ಮಲೆಗಳಲ್ಲಿ ಮದುಮಗಳು-೫೦

ಕನಸಿನಿಂದ ಎಚ್ಚೆತ್ತು ಹಾಸಗೆಯಲ್ಲಿ ಮಗ್ಗುಲಿಗೆ ಹೊರಳಿದಾಗ ಚಿನ್ನಮ್ಮಗೆ, ತಾನು ತೊಟ್ಟುಕೊಂಡೆ ಮಲಗಿ ನಿದ್ರಿಸಿದ್ದ ಆಭರಣಗಳಿಂದಲೂ ಉಟ್ಟುಕೊಂಡಿದ್ದ ಹೊಸ ಸೀರೆಯ ಜರಿಯ ಮರ್ಮರದಿಂದಲೂ, ತಾನು ಮದುಮಗಳಾಗಿದ್ದೇನೆ ಎಂಬ ಕಟುತ್ವ ತಟಕ್ಕನೆ ಪ್ರಜ್ಞಾಗೋಚರವಾಯ್ತು. ಅವಳು ಆ ಬೆಲೆಯುಳ್ಳ ಒಡವೆಗಳನ್ನು ಸಂತೋಷದಿಂದ ತೊಟ್ಟುಕೊಂಡಿರಲಿಲ್ಲ; ಇತರರ ಬಲಾತ್ಕಾರಕ್ಕಾಗಿ ಇಟ್ಟುಕೊಂಡಿದ್ದಳಷ್ಟೆ!
ಹೂವಳ್ಳಿ ಮನೆಯ ಆ ಕೋಣೆಯಲ್ಲಿ ಇನ್ನೂ ಕತ್ತಲೆ ತನ್ನ ಅಧಿಕಾರವನ್ನು ಬಿಟ್ಟುಕೊಟ್ಟಿರಲಿಲ್ಲ. ಆಗ ತಾನೆ ಬೆಳಗಾಗಿದ್ದರೂ, ಮೋಡ ಮುಸುಕಿ, ಮಳೆ ಕುಂಭದ್ರೋಣವಾಗಿ ಸುರಿಯುತ್ತಿದ್ದುದರಿಂದ, ಮಳೆಗಾಲದ ಮಲೆನಾಡಿನಲ್ಲಿ ನಿರಂತರವಾಗಿ ದಟ್ಟಯಿಸಿರುವ ಹಗಲುಮಬ್ಬು ಆ ಒಂದೇ ಒಂದು ಸಣ್ಣ ಬೆಳಕಂಡಿ ಇರುವ ಕೋಣೆಯನ್ನು ಬೆಳಗಲು ಪ್ರಯತ್ನಿಸಿ ಸೋತುಹೋದಂತಿತ್ತು.
ಮಲಗಿದ್ದಂತೆಯೆ ಮದುವಣಗಿತ್ತಿ ಚಿನ್ನಮ್ಮ ತುಸು ತಲೆಯೆತ್ತಿ ನೋಡಿದಳು. ತನಗೆ ತುಸು ಬಳಿಯೆ ಇದ್ದು ಬರಿದಾಗಿದ್ದ ಹಾಸಗೆಯಿಂದ ತನ್ನ ಅಜ್ಜಿ ಆಗಲೆ ಎದ್ದು ಅಡುಗೆ ಮನೆಗೆ ಹೋಗಿದ್ದುದು ಗೊತ್ತಾಯಿತು. ತನ್ನ ಮತ್ತೊಂದು ಪಕ್ಕದಲ್ಲಿ ಚಾಪೆಗಳ ಮೇಲೆ ಹಾಸಿದ್ದ ಒಂದು ದೊಡ್ಡ ಜಮಖಾನೆಯ ಮೇಲೆ ಮೂವರು ಹುಡುಗರು ಅಸ್ತವ್ಯಸ್ತವಾಗಿ ಮಲಗಿದ್ದುದು ಮಬ್ಬುಮಬ್ಬಾಗಿ ಕಾಣಿಸಿತು. ಮದುವೆ ಮನೆಯಲ್ಲಿ ಬಂದ ನೆಂಟರಿಗೆಲ್ಲ ಹಾಸಗೆ ಹಾಸುವುದು ಸಾಧ್ಯವಲ್ಲವಾದ್ದರಿಂದ ಚಾಪೆಗಳ ಮೇಲೆ ಜಮಖಾನೆಯನ್ನೊ ಜಾಡಿಯನ್ನೊ ಹೆಗ್ಗಂಬಳಿಯನ್ನೊ ಬಿಚ್ಚಿಹರಡಿದರೆ ಅದೇ ಹಾಸಗೆಯಾಗಿ, ಅಗಲಕ್ಕೆ ತಕ್ಕಂತೆ, ಎಂಟೊ ಹತ್ತೊ ಇಪ್ಪತ್ತೊ ಜನರು ಒಟ್ಟೊಟ್ಟಿಗೆ ಮಲಗುತ್ತಿದ್ದುದು ರೂಢಿ. ಹಾಗೆಯೆ ಚಿನ್ನಮ್ಮನ ಅಜ್ಜಿಯ ಕೋಣೆಯಲ್ಲಿ ಬಿಡಿ ಹಾಸಗೆಗಳಲ್ಲಿ ಮಲಗಿದ್ದ ಚಿನ್ನಮ್ಮ ಮತ್ತು ಅವಳ ಅಜ್ಜಿಯ ಜೊತೆ, ಹಾಸಿದ್ದ ಒಂದು ಜಮಖಾನೆಯಲ್ಲಿ, ಧರ್ಮು ಕಾಡು ತಿಮ್ಮು ಮೂವರೂ ಒಬ್ಬರ ಹೊಟ್ಟೆಯ ಮೇಲೆ ಒಬ್ಬರು ಕಾಲು ಹಾಕಿಯೊ, ಒಬ್ಬರ ಕಾಲ ಹತ್ತಿರ ಮತ್ತೊಬ್ಬರು ತಲೆ ಇಟ್ಟುಕೊಂಡೊ, ಹೊದಿಕೆಯನ್ನು ಎತ್ತೆತ್ತಲೊ ತಳ್ಳಿ ಮಲಗಿದ್ದರು!
ನಿರುದ್ವಿಗ್ನರೂ ನಿಶ್ಚಿಂತರೂ ಆಗಿ ಅಸ್ತವ್ಯಸ್ತ ವಿಚಿತ್ರ ವಿನ್ಯಾಸ ಭಂಗಿಗಳಿಂದ ನಿದ್ರಾಮಗ್ನರಾಗಿ ಬಿದ್ದಿದ್ದ ಆ ಬಾಲಕರ ಮುಗ್ದರೂಪಗಳನ್ನು ಕಂಡು ಚಿನ್ನಮ್ಮಗೆ ತನ್ನ ಆ ವಿಷಮಸಂಕಟಸ್ಥಿತಿಯಲ್ಲಿಯೂ ಮುಗುಳುನಗದಿರಲಾಗಲಿಲ್ಲ. ಏಕೋ ಏನೋ? ಆ ಮಳೆಯ ರೇಜಿಗೆಯ ದುರ್ದಿನದ ನಿರಾಶಾಮಯ ಮ್ಲಾನತೆಯಲ್ಲಿಯೂ ಹಾಗೆ ಪ್ರಶಾಂತವಾಗಿ ನಿದ್ರಿಸುತ್ತಿದ್ದ ಮಕ್ಕಳನ್ನು ಕಂಡ ಅವಳ ಹೃದಯದಲ್ಲಿ ಏನೋ ಆಶಾಭರವಸೆ ಸುಳಿದಂತಾಗಿ, ಮತ್ತೆ ಹಾಗೆಯೆ ಮಲಗಿ ಕಣ್ಣುಮುಚ್ಚಿಕೊಂಡಳು.
ಮನಸ್ಸು ಎಚ್ಚರುವ ಮುನ್ನ ತಾನು ಕಂಡಿದ್ದ ಕನಸನ್ನು ನೆನೆದು ಸೋಜಿಗಪಡಗತೊಡಗಿತ್ತು:
-ಹೌದು; ಮುಕುಂಬಾವ ಕಲ್ಲೂರು ಹೊಳೆದಂಡೆಯಲ್ಲಿ ಕಂಡೆ ಎಂದು ಹೇಳಿದ್ದ ಆ ಗಡ್ಡದಯ್ಯನವರೆ ಇರಬೇಕು, ಕನಸಿನಲ್ಲಿ ನನಗೆ ಕಾಣಿಸಿಕೊಂಡ ಸ್ವಾಮಿಗಳು! ಅವರ ಸಂಗಡ ಮುಕುಂಬಾವನೂ ಅವರ ದೊಡ್ಡಕ್ಕಯ್ಯನ ಕೈಹಿಡಿದು ನಡೆಸಿಕೊಂಡು ಬಂದರಲ್ಲಾ? ಏನಾಶ್ಚರ್ಯ!…. ಪಾಪ!…. ಹಳೆಮನೆ ರಂಗತ್ತಿಗಮ್ಮ ಗಂಡನ ಪಾದ ಹಿಡಿದುಕೊಂಡೇ ಸತ್ತು, ಗಂಡನ ಸಂಗಡಲೇ ಸೂಡಿನಲ್ಲಿ ಮಲಗಿ ಸ್ವರ್ಗಕ್ಕೆ ಹೋದರಲ್ಲಾ! ಹೆಂಡತಿ ಅಂದರೆ ಹಾಂಗಿರಬೇಕು. ಗಂಡನ ಜೊತೇಲೆ ಹೋಗಿಬಿಡಬೇಕು!….ಗಡ್ಡದಯ್ಯನೋರು ಏನೇನೋ ಹೇಳಿದ್ರಲ್ಲಾ ಮುಕುಂದಬಾವಗೆ…. ನಂಗೊಂದೂ ಈಗ ನೆನಪಾಗೋದಿಲ್ಲ…. ರಂಗತ್ತಿಗಮ್ಮ ನನ್ನ ತಲೆ ಸವರುತ್ತಾ ’ಅಳಬೇಡ, ಚಿನ್ನೂ! ನಮ್ಮ ಮುಕುಂದ ಇದಾನೆ, ಯಾಕೆ ನಿಂಗೆ ಹೆದರಿಕೆ!’ ಅಂತಾ ಹೇಳಿದ್ಹಾಂಗಯ್ತಲ್ಲೇ?…. ಥೂ ಇನ್ನೂ ಏನೇನೋ! ಸರಿಯಾಗಿ ನೆನಪೇ ಆಗ ಒಲ್ಲದು….
ಪಕ್ಕದಲ್ಲಿ ಮಲಗಿದ್ದ ಧರ್ಮು ನಿದ್ದೆಯಲ್ಲಿಯೆ ಏನನ್ನೊ ತಿನ್ನುವ ನಂತೆ ಬಾಯಿ ಚಪ್ಪರಿಸಿದುದನ್ನು ಗಮನಿಸಿ ಚಿನ್ನಮ್ಮಗೆ ಅವನೆ ಮೇಲೆ ಮುದ್ದು ಸೂಸಿದಂತಾಗಿ ಮುಗುಳು ನಗುತ್ತಾ ’ಕನಸಿನಾಗೇ ಎಂಥದನ್ನೋ ತಿಂತಿದಾನೆ ಧರ್ಮು….ಪಾಪ ತಬ್ಬಲಿ!….ನನ್ನ ಕನಸಿನಲ್ಲಿ ಅವನಮ್ಮ ಬಂದಿದ್ದನ್ನ ಅವನಿಗೆ ಹೇಳಿದ್ರೆ, ಗೊಳೋ ಅಂತಾ ಅತ್ತೇ ಬಿಡ್ತಾನೆ….ಎದ್ದಮೇಲೆ, ಅವನಿಗೆ, ನಿನ್ನೆ ನಾನು ನಾಗಕ್ಕ ಸೇರಿ ಮಾಡಿಟ್ಟಿರುವ, ಅರಳುಂಡೆ ಕೊಡ್ತೀನಿ….ಅವನು ಆ ಗಡ್ಡದಯ್ಯನೋರ್ನ ನೋಡಿದ್ದನಂತೆ, ಕಾಡು ತಿಮ್ಮು ಜೊತೇಲಿ….ಜೋಳಿಗೆಗೆ ಕೈಹಾಕಿ ಹಾಕಿ, ಏನೇನೊ ಹಣ್ಣು ಕೊಟ್ಟಿದ್ದರಂತೆ, ಆ ಗಡ್ಡದಯ್ಯನೋರು!….ಮುಕುಂದಬಾವ ಹೇಳ್ತಿದ್ರು, ಅವರು ದೊಡ್ಡ ಮಹಾತ್ಮರು ಅಂತಾ….
ಇದ್ದಕ್ಕಿದ್ದಹಾಗೆ ಧರ್ಮು “ಅವ್ವಾ, ಅವ್ವಾ, ಹೋಗ್ಬೇಡ, ಹೋಗ್ಬೇಡ! ನಾನೂ ಬತ್ತೀನಿ! ನಾನೂ ಬತ್ತೀನಿ! ದಮ್ಮಯ್ಯ! ದಮ್ಮಯ್ಯ! ನಿಂತ್ಕೋ ನಿಂತ್ಕೋ” ಎಂದು ಕೂಗಿಕೊಳ್ಳುತ್ತಾ ತಟಕ್ಕನೆ ಎದ್ದು ಕುಳಿತನು, ನಿದ್ದೆಗಣ್ಣಿನಲ್ಲಿಯೆ ಎಲ್ಲಿಗೋ ಓಡುವವನಂತೆ!
ಚಿನ್ನಮ್ಮ ಅವನನ್ನು ತಬ್ಬಿ ಹಿಡಿದು “ತಮ್ಮಯ್ಯಾ, ತಮ್ಮಯ್ಯಾ, ಎಚ್ಚರ ಮಾಡಿಕೊ” ಎಂದು ಕೆನ್ನೆಯ ಮೇಲೆ ಕೈಯಾಡಿಸಿದಳು, ಮದುಮಗಳ ಸಾಲಂಕೃತ ಕರದ ಕಡಗ ಬಳೆಗಳು ಝಣತ್ಕರಿಸುವಂತೆ….
ಧರ್ಮು ಕಣ್ದೆರೆದು ಬೆಬ್ಬಳಿಸಿಸುತ್ತ ನೋಡುತ್ತಾ, ಚಿನ್ನಮ್ಮನನ್ನು ಗುರುತಿಸಿ, ಅವಳ ಕುತ್ತಿಗೆಗೆ ಸೆಟ್ಟುಹಾಕಿಕೊಂಡು ಅಳತೊಡಗಿದನು.
“ಯಾಕೋ ತಮ್ಮಯ್ಯಾ, ಎಚ್ಚರಮಾಡಿಕೊಳ್ಳೋ! ನಾನು ಕಣೋ, ನಿನ್ನ ಚಿನ್ನಕ್ಕಯ್ಯ!”
“ಅವ್ವಾ ಬಂದಿತ್ತು, ಚಿನ್ನಕ್ಕಯ್ಯ. ನಾನು ಕರೆದ್ರೂ ನಿಲ್ಲಲಿಲ್ಲ ಹೋಗೇ ಬಿಡ್ತು.”
ಕಣ್ಣೀರೊರಸುತ್ತಾ ಚಿನ್ನಮ್ಮ ಸಂತೈಸಿದಳು: “ಕನಸು ಕಣೋ ಅದಕ್ಕೆ ಯಾಕೆ ಅಳ್ತೀಯಾ?”
“ಅವೊತ್ತು ನಿಂಗೆ ಹೇಳ್ತಿದ್ದೆನಲ್ಲಾ, ಆ ಗಡ್ಡದಯ್ಯ? ಅವನೂ ಬಂದಿದ್ದ. ಅವೊತ್ತನ್ಹಾಂಗೆ ಜೋಳಿಗೆಯಿಂದ ಹಣ್ಣು ತೆಗೆದೂ ತೆಗೆದೂ ಅವ್ವನ ಕೈಗೆ ಕೊಡ್ತಿದ್ದ. ಅವ್ವ ನಂಗೆ ಕೊಡ್ತಿತ್ತು. ನಾನೂ ತಿಂದಿದ್ದೇ ತಿಂದಿದ್ದು!….”
“ಅದಕ್ಕೆ ಏನೋ, ಬಾಯಿ ಚಪ್ಪರಿಸ್ತಿದ್ದೀ, ನಿದ್ದೇಲೀ?….ನಾನು ಎಂಥದನಪ್ಪಾ ಹೀಂಗೆ ತಿನ್ತಾನೆ ಅಂತಿದ್ದೆ?….” ಚಿನ್ನಮ್ಮನ ಧ್ವನಿಯಲ್ಲಿ ಹಾಸ್ಯವಿತ್ತು.
ಇಬ್ಬರೂ ಮೆಲ್ಲಗೆ ನಗಾಡಿದರು.
ಮಳೆ ತುಸು ನಿಂತಿದ್ದರಿಂದ ಮದುವೆಮನೆಯ ಗಜಿಬಿಜಿ ಕೋಣೆಯವರೆಗೂ ಕೇಳಿಸಿತ್ತು. ಬೆಳಕೂ ತುಸುವೆ ಬಲಿತಿತ್ತು.
“ಏ ಎಡದ ಮಗ್ಗುಲಲ್ಲಿ ಏಳಬೇಡೋ?” ಎಚ್ಚರಿಸಿದನು ಧರ್ಮು.
ಹಾಸಗೆಯ ಮೇಲೆ ಎದ್ದು ಕುಳಿತಿದ್ದ ತಿಮ್ಮು ಮತ್ತೆ ಮಲಗಿ, ತನ್ನ ಬಲಗಡೆ ಯಾವುದೆಂದು ಖಾತ್ರಿ ಮಾಡಿಕೊಂಡು, ಬಲದ ಮಗ್ಗುಲಲ್ಲಿ ಎದ್ದುಕುಳಿತನು, ಸಂಭವಿಸಲಿದ್ದ ಯಾವುದೊ ಅಮಂಗಳವನ್ನು ಪರಿಹರಿಸಿಕೊಂಡ ಸಂತೃಪ್ತಿಯಿಂದ.
ಮೂವರು ಹುಡುಗರೂ ಬಡಬಡನೆ ಎದ್ದು ಕೋಣೆಯಿಂದ ಹೊರಗೆ ಓಡುತ್ತಲೆ ಹೋದರು….ಕಾಲಿಗೆ ಮುಳ್ಳು ಚುಚ್ಚಿ ಕೀತಿದ್ದ ಬಲಹಿಮ್ಮಡಿಯನ್ನು ಊರಲಾರದೆ ಕಾಡು ಕುಂಟಿ ಟೊಕ್ಕಹಾಕುತ್ತಲೆ ಹೊಸಲು ದಾಟಿದನು. ಕಳೆದ ರಾತ್ರಿ ಮಲಗುವಾಗಲೆ ಚಿನ್ನಮ್ಮ ಅವನ ಕಾಲಿಗೆ ಎರಡು ದಿನಗಳ ಹಿಂದೆಯೆ ಚುಚ್ಚಿ ಒಳಗೇ ಮುರಿದುಕೊಂಡಿದ್ದ ಮುಳ್ಳನ್ನು ಸೂಜಿಯಿಂದ ಬಿಡಿಸಿ, ತೆಗೆಯುತ್ತೇನೆಂದು ಎಷ್ಟು ಹೇಳಿದರೂ ’ನೋವಾಗುತ್ತದೆ’ ಎಂದು ಮುಳ್ಳನ್ನು ತೆಗೆಯಲು ಬಿಟ್ಟಿರಲೆ ಇಲ್ಲ, ಕಾಡು.
ಮೂವರು ಹುಡುಗರೂ ಹೊರಗೆ ಹೋದ ಮೇಲೆ ಕೋಣೆಯ ಜನವಿಹೀನತಾ ನಿಃಶಬ್ದತೆ ತಟಕ್ಕನೆ ಬಾರಚಪ್ಪಡಿಯಾಗಿ ತನ್ನ ಹೃದಯದ ಮೇಲೆ ಅಪ್ಪಳಿಸಿ ಕೂತಂತಾಯ್ತು. ಉಸಿರಾಡುವುದು ಕಷ್ಟವಾದಂತಾಗಿ ಪ್ರಯತ್ನಪೂರ್ವಕ ಉಸಿರೆಳೆದುಕೊಳ್ಳತೊಡಗಿದಳು. ಮಕ್ಕಳ ಸಂಗದಲ್ಲಿ ಅಷ್ಟೇನೂ ಪ್ರಜ್ಞಾಭಾರವಾಗಿರದೆ ಹಗುರವಾದಂತಿದ್ದ ತನ್ನ ಆ ದಿನದ ಘೋರ ಪರಿಸ್ಥಿತಿ, ನೀರಿನೊಳಗಿದ್ದ ಕಲ್ಲುಗುಂಡನ್ನು ನೀರಿನ ಮಟ್ಟದಿಂದ ಮೇಲಕ್ಕೆ ಎತ್ತಿದಾಗ ಆಗುವಂತೆ, ಇಮ್ಮಡಿ ಮುಮ್ಮಡಿ ತೂಕದಿಂದ ಅಸಹನೀಯ ದುರ್ಭರವಾಯಿತು. ಆ ಪರಿಸ್ಥಿತಿಯಿಂದ ತನ್ನನ್ನು ಪಾರುಮಾಡಲು ರಚಿತವಾಗಿರುವ ವ್ಯೂಹೋಪಾಯವೂ ತನ್ನ ಅಪಾಯಕರ ಸಂದಿಗ್ಧತೆಯಿಂದ ಮತ್ತಷ್ಟು ಭೀಕರವಾಗಿ ಕಂಡಿತು. ಮುಕುಂದಬಾವ ನಿಂದ ಕಲಿತಿದ್ದ ಪ್ರಾರ್ಥನೆ ನಿಟ್ಟುಸಿರಾಗಿ ಹೊಮ್ಮಿತು: ’ನಿನ್ನ ಪಾದಕ್ಕೆ ಬಿದ್ದೆ; ಕೈ ಹಿಡಿದೆತ್ತಿ ಕಾಪಾಡು, ಸ್ವಾಮಿ, ಸ್ವಾಮಿ, ಪರಮಾತ್ಮಾ!’
ಭಗವಂತನಿದ್ದಾನೆ ಎಂಬುದರಲ್ಲಾಗಲಿ, ಭಕ್ತಿಯಿಂದ ಪ್ರಾರ್ಥಿಸಿದರೆ ನಮ್ಮ ಕಷ್ಟಗಳನ್ನೆಲ್ಲ ಪರಿಹರಿಸಿ ಕಾಪಾಡುತ್ತಾನೆ ಎಂಬುದರಲ್ಲಾಗಲಿ, ಅವನಿಗೆ ಅಸಾಧ್ಯವಾದುದು ಏನು ಇಲ್ಲ, ಅವನು ಸರ್ವಶಕ್ತ ಎಂಬುದರಲ್ಲಾಗಲಿ, ಅವಳು ಸಂದೇಹವೆಂಬುದನ್ನೆ ಹುಟ್ಟಿನಿಂದಲೆ ಅರಿಯದವಳಾಗಿದ್ದಳು. ಅವಳ ಶ್ರದ್ಧೆ ವಿಚಾರನಿಷ್ಠವಾಗಿರಲಿಲ್ಲ, ನಿಸರ್ಗ ಸಿದ್ಧವಾಗಿತ್ತು. ಭಾಗವತರಾಟಗಳಲ್ಲಿ ತಾಳಮದ್ದಳೆ ಪ್ರಸಂಗಗಳಲ್ಲಿ ಅವಳು ಕೇಳಿ ನೋಡಿದ್ದುದು ಏನಿದ್ದರೂ  ಆ ನಿಸರ್ಗದತ್ತವಾದ ಶ್ರದ್ಧೆಯನ್ನು ಸ್ವಲ್ಪ ಬುದ್ಧಿಜಾಗ್ರತವನ್ನಾಗಿ ಮಾಡುವುದೆಷ್ಟೋ ಅಷ್ಟೆ ಆಗಿತ್ತು. ದ್ರೌಪದಿಗೆ ಮಾನಾಪಹರಣಕಾರಿಯಾದ ಮಹತ್ ಸಂಕಟ ಒದಗಿದಾಗ ಅವಳ ಪ್ರಾರ್ಥನೆಗೆ ಓಗೊಟ್ಟು ಕಾಪಾಡಲಿಲ್ಲವೆ ಶ್ರೀಕೃಷ್ಣ ಪರಮಾತ್ಮ? ಮೊಸಳೆಯ ಕೈಗೆ ಸಿಕ್ಕ ಗಜೇಂದ್ರನ ಪ್ರಾರ್ಥನೆ ಕೂಡ ಭಗವಂತನಿಗೆ ಕೇಳಿಸಿರಲಿಲ್ಲವೆ? ಭಕ್ತರ ಆರ್ತಪ್ರಾರ್ಥನೆಗೆ ಭಗವಂತ ಓಗೊಟ್ಟ ಎಷ್ಟೋ ಕಥೆಗಳನ್ನು ಕೇಳಿದ್ದಳು ಚಿನ್ನಮ್ಮ. ಆದರೆ ಅವು ಬರಿಯ ಕಾವ್ಯ ಕಥೆಗಳಾಗಿರಲಿಲ್ಲ ಅವಳಿಗೆ; ಸರಿಯಾಗಿ ಪ್ರಯೋಗವಾದೊಡನೆಯೆ ನಿರ್ದಿಷ್ಟ ಫಲವನ್ನೆ ಅನಿವಾರ್ಯವಾಗಿ ಕೊಡುವ ವೈಜ್ಞಾನಿಕ ಬೀಜಸೂತ್ರಗಳಂತಿದ್ದವು. ಆ ಸೂತ್ರಗಳಲ್ಲಿ ವಿಜ್ಞಾನಿಗಿರುವ ಶ್ರದ್ಧೆಗೇನೂ ಬಿಟ್ಟುಕೊಡುತ್ತಿರಲಿಲ್ಲ ಈ ಕಥಾಪ್ರತಿಮೆಗಳಲ್ಲಿ ಯಾವಾಗ ಬೇಕಾದರಾವಾಗ ಕ್ರಿಯೆಯಾಗಲು ಅಣಿಯಾಗಿರುವ ಕೃಪಾಶಕ್ತಿಯಲ್ಲಿ ಚಿನ್ನಮ್ಮನಿಗೆ ಇದ್ದ ಶ್ರದ್ಧೆ: ಅಂಧಶ್ರದ್ಧೆ, ಅವಿಚಾರದಿಂದ ಅಂಧವಾದಷ್ಟೂ ಶಕ್ತಿಯುಕ್ತವಾಗುವ ಶ್ರದ್ಧೆ, ದಿವ್ಯಶ್ರದ್ಧೆ!
ಇದ್ದಕ್ಕಿದ್ದ ಹಾಗೆ ಗಾಳಿ ಮಳೆಗಳ ಭೋರಾಟದ ವಿರಾಮವನ್ನೆ ಅವಕಾಶ ಮಾಡಿಕೊಂಡಂತೆ, ಮದುವೆಮನೆಯ ವಾಲಗ ಮದ್ದಳೆಗಳ ಪೇಂ ಪೇಂ ಪೇಂ ಡುಬ್ ಡುಬ್ ಡುಬ್ ಡುಬ್ ನಾದ, ಅಲ್ಲ ಸದ್ದು ಕೇಳಿಸ ತೊಡಗಿತ್ತು, ಹಿಂದೆ ಅನೇಕ ಸಾರಿ ಚಿನ್ನಮ್ಮ ನಂಟಳಾಗಿ ಹೋಗಿದ್ದ ಮದುವೆ ಮನೆಗಳಲ್ಲಿ ಕೇಳಿಸಿದ್ದಂತೆ ಕರ್ಣಾನಂದಕರವಾಗಿ ಅಲ್ಲ, ಕರ್ಣಕಠೋರವಾಗಿ! ತೀರ್ಥಹಳ್ಳಿಯಿಂದ ಆ ಜಿರಾಪತಿ ಮಳೆಯಲ್ಲಿ ವಾಲಗದವರು ಬರದಿದ್ದ ಪ್ರಯುಕ್ತ ಹಳೆಮನೆಯ ಕೇರಿಯ ಹೊಲೆಯರನ್ನೆ ಆ ಕೆಲಸಕ್ಕೆ ನೇಮಿಸಿದ್ದರು ಎಂಬ ಕಾರಣದಿಂದಲ್ಲ, ತನಗೊದಗಲಿರುವ ದುರಂತ ಹತ್ತಿರಕ್ಕೆ ಹತ್ತಿರಕ್ಕೆ ಬರುತ್ತಿದೆ ಎಂಬುದನ್ನು ಚಿನ್ನಮ್ಮನ ಪ್ರಜ್ಞೆಗೆ ಚೀರಿಹೇಳುತ್ತಿರುವಂತೆ ತೋರಿದ್ದರಿಂದ. ಯಾರೋ ಆಜ್ಞೆಮಾಡಿರಬೇಕು ಸುಮ್ಮನಿದ್ದ ಆ ವಾಲಗದವರಿಗೆ: ’ಉದ್ರೋ, ಉದ್ರೋ, ಮದೋಳ್ಗೀಗೆ ಸಾಸ್ತ್ರ ಮಾಡಿಸ್ತಾರೆ!’
ಆ ಸದ್ದನ್ನೆ ಹಿಂಬಾಲಿಸಿದಂತೆ ಒಬ್ಬರು ಮುತ್ತೈದೆ ನೆಂಟರಮ್ಮ ಕೋಣೆಯನ್ನು ಪ್ರವೇಶಿಸಿ ರಾಗ ತೆಗೆದರು, ತುಂಬ ವಿಶ್ವಾಸದ ಮತ್ತು ವಿನೋದದ ಧ್ವನಿಯಿಂದ: ’ಏನೇ? ಮದೋಳ್ಗೀಗೆ ಇನ್ನೂ ನಿದ್ದೆ ಹರೀಲೇ ಇಲ್ಲ ಅಂತಾ ಕಾಣ್ತದೆ….? ಹೀಂಗೆ ಮನಗಿದ್ರೆ ಆತು ಬಿಡು ಗಂಡನ ಮನೇಲಿ!….”
ಮುಕುಂದಬಾವ ಹೇಳಿದ್ದರು ಅವಳಿಗೆ, ತನ್ನ ಅಸಮಾಧಾನವನ್ನಾಗಲಿ ದುಃಖವನ್ನಾಗಲಿ ತನಗೆ ಒಪ್ಪಿಗೆಯಿಲ್ಲವೆಂಬ ಭಾವವನ್ನಾಗಲಿ ತೋರಗೊಡಕೂಡದು ಎಂದು ಯಾರ ಸಂಶಯವನ್ನೂ  ಕೆರಳಿಸದಂತೆ ಎಚ್ಚರಿಕೆಯಿಂದ ವರ್ತಿಸಬೇಕು ಎಂದು: ನೆಂಟರಮ್ಮನ ಮಾತಿಗೆ ಚಿನ್ನಮ್ಮ ನಾಚಿಗೆಯನ್ನು ಪ್ರದರ್ಶಿಸಿ ನಸುನಗುವಂತೆ ತೋರುತ್ತಾ ಮೇಲೆದ್ದು ನಿಂತು “ಈಗ ಬಂದು ಬಿಡ್ತೀನಮ್ಮಾ, ನಾಗಕ್ಕನ್ನ ಸ್ವಲ್ಪ ಬರಾಕೆ ಹೇಳ್ತೀರಾ?” ಎಂದಳು.
ನೆಂಟರಮ್ಮ ಹೊರಗೆ ಹೋದರು. ಒಂದೆರಡು ನಿಮಿಷಗಳಲ್ಲಿಯೆ ನಾಗಕ್ಕ ಪ್ರವೇಶಿಸಿದಳು. ಚಿನ್ನಮ್ಮನ ಕಣ್ಣುಸನ್ನೆಯರಿತು ಬಾಗಿಲು ಮುಚ್ಚಿ ತಾಳ ಹಾಕಿದಳು. ಸುತ್ತ ನೋಡಿ, ಕೋಣೆಯಲ್ಲಿ ತಾವಿಬ್ಬರೆ ಅಲ್ಲದೆ ಬೇರೆ ಯಾರೂ ಇಲ್ಲವೆಂದು ನಿಶ್ಚಯ ಮಾಡಿಕೊಂಡು, ಚಿನ್ನಮ್ಮನ ಬಳಿಗೆ ಬಿರುಬಿರನೆ ನಡೆದಳು.
ದುಃಖವುಕ್ಕಿ ಬಂದ ಚಿನ್ನಮ್ಮ ನಾಗಕ್ಕನ್ನನ್ನು ತೆಕ್ಕನೆ ತಬ್ಬು ಹಾಕಿ, ತನ್ನ ಮುಖವನ್ನು ಅವಳ ಎದೆಗೆ ಒತ್ತಿ, ಬಿಕ್ಕಿ ಬಿಕ್ಕಿ ಅಳತೊಡಗಿದಳು.
“ನೀ ಹೀಂಗೆ ಎದೆಗೆಟ್ರೆ ಹೆಂಗೇ? ಸೊಲೂಪ ಧೈರ್ಯ ತಂದುಕೊ. ಯಾಕೆ ಹೆದರ್ಕುತೀಯ?” ಸಂತೈಸಿದಳು ನಾಗಕ್ಕ.
ನಾಗಕ್ಕನ ವಕ್ಷಸ್ಥಲದಿಂದ ಮೊಗವೆತ್ತಿ, ಸೆರಗಿನಿಂದ ಕಣ್ಣೀರು ಒರಸಿಕೊಳ್ಳುತ್ತಾ ಚಿನ್ನಮ್ಮ ಕೇಳಿದಳು “ಪೀಂಚಲು ಇದಾಳೇನು?”
“ನಿನ್ನೆಯಿಂದಲೂ ಅಲ್ಲೇ ಇದಾಳೆ. ರಾತ್ರೀನೂ ಅಲ್ಲೆ ಬಾಗಿಲಾಚೇನೆ ಮಲಗಿಕೊಂಡಿದ್ದಳು….”
“ಅವಳನ್ನ ಒಂದು ಚೂರು ಒಳಗೆ ಕರೀತೀಯಾ?”
“ಮುಕುಂದಣ್ಣ ಹೇಳಿದಾರೆ, ಯಾರಿಗೂ ಅನುಮಾನ ಹುಟ್ಟದ ಹಾಂಗೆ ನೋಡಿಕೋ ಅಂತಾ….ಹಸಲೋರವಳನ್ನ ಒಳಗೆ ಕರೆದಿದ್ದು ಯಾರಿಗಾದ್ರೂ ಗೊತ್ತಾದ್ರೆ?….ಪೀಂಚಲು ಹತ್ರ ನೀನು ಹಾಂಗೆ ಪದೇ ಪದೇ ಮಾತಾಡ್ತಾ ಇರೋದನ್ನ ಕಂಡರೆ ಯಾರಿಗಾದ್ರೂ ಅನುಮಾನ ಬರದೇ ಇರ್ತದಯೆ?….
“ಐತ ರಾತ್ರೆ ಬಂದಿದ್ದನೇ? ಏನಾದರೂ ಹೇಳಿದ್ನೇ? ಕೇಳಾನಾ ಅಂತಾ-”
“ಬಂದಿದ್ದನಂತೆ….” ಕಿಸಕ್ಕನೆ ನಕ್ಕಳು ನಾಗಕ್ಕ. “ಗೊಬ್ಬೆ ಸೆರಗುಹಾಕಿ ನಮ್ಮ ಹಾಂಗೆ ಸೀರೆ ಉಟ್ಟಿದ್ದಳಲ್ಲಾ ಪೀಂಚಲು? ಅದಕ್ಕೇ ಅವನಿಗೆ ಅವಳ ಗುರುತೇ ಸಿಕ್ಕದೆ ’ಹೆಗ್ಗಡ್ತಮ್ಮೋರೆ, ಪೀಂಚಲೂನ ಸೊಲ್ಪ ಬರಾಕೆ ಹೇಳ್ತೀರಾ, ನಿನ್ನ ಗಂಡ ಕರೀತಾನೆ ಅಂತಾ’…. ಅಂತಾ ಅವಳಿಗೇ ಹೇಳಿದನಂತೆ! ಅವಳಿಗೆ ನಗೆ ತಡೆಯಾಕೆ ಆಗದೆ ನೆಗಾಡಿದಾಗ ಅವನಿಗೆ ಗೊತ್ತಾಯ್ತಂತೆ, ಅವಳೇ ನನ್ನ ಹೆಂಡತಿ ಅಂತಾ!….
ಚಿನ್ನಮ್ಮನೂ ನಗು ತಡೆಯಲಾಗಲಿಲ್ಲ. ತನ್ನ ಸಂಕಟವೆಲ್ಲ ಪರಿಹಾರವಾಯಿತೊ ಎಂಬಂತೆ ನಕ್ಕುಬಿಟ್ಟಳು.
ನಾಗಕ್ಕ ಮುಂದುವರಿದಳು: “ನಿನ್ನನ್ನ ಅಡಗಿಸಿ ಇಡಾಕೆ ಏನೇನು ಬೇಕೋ ಅದನ್ನೆಲ್ಲ ಮಾಡಿ ಆಗಿದೆಯಂತೆ. ಇವತ್ತು ಕತ್ತಲಾದ ಮ್ಯಾಲೆ ಹಿತ್ತಲು ಕಡೀಲಿರುವ ನೀರಿನ ಹಂಡೆಗೆ ಕೋಲು ಬಡಿದು ಸೂಚನೆ ಕೊಟ್ಟಕೂಡಲೆ, ನಾನು ನಿನಗೆ ಹೇಳ್ತೀನಿ. ನೀನು ’ಹೊರಕಡೆಗೆ’ ಹೋಗ್ತೀನಿ ಅಂತಾ ಎದ್ದು ಬಾ. ನಾನು ಪೀಂಚಲು ಕೈಲಿ ಚೊಂಬು ಕೊಟ್ಟು ನಿನ್ನ ಹಿಂದೆ ಕಳಿಸ್ತೀನಿ. ಆ ಹಾಡ್ಯದ ಕಡೆ ನೀವಿಬ್ಬರೂ ಹೋಗಿ. ಐತ ಅಲ್ಲಿ ಕಾಯ್ತಾ ಇರ್ತಾನೆ. ಅವನ ಸಂಗಡ ಕಾಡುಹತ್ತಿ ಬಿಡಿ…. ಮಳೇ ಏನು ನಿಲ್ಲೋ ಹಾಂಗೆ ಕಾಣಾದಿಲ್ಲ. ಅದಕ್ಕೆಲ್ಲ ಏರ್ಪಾಡು ಮಾಡಿದಾರಂತೆ ಮುಕುಂದಣ್ಣ. ನೀನು ಮಾತ್ರ ಅಳಾದು, ಹೆದರಾದು, ಪುಕ್ಕಲ್ತನ ಮಾಡಾದು ಎಲ್ಲಾ ಬಿಟ್ಟುಬಿಡು. ಗೊತ್ತಾತೇನು?….” ಯಾರೊ ಬಾಗಿಲು ತಟ್ಟಿದ ಸದ್ದು ಕೇಳಿಸಿತು. “ಬಾಗಿಲು ತಟ್ತಿದಾರೆ. ನಿನ್ನ ಮೀಯ್ಸಾಕೆ ಕರಕೊಂಡು ಹೋಗ್ತಾರೊ ಏನೊ? ಮೀಯಿಸಲಿ, ಸೀರೆ ಉಡಿಸಲಿ, ಒಡವೆ ಹಾಕಲಿ, ಏನು ಮಾಡಿದರೂ ಮಾಡಲಿ. ನೀನು ಸುಮ್ಮನಿದ್ದುಬಿಡು….” ಬಾಗಿಲ ಕಡೆ ತಿರುಗಿ ಕೂಗಿ ಹೇಳಿದಳು ನಾಗಕ್ಕ “ಬಂದ್ಲೂ! ಬಂದ್ಲೂ! ಸೀರೆ ಉಟ್ಟುಕೊಳ್ತದೆ!….” ತುಸು ತಡೆದು, ಚಿನ್ನಮ್ಮ ಕಣ್ಣೊರೆಸಿ ಸೀರೆ ಸರಿಮಾಡಿಕೊಂಡಮೇಲೆ, ಸರಸರನೆ ಬಾಗಿಲೆಡೆಗೆ ಸರಿದು ತಾಳ ತೆಗೆದಳು. ನಾಲ್ಕಾರು ನೆಂಟರಮ್ಮೋರು ಹೊಸಬಟ್ಟೆಯ ವಾಸನೆಯನ್ನು ಬೀರುತ್ತಿದ್ದ ಸೀರೆಗಳನ್ನುಟ್ಟು ಬರಬರನೆ ಸದ್ದು ಮಾಡುತ್ತಾ ಮದುಮಗಳಿಗೆ ಶಾಸ್ತ್ರ ಮಾಡಿಸಲು ಅವಳನ್ನು ಕರೆದುಕೊಂಡು ಹೋಗಲು ಕೋಣೆಯೊಳಕ್ಕೆ ಬಂದರು.
* * *
ಚಿನ್ನಮ್ಮನ ಕೋಣೆಯಿಂದ ಹೊರಬಿದ್ದ ಮೂವರು ಹುಡುಗರೂ ಬಚ್ಚಲಿಗೆ ಓಡುತ್ತಲೆ ಹೋಗಿ, ಮದುವೆಗೆ ಬಂದಿದ್ದು ಸ್ನಾನ ಮುಖ ಪ್ರಕ್ಷಾಲನಾದಿಗಳಲ್ಲಿದ್ದ ನೆಂಟರ ನಡುವೆ ನುಗ್ಗಿ, ಹಲ್ಲುಜ್ಜಿಕೊಳ್ಳುವ ಮುಖ ತೊಳೆದುಕೊಳ್ಳುವ ಶಾಸ್ತ್ರ ಪೂರೈಸಿ, ಅಲ್ಲಿಂದ ಅಡುಗೆ ಮನೆಗೆ ಓಡಿದರು. ನೆಂಟರು ಗಿಂಟರು ಯಾವ ದಾಕ್ಷಿಣ್ಯಕ್ಕೂ ಕಟ್ಟುಬೀಳದೆ ಉಪಹಾರವನ್ನು ಗಿಟ್ಟಿಸಿಕೊಂಡು ಜಗಲಿಗೆ ಹೊರಟರು.
ಮಳೆಗಾಲವಾದ್ದರಿಂದಲೂ ಮಳೆ ಸುರಿಯುತ್ತಲೆ ಇದ್ದುದ್ದರಿಂದಲೂ ಬೇಸಾಯದ ಕಾಲವಾಗಿ ಜನರಿಗೆ ಪುರಸೊತ್ತು ಇಲ್ಲದಿದ್ದುದರಿಂದಲೂ ಮದುವೆಗೆ ಹೆಚ್ಚಾಗಿ ನೆಂಟರು ಸೇರಿರಲಿಲ್ಲ. ಕಡೆಗೆ, ಒಂದು ದೆಯ್ಯದ ಹರಕೆಗೆ ಸೇರುವಷ್ಟೂ ಜನ ಸೇರಿರಲಿಲ್ಲ. ನೆರೆದ ನೆಂಟರಿಗಿಂತಲೂ ಆಳುಕಾಳುಗಳ ಸಂಖ್ಯೆಯೆ ಜಾಸ್ತಿ ಎಂಬಂತಿತ್ತು.
ಮೂವರೂ ಹಸೆಗೋಡೆ ಬರೆದಿದ್ದ ಎಡೆಗೆ ಹೋಗಿ, ಅದನ್ನು ಮೆಚ್ಚಿ ನೋಡಿದರು. ಅಲ್ಲಿ ಬರೆದಿದ್ದ ಎಲೆ ಹಲಸಿನದೋ ಮಾವಿನದೋ ಎಂದು ಚರ್ಚೆಯನ್ನು ಕೂಡ ನಡೆಸಿದರು. ತಿಮ್ಮು ಕೈಬೆರಳಿನಿಂದ ಉಜ್ಜಿ ನೋಡಿ “ಅಯ್ಯೋ, ಗಟ್ಟಿ ಬಣ್ಣ ಅಲ್ಲ ಕಣೋ, ನೋಡಿಲ್ಲಿ, ಕೈಗೆ ಹ್ಯಾಂಗೆ ಹಿಡಿದಿದೆ ಈ ಹಸುರು?” ಎಂದು ಟೀಕಿಸಿ ಧರ್ಮು ಕಾಡುವರಿಗೆ ತೋರಿಸಿದನು. ಅಲ್ಲಿದ್ದ ಯಾರೋ ದೊಡ್ಡವರು ’ಏ ಹುಡುಗರ್ರಾ, ಹಸೆಗ್ವಾಡೆ ಹಾಳು ಮಾಡಬ್ಯಾಡ್ರೋ ಕೈ ತಿಕ್ಕಿ?” ಎಂದು ಕೂಗದಿದ್ದರೆ, ಪರೀಕ್ಷೆ ಇನ್ನೂ ಬಹಳ ಮುಂದುವರಿಯುತ್ತಿತ್ತೆಂದು ತೋರುತ್ತದೆ. ಆದರೆ ಅಲ್ಲಿಂದ ಧಾರೆಮಂಟಪದ ಸೌಂದರ್ಯ ಸಂವೀಕ್ಷಣೆಗಾಗಿ ಮೂವರೂ ಓಡಿಬಿಟ್ಟರು.
ಆ ಗ್ರಾಮೀಣ ರೂಕ್ಷಾಭಿರುಚಿಯ ಬಣ್ಣಬಣ್ಣದ ಕಲೆಯ ಮಂಟಪವನ್ನಂತೂ ಬಿಟ್ಟಕಣ್ಣಾಗಿ, ತಮ್ಮ ಆಸ್ವಾದನೆಯನ್ನು ಲೊಚಗುಟ್ಟಿ ಪ್ರದರ್ಶಿಸುತ್ತಾ, ನೋಡಿದರು ಮೂವರೂ. ಆ ಕಂಭಗಳಿಗೆ ಸುತ್ತಿದ್ದ ಕೆಂಪು ಬಿಳಿಯ ಬಟ್ಟೆಯ ಪಟ್ಟಿಗಳನ್ನೂ ಹೊಳೆಯುತ್ತಿದ್ದ ಬೇಗಡೆಯ ಕಾಗದದ ಹೂವು ಮೊದಲಾದ ಅಲಂಕಾರಗಳನ್ನು ’ಅಃ ಎಷ್ಟು ಚಂದಾಗದೆ!’ ಎಂದೆಂದು ಕುಣಿಕುಣಿದು ನೋಡಿದರು. ಅವಕಾಶ ಒದಗಿದ್ದರೆ ತಿಮ್ಮೆ ಅದರಲ್ಲಿದ್ದ ಒಂದೆರಡು ಬೇಗಡೆಯ ಹೂವುಗಳನ್ನಾದರೂ ಕಿತ್ತು ಜೇಬಿಗೆ ಇಳಿಬಿಡುತ್ತಿದ್ದನೋ ಏನೋ?!
ಆದರೆ ಕುಂಟುತ್ತಿದ್ದ  ಕಾಡು ಮತ್ತೆ ಮತ್ತೆ ಅಭೀಷ್ಟನೇತ್ರ ಗಳಿಂದ ನೋಡುತ್ತಿದ್ದ ವಸ್ತು ಬೇರೆಯ ತರಹದ್ದಾಗಿತ್ತು: ಚಪ್ಪರಕ್ಕೆ ನೇತುಕಟ್ಟಿದ್ದ ಬಾಳೆಯ ಗೊನೆಗಳಲ್ಲಿ ಒಂದು ವಾಟೆಬಾಳೆಯ ಗೊನೆಯ ಎರಡು ಹೆಣಿಗೆ ಚೆನ್ನಾಗಿ ಕಳಿತು ಹಣ್ಣಾಗಿ ಕಡು ಹಳದಿ ಬಣ್ಣದಿಂದ ಮೋಹಿಸಿ ಕಂಗೊಳಿಸುತ್ತಿದ್ದವು. ಆದರೆ ಆ ಹಾಳು ಚಪ್ಪರ ಎತ್ತರವಾಗಿದ್ದರಿಂದ ಹುಡುಗರಿಗೆ, ಯಾರಿಗೂ ಗೊತ್ತಾಗದಂತೆ ಗುಟ್ಟಾಗಿ ಕೆಲಸ ಮಾಡುವಷ್ಟು, ಸುಲಭ ಸಾಧ್ಯವಾಗಿರಲಿಲ್ಲ.
ಅಲ್ಲಿಂದ ಮೂವರೂ, ಇದ್ದಕ್ಕಿದ್ದ ಹಾಗೆ ವಾಲಗ ಉಕ್ಕಿ ಕೇಳಿ ಬರುತ್ತಿದ್ದ, ಕೆಳಗರಡಿಯ ಮೂಲೆಗೆ ಧಾವಿಸಿದರು. ವಾಲಗ ಉದುತ್ತಿದ್ದವರು ಹೊಲೆಯರಾಗಿದ್ದರೂ ಮಳೆಯ ದೆಸೆಯಿಂದಾಗಿ ಅವರಿಗೆ ಮನೆಯೊಳಗೇ ಕೆಳಗರಡಿಯ ಒಂದು ಮೂಲೆಯನ್ನೆ ಬಿಟ್ಟುಕೊಟ್ಟಿದ್ದರು.
ವಾಲಗ ಉದುತ್ತಿದ್ದವರು ತಲೆಗೆ ಕೆಂಪು ಪಟ್ಟೆಯ ಎಲೆವಸ್ತ್ರ ಸುತ್ತಿದ್ದರು; ಹೊಸದಾಗಿ ತೋರುತ್ತಿದ್ದ ಕರಿಗೀರಿನ ಕಬಚ ಹಾಕಿದ್ದರು; ತಕ್ಕಮಟ್ಟಿಗೆ ಮಡಿಯಾಗಿ ಕಾಣುತ್ತಿದ್ದ ಅಡ್ಡಪಂಚೆ ಅವರ ಮೊಣಕಾಲಿನವರೆಗೂ ಸುತ್ತಿದ್ದುವು. ಅಪರಿಚಿತರಾಗಿದ್ದ ಆ ಪರಕೀಯರನ್ನು ಅತಿಯಾಗಿ ಅಮೀಪಿಸದ ಸಂಕೋಚದಿಂದ ಮೂವರೂ ಹುಡುಗರೂ ತುಸುದೂರದಲ್ಲಿಯೆ ನಿಂತರು ಗಾಳಿತುಂಬಿದ ಕೆನ್ನೆಗಳನ್ನು ಹಿಗ್ಗಿಸಿ, ವಾಲಗದ ಸಪುರ ತುದಿಯನ್ನು ತುಟಿ ಬಿಗಿದ ಬಾಯಿಗಿಟ್ಟು ಊದುತ್ತಾ, ವಾಲಗದ ಕಣ್ಣುಗಳಮೇಲೆ ಕೈಯಾಡಿಸಿ ವಿವಿಧ ಸ್ವರಮಾಲೆಗಳನ್ನು ಹೊಮ್ಮಿಸುತ್ತಿದ್ದ ಅವರನ್ನು ತುಸು ಬೆರಗು ಬೆರೆತ ಹಿಗ್ಗಿನಿಂದಲೆ ನೋಡುತ್ತಿದ್ದರು.
ಇದ್ದಕ್ಕಿದ್ದ ಹಾಗೆ ತಿಮ್ಮ ಕಣ್ಣುಕೀಲಿಸಿ ವಾಲಗ ಊದುತ್ತಿದ್ದವನೊಬ್ಬನ ಮುಖವನ್ನೇ ದಿಟ್ಟಿಸತೊಡಗಿದನು. ಅವನಿಗೆ ಆ ಮುಖ ತನಗೆ ಪರಿಚಿತವಾಗಿದ್ದ ಯಾರದ್ದೊ ಒಂದು ಮುಖವನ್ನು ನೆನೆಪಿಗೆ ತರುತ್ತಿತ್ತು!
“ಕಾಡಣ್ಣಯ್ಯ, ಅವನ್ನ ನೋಡಿದ್ರೆ ಹಳೆಮನೆ ಬೈರನ್ನ ಕಂಡ್ಹಾಂಗೆ ಕಾಣ್ತದಲ್ಲೇನೋ?” ಕಾಡುನ ಕಿವಿಯಲ್ಲಿ ಪಿಸಿಪಿಸಿ ನುಡಿದನು ತಿಮ್ಮು.
“ವಾಲಗದವನೋ ಅವನು! ಹಳೆಮನೆ ಬೈರನ್ನ ಕೈಲಿ ಮದುವೆ ವಾಲಗ  ಊದಿಸ್ತಾರೇನೋ ಯಾರಾರೂ?” ಎಂದನು ಕಾಡು.
ತಿಮ್ಮ ಆಗಲೆ ನಗುತ್ತಿದ್ದ ಧರ್ಮುವ ಕಡೆಗೆ ತಿರುಗಿ ಪಿಸುಗುಟ್ಟಿದನು “ಅಂವ ನಿಮ್ಮ ಹೊಲೇರ ಬೈರನ್ಹಾಂಗೇ ಇಲ್ಏನೊ, ಧರಂಬಾವ?”
ಧರ್ಮುಗೆ ಆಗಲೆ ಗೊತ್ತಾಗಿತ್ತು, ಅಷ್ಟು ಷೋಕಿಯಾಗಿ ಕುಳಿತು ಅತ್ತಿತ್ತ ತಲೆಯಾಡಿಸಿ ವಾಲಗ ಊದುತ್ತಿದ್ದವರು ತಮ್ಮ ಮನೆಯ ಹೊಲಗೇರಿಯ ಮಂಜ,
ತಿಮ್ಮ, ಸಿದ್ದ, ಬೈರ ಎಂದು.
“ಥೂ! ಹೊಲೇರ ಕೈಲಿ ಯಾರಾರೂ ಮದುವೆಮನೆ ವಾಲಗ ಊದಿಸ್ತಾರೇನೊ? ಅಲ್ಲೇನೋ, ಧರ್ಮು?” ಕಾಡು ಕೇಳಿದನು ಮತ್ತೆ.
ಅಷ್ಟರಲ್ಲಿ ವಾಲಗ ಊದುತ್ತಿದ್ದವನೆ ಇವರತ್ತ ತಿರುಗಿ, ವಾಲಗ ನಿಲ್ಲಿಸಿ, ನಸುನಗುತ್ತಾ ಕೇಳಿದನು “ ನನ್ನ ಗುರುತು ಸಿಕ್ಕಲೇ ಇಲ್ಲಾ ಅಂತಾ ಕಾಣ್ತದೆ ನಮ್ಮ ಕೋಣೂರು ಸಣ್ಣಯ್ಯೋರಿಗೆ?…. ನಾನು ಕಣ್ರೋ, ಹಳೆಮನೆ ಬೈರ!”
ತಿಮ್ಮುಗೆ ತುಂಬ ಅವಮಾನವಾದಂತಾಯ್ತು. ಕೀಳು ಜಾತಿಯ ಹೊಲೆಯನಾಗಿ, ದನಕಾಯುವವನಾಗಿ, ಗೊಬ್ಬರ ಗಿಬ್ಬರ ಹೊತ್ತು ಗದ್ದೆ ತೋಟಗಳಲ್ಲಿ ತಾವು ಹೇಳಿದಂತೆ
ಕೆಲಸ ಮಾಡಿಕೊಂಡಿರುವ ‘ಬಡುತಿನ್ನುವ’ ಜೀತದಾಳೊಬ್ಬನ ಮುಂದೆ, ಅವನು  ಊದುತ್ತಿದ್ದ ವಾಲಗವನ್ನು ಬೆರಗಾಗಿ ಮೆಚ್ಚಿ ಆಲಿಸುತ್ತಿದ್ದುದು ತನ್ನ ಗೌಡಿಕೆಯ ಗೌರವಕ್ಕೇ ಮಸಿ ಬಳಿದುಕೊಂಡಂತಾಯ್ತಲ್ಲಾ ಎಂದು ಮುಖ ಸಣ್ಣಗೆ ಮಾಡಿಕೊಂಡನು: “ಥೂ, ಬನ್ರೋ! ಈ ಬಡು ತಿನ್ನೋರ ವಾಲಗ ಏನು ಕೇಳಾದು!” ಅಂದವನೆ ಕಾಡು ಧರ್ಮು ಇಬ್ಬರನ್ನೂ ರಟ್ಟೆ ಹೆಡಿದೆಳೆದು ಅಲ್ಲಿಂದ ಹೊರಟನು, ತನಗಾದ ಅವಮಾನಕ್ಕೆ ತಕ್ಕ ಪ್ರತೀಕಾರ ಮಾಡುವವನಂತೆ, ಅಥವಾ ಅಜ್ಞಾನದಿಂದ ತನಗೆ ಸಂಭವಿಸಿದ್ದ ಅವಮರ್ಯಾದೆಗೆ ತಕ್ಕ ಪ್ರಾಯಶ್ಚಿತ್ತ ಮಾಡಿಕೊಳ್ಳುವವನಂತೆ!
ಬಡು ತಿನ್ನುವವರ ವಾಲಗವನ್ನು ಆಲಿಸಲೊಲ್ಲದೆ ತಿರಸ್ಕರಿಸಿ, ತನ್ನಿಬ್ಬರು  ತನಗಿಂತಲೂ ವಯಸ್ಸಾದ ಮಿತ್ರರನ್ನು ಎಳೆದುಕೊಂಡು ಹೊರಟ ತಿಮ್ಮ ಬಾವಿಕಟ್ಟೆಯ ಬಳಿ ಪಣತದ ಕಡಿಮಾಡಿನಲ್ಲಿ ರಾಶಿ ರಾಶಿ ಮಿನು ಸೋಸುತ್ತಿದ್ದ ಹೆಂಗಸರಿದ್ದಲ್ಲಿಗೆ  ನಡೆದನು. ಮಳೆಯ ಜೋರಿಗೆ ಕೂಣೆಗೆ ಮಸ್ತಾಗಿ ಬಿದ್ದಿದ್ದುವು ಹತ್ತುಮಿನು! ನಗೆಯುತ್ತಿದ್ದ, ಉಸಿರೆಳೆಯುತ್ತಿದ್ದ, ವಿವಿಧಾಕಾರದ, ಬಣ್ಣ ಬಣ್ಣದ ಜಲಪ್ರಣಿಗಳನ್ನು  ಸ್ವಲ್ಪ ಹೊತ್ತು ಹರ್ಷಿತರಾಗಿ ನೋಡುತ್ತಾ, ಬಾಯಿಗೆ ಬಂದಂತೆ ಏನೇನೋ ಟೀಕೆ ಮಾಡುತ್ತಾ ನಿಂತಿದ್ದರು. ಮಿನುಗಳನ್ನು ಸೋಸುತ್ತಿದ್ದ ಹೆಂಗಸರು ತಮ್ಮತಮ್ಮೊಳಗೆ ಜರುಗುತ್ತಿದ್ದ ಸಂಭಾಷಣೆಯನ್ನು ತುಂಡುಗಡಿಸದೆ ಮುಂದುವರಿಸಿಯೆ ಇದ್ದರು. ಹಾಗೆ ಮಾತನಾಡಿಕೊಳ್ಳುತಿದ್ದ ನಾಲ್ಕಾರು ಜೋಡಿ ಸ್ತ್ರೀಯರ ಒಂದಕ್ಕೊಂದು ಸಂಬಂಧವಿಲ್ಲವೆಂಬಂತೆ ಕೇಳಿ ಬರುತ್ತಿದ್ದ ಸಂವಾದದ ತುಂಡುಗಳನ್ನು ಕೇಳಿಯೂ ಆಲಿಸುತ್ತಿರಲಿಲ್ಲ ಆ ಮೂವರು ಹುಡುಗರು: ಅವರಿಗೆ ಆ ಮಾತುಗಳಲ್ಲಿ ಅರ್ಥದ  ಅನ್ವಯವಿರಲಿಲ್ಲವಾದ್ದರಿಂದ ಅರ್ಥವಾಗುತ್ತಿರಲೂ ಇಲ್ಲ. ಅಷ್ಟೆ. ಆದರೆ, ಆ  ಮಾತುಗಳಿಗೆ ಅರ್ಥವಿರಲಿಲ್ಲ ಎಂದರ್ಥವಲ್ಲ. ಸಂಬಂಧಪಟ್ಟವರು ಆಲಿಸಿದ್ದರೆ ಅರ್ಥಮಾತ್ರವಲ್ಲ, ದ್ವನಿಯೂ ಬೇಕಾದಷ್ಟು ಇರುತ್ತಿತ್ತು:
“ಅಯ್ಯೋ ಅವಳದ್ದು ಏನಂತೀಯಾ? ಸೊಸೇನ ಕೂಡಿಕೆ ಮಾಡಿಸಿ, ಮನೆ ಯಜಮಾನಿ ಆಗಿ ಬಿಡ್ತೀನಿ ಅಂತಾ ಮಾಡಿದ್ಲು…. ಆದರೆ ಹೀಂಗಾಯ್ತು!”
“ಅವಳಿಗೆ ಮೊದಲಿಂದ್ಲೂ ಆ ಕೆಟ್ಟ ಚಾಳಿ ಇದ್ದೇ ಇತ್ತು… ಆಗದಿದ್ದೋರಿಗೆ ಮದ್ದು ಬ್ಯಾರೆ ಹಾಕ್ತಾಳಂತೆ!….”
“ಅದರಾಗೆ ತತ್ತಿ ಇದೆಯೇನು ನೋಡು, ಪುಟ್ಟಕ್ಕ… ಅವನು ಪೋಲೀಸರಿಗೆ  ಗಸಿ ಕೊಟ್ಟಂವ, ಆ ಹುಡುಗೀನೂ ಹಾರಿಸಿಕೊಂಡು ಕೊಪ್ಪದ ಸೀಮೆ ಕಡೆಗೋ ಸಿಂಗೇರಿ ಸೀಮೆ ಕಡೆಗೋ ಪರಾರಿಯಾದನಂತೆ…”
“…ಅಯ್ಯೋ ನಮಗ್ಯಾಕೆ ಬಿಡೇ ದೊಡ್ಡೋರ ಮಾತು! ಸಾಲ ತೀರ್ಸಾಕೆ ತೆರ ತಗೊಂಡು ಹೆತ್ತ ಮಗಳ್ನೇ ಬಾಂವಿಗೆ ಹಾಕ್ತಿದಾರೆ?… ಇಸ್ಸಿ! ಎಂಥದ್ನ ತಿಂದಿತ್ತೊ ಏನೋ ಈ ಹಾಳು ಸೋಸಲು? ಕೆಟ್ಟ ವಾಸ್ನೆ ಪಚ್ಚೀ ತುಂಬಾ.”
“…. ಅಂವೆಲ್ಲಿ ಕಳಿತಾನೇ ಈ ಮಳೆಗಾಲಾನ? ಇಲುಗು ತೊಗಲು ಆಗಿ  ಬಿದ್ದು ಕುಂಡಾನಂತೇ, ಹಾಸಿಗೇಲಿ ಹೇಲು ಉಚ್ಚೆ ಎಲ್ಲ ಮಾಡಿಕೊಳ್ತಾ?…”
“ಪಸಂದ್‌ದಾಯ್ತು ಬಿಡು, ಹಾಂಗ್ಯಾರೆ, ಅವನ ಹೆಂಡ್ತೀಗೆ…!”
“….ನಮ್ಮ ಸುದ್ದಿ ಮಾತ್ರ ಬರ್ಲಿ, ತೋರಿಸ್ತೀನಿ ಅವರಿಗೆ… ಒಡ್ಡು ಮುರ್ದು ದನಾ ಬಿಟ್ಟರಲ್ಲಾ ಅವರ ತ್ವಾಟಕ್ಕೆ?… ನನ್ನ ಗಂಡನೇ ಆಗಿದ್ರೆ, ಕತ್ತೀಲಿ ಕಡಿದು ಹಾಕ್ದೆ ಬಿಡ್ತಿರಲಿಲ್ಲ….!”
ಹೆಂಗಸರು ಮೀನು ಸೋಸುತ್ತಿದ್ದಲ್ಲಿಂದ ಹಳೆಪೈಕದವರು ಕುರಿ ಸುಲಿಯುತ್ತಿದ್ದ ಸೌದೆಕೊಟ್ಟಿಗೆಯ ಒಂದು ಭಾಗಕ್ಕೆ, ಸುರಿಯುತ್ತಿದ್ದ ಮಳೆಯಲ್ಲಿ ಕೆಸರುಕೊಚ್ಚೆ ಮೆಟ್ಟಿಕೊಂಡೆ, ಧಾವಿಸಿದ್ದರು ಆ ಮೂವರೂ. ಅಲ್ಲಿ ಹೆಚ್ಚು ಹೊತ್ತು ನಿಲ್ಲದೆ ಅದಕ್ಕಿಂತಲೂ ಸ್ವಾರಸ್ಯವೆಂದು ತೋರಿದ ಸೌದೆಕೊಟ್ಟಿಗೆಯ ಮತ್ತೊಂದು ಭಾಗಕ್ಕೆ ಓಡಿದರು. ಅಲ್ಲಿ ಸಾಬರ ಕಡೆಯವರು ದಿಬ್ಬಣ ಬಂದಕೂಡಲೆ ಹಾರಿಸುವುದಕ್ಕಾಗಿ ಗರ್ನಾಲು, ಬಿರುಸು, ಸುರ್ ಸುರ್ ಬಾಣ, ಅಕಾಶಬಾಣ ಮುಂತಾದವುಗಳನ್ನು ಸಿದ್ಧಮಾಡಿಕೊಳ್ಳುತ್ತಿದ್ದರು. ಪಕ್ಕದಲ್ಲಿಯೆ ಹೊಲೆಯರೂ ದೀವರೂ ಕದಿನಿಗಳಿಗೆ ಮಸಿಹಾಕಿ ಕುಟ್ಟುವ ಕೆಲಸದಲ್ಲಿ ತೊಡಗಿದ್ದರು. ತಿಮ್ಮುಗೆ ಹೇಗಾದರೂ ಮಾಡಿ ಒಂದು ಗರ್ನಾಲು ಹಾರಿಸಿಯೋ ಒಂದು ಕದಿನಿ ಹೊಡೆಸಿಯೋ ಅದರ ಭಯಂಕರ ಸದ್ದನ್ನು ಆಲಿಸಬೇಕೆಂಬ ಆಸೆ. ಆದರೆ ಕಾಡುಗೆ ಹೆದರಿಕೆಯೋ ಹೆದರಿಕೆ! ಹುಟ್ಟಿದಂದಿನಿಂದಲೂ ಅವನಿಗೆ ಸಿದ್ದಿಮದ್ದಿನ ಸದ್ದು, ಅದು ಕೋವಿಯದ್ದಾಗಲಿ ಕದಿನಿಯದ್ದಾಗಲಿ ಗರ್ನಾಲೆ ಆಗಲಿ, ತುಂಬಾ ಭೀತಿ. ಅನಿವಾರ್ಯವಾಗಿ ಅದನ್ನು ಕೇಳಬೇಕಾಗಿ ಬಂದಾಗ, ಯಾರಾದರೂ ಕಂಡರೆ ತನ್ನನ್ನು ಪುಕ್ಕಲ ಎಂದು ಹಾಸ್ಯ ಮಾಡುವರೆಂದು ಅಂಜಿ, ಯಾರಿಗೂ ಕಾಣದ ರೀತಿಯಲ್ಲಿ ಏನಾದರೂ ನೆವ ತೆಗೆದು ಕಿವಿಗಳಿಗೆ ಕೈಬೆರಳು ಹಾಕಿ ತೂತುಗಳನ್ನು ಮುಚ್ಚಿಕೊಳ್ಳುತ್ತಿದ್ದನು. ಮುಂಗಾರ ಮೊದಲಲ್ಲಿ ಮಳೆಯ ಮೋಡಗಳು ಕಿವಿದು ಗುಡುಗು ಮಿಂಚತೊಡಗಿದಾಗಲಂತೂ ಅವನ ಜೀವ ಗತಗತ ನಡುಗುತಿತ್ತು. ಸಿಡಿಲಿನ ಸದ್ದು ಕೇಳಿದರೆ ಅವನ ಜೀವ ಸತ್ತು ಹುಟ್ಟುತಿತ್ತು! ಅವನಿಗೊಮ್ಮೆ ಓಂದು ಕನಸು ಬಿದ್ದಿತಂತೆ. ಅದರಲ್ಲಿ ಅವನು ಯಾವುದೋ ಒಂದು ಭಯಂಕರ ಯುದ್ಧದಲ್ಲಿ ಭಾಗವಹಿಸು ತ್ತಿದ್ದಂತೆಯೂ ಒಂದು ಭಾರಿ ಪಿರಂಗಿ ಸಿಡಿದು ಅದರ ಗುಂಡು ತನಗೆ ಬಡಿದಂತೆಯೂ ತಾನು ರಕ್ತದ ಮಡುವಿನಲ್ಲಿ ಮುಳುಗಿ ಸಾಯುತ್ತಿದ್ದಂತೆಯೂ ಕಂಡು ಹೆದರಿ ಎಚ್ಚತ್ತನಂತೆ. ಅದನ್ನು ಕೇಳಿ ಧರ್ಮು ‘ಅವನು ಹಿಂದಿನ ಜನ್ಮದಲ್ಲಿ ಸಿಪಾಯಿಯಾಗಿದ್ದು, ಗುಂಡುಬಿದ್ದು ಸತ್ತಿದ್ದರಿಂದಲೆ, ಈ ಜನ್ಮದಲ್ಲಿಯೂ ಈಗ ಸಿಡಿಮದ್ದಿನ ಸದ್ದು ಕೇಳಿದರೆ ಹೆದರಿ ಸಾಯುತ್ತಾನೆ!’ ಎಂದಿದ್ದನಂತೆ.
ಅಂತೂ ತಿಮ್ಮ ಏನೇನೊ ಅಪಾಯ ಮಾಡಿ, ಗೋಗರೆದು, ಲುಂಗಿ ಸಾಬುವನ್ನೊಪ್ಪಸಿದನು…. ಕಾಡು ‘ತಡಿಯೋ! ತಡಿಯೋ! ನಾನು ಹೋದಮ್ಯಾಲೆ ಹೊಡಿಯೊ’ ಎನ್ನುತಾ ಕಿವಿಮುಚ್ಚಿಕೊಂಡೆ ಅಲ್ಲಿಂದ ಪರಾರಿಯಾಗಿಯೆ ಬಿಟ್ಟನು.
ಗರ್ನಾಲೀನೊ ಹಾರಿತು. ಆದರೆ ಆ ಮಳೆಯ ದೆಸೆಯಿಂದ ಕೊಟ್ಟಿಗೆಯ ಮಾಡಿನ ಒಳಗಿನಿಂದಲೆ ಲುಂಗಿಸಾಬಿ ಅದನ್ನು ಎಸೆದಿದ್ದರಿಂದ ಅದು ದಿಕ್ಕು ತಪ್ಪಿ ಮನೆಯ ಹತ್ತಿರ ವೆಂಕಪ್ಪನಾಯಕರು ಮಲಗಿದ್ದ ಕೋಣೆಗೆ ಅತಿ ಸಮಿಪವಾಗಿ ಸಿಡಿದು ಸದ್ದು ಮಾಡಿತ್ತು! ಯಾರೊ ಅಲ್ಲಿಂದಲೆ ಕೂಗಿ ಬಯ್ದರು: “ಯಾವನೊ ಅವನು, ಹುಚ್ಚುಮುಂಡೇಗಂಡ! ಗರ್ನಾಲು ಹೊಡೆದವನು? ಅವನಿಗೇನು ಮುಖದ ಮೇಲೆ ಕಣ್ಣದೆಯೇನೊ? ನಾಯಕರಿಗೆ ಜರ ಜಾಸ್ತಿ ಆಗಿ ನರಳ್ತಾ ಮಲಗಿದಾರೆ, ಅವರ ಕ್ವಾಣೆ ಬೆಳಕಂಡೀಗೆ ಹೊಡೀತಾನೆ ಇಂವ ಗರ್ನಾಲ? ಪಟಿಂಗ!”
ಲುಂಗೀಸಾಬು ನಾಲಗೆ ಕಚ್ಚಿಕೊಂಡು ಕೆಳದನಿಯಲ್ಲಿ ದೊರಿದನು ತಿಮ್ಮುಗೆ: “ಹೋಯ್! ನಮ್ಮ ಸಣ್ಣ ಒಡೆಯರ ಮಾತು ಕೇಳಿ ಸಮಾ ಅಯ್ತಲ್ಲಾ ನನಗೆ? ಸಾಕು, ಮಾರಾಯ್ರಾ, ನಿಮ್ಮ ಸಾವಾಸ!…”
ಅಲ್ಲಿದ್ದವರೆಲ್ಲ ಬಿದ್ದು ಬಿದ್ದು ನಕ್ಕರು….
“ಅಲ್ಲೋ ನಾಯಕರಿಗೆ ಕುಂಟನ ಹುಣ್ಣು ಜಾಸ್ತಿಯಾಗಿ, ಜರದಾಗೆ ನೆರಳ್ತಾ ಸುಮಾರು ದಿವಸ ಆಯ್ತಂತೋ. ಬಾಯಿಗೆ ಬಧಾಂಗೆ ಹಲವರೀತಾರಂತೆ. ಹಾಂಗಾದ್ರೆ ಇವತ್ತು ಧಾರೆ ಎರಕೊಡೋರು ಯಾರೋ?”ಒಬ್ಬ ಕೇಳಿದನು.
“ಅವರು ಗೆಲುವಾಗೆ ಇದ್ದಿದ್ರೂ ಧಾರೆ ಎರಕೊಡಾಕೆ ಆಗ್ತಿರಲಿಲ್ಲಾ….” ಮತ್ತೊಬ್ಬನ ಅನಿಸಿಕೆ.
“ಯಾಕೆ?”
“ಯಾಕೆ ಅಂದ್ರೆ? ಕೂಡಿಕೆ ಮಾಡಿಕೊಂಡ ಕೊಡ್ಲೆ ಕೈ ಹಿಡಿದ ಹೆಂಡ್ತಿ ಆಗಿ ಬಿಡ್ತಾಳೇನು? ಧಾರೆ ಎರೆದುಕೊಡಬೇಕಾದರೆ ಧರ್ಮಪತ್ನೀನೆ ಆಗಬೇಕು….”ತಾನು ‘ಧರ್ಮಪತ್ನಿ’ ಎಂಬ ದೊಡ್ಡ ಮಾತನ್ನು ಸರಿಯಾಗಿ ಉಚ್ಚರಿಸಿ ಆಲಿಸುತ್ತಿದ್ದವರನ್ನು ಬೆರಗುಗೊಳಿಸಿದನೆಂದುಕೊಂಡು ಹೆಮ್ಮಯಿಂದ ಮುಂದುವರಿದನು ಹಾಗೆ ಹೇಳುತ್ತಿದ್ದವನು “ಅದಕ್ಕೇ ಒಂದು ಬ್ಯಾರೆ ಏರ್ಪಾಟು ಮಾಡ್ಯಾರಂತೆ….”
“ಬಾರೊ ಹೋಗಾನ, ಚಿನ್ನಕ್ಕಯ್ನ ಹತ್ರಕ್ಕೆ.” ತಿಮ್ಮ ಸಂವಾದವನ್ನು ಕುತೂಹಲದಿಂದ ಆಲಿಸುತ್ತಿದ್ದ ಧರ್ಮುವನ್ನು ಅಂಗಿತೋಳು ಹಿಡಿದೆಳೆದು ಎಬ್ಬಿಸಿದನು. ಅವನಿಗೆ ಕೂಡಿಕೆ, ಹೆಂಡ್ತಿ, ಧರ್ಮಪತ್ನಿ, ಧಾರೆ ಈ ಮಾತುಗಳೆಲ್ಲ ತನ್ನನ್ನೆ ಏನೊ ಅರ್ಥವಾಗದ ಫಜೀತಿಗೆ ಸಿಕ್ಕಿಸುವಂತೆ ತೋರಿ, ಅವುಗಳಿಂದ ದೂರವಾದ ತನ್ನ ಸರಳ ಜೀವನಕ್ಕೆ ಪಾರಗಿ ಹೋಗುವಂತೆ, ಅಲ್ಲಿಂದ ತನಗರ್ಥವಾಗುತ್ತಿದ್ದ ಚಿನ್ನಕ್ಕಯ್ಯನ  ಸಾನಿಧ್ಯವನ್ನರಸಿ ಓಡಿದ್ದನು.
ತಿಮ್ಮ ಧರ್ಮು ಇಬ್ಬರೂ ಹಿತ್ತಲು ಕಡೆಯ ಬಾಗಿಲಿನಿಂದ ಒಳಹೊಕ್ಕು, ಒಳಅಂಗಳದ ಅಂಚಿನಲ್ಲಿಟ್ಟಿದ್ದ ದೊಡ್ಡ ತಾಮ್ರದ ಹಂಡೆಯಿಂದ ನೀರು ಮೊಗೆದು ಕೆಸರಾಗಿದ್ದ ಕಾಲುಗಳನ್ನು ತೊಳೆದುಕೊಳ್ಳುತ್ತಿದರು. ಧರ್ಮು, ಅದಕ್ಕಾಗಿ ಹಾಕಿದ್ದ ಹಾಸುಗಲ್ಲಿನ ಮೇಲೆ ನಿಂತು, ಕಾಲು ತೊಳೆದುಕೊಳ್ಳುತ್ತಿದ್ದಾಗ ತಿಮ್ಮು ತನ್ನ ಸರದಿಗಾಗಿ ಕಾಯುತ್ತಿದ್ದವನು, ಹಂಡೆಯ ಪಕ್ಕದಲ್ಲಿ ಕಂಬಕ್ಕೆ ಒರಗಿಸಿ ಇಟ್ಟಿದ್ದ ಒಂದು ಸೌದೆ ತುಂಡನ್ನು ಕಂಡು, ಯಾವ ಉದ್ದೇಶವೂ ಇಲ್ಲದೆ ಯಾಂತ್ರಿಕವಾಗಿ ಅದನ್ನು ಕೈಗೆ  ತೆಗೆದುಕೊಂಡು, ಮಕ್ಕಳಿಗೆ ಸ್ವಾಭಾವಿಕವಾದ ಸಹಜ ಚೇಷ್ಟೆಯಿಂದ ಪ್ರಚೋದಿತನಾಗಿ, ತಾಮ್ರದ ಹಂಡೆಗೆ ಬಡಿಯತೊಡಗಿದನು: ಡಣ್ ಡಣ್ ಡಣಕು ಡಣಕು! ಡಣಕು ಡಣಕು ಡಣ್ ಡಣ್! ಡಣಕು ಡಣಕು ಡಣಕು ಡಣಕು! ಡಣ್ ಡಣ್ ಡಣ್ ಡಣ್!
ಆ ಲೋಹಶಬ್ದ ತಕ್ಕಮಟ್ಟಿಗೆ ಜೋರಾಗಿಯೆ ಇದ್ದಿತಾದರೂ ಮದುವೆಮನೆಯ  ಗಜಿಬಿಜಿಯಲ್ಲಿ ಮತ್ತು ಹಿತ್ತಲುಕಡೆಯಲ್ಲಿಯೆ ನಾನಾ ವಿಧವಾದ ಅಡುಗೆಯ ಕೆಲಸ  ಕಾರ್ಯಗಳಲ್ಲಿ ತೊಡಗಿದ್ದ ಜನರ ಗದ್ದಲದಲ್ಲಿ ಅದು ಯಾರ ಗಮನವನ್ನೂ ವಿಶೇಷವಾಗಿ ಸೆಳೆಯುವಂತಿರಲಿಲ್ಲ. ಆದರೂ ಅದು ಮದುವೆ ಮನೆಯಲಿ ನೆರೆದಿದ್ದ  ನೂರಾರು ಜನರಲಿ ಮೂವರ ಹೃದಯಗಳಲ್ಲಿ ಮಾತ್ರವೆ ವಿಶಿಷ್ಟ ಭಾವತರಂಗಗಳನ್ನು ಹೊಡೆದೆಬ್ಬಿಸಿತ್ತು!
‘ಡಣ್ ಡಣ್ ಡಣಕು ಡಣಕು! ಡಣ್ ಡಣ್ ಡಣಕು ಡಣಕು:’ ತನಗೆ ಶಾಸ್ತ್ರ  ಮಾಡಿಸುತ್ತಾ ಸುತ್ತುವರಿದಿದ್ದ ನೆಂಟರಮ್ಮಂದಿರ ನಡುವೆ ಮದುಮಗಳಾಗಿ ವಸನಭೂಷಣ ಭೂಷಿತೆಯಾಗಿ ಬೆವರುತ್ತಾ ಕುಳಿತಿದ್ದ ಚಿನ್ನಮ್ಮ ತಟಕ್ಕನೆ ಚಕಿತೆಯಾಗಿ ಕಿವಿನಿಮಿರಿ ಆಲಿಸಿದಳು: ‘ಡಣ್ ಡಣ್ ಡಣಕು ಡಣಕು!’ ಹೌದು, ಹಂಡೆಗೆ ಕೋಲು ಬಡಿದ ಸದ್ದು! ಅರೆ! ಈಗೇಕೆ ಆ ಸದ್ದು? ಕತ್ತಲಾದಮೇಲೆ ತಾನೆ ಅದು ಕೇಳಿಬರಬೇಕಾದದ್ದು, ಶೂದ್ರರ ಧಾರೆ ಯಾವಾಗಲೂ ನಿಶಾಲಗ್ನದಲ್ಲಿ ತಾನೆ? ಅದರಲ್ಲಿಯೂ ಇವತ್ತಿನ ಧಾರೆ-ಸಿಂಬಾವಿ ಭರಮೈಹೆಗ್ಗಡೆಯವರಿಗೆ ಹೂವಳ್ಳಿ ಚಿನ್ನಮ್ಮನನ್ನು ದ್ವಿತೀಯ ಪತ್ನಿಯನ್ನಾಗಿ ವಹಿಸಿಕೊಡುವ ಧಾರೆಯ ಸಮಯ ರಾತ್ರಿ ಹನ್ನೆರಡು ಗಂಟೆಗೆ ತಾನೆ ‘ಗಳಿಗೆ ಬರುವುದು? ’ ಧಾರಾಮುಹೂರ್ತ? ಹಾಗಾದರೆ ಈಗಲೆ, ಹಗಲಿನಲ್ಲಿಯೆ ಬಾವ ತನ್ನನ್ನು ಈಗಲೆ…?
“ಏನಾಯ್ತೆ ಮದೋಳ್ಗೀಗೆ?…. ಜಡೆ ಹೂವು ಭಾರಾಯ್ತೇನೆ? ಏನು ಬೇಕೆ?….ಯಾರು ಬೇಕೆ?… ಯಾಕೆ ಹಾಂಗೆ ನೋಡ್ತೀಯಾ ಸುತ್ತಾಮುತ್ತಾ….” ನಾಲ್ಕಾರು ನೆಂಡತಿಯರು ಚಿನ್ನಮ್ಮನ ತಳಮಳವನ್ನು ಗಮನಿಸಿ ಪ್ರಶ್ನೆಗಳ ಧಾಳಿಯನ್ನೆ ಪ್ರಾರಂಭಿಸಿದರು.
ಒಳಗೆಲಸದಲ್ಲಿದ್ದ ನಾಗಕ್ಕಗೂ ಆ ಹಂಡೆಯ ಸದ್ದು ಕೇಳಿಸಿತ್ತು. ಅವಳೂ ಚಕಿತೆಯಾಗಿ ಅದನ್ನು ಸ್ವಲ್ಪ ಸಂದಿಗ್ಧಮನೋಭಾವದಿಂದಲೆ ಆಲಿಸಿ, ಅದರ ನಿಜಾಂಶವನ್ನರಿಯಲು ಹಿತ್ತಲುಕಡೆಗೆ ಹೋಗುತ್ತಿರುವಾಗ ದಾರಿಯಲ್ಲಿ ಸಿಕ್ಕಿದ  ನೆಂಟರಮ್ಮ “ನಾಗೂ, ಮದೋಳ್ಗೀಗೆ ಏನೊ ಒಂದು ತರಾ ಆಗ್ಯದೆ, ಸೊಲ್ಪ ಬಾ” ಎಂದು ಅವಳನ್ನು ಮಾಣಿಗೆಗೆ, ಆಗತಾನೆ ಮಿಹದಿಂದ ಹಿಂತಿರುಗಿದ್ದ ಚಿನ್ನಮ್ಮನ ಬಳಿಗೆ ಕರೆದೊಯ್ದರು.
ಚಿನ್ನಮ್ಮ ನಾಗಕ್ಕನ ಕಿವಿಯಲ್ಲಿ ಹೇಳಿದುದಕ್ಕಿಂತಲೂ ಹೆಚ್ಚಾಗಿ ಮತ್ತು ಹೆಚ್ಚು ಸ್ಪಷ್ಟತರವಾಗಿ ಅವಳ ಬೆಚ್ಚಗಣ್ಣುಗಳಿಂದಲೆ ನಾಗಕ್ಕ ಎಲ್ಲವನ್ನು ಅರಿತುಕೊಂಡು, ಸಮಾಧಾನ ಹೇಳಿ, ಶಬ್ದದ ಕಾರಣ ಮತ್ತು ಉದ್ದೇಶಗಳನ್ನು ವಿಚಾರಿಸಲು ಹಿತ್ತಲುಕಡೆಯ ಹೆಂಡಯ ಎಡೆಗೆ ಬಿರುಬಿರನೆ ಧಾವಿಸಿದಳು.
ನಾಗಕ್ಕ ಆ ಸ್ಥಳಕ್ಕೆ ಬರುವುದರೊಳಗೆ ಹಂಡೆಯ ಸದ್ದಿಗೆ ಭಾವಚಕಿತೆಯಾಗಿದ್ದ ಇನ್ನೊಂದು ವ್ಯಕ್ತಿ,-ಮೂರನೆಯ ವ್ಯಕ್ತಿ-ಪೀಂಚಲು ಅಲ್ಲಿಗೆ ಓಡಿಹೋಗಿ, ತುಸು ದೂರದಲ್ಲಿಯೆ ನಿಂತು, “ಅಯ್ಯಾ, ಅಯ್ಯಾ, ಕೋಣೂರು ಸಣ್ಣಯ್ಯಾ, ಹಂಡೆಗೆ ಹೊಡೀಬೇಡಿ, ಹೊಡೀಬೇಡಿ. ಗಲಾಟೆ ಮಾಡಿದ್ರೆ ಬಯ್ತಾರೆ. ದೊಡ್ಡಯ್ಯೋರಿಗೆ ಕಾಯಿಲೆ ಜಾಸ್ತಿ ಆಗ್ಯದೆಯಂತೆ…” ಎಂದು ಅಂಗಲಾಚುತ್ತಿದ್ದಳು.
ನಾಗಕ್ಕ ಬರುವಷ್ಟರಲ್ಲಿಯೆ ಡಣಕು ನಿಂತಿತ್ತು. ತಿಮ್ಮು ಕೈಯಲ್ಲಿ ಸೌದೆ ತುಂಡು ಹಿಡಿದು ಪೀಂಚಲುಗೆ ಏನನ್ನೊ ಹೇಳುತ್ತಿದ್ದನು. ನಾಗಕ್ಕ ಬಂದು, ವಿಷಯ ಅರಿತು, ತಿಮ್ಮುಗೆ” ಕೋಣೂರು ತಮ್ಮಯ್ಯಂದೋ ಈ ಕೆಲಸ?” ಎಂದಷ್ಟೆ ನಗುತ್ತಾ ಹೇಳಿ, ಪೀಂಚಲು ಇದ್ದಡೆಗೆ ಹತ್ತಿರಕ್ಕೆ ಹೋಗಿ ಮೆಲ್ಲಗೆ ಮಾತಾಡತೊಡಗಿದಳು. ಧರ್ಮುವ ತರುವಾಯ ತಿಮ್ಮವೂ ಕಾಲು ತೊಳೆದುಕೊಂಡು ಚಿನ್ನಕ್ಕಯ್ಯ ಇದ್ದೆಡೆಗಾಗಿ ಇಬ್ಬರೂ ಓಡಿದರು.
ನಾಗಕ್ಕ ಒಳಗೆ ಹೋದಮೇಲೆ ಪೀಂಚಲು, ರಾತ್ರಿ ಕತ್ತಲೆಯಲ್ಲಿ ಹುಡುಕಲು ಕಷ್ಟವಾಗದಿರಲಿ ಎಂದು, ತಾನೇ ಕಂಬಕ್ಕೆ ಒರಗಿಸಿಟ್ಟಿದ್ದ ಸೌದೆ ತುಂಡನ್ನು ಅಲ್ಲಿಂದ  ತೆಗೆದು, ಹುಡುಗರಿಗೆ ಸಿಕ್ಕದಂತೆ, ನಾಗಂದಿಗೆಯಮೇಲೆ ಅಲ್ಲಿಯೆ ಹತ್ತಿರ ಇಟ್ಟಳು…
ಧರ್ಮುವೊಡನೆ ತಿಮ್ಮ ಹೋಗಿ ನೋಡುತ್ತಾನೆ, ಚಿನ್ನಕ್ಕಯ್ಯ ತನಗೆ ಅಗಮ್ಯವೂ ದುರ್ಗಮವೂ ಆದ ಸ್ಥಳದಲ್ಲಿ ದುಸ್ಸಾಧ್ಯಳಾಗಿ ಕುಳಿತಿದ್ದಾಳೆ, ತಲೆ ಬಗ್ಗಿಸಿಕೊಂಡು: ಮಳೆಗಾಲದ ಮೋಡಮಬ್ಬು ಕವಿದು ದ್ವಿಗುಣಿತವಾಗಿ ಕತ್ತಲೆ ಮುತ್ತಿದ್ದ ಮಾಣಿಗೆಯೊಳಗೆ, ಕಂಭದ ಮೇಲೆ ಮಿಣಿಮಿಣಿ ಉರಿಯುತ್ತಿದ್ದ ದೊಡ್ದ ಹಣತೆಯ ದೀಪದ ಬೆಳಕಿನಲ್ಲಿ, ತರತರದ ಬಣ್ಣದ ಮತ್ತು ಅಂಚಿನ ಸೀರೆಗಳನ್ನುಟ್ಟಿದ್ದ ಹುಡುಗಿಯರ ಮತ್ತು ಹೆಂಗಸರ  ಕೋಟೆಯ ಮಧ್ಯೆ ಸೆರೆಯಾದಳೆಂಬಂತೆ ಕುಳಿತಿದ್ದಳು ಚಿನ್ನಕ್ಕಯ್ಯ, ನಾನಾ ರೀತಿಯ ಕೊರಳ, ಕಿವಿಯ, ಮೂಗಿನ, ಬೈತಲೆಯ, ಜಡೆಯ, ತೋಳಿನ ಮತ್ತು ಕೈಯ ಆಭರಣಗಳ ಹೊರೆಯಿಂದ ಜಗ್ಗಿದಂತಾಗಿ ಬಾಗಿ!- ಮದುಮಗಳಾಗಿ!
ತಿಮ್ಮ ಧರ್ಮು ಇಬ್ಬರೂ ನಿಸ್ಸಹಾಯಕರಾಗಿ ಆದಷ್ಟು ದೂರ ನಿಂತೇ ನೋಡಿದೌ, ಅಲ್ಲಿ ನೆರೆದಿದ್ದ ನೆಂಟರಮ್ಮಂದಿರ ಕಣ್ಣಿಗೆ ಬೀಳಬಾರದೆಂದು. ಚಿನ್ನಕ್ಕಯ್ಯ ಏನೋ ಅಪಾಯಕ್ಕೆ ಸಿಕ್ಕಿಬಿದ್ದಿದ್ದಾಳೆ ಎಂದೇ ಭಾವಿಸಿ ತಿಮ್ಮು ಪಿಸಿಪಿಸಿ ಕೇಳಿದನು ಧರ್ಮುವನ್ನು: “ ಯಾಕೊ ಹಿಂಗೆ ಮಾಡಿದಾರೆ ಚಿನ್ನಕ್ಕಯ್ಗೆ? “
ಅವನೇನೊ ಯಾರಿಗೂ ಕೇಳಿಸಬಾರದೆಂದು ಮೆಲ್ಲಗೆ ಮಾತಾಡಿದ್ದನು. ಆದರೆ ಸಮಿಪದಲ್ಲಿದ್ದ ನೆಂಟರಮ್ಮ ಒಬ್ಬರು “ ಯಾರದು? ಕೋಣೂರು ತಮ್ಮಯ್ಯನಾ?…ನಿನ್ನಕ್ಕಯ್ಯನ ಇವತ್ತು ಹೊತ್ತುಕೊಂಡು ಹೋಗ್ತಾರೆ ಕಣೋ, ನಿನ್ನ ಸಿಂಬಾವಿ ಬಾವಯ್ಯ.”
“ಬಾವಯ್ಯ ಅಲ್ಲ. ಅವನಿಗೆ ಮಾವಯ್ಯ ಆಗ್ತಾರೆ” ತಿದ್ದಿದರು ಮತ್ತೊಬ್ಬ  ನೆಂಟರಮ್ಮ.
ಅಲ್ಲಿ ನೆರೆದಿದ್ದ ಗರತಿಯರೊಡನೆ ಹುಡುಗಿಯರೂ ಕಿಲಕಿಲನೆ ನಕ್ಕರು. ಹುಡುಗರಿಬ್ಬರಿಗೂ ತುಂಬ ನಾಚಿಕೆಯಾಗಿ ಅಲ್ಲಿಂದ ಓಟ ಕಿತ್ತರು.
ಅವರಿನ್ನೂ ಮಾಣಿಗೆಯಿಂದ ಹೊರಗೆ ದಾಟಿರಲಿಲ್ಲ, ಯಾರೊ ಗಟ್ಟಿಯಾಗಿ ಹೇಳಿದುದು ಕೇಳಿಸಿತು: ‘ಮಾವಯ್ಯ ಅಲ್ಲ; ಚಿಕ್ಕಪ್ಪಯ್ಯ!’
ಚಿಕ್ಕಪ್ಪಯ್ಯ?
ತಿಮ್ಮುಗೆ ಇದ್ದುದ್ದು ಒಬ್ಬನೆ ಚಿಕ್ಕಪ್ಪಯ್ಯ: ಮುಕುಂದ ಚಿಕ್ಕಪ್ಪಯ್ಯ!
‘ಮತ್ತೊಬ್ಬರು ಯಾರೊ ಚಿಕ್ಕಪ್ಪಯ್ಯನಂತೆ? ಥೂ!’ ಎಂದುಕೊಂಡ ತಿಮ್ಮುನ ಮನಸ್ಸು ಆ ಚಿಕ್ಕಪ್ಪಯ್ಯನ ವಿಚಾರವಾಗಿ ತುಂಬ ಹೇಯಭಾವನೆಯನ್ನನುಭವಿಸಿ, ಅವನು
ಚಿನ್ನಕ್ಕಯ್ಯನನ್ನು ಹೊತ್ತುಕೊಂಡು ಹೋಗುವ ವಿಚಾರದಲ್ಲಿ ಅತ್ಯಂತ ಕ್ರೂರವಾದ  ಪ್ರತಿಭಟನೆಯ ಭಂಗಿಯನ್ನೂ ತಾಳಿತ್ತು!
*****

ಕಾಮೆಂಟ್‌ಗಳಿಲ್ಲ: