ಮುಂಡಾಸು ಸುತ್ತಿ, ಕಸೆಯ
ನಿಲುವಂಗಿ ತೊಟ್ಟು, ಕೆಂಪಂಚಿನ ಕಚ್ಚೆಪಂಚೆಯುಟ್ಟು, ಬೆತ್ತದ ದೊಣ್ಣೆಹಿಡಿದು,
ಹಳೆಯದೊಂದು ಮೆಟ್ಟಿನ ಜೊತೆಯನ್ನು ಕಾಲಿಗೆ ಹಾಕಿಕೊಂಡು ಉತ್ಸಾಹವಿಕ್ಕಿ ಮನೆಯಿಂದ
ಬೊರಬಿದ್ದ ಸುಬ್ಬಣ್ಣಹೆಗ್ಗಡೆಯವರು ಯುವಕರೋಪಾದಿಯಲ್ಲಿ ನಡೆಯತೊಡಗಿದರು. ಅವರ ಮಾತಿನ
ಧ್ವನಿಯೂ ಉತ್ತಾಲವಾಗಿಯೆ ಇತ್ತು. ಅವರು ನಡೆಯುತ್ತಿದ್ದ ದಾರಿಯ ಅಕ್ಕಪಕ್ಕದ ಕಲ್ಲು ಗಿಡ
ಮರ ಪೊದೆ ಬಂಡೆ ಒಂದೊಂದು ಅವರಿಗೆ ನೆನಪುಗಳನ್ನು ತಂದುಕೊಡುವ ಉಲ್ಲಾಸ
ವಸ್ತುಗಳಾಗಿದ್ದುವು.
“ನೋಡಿ, ಐಗಳೇ; ಅದೇ ಮಟ್ಟಿನಲ್ಲಿ ನಾನೂ ದುಗ್ಗಣ್ಣನೂ ಹುಡುಗರಾಗಿದ್ದಾಗ ದುಗ್ಗಣ್ಣ
ನಿಮಗೆ ಗೊತ್ತಿಲ್ಲ? ನನ್ನ ಅಣ್ಣ, ನಮ್ಮ ಶಂಕರನ ಅಪ್ಪ, ಅಂವ ತೀರಿಹೋಗಿ ಹದಿನೈದು
ಇಪ್ಪತ್ತು ವರ್ಷದ ಮ್ಯಾಲೆ ಆಯ್ತು; ಅದೇ ಮಟ್ಟಿನಲ್ಲಿ ಒಂದು ಕಾಡು ಕೋಳಿಹ್ಯಾಟೆ ಮೊಟ್ಟೆ
ಇಕ್ಕಿತ್ತು. ಏಳೆಮಟು ಮೊಟ್ಟೆ. ಮರಿಮಾಡಿದ ಕೂಡ್ಲೆ ನಾನು ದುಗ್ಗಣ್ಣ, ಹುಡುಗಾಟ ನೋಡಿ, –
ಮರೀನೆಲ್ಲ ಹಿಡಿದುಬಿಟ್ಟು, ಹೆಂಗ್ಹೆಂಗೊ ಮಾಡಿ. ಆ ಹ್ಯಾಟೆ ಹೋಗಲೂ ಒಲ್ಲದು, ಬರಲೂ
ಒಲ್ಲದು. ಪಾಪ! ಎಷ್ಟಾದರೂ ಪ್ರಾಣಭಯ ಅಲ್ಲವೆ? ಕಡೀಗೂ ಮರೀ ಹಿಡುಕೊಂಡು ಹೋಗ್ತಿದ್ದ ನಮ್ಮ
ಹಿಂದೇನೆ ಬರಾಕೆ ಶುರು ಮಾಡ್ತು. ನಮ್ಮ ದುಗ್ಗಣ್ಣ ಬಿಲ್ಲು ಹೊಡೆಯೋದರಲ್ಲಿ ಮಹಾಗಟ್ಟಿಗ!
ದೊಡ್ಡ ಬಿದಿರುಬಿಲ್ಲು. ಹೊಡೆದೇಬಿಟ್ಟ. ಎದೀಗೆ ಕಲ್ಲುಬಿದ್ದ ಹೊಡೆತಕ್ಕೆ ಕೈಕಾಲು
ಹಂದದೆ ಸತ್ತುಬಿತ್ತು!…. ಅದರ ಶಾಪಾನೋ ಏನೋ? ನಮಗೀಗ ತಟ್ಟಿ, ನನ್ನ ಮಗನ್ನೆ ಆಹುತಿ
ತಗೊಂಡುಬಿಟ್ತು!… ಕರ್ಮ, ನೋಡ್ರಿ ಬೆನ್ ಬಿಡೋದಿಲ್ಲ!” ಎಂದು ಒಂದು ಹತ್ತುಮಾರು ಮಾತಾಡದೆ
ನಡೆಯುತ್ತಿದ್ದು ಮತ್ತೆ ಹೇಳತೊಡಗಿದರು, ಐಗಳು ಆಲಿಸುತ್ತಿದ್ದುದು ನಿಮಿತ್ತ ಮಾತ್ರವೊ
ಎಂಬಂತೆ, ಸ್ವಗತವಾಗಿ: “ನಮ್ಮ ದೊಡ್ಡಣ್ಣಂದೂ ಹಂಗೆ ಆಯ್ತು ನೋಡಿ:…. ಹುಲಿ ಆದ್ರೇನಂತೆ
ಎಷ್ಟಂದರೂ ಮಕ್ಕಳ ಹೆತ್ತ ತಾಯಿ ಅಲ್ಲವೆ? ಮೂರು ಹುಲಿಮರೀನೂ ಹೊತ್ತುಕೊಂಡೇ ಬಂದ್ಬಿಟ್ಟ
ಮನೀಗೆ. ತನ್ನ ಮಕ್ಕಳಕ್ಕರೆಗೆ ಅಟ್ಟಿಕೊಂಡು ಬಂದ ತಾಯಿ ಹುಲೀನೂ ಕೋವೀಲಿ
ಹೊಡೆದುಹಾಕಿಬಿಟ್ಟ! ನಾವು ನಂಬಲಿ ಬಿಡಲಿ! ಹೆತ್ತಹೊಟ್ಟೆ ಉರಿದು ಕೊಟ್ಟ ಶಾಪ ತಟ್ಟದೆ
ಬಿಡ್ತದೆಯೆ? ಇಂದಲ್ಲ ನಾಳೆ?” ಮುದುಕನ ಧ್ವನಿ ಬರುಬರುತ್ತಾ ರೋದನ ಸ್ವರಕ್ಕೆ
ತಿರುಗಿತ್ತು. ದೀರ್ಘವಾಗಿ ಸುಯ್ದು ಬಹಳ ಹೊತ್ತು ಮಾತನಾಡದೆ ಮುಂದುವರಿದರು.
ಸ್ವಲ್ಪ ದೂರ ಹೋಗುವುದರಲ್ಲಿಯೆ ಐಗಳಿಗೆ ಅನುಮಾನವಾಯಿತು, ಹೆಗ್ಗಡೆಯವರ ಮನಃಸ್ಥಿತಿ
ಎಂದಿನಂತೆ ಸಾಮಾನ್ಯವಾಗಿರದೆ ಅಸಹಜ ಭೂಮಿಕೆಗೆ ಏರಿರಬೇಕು ಎಂದು. ಅವರ ಉತ್ಸಾಹ ಒಮ್ಮೆ
ಶಿಖರಕ್ಕೇರಿದಂತೆ ತೋರಿದರೆ, ಮರುಕ್ಷಣವೆ ಶೋಕದ ಕಮರಿಗೆ ಬಿದ್ದಂತಾಗುತ್ತಿತ್ತು.
ಒಮ್ಮೊಮ್ಮೆ ಬಾಲಕ ಸಹಜವಾದ ಉಲ್ಲಾಸದಿಂದ ಯಾವುದೊ ಪರಿಹಾಸ್ಯ ಪ್ರಸಂಗವನ್ನು ನೆನೆನೆನೆದು
ನಕ್ಕು ಹೇಳಿದರೆ, ಒನ್ನೊಮ್ಮೆ ಮಹಾ ನಿರಾಶೆಯ ಧ್ವನಿಯಿಂದ ಯಾವುದಾದರೂ ಒಂದು ದುರಂತದ
ತತ್ವಚಿಂತನೆಗೆ ಇಳಿದುಬಿಡುತ್ತಿದ್ದರು. ಹಿಗ್ಗು – ಕುಗ್ಗು, ಅಳು – ನಗೆ, ಕೆಚ್ಚು –
ಬೆಚ್ಚು, ಭೀತಿ – ಧೈರ್ಯ – ಹೀಗೆ ಅವರ ಚೇತನ ಹರಿವ ಗರಗಸಕ್ಕೆ ಸಿಕ್ಕಿಬಿಟ್ಟಿತು. ಐಗಳು
ತಮ್ಮೊಳಗೆ ತಾವೆ ’ನಾನು ಅಚಾತುರ್ಯ ಮಾಡಿದೆ?’ ಎಂದುಕೊಂಡರು. ಆದರೆ ಅದನ್ನು ಒಂದಿನಿತೂ
ತೋರಗೊಡದೆ ಮುದುಕನೊಡನೆ ಸಮವೇದನೆಯಿಂದೆಂಬಂತೆ ವರ್ತಿಸತೊಡಗಿದರು. ಮುದುಕನನ್ನು ಹೇಗಾದರೂ
ಮಾಡಿ ಹುಲಿಕಲ್ಲು ನೆತ್ತಿ ದಾಟಿಸಿ ಮೇಗರವಳ್ಳಿ ತಲುಪಿಸಿದರೆ ಗೆದ್ದೆ ಎಂದುಕೊಂಡು ಅವರ
ಹಿಂದೆ ಹಿಂದೆಯ ಹ್ಞೂಂಗುಡುತ್ತಾ ನಡೆದರು.
ಮುಂದೆ ಹೋಗುತ್ತಿದ್ದ ಸುಬ್ಬಣ್ಣಹೆಗ್ಗಡೆಯವರು ನಿಂತು, ಹಿಂದಿರುಗಿ ನೋಡಿ, ಕೈಲಿ
ನಶ್ಯದ ಡಬ್ಬಿ ಹಿಡಿದುಕೊಂಡು ಮಂಗಳೂರು ಪುಡಿಯನ್ನು ಮೂಗಿಗೇರಿಸುತ್ತಲೆ
ಮುಂಬರಿಯುತ್ತಿದ್ದ ಐಗಳಿಗೆ “ಏನು ಹಿಂದೆ ಬಿದ್ರಲ್ಲಾ ಐಗಳು?” ಎಂದು ಪರಿಹಾಸದಿಂದ
ಪ್ರಶ್ನಿಸಿದರು, ಐಗಳ ಗಮನವನ್ನು ಅನುಲಕ್ಷಿಸಿ “ಓಹೋ ಮರೆತಿದ್ದೆ. ನಿಮ್ಮ ಕಾಲಿನ ಕುಂಟು –
ಇನ್ನೂ ಹಾಂಗೇ ಇದೆ?…. ಉಡಿನ ತುಪ್ಪ ಚೆನ್ನಾಗಿ ದಿನಾಲೂ ತಿಕ್ಕಿಸಿ, ಮೇಲ್ನಿಂದ
ಬಿಸಿನೀರು ಹುಯ್ಸಿನೋಡಿ. ಹಳೇನೋವು; ಏನಾಗ್ತದೋ?” ಎಂದರು.
ಐಗಳೂ ನಗುತ್ತಾ “ಕುಂಟೇನಲ್ಲಾ! ಅಭ್ಯಾಸ ನಿಂತುಬಿಟ್ಟಿದೆ, ಅಷ್ಟೆ. ನೋವು ಕೂಡ ಏನೂ ಇಲ್ಲ “ ಎಂದರು.
ಹುಲಿಕಲ್ ನೆತ್ತಿಯ ಉಬ್ಬು ಪ್ರಾರಂಭವಾಗಲು ಹೆಗ್ಗಡೆಯವರು ಯಾವುದಾದರೂ ಒಂದು ನೆವದಿಂದ
ಮತ್ತೆ ಮತ್ತೆ ನಿಂತು ಮುಂದುವರಿದರು. ನೆವಗಳೇನೊ ಅವರಿಗೆ ಬೇಕಾಗಿದ್ದುದಕ್ಕಿಂತಲೂ
ಹೆಚ್ಚಾಗಿಯೆ ಇದ್ದುವು, ಅವರ ನೆನಹಿನ ಬೊಕ್ಕಸದಲ್ಲಿ. ಸುಮಾರು ಐವತ್ತು ವರ್ಷಗಳ ಹಿಂದೆಯೆ
ಇರಬಹುದು, ಕಡಿಸಿದ್ದ ಒಂದು ದೊಡ್ಡ ತೇಗದಮರದ ಮುಂಡು ನಿಂತಿದ್ದನ್ನು ನೋಡಿ, ಅದರ
ಸಂಬಂಧದ ಒಂದು ಕಥೆಯನ್ನೆ ಹೇಳಿದರು. ಇನ್ನೊಂದು ಕಡೆ ಎದ್ದು ನಿಂತಿದ್ದ ಒಂದು
ಕಾಡುಕಲ್ಲನ್ನು ತೋರಿಸಿ “ಅದನ್ನೆ, ನೋಡಿ, ಮಸೇಕಲ್ಲು ಅಂತಾರೆ. ನೂರಾರು ವರ್ಷಗಳಿಂದ
ಸಾವಿರಾರು ಜನರ ಕತ್ತಿ ಮಸೆದೂ ಮಸೆದೂ ಹ್ಯಾಂಗೆ ನುಣ್ಣಗಾಗ್ಯದೆ ನೋಡಿ! ಸಿಕಾರಿಗೆ
ಹೋಗೋರು. ಮರಾ ಕಡಿಯಾಕೆ ಹೋಗೋರು, ಬಗನಿ ಇಳಿಸಾಕೆ ಹೋಗೋರು, ಸೊಪ್ಪು ಸೌದೆಗೆ ಹೋಗೋರು,
ಎಲ್ಲಾರು, ನಮ್ಮ ಅಪ್ಪ, ಅಜ್ಜ, ಮುತ್ತಜ್ಜನ ಕಾಲದೋರು ಎಲ್ರೂ ಕತ್ತಿ ಮಸೆದಿದ್ದಾರೆ
ಇಲ್ಲಿ…. ನಾನೂ ಮಸೆದಿದ್ದೆ; ನಮ್ಮ ದೊಡ್ಡಣ್ಣನೂ ಮಸೆದಿದ್ದ…. ನಾವೆಲ್ಲ ಹೋಗ್ತೀವಿ. ಈ
ಕಲ್ಲು ಮಾತ್ರ ನಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಎಲ್ಲರ ಕಾಲಾನೂ ನೋಡ್ತಾ,
ಇಲ್ಲೇ, ಹೀಂಗೇ ಕೂತಿರ್ತದೆ! ಹಿಹ್ಹಿಹ್ಹಿ!” ಎಂದು ಸಿಂಬಳ ಸುರಿದು ಕಣ್ಣೊರಸಿಕೊಂಡರು.
ಹುಲಿಕಲ್ಲು ನೆತ್ತಿಯ ಕಾಡಿನಲ್ಲಿ ಅರ್ಧದೂರ ಸಾಗಿದ್ದರು. ಹಳೇಪೈಕದವನು ಬಗನಿ
ಕಟ್ಟಿದ್ದನ್ನು ಇಳಿಸಿ, ಕಳ್ಳು ಹೊತ್ತುಕೊಂಡು ಹೋಗುತ್ತಿದ್ದವನು,
‘ದೊಡ್ಡಹೆಗ್ಗಡೆರ’ನ್ನು ಕಂಡು ಕಳ್ಳಿನ ಮೊಗೆಯನ್ನು ಹಳುವಿನಲ್ಲಿ ಇಟ್ಟು, ಕೈಮುಗಿಯುತ್ತಾ
ಬಳಿಗೆ ಬಂದು. ಹಣೆ ಮಣ್ಣುಮುಟ್ಟುವಂತೆ ಹೆಗ್ಗಡೆಯವರ ಪಾದಕ್ಕೆ ಅಡ್ಡಬಿದ್ದು
ಎದ್ದುನಿಂತನು.
ಹೆಗ್ಗಡೆಯವರು ಪರಿಹಾಸ್ಯೆಂಬಂತೆ “ಏನೋ ಬರೀ ಅಡ್ಡಬೀಳೋದ್ರಲ್ಲೇ ಪೂರೈಸ್ತೀಯೋ?
ಏನಾದ್ರೂ ಕೊಡ್ತೀಯೊ?” ಎಂದೊಡನೆ ಅವನು ಎಲೆದೊನ್ನೆ ಸೆಟ್ಟು, ಕಳ್ಳು ಹುಯ್ದು ತಂದು
ಹೆಗ್ಗಡೆಯವರಿಗೂ ಐಗಳಿಗೂ ನೀಡಿದನು. ಇಬ್ಬರೂ ಕುಡಿದು ಸಂತುಷ್ಟರಾಗಿ ದ್ವಿಗುಣಿತ
ಬಲರಾದಂತೆ ಗಿರಿನೆತ್ತಿಗೆ ಹತ್ತತೊಡಗಿದರು.
ಹುಲಿಕಲ್ಲು ನೆತ್ತಿಯಲ್ಲಿ ಹೆಗ್ಗಡೆಯವರು ತಮಗೆ ದಣಿವಾದುದನ್ನು ಬಾಯಿಬಿಟ್ಟು ಹೇಳಿಯೆ
ಒಪ್ಪಿಕೊಂಡು, ಒಂದು ಮರದ ನೆಳಲಿನಲ್ಲಿ ಕುಳಿತು, ಬಹುಕಾಲದಿಂದಲೂ ತಾವು ನೋಡದೆ ಇದ್ದ
ದಿಗಂತ ವಿಶ್ರಾಂತ ಗಿರಿಶ್ರೇಣಿಯ ದೃಶ್ಯವನ್ನು ನೋಡುತ್ತಾ, ಕಳ್ಳಿನ ಪ್ರಭಾವವನ್ನು
ಸಮರ್ಥಿಸುವ ರೀತಿಯಲ್ಲಿ ಅನೇಕ ವಿಚಾರ ಮಾತಾಡಿದರು.
ಬಹಳ ಗೊತ್ತಾದರೂ ಹೆಗ್ಗಡೆಯವರು ಮೇಲೇಳಲಿಲ್ಲ. ಕಡೆಗೆ ಮಾತನ್ನು ನಿಲ್ಲಿಸಿ ಸುಮ್ಮನೆ
ನೋಡುತ್ತಾ ಕುಳಿತುಬಿಟ್ಟರು. ಐಗಳು ಹೊತ್ತೇರುತ್ತದೆ ಎಂದು ಸೂಚಿಸಿದಾಗ ಏಳಲು
ಪ್ರಯತ್ನಿಸಿದಂತೆ ಮಾಡಿ ಮತ್ತೆ ಕುಳಿತರು. ಇನ್ನೂ ಸ್ವಲ್ಪ ಹೊತ್ತು ಕಳೆದ ಮೇಲೆ ಐಗಳು
ಮತ್ತೆ ಹೊರಡುವ ಸೂಚನೆಕೊಟ್ಟರು. ಆಗ ಹೆಗ್ಗಡೆಯವರು ನಿಡಿದಾಗಿ ಸುಯ್ದು, ತಮ್ಮನ್ನು
ಎತ್ತಿ ನಿಲ್ಲಿಸುವಂತೆ ಐಗಳಿಗೆ ಸನ್ನೆ ಮಾಡಿದರು. ಐಗಳಿಗೆ ಜೀವವೆ ಹಾರಿಹೋದಂತಾಯಿತು!
’ಕೆಟ್ಟೆ ನಾನು’ ಎಂದುಕೊಂಡು ಹೆಗ್ಗಡೆಯವರನ್ನು ಮೆಲ್ಲಗೆ ಎತ್ತಿ ನಿಲ್ಲಿಸಿದರು. ಅವರು
ದೊಣ್ಣೆಯೂರಿಕೊಂಡು ನಿಧಾನವಾಗಿ ನಡೆಯತೊಡಗಿದರು. ಇನ್ನು ಮುಂದಿನ ಪಯಣವೆಲ್ಲ ಗುಡ್ಡ
ಇಳಿಯುವ ಇಳಿಜಾರಿನದಾಗಿತ್ತು. ಮುದುಕರು ಎಲ್ಲಿ ಮುಗ್ಗರಿಸಿ ಬಿದ್ದುಬಿಡುತ್ತಾರೊ ಎಂಬ
ನಿರಂತರ ಭಯದಿಂದ ಐಗಳು ಅವರ ಪಕ್ಕದಲ್ಲಿಯೆ ಎಲ್ಲದಕ್ಕೂ ಸಿದ್ಧರಾಗಿ ನಡೆದರು.
ಇಳಿಜಾರಿನ ಕಾಡುದಾರಿಯಲ್ಲಿ ಸ್ವಲ್ಪದೂರ ಹೋಗುವುದರಲ್ಲಿಯೆ ಹೆಗ್ಗಡೆ ಒಂದು ದೊಡ್ಡ
ಮರದ ಬಲಿ ದೊಣ್ಣೆಯೂರಿ ನಿಂತರು. ಆ ಮರದ ಬುಡದಲ್ಲಿ, ಕಡಿದು ತೂತು ದೊಡ್ಡದು ಮಾಡಿದ್ದ,
ಒಂದು ಪುರಾತನ ಪೊಟರೆ ಇತ್ತು. ಅದನ್ನು ಐಗಳಿಗೆ ತೋರಿಸಿ, ತಮ್ಮ ಹಳೆಯ ನೆನಪೊಂದನ್ನು
ಹೇಳತೊಡಗಿದರು. ಅವರಿಗೆ ವಿಶ್ರಾಂತಿಯ ಅವಶ್ಯಕತೆ ಇದೆ ಎಂದು ಅರಿತಿದ್ದ ಐಗಳು ಅವರನ್ನು
ತೋಳು ಮೆಲ್ಲಗೆ ಕೂರಿಸಿದರು.
“ನೀವು ಹೆಚ್ಚು ಮಾತನಾಡಿದರೆ ಬಳಲಿಕೆಯಾಗುತ್ತದೆ” ಎಂದರು ಐಗಳು, ಮೆಲುದನಿಯಲ್ಲಿ, ಹೆದರಿ ಹೆದರಿ.
ಸುಬ್ಬಣ್ಣಹೆಗ್ಗಡೆಯವರಿಗೆ ಅನಂತಯ್ಯನ ಆ ಮಾತು ನಸವಾಲು ಹಾಕಿದಂತಾಗಿ “ಬಿಡಿ ಐಗಳೆ,
ನಾನೇನು ಮುದುಕ ಆಗಿಬಿಟ್ಟೆ ಅಂತಾ ಹೇಳ್ತೀರೋ! ಈ ಮುದುಕ ಹಳೆಕಾಲದ ಮುದುಕ. ಈಗಿನ
ಹುಡುಗರು ಈ ಮುದುಕನ ಒಂದು ರಟ್ಟೆ ಬಗ್ಗಿಸಲಾರರು! ಏನು ಹೇಳಿ? ಹಹ್ಹಹ್ಹ! ಆ ಗುಡ್ಡ
ಹತ್ತುವಾಗ ಒಂದಿಷ್ಟು ದಣಿವಾಗಿತ್ತು ನಿಜ. ಇನ್ನೇನು? ಇಳಿಜಾರಿನಲ್ಲಿ ಜಾರಿಕೊಂಡು
ಹೋಗಾದಷ್ಟೆ?” ಎಂದು ಪ್ರತಿಭಟಿಸಿ. ಇಳಿದನಿಯಲ್ಲಿಯೆ ತಮ್ಮ ನೆನಪನ್ನು ಹೇಳತೊಡಗಿದರು:
ಐಗಳು ಮುದುಕನಿಗೆ ಭಾವೋದ್ರೇಕವಾದೀತೆಂದು ಹೆದರಿ ಮರುಮಾತಾಡದೆ ಸುಮ್ಮನೆ ಆಲಿಸಿದರು:
“ನೋಡಿ, ಇಲ್ಲಿ ಕಾಣ್ತದಲ್ಲಾ ಈ ಒಟ್ಟೆ, ಇದು ನಮ್ಮ ದೊಡ್ಡಣ್ಣನ ಕತ್ತಿ ಕೆಲಸ.
ಅವೊತ್ತಿನ ದೊಡ್ಡ ಬ್ಯಾಟೇಲಿನ ಈ ಮರದ ಬುಡದಾಗೇ ಬಿಲ್ಲಿಗೆ ನಿಂತಿದ್ದ. ಜೀಂವಾದಿ
’ಹಾರುವ’ ಒಳ್ಳೆ ಕಂಡಿ ಅಂತಾ ಅಂವನ್ನೆ ಇಲ್ಲಿ ನಿಲ್ಲಿಸಿತ್ತು. ಅವನ ಈಡು ಅಂದ್ರೆ ’ಸೈ!
ಬಿತ್ತು!’ ಅಂತಾನೆ ಗೊತ್ತು ಎಲ್ರಿಗೂ, – ’ಯಾರದ್ದೋ ಈ ಈಡು?’ “ಯಾರದ್ದಪ್ಪಾ? ಕೂಡೆ
ಕೂಡೆ ಎಲ್ಡು ಈಡು ಕೇಳಿಸ್ತು?’ ’ಹಂಗಾರೆ ನಮ್ಮ ಹಳೆಮನೆ ದೊಡ್ಡಣ್ಣ ಹೆಗ್ಗಡೇರ್ದೆ
ಇರ್ಬೆಕು’ ’ ಅವರದ್ದೆ ಇರಬೈದು, ಜೊಡುನಲ್ಲಿ ಇನ್ನ್ಯಾರ್ಹತ್ರ ಅದೆ?’ ’ಏನು ಎಲ್ಡು ಬಂದಿ
ಬಿದ್ದವೇನೋ? ಕೂಡೆ ಕೂಡೆ ಎಲ್ಡು ಈಡು ಕೇಳಿಸ್ತಲ್ಲಾ?’ ’ನಿಂಗೊತ್ತಿಲ್ಲ, ದೊಡ್ಡಣ್ಣ
ಹೆಗ್ಗಡೇರ ಈಡುಗಾರಿಕೆ. ಚಂಗ್ ಚಂಗ್ ಚಂಗ್ ಅಂತಾ ಹಳೀನಲ್ಲಿ ಹಾರ್ತಾ ಇದ್ರೂ, ಕಣ್ಣಿಗೆ
ಕಾಣಿಸ್ದೆ ಮಿಂಚು ನೆಗೆದ್ಹಾಂಗೆ ನೆಗೀತಾ ಇದ್ರೂ ಅವರು ಇಟ್ಟ ಗುರಿ ತಪ್ಪಾದಿಲ್ಲ!’ –
ಹಿಂಗೆ ಮಾತಾಡ್ಕೋತಿದ್ರು ಹಳೀನವ್ರು, ಐಗಳೇ! ಅವೊತ್ತು ಎಲ್ಡು ಹಂದೀನೂ ಕೂಡೆಕೂಡೆ ಅವನು
ಹೊಡೆದಿದ್ದು. ಒಂದು ದಡ್ಡೆ, ಒಂದು ಸಲಗ! ಆವೊತ್ತೆ ಅಂತಾ ನೆಂಪು ನಂಗೆ, ಒಂದೋ ಎಲ್ಡೋ
ನಾಯೀನೂ ಸತ್ವು! ಹಂದಿ ಕ್ವಾರೀಗೆ ಸಿಕ್ಕಿ! ಕೋವಿ ಈಡಿಗೂ ಸಿಕ್ಕಿ! ಹಂದಿ ಹೊಡೆದಾದ
ಮ್ಯಾಲೆ ತಿರುಗಿ ನೋಡ್ತಾನಂತೆ: ಜೇನು ಎದ್ದುಬಿಟ್ಟದೆ! ತುಡುವೆ, ಕರಿತುಡುವೆ! ಇದೇ
ಒಟ್ಟೇಲಿ! ಆಗ ನಮ್ಮ ದೊಡ್ಡಣ್ಣ ಶಂಕ್ರ ಇಬ್ಬರೂ ಒಳ್ಳೆ ಪರಾಯಕ್ಕೆ ಬಂದ ಹುಡುಗರು:
ಹೆಣ್ಣು ಕೊಡಾಕೆ ನಾ ಮುಂದೆ ನಾ ಮುಂದೆ ಅಂತಾ ಬರ್ತಿದ್ದ ಕಾಲ ಅಂತಾ ಇಟ್ಕೊಳ್ಳಿ! ಸರಿ,
ಇಬ್ಬರೂ ಸೇರಿ, ಬ್ಯಾಟೆ ಕತ್ತೀಲೆ ಒಟ್ಟೆ ಕಂಡೀನ ಕಡಿದೂ ಕಡಿದೂ ಮಾಡಿ ಜೇನು ಕಿತ್ತೇ
ಕಿತ್ರು! ನಮ್ಮ ದೊಡ್ಡಣ್ಣನೆ ಕಿತ್ತಿದ್ದು. ಶಂಕರಗೆ ಬ್ಯಾಟಿ ಗೀಟೆ ಒಂದೂ ಹಿಡಿಸ್ತಾನೆ
ಇರಲಿಲ್ಲ; ಈಗ ಹ್ಯಂಗೋ ಆಗ್ಲೂ ಹಂಗೇ! ಅಂವ ಓಡಿಹೋಗಿ ದೂರ ನಿಂತಿದ್ನಂತೆ! ದೊಡ್ಡಣ್ಣಗೆ
ಹೊಡ್ದಿದ್ವೂ ಹುಳಾ, ಕಣ್ಣೂ ಮಕಾ ಮೋರೆ ನೋಡದೆ! ಮರುದಿನ ಅಂವನ ಮಕಾಊದಿ ಕುಂಬಳಕಾಯಿ
ಆಗಿತ್ತು! ಕಣ್ಣು ಎಲ್ಲವೆ ಅಂತಾನೆ ಗೊತ್ತಾಗ್ತಿರಲಿಲ್ಲ! ಹಿಹ್ಹಿಹ್ಹಿಹ್ಹಿ! ಅರಸಿನ
ಮಸಿಕೆಂಡ ತೇದು ಹಚ್ಚಿ, ಹುಲಿಬಣ್ಣ ಆಗಿಬಿಟ್ಟಿತ್ತು! ಹಿಹ್ಹಿಹ್ಹಿಹ್ಹಿ! ನೆನಸಿಕೊಂಡರೆ
ನಂಗೆ ನಗೆ ತಡೆಯಾಕೆ ಆಗಾದಿಲ್ಲ. ಹಿಹ್ಹಿಹ್ಹಿಹ್ಹಿ!!” ಹೆಗ್ಗಡೆಯವರು ಮತ್ತೆ ಸಿಂಬಳ
ಸುರಿದು ನಗೆ ಕಣ್ಣೊರೆಸಿಕೊಂಡರು. ಮುಂದೆ ಮಾತಾಡದೆ ಸುಮ್ಮನೆ ಏನನ್ನೊ ಯೋಚಿಸುವಂತೆ ನೆಲ
ನೋಡುತ್ತಾ ಕುಳಿತುಬಿಟ್ಟರು.
ಮತ್ತೆ ತುಸು ಹೊತ್ತಿನ ಮೇಲೆ, ಅವರಿಗೆ ದಣಿವಾರಿದ ಅನಂತರ, ಐಗಳು ಅವರನ್ನು ಮೆಲ್ಲಗೆ
ನಡೆಸಿಕೊಂಡು ಹೊರಟರು. ಮುಂದೆ ಅವರು ಮಾತಾಡುವುದನ್ನೇ ನಿಲ್ಲಿಸಿಬಿಟ್ಟರು.
ಮೇಗರವಳ್ಳಿಯನ್ನು ಸಮೀಪಿಸುತ್ತಿದ್ದಾಗ ಎದುರಿನಿಂದ ಒಂದು ಹೊಲೆಯರ ಗುಂಪು ಸಾಲಾಗಿ
ಕಾಡುದಾರಿಯಲ್ಲಿ ಬರುತ್ತಿದ್ದುದು ಕಾಣಿಸಿತು, ಹತ್ತಿರಕ್ಕೆ ಬಂದಾಗ ಐಗಳಿಗೆ
ಗೊತ್ತಾಯಿತು, ಅವರೆಲ್ಲ ಬೆಟ್ಟಳ್ಳಿ ಹೊಲಗೇರಿಯವರು ಎಂದು. ಒಬ್ಬಿಬ್ಬರನ್ನು
ಗುರುತಿಸಿಯೂಬಿಟ್ಟರು: ಬರುತ್ತಿದ್ದ ಗಂಡಸರಲ್ಲಿ ದೊಡ್ಡಬೀರ, ಅವನ ಹಿರಿಯ ಮಗ ಸಣ್ಣಬೀರ,
ಅವನ ತಮ್ಮ ಪುಟ್ಟಬೀರ ಇದ್ದರು; ಹೆಂಗಸರಲ್ಲಿ ದೊಡ್ಡಬೀರನ ಹೆಂಡತಿ ಸೇಸಿ, ಅವನ ಮಗಳು
ತಿಮ್ಮಿ, ಪುಟ್ಟಬೀರನ ಹೆಂಡತಿ ಚಿಕ್ಕಪುಟ್ಟಿ ಇದ್ದರು.
ಹಳೆಮನೆ ದೊಡ್ಡ ಹೆಗ್ಗಡೆಯವರನ್ನು ಗುರುತಿಸಿದೊಡನೆಯೆ ಗಂಡಾಳುಗಳೆಲ್ಲ, ಹೊಟ್ಟೆ
ಅಡಿಯಾಗಿ ಮಣ್ಣು ಹಣೆ ಮುಟ್ಟುವಂತೆ, ಎಲ್ಲಿ ಅಂದರಲ್ಲಿ ನಿಂತಿದ್ದ ಎಡೆಯಲ್ಲಯೆ ಮುಳ್ಳು
ಪೊದೆ ಒಂದನ್ನೂ ಲೆಕ್ಕಿಸದೆ ’ಅಡ್ಡಬಿದ್ದೆ ಒಡೇರಿಗೆ!’ ಎಮದು ಪದ್ದತಿಯ ಗೌರವವನ್ನು
ಯಾಂತ್ರಿಕವಾಗಿ ಉಚ್ಚರಿಸುತ್ತಾ ಉದ್ದುದ್ದಕ್ಕಾಗಿ ಅಡ್ಡಬಿದ್ದು ದೀರ್ಘದಂಡ ನಮಸ್ಕಾರ
ಮಾಡಿದರು! ಹೆಣ್ಣಾಳುಗಳೆಲ್ಲಾ ಒಡೆಯರ ಕಣ್ಣಿಗೆ ನೇರವಾಗಿ ಬಿದ್ದರೆ ಅವರಿಗೆಲ್ಲಿ ಮೈಲಿಗೆ
ಸೀಕುವುದೊ ಎಂದು ಹೆದರಿದಂತೆ ಹಳುವಿನಲ್ಲಿ ಅಲ್ಲಲ್ಲಿಯೆ ಮರೆಹೊಕ್ಕರು.
ಹೆಗ್ಗಡೆಯವರು ಒಂದು ಮಾತನ್ನೂ ಆಡಲಿಲ್ಲ. ಐಗಳು “ಎಲ್ಲಿಂದ ಬರ್ತಿದ್ದಿರೊ?” ಎಂದು
ಕೇಳಿದರು, ಅವರೆಲ್ಲ ಎದ್ದು ಕೈಮುಗಿದುಕೊಂಡು ಸೊಂಟಬಾಗಿ ದೂರ ಪಕ್ಕಕ್ಕೆ ಸರಿದು
ನಿಂತಮೇಲೆ.
ತಿಮ್ಮಿಯ ಅಪ್ಪ. ಮುದುಕ ದೊಡ್ಡಬೀರ “ಸಿಂಬಾವಿ ಕೇರಿಗೆ ಹೋಗಿದ್ವಯ್ಯಾ, ಹುಡುಗಿ ಕರಕೊಂಡು ಹೋಗ್ತಾ ಇದ್ದೀಂವಿ, ನಮ್ಮ ಕೇರಿಗೆ” ಎಂದನು.
ಬೇರೆಯ ಸನ್ನಿವೇಶವಾಗಿದ್ದರೆ ಐಗಳು ಇನ್ನಷ್ಟು ಪ್ರಶ್ನೆ ಹಾಕಿ ಉತ್ತರ ಪಡೆದು, ತಮ್ಮ
ಕಿವಿಗೆ ಬಿದ್ದಿದ್ದ ಗಾಳಿಸುದ್ದಿಗೆ ವಿವರಣೆಯನ್ನೊ ಸಮರ್ತನೆಯನ್ನೊ ದೊರಕಿಸಿ
ಕೊಳ್ಳುತ್ತಿದ್ದರು. ಆದರೆ ದಣಿದ ದುಃಖಿ ಹೆಗ್ಗಡೆಯವರಿದ್ದ ಸ್ಥಿತಿಯಲ್ಲಿ ಅದೊಂದನ್ನೂ
ಕೇಳಲು ಅವರಿಗೆ ಮನಸ್ಸಾಗಲಿಲ್ಲ. ಹೆಗ್ಗಡೆಯವರು ಸರಿಯಾಗಿದ್ದ ಸಮಯದಲ್ಲಿ, ಮಾತನಾಡಲು
ಅವರೂ ಒಂದು ಗಂಡೆಯಾದರೂ ಹರಟೆ ಕೊಚ್ಚದೆ ಬಿಡುತ್ತಿರಲಿಲ್ಲ. ಗುತ್ತಿ ತಿಮ್ಮಿಯರ ಶೃಂಗಾರ
ಸಾಹಸದ ಕಥೆಯನ್ನೆಲ್ಲ ಬಯಲಿಗೆಳೆಯುತ್ತಿದ್ದರು ಮಾತ್ರವಲ್ಲದೆ, ಹಿಂದಿನ ದಿನ ಸಾಯಂಕಾಲ
ಸಿಂಬಾವಿಯ ಹೊಲಗೇರಿಯ ಬಳಿ ನಡೆದಿದ್ದ ಯಾವ ದುರ್ಘಟನೆಯನ್ನು ಬೆಟ್ಟಳ್ಳಿಯ ದೊಡ್ಡಬೀರನು
ಮುಚ್ಚಿಡಲು ಪ್ರಯತ್ನಿಸಿದ್ದನೊ ಅದನ್ನೂ ಹೊರಹಾಕದೆ ಬಿಡುತ್ತಿರಲಿಲ್ಲ. ಆದರೂ
ಸ್ವಾರಸ್ಯವಾದ ಸಂವಾದಕ್ಕೆ ಅವಕಾಶ ಕಲ್ಲಿಸಿಕೊಳ್ಳುವ ಅಂತಹ ಘಟನಾಗರ್ಭಿತಪ್ರಸಂಗ ತಮ್ಮ
ಪಾದಗಳೆಡೆಗೇ ಬಂದಿದ್ದರೂ, ಹೆಗ್ಗಡೆಯವರು ಸಾಕ್ಷಿಪ್ರಜ್ಞರಾದಂತೆ ನಿಂತಿದ್ದರು; ಅವರ
ಸಾಮಾನ್ಯವಾದ ಉಸಿರೂಸುಯ್ಯುಸಿರಾಗಿದ್ದುದು ಬಳಿಯಿದ್ದವರಿಗೆ ಗೊತ್ತಾಗುವಂತಿತ್ತು.
ಆದ್ದರಿಂದಲೆ ಐಗಳ ಮುಂದಿನ ಮಾತು, ಗುತ್ತಿ ಹಾರಿಸಿಕೊಂಡು ಹೋಗಿದ್ದ ತಿಮ್ಮಿಯನ್ನು
ಬಲಾತ್ಕಾರವಾಗಿ ಹಿಂದಕ್ಕೆ ಎಳೆದು ತರಬೇಕೆಂದು ಬೆಟ್ಟಳ್ಳಿ ಕಲ್ಲಯ್ಯಗೌಡರ
ಕಟ್ಟಜ್ಞೆಯನ್ನು ಕುರಿತು ತಾವು ಕೇಳಿದ್ದ ಸುದ್ದಿಯ ವಿಚಾರವಾಗಿರದೆ, ಸಂಪೂರ್ಣವಾಗಿ
ಬೇರೆಯ ತರಹದ್ದಾಗಿ ಅನಿರೀಕ್ಷಿತ ಎಂಬಂತ್ತಿತ್ತು.
ಐಗಳು ದೊಡ್ಡಬೀರನಿಗೆ “ಯಾರಾದರೂ ಇಬ್ಬರನ್ನ ಕಳಿಸೋ, ನಮ್ಮನ್ನ ಮೇಗರೊಳ್ಳಿಗೆ ಮುಟ್ಟಿಸಿ ಬರಲಿ” ಎಂದರು ಪಿಸುದನಿಯಲ್ಲಿ, ಹೆಗ್ಗಡೆಯವರಿಗೆ ಕೇಳಿಸಿದಂತೆ.
ದೊಡ್ಡಬೀರನಿಗೆ ತುಸು ಬೆಕ್ಕಸವಾಯಿತು. ಮೇಗರವಳ್ಳಿ ಇನ್ನೊಂದು ಮೈಲಿಯೊ
ಅರ್ಧಮುಕ್ಕಾಲು ಮೈಲಿಯೊ ಇರುವಲ್ಲಿ, ಜೊತೆಗೆ ಇಬ್ಬರು ಯಾಕೆ ಬೇಕು ಎಂದು. ಆದರೆ ಅವನು
ಪ್ರಶ್ನಿಸಲಿಲ್ಲ. ಐಗಳೆ ಅವನ ಪ್ರಶ್ನಮುಖಮುದ್ರೆಯನ್ನರಿತು ಕಣ್ಣು ಮಿಸುಕಿನಿಂದ
ಹೆಗ್ಗಡೆಯವರ ಆಯಾಸ್ಥಿತಿಯನ್ನು ನಿರ್ದೇಶಿಸಿ, ಏನಾದರೂ ವಿಷಯ ಪರಿಸ್ಥಿತಿಯೊದಗಿದರೆ ಸಹಾಯ
ಬೇಕಾಗಬಹುದು ಎಂಬುದನ್ನು ಸೂಚಿಸಿದರು.
ಅಪ್ಪನ ಕಣ್ಣಪ್ಪಣೆಯಂತೆ ಸಣ್ಣಬೀರ ಪುಟ್ಟಬೀರ ಇಬ್ಬರೂ ಐಗಳು ಮೆಲ್ಲಗೆ ನಡೆಸಿಕೊಂಡು
ಹೋಗುತ್ತಿದ್ದ ಹಳೆಮನೆ ಒಡೆಯರ ಹಿಂದೆ ತುಸು ದೂರದಲ್ಲಿಯೆ ಮೈಗಾವಲಾಗಿ ಹೊರಟರು. ಅತ್ಯಂತ
ಅನಿವಾರ್ಯ ವಿಷಮಸ್ಥಿತಿ ಒದಗಿದಲ್ಲದೆ ಹೊಲೆಯರು ಮೈಮುಟ್ಟಿ ನೆರವೀಯುವಂತಿರಲಿಲ್ಲ!
ಒಂದರ್ಧ ಮೈಲಿ ಹೋಗುವುದರಲ್ಲಿಯೆ ಹೆಗ್ಗಡೆಯವರ ಕಾಲು ತತ್ತರಿಸತೊಡಗಿತು. ಏನನ್ನೊ
ಹೇಳಲು ಪ್ರಯತ್ನಪಟ್ಟರು, ಆಗಲಿಲ್ಲ. ತಮ್ಮ ಭರವನ್ನೆಲ್ಲ ಐಗಳ ಮೇಲೆ ಬಿಟ್ಟು ವಾಲಿದರು.
ಕುಳ್ಳಿನಲ್ಲಿ ಸಮಾನವಾಗಿದ್ದರೂ ಆಳುತನದಲ್ಲಿ ಹೆಗ್ಗಡೆಯವರಿಗಿಂತಲೂ ಬಹಳ ಮಟ್ಟಿಗೆ
ಕಡಿಮೆಯಾಗಿದ್ದ ಐಗಳು ನಿತ್ತರಿಸಲಾರದೆ ಅವರನ್ನು ಹೇಗೋ ಪ್ರಯತ್ನಪೂರ್ವಕ ಆತು ನಿಂತು,
ಹಿಂದೆ ಬರುತ್ತಿದ್ದವರನ್ನು ನೆರವಿಗೆ ಕರೆದರು. ಹೊಲೆಯಿಬ್ಬರೂ ಓಡಿ ಸಾರಿದರು. ಆದರೆ
ಮುಟ್ಟಲು ಹಿಂಜರಿದು ನಿಂತರು. ಐಗಳು ಹುಬ್ಬುಗಂಟಿಕ್ಕಿ ಸೂಚಿಸಿದ ಮೇಲೇಯೆ ಅವರಿಬ್ಬರು
ಹೆದರಿ ಹೆದರಿ, ವಿಷಸರ್ಪ ನುಗ್ಗಿದ ಗರ್ಭಗುಡಿಗೆ ಬ್ರಾಹ್ಣಣ ಪೂಜಾರಿ ಹಾವನ್ನು ಹೊಡೆದು
ತನ್ನನ್ನು ಕಾಪಾಡಿ ಎಂದು ಆರ್ತನಾದದಿಂದ ಆಹ್ವಾನಿಸಲು ಅಂಜಿ ಅಂಜಿ ಒಳನುಗ್ಗುವ ದಂಡಧಾರಿ
ಶೂದ್ರಂತೆ, ಹೆಗ್ಗಡೆಯವರನ್ನು ಬೀಳದಂತೆ ಆತುಹಿಡಿದು, ಮೆಲ್ಲಗೆ ನಡೆಸಿಕೊಂಡು ಹೋಗಿ,
ಬಿದ್ದಿದ್ದ ಒಂದು ಮರದ ದಿಂಡಿನ ಮೇಲೆ ಕೂರಿಸಿದರು.
“ಓಡಿ ಹೋಗು, ಅಂತಕ್ಕಸೆಡ್ತಿ ಮನೆಗೆ. ಇಸ್ಕೂಲು ಕಟ್ತಾರಲ್ಲಾ ಅಲ್ಲಿ ಬೆಟ್ಟಳ್ಳಿ
ದೇವಯ್ಯಗೌಡ್ರು, ಪಾದ್ರಿ, ಕಣ್ಣಪ್ಪ ಎಲ್ಲ ಇರ್ತಾರೆ. ನಾ ಹೇಳ್ದೆ ಅಂತಾ ಹೇಳು,
ಹಿಂಗಾಗಿದೆ ಅಂತಾ. ಹೆಗ್ಗಡೇರನ್ನ ಎತ್ತಿಕೊಂಡು ಹೋಗಾಕೆ ಬೇಗ ಒಂದು ಡೋಲಿ ಮಾಡಿಕೊಂಡು
ಬರಲಿ.”
ಪುಟ್ಟಬೀರ ಐಗಳ ಮಾತು ಮುಗಿಯುವುದರೊಳಗೆ ವಿಷಯವನ್ನೆಲ್ಲ ಗ್ರಹಿಸಿ ಓಡಿ ಹಳುವಿನಲ್ಲಿ ಕಣ್ಮರೆಯಾದನು.
ದೇವಯ್ಯ ಬೈಸಿಕಲ್ಲು ಹತ್ತಿ ಅಂತಕ್ಕಸೆಡ್ತಿಯ ಮನೆಯಿಂದ ಇಸ್ಕೂಲು
ಕಟ್ಟುತ್ತಲಿದ್ದಲ್ಲಿಗೆ ಹೋಗುತ್ತಿದ್ದುದನ್ನೆ ನೋಡುತ್ತಾ ಬಾಗಿಲು ಸಂಧಿಯಲ್ಲಿ ನಿಂತಿದ್ದ
ಕಾವೇರಿಯನ್ನು ಕದ್ದು ನೋಡುತ್ತಿದ್ದು, ತನ್ನೊಳಗೆ ತಾನೆ ಏನನ್ನೊ ಬಗೆದು ನಗುತ್ತಾ,
ಚೀಂಕ್ರ ಸೇರೆಗಾರ ತಾನೂ ಇಸ್ಕೂಲಿನ ಹತ್ತಿರಕ್ಕೆ ಹೋಗಲೆಂದು ಉಣುಗೋಲನ್ನು
ದಾಟುತ್ತಿದ್ದಾಗ, ಏದುಸಿರಾಗಿ ಓಡಿಬರುತ್ತಿದ್ದ ಪುಟ್ಟಬೀರನನ್ನು ಕಂಡನು. ಅವನು ಹತ್ತಿರ
ಬಂದವನೆ ಮೇಲುಸಿರು ಕೆಲವುಸಿರಾಗಿ “ಎ….ಎ….ಎಲ್ಲಿ ನ….ನಮ್ಮ ಸ….ಸ….ಸಣ್ಣಯ್ಯ.
ಹ….ಹ….ಹಳೆಮನೆ….ಹೆಗ್ಗಡೇರು….ಹೋ….ಹೋದ್ರು….” ಎಂದು ಹೆಗ್ಗಣ್ಣಾಗಿ ನಿಂತನು.
ದಿಗಿಲುಗೊಂಡ ಚೀಂಕ್ರ, ದಿಕ್ಕುತೋಚದವನಂತೆ, ಸ್ಕೂಲು ಕಟ್ಟಡದ ಕಡೆಗೆ ಹೋಗುತ್ತಿದ್ದ
ಬೈಸಿಕಲ್ಲಿನ ಕಡೆಗೆ ಕೈತೋರಿಸಿದೊಡನೆಯೆ ಪುಟ್ಟಬೀರ ಓಡಿಹೋಗಿ ದೇವಯ್ಯಗೆ ಐಗಳು
ಹೇಳಿದ್ದನ್ನು ಗಾಬರಿ ಗಾಬರಿಯಾಗಿ ಹೇಳಿದನು.
ದೇವಯ್ಯನಿಗೆ ಏನು? ಎಂತು? ಏಕೆ? ಒಂದೂ ಅರ್ಥವಾಗಲಿಲ್ಲ. ಮನೆಯಲ್ಲಿ ಸುಖವಾಗಿರಬೇಕಾಗಿದ್ದ 'ಹಳೆಮನೆ ದೊಡ್ಡಪ್ಪಯ್ಯ' ಿಲ್ಲಿಗೆ ಎಲ್ಲಿಂದ ಬಂದರು? ಹಲವು ವರ್ಷಗಳು ಮನೆಯನ್ನೆ ಬಿಟ್ಟು ಹೊರಡದಿದ್ದ ಅವರು ಇವತ್ತೇಕೆ ಹುಲಿಕಲ್ಲು ನೆತ್ತಿಯ ಕಾಡಿಗೆ ಬಂದದ್ದು? ಐಗಳೇನೋ ಬರುತ್ತಾರೆ ಎಂಬುದು ಗೊತ್ತಿತ್ತು. ಆದರೆ ಅವರೇಕೆ ಈ ಮುದುಕನನ್ನು ಕರೆತರುತ್ತಾರೆ? ಅವರಿಗೇನು ಅಷ್ಟು ಬುದ್ಧಿ ಇರಲಿಲ್ಲವೆ? ಎಂಬೆಲ್ಲಾ ಯೋಚನೆಗಳು ಮಿಮಚು ಸಂಚರಿಸುವಂತೆ ಜಾಲವತ್ತಾಗಿ ತಲೆತುಂಬಿದವು. ಮೈಮೇಲೆ ಹಠಾತ್ತಾಗಿ ಕುದಿನೀರು ಚೆಲ್ಲಿದಂತಾಯಿತು. ಪಾದ್ರಿಗೆ ಪಂಡಿತನಿಗೆ ಸಮಾಚಾರ ತಿಳಿಸಿ, ಬೇಕಾದ ಸಲಕರಣೆಗಳನ್ನೆಲ್ಲ ತೆಗೆಯಿಸಿಕೊಂಡು, ಅವರನ್ನೂ ಕರೆದುಕೊಂಡು ಪುಟ್ಟಬೀರನ ಹಿಂದೆ ಓಡಿತ್ತಲೆ ಹೋದನು, ಕಾಡಿನ ಕೊರಕಲು ಹಾದಿಯಲ್ಲಿ.
ಜೀವರತ್ನಯ್ಯ ತಾನು ಪ್ರವಾಸದಲ್ಲಿರುವಾಗ ಯಾವಾಗಲೂ ತನ್ನ ಬಳಿ ಆಪದ್ಧನವಾಗಿ ಇಟ್ಟುಕೊಂಡಿರುತ್ತಿದ್ದ ಔಷಧಿಪೆಟ್ಟಿಗೆಯನ್ನು ತನ್ನೊಡನೆ ಕೊಂಡೊಯ್ಯುವುದನ್ನು ಮರೆತಿರಲಿಲ್ಲ.
ದೇವಯ್ಯನಿಗೆ ಏನು? ಎಂತು? ಏಕೆ? ಒಂದೂ ಅರ್ಥವಾಗಲಿಲ್ಲ. ಮನೆಯಲ್ಲಿ ಸುಖವಾಗಿರಬೇಕಾಗಿದ್ದ 'ಹಳೆಮನೆ ದೊಡ್ಡಪ್ಪಯ್ಯ' ಿಲ್ಲಿಗೆ ಎಲ್ಲಿಂದ ಬಂದರು? ಹಲವು ವರ್ಷಗಳು ಮನೆಯನ್ನೆ ಬಿಟ್ಟು ಹೊರಡದಿದ್ದ ಅವರು ಇವತ್ತೇಕೆ ಹುಲಿಕಲ್ಲು ನೆತ್ತಿಯ ಕಾಡಿಗೆ ಬಂದದ್ದು? ಐಗಳೇನೋ ಬರುತ್ತಾರೆ ಎಂಬುದು ಗೊತ್ತಿತ್ತು. ಆದರೆ ಅವರೇಕೆ ಈ ಮುದುಕನನ್ನು ಕರೆತರುತ್ತಾರೆ? ಅವರಿಗೇನು ಅಷ್ಟು ಬುದ್ಧಿ ಇರಲಿಲ್ಲವೆ? ಎಂಬೆಲ್ಲಾ ಯೋಚನೆಗಳು ಮಿಮಚು ಸಂಚರಿಸುವಂತೆ ಜಾಲವತ್ತಾಗಿ ತಲೆತುಂಬಿದವು. ಮೈಮೇಲೆ ಹಠಾತ್ತಾಗಿ ಕುದಿನೀರು ಚೆಲ್ಲಿದಂತಾಯಿತು. ಪಾದ್ರಿಗೆ ಪಂಡಿತನಿಗೆ ಸಮಾಚಾರ ತಿಳಿಸಿ, ಬೇಕಾದ ಸಲಕರಣೆಗಳನ್ನೆಲ್ಲ ತೆಗೆಯಿಸಿಕೊಂಡು, ಅವರನ್ನೂ ಕರೆದುಕೊಂಡು ಪುಟ್ಟಬೀರನ ಹಿಂದೆ ಓಡಿತ್ತಲೆ ಹೋದನು, ಕಾಡಿನ ಕೊರಕಲು ಹಾದಿಯಲ್ಲಿ.
ಜೀವರತ್ನಯ್ಯ ತಾನು ಪ್ರವಾಸದಲ್ಲಿರುವಾಗ ಯಾವಾಗಲೂ ತನ್ನ ಬಳಿ ಆಪದ್ಧನವಾಗಿ ಇಟ್ಟುಕೊಂಡಿರುತ್ತಿದ್ದ ಔಷಧಿಪೆಟ್ಟಿಗೆಯನ್ನು ತನ್ನೊಡನೆ ಕೊಂಡೊಯ್ಯುವುದನ್ನು ಮರೆತಿರಲಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ