ಕೊಂದವನಿಗು ಕರುಣೆ ತೋರಿದವ

ನೂರಾರು ವರುಷಗಳ ಹಿಂದಿನ ಮಾತು. ಆಗ ಸ್ಪೇನ್‌ ದೇಶದ ಸ್ವಲ್ಪ ಭಾಗವನ್ನು ಮೂರ್ ಜನರು (ಮೊರೊಕ್ಕೊ ದೇಶದ ನಿವಾಸಿಗಳು) ಆಕ್ರಮಿಸಿದ್ದರು. ಅದೊಂದು ದಿನ ಒಬ್ಬ ಸ್ಪೆನಿಯಾರ್ಡನು ಎಳೆಯ ಮೂರ್ ಒಬ್ಬನನ್ನು ಕೊಂದುಬಿಟ್ಟ. ಮೂರರು ಅವನನ್ನು ಅಟ್ಟಿಸಿಕೊಂಡು ಬಂದರು. ಪ್ರಾಣಭಯದಿಂದ ಅವನು ಓಡತೊಡಗಿದ. ಎದುರುಗಡೆ ಒಂದು ತೋಟವಿತ್ತು. ಅವನು ಅದರ ದರೆ ಏರಿ, ಒಳಕ್ಕೆ ಜಿಗಿದ. ಅದು ಒಬ್ಬ ಮೂರನಿಗೆ ಸೇರಿದ ತೋಟವಾಗಿತ್ತು. ತೋಟದ ಯಜಮಾನ ಅಲ್ಲಿ ನಿಂತಿದ್ದ. ಓಡಿ ಬಂದವನು ಯಜಮಾನನ ಕಾಲಿಗೆ ಅಡ್ಡ ಬಿದ್ದ. ವೈರಿಗಳು ತನ್ನನ್ನು ಅಟ್ಟಿಸಿಕೊಂಡು ಬರುತ್ತಿದ್ದಾರೆ. ತನಗೆ ಅಡಗಿಕೊಳ್ಳಲು ಅಲ್ಲಿ ಅವಕಾಶ ಕೊಡಬೇಕು. ತನ್ನನ್ನು ಕಾಪಾಡಬೇಕು ಎಂದು ಅಂಗಲಾಚಿ ಬೇಡಿಕೊಂಡ.
ತೋಟದ ಮಾಲಿಕನು ತುಂಬ ಕರುಣಾಳು ತನ್ನೆಡೆಗೆ ಬಂದು ರಕ್ಷಣೆ ಬೇಡುತ್ತಿರುವ ಅಪರಿಚಿತನನ್ನು ಆತ ಕಣ್ಣರಳಿ ನೋಡಿದ. ಅವನಿಗೆ ಧೈರ್ಯ ಹೇಳಿದ ಅವನ ಜೀವ ಕಾಯುವುದಾಗಿ ಭರವಸೆ ನೀಡಿದ ತನ್ನ ಮಾತಿನಲ್ಲಿ ಭರವಸೆ ಹುಟ್ಟುವಂತೆ ಮಾಡಲು ಅವನಿಗೊಂದು ಹಣ್ಣನ್ನಿತ್ತ; ಅವನ ಜೊತೆ ಕೂತು ತಾನೂ ಹಣ್ಣು ತಿಂದ. (ಜೊತೆಯಾಗಿ ಕೂತು ಉಂಡವರನ್ನು ಅಥವಾ ತಿಂದವರನ್ನು ರಕ್ಷಿಸಬೇಕೆಂಬುದು ಮೂರ್ ಜನರ ಒಂದು ವಿಶಿಷ್ಟ ಪದ್ಧತಿ) ಅನಂತರ ತನ್ನ ಮರೆಹೊಕ್ಕುವನನ್ನು ತೋಟದ ಮನೆಯ ಪುಟ್ಟ ಕೋಣೆಯೊಳಗೆ ಕೂಡಿಸಿ, ಬೀಗ ಹಾಕಿದ. ಕತ್ತಲಾದೊಡನೆ ಸುರಕ್ಷಿತ ಸ್ಥಳ ಸೇರಲು ಆತನಿಗೆ ಸಹಾಯ ಮಾಡುವುದಾಗಿ ಮಾತು ಕೊಟ್ಟು, ತನ್ನ ವಾಸದ ಮನೆಗೆ ಬಂದುಬಿಟ್ಟ.
ಆ ಸಮಯಕ್ಕೆ ಸರಿಯಾಗಿ ಜನರ ದೊಡ್ಡ ಗುಂಪೊಂದು ಅವನ ಮನೆಯತ್ತ ಬರತೊಡಗಿತು. ಬಹಳ ಜನ ಅದರಲ್ಲಿದ್ದರು. ಎಲ್ಲರೂ ತುಂಬ ದುಃಖಿತರಾದಂತೆ ಕಾಣುತ್ತಿದ್ದರು. ಕೆಲವರು ಕಣ್ಣೀರು ಸುರಿಸುತ್ತಿದ್ದರೆ ಇನ್ನು ಕೆಲವರು ಅಳುತ್ತಿದ್ದರು. ಯುವಕರು ಕೆಲವರು ಸಿಟ್ಟಿನಿಂದ ಹಲ್ಲು ಕಡಿಯುತ್ತ ಪ್ರತೀಕಾರದ ಮಾತಾಡುತ್ತಿದ್ದರು. ಗುಂಪಿನ ಮಧ್ಯದಲ್ಲಿದ್ದ ಕೆಲವರು ಬಿಳಿ ಬಟ್ಟೆಯಲ್ಲಿ ಸುತ್ತಿದ ಏನನ್ನೊ ಹೊತ್ತು ತರುತ್ತಿದ್ದರು.
ಗುಂಪು ಹತ್ತಿರ ಬಂತು. ತೋಟದ ಯಜಮಾನನ ಮನೆಯಂಗಳವನ್ನು ಪ್ರವೇಶಿಸಿತು. ಗುಂಪಿನ ಮಧ್ಯದಲ್ಲಿದ್ದ ಮಂದಿಗಳು ಮುಂದೆ ಬಂದರು. ತಾವು ಹೊತ್ತು ತಂದಿದ್ದ ಹೊರೆಯನ್ನು ಮೆಲ್ಲನೆ ಇಳಸಿದರು. ಬಿಳಿ ಬಟ್ಟೆಯ  ಮುಸುಕಿನೊಳಗೆ ಬಾಲಕನೊಬ್ಬನ ಹಣವಿತ್ತು. ಕ್ಷಣದಲ್ಲೆ ಮನೆಯಾತನಿಗೆ ವಿಷಯ ತಿಳಿಯಿತು. ಅವನ ಪ್ರೀತಿಯ ಮಗನ ಕೊಲೆಯಾಗಿತ್ತು. ತನ್ನ ಆಸರೆ ಪಡೆದ ಪರಕೀಯನು ಬೇರಾರೂ ಅಲ್ಲ ತನ್ನ ಮಗನನ್ನೆ ಕೊಂದವನ್ನು ಎಂಬುದು ಅವನಿಗೆ ತಿಳಿದುಹೋಗಿತ್ತು. ಆದರೆ?
ಆತನು ತನ್ನಲ್ಲಿ ದಯಾಭಿಕ್ಷೆ ಬೇಡಿದ್ದಾನೆ. ಆತನನ್ನು ರಕ್ಷಿಸುವುದಾಗಿ ತಾನು ಭಾಷೆ ನೀಡಿದ್ದೇನೆ. ಮಗನ ಸಾವಿನ ಸೇಡು ತೀರಿಸಲು ಕೊಲೆಗಾರನನ್ನು ತಾನು ಕೊಂದು ಬಿಡಬಹುದು. ಅದರಿಂಸ ಸತ್ತ ಮಗ ಮತ್ತೆ ಬದುಕಿ ಬರಲುಂಟೆ? ಹಾಗಾದರೆ ತಾನೇನು ಸಾಧಿಸಿದಂತಾಯಿತು? ಛೆ, ಇಂಥ ವಿಚಾರ ಸಲ್ಲದು. ತಾನು ಕೊಟ್ಟ ಮಾತಿಗೆ ತಪ್ಪಬಾರದು; ಕೆಟ್ಟ ಯೋಚನೆ ಮಾಡಬಾರದು ಎಂದು ಆತ ಮನಸ್ಸಿನಲ್ಲೆ ನಿರ್ಧರಿಸಿದ. ತನ್ನ ಆಸರೆಯಲ್ಲಿರುವವನ ಸುಳಿವು ಯಾರಿಗೂ ಸಿಗದಂತೆ ಎಚ್ಚರ ವಹಿಸಿದ. ಮಗನ ಸಾವಿನ ದುಃಖ ನುಂಗಿಕೊಂಡು, ಶವ ಸಂಸ್ಕಾರದ ಕೆಲಸಗಳನ್ನು ನೆರವೇರಿದ. ಅವನ ದುಃಖದಲ್ಲಿ, ಕೆಲಸಗಳಲ್ಲಿ ಸಹಭಾಗಿಗಳಾದ ಜನಗಳೆಲ್ಲ ಒಬ್ಬೊಬ್ಬರಾಗಿ ಹೊರಟು ಹೋದರು.
ಸೂರ್ಯಾಸ್ತವಾಯಿತು. ಕತ್ತಲು ಕವಿಯಿತು ಅದನ್ನೆ ಕಾಯುತ್ತಿದ್ದ ಯಜಮಾನ ದಿಗ್ಗನೆ ಎದ್ದ. ತನ್ನ ಕುದುರೆಗಳಲ್ಲಿ ಅತ್ಯುತ್ತಮವಾದುದನ್ನು ಆರಿಸಿ ಹಿಡಿದುಕೊಂಡ. ಅದರೊಡನೆ ತನ್ನ ತೋಟದ ಮನೆಗೆ ನಡೆದ.
ಕೋಣೆಯಲ್ಲಿ ಸ್ಪೇನಿಯಾರ್ಡನು ಉಸಿರು ಬಿಗಿ ಹಿಡಿದು ಕುಳಿತುಕೊಂಡಿದ್ದ. ಯಜಮಾನ ಅವನನ್ನು ಹೊರಗೆ ಕರೆ ತಂದ ಅವನಿಗೆ ಕುದುರೆಯನ್ನು ಒಪ್ಪಿಸುತ್ತ ಹೀಗೆ ಹೇಳಿದ -
“ನನ್ನ ಪ್ರೀತಿಯ ಮಗನನ್ನು ಕೊಂದವನು ನೀನು. ನಿನ್ನ ತಪ್ಪಿಗೆ ತಕ್ಕ ಶಿಕ್ಷೆ ನಿನಗೆ ಸಿಗಬೇಕಿತ್ತು. ಆದರೆ ನೀನು ನನ್ನಿಂದ ಅಭಯದಾನ ಪಡೆದಿದ್ದಿಯಾ. ನನ್ನ ‘ಜೊತೆ ಕೂತು’ ಹಣ್ಣು ತಿಂದಿದ್ದಿಯಾ. ಕೊಟ್ಟ ಮಾತನ್ನು ನಾನು ಉಳಿಸಿಕೊಳ್ಳಬೇಕು. ಆದ ಕಾರಣ ನಿನ್ನನ್ನು ಕ್ಷಮಿಸಿದ್ದೇನೆ. ನಿನಗೆ ಅತ್ಯುತ್ತಮವಾದ ಈ ನನ್ನ ಕುದುರೆಯನ್ನು ಕೊಡುತ್ತಿದ್ದೇನೆ. ತಕ್ಷಣ ಇದನ್ನೇರಿ ಕತ್ತಲೆಯಲ್ಲಿ ಕಣ್ಮರೆಯಾಗಿ ಬಿಡು. ಗಾಳಿಯ ವೇಗದಲ್ಲಿ ಓಡಬಲ್ಲ ಕುದುರೆಯಿದು. ಇದರ ಸಹಾಯದಿಂದ ಬೆಳಗಾಗುವ ಮೊದಲು ನೀನು ಸುರಕ್ಷಿತ ಸ್ಥಳ ಸೇರಬಲ್ಲೆ. ನನ್ನ ಮಗನ ಜೀವ ನೀನು ತೆಗೆದ. ಆದರೆ ನಾನು ನಿನ್ನ ಜೀವ ತೆಗೆಯುವುದಿಲ್ಲ; ನಿನಗೆ ಕೊಟ್ಟ ಮಾತನ್ನು ಮುರಿಯುವುದಿಲ್ಲ. ಯಾರಿಗೂ ಕೇಡು ಬಗೆಯಲಾರೆ ಎಂಬುದು ನನ್ನ ಪ್ರತಿಜ್ಞೆಯಾಗಿತ್ತು. ಆ ಪ್ರತಿಜ್ಞೆಗೆ ಭಂಗಬಾರದಂತೆ ದೇವರು ನೋಡಿಕೊಂಡಿದ್ದಾನೆ. ಅದಕ್ಕಾಗಿ ಅವನಿಗೆ ನನ್ನ ಅನಂತ ವಂದನೆಗಳು”
ಸ್ಪೇನಿಯಾರ್ಡನ ಕಣ್ಣುಗಳು ತುಂಬಿದ ಕೊಳಗಳಾಗಿದ್ದವು. ತೊಟ್ಟಿಕ್ಕುತಿದ್ದ ಕಣ್ಣೀರಿಂದ ಕೆನ್ನೆಗಳು ಒದ್ದೆಯಾಗಿದ್ದವು. ತಲೆ ತಗ್ಗಿಸಿಕೊಂಡೆ ನಿಂತಿದ್ದ ಅವನಿಂದ ‘ಕ್ಷಮಿಸು ತಂದೆ’ ಎಂಬ ನುಡಿಗಳೆರಡು ಹೊರಬಂದಿದ್ದವು. ಮರುಕ್ಷಣದಲ್ಲೆ ಕುದುರೆ ಏರಿದ್ದ ಆತ ಕವಿದ ಕತ್ತಲಲ್ಲಿ ಕಣ್ಮರೆಯಾಗಿದ್ದ.
* * *

ಕಾಮೆಂಟ್‌ಗಳಿಲ್ಲ: