ಮಲೆಗಳಲ್ಲಿ ಮದುಮಗಳು-೧

    ಸಿಂಬಾವಿ ಭರಮೈಹೆಗ್ಗಡೆಯವರ ದೊಡ್ಡ ಚೌಕಿಮನೆಯ ಹೆಬ್ಬಾಗಿಲು ದಾಟಿದ ಅವರ ಜೀತದಾಳು, ಹೊಲೆಯರ ನಾಯಿಗುತ್ತಿ, ಹೊರ ಅಂಗಳದ ಕಡೆಯ ಮೆಟ್ಟಲಲ್ಲಿ ನಿಂತು ಆಕಾಶದ ಕಡೆಗೆ ಬಿಡುಗಣ್ಣಾಗಿ ನೋಡುತ್ತಿದ್ದನು. ಮನೆಯ ಪಕ್ಕದಲ್ಲಿದ್ದ ಅಡಕೆಯ ತೋಟದಿಂದ, ಒಂದು ಕೈಯಲ್ಲಿ ಒಂದು ಕರಿಬಾಳೆಯ ಗೊನೆಯನ್ನೂ ಮತ್ತೊಂದು ಕೈಯಲ್ಲಿ ಬಾಳೆಯೆಲೆಗಳ ಕಟ್ಟೊಂದನ್ನೂ ಹಿಡಿದು, ಆರಡಿ ಎತ್ತರವಿದ್ದರೂ ಅತಿ ನಿಧಾನವಾಗಿ ಬರುತ್ತಿದ್ದ ಮನೆಗೆಲಸದ ಮರಾಟಿ ಮಂಜನು “ಏನೋ, ಗುತ್ತೀ, ಮುಗಿಲ ಕಡೆ ನೋಡ್ತಾ ನಿಂತೆ? ದೂರಾ? ಒಳ್ಳೆ ದರೋಬಸ್ತಾಗಿದ್ದೀಯಲ್ಲಾ! ಹ್ಞಾ” ಎಂದು ತನ್ನ ನಡೆಗಿಂತಲೂ ನಿಧಾನವಾಗಿ ರಾಗಧ್ವನಿಯಿಂದ ಪ್ರಶ್ನಿಸುತ್ತಾ ಹತ್ತಿರಕ್ಕೆ ಬಂದನು.
  ಬಲದಲ್ಲಿ ಮಂಜನಿಗಿಂತ ಮಿಗಿಲಾಗಿದ್ದರೂ ಎತ್ತರದಲ್ಲಿ ಬಹಳ ಕುಳ್ಳಾಗಿದ್ದ ಗುತ್ತಿ ಮುಗಿಲನ್ನೂ ಮುಖವನ್ನೂ ಒಟ್ಟಿಗೆ ನೋಡುತ್ತಾ “ಹಾಳ್ ಮಳೆ ಸಾಯ್ತದೋ ಏನೋ ಅಂತ ನೋಡ್ತಾ ಇದ್ದೆ” ಎಂದು, ಸ್ವಲ್ಪ ಅವಸರದಿಂದ “ಮಳೆ ಫಕ್ಕನೆ ಬತ್ತದೇನ್ರೋ?” ಎಂದು ಪ್ರಶ್ನಿಸಿದನು.
ಮಂಜನೂ ತನ್ನ ಕುತ್ತಿಗೆಯ ನರಗಳು ಎದ್ದು ಕಾಣುವ ರೀತಿಯಲ್ಲಿ ಮುಗಿಲ ಕಡೆಗೆ ನೋಡುತ್ತಾ “ನೀನು ಎಲ್ಲಿಗೆ ಹೋಗಬೇಕು ಹೇಳು? ಹ್ಞಾ” ಎಂದನು.
“ಲಕ್ಕುಂದಕ್ಕೆ ಕಣ್ರೋ”.
“ಹಾಂಗಾದ್ರೇನು ಹೋಗ್ದೇ? ನಾನಾದ್ರೆ ಒಂದು ಚಣಕ್ಕೆ ಹೋಗ್ತಿದ್ದೆ….”
ಮಂಜನಿನ್ನೂ “ಹ್ಞಾ” ಎಂದು ಮಾತು ಪೂರೈಸಿರಲಿಲ್ಲ. ಅಷ್ಟರಲ್ಲಿ ಮನೆಯೊಳಗೆ ಹಿತ್ತಲ ಕಡೆಯಿಂದ ಹೆಂಗಸರ ಬಾಯಿ ಗಟ್ಟಿಯಾಗಿ ಕೇಳಿಸಿತು.
ಗುತ್ತಿ ಸ್ವಲ್ಪ ಬೆರಗಿನಿಂದ ಹುಬ್ಬು ನಿಮಿರಿಸಿ “ಏನ್ರೋ ಅದು?” ಎಂದನು.
ಮಂಜನು ಒಂದಿನಿತೂ ಬೆರಗಾಗದೆ ಉದಾಸೀನ ಧ್ವನಿಯಿಂದ ತನ್ನಷ್ಟಕ್ಕೆ ತಾನೇ ಹೇಳಿಕೊಂಡನು; “ಮತ್ತೆ ಸುರುವಾಯ್ತಪ್ಪಾ! ಈ ಹೆಗ್ಗಡ್ತೇರಿಂದ ಸುಖಾ ಇಲ್ಲ. ಮೂರ್ಹೊತ್ತೂ ಜಗಳಾ! ಜಗಳಾ! ಜಗಳಾ! ಜಟ್ಟಮ್ಮ ಲಕ್ಕಮ್ಮ! ಲಕ್ಕಮ್ಮ ಜಟ್ಟಮ್ಮ! ನೀ ಮುಂಡೆ ನೀ ಮುಂಡೆ! ನೀ ರಂಡೆ ನೀ ರಂಡೆ! ನಾನಾಗೋ ಹೊತ್ತಿಗೆ ಕಾಲಾ ಮಾಡ್ತೀನಿ, ಹ್ಞಾ!”
ಗುತ್ತಿ ಮಂಜನ ಕಣ್ಣನ್ನೆ ನೋಡುತ್ತಾ ಏನೋ ರಹಸ್ಯವನ್ನು ಕೇಳಬೇಕೆಂದು ಬಾಯಿ ತೆರೆಯುವುದರೊಳಗೆ ಮಂಜನು ಸೊಂಟದಿಂದ ಹರಡಿನವರೆಗೂ ದಪ್ಪವಾದ ಬಿದಿರು ಬೊಂಬಿನಂತೆ ಒಂದೇ ಸಮನಾಗಿದ್ದ ಸ್ಥೂಲಗಳೆರಡನ್ನೂ ಎತ್ತಿ ಎತ್ತಿ ಇಡುತ್ತಾ  ಮನೆಯೊಳಗೆ ಹೋಗಲು ಮೆಟ್ಟಿಲೇರುತ್ತಿದ್ದನು.
“ಕಪ್ಪಾಯ್ತು ಕಣ್ರೋ: ನಾನು ಸುಮಾರು ದೂರ ಹೋರಬೇಕು” ಎನ್ನುತ್ತಾ ಗುತ್ತಿ ತನ್ನ ಕುಳ್ಳು ದೇಹದ ಕುಳ್ಳುಗಾಲುಗಳನ್ನು ಬೀಸಿ ಬೀಸಿ ಹಾಕುತ್ತಾ ತೋಟದ ದಾರಿ ಹಿಡಿದು ಹೊರಟನು.
ಅವನು ತೋಟ ದಾಟುವವರೆಗೂ ಮನೆಯಲ್ಲಾಗುತ್ತಿದ್ದ ಜಗಳದ ಸದ್ದು ಕೇಳಿಸುತ್ತಲೇ ಇತ್ತು.
ನಾಯಿಗುತ್ತಿ ಅಥವಾ ಗುತ್ತಿ ಮಂಜನೊಡನೆ ತಾನು ಲಕ್ಕುಂದಕ್ಕೆ ಹೊರಟಿದ್ದೇನೆಂದು ಸುಳ್ಳು ಹೇಳಿದ್ದನು. ಅವನು ಲಕ್ಕುಂದದ ಮೇಲೆಯೇ ಹೋಗಬೇಕಾಗಿತ್ತು. ಆದರೆ ಅದು ಅವನ ಪ್ರಯಾಣದ ಗುರಿಯಾಗಿರಲಿಲ್ಲ. ಸಿಂಬಾವಿಗೆ ಸುಮಾರು ಮೂರು ನಾಲ್ಕು ಮೈಲಿ ದೂರದಲ್ಲಿದ್ದ ಲಕ್ಕುಂದಕ್ಕೆ ಹೋಗುವುದಾಗಿದ್ದರೆ ಅವನು ಅಷ್ಟು ಅವಸರ ಪಡಬೇಕಾಗಿರಲಿಲ್ಲ. ಬೈಗಾಗಿದ್ದರೂ, ದಾರಿಯಲ್ಲಿ ಹೆಗ್ಗಾಡು ತುಂಬಿ ಎತ್ತರವಾಗಿದ್ದ ಸೀತೂರು ಗುಡ್ಡವನ್ನು ಏರಿ ದಾಟಬೇಕಾಗಿದ್ದರೂ, ಗುತ್ತಿ ಹೆದರಬೇಕಾಗಿರಲಿಲ್ಲ. ಅಂತಹ ಕಬ್ಬಿಣದಾಳು ಅವನು!
ಮತ್ತೊಂದು ವಿಷಯವೆಂದರೆ ಅವನ ಉಡುಪು! ಮಂಜನು ಅವನನ್ನು ಕಂಡೊಡನೆ “ಒಳ್ಳೇ ದರೋಬಸ್ತಾಗಿದ್ದೀಯಲ್ಲಾ” ಎಂದುದಕ್ಕೆ ಕಾರಣ, ಅವನ ಉಡುಪಿನಲ್ಲಾಗಿದ್ದ ಮಾರ್ಪಾಡು. ಸೊಂಟಕ್ಕೆ ಸುತ್ತಿದ್ದ ಮೋಟು ಪಂಚೆ ವಿನಾ ಬತ್ತಲೆಯಾಗಿದ್ದ ಮರಾಟಿಯವನ ಮುಂದೆ, ಹೊಲೆಯನು, ಕೊಳೆ ಸರ್ವವ್ಯಾಪ್ತಿಯಾಗಿದ್ದರೂ, ಷೋಕಿಯಾಗಿದ್ದನು. ತಲೆಗೆ ಒಂದು ಕೆಂಪು ವಸ್ತ್ರ ಸುತ್ತಿದ್ದನು. ಮೈಗೊಂದು ಕಸೆ ಅಂಗಿ ಹಾಕಿದ್ದನು. ಪಂಚೆಯ ತುದಿ ಮೊಳಕಾಲನ್ನು ದಾಟಿತ್ತು. ಕಿವಿಗೆ ಬೇರೆ ಒಂಟಿ! ಒಂಟಿಗಳನ್ನು ಹೊಸದಾಗಿ ಹಾಕಿರಲಿಲ್ಲವಾದರೂ ಹೊಸ ವೇಷದಿಂದ ಅವುಗಳಿಗೊಂದು ಹೊಸ ಷೋಕಿ ಬಂದಿತ್ತು. ಎಲ್ಲಕ್ಕೂ ತಿಲಕಪ್ರಾಯವಾಗಿ ಮುಖ ಕ್ಷೌರ. ಹೊಲೆಯನಾದರೂ ಬೆಳ್ಳಗಿದ್ದುದರಿಂದ ಮಲೆಯನಂತೆ ಕಾಣುತ್ತಿದ್ದನು. ಹೆಗಲ ಮೇಲೆ ಮಡಿಸಿ ಹಾಕಿಕೊಂಡಿದ್ದ ಕಂಬಳಿಕೊಪ್ಪೆ ಅವನು ಮಳೆಗೆ ತಯಾರಾಗಿ ಹೊರಟಿದ್ದನ್ನೂ, ಬಗಲಲ್ಲಿ ಇರುಕಿಕೊಂಡಿದ್ದ ಬಗನಿಯ ಮರದ ಕರಿಯ ದೊಣ್ಣೆ ಹೊಡೆದಾಟಕ್ಕೂ ಕೂಡ ಅವನು ಸಿದ್ಧನಾಗಿದ್ದಾನೆ ಎಂಬುದನ್ನೂ ಸೂಚಿಸುತ್ತಿದ್ದುವು.
ಗುತ್ತಿ ಸೀತೂರು ಗುಡ್ಡಕ್ಕೆ ಏರಲು ಮೊದಲು ಮಾಡಿದಾಗಲೆ ಬೈಗುಗಪ್ಪಿನೊಂದಿಗೆ ಮುಗಿಲುಗಪ್ಪು ಮುಸುಕಿ ಮಿಣುಕು ಹುಳುಗಳ ಮಿನುಗು ಕಾಣತೊಡಗಿತ್ತು. ಜೀರುಂಡೆಗಳ ಕೂಗು ಕಿವಿಗೆ ಚಿಟ್ಟು ಹಿಡಿಸುತ್ತಿತ್ತು. ಮಳೆಗಾಲದ ಪ್ರಾರಂಭ ಸಮಯವಾಗಿದ್ದರೂ ಮಲೆಗಾಡು ಭಯಂಕರವಾಗಿದ್ದ ಸಿಂಬಾವಿ, ಸೀತೂರು, ಲಕ್ಕುಂದ ಈ ಕಡೆಗಳಲ್ಲಿ ಇಂಬಳದ ಕಾಟವೂ ಹೆಚ್ಚಾಗಿಯೆ ಶುರುವಾಗಿತ್ತು. ಗುತ್ತಿ ಅಲ್ಲಲ್ಲಿಯೆ ನಿಂತು ಕಣ್ಣಿಗೆ ಕಂಡ ಇಂಬಳಗಳನ್ನು ಕಾಲಿನಿಂದ ಕಿತ್ತೊಗೆಯುತ್ತಾ, ಅದೇ ಕೈಯಲ್ಲಿಯೇ ಜೇಬಿನಿಂದ ಎಲೆಯಡಕೆ ಸುಣ್ಣ ಹೊಗೆಸೊಪ್ಪುಗಳನ್ನು ತೆಗೆದು ಬಾಯಿಗೆ ಹಾಕಿಕೊಳ್ಳುತ್ತಾ, ಕುಳ್ಳಗಾಲುಗಳನ್ನು ಬಿರಬಿರನೆ ಬೀಸಿ ಬೀಸಿ ಹಾಕುತ್ತಾ, ಸೀತೂರು ಗುಡ್ಡದ ಹಳುವಿಡಿದ ಕಾಡುದಾರಿಯಲ್ಲಿ ಮುಂಬರಿದನು. ಕತ್ತಲೆ ಬರುಬರುತ್ತಾ ದಡ್ಡವಾಯ್ತು. ಜೀರ್ದುಂಬಿಗಳ ಜೀರುದನಿ ಘೋರವಾಯ್ತು. ತಾನು ನಡೆಯುತ್ತಿದ್ದ ಹಾದಿಯಾಗಲಿ ತನ್ನ ಕಾಲುಗಳಾಗಲಿ ನೆತ್ತರು ಹೀರುತ್ತಿದ್ದ ಇಂಬಳಗಳಾಗಲಿ ಒಂದಿನಿತೂ ಕಾಣಿಸುವಂತಿರಲಿಲ್ಲ. ಗುತ್ತಿ ಅಂದಾಜಿನ ಮೇಲೆ ಕಾಲು ಹಾಕುತ್ತಿದ್ದನು. ನಾಗರಿಕರಿಗೆ ಭೀಕರವಾಗಿ ಕಾಣುವ ವರ್ಷಾಕಾಲದ ಆ ಭಯಂಕರ ಪರ್ವತಾರಣ್ಯದ ರುದ್ರ ಪ್ರಕೃತಿ ಅವನಿಗೆ ಬಹುಕಾಲದ ಪರಿಚಯದಿಂದ ಸಾಧಾರಣವಾಗಿತ್ತು. ಅವನೂ ಆ ಪ್ರಕೃತಿಯ ಒಂದಂಶವಾಗಿದ್ದನು; ಬೆಟ್ಟದಲ್ಲಿ ಬಂಡೆಯಂತೆ, ಕಾಡಿನಲ್ಲಿ ಮರದಂತೆ ಅದರ ಒಂದಂಗವಾಗಿದ್ದನು.
ಗುತ್ತಿ ಯಾವುದನ್ನೂ ಲೆಕ್ಕಿಸದೆ ಕಾಲು ಹಾಕುತ್ತಿದ್ದುದಕ್ಕೆ ಮತ್ತೊಂದು ಕಾರಣವಿತ್ತು. ಅವನ ಮನಸ್ಸು ಬಹುರ್ಮುಖವಾಗಿರಲಿಲ್ಲ. ತನ್ನ ಸಂಕಲ್ಪಕಾರ್ಯವನ್ನೂ ಅದನ್ನು ಸಾಧಿಸುವ ವಿಧಾನಗಳನ್ನೂ ಉಪಾಯಗಳನ್ನು ಕಷ್ಟ ಸಾಹಸಗಳನ್ನೂ ಕುರಿತು ನಾನಾ ವಿಧವಾಗಿ ಕಲ್ಪಿಸುತ್ತಾ ನಡೆಯುತ್ತಿದ್ದನು. ಒಂದು ಸಾರಿ ಸಿಂಬಾವಿ ಹೆಗ್ಗಡೆಯವರ ಹಳೆಮನೆ ದೊಡ್ಡ ಹೆಗ್ಗಡೆಯವರಿಗೆ ಕೊಟ್ಟಿದ್ದ ಚೀಟಿಯನ್ನು ಸೊಂಟಕ್ಕೆ ಕೈ ಹಾಕಿ ಮುಟ್ಟಿ ನೋಡುವನು. ಮತ್ತೊಂದು ಸಾರಿ ಆವೊತ್ತುತಾನೆ ನೀಟಾಗಿ ಕತ್ತರಿಸಿದ್ದ ಮೀಸೆಗಳನ್ನು ನೀವಿಕೊಳ್ಳುವನು. ಒಂದೊಂದು ಸಾರಿ ತನ್ನ ಮನಸ್ಸಿನಲ್ಲಾಗುತ್ತಿದ್ದ ಹೋರಾಟವನ್ನು ಮಾತಿನಲ್ಲಿ ಹೊರಗೆಡಹುವನು.
“ಈ ಸಾರಿ ನಾನು ಅವಳನ್ನು ಹಾರಿಸಿಕೊಂಡು ಬರದೇ ಇದ್ದರೆ ನಮ್ಮ ಅಪ್ಪ ಅವ್ವಗೆ ಹುಟ್ಟಿದ ಗಂಡೇ ಅಲ್ಲ ನಾನು” ಎಂದು ತಿರಸ್ಕಾರ ಸೂಚಕವಾದ ಹೂಂಕಾರ ಮಾಡಿದಾಗ ಹಿಂದೆ ಹುಳುವಿನಲ್ಲಿ ಯಾವುದೋ ಒಂದು ಜಂತು ಸದ್ದು ಮಾಡಿದ ಹಾಗಾಯಿತು. ಗುತ್ತಿ ತಟಕ್ಕನೆ ಬೆಚ್ಚಿ, ಸಂಪೂರ್ಣವಾಗಿ ಬಹಿರ್ಮುಖಿಯಾಗಿ, ದೊಣ್ಣೆ ಬೀಸುತ್ತಾ “ಹಡ್ಡಿಡ್ಡಿಡ್ಡಿಡ್ಡೀ” ಎಂದು ಕೂಗಿದನು. ಹುಳುವಿನಲ್ಲಿ ಆ ಪ್ರಾಣಿ ಬೆದರಿ ಹಿಂದೋಡಿದ ಸದ್ದಾಯ್ತು.
ಗುತ್ತಿ ಗಟ್ಟಿಯಾಗಿ “ಇದರ ಮನೆ ಹಾಳಾಗ್ಲೋ! ಈ ನರಿಯಿಂದ ಸುಖಾ ಎಲ್ಲ!” ಎನ್ನುತ್ತಾ ಬಿರಬಿರನೆ ನಡೆದನು, ಆ ನಡಿಗೆಯಲ್ಲಿ ಭಯ ಅಷ್ಟೇನೂ ಅವ್ಯಕ್ತವಾಗಿರಲಿಲ್ಲ.
“ಈ ನರಿಯಿಂದ ಸುಖಾ ಇಲ್ಲ!” ಎಂದು ಅವನು ಹೇಳಿದ್ದರೂ ಅವನ ಮಾತು ಮನಸ್ಸಿನಂತಿರಲಿಲ್ಲ. “ಹುಲಿ” ಎನ್ನುವುದಕ್ಕೆ ಬದಲಾಗಿ “ನರಿ” ಎಂದಿದ್ದನು. ಹುಲಿಯನ್ನು ನರಿ ಎಂದು ಕೂಗಿದರೆ ಈ ಮುನುಷ್ಯ ತನ್ನನ್ನು ನರಿಗೆ ಸಮಾನವಾಗಿ ಕಾಣುತ್ತಾನೆ ಎಂದು ತಿಳಿದು ಹುಲಿ ಹೆದರುತ್ತದಂತೆ, “ಹಾವು ಕಚ್ಚಿದೆ” ಎಂದರೆ ಅಪಶಕುನವಾಗುತ್ತದೆಂದು “ಬಳ್ಳಿ ಮುಟ್ಟಿದೆ” ಎನ್ನುತ್ತಾರಲ್ಲಾ ಹಾಗೆ.
ಗುತ್ತಿ ಇನ್ನೂ ಸೀತೂರು ಗುಡ್ಡದ ನೆತ್ತಿಗೇರಿರಲಿಲ್ಲ. ಗಾಳಿ ಪ್ರಾರಂಭವಾಗಿ ಹಾಡು ಹೋ ಎನ್ನತೊಡಗಿತು. ಮುಗಿಲು ಮೊಳಗಿತು; ಮಿಂಚಿತು. ಮೊದಮೊದಲು ಅಲ್ಲೊಂದಿಲ್ಲೊಂದು ತೋರ ಹನಿ ಮರದೆಲೆಯ ಮೇಲೆ ಬಿದ್ದ ಸದ್ದಾಯಿತು. ಗುತ್ತಿ ಹೆಗಲಮೇಲಿದ್ದ ಕಂಬಳಿಕೊಪ್ಪೆಯನ್ನು ಬೇಗ ಬೇಗನೆ ತೆಗೆದು ಸೂಡಿಕೊಳ್ಳುತ್ತಿದ್ದಾಗಲೆ ಮುಂಗಾರು ಮಳೆ ಕಾಡೆಲ್ಲ ಕಂಗಾಲಾಗುವಂತೆ ದನಗೋಳಾಗಿ ಸುರಿಯತೊಡಗಿತು. “ಇದರ ಕಣ್ಣಿಂಗಿ ಹೋಗಾಕೆ ನೆತ್ತಿ ದಾಟೋವರಿಗಾದ್ರೂ ತಡೀಬಾರ್ದಾಗಿತ್ತೇ?” ಎಂದು ಮಳೆಯನ್ನು ಶಪಿಸುತ್ತಾ ಕಂಬಳಿಕೊಪ್ಪೆಯನ್ನು ಮೈಗೆ ಭದ್ರವಾಗಿ ಸುತ್ತಿಕೊಂಡು ಹಳುವಿನ ನಡುವೆ ಕಗ್ಗತ್ತಲೆಯಲ್ಲಿ ತಡವುತ್ತಾ ನಡೆದನು.
ಗುತ್ತಿ ಸೀತೂರು ಗುಡ್ಡವನ್ನು ಹತ್ತಿ ಇಳಿದು ಅದರ ಬುಡದಲ್ಲಿ ಲಕ್ಕುಂದದ ಗದ್ದೆ ಕೋಗಿಗೆ ಉತ್ತರದಿಕ್ಕಿನ ಗಡಿಯಾಗಿ ಹರಿಯುತ್ತಿದ್ದ ಹಳ್ಳವನ್ನು ಸಮೀಪಿಸುತ್ತಿದ್ದಾಗಲೆ ತೊರೆಯ ನೀರಿನ ಭೋರಾಟವನ್ನು ಆಲಿಸಿ “ಆಯ್ತಾ! ಇನ್ನು ಈ ಹಳ್ಳದ ಹೆಣಾ ಬೇರೆ ಕಾಯಬೇಕು!” ಎಂದು ಗೊಣಗಿದನು.
ಹಳ್ಳದ ಅಂಚಿಗೆ ಬಂದು ನಿಂತು ನೋಡಿದಾಗ ಕತ್ತಲೆಯಲ್ಲದೆ ಮತ್ತೇನೂ ಕಾಣಿಸಲಿಲ್ಲ. ನೀರಿನ ಭೋರಾಟದಿಂದಲೆ ಹಳ್ಳದ ಏರಿಕೆಯನ್ನು ಊಹಿಸುತ್ತಾ ನಿಂತಿದ್ದಾಗ ಒಂದು ಸಾರಿ ಮಿಂಚಿತು. ವೈರಿದಳದ ಮೇಲೆ ರಭಸದಿಂದ ದಾಳಿ ನುಗ್ಗುವ ತುರಂಗ ಸೇನೆಯಂತೆ ಉನ್ಮತ್ತ ವೇಗದಿಂದ ಹರಿದೊಡುತ್ತಿದ್ದ ತೊರೆಯ ತೆರೆಗಳು ಪಳಪಳನೆ ಮಿಂಚಿದುವು. ಹೊನಲಿನ ಮಧ್ಯೆ ವೇಗವಾಗಿ ಹೋಗುತ್ತಿದ್ದ ಮರದ ತುಂಡುಗಳೂ ಕಸಕಡ್ಡಿಗಳೂ ಅದರ ರಭಸಕ್ಕೆ ಸಾಕ್ಷಿಯಾಗಿದ್ದುವು. ಬೇಸಗೆಯಲ್ಲಿ ಒಂದೆರಡು ಅಡಿಗಳಗಲವಾಗಿರುತ್ತಿದ್ದ ಆ ಹಳ್ಳ ಈಗ ಸುಮಾರು ಉಪ್ಪತ್ತೈದು ಮೂವತ್ತು ಅಡಿಗಳಷ್ಟು ಅಗಲವಾಗಿ ಹರಿಯುತ್ತಿತ್ತು.
ಗುತ್ತಿ ಕತ್ತಲೆಯನ್ನು ನೋಡುತ್ತಾ, ಮಳೆಯ ಮತ್ತು ತೊರೆಯ ನಿರ್ಮೊರೆಯನ್ನೂ ಮರಗಳಲ್ಲಾಗುತ್ತಿದ್ದ ಗಾಳಿಗರ್ಜನೆಯನ್ನೂ ಆಲಿಸುತ್ತಾ ಕೈಯಂದಾಜಿನ ಮೇಲೆ ಕಾಲಿನಲ್ಲಿ ನುಣ್ಣಗೆ ಸಿಕ್ಕಿದ ಇಂಬಳಗಳನ್ನು ತೆಗೆದು ಬಿಸಾಡಲು ಪ್ರಯತ್ನಿಸುತ್ತಾ ನಿಂತನು.
ಸ್ವಲ್ಪ ಹೊತ್ತಿನಲ್ಲಿಯೆ ಹಳ್ಳದ ಆಚೆಯ ದೂರದಲ್ಲಿ ಲಕ್ಕುಂದದ ಗದ್ದೆಕೋಗಿನ ಜಡ್ಡಿನಲ್ಲಿ, ಪದೇ ಪದೇ ಬೀಸುತ್ತಿದ್ದ ದೊಂದಿಗಳೂ ಲಾಟೀನುಗಳೂ ಕಾಣಿಸಿತು. “ಈ ಮಳೇಲಿ ಮೀನು ಕಡಿಯಾಕೆ ಹೊರಟಾರಲ್ಲಪ್ಪಾ? ಈ ದೀವರು ಮಕ್ಕಳಿಗೆ ಕಳ್ಳು ಹೆಚ್ಚಾಗಿದ್ದೇ!” ಎಂದುಕೊಂಡು ಗುತ್ತಿಗೆ ಮಳೆ ನಿಂತಿದ್ದುದು ಅನುಭವಕ್ಕೆ ಬಂತು. ಆದರೆ ಹಳ್ಳ ಇಳಿಯುವವರೆಗೂ ಅದನ್ನು ದಾಟುವ ಹಾಗಿರಲಿಲ್ಲ. ನಿಂತು ಬೇಸರವಾಗಿದ್ದದರಿಂದ ಕಂಬಳಿಕೊಪ್ಪೆಯ ಒಂದು ಭಾಗವನ್ನೆ ಹಾಸನ್ನಾಗಿ ಉಪಯೋಗಿಸಿಕೊಂಡು (ಕಂಬಳಿಕೊಪ್ಪೆ ಅವನ ಹರಡಿಗೆ ಹತ್ತಿರ ಹತ್ತಿರ ಬರುತ್ತಿತ್ತು!) ಹಸುರು ಬೆಳೆದೊಂದು ಮಣ್ಣು ದಿಬ್ಬದ ಮೇಲೆ “ಹಳ್ಳದ ಹೆಣಾ ಕಾಯ್ತಾ” ಕುಳಿತನು.
ಮಳೆ ಸಂಪೂರ್ಣವಾಗಿ ನಿಂತಿತ್ತು. ತೊರೆಯ ಮೊರೆ ಮೊದಲಿನಷ್ಟು ಇರಲಿಲ್ಲ. ಮಳೆ ತೊರೆಗಳ ಜಲಘೋಷದಲ್ಲಿ ಹಿಂದೆ ಕೇಳಿದದಿದ್ದ ಕಪ್ಪೆಗಳ ವಟಗುಟ್ಟುವಿಕೆ ಚಿತ್ರವಿಚಿತ್ರವಾಗಿ ಕೃತವಿಕೃತವಾಗಿ ಕೇಳಿಸುತ್ತಿತ್ತು. ಗಾಳಿ ಬೀಸಿದಂತೆಲ್ಲ ಮರದ ಹನಿ ತಟಪಟನೆ ಉದುರುತ್ತಿತ್ತು. ಕಾಣಿಸದಿದ್ದರೂ ತೊರೆಯ ಮೇಲೆ ಕಣ್ಣಿಟ್ಟು, ಯಾವ ಆಲೋಚನೆಯನ್ನೂ ಮಾಡದೆ, ಶೂನ್ಯ ಮನಸ್ಸಿನಿಂದ ತೊರೆಯ ಮೊರೆಯನ್ನು ಆಲಿಸುತ್ತಾ ಆಲಿಸುತ್ತಾ ಆಲಿಸುತ್ತಾ ತಾನೇ ರೊತೆಯ ಮೊರೆಯಾದನೋ ಎಂಬಂತೆ ಕುಳಿತಿದ್ದ ಗುತ್ತಿ ತಟಕ್ಕನೆ ಎಚ್ಚತ್ತು, ಮೂಗನ್ನು ಅರಳಿಸಿ, ಮೂಸಿ ಮೂಸಿ, ಗಾಳಿ ಹಿಡಿಯತೊಡಗಿದನು.
ಅವನ ಮೂಗಿಗೆ ಬಿದ್ದುದ್ದು ನಾಯಿಯ ವಾಸನೆ! ಮಳೆಯಲ್ಲಿ ತೊಪ್ಪನೆ ತೊಯ್ದು ಮೈಯಿಂದ ಆವಿ ಏರುತ್ತಿರುವ ಕಂತ್ರಿ ನಾಯಿಯ ಸಿನುಗು ವಾಸನೆ! ಗುತ್ತಿ ಸುತ್ತ ನೋಡಿದರೂ ಏನೂ ಕಾಣಿಸಲಿಲ್ಲ. ಆದರೂ ವಾಸನೆ ಸ್ಪಷ್ಟವಾಗಿತ್ತು. ಕಣ್ಣಿಗೆ ನಾಯಿ ಕಂಡಿದ್ದರೆ ಎಷ್ಟರಮಟ್ಟಿಗೆ ಅದು ನಿಜವಾಗಿರುತ್ತಿತ್ತೋ ಅಷ್ಟರಮಟ್ಟಿಗೇ ನಿಜವಾಗಿತ್ತು ಮೂಗಿಗೆ ನಾಯಿಯ ಮೈಗಂಪು.
“ಹಡಬೇಗ್ಹುಟ್ಟಿದ್ದು ದಾರಿ ಹುಡಕ್ಕೊಂಡು ಬಂತೋ ಏನೋ?” ಎನ್ನುತ್ತಾ, ನಯನೇಂದ್ರಿಯಕ್ಕೆ ಗೋಚರವಾಗದಿದ್ದರೂ ಘ್ರಾಣೇಂದ್ರಿಯದಲ್ಲಿ ತನಗಿದ್ದ ಶ್ರದ್ಧೆಯಿಂದಲೋ ಎಂಬಂತೆ “ಬಾ, ಹುಲಿಯಾ ಬಾ”! ಎಂದು ಮುದ್ದಾಗಿ ಕರೆದನು.
ಕರೆದನೋ ಇಲ್ಲವೋ, ಮಂತ್ರಸೃಷ್ಟಿಯಾದಂತೆ, ದೈತ್ಯಾಕೃತಿಯ ಅವನ ಕಂತ್ರಿ ನಾಯಿ ಬಾಣದಂತೆ ನೆಗೆದುಬಂದು ಹತ್ತಿರ ನಿಂತು ಬಾಲವಲ್ಲಾಡಿಸುತ್ತಾ ಕುಂಯ್ಯಿ ಕುಂಯ್ಯಿಗುಟ್ಟುತ್ತಾ ಗುಣಿದಾಡಿತು.
ಮಿಂಚಿನ ಬೆಳಕಿನಲ್ಲಿ ಮಿಂಚಿಗಳುಕಿ ಕತ್ತಲೆಯೆ ನಾಯಿಯಾಯಿತೆಂಬಂತೆ ಕರ್ರಗಿದ್ದ ಹುಲಿಯನ ದೊಡ್ಡ ಮೈ ಕಾಣಿಸಲು, ಗಿಡ್ಡನಾದ ಗುತ್ತಿಗೆ ಮುದ್ದು ಹೆಮ್ಮೆ ಸೂಸಿದಂತಾಗಿ, ಅದರ ಒದ್ದೆಯಾಗಿದ್ದ ತಲೆಯ ಮೇಲೆ ಕೈ ಸವರುತ್ತಾ “ಥೂ ಕಳ್ಳಾ, ಬರಬೇಡ ಅಂತಾ ಹೇಳಿ ಹೊಡೆದಟ್ಟಿ ಬಿಟ್ಟುಬಂದಿದ್ದರೂ ಮತ್ತೆ ಬಂದೀಯಾ? ಒಂದಿವಸ ಕುರ್ಕನ ಪಾಲಿಗೆ ಆಗ್ತೀಯ! ಥೂ ಕಳ್ಳಾ! ಇನ್ನು ಹೋದಲ್ಲಿ ತನಕ ನಾಯಿ ಬೊಗಳಿಸುತ್ತಾ ಬಾ! ಥೂಯ್, ಹಾಳು ಮುಂಡೇದು ಬಾಯಿನೂ ನೆಕ್ಕಿತಲ್ಲೋ! ಹೋಗು, ದೂರ ಹೋಗು” ಎಂದು ದಬ್ಬಿದರೂ ಹುಲಿಯನು ಹತ್ತಿರದಿಂದ ಹೋಗಲೂ ಇಲ್ಲ; ಗುತ್ತಿಗೂ ಒಬ್ಬನೇ ಕೂತು ಕೂತು ಬೇಜಾರಾಗಿ ಜೊತೆ ಬೇಕಾಗಿದ್ದುದರಿಂದ ಅದು ದೂರ ಹೋಗಲೇಬೇಕೆಂದು ಅವನೂ ಸಹ ಹಟ ಹಿಡಿಯಲೂ ಇಲ್ಲ.
ಹುಲಿಯನ ದೆಸೆಯಿಂದಲೆ ಗುತ್ತಿಗೆ “ನಾಯಿಗುತ್ತಿ” ಎಂಬ ಅಡ್ಡ ಹೆಸರು ಬಂದಿತ್ತು. ಅವನು ಎಲ್ಲಿ ಹೋಗಲಿ ಆ ನಾಯಿ ಅವನ ಜೊತೆ ಬಿಡುತ್ತಿರಲಿಲ್ಲ. ಬಿಡಾರದಲ್ಲಿ ಕಟ್ಟಿ ಹಾಕಿ ಹೋದರೆ, ಕೂಗಾಡಿ ಒದ್ದಾಡಿ ಮಿಣಿ ಕಿತ್ತುಕೊಂಡು ಬರುತ್ತಿತ್ತು. ಇಲ್ಲವೆ ಮಲಮೂತ್ರಕ್ಕೆ ಬಿಟ್ಟ ಕೂಡಲೆ ದಾರಿ ಹುಡುಕಿ ಒಡೆಯನನ್ನು ಹಿಂಬಾಲಿಸುತ್ತಿತ್ತು. ಒಂದು ವೇಳೆ ಗುತ್ತಿ ಕಲ್ಲಿನಿಂದ ಹೊಡೆದು ಹಿಂದಕ್ಕಟ್ಟಿದರೆ ಬಿಡಾರಕ್ಕೆ ಹಿಂತಿರುಗಿದಂತೆ ನಟಿಸಿ ಅಲ್ಲಿಯೇ ಎಲ್ಲಿಯಾದರೂ ಅವಿತುಕೊಂಡಿದ್ದು, ತರುವಾಯ ಕದ್ದು ಹಿಂಬಾಲಿಸುತ್ತಿತ್ತು. ಸರಿ, ಆಮೇಲೆ, ಅವನು ಹೋದ ಹಳ್ಳಿಗಳಲ್ಲಿ ಮನೆಗಳಲ್ಲಿ ನಾಯಿಯ ಬೊಬ್ಬೆ! ಹೀಗಾಗಿ ಜನರ ಮನದಲ್ಲಿ ಗುತ್ತಿಗೂ ಅವನ ನಾಯಿಗೂ ಒಂದು ಗಂಟುಬಿದ್ದು,  ಅವನನ್ನು “ನಾಯಿಗುತ್ತಿ” ಎಂದೂ, ನಾಯಿಯನ್ನು “ಗುತ್ತಿನಾಯಿ” ಎಂದೂ ಕರೆದರು. ಆ ಹೆಸರು ಎಷ್ಟರಮಟ್ಟಿಗೆ ಬಳಕೆಗೆ ಬಂದು ಹೋಯಿತೆಂಗರೆ, ಯಾರಾದರೂ ಗುತ್ತಿಯ  ಹೆಸರನ್ನು ಬರಿದೇ ಹೇಳಿದರೆ “ಯಾರು? ನಾಯಿಗುತ್ತಿಯೇ?” ಎಂಬ ಪ್ರಶ್ನೆ ಅನಿವಾರ್ಯವಾಗಿ ಬರುತ್ತಿತ್ತು.
ಹುಲಿಯನು (ಆ ನಾಯಿಗೆ ಗುತ್ತಿ ಇಟ್ಟಿದ್ದ ಹೆಸರು)  ಇನ್ನೂ ಹೆಸರಿಲ್ಲದ ಮರಿಯಾಗಿ, ತಬ್ಬಲಿಯಾಗಿ, ಮೇಗರವಳ್ಳಿಯ ಬೀದಿಯಲ್ಲಿ ತೂರಾಡುತ್ತಿದ್ದಾಗ ಗುತ್ತಿ ಅದನ್ನು ಎತ್ತಿ ತಂದು ಸಾಕಿದ್ದನು. ಅದಕ್ಕೆ ಅವನು ಹೊಟ್ಟೆಗೆ ಹಾಕುತ್ತಿದ್ದುದು ಗಂಜೀನೀರಾದರೂ ಆ ಮರಿ ದುಮ್ಮುದುಮ್ಮಾಗಿ ಬೆಳೆಯಿತು. ಕುಳ್ಳಾಗಿದ್ದ ಗುತ್ತಿ ಎತ್ತರವಾಗಿ ಬೆಳೆಯುತ್ತಿದ್ದ ನಾಯಿಯನ್ನು ಕಂಡು ಹಿಗ್ಗಿ ಸ್ವಲ್ಪ ಹೆಚ್ಚಾಗಿ ಬಾಡು ಹಾಕಿ ಸಾಕಿದನು. ನಾಯಿಯೂ ಸ್ವಯಂ ಸಂಪಾದನೆ ಮಾಡುವುದನ್ನು ಕಲಿತು ದೈತ್ಯವಾಗಿ ಬೆಳೆಯಿತು. ಅದರ ಗಾತ್ರ, ಅದರ ಧೈರ್ಯ, ಅದರ ಮೋರೆ ಇವುಗಳನ್ನು ನೋಡಿ ಅದಕ್ಕೆ “ಹುಲಿಯ” ಎಂದು ನಾಮಕರಣ ಮಾಡಿದನು. ಕೆಲವರು ಅದರ ಬಣ್ಣವನ್ನು ನೋಡಿ, “ಕರಿಯ” ಎಂದು ಹೆಸರಿಡಲು ಸೂಚನೆ ಕೊಟ್ಟಿದ್ದರೂ, ಗುತ್ತಿ ಗುಣಕ್ಕೇ ಮರ್ಯಾದೆ ಕೊಟ್ಟು ತಾನಿಟ್ಟ ಹೆಸರನ್ನೇ ಸಮರ್ಥಿಸಿದ್ದನು.
ಗುತ್ತಿಯ ಸೊಂಟದೆತ್ತರಕ್ಕೂ ಮಿಗಿಲೆತ್ತರವಾಗಿತ್ತು ಆ ಹುಲಿಯ. ನಾಯಿಗಳ ಭಯವಿರಲಿ ಚಿರತೆಗೂ ಅದು ಹೆದರುತ್ತಿರಲಿಲ್ಲ. ಒಂದು ಸಾರಿ ಇರುಳು  ನಿದ್ದೆ ಮಾಡುತ್ತಿದ್ದಾಗ ತನ್ನನ್ನು ಹೊತ್ತುಕೊಂಡು ಹೋಗಲು ಪ್ರಯತ್ನಿಸಿದ್ದ ಚಿರತೆಗೆ ಎಲ್ಲಾ ಬರುವಂತೆ ಮಾಡಿ ಕಳುಹಿಸಿತ್ತು. ಗುತ್ತಿ ಆ ಕಥೆಯನ್ನೂ ಅದಕ್ಕೆ ಸಂಬಂಧಿಸಿದ ಇತರ ಕಥೆಗಳನ್ನೂ, ಎಷ್ಟೋ ಸಾರಿ ಕೇಳಿದವರಿಗೂ, ಬೇಜಾರಾದರೂ ಬೇಸರಪಡದೆ ಹೇಳುತ್ತಿದ್ದನು. ನಾಯಿಯ ಮತ್ತು ಹೊಲೆಯನ ಮನೋಮನ ಕೋಶಗಳೆರಡೂ ಒಂದನ್ನೊಂದು ಆಲಿಂಗಿಸಿದ್ದುವು. ಆದ್ದರಿಂದಲೇ ಹೊರಡುವಾಗ ಹಿಂದಕ್ಕಟ್ಟಿ ಬಂದಿದ್ದರೂ ಹುಲಿಯನು ಬಂದಾಗಿ ಗುತ್ತಿಗೆ ಸಿಟ್ಟಿಗೆ ಬದಲಾಗಿ ಸಂತೋಷವಾದದ್ದು.
ಸುಮಾರು ಅರ್ಧಗಂಟೆಯ ಮೇಲೆ ಹಳ್ಳ ತಕ್ಕಮಟ್ಟಿಗೆ ಇಳಿಯಿತು. ಗುತ್ತಿ ಕೊಪ್ಪೆಯ ತುದಿಯನ್ನೂ ಸೊಂಟದ ಪಂಚೆಯನ್ನೂ ಕತ್ತಲೆಯಲ್ಲಿ ನಿಸ್ಸಂಕೋಚವಾಗಿ ಎತ್ತಿಕೊಂಡು ದಾಟತೊಡಗಿದನು. ಹುಲಿಯನೂ ಹಿಂಬಾಲಿಸಿತು. ನಡುಹಳ್ಳಕ್ಕೆ ಬಂದಾಗ, ತುದಿಬೆರಳಿನಲ್ಲಿ ನಡೆಯುವ ಸರ್ಕಸ್ಸು ಮಾಡಿದರೂ ಸಫಲವಾಗದೆ, ಗುತ್ತಿಯ ಇಷ್ಟಕ್ಕೆ ವಿರೋಧವಾಗಿ ಕೆಲವು ದೇಹಭಾಗಗಳು ತೋಯ್ದು ಹೋದುವು. ಅವನಿಗೆ ತುಂಬಾ ಸಿಟ್ಟಾಗಿ ಅಸಹ್ಯವಾದ ರೀತಿಯಲ್ಲಿ ತೊರೆಯನ್ನು ಬಯ್ದನು. ನಾಯಿ ಅವನಿಗಿಂತಲೂ ಬಹಳ ಮೊದಲೆ ಆಚೆಯ ದಡವನ್ನು ಸೇರಿ ಒಡೆಯನಿಗಾಗಿ ಕಾಯುತ್ತಾ ನಡುಗುತ್ತಿತ್ತು.
ಹಳ್ಳ ದಾಟಿದ ಗುತ್ತಿ ಅರೆಪಾಲಿಗೆ ಹೆಚ್ಚಾಗಿಯೆ ಒದ್ದೆಯಾಗಿದ್ದನು. ಜೇಬಿನಲ್ಲಿದ್ದ ಎಲೆ ಅಡಕೆ ಹೊಗೆಸೊಪ್ಪು, ಹೆಗ್ಗಡೆಯವರು ಕೊಟ್ಟಿದ್ದ ಚೀಟಿ ಎಲ್ಲಾ ನೆನೆದಿದ್ದುವು. ಆ ಕೆಸರಿನಲ್ಲಿ ಆ ಕತ್ತಲೆಯಲ್ಲಿ ಶಪಿಸುವುದೊಂದು ವಿನಾ ಮತ್ತೇನನ್ನೂ ಮಾಡಲು ತೋಚದೆ, ಮಳೆಯ ಅವ್ವನನ್ನೂ ತೊರೆಯ ಅಪ್ಪನನ್ನೂ ಹಿನಾಯವಾಗಿ ಬಯ್ಯುತ್ತಾ ಗದ್ದೆಯಂಚಿನ ಮೇಲೆ ಕಾಲೂಹೆಯಿಂದ ಮುಂದುವರಿದನು. ಹಿಂದೆ ಕಾಣಿಸಿದ್ದ ಹತ್ತು ಮೀನು ಕಡಿಯಲು ಹೊರಟವರ ಕೈಬೆಳಕುಗಳೊಂದೂ ತೋರಲಿಲ್ಲ. ಮೇಗರವಳ್ಳಿಯಾಚೆ ಹಳೆಮನೆಗೆ ಹೋಗಬೇಕೆಂದಿದ್ದವನು ಲಕ್ಕುಂದದ ಹಳೆಪೈಕದವರ ಮನೆಯಲ್ಲಿ ಆ ರಾತ್ರಿ ಕಳೆಯಲು ನಿಶ್ಚಯಿಸಿದನು.
“ಈ ಗದ್ದೆಕೋಗು ದಾಟಿ, ಆ ಕರಡದ ಬ್ಯಾಣ ದಾಟಿದರೆ ಸೈ. ಸೇಸನಾಯ್ಕರ ಮನೆ ಸಿಗ್ತದೆ. ಮೊದೂಲಷ್ಟು ಮೈ ಒಣಗಿಸಿಕೊಳ್ಬೇಕು…. ಅನ್ನಾ ಇಲ್ದಿದ್ರೆ ಗಂಜೀನಾದ್ರೂ ಹಾಕ್ದೆ ಇರ್ತಾರೇನು? ಹೆಗ್ಡೇರ ಮನೆ ಆಳೂ ಅಂತಾ!…. ಕಳ್ಳಿಲ್ದೆ ಇದ್ರೆ ಒಂದು ಗಲ್ಟಾ ಹೆಂಡಾನಾದ್ರೂ ಸಿಕ್ಕಬೈದು! ಬಾ ಹುಲಿಯ, ಬಾ, ನಿನ್ನ ಹಿಡುಕೊಳ್ಳದೆ ಇದ್ರೆ ಹೋದಲ್ಲಿ ತನಕಾ ಕೊಂಬು ಹುಯ್ಲೆ!
*******
                                                                  

2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

prakruthiya chithrana kan mundhene barutthe odidavarige sundaravagidhe....

Parashuram Salotagi ಹೇಳಿದರು...

ಗುತ್ತಿಯ ಮಾತು ಅವನ ಹುಲಿಯ ಆ ಇಂಬಳ ಈ ರೀತಿಯ ಸೊಗಡು ಇರುವುದೆಲ್ಲ ಮಲೆನಾಡುಗಳಲ್ಲೆ........ಇವುಗಳನ್ನೆಲ್ಲ ನೆನಸಿಕೊಂಡರೆ ಸುಂದರ್ವದಂತಃ ಚಿತ್ರಗಳು ಮನದಲ್ಲಿ ಮೂಡುತ್ತವೆ. ಮೊದಲ ಭಾಗವಂತು ತುಂಬಾ ಸುಂದರವಾಗಿದೆ ಮತ್ತು. ವಿಚಿತ್ರ ಏನಿಬಹುದೆಂದು ಆದ್ರೂ ಬಹು ಚೆನ್ನಾಗಿದೆ.