ಹಿಂಬದಿಗೆ ಗಿಡ ಮರ ಹಳು
ಬೆಳೆದು ಕಿಕ್ಕಿರಿದು ಅದನ್ನು ಸಂಪೂರ್ಣವಾಗಿ ಅಡಗಿಸಿಟ್ಟಂತೆ ಮರೆಮಾಡಿದ್ದರೂ, ಮುಂಗಡೆಗೆ
ಹಬ್ಬಿದ್ದ ಹಾಸುಬಂಡೆಯ ದೆಸೆಯಿಂದ,- ಅಲ್ಲಲ್ಲಿ ದೂರದೂರ ಮುರುಟಿದಂತೆ ತಲ ಯೆತ್ತಿದ್ದ
ಕುಳ್ಳು ಮಟ್ಟುಗಳಿದ್ದರೂ-ಬಯಲು ಬಯಲಾಗಿ ತೋರುತ್ತಿದ್ದ ಹುಲಿಕಲ್ಲು ನೆತ್ತಿಯ
ಕಲ್ಲುಮಂಟಪದ ಒಂದು ಮೂಲೆಯಲ್ಲಿ ದೊಡ್ಡ ದೊಡ್ಡ ಕುಂಟೆಗಳನ್ನೆ ಅಡಕಿ ಹೊತ್ತಿಸಿದ್ದ ಬೆಂಕಿ
ಉರಿಯುತ್ತಿತ್ತು. ಆ ಬೆಂಕಿ ನಿನ್ನೆ ಮೊನ್ನೆಯದಾಗಿರಲಿಲ್ಲ; ಅನೇಕ ದಿನಗಳಿಂದ
ಇಪ್ಪತ್ತುನಾಲ್ಕು ಗಂಟೆಯೂ ಆರದೆ ಸಜೀವವಾಗಿದ್ದ ’ನಂದಾ ಬೆಂಕಿಯಾಗಿತ್ತು.’ ಹೊರಗೆ ಒಂದೇ
ಸಮನೆ ಸುರಿಯುತ್ತಿದ್ದ ಮಳೆಯಿಂದಲೂ ಸುಂಯ್ಯೆಂದು ಭೋರಿಡುತ್ತ ಬೀಸುತ್ತಿದ್ದ ಗಾಳಿಯಿಂದಲೂ
ಎಷ್ಟೇ ಶೈತ್ಯವಿದ್ದರೂ ಮಂಟಪದೊಳಭಾಗವು ಆ ಬೆಂಕಿಯ ಪ್ರಭಾವದಿಂದ ಸದಾ ಬೆಚ್ಚಗಿದ್ದು
ಮನೆಯಂತೆ ಹಿತಕರವಾಗಿತ್ತು.
ಆ ಬೆಂಕಿಯ ಪಕ್ಕದಲ್ಲಿ ಅಡುಗೆ ಮಾಡಲು ಒಲೆಯನ್ನಾಗಿ ಬಹಳ ಕಾಲದಿಂದ ಉಪಯೋಗಿಸಿದ್ದ
ಮೂರು ಕರಿಹಿಡಿದ ಕಲ್ಲುಗುಂಡುಗಳೂ, ಆ ಬಳಿಯೆ ಕೆಲವು ಮಡಕೆ ಕುಡಿಕೆಯ ಸಾಮಾನುಗಳೂ
ಇದ್ದುವು. ಮಂಟಪದ ಎದುರಿನ ಹಾಸುಬಂಡೆಯೊಂದರ ಮೇಲೆ ತಟ್ಟಿಗಳನ್ನು ಮಾಡಲು ಸಲುಕು
ತೆಗೆದಿದ್ದ ವಾಟೆಯ ಮತ್ತು ಬಿದಿರಿನ ತಿಳ್ಳದ ಬಿಳಿಯ ರಾಶಿ ಅಲ್ಲಿ ಕಾಮಗಾರಿಯ ಅತ್ಯಂತ
ಅರ್ವಾಚೀನತೆಯನ್ನು ಸೂಚಿಸುತ್ತಿತ್ತು. ಮಂಟಪದ ಒಂದು ಭಾಗ, ಬಿದಿರು ಗೂಟಗಳನ್ನು ನೆಟ್ಟು
ವಾಟೆಯ ತಟ್ಟಿಗಳನ್ನು ಮರೆ ಕಟ್ಟಿದುದರಿಂದ, ನಿವಾಸ ಯೋಗ್ಯವಾದ ಕೋಣೆಯಾಗಿ
ಪರಿವರ್ತಿತವಾಗಿತ್ತು.
ಬೆಂಕಿಯ ಪಕ್ಕದಲ್ಲಿ ತರುಣಿಯೊಬ್ಬಳು ಕುಳಿತು, ಯಾವ ಉದ್ದೇಶವೂ ಇಲ್ಲದ ಯಾಂತ್ರಿಕ
ಕರ್ಮದಲ್ಲಿ ತೊಡಗಿದ್ದಂತೆ, ಆ ಬೆಂಕಿಗೆ ನಿಧಾನವಾಗಿ ಎರಡೋ ಮುರೋ ನಿಮಿಷಗಳಿಗೊಮ್ಮೆ
ಕಸವನ್ನೊ, ಕಡ್ಡಿಯನ್ನೊ, ಹಲಸಿನ ಬೀಜವನ್ನೊ, ಅಲ್ಲೆಲ್ಲ ಗಾಳಿಯಲ್ಲಿ ಚೆದರಿದಂತಿದ್ದ
ಕಾಡುಕೋಳಿಯ ಪುಕ್ಕವನ್ನೊ ಎಸೆಯುತ್ತಿದ್ದಳು. ಒಮ್ಮೊಮ್ಮೆ ಆ ಯಾಂತ್ರಿಕ ಕರ್ಮವು ನಿಂತು
ಅವಳು ಕುಗುರುವಂತೆಯೂ ತೋರುತ್ತಿತ್ತು. ಅವಳ ಎದುರಿಗೆ ತುಸುದೂರದಲ್ಲಿ, ಬಹು ದಿನಗಳಿಂದ
ಹಾಕಿ ಹಾಕಿ ರಾಶಿಯಾಗಿದ್ದ ಬೂದಿಗುಡ್ಡೆಯ ಮೇಲೆ, ಪಕ್ಕದಲ್ಲಿ ಹೊಡೆದಿದ್ದ
ಬಿದಿರುಗೂಟಕ್ಕೆ ಬಳ್ಳಿಯ ನುಲಿಯಿಂದ ಕಟ್ಟುಗೊಂಡು ಟೊಣಪಗಾತ್ರದ ಕರಿಯ ನಾಯಿಯೊಂದು
ಮುದುರಿ ಸುತ್ತಿಕೊಂಡು ಮಲಗಿ ನಿದ್ರಿಸುವಂತಿತ್ತು. ಅದರ ನಿದ್ರೆಯೂ ಅವಶ್ಯ
ನಿದ್ರೆಯಾಗಿರಲಿಲ್ಲ. ಬೇಜಾರಿನ ನಿದ್ದೆಯಾಗಿತ್ತು.
ಆಗತಾನೆ ಬೈಗಾಗುತ್ತಿತ್ತು. ಆದರೂ ದಟ್ಟಯಿಸಿದ್ದ ಮೋಡಗಪ್ಪು ಕತ್ತಲಿಳಿದಷ್ಟು
ಕಪ್ಪಾಗಿ, ಹಗಲುಬೆಳಕಿನಲ್ಲಿ ಸಪ್ಪೆಗೆಂಪಾಗಿದ್ದ ’ನಂದಾ ಬೆಂಕಿ’ ಆಗಲೆ ಕೆಂಗೆಂಪಾಗಿ
ಹೊಳೆಯತೊಡಗಿತ್ತು. ಎದುರಿಗೆ ದಿಗಂತ ವಿಶ್ರಾಂತವಾಗಿ ತರಂಗ ತರಂಗವಾಗಿ ಹಬ್ಬಿದ್ದ
ಪರ್ವತಾರಣ್ಯಶ್ರೇಣಿ ವರ್ಷಧಾರಾ ಸಾಂದ್ರತೆಯಿಂದಲೂ ಮೆಲ್ಲಗೆ ಇಳಿದು ಕವಿಯುತ್ತಿದ್ದ
ಕತ್ತಲೆಯಿಂದಲೂ ತನ್ನ ಸ್ಪಷ್ಟತೆಯನ್ನೆಲ್ಲ ಕಳೆದುಕೊಂಡು ಹಸುರು ಹಸುರು ಛಾಯೆಯ
ಮಹಾಮುದ್ದೆಗಳಾಗುತ್ತಿದ್ದವು. ಕಣಿವೆಯ ದೂರದಿಂದ ಈಗೊಮ್ಮೆ ಆಗೊಮ್ಮೆ, ಮಳೆ ಇಳಿಗೊಂಡು
ಗಾಳಿಯ ಸದ್ದು ಕಡಿಮೆಯಾದಾಗ, ವಾಲಗದ ಸದ್ದು ಕೇಳಿಸಿ, ತಿಮ್ಮಿಗೆ ಹೂವಳ್ಳಿ ಮದುವೆಯ
ನೆನಪುಕೊಟ್ಟು, ಅಲ್ಲಿ ಇಂದು ನಡೆಯಲಿರುವ ಮಹಾಘಟನೆಯಲ್ಲಿ ತಾನೂ ಮತ್ತು ತನ್ನ ಗಂಡ
ಗುತ್ತಿಯೂ ವಹಿಸುತ್ತಿದ್ದ ಪಾತ್ರದ ಅರಿವಾಗುತ್ತಿತ್ತು:
’ಇವತ್ತೆ ರಾತ್ರಿ ಮದುವಣಗಿತ್ತಿ ಚಿನ್ನಮ್ಮೋರು ಇಲ್ಲಿಗೆ ಬರುತ್ತಾರೆ!
ತಾನಿಲ್ಲಿರುವಲ್ಲಿಗೆ! ಈ ಹುಲಿಕಲ್ಲು ನೆತ್ತಿಯ ಕಲ್ಲುಮಂಟಪಕ್ಕೆ!…. ಪಾಪ, ಹೆಂಗೆ ಈ
ಕಾಡು ಗುಡ್ಡ ಹತ್ತಿ ಬರುತ್ತಾರೊ?…. ಧಾರೆಸೀರೆ ಉಟ್ಟುಕೊಂಡು, ಕಟ್ಟಾಣಿ ಗೆಜ್ಜಡಿಕೆ
ವಾಲೆ ಬಾಸಿಂಗ ಎಲ್ಲ ಇರೋಹಾಂಗೆ ಬಂದು ಬಿಡ್ತಾರೊ?….’ ತಿಮ್ಮಿ ಮನದಲ್ಲಿಯೆ
ಸ್ವರ್ಣಾಲಂಕಾರ ಭೂಷಿತೆಯಾದ ಮದುಮಗಳನ್ನು ಕಲ್ಪಿಸಿಕೊಂಡು ಆ ನೋಟದ ಸಂತೋಷಕ್ಕೆ
ಹಿಗ್ಗಿದಳು. ಚಿನ್ನಮ್ಮ ಬಂದಾಗ ತಾನು ಅವರನ್ನು ಹೇಗೆ ಸ್ವಾಗತಿಸಬೇಕು, ಏನೇನು ಸೇವೆ
ಮಾಡಬೇಕು ಎಂದೂ ಆಲೋಚಿಸಿದಳು. ತಾತ್ಕಾಲದಲ್ಲಿ ತಿಮ್ಮಿಗೆ ತಾನು ಹೊಲತಿ ಎಂಬುದೂ,
ಆದ್ದರಿಂದ ತನ್ನ ಸೇವೆ ಏನಿದ್ದರೂ ಹತ್ತಿರದ್ದಾಗಿರದೆ ದೂರದ್ದಾಗಿರಬೇಕೆಂಬುದು
ಮರೆತುಹೋಗಿತ್ತು. ಆಲೋಚನೆಯಿಂದ ಮಧ್ಯೆ ತಿಮ್ಮ ಆಗಾಗ್ಗೆ ಆಕಳಿಸಿ
ಕಣ್ಣೊರೆಸಿಕೊಂಡಿದ್ದಳು, ಆಕಳಿಕೆಯಿಂದ ಬರುವ ಕಣ್ಣೀರನ್ನು! ಒಯ್ಯೊಯ್ಯನೆ ಅವಳ ಪ್ರಜ್ಞೆ
ಜಾಗ್ರತ್ ಸತ್ತೆಯಿಂದ ಜಾರಿ ಸ್ವಪ್ನಸತ್ತೆಯ ಅಂಚಿಗೆ ಹೋಗಿ ಹೋಗಿ ಹಿಂದಿರುಗುತ್ತಿತ್ತು.
“ಯಾಕೆ ಹೀಂಗೆ ಆಕಳಿಕೆ ಬರ್ತವೆಯೋ? ಯಾರೋ ನನ್ನ ನೆನೀತಾ ಇರಬೈದು….ಮತ್ತ್ಯಾರು
ನೆನೀತಾರೆ? ನನ್ನವ್ವನೆ ನೆನೀತ ಇರಬೈದು….ಥೂ ಇವರು ಯಾಕೆ ಇಷ್ಟೊತ್ತು ಮಾಡ್ತಾರಪ್ಪಾ?
ಕತ್ತಲಾತಾ ಬಂತು. ಇನ್ನೂ ಬರಲಿಲ್ಲ. ಮುಕುಂದಯ್ಯೋರನ್ನ ಯೆಂಕಮ್ಮನ ಮನೆ ತಂಕಾ ಕಳಿಸಿ,
ಹೊಸದಾಗಿ ಮಾಡಿದ ದಾರಿ ತೋರಿಸಿ, ಬಂದುಬಿಡ್ತೀನಿ ಅಂತಾ ಹೋದ್ರಲ್ಲಾ!….” ಬೂದಿ
ಗುಡ್ಡೆಯಲ್ಲಿ ಮುದುರಿಕೊಂಡು ಬೆಚ್ಚಗೆ ಮಲಗಿದ್ದ ಹುಲಿಯನ ಕಡೆ ನೋಡುತ್ತಾ “ನನ್ನ
ಧೈರ್ಯಕ್ಕೆ ಬಿಟ್ಟೂಹೋಗ್ತೀನಿ ಅಂತಾ ಅದನ್ನು ಬ್ಯಾರೆ ಇಲ್ಲಿ ಕಟ್ಟಿಹಾಕಿ….” ತಿಮ್ಮಿ
ಬೆರಗಾಗಿ ನೋಡುತ್ತಾಳೆ: ಕಲ್ಲುಮಂಟಪದ ಇದಿರಿನಲ್ಲಿದ್ದ ಹಾಸುಬಂಡೆಯ ಮೇಲೆ ಒಂದು ಕುದುರೆ
ನಿಂತಿದೆ! ಸೈನಿಕ ವೇಷದಲ್ಲಿರುವ ಒಬ್ಬ ಸವಾರ ಅದರ ಮೇಲೆ ಕೂತು ಲಗಾಮು ಹಿಡಿದಿದ್ದಾನೆ.
ಯಾರನ್ನೋ ನಿರೀಕ್ಷಿಸುವಂತೆ ಎಡಕ್ಕೂ ಬಲಕ್ಕೂ ನೋಡುತ್ತಿದ್ದಾನೆ.- ಅಷ್ಟರಲ್ಲಿ
ತರುಣಿಯೊಬ್ಬಳು ಕುದುಯೆಡೆಗೆ ಓಡಿ ಬಂದು ಕೈನೀಡುತ್ತಾಳೆ. ಅವಳು ಬಾಸಿಂಗ ಕಟ್ಟಿ, ಒಡವೆ
ತೊಟ್ಟು, ಮದುಮಗಳ ವೇಷದಲ್ಲಿದ್ದಾಳೆ. ಸವಾರನು ಬಾಗಿ ಅವಳನ್ನೆತ್ತಿ ತನ್ನ ಮುಂದೆ
ಕುದುರೆಯ ಮೇಲೆ ಕೂರಿಸಿಕೊಂಡೊಡನೆ ಕುದುರೆ ಹಾಸುಬಂಡೆಯ ಮೇಲೆ ಖುರಪುಟ ಧ್ವನಿಯೇಳುವಂತೆ
ಚಿಮ್ಮಿ ನೆಗೆದು ಓಡಿ ಕಣ್ಮರೆಯಾಗುತ್ತದೆ. ಅದುವರೆಗೆ ಸುಮ್ಮನೆ ಮಲಗಿದ್ದ ಹುಲಿಯ
ಕಟ್ಟಿದ್ದ ಬಳ್ಳಿ ಹರಿದು ಹೋಯಿತೆಂಬಂತೆ ಜಗ್ಗಿಸೆಳೆಯುತ್ತಾ ಭಯಂಕರವಾಗಿ ಕುದುರೆ
ಓಡಿದತ್ತ ಮೋರೆಯಾಗಿ ಬೊಗಳುತ್ತಿದೆ. ಒಂದು ಕ್ಷಣಾರ್ಧದಲ್ಲಿ ಎಂಬಂತೆ ನಡೆದುದೆಲ್ಲವನ್ನೂ
ಕಣ್ಣು ಬಿಟ್ಟೂಕೊಂಡೆ ಕಂಡಿದ್ದ ತಿಮ್ಮಿ ದಿಙ್ಮೂಢಳಾಗಿ ಗತಗತ ನಡುಗುತ್ತಾ
ಕುಳಿತಿದ್ದಾಳೆ!
ಹಿಂದೆ ಈ ಹುಲಿಕಲ್ಲು ನೆತ್ತಿಯ ಕಲ್ಲುಮಂಟಪವು ನಗರ ಸಂಸ್ಥಾನದ ಸೈನ್ಯದ
ಕಾವಲ್ದಾಣವಾಗಿದ್ದಾಗ ನಡೆದಿದ್ದ ಯಾವುದಾದರೂ ಒಂದು ಘಟನೆ ಆ ಗಿರಿಮಸ್ತಕದ ಪ್ರಾಣಮಯ
ಸೂಕ್ಷ್ಮಪೃಥ್ವೀತತ್ವದಲ್ಲಿ, ಅದಕ್ಕೆ ಸಂವಾದಿಯಾಗುತ್ತಿದ್ದ ಪ್ರಾಣಿ ಸದೃಶಸಂಸ್ಕಾರದ
ಅಬುದ್ಧಿಜೀವಿ ತಿಮ್ಮಿಯ ಪ್ರಾಣಮಯ ಸ್ವಪ್ನಪ್ರಜ್ಞೆಯ ಪ್ರಭಾವದಿಂದ, ಪುನಃಸ್ಮೃತಿಯಾಗಿ
ಆವಿರ್ಭವಿಸಿ ಅವಳಿಗೆ ದೃಗ್ಗೋಚರವಾಯಿತೋ? ಅಥವಾ ಚಿನ್ನಮ್ಮ ಮುಕುಂದಯ್ಯರ ಜನ್ಮಾಂತರ
ಸಂಬಂಧದ ಘಟನೆಯೊಂದು ಅವರನ್ನು ಕುರಿತೆ ನೆನೆಯುತ್ತಿದ್ದ ತಿಮ್ಮಿಯ ಅರ್ಧಜಾಗ್ರತ್
ಪ್ರಜ್ಞೆಯಲ್ಲಿ ಪ್ರತಿಮಿತವಾಗಿ ಕಾಣಿಸಿಕೊಂಡಿತೋ? ಅಥವಾ ಕಳೆದ ರಾತ್ರಿ ಅವಳ ಗಂಡ, ಒಡೆಯರ
ಮನೆಯಲ್ಲಿ ಅಡಕೆ ಸುಲಿತದ ಸಮಯದಲ್ಲಿ ರಾತ್ರಿಯೆಲ್ಲಾ ಕೆಲಸಮಾಡಬೇಕಾಗಿ ಬಂದಾಗ ಬೇಸರ
ಪರಿಹಾರಕ್ಕಾಗಿ ಯಾರಾದರೊಬ್ಬರು ಸರದಿಯ ಮೇಲೆ ಹೇಳುತ್ತಿದ್ದ ಸರಗತೆಯನ್ನು ತಾನು
ಕೇಳಿದ್ದು, ಅದನ್ನು ಅವಳಿಗೆ ಹೇಳಿದ್ದುದರ ಪರಿಣಾಮವೋ? ಅಂತೂ ತಾನು ಕಣ್ಣು
ತೆರೆದಿದ್ದಾಗಲೆ ಕಾಣಿಸಿಕೊಂಡಿದ್ದ ಆ ರಣತೇಜಿಯನ್ನೂ ಆ ಸಮರಸಜ್ಜಿತ ಧೀರಭಂಗಿಯ
ಅಶ್ವಾರೋಹಿಯನ್ನೂ ಅವನೆಡೆಗೆ ಧಾವಿಸಿ ಬಂದು ಅವನ ಕೈ ಹಿಡಿದು ಚಂಗನೆ ಕುದುರೆಯೇರಿದ್ದ ಆ
ಸಾಲಂಕೃತ ವಧೂವೇಷದ ತರುಣಿಯನ್ನೂ ನೆನೆನೆನೆದು ತಿಮ್ಮಿ ಭಯಭ್ರಾಂತೆಯಾಗಿ
ವಿಕಂಪಿಸುತ್ತಿದ್ದರೂ ಮರ ವಟ್ಟಂತೆ ಕುಳಿತಿದ್ದಳು!
ಕತ್ತಲೆಯಲ್ಲಿ ಕಲ್ಲುಮಂಟಪದೊಳಕ್ಕೆ ಬರುತ್ತಿದ್ದವನು ತನ್ನ ಒಡೆಯ ಎಂಬುದನ್ನರಿಯುವ ಮುನ್ನ ಹುಲಿಯ ಒಂದೆರಡು ಸೊಲ್ಲು ಬೊಗುಳಿತು.
“ಏಈಈ! ಇದಕ್ಕೇನು ಇದ್ದೊಂದು ಒಕ್ಕಣ್ಣೂ ಇಂಗಿ ಹೋಗ್ಯಾದೇನ್ರೋ? ಹಛೀ!” ಎನ್ನುತ್ತಾ
ಗುತ್ತಿ ಒಳಗೆ ಬರಲು, ಹುಲಿಯ ಹಾರಿಹಾರಿ ಬಾಲವಳ್ಳಾಡಿ ಕುಂಯಿಗುಡುತ್ತಾ ಸ್ವಾಗತಿಸಿತು.
“ಏಈಈಈ! ಯಾಕೆ? ಹಿಂಗೆ ಕೂತೀಯಾ? ಏನಾಗದೆಯೆ ನಿಂಗೆ?” ಗುತ್ತಿ ಮಂಕು ಬಡಿದವಳಂತೆ
ಕೂತಿದ್ದ ತಿಮ್ಮಿಯ ಕಡೆಗ ಹೇಳುತ್ತಾ, ತನ್ನ ಕಂಬಳಿ ಕೊಪ್ಪೆಯನ್ನು ತೆಗೆದು ಕೊಡಹಿ,
ಕಟ್ಟಿದ್ದ ತಟ್ಟಿಯ ಮೇಲೆ ಒಣಗಲು ಹರಡಿದನು. ಗಾಳಿ ಮಳೆಗಳಲ್ಲಿ, ಹಳುವಿನ ಹನಿಯಲ್ಲಿ,
ಒದ್ದೆಯಾಗಿ ಚಳಿ ಹತ್ತಿದ್ದ ಮೈಯನ್ನು ಬೆಚ್ಚಗೆ ಮಾಡಿಕೊಳ್ಳಲು, ಉರಿಯುತ್ತಿದ್ದ ಕುಂಟೆಯ
ಕೆಂಡವನ್ನು ಕೆದಕಿ, ಇನ್ನಷ್ಟು ಜಿಗ್ಗು ಅಡಕಿ, ಬೆಂಕಿ ಕಾಯಿಸಿಕೊಳ್ಳಲು ನೆಲಕೆ ಅಂಡೂರಿ
ಕುಳಿತ ಗುತ್ತಿ ಮತ್ತೊಮ್ಮೆ ಹೆಂಡತಿಯ ಕಡೆ ನೋಡಿದನು: ತಿಮ್ಮಿ ನೀರವವಾಗಿ
ಅಳುತ್ತಿದ್ದಳು.
“ಏಈಈ! ಏನಾಗದೆಯೆ ನಿಂಗೆ? ಅಳಾಕೆ?” ಈ ಸಾರಿ ಗುತ್ತಿಯ ಪ್ರಶ್ನೆ ಅಲಘು ಧ್ವನಿಯಿಂದಲೆ ಹೊಮ್ಮಿತ್ತು.
“ನಾ ಹೇಳ್ಳಿಲ್ಲೇನು, ನನ್ನೊಬ್ಬಳ್ನೇ ಬಿಟ್ಟುಹೋಗಬ್ಯಾಡಾ ಅಂತಾ?” ಅಳುದನಿಯಿಂದಲೆ ಹೇಳುತ್ತಾ ತಿಮ್ಮಿ ಗುತ್ತಿಯ ಕಡೆ ನಿಷ್ಠುರದೃಷ್ಟಿ ಬೀರಿದಳು.
“ಈಗೇನಾಯ್ತು ಬಿಟ್ಟುಹೋದ್ರೆ?…. ಒಬ್ಬಳೆ ಆಗ್ತೀಯಾ ಅಂತಾ ಹುಲಿಯನ್ನ ಬ್ಯಾರೆ ಕಟ್ಟಿಹಾಕಿ ಹೋಗೀನೀ!?….”
“ಈ ಗುಡ್ಡದ ನೆತ್ತೀಲಿ ನಾವಿನ್ನಿರೋದು ಬ್ಯಾಡ! ಏನೇನೋ ತಿರುಗ್ತವೆ!….”
“ಕಾಡಿನ ಪರಾಣಿ ಕಾಡಿನಲ್ಲಿ ತಿರುಗಬಾರ್ದೇನು? ಹುಲಿ, ಹಂದಿ, ಕಡ, ಮಿಗ, ಹಾವು,
ಚೇಣು? ನಮಗೇನು ಮಾಡ್ತವೆ ಅವು?…. ಚಿನ್ನಕ್ಕನ್ನ ಬ್ಯಾರೆ ಕರಕೊಂಡು ಬರ್ತಾರೆ, ಇವೊತ್ತೆ
ಇಳ್ಳು!”
“ಕಾಡಿನ ಪರಾಣಿ ಅಲ್ಲ, ನಾ ಕಂಡಿದ್ದು….”
“ಮತ್ತೆ?….” ಗುತ್ತಿಯ ದನಿಯಲ್ಲಿ ಅಚ್ಚರಿಯಿತ್ತು. ಉರಿಗೆ ಜಿಗ್ಗು ಹಾಕುತ್ತಿದ್ದುದನ್ನು ನಿಲ್ಲಿಸಿ, ಹೆಂಡತಿಯ ಕಡೆ ನೋಡತೊಡಗಿದನು.
ತಿಮ್ಮಿ ತಾನು ಕಂಡದ್ದನ್ನು ತನಗೆ ಸಾಧ್ಯವಾದ ರೀತಿಯಿಂದ ಬಣ್ಣಿಸಿದಳು. ಗುತ್ತಿಯ
ಎದೆಯಲ್ಲಿ ಏನೋ ಒಂದು ತರಹ ಆಗುತ್ತಿದ್ದರೂ ಅದನ್ನು ತೋರಗೊಡದ ಗಂಡುಭಂಗಿಯಲ್ಲಿ ಕೇಳಿದನು:
“ಕುಗುರ್ತಿದ್ಯೋ? ಕಣ್ಣು ಬಿಟ್ಕೊಂಡಿದ್ಯೋ? ಕನಸಿನಾಗೆ ಕಂಡಿದ್ದನ್ನ
ಕಣ್ಣುಬಿಟ್ಟುಕೊಂಡು ಕಂಡೆ ಅಂತಾ ಮಾಡಿಕೊಂಡೀಯ!….”
“ಹಾಂಗಾರೆ ಹುಲಿಯನೂ ಕನಸಿನಾಗೇ ಕಂಡ್ತೇನು? ಹ್ಯಾಂಗೆ ಬೊಗಳ್ತು, ಅರೆಕಲ್ಲಿನ ಮ್ಯಾಲೆ ಕುದ್ರೆ ಕಟಕಟಗುಡೀತಾ ಓಡ್ದಾಗ?….”
“ನಮಗೆ ಯಾರಿಗೂ ಇಷ್ಟು ದಿನ ಕಾಣಿಸಿಕೊಳ್ಳದೆ, ರಾಜಕುಮಾರ ನಿಂಗೊಬ್ಬಳಿಗೇ
ಕಾಣಿಸಿಕೊಂಡನೋ? ಚೆಂದುಳ್ಳಿ ಹೆಣ್ಣು ಅಂತಾ? ಬಿಡು ಬಿಡು, ಬರೀ ಬಿರಾಂತು ಕಣೇ,
ನಿನ್ದು!….”
ಬಾಯಲ್ಲಿ ತಿರಸ್ಕಾರವಿದ್ದರೂ ಗುತ್ತಿಗೆ ಮನಸ್ಸಿನಲ್ಲಿ ತಿರಸ್ಕರಿಸಲಾಗಲಿಲ್ಲ.
ಹುಲಿಕಲ್ಲು ನೆತ್ತಿಯಲ್ಲಿ ರಾತ್ರಿ ತಂಗಿದ್ದಾಗಲೆಲ್ಲ ಅವನಿಗೆ ಏನೇನೊ ವಿಚಿತ್ರ ಶಬ್ದಗಳು
ಕೇಳಿಸುತ್ತಿದ್ದುದುಂಟು! ಮನುಷ್ಯಾತೀತಿ ಶಕ್ತಿಗಳು ಇಂತಹ ಗುಡ್ಡದ ನೆತ್ತಿಗಳಲ್ಲಿ
ಸಂಚರಿಸುತ್ತವೆ ಎಂಬುದನ್ನೂ ಅವನು ಅನೇಕರಿಂದ ಕೇಳಿ ನಂಬಿದ್ದನು. ಅಲ್ಲಿಂದ
ಹೊರಟುಬಿಡಬೇಕು ಎಂಬ ತಿಮ್ಮಿಯ ಭಯಪ್ರೇರಿತವಾದ ಸೂಚನೆಗೆ ಗುತ್ತಿಯ ಮನದಲ್ಲಿ ಮೆಲ್ಲನೆ
ಸಹಾನುಭೂತಿ ಸಂಚರಿಸಿತೊಡಗಿತು. ಆದರೆ ತಟ್ಟಕ್ಕನೆ ಹೋಗುವುದಾದರೂ ಹೇಗೆ? ಭಯಂಕರ
ಮಳೆಗಾಲದಲ್ಲಿ ಹೋಗುವುದಾದರೂ ಎಲ್ಲಿಗೆ? ಸಿಂಬಾವಿ ಕೇರಿಗೆ ಎರಡು ವರ್ಷ ಬರಬಾರದು;
ತಲೆಮರೆಸಿಕೊಂಡಿರು ಎಂದು ಒಡೆಯರು ಎಚ್ಚರಿಕೆ ಇತ್ತಿದ್ದಾರೆ! ಬೆಟ್ಟಳ್ಳಿ ಕೇರಿಯಂತೂ
ತಿಮ್ಮಿಯನ್ನು ಹಾರಿಸಿಕೊಂಡು ಬಂದಿರುವ ತನಗೆ ವಿಷಪ್ರಾಯ! ತಿಮ್ಮಿ ಅಲ್ಲಿಗೆ ಇನ್ನೆಂದೂ
ಕಾಲಿಡುವುದಿಲ್ಲವೆಂದೂ, ಅದಕ್ಕೆ ಬದಲಾಗಿ ’ಪರಾಣ ತೆಗೆದುಕೊಂಡು ಬಿಡುತ್ತೇನೆ’ ಎಂದೂ
ನಿಶ್ಚಯಿಸಿದ್ದಾಳೆ! ಅಲ್ಲದೆ ಮುಕುಂದಯ್ಯ ಗೌಡರು ಧೈರ್ಯ ಕೊಟ್ಟಿದ್ದರಿಂದಲೆ ತಾನು ತನ್ನ
ಹೆಂಡತಿಯೊಡನೆ, ಅವರಿಗೆ ಆವಶ್ಯಕವಾಗುವಷ್ಟು ಕಾಲ, ಹುಲಿಕಲ್ಲು ನೆತ್ತಿಯ
ಕಲ್ಲುಮಂಟಪದಲ್ಲಿದ್ದುಕೊಂಡು, ಅದನ್ನು ತುಸು ನಿವಾಸಯೋಗ್ಯವನ್ನಾಗಿ ಮಾಡಿ, ಹೂವಳ್ಳಿ
ಚಿನ್ನಕ್ಕನನ್ನು ಕೆಲವುಕಾಲ ಅಡಗಿಸಿಡಲು ನೆರವಾಗುವುದಾಗಿ ಮಾತುಕೊಟ್ಟಿದ್ದಾನೆ! ಅವರನ್ನು
ಅಲ್ಲಿಗೆ ಕರೆದುಕೊಂಡು ಬರುವ ದಿನವೇ ಇವನು ಹೊರಡುವ ಯೋಚನೆ ಮಾಡಿದರೆ ಉಂಡಮನೆಗೆ ಎರಡು
ಬಗೆದ ಕಡುಪಾಪಿಯಾಗುತ್ತಾನೆ! ಛೆ ಎಲ್ಲಾದರೂ ಉಂಟೆ? ಆ ಆಲೋಚನೆಯ ದಾರಿಯನ್ನೇ ಅಳಿಸಿಬಿಡುವ
ರೀತಿಯಲ್ಲಿ ಗುತ್ತಿ ತಿಮ್ಮಿಯ ಕಡೆಗೆ ಮುಖ ತಿರುಗಿಸಿ:
“ಯಾಕೇ? ಮಾತಾಡ್ದೆ ಸುಮ್ನೆ ಕೂತುಬಿಟ್ಯೆಲ್ಲಾ?….”
“ನೀವು ಯಾಕೆ ಸುಮ್ನೆ ಕೂತಿದ್ದು? ಅದ್ಕೆ ನಾನೂ ಕೂತಿದ್ದು!”
“ಹಾಂಗಲ್ಲ; ಮೂರು ಹೊತ್ತೂ ಬಾಯಿ ಹನಾಹನಾ ವಟಗುಟ್ಟೋಳು ಸುಮ್ನೆ ಕೂತ್ಯೆಲ್ಲಾ ಅಂತಾ ಕೇಳ್ದೆ….”
ಗಂಡನ ವಿಡಂಬನೆಯ ಚುಚ್ಚನ್ನು ಗಮನಿಸದೆ ತಿಮ್ಮಿ ವಿಷಣ್ಣ ಭಾವದಿಂದ ಉತ್ತರಿಸಿದಳು: “ಮಳೆ ಹುಯ್ತಿತ್ತಲ್ಲಾ, ಗಾಳೀ ಭೋರಾಟ ಆಲೈಸ್ತಾ ಕೂತಿದ್ದೆ….”
“ಇದೆಲ್ಲ ಪೂರೈಸಿದ ಮ್ಯಾಲೆ ಮುಂದೇನು ಮಾಡೋದು? ಯೋಚ್ನೆ ಮಾಡೀಯೇನು?….”
“ಸಿಂಬಾವಿ ಕೇರಿಗೆ ಹೋಗಾದು, ಮಾವನ ಮನೀಗೆ.”
“ಹೆಗ್ಗಡೇರು ಹೇಳ್ಯಾರೆ, ಈಗ ಬರಬ್ಯಾಡ ಕೇರೀಗೆ ಅಂತಾ….ಈ ಪೋಲೀಸಿನೋರ್ದೆಲ್ಲ ತಣ್ಣಗೆ ಆದಮ್ಯಾಲೆ ಬಾ ಅಂದ್ರು.”
“ಕೋಣೂರು ಸಣ್ಣಯ್ಯ ಮನ್ನೆ ಹೇಳಿದ್ರಲ್ಲಾ? ಅದೆಲ್ಲಾ ತಣ್ಣಗೆ ಆದ್ಹಾಂಗೆ ಅಂತಾ. ಈ ಇಜಾರದ ಸಾಬಿಗೆ ಗುಣಾಗಿ ಅವನೂರಿಗೆ ಹೋದ ನಂತೆ!….”
“ನೋಡು, ಅದೆಲ್ಲ ಪೋಲೀಸಿನವರು ಹುಟ್ಟಿಸಿರುವ ಉಪಾಯ. ನಾನು ಕೇರಿಗೆ ಹೋದಕೂಡ್ಲೆ ಮತ್ತೆ ಹಿಡುಕೊಳ್ಳಾಕೇ ಈ ಕತೆ ಹುಟ್ಟಿಸ್ಯಾರೆ….”
“ಮತ್ತೇನು ಮಾಡಾನ?….”
“ಮುತ್ತೂರು ಸೀಮೆ ಕಡೆ ಹೋಗಾನ….ಯಾರಿಗೂ ಗುರುತು ಗೊತ್ತಾಗದ ಹಾಂಗೆ ಆರು ತಿಂಗಳೋ
ವರ್ಷಾನೋ ಇದ್ದು ಬಿಡಾನ…. ಆಮ್ಯಾಲೆ ಏನು ಎತ್ತ ಅಂತ ಸಂಗ್ತಿ ಇಚಾರ್ಸಿ, ಸಿಂಬಾವಿ
ಕೇರಿಗೇ ಬಂದರಾಯ್ತು…. ನೀ ಏನು ಹೇಳ್ತೀಯಾ?…. ನಾನೇನೋ ಒಂದು ಹರು ನೆನೆದ್ದೀನಿ.
ಮೇಗ್ರೊಳ್ಳಿ ಕಡೆಯಿಂದ ತೀರ್ಥಳ್ಳಿ ಮೇಲಾಸಿ ಹೊಳೆದಾಟಿ ಹೋಗುವ ಗಟ್ಟದ ತಗ್ಗಿನವರು
ಸಿಗ್ತಾರೆ. ಅವರ ಸಂಗಡ ನಾವು ಗಟ್ಟದ ತಗ್ಗಿನವರ ಹಾಂಗೆ ಮಾಡಿಕೊಂಡು, ತೀರ್ಥಳ್ಳಿ
ದೋಣಿಗಂಡೀಲಿ ಹೊಳೆದಾಟಿ ಬಿಟ್ರೆ, ನಮ್ಮನ್ಯಾರೂ ಮೂಸಿ ನೋಡೂದಿಲ್ಲ ಆ ಮ್ಯಾಲೆ….”
“ಥೂ! ನನ್ನಿಂದ ಆಗಾದಿಲ್ಲ, ಆ ಹಸಲೋರು ಕರಾದೇರು ಬಿಲ್ಲೋರು ಉಟ್ಹಂಗೆ ಸೀರೆ ಉಡಾಕೆ!….”
“ಒಂದೆರಡು ದಿನ ಹಾಂಗೆ ಉಟ್ಟುಕೊಂಡ್ರೆ ನಿಂಗೇನು ಜಾತಿ ಹೋಗ್ತದಾ?….’
“ಊಞ್ ಹ್ಞು! ನೀವೇನು ಮಾಡಾಕೆ ಹೇಳುದ್ರೂ ಮಾಡ್ತೀನಿ, ಅದೊಂದು ಮಾತ್ರ ನನ್ನಿಂದ ಆಗಾದಿಲ್ಲ. ನಾ ಯಾವಾಗ್ಲೂ ಗೊಬ್ಬೆ ಸೆರಗು ಹಾಕ್ಯೀ ಸೀರೆ ಉಡಾದು!….”
“ಅದ್ಕೇ ಹೇಳಾದು, ನೀನು ’ಮಂಡೀ’ ಅಂತಾ…. ನಾ ಹೇಳ್ದ ಹಂಗೆ ನೀ ಕೇಳೂದಾದ್ರೇ ನನ್ನ ಸಂಗಡ ಬಾ….ಇಲ್ದಿದ್ರೆ ಎಲ್ಲಿಗೆ ಹೋಗೀಯೊ ಹೋಗು, ನಿನ್ನ ಅಪ್ಪನ ಮನೀಗೆ!….”
“ನನ್ನೆಲ್ಲಾದ್ರೂ ಕೆರೀಗೋ ಬಾಂವಿಗೋ ಹಾಕಿ ಹೋಗಿ! ನನ್ನ ಕಂಡ್ರೆ ನಿಮಗೆ ಯಾವಾಗ್ಲೂ
ಸಸಾರ!….ಬೇಕಾದಾಗ ಮಾತ್ರ ಹೆಂಗೆ ಬಾಲ ಅಲ್ಲಾಡಿಸ್ಕೊಂಡು ಉಪಚಾರ ಮಾಡ್ತಾ ಬರ್ತಾರೆ!….”
ತಿಮ್ಮಿ ತಟಕ್ಕನೆ ಬಿಕ್ಕಿ ಬಿಕ್ಕಿ ಅಳತೊಡಗಿದಳು.
“ಮತ್ತೆ ಸುರು ಮಾಡ್ದೆಲ್ಲಾ ನಿನ್ನಾಟಕ್ಕೆ! ಹ್ಞ? ನಾನೇನು ನಿನ್ನ ಬಿಟ್ಟೇಹೋಗ್ತೀನಿ
ಅಂತಾ ಹೇಳಿದನೇನೆ?….” ಗುತ್ತಿ ಮಂಟಪದ ಒಂದು ಮೂಲೆಯ ಕಡೆಗೆ ಕಣ್ಣಾಗಿ ಬೊಗಳತೊಡಗಿದ್ದ
ಹುಲಿಯನ ಕಡೆಗೂ ನೋಡಿದವನೆ ಚಂಗನೆ ಎದ್ದು ಒಂದು ಬಿದಿರಿನ ದೊಣ್ಣೆಯನ್ನು ಹುಡುಕಿ
ನುಗ್ಗಿದನು. ತಿಮ್ಮಿ ಅಳುಗಿಳುವನ್ನೆಲ್ಲ ನಿಲ್ಲಿಸಿ, ನೆಗೆದೆದ್ದು ದೂರ ಓಡಿ ನಿಂತು
ನೋಡಿದಳು, ಗುತ್ತಿ ಹೊಡೆಯುತ್ತಿದ್ದ ಒಂದು ಸರ್ಪನ ಹಾವನ್ನು! ಸತ್ತ ಹಾವನ್ನು ದೊಣ್ಣೆಯ
ತುದಿಯಲ್ಲಿ ಎತ್ತಿಕೊಂಡು ಹೋಗಿ ಹೊರಗೆ ಹಳುವಿನತ್ತ ಬೀಸಿ ಒಗೆದು ಬಂದು ಮತ್ತೆ
ಮೊದಲಿನಂತೆ ಚಳಿಕಾಯಿಸುತ್ತಾ ಕುಳಿತನು. ತಿಮ್ಮಿಯೂ ಹತ್ತಿರವೆ ಬಂದು ಕುಳಿತಳು. ಮಳೆ
ಜೋರಾಗಿ ಚಳಿ ಹೆಚ್ಚಿದಂತೆಲ್ಲ ಬೆಚ್ಚನೆ ಜಾಗವನ್ನು ಹುಡುಕಿಕೊಂಡು ಬರುತ್ತಿದ್ದ
ಹಾವುಗಳನ್ನು ಹೊಡೆದು ಹೊಡೆದು ಅಭ್ಯಾಸವಾಗಿ ಹೋಗಿದ್ದ ಅವರಿಗೆ ಆ ಘಟನೆ ಒಂದು
ವಿಶೇಷವಾಗಿರಲಿಲ್ಲ. ಅದನ್ನು ಕುರಿತು ಅವರು ಪ್ರಸ್ತಾಪಿಸಲೂ ಇಲ್ಲ.
ರಾತ್ರಿ ಸ್ವಲ್ಪ ಹೊತ್ತಾದ ಮೇಲೆ ಇಬ್ಬರೂ ತಂಗಳುಂಡು, ಕೊರಳು ಬಿಚ್ಚಿದ ಹುಲಿಯನಿಗೂ
ಒಂದಷ್ಟು ಹಾಕಿ, ’ನಂದಾಬೆಂಕಿ’ ಕಾವಿನ ವಲಯದಲ್ಲಿಯೆ ಕಂಬಳಿ ಸುತ್ತಿಕೊಂಡು ಉರುಡಿದರು.
ತಿಮ್ಮಿ ಗೊರಕೆ ಹೊಡೆಯತೊಡಗಿದಳು. ಗುತ್ತಿಗೂ ಆ ದಿನವೆಲ್ಲ ಗುಡ್ಡವೇರಿ ಇಳಿದು
ಕೆಲಸಮಾಡಿದ್ದ ದಣಿವಿನಿಂದ ರೆಪ್ಪೆ ಭಾರವಾಗಿ ನಿದ್ದೆ ಬರತೊಡಗಿತ್ತು. ಈಗಲೊ ಆಗಲೊ
ಚಿನ್ನಕ್ಕನನ್ನು ಕರೆದುಕೊಂಡು ಬಂದುಬಿಡಬಹುದು ಎಂದು ಎಚ್ಚರವಾಗಿಯೆ ಇರಲು ಬಹಳ ಪ್ರಯತ್ನ
ಪಡುತ್ತಿದ್ದನು. ಅಲ್ಲದೆ ತಾವು ಬರುವುದು ಬಹಳ ತಡವಾದರೆ ಯೆಂಕಿಯ ಮನೆಯ ಬಳಿಗೆ ಬರುವಂತೆ
ಸೂಚಿಸಿದ್ದನು ಮುಕುಂದಯ್ಯ. ಏನು ಮಾಡಿದರೂ ಅವನ ಕೈಯಲ್ಲಾಗದೆ ಅಂತೂ ಕಡೆಗೆ, ಕಣ್ಣು
ಸೋತು, ರೆಪ್ಪೆ ಮುಚ್ಚಿ, ಗುತ್ತಿಯೂ ನಿದ್ದೆ ಮಾಡಿಬಿಟ್ಟನು.
ಕೆಟ್ಟ ಕನಸೊಂದರಿಂದ ನಿದ್ದೆಯ ಗುಳ್ಳೆಯೊಡೆದಂತಾಗಿ ತೆಕ್ಕನೆ ಎಚ್ಚರಗೊಂಡ ಗುತ್ತಿ
ಎದ್ದು ಕುಳಿತು, ಕಣ್ಣುಜ್ಜಿಕೊಂಡು, ಸುತ್ತಲೂ ನೋಡಿದನು. ಮಳೆ ಹೊಳವಾಗಿತ್ತು, ಹೊರಗೆ
ಕಗ್ಗತ್ತಲು ಕವಿದಿತ್ತು. ಬೆಂಕಿಯ ಉರಿ ಆರಿದ್ದರೂ ಹೆಗ್ಗುಂಟೆಗಳಲ್ಲಿ ಕೆಂಡ ನಿಗಿನಿಗಿ
ಝಗಿಸುತ್ತಿತ್ತು. ಗಾಳಿ ಭೋರೆಂದು ಬೀಸುತ್ತಿದ್ದು, ಮಂಟಪದ ಕಲ್ಲುಗೋಡೆಯ ಬಿರುಕುಗಳಲ್ಲಿ
ಸಿಳ್ಳು ಹಾಕುತ್ತಿತ್ತು. ಹೊರಗೆ ಕಣ್ಣು ಹಾಯಿಸಿದಾಗ ಅಲ್ಲಲ್ಲಿ ಮಿಣುಕು ಹುಳುಗಳ ಚಿಕ್ಕ
ಚಿಕ್ಕ ಹಿಂಡು ಮಿಂಚಿ ಮರೆಯಾಗುತ್ತಿದ್ದು, ಕತ್ತಲೆಯನ್ನು ಇನ್ನೂ ಕಡುಗತ್ತಲೆಯನ್ನಾಗಿ
ಮಾಡಿ ತೋರಿಸುವಂತಿತ್ತು. ಬೂದಿಗುಡ್ಡೆಯಲ್ಲಿ ಎದ್ದು ಕುಳಿತಿದ್ದ ಹುಲಿಯ ಮುಂಗಾಲೂರಿ
ಹಿಂಗಾಲಿನಿಂದ ಕಿವಿಯ ಬುಡದ ಕುತ್ತಿಗೆಯನ್ನು ಕೆರೆದುಕೊಳ್ಳುತ್ತಿತ್ತು. ತಿಮ್ಮಿ
ಗಾಢನಿದ್ರೆಯಲ್ಲಿದ್ದು ಮುಗ್ಧಭಂಗಿಯಲ್ಲಿ ಮಲಗಿದ್ದಳು. ತುಸು ಕೆಳಕ್ಕೆ ಓಸರಿಸಿದ್ದ
ಕಂಬಳಿಯನ್ನು ಅವಳಿಗೆ ಸರಿಯಾಗಿ ಹೊದಿಸಿ, ಇಣುಕುವಂತಿದ್ದ ನಾಣಿನ ವಲಯವನ್ನು ಮುಚ್ಚಿದನು.
ರಾತ್ರಿ ಎಷ್ಟು ಹೊತ್ತಾಗಿದೆಯೋ, ತಾನು ಎಷ್ಟು ಹೊತ್ತು ಮಲಗಿದ್ದನೋ ಗುತ್ತಿಗೆ
ಸ್ವಲ್ಪವೂ ಅಂದಾಜಾಗಲಿಲ್ಲ. ಇಷ್ಟು ಹೊತ್ತಿಗಾಗಲೆ ಚಿನ್ನಕ್ಕನನ್ನು ಕರೆದುಕೊಂಡು
ಬರಬೇಕಾಗಿತ್ತಲ್ಲ? ಯಾಕೆ ಇನ್ನೂ ಬರಲಿಲ್ಲ? ಮದುವೆ ನಡೆದೇಹೋಯಿತೋ ಏನೋ? ತನ್ನ ಒಡೆಯರ
ಆಸೆ ನೆರವೇರಿದುದಕ್ಕಾಗಿ ಗುತ್ತಿಯ ಮನದಲ್ಲಿ ಗೆಲುವಿನ ಸೂಚನೆ ತಲೆಯೆತ್ತಿತ್ತಾದರೂ
ಮರುಕ್ಷಣದಲ್ಲಿಯೆ ಅವನ ಸಮಸ್ತ ಆಕಾಂಕ್ಷೆಯೂ ಮುಕುಂದಯ್ಯ ಚಿನ್ನಮ್ಮರ ಪರವಾಗಿ ಸಾವಿರ
ಹೆಡೆಗಳನ್ನೆತ್ತಿ ನಿಂತಿತು. ತನ್ನ ಮತ್ತು ತಿಮ್ಮಿಯ ಗೆಲುವಿನಷ್ಟೆ ಆವಶ್ಯಕವೂ ಮುಖ್ಯವೂ
ಆಗಿ ಕಂಡಿತು, ಮುಕುಂದಯ್ಯ ಚಿನ್ನಮ್ಮರ ಗೆಲುವು. ತಾವು ಬರುವುದು ಹೊತ್ತಾದರೆ, ತನ್ನನ್ನು
ಯೆಂಕಮ್ಮನ ಮನೆಯ ಹತ್ತಿರಕ್ಕೆ ಬರುವಂತೆ ಹೇಳಿದ್ದುದು ನೆನೆಪಿಗೆ ಬಂದು, ಗುತ್ತಿ
ಕರ್ತವ್ಯಕಾತರನಾದವನಂತೆ ಝಗ್ಗನೆ ಎದ್ದು ನಿಂತನು.
ಮಲಗಿ ನಿದ್ರಿಸುತ್ತಿದ್ದ ಹೆಂಡತಿಯ ಕಡೆ ನೋಡಿದನು. ಹುಲಿಯನನ್ನು ಗೂಟಕ್ಕೆ ಕಟ್ಟಿ
ಹಾಕಿ, ತಿಮ್ಮಿಯನ್ನು ಎಚ್ಚರಗೊಳಿಸುವ ಗೋಜಿಗೆ ಹೋಗದೆ…. ಛೆ ಛೆ ಎಲ್ಲಿಯಾದರೂ ತಾನು
ಹೋದಮೇಲೆ ಅವಳಿಗೆ ಎಚ್ಚರವಾಗಿ, ಪಕ್ಕದಲ್ಲಿ ನನಿಲ್ಲದುದನ್ನು ಕಂಡು ಕೂಗಿಕೊಂಡರೆ?
ಅವಳನ್ನು ಎಚ್ಚರ ಮಾಡಿಯೆ ಹೋಗುತ್ತೇನೆ….ಎದ್ದಮೇಲೆ ನನ್ನನ್ನು ಹೋಗಲು ಬಿಡುತ್ತಾಳೆಯೆ?
ಏನಾದರಾಗಲಿ, ನೋಡುತ್ತೇನೆ.
ಪ್ರಯತ್ನವೆ ಆಯಿತು, ತಿಮ್ಮಿಯನ್ನು ಜಾಗ್ರತ್ ಪ್ರಪಂಚಕ್ಕೆ ತರುವುದು!
“ಸಣ್ಣಯ್ಯೋರು ಬರಲಿಲ್ಲ, ಚಿನ್ನಕ್ಕನ್ನ ಕರಕೊಂಡು. ’ಹೊತ್ತಾದ್ರೆ ಬಾ ಯೆಂಕಿ ಮನೆ
ಹತ್ರಕ್ಕೆ.’ ಅಂತಾ ಹೇಳಿದ್ರು. ನಾನೂ ನಿದ್ದೆ ಮಾಡಿಬಿಟ್ಟೆ! ಈಗ ಎಷ್ಟ್ಹೊತ್ತಾಗದೆಯೋ
ಏನೋ ಇಳ್ಳು? ಒಂದೀಟು ಹೋಗಿ ನೋಡಿ ಬಂದು ಬಿಡ್ತೀನಿ…. ನೀ ಏನೂ ಹೆದರಬ್ಯಾಡ, ಹುಲಿಯ
ಇರ್ತದೆ.”
“ನಾ ಒಬ್ಬಳೆ ಇಲ್ಲಿರಾಕೆ ಖಂಡಿತಾ ನಾ ಒಲ್ಲೆ. ನಾನೂ ಬತ್ತೀನಿ….”
“ಏನು ತಮಾಸೆ ಅಂತಾ ಮಾಡ್ದೇನೆ, ಕತ್ತಲಲ್ಲಿ ಕಾಡಿನಾಗೆ ಹೋಗಾದು?….”
“ಅವೊತ್ತು ಮಾತ್ರ ನಮ್ಮ ಕೇರಿಯಿಂದ ನನ್ನ ಹಾರಿಸಿಕೊಂಡು ಬರಾಕೆ ನಿಮಗೆ ಕತ್ತಲೇನೂ ಇರಲಿಲ್ಲ, ಕಾಡೂ ಇರಲಿಲ್ಲ!….”
ಗುತ್ತಿ ಬೇಸ್ತು ಬಿದ್ದವನಂತೆ ಬಾಯ್ದೆರೆದು ನಿಂತು, ಏನು ಉತ್ತರಕೊಡಲಿ ಎಂದು
ಯೋಚಿಸುತ್ತಿದ್ದವನಂತೆ ತೋರಿತು. ಕೆಳಕ್ಕೆ ಬಿದ್ದು ಸಂಪೂರ್ಣವಾಗಿ ಸೋತಿದ್ದರೂ ಇನ್ನೂ
ಕುಸ್ತಿಮಾಡುತ್ತಿದ್ದೇನೆಂದು ತೋರಿಸಿಕೊಳ್ಳಲು ಬರಿದೆ ಕೈಕಾಲು ಆಡಿಸುವ ಹುಡುಗನಂತೆ
ಹೇಳಿದನು: “ಏಈಈಈ! ನಿಂಗೇನು ತಮಾಸೆ ಆಗಿದಿಯಾ? ಅವೊತ್ತೇನು ಇವೊತ್ತಿನ ಹಾಂಗ್ ಮಳೆಗಾಲ
ಆಗಿತ್ತಾ? ಏನು ಜಾರ್ತದೆ!….ಇಂಬಳ!….ಹಳ್ಳಬ್ಯಾರೆ ಬಂದಿರ್ತದೆ! ಅವೊತ್ತಿನ ಹಾಂಗೆ ದೊಂದಿ
ಹಿಡುಕೊಂಡು ಹೋಗಾಕಾದ್ರೂ ಆಗ್ತದೆಯಾ?….”
“ಅದೇನು ಬೆಣಕು ಕಾಣ್ತದೆ? ಅಲ್ಲಿ ನೋಡಿ! ಅವರೇ ಬಂದ್ರೊ ಏನೊ?….”
ತಿಮ್ಮಿ ನೋಡುತ್ತಿದ್ದ ಕಾಡಿನ ದಿಕ್ಕಿಗೆ ಗುತ್ತಿಯೂ ನೋಡಿದನು. ಹೌದು! ಬೆಳಕು! ಲಾಟೀನಿನ ಬೆಳಕೇ!
ಆದರೆ ಇಬ್ಬರೂ ನೋಡುತ್ತಿದ್ದಂತೆಯೆ ಬೆಳಕು ಸಂಪೂರ್ಣ ಮರೆಯಾಗಿ ಮೊದಲಿನಂತೆ
ಕಗ್ಗತ್ತಲೆ ಕವಿಯಿತು. ದಾರಿಯ ದಿಕ್ಕು ಬದಲಾಯಿಸಿದಾಗ ಹಳುವಿನಲ್ಲಿ ಲಾಟೀನು ಮರೆಯಾಯಿತೋ
ಏನೋ ಎಂದು ಭಾವಿಸಿ ಗುತ್ತಿ ಮಂಟಪದ ಮುಂದೆ ಓರೆಯಾಗಿ ಇಳಿದಿದ್ದ ಕಲ್ಲರೆಯ ಮೇಲೆ
ನಾಲ್ಕುಮಾರು ನಡೆದುಹೋಗಿ ಕಾಡಿನ ಕಡೆ ನೋಡಿದನು. ಒಂದೆರಡು ನಿಮಿಷವಾದ ಮೇಲೆ, ಕವಿದಿದ್ದ
ಕತ್ತಲೆಯ ಹಳುವಿನಲ್ಲಿ ಮತ್ತೆ ಭಗ್ಗನೆ ಬೆಳಕು ಹೊತ್ತಿಕೊಂಡಂತಾಯಿತು! ನೋಡುತ್ತಾನೆ:
ಹಿಂಡುಗೊಂಡ ಸಾವಿರ, ಲಕ್ಷ, ಕೋಟಿ, ಕೋಟಿ ಮಿಣುಕು ಹುಳುಗಳು ಒಮ್ಮೆಯೆ ಮಿಂಚಿ, ಯಾವ
ಲಾಟೀನೂ ಬೆಳಗಲಾರದಷ್ಟು ಪ್ರಕಾಶಮಾನವಾಗಿ, ಗಿಡ, ಮರ ಪೊದೆಯ ದಟ್ಟ ಹಳುವನ್ನು
ಬೆಳಗುತ್ತಿವೆ! ಹಾಂಗೆ ಗುಂಪು ಗುಂಪು ಮಿಣುಕು ಹುಳುಗಳು ಬೆಳಗುವುದನ್ನು ಗುತ್ತಿ ಎಷ್ಟೋ
ಸಾರಿ ಕಂಡಿದ್ದನು. ಆದರೆ ಆ ರಾತ್ರಿ ಅವನು ಕಂಡದ್ದನ್ನು ಅವನೇ ಕಾಣದಿದ್ದರೆ ಎಂದಿಗೂ
ನಂಬಲು ಸಾಧ್ಯವಾಗುತ್ತಿರಲಿಲ್ಲ. ಅಂತಹ ಪ್ರಮಾಣದಲ್ಲಿ ಅಷ್ಟು ಪ್ರಕಾಶಮಾನವಾಗಿತ್ತು ಅದು!
ಗುತ್ತಿ ಹಿಂದಕ್ಕೆ ಬಂದು ಬೆಂಕಿಯ ಬಳಿ ತಿಮ್ಮಿಗೆ ಸಮೀಪದಲ್ಲಿ ಕುಳಿತುಕೊಳ್ಳುತ್ತಾ
ಹೇಳಿದನು, ತಾನು ಕಂಡಿದ್ದ ಭವ್ಯಾದ್ಭುತ ದೃಶ್ಯದಿಂದ ಒಂದಿನಿತೂ ಪ್ರಭಾವಿತವಾಗದ
ಪ್ರಜ್ಞೆಯಿಂದ, ನಿರಾಶಾಧ್ವನಿಯಲ್ಲಿ “ಏಈ ಲಾಟೀನು ಬೆಳಕಲ್ಲ ಏನೂ ಅಲ್ಲ; ಹೊನ್ನೆ ಹುಳದ
ಹಿಂಡ್ಹಿಂಡೇ ದೊಂದಿ ಬೀಸ್ತಿದ್ವು.”
ತನ್ನ ಗಂಡ ತನ್ನನ್ನು ಒಬ್ಬಳನ್ನೆ ಬಿಟ್ಟು ಹೋಗುವುದಿಲ್ಲವೆಂದು ದೃಢಮಾಡಿಕೊಂಡ
ತಿಮ್ಮಿ ಮೊದಲಿನಂತೆ ಉರುಡಿಕೊಂಡು, ಚೆನ್ನಾಗಿ ಕಣ್ಣು ಬಿಟ್ಟುಕೊಂಡೆ ಕಂಬಳಿ
ಹೊದ್ದುಕೊಂಡಳು. ಗುತ್ತಿ ಒಬ್ಬನೆ ಆ ಕತ್ತಲೆಯಲ್ಲಿ ಆ ಕಗ್ಗಾಡಿನಲ್ಲಿ ಆ ಮಳೆಯಲ್ಲಿ
ಹೋಗದಿರುವಂತೆ ಮಾಡಲು, ನಿಜವಾಗಿಯೂ ತನಗಾಗಿಯೆ ತನಗಿದ್ದ ತನ್ನ ಹೆದರಿಕೆಯನ್ನು ತಿಮ್ಮಿ
ಮುಂದುಮಾಡಿದ್ದಳಾದರೂ, ಅವಳ ಆ ಪ್ರಯತ್ನದಲ್ಲಿ ತನ್ನ ಗಂಡನಿಗೆ ಎಲ್ಲಿಯಾದರೂ ಅಪಾಯ
ಒದಗೀತು ಎಂಬ ಮುನ್ನೆಚ್ಚರಿಕೆಯೂ ಪ್ರಚ್ಛನ್ನವಾಗಿತ್ತು.
ಗುತ್ತಿ ಬೆಂಕಿಯ ಹತ್ತಿರ ಕುಳಿತು ಯಾಂತ್ರಿಕವಾಗಿ ಕಟ್ಟಿಗೆಯ ತುಂಡುಗಳನ್ನು ಅದಕ್ಕೆ
ಎಸೆಯುತ್ತಲೊ ಅಥವಾ ಕುಂಟೆಯ ಕೆಂಗೆಂಡಗಳನ್ನು ಕೆದುಕುತ್ತಲೊ ಇದ್ದನಾದರೂ ಅವನ ಮನಸ್ಸು
ಏನೇನೊ ಭೀತಿಗಳನ್ನು ನೆನೆಯತೊಡಗಿತ್ತು:
“ಯಾಕೆ ಅವರಿನ್ನೂ ಬರಲಿಲ್ಲ? ಕಾಡಿನಲ್ಲಿ ದಾರಿ ತಪ್ಪಿದರೇ? ಅಷ್ಟು ಚೆನ್ನಾಗಿ ಹಳು
ಸವರಿ ದಾರಿ ಮಾಡೀನಿ, ಹ್ಯಾಂಗೆ ತಪ್ತದೆ ದಾರಿ? ಅವರೇ ಎಷ್ಟೋ ಸಾರಿ ಅದೇ ದಾರೀಲಿ
ಓಡ್ಯಾಡಿಲ್ಲೇನು, ಚಾಪೆ, ಹಾಸಿಗೆ, ಸೀರೆ, ಕಂಬಳಿ, ಸಾಮಾನು ಎಲ್ಲ ತರಾಕೆ?….ಅತೋರೆ,-”
ಇದ್ದಕ್ಕಿದ್ದ ಗುತ್ತಿ ಬೆಚ್ಚಿಬಿದ್ದಂತಾದನು: ಉಸಿರಾಟ ಜೋರಾಯಿತು: ಕಣ್ಣು
ಎವೆಯಿಕ್ಕುವುವುದನ್ನೂ ಮರೆತವೂ! “ಅತೋರೆ,….ಆ ವಾಟೆ ಹಕ್ಕಕ್ಕೆ ನೆರೆ ಬಂದು, ದಾಟುವಾಗ
ಎಲ್ಲಿಯಾದರೂ….” ಆ ಭಯಂಕರವನ್ನು ನೆನೆಯಲಾರದೆ ಗುತ್ತಿ ತನ್ನ ಹೆಂಡತಿಯ ಕಡೆ ನೋಡಿ
“ತಿಮ್ಮಿ, ತಿಮ್ಮಿ,” ಎಂದನು. ತಿಮ್ಮಿಗೆ ಎಚ್ಚರವಾಗಲಿಲ್ಲ. “ಎರಲಾರದು!” ಮುಂದುವರಿಯಿತು
ಗುಂತಿಯ ಚಿಂತಾ ತರಂಗಿಣಿ. “ಅಂತೋರೆ, ಆ ಹೂವಳ್ಳಿ ನಾಯಕರೇನು ಯಾವುದಕ್ಕೂ
ಹೇಸೋರಲ್ಲ….ಆದರೆ ಅವರಿಗೆ ಕಾಯಿಲೆಯಾಗಿ ಏಳೋಕೆ ಆಗದೆ ಬಿದ್ದು ಕೊಂಡಾರಂತೆ!….ಛೇ, ಎಷ್ಟು
ಹೊತ್ತಾಯ್ತೂ! ಥೂ, ಹೊತ್ತೇ ಹೋಗೋದಿಲ್ಲ ಲ್ಲಪ್ಪಾ!…. ಈಗೇನು ಮಾಡ್ಲಿ?….” ಮತ್ತೆ
ಗುತ್ತಿ ಕರೆದನು. ತಿಮ್ಮಿ ಏ ತಿಮ್ಮಿ! “ಕೈಚಾಚಿ ಮೆಲ್ಲನೆ ದೂಡಿ ಎಬ್ಬಿಸಿ
ಅಂಗಲಾಚುವನಂತೆ ಹೇಳಿದನು: “ಇಷ್ಟೊತ್ತಾದ್ರೂ ಬರ್ಲಿಲ್ಲಲ್ಲೇ! ಹೋಗಿ ನೋಡಿಕೊಂಡಾರೂ
ಬತ್ತೀನೆ!….”
ತಿಮ್ಮಿ ಎದ್ದು ಕೂತು ಗಂಡನೆಂದುದನ್ನು ಗ್ರಹಿಸಲು ಸ್ವಲ್ಪ ಸಮಯ ತೆಗೆದುಕೊಂಡಳು.
ಅವಳಿಗೂ ಸನ್ನಿವೇಶದ ಗುರುತ್ವ ಮನಸ್ಸಿಗೆ ತಟ್ಟಿತು: “ನಾನೂ ಬತ್ತೀನಿ, ಹೋಗಾನ! ಏನಾದ್ರೋ
ಏನೋ? ಯಾಕೆ ಬರಲಿಲ್ಲೋ?….”
ಇಬ್ಬರೂ ಕಂಬಳಿಕೊಪ್ಪೆ ಹಾಕಿಕೊಂಡರು. ಮಳೆ ಹೊಳವಾದುದನ್ನು ಕಂಡು ಒಂದು ದೊಂದಿಯನ್ನೂ
ಹಚ್ಚಿಕೊಂಡರು. ಬೆಂಕಿಗೆ ಇನ್ನಷ್ಟು ಸೌದೆ ಅಡಕಿದರು. ತಟ್ಟಿ ಬಾಗಿಲನ್ನು
ಓರೆಯಾಗಿಬಿಟ್ಟು ಮುಚ್ಚಿ ಕಲ್ಲುಮಂಟಪದಿಂದ ಹೊರಗೆ ಬಂದರು, ಹುಲಿಯನೂ ಕೂಡಿ.
“ಅದೇನು ಬೆಣಕು ಕಾಣ್ತದೆ ನೋಡಿ!” ತಿಮ್ಮಿ ದೂರದ ಹಳುವಿನ ಕಡೆ ನೋಡುತ್ತಾ ಹೇಳಿದಳು.
“ಹೊನ್ನೆ ಹುಳದ್ದೇ ಬೆಣಕಿರಬೈದು” ಉದಾಸೀನದಿಂದಾಡಿದನು ಗುತ್ತಿ.
ಆದರೆ ಹುಲಿಯ ಯಾವುದಾದರೂ ಪ್ರಾಣಿಯ ಸುಳಿವು ಗೋಚರವಾದಾಗ ಬೊಗಳುವ ರೀತಿಯಲ್ಲಿ ಕಟುವಾಗಿ ಬೊಗಳಿತು.
ಅಷ್ಟರಲ್ಲಿಯೆ ಕಾಡಿನ ಅಂಚಿನ ಪೊದೆಗಳ ನಡುವೆ ಕಲ್ಲರೆಯನ್ನು ಪ್ರವೇಶಿಸುತ್ತಿದ್ದ ಲಾಟೀನಿನ ಬೆಳಕು ಸ್ಪಷ್ಟವಾಗಿ ಕಾಣಿಸಿತು!
ನೋಡುತ್ತಿದ್ದಂತೆ ಮುಕುಂದಯ್ಯ ಚಿನ್ನಮ್ಮ ಪೀಂಚಲು ಐತ ನಾಲ್ವರ ಆಕಾರಗಳೂ ಕಾಲ್ನೆರಳುಗಳೂ ಕಲ್ಲುಮಂಟಪದತ್ತ ಏರಿ ಬಂದುವು.
ಗುತ್ತಿ ತಿಮ್ಮಿಯರಿಗೆ ಜೀವ ಬಂದಂತಾಯ್ತು!
ಬಂದ ನಾಲ್ವರೂ ಕಾಡಿನಲ್ಲಿ ಜಿಗಣೆ, ಮುಳ್ಳು, ಕೆಸರು ಮೊದಲಾದ ಅನಿವಾರ್ಯ
ತೊಂದರೆಗಳಿಗೆ ಸಿಕ್ಕಿದ್ದರೂ ಹೆಚ್ಚಿನ ಅಪಾಯಕ್ಕೆ ಒಳಗಾಗಿರಲಿಲ್ಲ. ಸರಲು ದಾಟುವಾಗ
ಸ್ವಲ್ಪ ನೀರು ಹೆಚ್ಚಿದ್ದರಿಂದ ತೊಂದರೆಯಾಗಿದ್ದೇನೋ ಹೌದಂತೆ! ಆದರೆ ಮುಕುಂದಯ್ಯ ಮದುಮಗಳ
ಉಡುಗೆ ತೊಡುಗೆಗಳಲ್ಲಿದ್ದ ಚಿನ್ನಮ್ಮನನ್ನು ಕೆಸರಾಗದಂತೆ ಎತ್ತಿಕೊಂಡೇ ದಾಟಿದ್ದು
ಮಾತ್ರ ಒಂದು ಸ್ವಾರಸ್ಯದ ಸಂಗತಿಯಾಗಿತ್ತು! ಪೀಂಚಲು ಮಾತ್ರ ಉಲಿದೆಲ್ಲರಿಗಿಂತಲೂ
ದಣಿದಿದ್ದರೂ, ಐತನ ನೆರವನ್ನು ನಿರಾಕರಿಸಿಯೆ ಸರಲು ದಾಟಿದ್ದಳಂತೆ! ಒಂದು ಕಡೆ ಮಾತ್ರ,
ಗುತ್ತಿ ಕಡಿದಿದ್ದ ಹಳು ಅಷ್ಟೇನೂ ದಾರಿಯ ಜಾಡಿನಂತೆ ತೋರದೆ, ಪ್ರಯಾಣಿಕರನ್ನು
ಅಡ್ಡದಾರಿಯಲ್ಲಿ ತುಸು ಅಲೆಯುವಂತೆ ಮಾಡಿತ್ತಷ್ಟೆ!
ತಟ್ಟಿ ಕಟ್ಟಿ ಮರೆಮಾಡಿದ್ದ ಜಾಗದಲ್ಲಿ ಅಡುಗೆಗಾಗಿ ಹಾಕಿದ್ದ ಒಲೆಗೆ
ಬೆಂಕಿಹೊತ್ತಿಸಿದರು. ಧಾರೆಯ ಸೀರೆ ಡಾಗೀನುಗಳನ್ನೆಲ್ಲ ತೆಗೆದಿಟ್ಟು, ಮುಕುಂದಯ್ಯ
ತಂದಿಟ್ಟಿದ್ದ ಅವನ ಅತ್ತಿಗೆಯ ಸೀರೆಯೊಂದನ್ನುಟ್ಟು, ಚಿನ್ನಮ್ಮ ಬೆಂಕಿಕಾಯಿಸಿಕೊಂಡಳು.
ಪೀಂಚಲು ತನ್ನ ಸೀರೆಯ ಒದ್ದೆ ಭಾಗಗಳನ್ನೆಲ್ಲ ಹಿಂಡಿ, ದೊಡ್ಡ ಬೆಂಕಿಯ ಬಳಿ ನಿಂತು,
ಆರಿಸಿಕೊಂಡಳು.
ಕುದುರೆಯ ಸವಾರನಾಗಿ ಕಾಣಿಸಿಕೊಂಡಿದ್ದ ರಾಜಕುಮಾರನ ಕೈಹಿಡಿದು ಅವನ ಮುಂದೆ ಕುದುರೆಯ
ಬೆನ್ನಿಗೆ ನೆಗೆದೇರಿದ್ದ ರಾಜಕುಮಾರಿಗಿಂತಲೂ ಅದ್ಭುತವಾಗಿ ಕಾಣಿಸುತ್ತಿದ್ದ
ಚಿನ್ನಕ್ಕನನ್ನು ನೋಡಿ ನೋಡಿ ಹಿಗ್ಗಿ ಹೋಗಿದ್ದ ತಿಮ್ಮಿ ಸಸಂಭ್ರಮವಾಗಿ ದೂರದೂರದಿಂದಲೆ
ತಾನು ಸಲ್ಲಿಸಬಹುದಾಗಿದ್ದ ಎಲ್ಲ ತರಹದ ಸೇವೆಯನ್ನೂ ಸಲ್ಲಿಸುವುದರಲ್ಲಿ ಸಾಕಾರ
ಗಡಿಬಿಡಿಯಾಗಿಬಿಟ್ಟಿದ್ದಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ