ಮಲೆಗಳಲ್ಲಿ ಮದುಮಗಳು-೨೦

ಗುತ್ತಿ ಆ ಅರೆಕಲ್ಲನ್ನು ಸೇರಿ, ಅದರ ಮೇಲೆಯೆ ಕಲ್ಲುಸಂಧಿಯಲ್ಲಿ ಬೆಳೆದಿದ್ದ ಕಾರೆಮಟ್ಟಿನ ಕೆಳಗಡೆಗೆ  ಹೊಂಡದಲ್ಲಿದ್ದ ದಟ್ಟ ಕೇದೆಗೆ ಹಿಂಡಲಿನ ಸಮೀಪದಲ್ಲಿ, ತಿಮ್ಮಿ ತಾನು ಹೊರುಡುವಾಗ ಕೊಟ್ಟಿದ್ದ ಎಚ್ಚರಿಕೆಯನ್ನು ನೆನೆದು ತೀರ ಹತ್ತಿರಕ್ಕೆ  ಹೋಗದೆ, ಕೇರಿಗೆ ಹೋಗುತ್ತಿದ್ದ  ಕಾಲುದಾರಿಗೂ ಒಡೆಯರಮನೆಗೆ ಅಗಚಿ ಹೋಗುತ್ತಿದ್ದ ಕಾಲುದಾರಿಗೂ ನಡುವೆ ಒಂದು ಸಣ್ಣ ಹಾಸುಬಂಡೆಯ ಮೇಲೆ ಕಾದು ಕುಳಿತನು. ಬೆಟ್ಟಳ್ಳಿ ಕಡೆಗೆ ಹೋಗುವವರಿಗಾಗಲಿ ಅಥವಾ ಅತ್ತಿಂದ ಬರುವವರಿಗಾಗಲಿ ಯಾರಿಗೂ ಗುತ್ತಿ ಅಲ್ಲಿರುವುದು ಗೊತ್ತಾಗುವಂತಿರಲಿಲ್ಲ. ಆದರೆ ಗುತ್ತಿಗೆ ಅವರಾಡುವ ಮಾತು ಚೆನ್ನಾಗಿ ಕೇಳಿಸುವಂತಿತ್ತು.
ಬೈಸಿಕಲ್ಲಿನ ಪ್ರಸಂಗವನ್ನು ಮುಗಿಸಿಕೊಂಡು  ಹೂವಳ್ಳಿ, ಕೋಣೂರು, ಹಳೆಮನೆಗಳಿಗೆ ಬೆಟ್ಟಳ್ಳಿಯ ಹಕ್ಕಲಿನಿಂದ ಹಿಂದಿರುಗುತ್ತಿದ್ದ ಜನರು ಸಣ್ಣಸಣ್ಣ ದೊಡ್ಡದೊಡ್ಡ ಗುಂಪುಗಳಾಗಿ ನಾನಾ ವಿಧವಾಗಿ ಹರಟುತ್ತಾ ಹೋದರು. ನಸುಗಪ್ಪು ಕವಿಯುತ್ತಿದ್ದಾಗ ಗುತ್ತಿಯ ಕಿವಿಗೆ ಯಾರದೋ ಪರಿಚಿತಧ್ವನಿ  ಬಿದ್ದ ಹಾಗಾಯಿತು, ಮಾತನಾಡುತ್ತಿದ್ದವರು ಐತ ಚೀಂಕ್ರ ಹೇಳಿದ “ನಿಂತೂ ನಿಂತೂ  ಸಾಕಾಯ್ತೆ…. ಒಂದು ಬಾಯಿಗೆ ಹಾಕ್ಕೊಂಡು ಹೋಪ.”
ಗುತ್ತಿ ನೋಡುತ್ತಿದ್ದಂತೆಯೆ ಅವರಿಬ್ಬರೂ ಕಾರೇಮಟ್ಟಿನ ಆವೆ  ಅರೆಕಲ್ಲಿನ ಮೇಲೆ ಕುಳಿತಕೊಂಡರು. ಅವರು ಕೂತ್ತಿದ್ದ ಜಾಗ ಎತ್ತರದಲ್ಲಿತ್ತಾದ್ದರಿಂದ ಗುತ್ತಿಗೆ ಆ ಬೈಗುಗುಪ್ಪಿನಲ್ಲಿ ಅವರು ಸ್ಪಷ್ಟವಾಗಿ  ಕಾಣಿಸದಿದ್ದರೂ ಅವರ ಸುಸ್ಪಷ್ಟವಾಗಿ ಕೇಳಿಸುತ್ತಿತ್ತು.
ಆದರೆ ಗುತ್ತಿಗೆ ತಾನಿದ್ದ ಮನಃಸ್ಥಿತಿಯಲ್ಲಿ ಅವರ ಸಂವಾದ ಆಲಿಸುವುದು ಬೇಕಿರಲಿಲ್ಲ… ಅದಕ್ಕೆ ಬದಲಾಗಿ, ಅವರಿಬ್ಬರೂ ಅಲ್ಲಿ ಕೊತದ್ದು ಅವನ ಮನಸ್ಸಿಗೆ ತುಂಬ ಆತಂಕವಾಗಿತ್ತು. ತನ್ನನ್ನು ಹುಡುಕಿಕೊಂಡು ತಿಮ್ಮಿ ಗುಟ್ಟಾಗಿ  ಬಂದಾಗ, ಇವರು ಇಲ್ಲಿಯೆ ಕುಳಿತಿದ್ದರೆ, ಏನುಗತಿ? ಆ ಕತ್ತಲೆಯಲ್ಲಿ ಅವರನ್ನೆ ನಾನು ಎಂದು ತಿಳಿದು ಏನು ಆಚಾತುರ್ಯಕ್ಕೆ ಎಡೆಯಾಗುವುದೊ? ದೇವರ ದಯದಿಂದ ಅವಳು ಬರುವುದಕ್ಕೆ ಮುನ್ನವೆ ಇವರಿಬ್ಬರೂ ಎಲೆಅಡಿಕೆ ಪೂರೈಸಿ ಇಲ್ಲಿಂದ ತೊಲಗಿದ್ದರೆ!….ಇದ್ದಕ್ಕಿದ್ದಹಾಗೆ ಗುತ್ತಿಯ ಕಿವಿ ನೆಟ್ಟಗಾಯಿತು. ಅವರಿಬ್ಬರ ಸಂವಾದ ಏನೊ ಸ್ವಾರಸ್ಯಕ್ಕೆ ತಿರುಗಿದಂತಿತ್ತು.
“ನೋಡೂ, ಐತಾ, ನೀನು ಹುಡುಗ. ನಿನಗೆ ಏನೂ ತಿಳಿಯೂದಿಲ್ಲ. ಆದರೆ ಹಮಾ ತಿಳಿದವನ ಹಾಂಗೆ ಎಲ್ಲದರ ಮೇಲೂ ದೊಡ್ಡ ದೊಡ್ಡ ಮಾತಾಡ್ತೀಯಾ!” ಚೀಂಕ್ರನ ಗಡಸುಧ್ವನಿ ಎಂದಿತು.
ಐತನ ಎಳಸುಗಂಟಲು ಉತ್ತರಿಸಿತು “ನಾನೇನು ಹೆಳಿದ್ದೋ ನಿಂಗೆ? ಸಣ್ಣಯ್ಯ ಹೇಳದ್ದನ್ನೆ ಹೇಳ್ದೆ: ‘ಈ ಸಾರಿ ಚೀಂಕ್ರ ಅವನ ಹೆಂಡ್ತೀನ ಕೊಲ್ತಾನೆ. ಈಗಾಗ್ಲೆ ಆರು ಮಕ್ಕಳಾಗಿ, ನಾಕು  ಸತ್ತು  ಬದುಕಿದ್ದು; ಎಲ್ದು ಬದುಕ್ಯೂ ಸಾಯ್ತಾ  ಅವೆ. ಈಗ  ಏಳನೇದೊಂದು ಹುಟ್ಟಾಕೆ ಹತ್ರ ಬಂದದೆ. ಅಂವ ಮಾತ್ರಾ ಕುಡ್ಕೊಂಡು ಬಂದು ಹೆಂಡ್ತಿಗೆ  ಒದೆಯಾದು, ಮಕ್ಕಳಿಗೆ ಬಡಿಯಾದು ಬಿಡ್ಲಿಲ್ಲ!’ ಅಂದ್ರು. ಅದನೆ ನಾ ನಿಂಗೆ ಹೇಳಿದ್ದು. ಗೊತ್ತಾತೆ?”
“ಯಾರು? ಆ ಮುಕುಂದಯ್ಯನಾ?” ಚೀಂಕ್ರನ ಧ್ವನಿಯಲ್ಲಿ ಸಿಟ್ಟುಕ್ಕು ವಂತಿತ್ತು.
“ಹೌದೊ, ಅವರ ಹೇಳಿದ್ದು, ನಿನ್ನ ಒಳ್ಳೇದಕ್ಕೆ!” ಐತನ ವಾಣಿಯಲ್ಲಿ ಸಮರ್ಥನೆ ಇತ್ತು.
ಮೂದಲಿಸುವ ದನಿಯಲ್ಲಿ ಚೀಂಕ್ರ ಬೈದ “ಓಹೋಹೊ! ನಿನ್ನ ಕೂಳು ಹೊತ್ತಿ ಹೋಯ್ತು! ಗೌಡರ ಮಕ್ಕಳ ನಂಬಿ, ನಿನ್ನ ಬಾಯಿಗೆ  ಮಣ್ಣು! ಏಳೇಳ್! ಎಲ್ರಿಗೂ ಬುದ್ಧಿ ಹೇಳೋರು ಆ ಮುಕುಂದಯ್ಯನೋರ ಗುಟ್ಟು, ಬೆಪ್ಪಾ, ನಿಂಗೆ ಗೊತ್ತಿಲ್ಲ ಅಂದ್ರೆ, ಮತ್ತೆ ಯಾರಿಗೂ ಗೊತ್ತಿಲ್ಲ ಅಂತಾ ಮಾಡೀಯಾ?”
“ಸುಮ್ಮಸುಮ್ನೆ ಒಬ್ಬರ ಮ್ಯಾಲೆ ಹೇಳಬಾರ್ದು, ನಾಲಗೇಲಿ ಹುಳಾ ಬಿದ್ದಾತು!”
ಐತನ ಕಟುಧ್ವನಿ.
“ಹಾಂಗಾರೆ ಹೇಳ್ಲಾ?” ಚೀಂಕ್ರನ ಸವಾಲು.
“ಹೇಳು”
“ಖಂಡಿತಾ?”
“ಖಂಡಿತ!”
“ಇವತ್ತು ಬೆಳ್ಳಿಗ್ಗೆ ತೋಟದಾಗೆ…. ಹೇಳ್ಲಾ? ಹೇಳೇಬಿಡ್ಲಾ?”
“ಹೇಳೋ! ಯಾರು ಬ್ಯಾಡ ಅಂತಾರೆ?”
“ಏಡಿ ಹಿಡಿಯಾಕೆ ಅಂತ ನಿನ್ನೂ ಹೆಂಡ್ತೀನೂ ಕರಕೊಂಡು ಹೋಗಿ, ನಿನ್ನ ಒಬ್ಬನ್ನೆ ಉಪಾಯ ಮಾಡಿ ಹಿಂದಕ್ಕೆ ಕಳ್ಸಿದ್ರಲ್ಲಾ?….. ದೊಡ್ಡಗೌಡ್ರು ‘ಹುಚ್ಚು ಮುಂಡೇಗಂಡ, ಓಡು ಬೇಗ’ ಅಣತ ನಿನ್ನ ವಾಪು ಕಳಿಸಿದ್ರಲ್ಲಾ? ಯಾಕೆ ಅಂತ ಮಾಡೀಯಾ?…. “
ಐತ ಉತ್ತರ ಕೊಡಲಿಲ್ಲ. ಅವನ ಮನಸ್ಸು ರಂಗಪ್ಪಗೌಡರಿಂದ ಬೈಸಿಕೊಂಡು ತಾನು ಮುಕುಂದಯ್ಯ ಪೀಂಚಲು ಇದ್ದಲ್ಲಿಗೆ ಹೋದಾಗ, ತಾನು ಕಂಡದ್ದನ್ನೂ ಅನುಭವಸಿದ್ದನ್ನೂ ಮೆಲುಕು ಹಾಕುವಂತಿತ್ತು. ಆಗ ತನ್ನಿಂದ ತೆರೆಯಲಾಗದಿದ್ದರ ಬೀಗ, ಈಗ ಚೀಂಕ್ರ ಒದಗಿಸಿದ್ದ ವ್ಯಾಖ್ಯಾನ ಧ್ವನಿಯ ಬೀಗದ ಕೈಯಿಂದ ತೆರೆಯುವಂತೆ ತೋರತೊಡಗಿತ್ತು. ಅವನ ಹೃದಯದ ತಿಳಿಗೊಳಕ್ಕೆ ಚೀಂಕ್ರ ಕಲ್ಲೆಸೆದಿದ್ದ!
ಆ ತೀವ್ರಮೌನದ ತರುವಾಯ ಏನು ಸಂವಾದ ಯಾವ ಕಡೆಗೆ ತಿರುಗುತಿತ್ತೊ? ಅಷ್ಟರಲ್ಲಿ ಒಂದು ನಾಯಿ ಬೊಗುಳಿದ ಸದ್ದಾಯಿತು. ಆ ಕತ್ತಲೆಯಲ್ಲಿಯೂ ಐತ ಅದನ್ನು ಧ್ವನಿಯಿಂದಲೆ “ಹಛೀ ಇದೆಲ್ಲಿ ಬಂತೋ ಇಲ್ಲಿ ಆ ಗುತ್ತಿ ನಾಯಿ?” ಎಂದೊಡನೆ ಹುಲಿಯ ಪರಿಚಿತಧ್ವನಿ ಕೇಳಿ ಬಾಲವಾಡಿಸುತ್ತಾ ಅವರ ಬಳಿಗೆ ಬಂದಿತು.
ಗುತ್ತಿ  ಕುಳಿತಲ್ಲೆ ಹಲ್ಲುಕಡಿದುಕೊಂಡನುಃ “ ಹಾಳು ಮುಂಡೇದು! ಹೋದಲ್ಲಿತನಕಾ ಕೊಂಬುಹುಯ್ಲು! ಎಲ್ಲಿ ಹೋದ್ರೂ ಸಾಯ್ತದೆ, ನನ್ನ ಹಿಂದೆ, ಬಾಲಂಗಚ್ಚೆ!”
ಆದರೇನು ಪ್ರಯೋಜನ? ಘ್ರಾಣಕ್ಕೆ ಅಷ್ಟೇನೂ ಸೂಕ್ಷ್ಮವಾಗಿರದಿದ್ದ ಗುತ್ತಿಯ ಸ್ಥೂಲ ವಾಸನೆ, ಮನುಷ್ಯರ ಮೂಗಿಗೂ ಗ್ರಾಹ್ಯವಾಗುವಷ್ಟರಮಟ್ಟಿಗೆ ಇರುವಾಗ, ಅವನ ಸ್ವಂತ ನಾಯಿಗೆ ದುರ್‌ಗ್ರಾಹ್ಯವಾಗುತ್ತದೆಯೆ? ತನ್ನ ನೆಚ್ಚಿನ ಒಡೆಯನ ಕಂಪು ಮೂಗಿಗಾದೊಡನೆಯೆ, ಯಾವ ದಿಕ್ಕಿನಿಂದ  ಬರುತ್ತದೆ ಎಂಬುದನ್ನು ಅರಿಯುವುದಕ್ಕಾಗಿ ಮೊಗವತ್ತಿ ಆಕಾಶವನ್ನು ಅತ್ತ ಇತ್ತ ಮೂಸಿ, ಹುಲಿಯ ನೇರವಾಗಿ ಗುತ್ತಿ ಅವಿತು ಕುಳಿತಡೆಗೆ ನುಗ್ಗಿ, ತಾನು ಅವನನ್ನೂ ಕಂಡುಹಿಡಿದುದಕ್ಕೆ ಸಂತೋಷವುಕ್ಕಿ, ‘ಗುಲ್ಟೋರಿಯಾ!’ ಮಾಡುತ್ತದೆಯೊ ಎಂಬಂತೆ, ಅವನ ಮೈಮೇಲೆ ಹಾರಿಬಿಟ್ಟಿತು! ತಾನು ತುತ್ತರಾಟಿನ ಮೇಲೆ ಕೂತ್ತಿದ್ದ ಬಂಡೆಯಿಂದ ಉರುಳುವುದನ್ನು ಹೇಗೊ ತಡೆದುಕೊಂಡು, ಅದನ್ನು ತಳ್ಳಿ ‘ಹಛೀ! ನಿನ್ನ ಹಾಳಾಗ’ ಎಂದೇಬಿಟ್ಟನು.
ಗುತ್ತಿ ಬಹು ಮೆಲ್ಲಗೆ ಶಪಿಸಿದನೆಂದು ತಿಳಿದಿದ್ದರೂ ಚೀಂಕ್ರನ ಧ್ವನಿ ಕೇಳಿಸಿತು “ಯಾರೋ ಅದು ಹೊಂಡದಾಗೆ?”
ಗುತ್ತಿ ಅಡಗಿದ್ದಲ್ಲಿಂದ ಎದ್ದು ಮೇಲಕ್ಕೆ ಬರುತ್ತಾ “ನಾನೋ! ಇಲ್ಲೇ ನೀರ ಕಡೆ ಹೋಗಿದ್ದೆ! ಹಾಳು ನಾಯಿ ಮೈಮೇಲೆ ಬಿದ್ದುಬಿಡ್ತು!” ಎಂದು ಹತ್ತಿರ  ಬಂದು “ಇಲ್ಲಿ ಯಾಕ್ರೋ ಕೂತ್ರೀ? ರಣಾ ತಿರುಗೋ ಜಾಗದಲ್ಲಿ?” ಎಂದನು.
“ಹ್ಞಾ! ಹೌದಾ? ಅಯ್ಯೊ ಮಾರಾಯ ನಮಗೆ ಗೊತ್ತಿಲ್ಲ!” ಎನ್ನುತ್ತಾ ಇಬ್ಬರೂ ಎದ್ದು ಹೊರಡಲನುವಾದರು.
ಗುತ್ತಿ ಸುತ್ತ ನೋಡಿ ಏನನ್ನೊ ನಿರ್ಣಯಿಸಿಃ “ ಬನ್ನಿ, ಬನ್ನಿ, ಬ್ಯಾಗ ಹೋಗಾನ!” ಎಂದು ಬಿರುಬಿರನೆ ಹೊರಟನು.
ಮೂವರೂ ಯಾವುದೊ ಸನ್ನಿಹಿತವಾಗಿದ್ದ ಅಪಾಯದಿಂದ ದೂರ ಹೋಗುವವರಂತೆ ಸ್ವಲ್ಪ ದೌಡಾಯಿಸಿಯೆ ತುಸುದೂರ ನಡೆದಿದ್ದರು. ಯಾರೂ ಮಾತಾಡಿಲಿಲ್ಲ.
ಇದ್ದಕ್ಕಿದ್ದ ಹಾಗೆ ಗುತ್ತಿ ನಿಂತು “ಅಯ್ಯೊ ಮಾರಾಯ, ಎಂಥಾ ಕೆಲಸ ಆಯ್ತು? ಹೊರಕಡೆಗೆ ಕೊತಲ್ಲೆ ಬಿಟ್ಟು ಬಂದುಬಿಟ್ಟೆನಲ್ಲ! ನೀವು ಹೋಗ್ತಾ ಇರಿ; ನಾ ಬಿರಬಿರನೆಬಂದುಬಿಡ್ತೀನಿ!” ಎಂದು ಏನನ್ನೊ ಮರೆತು ಬಿಟ್ಟು  ಬಂದುದನ್ನು ತರುವವನಂತೆ ಹಿಂದಕ್ಕೆ ಓಡಿದನು. ನಾಯಿಯೂ ಜೊತೆಯಾಗಿ.
ಐತ ಚೀಂಕ್ರರು ವೇಗವಾಗಿಯೆ ಮುಂದೆ ಸಾಗಿದ್ದರು. ಒಂದೆರಡು ಸಲ ಹಿಂದಕ್ಕೆ
ನೋಡಿದರು, ಗುತ್ತಿಗಾಗಿ. ಆದರೆ ಅವನ ಸುಳಿವೇ ಇರಲಿಲ್ಲ.
ಚೀಂಕ್ರ ಹೇಳಿದ “ಆ ಕಮ್ಮಾರಸಾಲೆ ಹತ್ರ ಕಳ್ಳಂಗಡೀಲಿ ಏನಾದ್ರೂ ಕುಡುಕೊಂಡು ಹೋಗಾನೊ. ಬಾಳ ಆಕರ ಆಗ್ತದೆ.”
ಕೋಣೂರಿಗೂ ಬೆಟ್ಟಳ್ಳಿಗೂ ಮಧ್ಯೇ, ಮೇಗರವಳ್ಳಿ ಹೂವಳ್ಳಿ ಹಳೆಮನೆಗಳಿಗೂ ಸಮದೂರವಾಗಿದ್ದ ಒಂದು ಜಾಗದಲ್ಲಿ, ಕಾಡಿನ ನಡುವೆ, ಒಂದು ಕಮ್ಮಾರ ಸಾಲೆ, ಒಂದು ಕಳ್ಳಂಗಡಿ, ಮೂರು ನಾಲ್ಕು ಜೋಪಡಿಗಳಿದ್ದು ಅನೇಕ ರೀತಿಗಳಲ್ಲಿ ಕುಪ್ರಸಿದ್ದವಾಗಿತ್ತು, ಕುಡಿತ, ಕೋಳಿಅಂಕ, ಜೂಜು, ಜುಗಾರಿ, ಇಸ್ಟೀಟು, ಹಾದರ, ಅತ್ಯಾಚಾರ ಇತ್ಯಾದಿಗಳಿಗೆಲ್ಲ. ಆದರೆ ಅದನ್ನು ಎಲ್ಲರೂ ‘ಕಮ್ಮಾರಸಾಲೆ’ ಎಂದೇ ಕರೆಯುತ್ತಿದ್ದರು. ಆ ಹೆಸರಿನ ಮರೆಯಲ್ಲಿ ಉಳಿದೆಲ್ಲ ಸಂಸ್ಥೆಗಳೂ ತಮ್ಮ ಕಾರುಬಾರನ್ನು ನಿರಾಂತಕವಾಗಿ ಸಾಗಿಸುತ್ತಿದ್ದುವು, ಎಲ್ಲರಿಗೂ ಗೊತ್ತಿದ್ದರೂ ಗುಟ್ಟಾಗಿ!
ಎಲ್ಲಾ ಆಟಗಳಲ್ಲಿಯೂ ಚೆನ್ನಾಗಿ ನುರಿತಿದ್ದ ಚೀಂಕ್ರನ ಜೊತೆ ಸಿಕ್ಕ ಐತ ಸ್ವಲ್ಪ ಕಂಗಾಲಾಗಿ ಹೇಳಿದ: “ನಾ ಹೋಗ್ತಾ ಇ….ನೀ ಕುಡುಕೊಂಡು ಬಾ ಬಿಡಾರದಲ್ಲಿ ಅದು ಒಂದೇ….ಹೆದರಿಕೊಳ್ತದೆ.”
“ಹೆಡ್ತಿ ಬಿಟ್ಟು ಬಂದಾವ, ನೀನು ಒಬ್ಬನೇ ಕಣೋ, ಬಿಡಾರದಲ್ಲಿ? ನಾ ಕಂಡೀನೊ! ಬಾ ಬಾ ಸುಮ್ನೆ! ಒಂದು ದರಾಮು ಕೊಡಸ್ತೀನಿ ನಿಂಗೂ. ಒಂದೀಟು ಮೈ ಬಿಸಿ ಮಾಡ್ಕೊಂಡು ಹೋಗಾನ “ಮುಖ ಕಾಣದ ಆ ಕತ್ತಲಲ್ಲಿ ಐತನ ಪಕ್ಕೆಯನ್ನು ಇಂಗಿತವಾಗಿ ತಿವಿದು ನಕ್ಕು ಮುಂದುವರಿಸಿದನು ಚೀಂಕ್ರ ಮಹಾಶಯ, ತನ್ನ ವಾತ್ಸಾಯನ ಕಾಮಸೂತ್ರೋಪದೇಶವನ್ನು:” ಹೊಟ್ಟೆಗೆ ಒಂದು ದರಾಮ್ ಬಿತ್ತು  ಅಂದ್ರೆ, ಒಳ್ಳೆ ಸಕ್ತಿ ಬರ್ತದೊ! ಆ ಮ್ಯಾಲೆ ಬಿಡಾರಕ್ಕೆ ಹೋಗಿ ಮಜಾ ಮಾಡಿದ್ರೆ ಹ್ಯಾಂಗಿರ್ತದೆ!” ಎಂದು ಐತನ ಕಿವಿಯ ಹತ್ತಿರಕ್ಕೆ  ಬಾಗಿ, ಅತ್ಯಂತ ಅಸಹ್ಯವೂ ಅಶ್ಲೀಲವೂ ಅದುದನ್ನೆ  ಹೇಳಿಬಿಟ್ಟನು, ಸವಿದು ಚಪ್ಪರಿಸುವಂತೆ.
ಐತ ದೂರ ಸರಿದು “ ಇಸ್ಸಿ! ನೀನು ಎಂಥ ಪೋಲಿ ಆಡ್ತೀಯೊ? “ ಎಂದನು.
“ಪೋಲಿ ಅಂತೆ ಪೋಲಿ? ಮಾಡುವುದಕ್ಕೆ ಪೋಲಿಯಲ್ಲ; ಆಡುವುದಕ್ಕೆ ಮಾತ್ರ ಪೋಲಿ? ಹುಡುಗಮುಂಡೇದು, ನಿನಗೇನು    ಗೊತ್ತು?”….
ಕಮ್ಮಾರ ಸಾಲೆಯಲ್ಲಿ ಉರಿಯುತ್ತಿದ್ದ ಬೆಂಕಿ ಕಾಣಿಸಿತು: ಅಡಿಗಲ್ಲಿನ ಮೇಲೆ ಕೆಂಪಗೆ ಕಾದ ಕುಳವನ್ನಿಟ್ಟು ಬಡಿಯುತ್ತಿದ್ದ ಪುಟ್ಟಾಚಾರಿಯ ಆಕಾರವೂ, ಚರ್ಮದ ತಿದಿಯನ್ನು ಒತ್ತುತ್ತಿದ್ದವನ ಬೆನ್ನೂ ಸೇರಿ! ಚೀಂಕ್ರನಿಂದ ಪಾರಾಗಲು ಉಪಾಯ ಹುಡುಕುತ್ತಿದ್ದ ಐತನಿಗೆ  ಏಕೋ ಧ್ಯೆರ್ಯವಾದಂತಾಯಿತು. ತಾನೊಬ್ಬನೆ ಮುಂದೆ ಹೋಗುತ್ತೇನೆ ಎಂದು ಹೇಳಿದ್ದರೂ ಆಗತಾನೆ ಗುತ್ತಿಯಿಂದ ರಣ ತಿರುಗುವ ವಾರ್ತೆಯನ್ನು ಕೇಳಿದ್ದ ಅವನಿಗೆ ದೆವ್ವದ ಹೆದರಿಕೆ. ಆದ್ದರಿಂದ  ಚೀಂಕ್ರ ತನ್ನ  ಕೆಲಸ ಮುಗಿಸಿ ಅರುವ ತನಕ ಕಮ್ಮಾರ ಸಾಲೆಯಲ್ಲಿ ರಕ್ಷೆಪಡೆಯಲು ನಿಶ್ಛಯಿಸಿ, ನೆರವಾಗಿ ಅಲ್ಲಿಗೇ  ನಡೆದುಬಿಟ್ಟನು, ಚೀಂಕ್ರನಿಗ “ನಾ ಅಲ್ಲಿ ಕಾಯ್ತಾ ಇರ್ತೆ. ನೀ ಕೆಲಸ ಪೋರೈಸಿ ಬರಲಕ್ಕು!” ಎಂದು ಹೇಳಿ.
ಕುಳ ಬಡಿಯುತ್ತಿದ್ದ  ಪುಟ್ಟಾಚಾರಿ, ಕತ್ತಲೆಯಿಂದದ  ಬೆಳಕಿಗೆ  ಪ್ರವೇಶಿಸಿದವನ ಕಡೆಗೆ ತಿರುಗಿ, ಗುರುತಿಸಿ, ಸ್ವಾಗತಿಸುವಂತೆ ನಗೆಯಾಡಿದನು” ಏನೋ, ಐತಣ್ಣಾ, ನಿನ್ನ ಹೆಂಡ್ತಿ ಎಲ್ಲಿ ಬಿಟ್ಟು ಬಂದೆಯೋ?
* * *
ತಾಯಿಯಿಂದ  ಬೀಳ್ಕೊಂಡು ಹಾಡ್ಯವನ್ನು ಹೊಕ್ಕ ತಿಮ್ಮಿ ಸ್ವಲ್ಪ ದೂರ ಹೋದ ಮೇಲೆ, ಬುತ್ತಿಯನ್ನು ಅಡಗಿಸಿಟ್ಟುಕೊಂಡು ಬಂದಿದ್ದ ಮಡಕೆಯನ್ನು ಒಂದು ಮರದ ಬುಡದಲ್ಲಿದ್ದಟ್ಟು, ಬತ್ತಿಯೊಡನೆ ಗುತ್ತಿ ನಿರ್ದೇಶಿಸಿದ್ದ ಜಾಗಕ್ಕೆ ಬಂದು ನೋಡುತ್ತಾಳೆ, ಗುತ್ತಿಯ  ಸುಳಿವೇ ಇಲ್ಲ. ಗಟ್ಟಿಯಾಗಿ ಕರೆಯುವ ಹಾಗೂ ಇಲ್ಲ. ಗಂಟಲೂ ಕಟ್ಟಿಬಂದ  ಹಾಗಾಯಿತು. ಕಣ್ಣೀರು ಬರತೊಡಗಿದವು. ಭಯ ನಿರಾಸೆ ಹೃದಯವನ್ನಾಕ್ರಮಿಸಿ ಕಂಗೆಟ್ಟಂತೆ ನಿಂತಳು: ‘ಏನಾದರಾಗಲಿ? ಹಿಂದಕ್ಕಂತೂ ಹೋಗುವುದಿಲ್ಲ. ಗುತ್ತಿ ಕೈ ಬಿಟ್ಟರೆ ಕೆರೆಯೇ ಗತಿ!”
ಅಷ್ಟರಲ್ಲಿ ಯಾರೊ ಓಡಿಬರುತ್ತಿದ್ದ ಸದ್ದು! ತನ್ನ ಕಡೆಗೇ? ತಾನು ನಿಂತಿದ್ದ  ಕಡೆಗೇ ಬರುವಂತಿದೆ! ತಿಮ್ಮಿ ಬೇಗಬೇಗನೆ ಒಂದು ಪೊದೆಯ ಹಿಂದೆ  ಅವಿತುಕೊಂಡಳು.
ಐತ ಚೀಂಕ್ರರನ್ನು ಉಪಾಯವಾಗಿ ಅರೆಕಲ್ಲಿನಿಂದ ಹೊರಡಿಸಿ, ಸ್ವಲ್ಪದೂರ ಹೋದ ಮೇಲೆ, ತಾನು ಮರೆತುಬಿಟ್ಟದ್ದನ್ನು ಹಿಂತೆಗೆದುಕೊಂಡು ಬರುತ್ತೇನೆಂದು ಅವರನ್ನು ಮುಂದುವರಿಯುತ್ತಿರುವಂತೆ ಹೇಳಿ ಹಿಂದಕ್ಕೆ ಓಡುತ್ತಲೆ ಬಂದು ನೋಡುತ್ತಾನೆ, ಎಲ್ಲಿಯೂ ತಿಮ್ಮಿಯ ಸುಳಿವಿಲ್ಲ. ಬಂದು ಹೋಗಿಬಿಟ್ಟಳೊ? ಅಥವಾ ಇನ್ನೂ ಬರಲೆ  ಇಲ್ಲವೊ? ಎಂದು  ಚಿಂತಿಸುತ್ತಾ ನಿಂತಿರಲು, ಹುಲಿಯ ಒಂದು ಪೊದೆಯ ಹತ್ತಿರ ಪರಿಚಿತರನ್ನು ಕಂಡಂತೆ ಕುಂಯಿ ಕುಂಯಿಗುಡುತ್ತಿರುವುದನ್ನೂ ಪೊದೆ  ಸದ್ದಾಗುತ್ತಿರುವುದನ್ನೂ  ಕಂಡು ಮುಂಬರಿಯುವಷ್ಟರಲ್ಲಿ, ಹುಲಿಯನನ್ನು ಗುರುತಿಸಿದ ತಿಮ್ಮಿ, ಓಡಿಬಂದುವನು ಸಿಂಬಾವಿ ಭಾವನೆ ಇರಬಬೇಕೆಂದು ಧೈರ್ಯಮಾಡಿ, ತನ್ನ ಕಡೆಗೆ ಬರುತ್ತಿರುವುದನ್ನು ಕಂಡನು.
ಇಬ್ಬರೂ ಏನನ್ನೂ ಮಾತಾಡದೆ ಸರಸರ ಹೊರಟರು. ಅವರಿಬ್ಬರ ತಲೆಯಲ್ಲಿಯೂ ಈಗ ಇದ್ದುದು ಒಂದೇ ಯೋಚನೆ  ಸಿಕ್ಕಿಬೀಳದೆ ಹೆಗೆ ಯಾವ ದಾರಿಯಿಂದ ತಪ್ಪಿಸಿಕೊಂಡು ಹೋಗುವುದು? ಗುತ್ತಿ ಬೆಟ್ಟಳ್ಳಿ ಹಕ್ಕಲಿಗೂ ಅಲ್ಲಿಂದ ಕೇರಿಗೂ ಬಂದಿದ್ದ ಸಮಾಚಾರ ಗೊತ್ತಾದೊಡನೆ, ಬೇಟೆಯಲ್ಲಿ ನಾಯಿ ಮೂಗಾಳಿ ಹಿಡಿದು ಮಿಗವನ್ನಟ್ಟುವಂತೆ ತಮ್ಮನ್ನು ಹುಡುಕಿ ಹಿಡಿಯಲು ಪ್ರಯತ್ನಿಸದ ಬಿಡುವುದಿಲ್ಲ. ಸಮೆದ ಕಾಲು ಹಾದಿಯನ್ನೆ ತ್ಯಜಿಸಿ, ಕಾಡು ನುಗ್ಗಿ, ಸಿಂಬಾವಿಯ ದಿಕ್ಕು ಹಿಡಿದು ಹೋಗಬಹುದಲ್ಲ ಎನ್ನಿಸಿತು ಒಮ್ಮೆ ಗುತ್ತಿಗೆ. ಆದರೆ ಆ ಮುಳ್ಳು ಗಿಜರು ಕೊರಕಲುಗಳಲ್ಲಿ, ಕತ್ತಲಲ್ಲಿ, ತಿಮ್ಮಿ ನಡೆಯುವುದು ಸಾಧ್ಯವೆ? ಆಗಲೆ, ಸಮೆದ ಕಾಲುಹಾದಿಯಲ್ಲಿ ನಡೆಯುವಾಗಲೆ, ಒಂದೆರಡು ಸಾರಿ ಮುಳ್ಳು  ಚುಚ್ಚಿಸಿಕೊಂಡು ಎಡವಿದ್ದಾಳೆ. ನಿಜ, ಇಬ್ಬರ ಕಾಲುಗಳೂ ಮೆಟ್ಟನ್ನು ಕನಸಿನಲ್ಲಿಯೂ ಕಂಡರಿಯವು. ಆದರೆ ಗುತ್ತಿಯ ಅಂಗಾಲು ನಡೆದೂ ನಡೆದೂ ಒರಟಾಗಿ, ಕಷ್ಟಸಹಿಷ್ಣುವಾಗಿ, ಖರ್ಪರವಾಗಿಬಿಟ್ಟಿದೆ; ತಿಮ್ಮಿ ದುಡಿವ ಆಳಾಗಿ  ಹೊಲತಿಯಾಗಿದ್ದರೂ ಎಷ್ಟಂದರೂ ಹೆಣ್ಣು. ಕಡೆಗೆ, ದೇವರರು ಮಾಡಿದ್ದಾಗಲಿ ಎಂದು ಸಮೆದ ಕಾಲುದಾರಿಯಲ್ಲಿಯೆ ಮುಂದುವರಿಯಲು ಮನಸ್ಸು ಮಾಡಿದರು. ಏನಾದರೂ ಅಪಾಯ ಸೂಚನೆ ತೋರಿದರೆ ಕಾಡಿನೊಳಕ್ಕೆ ಓಡಿಯೋ ಹೇಗೊ ತತ್ಸಾಮಯಿಕ ಪ್ರತಿಭೆ ಹೊಳೆದಂತೆ ಮಾಡುವುದು ಎಂದು. ಈಗ ಅವರಿಗೆ  ಹುಲಿ, ಹಂದಿ, ಹಾವು, ಚೇಳು, ದೆಯ್ಯಗಿಯ್ಯ ಯಾವುದರ ಭಯವೂ ನಿವಾರಣೆಯಾಗುತ್ತಿದ್ದಿತೊ ಅದರ ಸಂಗವೆ ಈಗ ಭಯಾನಕವಾಗಿದ್ದಿತು. ಈಗ ಅವರಿಗಿದ್ದುದು ಒಂದೆ ಒಂದರ ಭಯಃ ಮನುಷ್ಯರ ಭಯ!
ಕಮ್ಮಾರಸಾಲೆ  ಹತ್ತಿರಕ್ಕೆ ಬಂದಾಗ, ಬೆಂಕಿಯನ್ನು ಕಂಡ ಗುತ್ತಿಗೆ, ಒಂದುದೊಂದಿಮಾಡಿ, ಹೊತ್ತಿಸಿಟ್ಟುಕೊಂಡರೆ ಒಳ್ಳೆಯದು ಎಂದು ತೋರಿತು. ಕತ್ತಲಲ್ಲಿದೊಂದಿಯ ಕಾಂತಿ ತಮ್ಮನ್ನು ಅಡಗಿಸುವುದಕ್ಕೂ ತಮ್ಮ ಮೇಲೆ  ಗುಮಾನಿ ಬರದಿರುವಂತೆ ಮಾಡುವುದಕ್ಕೂ ನೆರವಾಗುತ್ತದೆ. ಅಲ್ಲದೆ ರಾತ್ರಿ ಎಲ್ಲಿಯಾದರೂ ಜನದೂರವಾದ ಸ್ಥಳದಲ್ಲಿ ತಂಗಬೇಕಾಗಿ ಬಂದರೆ, ತಮ್ಮ ಬಳಿ ಬೆಂಕಿ ಇದ್ದರೆಲೇಸಲ್ಲವೆ?
ತಿಮ್ಮಿಗೆ ಕತ್ತಲಲ್ಲಿಯೆ ದೂರ ಸರಿದಿರುವಂತೆ ಹೇಳಿ, ಗುತ್ತಿ ಕಮ್ಮಾರ ಸಾಲೆಗೆ ಹೋದನು. ತಿದಿಯೊತ್ತುತ್ತಿದ್ದವನನ್ನು ಬೇಡಿ, ಅವನಿಂದ ಆ ಕೆಲಸವನ್ನು ವಹಿಸಿಕೊಂಡು, ಆನಂದದಿಂದ ತಿದಿ ಒತ್ತುತ್ತಾ ಕುಳಿತ್ತಿದ್ದ ಐತ ಗುತ್ತಿಯನ್ನು ನೋಡಿ, “ಏನು ಮಾಡುತ್ತಾ ಇದ್ದೆಯೋ. ಇಷ್ಟು ಹೊತ್ತು?” ಎಂದು ಪ್ರಶ್ನಿಸಿ, ತಾನು ಎಂತಹ ಮೆಹನತ್ತಿನ ಉದ್ಯೋಗದಲ್ಲಿ ತೊಡಗಿದ್ದೇನೆ ನೋಡು, ನಿನಗೆಲ್ಲಿ ಆ ಪುಣ್ಯ? ಎನ್ನುವಂತೆ ಮುಖ ಅರಳಿಸಿ ಹಲ್ಲುಬಿಟ್ಟನು.
ಅನೈಚ್ವಿಕವೊ ಎಂಬಂತೆ ತನ್ನ ಕೆಲಸಗಳಲ್ಲಿ ನಿರತಾಗಿಯೆ ಇದ್ದ ಪುಟ್ಟಾಚಾರಿ ಐತರನಿಗೆ “ಏ ಹುಡುಗ, ನೀ ಸರಿಯಾಗಿ ಒತ್ತಾದಾದ್ರೆ ಒತ್ತು. ಇಲ್ದಿದ್ರೆ ಕೊಡು ಅವನಿಗೆ. ನಿನಗೆ ಒಳ್ಳೆ ಆಟಾ ಆಯಿತಲ್ಲಾ!” ಎಂದವನು ಗುತ್ತಿಯ ಕಡೆ ನೋಡಿ “ಏನೊ, ಗುತ್ತಿ, ಇಷ್ಟುಹೊತ್ತಿನ್ಲಿ? ಸಿಂಬಾವಿಗೆ ಹೋಗ್ತಾ ಇದ್ದೀಯೊ? ಅಲ್ಲಿಂದ ಬರ್ತಾ ಇದ್ದೀಯೊ?…. ನಿನ್ನ ಒಡೇರದೊಂದು ಕೋವಿ ಕೆಲಸ ಅದೆಯಂತೆ…. ನನಗೆ ಬರಾಕೆ…. ಪುರಸತ್ತೇ ಆಗ್ಲಿಲ್ಲ.”
“ಹೋಗ್ತಾ ಇದ್ದೀನೀ…. ಅದಕ್ಕೇ ಒಂದು ದೊಂದಿ ಮಾಡ್ಕೊಳ್ಳಾನ ಅಂತಾ ಬಂದೆ.”
“ಅಲ್ಲೊಂದು ಅಡಕೆ ದಬೆಬ ಇರಬೇಕು ತಗೋ”. ಎಂದನು ಪುಟ್ಟಾಚಾರಿ. ಗುತ್ತಿ ಬೇಗಬೇಗನೆ ತನ್ನ ಸೊಂಟದ ಕತ್ತಿಯಿಂದ ದಬ್ಬೆ ಸೀಳೆ, ಕಟ್ಟಿ, ದೊಂದಿ ಹೊತ್ತಿಸಿಕೊಂಡು ಬೀಸುತ್ತಾ ಹೊರಟು ಹೋದನು.
ಅವನು ಹೋದ ತುಸುಹೊತ್ತಿನಲ್ಲಿಯೆ ಕಮ್ಮಾರಸಲೆ ಹೊರಗಡೆ ಕತ್ತಲಲ್ಲಿ ಏನೊ ಗಲಾಟೆ ಕೇಳಿಸಿತು. ಚೀಂಕ್ರ ಹೊಟ್ಟೆಗೆ ದರಾಮ್ ಹೊಯ್ದುಕೊಂಡು ಅತ್ಯುತ್ಸಾಹಿಯಾಗಿ “ಹೆಹ್ಹೆಹ್ಹೆಹ್ಹೆ! ನಂಗೆ ಕೊಟ್ಟಿದ್ರೆ? ಬೈಸೆಕಲ್ಲನ್ನ ಹೆಂಗೆ ಬಿಡ್ತಿದ್ದೆ? ಬುರ್ನಾಸು, ಬರೀ ಬುರ್ನಾಸು, ಆ ಪಾದ್ರಿ. ಅವನಿಗೇನು ಗೊತ್ತು ಬಿಡಾಕೆ?…. ಏ ಐತಾ ಬಾರೋ, ಬಿಡಾರಕ್ಕೆ ಹೋಗಾನೊ! ಮಜಾ ಮಾಡಾಕೆ! ಥೂ ನಿನ್ನ ಹೆಂಡ್ತೀನಾ….”
ಐತ ತಿದಿಯನ್ನು ಮೊದಲೇ ಒತ್ತುತ್ತಿದ್ದವನಿಗೆ ಕೊಟ್ಟು, ಬೇಗಬೇಗನೆ ಎದ್ದು “ನಾ ಬತ್ತೆ, ಆಚಾರಣ್ಣಾ” ಎಂದು ಹೊರಕ್ಕೆ ಧಾವಿಸಿದನು. ಬೆಂಕಿಯ ಬೆಳಕಿನಲ್ಲಿದ್ದು ಅದನ್ನೆ ನೋಡುತ್ತಿದ್ದ ಅವನಿಗೆ ಹೊರಗಡೆ ಕತ್ತಲೆ ಕಗ್ಗಲ್ಲಾದಂತೆ ಕಮಡಿತು. ದಾರಿಗೆ ಅಡ್ಡಲಾಗಿ ನಿಂತಿದ್ದ ಚೀಂಕ್ರನಿಗೆ ಡಿಕ್ಕಿ ಹೊಡೆದುಬಿಟ್ಟನು! ಅವನೂ ದೊಸಕ್ಕನೆ ನೆಲಕ್ಕೆ ಅಮಡೂರಿ ಕ್ಯಾಕರಿಸಿ ಉಗಿಯುತ್ತಾ” ಹ್ಹಿಹ್ಹಿಹ್ಹಿ! ನಿನ್ನ….” ಎಂದು ಅವಾಚ್ಯಾವಾಗಿ ಬೈಯ್ಯುತ್ತಾ “ಕುಡ್ದಿದ್ದು ನಾ….ನು…. ಏರಿದ್ದು ನಿಂಗೆ! ಹ್ಹಿಹ್ಹಿಹ್ಹಿ” ಎಂದು ತತ್ತರಿಸುತ್ತಾ ಮತ್ತೆ ಕೈಯೂರಿ ಎದ್ದು ನಿಂತನು.
ತನ್ನನ್ನು ಬೀಳದಂತೆ ಆತುಕೊಳ್ಳಲು ಬಂದ ಐತನಿಗೆ  “ಏಯ್, ನಂಗೇನಾಗ್ಯದೆ ಅಂತಾ ಹಿಡುಕೊಳ್ತೀಯೋ?” ಎಂದು ತೂದಲು ತೊದಲುತ್ತಾ ತೂರಾಡುತ್ತಲೆ ನಡೆಯತೊಡಗಿದನು.
ಐತ, ಹುಲಿ ಕಂಡಾಗ ಹೆದರಿಕೆಯ ಪ್ರಭಾವದಿಂದ, ಜೀವ ಉಳಿಸಿಕೊಂಡರೆ ಸಾಕು ಎಂದು ಹತ್ತತಿರವೆ ಇದ್ದ ಕೆಂಜಿಗೆ ಉಡಿಗೊ ಹೇಗೋ ಹತ್ತಿದಾತನು, ಹುಲಿ ಹೋದಮೆಲೆ ಇಳುಯುವ ಗೋಳನ್ನು ಅನುಭವಿಸುವಂತೆ, ‘ನಾನು ಯಾಕೆ ಇವನ ಜೊತೆ ಹಾಳು ಬೇಸೆಕಲ್ಲು ಸವಾರಿ ನೋಡಾಕೆ ಹೋದ್ನೆಪ್ಪಾ’ಎಂದು ಶಪಿಸಿಕೊಳ್ಳುತ್ತಾ, ಬಹು ಕಷ್ಡದಿಂದ ಚೀಂಕ್ರನನ್ನು ಬಿಡಾರದವರೆಗೆ ಕರೆತಂದನು. ಕತ್ತಲೆಯ ಕಾಡುದಾರಿಯಲ್ಲಿ ಚೀಂಕ್ರನ ಕಾಮಚೇಷ್ಟೆಗಳನ್ನೂ ಅಶ್ಲೀಲ ಬೈಗುಳಗಳನ್ನೂ ಅವನ ಬಾಯಿಂದ ಉಗುತ್ತಿದ್ದ ಸಾರಾಯಿಯ ವಾಸನೆ ಬೆರತೆ ಉಸಿರ ಗಬ್ಬು ಹರಡಿಕೆಯನ್ನೂ ತುಟಿಪಿಟಕ್ಕೆನ್ನದೆ ಸಹಿಸಿಕೊಂಡಿದ್ದನು. ಚೀಂಕ್ರನ ಬಿಡಾರದ ಹತ್ತಿರ ಅವನನ್ನು ಬಿಟ್ಟು “ಅಕ್ಕಾ, ಸೇರೆಗಾರನ್ನ ಒಳಗೆ ಕರಕೊ” ಎಂದು ದೇಯಿಗೆ ಕೇಳುವಂತೆ ಕೂಗಿಹೇಳಿ, ತನ್ನ ಬಿಡಾರಕ್ಕೆ ಓಡಿದನು, ಯಾವುದಾದರೂ ಒಂದು ಅನಿಷ್ಟದಿಂದಲೋ ಅಪಾಯದಿಂದಲೋ ದೂರ ಸರಿಯುವಂತೆ.
ಅವನ ಬಿಡಾರ ನಿಃಶಬ್ದವಾಗಿತ್ತು. ಒಳಗೆ ಹಣತೆಯ ಸೊಡರಾಗಲಿ ಒಲೆಯ ಬೆಂಕಿಯಾಗಲಿ ಇದ್ದಂತೆ ತೋರಲಿಲ್ಲ. ಜೋಪಡಿಯ ಬಾಗಿಲಿಗೆ ಹೋಗಿ ನೋಡುತ್ತಾನೆ, ತಟ್ಟಿ ಬಾಗಿಲು ಮುಚ್ಚಿದೆ! ನೂಂಕಿದರೆ ತೆರೆಯಲೂ ಇಲ್ಲ. ಕೈಯಿಂದ ತಡವಿನೋಡಿದರೆ, ತಟ್ಟಿಬಾಗಿಲಿಗೆ ಹಗ್ಗ ಬಿಗಿದು ಕಟ್ಟಿದೆ.
‘ಇದೇನಿದು? ಪೀಂಚಲು ಎಲ್ಲಿ? ನನಗಾಗಿ ಕಾದು, ಇರುಳು ಹೊತ್ತಾದ ಮೇಲೆ ಒಬ್ಬಳೆ ಇರಲು ಹೆದರಿಕೆಯಾಗಿ, ಪಕ್ಕದಲ್ಲಿರುವ ಪಿಜಿಣನ ಮನೆಗೇನಾದರೂ ಹೋದಳೆ? ಹೋಗಿ ಅಕ್ಕಣಿಯನ್ನು ಕರೆದು ಕೇಳಲೆ? ಅಥವಾ….’
ಏನೇನೊ ಅಮಂಗಳದ ಯೋಚನೆಗಳು ಚೀಂಕ್ರ ತೆರೆದಿದ್ದ ಸಂಶಯದ ಬಾಗಿಲಿಂದ ಅವನ ತಲೆಗೆ ನುಗ್ಗತೊಡಗಿದುವು. ತಾನು ಬಿಡಾರದ ಬಾಗಿಲಿಗೆ ಬಂದೊಎನೆ ಪೀಂಚಲು ತನ್ನ ಸವಿದನಿಯಿಂದ ವಿನೋದವಾಗಿ ಏನನ್ನಾದರೂ ಹೇಳುತ್ತಾ ತನ್ನನ್ನು ಇದಿರುಗೊಂಡು ಒಳಗೆ ಕರೆದುಕೊಂಡು ಹೋಗಿ  ಮೋಹಮಾಡಿ, ಮುದ್ದಾಡಿ, ತಿನ್ನಲಿಕ್ಕೆ ಏನನ್ನಾದರೂ ಕೊಟ್ಟು-ಇತ್ಯಾದಿಯಾಗಿ ಕಲ್ಪಿಸಿಕೊಳ್ಳುತ್ತಾ ಬಂದವನಿಗೆ  ನಿಃಶಬ್ದತೆ, ಕತ್ತಲೆ, ಮುಚ್ಚಿ ಕಟ್ಟಿದ್ದ ಬಾಗಿಲು ಇದಿರಾಗಿ ಮೂದಲಿಸಿದ್ದುವು. ಆ ನಿರೀಕ್ಷಣಾ ಭಂಗದಿಂದ ಅವನ ಬುದ್ದಿ ಸೋತಂತಾಗಿತ್ತು. ದುರಾದೃಷ್ಟಕೆಕ ಸರಿಯಾಗಿ ಚೀಂಕ್ರ ಬೆಟ್ಟಳ್ಳಿ ಅರೆಕಲ್ಲಿನಲ್ಲಿ ಆಡಿದ್ದ ಮಾತು, ಆದಿನ ಬೆಳಗದಗೆ ತೋಟದಲ್ಲಿ ನಡೆದಿದ್ದ, -ಅನ್ಯ ಸಮಯದಲ್ಲಾಗಿದ್ದರೆ ಮುಗ್ಧವಾಗಿಯೆ ಇರುತ್ತಿದ್ದ, -ಘಟನೆಗಳಿಗೆ  ಆಪಾರ್ಥ ವ್ಯಾಖ್ಯಾನವನ್ನೂ ವಿಕಟಧ್ವನಿಯನ್ನೂ ನೀಡಿ, ಯತನ ಬಾಳಿನ ಹಾಲಿಗೆ ಹುಳಿ ಹಿಂಡಿದ್ದುವು.
ಪಿಜಿಣನ ಬಿಡಾರಕ್ಕೆ ಹೋಗಿ, ಅದರ ಮುಚ್ಚಿದ್ದ ಬಾಗಿಲೆಡೆ ನಿಂತು, ಅಕ್ಕಣಿಯನ್ನೆ ಕರೆದು ವಿಚಾರಿಸಿದ, ಯಾವಾಗಲೂ ಏನಾದರೂ ಕಾಯಿಲೆಯಿಂದ ನರುಳುತ್ತಿದ್ದ, ಕೆಲಸ ಮಾಡಿ ದಣಿದು ಮಲಗಿ, ಒಂದು ತರಹ ಕೆಟ್ಟನಿದ್ದೆ ಮಾಡುತ್ತಿದ್ದ  ಪಿಜಿಣನ ಪಕ್ಕದಲ್ಲಿ ಕಣ್ಣು ಬಿಟ್ಟುಕೊಂಡೆ ಮಲಗಿದ್ದ, ಮಕ್ಕಳನ್ನೆ ಹಡೆದುಕಾಣದ ಅಕ್ಕಣಿ ಮಲಗಿದ್ದಲ್ಲಿಂದಲೆ ಹೇಳಿದಳು: ‘ಒಡೆಯರ ಮನೆಯಕಡೆ ಹೋದವಳು ಇನ್ನೂ ಬಂದಿಲ್ಲ. ‘
ಐತ ಹತಾಶನಾದಂತ ಮೆಲ್ಲಗೆ ತನ್ನ ಗುಡಿಸಲಿಗೆ ಬಂದನು. ಕೈ ಅಂದಾಜಿನಿಂದ ಬಾಗಿಲಿಗೆ ಬಿಗಿದಿದ್ದ ಹಗ್ಗವನ್ನು ಬಿಚ್ಚಿ ಒಳಗೆ ಹೋದನು. ಹೊರಗಡೆ ನಸುಗಪ್ಪಾಗಿದ್ದ ಕತ್ತಲೆ ಬಿಡಾರದ ಒಳಗಡೆ ಕಾಡಿಗೆಗಪ್ಪಾಗಿತ್ತು. ಕಾಲೂಹೆ ಕೈ ಯೀಹೆಯ ಮೇಲೆಯೆ ಮೂಲೆಯಲ್ಲಿದ್ದ ಒಲೆಯ ಬಳಿಗೆ ಹೋಗಿ, ಮೆಲ್ಲಗೆ ಊದಿದನು. ಬೂದಿ ಹಾರಿ ಕೆಂಡ ಕಂಡು ಬೆಂಕಿಗೆ ತುಸುವೆ ಜೀವವಿರುವಂತೆ ತೋರಿತು. ಮೆಲ್ಲನೆ ಪಕ್ಕದಲ್ಲಿದ್ದ ಜಿಗ್ಗು ಒಟ್ಟಿ ಜ್ವಾಲೆ ಹೊಮ್ಮುವಂತೆ ಮಾಡಿ, ತೊರಂಗಲ ಎಣ್ಣೆ ಹಾಕಿದ್ದ ಹಣತೆಯ ಬತ್ತಿಯನ್ನು ಹೊತ್ತಿಸಿ  ದೀಪ ಮಾಡಿದನು. ಗಾಢಾಂಧಾಕಾರ ಸಮುದ್ರದ ನಡುವೆ ಮಿನಿಮಿನಿಮಿನಿ ಎಂದು  ಉರಿಯತೊಡಗಿತು, ಹಣತೆಯ ದೀಪದ ಬೆಳಕಿನ ಹನಿ. ಮುಂದೆ? ಮನಸ್ಸೆಲ್ಲ ಶೂನ್ಯವಾದಂತಾಗಿ, ಮುಂದೇನು ಮಾಡುವುದಕ್ಕೂ ತೋಚದೆ, ಮಂಕು ಹಿಡಿದಂತೆ ಕುಳಿತುಬಿಟ್ಟನು ಐತ, ನಿರೀಕ್ಷಣೆಯ ತಪಸ್ಯೆಯಾಗಿ!
ಹಠಾತ್ತನೆ ಎಷ್ಟು ನಿಷ್ಠುರವಾಯಿತು ಜಗತ್ತು! ಆ ಗುಡಿಸಿಲನ್ನು ತುಂಬಿದ್ದ ಅಂಧಕಾರಕ್ಕೆ ಅಂತವಿದೆಯೆ? ಆ ಶೂನ್ಯದ ಪಾತಾಳಕ್ಕೆ ತಳವಿದೆಯೆ? ಜೇನು ಸವಿದಂತೆ ಇತ್ತಲ್ಲಾ ಬದುಕು, ಈ  ವರೆಗೆ? ಉಸಿರು ಕಟ್ಟಿ ಏದುತ್ತಿತ್ತು ಐತನ ಜೀವ!
ತೆರೆದಿದ್ದ ತಟ್ಟಿಯ ಬಾಗಿಲಾಚೆ ಏನೊ ಸದ್ದಾಯಿತು ಅಯ್ಯೊ ಬಾಗಿಲು ಮುಚ್ಚಲು ಮರೆತುಬಿಟ್ಟಿದ್ದನಲ್ಲಾ ಎಂದು ಮೇಲೆದ್ದು ಮೂಂಬರಿಯುವಷ್ಟರಲ್ಲಿ ಒಳಕ್ಕೆ ಬಂದಳು ಪೀಂಚಲು! ಬಿಳಿಯ  ಹಲ್ಲಿನ ಸಾಲೆಲ್ಲ ಕಾಣುವಂತೆ ನಗುತ್ತಿದ್ದಾಳೆ! ಒಂದು ಹೊಸ ಸೀರೆ ಉಟ್ಟಿದ್ದಾಳೆ! ಕೈಯಲ್ಲಿ ಏನೋ  ಗಂಟು, ಪಾತ್ರೆ, ಹಿಡಿದಿದ್ದಾಳೆ! ಅವಳು ತನ್ನ ಮೊಳ ಕೈಯಿಂದಲೆ ತಟ್ಟಿ ಬಾಗಿಲನ್ನು ಮುಚ್ಚಲೆಂದು ತಳ್ಳುತ್ತಾ ತನ್ನ ಕಡೆಗೆ ಬೆನ್ನುಹಾಕಿದಾಗ ನೋಡುತ್ತಾನೆ, ಬಿಳಿಯ ಮಲ್ಲಿಗೆಹೂವಿನ ಕುಚ್ಚು ಮುಡಿದಿದ್ದಾಳೆ!
ಮೋಹಿನಿಗೆ ಮರುಳಾದಂತೆ ಬೆರಗುಹೊಡೆದನು ಹೋಗಿದ್ದಾನೆ ಐತ! ಅವಳು ಬಂಆಗ ಅವಳೊಡನೆ ಎಷ್ಟು ಬಿಗಿಯಾಗಿ ವರ್ತಿಸಬೇಕೆಂದು ಮನಸ್ಸು ಮಾಡಿಕೊಂಡಿದ್ದ? ಅದೆಲ್ಲ ಎಲ್ಲಿಯೊ ಪರಾರಿ!
ಬಾಳು ಹಿಗ್ಗಿತು; ಜೋಪಡಿ ಬೆಳಗಿತು; ಹೊರಗಣ ಮತ್ತು ಒಳಗಣ ಕತ್ತಲೆ ಎಲ್ಲಿಯೊ ಓಡಿತು. ಕತ್ತಲೆ ಇದೆ ಎಂಬುದೇ ಮನಸ್ಸಿಗೆ ಬರಲೊಲ್ಲದು. ಮಧುಮಯವಾಯಿತು ಲೋಕ; ತುಂಬಿ ತುಳುಕಿತು ಬದುಕು; ಮುಖ ಹಿಗ್ಗಿ, ಕಣ್ಣು ಅರಳಿ ಉಸಿರು ತುಂಬಿ “ಎಲ್ಲಿ ಹೋಗಿದ್ದಿ, ಮಾರಾಯ್ತಿ? ಕಾದು ಕಾದು ಸಾಕಾಯ್ತು!” ಎಂಬ ಪ್ರಶ್ನೆ ಹೊಮ್ಮಿತು, ಛದ್ಮವೇಷವಾಂತ ಸ್ವಾಗತ ಗೀತೆಯಂತೆ.
ಅವಳ ನಡೆ, ಉಡುಗೆ, ಭಂಗಿ, ಚಲನವಲನ, ಹಾವಭಾವ, ಋಜುತೆ, ಮುಗ್ಧತೆ-ಒಂದೊಂದೂ ಚೀಂಕ್ರ ಒಡ್ಡಿದ್ದ ಸಂಶಯ ಪಿಶಾಚಕ್ಕೆ ಬೆಂಬಡಿಗೆಯಾಗಿ, ಐತನ ಮನಸ್ಸು ಪ್ರಫುಲ್ಲವಾಯಿತ. ತಾನು ತಂದ ಪಾತ್ರೆ ಮತ್ತು ಬಟ್ಟೆಯ ಗಂಟನ್ನು ಒಂದೆಡೆ ಇಡುತ್ತಾ ಅವಳು “ಅದೆಲ್ಲ ಆಮ್ಯಾಲೆ ಹೇಳ್ತೀನಿ. ಈಗ ಹೊತ್ತಾಯ್ತು, ಬಾ ಉಣ್ಣಾಕೆ” ಎಂದು ಬೇಗಬೇಗನೆ ಬೆಳಿಗ್ಗೆ ತೋಟದಿಂದ ತಂದಿದ್ದ  ಹೊಂಬಾಳೆಯನ್ನೂ ಒಂದು ತೋಳೆದ ಹಾಳೆಯನ್ನೂ ಹಾಕಿದಳು.
“ಎಲ್ಲಿತ್ತೇ ಈ ಹೊಂಬಾಳೆ?”
“ಹೊತ್ತಾರೆ ತ್ವಾಟದಾಗೆ ಸಿಕ್ಕಿತ್ತಲ್ಲಾ ಅದೇ. “
“ಮಜ್ಜಾನ ಉಂಡಿರಲಿಲ್ಲೇನೇ ಅದರಲ್ಲಿ?”
“ಅವನ್ನೇ ತೊಳೆದು ಇಟ್ಟಿದ್ದೆ, ಎಷ್ಟು ಚಂದ ಅದೆ ಅಲ್ಲಾ?”
ಉಣ್ಣುವುದಕ್ಕೆ ಅಣಿಮಾಡುತ್ತಿದ್ದ ಅವಳನ್ನೆ ನೋಡುತ್ತಿದ್ದ ಐತಗೆ ಮನಸ್ಸಿನಲ್ಲಿ ಮತ್ತೆ ಎನೊ ಕಲಕಿದ ಹಾಗಾಯಿತು. ಜೋಪಡಿಯ ಸೂನ್ಯದಲ್ಲಿ, ಜನವಿಹೀನ ರಾತ್ರಿಯ ನೀರವತೆಯಲ್ಲಿ, ತಾನು ಒಲಿದಿದ್ದವಳು ಇಲ್ಲದೆ ಸಂದಿಗ್ಧತೆಯಲ್ಲಿ, ಎಲ್ಲಿ ಹೋದಾಳೊ ಏನಾದಳೊ ಎಂಬ ಕಾತರದಲ್ಲಿ, ಕಾದು  ಕಾದು ಬೇಸುತ್ತಿದ್ದ ಅವನಿಗೆ ತನ್ನ ಹುಡುಗಿ ಹೆಂಡತಿ ಪ್ರವೇಶಿಸಿದ್ದನ್ನು ಕಂಡೊಡನೆ ತಟಕ್ಕನೆ ಅವಿಚಾರವಾಗಿ ಹೊಮ್ಮಿದ ಹರ್ಷದ ಉಬ್ಬರ ಇಳದಮೇಲೆ, ಮತ್ತೆ ಪೂರ್ವವಿಚಾರವೃತ್ತಿ ತಲೆಹಾಕತೊಡಗಿತ್ತು.
“ಹೊಸ ಸೀರೆ ಎಲ್ಲಿತ್ತೇ? ಯಾರು ಕೊಟ್ಟಿದ್ದೇ?”
“ಎಲ್ಲಿಯೊ ಇತ್ತು. ಯಾರೊ ಕೊಟ್ಟರು” ಕೆಲಸದಲ್ಲಿ ತೊಡಗಿದ್ದ ಪೀಂಚಲು ಐತನ ಕಡೆ ನೋಡದೆಯೆ ಉತ್ತರವೀಯುತ್ತಿದ್ದಳು.
“ಇದೆಲ್ಲಾ ತಿನ್ನಾಕೆ ತಂದೀಯಲ್ಲಾ ಯಾರು ಕೊಟ್ಟಿದ್ದು?”
“ಯಾರೋ ಕೊಟ್ಟರು. ಅದೆಲ್ಲ ಈಗ ಯಾಕೆ?”
“ಹೂ ಮುಡಿದಿದ್ದೀಯಾ?”
“ಮುಡಿಬಾರದಾ?”
“ನಾ ಊಟಾ ಮಾಡಾದಿಲ್ಲ!” ಐತನ ಧ್ವನಿಯಲ್ಲಿ ಸಿಟ್ಟು ಇಣುಕುತ್ತಿತ್ತು.
“ಅಯ್ಯೊ! ಯಾಕೆ?” ಇದ್ದಕ್ಕಿದ್ದಹಾಗೆ ತಾನು ಮಾಡುತ್ತಿದ್ದ ಕೆಲಸ ನಿಲ್ಲಿಸಿ, ಪೀಂಚಲು ಬೆಕ್ಕಸದಿಂದ ಐತನ ಕಡೆ ತಿರುಗಿ ಕೇಳಿದಳು.
‘ನಂಗೆ ಹೊಟ್ಟೆ ಹಸಿದಿಲ್ಲ’ ಐತ ಮೂಲೆಯಲ್ಲಿ ಹಾಕಿದ್ದ ಚಾಪೆಯ ಮೇಲೆ ಪೀಂಚಲು ಕಡೆಗೆ ಬೆನ್ನು ಹಾಕಿ ಮಲಗಿಯೆಬಿಟ್ಟನು.
ಹೆಣ್ಣಿಗೆ ಮೊದಲು ತುಸು ದಿಗಿಲೆ ಆಯಿತು. ಓಡಿಹೋಗಿ ಅವನ ಪಕ್ಕದಲ್ಲಿ ಕುಳಿತು “ಸಿಟ್ಟು ಮಾಡಿಕೊಂಡಿರಾ?” ಎಂದಳು, ಐತ ಮಾತಾಡಲಿಲ್ಲ; ತಿರುಗಲೂ ಇಲ್ಲ. ಅವನು ಯಾವುದೊ ದುಃಖದಿಂದ ಬಿಕ್ಕುವಂತೆ ತೋರಿತು. ಪೀಂಚಲು ಅವನ ಮುಖದ ಮೇಲೆ ಕೈಯಾಡಿಸಿದಾಗ ಅದು ಒದ್ದೆಯಾಯಿತು! ಐತ ಅಳುತ್ತಿ‌ದ್ದಾನೆ. ಯಾಕೆ? ತಾನೇನು ಮಾಡಿದೆ? ಹೆಣ್ಣಿನಲ್ಲಿದ್ದ ಹೆಂಡತಿಯ ಕರುಳು ಮರುಗಿ ತಾಯ್ತತನಕ್ಕೇರಿತು. ಐತನೊಂದು ರಚ್ಚೆ ಹಿಡಿದ ಅರಿಯದ ಮಗುವೊ ಎಂಬಂತೆ ಅವನನ್ನು ಮುದ್ದುಮಾಡಿ ಲಲ್ಲಯ್ಸಿದಳು. ಎಂತಹ ವಿಚಾರಪೂರ್ವಕವಾದ ವಾದದಿಂದಲೂ ನಿವಾರಣೆಯಾಗದ ಸಂಕಟವನ್ನೂ ಪರಿಹರಿಸುವ ಕೈ ಮೈ ಸೋಂಕಿನಿಂದ ಅವನ ಚೇತನವನ್ನೆಲ್ಲ ಸಾಂತ್ವನಕ್ಕೆ ನೀವಿದಳು: ಉಣಲೊಲ್ಲೆ ಎಂದಿದ್ದವನು, ಎದ್ದು ಕಡುಬು ತುಂದು ಬಡಿಸಿಟ್ಟಿದ್ದ ಹೊಂಬಾಳೆಯ ಮುಂದೆ ಕೂತನು! ಅವಳೂ ಅವನಿಗೆ ಎದುರೆ ಹಾಳೆಯ ಮುಂದೆ ಕೂತಳು.
ಪಕ್ಕದಲ್ಲಿ ಬಾಳೆಯ ಕೀತಿನ ಮೇಲೆ ಬಡಿಸಿದ್ದ ಹೋಳಿಗೆಯನ್ನು ಕಂಡು ಐತ ಐಶ್ವರ್ಯವನ್ನು ಎಡವಿದ ದಟ್ಟದರಿದ್ರನಂತೆ ಹಿಗ್ಗಿ “ಇದು ಎಲ್ಲಿತ್ತೆ? ಯಾರು ಕೊಟ್ಟರೆ? ಹೋಳಿಗೆ!” ಆ ಕೊನೆಯ ಪದವನ್ನು ಸವಿದು ಉಚ್ಚರಿಸಿದನು.
ಪೀಂಚಲುಗೆ ನಗೆ ತಡೆಯಲಾಗಲಿಲ್ಲ: ಈಗ ತಾನೆ ಊಟ ಮಾಡುವುದಿಲ್ಲ ಎಂದು ಹಟತೊಟ್ಟು ಮಲಗಿದ್ದ. ಕಣ್ಣಿನ ತುದಿಗಳಲ್ಲಿ ಅತ್ತಿದ್ದ ಒದ್ದೆ ಇನ್ನೂ ಪೂರ್ತಿ ಆರಿಲ್ಲ. ಈಗ ಅದನ್ನೆಲ್ಲ ಮರೆತು, ಅದೊಂದೂ ನಡದೇ ಇಲ್ಲ ಎನ್ನುವ ಹಾಗೆ, ಬಾಲಕನಂತೆ ಮಾತಿಗೆ ತೊಡಗಿದ್ದಾನೆ. ಪೀಂಚಲುಗೆ ಅವನನ್ನು ಚೆನ್ನಾಗಿ  ಹಿಸುಕಿ ಮುದ್ದು ಮಾಡಿಬಿಡಬೇಕು ಎನ್ನಿಸಿತು…. ಚೆನ್ನಾಗಿ ನಕ್ಕುಬಿಟ್ಟಳು.
“ಯಾಕೆ? ನಗುತ್ತೀಯಾ?”
“ಆ ಹೋಳಿಗೆ ಯಾರು ಕೊಟ್ಟಿದ್ದು ಗೊತ್ತಾ?” ತನ್ನನ್ನೇ ಪ್ರಶ್ನಾರ್ಥಕವಾಗಿ ನೋಡುತ್ತಿದ್ದ ಗಂಡನಿಗೆ ಪೀಂಚಲು ಹೇಳಿದಳು: “ಹೂವಳ್ಳಿ ಚಿನ್ನಕ್ಕ!”
“ಹೂವಳ್ಳಿಗೆ ಹೋಗಿದ್ಯಾ?”
ಪೀಂಚಲು ಹ್ಞೂ ಎಂದು ತಲೆದೂಗಿದಳು, ಮುಗುಳು ನಗುತ್ತಾ.
“ಯಾಕೆ? ಯಾರ ಸಂಗಡ ಹೋಗಿದ್ದೆ? ಒಬ್ಬಳೆ ಹೋಗಿದ್ಯಾ? ಕಾಡಿನಲ್ಲಿ? ಈ ಕತ್ತಲೇಲಿ?”
“ಅಮ್ಮ ಈವತ್ತು ಹಡೆದರಲ್ದಾ? ನಿಂಗೆ ಗೊತ್ತಿಲ್ಲಾ?”
“ಹೌದೇನು? ಹೆಣ್ಣೋ ಗಂಡೋ?”
“ಗಂಡು!… ನಾ ಯಾಕ ಹೂವಳ್ಳಿಗೆ ಹೋಗಿದ್ದೆ ಗೊತ್ತಾ? ಆ ಬಾವಿಕೊಪ್ಪದ ನಾಗ ಹೆಗ್ಗಡ್ತಮ್ಮ ಅವರ ಸೊಸೆ ನಾಗಕ್ಕ ಇವತ್ತು ಮನೆಗೆ ಬಂದಿದ್ರಲ್ಲಾ…. ಅವರಿಬ್ಬರೂ ಹೋಗಬೇಕಾಗಿತ್ತಂತೆ ಹೂವಳ್ಳಿಗೆ… ಅಮ್ಮನ ಬಾಣಂತನ ನೋಡಿಕೊಳ್ಳೋಕೆ, ದೊಡ್ಡಮ್ಮ ನಾಗಹೆಗ್ಗಡ್ತಮ್ಮನ್ನ ಇರಿ ಅಂದ್ರಂತೆ…. ಆದರೆ ನಾಗಕ್ಕ ಹೂವಳ್ಳಿಗೆ ಹೋಗ್ತೀನಿ ಅಂದ್ರಂತೆ….”
“ಅದ್ಯಾಕೆ? ಹಾಂಗೆ ಕಣ್ಣು ಮಿಟತಕಿಸಿ ನೋಡ್ತೀಯಾ?”
ಐತನ ಪ್ರಶ್ನೆಗೆ ಉತ್ತರ ಹೇಳದೆ ಮುಂದುವರಿದಿದ್ದಳು ಪೀಂಚಲು:
“ನಾಗಕ್ಕನ್ನ ಹೂವಳ್ಳಿ ತನಕ ಕಳಿಸಿ ಬಾ ಅಂದ್ರು ನನಗೆ. ಹೋಗಿದ್ದೆ…. ಇವತ್ತೇನೋ ಹರಕೆ ಅಂತ ಹೂವಳ್ಳೀಲಿ. ಹಂದಿ ಕಡಿದಿದ್ರು…. ಹೂವಳ್ಳಿ ಚಿನ್ನಕ್ಕ ನನ್ನ ಕಂಡು ಎಷ್ಟು ಸಂತೋಷಪಟ್ರು ಅಂತೀಯಾ! ಅವರೇ ಕೊಟ್ಟಿದ್ದು ಈ ಸೀರೆ, ಕಡಬು ತುಂಡು ಎಲ್ಲ…. ಬೆಳಕು ಬೆಳಕು ಇದ್ದಾಗಲೆ ಬಂದಿದ್ದೆ ಮನೀಗೆ. ದೊಡ್ಡಮ್ಮ ಎನೇನೊ ಕೆಲಸ ಹೇಳಿದ್ರು. ಮಾಡಿಕೊಟ್ಟು ಬಂದೆ. ಅದಕ್ಕೇ ಹೊತ್ತಾಗಿದ್ದು…. ಆ ಅನ್ನ ಈ ಉಪ್ಪಿನಕಾಯಿ ಖಾರ ಜೀರಿಗೆ ಮೆಣಸಿನಕಾಯಿ ಹಾಕಿದ್ದು. ಆಮ್ಯಾಲೆ ಲಬಲಬ ಅಂತ ಬಾಯಿ ಹುಯಿಕೊಂಡೀಯಾ?…. ಹೇಳೀನಿ….” ಎನ್ನಿತ್ತಿದ್ದವಳು ತಟ್ಟಕ್ಕನೆ ಆಲಿಸಿ “ಹೋ! ಸೇರಿಗಾರ್ರ ಬಿಡಾರದಲ್ಲಿ ಏನೋ ಬೊಬ್ಬೆ ಆಗ್ತಾ ಅದೆ!” ಎಂದಳು.
ಐತನೂ ಆಲಿಸಿ “ಆ ಚೀಂಕ್ರ ಮಾರಾಯ ಇವತ್ತು ಚೆನ್ನಾಗಿ ಶರಾಬು ಕುಡಿದು ಬಂದಿದ್ದಾನಲ್ಲಾ? ದೇಯಿಅಕ್ಕನ ಗತಿ ಮುಟ್ಟಿಸುತ್ತಾನೆ ಅಂತ ಕಾಣ್ತದೆ” ಎಂದನು, ಸಂಕ್ಷೇಪವಾಗಿ ನಡೆದದ್ದನ್ನೆಲ್ಲ ಹೇಳಿ.
ಪೀಂಚಲುಗೆ ಅಲ್ಲಿಗೆ ಹೋಗಿ ಬರುವ ಮನಸ್ಸು. ಆದರೆ ಐತ ಕುಡಿದು ಮತ್ತೇರಿದ್ದ ಚೀಂಕ್ರನನ್ನು ನೆನೆದು, ಅವಳನ್ನು ತಡೆದನು. ಚೀಂಕ್ರನ ಬಿಡಾರದಲ್ಲಿ ಆ ಬೊಬ್ಬೆ ಆಸಾಧಾರಣವಾದದ್ದೇನಾಗಿರಲಿಲ್ಲ. ಎಷ್ಟೋ ಸಾರಿ ಅಕ್ಕಪಕ್ಕದ ಬಿಡಾರದವರು ಹೋಗಿ ದೇಯಯಿನ್ನು  ರಕ್ಷಿಸಿದ್ದೂ ಉಂಟು. ಆಗಾಗ ನಡೆಯುತ್ತಲೆ ಇರುವಂತೆ ಇವತ್ತೂ ಏನೋ ಗಲಾಟೆ ಎಂದು ಇಬ್ಬರೂ ಊಟಮಾಡತೊಡಗಿದರು.
ಉಂಡು ಪೂರೈಸುವಷ್ಟರಲ್ಲಿ ಐತನ ಮನಸ್ಸಿನಲ್ಲಿ ಕವಿಯತೊಡಗಿದ್ದ ಎಲ್ಲ ಮುಗಿಲುಗಳು ದಿಕ್ಕಾಪಾಲಾಗಿ ಚೆದರಿಹೋಗಿ, ಅವನ ಹೃದಯ ತಿಳಿಬಾನಾಗಿತ್ತು. ಪೀಂಚಲು ಪರವಾಗಿ ಅವನ ಪ್ರೀತಿ ಉಕ್ಕುವಂತಿತ್ತು. ಅವಳನ್ನೆ ನೋಡಿದನು ಎವೆಯಿಕ್ಕದೆ, ಪ್ರಶಂಸನೀಯ ದೃಷ್ಟಿಯಿಂದ: ಇಂಥ ಚೆಲುವೆಯರೂ ಇನ್ನಿದ್ದಾರೆಯೆ? ನಾನೆಂಥ ಪುಣ್ಯವಂತ ಎಂದುಕೊಂಡಿತು ತಣಿದ ಅವನ ಜೀವ.
ಬಿಚ್ಚಿ ಹಾಕಿದ್ದ ಓಲೆಚಾಪೆಯ ಮೇಲೆ ಮಲಗಲು ಹವಣಿಸುತ್ತಿದ್ದವನು “ತಲೆದಿಂಬಿನ ಕಲ್ಲು ಎಲ್ಲಿ ಹೋಯಿತಪ್ಪಾ?” ಎಂದುಕೊಂಡನು.
ಪೀಂಚಲು ಗೋಡೆ ಬದಿ ಬಿದ್ದಿದ್ದ ಒಂದು ಎರಡಡಿ ಉದ್ದದ ಹಾಸುಗಲ್ಲನ್ನು ಕಷ್ಟಪಟ್ಟು ಎತ್ತಿ ತಂದುಕೊಟ್ಟಳು. ಅದನ್ನು ಚಾಪೆಯ ಅಡಿಹಾಕಿ, ಚಾಪೆಯ ಮೇಲೆ ತನ್ನ ಕಂಬಳಿ ಹಾಕಿದನು. ಮುಚ್ಚಿದ್ದ ತಟ್ಟಿ ಬಾಗಿಲಿನ ಬಿರುಕಗಳೆ ಕಿಟಕಿಯ ಕೆಲಸವನ್ನೂ ಬಹಿಸಿಕೊಳ್ಳಬೇಕಾಗಿದ್ದ ಆ ಜೋಪಡಿಯ ಒಳಭಾಗವನ್ನೆಲ್ಲ ನೋಡುತ್ತಾ “ನಿನ್ನೆ ಅಂಥಾ ಭಾರಿಮಳೆ ಬಂದರೂ ಇವತ್ತು ಏನು ಸೆಕೆ? ಈ ನುಸಿ ಕಾಟ ಬೇರೆ! ಆ ತೆಂಗಿನೆಣ್ಣೆ ಕುಡಿಕೆ ಎಲ್ಲಿ? ಕೊಡ್ತೀಯಾ?” ಎಂದು ಮೈಮೇಲೆ ಸದ್ದಾಗುವಂತೆ ಅಂಗೈಯಿಂದ ಹೊಡೆದುಕೊಂಡನು, ನುಸಿ ಕುಳಿಸತಿದ್ದೆಡೆಗೆ.
ಪೀಂಚಲು ಕುಡಿಕೆ ತಂದುಕೊಟ್ಟಳು. ಐತ ಕೌಪೀನ ವಿನಾ ಸಂಪೂರ್ಣ ನಗ್ನನಾಗಿ ಕುಳಿತು ಮೈಗೆ ತೆಂಗಿನೆಣ್ಣೆ ಸವರಿಕೊಂಡನು. ಬಡತನದ್ದಾದರೂ, ಅಷ್ಟೇನು ಸುಪುಷ್ಟವಾಗಿರದಿದ್ದರೂ, ನಗ್ನತೆಯಲ್ಲಿಯೆ ಹೆಚ್ಚು ಸುಲಕ್ಷಣವಾಗಿ, ನಿತ್ಯ ಪರಿಚಿತವಾಗಿದ್ದ ತೆಂಗಿನೆಣ್ಣೆಯ ಕಂಪನ್ನು ಸೂಸುತ್ತಿದ್ದ ಅವನ ಶರೀರದ ರೂಪು ಹುಡುಗಿಯ ಕಣ್ಣಿಗೆ ಆಪ್ಯಾಯಮಾನವಾಗಿತ್ತು. “ಅಭ್ಯಂಗಕ್ಕೆ ಎಣ್ಣೆ ಹಚ್ಚಿಕೊಂಡ್ಹಾಂಗೆ ಬಡುಕೊಳ್ತಿದ್ದೀ ಯಲ್ಲಾ! ನುಸಿ ಕಚ್ಚದಿದ್ಹಾಂಗೆ ಒಂದು ಚೂರು ಸವರಿಕೊಂಡರೆ ಸಾಲದೆ?” ಎಂದು ಭರ್ತ್ಸನೆ ಮಾಡುವವಳಂತೆ ಹತ್ತಿರಕ್ಕೆ ಓಡಿಬಂದು, ಎಣ್ಣೆ ಕುಡಿಕೆಯನ್ನು ದೂರ ಸರಿಸಿ, ಅವನ ಪಕ್ಕದ್ದಲ್ಲಿ ಕುಳಿತು, ಅವನ  ಮೈಯೆನ್ನೆಲ್ಲ ನೀವಿ ಸವರತೊಡಗಿದಳು. “ಅಯ್ಯೊ ಅಯ್ಯೊ ಅಯ್ಯೊ ಎಣ್ಣೆ ಮುಳುಕ ಆಗಿಬಿಟ್ಟೀಯಲ್ಲಾ!” ಎಂದು ಅಲ್ಲಲ್ಲಿಯೆ ಹೆಚ್ಚಾಗಿ ಸವರಿದ ಮೈ ಭಾಗದ ಎಣ್ಣೆಯನ್ನೆಲ್ಲ ಕೀಸಿ ಬಳೀದು ತೆಗೆದು, ಇನ್ನೂ ಎಣ್ಣೆ ಹಚ್ಚದಿದ್ದ ಭಾಗಗಳಿಗೆ ತಿಕ್ಕಿದಳು. ಗಂಡನ ಬರಿ  ಮೈ ಕಂಡು ಅವಳಲ್ಲಿ ಉಕ್ಕಿ ಬಂದಿದ್ದ ಮೋಹಪ್ರೇಮಗಳಿಗೆ ಅಭಿವ್ಯಕ್ತಿ ಕೊಡುವುದೇ ಮುಖ್ಯ ಆಶೆಯಾಗಿತ್ತು ಆ ಎಣ್ಣೆ ತಿಕ್ಕುವ ನೆವಕ್ಕೆ ಅವನು ‘ಸಾಕೆ!’ ‘ಬೇಡವೆ!’ ‘ಜಿಬ್ಬಳಿಕೆ ಆಗ್ತದೆಯೆ!’ ಎಂದೆಷ್ಟು ಹೇಳಿದರೂ ಬಿಡದೆ ತೋಳು, ಎದೆ, ಬೆನ್ನು, ಕೊರಳು, ಕೆನ್ನೆ, ಗಲ್ಲ, ತೊಡೆ, ಕಾಲು ಎಲ್ಲವನ್ನೂ ನೀವಿ ನೀವಿ ಸವಿದೇಬಿಟ್ಟಳು! ಐತನಿಗೂ ಆ ತೈಲಸಂಮರ್ದನ ಕಣ್ಣುಮುಚ್ಚಿಕೊಳ್ಳುವಷ್ಟರಮಟ್ಟಿಗೆ ಸುಖಕರವಾಗಿಯೆ ಇತ್ತು! ನಡುನಡುವೆ ಅವನೂ, ತನ್ನ ಎಣ್ಣೆಯನ್ನೆ ಬಳಿದು ತೆಗೆದು ಅವಳ  ಮೈಗೂ ಹಚ್ಚುವ ನೆವದಿಂದ ಅವಳ ಮೃದುತ್ವವನ್ನೂ ಮುಟ್ಟಿಸವಿವ ಶೃಂಗಾರ ಚೇಷ್ಟೆಗೆ ಕೈಹಾಕಿದ್ದನು!
“ಅಲೇಸಾಲೇಸು!” ಇದ್ದಕ್ಕಿದ್ದ ಹಾಗೆ ಎಣ್ಣೆ ಉಜ್ಜುವುದನ್ನು ನಿಲ್ಲಿಸಿ ಪೀಂಚಲು ಕಿವಿಗೊಟ್ಟಳು. “ಹುಲಿ ಕೂಗ್ತದೆ!…. ಹುಲಿಕಲ್ ನೆತ್ತೀಲಿರಬೇಕು!” ಐತನೆಂದನು ಪಿಸುದನಿಯಲ್ಲಿ, ತಾನು ಗಟ್ಟಿಯಾಗಿ ಮಾತಾಡಿದರೆ ಎಲ್ಲಿ ಹುಲಿಗೆ ಕೇಳಿಸಿ ಬಿಡುತ್ತದೆಯೊ ಎಂಬಂತೆ.
ಕಾಡೆನ್ನೆಲ್ಲ ನಡುಗಿಸುವಂತೆ ಹೆಬ್ಬುಲಿಯ ಗರ್ಜನೆಯ ಭಯಂಕರವಾಗಿ ಅಲೆ ಅಲೆ ಅಲೆ ಅಲೆಯುತಿತ್ತು. ಮತ್ತೆ ಉನ್ಮತ್ತ ರಭಸದಿಂದ ಅನೇಕ ದೊಡ್ಡ ಜಂತುಗಳು ಹಳುವಿನಲ್ಲಿ ನುಗ್ಗಿ ಓಡಿದ ಸದ್ದಾಯಿತು.
“ದೊಡ್ಡಿನ ಹಿಂಡು ಅಂತಾ ಕಾಣ್ತದೆ! ಹುಲಿ ಕೂಗಿದ್ದಕ್ಕೆ ಹೆದರಿ ಓಡ್ತಾ ಇವೆಯೊ ಎನೊ?” ಎಂದ ಐತ, ಫಕ್ಕನೆ ಮತ್ತೇನನ್ನೊ ನೆನಪಿಗೆ ತಂದುಕೊಂಡಂತೆ, “ಅಲ್ಲಾ? ಆ ಗುತ್ತಿ ನಾವು ಕಮ್ಮಾರಸಾಲೇಲಿ ದೊಂದಿ ಮಾಡಿಕೊಂಡು ಹೋದ, ಈ ಕತ್ತಲೇಲಿ ಈ ಕಾಡಿನಾಗೆ, ಸಿಂಬಾವಿಗೆ ಹೋಗ್ತೀನಿ ಅಂತಾ ಹೋದನಲ್ಲಾ? ಏನಿರಬೇಕು ಅವನ ಎದೆ!… ಆ ‘ಹುಲಿಕಲ್ ನೆತ್ತಿ ‘, ‘ಬೆತ್ತದ ಸರ’ ಎಲ್ಲ ದಾಟಿಕೊಂಡು ಹೋಗಬೇಕಲ್ಲಾ?”
“ಅವನ ನಾಯಿ ಇರ್ತದಲ್ಲಾ ಯಾವಾಗ್ಲೂ ಅವನ ಜೊತೇಲಿ! ಮತ್ತೇನು ಹೆದರಿಕೆ ಅವನಿಗೆ?” ಎಂದಳು ಪೀಂಚಲು. ತನ್ನಂತಹ ಒಂದು ಹೆಣ್ಣೂ ಅವನ ಸಂಗಡ ಹೋಗುತ್ತಿದೆ ಎಂಬ ಸಂಗತಿ ತಿಳಿದಿದ್ದರೆ ಅವಳು ಏನು  ಹೇಳುತ್ತಿದ್ದಳೊ!
ಹಣತೆ ಆರಿತು. ಬತ್ತಿಯ ತುದಿಯ ಕನರುವಾಸನೆ ತುಂಬಿತು. ಸೆಕೆಯ ದೆಸೆಯಿಂದ ಹೊದ್ದುಕೊಳ್ಳದೆ ಮಲಗಿದ್ದ ಐತನ ಒತ್ತಿನಲ್ಲಿಯೆ ಮಲಗಿದ್ದಳು ಪೀಂಚಲು. ಐತನ ಬೆತ್ತಲೆಯ ಮೈಗೆ, ಸೆಕೆಯನ್ನೆಲ್ಲ ಪರಿಹರಿಸುವಂತೆ, ಮತ್ತೊಂದು ಬೆತ್ತೆಲೆಯ ಮೈಯೆ ಸೋಂಕಿದಂತಾಯಿತು! ಎರಡು ಬಿಸಿಯ ಮೈಸೇರಿ ಎಂತಹ ತಂಪು ಹುಟ್ಟತ್ತದೆ? ಅಚ್ಚರಿ, ಆನಂದ, ಐತನಿಗೆ! ಇದೇನು? ಸೀರೆ ಉಟ್ಟಿದ್ದಳಲ್ಲಾ ಪೀಂಚಲು? ಹೊಸ ಸೀರೆ!… ಇಧೇನು ಇಬ್ಬರಿಗೂ ಒಟ್ಟಿಗೆ ಹೊದಿಸುತ್ತಾಳೊ?…. ಅಲ್ಲ; ಕಂಬಳಿಯಲ್ಲ! ತೆಳ್ಳಗಿದೆ, ನುಣ್ಣಗಿದೆ, ತಣ್ಣಗಿದೆ, ಆ ಹೊಸ ಸೀರೆ!…  ಅವಳು ಉಟ್ಟಿದ್ದ ಸೀರೆಯು ಈಗ ಇಬ್ಬರಿಗೂ ಒಟ್ಟಿಗೆ ಹೊದೆಯುವ ಶಾಲಾಗಿದೆ! ಸೀರೆಯೆ ಶಾಲಾಗಿ, ಹೊದಿಕೆಯೆ ಲಕ್ಷಣ ದ್ವಿಗುಣಿತವಾಗಿದೆ! ಅದಕ್ಕೇ ಮತ್ತೆ? ತನ್ನ ಬತ್ತಲೆಗೆ ಅಪ್ಪಿದ್ದು ಅವಳ ಬತ್ತಲೆ! ಆದರೇನು? ಕವಿದಿಲ್ಲವೆ ಕಗ್ಗತ್ತಲೆ? ಕುರುಡುಗತ್ತಲೆ?
*****

ಕಾಮೆಂಟ್‌ಗಳಿಲ್ಲ: