ಸ್ವಾಭಿಮಾನಿ ಸರದಾರ

ಓರ್ಟನ್‌ ಉತ್ತರ ಸ್ಕಾಟ್‌ಲ್ಯಾಂಡಿನ ಒಂದು ಪ್ರದೇಶ. ಸರ್ ರಾಬರ್ಟ್‌ ಇನ್ಸ್ ಅಲ್ಲಿನ ಸರದಾರ. ಅವನು ತನ್ನ ಹತ್ತೊಂಭತ್ತನೆಯ ವಯಸ್ಸಿನಲ್ಲೆ ತಂದೆ ತಾಯಿಗಳನ್ನು ಕಳೆದುಕೊಂಡಿದ್ದ. ಹಾಗೆಯೇ ತನ್ನ ಸಂಪತ್ತನ್ನೂ ಕಳೆದುಕೊಂಡು ಬಡವನಾಗಿದ್ದ. ಆದರೆ ‘ಸರದಾರ’ ಬಿರುದು ಮಾತು ಇನ್ನೂ ಉಳಿದುಕೊಂಡಿತ್ತು. ಈ ಸ್ಥಿತಿ ಬೇರೆಯವರಿಗೆ ಬಂದಿದ್ದರೆ ಅವರು ಪರರ ಸಹಾಯ ಬಯಸುತ್ತಿದ್ದರು. ಆದರೆ ಆತ ಬಹಳ ಸ್ವಾಭಿಮಾನಿ. ಯಾರ ಮುಂದೂ ಕೈಯೊಡ್ಡಿ ಬೇಡುವುದು ಅವನಿಗೆ ಸರಿಬರಲಿಲ್ಲ. ತಾನು ಶ್ರಮಪಟ್ಟು ದುಡಿಯಬೇಕು. ತನ್ನ ಅನ್ನ ತಾನು ಗಳಿಸಬೇಕು. ಇದು ಅವನ ನಿರ್ಧಾರ. ಹಾಗೆಂದು ಅವನಿಗೆ ಯಾವ ಕೆಲಸವೂ ಬಾರದು. ಆದಕಾರಣ ಆತ ಸೈನ್ಯಕ್ಕೆ ಸೇರಿದ. ಸಾಮಾನ್ಯ ಸೈನಿಕನಾಗಿ ದುಡಿಯತೊಡಗಿದ.
ಒಂದು ದಿನ ಸೇನಾಕಚೇರಿ ಎದುರುಗಡೆ ಆತ ಕಾವಲು ನಿಂತಿದ್ದ. ಅಷ್ಟರಲ್ಲಿ ಒಬ್ಬ ಗೃಹಸ್ಥ ಅಲ್ಲಿಗೆ ಬಂದ. ಸರ್ ರಾಬರ್ಟ್‌ ಇನ್ಸ್‌ನನ್ನು ಆತ ಈ ಮೊದಲೊಮ್ಮೆ ಕಂಡಿದ್ದ. ಆದರೆ ಅವನು ಸೈನ್ಯಕ್ಕೆ ಸೇರಿದ ಸಂಗತಿ ಅವನಿಗೆ ತಿಳಿದಿರಲಿಲ್ಲ. ಮಾತುಕತೆ ನಡೆಸಿದಾಗ ತನ್ನ ಇದಿರು ಸಾಮಾನ್ಯ ಸೈನಿಕನಾಗಿ ನಿಂತವನು ಸರ್ ರಾಬರ್ಟ್ ಇನ್ಸ್‌ ಎನ್ನುವುದು ಆತನಿಗೆ ಖಚಿತವಾಯಿತು. ಜೊತೆಯಲ್ಲಿ ಆಶ್ಚರ್ಯವೂ ಆಯಿತು ಆದರೆ ಅವನು ಅದನ್ನು ತೋರಗೊಡಲಿಲ್ಲ. ನೇರಾಗಿ ಸೇನಾಪತಿಯ ಕೊಠಡಿಯನ್ನು ಪ್ರವೇಶಿಸಿದ. ಅಲ್ಲಿ ಮಾತಾಡುತ್ತಿದ್ದಾಗ ಸರ್ ರಾಬರ್ಟ್‌ ಇನ್ಸ್‌ ಅವರಂತಹ ಸರದಾರರನ್ನು ಕಾವಲುಗಾರನಾಗಿ ಪಡೆದ ಸೇನಾಧಿಪತಿ ಬಲುದೊಡ್ಡ ಭಾಗ್ಯಶಾಲಿಯೆಂದು ಸೇನಾ ಮುಖ್ಯಸ್ಥನನ್ನು ಅವನು ಕೊಂಡಾಡಿದ ತನ್ನ ಕಚೇರಿಯ ಕಾವಲುಗಾರನಾಗಿ ಇರುವಾತ ಸರ್ ರಾಬರ್ಟ್‌ ಇನ್ಸ್‌  ಎಂಬುದನ್ನು ಕೇಳಿ ಸೇನಾಪತಿಗೆ ಆಶ್ಚರ್ಯವಾಯಿತು ಒಡನೆ ಆತ ಇನ್ನೊಬ್ಬ ಸೈನಿಕನನ್ನು ಕರೆದು ಕಚೇರಿಯ ಮುಂದುಗಡೆ ಕಾವಲು ನಿಂತವನನ್ನು ಒಳಗೆ ಕಳಿಸಿಕೊಡುವಂತೆ ಆಜ್ಞಾಪಿಸಿದ.
ಕಾವಲುಗಾರ ಸೇನಾಪತಿಯ ಇದಿರು ಪ್ರತ್ಯಕ್ಷನಾದ. ಅವನನ್ನು ಅಡಿಯಿಂದ ಮುಡಿಯವರೆಗೆ ದಿಟ್ಟಿಸಿ ನೋಡಿದ ಸೇನಾಪತಿ ಅವನು ಸರ್ ರಾಬರ್ಟ್ ಇನಸ್‌ ನಿಜವೇ ಎಂದು ಪ್ರಶ್ನಿಸಿದ. “ಹೌದು” ಎಂಬ ಉತ್ತರ ದೊರೆಯಿತು ಆಗ ಸೇನಾಪತಿಯು, “ನೀನು ಸಾಮಾನ್ಯ ಸೈನಿಕನಾಗಿ ಏಕೆ ಸೇರಿಕೊಂಡೆ? ಎಂದು ಮತ್ತೆ ವಿಚಾರಿಸಿದ “ನಾನು ಪ್ರಾಯಕ್ಕೆ ಬರುವಾಗಲೇ ಸಂಪತ್ತೆಲ್ಲ ಕೈಬಿಟ್ಟು ಹೋಗಿತ್ತು ಬಿರುದು ಮಾತ್ರ ನನ್ನಲ್ಲಿ ಉಳಿದಿತ್ತು. ಯಾರಿಂದಲೇ ಆಗಲಿ ಸಹಾಯ ಪಡೆಯಲು ಮನ ಒಪ್ಪಲಿಲ್ಲ. ಹಾಗಾಗಿ ಶ್ರಮಪಟ್ಟು ದುಡಿಯಬೇಕು; ನನ್ನ ಅನ್ನ ನಾನೇ ಗಳಿಸಬೇಕು ಎಂಬ ತೀರ್ಮಾನಕ್ಕೆ ಬಂದೆ. ಉದ್ಯೋಗ ಯಾವುದೂ ನನಗೆ ತಿಳಿದಿರಲಿಲ್ಲ. ಆದುದರಿಂದ ಸೈನ್ಯಕ್ಕೆ ಸೇರಿ ದುಡಿಯತೊಡಗಿದೆ” ಎಂದು ಯುವಕ ಉತ್ತರ ಕೊಟ್ಟ.
ಸೇನಾಪತಿಗೆ ಬಹಳ ಸಂತೋಷವಾಯಿತು ಯುವಕನ ಸ್ವಾಭಿಮಾನವನ್ನು ಅವನು ತುಂಬ ಮೆಚ್ಚಿಕೊಂಡ. ಒಡನೆ ಆ ದಿನವೆ ತನ್ನ ಮನೆಗೆ ಊಟಕ್ಕೆ ಬರುವಂತೆ ಅವನನ್ನು ಕೇಳಿಕೊಂಡ. ಯುವಕ ಮನೆಗೆ ಬಂದಾಗ ತನ್ನ ಉಡುಗೆ ತೋಡುಗೆಗಳ ರಾಶಿ ತೋರಿಸಿ, ಅದರಿಂದ ಬೇಕಾದುದನ್ನು ಆರಿಸಿ ತೆಗೆಯುವಂತೆ ಅವನನ್ನು ಒತ್ತಾಯಿಸಿದ. ಆದರೆ ಯುವಕ ಮಾತ್ರ ಏನನ್ನೂ ತೆಗೆದುಕೊಳ್ಳಲಿಲ್ಲ. ತನ್ನಲ್ಲಿ ಸಾಕಷ್ಟು ಉಡಿಗೆ ತೊಡಿಗೆಗಳಿವೆ. ಹೆಚ್ಚಿನದೇನೂ ತನಗೆ ಅಗತ್ಯವಿಲ್ಲ ಎಂದು ವಿನಯದಿಂದ ವಿಜ್ಞಾಪಿಸಿಕೊಂಡ.
ಯುವಕನ ಒಳ್ಳೆಯತನ ಸೇನಾದಿಪತಿಯ ಮನವನ್ನು ಗೆದ್ದಿತು. ಪರಿಣಾಮವಾಗಿ ಯುವಕನಿಗೆ ಬಲುಬೇಗನೇ ಭಡ್ತಿ ದೊರೆಯಿತು. ಸೈನ್ಯದಲ್ಲಿ ದೊಡ್ಡ ಅಧಿಕಾರಿಯಾಗಿ ಆತ ನೇಮಿಸಲ್ಪಟ್ಟ. ಸ್ವಂತ ಪರಿಶ್ರಮದಿಂದ ತನ್ನ ಬಿರುದಿಗೆ ತಕ್ಕ ಸ್ಥಾನಮಾನಗಳನ್ನು ಗಳಿಸಿ ಪ್ರಸಿದ್ಧಿಗೊಂಡ.
* * *

ಕಾಮೆಂಟ್‌ಗಳಿಲ್ಲ: