಮರಕ್ಷೆಯಾಗಿತ್ತು.
ಅದೇ ಕೆಚ್ಚಿನಿಂದಲೆ ಹೊಲೆಯನೂ ಸೆಟ್ಟರ ಹೆಣ್ಣಿನ ಚೆಲುವನ್ನು ನೋಡುತ್ತಾ
ಪ್ರಸನ್ನಮುಖಿಯಾಗಿ “ಸಿಂಬಾವಿಯಿಂದ್ಲೆ ಬಂದೆ ಕಣೊ; ರಾತ್ರಿ ಮಳೆ ಜಪ್ಪಿ, ಲಕ್ಕುಂದದಾಗೆ
ಉಳಿದಿದ್ದೆ. ಹಳೆಮನೆ ಹೆಗ್ಗಡೇರಿಗೆ ಕಾಗದ ಕೊಟ್ಟಾರೆ ನಮ್ಮ ಹೆಗ್ಗಡೇರು. ಅದಕ್ಕೆ
ಬರ್ದಂಡು ದ್ವಾಗ್ತಿದ್ದೀನಿ.”
“ಯಾರ ಹತ್ರಾನೆ ಪಟ್ಟಂಗ ಹೊಡಿತಿದ್ದೀಯಾ?” ಹೆಣ್ಣು ದನಿಯೊಂದು ಒಳಗಿನಿಂದ ನೀಳವಾಗಿ ಕೇಳಿಸಿತು, ತುಳುಭಾಷೆಯಲ್ಲಿ.
ಕಾವೇರಿ ಕನ್ನಡದಲ್ಲಿಯೆ ರಾಗವಾಗಿ ಕೂಗಿದಳು: “ಆ ನಾಯಿಗುತ್ತಿ ಬಂದಿದಾನೆ, ಅಬ್ಬೇ,
ಸಿಂಬಾವಿ ನಾಯಿಗುತ್ತಿ” ಎಂದವಳೆ ಗುತ್ತಿಯ ಕಡೆ ತಿರುಗಿ “ಹೌದಾ? ಎಲ್ಲಿ ಹೋಯಿತೋ ನಿನ್ನ
ಹುಲಿಯ?” ಎಂದು ಪ್ರಶ್ನಿಸಿ ಗಟ್ಟಿಯಾಗಿ ನಕ್ಕುಬಿಟ್ಟಳು.
“ಅದರದ್ದು ಇದೆಯಲ್ಲಾ ಹೋದಲ್ಲಿ ತನಕಾ ಬಾಲ ಮೂಸೋದು. ಲಕ್ಕುಂದದಾಗೆ ಸಣುಬಿನ ನಾಯಿ ಇತ್ತು ಅಂತ ಕಾಣ್ತದೆ. ಅಲ್ಲೇ ಕೂತು ಬಿಡ್ತು.”
ಗುತ್ತಿ ಇನ್ನೂ ಮಾತು ಮುಂದುವರಿಸುತ್ತಿದ್ದನೊ ಏನೊ ಅಷ್ಟರಲ್ಲಿ ಅಂಗಳದ ಮೂಲೆಯಲ್ಲಿ,
ಕೊಟ್ಟಿಗೆಯ ಹತ್ತಿರ ಇದ್ದ ನುಗ್ಗಿಮರದ ಬುಡದಲ್ಲಿ ಬಿದ್ದಿದ್ದ ದೊಡ್ಡ ಬೂದಿಯ
ರಾಸಿಯಲ್ಲಿ, ಬೂದಿಬುಕ್ಕನಾಗಿ ಬೂದಿಯೊಡನೆ ಅಭೇದವೆಂಬಂತೆ ಮಲಗಿದ್ದ, ಬಿಳಿಗೆಂಪು
ಬಣ್ಣಗೆಟ್ಟ ಮೂಳು ನಾಯಿಯೊಂದು ಕಂಯ್ಯಂಯ್ಯೊ ಕಂಯ್ಯಂಯ್ಯೊ ಎಂದು ಒರಲುತ್ತಾ
ಅಂಗಳವನ್ನೆಲ್ಲ ಒದ್ದೆ ಮಾಡುತ್ತಾ ತೆಣಿಯ ಮೇಲೆ ಸೌದೆ ಕೂಡಿದ್ದರ ಮೇಲೆ ಹಾಕಿದ್ದ
ಜಿಗ್ಗಿನಲ್ಲಿ ಹುದುಗಿತು. ಗುತ್ತಿ ನೋಡುತ್ತಾನೆ: ಹುಲಿಯ!
ನಿಡಿದಾಗ ಉಸಿರೆಳೆದು ಕೆನ್ನಾಲಗೆಯನ್ನು ಚಾಚಿ ಏದುತ್ತಿದ್ದುದರಿಂದ ತನ್ನನ್ನು
ಹುಡುಕಿಕೊಂಡು ಮೂಗಾಳಿಹಿಡಿದು ಲಕ್ಕುಂದದಿಂದ ಓಡುತ್ತಲೇ ಬಂದಿರಬೇಕು ಎಂದು ಗೊತ್ತಾಗಿ
ಗುತ್ತಿ: “ಅಕ್ಕಳ್ರೋ! ನೀವು ನೆನೀತಿದ್ದಹಾಂಗೆ ಹಾಜರು, ಹಡಬೇಗೆ ಹುಟ್ಟಿದ್ದು!” ಎಂದನು.
“ಹಿಡ್ಕೊಳ್ಳೋ! ಹಿಡುಕೊಳ್ಳೋ! ನಮ್ಮ ನಾಯೀನ ಮುರಿದು ಹಾಕೀತು?” ಎಂದು ಎಚ್ಚರಿಸಿದ ಕಾವೇರಿಗೆ
“ಇಲ್ಲ ಕಣ್ರೋ. ಹೆಣ್ಣುನಾಯೀನ ಹಾಂಗೆಲ್ಲಾ ಮುರಿಯಾದಿಲ್ಲ!” ಎಂದು ಗುತ್ತಿ ಹುಲಿಯನನ್ನು ಹತ್ತಿರಕ್ಕೆ ಕರೆದು ತಲೆ ಸವರತೊಡಗಿದನು.
“ಏನೆ ಅದು ಗಲಾಟೆ?” ಎನ್ನುತ್ತಾ ಹೊರಗೆ ಬಂದ ಅಂತಕ್ಕ ಮಗಳನ್ನು ತುಳುವಿನಲ್ಲಿ
ಗದರಿಸಿದಳು, ಸಂಗಡ ಯಾರೂ ಇರದಿರುವಾಗ ಹೊಲೆಯನೊಡನೆ ಅಷ್ಷು ದೀರ್ಘಕಾಲ ಮಾತಿನಲ್ಲಿ
ತೊಡಗುವುದು ಪ್ರಾಯಕ್ಕೆ ಬಂದ ಹೆಣ್ಣಿಗೆ ತರವಲ್ಲ ಎಂಬಂರ್ಥದಲ್ಲಿ. ಕಾವೇರಿಗೆ
ಮುಖಭಂಗವಾದಂತಾಗಿ ಮುನಿದ ಮೋರೆಯಲ್ಲಿ ಸರಕ್ಕನೆ ಒಳಗೆ ಹೋದಳು, ಬಾಯಲ್ಲಿ ಏನನ್ನೊ
ಮಿಟಿಮಿಟಿಗುತ್ತಾ.
ಅಂತಕ್ಕ ಬಂದವಳೆ ಕ್ಷಣಮಾತ್ರವೆಂಬಂತೆ ಸಮೀಕ್ಷಿಸಿ ನೋಡಿದಳು ಗುತ್ತಿಯ ಕೈಯಲ್ಲಿ
ಏನಾದರೂ ಕಾಣಿಕೆಯಿದೆಯೇ ಎಂದು. ನಿರಾಶಳಾದರೂ ಅದನ್ನು ತೋರಗೊಡದೆ ಹುಸಿನಗೆ ಬೀರಿ,
ಸಿಂಬಾವಿ ಹೆಗ್ಗಡಿತಮ್ಮನವರ ಯೋಗಕ್ಷೇಮ ವಿಚಾರಿಸಿದಳು. ಆ ಮಾತು ಈ ಮಾತು ಆಡಿ,
ಕೊಟ್ಟಿಗೆಯ ಕಡೆ ನೋಡುತ್ತಾ ಅರ್ಥಪೂರ್ಣವಾಗಿ ಕಿರುನಗೆದೋರಿ “ಒಳ್ಳೆ ಸಮಯಕ್ಕೆ
ಕರೆಸಿದಂತೆ ಬಂದೆ, ಮಾರಾಯ. ಅಷ್ಟೊಂದು ಉಪಕಾರ ಆಗುತ್ತದೆ, ನಮ್ಮ ಕೊಟ್ಟಿಗೆಯ….”
ಎನ್ನುತ್ತಿರುವಷ್ಟರಲ್ಲಿಯೆ
ಗುತ್ತಿಗೆ ಸರ್ವವೂ ವಿದಿತವಾಗಿ “ನೀವು ಹೇಳಬೇಕೆ? ಒಂದು ಒಪ್ಪೊತ್ತಿನಲ್ಲೆ ಹೊಚ್ಚಿ
ಕೊಡ್ತಿದ್ದೆ. ಆದರೆ ನಾನೀಗ ಹಳೆಮನೆ ಹೆಗ್ಗಡೇರಿಗೆ ಬೇಗ ಕಾಗ್ದ ಕೊಟ್ಟು, ಅಲ್ಲಿಂದ
ಬೆಟ್ಟಳ್ಳಿಗೆ ಹೋಗಬೇಕಾಗದೆ” ಎಂದು, ನಂಟರ ಮನೆಗೆ ಹೋಗುವಾಗ ತಾನು ಹಾಕಿಕೊಂಡಿರುವ ವಿಶೇಷ
ಉಡುಪಿನ ಕಡೆಗೆ ಅಂತಕ್ಕನ ಗಮನ ಸೆಳೆಯುವ ಸಲುವಾಗಿ ತಾನೆ ತನ್ನನ್ನು ಕೊರಳು ಬಾಗಿಸಿ
ನೋಡಿಕೊಂಡನು. ಹಾಗೆ ‘ದರೋಬಸ್ತಾ’ಗಿ ಇರುವಾಗ ಹುಲ್ಲು ಹೊದಿಸುವ ಕೈಕೆಲಸ ಮಾಡುವುದಾದರೂ
ಹೇಗೆ?
“ನಿನ್ನೆ ಬೆಟ್ಟಳ್ಳಿ ದೊಡ್ಡಬೀರ ಬಂದಿದ್ದ ಕಣ್ರೋ. ನಿನ್ನ ಮೇಲೆ ಬಹಳ ಸಿಟ್ಟಾಗಿದ್ದ.”
ಗುತ್ತಿಗೆ ಮೈಮೇಲೆ ಬಿಸಿನೀರು ಹೊಯ್ದಂತಾಯ್ತು. ತಟಸ್ಥವಾಗಿ ಬೇಸರಿನ ಮಟ್ಟಕ್ಕೂ
ಇಳಿದಿದ್ದ ಆ ಮನೆ, ಅಂಗಳ, ಕೊಟ್ಟಿಗೆ, ನಾಯಿ, ಕೋಳಿ ಎಲ್ಲ ಇದ್ದಕ್ಕಿದ್ದ ಹಾಗೆ ಉಜ್ವಲ
ಕುತೂಹಲ ವಸ್ತುಗಳಾಗಿ ಪರಿಣಮಿಸಿಬಿಟ್ಟವು.
ಸ್ವಲ್ಪ ಜೋರಾಗಿ ಉಸಿರುಬಿಡುತ್ತಲೇ ಕೇಳಿದ “ಯಾಕೆ ಬಂದಿದ್ದ? ಏನು ಹೇಳಿದ?”
“ಅವನ ಮಗಳನ್ನು ನೀನು ಕೇಳುತ್ತಿದ್ದೀಯಂತೆ. ನಿಮ್ಮ ಹೆಗ್ಗಡೇರೂ ನಿನ್ನ ಹಿಂದುಗಡೆ
ನಿಂತುಕೊಂಡು ಹುನಾರು ಮಾಡುತ್ತಿದ್ದಾರಂತೆ. ‘ಅವರಿಗೇನು? ದುಡಿಯುವುದಕ್ಕೆ ಒಂದು
ಹೆಣ್ಣಾಳು ಸಿಗುತ್ತದೆಯಲ್ಲಾ? ಅಷ್ಟೆ!’ ಅಂದ. ಬೆಟ್ಟಳ್ಳಿ ಗೌಡರು ಮಾತ್ರ ಬಿಲ್‌ಕುಲ್
ಆಗದು ಅಂತಾರಂತೆ. ‘ನಮ್ಮ ಕೇರಿ ಹೆಣ್ಣುಗಳನ್ನು ಹೊರಗಡೆ ಕೊಡುವುದೆಂದರೇನು? ನಾನು
ಅಪ್ಪಗೆ ಹುಟ್ಟಿದ ಮಗಾ ಆದರೆ ಎಂದಿಗಾದ್ರೂ ಬಿಟ್ಟೇನೆ? ನೀನು ನಿನ್ನ ಅಪ್ಪ ನಿನ್ನ ಅಜ್ಜ
ಎಲ್ಲ ಮಾಡಿರುವ ಸಾಲ ಬಿದ್ದಿದೆಯಲ್ಲಾ ಅದನ್ಯಾರೋ ತೀರಿಸೋರು?’ ಎಂದು ಉರಿದು ಬಿದ್ದರಂತೆ.
ಅದಕ್ಕೇ ದೊಡ್ಡಬೀರ ಗಂಡುಗಳು ಇವೆಯಂತೆ. ಕರಿಮೀನು ಸಾಬರ ಮಳಿಗೇಲಿ ಏನೇನೊ ಯಾಪಾರ
ಮಾಡಕ್ಕೆ ಬಂದಿದ್ದನಂತೆ, ಅವರ ಗೌಡ್ರಿಂದ ಸಾಬರಿಗೆ ಕಾಗ್ದ ತಗೊಂಡು.”
ಆಲೈಸುತ್ತಾ ನಿಂತಿದ್ದ ಗುತ್ತಿ ಬಹಳ ದಣಿದವನಂತೆ ಸುಯ್ದು ನೆಲ ನೋಡುತ್ತಾ ನಿಂತನು.
ಮತ್ತೆ ತಟಕ್ಕನೆ ತಲೆಯೆತ್ತಿ ‘ಹಂಗಾದ್ರೆ ನಾ ಹೋಗಿ ಬರ್ತೀನಿ’ ಎಂದವನೆ
ಬಗನಿದೊಣ್ಣೆಯನ್ನು ಬಗಲಿಗೆ ಹಾಕಿಕೊಂಡು ತಿರುಗಿದನು.
“ನಿಲ್ಲೊ! ನಿಲ್ಲೊ! ಹೊತಾರೆ ಬಂದವನ್ನ ಬರೀ ಹೊಟ್ಟೇಲಿ ಕಳಿಸಬಾರದು. ಪಾಪ ಬರ್ತದೆ”
ಎಂದು ಅಂತಕ್ಕ ಒಳಗೆ ನಡೆದು, ಬಾಳೆಯ ಕೀತಿನಲ್ಲಿ ಸ್ವಲ್ಪ ತಂಗಳನ್ನೂ ಕರಿಮೀನು
ಚಟ್ನಿಯನ್ನೂ ಹಾಳೆಕೊಟ್ಟೆ ದೊನ್ನೆಯಲ್ಲಿ ಹೆಂಡವನ್ನೂ ತಂದುಕೊಟ್ಟಳು. ನಡೆದು ದಣಿದು
ಹಸಿದಿದ್ದ ಹೊಲೆಯ ಅದನ್ನೆಲ್ಲ ಬೇಗಬೇಗನೆ ಪೂರೈಸಿ, ಅಲ್ಲಿಂದ ಹೊರಟನು. ಅವನು ತಿಂದು
ಕುಡಿಯುವುದನ್ನೆ ನೋಡುತ್ತಿದ್ದ ಹಲಿಯ ಅವನು ಎಸೆದ ಬಾಳೆಯ ಕೀತನ್ನು ನೆಕ್ಕಿಯೆ
ನೆಕ್ಕಿತು, ಅಲ್ಲಿ ಏನೂ ಇರದಿದ್ದರೂ, ಬರಿಯ ಕಂಪಿನ ರುಚಿಗಾಗಿ! ದೋಸೆಯ ವಾಸನೆಯಿಂದಲೆ
ಆಕೃಷ್ಟನಾಗಿ ಅಂತಕ್ಕನ ಮನೆಗೆ ನುಗ್ಗಿದ್ದ ಗುತ್ತಿಗೂ ಆವೂತ್ತು ದೊರತಿದ್ದುದೆಲ್ಲಾ
ದೋಸೆಯ ವಾಸನೆ ಮಾತ್ರವೆ ತಾನೆ?
*******
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ