ಶ್ರೀ ಸಂಪುಟಂ: ಸಂಚಿಕೆ 9 - ಸೆರೆಸಿಲ್ಕಿದನೋ ವೈರಿ

ಶ್ರೀ ಸಂಪುಟಂ: ಸಂಚಿಕೆ 9 - ಸೆರೆಸಿಲ್ಕಿದನೋ ವೈರಿ
ದೇವತರುಮಯ ಮೇರುಗಿರಿ ಸಾನು ಶಿಶಿರಮಯ
ಛಾಯೆಯಲಿ ಮೂರ್ಚಿತೆಯನಿಳುಹಿದನು ತೋಳ್ಗಳಿಂ
ತನ್ನಯ ತಳೋದರಿಯನೊರ್ವ ಯಕ್ಷಂ. ಪ್ರಿಯನ
ಪ್ರೇಮ ಶುಶ್ರೂಷೆಗೊಯ್ಯನೆ ಸಂಜ್ಞೆ ಮರಳಲಾ
ಯಕ್ಷಿ ಬೆಚ್ಚುತ್ತೊಡನೆ ಮುಚ್ಚಿದಳು ತನ್ನಕ್ಷಿ
ಪಕ್ಷ್ಮದ ಕವಾಟಮಂ:
“ಬಿಡು ಕಣ್ಣನೆಲೆ ಹೆಣ್ಣೆ!
ಬಿಡುಗಣ್ಣರೆಂಬೆಮ್ಮ ಬಿರುದಿಗೇತಕೆ ಬರಿದೆ
ಭಂಗಮಂ ಮಾಳ್ಪೆ? ನಾವೀಗ ಲಂಕೆಯ ಗಗನ
ಸೀಮೆಗತಿದೂರ ಬಂದಿಯಹೆವು, ಸತಿ, ಕನಕಗಿರಿ
ಸಾನು ಶಾಂತಿಯ ಕ್ಷೇಮವಕ್ಷಕ್ಕೆ!”
“ಮೂರ್ಛೆಯಿಂ                            ೧೦
ನನ್ನನೆಳ್ಚರಿಸಿ ಮರಣಕೆ ನೂಂಕುತಿಹೆ, ಇನಿಯ!
ನೀಡೆನಗೆ ಮತ್ತೆ ವಿಸ್ಮೃತಿಯೀವ ಮೂಲಿಕೆಯ
ಪಾನೀಯಮಂ, ರಾಮ ರಾವಣ ಮಹಾ ರಣಂ
ಪ್ರತ್ಯಕ್ಷಮಿರದೊಡೇಂ? ಸ್ಮರಣಮುಂ ತಾಂ ಕಣಾ
ಭಯ ಮರಣ ಕಾರಣಂ! ಬೇಡವೇಡೆಂದೊರೆದೆ
ನಾಂ. ಬಾರ ಬಾರೆಂದು ನೀಂ ಕಾಡಿಸಿಯೆ ಕರೆದೆ!
ಅಯ್ಯೊ ನೋಡಿಯೆ ಸತ್ತೆನೈ, ಲೋಕಭೀಕರ
ರಾಮ ರಾವಣ ಯುದ್ಧ ನಾಮಕ ಜಗತ್‌ಪ್ರಲಯ
ಪೀಠಿಕಾ ದೃಶ್ಯಮಂ! ಸಾಕು ಸಾಕಿನ್ನೆನಗೆ
ಕರುಣೆಯಿಂ ನೀಡು ವಿಸ್ಮರಣ ರಸಮಂ. ಕುಡಿದು                      ೨೦
ಮರೆವೆನಾ ಘೋರಮಂ! ಇಲ್ಲ, ನಾ ನಿನ್ನೊಡನೆ
ಬರಲೊಲ್ಲೆನಿನ್ನೆಲ್ಲಿಗುಂ! ನಿನಗೆ ರುಚಿಸುವೊಡೆ
ನೀನೆ ನಡೆ ಲಂಕಾ ನಭೋಂಗಣಕೆ; ನಾನೊಲ್ಲೆ!”
ನಲ್ಲೆಯಿಂತೆನಲವಳ ಕೈಂಕರ್ಯಕಾಳ್ಗಳಂ
ನೇಮಿಸಲ್ಲಿಂ ನೆಗೆದನಂಬರಚರಂ ರಾಮ
ರಾವಣರ ಸಂಗ್ರಾಮಮೇದಿನಿಗೆ ಬೆಳ್ಗೊಡೆಯ
ತೋರ್ಪ ತೋಯದ ಪಥದ ವೇದಿಕೆಗೆ!
ಸಂಗಮಂ
ತ್ಯಜಿಸಿ ಬಂದಾ ಕತದಿ ಮೊದಲಿಂದೆಯುಂ ನಿಂದು
ರಸವನಾಸ್ವಾದಿಸುತ್ತಿರೊದರ್ವ ಕೆಳೆಯನಂ
ಕೇಳ್ದನಾಶ್ಚರ್ಯದಿಂ ಖೇಚರಂ: “ರಥವೇರಿ    ೩೦
ಕಾಳೆಗಂಗೊಡುತಿರ್ಪನೈಸೆ ದಶರಥ ಸುತಂ!
ರಥವೆತ್ತಣಿಂ ಬಂದುದಾತಂಗೆ?”
“ಅದು ಕಣಾ
ನಿಜದೊಳಿಂದ್ರನ ರಥಂ; ತೋರಿಕೆಗೆ ನಳಕೃತಂ;
ಮಾತಲಿಯೆ ತೇರೆಸಗುತಿಹನಲ್ಲಿ ವಾಘೆಯಂ
ಧರಿಸಿ. ಸಾರಥಿಯಾಗಿ ಕುಳಿತ ವಾನರಂ
ಬರಿ ನಿಮಿತ್ತಂ. ಮಾತನುಳಿ! ನೋಡು, ನೋಡಲ್ಲಿ!
ಶರಧಿಯಿಂದೆಳೆದನಂಬಿನ ರೂಪವಾಂತಿಪ್
ಸಂಪಾತಿಯಂ, ಜಟಾಯುವ ಕೊಲೆಗೆ ರಾವಣನ
ತಲೆಯರಿವ ಸೂರುಳಂ ತೊಟ್ಟುಗ್ರನಂ!”
ಶರಧಿ
ಕುಕ್ಷಿಗೆ ಕರವನಿಕ್ಕಿ ಬಡಬನಂ ಪೊರಗೆಳೆವ     ೪೦
ಮಾಳ್ಕೆಯಿಂ, ಬೆನ್ನ ಶರಧಿಯಿನೆಳೆಯಲೀಚೆಗೆ
ಜಟಾಯುವಗ್ರಜ ಬಾಣತನುವಂ, ಛಟಚ್ಛಟಿಸಿ
ಪ್ರಕಟವಾದನಂ ತಟಿದ್‌ಗರಿಗಳಿಂ ಗೃಧ್ರಮುಖ
ವಜ್ರತುಂಡಂ: “ಧನ್ಯವಾದುದೀ ನನ್ನ ಬಾಳ್‌,
ದೇವ! ದೇವಿಯ ಪೊರೆಯೆ ತನ್ನ ಹರಣವನಿತ್ತ
ನಿನ್ನ ಮಿತ್ರ ಜಟಾಯುವಗ್ರಜಂ ನಾಂ! ನೋಂಪಿ
ನನಗಿರ್ಪುದೀ ರಕ್ಕಸನ ಮಂಡೆಯಂ ಜರ್ಕ್ಕಿ
ತರಿಯಲ್ಕೆ. ತೊಡು ಜವದಿ, ಬಿಡು ಬೇಗದಿಂದಿವನ
ತಲೆಗಡಿದು, ರಮ್ಮಂಗೆ ನೆತ್ತರ ತಣಿಯನೆರೆವೆ!”
ಗೆಲ್ಗೆ ನಿನ್ನೀ ಪೂಣ್ಕೆಯೆನುತಾರ್ದು ದಾಶರಥಿ                            ೫೦
ಪೂಡಿ ಬಾಣವನೆಚ್ಚನಸುರ ಶಿರಗಿರಿಗೆ. ಆ
ಮಿಂಚೊಡಲ ಮಿಂಚಿನ ಗರಿಯ ಮಿಂಚುವಾಶುಗ
ವಿಹಂಗಮವ ತುಂಡರಿಸಲೆಂದೈಲಬಿಲಸೋದರಂ
ಕರೆದ ವಿಶಿಖಗಳನಿತುಮಂ ಲೆಕ್ಕಿಸದೆ ಬಂದು, ‘ಹಾ
ಹಾ’ ರವಂ ಕೋಟಿ ದಾನವರೇಕ ಕಂಠದಿಂ
ಪೊಣ್ಮೆ, ಕತ್ತರಿಸಿದುದು ಕುತ್ತಿಗೆಯನಸುರೇಂದ್ರನಾ!
ಮತ್ತಿದೇನುರುಳಲದು ಮತ್ತೊಂದು ಮೂಡಿದುದು
ಮಸ್ತಕಂ, ಮೊದಲ ಮಸ್ತಕಮಿರ್ದ ತಾಣದಲಿ!
“ತಲೆಯೊಂದುರುಳ್ದೊಡೇನೀರೈದು ತಲೆಯವಂ
ತಾನಲಾ!” ಎಂದಾರ್ದು’ ಗಂಡುಗಲಿ ಖಂಡೆಯವ       ೬೦
ತುಡುಕಿ, ಖಗರೂಪಮಂ ತಳೆದು ತನ್ನಯ ತರಿದ
ರುಂಡಮಂ ತುಂಡಮಂಡನಗೈಯುತಾಕಾಶ
ಮಂಡಲಕೆ ಚಿಮ್ಮುತಿರ್ದ ಜಟಾಯುವಣ್ಣನಂ
ತಡೆದನಂಬರ ಗಮನ ವಿದ್ಯಾ ವಿಶಾರದಂ
ಲಂಕೇಶ್ವರಂ!
“ಜಟಾಯು ಸಹೋದರಂ ಲಕಣಾ
ರಾಮಪ್ರಚೋದಿತಂ ನಾಂ! ನನ್ನೊಡನೆ ಸೆಣಸೆ
ನಿನ್ನೆನಿತು ತಲೆ ನಿನ್ನನುಳುಹಬಲ್ಲುವೊ, ಹೇಡಿ,
ಸ್ವಾಮಿಯಿಲ್ಲದ ವೇಳೆ ಮೋಸದಿಂ ದೇವಿಯಂ
ಕಳ್ದುಯ್ದ ನಾಣ್ಗೇಡಿ?”
“ನಿನ್ನ ತಮ್ಮಂಗಂದು
ಏನಾದುದದೆ ಇಂದು ನಿನಗುಮಪ್ಪುದೆ ದಿಟಂ!”
“ಅಂದು ನಿನಗಿರ್ದುದಯ್‌ ಪೊತ್ತ ಸೀತೆಯ ರಕ್ಷೆ.                      ೭೦
ದೇವಿಯಂ ಪಿಡಿದೆ ನೀಂ ಬರ್ದುಕಿದೆ ಜಟಾಯುವಿಂ!
ಇಂದವಳನುಳಿದ ನಿನಗಾಯು ತೀರ್ದುದೆ ದಿಟಂ!”
ಇಂತೆನುತ್ತಾ ಶ್ಯೇನಿ ಕುಲ ವೀರನಸುರನಂ
ತಾಗಿದನು, ಮೇಘ ಸಂಕುಲ ಪರಿಯಲಾತನ
ಗರಿಯ ಗಾಳಿಯ ಭೀಮ ವೀರ್ಯಕೆ ಬೆದರ್ದ್ದವೋಲ್‌.
“ತಡೆ ತಡೆ, ವಿಹಗವೀರ, ಕೆಡಿಸದಿರು ಕಾರ್ಯಮಂ.
ದೈತ್ಯನಿಂದಾರ್ಗಂ ಅಜೇಯಂ ಕಣಾ, ವಿನಾ
ರಾಮಚಂದ್ರಂ! ನಿನ್ನ ಪೂಣ್ಕೆ ಸಂದುದು; ತೆರಳು,
ರಾವಣನ ಮೊದಲ ಮಂಡೆಯ ತರಿದ ಕೀರ್ತಿಯ                                  ೮೦
ಕಿರೀಟಮಂ ಧರಿಸಿ!” ಇಂತಗ್ರಜನನೆಳ್ಚರಿಸಿ
ನುಡಿಯಲ್‌ ಜಟಾಯುವಾತ್ಮಂ ಗಗನ ದನಿಯಾಗಿ,
ಸಂಪಾತಿ ರಾವಣಗೆ: “ನನ್ನ ಕೊಕ್ಕಿಗೆ ಕಾಲ್ಗೆ
ಸಿಕ್ಕಿ ಸಾಯದಿರೆಲವೊ ರಕ್ಕಸ! ನಿರೀಕ್ಷಿಸಿದೆ
ನಿನ್ನಾಯು ರಾಮನಂಬಿಗೆ ತನ್ನನರ್ಪಿಸುವ
ಪುಣ್ಯದ ಮುಹೂರ್ತಮಂ. ರಾಮಬಾಣಕೆ ನಿನ್ನ
ಪ್ರಾಣ ನೈವೇದ್ಯಮನ್ನೀವ ಸೈಪಂ ತ್ಯಜಿಸಿ
ಗೃಧ್ರಪದ ನಖಕದಂ ಬಲಿಗೊಡುವ ದುರಿತಕ್ಕೆ
ಧಾವಿಸುತ್ತಿಹೆಯೇಕೆ? ನೋಡು ನಿನ್ನಂ ಪುಡುಕಿ
ಬರುತಿರ್ಪ ರಾಮಬಾಣಂಗಳಂ. ನಡೆ, ನಡೆ,                           ೯೦
ಇದಿರ್ಗೊಳಾ ನಿಶಿತ ಸುಕೃತಂಗಳಂ!” ಎಂದೆನಂತೆ
ಹಾರಿದನು ಗರುಡಲೋಕಕೆ ದೈತ್ಯ ಶಿರಸಹಿತ,
ಮತ್ತೆ ತಿರುಗಿದನಿತ್ತ ತೇರಿಗೆ ನಿಶಾಚರಂ.
ಬತ್ತಳಿಕೆ ಬತ್ತಿತೆನೆ ಕತ್ತರಿಸಿದನು ಹಗೆಯ
ಕೂರ್ಗೊಲ್ಗಳಂ. ರಾಮನಂ ಸೆರೆಗೊಳುವ ಮನದಿ
ಹತ್ತಿರಕೆ ಹತ್ತಿರಕೆ ತೇರಹನೊತ್ತಿದನೊತ್ತಿ
ಮುಗ್ಗುವರಿಸೇನೆಯಂ. ಕೆಲಬಲಕೆ. “ಏತಕಿನ್‌.
ತಳ್ವೆ ನೀನ್‌, ಲೀಲಾವತಾರಿ? ತರಿ ತಲೆಗಳಂ
ರಾಕ್ಷಸೇಶ್ವರನ!” ಮಾತಲಿಯಿಂತು ಬೇಡಲಾ
ಮೈಥಿಲೀಶ್ವರನಿನಿತು ಚಿಂತೆಯಿಂ: “ನಿನಗದಂ                        ೧೦೦
ಪೇಳ್ವೆನೆಂತುಟೊ, ಇಂದ್ರಸಾರಥಿ? ಪತಿವ್ರತಾ
ಸತಿಯಿರ್ಪಳೀತಂಗೆ! ವ್ಯರ್ಥಮಪ್ಪುವೆ ನನ್ನ
ಮಂತ್ರಾಸ್ತ್ರಗಳ್‌ ಕೆಮ್ಮನಿಯ? ನಾನೀರನಂ
ಕೊಲ್ಲಲೊಂದಪ್ರಾಕೃತೋಪಾಯವಂ ಪೂಡಿ
ಸೋಲವೇಳ್ಕಲ್ಲದಿರೆ ಗೆಲ್ಲಲರಿಯೆಂ!”
ಇಂತು
ಹೇಳಿದು ಮಹಾಸ್ತ್ರಗಳನುಗಿದನು ನಿಷಂಗದಿಂ.
ಒಂದೆ ವೀಣೆಯನೇಕ ತಂತ್ರಿಗಳಿನಿಂಚರಂ
ಸಂಚರಿಸುವಂದದಿಂದೊಂದೆ ಬಿಲ್‌ದಂಡದಿಂ
ಬಹು ಶಿಂಜಿನಿಗಳಿಂದೆ ನೆಗದು ನಾರಾಚಗಳ್‌
ತರಿಯ ತೊಡಗಿದುವಸುರ ಶಿರಗಳಂ. ಪೇಳ್ವುದೇನ್‌                ೧೧೦
ಆ ರಕ್ತ ರೌದ್ರಮಂ! ಕೆಂಪೇರ್ದುದಾಗಸಂ,
ಬೈಗಾದವೋಲ್‌. ಪರಿಪರಿದುರುಳ್ವ ಪಂದಲೆಗಳಂ
ಕಡೆಗಣಿಸಿ, ಮುಂದು ಮುಂದಕೆ ಪರಿದನೆತ್ತಿದನ್‌
ರುದ್ರತ್ರಿಶೂಲೋಪಮದ ಮಹಾಶೂಲಮಂ;
ಗುರಿಯಿಟ್ಟನೆರ್ದೆಗೆ ರಾಘವಗೆ. ಅಗ್ನಿಯ ಬುಗ್ಗೆ
ರೋಷ ಭೀಷಣ ಯಮನ ನಾಲಗೆಯವೋಲಂತೆ
ನಿಮಿರಿದುದು ದಿಕ್ಕುದಿಕ್ಕಂ ನೆಕ್ಕಿ ನೊಣೆವಂತೆ.
ತಿರೆ ಬಾನೊಳಿರ್ದ ರಾಕ್ಷಸ ಜಯಾಕಾಂಕ್ಷಿಗಳ್‌
ಹಿಗ್ಗಿದರದರ ರೌದ್ರತಗೆಗೆ. ಸುರರ್ ಕುಗ್ಗಿದರ್;
ವಾನರರ್ ತಲೆ ತಗ್ಗಿದರ್. ತರಂಗಿಸಿತೊಡನೆ
ಭಯರಸಂ ಜಗದಂತರಂಗದಲಿ, ರಜತಗಿರಿ ತಾಂ                    ೧೨೦
ರಘುವರ ಕ್ಷೇಮ ಕಾತರವಾಗಿ ಬೇಡುವೋಲ್‌
ಬಲ್ವಿಡಿದುದಯ್‌ ಪರಮ ಶಿವಪಾದಮಂ! ಅದೇಂ
ಪ್ರಾರ್ಥನೆಯ ಬಲಮೊ? ಅವರಿವರಿರಲಿ; ರಾವಣನೆ
ತಾಂ ಸ್ವಯಂ ಪ್ರಾರ್ಥಿಸಿದನಾ ಮಹಾಶೂಲಮಂ
ರಾಮನಸುಮಂಗಲಾರ್ಥಂ:
“ಆಯುಧ ವರೇಣ್ಯ
ಹೇ ಸರ್ವಶೂಲ ಗುರುದೇವ, ದುರ್ಗಾ ಹಸ್ತ
ಸಂಸರ್ಗ ಮಹಿಮಾಮೋಘ ವೀರ್ಯಪ್ರಾಣ,
ಬಿನ್ನಪವನಾಲಿಸೆನ್ನೀ ಹೃದಯಗುಹ್ಯಮಂ.
ನಿನ್ನನೇಗಳುಮಿಂತುಟಾಂ ಪ್ರಾರ್ಥಿಸಿದೆನಿಲ್ಲ.                           ೧೩೦
ನಿನ್ನ ನೋಂಪಿಯ ಬಲ್ಲೆನಾಂ. ತೊಟ್ಟ ಮೇಲ್‌ ನಿನ್ನ
ಬಲಿಗೆ ಪಶುನೈವೇದ್ಯವಿಟ್ಟಮತೆಯೆ ದಿಟಂ
ಅರಾತಿಯಸು: ಆದೊಡಾ ವ್ರತಮಿಂದು ನನಗಾಗಿ
ಭಂಗಮಂ ಸಹಿಸವೇಳ್ಕುಂ. ಶತ್ರುಜೀವಮಂ
ಬಲಿಗೊಳ್ಳದಾತನಂ ಸೆರೆವಿಡಿಯಲೆನಗೆ ನೀಂ
ನೆರವಾಗು! ಮೈಮರೆವನಿತೆ ತಾಗು! ನಡೆ, ಪೋಗು!”
ಇಂತು ಬಿನ್ನಯ್ಸಿ ಶೂಲವನೆಸೆದನಂಬರಕೆ. ಮೇಣ್‌
ಸಾರಥಿಗೆ ದಿಗಿಲಾಗೆ, ನೋಳ್ಪರ್ ಬೆರಗುವೋಗೆ,
ಧುಮುಕಿದನು ತೇರಿಂದೆ ತಿರೆಗೆ. ರಾಮನ ರತದ
ರುಕ್ಮವೇಣುಧ್ವಜವನೀಕ್ಷಿಸುತ್ತಾ ದಿಶೆಗೆ                                   ೧೪೦
ಧರೆಯದುರೆ, ವಾನರದಳಂ ಬೆದರಿ ಬಾಯೊದರಿ
ದೆಸೆದೆಸೆಗೆ ಕೆದರೆ, ಅಮರರ ಮುಖಕೆ ವಿಸ್ಮಯದ
ಭಯಮಮರೆ, ಧಾವಿಸಿದನಾ ದೃಢ ಮನೋರಥಂ
ದೈತ್ಯನೆತ್ತಿದ ಖಡ್ಗ ಹಸ್ತದಲಿ! – ‘ಗೆಲ್‌ ಗೆಲ್‌
ದಶಾನನಾ!; ಕಂಡು ಕೇಗಿದರಸುರರಭ್ರದಲಿ!
ವೈರಿ ವಕ್ಷದ ಲಕ್ಷ್ಯಕಭಿಮಂತ್ರಣಂಗೆಯ್ದು
ರಾಕ್ಷಸೇಶ್ವರನೆಸೆದ ಶೂಲಮಂಬರಕೇರ್ವ
ತಪ್ತ ಕಾಂಚನ ದೀಪ್ತ ಪಥವನವಲೋಕಿಸುತೆ
ಗದಗದಿಸಿದುವು ದೇವರಾಜನ ರಥದ ಕುದು ರೆ.
ಜ್ವಾಲಾ ಸಮಾಕುಲಮದಂ, ಧೂಮಕೇತುವೆನೆ         ೧೫೦
ರಾಂ ಹೃದ್‌ರಕ್ತ ಪಾನಾಸಕ್ತ ವೇಗದಿಂ
ಹಠಮನದ ದೃಢಗಮನದಿಂ ಬಳಿಗೆ ಬಳಿಬಳಿಗೆ
ಬಳಿಸಾರುತಿರ್ದುದಂ, ರೌದ್ರತ್ರಿಶೂಲಮಂ
ಕಂಡು ಮಾತಲಿಗಿನಿತು ಚಂಚಲಿಸಿದುದು ದೃಷ್ಟಿ;
ಪುಲಕಿಸುವ ಪಾಂಗಿಂ ಪ್ರಕಂಪಿಸಿತು ವಾಘೆಯ
ಹಿಡಿದ ಮುಷ್ಟಿ:
“ತೊಡು, ತೊಡು ಮಹಾಸ್ತ್ರಮಂ, ಹೇ ಪ್ರಭೂ!
ಪ್ರಾಕೃತ ವಿಧಾನಮಿಲ್ಲಿಗೆಪ್ರಕೃತಮಿದು ಕಣಾ
ದಿಗುಪಾಲರೆದೆನೆತ್ತರಂ ಕುಡಿದು ಕೊಬ್ಬಿರುವ
ದೈತ್ಯ ಶೂಲಂ; ಇಂದುವರೆಗೀ ತ್ರಿಶೂಲಮಂ
ವ್ಯರ್ಥಂಗೈದ ಸಮರ್ಥರಂ ಕಂಡರಿಯೆನಾಂ               ೧೬೦
ಜಗತ್ರಯದ ಶೂರರಲಿ! ಗೆಲ್ದುದು ಕುಬೇರನಂ;
ಯಮನನೋಡಿಸಿತಿಮರರಾಜನಂ ರೋಡಿಸಿತು
ಬರ್ದಿಲ ನಾಡಿನ ಪಸಲೆಯಲಿ ಮೂರು ಸೂಳಟ್ಟಿ.
ಕೊನೆತಲೆಯ ರಾವಣಗೆ ಕೊನೆಯಸ್ತ್ರವಿದು; ದಿಟಂ
ನಿರ್ಣಯಿಪುದಿದು ದನುಜನುದ್ಧಾರ ಭಾಸ್ಕರನ
ಉದಯಮಂ ವಾ ಅಸ್ತಮಂ. ತೊಡು, ತೊಡಮೃತಮೀ
ಪುಣ್ಯ ವೇಳಾ ಯೋಗಮಂ ತೊರೆದು ಕಳೆಯದಿರ್.
ಪಡುನೇಸರೆಸೆವ ಆ ಪಡುವೆಟ್ಟದಂಚಿನಲಿ
ಕಾಣಲ್ಲಿ ಶೋಭಿಸಿದೆ ಶುಭಚಿಹ್ನೆ, ಅಪರ ಸಂಧ್ಯಾ
ನಭೋಮೇಘ ಫಣಿ ಭೋಗದಲಿ!”
ಮಾತಲಿಯೊರೆಯೆ            ೧೭೦
ನೋಡಿ, ಮಾತಿಲಿಯಾದನಾ ಮೈಥಿಲೀಸ್ವಾಮಿ:
ರಾವಣನ ಪಿನ್ದೆಸೆಗೆ, ಬಹುದೂರದೆಳ್ತರದಿ.
ತೋರ್ದುದುದ್ಯದ್‌ ಫಣಾ ವಿನ್ಯಾಸದಿಂದೊಂದು
ಆರ್ಶೀವಾದಮುದ್ರೆಯ ಬೃಹನ್ನೀರದಾಕಾರ!
“ವಿಶ್ವದಾಶೀರ್ವಾದ ನಿನಗದು, ರಘೂತ್ತಮ:
ದಶಾನನಂಗಾಶೀವಿಷೋಪಮಂ! ಅದೆ ಕಣಾ
ಸಂಕೇತಮಾಕಾಶ ದೇವಲಿಪಿ ಕೆತ್ತಿರ್ಪುದಯ್‌
ನಿನಗೆ ಮೇಣಸುರೇಶ್ವರಂಗೆ! ತೊಡು ಬೇಗದಿಂ
ಬ್ರಹ್ಮಾಸ್ತ್ರಮಂ, ತಡೆಯೆ ಕೇಡು, ಅದೊ ನೋಡೆಂತು
ನಿನ್ನಡೆಗೆ ನುಗ್ಗುತಿದೆ ಶೂಲರೂಪದ ಮೃತ್ಯು!   ೧೮೦
ಆಲಸ್ಯದಿಂದಮೃತಮಕ್ಕುಂ ವಿಷಂ!”
“ತಾಳ್ಮೆ,
ತಾಳ್ಮೆ, ತಾಳ್ಮೆ, ಮಹೇಂದ್ರ ಸಾರಥಿ! ಅಗಸ್ತ್ಯಮುನಿ
ಆದಿತ್ಯಹೃದಯ ಮಂತ್ರವನೆನಗೆ ಕೊಟ್ಟನಾ
ಮಂತ್ರಮಂ ಜಪಿಸುತಿರ್ದೆನ್‌ ತಪಸ್‌ತೇಜಮಂ
ಜಾಗ್ರತಂಗೊಳಿಸೆ….ಪಿಡಿ ತುರಗರಶ್ಮಿಯನಿನಿತು
ದೃಢಮುಷ್ಟಿಯಿಂ! ಸಿದ್ಧನಾಗೀಗಳಪ್ಪೊಂದು
ರುದ್ರ ಘಟನಗೆ, ದೇವ ಸೂತ!”
ಇಂತೆನುತೆದ್ದು
ನಿಂದನಾ ರಥಪೀಠದೊಳ್‌ ಯುದ್ಧ ರುದ್ರನಾ
ಕೋದಂಡ ರಾಮಚಂದ್ರಂ. ಪ್ರಾಣಧಿಗೆನಲ್‌ ಬೆನ್ನ
ಬಾಣಧಿಗೆ, ಕೈಯಿಕ್ಕಿದನ್‌, ವಜ್ರಪುಂಖೋಜ್ವಲಂ,         ೧೯೦
ಬಡಬ ಭೀಷ್ಮಂ, ಪ್ರಲಯ ವೈಶ್ವಾನರೋದರಂ
ಬ್ರಹ್ಮಾಸ್ತ್ರಮುಣ್ಮಿದುದು ಬಹು ಸೂರ್ಯ ಜಿಹ್ವೆಯಿಂ
ತಳತಳಿಪ ವಿದ್ಯುತ್‌ ಫಣೀಂದ್ರನೋಲ್‌. ಸ್ಥಿತಿಯ
ದುರ್ಗತಿಗೆ ಹಮ್ಮಯ್ಸಿದುದು ಸೃಷ್ಟಿ. ಸುಯ್ದುದು ಲಯಂ.
ನಡುಗೆ ಗಿರಿಸಂಕುಲಂ, ಕದಡಿದುವು ಕಡಲುಗಳ್‌,
ಬೆಂಕೆವೆಟ್ಟುಗಳೋಕರಿಸಿದುವು ಭಯಂಕರ
ಯುಗಾಂತಕದ್ರಾವಾಗ್ನಿಯಂ. ಸುರಾಸುರರೋಡಿ
ಕೈಲಾಸ ಮೇರು ಮಂದರ ಗಿರಿಗಳಂ ಬೇಡಿ
ಹದುಗಿ ನಿಂದರು ಮರೆಗೆ! ಪುಂಖದೊಳಜನ ತೇಜಂ;
ಮಧ್ಯೆ ವೈಷ್ಣದ ಚಿತ್‌ತಪಶ್ಮಕ್ತಿ; ಮೊನೆಯೊಳಗೆ             ೨೦೦
ಮನೆ ತನಗೆ ವಿಲಯ ರುದ್ರಂಗಿಂತು ತನ್ನೊಳಗೆ
ಹರಿ ಹರ ಬ್ರಹ್ಮ ಚೈತನ್ಯಗಳನೊಳಕೊಂಡ
ದಿವ್ಯಾಸ್ತ್ರಕಾ ತನ್ನ ರಾಮತ್ವ ಸತ್‌ತ್ವಮಂ
ಪೊಯ್ದು ತಾನುಂ ಪ್ರವೇಶಿಸಿದನದರಾತ್ಮಮಂ
ಶ್ರೀರಾಮನಸ್ತ್ರವಿದಗಸ್ತ್ಯ ಶಿಷ್ಯಂ, ಸಿಂಜಿನಿಯ
ಟಂಕಾರಕಾ ಹರಿಧ್ವಜಿನಿ ಹರಿನಾದದಿಂ
ಬೊಬ್ಬಿರಿಯೆ : ಗೆಲ್‌ ಗೆಲ್‌, ರಘೂತ್ತಮಾ! ಫೇ ಉಘೇ!
ಎಂದಭ್ರಮಂಟಪದಿ ಸಂಭ್ರಮದ ಸುರಗೋಷ್ಠಿ
ಹರಕೆಗಳನುಲಿಯೆ; ಗುರಿನೋಡಿ, ಕಿವಿವರೆಗೆಳೆದು,
ಬಿಟ್ಟನಾ ಬ್ರಹ್ಮಾಸ್ತ್ರಮಂ! ಶೈಲಹೃದ್‌ಭಿತ್ತಿ      ೨೧೦
ಸೀಳ್ವಶನಿ ರಾವದಿಂ ತಾಗಿದುದು, ತನ್ನೆಡೆಗೆ
ಯಮ ರಯದಿ ನುರ್ಗ್ಗಿಬರುತಿರ್ದ ಕರ್ಬುರ ಕರ
ವಿಮುಕ್ತಮಂ, ಆ ಲಯೋಲ್ಕೋಗ್ರ ಶೂಲಾಗ್ರಮಂ:
ಹಾ ಹಾ ಎನುತ್ತೊದರಿದುವು ಪಡೆಗಳಿರ್ ಕಡೆಗೆ;
ನರಳಿತು ಸುರಾಸುರಶ್ರೇಣಿಗಳ್‌; ತಪಿಸಿತಯ್‌
ಚರಾಚರಂ! ಕೆದರಿತು ಕಿಡಿಯ ಗಡಣ, ತೊಳಲಿದುವು
ದಳ್ಳುರಿಯ ದೀಪ್ತಗಣ. ಪ್ರೋಜ್ವಲಿಸಿತೈ ಅರುಣ
ಸಂಧ್ಯಾ ಗಗನದಂಗಣದ ರಣ!
ತುಂಡುಡಿದು
ಕೆಡೆದುದೈ ದೈತ್ಯಾಯುಧಂ. ಮತ್ತಿದೇನಯ್ಯೊ!
ಹಾ ಎಂಬುವನಿತರೊಳೆ ಮುರಿದದರ ಮುಮ್ಮೊನೆಯ                ೨೨೦
ಚೂರೊಂದು ಬಂದು ಪೊಕ್ಕುದು ಲಕ್ಷ್ಮಣಾಗ್ರಜ
ಮಹಾ ವಕ್ಷ ವೈಕುಂಠಮಂ! ರಾವಣಾತ್ಮಕೆ
ಪವಿತ್ರತಮ ರಕ್ಷೆ, ಸೀತಾಪ್ರಿಯ ಮಹೋದಾರ
ವಕ್ಷಮಲ್ಲದೆ, ಬೇರೆ ತಾಣಂಗಳಿನ್ನೊಳವೆ ಪೇಳ್‌
ಬ್ರಹ್ಮಾಂಡ ಮಂಡಲದಿ?
ಶೂಲಘಾತಕೆ ತನುವ
ಮಕರೆದು ತೇರ್ಮಣೆಗೊರಗಿದರಿವೀರನಂ ಕಂಡು,
ಹಿಗ್ಗಿ, ಹೊರೆಯೇರಿ, ಮುನ್ನುಗ್ಗಿದನು ದಾನವಂ
ತುಡುಕಿಯವನಂ ಪಿಡಿದು ತನ್ನ ತೇರಿಂಗುಯ್ವ
ತವಕದಲಿ. ತಡೆವ ಕಪಿವೀರರಂ ಖಡ್ಗದಿ
ಕಡಿದುರುಳ್ವಿ, ಕಾಳ್ಗಿಚ್ಚು ತನ್ನಂ ತಡೆವ ತೃಣಕೆ
ಮಾಳ್ಪ ಮನ್ನಣೆಯನನ್ಯರ್ಗೆಸಗಿ, ರಾಮನನೆ                           ೨೩೦
ಕಣ್‌ಮಾಡಿ ಧಾವಿಸುತ್ತಿರೆ, ತನ್ನ ಮೇಲ್ವಾಯ್ವ
ಪೈತಾಮಹಾಸ್ತ್ರಮಂ ಕಂಡನಸುರಂ, ಮುಳಿದು,
ಪಿಡಿದದಂ ನೆಲಕೆಸೆವೆನೆಂಬ ದೃಢಹಠದಿಂದೆ
ತುಡುಕಿದನು ಹಾ ಆ ಮಹಾ ಬ್ರಹ್ಮ ಬಾಣಮಂ,
ಮೇಣ್‌ ಜಾನಕೀಪ್ರಿಯಪ್ರಾಣಮಂ! ತುಡುಕಿದುದೆ
ತಡಮಾ ಶರಂ, ದೈತ್ಯನಾ ದೈತ್ಯ ಬಲಮುಮಂ
ಕಡೆಗಣ್ಚಿ, ಮೀರ್ದು ಪೊಕ್ಕುದು: ದಶಾನನ ಹೃದಯ
ಗಹ್ವರದ ಘೂಕಾಂಧಕಾರಮಸ್ತ್ರದ್ಯುತಿಗೆ
ಪೊರಪೊಣ್ಮಿ ತುಂಬಿದುದೊ ಲೋಕತ್ರಯವನೆನೆ                     ೨೪೦
ಅಮಾವಾಸ್ಯೆಯ ತಮಿಸ್ರಮಾಕ್ರಮಿಸಿತೊಡನೆಯೆ
ಧರಿತ್ರಿಯಂ! ತನ್ನರ್ದೆಯನೊಡೆದು ಬೆನ್ನಿಂ ಪೊಣ್ಮಿ
ಜಗುಳದೊಲದಂ ಭದ್ರಮುಷ್ಟಿಯಿಂ ಪಿಡಿದಿರ್ದ
ಬದ್ಧ ಭ್ರುಕುಟಿ ರಾವಣಗೆ ಮೆರೆದುದುದರೊಳ್‌
ರಘೂದ್ವಹನ ವಿಗ್ರಹಂ! ‘ಸಿಕ್ಕಿದನಲಾ ಶತ್ರು !”
ಎನುತಾರ್ದು ಪಿಂತಿರುಗಿ ನೆಗೆದನುನ್ಮತ್ತನೋಲ್‌
ತನ್ನ ತೇರಿಗೆ, ಕೂಗುತಾಜ್ಞೆಯಂ ಸಾರಥಿಗೆ:
“ಸೆರೆ ಸಿಲ್ಕಿದನೊ ವೈರಿ! ತಿರುಗಿಸು ವರೂಥಮಂ
ಪುರಕೆ!” ವಕ್ಷಂಬೊಕ್ಕ ಬಾಣಾರ್ಧಮಂ ಪಿಡಿದು
ರಕ್ತಮಯನಾದ ಮಯನಂದನಾಪ್ರಿಯನ ಮತಿ                                   ೨೫೦
ವಿಕಲವಾಯ್ತೆಂದು ಸೂತಂ ಸ್ಯಂದನವನಿರದೆ
ತಿರುಗಿಸಿದನೈ ನಗರದತ್ತಣ್ಗೆ!
ಇತ್ತಲ್‌
ದಶಗ್ರೀವನೇರ್ವಡೆದು ಕೋಂಟೆಗೋಡಿದನೆಂಬ
ವಾರ್ತೆಯಂ ಭೋರ್ಗರೆದುದು ಕಪೀಂದ್ರಸೇನಾಬ್ದಿ.
ಅತ್ತ ರಾಕ್ಷಸಸೇನೆಯೊಳ್‌ ತೊಳಲಿದುದು ಸುದ್ದಿ:
ನರ ಸಹೋದರರಿರ್ವರಂ ಸಾಯೆ ಸದೆಬಡಿದು,
ಬ್ರಹ್ಮಾಸ್ತ್ರಮಂ ವಿಫಲಗೆಯ್ದು, ತಾನುಂ ನೊಂದು,
ಲಂಕೇಶ್ವರಂ ಶ್ರಮನಿವಾರಣಾರ್ಥಂ ಪುರಕೆ
ಬಿಜಯಿಸಿದನೆಂದು! ಕರ್ಗ್ಗತ್ತಲೆತ್ತೆತ್ತಲುಂ
ತೀವಿ ಮಸಿಬಳಿದವೋಲಳಿಸಿದುದು ಪೃಥಿವಿಯಂ.                    ೨೬೦
ಬಾಂದಳದಿ ಮಿರುಗಿದುವು ಕಿಕ್ಕಿರಿದ ಚುಕ್ಕಿಗಳ್‌
ಶಂಕಿಪ ಸಹಸ್ರಾಕ್ಷನಾಸ್ಥಾನದಕ್ಷಿಗಳವೋಲ್‌.

ಕಾಮೆಂಟ್‌ಗಳಿಲ್ಲ: