ಮಲೆಗಳಲ್ಲಿ ಮದುಮಗಳು-೫೨

ಕಲ್ಕತ್ತದ ವರಾಹ ನಗರದಲ್ಲಿದ್ದ ಹಾಳುಮನೆಯ ಮಠದ ಇಬ್ಬರು ತರುಣ ಸಂನ್ಯಾಸಿಗಳು ಆವೊತ್ತಿನ ರಾತ್ರಿಯನ್ನು ದಕ್ಷಿಣೇಶ್ವರದಲ್ಲಿ ಧ್ಯಾನ ಜಪ-ತಪಗಳಲ್ಲಿ ಕಳೆಯಲೆಂದು ಭವತಾರಿಣಿಯ ಸನ್ನಿಧಿಗೆ ಬಂದಿದ್ದರು. ಉಜ್ವಲ ದೀಪಸ್ತೋಮದ ಕಾಂತಿಯಲ್ಲಿ ಪುಷ್ಪಮಾಲಾ ಗಂಧಾದಿಗಳಿಂದ ಅಲಂಕೃತಳಾಗಿದ್ದ ದೇವಿಯ ಪೂಜೆ ಪೂರೈಸಿದ ತರುವಾಯ ಎದುರಿಗಿದ್ದ ನಾಟ್ಯಮಂಟಪದಲ್ಲಿ ಕುಳಿತಿದ್ದರು. ಸಾಧಾರಣವಾಗಿ ಬರುತ್ತಿದ್ದ ಮಳೆ ಇದ್ದಕ್ಕಿದ್ದಂತೆ ಜೋರಾಗಿ ಸುರಿಯತೊಡಗಿತ್ತು. ದೀಪಗಳೂ ಕ್ಷಯಿಸುತ್ತಾ ಬಂದು ಕೊನೆಗೆ ಒಂದೊ ಎರಡೋ ಮಾತ್ರ ಉರಿಯುತ್ತಿದ್ದವು. ಭವತಾರಿಣಿಯ ಸುತ್ತ ಮುತ್ತಲೂ ಮಂದಕಾಂತಿ ಹಬ್ಬಿ ಏನೋ ಒಂದು ವಿಧವಾದ ಯೌಗಿಕಸ್ವಾಪ್ನಿಕತೆ ಆವರಿಸಿದಂತಿತ್ತು.
ತರುಣ ಸಂನ್ಯಾಸಿಗಳಿಬ್ಬರೂ ಕುಳಿತಿದ್ದ ನಾಟ್ಯಮಂಟಪದಲ್ಲಿ ಕತ್ತಲೆ ಕವಿದಿತ್ತು. ರಾತ್ರಿ ಮುಂದುವರೆದು ಬಹಳ ಹೊತ್ತಾದರೂ ಗಾಳಿಯೊಡನೆ ಕೂಡಿದ್ದ ಬಿರುಮಳೆ ಬಿಡದೆ ಮುಸಲಧಾರೆಯಾಗಿ ಹೊಯ್ಯುತ್ತಲೆ ಇದ್ದುದರಿಂದ, ಕೆಲವೆ ವರ್ಷಗಳ ಹಿಂದೆ ಕಾಶೀಪುರದ ತೋಟದ  ಮನೆಯಲ್ಲಿ ಮಹಾಸಮಾಧಿಯನ್ನೈದಿದ ತಮ್ಮ ಗುರುಮಹಾರಾಜರು ವಾಸಿಸುತ್ತಿದ್ದು ತಮ್ಮ ಜೀವಿತದ ಮುಖ್ಯ ಭಾಗಗಳನ್ನೆಲ್ಲ ಯಾವ ದಿವ್ಯ ಕೊಠಡಿಯಲ್ಲಿ ಕಳೆದಿದ್ದರೋ ಆ ಪುಣ್ಯ ಸ್ಮರಣೆಯ ಸ್ಥಳಕ್ಕೆ, ತಾವು ಪೂರ್ವಭಾವಿಯಾಗಿ ಸಂಕಲ್ಪಿಸಿದಂತೆ, ಹೋಗಿ ಧ್ಯಾನಕ್ಕೆ ಕುಳಿತುಕೊಳ್ಳುವುದನ್ನು ಅನಿವಾರ್ಯತೆಯಿಂದ ಕೈಬಿಟ್ಟು, ಸದ್ಯಕ್ಕೆ ನಾಟ್ಯಮಂಟಪದಲ್ಲಿಯೆ ಧ್ಯಾನ ಮಾಡಲು ತೊಡಗಿದ್ದರು.
ಗಂಭೀರ ಧ್ಯಾನಮಗ್ನನಾಗಿದ್ದ ಒಬ್ಬಾತನಿಗೆ ತಾನು ಯಾವುದೋ ಒಂದು ಸುದೂರದ ಅರಣ್ಯಾದ್ರಿಕಂದರ ಪ್ರದೇಶದಲ್ಲಿದ್ದಂತೆಯೂ, ಸುರಿಯುತ್ತಿದ್ದ ಭೀಕರ ವರ್ಷದಲ್ಲಿ ತಾನು ತೊಯ್ದು ತೇಲುತ್ತಿರುವಂತೆಯೂ ಒಂದು ಅನಿರ್ವಚನೀಯವಾದ ವಿಚಿತ್ರಾನುಭವವಾಗ ತೊಡಗಿತು. ಆ ಸ್ವಪ್ನ ಸದೃಶ್ಯ ಅನುಭವದಿಂದ ಎಚ್ಚರುವ ಸಲುವಾಗಿಆತನು ಕಣ್ದೆರೆದು ಸುತ್ತಲೂ ನೋಡಿದನು: ಡನ್ಚರಿ!
ನಿಜವಾಗಿಯೂ ತನ್ನ ಸುತ್ತಲೂ ಭಯಂಕರ ಅರಣ್ಯ! ಮಳೆ ಬೀಳುತ್ತಿದೆ! ಗಾಳಿ ಬೀಸುತ್ತಿದೆ! ಭವತಾರಿಣಿಯ ಪೂಜಾಮೂರ್ತಿಯಿದ್ದೆಡೆ ಮಣ್ಣಿನ ಅರ್ಧ ಗೋಡೆಯ, ಓಡು ಹಂಚು ಹೊದಿಸಿದ. ಒಂದು ಗಾಡಿ ಕಾಣುಸುತ್ತಿದೆ! ಒಂದು ಹಣತೆಯ ಸೊಡರು, ಬೆಳಕಲ್ಲದ ಬೆಳಕು ಬೀರಿ, ಗಾಳಿಗೆ ನಡುಗುತ್ತಿದೆ! ಹುಡುಗಿಯ ಆಕಾರವೊಂದು ವಿಗ್ರಹದ ಕಲ್ಲಿಗೆ ಅಡ್ಡ ಬಿದ್ದಿದೆ.! ಪಕ್ಕದಲ್ಲಿ ಇನ್ನೊಂದು ಹುಡುಗಿಯ ಆಕಾರ ನಿಂತಿದೆ.!
ಕಣ್ದೆರೆದ ಮೇಲೆಯೂ ತಾನಿದ್ದ ಸ್ವಪ್ನಲೋಕವು ತನ್ನ ಅಸ್ತಿತ್ವವನ್ನು ಒಂದರ್ಧ ದಕ್ಷಿಣೇಶ್ವರದ ಭವತಾರಿಣಿಯ ವಿಗ್ರಹ, ಮಂದಿರ ಎಲ್ಲವೂ ಮುನ್ನಿನಂತೆ ಕಾಣಿಸಿಕೊಂಡುವು!
ಸಂನ್ಯಾಸಿ ಸೋಜಿಗಪಟ್ಟರು ಆತನಿಗೆ ಅಂತಹ ಆಶ್ಚರ್ಯವೇನೂ ಆಗಲಿಲ್ಲ. ಏಕೆಂದರೆ ಅಂತಹ ಮತ್ತು ಅದಕ್ಕಿಂತಲೂ ಮಹದಾಶ್ಚರ್ಯಕರವಾದ ಎನಿತೆನಿತೊ ಅತೀಮದ್ರಿಯ ದರ್ಶನಗಳನ್ನು ಜಗನ್ಮಾತೆ ಶ್ರೀಗುರುಕೃಪೆಯಿಂದ  ಆತನಿಗೆ ದಯಪಾಲಿಸಿದ್ದಳು. ಎಲ್ಲಿಯೋ ಯಾರೋ ಆರ್ತರು ತಾಯಿಗೆ ಭಕ್ತಿಯಿಂದ ಮಣಿದು ತಮ್ಮ ಸಂಕಟವನ್ನು ನಿವೇದಿಸುತ್ತಿರಬೇಕು. ಅದು ಇಲ್ಲಿ ಭವತಾರಿಣಿಯಲ್ಲಿ ಪ್ರತಿಫಲಿತವಾಗಿ ತನಗೆ ಧ್ಯಾನ ಸಮಯದಲ್ಲಿ ಆ ದರ್ಶನವಾಗಿರಬೇಕು; ಎಂದುಕೊಂಡು ಮತ್ತೆ ಆ ಸಂನ್ಯಾಸಿ ಧ್ಯಾನಸ್ಥನಾದನು. ತಾನು ಕಂಡ ಆ ಹೆಣ್ಣುಮಗಳ ಸಂಕಟ ಏನಿದ್ದರೂ ಪರಿಹಾರವಾಗಿ, ಆಕೆಗೆ ತಾಯಿ ಕೃಪೆಮಾಡಲಿ! ಎಂದು ಮನದಲ್ಲಿಯೇ ಹರಸಿ:
ತಾನು ಕಂಡ ಆ ಹೆಣ್ಣುಮಗಳ ಮೊಮ್ಮಕ್ಕಳಲ್ಲಿ, ಅಂದರೆ ಮಗಳ ಮಕ್ಕಳಲ್ಲಿ ಒಬ್ಬಾತನು, ಅನೇಕ ವರ್ಷಗಳ ತರುವಾಯ, ತಾನು ಶ್ರೀ ರಾಮಕೃಷ್ಣ ಮಹಾಸಂಘದ ಮಹಾಧ್ಕ್ಷನಾಗಿರುವಾಗ, ತನ್ನಿಂದಲೇ ದೀಕ್ಷೆ ಪಡೆದು ಮಹಾಸಂಘದ ಸಂನ್ಯಾಸಿ ಇಂದೇಕೆ ಕಾಣುವ ಗೋಜಿಗೆ ಹೋಗುತ್ತಾನೆ?
* * *
ಹೂವಳ್ಳಿ ವೆಂಕಪ್ಪನಾಯಕರು ಉಚ್ಛ್ರಾಯ ದಶೆಯಲ್ಲಿದ್ದಾಗ ಅದನ್ನು ’ಹಾಡ್ಯ’ ಎಂದು ಕರೆಯಬಹುದಾಗಿದ್ದರೂ ಈಗ ಅದು ಬರಿಯ ಕಗ್ಗಾಡೆ ಆಗಿತ್ತು. ಹಿಂದೆ ತರಗು ಗುಡಿಸಿ, ಕೆಂಜಿಗೆ ಹಿಂಡಲು, ಕಾರೆ ಮಟ್ಟುಗಳನ್ನೆಲ್ಲ ಕಡಿದು ಹಾಕಿ, ಅದನ್ನು ’ದರಗಿನ ಹಾಡ್ಯ’ವನ್ನಾಗಿ ಚೊಕ್ಕಟವಾಗಿ ಇಟ್ಟಿದ್ದಾಗ, ಆ ಹಾಡ್ಯದ ತುದಿಯಲ್ಲಿದ್ದ ಮಾರಮ್ಮನ ಗುಡಿಯನ್ನು ಪ್ರತಿ ವರ್ಷವೂ ಓಡುಹೆಂಚು ಕಿತ್ತುಹೊದಿಸಿ, ಗೋಡೆಗೆ ಕೆಂಪು ಬಿಳಿಯ ಕೆಮ್ಮಣ್ಣು ಜೇಡಿಗಳ ಪಟ್ಟೆ ಹಾಕಿ ಅಲಂಕರಿಸುತ್ತಿದ್ದರು. ಈಗಲೂ ಮಾರಮ್ಮಗೆ ಕೋಳಿ ಕುರಿ ಹಂದಿಗಳ ಬಲಿಪೂಜೆ ಪ್ರತಿವರ್ಷವೂ ನಡೆಯುತ್ತಿತ್ತಾದರೂ ಗುಡಿ ಮಾತ್ರ ದುರಸ್ತಿಯಿಲ್ಲದೆ ಪಾಳುಬಿದ್ದಂತಿತ್ತು. ಮಣ್ಣಿನ ಅದರ ಮುಕ್ಕಾಲು ಗೋಡೆಗಳೂ ಮನೆನೀರು ಸೋರಿ ಕರಗಿ ಬಿದ್ದು ಅಲ್ಲಲ್ಲಿ ಅರೆಗೋಡೆಗಳಾಗಿದ್ದುವು. ಎಲೆ ಕಡ್ಡಿ ಕಸ ತುಂಬಿಹೋಗಿತ್ತು. ಅದಕ್ಕೆ ಬಾಗಿಲೂ ಇರಲಲ್ಲಿ. ಬದಲಾಗಿ ಉಣುಗೋಲು ಇತ್ತು. ಉಣುಗೋಲಿನ ಗಳುಗಳೂ ಜಜ್ಜರಿತವಾಗಿ ಬಿದ್ದುಹೋಗಿದ್ದವು. ಮಳೆ ಜೋರಾಗಿ ಹಿಡಿದಾಗ ಹಾವುಗಳೂ ಹುಲಿ ಹಂದೆ ಕಡ ಮಿಗ ಮೊದಲಾದ ಪ್ರಾಣಿಗಳೂ ಮಳೆಯ ಬಿರುಸಿನಿಂದ ರಕ್ಷೆ ಪಡಯಲು ಮಾರಮ್ಮನ ಗುಡಿಯಲ್ಲಿ ತಂಗುತ್ತಿದ್ದವು ಎಂದೂ ಪ್ರತೀತಿಯಿತ್ತು.
ಇಂದೂ ಕೂಡ ಕತ್ತಲೆಯಾದ ಮೇಲೆ, ದೀಪದ ಕುಡಿಯನ್ನು ತುಂಬ ಕೆಳಗಿಳಿಸಿ ಸಣ್ಣದು ಮಾಡಿಕೊಂಡಿದ್ದ ಲಾಟೀನನ್ನು ಕೈಯಲ್ಲಿ ಹಿಡಿದು, ಕಂಬಳಿಕೊಪ್ಪೆ ಹಾಕಿಕೊಂಡಿದ್ದ ವ್ಯಕ್ತಿಯೊಂದು ಆ ಕಾಡಿನ ನಡುವಣ ಮಾರಮ್ಮನ ಗುಡಿಯ ಸಮೀಪಕ್ಕೆ ಬಂದಾಗ, ಮಳೆಯಿಂದ ರಕ್ಷಣೆ ಪಡೆದು ಒಳಗೆ ನಿಂತಿದ್ದ ಯಾವುದೋ ದೊಡ್ಡ ಪ್ರಾಣಿಯೊಂದು ಹೊರಕ್ಕೆ ನೆಗೆದು ಹಳುವಿನಲ್ಲಿ ದಡದಡನೆ ಸದ್ದುಮಾಡುತ್ತಾ ಓಡಿಹೋಗಿತ್ತು! ಲಾಟೀನು ಹಿಡಿದಿದ್ದ ವ್ಯಕ್ತಿ ಗುಡಿಯೊಳಗೆ ಹೋಗಿ, ಮೊದಲೆ ಅಣಿಮಾಡಿ ಇಟ್ಟಿದ್ದ ಹಣತೆಗೆ ದೀಪ ಹೊತ್ತಿಸಿ, ಅದನ್ನು ಮಾರಿಯ ಪ್ರತಿಮೆಯಾಗಿದ್ದು ಎಣ್ಣೆ ಹಿಡಿದು ಕರ್ರಗಾಗಿದ್ದ ಕಲ್ಲುಗುಂಡಿನ ಮುಂದೆ ಗಾಳಿಗೆ ಆರಿಹೋಗದಂತೆ ಗೂಡಿನಲ್ಲಿ ಮರೆಯಾಗಿಟ್ಟು, ಅಮ್ಮಗೆ ಅಡ್ಡಬಿದ್ದು, ಮಾತಿಲ್ಲದ ತನ್ನ ಪ್ರಾರ್ಥನೆಯನ್ನು ಸಲ್ಲಿಸಿತು. ಮತ್ತೆ ಎದ್ದು ನಿಂತು ಕೈಮುಗಿಯಿತು. ಮತ್ತೆ ಗುಡಿಯ ಬಾಗಿಲಿನ ಉಣುಗೋಲಿನ ಬಳಿ ನಿಂತು ಹೂವಳ್ಳಿಮನೆಯ ದಿಕ್ಕಿನಲ್ಲಿ ಕಾಡಿನ ಕಡೆ ನೋಡುತ್ತಾ ಯಾರನ್ನೋ ನಿರೀಕ್ಷಿಸುವಂತೆ ತೋರಿತು.
ಸ್ವಲ್ಪ ಹೊತ್ತಿನಲ್ಲಿಯೆ ಕಂಬಳಿಕೊಪ್ಪೆಹಾಕಿಕೊಂಡಿದ್ದ ಮತ್ತೊಂದು ವ್ಯಕ್ತಿ ಹೂವಳ್ಳಿ ಮನೆಯ ದಿಕ್ಕಿನಿಂದ ಅವಸರ ಅವಸರವಾಗಿ ಬಂದು ಗುಡಿಯೊಳಗೆ ಹೊಕ್ಕಿತು.
ಕಾಯುತ್ತಿದ್ದ ವ್ಯಕ್ತಿ ಕೇಳಿತು “ಏನೋ, ಐತ? ಯಾಕೊ ಇಷ್ಟು ಹೊತ್ತು ಮಾಡಿದೆ?”
ಪೀಂಚಲುಗೆ ಎಲ್ಲ ಹೇಳಿ ಬಂದಿದ್ದೇನೆ, ಅಯ್ಯಾ. ಅವಳಿಗೂ ದಾರಿ ಗೊತ್ತಂತೆ. ಚಿನ್ನಕ್ಕನ ಕರಕೊಂಡು ಬಂದು ಬಿಡುತ್ತಾಳೆ.”
“ಹಾಂಗಾದ್ರೆ ನೀ ಇಲ್ಲೇ ಕಾದುಕೊಂಡಿರು. ಅವರು ಬಂದ ಕೂಡ್ಲೆ ಕರಕೊಂಡು ಬಂದುಬಿಡು. ನಾನು ಹಳೆಪೈಕದ ಯೆಂಕಿಮನೆಯ ಹತ್ರದ ಕೊಟ್ಟಿಗೇಲಿ ಕಾದಿರ್ತೀನಿ….ಗುತ್ತೀಗೂ, ನಾವು ಬರಾದು ಹೊತ್ತಾದ್ರೆ, ಬಾ ಅಂತಾ ಹೇಳೀನಿ…” ಮುಕುಂದಯ್ಯ ಐತನಿಗೆ ಅವನು ಮಾಡಬೇಕಾದುದನ್ನು ಹೇಳುತ್ತಾ, ಲಾಟೀನಿನೊಡ ಕೆಳಗಿಳಿದು ಹಳುವಿನಲ್ಲಿ ಮರೆಯಾಗುವ ಮುನ್ನ ಮತ್ತೆ ಕೂಗಿ ಹೇಳಿದನು. “ಬೇಗ ಬನ್ನಿ, ಹೊತ್ತು ಮಾಡಬೇಡಿ!….” ’ಹುಲಿಕಲ್ಲು ನೆತ್ತಿಗೆ ಹತ್ತದೇನೂ ಬಿಟ್ಟಿ ಅಲ್ಲ, ಹೆಂಗಸರಿಗೆ! ಅದರಲ್ಲೂ ನಿನ್ನ ಹೆಂಡ್ತಿ ಬಸಿರಿ’ ಎಂದೂ, ಐತನಿಗೆ ಕೇಳಿಸಲೆಂದಲ್ಲ, ತನಗೆ ತಾನೆಂಬಂತೆ, ಹೇಳಿಕೊಂಡನು.
ಲಾಟೀನಿನ ಬೆಳಕು ಮುಕುಂದಯ್ಯನ ಆಕೃತಿಯೊಡನೆ ಮಳೆ ಬೀಳುತ್ತಿದ್ದ ಹಳುವಿನಲ್ಲಿ ಮರೆಯಾದ ಮೇಲೆ, ಕವಿದ ಕತ್ತಲೆಯಲ್ಲಿ ಐತನಿಗೆ ಕಾದು ಕುಳಿತನು. ಮಾರಮ್ಮನ ಮುಂದಿದ್ದ ಹಣತೆಯ ಬೆಳಕು ಕತ್ತಲೆಯ ಒಂದೆರಡಡಿಯನ್ನೂ ಬೆಳಗುತ್ತಿರಲಿಲ್ಲ.
ಈಗ ಬರುತ್ತಾರೆ, ಆಗ ಬರುತ್ತಾರೆ; ಈಗ ಬಂದಾರು, ಇನ್ನೇನು ಬಂದಾರು;- ಐತನಿಗೆ ಕಾದು ಕಾದು ಬಳಲಿಕೆಯಾಗತೊಡಗಿತು. ಕಡೆ ಕಡೆಗೆ ಅವರು ಬರದೆ ಇದ್ದುದಕ್ಕೆ ಅವನ ಕಲ್ಪನೆ ಏನೇನೋ ಕಾರಣಗಳನ್ನು ಕಲ್ಪಿಸಿಕೊಂಡು ದಿಗಿಲುಪಡತೊಡಗಿತು. ಏನಾದರೂ ಆಗಲಿ, ನಾನೆ ಹೋಗಿ ನೋಡಿಯಾದರೂ ನೋಡಿಕೊಂಡು ಬರುತ್ತೇನೆ. ಅವರು ಹೊರಟಿದ್ದರೆ ದಾರಿಯಲ್ಲಿ ಸಿಕ್ಕಿಯೆ ಸಿಕ್ಕುತ್ತಾರೆ. ಹೀಗೆ ನಿಶ್ಚಯಿಸಿ ಐತ ಮಾರಮ್ಮನ ಗುಡಿಯಿಂದ ಹೂವಳ್ಳಿ ಮನೆಯ ಕಡೆಗೆ ಹಳುವಿನಲ್ಲಿ ಗುಡ್ಡವಿಳಿತು ಹೋದನು:
ಅವನು ಹೋಗಿ ಸ್ವಲ್ಪ ಹೊತ್ತಿನಲ್ಲಿಯೇ ಚಿನ್ನಮ್ಮ ಪೀಂಚಲು ಇಬ್ಬರೂ ಮಾರಮ್ಮನ ಗುಡಿಯ ಹತ್ತಿರಕ್ಕೆ ಬಂದರು. ದಾರಿ ತಪ್ಪಿದ್ದ ಅವರು, ಮತ್ತೆ ಹಿಂದಕ್ಕೆ ಬಂದು, ಸರಿ ದಾರಿಗೆ ಸೇರುವಷ್ಟರಲ್ಲಿ, ಐತ ಅದನ್ನು ದಾಟಿ ಹೂವಳ್ಳಿಮನೆಕಡೆಗೆ ಹೋಗಿಬಿಟ್ಟದ್ದನಾದ್ದರಿಂದ ಇವರು ಅವನಿಗೆ ಸಿಕ್ಕಿರಲಿಲ್ಲ.
ಗುಡಿಯ ಬಾಗಿಲಿಗೆ ಬಂದು ಪೀಂಚಲು ತನ್ನ ಗಂಡನ ಹೆಸರು ಹಿಡಿದು ಕರೆದಾಗ ಯಾರೂ ಓಕೊಳ್ಳಲಿಲ್ಲ. ಅವಳಿಗೆ ಗಾಬರಿಯಾಯಿತು. ಐತನೇನಾದರೂ ಸಿಕ್ಕದಿದ್ದರೆ ಮುಂದೇನು ಮಾಡಬೇಕು? ಮತ್ತೆ ಮನೆಗೆ ಹಿಂದಿರುಗುವುದೇ? ಅದು ಸಾಧ್ಯವಿಲ್ಲ ಎಂಬುದನ್ನು ಚಿನ್ನಮ್ಮ ಆಗಲೆ ಆ ಕೆರೆಯ ಹತ್ತಿರ ಹೇಳಿಬಿಟ್ಟಿದ್ದಾಳೆ! ತಾನೆ ಸ್ವತಂತ್ರಿಸಿ ಚಿನ್ನಮ್ಮನನ್ನು ಹುಲಿಕಲ್ಲು ನೆತ್ತಿಗೆ ಈ ಮಳೆಗಾಳಿಯ ರಾತ್ರಿಯಲ್ಲಿ ಹೇಗೆ ಕರೆದುಕೊಂಡು ಹೋಗುವುದು? ಪೀಂಚಲು ದಿಟ್ಟ ಹೆಣ್ಣಾಗಿದ್ದರೂ ಅವಳ ಎದೆ ತಲ್ಲಣಿಸಿತು. ತನ್ನ ಹೆದರಿಕೆಯನ್ನು ತೋರಗೊಟ್ಟರೆ ಮೊದಲೇ ಕಾಲು ಸೋಲುತ್ತಿದೆ ಎನ್ನುತ್ತಿದ್ದ ಚಿನ್ನಮ್ಮಗೆ ಕಾಲೇ ಬರದೇ ಹೋಗಬಹುದಲ್ಲಾ?
ಮತ್ತೆ ಸ್ವಲ್ಪ ಗಟ್ಟಿಯಾಗಿ ಕೂಗಿದಳು: “ಐತಾ!”
ಆಗಲೆ ಇಬ್ಬರೂ ಗುಡಿಯೊಳಗೆ ಹೋಗಿದ್ದರಿಂದ ಅವಳ ಕೂಗು ಅವಳಿಗೇ ವಿಕಾರ ಮೂದಲಿಕೆಯಾಗಿ ಕೇಳಿಸಿತು.
ಇಬ್ಬರೂ ಕಂಬಳಿ ಕೊಪ್ಪೆಗಳನ್ನು ತೆಗೆದಿಟ್ಟು ನೋಡುತ್ತಾರೆ: ಅಮ್ಮನ ಮುಂದೆ ಗೂಡಿನಲ್ಲಿ ಗಾಳಿಗೆ ಮರೆಯಾಗಿದ್ದ ಹಣತೆ ಮಿಣಿಮಿಣಿಮಿಣಿ ಸಣ್ಣಗೆ ಉರಿಯುತ್ತಿದೆ!
ಅದನ್ನು ಕಂಡು ಇಬ್ಬರಿಗೂ ಸ್ವಲ್ಪ ಧೈರ್ಯವಾಯಿತು: ಬಹಶಃ ಐತನೇ ಅದನ್ನು ಹಚ್ಚಿಟ್ಟು ಇಲ್ಲೆ ಎಲ್ಲಿಯೊ ಹೋಗಿರಬಹುದು. ಸ್ವಲ್ಪ ಹೊತ್ತು ಕಾದರು. ಕಾಯುವವರಿಗೆ ಆ ಕಾಲ ದೀರ್ಘವಾಗಿಯೆ ತೋರತೊಡಗಿತು.
“ಎಲ್ಲಿ ಹೋದನೆ ನಿನ್ನ ಗಂಡ? ಇಲ್ಲೆ ಕಾಯುತ್ತಿರುತ್ತಾನೆ ಅಂತಾ ಹೇಳ್ದೆಲ್ಲಾ?” ಆಯಾಸಧ್ವನಿಯಲ್ಲಿ ಕೇಳಿದಳು ಚಿನ್ನಮ್ಮ.
ಚಿನ್ನಮ್ಮ ಗಟ್ಟಿಮುಟ್ಟಾದ ಹುಡುಗಿಯಾಗಿದ್ದರೂ ಆ ದಿನ ಅವಳು ಊಟದ ಶಾಸ್ತ್ರ ಮಾಡಿದ್ದಳೆ ಹೊರತು ನಿಜವಾಗಿಯೂ ಹೊಟ್ಟೆ ತುಂಬ ಉಂಡಿರಲಿಲ್ಲ. ಜೊತೆಗೆ ದಿನವೆನ್ನೆಲ್ಲ ಚಿಂತೆ ಉದ್ವೇಗಗಳಲ್ಲಿಯೇ ಕಳೆದಿದ್ದಳು. ಧರ್ಮು ತಿಮ್ಮು ಇಬ್ಬರೂ ಸೇರಿ ಮದುವೆಯ ಚಪ್ಪರ ಕಟ್ಟಿದ್ದ ಕರಿಬಾಳೆ ಹಣ್ಣಿನ ಗೊನೆಯಿಂದ ಕದ್ದು ಮುರಿ‌ದು ತಂದು ತಾವು ತಿನ್ನುವಾಗ ಅವಳಿಗೂ ಬಲಾತ್ಕಾರವಾಗಿ ಕೊಟ್ಟಿದ್ದ ಹಣ್ಣುಗಳನ್ನು ತಿಂದಿದ್ದೆಷ್ಟೊ ಅಷ್ಟೆ ಅವಳ ಹೊಟ್ಟೆಗೆ ಆಸರೆಯಾಗಿತ್ತು. ಆ ಪ್ರಚ್ಛನ್ನ ಉಪವಾಸದ ಪರಿಣಾಮ ಅವಳಲ್ಲಿ ಆಗಲೆ ಪ್ರಕಟವಾಗತೊಡಗಿತ್ತು.
“ಪೀಂಚಲೂ, ಇಲ್ಲಿರೋ ದರಗು ಕಸಾನೆಲ್ಲ ಒಂದುಚೂರು ಕಾಲಿನಲ್ಲೆ ಒತ್ತರಿಸ್ತೀಯಾ?” ಹಣತೆಯ ಬೆಳಕಿನ ಬಳಿ ನಿಂತು ಹೇಳಿದಳು ಚಿನ್ನಮ್ಮ.
ಪೀಂಚಲು ಹಾಗೆಯೆ ಮಾಡಿದ ಮೇಲೆ, ಚಿನ್ನಮ್ಮ ದಣಿದವಳಂತೆ ಅಮ್ಮನ ಮುಂದೆ, ಅವಳ ಕಡೆ ಮುಖ ಹಾಕಿ, ಮಂಡಿಯೂರಿ, ಕೈಮುಗಿದು ಕುಳಿತಳು. ಪೀಂಚಲು ಪಕ್ಕದಲ್ಲಿ ನಿಂತು ನೋಡುತ್ತಿದ್ದಂತೆಯೆ, ಯಾವುದೋ ದುಃಖಾತಿರೇಕದಿಂದ ಬಿಕ್ಕಿಬಿಕ್ಕಿ ಅಳುತ್ತಾ, ಕೈಮುಗಿದುಕೊಂಡೆ ಸಾಷ್ಟಾಂಗ ನಮಸ್ಕಾರದ ಭಂಗಿಯಲ್ಲಿ ನೆಲದಮೇಲೆ ಉದ್ದುದ್ದ ಅಡ್ಡಬಿದ್ದಳು!
ಭಕ್ತಿ ತುಂಬ ಶ್ರದ್ಧೆಯಿಂದ ಹೊಮ್ಮಿದ ಆರ್ತ ಜೀವದ ಪ್ರಾರ್ಥನೆಗೆ ಜಗನ್ಮಾತೆ ಅವಳು ಆಖ್ಯಾತ ಹೂವಳ್ಳಿ ಹಾಡ್ಯದ ಮಾರಿಯಮ್ಮನ ರೂಪದಿಂದಿರಲಿ ಅಥವಾ ದಕ್ಷಿಣೇಶ್ವರದ ಜಗದ್ ವಿಖ್ಯಾತ ಭವತಾರಿಣಿಯ ರೂಪದಿಂದಿರಲಿ ಓಕೊಳ್ಳದಿರುತ್ತಾಳೆಯೆ?
ಪೀಂಚಲು ಸ್ವಲ್ಪ ಹೊತ್ತು ನಿಂತು ನೋಡುತ್ತಿದ್ದಳು. ಚಿನ್ನಕ್ಕ ದೇವರಿಗೆ ಅಡ್ಡಬಿದ್ದು ಈಗ ಏಳುತ್ತಾರೆ, ಆಗ ಏಳುತ್ತಾರೆ ಎಂದು ನಿರೀಕ್ಷಿಸಿದುದು ವ್ಯರ್ಥವಾಯಿತು. ಯಾರಾದರೂ ಇಷ್ಟು ದೀರ್ಘಕಾಲ ಅಡ್ಡಬೀಳುತ್ತಾರೆಯೇ? ಇದ್ದಕ್ಕದ್ದ ಹಾಗೆ ಅವಳಿಗೆ ಇಂತಹುದೆ ಇನ್ನೊಂದರ ನೆನಪಾಗಿ ನಡುಗಿದಳು. ಹೌದು; ಅಡ್ಡಬಿದ್ದವರು ಬಹಳ ಹೊತ್ತಾದರೂ ಎದ್ದೇ ಇರಲಿಲ್ಲ! ಸುಡುಗಾಡಿನಲ್ಲಿ ಗಂಡನ ಕಳೇಬರದ ಪಾದ ಹಿಡಿದು ಅಡ್ಡಬಿದ್ದ ಹಳೆಮನೆ ಹೆಗ್ಗಡತಮ್ಮೋರು ಎಷ್ಟು ಹೊತ್ತಾದರೂ ಎದ್ದೇ ಇರಲಿಲ್ಲ. ಪೀಂಚಲು ಅದನ್ನೆಲ್ಲ ಪ್ರತ್ಯಕ್ಷದರ್ಶಿಯಾಗಿ ನೋಡಿದ್ದಳು. ಆ ನೆನಪು ಹೊಳೆದೊಡನೆಯೆ ಪೀಂಚಲುಗೆ ಕೈ ಕಾಲು ತಣ್ಣಗಾದಂತಾಗಿ, ನಿಂತಲ್ಲೆ ನೆಲಕ್ಕೆ ಕುಸಿಯುವಂತೆ ಕಾಲು ತತ್ತರಿಸತೊಡಗಿದವು: ಅಯ್ಯೋ ದೇವರೆ! ಚಿನ್ನಕ್ಕಗೂ ಹಾಗೇ ಆಗಿಬಿಟ್ಟರೆ?
ಕುಸಿದು ಕುಳಿತು “ಚಿನ್ನಕ್ಕಾ ಚಿನ್ನಕ್ಕಾ” ಎಂದು ಮೈ ಮುಟ್ಟಿ ಕರೆದಳು; ಚಿನ್ನಕ್ಕನ ಮೈ ಅಲುಗಾಡಿತು; ಉಸಿರೆದುಕೊಳ್ಳುವ ಸದ್ದೂ ಕೇಳಿಸಿತು. ‘ಬದುಕಿದೆ!’ ಎಂದುಕೊಂಡಿತು ಪೀಂಚಲುವಿನ ಜೀವ!
ಆದರೆ ಚಿನ್ನಮ್ಮ ಮಾತಾಡಲೂ ಇಲ್ಲ; ಏಳಲೂ ಇಲ್ಲ. ಅವಳಿಗೆ ಇತ್ತಣ ಪ್ರಜ್ಞೆ ಇರುವಂತೆಯೂ ತೋರಲಿಲ್ಲ. ಅವಳಿಗೆ ಏನಾಗುತ್ತಿತ್ತು ಎಂಬುದನ್ನು ಪೀಂಚಲು ಪಾಪ, ಹೇಗೆ ಅರಿತಾಳು! ಇತ್ತಣ ಪ್ರಜ್ಞೆಗೆ ಮರಳಿದ ಮೇಲಾದರು ಚಿನ್ನಮ್ಮಗೂ ಅದು ಬುದ್ಧಿವೇದ್ಯವಾಗಲು ಸಾದ್ಯವೆ?
ಅಷ್ಟರಲ್ಲಿ ಹಳುವಿನಲ್ಲಿ ಹೊರಗಡೆ ಯಾವುದೊ ಪ್ರಾಣಿ ಓಡುವ ಸದ್ದಾಗಿ ಪೀಂಚಲು ಮೈಬಿಸಿಯಾಗಿ ಎದ್ದು ನಿಂತಳು. ಯಾವುದಾದರೂ ದುಷ್ಟ ಜಂತು ಮಳೆಯಿಂದ ರಕ್ಷೆ ಪಡೆಯಲು ಗುಡಿಯೊಳಗೆ ನುಗ್ಗಿದರೆ ಏನು ಗತಿ? ಗುಡಿಯ ಬಾಗಿಲಿರುವ ಕತ್ತಲೆಯ ಕಡೆ ಪೀಂಚಲು ನೋಡುತ್ತಿದ್ದಂತೆಯೆ ಹತ್ತಿರದ ಹಳು ಅಲುಗಿ, ಹತ್ತಿರ ಹತ್ತಿರ ಇನ್ನೂ ಹತ್ತಿರಕ್ಕೆ ಆ ಪ್ರಾಣಿ ಧಾವಿಸುತ್ತಾ ಬಳಿಸಾರಿ ಕಡೆಗೆ ಗುಡಿಯೊಳಕ್ಕೇ ನುಗ್ಗಿಬಿಟ್ಟಿತು!
“ಹಡ್ಡಿಡ್ಡಿಡ್ಡಿಡ್ಡೀ!” “ಅದನ್ನೋಡಿಸುವ ಸಲುವಾಗಿ ಕೂಗಿದಳು ಪೀಂಚಲು.
“ಏ!  ನಾನಲ್ದಾ? ಇವಳಿಗೇನು ಬಂದಿತ್ತೊ ಕೂಗುವುದಕ್ಕೆ? ನಾನೇನು ಹಂದಿಯೋ ಹುಲಿಯೋ?…. ಕೇಳಿತು ಐತನ ತುಸು ಅಣಕದ ದನಿ.
“ಹಂದಿ ಅಲ್ಲದಿದ್ದರೆ ಕೋಣ?…ಎಲ್ಲಿಗೆ ಹೋಗಿದ್ದೆ ನೀನು? ಇಲ್ಲಿಯೆ ಇರುತ್ತೇನೆ ಅಂದಿದ್ದಂವಾ?….”ಸಿಡುಕಿದಳು ಪೀಂಚಲು.
ಐತ ಓಡುತ್ತಲೆ ಬಂದಿದ್ದ. ನಡೆದದ್ದನ್ನು ಸಂಕ್ಷೇಪವಾಗಿ ಹೇಳಿ, ಅವಸರಪಡಿಸಿದ: ಚಿನ್ನಕ್ಕನ್ನ ಹುಡುಕುತ್ತಿದ್ದಾರೆ! ಆಗಲೆ ಗಾಬರಿಯಾಗಿದೆ! ಚಿನ್ನಕ್ಕನ ಕರಕೊಂಡು ಬೇಗ ಹೋಗಬೇಕು. ಮುಕುಂದಣ್ಣ ಯೆಂಕಮ್ಮನ ಕೊಟ್ಟಿಗೆ ಹತ್ರ ಕಾಯ್ತೀನಿ ಅಂತಾ ಹೇಳಿದ್ದಾರೆ.”
ಪೀಂಚಲು ಅಲ್ಲಿ ನಡೆದದ್ದನ್ನು ಗಂಡನಿಗೆ ತಿಳಿಸಿ, ಚಿನ್ನಮ್ಮ ಏಳಲೊಲ್ಲದೆಯೋ ಏಳನಾರದೆಯೋ ಅಡ್ಡಬಿದ್ದಿರುವುದನ್ನು ತೋರಿಸಿದಳು. ಐತನೂ ಹೆದರಿಕೊಂಡೆ “ಚಿನ್ನಕ್ಕಾ! ಚಿನ್ನಕ್ಕಾ!” ಎಂದು ಕಿವಿಯ ಹತ್ತಿರ ಕರೆದರು ಪ್ರಯೋಜನವಾಗಲಿಲ್ಲ. ದಿಕ್ಕು ತೋರದಂತಾಗಿ ಅವನು ಮುಕುಂದಯ್ಯನನ್ನು ಕರೆತರುತ್ತೇನೆಂದು ಅತ್ತ ಕಡೆಗೆ ಗುಡ್ಡ ಏರಿ ಓಡಿದನು.
ಅಷ್ಟರಲ್ಲಿ, ಬಹಳ ಹೊತ್ತಾದರೂ ಇವರು ಬರದಿರುವುದನ್ನು ಶಂಕಿಸಿ, ಲಾಟೀನನ್ನು ತಾನು ಗುಡಿಯಲ್ಲಿಯೆ ಬಿಟ್ಟು ಬರದೆ ತನ್ನ ಜೊತೆಯಲ್ಲಿ ತಂದುದಕ್ಕಾಗಿ ಪರಿತಪಿಸುತ್ತಾ, ಕತ್ತಲಲ್ಲಿ ದಾರಿಯಲ್ಲದ ಹಳುವಿನಲ್ಲಿ ಹಾದಿ ತಪ್ಪಿದರೋ ಏನೋ ಎಂದು ಕಳವಳಿಸುತ್ತಾ ಲಾಟೀನಿನ ಬೆಳಕಿನೊಡನೆ ಓಡೋಡಿ ಬರುತ್ತಿದ್ದ ಮುಕುಂದಯ್ಯನನ್ನು ಸಂಧಿಸಿದ ಐತ ಅವನಿಗೆ ನಡೆದುದನ್ನೆಲ್ಲ ಹೇಳತ್ತಲೆ ಗುಡಿಗೆ ಕರೆತಂದನು.
ದೊಡ್ಡದು ಮಾಡಿದ ಲಾಟೀನಿನ ಬೆಳಕಿನಲ್ಲಿ ಗುಡಿಯ ಒಳಗು ಬೆಳಗಿತು. ದೇವರ ಮುಂದೆ ಅಡ್ಡಬಿದ್ದಿಂತಿದ್ದ ಚಿನ್ನಮ್ಮನ ಆಕಾರ, ಆಕೆ ಉಟ್ಟಿದ್ದ ಧಾರೆಯ ಸೀರೆ ಮತ್ತು ಹೊರಡುವ ಅವಸರದಲ್ಲಿ ಕಳಚಿಡಲು ಸಾಧ್ಯವಾಗದಿದ್ದು ತೊಟ್ಟಂತೆಯೇ ಇಟ್ಟುಕೊಂಡಿದ್ದ ಹೊಳೆವ ಹೊನ್ನಿನ ತೊಡವುಗಳು ಇವುಗಳಿಂದ ಶೋಭಿಸಿ, ಮುಕುಂದಯ್ಯನ ಮನಸ್ಸಿಗೆ ತಾನು ಕಾವ್ಯದಲ್ಲಿ ಓದಿದ್ದ ಅಪ್ಸರಾ ದೇವಿಯರ ನೆನಪು ತಂದಿತ್ತು.  ಆದರೆ ಅದರ ಆಸ್ವಾದನೆಗೆ ಅನುಕೂಲವಾಗಿರದಿದ್ದ ಆ ಸನ್ನಿವೇಶ ಅವನ ಹೃದಯದ ಖೇದೋದ್ವೇಗಗಳನ್ನು ದ್ವಿಗುಣಿತ ಮಾಡಿತೆ ಹೊರತೂ ಅವನನ್ನು ಸುಖಿಯನ್ನಾಗಿ ಮಾಡಲಿಲ್ಲ.
“ಏಳಿ ಚಿನ್ನಕ್ಕಾ! ಮುಕ್ಕುಂದಯ್ಯ ಬಂದರು, ಮುಕುಂದಯ್ಯ!”
ಪೀಂಚಲು ಕಿವಿಯಲ್ಲಿ ಉಚ್ಛರಿಸಿದ ಮುಕ್ಕುಂದಯ್ಯನ ಹೆಸರು ಮಂತ್ರವಾಯಿತೆಂಬಂತೆ ಚಿನ್ನಮ್ಮ “ಆಃ ಬಂದರೇ? ಅವರು ಬಂದರೇ?” ಎಂದು, ’ಅವರು’ ಎಂಬ ಪದವನ್ನು ಧ್ವನಿಸ್ಫುರಿಸುವಂತೆ ಒತ್ತಿ ಉಸುರಿ, ದಡಬಡನೆ ಎದ್ದು ನಿಂತಳು.
ತನ್ನ ಕಡೆಗೆ ಮುಖಮಾಡಿ ನಿಂತಿದ್ದ ಚಿನ್ನಮ್ಮನನ್ನು ಲಾಟೀನಿನ ಬೆಳಕಿನಲ್ಲಿ ನೋಡಿ, ಮೊದಲ ನೋಟಕ್ಕೆ, ಮುಕ್ಕುಂದಯ್ಯ ಮರುಳಾಗಿ ಹೋದನು. ಬಾಲ್ಯದಿಂದಲೂ ತಾನು ನೋಡುತ್ತಲೆ ಬಂದಿದ್ದ ಅವಳು ಇಂದು ಯಾರೊ ಅನ್ಯಳೆಂಬಂತೆ ಅದ್ಭುತವಾಗಿ ತೋರಿದಳು. ಅವಳು ಮಾರಿಯಮ್ಮನ ಮುಂದೆ ಅಡ್ಡಬಿದ್ದಿದ್ದಾಗ ಹಿಂಭಾಗದಿಂದ ನೋಡಿಯೆ ಭಾವವಶನಾಗಿದ್ದನು. ಈಗ ಆ ದಿವ್ಯ ಮುಗ್ಧ ಮುಖದ ತೇಜಃಪೂರ್ಣವಾದ ಸೌಂದರ್ಯರಾಶಿಯನ್ನು ಈಕ್ಷಿಸಿ ವಿಸ್ಮಿತನಾದನು. ಅದರಲ್ಲಿಯೂ ಮದುಮಗಳ ಉಡುಗೆ ತೊಡುಗೆಗಳಲ್ಲಿ ಆಕೆ ಸಾಕ್ಷಾತ್ ಲಕ್ಷ್ಮೀಯಾಗಿ ವಿರಾಜಿಸಿದ್ದಳು. ಹಿಂದೆ ಇಲ್ಲದಿದ್ದ ಏನೋ ಎಂದು ಪೀಂಚಲುವು ಬೆರಗಾಗಿ ನೊಡಿದಳು. “ಚಿನ್ನಕ್ಕ ಎಷ್ಟು ಚಂದಾಗಿ ಆಗಿಬಿಟ್ಟಿದ್ದಾರೆ?” ಎಂದುಕೊಂಡಳು ಅವಳೂ!
ಚಿನ್ನಮ್ಮ ಎದ್ದು ನಿಂತಿದ್ದರೂ ಇನ್ನೂ ಸಂಪೂರ್ಣ ಎಚ್ಚರ ಗೊಂಡಂತೆ ಕಾಣುತ್ತಿರಲಿಲ್ಲ. ಯಾವುದೋ ದಿವ್ಯ ಅತೀತ ಶಕ್ತಿಯ ಅಧೀನದಲ್ಲಿಯೆ ವರ್ತಿಸುತ್ತಿದ್ದಂತೆ ಭಾಸವಾಯಿತು. ಅವಳು ಮುಕ್ಕುಂದಯ್ಯನನ್ನು ನೇರವಾಗಿ ನೋಡಿ, ಮೊಗದಲ್ಲಿ ಮುಗುಳುನಗೆಯೊಂದನ್ನು ಸುಳಿಸಿದಳು. ತನ್ನ ಮುಕ್ಕುಂದಬಾವ ಬಂದಿದ್ದಾರೆ; ತನ್ನ ಸರ್ವಸ್ವವೂ ಇನ್ನು ಅವರಿಗೆ ಎಲ್ಲವನ್ನೂ ನೈವೇದ್ಯಮಾಡಿ, ತನ್ನತನವೆನ್ನೆಲ್ಲ ಅವರಿಗೆ  ಸಂಪೂರ್ಣವಾಗಿ ಶರಣುಗೊಳಿಸಿದ ಶರಣಾಗತಿಭಾವದಲ್ಲಿ ಅವಳ ದೃಷ್ಟಿ ಮುಕ್ಕುಂದಯ್ಯನ ದೃಷ್ಟಿಯನ್ನು ಸಂಧಿಸಿತ್ತು. ಅವನಂತೂ ಸುಪ್ರಸನ್ನೆಯಾದ ಧನಲಕ್ಷ್ಮಿಯ ಮುಂದೆ ನಿಂತಿರುವ ದರಿದ್ರನಂತೆ ದೈನ್ಯವನ್ನೂ ಐಶ್ವರ್ಯವನ್ನೂ ಒಮ್ಮೆಗೇ ಅನುಭವಿಸುತ್ತಿದ್ದನು: ತನಗಾಗಿ ಏನನ್ನೆಲ್ಲ ತ್ಯಜಿಸಿ ಬಂದಿದ್ದಾಳೆ ತನ್ನ ಚಿನ್ನಿ! ಶಠ ಸಂಪ್ರದಾಯಬದ್ಧವಾದ ಅಂದಿನ ಆ ಕುಲೀನ ಸಮಾಜದಲ್ಲಿ, ನಾಗರಿಕ ಅಕ್ಷರವಿದ್ಯೆಯ ಗಂಧವೂ ಇಲ್ಲದ ಲಜ್ಜಾಶೀಲವತಿಯಾದ ಸಣ್ಣ ಹುಡುಗಿಯೊಬ್ಬಳು ಧೈರ್ಯಮಾಡಿ ಮಾನ ಮರ್ಯಾದೆ ಕ್ಷೇಮ ಬಂಧುಬಾಂಧವರು ಯಾರನ್ನೂ ಯಾವುದನ್ನೂ ಪರಿಗಣಿಸದೆ, ಲಕ್ಷಿಸದೆ, ಮದುವೆಯ ದಿನವೆ ತಾನೊಲಿದವನಿಗಾಗಿ ಹೀಗೆ ಸಾಹಸಿಯಾದದ್ದು ಏನು ಸಾಮಾನ್ಯವೆ? ದೈವ ನಿಯಾಮಕವೆ ಇರಬೇಕು! ಅದರಲ್ಲಿಯೂ ತನ್ನಂತಹ ಸಾಮಾನ್ಯನಿಗಾಗಿ? (ಇಲ್ಲಿ ತನ್ನ ಮುಂದೆಯೇ ದೇವರಾಜ್ಞೆಯಂತೆ ನಿಂತು ಹೊಳೆಯುತ್ತಿದ್ದ ಅವಳಿಗೂ ಕಂಬಳಿಕೊಪ್ಪೆ ಹಾಕಿಕೊಂಡು ಸಾಮಾನ್ಯ ಉಡುಪಿನಲ್ಲಿ ರೂಕ್ಷವಾಗಿ ನಿಂತಿದ್ದ ತನಗೂ ಇದ್ದ ತಾರತಮ್ಮ ಮುಕ್ಕುಂದಯ್ಯನಿಗೆ ಪ್ರತ್ಯಕ್ಷಗೋಚರವಾದಂತಿತ್ತು!) ಅಲ್ಪನಿಗಾಗಿ? ಯಾವ ವಿಶೇಷವೂ ಇಲ್ಲದ ಕ್ಷುದ್ರನಿಗಾಗಿ? ಮುಕುಂದಯ್ಯನಿಗೆ ಕಲ್ಲೂರು ಗಡ್ಡದಯ್ಯನ ನೆನಪಾಯಿತು. ಚಿನ್ನಮ್ಮನ ಪರವಾಗಿ ಹೃದಯದಲ್ಲಿ ಅನಂತ ಕೃತಜ್ಞತೆ ಉಕ್ಕಿ ಕಣ್ಣುಗಳಲ್ಲಿ ಹೊಮ್ಮಿತು ನೀರಾಗಿ!
“ಐತಾ, ಲಾಟೀನು ತೆಗೆದುಕೊ; ಬತ್ತಿ ಇಳಿಸಿ, ದೀಪ ಸಣ್ಣದು ಮಾಡಿಕೊ ಮುಂದೆ ಹೊರಡು….ಪೀಂಚಲೂ, ನೀನು ಆ ಕಂಬಳಿಕೊಪ್ಪೆ ಹಾಕಿಕೊ. ಇವಳದ್ದನ್ನೂ ಎತ್ತಿಕೊ….
ಎಷ್ಟು ತಟಕ್ಕನೆ ನಿಶ್ಚಯಿಸಿ ಮುಕುಂದಯ್ಯ ಹೇಳಿದ್ದನೆಂದರೆ, ಅವನ ಧ್ವನಿಯಲ್ಲಿ ಚಲನವಲನಗಳಲ್ಲಿ ಶೀಘ್ರತ್ವದ ಬಾವಭಂಗಿಗಳು ಸುಸ್ಫಟವಾಗಿದ್ದುವು.
ಐತ ಲಾಟೀನು ಸಹಿತ ಗುಡಿಯಿಂದ ಕೆಳಗಿಳಿದನು.
ಮತ್ತೆ ಮೊದಲಿನಂತೆಯೆ ಕವಿದು ಬಂದ ಮಿಣಿಮಿಣಿ ಹಣತೆ ಬೆಳಕಿನ ಮಬ್ಬುಗತ್ತಲೆಯಲ್ಲಿ ನಿಂತಿದ್ದ ಚಿನ್ನಮ್ಮನೆಡೆಗೆ ಮುಕುಂದಯ್ಯ ಸರಸರನೆ ನಡೆದು, ಅವಳನ್ನು ತನ್ನ ಹೆಗ್ಗಂಬಳಿಕೊಪ್ಪೆಯೊಳಗೆ ಸುತ್ತಿ, ತನ್ನ ಬಲ ತೋಳಿಂದ ಅವುಚಿಕೊಂಡು. ಮಗು ತನ್ನನ್ನು ಅವುಚಿಕೊಳ್ಳುವ ತಾಯಿಗೆ ವಶವಾಗುವಂತೆ ಅವಳು ತನ್ನ ಹಿಂದಿನ ಸಂಕೋಚವನ್ನೆಲ್ಲ ಬಿಸುಟು, ಆ ಬಲಿಷ್ಟ ಆಶ್ರಯವನ್ನು ಬಿಗಿಯಾಗಿ ಅಪ್ಪಿಕೊಂಡಳು. ಅದುವರೆಗೂ ಅವರು ಎಂದೂ ಒಬ್ಬರನ್ನೊಬ್ಬರು ಹಾಗೆ ಮುಟ್ಟಿರಲಿಲ್ಲ.
ಹುಲಿಕಲ್ಲು ನೆತ್ತೆಗೆ ಹೋಗುವ ಕಡಿದಲ್ಲದ ಬಳಸುಮಾರ್ಗದಲ್ಲಿ ಅವರು ಹಳೆಪೈಕದ ಯಂಕಿಯ ಮನೆಯ ಹತ್ತಿರದ ಕೊಟ್ಟಿಗೆಯ ಬಳಿಗೆ ಬಂದಾಗ, ಚಿನ್ನಮ್ಮ ತನಗೆ ಬಾಯಿ ಒಣಗಿ ಬರುತ್ತಿದೆ ಎಂದು ಮುಕುಂದ ಬಾವನ ಕಿವಿಯಲ್ಲಿ ಉಸುರಿದಳು. ಎಲ್ಲರೂ ಕೊಟ್ಟಿಗೆಯ ಕಡಿಮಾಡಿನ ಆಶ್ರಯದಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಳ್ಳಲು ನಿಶ್ಚಯಿಸಿ ನಿಂತರು.
ಮಳೆ ತುಸು ನಿಂತಿತ್ತು. ಆದರೆ ಗಾಳಿ ಶೀತಲವಾಗಿ ಬೀಸುತ್ತಲೆ ಇತ್ತು. ಕೊಟ್ಟಿಗೆಯ ಒಳಗಿಂದ ದನ ಎತ್ತುಗಳ ಕೋಡಿನ ಸದ್ದು, ಸೀನಿನ ಸತ್ತು, ಉಸಿರಾಟದ ಸದ್ದು, ಹಲುಬಿನ ಗಿಡ್ಡಗಳ ಓಡಾಟದ ಸದ್ದು ಕೇಳಿ ಬರುತ್ತಿತ್ತು. ಗಂಜಲ ಸಗಣಿಯ ಕಟು ವಾಸನೆಯೂ ತುಂಬಿತ್ತು. ಕಾಡಿನ ಜಿಗಣೆಕಾಟವನ್ನು ಮೀರಿತ್ತು ನುಸಿಯ ಕಾಟ.
ಮುಕುಂದಯ್ಯನ ಸೂಚನೆಯಂತೆ ಐತ ಹಾಲು ತರಲು ಯೆಂಕಿಯ ಮನೆಗೆ ಹೋದನು.
ಯೆಂಕಿಯ ಮನೆ, ಅದು ಹೊಲೆಯರದ್ದೋ ಗಟ್ಟದ ತಗ್ಗಿನವರದ್ದೋ ಆಗಿದ್ದರೆ ಬಿಡಾರವೆಂದೇ ಕರೆಯಲ್ಪಡುತ್ತಿತ್ತು. ಅದು ಹುಲ್ಲಿನ ಗುಡಿಸಲಾಗಿದ್ದರೂ ದೀವರ ಜಾತಿಯರದ್ದಾದ್ದರಿಂದ ಅದನ್ನು ’ಮನೆ’ ಎಂದು ಕರೆಯುತ್ತಿದ್ದರು ಅಷ್ಟೆ. ಆ ಹೆಸರಿಗೆ ಅದಕ್ಕಿದ್ದ ಹಕ್ಕು ಎಂದರೆ ತಡಿಕೆ ಗೋಡೆಗೆ ಬದಲಾಗಿ ಅದಕ್ಕಿದ್ದ ಮಣ್ಣಿನ ಗೋಡೆಗಳು ಮತ್ತು ಅದರ ಸ್ಥವರತೆ.
ವಯಸ್ಸಾದ ವಿಧವೆ ಯೆಂಕಿ ಒಬ್ಬೊಂಟಿಗಳು. ಅವಳು ಹೆರಿಗೆ ಮಾಡಿಸುವುದು, ಸಣ್ಣ ಪುಟ್ಟ ಕಾಯಿಲೆಗಳಿಗೆ ಮದ್ದು ಕೊಡುವುದು, ದನ ಕರುಗಳಿಗೆ ಕಾಯಿಲೆಯಾದರೆ ಮುಷ್ಟ ಮಾಡುವುದು, ಹಾಲು ಕಡಿಮೆಯಾದರೆ ಹೆಚ್ಚಾಗುವುದಕ್ಕೆ ಬೂದಿ ಮಂತ್ರಿಸಿಕೊಡುವುದು, ಮುಂಡೆ ಬಸುರಿಯಾದರೆ ಅಥವಾ ಕನ್ನೆ ಕಳ್ಳಬಸುರಿಯಾದರೆ ಮದ್ದು ಹಾಕಿ ಸಾಮಾಜಿಕವಾದ ಅವಮಾನ ಬಹಿಷ್ಕಾರಾದಿ ಕ್ಲೇಶಕಷ್ಟಗಳಿಂದ ಆರ್ತರನ್ನು ರಕ್ಷಿಸುವುದು-ಇತ್ಯಾದಿಗಳಲ್ಲಿ ತೊಡಗಿ ಜೀವನಯಾಪನೆ ಮಾಡುತ್ತಿದ್ದಳು. ಆದ್ದರಿಂದ ಅವಳಿಗೆ ಪರಿಚಯವಿಲ್ಲದ ಮತ್ತು ಅವಳ ಪರಿಚಯವಿಲ್ಲದ ಜನರು ಆ ಸೀಮೆಯಲ್ಲಿ ಯಾರೊಬ್ಬರೂ ಇರುತ್ತಿರಲಿಲ್ಲ. ಅವಳಿಗೆ ತಿಳಿಯದಿರುವ ಯಾವ ಗುಟ್ಟಿನ ಸುದ್ದಿಯೂ ಇರಲೂ ಸಾಧ್ಯವಿರಲಿಲ್ಲ.
ರಾತ್ರಿ ಬಹಳ ಹೊತ್ತಾದರೂ ಯೆಂಕಿಯ ಮನೆಯೊಳಗೆ ದೀಪವಿತ್ತು. ಐತ ತಟ್ಟಿದೊಡನೆ ಬಾಗಿಲು ತೆರೆದದ್ದು ಯೆಂಕಿಯಲ್ಲ, ನಾಗತ್ತೆ!
ಐತ ನಾಗತ್ತೆಯನ್ನು ಕಂಡು ಕಕ್ಕಾವಿಕ್ಕಿಯಾದ. ಅವನಿಗೆ ಮಾತೇ ಹೊರಡಲಿಲ್ಲ. ಅಂತಹ ಅಸ್ಥಾನದಲ್ಲಿ ಅವೇಳೆಯಲ್ಲಿ ಅನಿರೀಕ್ಷಿತವಾಗಿ ನಾಗತ್ತೆಯನ್ನು ಸಂಧಿಸಲು ಅವನ ಪ್ರಜ್ಞೆ ಸ್ವಲ್ಪವೂ ಸಿದ್ಧವಾಗಿರಲಿಲ್ಲ.
ಅಲ್ಲಿಂದ ಇಲ್ಲಿಂದ ಅವಳ ವಿಚಾರವಾಗಿ ಸ್ವಲ್ಪ ಸ್ವಲ್ಪ ಸುದ್ದಿ ಅವನ ಕಿವಿಗೆ ಬಿದ್ದಿತ್ತು. ಆದರೆ ತನ್ನ ಹೆಂಡತಿಯಿಂದಲೇ ಕೇಳಿದ್ದ ಅತ್ಯಂತ ಅಸಹ್ಯವಾದ ರಹಸ್ಯವಾರ್ತೆಯಿಂದ ನಾಗತ್ತೆಯ ವಿಚಾರವಾಗಿ ಅವನ ಮನಸ್ಸು ಪೂರಾ ಕೆಟ್ಟಿತ್ತು. ಅವಳನ್ನು ಹೂವಳ್ಳಿ ನಾಯಕರು ತಮ್ಮ ಮೇಲೆ ಬರಬಹುದಾದ ಅಪವಾದದಿಂದ ಪಾರಾಗುವುದಕ್ಕಾಗಿಯೂ ತಮ್ಮ ಮಗಳ ಮದುವೆಯ ಸಂದರ್ಭದಲ್ಲಿ ಪಾಲು ಮುಖಂಡರಿಂದ ಬಹಿಷ್ಕಾರ ಗಿಹಿಷ್ಕಾರದ ಅವಮಾನದ ಗೊಂದಲಕ್ಕೆ ಅವಕಾಶ ಒದಗದಿರುವುದಕ್ಕಾಗಿಯೂ ಹೂವಳ್ಳಿ ಮನೆಯಿಂದ ಹೊರಡಿಸಿದ ಮೇಲೆ, ನಾಗತ್ತೆ ಮೇಗರವಳ್ಳಿಯಲ್ಲಿ ಯಾರೊ ಕೀಳುಜಾತಿಯವರ ಮನೆಯಲ್ಲಿ,-ಸಾಬರ ಮನೆಯಲ್ಲಿ ಎಂದೂ ಹೇಳುತ್ತಿದ್ದವರು ಕೆಲವರು,-ಗುಪ್ತ ಆಶ್ರಯ ಪಡೆದು, ಹಳೆಪೈಕದ ಯೆಂಕಿಯಿಂದ ಮದ್ದು ತೆಗೆದುಕೊಳ್ಳುತ್ತಿದ್ದಾಳೆ ಎಂದು ಕೇಳಿದ್ದನು. ಆದರೆ ಇಂತಹ ಸಂಕಟದ ಸಂದರ್ಭದಲ್ಲಿ ಯೆಂಕಮ್ಮನ ಮನೆಯಲ್ಲಿ ನಾಗತ್ತೆಗೆ ಇದಿರಾಗುವ ಅನನ್ವಯಕ್ಕೆ ಅವನ ಪ್ರಜ್ಞೆ ಸಿದ್ಧವಾಗಿರಲಿಲ್ಲ.
“ಏನೋ, ಐತಾ? ಈ ಮಳೇಲಿ? ಇಷ್ಟ್ಹೊತ್ತಿನಲ್ಲಿ? ಇಲ್ಲಿ?”
ನಾಗತ್ತೆಯ ಪ್ರಶ್ನೆಗಳಿಗೆ ಉತ್ತರವೆ ಹೊರಡದೆ, ಮುಕುಂದಣ್ಣ ಚಿನ್ನಕ್ಕರ ಗುಟ್ಟಿನ ಸಾಹಸ ಬಯಲಾಗದಂತೆ ಏನು ಹೇಳುವುದು ಎಂದು ಚಿಂತಿಸುತ್ತಾ ನಿಂತಿದ್ದ ಐತ ಒಳಗಣಿಂದ ಯೆಂಕಿ ಬರುತ್ತಿದ್ದುದನ್ನು ಕಂಡು “ಏನಿಲ್ಲ. ಯೆಂಕಮ್ಮನ ಹತ್ರ ಮದ್ದಿಗೆ ಬಂದೆ!” ಎಂದುಬಿಟ್ಟನು.
“ಯಾರಿಗೋ?….ನಿನ್ನ ಹೆಂಡ್ತಿಗೇನೋ?….ಅವಳಿಗೆ ಆಗಲೆ ತಿಂಗಳು ತುಂಬಿದೆಯೇನೊ?….ಬ್ಯಾನೆ ಸಂಕಟ ತೊಡಗಿ ಯೆಂಕಿ ಕರೆಯೋಕ್ಕೆ ಬಂದಿಯೇನೋ?….” ನಾಗತ್ತೆ ಪ್ರಶ್ನೆಗರೆದಳು.
ತನಗೆ ಹೊಳೆಯದಿದ್ದ ಉತ್ತರವನ್ನು ನಾಗತ್ತೆಯೆ ಸೂಚಿಸಿದ್ದರಿಂದ ಅದನ್ನೆ ಗಬಕ್ಕನೆ ಒಪ್ಪಿಕೊಂಡು “ಹೌದು, ಮಾರಾಯ್ರ, ಅದಕ್ಕೇ ಓಡಿ ಬಂದೆ” ಎಂದುಬಿಟ್ಟನು ಐತ.
ಆದರೆ ಅವರ ಸಂಭಾಷಣೆಯನ್ನು ಆಲಿಸುತ್ತಿದ್ದ ಯೆಂಕಿ ಐತ ಹೇಳಿದುದನ್ನು ನಂಬಿರಲಿಲ್ಲ. ಅವಳಿಗೆ ಆ ರಾತ್ರಿ ನಡೆಯಲು ಸಿದ್ಧವಾಗಿದ್ದ ನಾಟಕದ ಪೂರ್ವಪರಿಚಯವಿದ್ದುದರಿಂದಲೂ ಅವಳ ಸಹಾನುಭೂತಿಯೆಲ್ಲ ಮುಕುಂದಯ್ಯನ ಪರವಾಗಿದ್ದುದರಿಂದಲೂ ಐತನನ್ನು ಏಕಾಂತಕ್ಕೆ ಕರೆದು ಕಿವಿಮಾತಾಡಿದಳು. ಮುಕುಂದಯ್ಯ ಹಾಲಿಗೆ ಹೇಳಿ ಕಳುಹಿಸಿದ್ದಾರೆ ಎಂಬುದನ್ನು ಕೇಳಿದೊಡನೆ ಆ ಅನುಭವಶಾಲಿಯಾಗಿದ್ದ ಮುದುಕಿಗೆ ಎಲ್ಲ ಗೊತ್ತಾಗಿ ಹೋಯಿತು.
“ಓಡಿಹೋಗಿ ಹೇಳು ಮುಕುಂದಯ್ಯೋರಿಗೆ, ಚಿನ್ನಕ್ಕನ್ನ ಇಲ್ಲಿಗೆ ಕರಕೊಂಡು ಬರಾಕೆ….ಅಯ್ಯೋ, ಈ ಕತ್ತಲೇಲಿ ಈ ಮಳೇಲಿ, ಪಾಪ! ಅಷ್ಟು ಸುಖದಲ್ಲಿ ಬೆಳೆದ ಆ ಅರಿಯದ ಮಗು, ಹುಲಿಕಲ್ಲು ನೆತ್ತಿಗೆ ಹೆಂಗೋ ಹತ್ತಾದು?… ’ಅಲ್ಲಿ ಯಾರೂ ಇಲ್ಲ; ಅವರನ್ನ ಕರಕೊಂಡು ಬರಬೇಕಂತೆ’ ಅಂತಾ ಹೇಳು…” ಐತ ದೂರದಲ್ಲಿ ನಿಂತಿದ್ದ ನಾಗತ್ತೆಯ ಕಡೆಗೆ ಕಣ್ಣು ಹಾಯಿಸಿದುದನ್ನು ಗಮನಿಸಿ ಮುದುಕಿ ಮುಂದುವರಿಸಿದಳು: “ಆ ಬಾಂವಿಕೊಪ್ಪದ ಹೆಗ್ಗಡ್ತೇರನ್ನ ಯಾರ ಕಣ್ಣಿಗೂ ಬೀಳದ ಹಾಂಗೆ ಮುಚ್ಚಿಡ್ತೀನೋ. ನೀ ಮಾತ್ರ ಆ ಇಚಾರ ಮಾತೆತ್ತಬ್ಯಾಡ, ಗೊತ್ತಾಯ್ತಾ? ಓಡು, ಮತ್ತೆ, ಬ್ಯಾಗ.”
ಐತ ಓಡುತ್ತಲೆ ಕತ್ತಲೆಯಲ್ಲಿ ಕಣ್ಮರೆಯಾದನು. ಯೆಂಕಿ ನಾಗತ್ತೆಯನ್ನು ಮನೆಯ ಹಿಂದುಗಡೆಯ ಒಂದು ಕೋಣೆಯಲ್ಲಿ ಕುಳಿತಿರುವಂತೆ ಹೇಳಿ, ಬಾಗಿಲು ಎಳೆದುಕೊಂಡು ಚಿಲಕ ಹಾಕಿದಳು. ಜಗಲಿಯಲ್ಲಿ ಅತಿಥಿಗಳು ಕುಳಿತುಕೊಳ್ಳಲು ಅನುಕೂಲವಾಗುವಂತೆ ಒಂದು ಚಾಪೆ ಬಿಚ್ಚಿ ಹರಡಿದಳು.
ಸ್ವಲ್ಪ ಹೊತ್ತಿನಲ್ಲಿಯೆ ಮದುಮಗಳ ವೇಷಭೂಷಣದಿಂದ ಮುದುಕಿಯ ಕಣ್ಣಿಗೆ ಅಮೃತಸೇಚನ ಮಾಡುತ್ತಿದ್ದ ಚಿನ್ನಮ್ಮನನ್ನು ಮುಂದುಮಾಡಿಕೊಂಡು ಮುಕುಂದಯ್ಯ, ಪೀಂಚಲು ಮತ್ತು ಐತ ಮನೆಯನ್ನು ಪ್ರವೇಶಿಸಿದರು. ಮುದುಕಿ ಮುಕುಂದಯ್ಯಗೆ ಕಾಲು ತೊಳೆದುಕೊಳ್ಳಲು ನೀರುಕೊಟ್ಟು, ಬೇಡಬೇಡವೆಂದರೂ ಕೇಳದೆ ಸುತ್ತುಗಾಲುಂಗುರಗಳನ್ನು ಶುಚಿಮಾಡಿ ಮತ್ತೆ ಮೊದಲಿನಂತೆಯೆ ತುಂಬ ಮುದ್ದಿನಿಂದ ತೊಡಿಸಿದಳು. ನಿಸ್ಸಂತಾನಳಾಗಿ ಒಂಟಿಬಾಳು ಬಾಳುತ್ತಿದ್ದ ಆ ವೃದ್ಧೆಯ ಕಣ್ಣು ಒದ್ದೆಯಾಗಿದ್ದುದನ್ನು ಅವಳು ಯಾರಿಗೂ ತೋರಗೊಡಲಿಲ್ಲ. ಸೊಬಗು ತುಂಬಿ, ಹೊಂಬಳಗ ಮುದ್ದು ಸೂಸಿ, ಮಿರುಗುತ್ತಿದ್ದ ಚಿನ್ನಮ್ಮನ ಕೋಮಲ ಪಾದಯುಗ್ಮಗಳನ್ನು, ನಾನಾ ನೆವದಿಂದ ಸುಕ್ಕಿದ ತನ್ನ ಒರಟು ಕೈಯಿಂದ ಮುಟ್ಟಿ, ಸೋಂಕಿ, ನೀರೊರೆಸಿ, ಸೊಗಯಿಸುತ್ತಾ ಕಣ್ಣಿನಿಂದಲ್ ಮುದ್ದಿಸಿದಳು, ಆ ಮುದುಕಿ.
ಹಳೆಪೈಕದವಳ ಅಡುಗೆಮನೆ ಹೂವಳ್ಳಿ ವೆಂಕಪ್ಪನಾಯಕರ ಮಗಳಿಗೆ ಪ್ರವೇಶಿಸಲು ನಿಷಿದ್ಧ ಪ್ರದೇಶವಾಗಿದ್ದರೂ, ಅದರ ಮಿಶ್ರವಾಸನೆ ಅಸಹನೀಯವಾಗಿದ್ದರೂ ಯೆಂಕಿ ಚಿನ್ನಮ್ಮನನ್ನು ಒಳಗೆ ಕರೆದೊಯ್ದು ಒಲೆಯ ಬೆಂಕಿಯಲ್ಲಿ ಒದ್ದೆಯಾರಿಸಿಕೊಳ್ಳುವಂತೆ ಮಾಡಿದಳು. ಮಳೆ ಗಾಳಿಯ ಚಳಿಗೆ ಇನ್ನೇನು ಉಡುರು ಹತ್ತುವುದರಲ್ಲಿದ್ದ ಅವಳ ಮೈಗೆ ಯೆಂಕಿಯ ಒಲೆಯ ಬೆಂಕಿ ಮುದುಕಿಯ ತಾಯ್ತನದ ಅಕ್ಕರೆಯಷ್ಟೆ ಬೆಚ್ಚಗೆ ನೊಚ್ಚಗಿತ್ತು! ಯೆಂಕಿ ಕೊಟ್ಟ ಬಾಳೆಹಣ್ಣುಗಳನ್ನು ತಿಂದು, ಹಾಲು ಕುಡಿದು, ನಿಜವಾಗಿಯೂ ಹಸಿವೆಯಿಂದಲೆ ದಣಿದಿದ್ದ ಚಿನ್ನಮ್ಮ ಚೇತರಿಸಿಕೊಂಡಳು. ಜೊತೆಗೆ ಎಷ್ಟು ಬೇಡವೆಂದರೂ ಒಲ್ಲೆನೆಂದರೂ ಕೇಳದೆ ಮುದುಕಿ ಕುಚ್ಚಿಕೊಟ್ಟ ಒಂದು ಮೊಟ್ಟೆಯನ್ನೂ ತಿನ್ನಬೇಕಾಯಿತು. ಅವಳು ಕಣ್ಣುಸನ್ನೆ ಕೈಸನ್ನೆಗಳಿಂದಲೆ ಸೂಚಿಸಿದ ಇನ್ನೊಂದು ಕುಡಿಯುವ ಪದಾರ್ಥವನ್ನು ಮಾತ್ರ ಚಿನ್ನಮ್ಮ ಬಲವಾಗಿ ತಲೆಯಲ್ಲಾಡಿಸಿಯೆ ತಿರಸ್ಕರಿಸಿದ್ದಳು: ಅವಳು ಅಡುಗೆಯ ಮನೆಗೆ ಕಾಲಿಡುವಾಗಲೆ ಮೂಗಿಗೆ ರುಮ್ಮನೆ ಬಡಿದಿತ್ತು ಕಳ್ಳುಗಂಪು!
“ಬೆಳಗಿನ ಜಾಂವ ಕಸ್ತಲೆಕಸ್ತಲೆ ಇರುವಾಗಲೆ ಎದ್ದು ಹೋಗಬೈದು. ಈ ಕತ್ತಲೇಲಿ ಈ ಮಳೇಲಿ (ಆಗ ಮಳೆ ನಿಂತಿತ್ತು; ಆದರೂ ಮುದುಕಿ ತನ್ನ ವಾದದ ಪುಷ್ಟಿಗಾಗಿ ಅದನ್ನು ಲಕ್ಷಿಸದೆ ಮಾತಾಡುತ್ತಿದ್ದಳು.) ಚಿನ್ನಕ್ಕನ್ನ ಯಾಕೆ ದಣಿಸ್ತೀರಿ?” ಎಂದು ನಾನಾ ವಿಧವಾಗಿ ಯೆಂಕಿ ವಾದಿಸಿದರೂ ಮುಕುಂದಯ್ಯ ಅದಕ್ಕೆ ಒಪ್ಪಲಿಲ್ಲ. ಅಲ್ಲದೆ ಚೇತರಿಸಿಕೊಂಡಿದ್ದ ಚಿನ್ನಮ್ಮನೂ, ತನಗೀಗ ಯಾವ ದಣಿವೂ ಇಲ್ಲ, ಎಂದು ಮುಕುಂದಬಾವನ ಇತ್ಯರ್ಥವನ್ನೇ ಸಮರ್ಥಿಸಿದಳು. ಮುದುಕಿ ನವವಧೂವೇಷದಲ್ಲಿದ್ದ ನವ ತಾರುಣ್ಯದ ಹುಡುಗಿಯನ್ನು ಅರ್ಥಪೂರ್ಣವಾಗಿ ನೋಡಿ, ನಿಡುಸುಯ್ದು, ಮುಗುಳು ನಗೆ ನಕ್ಕಳಷ್ಟೆ! ತನ್ನ ತಾರುಣ್ಯದಲ್ಲಿ ತನ್ನ ಪ್ರಿಯನೊಡನೆ ಕಾಡು ಬೆಟ್ಟ ಹತ್ತಿ ಇಳಿದು ದಣಿವು ಕಾಣದೆ ನಡೆದಾಡಿದ್ದ  ನೆನಪು ಅವಳಿಗೆ ಮರುಕೊಳಿಸಿರಬಹುದೇನೊ!
ಆದರೆ ಪೀಂಚಲು ತನ್ನ ಗಂಡನ ಕಿವಿಯಲ್ಲಿ, ಯೆಂಕಮ್ಮ ಹೇಳಿದ ಹಾಗೆ ಮಾಡಿದ್ದರೇ ಅನುಕೂಲವಾಗುತ್ತಿತ್ತು, ಎಂಬರ್ಥದ ಮಾತಾಡಿದಳು. ತನ್ನ ಹೆಂಡತಿ ಚೊಚ್ಚಲು ಎಳ ಬಸುರಿ ಎಂಬುದನ್ನು ನೆನಪಿಗೆ ತಂದುಕೊಂಡು ಐತ ಮುಕುಂದಯ್ಯನಿಗೆ ಅದನ್ನು ಹೇಳಲು, ಅವನು ಯೆಂಕಿಗೆ-’ಪೀಂಚಲು ಮಾತ್ರ ಉಳಿಯುತ್ತಾಳೆ. ಮರುದಿನ ಬೆಳಿಗ್ಗೆ ಅವಳನ್ನು ಕೋಣೂರಿಗೆ ಅವಳ ಬಿಡಾರಕ್ಕೆ ಕಳಿಸಿಕೊಡಿ’-ಎಂದು ಹೇಳಿ, ಚಿನ್ನಮ್ಮ ಮತ್ತು ಐತರೊಡನೆ ಹೊರಡಲನುವಾದನು.
ಮುಕುಂದಯ್ಯ ತನ್ನವನೆ ಆಗಿದ್ದರೂ, ಮುಂದೆ ತಾನು ಅವನವಳೆ ಆಗುವುದಿದ್ದರೂ, ತನ್ನ ಜೊತೆ ಮತ್ತೊಂದು ಹೆಣ್ಣುಜೀವ ಇಲ್ಲದೆ ತಾನೊಬ್ಬಳೆ ಗಂಡಸರಿಬ್ಬರ ಸಂಗಡ ಹೋಗುವುದಕ್ಕೆ ತುಂಬ ನಾಚಿಕೆಪಟ್ಟುಕೊಂಡ ಚಿನ್ನಮ್ಮ ಪೀಂಚಲು ಮುಖದ ಕಡೆ ಯಾಚನಾ ದೃಷ್ಟಿ ಬೀರಿ ನೋಡಲು, ಆ ಇಂಗಿತಜ್ಞೆ ಹಿಂದು ಮುಂದು ನೋಡದೆ ಅವನೊಡನೆ ಹೊರಟೆಬಿಟ್ಟಳು!
ಆ ನಾಲ್ಕು ನೆರಳುಗಳೂ ಐತ ಹಿಡಿದಿದ್ದ ಲಾಟೀನಿನ ಬೆಳಕೂ ಹಳುವಿನಲ್ಲಿ ಅಡಗಿದ ಮೇಲೆ ಯೆಂಕಿ ಬಾಗಿಲು ಮುಚ್ಚಿಕೊಂಡು ಸೆರಗಿನಿಂದ ಕಣ್ಣು ಮೂಗು ಒರಸಿಕೊಂಡಳು.
*****

ಕಾಮೆಂಟ್‌ಗಳಿಲ್ಲ: