ಒಬ್ಬಳು ಕೆಲಸದ ಹುಡುಗಿ ಇದ್ದಳು. ಒಮ್ಮೆ ಆಕೆ ತೋಟದಲ್ಲಿ ನಡೆದಾಡುತ್ತಿದ್ದಳು.
ಅವಳ ಕೈಯಲ್ಲಿ ಪುಟ್ಟ ಕೂಸು ಇತ್ತು. ಬಹಳ ಹೊತ್ತಿನಿಂದ ಆಕೆ ಅದನ್ನು
ಹೊತ್ತುಕೊಂಡಿದ್ದಳು. ಕೈಗಳು ದಣಿದಿದ್ದವು. ಆದುದರಿಂದ ಆಕೆ ಆ ಕೂಸನ್ನು ಹುಲ್ಲುಹಾಸಿನ
ಮೇಲೆ ಇರಿಸಿದಳು; ಬಳಿಯಲ್ಲೆ ನಿಂತುಕೊಂಡಳು.
ಆಗಲೇ ದೊಡ್ಡದೊಂಧು ರಣಹದ್ದು ಮಗುವಿನ ಮೇಲೆ ಎರಗಿತು. ಕ್ಷಣದೊಳಗೆ ಅದನ್ನು ಎತ್ತಿ
ಒಯ್ಯುವುದರಲ್ಲಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಕಾರಣ ಬಳಿಯಲ್ಲಿದ್ದ ಹುಡುಗಿ
ಫಕ್ಕನೆ ತಾನು ಹೊದ್ದುಕೊಂಡಿದ್ದ ಶಾಲನ್ನು ಹದ್ದಿನ ಮೇಲೆ ಹಾಕಿದಳು. ಮತ್ತು ಗಟ್ಟಿಯಾಗಿ
ಅದನ್ನು ಹಿಡಿದುಕೊಂಡಳು. ಹದ್ದು ಕೊಸರಾಡಿತು. ಸಿಕ್ಕಿದ ಕಡೆ ಹುಡುಗಿಯನ್ನು ಕುಕ್ಕಿತು
ಪರಚಿತು. ಆಕೆಯ ಮೈ ಕೈಗಳಲ್ಲಿ ಗಾಯವಾಗಿ ನೆತ್ತರು ಸುರಿಯತೊಡಗಿತು. ಆದರೂ ಅವಳ ಬಿಗಿ
ಹಿಡಿತ ಸಡಿಲಲಿಲ್ಲ. ಹದ್ದಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹದ್ದನ್ನು
ಹಿಡಿದಿಟ್ಟ ಹುಡುಗಿ ಸಹಾಯಕ್ಕಾಗಿ ಬೊಬ್ಬಿಟ್ಟಳು. ನೆರೆಕರೆಯ ಜನ ಓಡಿ ಬಂದರು. ಹುಡುಗಿಯ
ಹಿಡಿತದಿಂದ ಹದ್ದನ್ನು ಬಿಡಿಸಿ, ಹಿಡಿದುಕೊಂಡರು. ಆಕೆಯ ಧೈರ್ಯ ಮತ್ತು
ಸಮಯಪ್ರಜ್ಞೆಗಳನ್ನು ಬಾಯಿ ತುಂಬ ಹೊಗಳಿದರು. ಹದ್ದನ್ನು ಒಯ್ದು ಮೃಗಾಲಯಕ್ಕೆ
ಒಪ್ಪಿಸಿದರು.
ವಿಷಯ ತಿಳಿದು ಮಗುವಿನ ಹೆತ್ತವರೂ ತೋಟದೆಡೆ ಓಡಿ ಬಂಧರು. ಮಗುವನ್ನೆತ್ತಿ
ಮುದ್ದಾಡಿದರು. ಹುಡುಗಿಯ ಸಾಹಸಕ್ಕಾಗಿ ಅವಳನ್ನು ಕೊಂಡಾಡಿದರು. ಆಕೆಗೆ ಬಹುಮಾನ ನೀಡಿ
ಕೃತಜ್ಞತೆ ಅರ್ಪಿಸಿದರು. ಅಪ್ಪುಗೆಯಲ್ಲಿದ್ದ ಮಗು ಮಾತ್ರ ಬೊಚ್ಚಬಾಯಿ ಬಿಟ್ಟು ನಗುತ್ತಲೇ
ಇತ್ತು.
* * *
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ