ಮಲೆಗಳಲ್ಲಿ ಮದುಮಗಳು-೫೯

ಎಂಟು ಹತ್ತು ದಿನಗಳಿಂದಲೂ ಸೂರ್ಯನ ಮುಖವನ್ನೆ ಯಾರೂ ಕಂಡಿರಲಿಲ್ಲ. ಆದರೂ ಹೊತ್ತು ಇನ್ನೂ ಮುಳುಗಿರಲಿಲ್ಲ ಎಂಬುದು ಕವಿದಿದ್ದ ಮೋಡದ ಮಬ್ಬಿನ ಹೊಳಪಿನಿಂದಲೆ ಗೊತ್ತಾಗುವಂತಿತ್ತು. ಏಕೆಂದರೆ ಆ ಹೊಳಪು ಹೂವಳ್ಳಿಯ ಗದ್ದೆಕೋಗಿನಲ್ಲಿ ಇನ್ನೇನು ಪೂರೈಸುತ್ತಾ ಬಂದಿದ್ದ ನೆಟ್ಟಿಯ ಸಸಿಗಳ ಮೇಲೆ ಬಿದ್ದು, ಕಾಡು ಅಂಚು ಕಟ್ಟಿದ್ದ ಗದ್ದೆಯ ಕೋಗನ್ನೆಲ್ಲಾ ವ್ಯಾಪಿಸಿತ್ತು. ಅಗೆಸಸಿಯ ಎಳೆಹಸರು ನಳನಳಿಸಿ ಸುಮನೋಹರವಾಗಿ ಕಂಗೊಳಿಸುತ್ತಿತ್ತು. ಸಸಿ ನಟ್ಟಿಯಾಗಿದ್ದ ಗದ್ದೆಗಳಲ್ಲಿ ಮೂರೊ ನಾಲ್ಕೊ ಕಣೆಯ ಒಂದೊಂದು ಬುಡದ ಸಸಿಗಳ ಲಕ್ಷಲಕ್ಷ ಬುಡಗಳನ್ನೆಲ್ಲ ಮುಚ್ಚಿ ಹರಡಿ ನಿಂತಿದ್ದ ನೀರು, ಸಸಿಗಳನ್ನೂ ಮೇಘಮಯವಾಗಿದ್ದ ಆಕಾಶವನ್ನೂ ಪ್ರತಿಬಿಂಬಿಸಿ, ಗಾಳಿ ಬೀಸಿದಂತೆಲ್ಲ ನವಿರು ನವಿರೆದ್ದು ವಿಕಂಪಿಸುತ್ತಿತ್ತು. ಹಗಲೆಲ್ಲ ಏಡಿ ಮಿನುಗಳನ್ನು ತಿನ್ನಲು ಅಲ್ಲಲ್ಲಿ ಗುಂಪು ಕುಳ್ಳಿರುತ್ತಿದ್ದ ಬೆಳ್ಳಕ್ಕ ಮತ್ತು ನೆರೆಬೆಳ್ಳಕ್ಕಿಗಳಲ್ಲಿ, ಕತ್ತಲಾಗುವ ಮುನ್ನ ಗೊತ್ತುಕೂರಲು ಹಾರಿಹೋಗಿ ಉಳಿದಿದ್ದ, ಕೆಲವು ಮಾತ್ರವೆ ಬೇಟೆಯಲ್ಲಿ ತೊಡಗಿದ್ದವು ಇನ್ನೂ.
ಹೂವಳ್ಳಿ ಮನೆಗೆ ದೂರವಾಗಿದ್ದ ಕೊಟ್ಟಕೊನೆಯ ಮೂಲೆಯ ಕಡೆಯಿಂದ ಸಸಿ ನೆಡಲು ಮೊದಲು ಮಾಡಿ, ಕೆಲವು ದಿನಗಳಲ್ಲಿಯೆ ಮನೆಯ ಹತ್ತಿರದ ಹಲಸಿನ ಮರದ ಮೂಲೆಯ ಗೆಣ್ಣಗಳವರೆಗೂ ಬಂದಿದ್ದರು. ಇನ್ನು ಬಾಕಿ ಇದ್ದುದೆಂದರೆ ಮನೆಯ ಬಳಿಯ ಅಡಕೆ ತೋಟಕ್ಕೆ ಮುಟ್ಟಿಕೊಂಡಂತಿದ್ದ ಮಕ್ಕೆಗದ್ದೆ. ಆ ಮಕ್ಕಿಗದ್ದೆಯೂ ಉತ್ತು, ಕೊರಡು ಹೊಡೆದು, ನೀರುಕಟ್ಟಿ ಸಸಿ ನಡೆಸಿಕೊಳ್ಳಲು ಸಿದ್ಧವಾಗಿ ನಿಂತಿತ್ತು.
ಆ ಮಕ್ಕಿಗದ್ದೆಗೆ ಕೆಳಗಿದ್ದು, ಆ ದಿನವೆ, ತುಸು ಹೊತ್ತಿಗೆ ಮುನ್ನ, ಸಸಿ ನೆಟ್ಟು ಪೂರೈಸಿದ್ದ ಒಂದು ಗದ್ದೆಯ ಅಂಚಿನ ಮೇಲೆ ಕಂಬಳಿಕೊಪ್ಪೆ ಹಾಸಿಕೊಂಡು, ಅದರ ಮೇಲೆ ಕುಳಿತಿದ್ದನು ಐತ, ಒಂದು ಕಾಲನ್ನು ಅಂಚಿನ ಕೆಳಗೆ ನೀರು ಮುಟ್ಟುವಂತೆ ಇಳಿ ಬಿಟ್ಟುಕೊಂಡು. ಅವನ ಸುತ್ತಮುತ್ತ ಇನ್ನೂ ಮೂರುನಾಲ್ಕು ಜನ ಗಂಡಾಳುಗಳು ಅವನಂತೆಯೆ ಕಂಬಳಿಕೊಪ್ಪೆ ಹಾಸಿಕೊಂಡು ಅಂಚಿನ ಮೇಲೆ ಕೂತಿದ್ದರು. ಅವರ ಗುಂಪಿಗೆ ಎಂಟು ಜತ್ತು ಮಾರು ದೂರದಲ್ಲಿ, ತನ್ನ ಗೊರಬನ್ನು ಪಕ್ಕದಲ್ಲಿ ನಿಲ್ಲಿಸಿಟ್ಟು, ಗದ್ದೆಯ ಅಂಚಿನೊಡನೆ ಐಕ್ಯವಾಗಿದ್ದಂತೆ ಎದ್ದಿದ್ದ ಹಾಸರೆಯ ಮೇಲೆ ಒಬ್ಬಳೆ ಕೂತಿದ್ದಳು ನಾಗಕ್ಕ. ಅವಳು ಸಸಿನೆಟ್ಟು  ಪೂರೈಸಿ ಕಂಗೊಳಿಸುತ್ತಿದ್ದ ಕೆಳಗಿನ ಗದ್ದೆಗಳ ಕಡೆಗೆ ನೋಡುತ್ತಿದ್ದಳು, ದುಡಿದು ದಣಿದು ಕೆಲಸ ಮುಗಿಸಿದವರ ತೃಪ್ತಿಯಿಂದ. ಅವಳ ಕಣ್ಣಿಗೆ ಇಡಿಯ ಗದ್ದೆಯ ಕೋಗು ಕಾನಿಸುತ್ತಿದ್ದಿತಾದರೂ ಅವಳ ಗಮನಕ್ಕೆ ಗುರಿಯಾಗಿದ್ದುದು ಬೇರೆ: ಎರಡು ಮೂರು ಗೆಣ್ಣಗಳ ಕೆಳಗಣ ಗದ್ದೆಯಲ್ಲಿ, ನೆಟ್ಟು ಪೂರೈಸಿದ್ದ ಸಸಿಗಳನ್ನು ಬುಡಮುಚ್ಚಿ ನಿಂತಿದ್ದ ನೀರಿನಲ್ಲಿ, ಮೆಲ್ಲಗೆ, ಬಹು ಮೆಲ್ಲಗೆ, ನಿಂತೆ ಬಿಟ್ಟಿವೆಯೊ ಎಂಬಂತೆ, ಚಲಿಸುತ್ತಿದ್ದ ಎರಡು ಗೊರಬುಗಳ ಕಡೆಗೆ ಕೇಂದ್ರೀಕೃತವಾಗಿತ್ತು. ಅವಳ ದೃಷ್ಟಿ. ಆ ಗೊರಬುಗಳು ನಾಗಕ್ಕ ಕೂತಿದ್ದ ಹಾಸರೆಯಿಂದಲೆ ಹೊರಟಿದ್ದವು, ಬೆಳ್ಳೇಡಿ ಹಿಡಿಯುವದಕ್ಕೆ!
ಮೊದಮೊದಲು ನಾಗಕ್ಕಗೆ ಆ ಗೊರಬು ಸೂಡಿದ್ದ ವ್ಯಕ್ತಿಗಳು ಕೆಸರಾಗದಂತೆ ಆದಷ್ಟು ಮೇಲಕ್ಕೆ ಮೊಳಕಾಲಿನವರೆಗೂ ಎತ್ತಿ ಕಟ್ಟಿಕೊಂಡಿದ್ದ ಸೀರೆಯ ತುದಿಯಂಚೂ, ಅದರ ಕೆಳಭಾಗದಲ್ಲಿ ಕೋಮಲ ಮತ್ತು ಶ್ಯಾಮಲ ವರ್ಣದ ಜಂಘಗಳೂ ಕಾಣಿಸುತ್ತಿದ್ದು, ಯಾವ ಗೊರಬು ಪೀಂಚಲುವನ್ನೊಳಗೊಂಡಿದೆ? ಮತ್ತಾವುದರಡಿ ಚಿನ್ನಮ್ಮ ಇದ್ದಾಳೆ? ಎಂಬುದು ಗೊತ್ತಾಗುವಂತಿತ್ತು. ಅವರ ಧ್ವನಿವ್ಯತ್ಯಾಸವೂ ಯಾರು ಏನು ಮಾಡುತ್ತಿದ್ದಾರೆ ಎಂಬುದನ್ನೂ ಸ್ಪಷ್ಟಪಡಿಸುವಂತಿತ್ತು. ಆದರೆ ಅವರು ಏಡಿ ಹಿಡಿಯುತ್ತಾ ಹಿಡಿಯುತ್ತಾ ಮುಂದು ಮುಂದುವರಿದಂತೆಲ್ಲ, ದೂರ ದೂರ ದೂರವಾಗಿ ಬರಿಯ ಎರಡು ಗೊರಬುಗಳಾಗಿ ಮಾತ್ರ ಕಾಣಿಸುತ್ತಿದ್ದರು. ಅವರು ಆಡಿಕೊಳ್ಳುತ್ತಿದ್ದ ಮಾತು ಇರಲಿ, ಗಟ್ಟಿಯಾಗಿ ನಕ್ಕಿದ್ದೂ ಕೇಳಿಸುತ್ತಿರಲಿಲ್ಲ; ಅಷ್ಟು ದೂರ ಹೋಗಿದ್ದರು. ‘ಈ ಹುಡುಗಿಯರಿಗೆ ಇನ್ನೂ ಮನೆಕಡೆಗೆ ಹೊರಡಲು ಹೊತ್ತೇ ಆಗಿಲ್ಲವೇನೋ’ ಎಂದುಕೊಂಡಳು ನಾಗಕ್ಕ, ಆ ಗೊರಬುಗಳ ಕಡೆಗೇ ನೋಡುತ್ತಾ.
ಎಳಬಸಿರಿಯಾಗಿದ್ದ ಪೀಂಚಲು, ಆ ದಿನದ ಸಸಿನೆಟ್ಟಿಯ ಕೆಲಸ ಪೂರೈಸಲು, ಬೆಳ್ಳೇಡಿ ಹಿಡಿಯಲು ಹೊರಟಿದ್ದಳು. ಬಸಿರಿಯಾಗಿದ್ದ ಅವಳ ನಾಲಗೆಗೆ ರಾತ್ರಿಯ ಗಂಜಿಯೂಟಕ್ಕೆ ನಂಚಿಕೊಳ್ಳಲು ಏಡಿಯ ಚಟ್ನಿ ಬಹಳ ಹಿತವಾಗಿರುತ್ತಿತ್ತು. ಅದಕ್ಕಾಗಿ ದಿನವೂ ಗದ್ದೆಯ ಕೆಲಸ ಮುಗಿದೊಡನೆ, ತಾನು ತಂದಿಟ್ಟಿರುತ್ತಿದ್ದ ಒಂದು ಸಣ್ಣ ಬಾಯಿಯ ಮೀನು ಬುಟ್ಟಿಯನ್ನು ಹಿಡಿದು ಕೊಂಡು, ಗದ್ದೆಗಿಳಿದು ಬೆಳ್ಳೇಡಿಗಳನ್ನು ಹಿಡಿದು, ಅವು ಬುಟ್ಟಿಯ ತುದಿಗೆ ಹತ್ತಿ ಮತ್ತೆ ಗದ್ದೆಗೆ ಹಾರದಂತೆ ಅವುಗಳ ಕೊಂಬು ಮತ್ತು ಚಕ್ಕಬೆರಳುಗಳನ್ನು ಮುರಿದು ಬುಟ್ಟಿಯೊಳಗೆ ಹಾಕಿಕೊಳ್ಳುತ್ತಿದ್ದಳು. ಅವಳ ಆ ಬೆಳ್ಳೇಡಿಬೇಟೆಯಲ್ಲಿ ಚಿನ್ನಮ್ಮನೂ, ಮೃಗಯಾವಿನೋದಕ್ಕಾಗಿಯೆ ಪಾಲುಗೊಂಡು, ನೆರವಾಗುತ್ತಿದ್ದಳು.
ಅಂತೆಯೆ ಇಂದೂ ಹುಡುಗಿಯರಿಬ್ಬರೂ ಏಡಿಯ ಬೇಟೆಯಲ್ಲಿ ತೊಡಗಿದ್ದರು. ಸ್ವಾರಸ್ಯ ಬರಿಯ ಏಡಿ ಹಿಡಿಯುವಷ್ಟರಲ್ಲಿ ಮಾತ್ರವೆ ಇರಲಿಲ್ಲ ಎಂಬ ಗೋಪ್ಯ ಇತರ ಯಾರಿಗೂ ತಿಳಿದಿರಲಿಲ್ಲ. ವಯಸ್ಸಿನಲ್ಲಿ ಅಂತಹ ಹೆಚ್ಚು ಅಂತರವಿರದಿದ್ದ ಅವರಿಬ್ಬರಲ್ಲಿ, ಚಿನ್ನಮ್ಮ ಯಾಜಮಾನ್ಯ ಸ್ಥಾನದಲ್ಲಿದ್ದು ಪೀಂಚಲು ಸೇವಕಸ್ಥಾನದಲ್ಲಿದ್ದರೂ, ಒಂದು ಸರಳವಾದ ಸಲಿಗೆ ಬೆಳೆದಿತ್ತು. ಅದರಲ್ಲಿಯೂ ಮದುವೆಯ ದಿನ ಅವರಿಬ್ಬರೂ ಮನೆಯಿಂದ ಒಟ್ಟಿಗೆ ಕಾಡಿಗೆ ಓಡಿಹೋಗಿ, ಐತ ಮುಕುಂದಯ್ಯರನ್ನು ಕೂಡಿಕೊಂಡು, ಹುಲಿಕಲ್ಲು ನೆತ್ತಿಗೆ ಹತ್ತಿ, ಒಂದು ದಿನ ಒಟ್ಟಿಗಿದ್ದು ಹಿಂದಿರುಗಿದ ಮೇಲಂತೂ ಗೆಳೆತನದ ಬೆಸುಗೆ ಅವರಿಬ್ಬರ ಹೃದಯಗಳನ್ನೂ ಒಂದುಗೂಡಿಸಿತ್ತು. ಮೂರನೆಯ ಯಾರೊಡನೆಯೂ ಆಡದಿದ್ದಂತಹ ಮತ್ತು ಆಡಬಾರದಿದ್ದಂತಹ ಅತ್ಯಂತ ಆಪ್ತ ಮತ್ತು ಗೋಪ್ಯ ವಿಷಯಗಳನ್ನೂ ಒಬ್ಬೊರೊಡನೊಬ್ಬರು ಸ್ವಲ್ಪವೂ ಲಜ್ಜಿಯಿಲ್ಲದೆ ನಿರ್ಭೀತಿಯಿಂದ ಹೇಳಿಕೊಂಡು ಸವಿದು ನಗುತ್ತಿದ್ದರು. ತನಗಿಂತಲೂ ಪ್ರಣಯ ಮತ್ತು ದಾಂಪತ್ಯ ಜೀವನಗಳಲ್ಲಿ ಬಹುಪಾಲು ಮುಂದುವರೆದು ಅನುಭವಶಾಲಿಯಾಗಿದ್ದ ಪೀಂಚಲು ಹೇಳುತ್ತಿದ್ದ ಗಂಡಹೆಂಡಿರ ರಹಸ್ಯ ವ್ಯಾಪಾರಗಳನ್ನು ಕೇಳಿ ಚಿನ್ನಮ್ಮ ಒಮ್ಮೊಮ್ಮೆ ಅದರ ಸೋಜಿಗಕ್ಕೆ ಅಂಜಿ ಲಜ್ಜೆಪಟ್ಟು ಕೊಳ್ಳುತ್ತಿದ್ದರೂ ಅನೇಕ ವೇಳೆ ಅದರ ಸ್ವಾರಸ್ಯಕ್ಕೆ ಮಾರು ಹೋಗಿ ನಕ್ಕೂನಕ್ಕೂ ಸವಿಯುತ್ತಲೂ ಇದ್ದಳು. ಅಂತಹ ವಿಚಾರಗಳಲ್ಲಿ ಅವಳಿಗೆ ಅದುವರೆಗೂ ಇದ್ದ ಕನ್ಯಾಮುಗ್ದತೆ ಅಂದು ಮುಕುಂದಯ್ಯ ಕೋಣೆಯಲ್ಲೆಸಗಿದ್ದ ಶೃಂಗಾರ ಶುಶ್ರೂಷೆಯಿಂದ ಕಣ್ದೆರೆದು ಮೊಳಕೆಗೊಂಡು, ಆಗಾಗ್ಗೆ, ಈಗ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದ ಅವರಿಬ್ಬರೊಡನೆ, ಪರಸ್ಪರ ನಡೆಯುತ್ತಿದ್ದ ಕಣ್ ಬೇಟದ ಮನ್ಮಥಚೇಷ್ಟೆಯಿಂದ ವಿದಗ್ಧತೆಯ ವೃಕ್ಷವಾಗಲು ಮೆಲ್ಲಗೆ ಸಸಿಯಾಗಿ ಬೆಳೆಯುತ್ತಿತ್ತು. ಪ್ರೌಢಾವಸ್ಥೆಗೆ ಕ್ರಮೇಣ ವಿಕಾಸವಾಗುತ್ತಿದ್ದ ಅವಳ ಹೃದಯರಸನೆಗೆ ಅಂತಹ ಮಾತುಕತೆ ಅಪ್ಯಾಯಮಾನವಾಗಿ ತೋರತೊಡಗಿತ್ತು. ನಾಜೋಕಿನ ಸಂಸ್ಕೃತಿಯ ನಯರುಚಿಗೆ ದೂರವಾಗಿದ್ದ ಗ್ರಾಮಿಣೆ ಪೀಂಚಲು ಏನನ್ನೇ ಹೇಳಿದರೂ ಅದೆಲ್ಲ ತನಗೂ ತನ್ನ ಗಂಡನಿಗೂ ಸಂಬಂಧಪಟ್ಟದ್ದೆ ಆಗಿರುತ್ತಿತ್ತು. ಚಿನ್ನಮ್ಮ ಏನು ಊಹಿಸಲು ಏನು ಭಾವಿಸಲು ಏನು ಆಶಿಸಲಿ ಅದೆಲ್ಲ ತನಗೂ ಮುಕುಂದಯ್ಯನಿಗೂ ಇನ್ನು ಕೆಲವೆ ತಿಂಗಳುಗಳಲ್ಲಿ ತನಗೆ ಶಾಸ್ತ್ರೋಕ್ತವಾಗಿಯೆ ಗಂಡನಾಗುವ ತನ್ನ ಮುಕುಂದಬಾವನಿಗೊ ಸಂಬಂಧಪಟ್ಟಂತೆಯೆ ಆಗಿರುತ್ತಿತ್ತು.
ಗೊರಬು ಸೂಡಿದ್ದ ಇಬ್ಬರೂ ಬಗ್ಗಿ ಬಗ್ಗಿ, ಸಸಿಯ ಬುಡಗಳಲ್ಲಿ ನೀರಿನಲ್ಲಿ ಅಡಗುತ್ತಿದ್ದ ಬೆಳ್ಳೇಡಿಗಳನ್ನು ಹಿಡಿದು ಹಿಡಿದು, ಪೀಂಚಲು ತನ್ನ ಎಡಗೈಯಲ್ಲಿ ಹಿಡಿದಿದ್ದ ಬುಟ್ಟಿಗೆ ಹಾಕುತ್ತಿದ್ದರು. ಚಿನ್ನಮ್ಮ ಹಿಡಿಯಲು ಪ್ರಯತ್ನಿಸುತ್ತಿದ್ದ ಒಂದು ಚಟುವಟಿಕೆಯ ಏಡಿ ಅವಳಿಗೆ ಕಣ್ಣುಮುಚ್ಚಾಲೆ ಆಡಿಸುತ್ತಿರಲು:
“ಅಕ್ಕಾ, ಅಕ್ಕಾ, ಅಲ್ಲಿಕಾಣಿ, ಅಲ್ಲಿಕಾಣಿ, ನಿಮ್ಮ ಕಾಲುಬುಡದಲ್ಲೇ ಕೂತಿದೆಯಲ್ದಾ? ಹಿಹ್ಹಿಹ್ಹಿಹ್ಹಿ!” ಸುಟ್ಟಿದೋರಿದಳು ಪೀಂಚಲು.
ಚಿನ್ನಮ್ಮ ಆ ಏಡಿ ಹುದುಗಿದ್ದ ತಾಣವನ್ನು ಮೆಲ್ಲನೆ ಹುಡುಕಿ ಕಂಡುಹಿಡಿದು, ಎಡಗೈಯಲ್ಲಿ ಸೀರೆಯ ನೆರಿಗೆಯನ್ನು ತುಸು ಮೇಲಕ್ಕೆತ್ತಿ ಕೊಂಡು, ಬಲಗೈಯನ್ನು ಮುಂದಕ್ಕೆ ಚಾಚಿದ್ದಳು ಆಕ್ರಮಣಕ್ಕೆ! ಅವಳು ಸೀರೆಯನ್ನು ಮೇಲಕ್ಕೆ ಎತ್ತಿದಾಗ, ಅವಳ ಮೈಯ ಹೊಂಬಣ್ಣವನ್ನು ಕಂಡ ಪೀಂಚಲು, ನಟ್ಟಿದ್ದ ಕಣ್ನನ್ನು ಹಿಂದೆಗೆಯಲಾರದೆ ‘ಅಃ ಚಿನ್ನಕ್ಕ ಎಷ್ಟು ಚಂದಾಗಿದ್ದಾರೆ!’ ಎಂದು ತನಗೆ ತಾನೆ ಮನಸ್ಸಿನಲ್ಲಿಯೆ ಅಂದುಕೊಂಡಳು.
ಚಿನ್ನಮ್ಮ ಏಡಿ ಹಿಡಿದು ಬುಟ್ಟಿಗೆ ಹಾಕುತ್ತಿದ್ದಾಗ ಅದು ಅವಳನ್ನು ಕಚ್ಚಿತು. ಕೈಯನ್ನು ಬುಟ್ಟಿಯೋಳಗೇ ಕೊಡಹಿದ್ದರಿಂದ ಪ್ರಾಣಿ ಹೊರತೆ ಬಿದ್ದು ತಪ್ಪಿಸಿಕೊಳ್ಳಲಾಗಲಿಲ್ಲ.
ಚಿನ್ನಮ್ಮ “ಹಾಳು ಏಡಿ! ಕಚ್ಚಿಬಿಡ್ತಲ್ಲೇ” ಎಂದಳು.
“ಹಾಂಗೆ ತುದಿ ಬೆರಳಲ್ಲಿ ನೀವು ಹಿಡಿದರೆ, ಮತ್ತೆ ಕಚ್ಚದೆ ಬಿಡುತ್ತದೆಯೆ? ಇಡೀ ಏಡಿಯನ್ನೇ ಹಿಡಿಯಬೇಕು, ಅಮರಿ; ಆದರ ಕೊಂಬು ಚಕ್ಕಬೆಳ್ಳು ಎಲ್ಲ ನಮ್ಮ ಮುಷ್ಟಿಯೊಳಗೇ ಸಿಕ್ಕಿ, ಅದಕ್ಕೆ ಅಲ್ಲಾಡುವುದಕ್ಕೇ ಆಗದಂತೆ!” ಎಂದವಳು ಚಿನ್ನಮ್ಮನ ಮುಖವನ್ನೇ ನೇರವಾಗಿ ನೋಡಿ ಮುಗುಳು ನಗುತ್ತಾ ಹೇಳಿದಳು “ಚಿನ್ನಕ್ಕಾ, ನೀವು ಎಷ್ಟು ಚೆಂದಾಗಿದ್ದೀರಿ?”
“ನೀನು ಎಷ್ಟು ಚೆಂದಾಗಿ ಆಗ್ತಿದ್ದೀಯೆ, ಇತ್ತಿತ್ತಲಾಗಿ!” ಚಿನ್ನಮ್ಮನೆಂದಳು.
ಸ್ವಲ್ಪ ಕಾಲದ ಹಿಂದೆ ಚಿನ್ಮಮ್ಮ ಬಸುರು ಬೆಳೆದು ಹಿಗ್ಗುತ್ತಿದ್ದ ಪೀಂಚಲು ಹೊಟ್ಟೆಯನ್ನು ಒಂದು ಪಕ್ಕದಿಂದ ಕಂಡಾಗ ಜುಗುಪ್ಸೆಪಟ್ಟುಕೊಂಡು “ಇವಳ್ಯಾಕೆ ಹೀಂಗಾಗ್ತಿದ್ದಾಳೆ, ಮದುವೆಯಾಗೋಕೆ ಮುಂಚೆ ಅಷ್ಟು ಲಕ್ಷಣವಾಗಿದ್ದವಳು?” ಎಂದುಕೊಂಡಿದ್ದಳು. ಆದರೆ ಆಮೇಲೆ ಒಂದು ದಿನ ಅವಳ ಗಮನ ಹೊಟ್ಟೆಯ ಕಡೆಗೆ ಬೀಳದೆ ವಕ್ಷಸ್ಥಲ ಮುಖಮಂಡಳಗಳ ಮೇಲೆ ಮಾತ್ರ ಬಿದ್ದಾಗ ಅವಳಿಗೆ ಆಶ್ಚರ್ಯವಾಗಿತ್ತು: ಪೀಂಚಲು ಎಷ್ಟು ಚಂದ ಆಗುತ್ತಿದ್ದಾಳೆ?
ತನ್ನ ಚೆಲುವನ್ನು ಮೆಚ್ಚಿ ನುಡಿದ ಒಡತಿಗೆ ಕೃತಜ್ಞತೆಯಿಂದಲೆ ಶರಣಾಗಿಹೋದ ಪೀಂಚಲು: “ನಾನೆಂಥಾ ಚೆಂದ, ಚಿನ್ನಕ್ಕ? ಕರಿ ಮುಸುಳಿ! ನಿಮ್ಮ ಪಾದದ ಬಣ್ಣ ನನ್ನ ಮುಖಕ್ಕೆ ಬರಬೇಕಾದರೆ ನಾನೆಷ್ಟು ಪುಣ್ಯ ಮಾಡಬೇಕೋ? ಇನ್ನೆಷ್ಟು ಜಲ್ಮ ಎತ್ತಬೇಕೋ?” ಎಂದವಳು ಚಿನ್ನಮ್ನನ ಕಣ್ನನ್ನೇ ಇಂಗಿತವಾಗಿ ನೋಡುತ್ತಾ ನಗುಮೊಗವಾಗಿ ಸೇರಿಸಿದಳು: “ಅದಕ್ಕೇ ಮತ್ತೆ…. ಮುಕುಂದಣ್ಣ…. ನಿಮ್ಮ ಕಾಲಕೆಳಗೆ ಬೀಳಾಕೆ…. ಅಷ್ಟೊಂದು ದುಂಬಾಲು ಬಿದ್ದು, ಪಾಡು ಪಡ್ತಿರಾದು!”.
“ಥೂ, ಪೀಂಚಲು! ನೀನೇನೆಲ್ಲ ಹೇಳ್ತಿರ್ತೀಯೇ! ನಿಂಗೆ ನಾಚಿಗೆ ಮರ್ಯಾದೆ ಒಂದೂ ಇಲ್ಲ! ಭಂಡೀ ಅಂದ್ರೆ ಭಂಡೀ!” ಚಿನ್ನಮ್ಮನೆಂದಳು, ಪೀಂಚಲು ಹೇಳಿದ್ದನ್ನು ಹೃತ್ಪೂರ್ವಕವಾಗಿ ಸವಿಯುತ್ತಾ. ಮತ್ತೆ ಕೇಳಿದಳು:
“ಐತ ನಿನಗೆ ಯಾವಾಗ್ಲೆ ಗಂಡ ಆಗಿದ್ದು?”
“ಯಾವಾಗ ಅಂದ್ರೆ? ಲಗ್ನ ಆದಮೇಲೆ!”
“ಅದಕ್ಕೆ ಮುಂಚೆ?”
“ಅದಕ್ಕೆ ಮುಂಚೆ ಗಂಡ ಆಗೋಕೆ?….” ತುಸು ತಡೆದು ತಡೆದು ವಿನೋದವಾಡಿದಳು ಪೀಂಚಲು: “ನಾ ಚಿನ್ನಕ್ಕನೂ ಅಲ್ಲ; ಐತ ಮುಕುಂದಣ್ಣೋರೊ ಅಲ್ಲ:….
“ನೀನು ಬಾ’ಳ ಕೆಟ್ಟೋಳೆ, ಪೀಂಚ್ಲಿ! ನಿನ್ನ ಹತ್ರ ನಾ ಮಾತು ಬಿಟ್ಟೆ, ಇವತ್ತಿನಿಂದ! ಏಡಿನಾದ್ರೂ ಹಿಡಿ; ಏನಾದ್ರೂ ಮಾಡು! ನಾ ಹೊಗ್ತೀನಿ, ನಾಗಕ್ಕ ಕಾಯ್ತದೆ….”
ಸಿಟ್ಟುಗೊಂಡಂತೆ ಗೊರಬಿನ ಬೆನ್ನನ್ನು ತನ್ನ ಕಡೆಗೆ ತಿರುಗಿಸಿದ ಚಿನ್ನಮ್ಮಗೆ ಪೀಂಚಲು: “ಇಲ್ಲ ಚಿನ್ನಕ್ಕಾ! ತಪ್ಪಾಯ್ತು! ದಮ್ಮಯ್ಯ ಅಂತೀನಿ! ನಿಮ್ಮ ಕಾಲಿಗೆ ಬೀಳ್ತೀನಿ? ಇನ್ನು ಖಂಡಿತಾ ಹಾಂಗೆಲ್ಲ ಮಾತಾಡಾದಿಲ್ಲ….!”.
ಪೂರ್ತಿ ಕ್ಷಮಿಸಿದವಳಂತೆ ಚಿನ್ನಮ್ಮ ಮತ್ತೆ ತಿರುಗಿದಳು; ಹೇಳಿದಳು ಮರೆನಗುಮೊಗಳಾಗಿ: “ಖಂಡಿತಾ ಹಾಂಗೆಲ್ಲ ಮಾತಾಡದಿಲ್ಲ ಅಂತ ಎಷ್ಟು ಸಾರಿ ಹೇಳಿಲ್ಲ ನೀನು?….”:
ಚಿನ್ನಮ್ಮನ ಮಾತಿಗೆ ಹೆಚ್ಚೇನೂ ಲಕ್ಷಕೊಡದೆ ಪೀಂಚಲು ಎದುರಿಗೇ ಕಾಣಿಸುತ್ತಿದ್ದು ಮೋಡ ಮುಚ್ಚಿಹೋಗಿದ್ದ ಹುಲಿಕಲ್ಲಿ ನೆತ್ತಿಯ ಕಾಡಿನ ಕಡೆಗೆ ಕೈತೋರಿ “ಅದೇ ಕಣ್ರೋ ಆ ಕಲ್ಲು ಮಂಟಪ!” ಎಂದಳು.
ಚಿನ್ನಮ್ಮ ಮಂತ್ರ ಮುಗ್ದೆಯಾದಂತೆ ಅತ್ತ ಕಡೆ ನೋಡಿದಳು:
ದಟ್ಟವಾದ ಕಾಡು ಬೆಳೆದ ಗುಡ್ಡ, ಅಲೆ ಅಲೆ ಅಲೆ ಏರಿ ಏರಿ ಏರಿ, ಹುಲಿಕಲ್ಲು ನೆತ್ತಿಯ ಮೋಡಗಳಲ್ಲಿ ಹಾದು, ಆಕಾಶದಲ್ಲಿ ಮರೆಯಾಗಿತ್ತು. ಕಲ್ಲು ಮಂಟಪವಿದ್ದ ಕುಲಿಕಲ್ಲು ತೆತ್ತಿಯನ್ನು ಅಪ್ಪಿ ಮುತ್ತಿದ್ದ ಮೋಡದ ಹಿಂಡು, ಕರಿಹೊಗೆಯ ಮುದ್ದೆಯಂತೆ, ಕಾಡಿನ ಕಡು ಹಸುರಿಗೆ ತಾರ ತಮ್ಯವಾಗಿ ಮಾತ್ರ ತನ್ನ ಬಿಳಿಯ ತನವನ್ನು ಪ್ರಕಟಿಸಿತ್ತು. ಕಾಡು, ಗುಡ್ಡದ ಗೋಡೆಗೆ ಮೆತ್ತಿದ್ದ ಹಸುರಿನ ಮಹಾಮುದ್ದೆಗಳಂತೆ, ಮುಗಿಲಿನವರೆಗೂ ಎದ್ದು ಆ ಭೀಮಔನ್ನತ್ಯದಿಂದ ಚಿನ್ನಮ್ಮ ಪೀಂಚಲು ನಿಂತಿದ್ದ ಹೂವಳ್ಳಿಯ ಗದ್ದೆಯ ಕೋಗನ್ನು ಮೇಲ್ವಾಯುವಂತೆ ಬಾಗಿ ದಿಟ್ಟಿಸುವಂತಿತ್ತು, ವ್ಯಾಘ್ರ ಭೀಷಣವಾಗಿ! ಅವರು ಸಂವಾದದಲ್ಲಿ ತೊಡಗಿದ್ದಾಗ ಗಮನಿಸದಿದ್ದ ಅನೇಕ ನಿಸರ್ಗ ನಿನಾದಗಳು ಈಗ ತೆಕ್ಕನೆ ಉಕ್ಕಿ ಕೇಳಿಸಿದಂತಾಗಿ ಹೆದರಿಕೆಯ ಮೇಲೆ ಹೆದರಿಕೆ ಹೇರಿದಂತಾಯ್ತು. ಸಾಯಂಕಾಲವಾಗುತ್ತಿದ್ದುರದಿಂದ ಜೀರುಂಡೆಗಳ ಕೂಗಿನ ಸರಮಾಲೆ, ಒಂದು ನಿಲ್ಲಿಸುವ ಮುನ್ನ ಮತ್ತೊಂದು, ಒಂದು ಬಿಟ್ಟರೆ ಇನ್ನು ಒಂದಲ್ಲ ಎರಡು, ನಿರಂತರವಾಗಿ ಸದ್ದಿನ ಗರಗಸ ಎಳೆದಂತೆ ಕರ್ಕಶವಾಗಿತ್ತು. ಜೊತೆಗೆ ಗದ್ದೆಯಲ್ಲಿದ್ದ ಕೋಟಿ ಕೋಟಿ ಕಪ್ಪೆ ಕೀಟ ಕ್ರಿಮಿಗಳೂ ಚಿತ್ರ ವಿಚಿತ್ರ ಕಂಠಸ್ವರಗಳಿಂದ ಟ್ರರ್ ಟ್ರರ್? ವಟಕ್ ವಟಕ್ ವಟಕ್ ವಟಕ್! ಗ್ರೀಂಗ್ರೀಂಗ್ರೀಂಗ್ರೀ! ಡೊಂಯ್ಕ್ ಡೊಯ್ಕ್ ಡೊಂಯ್ಕ್! ತಲೆಗೆ ಚಿಟ್ಟು ಹಿಡಿಸುವಂತೆ ಸದ್ದಿನ ಬಲೆಯನ್ನೇ ನೆಯ್ದುಬಿಟ್ಟವು, ಕೊನೆಯ ಇಲ್ಲವೆಂಬಂತೆ. ಹುಲಿಕಲ್ಲು ನೆತ್ತಿಯ ಕಡೆಗೆ ನೋಡುತ್ತಿದ್ದ ಚಿನ್ನಮ್ಮಗೆ – ತಾನು ಎಂದಾದರೂ ಆ ದುರ್ಗಮ ಪ್ರದೇಶಕ್ಕೆ ಹೋಗಿದ್ದುದು ನಿಜವೇ? ಅದೆಲ್ಲ ನಡೆದಿದ್ದು ನಿಜವೋ ಕನಸೋ? ನನ್ನಂಥವಳು ಅಂತಹ ಭಯಂಕರ ಕಾಡುಗುಡ್ಡ ಹತ್ತಿ ರಾತ್ರಿ ಹೋಗುವುದೆಂದರೇನು? ಛೇ! ಎಲ್ಲಿಯ ಮಾತು? ಹಾಗೆ ನಡೆದಿದ್ದು ನಿಜದಲ್ಲಿ ಅಲ್ಲವೆ ಅಲ್ಲ! ಸುಳ್ಳು! ಬರೀ ಸುಳ್ಳು! ಅನ್ನಿಸತೊಡಗಿನಿಡುಸುಯ್ದು ಕೇಳಿದಳು:
“ಹೌದೇನೆ, ಪೀಂಚಲು, ನಾವು ಅಲ್ಲಿಗೆ ಹೋಗಿದ್ದು?”
“ಮುಕುಂದಣ್ಣೋರನ್ನೆ ಕೇಳಿ, ಹೇಳ್ತಾರೆ: ಚಿನ್ನಕ್ಕ ಅನ್ನೊರನ್ನ ಹೊತ್ತು ಹಳ್ಳ ದಾಟಿಸಿದ್ದು ಹೌದೋ ಅಲ್ಲೋ ಅಂತಾ!”.
ಆ ಅನುಭವ ಚಿನ್ನಮ್ಮ ಮರೆಯುವಂತಾದ್ದಾಗಿರಲಿಲ್ಲ. ಅದು ನಡೆದಾಗ ಅವಳು ವಿಶೇಷ ಭಾವೋದ್ವೇಗದ ಸನ್ನಿವೇಶದಲ್ಲಿ ಇದ್ದದ್ದರಿಂದ ಅದನ್ನು ಅಷ್ಟಾಗಿ ಗಮನಿಸುವುದಕ್ಕೆ ಆಗಿರಲಿಲ್ಲ. ಆದರೆ ಆಮೇಲೆ ಅದನ್ನು ಮತ್ತೆ ಮತ್ತೆ ಸ್ಮರಿಸಿ ಸವಿದಿದ್ದಳು. ಅಲ್ಲದೆ ಮುಕುಂದಬಾವ ತನ್ನನ್ನು ಹಿಡಿದೆತ್ತಿ ಹೊತ್ತುಕೊಳ್ಳುವಾಗ ಮುಟ್ಟಿದ್ದ ಮತ್ತು ಒತ್ತಿದ್ದ ತನ್ನ ಮೃದುಲ ಅಂಗೋಪಾಂಗಗಳ ಸೋಂಕಿನ ವಿಚಾರದಲ್ಲಿ ಅವರು ಪೂರ್ತಿ ನಿರ್ಲಿಪ್ತರಾಗಿರಲಿಲ್ಲ ಎಂಬುದೂ ಅವಳಿಗೊಂದು ಸುಖಪ್ರದ ಸಂದೇಹವಾಗಿತ್ತು.
“ಹ್ಯಂಗೆ ಮಾತಾಡ್ತೀಯೆ ನೀನು, ಪೀಂಚ್ಲೆ? ನಿನ್ನ ನಾಲಗೇಲಿ ಕರೀಮಚ್ಚೆ ಇದೆ ಅಂತಾ ಕಾಣ್ತದ್ಯೇ!” ತಾನು ಹುಲಿಕಲ್ಲು ನೆತ್ತಿಗೆ ಕಲ್ಲು ಮಂಟಪಕ್ಕೆ ಹೋಗಿದ್ದ ವಿಷಯದಲ್ಲಿದ್ದ ಸಂದೇಹವೆಲ್ಲ ನಿವೃತ್ತವಾದಂತಾಗಿ ಕೊಂಕು ನುಡಿದಳು ಚಿನ್ನಮ್ಮ.
“ನಾಲಿಗೇಲಿ ಇಲ್ಲ, ಚಿನ್ನಕ್ಕಾ, ಇಲ್ಲಿ ಇತ್ತು ಅಂಬರು!” ತನ್ನ ನಿತಂಬದೆಡೆಗೆ ಕೈದೋರಿ ನಕ್ಕಳು ಪೀಂಚಲು.
“ಅಲ್ಲಿ ಇರಾದು ನಿಂಗೆ ಹೆಂಗೆ ಗೊತ್ತಾತೋ?” ಮೂದಲಿಸಿದಳು ಚಿನ್ನಮ್ಮ.
“ನಂಗೆ ಏನು ಗೊತ್ತು? ಅವರು ಹೇಳಿದ್ದು!”.
“ಯಾರೇ ಹೇಳಿದ್ದು?” ದಿಗಿಲುಗೊಂಡಂತೆ ಕೇಳಿದಳು ಚಿನ್ನಮ್ಮ.
“ಮತ್ತೆ ಯಾರಾದರೂ ಹೇಳುವದಕ್ಕೆ ನಾನೇನು ಅಂಥವಳಲ್ಲ!”
“ಐತ ಹೇಳಿದ್ದೇನೇ?” ಒತ್ತಿ ಪ್ರಶ್ನಿಸಿದ್ದಳು ಮತ್ತೆ ಚಿನ್ನಮ್ಮ.
ನಾನು ‘ಅವರು’ ಎಂದು ಹೇಳಿದ್ದರಿಂದ ಚಿನ್ನಮ್ಮಗೆ ಸಂಶಯ ಉಂಟಾಯಿತೆಂದು ಊಹಿಸಿದಳು ಪೀಂಚಲು. ಏಕೆಂದರೆ, ತಾನು ತನ್ನ ಗಂಡನನ್ನು ಕುರಿತು ಹೆಚ್ಚಾಗಿ ಏಕವಚನದಲ್ಲಿಯೆ ಮಾತಾಡುತ್ತಿದ್ದುದು ರೂಢಿಯಾಗಿತ್ತು. ತನ್ನ ವಿನೋದ ವಿಷಾದಕ್ಕೆಲ್ಲಿ ಎಡೆಗೊಡುತ್ತದೆಯೆ ಎಂದು ಹೆದರಿಕೆಯಾಯ್ತು. ತನಗೂ ಮುಕುಂದ ಯ್ಯಗೂ ಏನೋ ದುಸ್ಸಂಬಂಧವಿದೆ ಎಂದು ಸುಳ್ಳು ಸುದ್ದಿ ಒಮ್ಮೆ ಹಬ್ಬಿದ್ದುದದರ ನೆನಪು ಬಂದು, ಆದಷ್ಟು ಶೀಘ್ರವಾಗಿ ತನ್ನ ಮಾತನ್ನು ಸರಸದ ಕಡೆಗೆ ತಿರುಗಿಸಬೇಕೆಂದು ಹವಣಿಸಿ ಪೀಂಚಲು: “ನೀವು ನಿಮ್ಮ ಗಂಡನ ಮಗ್ಗುಲಲ್ಲಿ ಮಲಗುತ್ತೀರಲ್ಲಾ, ಆವಾಗ ಹೇಳುತ್ತಾರೆ, ನಿಮಗೆ ಎಲ್ಲೆಲ್ಲಿ ಚಿಮಕಲು ಮಚ್ಚೆ ಇದೆ ಅಂತಾ!….”
“ಸೀರೆ ಉಟ್ಟುಕೊಂಡಿದ್ರೆ ಹೆಂಗೇ ಗೊತ್ತಾಗ್ತದೆ?” ಮುಗ್ಧೆ ಚಿನ್ನಮ್ಮನ ಪ್ರಶ್ನೆ.
ಪೀಂಚಲು ಕಿಸಕ್ಕನೆ ನಕ್ಕಳು. ಮತ್ತೆ ಹೇಳಿದಳೂ: “ಗಂಡನ ಮಗ್ಲಲ್ಲಿ ಮಲಗಿದ ಮ್ಯಾಲೆ ಎಲ್ಲ ಗೊತ್ತಾಗ್ತದೆ ಕಣ್ರೋ!”
“ನೀ ಗಂಡನ್ನ ಮಗ್ಲಲ್ಲೇ ಮಲಗಿಕೊಳ್ತೀಯೇನೇ? ಥೂ! ನಿನಗೆ ನಾಚಿಕೆ ಆಗೋದಿಲ್ಲೇನೇ?….”
“ನಾಚಿಕೆ ಮಾಡಿಕೊಂಡರೆ ಆಗ್ತದೇನು, ಚಿನ್ನಕ್ಕಾ? ನಾಚಿಕೆ ಮಾಡಿಕೊಂಡರೆ….” ತುಸು ಉಬ್ಬಿದ ತನ್ನ ಕಿಬ್ಬೊಟ್ಟೆಯ ಕಡೆ ಬೆರಳು ಮಾಡಿ ಕೇಳಿದಳು: “ಇದಾಗ್ತದೇನು?”
ಚಿನ್ನಮ್ಮ ಆಗತಾನೆ ಹಿಡಿದಿದ್ದ ಒಂದು ಏಡಿಯನ್ನು ಭದ್ರಮುಷ್ಟಿಯಲ್ಲಿ ಹಿಡಿದು ತಂದು, ಪೀಂಚಲು ಮುಂದಕ್ಕೊಡ್ಡಿದ್ದ ಬುಟ್ಟಿಗೆ ಹಾಕಲೆಂದು, ಅವಳಿಗೆ ತುಂಬ ಸಮೀಪ ಬಂದಿದ್ದಳು. ಏಡಿಯನ್ನು ಬುಟ್ಟಿಗೆ ಕೊಡಹುತ್ತಾ, ಪೀಂಚಲು ನಿರ್ದೇಶಿಸಿದ್ದ ಉದರ ಪ್ರದೇಶದ ಕಡೆಗೆ ಕಣ್ಣು ಹಾಯಿಸಿದಳು. ಮತ್ತೆ ಕೇಳಿದಳು: “ಅಲ್ಲಿ ಏನಾಗದೆಯೇ?”
“ಇನ್ನೊಂದು ನಾಲ್ಕೈದು ತಿಂಗಳು ತಡೀರಿ, ಆಮೇಲೆ ತೋರಿಸ್ತೀನೆ ಅಲ್ಲಿರೋದನ್ನ!
“ನಿಂಗೆ ಬಾಲೆ ಆಗ್ತದೇನೇ?”
“ನಾನು ಬಸಿರಿ ಕಣ್ರೋ!”
“ಹೆಂಗಾಯ್ತೇ”
“ಗಂಡನ ಮಗ್ಲಲ್ಲಿ ಬೆತ್ತಲೆ ಮಲಗಿದ್ರೆ….”
ಥೂ! ನೀ ಬೆತ್ತಲೆ ಮಲಗ್ತಿಯೇನೇ…. ದುರುದುಂಡೆಗೆ?”
“ಅಲ್ಲಾ, ಚಿನ್ನಕ್ಕಾ, ರಾತ್ರೆ ಗಂಡನ ಮಗ್ಲಲ್ಲಿ ಮಲಗಿಕೊಳ್ಳಾಗ, ಯಾರಾದ್ರೂ ಸೀರೆ ಉಟ್ಟುಕೊಂಡು ಮಲಗ್ತಾರೇನ್ರೋ?”
“ಹಂಗಾದ್ರೆ ನೀ ಸೀರೆ ಬಿಚ್ಚಿ ಹಾಕಿ ಬಿಡ್ತೀಯಾ?…. ದುರದುಂಡಗೆ?”
“ಹ್ಞೂ ಮತ್ತೆ? ಸೀರೆ ಬಿಚ್ಚಿ, ಮಡಚಿ, ತಲೆ ಅಡಿ ಇಟ್ಟು ಕೊಂಡು, ಐತನ ಕಂಬಳಿ ಒಳಗೇ ಹೊಕ್ಕೊಂಡು ಮಲಗ್ತೇನೆ! ನೀವು ಹೇಳೋ ಹಾಂಗೆ ದುರದುಂಡಗೆ ಹಿಹ್ಹಿಹ್ಹಿಹ್ಹಿ?…. ಅವನೂ ಹಾಂಗೇ ಮಲಗಾದು!….”
“ಅದಕ್ಕೆ ಮತ್ತೆ, ನಿನ್ನ ಮೈಯ್ಯಾಗ ಎಲ್ಲೆಲ್ಲಿದ್ದ ಮಚ್ಚೆ ಎಲ್ಲಾ ಕಾಣ್ಸಾದು!…. ನೀವು ಗಟ್ಟದ ತಗ್ಗಿನೋರೇ ಹಾಂಗೆ! ದುರದುಂಡಗೆ ಇರಾದೆ ನಿಮ್ಮ ಚಾಳಿ!”
“ಸುಮ್ಮನೆ ಮಲಗ್ತೀವಿ ಅಂತಾ ಮಾಡಿಕೊಂಡ್ರೇನು?” ಪೀಂಚಲು, ಹತ್ತಿರ ಬಂದಿದ್ದ ಚಿನ್ನಮ್ಮನ ಕಿವಿಯ ಹತ್ತಿರಕ್ಕೆ ಬಾಗಿ, ಇನ್ನೂ ಏನು ಏನನ್ನೋ ಹೇಳಿಬಿಟ್ಟಳು!
ಚಿನ್ನಮ್ಮನ ಕಿವಿ ಕೆನ್ನೆ ಗಲ್ಲ ಮುಖಮಂಡಲ ಎಲ್ಲ ಕೆಂಪಾಗಿ ಅವಳ ಹಣೆಗೆ ಬೆವರಿನ ತೇವವೇರಿತು! ಮುಖ ತಿರುಗಿಸಿ, ಸ್ವಲ್ಪ ದೂರಕ್ಕೆ ಹಿನ್ನೆಗೆದು ಸರಿದು, ಬೆನ್ನು ಮಾಡಿ ಗಟ್ಟಿಯಾಗಿಯೆ ಕೂಗಿಬಿಟ್ಟಳು: “ಥೂ!ಥೂ!ಥೂ! ಪೀಂಚ್ಲೇ, ನೀನು ಭಂಡಿ, ಜಗಭಂಡಿ!”
ಪೀಂಚಲು ಸ್ವಲ್ಪವೂ ಅಪ್ರತಿಭಳಾಗದೆ, ಚಿನ್ನಮ್ಮ ತಾನು ಹೇಳಿದ್ದನ್ನು ಒಳಗೊಳಗೆ ಸವಿಯುತ್ತಿದ್ದಾಳೆ ಎಂಬುದರಲ್ಲಿ ಲೇಶವೂ ಸಂಶಯವಿಲ್ಲದೆ, ನಗುತ್ತಾ ಹೇಳಿದಳು: “ಈಗ ಹೀಂಗ ಹೇಳ್ತೀರಿ. ನಾಳೆ ಮುಕುಂದಯ್ಯೋರೊ ನಿಮಗೂ ಹಾಂಗೇ ಮಾಡಿದಾಗ, ಅವರನ್ನು ಇನ್ನಷ್ಟು ಬಲವಾಗಿ ಅಪ್ಪಿಕೊಳ್ತೀರೋ ಇಲ್ಲೋ ನೋಡ್ತೀನಲ್ಲಾ? ನಿಮ್ಮ ಪರ್ಸ್ತ ಆದಮ್ಯಾಲಾದ್ರೂ, ನಂಗೆ ಹೇಳ್ತಿರಷ್ಟೆ?…. ಅವೊತ್ತಂತೂ ಹೊತಾರೆ ಮುಂಚೇನೆ ಬಂದು ಕೇಳೇಕೇಳ್ತೀನಲ್ಲ: ‘ಚಿನ್ನಕ್ಕಾ, ಯಾರು ಭಂಡರು? ಹೇಳಿ ಈಗ!’ ಅಂತಾ!”
ಅಂತಃಕರಣವೆಲ್ಲ ಓಕುಳಿಯಾಗಿ ಹೋಗಿದ್ದ. ಚಿನ್ನಮ್ಮ ಪೀಂಚಲು ಕಡೆಗೆ ತಿರುಗಲೂ ಇಲ್ಲ, ಮರುಮಾತಾಡಲೂ ಇಲ್ಲ. ನಾಚಿಕೆಯ ಸುಖರಸ ಅವಳನ್ನು ಮೂಕಗೈದಂತಿತ್ತು.
ಅದಕ್ಕೆ ಸರಿಯಾಗಿ, ಅವಳಿಗೆ ಅನುಕೂಲವಾಗಿಯೆ ಎಂಬಂತೆ, ದೂರದಲ್ಲಿ, ಗದ್ದೆಯ ಕೋಗಿನ ತುತ್ತತುದಿಯ ಅಂಚಿನ ಮೇಲೆ, ಕಾಡಿನ ಕಡೆಯಿಂದ ಯಾರೋ ಕೊಡೆ ಸೂಡಿಕೊಂಡು ಬರುತ್ತಿದ್ದುದು ಕಾಣಿಸಿತು. ಬರುತ್ತಿದ್ದವರು ಹೆಂಗಸರು ಎಂಬುದೂ ಗೊತ್ತಾಗುವಂತಿತ್ತು. ಕೊಡೆ ಸೂಡಿದ್ದ ಆ ಸ್ತ್ರೀ ವ್ಯಕ್ತಿಯ ಹಿಂದೆ ತುಸುದೂರದಲ್ಲಿ ಕಂಬಳಿ ಕೊಪ್ಪೆ ಹಾಕಿದ್ದ ಮತ್ತೊಂದು ವ್ಯಕ್ತಿ, ಅದು ಗಂಡಸೆಂಬುದೂ ಸುವ್ಯಕ್ತವಾಗಿತ್ತು, ನಡೆದುಬರುತ್ತಿದ್ದುದೂ ಕಾಣಿಸಿತು.
“ಅದು ಯಾರೇ ಅದು?….” ಚಿನ್ನಮ್ಮ ಕೇಳಿದಳು ಅತ್ತ ಕಡೆಯೇ ಕಣ್ಣಾಗಿ.
“ಕಮ್ಮಾರಸಾಲೆ ಪುಟ್ಟಾಚಾರ ತಂಗಿ ಇರಬೈದು”.
“ಅವಳು ಕಂಬಳಿ ಬಿಟ್ಟು, ಕೊಡೆ ಹಿಡುಕೊಂಡು ಬರುತ್ತಾಳೇನೆ?”
“ಅಯ್ಯೋ, ನಿಮಗೆ ಗೊತ್ತಿಲ್ಲ, ಚಿನ್ನಕ್ಕಾ; ಅವಳ ಗಂಡ ಸತ್ತ ಮೇಲೆ ಅವಳ ಕತೇನೆ ಬ್ಯಾರೆ ಆಗ್ಯಾದಂತೆ!….”
“ಛೆ ಅಲ್ಲ ಕಣೆ, ನಮ್ಮೋರ ಉಡುಗೆ ಉಟ್ಟಹಾಂಗೆ ಕಾಣ್ತದೆ?”
“ನಾನು ಉಡಾದಿಲ್ಲೇನು ನಿಮ್ಮ ಉಡುಗೇನ?” ಎಂದು ಅತ್ತಲೇ ಕಣ್ಣು ಸುಕ್ಕಿಸಿ ನೋಡತೊಡಗಿದ್ದ ಪೀಂಚಲು “ಹೌದು ಕಣ್ರೋ, ನೀವು ಹೇಳಿದ್ದು. ಯಾರೋ ಹೆಗಡ್ತಮ್ಮೋರನ್ನ ಕಂಡ ಹಾಂಗೇ ಕಾಣ್ತದೆ….” ಎಂದು ಮತ್ತೆಯೂ ಸ್ವಲ್ಪ ಹೊತ್ತು ನೋಡುತ್ತಿದ್ದು, ಆ ವ್ಯಕ್ತಿ ಹೆಚ್ಚು ಹೆಚ್ಚು ಸಮೀಪವಾಗುತ್ತಿರಲು, ತೆಕ್ಕನೆ ನುಡಿದಳು ಗುರುತು ಹಿಡಿದಂತೆ: “ಬೆಟ್ಟಳ್ಳಿ ದೇವಮ್ಮ ಹೆಗ್ಗಡ್ತೇರು ಕಣ್ರೋ! ಮುಕುಂದಯ್ಯೋರಕ್ಕಯ್ಯ! ಅವರ ನಡಿಗೆ ನೋಡಿದ್ರೆ, ಎಷ್ಟು ದೂರ ಇರಲಿ, ಗುರುತು ಸಿಕ್ಕೇ ಸಿಗ್ತದೆ!….”
“ಹೋಗೆ ಹೋಗೆ! ಈ ಮಳೇಲಿ ಹೀಂಗೆ ಕೊಡೆ ಹಿಡುಕೊಂಡು, ಗತಿಗೆಟ್ಟೋರು ನಡಕೊಂಡು ಬಂದ್ಹಾಂಗೆ ಬರಾಕೆ, ಬೆಟ್ಟಳ್ಳಿ ಅತ್ತಿಗಮ್ಮಗೆ ಅಂಥಾ ಕಡಿಮೆ ಆಗಿದ್ದೇನು? ಬರಾದಾದ್ರೆ ಗಾಡಿ ಕಟ್ಟಿಸಿಕೊಂಡು ಬರುತ್ತಿದ್ದರು…. ಮನ್ನೆ ಮನ್ನೆ ಗಾಡಿದಾರಿ ಬ್ಯಾರೆ ಮಾಡಿಸಿದಾರೆ….”
ಹಾಗೆ ಹೇಳುತ್ತಿದ್ದ ಹಾಗೆಯೆ ಚಿನ್ನಮ್ಮ ತನ್ನ ಕಣ್ಣನ್ನೆ ನಂಬಲಾರದಾದಳು! ಹತ್ತಿರಹತ್ತಿರಕ್ಕೆ ಬರುತ್ತಿದ್ದ ಆ ವ್ಯಕ್ತಿಯ ಗುರುತು ಚೆನ್ನಾಗಿಯೆ ಆಯಿತು: ಕೊಡೆ ಸೊಡಿಕೊಂಡು ಮುಂದೆ ಬರುತ್ತಿದ್ದವಳು – ಬೆಟ್ಟಳ್ಳಿ ದೇವಯ್ಯಗೌಡರ ಹೆಂಡತಿ, ದೇವಮ್ಮ ಹೆಗ್ಗಡತಿ! ಕಂಬಳಿ ಕೊಪ್ಪೆ ಹಾಕಿಕೊಂಡು ತುಸು ಹಿಂದೆ ಬರುತ್ತಿದ್ದವನು ಅವರ ಗಾಡಿಯಾಳು-ಹೊಲೆಯರ ಬಚ್ಚ.
ಮತ್ತೂ ನೋಡುತ್ತಾಳೆ: ಚೆನ್ನಮ್ಮ ದಿಗ್‌ಭ್ರಾಂತೆಯಾದಳು! ಶ್ರೀಮಂತರ ಮನೆಯ ಆ ಕುಲೀನ ನಾರಿ ನೆಂಟರ ಮನೆಗೆ ಹೋಗುವಾಗ ಉಟ್ಟು ತೊಟ್ಟುಕೊಳ್ಳುವಂತೆ ಉತ್ತಮ ಸೀರೆ ಉಟ್ಟಿರಲಿಲ್ಲ; ವಲ್ಲಿ ಧರಿಸಿರಲಿಲ್ಲ; ಒಡವೆ ಹಾಕಿರಲಿಲ್ಲ. ಕಡೆಗೆ ತಲೆಯನ್ನೂ ಬಾಚಿಕೊಂಡಿರಲಿಲ್ಲ!
ಇನ್ನೂ ಗಮನಿಸುತ್ತಾಳೆ: ಅತ್ತಿಗೆಮ್ಮನವರ ಮುಖದಲ್ಲಿ ಯಾವಾಗಲೂ ಉಕ್ಕಿತೋರುತ್ತಿದ್ದ ಗೆಲವೂ ಇಲ್ಲ. ಅತ್ತೂ ಅತ್ತೂ ಆಗತಾನೆ ಅಳು ನಿಲ್ಲಿಸಿದವರ ದುಃಖ ಮುಖಮುದ್ರೆ, ಅವರ ದಮನಪ್ರಯತ್ನವನ್ನೂ ಮೀರಿ, ಎದ್ದುತೋರುತ್ತಿದೆ. “ಅಯ್ಯೋ ದೇವ್ರೇ ಏನು ಕಷ್ಟಾ ಬಂತಪ್ಪಾ ದೇವಣ್ಣಯ್ಯುಗೆ? ಬಾಲೆ ಚೆಲುವಯ್ಯಗೆ ಏನಾದ್ರೂ….?” ತನ್ನೊಳಗೆ ತಾನೆಂದುಕೊಳ್ಳುತ್ತಿದ್ದ ಚಿನ್ನಮ್ಮಗೆ ಮುಂದೆ ಅಲೋಚನೆಯೆ ಹೊರಡಲಿಲ್ಲ. ಹೊಳವಾಗಿದ್ದರಿಂದ ಗೊರಬನ್ನು ತೆಗೆದು ತಾವು ಏಡಿ ಹಿಡಿಯುತ್ತಿದ್ದ ಗದ್ದೆಯ ಅಂಚಿನ ಮೇಲಿಟ್ಟು, ಪೂರಾ ಎತ್ತಿ ಕಟ್ಟಿಕೊಂಡಿದ್ದ ಸೀರೆಯನ್ನು ಸಡಿಲಿಸಿ ಕೆಳಗಿಳಿಸಿಕೊಂಡು, ತಳಾಲೆ ಸಹಿತವಾಗಿ ಅತ್ತಿಗಮ್ಮನನ್ನು ಇದಿರುಗೊಳ್ಳಲು ಓಡಿದಳು.
ಗದ್ದೆಯಂಚಿನ ಮೇಲೆ ತನ್ನ ಕಡೆಯೆ ಓಡಿ ಬರುತ್ತಿದ್ದ, ಹರ್ಷೋತ್ಸಾಹಗಳೆ ಮೂರ್ತಿಗೊಂಡಂತಿದ್ದ, ಸುಂದರ ತರುಣಿಯನ್ನು ಕಂಡೊಡನೆ ದೇವಮ್ಮನ ಮುಖದ ಮ್ಲಾನತೆ ನಾಚಿಯೆ ಹಿಂಜರಿಯಿತು. ಅಭ್ಯಾಸಬಲದ ಅರ್ಧಕೃತಕ ಮಂದಹಾಸವೊಂದು ತುಟಿಗಳಲ್ಲಿ ಮಲರಿತು: “ಏನೆ, ಚಿನ್ನೂ, ಇನ್ನೂ ಸಸಿ ನೆಟ್ಟು ಪೂರೈಸಲಿಲ್ಲೇನು?…. ಮನೇಲೆಲ್ಲ ಸುಖವಾಗಿದ್ದಾರಾ?…. ಅಜ್ಜಿ ಹ್ಯಾಂಗಿದ್ದಾರೆ?…. ತಮ್ಮಯ್ಯ (ಮುಕುಂದಯ್ಯನನ್ನು ಅವನ ಅಕ್ಕ ಕರೆಯುತ್ತಿದ್ದ ರೀತಿ) ಎಲಕ್ಲೂ ಕಾಣಾದಿಲ್ಲಲ್ಲಾ? ಗದ್ದೆಗೆ ಬರಲಿಲ್ಲೇನು ಇವೊತ್ತು? ಅವನ್ನೆ ಕಂಡು ಮಾತಾಡಿ, ಈಗಲೆ ಇಲ್ಲಿಂದಲೆ ಹಿಂದಕ್ಕೆ ಮನೀಗೆ ಹೋಗಾನ ಅಂತಾ ಬಂದೆ…. ಬಾಲೇನ ಅತ್ತೆಮ್ಮನ ಹತ್ರ ಬಿಟ್ಟು ಬಂದೀನಿ ಕಣೇ…. ಬ್ಯಾ ಗೋಗಬೇಕು…. ಅದಕ್ಕೇ ಬಚ್ಚನ್ನ ಕರಕೊಂಡು ಓಡ್ತಲೇ ಬಂದೆ…. ಯಾಕೆ ಹಿಂಗೆ ನೋಡ್ತೀಯ, ಬೆಚ್ಚಿಬಿದ್ದೋರ ಹಾಂಗೆ?….”ತಳಾಲೆ ಹಾಕಿಕೊಂಡೇ ತನಗೆ ಮುಟ್ಟಮುಟ್ಟ ನಿರುತ್ತರವಾಗಿ ನಿಂತಿದ್ದ ಚಿನ್ನಮ್ಮನ ತಲೆಗೆ ಕೈಹಾಕಿ ತಳಾಲೆಯನ್ನು ತೆಗೆಯುತ್ತಾ “ತಳಾಲೆ ತೆಗೆದುಬಿಡೆ; ನಿನ್ನ ಮುಖದ ಅಂದಾನೇ ಕೆಡಿಸ್ತದೆ….” ಕೆದರಿದ್ದ ಕೂದಲನ್ನು ನೀವಿ ಬೈತಲೆಯನ್ನು ಸರಿಗೊಳಿಸುತ್ತಾ…. “ನಿನ್ನಷ್ಟು ಚೆನ್ನಾಗಿ ಕಾಣೋರು ನಮ್ಮ ವಂಶದಲ್ಲೆ ಯಾರೂ ಇಲ್ಲ ಕಣೇ!…. ತಮ್ಮಯ್ಯ ಎಷ್ಟು ಪುಣ್ಯ ಮಾಡಿದ್ದನೋ….”
ಇನ್ನೂ ಏನೇನು ಹೇಳುತ್ತಿದ್ದಳೋ? ಕೇಳುತ್ತಿದ್ದಳೋ? ಆದರೆ ನೋಡುತ್ತಾಳೆ: ಚಿನ್ನಮ್ನ ಅಳತೊಡಗಿದ್ದಾಳೆ!
ಪ್ರಶ್ನೆಗಳ ಮೇಲೆ ಪ್ರಶ್ನೆ; ಉತ್ತರದ ನಿರೀಕ್ಷೆಯೆ ಇಲ್ಲ; ಒಂದು ವಿಷಯದಿಂದ ಮತ್ತೊಂದಕ್ಕೆ, ಅಸಂಬದ್ದ ವಿಷಯಕ್ಕೆ, ಹಾರುತ್ತಿವೆ! ಗಂಭೀರ ಪ್ರವೃತ್ತಿಯ ಬೆಟ್ಟಳ್ಳಿ ಅತ್ತಿಗೆಮ್ಮೆ ಹಿಂದೆಂದೂ ಹಾಗೆ ವರ್ತಿಸಿದ್ದನ್ನು ಚಿನ್ನಮ್ಮ ಕಂಡಿರಲಿಲ್ಲ. ಭಾವಪರವಶರಾಗಿ ನಾಲಗೆ ಸಡಿಲಗೊಂಡವರು ಮಾತಾಡುವಂತೆ ಆಡುತ್ತಿದ್ದುದನ್ನು ಕಂಡು ಚಿನ್ನಮ್ಮಗೆ ಮೊದಮೊದಲು ದಿಗಲಾಯ್ತು. ತನ್ನ ತಲೆಯ ತಳಾಲೆ ತೆಗೆದು, ಕೂದಲು ನೀವಿ, ಕೈ ಮುದ್ದು ಮಾಡಿ, ತನ್ನ ನಿರುಪಮ ಸೌಂದರ್ಯವನ್ನು ಕುರಿತು ಪ್ರಶಂಶಿಸಲು ತೊಡಗಿದೊಡನೆ ಅವಳಿಗೆ ತಡೆಯಲಾಗಲಿಲ್ಲ. ಏನೋ ಅನುಕಂಪೆಯ ಮರುಕ ಉಕ್ಕಿ ಬಂದಂತಾಗಿ, ತೊಟ್ಟಿಕ್ಕತೊಡಗಿದ್ದುವು ಕಣ್ಣೀರು!
“ಅಯ್ಯೋ ಹುಡುಗೀ, ಯಾಕೆ ಅಳ್ತೀಯೋ? ಬಾ ಹೋಗಾನ…. ಅಲ್ಲಿ ಯಾರು ಕೂತೋರು? ನಾಗಕ್ಕನಾ?” ಎನ್ನುತ್ತಾ ಚಿನ್ನಮ್ಮನೊಡನೆ ಮುಂದುವರಿದಳು ದೇವಮ್ಮ.
ಚಿನ್ನಮ್ಮಗೆ ಧೃತಿ ಬಂದಂತಾಗಿ, ತನ್ನ ತಲೆಗೆ ಆ ಕ್ಷಣದಲ್ಲಿ ಹೊಳೆದ, ದೇವಮ್ಮನ ಹಲವಾರು ಪ್ರಶ್ನೆಗಳಲ್ಲಿ ಒಂದು ಪ್ರಶ್ನೆಗೆಂಬಂತೆ ಉತ್ತರಿಸಿದಳು, ಹೆದಹೆದರಿ, ಮೆಲ್ಲಗೆ ಇಳಿದನಿಯಲ್ಲಿ: “ಅವರೂ…. ಗದ್ದೆಗೆ ಬಂದಿದ್ರು…. ಕೆಲಸ ಮುಗಿದಮ್ಯಾಲೆ, “ಮನೀಗೆ ಹೋಗಿಬರ್ತಿನಿ” ಅಂತಾ ಹೋದ್ರು”.
“ಮನೇಲಿದ್ದಾನಲ್ಲಾ? ಅಲ್ಲಿಗೇ ಹೋಗಾನ ಬಾ….”
“ಮನೇಲಿಲ್ಲ!”
“‘ಮತ್ತೆ ಮನೀಗೆ ಹೋಗಿಬರ್ತಿನಿ ಅಂತಾ ಹೋದ್ರು’ ಅಂದೆ?”
“ನಮ್ಮ ಮನೀಗಲ್ಲ, ಕೋಣೂರಿಗೆ?”
“ಇನ್ನು ಮ್ಯಾಲೆ ಕೋಣುರು ಹ್ಯಾಂಗೆ ಅವನ ಮನೆ ಆಗ್ತದ್ಯೇ? ಹೂವಳ್ಳೀನೆ ಅವನ ಮನೆ!…. ಅಲ್ಲೇನೇ?”.
ಚಿನ್ನಮ್ಮ ನಾಚಿಕೆಯಿಂದ ತಲೆಯೆತ್ತಲಿಲ್ಲ. ದೇವಮ್ಮ ಅವಳ ಗಲ್ಲವನ್ನು ಸವರುತ್ತಾ ಅಕ್ಕರೆಯ ದನಿಯಲ್ಲಿ ಹೇಳಿದಳು: “ಹೌದು!” ಅನ್ನು; ಯಾಕೆ ನಾಚಿಕೆ ಮಾಡಿಕೊಳ್ತೀಯ, ಚಿನ್ನೂ?”
ಅಂಚಿನ ಅರೆಕಲ್ಲಿನ ಮೇಲೆ ಹೊರಡಲನುವಾಗಿ ಎದ್ದುನಿಂತಿದ್ದ ನಾಗಕ್ಕನನ್ನು ಕೂಡಿಕೊಂಡು ಮೂವರೂ ಮನೆಯ ಕಡೆಗೆ ನಡೆದು ಕಣ್ಮರೆಯಾದ ತರುವಾಯವೆ ಪೀಂಚಲು, ಚಿನ್ನಮ್ಮ ಬಿಟ್ಟಿದ್ದ ಗೊರಬಿನ ಬಳಿಗೆ ಹೋಗಿ, ಅದನ್ನೂ ತನ್ನ ಗೊರಬಿನ ಜೊತೆಗೇ ಸೂಡಿಕೊಂಡು ಹೋಗುವ ಯೋಚನೆ ಮಾಡುತ್ತಿದ್ದಳು. ಅಷ್ಟರಲ್ಲಿ ಹರಟೆ ಹೊಡೆಯುತ್ತಿದ್ದ ಗಂಡಾಳುಗಳ ಗುಂಪೂ ಚೆದರಿ ತಮ್ಮ ತಮ್ಮ ಬಿಡಾರಗಳಿಗೆ ಹೊರಟಿದ್ದರು. ಐತ ಹೆಂಡತಿಯ ನೆರವಿಗೆ ಓಡಿ ಬಂದು ಚಿನ್ನಮ್ಮನ ಗೊರಬನ್ನು ತಾನೆ, ತನ್ನ ಕಂಬಳಿಕೊಪ್ಪೆಯ ಮೇಲೆಯೆ, ಸೂಡಿಕೊಂಡನು.
“ಬಚ್ಚ ಏನು ಹೇಳ್ತಿದ್ದನಲ್ಲಾ ನಿನ್ನ ಹತ್ರ?” ಪೀಂಚಲು ಕೇಳಿದಳು.
“ಗುತ್ತಿ ಎತ್ತಲಾಗಿ ಹೋದ?” ಅಂತಾ ಕೇಳ್ವ. “ನಂಗೇನು ಗೊತ್ತು?” ಅಂದೆ. “ಏನೇನು ಮಾಡ್ತೀರೊ ಮಾಡೀ ಮಾಡೀ. ನಾವೂ ನೋಡ್ತೀವಿ. ಬಡ್ಡೀಮಗ ಎಲ್ಲಿಗೆ ಹೋಗ್ತಾನೆ?” ಅಂತಾ ಹೇಳ್ತಾ ಹೋದ.
“ಆಗ ಯಾಕೆ ಅಷ್ಟೊಂದು ನಗ್ತಿದಲ್ಲಾ ನಿಮ್ಮ ಗುಂಪಿನಲ್ಲಿ? ನಮ್ಮ ಕಡೆನೇ ಕೈ ತೋರಿಸ್ತಿದ್ದ, ಯಾವನೋ ಒಬ್ಬ?” ಮನೆಯ ಕಡೆಗೆ ನಡೆಯುತ್ತಾ ಕೇಳಿದಳು ಪೀಂಚಲು.
“ಆ ಲೌಡೀಮಗ ತಿಮ್ಮ ಹುಡುಗ…. ತಮಾಸೆ ಅಂತಾ ಹೇಳ್ತಾನೆ: “ಐತಣ್ಣಗೆ ಇನ್ನೂ ಮೀಸೇನೆ ಬಂದಿಲ್ಲ; ಹುಡುಗ ಅಂತಾ ಮಾಡಿದ್ರೇ…. ಪರ್ವಾ ಇಲ್ಲ. ಕಸರತ್ತು ಮಾಡಿ, ಹುಡುಗೀಹೊಟ್ಟೇನ ಮುಂದಕ್ಕೆ ಬರಿಸೇಬಿಟ್ಟಾನೆ!” ಅಲ್ಲಿದ್ದೋರೆಲ್ಲ ನಗ್ತಾ ಇದ್ರು. ಮತ್ತೆ, ಇನ್ನೊಬ್ಬನ ಕಿವೀಲಿ ಹೇಳೋಹಾಂಗೆ, ನಂಗೂ ಕೇಳಿಸ್ಲಿ ಅಂತಾ ಹೇಳ್ತಾನೆ: ‘ಅವನೇ ಮಾಡಿದ್ದೋ?” ಇನ್ಯಾರು ಕೈ ಹಾಕಿದ್ರೋ? ಯಾರಿಗೆ ಗೊತ್ತು?’….”
“ಅವನ ಬಾಯಿಗೆ ನನ್ನ…. ಹಾಕ!…. ದೊಡ್ಡರೋಗ ಬಂದೇ ಸಾಯ್ತಾನೆ ನಾಯಿ ಮುಂಡೇದು!…. ಅವನು ಸಿಕ್ಕಲಿ ನನಗೆ? ಮುಖಕ್ಕೆ ಉಗಿದು ನೀರಿಳಿಸ್ದೆ ಇದ್ರೆ, ನಾನು ಐತನ ಹೇಂಡ್ತೀನೇ ಅಲ್ಲ!….”
“ನಾನೇನು ಸುಮ್ಮನೆ ಬಿಟ್ಟೆ ಅಂತಾ ಮಾಡ್ದೇನು? ಚೆನ್ನಾಗಿ ಅಂದು ಹೇಳ್ದೆ “ನೀನು ಇನ್ನೊಂದು ಸಾರಿ ಅಂಥಾ ಮಾತು ಆಡು, ನಿನ್ನ ರುಂಡಾ ಕತ್ತರಿಸದಿದ್ರೆ, ನಾನು ಪೀಂಚಲೂ ಅಲ್ಲ!….”
ಇಬ್ಬರೂ ಮನೆಗೆ ಸಮೀಪಿಸುತ್ತಿದ್ದಾಗ ಪೀಂಚಲು ಹೇಳಿದಳು ಐತನಿಗೆ “ಬೆಟ್ಟಳ್ಳಿ ಹೆಗ್ಗಡ್ತಮ್ಮೋರು ಯಾಕೋ ಒಂದು ತರಾ ಆಗಿದ್ರು. ಅವರು ಯಾವಾಗ್ಲೂ ಗಾಡೀಬಿಟ್ಟು ನೆಲಕ್ಕೆ ಕಾಲು ಮುಟ್ಟಿಸ್ದೋರೆ ಅಲ್ಲ, ಇವೊತ್ತು ನಡಕೊಂಡೇ ಬಂದು ಬಿಟ್ಟಾರೆ! ಒಂದು ಬಡ್ಡು ಸೀರೆ ಉಟ್ಟುಕೊಂಡು! ವಲ್ಲೀ ಕಟ್ಟಿಲ್ಲ! ತಲೇನೂ ಬಾಚಿಲ್ಲ! ಛೇ ಏನು ಕಷ್ಟ ಬಂದಿದೆಯೋ ಏನೋ?…. ನಮಗಂತೂ ಬಡೋರ ಕಷ್ಟ, ಇದ್ದೇ ಇರ್ತದೆ! ಈ ದೊಡ್ಡೋರಿಗೆ, ಪಾಪ, ಯಾಕೆ ಬರಬೇಕೋ ಕಷ್ಟ?”.
“ಅ ದೇವಯ್ಯಗೌಡ್ರು ಕಿಲಸ್ತರ ಜಾತಿಗೆ ಸೇರ್ತಾರೆ ಅಂತಿದ್ರು ಕಣೇ, ಅದರದ್ದೇ ಏನೋ ಇರಬೇಕು!…. ಅವರಿಗೆ ಏನು ಬಂದಿದೆಯೋ ಏನೋ ಆ ಹಾಳು ಜಾತಿಗೆ ಸೇರಾಕೆ? ಮುತ್ತಿನಂಥ ಹೆಂಡ್ತಿ ಮಕ್ಕಳು ಇರೋವಾಗ?”.
ಐತನ ಊಹೆ ಅವನು ಭಾವಿಸಿದುದಕ್ಕಿಂತಲೂ ಹೆಚ್ಚು ವಾಸ್ತವವಾಗಿತ್ತು.
ಅಜ್ಜಿಯೊಡನೆ ತನ್ನ ಕಷ್ಟ ಸಂಕಟಗಳೆಲ್ಲವನ್ನೂ ಹೇಳಿಕೊಳ್ಳುತ್ತಿದ್ದ ಬೆಟ್ಟಳ್ಳಿ ಅತ್ತಿಗೆಯ ಧಾರುಣ ದೈನ್ಯದ ಮಾತುಗಳನ್ನು, ಅಜ್ಜಿಯ ಸೆರಗು ಹಿಡಿದು ಅವಳ ಮೈಗೆ ಒತ್ತಿ ಹತ್ತೆ ಕುಳಿತು, ಆಲಿಸುತ್ತಿದ್ದ ಚಿನ್ನಮ್ಮನ ಹೃದಯ ಜಜ್ಜರಿತವಾಯಿತು. ತನ್ನ ಗಂಡನ ಇತರ ಎಲ್ಲ ಆಕ್ಷೇಪಣೀಯ ವರ್ತನೆಗಳನ್ನೂ, ಆಗಿನ ಕಾಲದ ಅವಿಭಕ್ತ ಕುಟುಂಬದ ಹಿಂದೂ ಸ್ತ್ರೀಗೆ ಸಹಜವಾಗಿದ್ದ ಅನಿವಾರ್ಯ ಮಹೌದಾರ್ಯದಿಂದ, ಕ್ಷಮಿಸಲು ಮಾತ್ರ ಅಲ್ಲದೆ ಒಪ್ಪಿಕೊಳ್ಳಲು ಸಿದ್ದವಾಗಿದ್ದ ದೇವಮ್ಮ ಆತನು ಮತಾಂತರಗೋಳ್ಳುವದನ್ನು ಮಾತ್ರ ಸಹಿಸಲು ಸಿದ್ಧಲಾಗಿರಲಿಲ್ಲ. ಆರ್ಷೇಯ ಕಾಲದಿಂದಲೂ ಬಂದಿದ್ದ ತನ್ನ ಪೂರ್ವಿಕರ ದೇವರುಗಳನ್ನಾಗಲಿ, ಆಚಾರಗಳನ್ನಾಗಲಿ, ಶ್ರದ್ಧೆಯನ್ನಾಗಲಿ, ಪೂಜೆ ಪುನಸ್ಕಾರ ರೀತಿಗಳನ್ನಾಗಲಿ, ಸಾಮಾಜಿಕ ಬಂಧು ಬಾಂಧವರನ್ನಾಗಲಿ, ಸಂಪ್ರದಾಯ ಸಂಸ್ಕೃತಿಗಳನ್ನಾಗಲಿ ತ್ಯಜಿಸಿ, ಲಂಗರು ಕಡಿದ ಹಡಗಿನಂತೆ ಕಾಣದ ಕಡಲಿಗೆ ಕೊಚ್ಚಿ ಹೋಗುವದು ಅವಳ ಜೀವಕ್ಕೆ ಒಪ್ಪಿಗೆಯಾಗಿರಲಿಲ್ಲ…. ಸಿಂಧುವಳ್ಳಿಯ ಚಿನ್ನಪ್ಪ ಗೌಡರು ಕಿಲಸ್ತರಾದ ಮೇಲೆ ಅವರ ಹೆಂಡತಿಗೆ ಒದಗಿದ್ದ ದುರಂತಗತಿಯ ವಿಚಾರವನ್ನು ಕೇಳಿದ್ದ ಅವಳಿಗೆ, ಗಂಡನನ್ನು ಮತಾಂತರ ಹೊಂದುವದಕ್ಕೆ ಬಿಡುವ ಮುನ್ನ ತಾನು ತನ್ನ ಶಿಶುವಿನೊಡನೆ ಮೃತ್ಯುವನ್ನಪ್ಪುವುದೆ ಶ್ರೇಯಸ್ಕರ ಎಂದು ತೋರಿತ್ತು. ತನ್ನ ಹಣೆಯ ಕುಂಕುಮದೊಡನೆ ತನ್ನ ಗಂಭೀರವಾದ ಹಿಂದೂ ಹೆಸರನ್ನೂ ಅಳಿಸಿ, ಕಿವಿಯಿಂದ ಕೇಳಬಾರದು ಅಂತಹ ಕುಲಗೆಟ್ಟ ಅಸಹ್ಯ ಹೆಸರನ್ನಿಡಿಸುವ ಆ ಮತಕ್ಕೆ ಸೇರುವುದರ ಬದಲು ಬೆಂಕಿಗೆ ಹಾರುವದೇ ಎಷ್ಟೋ ಸಹ್ಯವೊ ಸುಖಕರವೊ ಆಗಿ ಕಂಡಿತ್ತು. ತನ್ನ ಗಂಡನು ಪಾದ್ರಿಯ ಮಗಳೊಡನೆ ಸಂಬಂಧ ಬೆಳಸಿದ್ದಾನೆ ಎಂಬ ಗುಸುಗುಸು ಸುದ್ದಿ ಅವಳ ಕಿವಿಗೆ ಬಿದ್ದಿದ್ದಾಗ, ಗರತಿ ಹೆಣ್ಣು ಸಂಕಟಪಟ್ಟುಕೊಳ್ಳುವಂತೆ ದುಃಖಿಯಾಗಿದ್ದಳು. ಆದರೆ ‘ಗಂಡಸರ ಹಣೆಯ ಬರಹವೇ ಹಾಗೆ. ನನ್ನ ಗಂಡ ಒಬ್ಬನನ್ನೆ ಬೇರೆಯ ರೀತಿಯಲ್ಲಿ ನಡೆ ಎಂದರೆ ನಡೆಯುತ್ತಾನೆಯೆ? ಭಗವಂತೆ ನನ್ನ ತಾಳಿ ಕಡದಂತೆ ಕಾಪಾಡಿದರೆ ಸಾಕು!’ ಎಂದು ಸಮಾಧಾನ ತಂದು ಕೊಂಡಿದ್ದಳು. ‘ಅಂತಕ್ಕನ ಮಗಳು ಕಾವೇರಿಯೊಡನೆ ದೇವಯ್ಯಗೌಡರು ಶೃಂಗಾರ ವ್ಯವಹಾರಕ್ಕೆ ಕೈಹಚ್ಚಿದ್ದಾರೆ! ನಾನೆ ಕಣ್ಣಾರೆ ಕಂಡೆ!’ ಎಂಬರ್ಥದ ಮಾತನ್ನು ಅವರ ಗಾಡಿಯಾಳು ಬಚ್ಚನೆ ಅವಳಿಗೆ ಗುಟ್ಟಾಗಿ ಹೇಳಿ ಎಚ್ಚರಿಸಿದಾಗಲೂ ದುಃಖತಪ್ತೆ ದೇವಮ್ಮ ದೀನೆಯಾಗಿ “ದೇವರೆ, ಅವರು ತಮ್ಮ ಸಂತೋಷಕ್ಕೆ ಏನನ್ನಾದರೂ ಮಾಡಲಿ, ನನ್ನ ಮುತ್ತೈದೆತನ ಮಾತ್ರ ದೀರ್ಘಾಯುವಾಗುವಂತೆ ಕರುಣಿಸು” ಎಂದು ಗಂಡನ ಆರೋಗ್ಯ ಯೋಗಕ್ಷೇಮಗಳಿಗಾಗಿ ಕಾತರೆಯಾಗಿದ್ದಳಷ್ಟೆ! ಏಕೆಂದರೆ ಆಗಿನ ಕಾಲದಲ್ಲಿ, ಕನ್ನಡ ಜಿಲ್ಲೆಯಲ್ಲಿಯೂ ಮತ್ತು ಕನ್ನಡ ಜಿಲ್ಲೆಯ ಸಂಪರ್ಕವೆ ಹೆಚ್ಚಾಗಿರುತ್ತಿದ್ದ ಮಲೆನಾಡಿನಲ್ಲಿಯೂ, ಸಿರಿವಂತರಾದವರು ತಮ್ಮ ಪುರುಸೊತ್ತಿನ ಮತ್ತು ಕೊಬ್ಬಿನ ಸೋಮಾರಿತನದ ಬೇಸರವನ್ನು ಪರಿಹರಿಸಿ ಕೊಳ್ಳಲು, ತಾವು ಹೋದಲ್ಲೆಲ್ಲಾ, ರಾತ್ರಿ ತಂಗಬೇಕಾದ ಸ್ಥಳಗಳಲ್ಲಿ, ಅಂತಹ ‘ಹಾಸಿಗೆ ಅನುಕೂಲ’ ಕಲ್ಪಿಸಿಕೊಂಡು, ರಸಿಕ ಜೀವನ ನಡೆಸುತ್ತಿದ್ದದ್ದು ಸಮಾನಸ್ಕಂಧರ ಪ್ರಶಂಸೆಗೂ ಗೌರವಕ್ಕೂ ಪಾತ್ರವಾಗಿತ್ತು. ಅಷ್ಟೆ ಅಲ್ಲ; ಎಷ್ಟಷ್ಟು ಅಧಿಕ ಸಂಖ್ಯೆಯ ಶಯ್ಯಾನುಕೂಲಗಳನ್ನು ಇಟ್ಟುಕೊಂಡಿದ್ದರೆ ಅಷ್ಟಷ್ಟೂ ದೊಡ್ಡ ಮನುಷ್ಯರು ಎಂದು ಜನರು ಭಾವಿಸುತ್ತಿದ್ದ ಕಾಲವಾಗಿತ್ತು ಅದು! ಪರಿಸ್ಥಿತಿಯೆ ಹಾಗಿರುವಲ್ಲಿ ತನ್ನ ಗಂಡ, ಮೇಗರವಳ್ಳಿ ಅಂತಕ್ಕನ ಮಗಳು ಕಾವೇರಿಯನ್ನು, ಒಂದು ಹಾಸಗೆಯ ಅನುಕೂಲವಾಗಿ, ಇಟ್ಟುಕೊಂಡರೂ ಇಟ್ಟುಕೊಳ್ಳಲಿ! ಎಂದು ಆ ಕಹಿಸುದ್ದಿಯನ್ನು ನುಂಗಿಕೊಂಡಿದ್ದಳು ದೇವಮ್ಮ ಹೆಗ್ಗಡತಿ. ಆದರೆ ಈಗ ಪ್ರಸ್ತುತವಾಗಿದ್ದ ತನ್ನ ಗಂಡನ ಮತಾಂತರದ ವಾರ್ತೆ ತನ್ನ ಸಾವು ಬದುಕಿನ ಕಟ್ಟ ಕಡೆಯ ಗಂಡಾಂತರವಾಗಿದ್ದುದರಿಂದ ಅದನ್ನು ತನ್ನ ತಮ್ಮ ಮುಕುಂದಯ್ಯನಿಗೆ ತಿಳಿಸಿ, ತನ್ನ ಗಂಡನ ಅತ್ಯಂತ ಆಪ್ತಮಿತ್ರನಾಗಿದ್ದ ಅವನಿಂದಾದರೂ, ತನಗೆ ಒದಗಲಿದ್ದ ಮಹಾಘೋರ ಹಾನಿಯನ್ನು ತಡೆಗಟ್ಟಲೆಂದು ಹೂವಳ್ಳಿಗೆ ಧಾವಿಸಿ ಬಂದಿದ್ದಳು, ಉಟ್ಟ ಬಟ್ಟೆ ಬಿಟ್ಟ ಮಂಡೆಯಾಗಿ!
ಕತ್ತಲಾದ  ಮೇಲೆ ಚಿನ್ನಮ್ಮ ಮತ್ತೆ ಮತ್ತೆ ಮನೆಯ ಹೆಬ್ಬಾಗಿಲಿನ ಬಳಿಗೆ ಹೋಗಿ ಹಾದಿಯ ಕಡೆ ನೋಡಿ ನೋಡಿ ಬಂದಳು. ಕೋಣೂರಿಗೆ ಹೋಗಿದ್ದ ಮುಕುಂದಬಾವಗೆ, ಆತನು ಹಿಂತಿರುಗಿದೊಡನೆ ಬೆಟ್ಟಳ್ಳಿ ಅತ್ತಿಗೆಮ್ಮನ ಕಷ್ಟದ ಸುದ್ದಿಯನ್ನು ಆದಷ್ಟು ಬೇಗ ತಿಳಿಸಿ, ಅದಕ್ಕೆ ಪರಿಹಾರ ಒದಗಿಸಬೇಕೆಂಬುದೆ ಅವಳ ಉತ್ಕಟಾಕಾಂಕ್ಷೆಯಾಗಿತ್ತು. ಅವಳಿಗೆ ಅರ್ಥವೆ ಆಗಿರಲಿಲ್ಲ: ತಾನು ಕಂಡಿದ್ದ ಮತ್ತು ತಿಳಿದಿದ್ದ ದೇವಣ್ಣಯ್ಯ ಅತ್ತಿಗಮ್ಮನಂತಾ ತನ್ನ ಹೆಂಡತಿಗೆ ಹೇಗೆ ಅಂಥಾ ದುಃಖ ತಂದೊಡ್ಡಿ ಕಷ್ಟಕೊಡಬಲ್ಲನು?
ತುಂಬ ಕತ್ತಲೆಯಾದ ಮೇಲೆಯೂ ಮುಕುಂದಯ್ಯ ಬಾರದಿರಲು, ಅವಳಿಗೆ ಚಿಂತೆ ಹತ್ತಿತ್ತು: ಕೋಣೂರಿನಲ್ಲಿಯೆ ಉಳಿದುಬಿಡುತ್ತಾರೆಯೋ? ಇಲ್ಲವೆ, ದಾರಿಯಲ್ಲಿ ಏನಾದರೂ ತೊಂದರೆಗೆ ಸಿಕ್ಕೆ ಹೊತ್ತಾಗಿದೆಯೋ? ಅಥವಾ ಅಣ್ಣತಮ್ಮಂದಿರಲ್ಲಿ ಹಿಸ್ಸೆಯ ವಿಚಾರವಾಗಿ ಮಾತಿಗೆ ಮಾತು ಘರ್ಷಿಸಿ ಏನಾದರೂ ಆಗಿರಬಹುದೇ? ‘ನಾನು ಹೇಳಿದೆ, ಇಷ್ಟು ಬೈಗಾದ ಮೇಲೆ ಕೋಣೂರಿಗೆ ಹೋಗಾದ ಬ್ಯಾಡಾ; ಬರಾಗ ಕತ್ತಲಾಗಿಬಿಡ್ತದೆ’ ಅಂತಾ. ‘ಭರ್ದಂಡು ಹೋಗಿ ಬಂದುಬಿಡ್ತೀನಿ, ಒಂದು ಎಲೆ’ ಡೆಕೆ ಹಾಕೋ ಹೊತ್ತಿನಲ್ಲಿ! ಐಗಳು ಬಂದರೋ ಏನೋ? ಯಾವಾಗ ಬರ್ತಾರೆ ಅಂತಾ ವಿಚಾರಿಸಿಕೊಂಡು ಬರ್ತಿನಿ…. ಅಲ್ಲದೆ, ಅವ್ವನ್ನ ನೋಡದೆ ಎರಡು ಮೂರು ದಿನಾನೇ ಆಯ್ತು!’ ಅಂತಾ, ನನ್ನ ಮಾತನ್ನ ತಟ್ಟಿಹಾರಿಡಿ ಹೋದರಲ್ಲಾ? ಹಿಂಗೆ ದಿನಾ ಏನಾದರೂ ಒಂದು ಮಾಡ್ತಾನೆ ಇರ್ತಾರೆ! ಯಾರಿಗೆ ಹೇಳ್ಲಿ ನನ್ನ ಗೋಳನ್ನ? ಹೆಂಗೆ ಹೇಳಾದು, ನಾಚಿಕೆಬಿಟ್ಟು?
ಚಿನ್ನಮ್ಮ ಚಿಂತಿಸುತ್ತಿದ್ದಂತೆಯೆ ದೊಂದಿಯ ಬೆಳಕು ಹಿಂದಕ್ಕೂ ಮುಂದಕ್ಕೂ ಆಡುತ್ತಾ ಮನೆಯ ಕಡೆಗೆ ಬರುತ್ತಿದ್ದುದು ಕಾಣಿಸಿತು. ಚಿನ್ನಮ್ಮ ಓಡುತ್ತಲೆ ಹೋಗಿ ಬಾವನಿಗೆ ಕೈಕಾಲು ತೊಳೆದುಕೊಳ್ಳಲು ಬಿಸಿನೀರು ತಂದಿಟ್ಟಳು. ಗದ್ದೆಯ ಕೆಲಸದ ಕೆಸರು ಇನ್ನೂ ಅಲ್ಲಲ್ಲಿ ಮೈಗೆ ಮುಖಕ್ಕೆ ಅಂಟಿ ಕೊಂಡಿದ್ದ ಮುಕುಂದಯ್ಯ, ತನ್ನ ಮೋಹಿನಿಯ ವದನಾರವಿಂದದ ಕಡೆಗೆ ಆಗಾಗ ದೃಷ್ಟಿಪ್ರಸಾರಮಾಡುತ್ತಾ, ಮಳೆಗಾಲಿ ನೀರು ಕೆಸರುಗಳಲ್ಲಿ ದುಡಿದು ದಣಿದಿದ್ದ ಮೈಗೆ ಬಿಸಿನೀರಿನ ಬಿಸುಪು ನೀಡುತ್ತಿದ್ದ ಸುಖವನ್ನು ಆಸ್ವಾದಿಸುತ್ತಾ, ಕೈಕಾಲು ತೊಳೆದುಕೊಂಡು ಜಗಲಿಗೆ ಏರಿದನು.
ಎಂದಿನಂತೆ ಒಳಗೆ ಹೋಗದೆ, ತಾನು ಕೈಕಾಲು ಮುಖ ಒರಸಿಕೊಳ್ಳುತ್ತಿದ್ದುದನ್ನೆ ನೋಡುತ್ತಿರುವಂತೆ, ತನ್ನೆಡೆಯೆ ನಿಂತುಬಿಟ್ಟಿದ್ದ ಚಿನ್ನಮ್ಮನ ಕಡೆಗೆ ಪ್ರೇಮಮಯ ಪ್ರಶ್ನದೃಷ್ಟಿ ಬೀರಿದ ಮುಕುಂದಯ್ಯಗೆ:
“ಅತ್ತಿಗೆಮ್ಮ ಬಂದಾರೆ, ಬೆಟ್ಟಳ್ಳಿಯಿಂದ!” ಚಿನ್ನಮ್ಮನೆಂದಳು.
“ಆ? ಏನು? ಯಾರು?” ಆಶ್ಚರ್ಯವಿತ್ತು ಬಾವನ ಪ್ರಶ್ನೆಗಳಲ್ಲಿ.
“ಬೆಟ್ಟಳ್ಳಿ ಅತ್ತಿಗೆಮ್ಮ ಬಂದಾರೆ!….” ಮತ್ತೆ ಹೇಳಿದಳು ಚಿನ್ನ.
“ಅಕ್ಕಯ್ಯನೇನೇ?”
“ಹ್ಞೂ!”
“ಮತ್ತೆ ಗಾಡಿ ಎಲ್ಲಿ? ಕಾಣಿಸಲಿಲ್ಲ?”
“ಗಾಡೀಲಿ ಬರಲಿಲ್ಲ; ನಡಕೊಂಡೇ ಬಂದ್ರು!”
“ಬಾವ ಬಂದಾರೇನು?”
“ಇಲ್ಲ!”
“ಮತ್ತೆ ಅಕ್ಕಯ್ಯ ಯಾರ ಸಂಗಡ ಬಂತೇ?”
“ಬಚ್ಚನ್ನ ಕರಕೊಂಡು ಬಂದಾರೆ.”
ಚಿನ್ನಮ್ಮನ ಕಣ್ಣಿನಲ್ಲಿದ್ದು ಧ್ವನಿಯಲ್ಲಿಯೂ ವ್ಯಕ್ತವಾಗುತ್ತಿದ್ದ ಏನೋ ದಿಗಿಲನ್ನು ಕಂಡು ಮುಕುಂದಯ್ಯನಿಗೂ ದಿಗಿಲಾಯ್ತು. ಅವನ ಐಹೆ ನಾನಾ ಭಯಾನಕ ಮಾರ್ಗಗಳಲ್ಲಿ ಮಿಂಚಿನಂತೆ ಸಂಚರಿಸಿತು: ಕಲ್ಲಯ್ಯ ಮಾವನಿಗೂ, ಅತ್ತೆಮ್ಮಗೊ, ದೇವಯ್ಯಗೊ ಅಥವಾ ಶಿಶು ಚೆಲುವಯ್ಯಗೂ? ಯಾರಿಗೆ ಏನು ಆಗಿದೆಯೋ? ಕೇಳಿದನು, ಬೇಗಬೇಗನೆ ಕಾಲೊರಸಿಕೊಂಡು:
“ಎಲ್ಲಿದೆಯೆ ಅಕ್ಕಯ್ಯ?”
“ಒಳಗೆ ಅಜ್ಜಿ ಹತ್ರ ಮಾತಾಡ್ತಿದ್ದಾರೆ.”
ಮುಕುಂದಯ್ಯ ಒಳಗೆ ಓಡುತ್ತಲೆ ಹೋದನು, ಚಿನ್ನಮ್ಮನನ್ನು ಹಿಂದೆ ಹಾಕಿ. ಅಕ್ಕನ ದುಃಖಕಾರಣವನ್ನೆಲ್ಲ ಆಲಿಸಿದ ಮೇಲೆ, ದುಃಖಿಸುವ ಅಕ್ಕನಿಗಾಗಿ ಅನುಕಂಪಿಸಿದರೂ, ಆ ದುಃಖದ ವಿಷಯದಲ್ಲಿ ಲಘು ಹೃದಯಿಯಾಗಿ ಆಕೆಯನ್ನು ಸಂತೈಸಿದನು:
“ನಿನಗೆ ಯಾರು ಈ ಸುಳ್ಳು ಸುಳ್ಳು ಸುದ್ದೀನೆಲ್ಲ ಹೇಳ್ದೋರು? ನಾವೆಲ್ಲ ಸತ್ತೇ ಹೋದೆವು ಅಂತಾ ಮಾಡಿಕೊಂಡೇನು, ಆ ಪಾದ್ರಿ ನಿನ್ನ ಗಂಡನ್ನ ಅವನ ಜಾತಿಗೆ ಸೇರಿಸಿಕೊಳ್ಳಾಕೆ?….”
“ಆ ಬಚ್ಚನ್ನೆ ಕೇಳು; ಎಲ್ಲ ಹೇಳ್ತಾನೆ, ಇಲ್ಲೇ ಇದಾನಲ್ಲಾ.”
“ಅವನ ಮುಂಡಾಮೋಚ್ತು! ಶನಿ ಸೊಳೇಮಗ! ಕಿತಾಪತಿ ತಂದು ಹಾಕೋದರಲ್ಲಿ ಎತ್ತಿದ ಕೈ ಅಂವ….”
“ನೀ ಸುಮ್ಮ ಸುಮ್ಮನೆ ಅವನ್ಯಾಕೆ ಅಂತೀಯೆ” ಮೊನ್ನೆ ಅವನ್ನೂ ತೀರ್ಥಹಳ್ಳಿಗೆ ಕರಕೊಂಡು ಹೋಗಿ ಕಿಲಸ್ತರ ಜಾತಿಗೆ ಸೇರಿಸಿದ್ರಂತಲ್ಲ, ತೀರ್ಥಕೊಡಿಸಿ!”
“ಎಲ್ಲಿದ್ದಾನೇ ಅಂವ?” ಮುಕುಂದಯ್ಯ ಚಿನ್ನಮ್ಮನ ಕಡೆ ನೋಡುತ್ತಾ ಕೇಳಿದನು. ಅವನಿಗೆ ನಿಜವಾಗಿಯೂ ಸುದ್ದಿ ಹೊಸದಾಗಿತ್ತು.
ದೂರದಲ್ಲಿದ್ದ ನಾಗಕ್ಕ “ಐತನ ಹತ್ರ ಮಾತಾಡ್ತಿದ್ದನಪ್ಪಾ, ಆಗ ಸೌದೆ ಕೊಟ್ಟಿಗೇಲಿ ಅವನ ಬಿಡಾರದ ಹತ್ರ….” ಎಂದಳು.
ಬಚ್ಚನಿಗೆ ಜಗಲಿ ಮುಂದಿನ ಕೆಳಗರಡಿಗೆ ಬರುವಂತೆ ಹೇಳಿ ಕಳಿಸಿ, ಮುಕುಂದಯ್ಯ ವಿಚಾರಿಸಿದನು:
“ಹೌದೇನೋ? ನೀನು ಕಿಲಸ್ತರ ಜಾತಿಗೆ ಸೇರಿದ್ದು?”
“ನಂಗೇನು ಗೊತ್ತಯ್ಯಾ, ಬರಾವು ಬರದ ಮೂಳಗೆ?” ತಲೆ ಕೆರೆದುಕೊಳ್ಳುತ್ತಾ ಮೈ ಮುದುಗಿಸಿ ನಿಂತಿದ್ದನು ಬಚ್ಚ.
“ಮತ್ತೆ ಅಕ್ಕಯ್ಯನ ಹತ್ರ ಬೊಗಳಿದಂತ್ಯಲ್ಲೋ?” ಬಚ್ಚನ ಅತಿ ವಿನಯದ ನಟನೆಯನ್ನು ಸಹಿಸಲಾಗದೆ ಸ್ವಲ್ಪ ಕಟುವಾಗಿಯೆ ಕೇಳಿದನು ಮುಕುಂದಯ್ಯ.
“ಆವೊತ್ತು ತೀರ್ಥೋಳ್ಳಿಗೆ ಗಾಡಿ ಹೊಡುಕೊಂಡು ಹೋಗಿದ್ದಾಗ, ಪಾದ್ರಿ ಮನೇಲಿ, ಸಣ್ಣಗೌಡ್ರು ಹೇಳಿದ್ರು, ‘ತೀರ್ಥ ತಗಾ’ ಅಂತಾ…. ಎಂಥದೋ ಉಂದಿಷ್ಟು ನೀರು ಹುಯದ್ರು ನನ್ನ ಕೈಗೆ ಆ ಪಾದ್ರಿ, ಪಸ್ತಗ ತಗೊಂಡು ಏನೇನೋ ಓದಿದ್ರು. ‘ನೀನಿನ್ನು ಕಿಲಸ್ತ್ರ ಆದೆ’ ಅಂದ್ರು. ‘ನಿನ್ನ ಹೆಸರು ಜಕ್ರಪೈಯ್ಯ’ ಅಂದ್ರು. ‘ನೀನಿನ್ನು ಹೊಲೇರಂವ ಅಲ್ಲ; ಬಿರಾಂಬ್ರ ಮನಿಗಾಗ್ಲಿ, ಗೌಡ್ರ ಮನಿಗಾಗ್ಲಿ ಹೋದ್ರೆ, ಅಂಗಳದಾಗೆ ನಿತ್ಗೂಬ್ಯಾಡ, ಜಗ್ಲೀಗ ಹೋಗಿ ಕೂತ್ಗಾ’ ಅಂದ್ರು…. ಸಣ್ಣ ಗೌಡ್ರು ನಾ ತಗೊಂಡ ಮ್ಯಾಲೆ ತೀರ್ಥ ತಗೋತೀನಿ ಅಂದವ್ರೋ, ತಗೊಂಡ್ಲೇ ಇಲ್ಲ!…. ಅವರಿಗೆ ಮೇಗ್ರೊಳ್ಳಿ ಇಸ್ಕೂಲಿನಾಗೆ ತೀರ್ಥ ಕೊಡ್ತಾರಂತೆ, ದೊಡ್ಡಪಾದ್ರಿ ಅದಾರಲ್ಲಾ, ಆ ಬಿಳೀಪಾದ್ರಿ, ಅವರೇ ಸಿಮೊಗ್ಗಾದಿಂದ ಬಂದು, ಅವರನ್ನು ಜಾತೀಗೆ ಸೇರಿಸ್ಗೊತಾರಂತೆ….”
ಕೇಳಬೇಕಾದ ಪ್ರಶ್ನೆಗಳನ್ನೆಲ್ಲ ಕೇಳಿ ಬಚ್ಚನಿಂದ ಉತ್ತರ ಪಡೆದ ಮೇಲೆ ಮುಕುಂದಯ್ಯ ಆಜ್ಞೆ ಮಾಡಿದನು: “ನೀನಿಷ್ಟು ಈಗಲೇ ಉಂಡು ಕೊಂಡು, ಕೂಡ್ಲೆ ಬೆಟ್ಟಳ್ಳಿಗೆ ಹೋಗಿ, ನಾ ಹೇಳ್ದ ಅಂತಾ ಹೇಳಿ, ಗಾಡಿ ಕಟ್ಟಿಕೊಂಡು, ರಾತ್ರಾರಾತ್ರಿ ಬಂದು ಬಿಡಬೇಕು. ಕಮಾನುಗಾಡಿ! ಗೊತ್ತಾಯ್ತಾ ಸಣ್ಣಗೌಡ್ರಿಗೂ ಹೇಳು, ಬರಾಕೆ ಹೇಳಿದ್ರೂ ಅಂತಾ”.
“ಅವರು ಮನೇಲಿ ಇರಲಿಲ್ಲಾ, ನಾವು ಬರಾಗ”.
“ಗದ್ದೆಗೆ ಹೋಗಿದ್ರೇನೋ?”
“ಅಲ್ಲ ಮೇಗ್ರೊಳ್ಳಿಗೆ!” ಎಂದವನು ತಡೆದು ಮುಂದುವರಿದು “ಕಾವೇರಮ್ಮಗೆ…. ಆ ಕರ್ಮೀನಸಾಬ್ರು ತಮ್ಮ ಪುಡಿಸಾಬ್ರು, ಚೀಂಕ್ರ….” ಎಂದು ಅರ್ಧಕ್ಕೇ ಮಾತು ನಿಲ್ಲಿಸಿ, ಕೆಮ್ಮಿ, “ಏನೇನೋ ಹೇಳ್ತಿದ್ರಪ್ಪಾ! ನಂಗೆ ಸರಿಯಾಗಿ ಗೊತ್ತಿಲ್ಲರಯ್ಯಾ!” ಎಂದು ನಿಲ್ಲಿಸಿಯೆ ಬಿಟ್ಟನು.
ಆ ವಿಚಾರ ಅಲ್ಪಸ್ವಲ್ಪ ಮುಕುಂದಯ್ಯನ ಕಿವಿಗೂ ಬಿದ್ದಿತ್ತಾದ್ದರಿಂದ ಮುಂದೆ ಏನನ್ನೂ ಕೇಳು ಹೋಗದೆ, “ಅವರು ಮೇಗರೊಳ್ಳಿಯಿಂದ ಮನೀಗೆ ಬಂದಿದ್ದರೆ, ನಾ ಹೇಳಿದ್ದನ್ನು ಹೇಳು…. ನಡೀ ಈಗ….” ಎಂದನಷ್ಟೆ.
ತನ್ನ ಅಕ್ಕಯ್ಯನನ್ನು ಆದಷ್ಟು ಬೇಗನೆ ನೆಮ್ಮದಿಯಾಗಿ ಗಾಡಿಯ ಮೇಲೆ ಬೆಟ್ಟಲ್ಲಳಿಗೆ ಕರೆದುಕೊಂಡು ಹೋಗಿ ಬಿಟ್ಟು ಬರುವುದೆ ಮುಕುಂದಯ್ಯನ ಮೊದಲು ಉದ್ದೇಶವಾಗಿತ್ತು. ತಾಯಿಯನ್ನು ಎಂದೂ ಬಿಟ್ಟಿರಿದ ಶಿಶು ಚೆಲುವಯ್ಯನ ರೋದನ ಅವನ ಒಳಕಿವಿಗೆ ಕೇಳಿಸುತ್ತಿತ್ತೊ ಏನೊ!
ಪಾದ್ರಿಯ ಮಗಳೊಡನೆ ಬೆಟ್ಟಳ್ಳಿ ದೇವಯ್ಯ ಗೌಡರ ಪ್ರಣಯ ವ್ಯವಹಾರ ದೇಹ ಸಂಬಂಧದವರೆಗೂ ಮುಂದುವರಿದಿತ್ತು. ಅಂತಹ ಅನೇಕ ದೇಹ ಸಂಬಂಧಗಳಿದ್ದ ಸಿರಿವಂತ ಗೌಡರ ಆ ಯುವಕನಿಗೆ ಪಾದ್ರಿಯ ಮಗಳ ಅಂತಹ ಸಂಬಂಧ ಹತ್ತರಲ್ಲಿ ಹನ್ನೊಂದಾಗಿತ್ತು, ಅಷ್ಟೆ. ಅದನ್ನೊಂದು ಗುರುವಿಷಯವೆಂದು ಅವನು ಮೊದಮೊದಲು ಭಾವಿಸಿರಲಿಲ್ಲ. ಆದರೆ ಕ್ರೈಸ್ತನಾಗಿದ್ದ ಉಪದೇಶಿ ಜೀವರತ್ನಯ್ಯ ತನ್ನ ಮಗಳ ಕನ್ಯಾತ್ವಹರಣವನ್ನು ಲಘುವಾಗಿ ಭಾವಿಸಲು ಸಿದ್ಧನಿರಲಿಲ್ಲ. ಜೊತೆಗೆ, ಆ ಘಟನೆ ಒಬ್ಬ ಮನೆ ತನಸ್ಥ ಯುವಕನನ್ನು ಕ್ರೈಸ್ತ ಮತಕ್ಕೆ ಸೆಳೆಯುವ ಅವಕಾಶ ಒದಗಿಸಲು, ಅದನ್ನು ಬಿಟ್ಟುಕೊಡುತ್ತಾನೆಯೆ? ತನ್ನ ಮತಕ್ಕೂ ವೃತ್ತಿಗೂ ಅಲ್ಲದೆ, ವೈಯಕ್ತಿಕವಾಗಿಯೂ ತನಗೂ ಮತ್ತು ತನ್ನ ಮಗಳಿಗೂ ಲಾಭಕರವಾಗಿರುವಾಗ, ಎರೆ ನುಂಗಿ ಗಾಳಕ್ಕೆ ಸಿಕ್ಕಿದ ಮೀನನ್ನು ದಡಕ್ಕೆಳೆಯದೆ ಬಿಡುವಷ್ಟು ಎಗ್ಗನಾಗಿರಲಿಲ್ಲ ಅವನು. ಜಾತಿಗೆ ಸೇರಿದರೆ ಮಾತ್ರ ಆ ಸಮಸ್ಯೆ ಹೆಚ್ಚು ತೊಂದರೆಯುಂಟುಮಾಡದೆ ಸುಸೂತ್ರವಾಗಿ ಪರಿಹಾರವಾಗುತ್ತದೆ ಎಂದು ದೇವಯ್ಯನನ್ನು ಬಲಾತ್ಕರಿಸತೊಡಗಿದ್ದನು. ನುಣ್ಣನೆಯ ಮಾತಿನ ಒಳಗೇ ಬೆದರಿಕೆಯನ್ನೂ ಹಾಕಿದ್ದನು.
ತಾನು ಎಂತಹ ಅಪಾಯಭೂಯಿಷ್ಠವಾದ ಕೆಂಜಿಗೆಯ ಹಿಂಡಲಿನೊಳಗೆ ನುಗ್ಗಿ ಸಿಕ್ಕಿಬೆದ್ದಿದ್ದೇನೆ ಎಂಬ ಅರಿವು ಉಂಟಾದೊಡನೆ ದೇವಯ್ಯ ಚಕಿತನಾದನು. ಆತ್ಮ ರಕ್ಷಣೆಗಾಗಿ ಸಭ್ಯಾಸಭ್ಯ ಭೇದವಿಲ್ಲದೆ ಸರ್ವೋಪಾಯಗಳನ್ನೂ ಕೈಗೊಳ್ಳಲು ಸಿದ್ಧನಾದನು. ಎಲ್ಲವನ್ನೂ ಗುಟ್ಟಾಗಿಟ್ಟಿರುವುದೇ ಆ ಕಾರ್ಯಕ್ರಮದ ಮೊದಲ ಹಂತವಾಗಿತ್ತು. ತನ್ನ ನಿಜವಾದ ಮನಸ್ಸು ಉಪದೇಶಿಗಾಗಲಿ ಅವನ ಮಗಳಿಗಾಲಿ ಒಂದಿನಿತೂ ಗೋಚರವಾಗದಂತೆ ವರ್ತಿಸತೊಡಗಿದನು. ತಾನು ಇಂದಲ್ಲ ನಾಳೆ ಜಾತಿಗೆ ಸೇರುವದು ನಿಶ್ಚಯ ಎಂಬಂತೆ ತೋರಿಸಿಕೊಂಡನು. ಅದಕ್ಕೆ ನಂಬಿಕೆಯ ಮುಂಗಡವಾಗಿ ಬಚ್ಚನನ್ನು ಮೊದಲು ಕ್ರೈಸ್ತನನ್ನಾಗಿ ಮಾಡುವ ವಂಚನೆಗೂ ಕೈಹಾಕಿದ್ದನು: “ನೀನು ನಾನು ಹೇಳಿದ ಹಾಗೆ ಮಾಡು. ನಿಮ್ಮ ಜಾತಿಯವರು ದಂಡ ಕೇಳಿದರೆ ನಾನೆ ಕೊಟ್ಟು ಶುದ್ಧಿ ಮಾಡಿ, ಹೊಲೆಯರ ಕುಲಕ್ಕೇ ಮತ್ತೆ ಸೇರಿಸಿಕೊಳ್ಳುವಂತೆ ಮಾಡುತ್ತೇನೆ!”
‘ನನ್ನ ಹೆಂಡತಿ ಕ್ರೈಸ್ತಳಾಗಲು ಎಂದಿಗೂ ಒಪ್ಪುವುದಿಲ್ಲ; ಆದ್ದರಿಂದ ನಾನು ಹೇಗೆ ಕ್ರೈಸ್ತನಾಗಲಿ?’ ಎಂದು ದೇವಯ್ಯ ಹೇಳಿದ್ದಕ್ಕೆ ಪಾದ್ರಿ ‘ಕ್ರೈಸ್ತಮತ ಇಬ್ಬರು ಹೆಂಡಿರನ್ನು ಆಗಲು ಎಂದಿಗೂ ಸಮ್ಮತಿಸುವುದಿಲ್ಲ, ಆದರೆ ಮೊದಲ ಹೆಂಡತಿಯನ್ನು ಕಾನೂನುಬದ್ಧವಾಗಿ ಡೈವೊರ್ಸ ಮಾಡಬಹುದು’ ಎಂದು ಸೂಚಿಸಿದ್ದನು.
ದೇವಯ್ಯ ಕಾಲವಂಚನೆ ಮಾಡಿ ತಪ್ಪಿಸಿಕೊಳ್ಳಬಹುದೆಂದು ಆಲೋಚಿಸಿ ಮೈಸೂರು ಸಂಸ್ಥಾನದಲ್ಲಿ ಆಗ ಇದ್ದ ಕಾನೂನೊಂದನ್ನು ಪಾದ್ರಿಯ ಗಮನಕ್ಕೆ ತಂದಿದ್ದನು. ಬ್ರಿಟಿಷರ ಆಳ್ವಿಕೆಯ ಪ್ರಾಂತಗಳಲ್ಲಿ ಹಿಂದೂ ಅವಿಭಕ್ತ ಕುಟುಂಬದ ಒಬ್ಬನು ಅನ್ಯ ಮತಾವಲಂಬಿಯಾದರೆ ಅವನಿಗೆ ತನ್ನ ಪಿತ್ರಾರ್ಜಿತ ಆಸ್ತಿಯ ಹಕ್ಕುದಕ್ಕುತ್ತಿದ್ದರೂ, ಮೈಸೂರು ಸಂಸ್ಥಾನದಲ್ಲಿ ಅನ್ಯಮತಾವಲಂಬಿಯಾದವನು ಆ ಹಕ್ಕನ್ನು ಕಳೆದುಕೊಳ್ಳಬೇಕಾಗಿತ್ತು. ಸಿಂಧುವಳ್ಳಿ ಚಿನ್ನಪ್ಪಗೌಡರು ಮತಾಂತರ ಹೊಂದುವಾಗ ಅವರೊಬ್ಬರೆ ಪಿತ್ರಾರ್ಜಿತ ಆಸ್ತಿಗೆ ಏಕಮಾತ್ರ ಹಕ್ಕುದಾರರಾಗಿದ್ದುದರಿಂದ ಆ ಆಸ್ತಿ ಅವರಿಗೆ ಪೂರ್ತಿಯಾಗಿ ದಕ್ಕಿತ್ತು. ಆದರೆ ತಂದೆ ಕಲ್ಲಯ್ಯ ಗೌಡರು ಇರುವವರೆಗೆ ಕ್ರೈಸ್ತನಾಗುವ ತನಗೆ ಆಸ್ತಿ ಬರುವುದಿಲ್ಲ. ಆದ್ದರಿಂದ ಅವರು ಪರಲೋಕಪ್ರಾಪ್ತಿಯನ್ನೈದಿದಮೇಲೆಯೆ ತಾನು ಮತಾಂತರ ಹೊಂದುತ್ತೇನೆ ಎಂದು ವಾದಿಸಿದ್ದನು ದೇವಯ್ಯ.
ಅದಕ್ಕೆ ಪಾದ್ರಿಯ ಸಮಾಧಾನ ಹೀಗಿತ್ತು: ಬ್ರಿಟಿಷ್ ಚಕ್ರವರ್ತಿನಿಯೂ ಪ್ರೋಟೆಸ್ಟೆಂಟ್ ಕ್ರೈಸ್ತ ಮತದವಳೆ. ಆದ್ದರಿಂದ ಇಂಡಿಯಾದಲ್ಲಿ ಬ್ರಿಟಿಷ್ ಸರ್ಕಾರವು ಪ್ರೋಟೆಸ್ಟೆಂಟ್ ಮಿಷನರಿಗಳಿಗೆ ನೇಟಿವ್ ಜನರನ್ನು ಮತಾಂತರಗೊಳಿಸುವುದಕ್ಕೆ ಸರ್ವಾಧಿಕಾರವನ್ನೂ ಸರ್ವಸೌಲಭ್ಯಗಳನ್ನೂ ಕೊಡುತ್ತಾ ಇದೆ. ಮೈಸೂರು ಸಂಸ್ಥಾನವು ನೇಟಿವ್ ಸಂಸ್ಥಾನವಾದರೂ ಅದರ ರಾಜನು ಸಂಪೂರ್ಣವಾಗಿ ಬ್ರಿಟಿಷರ ಅಡಿಯಾಳು. ಬ್ರಟಿಷರ ಪ್ರತಿನಿಧಿ ರೆಸಿಡೆಂಟ್ ಸಾಹೇಬರು ಹೇಳಿದ ಹಾಗೆ ಅವನು ಕೇಳಬೇಕಾಗುತ್ತದೆ. ಇಲ್ಲದಿದ್ದರೆ ರಾಜ್ಯವನ್ನೇ ಕಳೆದುಕೊಳ್ಳುತ್ತಾನೆ. ‘ನಮ್ಮ ದೊಡ್ಡ ಪಾದ್ರಿಗಳು ಲೇಕ್ ಹಿಲ್ ದೊರೆಗಳು, ರೆಸಿಡೆಂಟರ ಕಿವಿಯಲ್ಲಿ ಒಂದು ಪಿಸುಮಾತು ಉಸಿರಿದರೆ ಸಾಕು, ನಿಮ್ಮ ಪಿತ್ರಾರ್ಜಿತ ಆಸ್ತಿಗೆ ನಿಮ್ಮ ಅರ್ಧಾಂಗಿ ಆಗುವ ನನ್ನ ಮಗಳು ಹಕ್ಕುದಾರಳಾಗಿ ಬಿಡುತ್ತಾಳೆ!’.
ಆದ್ದರಿಂದಲೆ ದೇವಯ್ಯಗೌಡರ ಮತಾಂತರವನ್ನು ಸಾಕ್ಷಾತ್ ದೊಡ್ಡಪಾದ್ರಿಗಳಾದ ಲೇಕ್ಹಿಲ್ ದೊರೆಗಳೆ, ಕ್ರಿಸ್‌ಮಸ್‌ನಲ್ಲಿ, ಮೇಗರವಳ್ಳಿಯ ಮಿಶನ್ ಸ್ಕೂಲಿನ ಪ್ರಾರಂಭೋತ್ಸವ ನಡೆಸಲು ಬಂದಾಗ, ತಾವೆ ಖುದ್ದಾಗಿ ನಡೆಸಿಕೊಡುತ್ತಾರೆ ಎಂದು ನಿಶ್ಚಯವಾಗಿತ್ತು.
ಹೀಗಾಗಿ ಧರ್ಮ ಸಂಕಟಕ್ಕೆ ಸಿಕ್ಕಿಬಿದ್ದಿದ್ದ ದೇವಯ್ಯನಿಗೆ ‘ಮ್ಲೇಚ್ಛ ಪಾಷಂಡಿ’ ಗಳ ಆ ಚಕ್ರವ್ಯೂಹದಿಂದ ಪಾರಾಗಲು ಹೊಳೆದದ್ದು ಒಂದೇ ದಾರಿ: ಮುಕುಂದಯ್ಯನ ಅಭಿಮನ್ಯು ಪ್ರವೇಶ! ಅವರಿಬ್ಬರೂ ಅದನ್ನು ಸಾಂಗೋಪಾಂಗವಾಗಿ ಚರ್ಚಿಸಿ ನಿರ್ಣಯಿಸಿದ್ದರು. ಅದೇನೋ ಅಪ್ಪಟ ದಸ್ಯುದಾರಿಯೆ ಆಗಿತ್ತು. ಆದರೇನು ಮಾಡುವುದು?” ಬೇರೆ ಉಪಾಯವೆ ತೋರಲಿಲ್ಲವಾದ್ದರಿಂದ ಆ ಕಾಡು ಉಪಾಯವನ್ನೇ ಆಶ್ರಯಿಸಿದ್ದರು, ನೆಂಟ ಭಾವ ಇಬ್ಬರೂ!….
ಚಿನ್ನಮ್ಮ ಅವಳ ಹೊಸ ಸೀರೆಯುಡಿಸಿ, ಬಾಚಿ, ಕುಂಕುಮ ವಿಡಿಸಿ, ಹೂಮುಡಿಸಿದ್ದ ತನ್ನ ಅಕ್ಕಯ್ಯಗೆ ಅದನ್ನೆಲ್ಲ, ಹದಿಬದೆಗೆ ಮನನೋಯುವ ಅಂಶಗಳನ್ನು ಬಿಟ್ಟೋ ತೇಲಿಸಿಯೋ ಸಂಗ್ರಹವಾಗಿ ತಿಳಿಸಿ, ಯಾರೊಡನೆಯೂ ತುಟಿಪಿಟಕ್ಕೆನ್ನ ಬಾರದೆಂದೂ ಬುದ್ಧಿ ಹೇಳಿ, ಆ ರಾತ್ರಿಯೆ ಗಾಡಿ ಹತ್ತಿಸಿ ಬೆಟ್ಟಳ್ಳಿಗೆ ಕರೆದುಕೊಂಡು ಗೋಗಿ ಬಿಟ್ಟು ಬಂದಿದ್ದನು ಮುಕುಂದಯ್ಯ.
ಹಗಲಾದ ಮೇಲೆ ಹೆಚ್ಚು ಗುಲ್ಲಿಗೆ ಅವಕಾಶವಾಗುತ್ತದೆ ಎಂಬ ಕಾರಣಕ್ಕಾಗಿಯೂ.
*****

ಕಾಮೆಂಟ್‌ಗಳಿಲ್ಲ: