ಮಲೆಗಳಲ್ಲಿ ಮದುಮಗಳು-೫೬

ಆಗುಂಬೆಯಿಂದ ಮೇಗರವಳ್ಳಿಯ ಮುಖಾಂತರ ತೀರ್ಥಹಳ್ಳಿಗೆ ಬಂದು, ದೋಣಿಗಂಡಿಯಲ್ಲಿ ಹೊಳೆದಾಟಿ ಮುತ್ತಳ್ಳಿ, ಸೀತೆಮನೆ, ಕಾನೂರುಗಳಿಗೆ ಹೋಗುವ ಗಟ್ಟಿದ ತಗ್ಗಿನವರ ಗುಂಪಿನಲ್ಲಿ ಸೇರಿ, ಗುತ್ತಿ ತಿಮ್ಮಯೊಡನೆ ತುಂಗಾನದಿಯ ಎಡದ ದಡದಲ್ಲಿರುವ ದೈತ್ಯಾಕಾರದ ಅರಳಿಮರದ ಕಟ್ಟಿಗೆ ತುಸುದೂರದಲ್ಲಿ, ಹೊಳೆ ದಾಟಲು ದೋಣಿಯಲ್ಲಿ ತನಗೆ ಲಭಿಸಿರುವ ಸರದಿಗಾಗಿ ಕಾಯುತ್ತಾ ಕುಳಿತಿದ್ದನು. ನೆರೆ ಏರಿ ಭೋರ್ಗರೆದು ವಿಸ್ತಾರವಾಗಿ ವೇಗವಾಗಿ ಹರಿಯುತ್ತಿದ್ದ  ಕೆಮ್ಮಣ್ಣು ಬಣ್ಣದ ಮಹಾಪ್ರವಾಹವನ್ನೇ ನೋಡುತ್ತಿದೆಯೊ ಎಂಬಂತೆ ಅವನ ನಾಯಿ ಹುಲಿಯನೂ ತನ್ನ ಕರ್ರನೆಯ ಬೃಹದಾಕಾರದಿಂದ ಹೊಸಬರಾರೂ ಬಳಿಗೆ ಬರದಂತೆ ಹೆದರಿಕೆ ಹುಟ್ಟಿಸುವ ಭಯಾನಕ ಭಂಗಿಯಿಂದ ಕುಳಿತಿತ್ತು, ಮುಂಗಾಲೂರಿ ಉನ್ನತವಾಗಿ, ತಿಮ್ಮಿ ಚಿಂತಾಕ್ರಾಂತೆ ಯಾದಂತೆ ತುಸು ದೂರವೆ ಕುಳಿತಿದ್ದಳು, ಅಂಗೈಗೆ ಗಲ್ಲವೂರಿ, ಗಟ್ಟಿದ ತಗ್ಗಿನ ಆಳುಗಳು, ಗಂಡಸರು, ಹೆಂಗಸರು, ಮಕ್ಕಳು ತಮ್ಮ ತಮ್ಮ  ಸರದಿಗಾಗಿ ದೋಣಿಗೆ ಕಾಯುತ್ತಾ, ಕುಳಿತೋ ನಿಂತೋ ಬೇಸರಪರಿಹಾರಕ್ಕಾಗಿ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಸುಮ್ಮನೆ ಓಡಾಡುತ್ತಲೋ ಇದ್ದರು. ಅರಳಿಕಟ್ಟೆಯ ಮೇಲೆ ಸ್ವಲ್ಪ ಚೆನ್ನಾಗಿ ಬಟ್ಟೆ ಹಾಕಿಕೊಂಡಿದ್ದ ಯಾರೋ ಇಬ್ಬರು ಗೌಡರು ಕುಳಿತಿದ್ದುದನ್ನೂ ನೋಡಬಹುದಾಗಿತ್ತು.
“ಈ ದೋಣಿಗೆ ಕಾಯುವುದು ಸಾಕಪ್ಪಾ!….ಒಂದು ಹದಿನೈದು ಇಪ್ಪತ್ತು ದಿನ ಮುಂಚಿತವಾಗಿಯೆ ಬಂದಿದ್ದರೆ ನಮಗೆ ಇದರ ಹಂಗು ಯಾಕೆ ಬೇಕಿತ್ತು? ಸಲೀಸಾಗಿ ಕಲ್ಲು ಸಾರದ ಮೇಲೆಯೆ ದಾಟಿ ಹೋಗುತ್ತಿದ್ದೆವಲ್ದಾ?….” ಕುಡಿಮೀಸೆ ಬಿಟ್ಟು, ತಲೆಗೆ ಕೆಂಪು ಎಲೆವಸ್ತ್ರ ಸುತ್ತಿ ಮುಖಂಡನಾಗಿ ಕಾಣುತ್ತಿದ್ದ ಒಬ್ಬ ಕನ್ನಡ ಜಿಲ್ಲೆಯವನು ಹೇಳುತ್ತಿದ್ದುದನ್ನು ಆಲಿಸಿ ಗುತ್ತಿ ಅವನ ಕಡೆಗೆ ನೋಡತೊಡಗಿದನು.
ಗುತ್ತಿಗೆ ಆಶ್ಚರ್ಯವಾಯಿತು. ಅಷ್ಟು ದೊಡ್ಡ ಹೊಳೆಗೆ ಸಾರ ಹಾಕಲಿಕ್ಕೆ ಅದೇನು ಹಳ್ಳವೇ? ಅವನ ಕಣ್ಣಿಗೆ ಆ ವಿಸ್ತಾರವಾಗಿದ್ದ ಸುಚಂಚಲ ಜಲರಾಶಿಯ ನಡುವೆ ಕಾಣುತ್ತಿದ್ದ ಒಂದೇ ಸ್ಥಿರವಸ್ತು ಎಂದರೆ, ದೋಣಿಗಂಡಿಗೆ ಬಹುದೂರ ಮೇಲು ಭಾಗದಲ್ಲಿ ಕಾಣಿಸುತ್ತಿದ್ದ ಒಂದು ಕಲ್ಲು ಮಂಟಪದ ಅಗ್ರಭಾಗ. ಅದೂ ಏನು ಈಗಲೋ ಆಗಲೋ ಮುಳುಗಿ ಮುಚ್ಚಿಹೋಗುವಂತೆ ತೋರುತ್ತಿತ್ತು.
ಕೆಂಪು ಎಲೆವಸ್ತ್ರದವನೊಡನೆ ಮಾತಾಡುತ್ತಿದ್ದ ಹಾಳೆಟೋಪಿಯ ಗಟ್ಟಿದಾಳು ಸಮ್ಮತಿಸಿದನು: “ಹೌದಂಬ್ರು ಕಾಣೆ, ನಮ್ಮ ಕಾನೂನು ಸೇರಿಗಾರ್ರು ಒಂದು ತಿಂಗಳ ಹಿಂದೆಯೆ ಆಳುಗಳನ್ನೆಲ್ಲ ಕರೆದುಕೊಂಡು ಹೋದ್ರಂಬ್ರಲ್ಲಾ, ಆ ಕಲ್ಲುಸಾರದ ಮೇಲೆಯೇ!”
ಮುತ್ತೂರು ಸೀಮೆಯೂ ಕೂಡ ‘ದೇಸಾಂತ್ರ’ವಾಗಿದ್ದ ಗುತ್ತಿಯ ಬದುಕೆಲ್ಲ ಇದುವರೆಗೆ ಸಿಂಬಾವಿ, ಮೇಗರವಳ್ಳಿ, ಹಳೆಮನೆ, ಹೂವಳ್ಳಿ, ಕೋಣೂರು, ಬೆಟ್ಟಳ್ಳಿಗಳಿಗೇ ಸೀಮಿತವಾಗಿದ್ದುದರಿಂದ ಅವನೆಂದೂ ಬೇಸಗೆಯಲ್ಲಿ ತೀರ್ಥಹಳ್ಳಿಯ ರಾಮತೀರ್ಥದ ದೃಶ್ಯವನ್ನು ನೋಡಿರಲಿಲ್ಲ. ಕಡೆಗೆ ಅವನ ಸಂಕುಚಿತ ಜೀವನದ ಹದಿನೆಂಟೋ ಇಪ್ಪತ್ತೋ ವರ್ಷಗಳಲ್ಲಿ, ಒಮ್ಮೆಯಾದರೂ ಅವನು ‘ಎಳ್ಳಾಮಾಸೆ’ಯ ಜಾತ್ರೆಗಾದರೂ ತೀರ್ಥಹಳ್ಳಿಯಂತಹ ‘ದೂರದೇಶಕ್ಕೆ’ ಬಂದವನಲ್ಲ. ಹೊಲೆಯನಾಗಿದ್ದ ಅವನಿಗೆ ಈ ಜನ್ಮದಲ್ಲಿ ಪರಶುರಾಮತೀರ್ಥದ ಸ್ನಾನವಂತೂ ಸರ್ವಥಾ ಅಲಭ್ಯವಾದುದರಿಂದ ಅಂತಹ ಅಗಮ್ಯಸ್ಥಾನಕ್ಕೆ ಏರಲು ಅವನೆಂದೂ ಆಶಿಸಿರಲಿಲ್ಲ.
“ಮತ್ತೆ, ನೀವೆಲ್ಲ ಎತ್ತ ಹೋಗುವವರು ಹೊಳೆ ದಾಂಟಿ?” ಕೆಂಪು ಎಲೆವಸ್ತ್ರದವನು ಕೇಳಿದನು.
“ನಾವು ಮುತ್ತಳ್ಳಿಗೆ ಹ್ವೋಯ್ಕು…ನೀವೋ?” ಹಾಳೆ ಟೋಪಿಯ ಉತ್ತರ ಮತ್ತು ಪ್ರಶ್ನೆ.
“ನಾನೋ? ಸೀತೆಮನೆಯಲ್ಲಿ ಸೇರೆಗಾರಿಕೆ ಮಾಡಿಕೊಂಡಿರ್ತೆ” ಎಂದ ಕೆಂಪುವಸ್ತ್ರದವನು ಅರಳಿಕಟ್ಟೆಯ ತಿರುಗಿನೋಡಿ “ಅಲ್ಲಿ ಕೂತವರು ನಿಮ್ಮ ಗೌಡ್ರಲ್ಲವೋ ಕಾಣು” ಎಂದನು.
ಹಾಳೆತೋಪಿಯವನು ಅತ್ತ ನೋಡಿ ಗುರುತಿಸಿ “ಹೌದು ಮಾರಾಯ್ರ, ಅವರೇ! ನಮ್ಮ ಒಡೆಯರಲ್ದಾ ಶಾಮಯ್ಯಗೌಡರು!”ಎಂದನು.
“ಅವರು ಯಾರೋ? ಇನ್ನೊಬ್ಬರು? ಅವರ ಸಂಗಡ ಮಾತಾಡುವವರು? ಒಳ್ಳೆ ಮದುಮಗನ ಹಾಗೆ ಅಂಗಿ ಹಾಕಿ, ರುಮಾಲು ಕಟ್ಟಿದ್ದಾರಲ್ಲಾ?”
“ಹುರಿಮೀಸೆ ಬಿಟ್ಟಿದ್ದಾರಲ್ಲಾ ಅವರಾ? ಅಯ್ಯೋ ನಿನ್ನ? ಅವರು ಗೊತ್ತಿಲ್ಲವೆ ನಿನಗೆ? ಕಾನೂರು ಸಣ್ಣಗೌಡರಲ್ದಾ?…”
“ಅಯ್ಯೋ, ನನ್ನ ಕಣ್ಣು ಹೊಟ್ಟಿಹಾರ! ಹೌದೆ ಹೌದು, ಚಂದ್ರಯ್ಯಗೌಡರು! ಆ ವೇಷೆದಲ್ಲಿ ನನಗೆ ಗುರುತೆ ಆಗಲಿಲ್ಲ! ಮೊನ್ನೆ ಮೊನ್ನೆ ಅವರ ಹೆಂಡತಿ ತೀರಿಹೋದರಂಬ್ರು, ಪಾಪ !….
“ಅದಕ್ಕೇ ಕಾಣ್ತು, ಮರುಮುದುವೆಗೆ ಹೆಣ್ಣು ನೋಡಲಿಕ್ಕೆ ಹೋಗಿದ್ದರಂಬ್ರು, ಮಳೂರು ಮಂಡಗದ್ದೆ ಕಡೆಗೆ, ಅವರ ಬಾವನ ಸಂಗಡ….”
‘ಕಾನೂರು’ ‘ಮುತ್ತಳ್ಳಿ’ ಎಂಬ ಹೆಸರು ಕೇಳಿ ಗುತ್ತಿ ಕಿವಿ ನಿಮಿರಿದ್ದನು. ತನ್ನ ಒಡೆಯರು ಸಿಂಬಾವಿ ಭರಮೈ ಹೆಗ್ಗಡೆಯವರೂ ಆ ಹೆಸರುಗಳನ್ನೆ ಹೇಳಿದ್ದ ನೆನಪಾಗಿ, ಅರಳಿಕಟ್ಟೆಯ ಮೇಲೆ ಕುಳಿತಿದ್ದವರನ್ನು ಕುತೂಹಲದಿಂದ ನೋಡತೊಡಗಿದ್ದನು: ಆ ಇಬ್ಬರು ಗೌಡರೂ ಇನ್ನೂ ತನ್ನಂತೆಯೆ ಹುಡುಗಪ್ರಾಯದವರಾಗಿ ಕಂಡರು. ಅವರಲ್ಲಿ ಯಾರಾದರೊಬ್ಬರನ್ನು ತನ್ನ ‘ಅಜ್ಞಾತವಾಸದ’ ಕಾಲದ ಒಡೆಯರನ್ನಾಗಿ ಆರಿಸಿಕೊಳ್ಳಲೇಬೇಕಾಗಿತ್ತು. ಮುತ್ತಳ್ಳಿಯ ಶಾಮಯ್ಯಗೌಡರು ನೋಡುವುದಕ್ಕೆ ಸಾತ್ವಿಕರಾಗಿ ಸೌಮ್ಯರಾಗಿ ಕಂಡರೂ ಗುತ್ತಿಯ ಆಕರ್ಷಣೆಯೆಲ್ಲ ಹಾಳೆತೋಪಿಯವನು ಕಾನೂರಿನ ಸಣ್ಣಗೌಡರು ಎಂದು ವರ್ಣಿಸಿದ್ದ ವ್ಯಕ್ತಿಯ ರಾಜಠೀವಿಯ ಕಡೆಗೇ ವಾಲಿತ್ತು.
ಅಷ್ಟರಲ್ಲಿ ಆಚೆಯ ದಡದಿಂದ ಜನರನ್ನು ಕರೆದು ತಂದಿದ್ದ ದೋಣಿ ಈಚೆಯ ದಡಕ್ಕೆ ಸಮೀಪಿಸುತ್ತಿತ್ತು. ದೋಣಿಯಲ್ಲಿ ಆದಷ್ಟು ಬೇಗನೆ ಜಾಗ ಸಂಪಾದಿಸುವ ಅಥವಾ ಆಕ್ರಮಿಸಿಕೊಳ್ಳುವ ತರಾತುರಿಯಿಂದ ಕಾಯುತ್ತಿದ್ದ ಜನ ಸೋಪಾನ ಪಂಕ್ತಿಯನ್ನಿಳಿದು ಧಾವಿತು. ಗುತ್ತಿಯೂ ಅನೈಚ್ಛಿಕವಾಗಿಯೆ ಎದ್ದು ನಿಂತನು!
ಆದರೆ ಅವನಿಗೆ ಇತರರಂತೆ ನೂಕುನುಗ್ಗಲಿನಲ್ಲಿ ಹೋಗುವ ಕೆಚ್ಚಾಗಲಿಲ್ಲ. ಜನರು ದೋಣಿಯಿಂದಿಳಿಯುವ ಮತ್ತು  ದೋಣಿ ಹತ್ತುವ ಸಾಹಸಗಳೆರಡನ್ನೂ ನೋಡುತ್ತಾ ಅಂಬಿಗರ ಭರ್ತ್ಸನೆ ಆಜ್ಞೆ ವಿಜ್ಞಾಪನೆ ನಿಂದೆ ಶಾಪ ಮೊದಲಾದುವುಗಳನ್ನು ಆಲಿಸುತ್ತಾ, ತುಸು ದಿಗಿಲುಗೊಂಡಂತೆ ಕುಳಿತಿದ್ದಲ್ಲಿಯೇ ನಟ್ಟು ನಿಂತಿದ್ದನು. ತನ್ನೂರಿನಲ್ಲಿ ಯಾರ ಮುಲಾಜೂ ಇಲ್ಲದವನಂತೆ ಸಿಂಹಧೈರ್ಯದಿಂದ ವರ್ತಿಸುತ್ತಿದ್ದವನು ಇಲ್ಲಿ ಪರ ಊರಿನಲ್ಲಿ (ಅವನ ರೀತಿಯಲ್ಲಿ ಹೇಳುವುದಾದರೆ ‘ಪರದೇಶದಲ್ಲಿ’) ಹೊಲಬುಗೆಟ್ಟ ನಾಯಿಯಂತೆ ಅಂಜುಬುರುಕುತನವನ್ನು ಅನುಭವಿಸುತ್ತಿದ್ದನು. ಅದಕ್ಕೆ ಕಾರಣ, ಬರಿಯ ಅಪರಿಚಿತ ಪ್ರದೇಶ ಮತ್ತು ಅಪರಿಚಿತ ಜನ ಮಾತ್ರವೆ ಆಗಿರಲಿಲ್ಲ. ಅವನಿಗೆ ತೊಳ್ಳೆ ನಡಗುವಂತಾಗುತ್ತಿದ್ದದ್ದು ಪೋಲೀಸಿನವರ ಭೀತಿಯಿಂದ. ಮೇಗರವಳ್ಳಿಯಿಂದ ಹೊರಟವನು ದಾರಿಯುದ್ದಕ್ಕೂ ಎಲ್ಲಿ ಯಾರು ತನ್ನನ್ನು ಗುರುತಿಸಿ ಹಿಡಿದುಬಿಡುತ್ತಾರೋ ಎಂದು ಹೆದರಿಕೊಂಡೇ ಬಂದಿದ್ದನು. ಅದಕ್ಕಾಗಿಯೆ ಹುಲಿಯನನ್ನೂ ಹಿಂದಕ್ಕೆ ಹೊಡೆದೋಡಿಸಿ, ಅದು ಸಿಂಬಾವಿ ಕೇರಿಗೆ ಸೇರುವಂತೆ ಮಾಡಲು ಬಹಳ ಪ್ರಯತ್ನಿಸಿದ್ದನು. ಏಕೆಂದರೆ ಅವನಿಗೆ ಗೊತ್ತಿತ್ತು, ಆ ನಾಯಿಯನ್ನು ತನ್ನೊಡೆನೆ ಒಮ್ಮೆ ಕಂಡವರು ಅದನ್ನು ಮರೆಯಲಾರರು ಎಂದು. ಜೊತೆಗೆ ತನ್ನ ಅಸಾಧಾರಣ ಕುಳ್ಳತನ ಬೇರೆ ಅವನನ್ನು ಎಂತಹ ಗುಂಪಿನಲ್ಲಿಯೂ ಪ್ರತ್ಯೇಕಿಸಿ ಗುರುತಿಸಿ ಹಿಡಿದುಕೊಡುವಂತಿತ್ತು. ಅವನು ಸ್ವಲ್ಪವಾದರೂ ಗುರುತು ಮರೆಸಿಕೊಳ್ಳಲೆಂದು ಗಡ್ಡಮೀಸೆಗಳನ್ನು ಬಹಳ ದಿನಗಳಿಂದ ಬೋಳಿಸಿರಲಿಲ್ಲ. ಆದರೂ ಗಟ್ಟಿದ ತಗ್ಗಿನವರಂತೆ ಸೀರೆ ಉಟ್ಟುಕೊಳ್ಳಲು ನಿರಾಕರಿಸಿದ ತಿಮ್ಮಿಯೂ, ಎಲ್ಲರ ಗಮನಕ್ಕೂ ಬಿದ್ದೇ ಬೀಳುವ ಹುಲಿಯನೂ ತನ್ನ ಜೊತೆಯೇ ನಡೆದುಬರುತ್ತಿದ್ದರೆ, ತನ್ನನ್ನು ಕಂಡಿದ್ದ ಪೋಲೀಸರ ಮಾತಿರಲಿ, ತನ್ನ ಚಹರೆ ಮತ್ತು ತನ್ನ ಶುಕನಸಂಗಿಯ ವಿಚಾರವಾಗಿ ಕೇಳಿದ್ದರೂ ಸಾಕು, ಯಾವನಾದರೂ ತನ್ನನ್ನು ಗುರುತಿಸುವ ಸಂಭವವುಂಟೆಂದು ಹೆದರಿ, ಹುಲಿಯನ ಕೊರಳಿಗೆ ಹಗ್ಗಹಾಕಿ, ತಿಮ್ಮಿ ಅದನ್ನು ಹಿಡಿದುಕೊಂಡು ತನಗೆ ಬಹುದೂರವಾಗಿ, ತನಗೂ ಅವರಿಗೂ ಸಂಬಂಧವಿಲ್ಲವೆಂಬುದನ್ನು ಸಾರುವಂತೆ, ಗಟ್ಟದತಗ್ಗಿನ ಆಳುಗಳೊಟನೆ ನಡೆದುಬರುವಂತೆ ಏರ್ಪಾಡು ಮಾಡಿದ್ದನು! ತೀರ್ಥಹಳ್ಳಿಯ ಪೇಟೆಯ ಮಧ್ಯೆ ಹೊಳೆದಂಡೆಗೆ ನಡೆದುಬರುವ ರಸ್ತೆಯಲ್ಲಿ, ಅವನ ಪಕ್ಕದಲ್ಲಿ ನಡೆದು ಹೋಗುತ್ತಿದ್ದ ಗಟ್ಟದಾಳುಗಳು ‘ಅದೇ ಪೋಲೀಸು ಕಛೇರಿ, ಇದೇ ಲಾಕಪ್ಪು!’ ಎಂದು ತಮ್ಮ ಎಡಬಲ ಎತ್ತರದಲ್ಲಿದ್ದ ಕಲ್ಲುಕಟ್ಟಡಗಳನ್ನು ನಿರ್ದೇಶಿಸಿ ಮಾತನಾಡಿಕೊಂಡಾಗ ಗುತ್ತಿಗೆ ಜಂಘಾಬಲವೆ ಸಡಿಲವಾಗಿತ್ತು! ಯಾರಾದರೂ ಕರೀಪೇಟದವರು, ಆ ಗಿರ್ಲುಮೀಸೆಯವನೋ? ಆ ಮೀಸೆಬೋಳನೋ? ತನ್ನನ್ನು ಗುರುತಿಸಿ ಕಂಡು ಹಿಡಿದರೆ ಏನುಗತಿ? ಎಂದು ಕಳವಳಿಸಿ, ಮೋರೆ ಕೆಳಗೆ ಮಾಡಿಕೊಂಡೇ ಬಿರಬಿರನೆ ಸಾಗಿದ್ದನು! ಆದರೆ ಆ ಮಳೆಗಾಲದ ಕೆಸರುರಸ್ತೆಯಾಗಲಿ, ಬೀಳುತ್ತಿದ್ದ ಸೋನೆಮಳೆಯಿಂದ ಮಂಜು ಮುಸುಗಿದಂತೆ ಕಾಣುತ್ತಿದ್ದು ಹಾಸುಂಬೆ ಹಬ್ಬಿದ ಕಲ್ಲುಗೋಡೆಯ ಈ ಕಟ್ಟಡಗಳಲ್ಲಾಗಲಿ, ಇವನನ್ನು ಗುರುತಿಸುವುದಕ್ಕಿರಲಿ ನೋಡುವುದಕ್ಕೂ ಒಂದು ನರಪಿಳ್ಳೆಯಾದರೂ ಕಾಣುತ್ತಿರಲಿಲ್ಲ….
“ಏಯ್ ಹಸಲೋರವನೆ, ಯಾರದ್ದೋ  ಇದು, ಈ ಕೋಳೀ ಬುಟ್ಟಿ? ನಿನ್ನ ಕೋಳೀ ಕುನ್ನೀನೆಲ್ಲ ಸಾಗಿಸಕ್ಕೆ ಜಾಗ ಎಲ್ಲಿದ್ಯೋ ದೋಣೀಲಿ? ತೆಗೀತೀಯೋ ಇಲ್ಲೋ, ಲೌಡೀ ಮಗನೆ?….”
ಅಂಬಿಗನ ಆರ್ಭಟಗೆ ಗುತ್ತಿ ಕಣ್ಣುಬಾಯಿ ಬಿಟ್ಟುಕೊಂಡು ನಿಂತಿದ್ದವನು ತನ್ನ ನಾಯಿಯಕಡೆ ನೋಡಿದನು. ಅವನ ಮನದಲ್ಲಿ ಚಿಂತೆ ಸಂಚರಿಸಿತು: ‘ಹಾಂಗಾದ್ರೆ ಹುಲಿಯನ್ನು ದೋಣಿ ಹತ್ತಾಕ್ಕೆ ಬಿಡಾದಿಲ್ಲ? ಈ ನೆರೇಲಿ ಹೆಂಗೆ ಈಜಿ ಆಚೆದಡ ಸೇರ್ತದೆಯೋ ಶಿವನೇ ಬಲ್ಲ! ಹೊಳೇಪಾಲೇ ಸೈ ಅಂತಾ ಕಾಣ್ತದೆ!’ ಪಕ್ಕದಲ್ಲಿ ನಿಂತು, ಭೋರ್ಗರೆದು ರೌದ್ರ ವೇಗದಿಂದ ಬಿದಿರುಹಿಂಡಲುಗಳನ್ನೂ ಹೆಮ್ಮರಗಳನ್ನೂ ಸೊಪ್ಪು ಸದೆಗಳನ್ನೂ ಕೊಚ್ಚಿಕೊಂಡು ಹರಿಯುತ್ತಿದ್ದ ತುಂಗೆಯ ನೆರೆವೊನಲನ್ನೂ ದೋಣಿಯ ನೂಕು ನುಗ್ಗಲು ಗಲಭಯನ್ನೂ ನೋಡುತ್ತಾ ನಿಂತಿದ್ದ ಹುಲಿಯನ ಕಡೆ ಸಿಟ್ಟಿನಿಂದ ಕಣ್ಣುಹಾಯಿಸಿ ಶಪಿಸಿದನು: “ಹಾಳು ಮುಂಡೇದು, ಹಡಬೆಗೆ ಹುಟ್ಟಿದ್ದು! ಇದರ ರುಣ ಕಡಿಯಾಕೆ! ಎಷ್ಟು ಹೊಡೆದಟ್ಟಿದ್ರೂ ಹಿಂದಕ್ಕೆ ಹೋಗ್ದೆಹೋಯ್ತು, ಕೇರೀಗೆ! ಈಗ ದಾಟು ಹೊಳೇನ! ಮುಳುಗಿ ಸಾಯಿ!…. “
ಅಷ್ಟರಲ್ಲಿ ಅಂಬಿಗನು ಹೇಟೆ ಮರಿಗಳಿದ್ದು ಪೀಂಗುಡುತ್ತಿದ್ದ ಬುಟ್ಟಿಯ ಪಂಜರವನ್ನೆತ್ತಿ, ತನ್ನಜ್ಞೆಯನ್ನು ಪರಿಪಾಲಿಸದೆ ಬರಿದೆ ಹಲ್ಲುಬಿಡುತ್ತಾ ದಡದ ಮರಳಿನಮೇಲೆ ನಿಂತಿದ್ದ ಗಟ್ಟದವನ ಕಾಲುಬುಡಕ್ಕೆ, ದೋಣಿಯಿಂದ ಎಸೆದನು. ಆ ಭೂಕಂಪಕ್ಕೆ ದಿಗಿಲುಗೊಂಡು ಕೂಗಾಡುತ್ತಿದ್ದ ಹೇಟೆ ಮರಿಗಳನ್ನು ಬುಟ್ಟಿಯೊಳಗೇ ಸಂತೈಸಿ, ಆ ಗಟ್ಟಿದಾಳು ಸಾವಧಾನವಾಗಿ, ಅಂಬಿಗನ ತಪ್ಪನ್ನು ತಿದ್ದಿದನಷ್ಟೆ: “ನಾನು ಹಸಲೋರವನಲ್ಲ, ಒಡೆಯ, ಬಿಲ್ಲೋರವನು!”
ದೋಣಿಗೆ ಗಟ್ಟಿದಾಳುಗಳೆಲ್ಲ ಹತ್ತಿದ್ದರು. ಅಷ್ಟರಲ್ಲಿ ಮೂರು ನಾಲ್ಕು ಜನ ಹಾರುವರು ದೋಣಿಗಂಡಿಗೆ ಬಂದವರು ಕೈಯೆತ್ತಿ ಅಂಬಿಗನನ್ನು ಕುರಿತು “ಓ ತಮ್ಮಯ್ಯಣ್ಣಾ, ತಮ್ಮಯ್ಯಣ್ಣಾ, ದೋಣಿ ಬಿಡಬೇಡ ಬಿಡಬೇಡ” ಎಂದು ಕೂಗುತ್ತಾ ದೋಣಿಯ ಬುಡಕ್ಕೆ ಓಡಿ ಬಂದರು, “ಮಾರಾಯ, ಮಠದಲ್ಲಿ ಸತ್ಯನಾರಾಯಣ ವ್ರತ. ಬೇಗ ಹೋಗಬೇಕಾದಗಿದೆ ಸಮಾರಾಧನೆಗೆ, ನಮ್ಮನ್ನು ಮೊದಲು ದಾಟಿಸಿಬಿಡು; ಅಷ್ಟು ಉಪಕಾರವಾದೀತು.”
“ಜನಿವಾರದವರು ಹತ್ತತ್ತಾರೋ, ಇಳಿರೋ ಎಲ್ಲ!” ಅಂಬಿಗ ತಮ್ಮಯ್ಯಣ್ಣ ಆಜ್ಞೆಮಾಡಿದ. ಏನೋ ಅಪರಾಧ ಮಾಡಿದ್ದವರಂತೆ ದಿಗಿಲುಗೊಂಡು, ಮರುಮಾತಾಡದೆ, ಎಲ್ಲರೂ ಅವರವರ ಸಾಮಾನುಗಳೊಡನೆ ಇಳಿದು ದೂರಸರಿದರು. ದೋಣಿಪೂರ್ತಿ ಖಾಲಿಯಾಯಿತು. ಆ ಮೂರು ನಾಲ್ಕು ಮಂದಿ ಊಟಕ್ಕೆ ಅವಸರವಾದ ಮಡಿ ಬ್ರಾಹ್ಮಣರು ದೋಣಿ ಹತ್ತಿ ನಿಂತರು, ಕಚ್ಚಿಗಳನ್ನು ಮಡಿದು ಸೊಂಟಕ್ಕೆ ಸಿಕ್ಕಿಸಿಕೊಂಡು.
ತಕ್ಕಮಟ್ಟಿಗೆ ದೊಡ್ಡದಾಗಿಯೆ ಇದ್ದ ಆ ದೋಣಿಯಲ್ಲಿ ಇಪ್ಪತ್ತು ಇಪ್ಪತ್ತೈದು ಜನರು ಧಾರಳವಾಗಿ ಹತ್ತಬಹುದಾಗಿತ್ತು. ಆದರೆ ಇತರ ಮುಟ್ಟಾಳುಗಳು ಹತ್ತಿದರೆ ಬ್ರಾಹ್ಮಣರಿಗೆ ಮೈಲಿಗೆಯಾಗುತ್ತದೆ. ಅಂತಹ ಅಪಚಾರವೇನಾದರೂ ನಡೆದರೆ ತನಗೂ ತನ್ನ ದೋಣಿಗೂ ತನ್ನ ಅಂಬಿಗನ ಕಸುಬಿಗೂ ಕೇಡಾಗುತ್ತದೆ ಎಂದು ನಂಬಿದ್ದ  ಆ ತಮ್ಮಯ್ಯಣ್ಣ, ಬೇರೆ ಉಪಾಯ ಕಾಣದೆ, ಆ ನಾಲ್ವರನ್ನೇ ಆಚೆ ದಡಕ್ಕೆ ಕೊಂಡೊಯ್ಯಲು ಸಿದ್ಧನಾಗಿದ್ದ. ಅಷ್ಟರಲ್ಲಿ ಹಾರುವರಲ್ಲಿ ಒಬ್ಬ “ಅಲ್ಲಿ ಯಾರೋ ಇಬ್ಬರು ಗೌಡರು ಕೂತಿದ್ದಾರೆ ನೋಡು, ಅರಳಿಕಟ್ಟೇಲಿ. ಅವರೂ ಹೊಳೆ ದಾಟುವವರಿರಬೇಕು. ಜನ ಸಾಲದಿದ್ದರೆ ಅವರನ್ನು ಕರೆಯಬಹುದಲ್ಲಾ?” ಎಂದು ಸಲಹೆ ಮಾಡಿದನು.
“ಅವರೋ?….ಅವರು ನಮ್ಮ ಧಣೇರು ಕಣ್ರಯ್ಯಾ! ಕಾನೂರು ಚಂದ್ರೇಗೌಡ್ರು, ಮುತ್ತಳ್ಳಿ ಶ್ಯಾಮೇಗೌಡ್ರು. ಆಗಲೆ ಕರೆದಿದ್ದೆ ಅವರನ್ನು…. ಅವರನ್ನ ಹಾಂಗೆಲ್ಲ ಕಾಯ್ಸೋಕೆ ಆಗ್ತದೆಯೇ? ವರ್ಷಾ ವರ್ಷಾ ಭತ್ತ ಕೊಟ್ಟು ನಮ್ಮ ಹೊಟ್ಟೆ ಹೊರೆಯೋರೆ ಅವರು….ಇಲ್ಲದಿದ್ರೆ ಈ ದೋಣಿ ದಾಟೋರು ಕೊಡೋ  ಒಂದೊಂದೇ ಬಿಲ್ಲೆ ಯಾತಕ್ಕೆ ಸಾಕಾಗ್ತಿತ್ತು ನಮಗೆ?….ಬೈಗನ ಹೊತ್ತು ಒಂದು ತೊಟ್ಟು ಕುಡಿಯಾಕೂ ಸಾಕಾಗ್ತಿರಲಿಲ್ಲ! ಹಿಹ್ಹಿಹ್ಹಿ! ಬೇಜಾರು ಮಾಡಿಕೊಳ್ಳಬೇಡಿ, ಅಯ್ಯಾ, ಬಿರಾಂಬ್ರ ಹತ್ರ ಹಾಂಗೆಲ್ಲ ಹೇಳ್ದೆ ಅಂತಾ! ಹಿಹ್ಹಿಹ್ಹಿ!…ಅವರೂ….ಹ್ಞುಹ್ಞುಹ್ಞು; ಸೀತೆಮನೆ ಸಿಂಗಪ್ಪಗೌಡರಿಗಾಗಿ ಕಾಯ್ತಿದಾರೆ….ಅವರಿಲ್ಲೇ ಪ್ಯಾಟಿಗೆ ಹೋಗ್ಯಾರಂತೆ….”ಎನ್ನುತ್ತಾ ತಮ್ಮಯ್ಯಣ್ಣ ನಾಲ್ಕೇ ಬ್ರಾಹ್ಮಣರನ್ನು ಕೂರಿಸಿಕೊಂಡು, ದಡದಲ್ಲಿ ನಿಂತು ಗಂಟೆಗಟ್ಟಲೆ ಕಾಯುತ್ತಿದ್ದ ಜನರು ಗುಂಪು ನಿಸ್ಸಹಾಯಕರಾಗಿ ನೋಡುತ್ತಿರಲು, ಹುಟ್ಟಿನಿಂದ ದಡವನ್ನೊತ್ತಿ ದೋಣಿಯ ಹೊನಲಿಗೆ ತಳ್ಳಿಕೊಂಡು, ತನ್ನ ಜಾಗದಲ್ಲಿ ಕೂತು ಹುಟ್ಟುಹಾಕತೊಡಗಿದನು, ದೋಣಿಯ ಮತ್ತೊಂದು ತುದಿಯಲ್ಲಿದ್ದ ತನ್ನ ಸಹಾಯಕ ಅಂಬಿಗನಿಗೆ, ಉಳಿದವರಿಗೆ ಅಷ್ಟೇನೂ ಅರ್ಥವಾಗದ ಪರಿಭಾಷೆಯಲ್ಲಿ, ಪ್ರವಾಹ ರಭಸವನ್ನೂ ಅದರಲ್ಲಿ ತೇಲುತ್ತಾ ಬರುತ್ತಿದ್ದ ಹೆಮ್ಮರಗಳನ್ನೂ ಹೇಗೆ ತಪ್ಪಿಸಬೇಕೆಂಬುದಾಗಿ ಸಲಹೆ ಸೂಚನೆಗಳನ್ನು ಕೊಡುತ್ತಾ.
ಗುತ್ತಿ ನೋಡುತ್ತಾ ನಿಂತಿದ್ದಂತೆಯೆ ದೋಣಿ ದೂರ ದೂರ ದೂರವಾಗಿ ಚಿಕ್ಕ ಚಿಕ್ಕ ಚಿಕ್ಕದಾಗಿ, ಹೋಗಿ ಹೋಗಿ ಹೋಗಿ, ಸುಮಾರು ಐದಾರು ಫರ್ಲಾಂಗು ವಿಸ್ತಾರವಾಗಿದ್ದ ನೆರೆಹೊನಲಿನಲ್ಲಿ ಮೇಲಕ್ಕೊಮ್ಮೆ ಕೆಳಕ್ಕೊಮ್ಮೆ ಕೊಚ್ಚಿ ತೇಲಿ, ಅಲೆಗಳಲ್ಲಿ ಎದ್ದು ಬಿದ್ದು ಹಾರಿ ಆಚೆಯ ದಡಕ್ಕೆ ಸೇರಿತು. ಮತ್ತೆ, ನೋಡುತ್ತಿದ್ದಂತೆಯೇ, ಜನರನ್ನು ತುಂಬಿಕೊಂಡು ಈಚೆಯ ದಡಕ್ಕೂ ಬಂತು. ಬರುವಾಗ ಮಾತ್ರ ಪ್ರವಾಹರಭಸದಲ್ಲಿ ನುಗ್ಗಿ ಬರುತ್ತಿದ್ದ ಒಂದು ಹೆಮ್ಮರಕ್ಕೆ ಇನ್ನೇನು ತಗುಲಿ ಮುಳುಗಿತು ಎನ್ನುವಷ್ಟರಲ್ಲಿ ಅಂಬಿಗರು ಸಾಹಸದಿಂದ ಹುಟ್ಟುಹಾಕಿ ದೋಣಿಯ ಮುಖವನ್ನೆ ಬೇರೆ ದಿಕ್ಕಿಗೆ ತಿರುಗಿಸಿ ರಕ್ಷಿಸಿದ್ದರು.
ಅಂತೂ ಮೂರು ನಾಲ್ಕು ಸಾರಿ ದೋಣಿ ಹೋಗಿ ಬರುವಷ್ಟರಲ್ಲಿ ಸೇರೆಹಾರರ ಗಟ್ಟದಾಳುಗಳೆಲ್ಲ ಆಚೆದಡ ಸೇರಿದ್ದರು. ಮಳೆಗಾಲವಾಗಿದ್ದರಿಂದ ಗುತ್ತಿಗೆ ಹೊತ್ತೂ ಗೊತ್ತಾಗುವಂತಿರಲಿಲ್ಲ. ತಿಮ್ಮಿ ಆಕಳಿಸಿ, ಆಕಳಿಸಿ, ಕಂಬಳಿಕೊಪ್ಪೆಯನ್ನು ಮಳೆಗಾಳಿ ಬೀಸಿದಂತೆಲ್ಲ ಬಲವಾಗಿ ಸುತ್ತಿಕೊಳ್ಳುತ್ತಿದ್ದಳಷ್ಟೆ.
ಸೀತೆಮನೆ ಸಿಂಗಪ್ಪಗೌಡರೂ ಪೇಟೆಯಿಂದ ಹಿಂತಿರುಗಿ ಬಂದು, ಕಾನೂರು ಚಂದ್ರಯ್ಯಗೌಡರು ಮತ್ತು ಮುತ್ತಳ್ಳಿ ಶಾಮಯ್ಯಗೌಡರನ್ನು ಕೂಡಿಕೊಂಡು ಮೆಟ್ಟಿಲುಗಳನ್ನು ಇಳಿದು ಹೊಳೆಯ ದಂಡೆಗೆ ದೋಣಿ ಹತ್ತಲು ಬಂದು ನಿಂತಾಗಲೆ ಗುತ್ತಿಯೂ ಅವರ ಹಿಂದೆಯೆ ಇಳಿದುಬಂದು ತುಸುದೂರದಲ್ಲಿ ನಿಂತನು.
ಒರಚುಗಣ್ಣಿವ ಸಿಂಗಪ್ಪಗೌಡರು ತಮ್ಮ ತಾರುಣ್ಯಸಹಜವಾಗಿದ್ದ ಸಂತೋಷದ ಮುಖ ಭಂಗಿಯಿಂದ ಗುತ್ತಿಯ ಕಡೆ ಓರೆನೋಟ ಬೀರಿ, ಕಂಚಿನ ಸದ್ದನ್ನು  ನೆನಪಿಗೆ ತರಬಹುದಾದ ಕಂಠಧ್ವನಿಯಿಂದ ಕೇಳಿದರು “ಯಾರೋ ನೀನು? ಎಲ್ಲಿ ಆಯಿತೋ ನಿನಗೆ?”
ಎರಡೂ ಕೈಗಳನ್ನು ಜೋಡಿಸಿ ಎತ್ತಿ ಮುಗಿಯುತ್ತಾ, ಸೊಂಟ ಬಾಗಿಸಿ ನೆಲಮುಟ್ಟಿ ನಮಸ್ಕಾರ ಮಾಡಿ, ತುಂಬ ಭಯ ಭಕ್ತಿ ವಿನಯದಿಂದ ಗುತ್ತಿ “ನಾನು ಒಡೆಯ, ನಾನು” ಎಂದು ಸ್ವಲ್ಪ ತಡೆದು ತಡೆದು “ನಾನು ಕುಳ್ಳಸಣ್ಣ!” ಎಂದನು.
ಗದುಗಿನ ಭಾರತ ತೊರವೆ ರಾಮಾಯಣಾದಿ ಓಲೆಗ್ರಂಥಗಳನ್ನು ರಾಗವಾಗಿ ಓದಿ ಮನರಂಜಿಸುವುದರಲ್ಲಿ ಪ್ರಸಿದ್ಧರಾಗಿದ್ದ ಪರಿಹಾಸ ಪ್ರವೃತ್ತಿಯ ಸಿಂಗಪ್ಪಗೌಡರು ನಗುತ್ತಾ “ಕಂಡರೆ ಗೊತ್ತಾಗ್ತದೋ ಅದು! ನೀನು ಕುಳ್ಳಾ ಸಣ್ಣಾ ಅಂತ!….ನಿನ್ನ ಹೆಸರೇನೊ?” ಎಂದರು. ಉಳಿದ ಇಬ್ಬರು ಗೌಡರೂ ಗುತ್ತಿಯ ಕಡೆ ತಿರುಗಿ ನಿಂತದ್ದವರು ನಗತೊಡಗಿದ್ದರು.
“ನನ್ನ ಹೆಸರೇ ‘ಕುಳ್ಸಣ್ಣ’ ಅಂತಾ, ಒಡೆಯ!” ಮೂವರು ಗೌಡರೂ ಪರಿಹಾಸ್ಯದ ಲಘುಮನೋಧರ್ಮವನ್ನು ಪ್ರಕಟಿಸಿದ್ದರಿಂದ ಗುತ್ತಿಗೆ ಸುಳ್ಳನ್ನೂ ಧೈರ್ಯವಾಗಿ ಹೇಳಲು ಧ್ಯರ್ಯ ಬಂದಿತ್ತು. ತನ್ನ ನಿಜವಾದ ಹೆಸರು ಗೊತ್ತಾದರೆ ‘ಅಜ್ಞಾತವಾಸ’ ವಿಫಲವಾಗಿ ಪೋಲೀಸರ ಕೈಗೆ ಬೀಳಬಹುದು ಎಂಬ ಭಯದಿಂದಲೆ ಅವನು ತನ್ನ ಊರು ಹೆಸರು ಎಲ್ಲವನ್ನೂ ಮುಚ್ಚಿಡಲು ಮನಸ್ಸು ಮಾಡಿದ್ದನು.
“ಎಲ್ಲಿ ಆಯಿತೋ ನಿನಗೆ?” ಗಡಸು ದನಿಯಲ್ಲಿ ಕೇಳಿದರು ಚಂದ್ರಯ್ಯಗೌಡರು.
“ಮೇಗರೊಳ್ಳಿ ಕಡೆ, ಒಡೆಯ.” ಮತ್ತೆ ಬಗ್ಗಿದನು ಗುತ್ತಿ.
“ಮೇಗರಳ್ಳಿ ಕಡೆ ಅಂದರೆ? ಯಾರ ಮನೆಯವನೋ?” ಕೇಳಿದರು ಸಿಂಗಪ್ಪಗೌಡರು,
“ಕೊಳಿಗೆ, ಒಡೆಯ ಕೊಳಿಗಿ ಕೇರಿಯವನು.” -ಗುತ್ತಿ ಕೈಮುಗಿದನು.
“ಬೇಲರವನೇನೋ?’ ಚಂದ್ರಯ್ಯಗೌಡರ ಪ್ರಶ್ನೆ.
“ಅಲ್ಲ, ಒಡೆಯ, ಹೊಲೇರವನು?”
“ಇತ್ತಲಾಗಿ ಎಲ್ಲಿ ಹೊರಟೆಯೋ ಮತ್ತೆ?” ಮುತ್ತಳ್ಳಿ ಕಾನೂರು ಅತ್ತಕಡೆ ಇರುವವರೆಲ್ಲ ಹೆಚ್ಚಾಗಿ ಬೇಲರೆ ಆಗಿದ್ದುದರಿಂದ ಗುತ್ತಿಗೆ ಆ ಕಡೆ ನೆಂಟರಿರಲಾರರಾಗಿ ಅತ್ತ ಕಡೆ ಏಕೆ ಹೋಗುತ್ತಿದ್ದಾನೆ ಎಂಬುದು ಚಂದ್ರಯ್ಯಗೌಡರ ಇಂಗಿತವಾಗಿತ್ತು: “ಯಾರಾದರೂ ನಿನಗೆ ನೆಂಟರಿದ್ದಾರೇನೋ?”
“ಇಲ್ಲ, ಒಡೆಯ…”
“ಮತ್ತೆ? ಹೆಂಡ್ತಿ ಕರಕೊಂಡು ಹೊರಟಿದ್ದೀಯಾ?” ಚಂದ್ರಯ್ಯಗೌಡರು ತಿಮ್ಮಿಯ ಕಡೆ ನೋಡಿ ಕೇಳಿದರು “ಅವಳು ಯಾರೊ? ನಿನ್ನ ಹೆಂಡ್ತೀನೊ? ತಂಗೀನೋ?….”
“ಹೆಡ್ತಿ, ಒಡೆಯಾ!” ಹಲ್ಲುಗಳೆಲ್ಲವನ್ನೂ ಪ್ರದರ್ಶಿಸುತ್ತಾ ಹೇಳಿದನು ಗುತ್ತಿ.
ಚಂದ್ರಯ್ಯಗೌಡರು ತಾರುಣ್ಯೋತ್ತರ ಲಕ್ಷಣದ ಶೃಂಗಾರ ಮಂದಹಾಸದಿಂದ ತನ್ನ ಕಡೆ ನೋಡುತ್ತಿದ್ದುದನ್ನು ಹೆಣ್ಣು ಹೃದಯ ಮಾತ್ರವೆ ಗ್ರಹಿಸಬಹುದಾಗಿದ್ದ ಸೂಕ್ಷ್ಮತೆಯಿಂದ ಅರಿತ ತಿಮ್ಮಿ ನಾಚಿಕೊಂಡು ಮುಖ ತಿರುಗಿಸಿ ನಿಂತಳು. ಚಂದ್ರಯ್ಯಗೌಡರಿಗೂ ಮೊದಲನೆ ಹೆಂಡತಿ ತೀರಿಹೋಗ ಸ್ವಲ್ಪ ಕಾಲವಾಗಿತ್ತು. ಎರಡೆನೆಯದಕ್ಕಾಗಿ ಸಂಧಾನ ಅನುಸಂಧಾನ ನಡೆಯುತ್ತಿತ್ತು. ಆದ್ದರಿಂದ ಲಕ್ಷಣವಾಗಿದ್ದ ಯಾವ ಹೆಣ್ಣನ್ನಾದರೂ ಸಂತೋಷದಿಂದ ನೋಡುವ ಸ್ಥಿತಿಯಲ್ಲಿದ್ದರು. ಮತ್ತೆಯೂ ಕೆಣುಕುವಂತೆ ನಗುತ್ತಾ ಕೇಳಿದರು; “ನಿನ್ನ ಹೆಂಡ್ತೀನೋ? ಇಲ್ಲಾ…?”
ಗೌಡರು ಅರ್ಧದಲ್ಲಿಯೆ ನಿಲ್ಲಿಸಿದ ವ್ಯಂಗ್ಯೋಕ್ತಿಗೆ ಗುತ್ತಿ ಕಕ್ಕಾವಿಕ್ಕಿಯಾಗಿ, ಬಚ್ಚನಿಗೆ ಹೆಂಡತಿಯಾಗುವವಳನ್ನು ತಾನು ಹಾರಿಸಿಕೊಂಡುಬಂದ ಸಂಗತಿ ಇವರಿಗೆ ಎಲ್ಲಿಯಾದರೂ ಗೊತ್ತಾಗಿದೆಯೇ? ಎಂಬ ಶಂಕೆಯೂ ತಟಕ್ಕನೆ ಮನಸ್ಸಿಗೆ ಬರಲು, ತನ್ನನ್ನು ತಾನು ಸಮರ್ಥಿಸಿಕೊಳ್ಳಲು, ಸ್ವಲ್ಪ ಹೆಚ್ಚು ಎನ್ನಬಹುದಾದ ಅಂಗಭಂಗಿಯಿಂದಲೆ “ನನ್ನ ಹೆಡ್ತೀನೇ, ಒಡೆಯಾ! ದೇವರಾಣೆಗೂ! ತಮ್ಮ ಪಾದದಾಣೆಗೂ! ನಾನು ಸುಳ್ಳು ಹೇಳಿದ್ರೆ ನನ್ನ ನಾಲಿಗೆ ಬಿದ್ದೇಹೋಗ್ಲಿ! ಬೇಕಾದರೆ ಅದನ್ನೇ ಕೇಳಿ! ಎಂದು ಮುಖ ತಿರುಗಿಸಿ ನಿಂತಿದ್ದ ತಿಮ್ಮಿಯ ಕಡೆ ನೋಡಿದನು.
“ಸರಿ ಬಿಡು! ಬೇಲಿಗೆ ಓತಿಕ್ಯಾತ ಸಾಕ್ಷಿ ಹೇಳಿದ್ಹಾಂಗೆ! ಅವಳನ್ನೇನು ಕೇಳಾದು!” ಎಂದು ಚಂದ್ರಯ್ಯಗೌಡರು ಗುತ್ತಿಯಿಂದ ಶಾಮಯ್ಯಗೌಡರ ಕಡೆ ತಿರುಗಿ, ಕಾನೂರು ಬಾವನ ಕಾಮಾಭಿರುಚಿಯನ್ನೂ ಶೃಂಗಾರ ಚೇಷ್ಟೆಯ ಸ್ವಭಾವವನ್ನೂ ಅರಿತಿದ್ದ ಅವರು ತಮ್ಮನ್ನೆ ವ್ಯಂಗ್ಯವಾಗಿ ಅವಲೋಕಿಸುತ್ತಿದ್ದುದನ್ನು ಗಮನಿಸಿ, ತಮ್ಮ ವಾಕ್ಕಿಗೂ ವರ್ತನೆಗೂ ಸಮಾಧಾನ ಹೇಳುವ ರೀತಿಯಲ್ಲಿ ಹೇಳಿದರು: “ಅಲ್ಲಾ ಬಾವ, ಹಂಗ್ಯಾಕೆ ಕೇಳ್ದೆ ಅಂತೀರೋ? ಆ ಮೇಗ್ರೊಳ್ಳಿ ಸೀಮೆ ಹಣೇಬರಾನೇ ಹಾಂಗೆ; ಹುಡುಗಿ ಹಾರಿಸೋದು, ಕಂಡೋರ ಹೆಂಡಿರನ್ನ ಕೆಡಿಸಾದು, ಅದೇ ಕಸಬು. ಅದ್ಕೇ ಕೇಳ್ದೆ, ಲೌಡಿಮಗ ಯಾರನ್ನಾದ್ರೂ ಹಾರಿಸಿಕೊಂಡು ಓಡಿಬಂದಿದಾನೋ ಏನೋ ಅಂತಾ….ಮೊನ್ನೆ ಮೊನ್ನೆ ಅಲ್ಲಿ ಯಾರೋ ಒಬ್ಬರು ನಾಯಕರ ಮಗಳನ್ನೆ ಯಾರೋ ಗೌಡರ ಹುಡುಗ ಲಗ್ನದ ದಿನವೇ, ಧಾರೆಗೆ ಇನ್ನೇನು ಒಂದು ಗಳಿಗೆ ಇದೆ ಅನ್ನಬೇಕಾದರೆ, ಹಾರಿಸಿಕೊಂಡು ಹೋಗ್ಯಾನಂತೆ!….ಹೌದಲ್ಲೇನೋ, ಸಿಂಗಪ್ಪ?”
ಪ್ರಶ್ನೆ ತಮ್ಮ ಕಡೆ ತಿರುಗಲು ಸಿಂಗಪ್ಪಗೌಡರು “ಉಪದೇಶಿ ಜೀವರತ್ನಯ್ಯ ಹೇಳ್ತಿದ್ರಪ್ಪಾ. ಅದೊಂದು ದೊಡ್ಡ ಪುಕಾರೇ ಆಗಿದೆಯಂತೆ. ಪಾಲುಮುಖಂಡರ ಬಹಿಷ್ಕಾರದ ಕಾಗದ ನಮ್ಮ ಕಡೆಗೂ ಬಂದರೂ ಬರಬಹುದು….ಸಿಂಬಾವಿ ಭರಮೈ ಹೆಗ್ಗಡೇರಿಗೇ ಅಂತೆ ಮದುವೆ ಆಗಬೇಕಾಗಿದ್ದು, ಎರಡನೆ ಮದುವೆಯಂತೆ. ಮೊದಲನೇ ಹೆಂಡ್ತೀಲಿ ಮಕ್ಕಳಿಲ್ಲಂತೆ. ಹೆಣ್ಣು ಹೂವಳ್ಳಿನಾಯಕರ ಮಗಳಂತೆ. ಹಾರಿಸಿಕೊಂಡು ಹೋದವನು ಕೋಣೂರುಗೌಡರ ತಮ್ಮನಂತೆ.” ಎಂದು, ಗುತ್ತಿಯ ಕಡೆಗೆ ತಿರುಗಿ “ಇವನಿಗೇನಾದ್ರೂ ಗೊತ್ತಿದ್ರೂ ಗೊತ್ತಿರಬಹುದು” ಎಂದರು.
ಗುತ್ತಗೆ ಆಗಲೆ ಎದೆ ಡವಡವಗುಟ್ಟುತ್ತಿತ್ತು. ಆ ಕಥಾವಿಷಯ ಗೊತ್ತಿರುವುದು ಮಾತ್ರವಲ್ಲ, ಅದರಲ್ಲಿ ಬಹುಪಾಲು ಸಕ್ರಿಯಾ ಪಾತ್ರಧಾರಿಯೂ ಆಗಿದ್ದ ಅವನಿಗೆ ಆ ಮಳೆಗಾಲದಲ್ಲಿಯೂ ಮೈ ಬೆವರತೊಡಗಿತ್ತು. ಅಷ್ಟರಲ್ಲಿ ಚಂದ್ರಯ್ಯಗೌಡರ ಗಡಸು ದನಿಯೂ ಪ್ರಶ್ನೆ ಹಾಕಿತು: “ಏಯ್…. ಹೆಸರು ಹಿಡಿದು ಕರೆಯಲು ಪ್ರಯತ್ನಿಸಿ ಫಕ್ಕನೆ ನೆನಪಿಗೆ ಬಾರದಿರಲು “ಎಂಥದೋ ನಿನ್ನ ಹಾಳು ಹೆಸರು?…. ಕುಳ್ಳಣ್ಣನೋ….?
“ಕುಳ್ಳಸಣ್ಣ, ಒಡೆಯಾ?” ಸೂಚಿಸಿದನು ಗುತ್ತಿ.
“ನಿಂಗೇನಾದ್ರೂ ಗೊತ್ತೇನೋ ಆ ವಿಷ್ಯಾ?” ಚಂದ್ರಯ್ಯಗೌಡರು ಪ್ರಶ್ನಿಸಿದರು.
“ಇಲ್ಲ, ನನ್ನೊಡೆಯಾ, ನಂಗೇನೂ ತಿಳೀದು ಆ ಇಚಾರ!” ತಾನು ಬೆಪ್ಪರಲ್ಲಿ ಬೆಪ್ಪ ಎಂಬ ಮುಖಭಂಗಿಯನ್ನು ಪ್ರದರ್ಶಿಸುತ್ತಾ ಮೈಯನ್ನೆಲ್ಲ ಮೊಳಕಾಲಿಗೆ ಕುನುಗಿಸಿ ಕೈಮುಗಿದನು ಗುತ್ತಿ.
“ಅಯ್ಯೋ ಆ ಗೊಬ್ಬರ ಹೊರಾ ಹೊಲೆಯಗೆ ಹೆಂಗೆ ಗೊತ್ತಾಗಬೇಕು ಅದೆಲ್ಲಾ?….” ಎನ್ನುತ್ತಾ ಶಾಮಯ್ಯಗೌಡರು ಆ ವಿಚಾರವನ್ನು ಅಲ್ಲಿಗೇ ನಿಲ್ಲಿಸುವ ಉದ್ದೇಶದಿಂದಲೂ, ದೋಣಿ ಆಗಲೆ ಹೊಳೆಯ ನಡುವೆ ಅರ್ಧ ದೂರ ಬಂದುದರಿಂದಲೂ ಆ ದಿಕ್ಕಗೆ ತಿರುಗಿ “ನೀನೀಗ ಹೋಳೆ ದಾಟಿ ಎಲ್ಲಿಗೆ ಹೋಗವ್ನೋ?” ಎಂದರು.
“ಎಲ್ಲಿಗಾದ್ರೂ ಆತು, ಒಡೆಯಾ. ಒಂದು ತುತ್ತು ಅನ್ನ ಸಿಕ್ಕರಾಯ್ತು, ನಿಮ್ಮ ಪಾದಸೇವೆ ಮಾಡಿಕೊಂಡು ಬಿದ್ದಿರ್ತಿನಿ…” ಎಂದನು ಗುತ್ತಿ.
“ನಿಮ್ಮ ಕೇರೀನ, ನಿಮ್ಮ ಒಡೇರ್ನ, ಯಾಕೋ ಮತ್ತೆ ಬಿಟ್ಟು ಬಂದಿದ್ದು?” ಸಿಂಗಪ್ಪಗೌಡರು ಕೇಳಿದರು.
“ಏನೋ ಸಕುನ ಬರ್ಲಿಲ್ಲಾ, ಒಡೆಯ. ಗಣಮಗನೂ ಹೇಳ್ತು, ನಾಕು ಕಾಲ ಬ್ಯಾರೆ ಎಲ್ಲಾದ್ರೂ ಹೋಗಿ ಇದ್ದು ಬಾ, ಅಷ್ಟರಾಗೆ ಸನಿ ಬಿಡ್ತದೆ ಅಂತಾ.
“ಹಂಗಾದ್ರೆ ಕಾನೂರಿನಾಗೆ ಇರ್ತಾನೆ ಬಿಡಿ, ಕೆಲ್ಸ ಮಾಡಿ ಕೊಂಡು” ಚಂದ್ರಯ್ಯಗೌಡರು ಇತ್ಯರ್ಥವಾಗಿಯೆ ಹೇಳಿಬಿಟ್ಟರು. ಅವರಿಗೆ ದುಡಿಯುವ ಗುತ್ತಿಯ, ಅಂದರೆ ಕುಳ್ಳಸಣ್ಣನ, ಬಲಿಷ್ಠವಾದ ದೇಹಸೌಷ್ಠವ ದಷ್ಟೇ ಆಕರ್ಷಣೀಯವಾಗಿತ್ತು ಅವನಿಗಿಂತಲೂ ಎತ್ತರವಾಗಿ ಲಕ್ಷಣವಾಗಿದ್ದ ಅವನ ಹೆಂಡತಿಯ ಅಂಗಭಂಗಿ. ಹಾಗೆಯೆ ಗುತ್ತಿಯನ್ನು ಕೇಳಿದರು: “ನೀ ಹೊಲೇರವನೋ? ಬೇಲರವನೋ?”
“ಹೊಲೇರವನು, ಒಡೆಯಾ.” ಗುತ್ತಿಗೂ ಸಂತೋಷವೇ ಆಗಿತ್ತು. ಚಂದ್ರಯ್ಯಗೌಡರ ಆಳಾಗಿ ಅವರ ರಕ್ಷಣೆಯಲ್ಲಿರಲು ಎಂತಹ ಪೋಲೀಸರೂ ಚಂದ್ರಯ್ಯಗೌಡರನ್ನು ಮೀರಿ ತನ್ನನ್ನು ಮುಟ್ಟಲಾರರು ಎಂಬ ನೆಚ್ಚು ಮೂಡಿತ್ತ ಅವನಿಗೆ, ಅವರ ಜಬರ್ದಸ್ತಿನ ಮಾತು, ವೇಷ ಭೂಷಣ ಮತ್ತು ಠೀವಿಗಳನ್ನು ಕಂಡು.
“ಹಾಂಗಾದ್ರೆ ನೀನು ಬ್ಯಾರೆ ಬಿಡಾರಾನೆ ಮಾಡಿಕೊಂಡು, ಬ್ಯಾರೆ ಕಡೇನೆ ಇರಬೇಕಾಗ್ತದೆ, ಗೊತ್ತಾಯ್ತೇನು? ನಮ್ಮಲ್ಲಿ ಇರೋರೆಲ್ಲ  ಬೇಲರೆ. ಅವರ ಕೇರೀಲಿ ನಿಂಗೆ ಜಾಗ ಕೊಡ್ತಾರೇನು?” ‘ಕುಳ್ಳಸಣ್ಣ’ ಆಗಲೇ ತಮ್ಮ ಆಳಾಗಿದ್ದಾನೆ ಎಂಬ ಅಭಿಮಾನದ ಧ್ವನಿಯಲ್ಲಿ ಮಾತಾಡಿಸತೊಡಿಗಿದ್ದರು ಚಂದ್ರಯ್ಯಗೌಡರು.
“ಅದಕ್ಕೇನು, ಒಡೆಯಾ? ಆಗಲಿ.” ತನ್ನ ಮೇಲಿದ್ದ ಏನೋ ಜವಾಬ್ದಾರಿಯ ಭಾರವೆಲ್ಲ ಇಳಿದಂತಾಗಿ ಸಮ್ಮತಿಸಿದನು ಗುತ್ತಿ.
ದೋಣಿ ಬಂತು, ಬನ್ನಿ ಬನ್ನಿ….” ಎನ್ನುತ್ತಾ ಸಿಂಗಪ್ಪಗೌಡರು ಕಚ್ಚೆ ಪಂಚೆಯನ್ನು ಎತ್ತಿ ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಾ, ಕೊಡೆಯನ್ನು ಮಡಿಸಿ ಬಗಲಲ್ಲಿ ಇಟ್ಟುಕೊಂಡು ಬೇಗ ಬೇಗ ನಡೆದರು. ಉಳಿದ ಇಬ್ಬರು ಗೌಡರೂ ಹಿಂಬಾಲಿಸಿದರು.
ಅಂಬಿಗ ತಮ್ಮಯ್ಯಣ್ಣ ಧಣಿಗಳನ್ನು ಸ್ವಾಗತಿಸುತ್ತಾ “ಅಯ್ಯಾ, ಬೇಗ ಬೇಗ ಹತ್ತಿ…. ಮಾಡ ಕರ್ರಗಾಗಿದೆ….ಮಳೆ ದನಗೋಳು ಬರಾಹಾಂಗೆ ಕಾಣ್ತದೆ…. ನಿಮ್ಮನ್ನೊಂದು ಹೆಂಗಾದ್ರೂ ಆಚೆ ದಡ ಸೇರಿಸಿ ಬಂದು, ದೋಣಿ ಕಟ್ಟಿಬಿಡ್ತೀನಿ.  ಈವೊತ್ತಿಗೆ ಮತ್ತೆ ದೋಣಿ ಹಾಕಾದಿಲ್ಲ ಹೋಳೀಗೆ.  ನೆರೇನೂ ಗಂಟೆಗಂಟೆಗೆ ಏರ್ತಾ ಅದೆ… ಆಚೆ ದಡದ ಹತ್ರ ಒಂದೂ ಹೆಣಾನೂ ತೇಲಿ ಹೋಗ್ತಾ ಇತ್ತು. ಒಂದು ಬಿಡಾರದ ಮಾಡೂ ತೇಲಿ ಬತ್ರಾ ಇತ್ತು, ನಡೂ ಹೊಳೇಲಿ! ಭಾರಿ ಮೇಲ್ಮಳೆ ಇರದೈದು….” ಎಂದು, ಅವರು ದೋಣಿ ಹತ್ತಲು ಅನುಕೂಲವಾಗುವಂತೆ ಅದೆ ಪಕ್ಕದ ಭಾಗವನ್ನು ಮರಳಿನ ದಡಕ್ಕೆ ಎಳೆದು ಹಿಡಿದುಕೊಂಡನು.
ಗುತ್ತಿ ತಿಮ್ಮಿಯೊಡನೆ ದೋಣಿಗೆ ಏರಲು ಬಂದಾಗ ತಮ್ಮಯ್ಯಣ್ಣ “ಎಲ್ಲಿಯವನೋ? ಯಾರ ಕಡೆಯವನೋ ನೀನು? ಹೊಳೇ ಕಾಣಿಕೆ ಬಿಲ್ಲೆ ಕೊಟ್ಟು ಹತ್ತು” ಎಂದನು. ‘ನಾನು ಅಯ್ಯೋರ ಕಡೆ ಆಳು’ ಎಂದನು ಗುತ್ತಿ.
“ಯಾವ ಅಯ್ಯೋರೋ? ನಾ ಎಂದೂ ನೋಡದ್ಹಾಂಗ ನೆಪ್ಪಿಲ್ಲ ನಿನ್ನ?”
“ಅಲ್ಲಿ ಕೂತಾರಲ್ಲಾ? ಆ ಅಯ್ಯೋರು.”
ಅಷ್ಟರಲ್ಲಿ ಚಂದ್ರಯ್ಯಗೌಡರು “ಅವರಿಬ್ಬರನ್ನೂ ಹತ್ತಿಸಿಕೊಳ್ಳೊ, ತಮ್ಮಯ್ಯಣ್ಣ, ನಮ್ಮ ಕಡೇರು.” ಎಂದು ಗಟ್ಟಿಯಾಗಿ ಕೂಗಿ ಹೇಳಿದರು, ಆಗತಾನೆ ಜೋರಾಗಿ ಪ್ರಾರಂಭವಾಗುತ್ತಿದ್ದ ಮಳೆಗಾಳಿಯಲ್ಲೂ ಕೇಳಿಸುವಂತೆ.
ಅಂಬಿಗನು ಗುತ್ತಿ ತಿಮ್ಮಿಯರು ಹತ್ತಿ ಕೂತೊಡನೆ, ದೋಣಿಗೆ ತನು ಹತ್ತಿ, ಹುಟ್ಟಿನಿಂದ ಅದವನ್ನು ತಳ್ಳುವಷ್ಟರಲ್ಲಿ, ಹುಲಿಯನೂ ದೋಣಿ ಹತ್ತಲು ಪರದಾಡುತ್ತಿದ್ದುದನ್ನು ನೋಡಿ “ಏಯ್, ಯಾರದ್ದೋ ಆ ನಾಯಿ? ನಿನ್ದೇನೋ? ಅಟ್ಟೋ ಅದನ್ನ. ಮನುಷ್ಯರಿಗೆ ತಾವಿಲ್ಲ; ನಯಿನ ಹತ್ತಿಸ್ತಿದಾನೆ!” ಎಂದು ಗದರಿಸಿ, ಹುಲಿಯನ್ನು ಹುಟ್ಟಿನ ತುದಿಯಿಂದ ತಳ್ಳಿದನು.
“ಅದಕ್ಕೇನು ಧಾಡಿ? ಈಜಿಕೊಂಡೇ ಬರ್ತದೆ.” ದೋಣಿಯೊಳಗೆ ಕೂತಿದ್ದೊಬ್ಬನು ಹೇಳಿದನು.
“ಈ ನೆರೇಲಿ ಎಲ್ಲಿ ಆಗ್ತದೆ ಈಜಕ್ಕೆ? ನನ್ನ ಹತ್ರಾನೆ ಒಂದು ಚೂರು ಜಾಗ ಕೊಡ್ತೀನಿ….” ಗುತ್ತಿ ಮೆಲ್ಲಗೆ ಹೇಳಿದನು ಅಂಜಿ ಅಂಜಿ.
“ನಾವೆಲ್ಲಗಂಗಮ್ಮನ ಪಾಲು ಆಗಬೇಕಾಗ್ತದೆ, ಗೊತ್ತಯ್ತೇನು? ಅವೊತ್ತು ಹೀಂಗೆ ಒಂದು ನಾಯೀನ ಹತ್ತಿಸಿಕೊಂಡು, ನಡೂ ಹೊಳೇಲಿ ಅದು ಹೆದರಿ ಎಲ್ಲರ ಮೇಲೂ ಹಾರಾಕೆ ಸುರುಮಾಡಿ, ಜನ ಒಂದು ಕಡೆಗೆ ವಾಲಿ, ದೋಣಿ ಮುಗುಚಿಕೊಳ್ಳಾಕೆ ಆಗಿತ್ತು.” ಹೇಳುತ್ತಲೆ ತಮ್ಮಯ್ಯಣ್ಣ ದೋಣಿಯನ್ನು ತಳ್ಳಿಕೊಂಡು ಹುಟ್ಟುಹೊಡೆಯಲು ತೊಡಗಿದನು.
ಗುತ್ತಿಗೆ ಕಣ್ಣು ಹನಿಮಂಜಾಗಿ, ದಡದಲ್ಲಿ ಅತ್ತ ಇತ್ತ ಪರದಾಡುತ್ತಾ, ಕುಂಯಿಗುಟ್ಟುತ್ತಾ, ನೀರಿಗೆ ಕಲಿಟ್ಟು ಮತ್ತೆ ಹೊಳೆಗೆ ಹೆದರಿ ಹಿಂಜರಿದು ದಡಕ್ಕೆ ಹತ್ತಿ ಓಡಾಡುತ್ತಿದ್ದ, ತನ್ನ ಬಹುಕಾಲದ ಸಂಗಾತಿಯಾಗಿ ಸೇವೆ ಸಲ್ಲಿಸಿ, ಜೊತೆ ಬಿಡದೆ ಅಕ್ಕರೆಯ ವಸ್ತುವಾಗಿದ್ದ ನಾಯಿಯನ್ನು ನಿಸ್ಸಹಾಯಕವಾಗಿ ನೋಡುತ್ತಾ ಕುಳಿತನು.
“ಅದೆಲ್ಲಿ ಬತ್ತದೆ ಈ ನರೇಲಿ? ಹಿಂದಕ್ಕೆ ಹೋಗ್ತದೆ, ಮನೀಗೆ. ಅದನ್ಯಾಕೆ ಕರಕೊಂಡು ಬರಬೇಕಾಗಿತ್ತೊ ಈ ದನಗೋಳು ಮಳೇಲಿ?” ಯಾರೋ ಹೇಳಿದ್ದು ಕೇಳಿಸಿತು ಗುತ್ತಿಗೆ.
ದೋಣಿ ದೂರ ದೂರ ಹೋದಂತೆ ಹುಲಿಯನ ಪರದಾಟ ಹೆಚ್ಚಾಗಿ, ಕಡೆಗೆ ದೋಣಿಯ ಕಡೆಗೆ ಮೋರೆಯೆತ್ತಿ ಬಳ್ಳಿಕ್ಕತೊಡಗಿತು.
“ಥೂ ಅನಿಷ್ಟದ್ದೆ? ಅಪಶಕುನ ಒರಲ್ತದಲ್ಲೋ!” ಎಂದರು ಯಾರೋ.
“ಹೋಗು, ಹುಲಿಯಾ, ಕೇರಿಗೆ ಹೋಗು!” ಗುತ್ತಿ ಕೊರಳೆತ್ತಿ ಗಟ್ಟಿಯಾಗಿ ಕೂಗಿದನು. ನಾಯಿಗೆ ಕೇಳಿಸಲಿ ಎಂದು. ಆಗಲೆ ದೋಣಿ ಪ್ರವಾಹದಲ್ಲಿ ಸ್ವಲ್ಪ ದೂರ ಸಾಗಿತ್ತು.
“ಅಕ್ಕಳ್ರೋ! ನಾಯಿಗೆ ಹುಲಿ ಅಂತಾ ಹೆಸರಿಟ್ಟಾನಲ್ಲಾ ಈ ಹೊಲೆಯ?” ಯಾರೋ ಹೇಳಿ ನಕ್ಕರು. ಅನೇಕರು ನಕ್ಕಿದ್ದೂ ಕೇಳಿಸಿತು ಗುತ್ತಿಗೆ.
ಒಂದು ಕಡೆ ಪ್ರಾಣಭಯ, ಒಂದು ಕಡೆ ಸ್ವಮಿ ಪ್ರೀತಿ, ಹುಲಿಯನ ಜೀವ ಉಭಯಸಂಕಟಕ್ಕೆ ಸಿಕ್ಕಿ ದಡದಲ್ಲಿ ಓಲಾಡುತ್ತಿತ್ತು. ಅದು ಎಂದೂ ಇಂತಹ ಜಲಪ್ರವಾಹವನ್ನು ನೋಡಿರಲಿಲ್ಲ. ಹೆಚ್ಚು ಎಂದರೆ ಸಣ್ಣ ಕೆರೆ ಹಳ್ಳಗಳಲ್ಲಿ ಈಜಿ ದಾಟಿದ ಅನುಭವವಿತ್ತು. ಅದು ಮನಸ್ಸು ಮಾಡಿದ್ದರೆ, ಗುತ್ತಿ ಕೂಗಿ ಹೇಳಿದಂತೆ, ಸಿಂಬಾವಿ ಹೊಲೆಗೇರಿಗೆ ಹಿಂದಿರುಗಲೂ ಸುಲಭಸಾಧ್ಯವಾಗುತ್ತಿತ್ತು. ಆದರೆ ಗುತ್ತಿ ಯಾವ ಉದ್ದೇಶದಿಂದ ಕೂಗಿದ್ದನೋ ಅದಕ್ಕೆ ವಿರುದ್ಧವಾದ ಪರಿಣಾಮ ಉಂಟಾಯಿತು ನಯಿಯಲ್ಲಿ. ಹೊಳೆಗೆ ಹಾರಲು ಹಿಂದೆ ಮುಂದೆ ನೋಡುತ್ತಿದ್ದ ನಾಯಿ, ತನ್ನ ಯಜಮಾನನ ಧ್ವನಿಯನ್ನು ಕೇಳಿದೊಡನೆ, ತನ್ನನ್ನು ಕರೆಯುತ್ತಿದ್ದಾನೆಂದೇ ಭಾವಿಸಿ, ನೀರಿಗೆ ಧುಮುಕಿಯೆ ಬಿಟ್ಟಿತು!
“ಅಕ್ಕಳ್ರೋ ಹಾರೇ ಬಿಡ್ತಲ್ಲಾ ಹೋಳೀಗೆ!”
“ಈಜಿದ್ರೂ ಈಜಾತು! ಅದೇನು ಸಾಮಾನ್ಯದ್ದಲ್ಲ ಆ ನಾಯಿ!”
“ಅದ್ಯಕೋ ಅತ್ತತ್ಲಾಗೆ ಹೋಗ್ತದಲ್ಲಾ?”
“ಅದ್ಕೆ ಇತ್ಲಾ ಕಡೇ ಕಣ್ಣು ಕುಲ್ಡಾಗ್ಯದೆ.” ತನ್ನ ನಾಯಿಯ ಕಷ್ಟಕ್ಕೆ ವಿವರಣೆ ಕೊಟ್ಟನು ಗುತ್ತಿ.
“ಹಂಗಾರೆ ಒಕ್ಕಣ್ಣು ಶುಕ್ಲಾಚಾರಿ!” ಯಾರೋ ಒಬ್ಬರು ವಿನೋದ ವಾಡಲು, ಎಲ್ಲರೂ ನಕ್ಕರು.
“ಏನಾಯ್ತೋ ಕಣ್ಣಿಗೆ?” ಇನ್ನೊಬ್ಬನ ಪ್ರಶ್ನೆ, ಅಷ್ಟೇನೂ ಪ್ರಕೃತವಲ್ಲದ್ದು.
“ಕುರ್ಕನ ಕೈಲಿ ಜಟಾಪಟಿ ಆದಾಗ ಹಂಗಾಯ್ತು!” ಮತ್ತೆ ಗುತ್ತಿಯ ಹೆಮ್ಮೆಯ ಉತ್ತರ.
ಅಷ್ಟರಲ್ಲಿ ದೋಣಿ ಹೊಳೆಯಲ್ಲಿ ದಡಕ್ಕೆ ಹತ್ತಿರ ಹತ್ತಿರವಾಗಿಯೆ ಮೇಲೆಮೇಲಕ್ಕೆ ಹೋಗುತ್ತಿದ್ದುದನ್ನು ಗಮನಿಸಿ ಸಿಂಗಪ್ಪಗೌಡರು “ಏನೋ, ತಮ್ಮಯ್ಯಣ್ಣ, ಬುತ್ತಿಕಲ್ಲು ಬಂಡೆ ಕಡೆಗೆ ಹೋಗ್ತಾ ಇದೆಯಲ್ಲೋ ದೋಣಿ?” ಎಂದು ಟೀಕಿಸಿದರು. ಬೀಮ ಬುತ್ತಿ ಉಣ್ಣುವಾಗ ಅನ್ನದಲ್ಲಿ ಸಿಕ್ಕಿದ್ದ ಕಲ್ಲಂತೆ ಅದು, ಸುಮಾರು ಎರಡೂ ಮೂರು ಆನೆ ಗಾತ್ರದ್ದು! ಬೇಸಗೆಯಲ್ಲಿ ಮರಳಿನ ಮೇಲೆ ಪ್ರತ್ಯೇಕವಾಗಿ ಎಲ್ಲರ ಗೌರವಾಶ್ಚರ್ಯವನ್ನೂ ಸೆಳೆಯುತ್ತಾ ನಿಂತಿರುತ್ತದೆ, ಈಗ ಪ್ರವಾಹದಲ್ಲಿ ಮುಚ್ಚಿಹೋಗಿತ್ತು. ದೋಣಿ ಎಲ್ಲಿಯಾದರೂ ನೀರಲ್ಲಿ ಅಡಗಿರುವ ಅದರ ನೆತ್ತಿಗೆ ತಗುಲಿಬಿಟ್ಟೀತು ಎಂಬ ಹೆದರಿಕೆಯಿಂದಲೆ ಸಿಂಗಪ್ಪಗೌಡರು ಅಂಬಿಗನಿಗೆ ಎಚ್ಚರಿಕೆ ಕೊಟ್ಟಿದ್ದರು.
ಬೇರೆ ಯಾರಾದರೂ ಆಗಿದ್ದರೆ ತಮ್ಮಯ್ಯಣ್ಣ “ಕೂತುಕೊಳ್ಳೋ ನಿನ್ನ ಮುಂಡಾಮೋಚ್ತು! ನಿನ್ನ ಅಪ್ಪ ಅಜ್ಜನ ಕಲದಿಂದಲೂ ನಾನು ಇಲ್ಲಿ ದೋಣಿ ಬಿಡ್ತಿದ್ದೀನೋ. ನನಗೆ ಗೊತ್ತಿಲ್ಲಾ ಅಂತಾ ಹೇಳ್ತಾನೆ!” ಎಂದು ಮೂದಲಿಸಿ ಬಿಡುತ್ತಿದ್ದ. ಆದರೆ ಸಿಂಗಪ್ಪಗೌಡರಿಗೆ ಹೇಳಿದ್ದು “ಇಲ್ಲಾ, ಒಡೆಯಾ, ಹೊಳೆ ಏರ್ತಾ ಇದೆ, ಬಹಳ ಸೆಳವು. ಕೆಳಗೆ ಹೋದರೆ ಪೂರಾ ಕೆಳಗೇ ಎಳೆದುಬಿಡ್ತದೆ. ಅದಕ್ಕೆ ಸ್ವಲ್ಪ ಮೇಲುಮೇಲಕ್ಕೆ ಹೋಗಿ ತಿರುಗಿಸ್ತೀನಿ.
ದೋಣಿ ನದಿಯ ಮಧ್ಯಪ್ರವಾಹದ ಕಡೆಗೆ ಹೋದಷ್ಟೂ, ಅರಳಿಕಟ್ಟೆ ರಾಮೇಶ್ವರ ದೇವಸ್ಥಾನದ ಶಿಖರಾಗ್ರ ಮೊದಲಾದ ತೀರ್ಥಹಳ್ಳಿಯ ಕಡೆಯ ದಡದ ವಸ್ತುಗಳು ದೂರವಾಗಿ ಸಣ್ಣಗಾದಷ್ಟೂ ದೋಣಿಯಲ್ಲಿದ್ದ ಪ್ರಯಾಣಿಕರಿಗೆ ಪುಕ್ಕಲು ಹೆಚ್ಚತೊಡಗಿತ್ತು: ಅಷ್ಟು ಭೀಷಣ ಕ್ಷುಬ್ಧವಾಗಿತ್ತು ತುಂಗಾ ಪ್ರವಾಹ. ಮಳೆಯೂ ಇದ್ದಕ್ಕಿದ್ದಂತೆ ಮುಸಲಧಾರೆಯಾಗಿ ಸುರಿಯ ತೊಡಗಿತ್ತು. ಗಾಳಿ ಭಯಂಕರ ವೇಗದಿಂದ ಬೀಸಿತ್ತು. ಕೆಮ್ಮಣ್ಣು ಬಣ್ಣದ ಅಲೆಗಳು ದೋಣಿಯ ಪಕ್ಕಕ್ಕೆ ರೌದ್ರವಾಗಿ ಅಪ್ಪಳಿಸಿದ್ದುವು. ಮರಮಟ್ಟು ಸೊಪ್ಪುಸದೆ ಬಿದಿರಹಿಂಡಿಲು ಲತೆಂಗಿನಹೆಡಲು ಅಡಕೆಸೋಗೆ ಮೊದಲಾದುವು ನೊರೆಗೆರೆಯುತ್ತಿದ್ದ ನೀರಿನಲ್ಲಿ ಭಯಂಕರ ವೇಗದಿಂದ ಓಡುತ್ತಿರುವ ನೋಟ ಹೆದರಿಕೆ ಹುಟ್ಟಿಸಿತ್ತು. ಅದರಲ್ಲಿಯೂ ಹಾಗೆ ಓಡುತ್ತಿದ್ದ ದೊಡ್ಡ ದಿಮ್ಮಿಯ ಮರಗಳೂ ಕೂಡ ಹೊಳೆಯ ನಡುವೆ ಸುಂಟರು ಸುಳಿಗೆ ಸಿಕ್ಕಿ ಗಿರ್ರನೆ ತಿರುಗಿ ತಿರುಗಿ ಕಂತಿಹೋಗುತ್ತಿದ್ದ ದೃಶ್ಯವಂತೂ ಭೈಆನಕವಾಗಿತ್ತು.  ಆ ಆವರ್ತಗರ್ತಕ್ಕೆ ದೋಣಿ ಸಿಕ್ಕರೆ ಏನು ಗತಿ ಎಂದು ಕೆಲವರು ದೇವರನ್ನು ನೆನೆಯುತ್ತಿದ್ದರು: ಹೇಗಾದರು ದಡ ಸೇರಿಸಪ್ಪಾ ಎಂದು! ಹೆಚ್ಚಿತ್ತಿದ್ದ ಪುಕ್ಕಲಿಗೆ ದೋಣಿಯ ಪ್ರಯಾಣಿಕರ ಪ್ರತಿಕ್ರಿಯೆ ವಿವಿಧವಾಗಿತ್ತು. ಕೆಲವರಲ್ಲಿ ಮಾತು ನಿಂತು ಹೋಯಿತು; ಕೆಲವರು ಹೃದಯದ ಹೆದರಿಕೆಯನ್ನು ಮುಚ್ಚಿಕೊಳ್ಳುವುದಕ್ಕೋ ಮರೆಯುವುದಕ್ಕೋ ಸುಮ್ಮನೆ ಅದೂ ಇದೂ ಗಳಪತೊಡಗಿದರು. ಒಬ್ಬಿಬ್ಬರು ಹೊಳೆಯ ಕಡೆ ನೋಡುವುದನ್ನೆ ಬಿಟ್ಟು, ತಲೆ ಬಗ್ಗಿಸಿ ದೋಣಿಯ ತಳದ ತಮ್ಮ ಪಾದಗಳನ್ನೆ ನೋಡುತ್ತಾ ಕುಳಿತುಬಿಟ್ಟರು! ಗಂಡನ ಪಕ್ಕದಲ್ಲಿ ಅವನಿಗೆ ಎದುರಾಗಿ ಕುಳಿತಿದ್ದ ತಿಮ್ಮಿ ದೋಣಿಯ ಇಕ್ಕೆಲಗಳನ್ನು ತನ್ನೆರಡು ಕೈಗಳಿಂದಲೂ ಬಲವಾಗಿ ಅದುಮಿಹಿಡಿದು, ಕಣ್ಣುಮುಚ್ಚಿಕೊಂಡೆ ತಲೆಯನ್ನು ಬಗ್ಗಿಸಿ ಕುಳಿತುಬಿಟ್ಟಿದ್ದಳು! ಗುತ್ತಿ ಮತ್ತಾವುದನ್ನೂ ಒಂದಿನಿತೂ ಗಮನಿಸದೆ ಸರ್ವೇಂದ್ರಿಯ ಪ್ರಾಣಗಳೂ ಏಕದೃಷ್ಟಿಯಾಗಿ ತನ್ನ ನಾಯಿಯ ಕಡೆಗೇ, ಬಿಟ್ಟ ಕಣ್ಣು ಮುಚ್ಚದೆ, ತನ್ನಾ ನೋಡುವಿಕೆಯೆ ಹುಲಿಯನಿಗೆ ಬಲವೂ ಬೆಂಬಲವೂ ಆಗಿ ಅದನ್ನು ರಕ್ಷಿಸುವುದೋ ಎಂಬಂತೆ, ನೋಡುತ್ತಾ ಉದ್ವಿಗ್ನ ಚಿಂತಾಕ್ರಾಂತನಾಗಿ ತುದಿಗಾಲಿನ ಮೇಲೆಯೆ ಕುಳಿತಿದ್ದನು, ಯಾವ ಸಮಯಕ್ಕೆ ನಾಯಿಗೆ ಸಹಾಯ ಬೇಕಾದರೂ ಒಡನೆಯೆ ಅದನ್ನು ನೀಡಲು ಹಾತೊರೆಯುತ್ತಿರುವ ಭಂಗಿಯಲ್ಲಿ!
ದೋಣಿ ಹೊಳೆಯ ದಂಡೆಗೆ ಸಮೀಪವಾಗಿ ಹೊನಲಿನಲ್ಲಿ ಪಶ್ಚಿಮ ದಿಙ್ಮುಖವಾಗಿ ಮೇಲಕ್ಕೆ ಹೋಗುತ್ತಿದ್ದಷ್ಟೂ ಕಾಲವೂ ಹುಲಿಯ ಅದನ್ನು ಹಿಂಬಾಲಿಸಿ ನೀರಿಗೆ ಎದುರಾಗಿಯೇ ತನ್ನ ಬಲವನ್ನೆಲ್ಲ ಉಪಯೋಗಿಸಿ ಈಜಿತ್ತು. ಆದರೆ ಯಾವಾಗ ದೋಣಿಯ ಮುಖವನ್ನು ಅಂಬಿಗರು, ಆಚೆಯ ದಡಕ್ಕೆ ಒಯ್ಯುವ ಉದ್ದೇಶದಿಂದ, ದಕ್ಷಿಣದಿಕ್ಕಿಗೆ ತಿರುಗಿಸಿ, ಹೊನಲಿನ ರಭಸಕ್ಕೆ ಸಮಗೈಯಾಗಲೆಂದು, ಜೋರಾಗಿ ಹುಟ್ಟು ಹಾಕಲು ಷುರುಮಾಡಿದರೊ ಆಗ ಹುಲಿಯನ ಶಕ್ತಿ ಪ್ರವಾಹದ ವೇಗಕ್ಕೆ ಶರಣಾಗಬೇಕಾಯಿತು. ಗುತ್ತಿ ಮತ್ತು ಇತರ ಆಸಕ್ತರಾಗಿದ್ದ ಕೆಲವರು ನೋಡುತ್ತಿದ್ದಂತೆಯೆ ಹುಲಿಯ ದೋಣಿಯಿಂದ ದೂರದೂರವಾಗತೊಡಗಿತು: “ಛೆ ಪಾಪ! ನೀರಿನ ರಭಸ ಪೂರಾ ಇದೆ. ಹೆಂಗೆ ಈಜ್ತದೆಯೋ ಬಡಪಾಯಿ?….” “ಅಯ್ಯಯ್ಯೋ ಸುಳಿಗೆ ಸಿಕ್ಕಿ ಮುಳುಗಿ ಬಿಡ್ತಲ್ಲಾ ನಾಯಿ!”….“ಇಲ್ಲ, ಇಲ್ಲಾ, ತಲೆ ಎತ್ತಿತ್ತು ಕಾಣಿ, ಅತ್ತಕಡೆ, ಬಲಗಡೇಲಿ!”….“ಅಯ್ಯಯ್ಯೋ ಕೊಚ್ಚಿ ಹೋಗುವ ಬಿದಿರ ಹಿಂಡಿಲಿಗೇ ಹತ್ತಕ್ಕೆ ನೋಡ್ತಾದಲ್ಲಾ! ಬಿದಿರಿಗೆ ಸಿಕ್ಕರೆ ಆಯ್ತು ಅದರ ಗತಿ!” ಅಲೆಗಳ ಹೊಡೆತಕ್ಕೆ ಸಿಕ್ಕಿ ಒಮ್ಮೆ ಮುಳುಗಿ, ಒಮ್ಮೆ ತಲೆ ಎತ್ತಿ, ಕೊಚ್ಚಿ ಹೋಗುತ್ತಿದ್ದ ತನ್ನ ನಾಯಿ ಬಿದಿರ ಹಿಂಡಿಲಿಗೆ ಸಿಕ್ಕಿ ಸಾಯುತ್ತದೆ ಎಂದು ನಿಶ್ಚಯಿಸಿ ನೋಡುತ್ತಿದ್ದ ಗುತ್ತಿ “ಅಯ್ಯಪ್ಪಾ, ಸಕು!” ಎಂದು ನಿಟ್ಟುಸಿರೆಳೆದನು, ಬಿದಿರ ಹಿಂಡಿಲು ನಯಿಗೆ ಎಟುಕದ ವೇಗದಲ್ಲಿ ಅದನ್ನು ದಾಟಿ ಹೋದಾಗ! ಉತ್ತೇಜನ ಕೊಡುವ ಹಂಬಲದಿಂದ ಗುತ್ತಿ ಕೂಗಿದನು: “ಈಜು! ಈಜು, ಹುಲಿಯಾ!” ನಾಯಿಗೆ ಅದು ಕೇಳಿಸಿತೊ ಇಲ್ಲವೊ? ಅಂತೂ ಅವನು ಕೂಗಿದುದಕ್ಕೊ ಎಂಬಂತೆ ಹುಲಿಯ ಮತ್ತೆ ದೋಣಿಯ ಕಡೆ ಬರುತ್ತಿದ್ದಂತೆ ತೋರಿ, ಗುತ್ತಿಯ ಹೃದಯ ಹಿಗ್ಗಿತು!
ಆದರೆ ನಡೆದಿದ್ದ ಸಂಗತಿ ಬೇರೆಯಾಗಿತ್ತು. ದೊಡ್ಡದೊಂದು ಹೆಮ್ಮರ ನಡುಹೊಳೆಯ ಪ್ರವಾಹದಲ್ಲಿ ಮೇಲುಗಡೆಯಿಂದ ತೇಲಿ ಬರುತ್ತಿದ್ದುದನ್ನು ಕಂಡು ಅಂಬಿಗರುಮ ಅದಕ್ಕೆ ಅಡ್ಡಲಾಗುವ ಬದಲು ಆ ಮರ ಕೊಚ್ಚಿ ಕೆಳಗೆ ಹೋದಮೇಲೆಯೆ ಅತ್ತ ದೋಣಿ ಬಿಡುವುದು ಕ್ಷೇಮಕರ ಎಂದು, ಸ್ವಲ್ಪ ಕ್ಷಣ ಹುಟ್ಟುಹಾಕುವುದನ್ನು ನಿಲ್ಲಿಸಿದ್ದರಿಂದ ದೋಣಿ ಕೆಳಗೆ ಕೊಚ್ಚಿ ಹೋಗಿ ನಾಯಿಯನ್ನು ಸಮೀಪಿಸುತ್ತಿತ್ತು. ಗುತ್ತಿ ನೋಡುತ್ತಿದ್ದಂತೆಯೆ ಹುಲಿಯನ ತಲೆ ಅಲೆಗಳ ನಡುವೆ ಹೊಯ್ದಾಡುತ್ತಿದ್ದದ್ದು ಸ್ಪಷ್ಟವಾಗಿ ಕಾಣಿಸಿತು. “ಬಾ, ಹುಲಿಯಾ, ಬಾ!” ಎಂದು ಗಂಟಲು ಸೀಳಿ ಹೋಗುವಂತೆ ಗಟ್ಟಿಯಾಗಿ ಕೂಗಿದನು. ನಾಯಿ ಇನ್ನೂ ಬಳಿಸಾರಿತು ದೋಣಿಗೆ. ಕ್ಷೀಣವಾಗುತ್ತಿದ್ದರೂ ತನ್ನ ಉಳಿದ ಅಲ್ಪ ಸ್ವಲ್ಪ ಬಲವನ್ನೆಲ್ಲ ಉಪಯೋಗಿಸಿ ಅದು ಪ್ರಾಣಭಯದಿಂದ ಮಾತ್ರ ಹೋರಾಡುತ್ತಿದ್ದಂತೆ ತೋರಿತು. ಗುತ್ತಿಗೆ ತಟಕ್ಕನೆ ಒಂದು ಉಪಾಯ ಹೊಳೆಯಿತು: ತನ್ನ ತಲೆವಸ್ತ್ರದ ತುದಿಯನ್ನು, ನಾಯಿ ಇನ್ನೂ ಸಮೀಪಕ್ಕೆ ಬಂದಾಗ, ಅದರ ಮುಖದ ಹತ್ತಿರಕ್ಕೆ ಬೀಳುವಂತೆ ಎಸೆದರೆ ಅದನ್ನು ಕಚ್ಚಿಕೊಂಡರೂ ಕಚ್ಚಿಕೊಳ್ಳಬಹುದು. ಆಗ ಅದನ್ನು ಎಳೆದು ದೋಣಿಗೆ ಎತ್ತಿಕೊಂಡರೆ! ಅಂಬಿಗ ತಮ್ಮಯ್ಯಣ್ಣನಿರಲಿ, ಧಣಿ ಚಂದ್ರಯ್ಯಗೌಡರು ಬೈದರೂ ಬೈಯಲಿ! ನನ್ನ ಪುರಾಣ ಹೋದರೂ ಚಿಂತಿಲ್ಲ!
ಹತ್ತಿರ ಹತ್ತಿ, ಹತ್ತಿರ, ಹತ್ತಿರ ಬಂದಿತು ನಾಯಿ. ಎಷ್ಟು ಹತ್ತಿರವಾಯಿತು ಎಂದರೆ, ದೋಣಿ ನಾಯಿಯ ಮೇಲೆಯೆ ಹೋಗಿ, ಅದು ಅಡಿ ಸಿಕ್ಕಿಬಿಡುತ್ತದೆ ಎಂದು ಶಂಕಿಸಿದರು ಕೆಲವರು. “ಹುಲಿಯಾ!ಹುಲಿಯಾ!ಹುಲಿಯಾ!” ಎಂದು ಕರೆಯುತ್ತಲೆ ಇದ್ದನು ಗುತ್ತಿ. ಹುಲಿಯನಿಗೂ ಪ್ರೀತಿಯ ಯಜಮಾನನ ಧ್ವನಿ ಕೇಳಿಸಿತು. ಅಲೆಗಳಲ್ಲಿ ಹೋರಾಡುತ್ತಲೆ ದೋಣಿಯ ಕಡೆ ಕಣ್ಣೆತ್ತಿ ನೋಡಿ ಗುತ್ತಿಯನ್ನು ಗುರುತಿಸಿತು. ಅವನು ವಸ್ತ್ರಸಹಿತ ನೀಡಿದ್ದ ಆ ಮೈತ್ರಿಯ ಕೈಗೆ ಸೇರುವಾಸೆಯಿಂದ, ತನ್ನ್ನು ನಿಷ್ಕರುಣೆಯಿಂದ ನೂಕುತ್ತಿದ್ದ ಅಲೆಗಳನ್ನು ನೂಕಿ ನೂಕಿ, ತನ್ನ ಕೊನೆಯ ಬಲವನ್ನೆಲ್ಲ ಪ್ರಯೋಗಿಸಿ ಹೋರಾಡಿತು. ಗುತ್ತಿ ದೋಣಿಯ ಒಂದು ಪಕ್ಕದ ಮೇಲೆ ಎಡಗೈಯ್ಯೂರಿ ವಸ್ತ್ರದ ಒಂದು ತುದಿ ಹಿಡಿದುಕೊಂಡು ಇನ್ನೊಂದು ತುದಿಯನ್ನು ಹುಲಿಯನ ಮುಖದ ಕಡೆಗೆ ಬೀಸಿದನು….
ಹತ್ತಾರು ಭೀತವಾಣಿಗಳು ಕೂಗಿಕೊಂಡುವು: ದೋಣಿ ಅವನ ಭಾರಕ್ಕೂ ಚಿಮ್ಮಿದ ರಭಸಕ್ಕೂ ತುಯ್ದುಬಿಟ್ಟಿತು: “ತೆಗೆದಿದ್ದಲ್ಲೋ, ಲೌಡಿ ಮಗನೆ, ಕೂತುಗೂತೀಯೋ ಇಲ್ಲೋ ಸುಮ್ನೆ!” “ನಮ್ಮನ್ನೆಲ್ಲಾ ಹೊಳೀಗೆ ಹಾಕ್ತಾನಲ್ರೋ! ಹೊಡೆದು ಕೂರಿಸ್ರೋ ಹೊಲೆಸೂಳೆಮಗನ್ನ!” “ಏ ಹುಡುಗೀ ಅವನ ಹೆಡ್ತೀ, ಹಿಡಿದು ಕೂರ‍್ಸೇ ನಿನ್ನ ಗಂಡನ್ನಾ!” “ಅಯಸ್ಸು ಕಾಡಿದೋರ ಸಂಗಡ ದೋಣೀಗೆ ಹತ್ತಿದ್ರೆ ಆಳಿಗೊಂದು ಗುಟುಗು ನೀರಂತೆ! ಈ ಬೋಳಿಮಗನ್ನ ದೋಣಿ ಹತ್ತಿಸಿದ್ದೆ ತಪ್ಪಾಯ್ತು!” “ಅವನ ನಾಯೀ ಜೊತೇಗೇ ಅವನ್ನೂ ಕಳಿಸ್ರೋ!” “ಮುಂದೇಮಗನಿಗೆ ಹೆಂಡ್ತೀನೂ ಬ್ಯಾಡಾಗದೆ ಅಂತಾ ಕಾಣ್ತದೆ! ಬಿದ್ದು ಸಾಯ್ತಾನೆ, ನೀರಿಗೆ!”
ಆ ತುಮುಲ ಬೈಗುಳದ ಕೂಗಿಗೂ ದೋಣಿ ತುಯ್ದುದಕ್ಕೂ ಗುತ್ತಿ ಕಂಗಾಲಾದನು. ನಯಿ ವಸ್ತ್ರದ ತುದಿಯನ್ನು ನಿಜವಾಗಿಯೂ ಕಚ್ಚಿತೊ ಇಲ್ಲವೊ? ಆದರೆ ಗುತ್ತಿಗೆ ಅದು ವಸ್ತ್ರದ ತುದಿಯನ್ನು ಕಚ್ಚಿಕೊಂಡಂತೆ ಭಾಸವಾಗಿ ಅದನ್ನು ಎಳೆದುಕೊಂಡನು. ಆದರೆ ತಟಕ್ಕನೆ ಹುಲಿಯ ವಸ್ತ್ರದ ತುದಿಯನ್ನು ಬಿಟ್ಟಂತಾಗಿ ಗುತ್ತಿ ದೋಣಿಯೊಳಕ್ಕೆ ತಿಮ್ಮಿಯ ತೊಡೆಯ ಮೇಲೆ ಬಿದ್ದನು: ಬೇರೆ ಸಮಯವಾಗಿದ್ದರೆ ನಗೆಯ ಬುಗ್ಗೆ ಗೊಳ್ಳೆಂದು ಉಕ್ಕದೆ ಇರುತ್ತಿರಲಿಲ್ಲ. ಆದರೆ ಆಗ ದೋಣಿ ನದೀಪ್ರವಾಹದ ರಭಸದ ಕೇಂದ್ರದಲ್ಲಿ ಹೋರಾಡುತ್ತಿತ್ತು. ಕೊಚ್ಚಿ ಬರುತ್ತಿದ್ದ ಹೆಮ್ಮರ ಕೆಳಗೆ ತೇಲಿಹೋಗಿದ್ದರಿಂದ ಅಂಬಿಗರಿಬ್ಬರೂ ಉಗ್ರೋಗ್ರ ಸಾಹಸದಿಂದ ಹುಟ್ಟುಹಾಕತೊಡಗಿದ್ದರು.
ಗಾಳಿ ಜೋರಾಗಿ ಬೀಸಿತ್ತು. ಮಳೆಯೂ ಮುಗಿಲೇ ಹಿಸಿದು ಬೀಳುವಂತೆ ಸುರಿಯುತ್ತಿತ್ತು. ದೋಣಿಯನ್ನು ಪ್ರವಾಹಕ್ಕೆದುರಾಗಿ ಸ್ವಲ್ಪ ಮೇಲಕ್ಕೊಯ್ಯುವ ಅಂಬಿಗರ ಪ್ರಯತ್ನ ವಿಫಲವಾಗಿ ದೋಣಿ ಕೆಳಕ್ಕೇ ಹೋಗತೊಡಗಿತು.
ತಮ್ಮಯ್ಯಣ್ಣ ನೋಡುತ್ತಾನೆ: ಗೌಡರುಗಳು ಕುಳಿತಲ್ಲಿ ಕೊಡೆಗಳು ಸೂಡಿವೆ! ಅವನಿಗೆ ಗೊತ್ತಾಯ್ತು, ಕೊಡೆ ಸೂಡಿಕೊಂಡವರು ಗೌಡರುಗಳೆ ಎಂದು. ಆದರೆ ಸನ್ನಿವೇಶ ಉಗ್ರವಾಗಿತ್ತು: ಗಟ್ಟಿಯಾಗಿ ಅಬ್ಬರಿಸಿ ಗದರಿಸಿದನು: “ಯಾರ್ರೋ ಅದೂ? ಕೊಡೆ ಸೂಡಿದೋರು? ಸೀಡಿಸ್ತೀರೋ ಇಲ್ಲೋ! ಕಾಣಾದಿಲ್ಲೇ ಗಾಳಿ ಬೀಸಾದು?”
ಕೊಡೆಗಳೆಲ್ಲ ಮುಚ್ಚಿದ ಮೇಲೆ ದೋಣಿ ಮೇಲಕ್ಕೆ ಹೋಗಲಾರಂಭಿಸಿ ತಕ್ಕಮಟ್ಟಿಗೆ ಅಂಬಿಗರ ಹತೋಟಿಗೆ ಒಳಗಾಯಿತು.
ಸಪ್ಪೆ ಮೋರೆ ಹಾಕಿಕಕೊಂಡು ನದಿಯ ತುಮುಲ ತರಂಗಮಯ ಪ್ರವಾಹ ವಿಸ್ತಾರವನ್ನೆ ನೋಡುತ್ತಿದ್ದ ಗುತ್ತಿಗೆ, ದೋಣಿ ದಡ ಮುಟ್ಟುವ ವಿಚಾರದಲ್ಲಿ ಸ್ವಲ್ಪ ನಂಬಿಕೆ ಬಂದು ಧೈರ್ಯಗೊಂಡ ಒಬ್ಬ ವ್ಯಕ್ತಿ: “ಏನೋ, ಹೊಲೆಯಾ, ಯಾಕೆ ಸತ್ತೋರ ಮನೇಲಿ ಕೂತ್ಹಾಂಗೆ ತಲೆ ಮ್ಯಾಲೆ ಕೈ ಹೊತ್ತುಕೊಂಡು ಕೂತೀಯಾ? ನಿನ್ನ ನಯಿ ಹಿಂದಕ್ಕೆ ಹೋಗಿರಬೇಕೋ ಆಚೆ ದಡಕ್ಕೆ, ಮಕಾ ಅತ್ತಮಕಾನೆ ಹಾಕ್ಕೊಂಡು ಮೀಸ್ತಿತ್ತು ನಾ ನೋಡಿದಾಗ” ಎಂದನು ಸಮಾಧಾನ ಹೇಳುವವನಂತೆ.
“ನಂಗೂ ಹಾಂಗೆ ಕಂಡ್ತಪ್ಪಾ: ದೂರದಾಗೆ ತಲೆ ಕಂಡ್ಹಂಗೆ ಆಗ್ತಿತ್ತು! ಅದಕ್ಕೇನು ಧಾಡಿ? ದಿಂಡೆ ದುಣ್ಣದಾಂಡಿಗ ನಾಯಿ! ಈಜಿಕೊಂಡು ಹೋಯಿತು ಅಂತಾ ಕಾಣ್ತದೆ ಹಿಂದಕ್ಕೆ ಮನೀಗೆ!” ಸೇರಿತು ಮತ್ತೊಬ್ಬನ ಸಾಂತ್ವನ ವಾಣಿ.
“ನಿಂಗೇನು ಹುಚ್ಚೋ? ಬೆಪ್ಪೋ? ಈ ನೆರೇಲಿ ಅದು ಈಜಿ ದಡ ಸೇರಿಬಿಟ್ರೆ ನಾ ಮೂಗು ಕೊಯ್ಸಿಕೊತೀನಿ!” ಇನ್ನೊಬ್ಬ ತರುಣನ ಪಂಥಪಾಡು.
“ಕುಯ್ಸಿಕೋತೀಯೇನೋ ಬದ್ದೇಗೂ?….ಸುಳ್ಳಾ!” ಮತ್ತೊಬ್ಬ ಹುಡುಗನ ಸವಾಲು.
“ನಿನ್ನಪ್ಪಗೆ ಹೇಳು, ಸುಳ್ಳಾ ಅಂತಾ, ನಂಗೆ ಅಂದರೆ ಹಲ್ಲು ಉದುರ್ಸೇನು!”
ಆ ಹುಡುಗ ಆ ತರುಣನಿಗೆ ಉತ್ತರ ಕೊಡುವ ತಂಟೆಗೆ ಹೋಗಲಿಲ್ಲ. ಬದಲಾಗಿ ಗುತ್ತಿಯನ್ನು ಕುರಿತು, ಅವನ ನಾಯಿ ಆಚೆ ದಡ ಸೇರಿ ಬದುಕಿರುವುದರಲ್ಲಿ ಯಾವ ಸಂದೇಹವೂ ಬೇಡ ಎಂದುಕ ಆಶ್ವಾಸನೆ ನೀಡಿದನು: “ಅಂಥಾ ನಾಯಿ ಎಂದಾದ್ರೂ ಹೊಳೇಲಿ ಮುಳುಗಿ ಸಾಯ್ತದೇನೋ?”….
ದೋಣಿ ದಡ ಮುಟ್ಟಿ ನಿಂತಿತು. ಅಂಬಿಗ ತಮ್ಮಯ್ಯಣ್ಣ ಯಾವುದೋ ಸನ್ನಿಹಿತವಾಗಲಿದ್ದ ಮಹಾ ಅನಾಹುತದಿಂದ ಪಾರಾದವನಂತೆ ಉಸ್ಸಪ್ಪಾ ಎನ್ನುತ್ತಾ ಮರಳಿಗೆ ಹಾರಿ, ದೋಣಿಯ ಪಕ್ಕವನ್ನು ಹಿಡಿದೆಳೆದನು, ದಂಡೆಗೆ ಚಾಚಲೆಂದು, ಇಳಿಯುವ ಗೌಡರಿಗೆ ಅನುಕೂಲವಾಗುವಂತೆ. ಪ್ರಯಾಣಿಕರೆಲ್ಲ ಇಳಿದರು. ಹಾಗೆಯೆ ತೀರ್ಥಹಳ್ಳಿಯ ಕಡೆ ಹೋಗಲು ಕಾಯುತ್ತಿದ್ದವರು ಹತ್ತತೊಡಗಿದರು. ಅವರಿಗೆ ತಮ್ಮಯ್ಯಣ್ಣ ಹೇಳಿದನು ದಣಿದ ದನಿಯಲ್ಲಿ: “ಸೊಲೂಪ ತಡೀರಣ್ಣ. ಮಳೆ, ಗಾಳಿ ಒಂದೀಟು ಕಡಿಮೆಯಾದ ಮ್ಯಾಲೆ ಹೊಲ್ಡಾನ!”
ಗುತ್ತಿಯೂ ಹೊಯಿಗೆ ದಂಡೆಗೆ ಇಳಿದು ನಿಂತು, ತಿಮ್ಮಿಯನ್ನೂ ಕೈಹಿಡಿದು ಮೆಲ್ಲನೆ ಇಳಿಸಿದನು. ತಮ್ಮ ಸಾಮಾನಿನ ಗಂಟನ್ನು ಎತ್ತಿ ಕೊಟ್ಟನು ಅವಳ ಕೈಗೆ. ತನ್ನ ನಿರುದ್ವಿಗ್ನವಾದ ನಿತ್ಯಯಾತ್ರೆಯಲ್ಲಿ ಮಗ್ವವಾಗಿ ಮಹಾ ರಭಸದಿಂದ ಮುಂಬರಿಯುತ್ತಿದ್ದ ವರ್ಷಾಕಾಲದ ವಿಶಾಲ ನದೀಪ್ರವಾಹದತ್ತ ನಿರ್ನಿಮೇಷನಾಗಿ ದೃಷ್ಟಿ ಹಾಯಿಸಿದನು. ಎಲ್ಲಿಯೂ ಅವನ ಹುಲಿಯನ ಸುಳಿವಿರಲಿಲ್ಲ.
“ಏಯ್ ಕುಳ್ಳಸಣ್ಣ, ಈ ಸಮಾನು ಹೊತ್ತುಕೊಳ್ಳೊ.” ಚಂದ್ರಯ್ಯಗೌಡರು ಕರೆದಾಗಲೆ ಎಚ್ಚರಗೊಂಡಂತಾಗಿ ಅವರತ್ರ ತಿರುಗಿದನು ಗುತ್ತಿ:
“ಅಯ್ಯಾ, ಆ ನಾಯಿ ಇಲ್ಲೆಲ್ಲಾದ್ರೂ ಕೆಳಗೆ ದಡ ಹತ್ತಿದೆಯೇನು ನೋಡಿಕೊಂಡು ಬತ್ತೀನಿ….” ಎಂದನು ದುಃಖ ಧ್ವನಿಯಲ್ಲಿ.
“ನಿಂಗೇನು ಹುಚ್ಚೋ?ಬೆಪ್ಪೋ? ಈ ನೆರೇಲಿ ಅದು ದಡ ಸೇರೋದು ಹೌದೇನೊ? ಹೊಳೇಬುಡ ಸೇರಿದ್ದರೆ ಸೇರಿರಬೇಕು” ಎಂದರು ಸಿಂಗಪ್ಪಗೌಡರು. ಅವರ ಚಿತ್ತ ಸಂಗಲಿಪ್ತವಾಗಿರಲಿಲ್ಲ ಗುತ್ತಿಯ ಹೃದಯದಂತೆ.
“ಹೋಗಲಿ ಬಿಡಿ, ನೋಡಿಕೊಂಡೇ ಬರಲಿ” ಎಂದ ಶಾಮಯ್ಯಗೌಡರು, ಗುತ್ತಿ ಹೊಳೆಯ ದಂಡೆಯ ಗಿಡ ಮರ ಪೊದೆಗಳಲ್ಲಿ ನುಗ್ಗಿ ಕಣ್ಮರೆಯಾದ ಮೇಲೆ ಹೇಳಿದರು “ಪಾಪ! ಲೌಡಿಮಗ ಕಣ್ಣಲ್ಲಿ ನೀರು ಹಾಕ್ತಿದಾನೆ! ಬಹಳ ಪ್ರೀತಿಯಿಂದ ಸಾಕಿದ್ದ ಅಂತಾ ಕಾಣ್ತದೆ?”
ಚಂದ್ರಯ್ಯಗೌಡರು ದೂರದಲ್ಲಿ ತನ್ನ ಗಂಡ ಹೋದ ಅತ್ತಕಡೆ ಮುಖ ತಿರುಗಿಸಿಕೊಂಡು ನಿಂತಿದ್ದ ತಿಮ್ಮಿಗೆ “ಹೌದೇನೆ, ಹುಡುಗೀ? ಎಷ್ಟು ಕಾಲ ಆಗಿತ್ತೇ ಆ ನಾಯಿ ಅವನ ಹತ್ರ ಇರ್ತಾ?” ಎಂದರು.
ಅವಳು ಮಾತನಾಡಲೂ ಇಲ್ಲ; ಮುಖ ತಿರುಗಿಸಲೂ ಇಲ್ಲ.
ಸ್ವಲ್ಪ ಹೊತ್ತಾದ ಮೇಲೆ ಗುತ್ತಿ ಹಿಂತಿರುಗಿದನು, ಒಬ್ಬನೆಯೆ!
*****

ಕಾಮೆಂಟ್‌ಗಳಿಲ್ಲ: