ಮಲೆಗಳಲ್ಲಿ ಮದುಮಗಳು-೪

ಗುತ್ತಿ ತಾನೂ ಉಂಡು, ತನ್ನ ನಾಯಿಗೂ ಸಾಕಷ್ಟನ್ನು ಹಾಕಿ, ಮುಂಚೆಕಡೆಯ ಮುರುವಿನ ಒಲೆಯ ಬಳಿಗೆ ಬರುವಷ್ಟರಲ್ಲಿಯೆ ಸೀತೂರ ತಿಮ್ಮನಾಯ್ಕನು ಜಗಲಿಯ ಮೇಲೆ ಮಲಗಿಬಿಟ್ಟಿದ್ದನು. ಸೇಸನಾಯ್ಕನೂ ಒಳಗೆ ಕಾಡಿಯೊಡನೆ ಗೊಣಗೊಣನೆ ಮಾತಾಡುತ್ತಿದ್ದುದು ಕೇಳಿಬರುತ್ತಿತ್ತು. ಬಾಯಿಗೆ ಹಾಕಿಕೊಂಡಾದ ಮೇಲೆ, ಆರಲು ಹರಡಿದ್ದ ತನ್ನ ಕಂಬಳಿಯನ್ನೆ ಸುತ್ತಿಕೊಂಡು. ಒಲೆಗೆ ತುಸು ದೂರದಲ್ಲಿ ಬೆಂಕಿಯ ಶಾಖ ಅಪ್ಯಾಯಮಾನವಾಗುವಷ್ಟು ಹತ್ತಿರದಲ್ಲಿ ಮಲಗಿಕೊಂಡನು.
ಹಗಲೆಲ್ಲ ಗದ್ದೆಯುತ್ತು ಸಂಜೆಯಲ್ಲಿ ಬೆಟ್ಟ ದಾಟಿ ಬಂದು ದಣಿದಿದ್ದ ಅವನಿಗೆ ಚೆನ್ನಾಗಿ ನಿದ್ದೆ ಬರಬೇಕಾಗಿತ್ತು. ನಿದ್ದೆ ಬರುತ್ತಲೂ ಇತ್ತು. ಆದರೆ ಜಗಲಿಯ ಮೇಲೆ ಮಲಗಿದ್ದ ತಿಮ್ಮನಾಯ್ಕ ಮಾರಾಯನು ಕೊರೆಯಲು ಪ್ರಾರಂಭಿಸಿದನು. ಅವನು ಗೊರಕೆ ಹೊಡೆದರೆ ಇವನಿಗೆ ನಿದ್ದೆ ಮಾಡುವುದಕ್ಕೇನಾಗುತ್ತಿತ್ತು ಎನ್ನುವಂತಿರಲಿಲ್ಲ ಆ ಗೊರಕೆ! ಇತರ ಎಲ್ಲದರಲ್ಲಿಯೂ ಇರುವಂತೆ ಗೊರಕೆಯಲ್ಲಿಯೂ ಸಾತ್ವಿಕ ರಾಜಸ ತಾಮಸಗಳೆಂದು ಮೂರು ವಿಧವಿವೆಯಲ್ಲವೆ? ತಿಮ್ಮನಾಯ್ಕನ ಗೊರಕೆ ರಭಸದಲ್ಲಿ ರಾಜಸವಾಗಿಯೂ ರಸದಲ್ಲಿ ತಾಮಸವಾಗಿಯೂ ಇದ್ದು ಭೀಕರವಾಗಿತ್ತು. ಶ್ವಾಸೋಚ್ಛ್ವಾಸದ ಗರಗಸದಿಂದ ನಿಃಶಬ್ದತೆಯ ಗೋನಾಳಿಯನ್ನು ಘರಿಲ್ ಘರಿಲ್ ಗರಾಗರಾ ಗೊರ್ ಗೊರ್ ಎಂದು ಮೊದಲಾಗಿ ನಾನಾ ನಾದವಿನ್ಯಾಸಗಳಿಂದ ಕೊಯ್ಯುತ್ತಿತ್ತು. ಬಡ ಗುತ್ತಿಯ ನಿದ್ದೆಯ ಕುತ್ತಿಗೆಯನ್ನೇನೊ ಕೊಯ್ದೇ ಬಿಟ್ಟಿತ್ತು! ಅವನು ಎಷ್ಟು ಪ್ರಯತ್ನಪಟ್ಟರೂ ನಿದ್ದೆ ಮಾಡಲಾಗಲಿಲ್ಲ. ನಿದ್ದೆ ಹಾಳಾದದ್ದಲ್ಲದೆ ಯಾವುದೋ ಒಂದು ತೆರನಾದ ಅರ್ಥವಿಲ್ಲದ ಹೆದರಿಕೆಯೂ ಉಂಟಾಯಿತು.
ಎದ್ದು ಕೂತು “ಅಯ್ಯಾ! ಅಯ್ಯಾ! ಅಯ್ಯಾ!” ಎಂದು ಕರೆದನು. ವ್ಯರ್ಥ! ತಿಮ್ಮನಾಯ್ಕನು ಎಷ್ಟು ತಿಂದು ಕುಡಿದಿದ್ದನೆಂದರೆ, ಕಡುಬು, ತುಂಡು, ಕಳ್ಳು ಹೆಂಡ ತುಂಬಿದ ಸರಗೋಲಾಗಿ ಹೋಗಿದ್ದನು!
ಇದ್ದಕ್ಕಿದ್ದ ಹಾಗೆ ತಿಮ್ಮನಾಯ್ಕನು ಭಯಂಕರವಾಗಿ ಹೂಂಕಾರ ಮಾಡತೊಡಗಿದನು. ಗುತ್ತಿ ದಿಗಿಲುಬಿದ್ದನು. ನಾಯಿಗಳೆಲ್ಲ ಬೆಚ್ಚಿಬಿದ್ದು ಕೂಗಾಡಿದುವು. ದೀಪ ಹಿಡಿದು ಹೊರಗೆ ಓದಿ ಬಂದ ಸೇಸನಾಯ್ಕನು ಮಾತ್ರ ನಿರುದ್ವಿಗ್ನವಾಗಿ, ಹೆದರುಗಣ್ಣಾಗಿದ್ದ ಗುತ್ತಿಗೆ “ಏನೂ ಇಲ್ಲ ಕಣ್ರೋ! ಅವರಿಗೆ ಆಗಾಗ್ಗೆ ಹೀಂಗೆ ಆಗ್ತದೆ! ಮಲರೋಗ!” ಎಂದು ನೀರೆರಚುವುದೇ ಮೊದಲಾದ ಕಾರ್ಯಗಳಲ್ಲಿ ಆಸಕ್ತನಾದನು.
ಸುಮಾರು ಕಾಲು ಗಂಟೆ ಹೊಡೆಯಿತು. ತಿಮ್ಮನಾಯ್ಕನು ಸರಿಯಾದ ಸ್ಥಿತಿಗೆ ಬರಬೇಕಾದರೆ! ಹೊಟ್ಟೆಯೊಳಗಿದ್ದ ತುಂಡು ಕಡುಬು ಹೆಂಡ ಕಳ್ಳು ಎಲ್ಲ ಒಟ್ಟಿಗೆ  ವಾಂತಿಯಾಯಿತು! ಆ ದುರ್ವಾಸನೆ ಹೊಲೆಯನ ಮೂಗಿಗೂ ಹೇಸಿಗೆ ಹುಟ್ಟಿಸುವಂತಿತ್ತು. ಅಂತೂ ಆಮೇಲೆ ತಿಮ್ಮನಾಯ್ಕನು ಸದ್ದು ಮಾಡಲಿಲ್ಲ. ಗುತ್ತಿ ಚೆನ್ನಾಗಿ ನಿದ್ದೆ ಮಾಡಿದನು. ಸುಮಾರು ನಡು ರಾತ್ರಿಯ ಹೊತ್ತಿಗೆ ಹತ್ತು ಮೀನು ಕಡಿಯಲು ಹೋಗಿದ್ದ ರಂಗ, ಪುಟ್ಟ, ಹಮೀರ ಮೊದಲಾದವರು ಹಿಂತಿರುಗಿ ಬಂದಾಗಲೂ ಅವನಿಗೆ ಎಚ್ಚರವಾಗಲಿಲ್ಲ.
ಸೇಸನಾಯ್ಕನ ಮಗ ಹಮೀರನಾಯ್ಕನು ಗುತ್ತಿ ಮಲಗಿದ್ದನ್ನು ಕಂಡು “ಮಲಗಿದ್ರೆ ಮಲಗ್ಬೇಕು ಹೀಂಗೆ; ಒನಕೆ ತುಂಡು ಬಿದ್ದ್ಹಾಂಗೆ!” ಎಂದನು.
ಎರಡನೆಯ ಸಲ ಕೋಳಿ ಕೂಗುವ ಹೊತ್ತಿಗೆ ಗುತ್ತಿಗೆ ಎಚ್ಚರವಾಯಿತು. ಸ್ವಲ್ಪ ಚಳಿಯೂ ಆಯಿತು. ಕಂಬಳಿಯನ್ನು ಮತ್ತಷ್ಟು ಬಲವಾಗಿ ಮೈಗೆ ಸುತ್ತಿ ಹೊದೆದು, ಮುದುರಿ, ಕಣ್ಣು ಬಿಟ್ಟುಕೊಂಡೇ ಮಲಗಿದನು. ತುಸು ಹೊತ್ತಿನಲ್ಲಿ ಮನೆಯ ಮುಂದೆ ಬೇಲಿಯ ಸಾಲಿನಲ್ಲಿ ಹಂಡಹಕ್ಕಿ ಸಿಳ್ಳು ಹಾಕತೊಡಗಿತು. ಗುತ್ತಿ ಮೇಲೆದ್ದು ಕಂಬಳಿಯನ್ನು ಹೆಗಲ ಮೇಲೆ ಹಾಕಿಕೊಂಡು ಅಂಗಳಕ್ಕಿಳಿದನು. ಬೆಳಿಗ್ಗೆ ಇನ್ನೂ ನಸುಕು ನಸುಕಾಗಿತ್ತು. ಮನೆಯಲ್ಲಿ ಯಾರೂ ಎದ್ದಿದ್ದಂತೆ ಕಾಣಲಿಲ್ಲ. ತಾನು ಅವೊತ್ತು ಮಾಡಲೇಬೇಕಾಗಿದ್ದ ಕೆಲಸಗಳನ್ನೆಲ್ಲಾ ನೆನೆದು ಗುತ್ತಿ ಬೇಗ ಬೇಗನೆ ಮುಂದುವರಿದನು.
ತಡಬೆಯನ್ನು ದಾಟಿ ಮೇಗರವಳ್ಳಿಗೆ ಹೋಗುವ ಕೊರಕಲು ಗಾಡಿದಾರಿಗೆ ಬಂದಾಗ ಹುಲಿಯನ ನೆನಪಾಯಿತು. ಮೆಲ್ಲಗೆ ಸಿಳ್ಳು ಹಾಕಿದನು. ನಾಯಿಗಳೆಲ್ಲವೂ ಹಿಂಡಾಗಿ ನುಗ್ಗಿಬಂದವು. ಹೊಲೆಯನ ನಾಯಿ ಹಳೇಪೈಕದವರ ನಾಯಿಗಳೊಡನೆ ಆಗಲೆ ಸ್ನೇಹ ಸಂಬಂಧಗಳನ್ನು ಚೆನ್ನಾಗಿ ಸಂಪಾದಿಸಿತ್ತು.
“ಬಾ ಹುಲಿಯ!” ಎಂದು ಒಂದು ಸಾರಿ ಕರೆದು ಗುತ್ತಿ ಮುಂದೆ ಮುಂದೆ ನಡೆಗೊಂಡನು. ಸುಮಾರು ಅರ್ಧ ಫರ್ಲಾಂಗು ಹೋಗಿ ನೋಡುತ್ತಾನೆ: ಹುಲಿಯನ ಸವಾರಿ ಪತ್ತೆ ಇಲ್ಲ!
ಮತ್ತೆ ಗಟ್ಟಿಯಾಗಿ ಸಿಳ್ಳುಹಾಕಿ ಕರೆದನು. ಹುಲಿಯ ದೂರದಿಂದ ಓಡಿಬಂತು. ಬೇರೆ ಯಾವ ನಾಯಿಯೂ ಜೊತೆ ಬರಲಿಲ್ಲ. ಹುಲಿಯ ಮರಳಿ ಮರಳಿ ಹಿಂದಕ್ಕೆ ತಿರುಗಿ ನೋಡುತ್ತಿತ್ತು.
ಅದನ್ನು ಕಂಡು ಗುತ್ತಿ “ಏ ನಿನ್ನ ಹುಲಿ ಹಿಡಿಯಾ! ಹೆಡಬೇಗ್ಹುಟ್ಟಿದ್ದಕ್ಕೆ ಹೋದಲ್ಲಿ ತನಕಾ ಬಾಲಾ ಮೂಸಾದೆ!” ಎಂದು “ಥ್ಫೂ! ನಿನ್ನ!” ಎಂದು ಉಗುಳಿದನು.
ಹುಲಿಯನಿಗೆ ಎಲ್ಲಿಯಾದರೂ ತನ್ನ ಯಜಮಾನನ ಮನಸ್ಸು ಗೊತ್ತಾಗಿದ್ದರೆ ಎಂತಹ ಪ್ರತ್ಯುತ್ತರ ಕೊಡಬಹುದಾಗಿತ್ತು! ಯಾಕೆಂದರೆ ಗುತ್ತಿ ಯಾವ ಉದ್ದೇಶ ಸಾಧನೆಗಾಗಿ ಸಿಂಬಾವಿಯಿಂದ ಹೊರಟ್ಟಿದ್ದನೊ ಆ ಉದ್ದೇಶವೂ ಬೇಟವೆ ಆಗಿತ್ತು! ಬೆಟ್ಟಳ್ಳಿ ಕಲ್ಲಯ್ಯ ಗೌಡರ ಜೀತದಾಳು ಹೊಲೆಯರ ದೊಡ್ಡ ಬೀರನ ಮಗಳು ತಿಮ್ಮಿಯನ್ನು ಹೇಗಾದರೂ ಮಾಡಿ ಹಾರಿಸಿಕೊಂಡು ಬರುವುದಕ್ಕಾಗಿ ಹೊರಟಿದ್ದ ಗುತ್ತಿ ಬೇಗ ಬೇಗ ನಡೆಯತೊಡಗಿದನು. ಮುಂದಿನ ಸಾಹಸದ ಆಲೋಚನೆಯಲ್ಲಿ ನಟ್ಟಮನಸ್ಸಾಗಿ ಸಾಗಿದ್ದನು ಅವನು ಹುಲಿಯ ಹಿಂತಿರುಗಿ ಪರಾರಿಯಾದುದನ್ನು ಗಮನಿಸಲಿಲ್ಲ.
ಹೋದ ರಾತ್ರಿ ಹೊಯ್ದ ಮಳೆಯಿಂದ ತಣ್ಣಗಾಗಿದ್ದ ಕಾಡಿನ ತಂಪು ಗಾಳಿಯಲ್ಲಿ ಗುತ್ತಿ ಚಟುವಟಿಕೆಯಾಗಿ ಸಾಗಿದನು. ಹಾದಿಯಲ್ಲಿ ಒಂದು ಕಡೆ ಹಂದಿಯ ಹಿಂಡು ಉತ್ತಿದ್ದುದನ್ನು ಕಂಡಾಗಲೆ ಅವನಿಗೆ ಹುಲಿಯನ ನೆನಪಾಗಿ ಕೂಗಿದನು. ನಿಃಶಬ್ದವಾದ ಕಾಡಿನಲ್ಲಿ ಆ ಕೂಗು ಮೊಳಗಿತು. ನಾಯಿ ಎಲ್ಲಿಯೂ ಕಾಣಿಸಲಿಲ್ಲ.
ಲಕ್ಕುಂದದಿಂದ ಸುಮಾರು ಎರಡು ಮೈಲಿ ದೂರದಲ್ಲಿದ್ದ  ಮೇಗರವಳ್ಳಿಗೆ ಅವನು ಮುಟ್ಟಿದಾಗ ಆಗ ತಾನೆ ಬೆಳ್ಳಗೆ ಬೆಳಗಾಗಿತ್ತು. ಮರಗಳ ನೆತ್ತಿಯಲ್ಲಿ ಎಳಬಿಸಿಲು ಆಡತೊಡಗಿತ್ತು.
ತೀರ್ಥಹಳ್ಳಿಯಿಂದ ಆಗುಂಬೆಗೆ ಹೋಗುವ ಹೆದ್ದಾರಿಯಲ್ಲಿದ್ದ ಮೇಗರವಳ್ಳಿ ಗುತ್ತಿಯಂಥಾ ಹಳ್ಳಿಗರಿಗೆ ಪೇಟೆಯಾಗಿದ್ದರೂ ನಿಜವಾಗಿಯೂ ಬರಿಯ ಕೊಂಪೆಯಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿದ್ದ ನಾಲ್ಕಾರು ಹುಲ್ಲಿನ ಮನೆಗಳೂ ಎರಡು ಮೂರು ಹೆಂಚಿನ ಮನೆಗಳೂ ಆ ಪೇಟೆಗೆ ಪರಮಾವಧಿ. ಜನಸಂಖ್ಯೆ ಈರೈದುಮೂರೈದುಗಳಲ್ಲಿಯೆ ಮುಗಿಯುತ್ತಿತ್ತು. ಎತ್ತಿನ ಗಾಡಿಯೂ ದುರ್ಲಭವಾಗಿದ್ದ ಆಗಿನ ಸ್ಥಿತಿಯಲ್ಲಿ ಎಂಟೊಂಬತ್ತು ಮೈಲಿ ದೂರದಲ್ಲಿದ್ದ ತೀರ್ಥಹಳ್ಳಿಯನ್ನು ಖ್ಯಾತಿಯಿಂದ ಮಾತ್ರ ಅರಿತಿದ್ದ ಸುತ್ತಮುತ್ತಣ ಹಳ್ಳಿಗರಿಗೆ ಮೇಗರವಳ್ಳಿಯೆ ಪಟ್ಟಣವಾಗಿದ್ದುದರಲ್ಲಿ ಆಶ್ಚರ್ಯವೇನಿಲ್ಲ.
ಆಗಿನ ಮೇಗರವಳ್ಳಿಯಲ್ಲಿ ಆಸ್ಪತ್ರೆ, ಸ್ಕೂಲು, ಷಾಪು, ಹೋಟಲು, ಮಿಲ್ಲು ಯಾವುವೂ ಇರಲಿಲ್ಲ. ಆದರೆ ಮಲೆಯಾಳಿಯ ವೈದ್ಯರಾದ ಕಣ್ಣಾ ಪಂಡಿತರಿದ್ದರು. ಮಾಪಿಳ್ಳೆಯವರಾಗಿದ್ದ ಕರಿಮೀನು ಸಾಬರು ಅಂಗಡಿಯಿಟ್ಟಿದ್ದರು. ಒಂದು ಕಳ್ಳಿನ ಅಂಗಡಿಯೂ ಇದ್ದ ಆಟ ಊಟ ಕೂಟಗಳಿಗೆ ಒಂದು ತೆರನಾದ ಕ್ಲಬ್ಬೂ ಆಗಿತ್ತು. ಸೆಟ್ಟಿಗಿತ್ತಿ ಅಂತಕ್ಕನ ಮನೆ ತಕ್ಕಮಟ್ಟಿಗೆ ಹೋಟಲೂ ಆಗಿತ್ತು. ತೀರ್ಥಹಳ್ಳಿ ಆಗುಂಬೆಯ ಮುಖಾಂತರವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಹೋಗಿ ಬರುತ್ತಿದ್ದ ವ್ಯಾಪಾರಿಗಳೂ, ಸೇರೆಗಾರರೂ, ಕೂಲಿಯಾಳುಗಳೂ, ಗಂಧದ ಮರಗಳನ್ನು ಸಾಗಿಸುತ್ತಿದ್ದ ಗುಪ್ತ ದಳ್ಳಾಲಿಗಳೂ, ಮುಂತಾದವರೂ ಆಗಾಗ ತಂಗುತ್ತಿದ್ದುದರಿಂದ ಆ ಸ್ಥಳಕ್ಕೊಂದು ಪ್ರಮುಖತೆ ಬಂದಿತ್ತು.
ಗುತ್ತಿ ಅಲ್ಲಿಗೆ ಬಂದಾಗ ಸ್ವಲ್ಪ ಪ್ರತ್ಯೇಕವಾಗಿದ್ದ ಅಂತಕ್ಕ ಸೆಟ್ತಿಯ ಹುಲ್ಲುಮನೆಯಿಂದ ಅಡುಗೆಹೊಗೆ ಏಳುತ್ತಿತ್ತು. ಅದು ವಿನಾ ಮೇಗರವಳ್ಳಿಯಲ್ಲಿ ಮತ್ತಾವ ಎಚ್ಚರದ ಸೂಚನೆಯೂ ಕಂಡುಬರಲಿಲ್ಲ. ಆದರೂ ನೇರವಾಗಿ ಕಣ್ಣಾ ಪಂಡಿತರ ಮನೆಯ ಮುಂಭಾಗಕ್ಕೆ ಹೋಗಿ, ಸ್ವಲ್ಪ ಹೊತ್ತು ನಿಂತು ಆಲೋಚನೆ ಮಾಡಿ ಕರೆದನು:
“ಕಣ್ಣಪ್ಪಯ್ಯಾ! ಕಣ್ಣಪ್ಪಯ್ಯಾ!”
ಯಾವ ಪ್ರತ್ಯತ್ತರವೂ ಬರಲಿಲ್ಲ, ಮತ್ತೆ ಕೂಗಿ ಕರೆದನು.
ಬಾಗಿಲು ತೆರೆಯದಿದ್ದರೂ ಒಳಗಡೆಯಿಂದ ಒಂದು ದನಿ ವಿದೇಶಿಯವಾದ ಕಾಕು ಸ್ವರದಿಂದ “ಅದು ಯಾರು? ಹೊತ್ತಾರೆ ಬಂದು ಕೂಗುವವರು?” ಎಂದಿತು.
“ನಾನು ಕಣ್ರೋ, ಸಿಂಬಾವಿ ಗುತ್ತಿ. ಹೆಗ್ಗಡೇರ ಕಡೆ ಆಳು”
“ಸ್ವಲ್ಪ ಕೂತುಕೊಳ್ಳೊ ಅಲ್ಲಿ; ಬರುತ್ತೇನೆ.”
ಕೂತುಕೊಳ್ಳುವುದಕ್ಕೆ ಯಾವ ಅನುಕೂಲವೂ ಇರಲಿಲ್ಲ. ಗುತ್ತಿ ತನ್ನ ಕಂಬಳಿಯನ್ನು ಹಾಸಿ, ಕೂತು, ಎಲೆಯಡಿಕೆ ಹಾಕಿಕೊಳ್ಳಲಾರಂಭಿಸಿದನು.
ಗುತ್ತಿ ಕೂತ ಜಾಗಕ್ಕೆ ಎದುರಾಗಿ, ರಸ್ತೆಯ ಆಚೆಕಡೆ ಇದ್ದ ಮನೆ ಊರು ಹೆಂಚಿನದಾಗಿತ್ತು. ವರ್ಷ ವರ್ಷವೂ ಹಳು ಹುಟ್ಟಿ ಬೆಳೆದು ಒಣಗಿ ಹೊದಿಸಿದ್ದ ಹೆಂಚುಗಳಲ್ಲಿ ಅರೆಪಾಲು ಮುಚ್ಚಿಹೋಗಿದ್ದವು. ಮನೆಯ ಮುಂಭಾಗದಲ್ಲಿ ಹಲಗೆಗಳನ್ನು ಜೋಡಿಸಿ ಮಳಿಗೆ ಮಾಡಿದ್ದರು.
ಗುತ್ತಿ ನೋಡುತ್ತಿದ್ದ ಹಾಗೆಯೇ ಮಳಿಗೆಯ ಒಣಗಣಿಂದ ಯಾರೋ ಹಲಗೆಯ ಬಾಗಿಲೊಂದನ್ನು ಎತ್ತಿ ತೆರೆಯಲು ಪ್ರಯತ್ನಿಸುತ್ತಿದ್ದುದು ಅವನ ಕಣ್ಣಿಗೆ ಬಿತ್ತು. ಹಾಗೆ ಎತ್ತಿ ತೆರೆಯುವುದಕ್ಕಾಗಿಯೆ ಮಾಡಿದ್ದ ಆ ಹಲಗೆಯ ಬಾಗಿಲಿನ ನಡುವಣ ಅರ್ಧಚಂದ್ರಾಕೃತಿಯ ರಂಧ್ರದಲ್ಲಿ ಮಡಿಸಿ ಹಿಡಿದಿದ್ದ ನಾಲ್ಕು  ಕೈಬೆರಳುಗಳನ್ನು ನೋಡಿದೊಡನೆಯೆ ಗುತ್ತಿ ಸ್ವಲ್ಪ ಅಪ್ರತಿಭನಾದನು.
“ಕರಿಮೀನು ಸಾಬರ ಕೈ ಬೆಳ್ಳು! ಮತ್ತೇ? ಆ ಊರಾಗೆ ಅಷ್ಟು ಕರ್ರಗೆ ಯಾರಿದ್ದಾರೆ? ಸೈ, ಇನ್ನು ಕಂಡ ಕೂಡಲೆ ಹಳೆ ಸಾಲಕ್ಕೆ ತಗಾದೆ ಮಾಡುತ್ತಾರೆ! ಬೆಳಿಗ್ಗೆ ಎದ್ದು ಸನಿ ಮುಖಾ ನೋಡ್ತೀನಲ್ಲಾ!” ಎಂದು ಮೋರೆಯನ್ನು ಬೇರೆಯ ಕಡೆಗೆ ತಿರುಗಿಸಿದರೂ ಗುತ್ತಿಯ ಕಣ್ಣು ಆ ಕೈಬೆರಳಿನ ಮೇಲೆಯೇ ನೆಟ್ಟಿತ್ತು.
ಬಾಗಿಲು ತೆರೆಯಿತು. ಕರೀಂ ಸಾಬಿಯ ದೇಹ ತೂರಿ ಹೊರಗೆ ಬಂದಿತು. ಸೊಂಟದ ಕೆಳಗೆ ಕಣ್ಣು ಕಣ್ಣಿನ ಕೆಂಪು ದುಪ್ಪಟಿಯನ್ನು ಸುತ್ತಿದ್ದು, ಮೈ ಬತ್ತಲೆಯಾಗಿದ್ದ ಅವನ ಎಡಗೈಯಲ್ಲಿ ನೀರು ತುಂಬಿದ್ದ ಒಂದು ಕರಿಯ ಮಣ್ಣಿನ ಪಾತ್ರೆಯಿತ್ತು. ಬಲಗೈಯಲ್ಲಿದ್ದ ಇದ್ದಲಿನ ಚೂರನ್ನು ಹಲ್ಲಿಗೆ ತಿಕ್ಕುತ್ತಾ ಅಂಗಡಿಯ ಮುಂದೆಯೇ ಮೆಟ್ಟಲ ಮೇಲೆ ಕೂತುಕೊಂಡು ಮುಖ ತೊಳೆಯಲಾರಂಭಿಸಿದನು. ಮಸಿಯಾದ ಕಲ್ಲು ಗಡಿಗೆಯ ಬೆನ್ನಿನಂತೆ ಕರ್ರಗೆ ನುಣ್ಣಗಿದ್ದ ಮುಂಡೆಯನ್ನೂ ಕರಿಬಲೆಯಂತೆ ನೇತಾಡುತ್ತಿದ್ದ ಹೊದೆ ಗಡ್ಡವನ್ನೂ ಒಟ್ಟಿಗೆ ತೊಳೆದು, ಉಟ್ಟಿದ್ದ ದುಪ್ಪಟಿಯಿಂದಲೆ ಎರಡನ್ನೂ ಉಜ್ಜಿಕೊಂಡ ಮೇಲೆ, ಗುತ್ತಿಯನ್ನು ನೋಡುತ್ತಾ “ಏಯ್, ಕಂಬಳೀ, ಇಲ್ಲಿ ಬಾ!” ಎಂದು ಕೂಗಿದನು.
ಕರೀಂ ಸಾಬಿ ಗಟ್ಟದ ಮೇಲಕ್ಕೆ ಬಂದು ಬಹಳ ವರ್ಷಗಳಾಗಿತ್ತು. ಮೊದಲು ಬಂದಾಗ ಅವನು ಕರಿಮೀನು ಹೊತ್ತುಕೊಂಡು ಮನೆ ಮನೆಗೂ ತಿರುಗಿ ಅಕ್ಕಿಗೋ ಬತ್ತಕ್ಕೋ ಅಡಕೆಯೋ ವಿನಿಮಯ ವ್ಯಾಪಾರ ಮಾಡುತ್ತಿದ್ದನಾದ್ದರಿಂದಲೂ, ಹಳ್ಳಿಗರ ಕಿವಿಗೆ ಕರೀಂ ಮತ್ತು ಕರಿಮೀನು ಎಂಬ ಪದಗಳು ಸಮಪದಗಳಾಗಿ ತೋರಿದುದರಿಂದಲೂ ಅಂಕಿತನಾಮವನ್ನು ಅನ್ವರ್ಥನಾಮವನ್ನಾಗಿ ಮಾಡಿದ್ದರು. ತರುವಾಯ ಕರೀಂ ಸಾಬಿ ಇತರ ಪದಾರ್ಥಗಳನ್ನು ಮಾರತೊಡಗಿದ್ದರೂ ಅವನು ಮೊದಲಿನ ಹೆಸರು ಬದಲಾಯಿಸಲಿಲ್ಲ. ಹಾಗೆಯೇ ಮಂಗಳೂರು ನಶ್ಯಪುಡಿಯನ್ನು ತಯಾರುಮಾಡಿ ಮಾರುತ್ತಿದ್ದ ಅವನ ತಮ್ಮನಿಗೆ “ಪುಡೀ ಸಾಬಿ” ಎಂದು ಹೆಸರು ಬಂದಿತ್ತು. ಅಂತೂ ಕರಿಮೀನು ಸಾಬರು ಮತ್ತು ಪುಡಿ ಸಾಬರು ಎಂದರೆ ಗುತ್ತಿಯಂತಹ ಜನಗಳಿಗೆ ತಕ್ಕಮಟ್ಟಿಗೆ ಗೌರವ ವ್ಯಕ್ತಿಗಳೆ ಆಗಿದ್ದರು. ಅವನು ಚಿಲ್ಲರೆ ಸಾಲವನ್ನು ಕೊಡುತ್ತಿದ್ದುದರಿಂದ ಆ ಹಂಗಿಗೆ ಒಳಗಾದವರೆಲ್ಲರಿಗೂ ಅವರಲ್ಲಿ ದ್ವೇಷಮಿಶ್ರವಾದ ಭಯಭಕ್ತಿಯೂ ಇತ್ತು.
ಕರೀಂ ಸಾಬಿ ಕರೆದೊಡನೆಯೆ ಗುತ್ತಿ ನಿರುತ್ಸಾಹದಿಂದ ನಿಧಾನವಾಗಿ ಎದ್ದು ಬಂದನು. ಮುಖಸ್ತುತಿ ಮಾಡುವುದಕ್ಕಾಗಿಯೊ ಎಂಬಂತೆ ಸಾಬರಿಗೆ ಸೊಂಟ ಬಗ್ಗಿಸಿ ಸಲಾಂ ಮಾಡಿನು.
ಸಾಬಿ ಒಂದಿನಿತೂ ಪ್ರಸನ್ನನಾಗದೆ ಗಡ್ಡ ನೀವುತ್ತಾ “ಸಲಾಮು ಇರಲಿ! ನನ್ನ ಹಣ ಎಲ್ಲಿಯೋ?” ಎಂದು ವಿದೇಶೀಯ ವಿರಳಶೈಲಿಯಲ್ಲಿ ಪ್ರಾರಂಭಿಸಿದನು.
“ಇನ್ನೆಂಟು ದಿನಾ ತಡೀರಿ. ನನ್ನ ಮದೇಗೆ ಹೆಗ್ಗಡೇರ ಕೈಲಿ ದುಡ್ಡು ಕೇಳೀನಿ. ಅದರಾಗೆ ನಿಮ್ಮ ಚಿಳ್ರೇನೂ ತೀರ್ಸಿಬಿಡ್ತೀನಿ” ಎಂದು ಕುಳ್ಳಗುತ್ತಿ ತನಗಿಂತಲೂ ಬಹುಪಾಲು ಕರ್ರಗಿದ್ದ ಉದ್ದನೆಯ ಮಾಪಿಳ್ಳೆಯನ್ನು ನೋಡುತ್ತಾ ಹಲ್ಲು ಬಿಟ್ಟು ಸಪ್ಪೆಯಾಗಿ ನಕ್ಕನು.
“ಎಷ್ಟು ದಿನಾ ನೀನು ನನ್ನ ಸತಾಯಿಸುವುದು? ನಿಮ್ಮದು ಹೆಗ್ಗಡೇರು ಕೊಟ್ಟರೆ ಕೊಡಲಿ. ಬಿಟ್ಟರೆ ಬಿಡಲಿ, ಒಟ್ಟಾರೆ ನಮಗೆ ನಮ್ಮ ದುಡ್ಡು ಕಾಸು ಬಂದರೆ ಸೈ! ಆಗಲಿ ನೀನು ಹೇಳಿದ ಹಾಗೆ ಇನ್ನು ಎಂಟು ದಿನ ನೋಡುವಾ; ದುಡ್ಡು ಬಡ್ಡಿ ಬರದೇ ಹೋದರೆ ನಾನು ಹೆಗ್ಗಡೆಯರ ಬಳಿಗೆ ಬರುತ್ತೇ! ನನಗೂ ಕೆಲಸವುಂಟು ಅವರಲ್ಲಿಗೆ! ಗೊತ್ತಾಯಿತೋ?”
ಅಷ್ಟು ಹೊತ್ತಿಗೆ ಕಣ್ಣಾಪಂಡಿತರು ಎದುರು ಮನೆಯಿಂದ ಬಾಗಿಲು ತೆರೆದು ಹೊರಬಂದುದನ್ನು ನೋಡಿ ಗುತ್ತಿ ಸಾಬರಿಗೆ ಸಲಾಂ ಮಾಡಿ, ಅಲ್ಲಿಂದ ಅವಸರ ಅವಸರವಾಗಿ ಜಾರಿದನು.
ಕರೀಂ ಸಾಬಿ “ಲೌಡೀ ಮಗನಿಗೆ ಏನು ದೌಲತ್ತು? ಅವನು ಎಷ್ಟು ರೂಪಾಯಿ ಕೊಡಬೇಕಾಗಿದೆ; ಅದನ್ನು ಚಿಲ್ಲರೆ ಅನ್ನುತ್ತಾನೆ! ಹೆಗ್ಗಡೇರ ಜವಾನ ಅಂತ ಮುಲಾಜು ನೋಡದೆ ಮಾತಾಡುತ್ತಾನಲ್ಲಾ!” ಎಂದುಕೊಂಡು ಕ್ಯಾಕರಿಸಿ ಉಗಿದು ಒಳಗೆ ಹೋದನು.
ಬೆಳ್ಳಗಿದ್ದ ತೆಳು ಪಂಚೆಯನ್ನುಟ್ಟು, ಅದೇ ತೆರನಾದ ಬಟ್ಟೆಯ ಒಂದು ಗೀರು ಗೀರಿನ ಷರ್ಟನ್ನೂ ಹಾಕಿ, ಮಲೆಯಾಳಿಗಳ ರೀತಿಯಲ್ಲಿ ತಲೆಯ ಹಿಂಭಾಗವನ್ನು ಬೋಳಿಸಿ, ಮುಂಭಾಗದಲ್ಲಿ ಉದ್ದವಾದ ಬೆಳೆದಿದ್ದ ಕೂದಲನ್ನೆಲ್ಲಾ ಸೇರಿಸಿ ಮುಡಿ ಕಟ್ಟಿ, ಸ್ವಲ್ಪ ಕರ್ರಗಿದ್ದರೂ, ಆಪಾದಮಸ್ತಕವಾಗಿ ಚೊಕ್ಕಟವಾಗಿದ್ದ ಕಣ್ಣಾಪಂಡಿತರು ಮನೆಮೊಗದಿಂದ ಬೆಳ್ಳಗೆ ಹಲ್ಲು ಬಿಟ್ಟು ಗುತ್ತಿಯನ್ನು ನೋಡಿ ಅರ್ಥಪೂರ್ವಕವಾಗಿ ನಕ್ಕರು. ಅವನು ಹತ್ತಿರಕ್ಕೆ ಬರಲು ಅಭ್ಯಾಸದಂತೆ ಹುಬ್ಬನ್ನು ನಿಮಿರಿ ಮೇಲಕ್ಕೆ ಹಾರಿಸುತ್ತಾ “ಏನೋ, ಕುತ್ತಿ, ಮತುವೆಮಕನ ಹಾಂಗೆ ಬಟ್ಟೆಯುಟ್ಟು ಹೊರಟಿದ್ದೀಯಲ್ಲವೊ!” ಎಂದರು.
ಅವರ ಹೆಣ್ಗೊರಳಿನ ಕೀಚುದನಿಯನ್ನೂ ವಿಲಕ್ಷಣವಾಗಿದ್ದ ದಕಾರ ತಕಾರಗಳ ಗಲಿಬಿಲಿಯ ಕನ್ನಡದ ಉಚ್ಛಾರಣೆಯನ್ನೂ ಹಿಂದೆ ಎಷ್ಟೋ ಸಲ ಕೇಳಿದ್ದರೂ ಗುತ್ತಿಗೆ ಸಲಸಲವೂ ಅದು ವಿನೋದಕರವಾಗಿಯೆ ತೋರುತ್ತಿತ್ತು. ಅದಕ್ಕಾಗಿಯೆ ನಗುತ್ತಿದ್ದರೂ ಪ್ರಶ್ನೆಗಾಗಿ ನಗುವನಂತೆ ನಟಿಸುತ್ತಾ “ತಮ್ಮಂಥಾ ಒಡೇರು ಕೊಟ್ಟರೆ ನಮ್ಮಂಥಾ ಬಡೋರಿಗೆ ಉಂಟು” ಎಂದನು.
“ಹೆಣ್ಣು ಕೇಳುತ್ತಿದ್ದೆಯಲ್ಲವೆ? ಬೆಟ್ಟಳ್ಳಿ ದೊಡ್ಡಬೀರನ ಮಗಳು ತಿಮ್ಮಿಯನ್ನು? ಒಪ್ಪಿಗೆಯಾಯಿತೋ?”
ಗುತ್ತಿ ಇದ್ದಕ್ಕಿದ್ದಹಾಗೆ ಗಂಭೀರವಾದನು. ಅವನ ಮುಖದಲ್ಲಿ ಏನೋ ಒಂದು ದೃಢನಿಶ್ಚಯದ ಕರಾಳ ಛಾಯೆ ಸುಳಿಯಿತು. ಹಣೆ ಸುಕ್ಕಾಯಿತು. ತುಟಿ ಸ್ವಲ್ಪ ಕೊಂಕಿತು. “ಅಯ್ಯಾ, ನೀವು ದೇವರಿಗೆ ಸಮ; ನನ್ನ ಮನಸ್ಸಿನಲ್ಲಿರೋದನ್ನ, ನಾ ಹೇಳಬೇಕಾರೆ ಮೊದಲೆ, ನೀವೆ ಕೇಳಿಬಿಟ್ಟಿರಿ. ನಿಜವಾಗಿಯೂ ನೀವು ದೇವರಂತಾ ಮನುಷ್ಯರು” ಎಂದನು.
“ಆ ಬಚ್ಚ ಏನೊ ತಂಟೆಮಾಡುತ್ತಿದ್ದ ಎಂದು ಹೇಳಿದ್ದೀಯಲ್ಲಾ ನೀನು, ತಿಮ್ಮಿಯನ್ನು ತಾನು ಮತುವೆಯಾಗಬೇಕೆಂದು”.
ಗುತ್ತಿಯ ಮುಖದಲ್ಲಿ ಒಂದಿನಿತು ರೋಷ ಸಂಚಾರವಾಯಿತು. “ಬಚ್ಚನ ಹೆಣಾ, ಅವನೇನು ಮಾಡ್ತಾನೆ? ನನ್ನ ಮಾವ ದೊಡ್ಡ ಬೀರನ ಮನಸ್ಸೇ ಅತ್ತಾ ಇತ್ತಾ ಆಗ್ತಾ ಇದೆ. ಬೆಟ್ಟಳ್ಳಿ ಗೌಡ್ರೂ ಅಡ್ಡಾ ಹಾಕ್ತಾ ಇದ್ದಾರೆ. ತಿಮ್ಮಿ ಮನಸ್ಸೇನೋ ಈ ಕಡೇನೆ ಇದೆ. ಆದ್ರೇನ್ಮಾಡೋದು-ಈವತ್ತು ನಮ್ಮ ಹೆಗ್ಗಡೇರು ಒಂದು ಕಾಗ್ದ-” ಎಂದವನು ನಾಲಿಗೆ ಕಚ್ಚಿಕೊಂಡು ಅದನ್ನು ಅರ್ಧಕ್ಕೆ ನಿಲ್ಲಿಸಿ, “ನಮ್ಮ ಹೆಗ್ಗಡೇರಿಗೆ ಏನೋ ಔಸ್ತಿ ಕೊಟ್ಟಿದ್ರಂತೆ ನೀವು. ಸೊಲ್ಪಾ ಗುಣಾ ಅದೆಯಂತೆ. ಮತ್ತೀಟು ಔಸ್ತಿ ಇಸುಕೊಂಡು ಬಾ ಅಂತ ಅಂದ್ರು” ಎಂದನು.
“ಹಿಂದಕ್ಕೆ ಹೋಗುವಾಗ ಮತ್ತೆ ಬಾ ಕೊಡುತ್ತೇನೆ”
ಗುತ್ತಿ ತಟಕ್ಕನೆ ಆಲೋಚನಾಪರನಾಗಿ “ಹಿಂದಕ್ಕೆ ಹೋಗಾಗ ಬರಾಕೆ ಹೆಂಗೆ ಆತದ್ರೋ?” ಎಂದವನು ಕಣ್ಣಾ ಪಂಡಿತರ ಹಾರು ಹುಬ್ಬಿನ ಪ್ರಶ್ನೆಚಿಹ್ನೆಗೆ ಸರಿಯಾದ ಉತ್ತರ ಹೇಳಲು ಸಾಧ್ಯವಿಲ್ಲದ್ದರಿಂದ “ಹ್ಞೂ ಆಗ್ಲಿ, ಬಂದು ತಗೊಂಡು ಹೋಗ್ತಿನಿ” ಎಂದನು.
“ಮತ್ತೆ ನೀನು ಹೊರಡಬಹುದು.”
ಕಣ್ಣಾಪಂಡಿತರು ಹೊರಡಬಹುದು ಎಂದು ಹೇಳಿದರೂ ಗುತ್ತಿ ಹೊರಡಲಿಲ್ಲ. ಇನ್ನೂ ಏನೋ ಹೇಳುವವನಂತೆ ನಿಂತನು.
ಕಣ್ಣಾಪಂಡಿತರು “ಮತ್ತೆ ಏನು ನಿಂತದ್ದು?” ಎಂದನು.
ಗುತ್ತಿ ಎಂಜಲು ನುಂಗುತ್ತಾ ಗಂಟಲು ಸರಿಮಾಡಿಕೊಳ್ಳುತ್ತಾ ತಡಬಡಿಸುತ್ತಿದ್ದುದನ್ನು ನೋಡಿ ಪಂಡಿತರು ಸ್ವಲ್ಪ ರಹಸ್ಯ ಧ್ವನಿಯಿಂದಲೆಂಬಂತೆ “ಮತ್ತೆ ಜಟ್ಟಮ್ಮ  ಹೆಗ್ಗಡತಿಯವರು ಏನಾದರೂ ಹೇಳಿದ್ದರೇನೋ?” ಎಂದು ಕೇಳಿದರು.
“ಹೌದೇ ಸೈ, ಮರತೇ ಬಿಟ್ಟಿದ್ದೆ.”
“ಅದನ್ನೂ ಕೊಡ್ತೀನೊ, ಆ ಮೇಲೆ ಬಾ”
“ಮಕ್ಕಳಾಗಾಕೆ ಔಸ್ತಿ ಕೊಡ್ತೀರಂತೆ ಹೌದೇನ್ರೋ?” ಎಂದು ಗುತ್ತಿ ಬೆಪ್ಪು ನಗು ನಕ್ಕನು.
“ಆಗುವುದಕ್ಕೊ, ಹೋಗುವುದಕ್ಕೊ ನಿನಗ್ಯಾತಕ್ಕೆ?”
“ಅಲ್ಲ, ಪಾಪ, ಅವರು ಮಕ್ಕಳಿಲ್ಲದೆ ನಕ್ಕಬಡೀತಿದಾರೆ. ಹೆಗ್ಗಡೇರು ಬ್ಯಾರೆ ಮತ್ತೊಂದು ಮದೇಗೆ ಗಾಣ ಹಾಕ್ತಿದಾರೆ. ಬೇಗ ಮಕ್ಕಳಾದ್ರೂ ಆದ್ರೆ-” ಎಂದು ಒಡೆನೆಯೆ ಕನಿಕರದ ದನಿಯನ್ನು ಉದಾಸೀನಕ್ಕೆ ಬದಲಾಯಿಸಿ “ಅಲ್ಲಾ ಹೋಗ್ಲಿ ಬಿಡೀ. ಗರೀಬನಿಗೆ ಯಾಕೆ ಆ ಇಚಾರ-” ಎಂದು ಮತ್ತೆ ಧ್ವನಿ ಬದಲಾಯಿಸಿ. “ನನಗೊಂದು ಅಂತ್ರ ಬೇಕಿತ್ತಲ್ರೋ” ಎಂದನು.
“ಯಾವುದಕ್ಕೊ?”
“ಅದೇ ನೀವು ಹೇಳಿದ್ರಲ್ಲಾ ಅದಕ್ಕೆ”
“ಅಂದರೆ?”
“ಈಗ ನೋಡಿ ತಿಮ್ಮಿನ ನಾ ಮದುವ್ಯಾಗಬೇಕು ಅಂತಾ ಸುಮಾರು ಕಾಲದಿಂದ ಕೇಳ್ತಿದ್ದೀನಿ. ಆ ಬಚ್ಚ ಮನ್ನೆ ಮನ್ನೆ ಸುರು ಮಾಡ್ಯಾನೆ. ತಿಮ್ಮಿಮನ್ಸು ನನ್ನ ಕಡೆ ಆಗಿ, ನಾ ಹೇಳ್ದ ಹಂಗೆ ಕೇಳಾಕೆ ಒಂದು ಅಂತ್ರ ಕೊಟ್ರೆ ನನ್ನ ಪರಾಣ ಇರೋ ತನಕ ನಿಮ್ಮ  ಗುಲಾಮನಾಗಿರ್ತೀನಿ”.
ಗುತ್ತಿಯ ದೈನ್ಯ ಸ್ಥಿತಿಯನ್ನು ಕಂಡು ಪಂಡಿತನಿಗೆ ನಗು ಬಂದರೂ ಅದನ್ನು ತೋರಗೊಡಲಿಲ್ಲ. ಅದಕ್ಕೆ ಬದಲಾಗಿ ಮುಖಮುದ್ರೆಯನ್ನು ಅತ್ಯಂತ ಗಂಭೀರ ಮಾಡಿಕೊಂಡು ನಿಧಾನವಾಗಿ ಮಂಡೆ ಅಲ್ಲಾಡಿಸಿದನು.
ಗುತ್ತಿ ಅತಿ ದೈನ್ಯತೆಯಿಂದ “ದಮ್ಮಯ್ಯಾ ಅಂತೀನಿ. ಒಷ್ಟು ಉಪಕಾರ ಮಾಡಿ. ನಿಮ್ಮ ಕಾಲಿಗೆ ಬೀಳ್ತೀನಿ” ಎಂದು ತನ್ನ ಕುಳ್ಳನ್ನು ಮತ್ತಷ್ಟು ಕುಗ್ಗಿಸಿಕೊಂಡನು.
ಆ ಹೊಲೆಯನಿಂದ ಹಣ ವಸೂಲು ಮಾಡಿಕೊಳ್ಳುವುದೂ, ಹಸುವಿನ ಕೊಂಬಿನಿಂದ ಹಾಲು ಕರೆಯುವುದೂ ಒಂದೇ ಎಂದು ಚೆನ್ನಾಗಿ ಅರಿತಿದ್ದ ಕಣ್ಣಾಪಂಡಿತರು “ನನಗೆ ನಿನ್ನಿಂದ ದುಡ್ಡು ಕಾಸೂ ಏನೂ ಬೇಡ.”
“ಮತ್ತೇನು ಬೇಕು ಹೇಳಿ?”
“ಸ್ವಲ್ಪ ಸುಮ್ಮನೆ ನಿಲ್ಲೋ– ನಿನ್ನ ದುಡ್ಡು ಕಾಸು ನನಗೆ ಬೇಡ. ನಿನ್ನ ಹೊಟ್ಟೆಯ ಮೇಲೆ ನಾನು ಹೊಡೆಯುವುದಿಲ್ಲ….ನನಗೆ ಬೇಕಾದಾಗ ಒಂದೊಂದು ಕೋಳಿ ಕೊಟ್ಟರೆ ಸಾಕು- “
“ಬದಕಿದೆ, ನನ್ನೊಡ್ಯಾ”
“ಹೋಗಿ ಬಾ, ಆಮೇಲೆ ಕೊಡ್ತೀನಿ.”
ಗುತ್ತಿ ತಟಕ್ಕನೆ ಹತಾಶನಾದಂತೆ “ಈಗಲೆ ಕೊಟ್ಟಿದ್ರೆ….” ಎಂದನು.
“ಈಗ ಹ್ಯಾಂಗೆ ಕೊಡುವುದೊ? ಅದನ್ನು ಬರೆಯಬೇಕೋ ಬೇಡವೊ? ಸಾಬರ ಅಂಗಡಿಯ ದಿನಸಿ ಅಲ್ಲ!”
“ಇಲ್ಲೆ ಕೂತ್ಕೊತೀನಿ-ಬರ್ಕೊಡಿ” ಎಂದು ಹಲ್ಲು ಹಲ್ಲು ಬಿಟ್ಟು ಅಂಗಲಾಚ ತೊಡಗಿದ. ಗುತ್ತಿಯನ್ನು ಅಂಗಳದಲ್ಲಿಯೆ ಬಿಟ್ಟು ಕಣ್ಣಾಪಂಡಿತರು ಮನೆ ಒಳಗೆ ನುಸುಳಿದರು. ಅವನು, ಎಳಬಿಸಿಲಿನಲ್ಲಿ ಕಂಬಳಿ ಹಾಕಿಕೊಂಡು, ಅದರ ಮೇಲೆ ಕೂತು, ಎಲೆಯಡಿಕೆ ಜಗಿಯುತ್ತಾ ಅಂತ್ರದ ಆಗಮನವನ್ನೆ ನಿರೀಕ್ಷಿಸುತ್ತಾ ಕುಳಿತನು.
*****

ಕಾಮೆಂಟ್‌ಗಳಿಲ್ಲ: