ಮಗನ ಕಣ್ಣಿನಲ್ಲಿ ನೀರು ತುಂಬಿದ್ದು ಕಂಡು
ಸುಬ್ಬಣ್ಣ ಹೆಗ್ಗಡೆಯವರ ಮನಸ್ಸು ಸ್ವಲ್ಪ ಮೃದುವಾಗಿತ್ತು. ಆದರೆ ಅವನು ತಟಕ್ಕನೆ
ಬೆನ್‌ದಿರುಗಿದ ಪ್ರತಿಭಟನಾ ಭಂಗಿಯನ್ನೂ ಹೊಲೆಗೇರಿಯ ಕಡೆಗೆ ರೋಷ ರಭಸದಿಂದ ಹೋದುದನ್ನೂ
ಕಂಡು, ಸಿಗ್ಗುರಿದು, ಮುದುಕನ ಕುಳ್ಳು ಮೈ ಕಂಪಿಸಿತು. ಕೃತನವಾಗಿ ಗಟ್ಟಿಯಾಗಿ, ಕೆಮ್ಮ,
ಅವನು ಹೋದ ಕಡೆಗೆ ನೋಡುತ್ತಾ ಕ್ಯಾಕರಿಸಿ ತುಪ್ಪಿದರು. ಯೌವನದಲ್ಲಿ ದರ್ಪದಿಂದ ಬಾಳು
ಸಾಗಿಸಿದ್ದ ಆ ಮುದುಕನಿಗೆ ಮುಪ್ಪಿನಲ್ಲಿ ಲೋಕವೆಲ್ಲ ಅವಿಧೇಯವಾಗಿರುವಂತೆ ತೋರಿತು.
“ಕೆಡ್ತಪ್ಪಾ ಕಾಲ, ಕೆಡ್ತು! ಇನ್ ನಮ್ಮಂತೋರ್ ಕಾಲ್ ಕೀಳಾದೆ ಮೇಲು! ಇನ್
ಹೇಳ್ಸಿದ್ದಲ್ಲ ಈ ಜಲ್ಮ!” ಎಂದು ಗೊಣಗುತ್ತಾ ಮತ್ತೆ ಗದ್ದೆಯ ಕಡೆಗೆ ನಡೆದರು.
ಕಾಲುದಾರಿಯಲ್ಲಿ ಬರುತ್ತಿದ್ದ ವ್ಯಕ್ತಿ ಅಂಗಗಳೆಲ್ಲಾ ತಕ್ಕಮಟ್ಟಿಗೆ ಸ್ಪಷ್ಟವಾಗುವಷ್ಟರ
ಮಟ್ಟಿಗೆ ಸಮೀಪಿಸಿದ್ದನಾದರೂ ಆಗತಾನೆ ಮೂಡಿಬರುತ್ತಿದ್ದ ಎಳೆಬಿಸಲಿನ ರಶ್ಮಿ ಚಾಮರದ
ದೆಸೆಯಿಂದ ಹೆಗ್ಗಡೆಯವರಿಗೆ ಅದು ಯಾರು ಎಂದು ಗೊತ್ತಾಗಲಿಲ್ಲ.
ಕೈಯೆತ್ತಿ ಹಣೆಗಿಟ್ಟು ಬಿಸಿಲಿಗೆ ಕೊಡೆ ಮಾಡಿ ನೋಡಿ “ಹಾಳ್ ಕಣ್ಣು! ಅವಕ್ಕೂ
ಬ್ಯಾಡಾದೆ ನಾನು!” ಎನ್ನುತ್ತಾ ಮನೆಯ ಕಡೆಗೆ ತಿರುಗಿದಾಗ, ತೋಟದ ಬಾವಿಯಿಂದ ನೀರು
ತುಂಬಿದ ಕೊಡಪಾನವನ್ನು ಸೊಂಟದ ಮೇಲಿಟ್ಟು, ಬೆಳ್ಳಿಯ ಕಡಗ ಮತ್ತು ಕಣ್ಣು ಕೊರಿಸಿದ ಗಾಜಿನ
ಬಳೆಗಳನ್ನು ತೊಟ್ಟಿದ್ದ ತನ್ನ ಕೈಯಿಂದ ಆ ತಾಮ್ರದ ಕೊಡದ ಕೊರಳನ್ನು ಅವುಕಿ ಹಿಡಿದು
ನಿಧಾನವಾಗಿ ಮೆಟ್ಟಲು ಹತ್ತುತ್ತಿದ್ದ ತಮ್ಮ ಮಗಳನ್ನು ಕಂಡರು. ಎತ್ತರದಲ್ಲಿ,
ಬಣ್ಣದಲ್ಲಿ, ಮೈಕಟ್ಟಿನಲ್ಲಿ, ರೂಪಿನಲ್ಲಿ ಸರ್ವಾಂಶದಲ್ಲಿಯೂ ತಮ್ಮ ಗತಿಸಿದ ಸತಿಯನ್ನೇ
ಹೋಲುತ್ತಿದ್ದ ಆಕೆಯನ್ನು ಕಂಡೊಡನೆ ಹೆಗ್ಗಡೆಯವರು ಮರಳಿ ಮೃದುವಾದರು. ಅವರ ಮನಸ್ಸಿಗೆ
ತಂಗಾಳಿ ಬೀಸಿದಂತಾಯಿತು. ಆಗತಾನೆ ಮರುಭೂಮಿಯಾಗಿ ಕಾಣುತ್ತಿದ್ದ ಜಗತ್ತಿನಲ್ಲಿ ಫಕ್ಕನೆ
ಮರುವನ ಗೋಚರಿಸಿದಂತಾಯಿತು. ಕಡಲ ನಡುವೆ ಹಡಗೊಡೆದು ತೆರೆಗಳ ತಾಡನಕ್ಕೆ ಸಿಕ್ಕಿ
ತೇಲುತ್ತಾ ಬರುವಾತನು ದ್ವೀಪದ ದಡಕ್ಕೇರುವಂತೆ ಹೃದಯದ ಮೃದುತ್ವವನ್ನೂ ಮೈತ್ರಿಯನ್ನೂ
ಅಕ್ಕರೆಯನ್ನೂ ಸೂಚಿಸುವ ದೀರ್ಘಸ್ವರದಿಂದ ಕರೆದರು.
“ಬುಚ್ಚೀ!”
ಮಂಜಮ್ಮ ಏರುತ್ತಿದ್ದವಳು ಹಾಗೇ ಮೆಟ್ಟಲ ಮೇಲೆ ನಿಂತು “ಏನಪ್ಪಯ್ಯಾ?” ಎಂದಳು. ಸ್ವರದಲ್ಲಿ ಆಯಾಸವಿದ್ದರೂ ಇಂಪಾಗಿತ್ತು.
“ಇಲ್ಲಿ ಬಾರಕ್ಕಾ ಸ್ವಲ್ಪ.”
“ಬರ್ತೀನಿ….”
“ಕೊಡಪಾನ ಅಲ್ಲೇ ಇಟ್ಟು ಬಾ.”
ಮಂಜಮ್ಮ ಹಾಗೆಯೇ ಮಾಡಿ, ಮೂಡು ಬಿಸಿಲಿಗೆ ಮನೆಯ ಪಕ್ಕದಲ್ಲಿದ್ದ ತೋಟದ ಅಡಕೆಯ ಮರಗಳ
ನೀಳವಾದ ನೆಳಲುಗಳು ಪಟ್ಟೆಪಟ್ಟೆಯಾಗಿ ಬಿದ್ದಿದ್ದ ಅಂಗಳದಲ್ಲಿ ನಡೆದು ಬಂದಳು.
ನೆರೆಹೊರೆಯವರು ಮಗಳಿಗೆ ಮದುವೆಯ ವಯಸ್ಸು ಮೀರಿ ಹೋಯಿತೆಂದು ಹೇಳುತ್ತಿದ್ದರೂ
ಸುಬ್ಬಣ್ಣ ಹೆಗ್ಗಡೆಯವರಿಗೆ ಹಾಗೇನೂ ತೋರುತ್ತಿರಲಿಲ್ಲ. ಚೆನ್ನಾಗಿ ಕೆಲಸ ಮಾಡಿ ಹೊಟ್ಟೆ
ತುಂಬಾ ತಿನ್ನುವ ಹಳ್ಳಿಯ ಹೆಣ್ಣು ಬೆಳೆಯುವಂತೆ ಮಂಜಮ್ಮ ಸುಪುಷ್ಟವಾಗಿ ಬೆಳೆದಿದ್ದ
ಮಾತ್ರಕ್ಕೆ ಮದುವೆಯ ವಯಸ್ಸು ಮೀರಿತೆಂದು ಹೇಳುವುದು ಯಾವ ನ್ಯಾಯ? ಮದುವೆಗೆ ವಯಸ್ಸು
ಮೀರುವುದೆಂದರೆ ಅರ್ಥವಾದರೂ ಏನು? ಅವಳೇನು ಹಾರುವರ ಮನೆಯ ಹೆಣ್ಣೇ? ಮದುವೆಯಾಗುವುದಕ್ಕೆ
ಮೊದಲೆ ದೊಡ್ಡವಳಾಗಿಬಿಟ್ಟರೆ ಕಾಡಿಗಟ್ಟಬೇಕೆಂಬ ಹೆದರಿಕೆಯೇನು ತಮಗೆ? ಒಂದು ವರ್ಷ
ಹೆಚ್ಚು ಕಡಿಮೆ, ಸರಿಯಾದ ಮನೆಗೆ ಕೊಟ್ಟರಾಯಿತು. ಅಲ್ಲದೆ ತಾಯ ಸತ್ತ ಹುಡುಗಿ. ಸ್ವಲ್ಪ
ತಿಳುವಳಿಕೆ ಬಂದ ಮೇಲೆಯೇ ಗಂಡನ ಮನೆಗೆ ಹೋದರೆ ನೆಮ್ಮದಿ. ಒಂಟಿಬಾಳು ಬಾಳುತ್ತಿರುವ ತಮಗೂ
ಮಗಳನ್ನು ತಟಕ್ಕನೆ ಅಗಲಿರಬೇಕೆಂದರೆ ಸಂಕಟ: ಮಗನೇನೋ ಇದ್ದಾನೆ. ಆದರೆ ತಿಮ್ಮಪ್ಪ
ಹೆಗ್ಗಡೆ ಕಂತ್ರಿ, ಸ್ವತಂತ್ರಿ. ಯಾವಾಗಲೂ ಇತರರಿಗೆ ಆಶ್ರಯಕೊಡುತ್ತಾ ಬಾಳಿದವರಿಗೆ
ಆಶ್ರಿತರು ದೂರವಾದರೆ ಆಶ್ರವೆ ತಪ್ಪಿದಂತಾಗುತ್ತದೆ. ಮುಪ್ಪು ಎಳೆತನಕ್ಕೆ ಆಶ್ರಯ
ಮಾತ್ರವಲ್ಲ, ಆಶ್ರಿತವೂ ಹೌದು. ಹಳೆಯ ಚಪ್ಪರಕ್ಕೆ ಹೊಸ ತೊಂಡೆಯ ಬಳ್ಳಿ ಹಬ್ಬಿದ್ದರೆ
ತೊಂಡೆಯ ಕಾಯಿಯ ಆಸೆಗಾದರೂ ಚಪ್ಪರ ಬೀಳದಂತೆ, ಹಾಳಾಗದಂತೆ, ಒರಲೆ ಹಿಡಿಯದಂತೆ ನೋಡಿ
ಕೊಳ್ಳುತ್ತಾರೆ. ಕೆಲಸ ಮಾಡದ ಕತ್ತಿಗೆ ತುಕ್ಕು ಹಿಡಿಯುತ್ತದೆ. ಉಪಯೋಗಿಸದೆ
ಪಿಟಾರಿಯಲ್ಲಿಟ್ಟರೆ ಪೀತಾಂಬರಕ್ಕಾದರೂ ಬೂಷಲು ಬರುತ್ತದೆ. ಪ್ರವೃತ್ತಿಪ್ರೇರಕವಾದ
ಆಧಾರಸ್ತಂಭಗಳೆಲ್ಲಾ ಉರುಳಿದರೆ ಮುಪ್ಪು ಬೇಸತ್ತೇ ಸತ್ತು ಹೋಗುತ್ತದೆ. ಸುಬ್ಬಣ್ಣ
ಹೆಗ್ಗಡೆಯವರ ಆಲೋಚನೆಗೆ ಇಷ್ಟೆಲ್ಲಾ ಮೀರಿದ್ದರೂ ಆತ್ಮಕ್ಕೆ ಅದು
ವೇದ್ಯವಾಗಿದ್ದುದರಿಂದಲೆ ಮಗಳ ಮದುವೆಗೆ ಮಗನ ಮದುವೆಯ ಅಡಚಣೆಯನ್ನೊಡ್ಡಿ ಕಾಲವಂಚನೆ
ಮಾಡುತ್ತಿದ್ದುದ್ದು.
ಬಿರಾಂಬರುಡುಗೆಯ ಸಡಿಲ ಚೆಲುವು ಹಳೆಮನೆಯಂತಹ ಹಳೆತನದ ಮನೆತನಗಳಿಗೆ ಆಗಿನ್ನೂ
ಸೋಂಕಿರಲಿಲ್ಲ. ಮಂಜಮ್ಮ ಗೊಬ್ಬೆ ಸೆರಗು ಬಿಗಿದು ಕಟ್ಟಿ, ಸೀರೆಯ ಬಹುಭಾಗದ
ವಿಸ್ತೀರ್ಣವನ್ನೆಲ್ಲಾ ಸೊಂಡಕ್ಕೆ ಸುತ್ತಿ, ಉಳಿದಿದ್ದನ್ನು ಆದಷ್ಟು ಕೃಪಣತೆಯಿಂದ
ನಿರಿಮಾಡಿ ಹರಡಿಗೆ ಮೇಲೆ ಮೊಳಕಾಲಿನ ನಡುವರೆಗೆ ನೀಡಿ ಉಟ್ಟಿದ್ದಳು. ಮೀಯುವುದರಲ್ಲಿಯೂ
ಒಗೆಯುವುದರಲ್ಲಿಯೂ ಹೊತ್ತು ಕಳೆಯ ಬಾರದೆಂದು ಅಪ್ಪಯ್ಯ ಹೇಳುತ್ತಿದ್ದುದರಿಂದ ಆಕೆಯ ಸೀರೆ
ಕೊಳಕಾಗಿತ್ತು. ಆ ಕೊಳಕನ್ನು ಯಾರೂ ಲೆಕ್ಕಿಸುತ್ತಿರಲಿಲ್ಲವಾದ್ದರಿಂದ ಅವಳೂ
ಲೆಕ್ಕಿಸುತ್ತಿರಲಿಲ್ಲ. ತನ್ನ ಮೈಯ ಬಿಳಿಯ ಬಣ್ಣದಲ್ಲಿ ಮಾತ್ರ ಆಕೆಗೆ ಅಪಾರ
ಅಭಿಮಾನವಿತ್ತು. ಆ ಅಭಿಮಾನ ಒಮ್ಮೊಮ್ಮೆ ಗರ್ವದ ಮಟ್ಟಕ್ಕೂ ಏರಿ, ಆಕೆ, ಮೇಲೆ ಹೇಗೇ
ಇರಲಿ, ಅಂತರಂಗದಲ್ಲಿ ತಿಮ್ಮಪ್ಪ ಹೆಗ್ಗಡೆಯ ತಂಗಿ ಎಂಬುದನ್ನು ನೆನಪಿಗೆ
ತಂದುಕೊಡುತ್ತಿತ್ತು. ಆ ಮೈಯ್ಯ ಬಣ್ಣದ ಅಭಿಮಾನವನ್ನು ಒಡವೆಯ ಸಿಂಹಾಸನದ ಮೇಲೆ ಕೂರಿಸಿ,
ಆಗಾಗ, ಸಮಯ ಸಿಕ್ಕಾಗ, ಮೆರವಣಿಗೆ ಮಾಡುತ್ತಿದ್ದಳು. ಆಂತರ್ಯದ ಅಹಂಕಾರ ಬಲಿತಷ್ಟೂ
ಅನಿವಾರ್ಯವಾಗಿ ಬಲಿಯುತ್ತದೆ, ಪರದಲ್ಲಿ ತಿರಸ್ಕಾರ. ತಿರಸ್ಕಾರಕ್ಕೆ ತಿರಸ್ಕಾರ
ಪ್ರತೀಕಾರವಾಗುತ್ತದೆ. ಅಸೂಯೆ, ಆತ್ಮಪ್ರಶಂಸೆ, ಪರನಿಂದೆಗಳು ಇಕ್ಕೆಲಗಳಲ್ಲಿಯೂ
ಮಲೆಯುತ್ತವೆ. ಹಾಗಾಗಿಯೆ ಮಂಜಮ್ಮನ ವಿಚಾರವಾಗಿ ನಂಟರಿಷ್ಟರಲ್ಲಿ ಸದಭಿಪ್ರಾಯವಿರಲಿಲ್ಲ.
ಮಗಳ ಮೇಲೆ ಹೆರರ ಮಾತಿನ ಚುಚ್ಚು ಹೆಚ್ಚಾದ ಹಾಗೆಲ್ಲಾ ಅವಳ ಮೇಲೆ ಅಪ್ಪಯ್ಯನ ಮೆಚ್ಚು
ಅಷ್ಟಷ್ಟೂ ಅತಿಯಾಗುತ್ತಿತ್ತು. ಹೀಗೆ ತಂದೆ ಮಗಳಿಬ್ಬರೂ ಒಬ್ಬರಿನ್ನೊಬ್ಬರಿಗೆ
ರಕ್ಷೆಯಾಗಿ ಪರಸ್ಪರ ನೆಮ್ಮದಿಗಳಾಗಿದ್ದರು.
ಮಗಳು ತೊಟ್ಟಿದ್ದ ಮೂಗುತಿ, ಬುಗುಡಿ ಎಸಳ ಸರಪಣಿ ಮೊದಲಾದ ಆಗಿನ ಕಾಲದ ಮೆಚ್ಚಿನ
ಸ್ಥೂಲಾಭಿರುಚಿಯ ಭಾರಾಲಂಕಾರಗಳನ್ನು ನೋಡುತ್ತಾ ಮುದವುಕ್ಕಿ ಸುಬ್ಬಣ್ಣ ಹೆಗ್ಗಡೆಯವರು
“ಬುಚ್ಚಿ, ಲಚ್ಚಾಚಾರಿ ಬಂದಿದ್ದನೇನೆ?” ಎಂದು ಕೊಟ್ಟಿದ್ದ ಅಡ್ಡಿಕೆಯ ನೆನಪಾಗಿ
ಕೇಳಿದರು.
ಮಂಜಮ್ಮ “ಅವನ ಮನೆ ಹಾಳಾಗಾಕೆ ಎತ್ತ ಸತ್ತನೋ” ಎಂದು ಮೂತಿ ಮಾಡಿ, ಗದ್ದೆಯ ಕಡೆ
ನೋಡಿ, “ಅದ್ಯಾರು ಅಲ್ಲಿ ಬರೋರು? ಹೂವಳ್ಳಿ ಎಂಕ್ಟಣ್ಣಬಾವನ್ನು ಕಂಡ್ಹಾಗೆ ಕಾಣ್ತದೆ?”
ಎಂದಳು.
“ಹೌದು ಅಂತೀನಿ. ಮರ್ತೇಹೋಗಿತ್ತು. ಅದಕ್ಕೆ ನಿನ್ನ ಕರ್ದಿದ್ದು. ನನ್ನ ಕಣ್ಣೇ
ಈಗ್ಯಾಕೋ ಸರಿಯಾಗಿ ಕಾಣ್ರೋದಿಲ್ಲಾಪ್ಪಾ.” ಹೆಗ್ಗಡೆಯವರು ಸುಯ್ದು ಮುಂದೆ ಹೇಳಿದರು:
“ನೀನೊಬ್ಬಳು ಮನೇಲಿ ಇರಾಹೊತ್ತಿಗೆ ನಾನೂ ಒಬ್ಬ ಮನಿಸ್ಯ ಅನಿಸಿಕೊಂಡಿದ್ದೀನವ್ವಾ.
ಇನ್ನು….”
ಅಪ್ಪನ ಮಾತು ಎಲ್ಲಿಗೆ ಹೋಗುತ್ತಿದೆ ಎಂಬುದನ್ನರಿತು ಮಂಜಮ್ಮ “ಹೌದು ಎಂಕ್ಟಣ್ಣ ಬಾವನೇ!” ಎಂದಳು.
ಹೆಗ್ಗಡೆಯವರು ಅತ್ತ ನೋಡಿ “ನಿನ್ನೇನೆ ಬತ್ತೀನಿ ಅಂದಿದ್ದ. ಒಂದ ಹಂದೀಮರಿ ಬೇಕು ಅಂತಾ ಹೇಳಿದ್ದಾ. ಬಾ ಕೊಡ್ತೀನಿ ಅಂದಿದ್ದೆ.”
“ಯಾವುದನ್ನ ಕೊಡ್ತೀಯಾ, ಅಪ್ಪಯ್ಯಾ?”
“ಯಾವುದ್ನಾದ್ರೂ ಕೊಡಾದಪ್ಪ. ಸುಮ್ಮನೆ ಒಡ್ಡೀಲಿಟ್ಟುಕೊಂಡು ಮಾಡಾದೇನು. ಮದೇಮನೆ
ಕರ್ಚಿಗೆ ಎಷ್ಟು ಬೇಕೋ ಅಷ್ಟು ಇಟ್ಕೋಂಡು ಇಳಿದ್ನೆಲ್ಲಾ ಕೊಟ್ಟು ಬಿಡ್ತೀನಿ. ನನಗೂ
ವಯಸ್ಸಾತು. ನೋಡಿಕೊಳ್ಳೋರು ಯಾರೂ ಇಲ್ಲಾ. ನಿನ್ನ ಅಣ್ಣ ಒಬ್ಬ ಇದಾನೆ ಕೂಳು ಖರ್ಚಿಗೆ.
ನೀನಾದ್ರೂ ಇನ್ನೆಷ್ಟು ದಿನ ಅಂತ ಇರ್ತೀಯಾ ಇಲ್ಲಿ….?”
“ಆ ದಡ್ಡೆ ಮರಿ ನನಗಿರಲಪ್ಪಯ್ಯಾ. ಸರಿಪಾಲಿಗೆ ಸಾಕಾಕೆ ಕೊಡ್ತೀನಿ. ಹೊಲೇರ ಗುತ್ತಿ
ಸಾಕ್ತೀನಿ ಅಂದಾನೆ.” ಮಂಜಮ್ಮ ಗೊಬ್ಬೆಸರಗು ಸರಿಮಾಡಿಕೊಳ್ಳುತ್ತಾ ನಾಚಿಕೆಯಿಂದಲೆಂಬಂತೆ
ಮಾತಾಡಿದಳು.
“ಯಾವ ಗುತ್ತೀನೆ?”
“ಆ ಜಟ್ಟಕ್ಕನ ಜತಿ ಬಂದಿದ್ದನ್ಲಲಾ….”
“ಸಿಂಬಾವಿಯವನೇನೇ?”
ಮಂಜಮ್ಮ ಮಾತಾಡಲಿಲ್ಲ. ನಸುನಾಚಿ, ಗದ್ದೆಕಡೆ ನೋಡುವವಳಂತೆ ನಟಿಸಿದಳು.
“ಯಾರು? ಆ ನಾಯಿ ಗುತ್ತೀನೇನೆ?”
“ಹ್ಞೂ ಹ್ಞೂ! ಅವನೆ, ಅವನೇ!”
“ಆ ಹೊಲಿಯ ಲೌಡಿಮಗ ಹಂದಿ ಸಾಕ್ತಾನೇನೇ? ತಿಂದು ಹಾಕ್ತಾನೆ! ತಿಂದೇ ಹಾಕ್ತಾನೆ;
ನೋಡ್ತಿರು ಬೇಕಾದ್ರೆ!” ಎಂದು ಮುದಿ ದೇಹ ಕುಣಿಯುವಂತೆ ನಗತೊಡಗಿದರು ಸುಬ್ಬಣ್ಣ
ಹೆಗ್ಗಡೆಯವರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ