ಮಲೆಗಳಲ್ಲಿ ಮದುಮಗಳು-೧೩

ತಂದೆಯ ಕೈಯಲ್ಲಿ ಬಯ್ಯಿಸಿಕೊಂಡ ಸಿಟ್ಟಿನ ಭರದಲ್ಲಿ ತಿಮ್ಮಪ್ಪ ಹೆಗ್ಗಡೆ ಮುಖ ತೊಳೆಯದೆ, ಹಲ್ಲು ತಿಕ್ಕುತ್ತಿದ್ದ ಮಸಿಯಿಂದ ತುಟಿ ಬಾಯಿ ಎಲ್ಲ ಕರ್ರಗಾಗಿ ಜೊಲ್ಲಿಳಿಯುತ್ತಿದ್ದುದನ್ನೂ ಲೆಕ್ಕಿಸದೆ ಹೊಲಗೇರಿ ಕಡೆ ಹೊರಟಿದ್ದನು. ಆದರೆ ದಾರಿಯಲ್ಲಿ ಒಂದು ಹುಳಿಚೊಪ್ಪಿನ ಮಟ್ಟಿನ ಬುಡದ ಸಣ್ಣ ಹೊಂಡದಲ್ಲಿ ನಿನ್ನೆ ಬಿದ್ದ ಭಾರಿ ಮಳೆಯ ದೆಸೆಯಿಂದ ಸ್ವಲ್ಪ ನೀರು ನಿಂತಿದ್ದುದನ್ನು ಕಂಡ ಕೂಡಲೆ ಅದರ ಬುಡಕ್ಕೆ ಹೋಗಿ ಬಗ್ಗಿ ನೋಡಿದನು.  ತುಂಬಿದ್ದ ಹೊಂಡದ ಕೊಳಕು ನೀರಿನ ಕನ್ನಡಿಯಲ್ಲಿ ತನ್ನ ಮುಖದ ಪಡಿನೆಳಲು ಕಣ್ಣಿಗೆ ಬೀಳಲು ಅವನಿಗೆ ನಾಚಿಕೆಯಾದಂತಾಯಿತು. ಸಹಜವಾಗಿಯೆ ತಾನು ಎಲ್ಲರಿಗೂ ಚೆನ್ನಾಗಿ ಕಾಣಿಸಬೇಕು ಎಂಬ ಪ್ರಾಯದ ವಯಸ್ಸಿನ ಅವನಿಗೆ ತನ್ನ ಆ ವಿಕಾರ ವೇಷ ಜಿಗುಪ್ಸೆ ಹುಟ್ಟಿಸಿತು. ತಾನು ಹೋಗುತ್ತಿದ್ದುದು ಹೊಲೆಯರ ಕೇರಿಗಾಗಿದ್ದರೂ, ಅಲ್ಲಿ ತನ್ನ ರೂಪ ಸೌಂದರ್ಯಗಳನ್ನು ಯಾರಾದರೂ ಗಮನಿಸುವುದಾಗಲಿ ಗಮನಿಸದಿರುವುದಾಗಲಿ ಎರಡೂ ಅಪ್ರಕೃತವಾಗಿದ್ದರೂ, ತಿಮ್ಮಪ್ಪ ಹೆಗ್ಗಡೆ ಆ ಹೊಂಡದ ನೀರಿನಲ್ಲಿ ಮುಖ ತೊಳೆಯಲು ಮನಸ್ಸು ಮಾಡಿದನು. ಆದರೆ ಮತ್ತೂ ಒಂದು ಯೋಚನೆ ತಲೆದೋರಿ ಅವನು ಹಿಂಜರಿದನು. ‘ಯಾರಾದರೂ ಆ ನೀರಿನಲ್ಲಿ ಅಂಡು ತೊಳೆದುಬಿಟ್ಟಿದ್ದರೆ?’ ‘ನಿನ್ನೆ ರಾತ್ರಿ ಬಿದ್ದ ಮಳೆಯಲ್ಲಿ ನೀರು ನಿಂತದ್ದು. ಇಷ್ಟು ಬೆಳಿಗ್ಗೆ ಯಾರು ಬರ್ತಾರೆ ಇಲ್ಲಿಗೆ?’ ‘ಅಯ್ಯೋ ನಾನೆ ಎಷ್ಷು ಸಾರಿ ಹೀಗೆ ನಿಂತ ನೀರಿನಲ್ಲಿ ಹೊರಕಡೆಗೆ ಹೋಗಿ ತೊಳಕೊಂಡಿಲ್? ಅದರಲ್ಲೇನು ಅಂಥಾ ದೋಷ?’ ‘ಉರಿಯುವ ಬೆಂಕಿಗೂ ಹರಿಯುವ ನೀರಿಗೂ ಶಾಸ್ತ್ರ ಇಲ್ಲ ಅಂತಾರೆ. ಹರಿಯುವ ನೀರಾದರೇನು? ನಿಂತ ನೀರಾದರೇನು?’ ತಿಮ್ಮಪ್ಪ ತನ್ನ ಮನಸ್ಸಿನಲ್ಲಿಯೆ ಇನ್ನೊಂದು ಅತ್ಯಂತ ಅಶ್ಲೀಲದ ಗಾದೆಯನ್ನೂ ಹೇಳಿಕೊಂಡು, ಮುಖ ತೊಳೆಯುವುದಕ್ಕೆ ಬದಲಾಗಿ ಮಸಿ ಹಿಡಿದಿದ್ದ ತುಟಿ ಬಾಯಿಗಳನ್ನು ಮಾತ್ರವೆ ತೊಳೆದುಕೊಂಡನು. ಮತ್ತೆ ನೀರಿನಲ್ಲಿ ಮುಖ ನೋಡಿಕೊಂಡು ತನ್ನ ತಿಪ್ಪುಳುಮೀಸೆಗಳನ್ನು ಗಮನಿಸಿ ತೃಪ್ತಿಪಟ್ಟುಕೊಂಡನು. ಕೇರಿ ಹೊಲೆಯರದ್ದೆ ಆಗಿದ್ದರೂ ಅಲ್ಲಿದ್ದವರೆಲ್ಲರೂ ತಾನು ಮುಟ್ಟದವರಾದ ತಮ್ಮ ಜೀತದಾಳುಗಳೆ ಆಗಿದ್ದರೂ, ಅಲ್ಲಿಯೂ ತಾನು ಕಣ್ಣಿಡಲು ಯೋಗ್ಯವಾದ ಹೆಣ್ಣಗಳಿರಬಹುದು ಎಂಬುದನ್ನು ಯುವ ಹೆಗ್ಗಡೆಯ ಅಂತಶ್ಚಿತ್ತ ಅಲಕ್ಷಿಸಿರಲಿಲ್ಲ.
ಹೊಲಗೇರಿ ಹತ್ತಿರಕ್ಕೆ ಬಂದಹಾಗೆಲ್ಲ ಅದರ ಸಮ್ಮಿಶ್ರ ಶಬ್ದ ಪ್ರಪಂಚವೂ ವಾಸನಾ ಪ್ರಪಂಚವೂ ಸ್ವಲ್ಪ ಹೆಚ್ಚು ಕಡಿಮೆ ಅಂತಹ ಪ್ರಪಂಚದಲ್ಲಿಯೆ ವಾಸಿಸುತ್ತಿದ್ದ ತಿಮ್ಮಪ್ಪ ಹೆಗ್ಗಡೆಗೂ ಮೂಗೂ ಮುಚ್ಚಿಕೊಳ್ಳುವಷ್ಟು ತೀವ್ರತರವಾಗಿ ಇಂದ್ರಿಗೋಚರವಾಗತೊಡಗಿತ್ತು. ಕೋಳಿ, ಕುರಿ, ನಾಯಿ, ಹಂದಿ, ಮನುಷ್ಯರು, ದನಕರು ಇವೆಲ್ಲ ಪ್ರಾಣಿಗಳ ದುರ್ಗಂಧದ ಅವಿಭಕ್ತ ಕುಟುಂಬದ ವಾಯುವಲಯಕ್ಕೆ ಪ್ರವೇಶಿಸಿ, ಕೇರಿ ಪ್ರಾರಂಭವಾಗುವ ಸ್ಥಳಕ್ಕೆ ಸಮೀಪದಲ್ಲಿಯೆ ಅದರ ದ್ವಾರ ರಕ್ಷಣಾ ಪ್ರದೇಶವೆಂಬಂತೆ ಎತ್ತರವಾಗಿದ್ದ ‘ಒಡೇರ ದಿಬ್ಬ’ದ ಮೇಲೆ ನಿಂತು, ತಿಮ್ಮಪ್ಪ ಹೆಗ್ಗಡೆ ವೀಕ್ಷಿಸತೊಡಗಿದನು.
ಅವನು ನಿಂತಿದ್ದ ದಿಬ್ಬವನ್ನು ‘ಒಡೆಯರ ದಿಬ್ಬ’ ಎಂದೂ ‘ಹೆಗ್ಗಡೇರ ದಿಬ್ಬ’ ಎಂದೂ ಸಮಯಾನುಸಾರವಾಗಿ ಕರೆಯುತ್ತಿದ್ದರು ಆ ಕೇರಿಯವರು. ಏಕೆಂದರೆ ನೂರಾರು ವರ್ಷಗಳಿಂದ, ವಂಶಪಾರಂಪರ್ಯವಾಗಿ ಹೆಗ್ಗಡೆಯವರ ಮನೆತನಕ್ಕೆ ಗೆಯ್ಯುತ್ತಿದ್ದ ಜೀತದಾಳುಗಳು, ತಾವು ಮಕ್ಕಳಾದಂದಿನಿಂದಲೂ, ದಿನವೂ ಪ್ರಾತಃಕಾಲದಲ್ಲಿ ತಮ್ಮನ್ನು ಕೆಲಸಕ್ಕೆ ಕರೆಯಲು ಬರುತ್ತಿದ್ದ ಒಡೆಯರನ್ನು ಆ ದಿಬ್ಬದ ನೆತ್ತಿಯ ಮೇಲೆಯೆ ನೋಡುತ್ತಿದ್ದುದು ವಾಡಿಕೆಯಾಗಿತ್ತು, ನಿಸರ್ಗ ವ್ಯಾಪಾರವೊ ಎನ್ನುವಷ್ಟರ ಮಟ್ಟಿಗೆ. ಆ ‘ಒಡೇರ ದಿಬ್ಬ’ದ ಮೇಲೆ ನಿಂತು ನೋಡಿದರೆ, ಮೂವತ್ತು ನಾಲ್ವತ್ತು ಬಿಡಾರಗಳ ಆ ಹೊಲಗೇರಿಯೆಲ್ಲವೂ ಎದುರಿಗೆ ಬಿಚ್ಚಿಟ್ಟಂತೆ ಕಾಣಿಸುತ್ತಿತ್ತು. ಅಲ್ಲಿದ್ದ ಆ ಮೂವತ್ತು ನಾಲ್ವತ್ತು ಬಿಡಾರಗಳೂ ಯಾವ ಕ್ರಮವನ್ನೂ ಅನುಸರಿಸಿ ಮೂಡಿರಲಿಲ್ಲ. ಕಟ್ಟುವವನ ಅನುಕೂಲ, ಇಚ್ಛೆ, ಅವಶ್ಯಕತೆಗನುಸಾರವಾಗಿ ಒಂದೊಂದು ಬಿಡಾರವೂ ಇತರ ಯಾವ ಬಿಡಾರದ ದಯೆ ದಾಕ್ಷಿಣ್ಯಗಳಿಗೂ ಒಳಗಾಗದೆ ಹುಟ್ಟಿಕೊಂಡಿತ್ತು. ಕೆಲವು ಬಿಡಾರಗಳ ಎದುರಿನಲ್ಲಿ ಮುಂದೆ ಎತ್ತರದಲ್ಲಿದ್ದ ಬಿಡಾರಗಳ ಕೊಳಕು ನೀಡು ಮಡುಗಟ್ಟಿ, ಹಂದಿಗಳಿಗೆ ಮಗ್ಗಲು ಬೀಳುವ ಕೆಸರು ಮಡುಗಳಾಗಿ, ಕೋಳಿಗಳಿಗೆ ಕೆದರಲು ಆಹಾರದ ಗಣಿಗಳಾಗಿದ್ದುವು. ಆ ಕಡೆ ಈ ಕಡೆ ಅಕ್ರಮವಾಗಿಯೆ ಹಂಚಿಹೋಗಿದ್ದ ಗುಡುಸಲುಗಳ ಮಧ್ಯೆ ಅಂಗಳವೂ ಅಲ್ಲದ, ರಸ್ತೆಯೂ ಅಲ್ಲದ, ಅಥವಾ ಎರಡೂ ಆಗಿರುವ ಒಂದು ಹತ್ತಾರು ಮಾರು ಬಯಲು ಜಾಗವಿತ್ತು. ಅಲ್ಲಿ ಕೇರಿಯ ಬಡ್ಡು ಮೆಯ್ಯ ಬತ್ತಲೆ ಮಕ್ಕಳು ಆಟವಾಡುತ್ತಿದ್ದರೆ ಆ ಪಕ್ಕದ ಈ ಪಕ್ಕಡ ಬಿಡಾರಗಳ ಜಗಲಿಯಲ್ಲಿಯೊ ತೆಣಿಯ ಮೇಲೆಯೊ ಕೆಲಸದಿಂದ ಹಿಂದಿರುಗಿ ಬಂದು ದಣಿದ ದೊಡ್ಡವರು ಕುಳಿತು ಬಾಯಿಗೆ ಹಾಕಿಕೊಳ್ಳುತ್ತಲೊ ಹರಟೆ ಹೊಡೆಯುತ್ತಲೊ ಸಂಸಾರ ಸಾರ ಸುಖವನ್ನು ಅನುಭವಿಸಬಹುದಾಗಿತ್ತು.
‘ಹೆಗ್ಗಡೇರ ದಿಬ್ಬ’ದ ಮೇಲೆ ನಿಂತಿದ್ದ ಒಡೆಯರ ಆಗಮನವನ್ನು ಮೊತ್ತ ಮೊದಲು ಗಮನಿಸಿ, ಕೇರಿಗೆ ವತರತಮಾನ ಕೊಟ್ಟದ್ದು ಮರಿಹಾಕಿದ್ದ ಒಂದು ಕರಿನಾಯಿ. ಅದರ ಸುತ್ತಲೂ ಮುಲುಮುಲು ಓಡಾಡುತ್ತಾ ತಮ್ಮ ಬಡಕಲು ತಾಯಿಯ ಸೊರಗಿದ ಜೋಲು ಮೊಲೆಗಳನ್ನು ಚೀಪಿ ಜಗ್ಗಿಸುತ್ತಿದ್ದ ಕರಿಯ ಬಿಳಿಯ ಹಂಡಹುಂಡ ಮರಿಗಳು, ತಮ್ಮ ತಾಯಿಗೆ ಮತ್ತು ತಂದೆಯವರಿಗೆ ಅನ್ನಾನೀರು ಹಾಕಿ ಸಾಕಿ ಸಲಹುತ್ತಿದ್ದ ಮುಷ್ಯ ಯಜಮಾನರ ಬದುಕು ಬಾಳು ಆಗುಹೋಗು ಜನನ ಮರಣ ಮದುವೆ ಹಬ್ಬ ಸಾಲ ಸೂಲ ಎಲ್ಲಕ್ಕೂ ಬ್ರಹ್ಮ ವಿಷ್ಣು ಮಹೇಶ್ವರರಾಗಿದ್ದ ಹೆಗ್ಗಡೆಯವರಿಗೆ ಸಲ್ಲಬೇಕಾಗಿದ್ದ ಲಕ್ಷವನ್ನಾಗಲಿ ಭಯ ಭಕ್ತಿ ಗೌರವಗಳನ್ನಾಗಲಿ ಒಂದಿನಿತೂ ಸಲ್ಲಿಸದೆ, ಜೋಲು ಮೊಲೆಗಳನ್ನು ಜಗ್ಗಿ ಸೆಳೆದು ಚೀಪುತ್ತಿದ್ದುವು, ತಾಯಿ ಬೊಗಳುತ್ತಾ ನಿಂತದ್ದು ತಮಗೆ ಅನುಕೂಲವೆ ಆಯಿತೆಂದು, ಹಿಂಗಾಲಿನ ಮೇಲೆ ನಿಂತು ಮುಂಗಾಲನ್ನು ತಾಯಿಯ ಹೊಟ್ಟೆಗೆ ಆನಿಸಿ ಮೋಟುಬಾಲಗಳನ್ನು ಲಿವಿಲಿವಿಲಿವಿ ಅಳ್ಳಾಡಿಸುತ್ತಾ. ಆ ಕರಿನಾಯಿಯ ಬೊಗಳಿಕೆ ಕಿವಿಗೆ ಬಿದ್ದುದೆ ತಡ ಒಂದೊಂದು ಬಿಡಾರದ ಮುಂದೆಯೂ ಅಲ್ಲಿ ಇಲ್ಲಿ ನಾನಾ ಕ್ರೀಡೆಗಳಲ್ಲಿ ನಾನಾ ಭಂಗಿಗಳಲ್ಲಿ ಮಲಗಿದ್ದ ಕುಳಿತಿದ್ದ ನಿಂತಿದ್ದ ನಾಯಿಗಳೆಲ್ಲ ತಮ್ಮ ಹತ್ತಿಪ್ಪತ್ತು ಗಂಟಲುಗಳನ್ನು ಒಕ್ಕೊರಲಾಗಿಸಿ ಬೊಗಳತೊಡಗಿದುವು. ನಾಯಿಗಳ ಕೂಗಾಟಕ್ಕೆ ಗಾರಾಗಿ ಕೋಳಿಗಳೂ ದಿಗಿಲುಗೊಂಡಂತೆ ಕೂಗತೊಡಗಿದುವು.
ಒಡೆಯರ ದಿಬ್ಬಕ್ಕೆ ಉಳಿದೆಲ್ಲ ಬಿಡಾರಗಳಿಗೂ ಮೊದಲನೆಯದಾಗಿ ಸಮೀಪವಾಗಿದ್ದ ಮಂಜನ ಬಿಡಾರದ ಒಳಗೆ, ಹಾಳೆ ಕೊಟ್ಟೆಯಲ್ಲಿ ಗಂಜಿ ಉಣ್ಣುತ್ತಿದ್ದ ಮಂಜ, ತಟಕ್ಕನೆ ಗಾಬರಿಗೊಂಡು ತನ್ನ ಹೆಂಡತಿ ಸಿದ್ದಿಗೆ ಪಿಸುದನಿಯಲ್ಲಿ “ಏ, ನಾಯಿ ಕೂಗ್ತವೆಯೇ! ‘ಮನೆ’ಯಿಂದ ಯಾರಾದ್ರೂ ಬಂದರುಗಿಂದರೊ? ನೋಡೆ!” ಎಂದು ಆಜ್ಞಾಪಿಸಿ, ಗುಡಿಸಲಿನ ತಟ್ಟಿ ಬಾಗಿಲೆಡೆಗೆ ಹೋಗುತ್ತಿದ್ದವಳಿಗೆ ಎಚ್ಚರಿಕೆ ಕೊಟ್ಟನು: ಒಳಗಿನಿಂದಲೆ ನೋಡೇ. ಹೊರಗೆ ತಲೆ ಹಾಕಬ್ಯಾಡೇ, ಕಂಡವರ್ನೇ ಹಿಡುಕೊಂಡು ಬಿಡ್ತಾರೇ!”
ಸಿದ್ದಿ ಬಾಗಿಲಿಗೆ ತುಸು ದೂರದಲ್ಲಿಯೆ ನಸುಗತ್ತಲೆಯಲ್ಲಿ ನಿಂತು, ಬಗ್ಗಿ ನೋಡಿ, ಪಿಸುದನಿಯಲ್ಲಿಯೆ ಹೇಳಿದಳು: “ಒಡೇರ ದಿಬ್ಬದ ಮ್ಯಾಲೇ ಹೆಗ್ಗಡೇರು ನಂತಾರೆ ಕಣ್ರೋ!”
“ಬಾಗಿಲು ವಾರೆ ಮಾಡೇ, ಬ್ಯಾಗ!” ದಿಗಿಲುಗೊಂಡಂತಿತ್ತು ಮಂಜನ ಪಿಸುದನಿ.
ಸಿದ್ದಿ ಗಂಡನ ಸಲಹೆಯ ಮೇರೆಗೆ ತಟ್ಟಿ ಬಾಗಿಲನ್ನು, ಇನ್ನೇನು ಪೂರ್ತಿ ಮುಚ್ಚಿಯೆ ಬಿಟ್ಟಿತು ಎನ್ನುವಷ್ಟರ ಮಟ್ಟಿಗೆ, ಬೇಗ ಬೇಗನೆ ಓರೆಮಾಡಿದಳು.
“ನಾನು ಇವತ್ತು ಬೆಟ್ಟಳ್ಳಿಗೆ ಹೋಗಬೇಕಾಗದೆ. ಕೆಲಸಕ್ಕೆ ಬಾ ಅಂತ ಕೂತರೆ ಏನು ಮಾಡಾದು?” ಎನ್ನುತ್ತಾ ಮಂಜ ಗಂಜಿ ಉಣ್ಣತೊಡಗಿದನು.
ನಾಯಿ ಕೋಳಿಗಳ ಬೊಬ್ಬೆ ಇಳಿಮುಖವಾಗುತ್ತಿರಲು, ಹೆಸರು ಹಿಡಿದು ಕರೆಯಲು ಯಾರೂ ಕಣ್ಣಿಗೆ ಬೀಳದಿದ್ದುದಕ್ಕಾಗಿ ರೇಗಿ, ತಿಮ್ಮಪ್ಪ ಹೆಗ್ಗಡೆ “ಎಲ್ಲಿ ಸತ್ರೋ ಎಲ್ಲಾ? ನಿಮ್ಮ ಬಿಡಾರಕ್ಕೆ ಬೆಂಕಿ ಬೀಳ! ಊರಿಗೆಲ್ಲಾ ಹಗಲಾದ್ರೂ ನಿಮಗಿನ್ನೂ ಬೆಳಗಾಗಿಲ್ಲೇನ್ರೋ?” ಎಂದು ಗಟ್ಟಿಯಾಗಿ ಅಬ್ಬರಿಸಿ ಕಾಕು ಕೂಗಿದ ಹೊಡೆತಕ್ಕೆ ನಾಯಿ ಕೋಳಿಗಳೆಲ್ಲ ಮತ್ತೊಮ್ಮೆ ಬೊಬ್ಬೆ ಹಾಕತೊಡಗಿದುವು. ಒಂದೊಂದು ಬಿಡಾರದಲ್ಲಿಯೂ ಪ್ರತ್ಯೇಕ ಪ್ರತ್ಯೇಕವಾಗಿ ಜರುಗುತ್ತಿದ್ದ ವಿಶಿಷ್ಟ ವ್ಯಾಪಾರಗಳೆಲ್ಲವೂ ಕ್ಷಣಮಾತ್ರದಲ್ಲಿ ಸ್ತಂಭೀಭೂತವಾದವು.
ತನ್ನ ಬಿಡಾರದ ಬಾಗಿಲೆಡೆಯೆ ಪ್ರಾತಃ ಸೂರ್ಯಕಾಂತಿಗೆ ಬೆಂದಿರುಹಿ ಕುಳಿತು, ಸೊಂಟದ ಪಂಚೆಯನ್ನು ಅರ್ಧಅರ್ಧವಾಗಿಯೆ ಬಿಚ್ಚಿ, ಮಡಿಕೆ ಮಡಿಕೆಗಳನ್ನೂ ಒಂದೊಂದನ್ನಾಗಿ ಹುಡುಕಿನೋಡಿ, ಕೂರೆ ಹೆರಕಿ ಕುಕ್ಕುತ್ತಿದ್ದ ತಿಮ್ಮ, ಹೆರಕಿದ್ದ ಕೂರೆಯೊಂದನ್ನು ಹಾಗೆಯೆ ಹಿಡಿದುಕೊಂಡು, ನೀಳವಾಗಿ ಬೆಳೆದಿದ್ದ ತನ್ನ ಕೊಳಕಲು ತಲೆಗೂದಲಿನಲ್ಲಿ ಹೇನು ಹೆಕ್ಕುತ್ತಿದ್ದ ಹೆಂಡತಿ ಗಿಡ್ಡಿಗೆ “ಅದೇನು ಗಲಾಟೆ? ಕೆಲಸಗಿಲಸಕ್ಕೆ ಕರೆಯಾಕೆ ಬಂದಾರೇನು ನೋಡೇ?” ಎಂದನು.
ತನ್ನ ತಲೆಕೂದಲಿಗಿಂತಲೂ ಉದ್ದವಾಗಿದ್ದ ತನ್ನ ಗಂಡನ ತಲೆಕೂದಲಿನ ಕ್ಷೇಮದಲ್ಲಿ ಆಸಕ್ತಳಾಗಿದ್ದ ಗಿಡ್ಡಿ ತಿರುಗಿ ನೋಡಿ “ಒಡೇರ ದಿಬ್ಬದ ಮ್ಯಾಲೆ ಹೆಗ್ಗಡೇರು ನಿಂತಾರೆ. ಯಾರನ್ನೊ ಕೂಗ್ತಿದಾರೆ” ಎಂದಳು.
“ಯಾವ ಹೆಗ್ಗಡೇರೆ?”
“ಸಣ್ಣ ಹೆಗ್ಗಡೇರು.”
“ಅಂದರೆ? ಹೆಂಚಿನ ಮನೇರೋ? ಸೋಂಗೆ ಮನೇರೋ?”
“ನಾನು ಹೆಸರು ಹೇಳಬಾರದ ಹೆಗ್ಗಡೇರು ಅಂತೀನೀ!” ಎಂದು ತುಸು ಮುನಿದಂತೆ ನಟಿಸಿದಳು ಗಿಡ್ಡಿ. ತಿಮ್ಮನಿಗೆ ಅರ್ಥವಾಗಿ, ತನ್ನ ಹೆಂಡತಿಗೆ ತನ್ನ ಮೇಲಿರುವ ಗೌರವಕ್ಕಾಗಿ ಅವಳಲ್ಲಿ ಅಭಿಮಾನ ಉಕ್ಕಿದಂತಾಯಿತು. ಆದರೆ ಕೆಲಸಕ್ಕೆ ಕರೆಯಲು  ಬಂದವರು ತಿಮ್ಮಪ್ಪ ಹೆಗ್ಗಡೆ ಎಂದು ಗೊತ್ತಾದೊಡನೆ, ತನ್ನ ಔದಾಸೀನ್ಯವನ್ನು ತಟಕ್ಕನೆ ತ್ಯಜಿಸಿ, ಸೊಂಟದ ಪಂಚೆಯನ್ನು ಸುತ್ತಿಕೊಳ್ಳುತ್ತಾ, ಹೆಂಡತಿಯ ಕೈಯಿಂದ ತಲೆಗೂದಲನ್ನು ಬಿಡಿಸಿಕೊಂಡು, ಬೇಗಬೇಗನೆ ಜುಟ್ಟು ಗಂಟುಹಾಕಿಕೊಂಡು “ಆ ಬಾಳೆಗೊನೆ ಅಲ್ಲಿಡಬ್ಯಾಡೆ, ಕಾಣದ ಹಾಗೆ ಮುಚ್ಚಿಟ್ಟುಬಿಡು!” ಎಂದು ಕೆಲಸಕ್ಕೆ ಹೋಗುವಾಗ ತಲೆಗೆ ಸುತ್ತಿಕೊಳ್ಳುವ ಒಂದು ಕೊಳಕಿನ ಮುದ್ದೆಯಾಗಿದ್ದ ಎಲೆವಸ್ತ್ರವನ್ನು ಗೂಟದಿಂದ ತೆಗೆದು ಸರಿಮಾಡತೊಡಗಿದನು. ಒಡೆಯರ ತೋಟದಿಂದ ಅವರಿಗೆ ಹೇಳದೆ ಕೇಳದೇ ತಂದಿದ್ದ ಆ ದೊಡ್ಡ ಕರಿಬಾಳೆಯ ಗೊನೆಯನ್ನು ಗಿಡ್ಡಿ ಎತ್ತಲಾರದೆ ಎತ್ತಿ ಕೊಂಡು ಹೋಗಿ ಮರೆಯಲ್ಲಿಟ್ಟನು. ಅದೇನು ಕದ್ದುದಾಗಿರಲಿಲ್ಲ! ಅದೇನು ಕದ್ದುದಾಗಿರಲಿಲ್ಲ! ಹೋದ ಬೈಗಿನ ಭಾರಿ ಮಳೆಗಾಳಿಯಲ್ಲಿ ಬಿದ್ದುದಾಗಿತ್ತು! ಬಿದ್ದು ಹಾಳಾಗಿ ಹೋಗುತ್ತಿದ್ದುದನ್ನು ಎತ್ತಿತಂದು ರಕ್ಷಸಿದ್ದನಷ್ಟೇ! ಹಾಗೆಂದು ತಿಮ್ಮ ಸಮಾಧಾನಪಟ್ಟುಕೊಂಡಿದ್ದರೂ, ತಿಮ್ಮಪ್ಪ ಹೆಗ್ಗಡೆ ಬಂದಿದಾನೆ ಎಂದೊಡನೆ, ಏನೊ ಅಳುಕು ಮೂಡಿ, ಅದನ್ನು ಮರೆಮಾಡಲು ಹೇಳಿದ್ದನು. ಅಸ್ಪೃಶ್ಯರಾಗಿದ್ದ ಹೊಲೆಯರ ಕೇರಿಯೊಳಗೆ ಒಡೆಯರ ಮನೆಯವರಾರೂ ಕಾಲಿಡುವುದಿಲ್ಲ ಎಂಬುದು ಹೊಲೆಯರೆಲ್ಲರ ದೃಢನಂಬುಗೆಯಾಗಿದ್ದರೂ ತಿಮ್ಮಪ್ಪ ಹೆಗ್ಗಡೆಯವ ಚಾರದಲ್ಲಿ ಯಾವ ಜಾತಿ, ಮತ, ಸಂಪ್ರದಾಯದ ಕಟ್ಟೂ ನಡೆಯುವುದಿಲ್ಲ ಎಂಬುದೂ ಎಲ್ಲರಿಗೂ ಗೊತ್ತಿದ್ದ ವಿಷಯವಾಗಿತ್ತು. ಅವನಿಗೆ ಸಿಟ್ಟು ಬಂದರೆ ಕೇರಿಯೊಳಗಲ್ಲ ಬಿಡಾರದ ಒಳಗೂ ನುಗ್ಗಲು ಹೇಸುತ್ತಿದ್ದಿಲ್ಲ. ಹಿಂದೆ ಒಂದೆರಡು ಸಾರಿ ಹಾಗೆ ನುಗ್ಗಿಯೂ ನುಗ್ಗಿದ್ದುದನ್ನು ತಿಮ್ಮ ನೆನಪಿಗೆ ತಂದುಕೊಂಡೇ ಬಾಳೆಯ ಗೊನೆಯನ್ನು ಮುಚ್ಚಿಡಲು ಹೇಳಿದುದಲ್ಲದೆ, ಒಡೆಯರು ನುಗ್ಗಿಗಿಗ್ಗಿ ಬಿಡುವ ಮುನ್ನವೆ, ತಾನೆ ಹೊರಗೆ ಹೋಗಿಬಿಡುವುದು ಮೇಲೆ ಎಂದು ಸೊಂಟದ ಪಂಚೆ ಸುತ್ತಿಕೊಂಡು ತಲೆವಸ್ತ್ರ ತುಡುಕಿದ್ದನು. ಅವನ ಆ ಚಟುವಟಿಕೆಗೆ ಕಾರಣ ಮುನ್ನೆಚ್ಚರಿಕೆಯಾಗಿತ್ತೆ ಹೊರತು ಕರ್ತವ್ಯನಿಷ್ಠೆಯಾಗಿರಲಿಲ್ಲ.
ಕುಳುವಾಡಿ ಸಣ್ಣನ ಬಿಡಾರದಲ್ಲಿ ಅವನ ಮಗಳು, ಪುಟ್ಟಿ, ಗುಡಿಸಲು ಮೂಲೆಯಲ್ಲಿದ್ದ ಎಲೆಯ ಮೇಲೆ ಗಡಿಗೆಯಲ್ಲಿ ಗಂಜಿ ಬೇಯಿಸುತ್ತಿದ್ದಳು. ಕೈಯಲ್ಲಿ ಒಂದು ಬಿದಿರು ಹಿಡಿಯ ಕರಟದ ಸೌಟನ್ನು ಹಿಡಿದು, ಅರೆ ಬೆಳಕಿನಲ್ಲಿ, ಗಂಜಿ ಬೆಂದಿತೆ ಇಲ್ಲವೆ ಎಂದು ಅಗುಳನ್ನು ಹಿಸುಕಿ ನೋಡುತ್ತಿದ್ದಳು. ಒಂದು ಗೀಕಿನ ಚಾಪೆಯ ಮೇಲೆ ಕಂಬಳಿ ಹೊದೆದು ಮಲಗಿ ನರಳುತ್ತಿದ್ದ ಅವನ ಕೊನೆಯ ಮಗ, ನಾಲ್ಕೈದು ವರ್ಷದ ಹುಡುಗ, ಗಂಗನ ಬಳಿ ಕುಳಿತು ಕುಳುವಾಡಿ ಸಣ್ಣ, ತಾನೆ ಕೆಮ್ಮುತ್ತಾ ಸಿಂಬಳ ಸುರಿಯುತ್ತಾ ಮಗನಿಗೆ ಸಮಾಧಾನ ಹೇಳುತ್ತಿದ್ದ: “ಆಯ್ತು ಮಗಾ, ಆಯ್ತು… ಗಂಜಿ ಕುಡಿದು ಸುಮ್ಮನೆ ಮಲಗಬೈದಂತೆ. ಅಳಬ್ಯಾಡ ಸುಮ್ಕಿರು… ಆಯ್ತು, ಇಲ್ಲೇನು ಆಯ್ತು. ಅಲ್ಲೇನೆ, ಪುಟ್ಟೀ?” ಎಂದು ಮಗನ ಸಂತೈಕೆಗಾಗಿ ಮಗಳನ್ನು ಹತ್ತನೆಯ ಸಲವೊ ಹನ್ನೊಂದನೆಯ ಸಲವೊ ಯಾವ ನಿಷ್ಕೃಷ್ಟ ಉತ್ತರದ ಅಭಿಲಾಷೆಯೂ ಇಲ್ಲದ ಪ್ರಶ್ನೆ ಕೇಳಿದ್ದನು.
“ಆಯ್ತಪ್ಪಯ್ಯಾ, ಆಗೇ ಬಿಡ್ತು. ಈಗ ಇಳಿಸಿಬಿಡ್ತೀನಿ. ಇನ್ನೇನು ಇಳಿಸೇ ಬಿಟ್ಟೆ!” ಎಂದು ಹತ್ತನೆಯ ಸಲವೊ ಹನ್ನೊಂದನೆಯ ಸಲವೊ ಅದೇ ಉತ್ತರ ಹೇಳಿದ್ದಳು ಪುಟ್ಟಿ.
ಕುಳವಾಡಿ ಸಣ್ಣ ಆ ಕೇರಿಗೆಲ್ಲ ವಯಸ್ಸಾಗಿದ್ದ ವ್ಯಕ್ತಿ. ಮಲೆನಾಡಿನಲ್ಲಿ, ಅದರಲ್ಲಿಯೂ ಬಡತನವೆ ಬಾಳಾಗಿದ್ದ ಕೀಳುಜಾತಿಯ ಜನರಲ್ಲಿ, ಐವತ್ತನ್ನು ಕಂಡವನೇ ಅತ್ಯಂತ ದೀರ್ಘಾಯುವಾಗಿದ್ದ ಆ ಕಾಲದಲ್ಲಿ, ಕುಳವಾಡಿ ಸಣ್ಣನಿಗೆ ಅವನ ಕೇರಿಯಲ್ಲಿ ಮಾತ್ರವಲ್ಲದೆ ಸಿಂಬಾವಿ, ಕೋಣೂರು, ಬೆಟ್ಟಳ್ಳಿ ಮೊದಲಾದ ಕಡೆಯ ಕೇರಿಗಳಲ್ಲಿಯೂ ವೃದ್ಧ ಪಿತಾಮಹನಿಗೆ ಸಲ್ಲುವ ಗೌರವ ಸಲ್ಲುತ್ತಿತ್ತು. ಆ ವಯೋಧರ್ಮದಿಂದಲೆ ಅವನಿಗೆ ಕುಳವಾಡಿ ಪಟ್ಟವೂ ದೊರಕಿತ್ತು. ಜಾತಿ ಸಂಬಂಧವಾದ ವ್ಯಾಜ್ಯಗಳಲ್ಲಿ ಆಗಲಿ, ನೀತಿ ಸಂಬಂಧವಾದ ಬಹಿಷ್ಕಾರಾದಿ ವಿಷಯಗಳಲ್ಲಿ ಆಗಲಿ, ಹೆಣ್ಣು ಗಂಡು ಕೊಟ್ಟು ತರುವ ಸಂಬಂಧದಲ್ಲಿ ಉದ್ಭವಿಸುವ ಭಿನ್ನಾಭಿಪ್ರಾಯದ ಕಲಹಗಳಲ್ಲಿ ಆಗಲಿ ಕುಳವಾಡಿ ಸಣ್ಣ ತೀರ್ಪಿಗೆ ಜಾತಿಯವರು ಯಾರೂ ಸಾಮಾನ್ಯವಾಗಿ ಎದುರುಬೀಳುತ್ತಿರಲಿಲ್ಲ. ಅವನಿಗೆ ಹೆಂಡತಿ ತೀರಿ ಹೋಗಿ ನಾಲ್ಕೈದು ವರ್ಷಗಳಾಗಿದ್ದರೂ ಅವನು ಮತ್ತೆ ಮದುವೆಯಾಗಿರಲಿಲ್ಲ. ಮದುವೆಯಾಗುವ ಯೋಚನೆಯನ್ನೂ ಇಟ್ಟುಕೊಂಡಿರಲಿಲ್ಲ. ಅವನೊಡನೆ ಸೀರುಡಿಕೆಯಾಗಲು ಆಸೆಪಟ್ಟ ಗಂಡಸತ್ತವರಿದ್ದರೂ ಅವನು ಕೂಡಿಕೆಗೂ ಒಪ್ಪಿರಲಿಲ್ಲ. ಕಡೆಗೆ ಗಂಜಿ ಬೇಯಿಸುವುದಕ್ಕಾದರೂ ಎಂದು ಹೆಣ್ಣು ಕೈ ಇರಲಿ ಎಂದು ಸಲಹೆಕೊಟ್ಟ ಹಿತೈಷಿಗಳ ಮಾತನ್ನೂ ಅವನು ಮುಗುಳುನಕ್ಕು ತಟ್ಟಿಹಾರಿಸಿದ್ದನು. ಅವನ ಹಿರಿಯ ಮಗಳು ಪುಟ್ಟಿಯೆ, ತನ್ನ ತಾಯಿ ಗಂಗನನ್ನು ಹೆತ್ತು ತೀರಿಕೊಂಡ ಮೇಲೆ, ಅಪ್ಪನ ಆರೈಕೆಯನ್ನೂ, ತಂಗಿ ತಮ್ಮಂದಿರ ಲಾಲನೆ ಪಾಲನೆಯನ್ನೂ ನೋಡಿಕೊಂಡು ಬರುತ್ತಿದ್ದಳು. ಅವಳಿಗೂ ಮದುವೆಯಾಗುವ ವಯಸ್ಸು; ಬೇಗ ಮಾಡಿಬಿಡು ಎಂದು ನಂಟರಿಷ್ಟರು ಸಣ್ಣನಿಗೆ ಸಲಹೆ ಹೇಳುತ್ತಿದ್ದರೂ ಅವನು ‘ಅವಳಿನ್ನೂ ನೆರೆದು ಎರಡು ವರ್ಷವೂ ಆಗಿಲ್ಲ. ಅವಳಿಗಿಂತಲೂ ದೊಡ್ಡವರು ಕೇರಿಯಲ್ಲಿ ಮದುವೆಯಾಗದೆ ಇರುವವರು ಇಲ್ಲವೆ? ಇಷ್ಟು ಅ ವಸರ ಏಕೆ ಅವಳ ಮದುವೆಗೆ?’ ಎಂದು ಸಮಧಾನ ಹೇಳುತ್ತಿದ್ದನು. ಅಲ್ಲದೆ ಮಗಳು ಮದುವೆಯಾಗಿ ಹೋದರೆ ತನ್ನ ಸಂಸಾರ ಸಾಗುವುದೂ ಕಷ್ಟವಾಗುತ್ತದೆ; ಆದ್ದರಿಂದ ಏನಾದರೂ ಮಾಡಿ ಮದುವೆಯಾದ ಮೇಲೆಯೂ ಮಗಳು ಮನೆಯಲ್ಲಿಯೆ ಉಳಿಯುವಂತೆ ಒಬ್ಬ ಮನೆ ಅಳಿಯನನ್ನು ಮಾಡಿಕೊಂಡರೆ ತನ್ನ ಇಳಿ ವಯಸ್ಸಿನಲ್ಲಿ ತನಗೂ ಒಂದು ದಿಕ್ಕಾಗುತ್ತದೆ ಎಂಬುದೂ ಅವನ ಒಳಮನಸ್ಸಾಗಿತ್ತು.
ತಿಮ್ಮಪ್ಪ ಹೆಗ್ಗಡೆಯ ಅಬ್ಬರವನ್ನಾಲಿಸಿದ ಸಣ್ಣ ತನ್ನ ಮಗಳಿಗೆ “ಏ ಪುಟ್ಟೀ, ಸಣ್ಣ ಹೆಗ್ಗಡೇರ ಸವಾರಿ ಬಂದ ಹಾಂಗೆ ಕಾಣ್ತದೇ, ಕೆಲಸಕ್ಕೆ ಕರೆಯೋಕೆ. ಎಲ್ಲರೂ ಬಿಡಾರದ ಒಳಗೇ ಇದಾರೆ. ಒಬ್ಬರೂ ಹೊರಗೆ ತಲೆ ಹಾಕಿದ್ಹಾಂಗೆ ಕಾಣಲಿಲ್ಲ. ಇನ್ನು ಅವರೇ ಕೇರಿ ಒಳಗೆ ನುಗ್ಗಿದ್ರೆ, ಇಡೀ ಕೇರಿಗೇ ಅಪಸಕುನ! ನಮ್ಮ ದೆಯ್ಯ ದ್ಯಾವರಿಗೆ ಮುಟ್ಟುಚಿಟ್ಟಾದ್ರೆ ಕೇರಿಗೆ ಕೇರಿನೇ ತೆಗೆದುಬಿಡ್ತವೆ! ಹೋಗಿ ಆ ಬೈರಗಾದ್ರೂ ಹೇಳೆ” ಎಂದು ಕೆಮ್ಮತೊಡಗಿದನು.
“ಇಲ್ಲಿಂದ್ಲೆ ಕಂಡೀಲಿ ಕೂಗಿ ಹೇಳ್ತೀನಿ, ಅಪ್ಪಯ್ಯ. ಅವನ ಬಿಡಾರದ ಒಳಗೆ ನಾ ಕಾಲಿಡಾದಿಲ್ಲ?” ಎಂದು ದಬ್ಬೆ ಹೆಣೆದು ಕೆಮ್ಮಣ್ಣು ಮೆತ್ತಿದ್ದ ಗೋಡೆಯ ಬೆಳಕಂಡಿಯಲ್ಲಿ ಮುಖವಿಟ್ಟು ಕೂಗಿದಳು ಪುಟ್ಟಿ, ತಮ್ಮ ಬಿಡಾರಕ್ಕೆ ಮುಟ್ಟಿಕೊಂಡಂತೆಯೆ ಇದ್ದ ಬೈರನ ಬಿಡಾರವನ್ನು ನಿರ್ದೇಶಿಸಿ “ಓ ಬೈರಬಾವ, ಸಣ್ಣ ಒಡೇರು ಕರೀತಾರಂತೋ ಕೇಲಸಕ್ಕೆ!”
ಬಿಡಾರದ ಒಂದು ಮೂಲೆಯಲ್ಲಿದ್ದ ಕಲ್ಲುಗುಂಡಿನ ಒಲೆಯ ಬಳಿ ಹಿಂದಿನ ದಿನ ದನ ಕಾಯಲು ಹೋಗಿದ್ದಾಗ ಬಿಟ್ಟುಬಿಲ್ಲಿನಿಂದ ಹೊಡೆದು ಷಿಕಾರಿಮಾಡಿದ್ದ ಒಂದು ಷಿಟ್ಟಳಿಲನ್ನೂ, ಕುಣಿಗೆ ನೀರುಹಾಯಿಸಿ, ಹೊರ ಹೊರಡಿಸಿ, ಅಟ್ಟಿ ಬೇಟೆಯಾಡಿದ್ದ ಮೂರು ಬೆಳ್ಳಿಲಿಗಳನ್ನೂ ಸುಟ್ಟಿ ಹಸಿಗೆ ಮಾಡುವ ಕಾರ್ಯದಲ್ಲಿ ತೊಡಗಿದ್ದ ಬೈರನು ಪುಟ್ಟಿಯ ದನಿ ಕೇಳಿ ಉತ್ತೇಜಿತನಾದರೂ, ಕೆಲಸಕ್ಕೆ ಕರೆಯಲು ಬಂದಿದ್ದಾರೆ ಎಂಬುದನ್ನು ಕೇಳಿ ತೀರ ನಿರುತ್ತೇಜಿತನಾಗಿ, ತನ್ನಷ್ಟಕ್ಕೆ ತಾನೇ ಹೇಳಿಕೊಂಡನೆಂಬಂತೆ “ಕೂಗಿದ್ರೆ ಕೂಗ್ಲಿ! ಕೇಳಿಸ್ತದೆ ಗಲಾಟೆ! ಇರಾಂವ ನಾನೊಬ್ಬ, ಒಂದೀಟು ಗಂಜಿಗಿಂಜಿ ಮಾಡಿ ಕುಡಿಯಕಾದ್ರೂ ಸಮಯ ಬ್ಯಾಡೇನು? ಹೊತ್ತು ಮೂಡಾಕೆ ಮುಂಚೇನೆ ಬರ್ತಾರೆ ಕೆಲಸಕ್ಕೆ ಕರಿಯಾಕೆ!” ಎಂದು ಗಟ್ಟಿಯಾಗಿಯೆ ಗೊಣಗದನು.
ಬೈರನ ಬಿಡಾರದಲ್ಲಿ ಸದ್ಯಕ್ಕೆ ಬೇರೆ ಯಾರೂ ಇರಲಿಲ್ಲ. ಅವನೆ ತನ್ನ ಅಡುಗೆ ಗಿಡುಗೆ ಎಲ್ಲ ಮಾಡಿಕೊಂಡು ದನ ಕಾಯುವ ಕೆಲಸಕ್ಕೆ ಹೋಗುತ್ತಿದ್ದನು. ದನ ಕಾಯುವ ಕೆಲಸಕ್ಕಲ್ಲದೆ ಬೇರೆ ಕೆಲಸಕ್ಕೆ ಅವನನ್ನು ಕರೆದರು ಅವನು ಏನಾದರೂ ನೆಪಹೇಳಿ ತಪ್ಪಿಸಿಕೊಳ್ಳುತ್ತಿದ್ದನು; ಇಲ್ಲವೆ, ಕೆಲಸಕ್ಕೆ ಹೋದರೂ, ಎಲೆ ಅಡಿಕೆ ಹಾಕುವುದು, ಹರಟೆ ಹೊಡೆಯುವುದು, ಹೊಟ್ಟೆ ಸರಿಯಿಲ್ಲ ಎಂದು ಬೈಲು ಕಡೆಗೆ ಹೋಗುವುದು, ಹೀಗೆ ಒಂದಲ್ಲ ಒಂದು ರೀತಿಯಿಂದ ತಾನೂ ಕೆಲಸ ಮಾಡದೆ ಇತರರನ್ನೂ ಕೆಲಸಮಾಡಗೊಡದೆ ಇರುತ್ತಿದ್ದುದರಿಂದ ಹೆಗ್ಗಡೆಯವರು ಅವನನ್ನು ಖಾಯಂ ಆಗಿ ದನ ಕಾಯುವ ಕೆಲಸಕ್ಕೇ ಹಾಕಿಬಿಟ್ಟಿದ್ದರು. ಬೇರೆ ಬೇರೆ ಹಳ್ಳಿಯವರೂ ದನ ಮೇಯಿಸಲು ಬಂದು, ಎಲ್ಲರೂ ಒಟ್ಟಾಗಿ ಸೇರಿ ಕಾಡು ಹಕ್ಕಲು ಬಯಲುಗಳಲ್ಲಿ ಖುಷಿಯಾಗಿರುತ್ತಿದ್ದುದೂ ಬೈರನು ಆ ವೃತ್ತಿಯನ್ನೆ ಹೆಚ್ಚಾಗಿ ಒಲಿಯಲು ಒಂದು ಕಾರಣವಾಯಿತ್ತು. ಅದರಲ್ಲಿಯೂ ಕೆಲವು ಮನೆಯವರು ಹೆಂಗಸರನ್ನೂ ಬೆಳೆದ ಹುಡುಗಿಯರನ್ನೂ ಆ ಕೆಲಸಕ್ಕೆ ಕಳುಹಿಸುತ್ತಿದ್ದುದೂ ಬೈರನಿಗೆ ಒಂದು ತಪ್ಪಿಸಿಕೊಳ್ಳಲಾಗದ ಆಕರ್ಷಣೆಯಾಗಿತ್ತು. ಬೈರ ಮದುವೆಯಾಗುವ ಮೊದಲೇ ಹಡಬೆ ಬಿದ್ದಿದ್ದನೆಂಬ ಪ್ರತೀತಿ ಇತ್ತು. ಮದುವೆಯಾದ ಮೇಲೆಯೂ ಆ ಕಾರಣಕ್ಕಾಗಿಯೆ ಅವನಿಗೂ ಅವನ ಹೆಂಡತಿಗೂ ಆಗಾಗ ಜಗಳವಾಗಿ ಹೊಡೆತ ಬಡಿತಗಳಲ್ಲಿ ಪರ್ಯವಸಾನವಾಗುತ್ತಿತ್ತು. ಅವನ ಹೆಂಡತಿ ಗರ್ಭಿಣಿಯಾಗಿದ್ದಾಗಲೆ ಅವನು ಅವಳೊಡನೆ ಜಗಳವಾಡಿ, ಕುಡಿದ ಮತ್ತಿನಲ್ಲಿ ಅವಳ ಹೊಟ್ಟೆಯ ಮೇಲೆ ಒದ್ದುದರಿಂದಲೆ ಅವಳು ತಿಂಗಳು ತುಂಬುವ ಮೊದಲೆ ಹೆಚ್ಚು ಸತ್ತುಹೋದಳೆಂದೂ ಜನ ಆಡಿಕೊಳ್ಳುತ್ತಿದ್ದರು. ಈಗ ಒಬ್ಬೊಂಟಿಗನಾಗಿ ‘ಒಂಟಿಗ ಒಂಟಿಗೇಡಿ’ ಎಂಬೆಲ್ಲ ಬೈಗುಳದ ಬಿರುದು ಹೊತ್ತು ಬಾಳುತ್ತಿದ್ದನು.
ಇಲಿ ಅಳಿಲು ಸುಟ್ಟ ಕೌರುವಾಸನೆಯ ಹೊಗೆಯ ನಡುವೆ ಇದ್ದ ಬೈರನ ಕಿವಿಗೂ ಕೇಳಿಸಿತು, ತಾಳ್ಮೆಗೆಟ್ಟು ಸಿಟ್ಟೇರಿದ ತಿಮ್ಮಪ್ಪ ಹೆಗ್ಗಡೆಯ ಅಬ್ಬರದ ಕೂಗು: “ಯಾರೂ ಇಲ್ಲೇನ್ರೋ ಕೇರೀಲಿ? ಎಲ್ಲ ಸುಟ್ಟು ನಾಶನೆ ಆದ್ರೇನೋ? ಏ ಮಂಜಾ! ಏ ತಿಮ್ಮಾ! ಏ ಸಿದ್ದಾ! ಏ ಸಣ್ಣಾ! ನಿಮ್ಮ ಗಂಟ್ಲೆಲ್ಲಾ ಕಟ್ಟಿಹೋಗಾ! ಓಕೊಳ್ಳಾಕೆ ಏನಗಿದ್ರೋ! ಹೊಲೆಸೂಳೆಮಕ್ಳಾ!”
ಗುಡಿಸಿಲೊಳಗಡೆ ದಿಗಲುಬಿದ್ದು ಅತ್ಯಂತ ಚಟುವಟಿಕೆಯಿಂದ ತೆಗೆದೆದ್ದು, ಹೆಂಡತಿಗೆ ಬಾಳೆಗೊನೆಯನ್ನು ಮುಚ್ಚಿಡ ಹೇಳಿ, ತಲೆ ವಸ್ತ್ರ ಸುತ್ತಿಗೊಂಡಿದ್ದ ತಿಮ್ಮನು ಬಿಡಾರದ ತಟ್ಟಿಬಾಗಿಲನ್ನು ಮೆಲ್ಲನೆ ಬಹುಮೆಲ್ಲನೆ ಓಸರಿಸಿ, ಉದ್ವೇಗಕ್ಕಾಗಲಿ ಅವಸರಕ್ಕಾಗಲಿ ಏನೊಂದೂ ವಿಶೇಷ ಕಾರಣ ನಡೆದಿಲ್ಲವೆಂಬಂತೆ ನಿರುದ್ವಿಗ್ನ ಮುಗ್ಧಭಾವವನ್ನಾರೋಪಿಸಿಕೊಂಡು, ಸಾವಧಾನವಾಗಿ ಅಂಗಳಕ್ಕಿಳಿದು ಮುಂಬರಿದನು.
ಅವನು ಕಣ್ಣಿಗೆ ಬಿದ್ದೊಡನೆಯೆ ತಿಮ್ಮಪ್ಪ ಹೆಗ್ಗಡೆ ಸಿಟ್ಟು ನೆತ್ತಿಗೇರಿತು. ಅದರಲ್ಲಿಯೂ ಅವನು ಉದಾಸೀನ ಭಾವದಿಂದ ತಣ್ಣಗೆ ನಡೆದು ಬರುತ್ತಿದ್ದುದನ್ನೂ, ಅವನ ಮೀಸೆಯ ಕೆಳಗಡೆ ಕೆಣಕುವಂತಹ ಒಂದು ರೀತಿಯ ನರಿಬುದ್ದಿಯ ಹುಸಿನಗೆ ಹಲ್ಲು ಬಿಡುತ್ತಿದ್ದುದನ್ನು ಕಂಡು ಪಿತ್ತ ಕೆರಳಿದಂತಾಯ್ತು. ತನ್ನ ಕೂಗಾಟ, ಅಬ್ಬರ, ಸಿಟ್ಟು, ಬೈಗುಳ, ಶಾಪ, ಒಡೆತನದ ರೋಷಾಟೋಪ. ತನ್ನ ಕೂಗಾಟ, ಅಬ್ಬರ, ಸಿಟ್ಟು, ಬೈಗುಳ, ಶಾಪ, ಒಡೆತನದ ರೋಷಾಟೋಪ ಒಂದೂ ಕೆಲಸಕ್ಕೆ ಬಾರದವು ಎಂದೆನಿಸುವಂತೆ ಎಲ್ಲವನ್ನೂ ವ್ಯರ್ಥಗೊಳಿಸುತ್ತಿದ್ದ ಹೊಲೆಯದ ಧೂರ್ತ ಪ್ರಶಾಂತ ಭಂಗಿಯಂತೂ ಬೆಂಕಿಗೆ ತುಪ್ಪ ಹೊಯ್ದಂತಾಯ್ತು ಅವನ ಕೋಪಕ್ಕೆ:
“ಸೋಮಾರಿ ಸೂಳೆ ಮಕ್ಳಾ, ಎಷ್ಟು ಅಂತಾ ಕೂಗಬೇಕೋ ನಿಮ್ಮನ್ನ? ನಿಮ್ಮ ಕಿವಿ ಎಲ್ಲ ಹೊಟ್ಟಿಹಾರಿ ಹೋಗಿದೆಯೇನೋ? ಬಿಸಿಲು ನೆತ್ತಿಗೆ ಬಂದ್ರೂನೂ ನಿಮಗೆ ಮಾತ್ರ ಬೆಳಗಾಗೋದಿಲ್ಲ!”
ತಿಮ್ಮನ ನಗೆಯ ಮುಗುಳು ಮೀಸೆಯ ಕೆಳಗಡೆ ಮತ್ತಷ್ಟು ಅಗಲವಾದಂತಾಯಿತು. ಎಲೆಯಡಿಕೆ ಜಗಿದೂ, ಜಗಿದೂ, ಕೆಂಪು ಕೊಳೆ ಕೂತು, ಕಪ್ಪಿಗೆ ತಿರುಗಿದ್ದ ಹುಳುಕು ಹಲ್ಲಿನ ಸಾಲು ಅರಳಿದಂತಾಯ್ತು. ಅಭ್ಯಾಸ ಬಲದ ಮೇಲೆ ಸೊಂಟದತ್ತ ನೋಡದೆಯೆ ಕೆಲಸದ ಕತ್ತಿಯನ್ನು ಒಡ್ಯಾಣದ ಕೊಂಡಿಗೆ ಸಿಕ್ಕಿಸಿಕೊಳ್ಳುತ್ತಾ ನಿಧಾನವಾಗಿ “ಎಲ್ರೋ? ನಿಮ್ಮ ಗಂಟ್ಲು ಕೇಳಿಸ್ದ ಕೂಡ್ಲೆ ಹೊಲ್ಟು ಬಂದೀನಿ!” ಎಂದು ತುಸು ರಾಗವಾಗಿ ಎಳೆದು ಹೇಳುತ್ತಾ ಒಡೆಯರ ಮುಂದೆ ದಿಬ್ಬದ ಕೆಳಗೆ ಬಂದು ನಿಂತನು.
ಅಷ್ಟರಲ್ಲಿ ಓಡೋಡಿ ಬರುತ್ತಿದ್ದ ಹಳೆಪೈಕದ ಹೂವಿ ಮರಗಳ ಕೆಳಗೆ ಪೊದೆಗಿಡಗಳ ನಡುವೆ ಕಾಣಿಸಿದಳು.
ತಿಮ್ಮ ಆ ಕಡೆ ನೋಡಿ ಅರೆ ನಗುತ್ತಾ “ಯಾಕ್ರೋ ಹೂವಮ್ಮ ಓಡಿ ಬರ್ತಾರೆ?” ಎಂದು ಒಡೆಯರ ಗಮನವನ್ನು ಅತ್ತಕಡೆ ಸೆಳೆದನು. ಹೂವಿಯನ್ನು ನೋಡಿದ ಹೆಗ್ಗಡೆಗೆ ಇದ್ದಕ್ಕಿದ್ದ ಹಾಗೆ ಸಿಟ್ಟು ಶಮನವಾದಂತಾಗಿ, ನಸುನಗೆಗೂಡಿ ಆ ಕಡೆ ತಿರುಗಿದನು. ಅವಳೂ ತುಸು ನಾಚಿದಂತೆ  ದೂರದಲ್ಲಿ ನಿಂತು “ದೊಡ್ಡ ಅಯ್ಯೋರು ಹೇಳಿದ್ರು, ಹಂದೀ ಹಸಿಗೆಗೆ ಯಾರಾದ್ರೂ ಇಬ್ಬರ್ನ ಕಳಿಸಬೇಕಂತೆ” ಎಂದವಳೆ ದೃಷ್ಟಿ ತಿರುಗಿಸಿ ಕೇರಿಯ ಕಡೆ ನೋಡತೊಡಗಿದಳು.
ತಿಮ್ಮಪ್ಪ ಹೆಗ್ಗಡೆಗೆ ಆಶ್ಚರ್ಯವಾಯಿತು, ಹಂದಿ ಷಿಕಾರಿ ಯಾರು ಮಾಡಿದರು ಎಂದು!
“ಯಾರೇ ಹಂದಿ ಹೊಡೆದಿದ್ದು?”
“ನಂಗೊತ್ತಿಲ್ಲ. ಹೇಳಿ ಬರಾಕೆ ಹೇಳಿದ್ರು” ಎಂದವಳು ಅಲ್ಲಿ ನಿಲ್ಲದೆ ಹಿಂದಿರುಗಿ ಅವಸರವಾಗಿಯೆ ನಡೆದು ಪೊದೆಗಳಲ್ಲಿ ಮರೆಯಾದಳು.
ಸಾಕಿದ್ದ ಊರು ಹಂದಿಯನ್ನು ಅಡ್ಡೆಕಟ್ಟಿ ಹೊರುವುದಕ್ಕಾಗಿ ಇಬ್ಬರು ಹೊಲೆಯರನ್ನು ಬರಹೇಳಿದ್ದರು ಸುಬ್ಬಣ್ಣ ಹೆಗ್ಗಡೆ. ಆದರೆ ಹೂವಿ ಹೇಳಿದ ರೀತಿಯಲ್ಲಿ, ಯಾರೋ ಕಾಡುಹಂದಿ ಷಿಕಾರಿ ಮಾಡಿದ್ದಾರೆ, ಅದರ ಹಸಿಗೆಗೆ ಬರಬೇಕಂತೆ ಎಂಬರ್ಥ ಸ್ಫುರಿಸಿತ್ತು.
ಆದರೆ ಆ ಸುಳ್ಳು ಅರ್ಥದಲ್ಲಿ ಎಂತಹ ಮಂತ್ರಶಕ್ತಿ ಮೈದೋರಿತ್ತು ಎಂದರೆ, ಹಂಚಿ ಮತ್ತು ಹಸಿಗೆ ಎಂಬ ಮಾತು ಬಿಡಾರದಿಂದ ಬಿಡಾರಕ್ಕೆ ಮಿಂಚಿನ ವೇಗದಿಂದ ಮುಟ್ಟಿದ್ದೇ ತಡ, ಮುಚ್ಚಿದ್ದ ತಟ್ಟಿಬಾಗಿಲುಗಳು ಸರಸರನೆ ಒಂದಾದಮೇಲೊಂದರಂತೆ ತೆರೆದುಕೊಂಡುವು. ಬೆಟ್ಟಳ್ಳಿಗೆ ಹೋಗಬೇಕೆಂದಿದ್ದ ಮಂಜ ಪುಸಕ್ಕನೆ ಕೆಲಸದ ಕತ್ತಿಯನ್ನು ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಾ ಹಾರಿಬಂದತು. ಇಲಿ ಅಳಿಲುಗಳನ್ನು ಅರ್ಧಂಬಂರ್ಧ ಸುಟ್ಟಂತೆಯೆ ಬಿಟ್ಟಿಯ ಅಡಿ ಮುಚ್ಚಿಟ್ಟು, ಬೈರ ಹೊರಕ್ಕೆ ನೆಗೆದನು. ಸಿದ್ದ, ಕರಿಸಿದ್ದ, ಬಚ್ಚ, ಸಣತಿಮ್ಮ, ಪುಟ್ಟ- ಅಂಗಳವೆಲ್ಲಾ ಆಳುಗಳಿಂದ ತುಂಬಿಹೋದಂತಾಯಿತು!
“ಯಾರಾದರೂ ಇಬ್ಬರನ್ನ ಕಳಿಸಬೇಕಂತ್ರೋ. ಉಳಿದೋರೆಲ್ಲ ಗದ್ದೆ ಕೆಲಸಕ್ಕೆ ಹೊರಡಿ” ಎಂದ ಹೆಗ್ಗಡೆಗೆ.
ಮಂಜ “ಇಬ್ಬರು ಎಲ್ಲಿ ಸಾಕಾಗ್ತದ್ರೋ ಹಂದಿ ಹಸಿಗೆಗೆ? ಬ್ಯಾಗ ಬ್ಯಾಗ ಎಲ್ಲ ಮಾಡಿಕೊಟ್ಟ, ಗದ್ದೆ ಕೆಲಸಕ್ಕಾದ್ರೆ ಗದ್ದೆ ಕೆಲಸಕ್ಕೆ, ಹೋಗ್ತೀವಿ” ಎಂದನು.
“ಏನಾದ್ರೂ ಸಾಯಿರಿ! ಅಲ್ಲಿ ಅಪ್ಪಯ್ಯನ ಹತ್ರ ಬೈಸಿಕೊಳ್ತೀರಿ! ನಂಗೇನು? ಬನ್ನಿ!” ಎಂದು ತಿಮ್ಮಪ್ಪ ಹೆಗ್ಗಡೆ ಅಂಗಳದಲ್ಲಿ ನೆರೆದಿದ್ದ ಹೆಂಗಸರು ಗಂಡಸರು ಮಕ್ಕಳು ಇವರ ನಡುವೆ ನಿಂತಿದ್ದ ಕುಳುವಾಡಿ ಸಣ್ಣನ ಮಗಳ ಕಡೆ ಕಣ್ಣು ಹಾಯಿಸುತ್ತಾ ಮನೆ ಕಡೆಗೆ ತಿರುಗಿ ನಡೆದನು.
ಹಂದಿ ಹಸಿಗೆಯಾದ ಮೇಲೆ ತಮಗೆ ದೊರೆಯುವ ಪಾಲಿನ ವಿಚಾರವಾಗಿ ಮಾತಾಡುತ್ತ ಆಳುಗಳೆಲ್ಲ ಒಡೆಯನ್ನು ಹಿಂಬಾಲಿಸಿದರು.
“ಎಷ್ಟು ಆಳಿಗೆ ಇದೆಯಂತೋ?”
“ಯಾರಿಗೆ ಗೊತ್ತೋ? ಆ ಹೂವಮ್ಮ ಏನೊ ಹೇಳಿ ಹೋದ್ರು.”
“ಇಬ್ಬರನ್ನೆ ಬರಾಕೆ ಹೇಳಿದ್ದು ನೋಡ್ರಿದ್ರೆ ಅಷ್ಟೇನೊ ದೊಡ್ಡದಲ್ಲಾ ಅಂತ ಕಾನ್ತದೆ.”
“ಸೈ ಬಿಡು ನೀನೊಬ್ಬ! ಆ ದೊಡ್ಡ ಹೆಗ್ಗಡೇರ ಇಚಾರ ಯಾರಿಗೆ ಗೊತ್ತಿಲ್ಲ? ಇಬ್ಬರ ಕೈಲೇ ಹಸಿಗೆ ಮಾಡಿಸಿದ್ರೆ ಏಳೆಂಟು ಪಾಲು ಕೊಡಾದು ತಮಗೇ ಉಳೀತದೆ! ಹ್ಹಹ್ಹಹ್ಹ! ಅಲ್ಲೇನು ಹೇಳು?”
ಹಳುಬೆಳೆದ ಕಾಡುದಾರಿಯಲ್ಲಿ ಬೇಗಬೇಗನೆ ನಡೆಯುತ್ತಿದ್ದ ಏಳೆಂಟು ಆಳುಗಳ ಮಾತಿಗೆ ಅವರ ಸೊಂಟದ ಕತ್ತಿಗಳ ತಲೆದೊಗಾಟದ ಕಣಕಣ ಸದ್ದು ಹ್ಞೂಂಗುಡುವಂತೆ ತೋರುತ್ತಿತ್ತು.
*****

ಕಾಮೆಂಟ್‌ಗಳಿಲ್ಲ: