ಧೀರ ಸೇವಕಿ

ಒಬ್ಬ ಇಂಗ್ಲಿಷ್‌ ಮಹನೀಯನಿದ್ದ. ಇಂಗ್ಲೆಂಡಿನ ಬೆಟ್ಟ ಪ್ರದೇಶದಲ್ಲಿ ಅವನ ಮನೆಯಿತ್ತು. ಅವನಿಗಿನ್ನೂ ಮದುವೆ ಆಗಿರಲಿಲ್ಲ. ಮನೆಯಲ್ಲಿ ಅವನ ಹೊರತು ಒಬ್ಬ ಸೇವಕ. ಒಬ್ಬಳು ಅಡುಗೆಯಾಳು, ಇನ್ನೊಬ್ಬಳು ಕೆಲಸದ ಹುಡುಗಿ ಇಷ್ಟು ಮಂದಿ ಇರುತ್ತಿದ್ದರು.
ಒಂದು ಬಾರಿ ಯಜಮಾನ ಕೆಲಸದ ಮೇಲೆ ಮನೆ ಬಿಟ್ಟು ಹೋಗಬೇಕಾಯಿತು. ಮನೆ ಬಿಡುವ ಮೊದಲು ಆತ ಕೆಲಸದವನನ್ನು ಬಳಿಗೆ ಕರೆದ. ಕೆಲವು ದಿನ ತಾನು ಮನೆಯಲ್ಲಿ ಇರುವುದಿಲ್ಲ. ಹಿಂದಿರುಗಿ ಬರುವ ತನಕ ಸೇವಕನು ರಜೆ ತೆಗೆಯಬಾರದು. ಮನೆ ಬಿಟ್ಟು ಹೋಗಬಾರದು. ಇಲ್ಲೇ ಇದ್ದು, ಮನೆಗೆಲಸ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದ. ಸೇವಕ ಅದಕ್ಕೆ ಒಪ್ಪಿಗೆ ನೀಡಿದ. ಯಜಮಾನ ಹೊರಟು ಹೋದ.
ಯಜಮಾನ ಮನೆ ಬಿಟ್ಟುದೇ ತಡ, ಸೇವಕ ತನ್ನ ಮಾತನ್ನು ಮರೆತ. ಅಂದೇ ತಾನು ಸಹ ಮನೆ ಬಿಟ್ಟು ಹೊರಟು ಹೋದ. ರಾತ್ರೆಯಾದರೂ ಹಿಂದಿರುಗಿ ಬರಲಿಲ್ಲ. ಅಡುಗೆಯವಳು ಮತ್ತು ಕೆಲಸದ ಹುಡುಗಿ ಇಬ್ಬರೇ ಮನೆಯಲ್ಲಿ ಉಳಿದರು.
ಕತ್ತಲಾಯಿತು. ಕೆಲಸದವರಿಬ್ಬರೂ ಬೇಗನೆ ಉಂಡರು. ಮತ್ತೆ ಮಲಗಿ ನಿದ್ರೆಹೋದರು. ತುಸು ಹೊತ್ತು ಕಳೆಯಿತು. ಯಾರೋ ಬಂದು ಬಾಗಿಲು ಬಡಿದಂತಾಯಿತು. ಅಡುಗೆಯಾಳು ಫಕ್ಕನೆ ಎಚ್ಚರಗೊಂಡಳು. ಬಾಗಿಲ ಬಳಿ ನಡೆದು, “ಯಾರದು? ಏನು ಬೇಕು” ಎಂದು ಕೇಳಿದಳು. ಮತ್ತೆ ಕಿಟಕಿಯ ಮೂಲಕ ಹೊರಕ್ಕೆ ನೋಡಿದಳು.
ಅಪರಿಚಿತ ವ್ಯಕ್ತಿಯೊಬ್ಬ ಹೊರಗಡೆ ನಿಂತಿದ್ದ. ತಾನು ಮನೆಯೊಡೆಯನ ಮಿತ್ರನೆಂದೂ ಕತ್ತಲಲ್ಲಿ ದಾರಿ ತಪ್ಪಿದ ಕಾರಣ ಅಲ್ಲಿಗೆ ಬಂದೆನೆಂದೂ ಆತ ಹೇಳಿದ. ರಾತ್ರಿಯ ಮಟ್ಟಿಗೆ ಅಲ್ಲಿ ಉಳಿಯಲು ತನಗೆ ಅವಕಾಶ ಕೊಡಬೇಕೆಂದು ಬೇಡಿಕೊಂಡ. ಅಡುಗೆಯಾಳು ಅವನ ಮಾತನ್ನು ನಂಬಿದಳು. ಗಾಳಿ ಮಳೆಯ ಆ ರಾತ್ರೆ ದಾರಿ ತಪ್ಪುವುದು ಸಹಜ ಎಂದುಕೊಂಡಳು. ಮತ್ತೆ ದೀಪ ಹಚ್ಚಿದಳು. ಬಾಗಿಲು ತೆರೆದು ಹೊರಗೆ ನಿಂತವನನ್ನು ಒಳಗೆ ಬರಮಾಡಿಕೊಂಡಳು ಆಗಿಷ್ಟಿಕೆಯ ಬೆಂಕಿಯನ್ನು ದೊಡ್ಡದು ಮಾಡಿದಳು. ಅತಿಥಿಯನ್ನು ಅಲ್ಲಿಗೆ ಕರೆದೊಯ್ದು, ಮೈ ಬೆಚ್ಚಗೆ ಮಾಡಿಕೊಳ್ಳುವಂತೆ ಕೇಳಿಕೊಂಡಳು. ಬಳಿಕ ಅವನ ಊಟಕ್ಕೆ ಸಿದ್ಧತೆ ಮಾಡಿದಳು.
ಅತಿಥಿಯು ಉದ್ದವಾದ ತನ್ನ ಕೋಟನ್ನು ಕಳಚಿದ. ಗೋಡೆಯ ಗೂಟಕ್ಕೆ ಅದನ್ನು ತೂಗಹಾಕಿದ. ಊಟದ ಸಿದ್ಧತೆ ಆಗುವ ತನಕ ಆಗಿಷ್ಟಿಕೆಯ ಬಳಿ ಚಳಿ ಕಾಯಿಸಿದ ಕೆಲವೇ ನಿಮಿಷಗಳಲ್ಲಿ ಅಡುಗೆ ಸಿದ್ಧವಾಯಿತು. ಅಡುಗೆಯವಳು ಅತಿಥಿಯನ್ನು ಊಟಕ್ಕೆ ಕರೆದಳು ಗಡದ್ದಾಗಿಯೇ ಆತ ಊಟ ಮಾಡಿದ. ಅನಂತರ ಅಡುಗೆಯವಳು ತೋರಿದ ಪಕ್ಕದ ಕೋಣೆಗೆ ಹೊರಟು ಹೋದ ಕೂಡಲೇ ಅದರ ಬಾಗಿಲು ಹಾಕಿ, ಮಂಚದಲ್ಲಿ ಮಲಗಿಕೊಂಡ.
ಅಡುಗೆಯವಳು ಅತಿಥಿ ಉಂಡ ಮೇಜನ್ನು ಶುಚಿಗೊಳಿಸಿದಳು. ತಟ್ಟೆ ಬಟ್ಟಲುಗಳನ್ನು ಇಡಬೇಕಾದ ಸ್ಥಳದಲ್ಲಿ ಇರಿಸಿದಳು. ಅಷ್ಟರಲ್ಲಿ ಅತಿಥಿಯ ಒದ್ದೆಕೋಟು ಅವಳ ಗಮನ ಸೆಳೆಯಿತು. ಅಗಿಷ್ಟಿಕೆಯ ಬಳಿ ನೇತು ಹಾಕಿದರೆ ಅದು ಬೇಗನೆ ಒಣಗೀತು ಎಂದುಕೊಂಡಳು ಆಕೆ. ಹಾಗಾಗಿ ಮೆಲ್ಲ ಬಂದು ಗೂಟದಿಂದ ಕೋಟನ್ನು ತೆಗೆದಳು. ಏನಾರ್ಶಚರ್ಯ! ಕೋಟು ಬಹಳ ಭಾರವಾಗಿತ್ತು. ಅಡುಗೆಯವಳ ಕುತೂಹಲ ಕೆರಳಿತು. ಏನಿದೆ ಅದರಲ್ಲಿ ಎಂದು ನೋಡುವ ಆಸೆಯಾಯಿತು. ಒಡನೆ ಅವಳು ಕೋಟಿನ ಎಲ್ಲ ಭಾಗಗಳನ್ನು ತಡಕಾಡಿ ನೋಡಿದಳು. ಅದರ ದೊಡ್ಡ ದೊಡ್ಡ ಕಿಸೆಗಳೊಳಗೆ ಕೈ ತೂರಿ ತಪಾಸಣೆ ನಡೆಸಿದಳು. ಅವಳ ಎದೆ ದಸಕ್ಕೆಂದಿತು. ಗುಂಡು ತುಂಬಿದ ಎರಡು ಪಿಸ್ತೂಲುಗಳೂ ಒಂದು ಹರಿತವಾದ ಚೂರಿಯೂ ಅಲ್ಲಿದ್ದವು. ಮರುಕ್ಷಣದಲ್ಲೆ ಅವಳಿಗೆಲ್ಲ ಅರ್ಥವಾಗಿತ್ತು. ಮನೆಯೊಳಗಿನ ‘ಅತಿಥಿ’ ಎಂಥವನು? ಏಕೆ ಬಂದವನು? ಎಂಬುದು ತಿಳಿದು ಹೋಗಿತ್ತು. ಆದರೆ ಆಕೆ ಧೈರ್ಯಗೆಡಲಿಲ್ಲ. ನಿಮಿಷದೊಳಗೆ ತಾನೇನು ಮಾಡಬೇಕೆಂದು ನಿರ್ಧರಿಸಿಬಿಟ್ಟಳು; ಅಂತೆ ಕೆಲಸಕ್ಕೂ ತೊಡಗಿದಳು.
ಮೊತ್ತಮೊದಲು ಆಕೆ ಸದ್ದಾಗದಂತೆ “ಅತಿಥಿ” ಮಲಗಿದ್ದ ಕೋಣೆಯತ್ತ ನಡೆದಳು. ಹೊರಗಡೆಯಿಂದ ಮೆಲ್ಲನೆ ಬಾಗಿಲ ಸರಪಳಿ ಸಿಕ್ಕಿಸಿದಳು. ಅದು ಫಕ್ಕನೆ ಬಿಟ್ಟು ಹೋಗದಂತೆ ಅದರ ಮೇಲೆ ಹಗ್ಗದ ಕಟ್ಟನ್ನೂ ಹಾಕಿದಳು. ಮತ್ತೆ ಹಾಗೆಯೇ ಹಿಂದೆ ಬಂದು ತನ್ನ ಕೋಣೆಯಲ್ಲಿ ಕುಳಿತುಕೊಂಡಳು. ನಿದ್ರೆ ಅವಳ ಬಳಿ ಸುಳಿಯಲಿಲ್ಲ. ಎಚ್ಚರಾಗಿಯೇ ಇದ್ದ ಅವಳಿಗೆ ಹೊರಗಡೆಯಿಂದ ಹೆಜ್ಜೆಯ ಸಪ್ಪಳ ಕೇಳಿದಂತಾಯಿತು. ಮತ್ತೊಂದು ಗಳಿಗೆಯಲ್ಲಿ “ಎಲ್ಲ ಸಿದ್ಧವಾಯಿತೆ?” ಎಂಬ ಮಾತು ಸ್ಪಷ್ಟವಾಗಿ ಕೇಳಿಸಿತು. ಮನೆಯೊಳಗಿನವನ ಸಹಾಯಕ್ಕಾಗಿ ಅವನ ಸಂಗಾತಿ ಬಂದಿದ್ದಾನೆ ಎಂಬುದು ಆಕೆಗೆ ಖಚಿತವಾಯಿತು ಒಡನೆ ಆಕೆ ಸದ್ದಾಗದಂತೆ ಎದ್ದು ನಿಂತಳು. ಮತ್ತೆ ಕತ್ತಲಲ್ಲೆ ತಡಕಾಡಿ ಪಿಸ್ತೂಲನ್ನು ಎತ್ತಿಕೊಂಡಳು. ಮೆಲ್ಲನೆ ಕಿಟಕಿ ತೆರೆದು ಹೊರಗೆ ನಿಂದವನೆಡೆ ಗುಂಡು ಹಾರಿಸಿದಳು. ಕಿಟಾರನೆ ಕಿರಿಚಿಕೊಂಡು ಆತ ಕೆಳಗುರುಳಿದ.
ಗುಂಡಿನ ಸಪ್ಪಳ ಕೇಳಿ ಮಲಗಿದ್ದ ಕೆಲಸದ ಹುಡುಗಿ ಫಕ್ಕನೆ ಎದ್ದು ಕೂತಳು. ಬೆಚ್ಚಿಬಿದ್ದ ‘ಅತಿಥಿ’ ಸಟ್ಟನೆದ್ದು ಬಾಗಿಲ ಬಳಿ ಓಡಿ ಬಂದ. ಮರುಘಳಿಗೆಯಲ್ಲಿ ಗಡಬಡ ಸದ್ದು ಮಾಡುತ್ತ ಆತ ಬಾಗಿಲನ್ನು ಎಳೆಯತೊಡಗಿದ. ತಕ್ಷಣ ಆ ಕೆಚ್ಚಿನ ಹೆಣ್ಣು ಕೋಣೆಯ ಬಾಗಿಲ ಬಳಿ ಹಾಜರಾದಳು. ಮತ್ತೆ ಗಟ್ಟಿಯಾಗಿ, “ಏ ದುಷ್ಟಾ, ನಿನ್ನ ಪಿಸ್ತೂಲು ನನ್ನ ಕೈಯಲ್ಲಿದೆ. ನೀನೀಗ ಬಾಗಿಲು ತೆರೆದರೆ ಕೋಣೆಯ ಹೊರಗೆ ಹೆಜ್ಜೆ ಇರಿಸುವ ಮೊದಲು ಸತ್ತು ಹೆಣವಾಗದೆ ಇರುವುದಿಲ್ಲ. ಎಚ್ಚರಿಕೆ” ಎಂದು ಅಬ್ಬರಿಸಿದಳು. ಗುಂಡಿನ ಸಪ್ಪಳ ಕೇಳಿ ತಬ್ಬಿಬ್ಬಾಗಿ ಕೂತಿದ್ದ ಕೆಲಸದ ಹುಡುಗಿಯನ್ನು ಕೂಗಿ ಕರೆದಳು. ಬೇಗೆನೆ ಓಡಿ ನೆರೆಕರೆಯ ಜನರನ್ನು ಕರೆತರುವಂತೆ ಆಕೆಯನ್ನು ಅಟ್ಟಿದಳು. ಜನರು ಬರುವ ತನಕ ಪಿಸ್ತೂಲು ಹಿಡಿದುಕೊಂಡು ಕೋಣೆಯ ಬಾಗಿಲಲ್ಲೆ ಕಾವಲು ನಿಂತಳು.
ತುಸು ಹೊತ್ತಿನಲ್ಲೆ ಊರವರೆಲ್ಲ ಅಲ್ಲಿ ಒಟ್ಟು ಸೇರಿದರು. ಕೋಣೆಯ ಬಾಗಿಲು ತೆರೆದು, ಕಳ್ಳ ಅತಿಥಿಯನ್ನು ಸೆರೆಹಿಡಿದರು. ಮನೆಯ ಪಕ್ಕದಲ್ಲೆ ಸತ್ತುಬಿದ್ದ ಡಕಾಯಿತನ ಹೆಣವನ್ನೂ ಅವರು ಕಂಡರು. ಮನೆಯವರನ್ನು ಕೊಂದು, ಮನೆಯನ್ನು ದೋಚಲು ಬಂದಿದ್ದವರಿಗೆ ತಕ್ಕ ಶಿಕ್ಷೆ ದೊರೆತಿತ್ತು. ನೆರೆದವರೆಲ್ಲ ಮನೆಯ ಸೇವಕಿಯ ಧೈರ್ಯ ಶೌರ್ಯಗಳನ್ನು ಮೆಚ್ಚಿ ಕೊಂಡಾಡಿದರು. ಮತ್ತೆ ಕಳ್ಳನನ್ನು ಪೋಲೀಸರಿಗೆ ಒಪ್ಪಿಸಿದರು.
ಕೆಲವು ದಿನಗಳು ಕಳೆದವು. ಪರವೂರಿಗೆ ಹೋಗಿದ್ದ ಯಜಮಾನ ಮನೆಗೆ ಹಿಂದಿರುಗಿದ. ತಾನು ಇಲ್ಲದಾಗ ಮನೆಯಲ್ಲಿ ನಡೆದ ಸಂಗತಿ ಎಲ್ಲ ಅವನಿಗೆ ತಿಳಿಯಿತು. ಸೇವಕಿಯ ಸಾಹಸದಿಂದಾಗಿ ತನ್ನ ಮನೆ ಉಳಿಯಿತೆಂದು ಅವನಿಗೆ ಬಹಳ ಸಂತೋಷವಾಯಿತು. ಅವನು ಅವಳನ್ನು ಬಾಯಿತುಂಬ ಹೊಗಳಿದ. ಮತ್ತೆ ಬಡವೆಯಾದರೂ ಗುಣಸುಂದರಿಯಾಗಿದ್ದ ಆಕೆಯನ್ನು ಮೆಚ್ಚಿ ಮದುವೆಯಾದ. ಮನೆಯ ಸೇವಕಿಯಾಗಿದ್ದವಳು ಮನೆಯೊಡೆಯನ ಪ್ರೀತಿಯ ಮಡದಿಯಾದಳು; ಮನೆಯ ಒಡತಿಯಾದಳು.
ತನ್ನ ಅದ್ಭುತ ಸಾಹಸಕ್ಕೆ ತಕ್ಕ ಪ್ರತಿಫಲ ಆಕೆಗೆ ದೊರೆಯಿತು.
* * *

ಕಾಮೆಂಟ್‌ಗಳಿಲ್ಲ: