ಶ್ರೀ ಸಂಪುಟಂ: ಸಂಚಿಕೆ 11 - ರೈಗೆ ಕರೆದೊಯ್, ಓ ಅಗ್ನಿ!

ಶ್ರೀ ಸಂಪುಟಂ: ಸಂಚಿಕೆ 11 - ರೈಗೆ ಕರೆದೊಯ್, ಓ ಅಗ್ನಿ!
ಕ್ರಾಂತದರ್ಶಿನಿ ಓ ಜಗತ್‌ಕಾಂತಿಕರೆ, ಶಾಂತೆ,
ಭ್ರಾಂತಿಹರೆ, ಸುಚಿರೆ, ಸುಸ್ಥಿರೆ, ಪರಾತ್ಪರೆ, ವಾಣಿ,
ಓ ಪರಾತ್ಪರವಾಣಿ, ಮಿಡಿ ನಿನ್ನ ಬೀಣೆಯಂ;
ನುಡಿ ಮುಂದೆ ನಡೆದುದಂ, ನಿನಗೆ ಕಾಣ್ಬಂದದಿಂ,
ಲೋಕಮೋಹಕ ಶೋಕದಾರುಣ ಕರುಣ ಕಥೆಯಂ,
ಧರಾತ್ಮಜೆಗೆ ರಾಘವೇಂದ್ರಗೆ ಮತ್ತೆ ಸುಗ್ರೀವ
ಕಪಿಕಟಕಕೊದಗಿದ ಮಹತ್‌ ಸಂಕಟದ ಮತ್ತೆ
ನೂರ್ಮಡಿಯೆನಲ್‌ ಮುಹುರ್ ಭವಿಸಿದನುಪಮ ಸುಖದ
ಸಂಕಥನಮಂ. ತನ್ನ ಮುಡಿಗೆ ರಘುವರನಿಡಲ್‌
ಬಯಸಲೊಲ್ಲದೆಯೆ ಲಂಕಾ ಕಿರೀಟವನದಂ   ೧೦
ಇಂದ್ರಜಿತುವಿನ ಕಂದಗಾ ಪಸುಳೆ ಮೊಮ್ಮಗನ
ಮುಡಿಗೆ ತಾಣೆಯೆ ತೊಡಿಸುವನಲಾ ವಿಭೀಷಣಂ!
ಬಾ ನೋಳ್ಪಮಾ ತ್ಯಾಗ ವಿಭವಮಂ! ಮತ್ತಮಾ
ಮೇಘನಾದಧ್ವಂಸಿ ತಾಂ ತಾರಾಕ್ಷಿಯರ್ಭಕಗೆ
ವಜ್ರಾರಿಗೆ ಕಿರೀಟಧಾರಣೆಯನೆಸಗುವ
ಮಹೋತ್ಸವವನೀಕ್ಷಿಸುವಮೆಂದು ಉಷೆ, ಕರೆಕರೆದು
ರವಿದೇವನಂ, ಏರಿದಳು ಬೇಗಮೈಂದ್ರಾದ್ರಿಯಂ!
ಪಕ್ಷಿಸ್ವನಸ್ವಾಗತಕ್ಕಾನಂದಿಸುತೆ ಮೂಡಿ,
ಕೇಳ್ದನು ದಿನೇಶನುಷೆಯಂಜ: “ಎಲ್ಲಿ ನೀನೊರೆದಾ
ಮಹೋತ್ಸವಂ?” “ಕಾಲಿಲ್ಲದವನೆ ಸಾರಥಿಯಲಾ!     ೨೦
ಆ ಹೆಳವನೊಡನೆ ನೀಂ ತೆವಳಿ ಬರ್ಪನ್ನೆಗಂ
ಮುಗಿದುದದು!”
“ಏನಸವರಮೊ ಆ ವಿಭೀಷಣಗೆ?”
“ನಿನ್ನ ಪೀಳಿಗೆಯರಸರೇಳ್ಗೆ ತಾನವಸರಂ!
ನೋಡದೊ: ಜಗಚ್ಚಕ್ಷುನೀನಲ್ತೆ? ಅಯೋಧ್ಯೆಯೊಳ್‌
ತಪಿಸುತಿರ್ಪಂ ಭರತನೂರ್ಮಿಳಾದೇವಿಯೆರ್ದೆ
ತಳಮಳಿಸುತಿರ್ಪುದಾಶಂಕೆಯಿಂ; ತಾಯ್ವಿರಾ
ಕೌಸಲ್ಯೆಯುಂ ಮೇಣ್‌ ಸುಮಿತ್ರೆಯುಂ ಮತ್ತಮಾ
ಕೈಕೆಯುಂ ಬೆಂದು ಬೇಗುದಿಗೊಳ್ಳುತಿಹರೆಂತು
ತಂತಮ್ಮ ಕಣ್ಣೀರ್ಗಳುರಿವೆಂಕೆಯಿಂ! ಸ್ವಾಮಿ
ರಾಮಚಂದ್ರಂ ಕಾತರಿಸುತಿರ್ಪನವರೆಡೆಗೆ     ೩೦
ಪಿಂತಿರುಗಲತಿಶೀಘ್ರದಿಂ, ದೇವಿ ಸೀತೆಯಂ
ಪಡೆದು.”
“ರಾವಣನಳಿದನಿನ್ನಾರ ತಡೆ ಪೂಜ್ಯೆಯಂ
ಪರಿಶುದ್ಧೆಯಂ ಪಡೆಯೆ?”
“ಸಾರ್ಥಕಮಪ್ಪುದೈ ಚಕ್ಷು;
ಕಾಣುವಯ್‌ ನೀನಾ ಜಗದ್‌ಭವ್ಯ ದೃಶ್ಯಮಂ;
ನೋಡುತಿರು. ರಾಮಾಜ್ಞೆಯಿಂ ವಿಭೀಷಣನೊಡನೆ,
ಕಾಣದೊ, ಅಶೋಕವನಮಂಪುಗುತ್ತಿರ್ಪ್ಪಂ
ಮರುತ್ಸೂನು, ಜಾನಕಿಗೆ ವಿಜಯವಾರ್ತೆಯನೊರೆದು,
ದೇವಿಯಭಿಲಾಷೆಯಂ ತಿಳಿದು, ತದನಂತರಂ
ತರಿಸಲಲ್‌ ಮುಂಬಟ್ಟೆಯಂ.”
ರವಿಕಿರಣಮೊಂದು
ಪರ್ಣಶಾಲೆಯ ಪತ್ರವಿರಳತೆಯನರಸಿ ತಾಂ              ೪೦
ಪೊಕ್ಕುದು ಕುಟೀರಮಂ. ದಶಕಂಠನಂತ್ಯಮಂ
ಕೇಳ್ದಾ ಮೊದಲ್ಗೊಂಡುಮೀಗಳಾಗಳೊ, ತಾನೊ
ಲಕ್ಷ್ಮಣನೊ, ದೂತನೊ ವಿಭೀಷಣನೊ ಮೇಣಾರೊ
ಮತ್ತೆಂತೊ, ಬಂದಪ್ಪರಾಣ್ಮನಾದೇಶಮಂ
ತಂದಪ್ಪರೆಂದು ಪಗಲಿರುಳುಗಳನೆಳ್ಚರೊಳೆ
ನೂಂಕುತಿರ್ದುತ್ಕಂಠೆ ಮೆಲ್ಲನೊಳಪೊಕ್ಕತಿಥಿ
ಕಿರಣಪ್ರಥಮದೂತನಂ ಕಾಣುತಾದರದಿ
ಕೈಮುಗಿದಳುಪಚರಿಸಿದಳು ಸೀತೆ. ನುಡಿದಳ್‌
ತ್ರಿಜಟೆಗಿಂತು:
“ರವಿದೂತನೈತಂದನೌ, ಕೆಳದಿ.
ರವಿಕುಲೇಶ್ವರ ದೂತನೇಕಿನ್ನುಮೈತರನೊ?  ೫೦
ಕಜ್ಜಮೊ? ಮುನಿಸೊ? ಕಾರಣವನರಿಯದೆನ್ನುಸಿರ್
ಲಜ್ಜಿಸುತ್ತಿಹುದೊಡಲ ಗೂಡಿನೊಳೆರಂಕೆಯಂ
ಬಿರ್ಚ್ಚಿ, ಪಾರ್ವೆನೊ ನಿಲ್ವೆನೆಂಬ ಬಗೆಯುಯ್ಯಲೆಯ
ಲತೆಯಂ ತೊನೆದು ತೂಗಿ.”
“ತವರುಮನೆ ಬಳಿಸಾರೆ
ನಡೆವ ದಾರಿಯ ಹಾವುಮೆಯ್‌ ನಿಡುನಿರ್ಮಿದಂತೆ
ತೋರುವುದು, ತಾಯಿ. ನಿನಗಾಗಿ ಬಂದವನಲ್ತೆ
ನಿನ್ನ ಜೀವೇಶ್ವರಂ? ಶೋಷಿಸಿ ಸಮುದ್ರಮಂ
ರಾಜರತ್ನವನುಳಿವನೇಂ ರಾಜರಾಜೇಶ್ವರಂ?”
“ಪೊರಗಿಣಿಕಿ ನೋಡು, ಸಖಿ! ಅಶೋಕವನಿಕಾ ವೀಧಿ
ಧನ್ಯಮಾದುದೆ ದಿವ್ಯ ಚರಣ ಧೂಳಿಯೊಳಿಂದು?”         ೬೦
ತನು ವಿಕಂಪಿಸೆ ಗದ್ಗದಿಸುತೆಂದ ಮೈಥಿಲಿಗೆ
ನೋಡಿ ನುಡಿದಳ್‌ ತ್ರಿಜಟೆ:
“ಕಾಣರಾರುಂ, ದೇವಿ,”
“ಏನನೋ ನೀಂ ಗಮನಿಸಿದೆಯಲ್ತೆ?”
“ಏನಿಲ್ಲ.
ತಾಯಿ, ನವಿಲೆರಡು ಮೇವರಸಿ ಚರಿಸಿಹವಲ್ಲಿ.”
“ಇನ್ನೊಮ್ಮೆ ನೋಡಮ್ಮ, ನಿನಗೆ ಪರಿಚಯವಿರದು
ನರರ ನಡೆಯುಡುಗೆಗಳ್‌ ಮೇಣ್‌ ತೊಡುಗೆಗಳ್‌, ತ್ರಿಜಟೆ.
ನೋಡಮ್ಮ: ನವಿಲೊ? ಮೇಣ್‌ ದಿವ್ಯಾಂಬರವನುಟ್ಟ
ನೀಲಾಂಬರೋಪಮ ಸುನೀಲವಪು ಮಾನವನೊ?”
ಸುಯ್ದು, ಕಣ್ತೊಯ್ದು, ಮತ್ತೊಮ್ಮೆ ತನ್ನಂ ಕೇಳ್ದ
ದೇವಿಯ ಮನಸ್ ತೃಪ್ತಿಗಾ ರಾಕ್ಷಸೋತ್ತಮ ತ್ರಿಜಟೆ      ೭೦
ಮರಳ್ಚಿದಳ್‌ ಕಣ್ಣನಾ ಕಡೆಗೆ, ಮರಳಿಸದಿರಲ್‌
ಮತ್ತಮಾ ಕಣ್ಣನಿತ್ತಣ್ಗೆ. ಕಾತರೆ ಸೀತೆ ತಾಂ
ಕುದಿಕುದಿದು, ಕೂಗಲಾರದೆ ಕೂಗಿದಳ್‌:
“ತ್ರಿಜಟೆ!
ತ್ರಿಜಟೆ! ಪೇಳ್‌! ಕಂಡೆಯೇನನ್‌? ಕಂಡುದಾರನ್‌?”
ಬೆರಗುವಟ್ಟತ್ತಣ್ಗೆ ನಟ್ಟಾಲಿಗಳನಿತ್ತಣ್ಗೆ
ಹೊರಳಿಸದೆ, ಏದುವೆರ್ದೆಯಿಂ ತೊದಲಿದಳ್‌ ತ್ರಿಜಟೆ:
“ಬರುತಲಿರ್ಪಂ ಮಹಾ ದಾನವೇಂದ್ರಂ, ದೇವಿ!”
ಬೆಬ್ಬಳಿಸಿದಳ್‌ ಸೀತೆ ಬೆಳ್ಪಮರ್ದರೋಲ್‌;
“ಅಯ್ಯೊ!
ಮತ್ತೆ ಆ ರಾವಣನೆ? ಸತ್ತನೆಂದೇಕೆನಗೆ ನೀಂ
ಬರಿದೆ ಪುಸಿಯಾಡಿದೌ,  ತ್ರಿಜಟೆ?”
“ರಾವಣನಲ್ತು.                 ೮೦
ಆ ದನುಜನನುಜೋತ್ತಮಂ!”
ಸುಯ್ದು, ಹರ್ಷದಿಂ,
ದುಗುಡದಿಂದೊಯ್ಕನೆಯೆ ಸುಖಕೆ ಧುಮುಕಿದ ಭಾವ
ಜಲಪಾತಘಾತಕೆನೆ ಚೇತನಂ ತತ್ತರಿಸೆ,
ಸೋಲ್ತಳೋಲಾಯಸದೊಳುಸುರಿದಳವನಿಜಾತೆ:
“ಏನೆಂದೆ, ಕೆಳದಿ? ಅನಲೆಯ ತಂದೆ ಬರುತಿಹನೆ?”
“ಬಳಿಯಿರ್ಪಳನಲೆಯುಂ, ದೇವಿ!”
“ದೀರ್ಘಾಯುಗಳ್‌
ತಾಮಿರ್ವರುಂ ದಿಟಂ! ಮತ್ತಾರುಮಿರರೆ ಪೇಳ್‌
ಅವರೊಡನೆ?”
“ಇರ್ಪನೊರ್ವಂ! ನಾನರಿಯದವಂ!
ತೇಜೋನ್ವಿತಂ! ಕಾಣೆನಿನ್ನೆವರಮನ್ನನಂ!”
“ರಾಕ್ಷಸನೆ?”
“ನಮ್ಮವರ ಪಾಂಗಲ್ತು, ಅವನುಡುಗೆ.”        ೯೦
“ನೀಲದೇಹಿಯೆ?”
“ನೀಲಿಯಲ್ತು, ಹೊನ್ನಿನ ಹೊಳಹು!”
“ಬಣ್ಣಿಸೆನಗಾತನಂ. ಪುಣ್ಯನೇತ್ರೆಯ ದಿಟಂ
ನೀಂ ತ್ರಿಜಟೆ! ನನ್ನ ಮೈದುನನ ಮೆಯ್ವಣ್ಣಮುಂ
ಕಾಂಚನಾಭಂ ಕುಸುಮ ಸುಂದರಂ.”
“ವನಲತಾ
ಶೋಭಿತ ಶಿರತ್ರದಿಂ ರಂಜಪನ್‌, ಪುಲಿದೊವಲ
ಪೊನ್ನವಿರ್ ಕಯ್ಗಯ್ದ ಕಪಿಚರ್ಮ ಕವಚಮಂ
ತೊಟ್ಟಿಹನ್‌, ಕೊಂಕುಮೂಗಿನ ಬಿಂಕದಾನನಂ
ವಜ್ರತನು..”
“ತ್ರಿಜಟೆ, ಬರ್ಪವನಾರೊ ವಾನರಂ!
ಪಿಂತೆ ಬಂದಾಂಜನೇಯನೆ ಇಂತು ತನ್ನೊಂದು
ನಿಜರೂಪದಿಂ ಬಂದಪನೊ? ತೋರ್ದನಂದೆನಗೆ       ೧೦೦
ಧ್ವಜರೂಪದಿಂ.  ಸ್ವಾಮಿ ಕಳುಹೆ ತಂದಪನೆನಗೆ
ಸಂದೇಶಮಂ. ಧನ್ಯೆ ನಾನಿನ್‌, ಸಖೀ!”
“ತಾಯಿ,
ಬಂದಳಿದೊ ಅನಲೆ, ತಂದೆಯನಲ್ಲಿ ದೂರದೊಳೆ
ನಿಲ್ಲಿಸಿ!”
ದುಃಖವನೆಲ್ಲ ಮರೆತಣುಗಿ, ಸುಖವುಕ್ಕಿ,
ಬಾಷ್ಟಲೋಚನೆ, ಓಡಿ ಬಿಗಿದಪ್ಪಿ ಸೀತೆಯಂ
ತೊದಲಿದಳ್‌, ತ್ರಿಜಟೆ ಪುಲಕಿಸಿ ಮೆಯ್ಮರೆಯುವಂತೆ:
“ಶ್ರೀರಾಮ ಸಂದೇಶಮಂ ಪೊತ್ತಾಂಜನೇಯನಂ
ನಿನ್ನ ಸನ್ನಿಧಿಗೆ ಕರೆತಂದು ನನ್ನಯ್ಯನದೊ
ಅಲ್ಲೆ ನಿಂತಿಹನನಮ್ಮ. ನಿನ್ನ ಸಮಯವನರಿತು
ಬಾ ಎಂದೆನಗೆ ಬೆಸಸಿದನ್‌,”
“ಮಗಳೆ, ಮಂಗಳದ         ೧೧೦
ವಾರ್ತೆಯಂ ತಂದೆ. ಚಿರಸಖಿಯಾಗು. ನೀನೊಲಿದ
ವರನೆ ದೊರೆಯಲಿ ನಿನಗೆ! ನಿನ್ನ ಕೈವಿಡಿದವಂ
ಕೈಬಿಡದೆ ನಡೆಯಲೆಂದುಂ! ಪತಿಯ ವಚನಮಂ
ಕೇಳ್ವಾತುರೆಗೆ ಸತಿಗೆ ನನಗಾವುದಸಮಯಂ?
ಪೋಗು ನಡೆ; ಬೇಗದಿಂ ಕರೆದು ತಾರಮ್ಮಯ್ಯ
ವಂದನೀಯರನಿರ್ವರಂ!”
ಪೂಜ್ಯೆಯೊರೆದುದಂ
ಪೇಳಿದು ವಿಭೀಷಣ ಕುಮಾರಿ ಕರೆತರಲವರ್
ನಡೆತಂದರೆಲೆವನೆಗೆ, ಗುಡಿವುಗುವ ಭಕ್ತರೋಲ್‌
ಬಾಗಿಲೆಡೆ ಬಾಗಿ, ಗೌರವಭಾರಕೆಂಬಂತೆ,
ಕೈಮುಗಿದರಿರ್ವರುಂ. ಕೈಮುಗಿಯುವಂಬಿಕೆಯ           ೧೨೦
ತಡೆವಂತೆ ನುಡಿದರೀ ನಂಬಿಕೆಯ ನೈವೇದ್ಯಮಂ;
“ಹರಸೆಮ್ಮನಮ್ಮ! ರಾಮನ ನುಡಿಯ ತಂದೆವು
ನಿವೇದಿಸಲ್‌ ನಿನ್ನಡಿಯ ಗುಡಿಗೆ!”
“ಬಾಯ್‌ ತಪ್ಪಿದಿರಿ,
ಮಾನ್ಯರಿರ! ಮುಡಿಗಿಡಲ್‌ ಪಡೆದುದಂ ಕೊಡಿಮೆನಗೆ!”
ನುಡಿಜಾಣನಾಂಜನೇಯಂ ವಿಭೀಷಣಂಗೊರೆವ
ಮಾಳ್ಕೆಯಿಂ; “ನಮಗೆರಡುಮೊಂದಲ್ತೆ, ದನುಜೇಂದ್ರ?
ಕ್ಷಮಿಸುವಳ್‌ ತಾಯ್‌ ಕ್ಷಮಾಪುತ್ರಿ!” ಎನುತ್ತೆನುತೆ
ವಿನಯದಿಂದೊರೆದನಾ ರಘುಜ ಸಂದೇಶಮಂ
ಕಿವಿಗೊಟ್ಟ ರಾಘವನ ಸತಿಗೆ:
“ಕಪಿರೂಪದಿಂ    ೧೩೦
ಪಿಂತೆ ನಿಮ್ಮಡಿ ಕಂಡೆನಂ, ರಾಮದೂತನೆಂ;
ವಾಯುದೇವಂಗಂಜನಾದೇವಿಯರ್ಗಣುಗನೆಂ,
ಕೇಳ್‌ ತಾಯಿ, ವೈದೇಹಿ. ನಿನ್ನ ತಪದಿಂದೆಮ್ಮ
ಸೈಪಿಂದೆ, ಮತ್ತೆ ವಿರಹಜ ತಪೋಪ್ರಕಟಿತಂ
ತನ್ನಾತ್ಮ ನಿಜ ಸಹಜ ಭಗವದ್‌ ವಿಭೂತಿಯಿಂ
ಶ್ರೀರಾಮನಿಂ ಮುಕ್ತಶತ್ರುವಾಯ್ತೀ ಲಂಕೆ,
ಮಹನೀಯನೀ ವಿಭೀಷಣ ಮೈತ್ರಿಯಿಂ. ಕುಶಲಿ
ಹತಶತ್ರುವಿನಕುಲೇಶ್ವರನಿಂದು ಲಕ್ಷ್ಮಣಂ
ವೆರಸಿ, ಬಿಡು ಭೀತಿಯಂ; ಸ್ವಸ್ಥೆಯಾಗಂಬಿಕೆ;
ಅರಿಂದಮಂ ರಘುನಂದನಂ! ಗತವ್ಯಥೆಯಾಗು;
ರಾವಣಾರಾತಿ ತಾನಿಂದು ರಾವಣಧ್ವಂಸಿ!”     ೧೪೦
ಕೇಳುತಾಲಿಸುತೇಳಲೆಳಸಿದಳ್. ಮಿನುಗಿದುದು
ಏಕವೇಣೀಧರೆಯ ಮಲಿನಾಂಬರೆಯ ಮೊಗದಿ
ನಗೆದಿಂಗಳೆಳೆಯ ಹೊಂಗಾಂತಿ. ಸ್ಮೃತಿಶಿಥಿಲೆಯೋಲ್‌
ಪ್ರತಿಜಲ್ಪಮಿಲ್ಲದೆ ಶಿಲಾಪ್ರತಿಮೆಯಂತಿರ್ದ
ಮಿಥಿಲಾಂಗನೆಗೆ ಹರಿಶ್ರೇಷ್ಠಂ:
“ಇದೇಂ, ದೇವಿ,
ಮಾರ್ನುಡಿಯದೆನಗೆ, ಚಿಂತಿಸುತಿರ್ಪೆ ಮಡುಮುಳುಗಿ?”
ಹರ್ಷಗದ್ಗದೆ ರಾಮಪತ್ನಿ:
“ಪತಿವಿಜಯಮಂ
ಸವಿದುದು ಸುವಾರ್ತೆಯಂ ಶ್ರುತಿ.  ತಡಕುತಿದೆ ಮತಿ
ಸರಸ್ವತಿಯ ಭಂಡಾರಮಂ ಪಡಿನುಡಿಯನರಿಸಿ.
ನುಡಿಯೊಡತಿಗಿಂದಡಸಿದೊಂದು ಕಡು ಬಡತನ ಕೆ       ೧೫೦
ಕಿನಿಸಿ ನಾಂ ನಿರ್ವಾಕ್ಯೆಯಾದೆ! ವಾಕ್ಕೊವಿದಂ
ನೀಂ, ಪ್ಲವಂಗೋತ್ತಮ: ಅವಾಙ್ಮೌನದರ್ಥಮಂ
ಗ್ರಹಿಸಲ್‌ ಸಮರ್ಥನಾ ಕತದಿನವ್ಯರ್ಥಮೀ
ನನ್ನ ವಾಗ್‌ದಾರಿದ್ರ್ಯಮುಂ.”
“ಶ್ರೀಪೂರ್ಣಮಾ
ನಿನ್ನ ರಿಕ್ತತೆ ದಿಟಂ! ವಾಗ್ದೇವಿಯೊಡೆಯಂಗೆ
ತಾನೊಡೆಯನಾದಾತನಿಗೆ ಲಕ್ಷ್ಮಿ ನೀನಲ್ತೆ?
ನಿನಗವಳ ಭಂಡಾರಮುಂ ಬಡತನಮೆ ವಲಂ!
ಧನ್ಯನೆಂ, ದೇವಿ; ಪ್ರತ್ಯಭಿನಂದಿತಂ ನಾಂ
ಅವಾಙ್ಮೌನ ದಿವ್ಯವರದಿಂ! ದೇವರಾಜನೇಂ?
ಧನದೇನಂ? ನನಗುಮಿನ್ನವರ್ ದರಿದ್ರರೆ ದಿಟಂ!          ೧೬೦
ಜಾನಕಿಗೆ ರಾಮವಿಜಯವನುಲಿದ ಕಿಂಕರಗೆ,
ನನಗೆ, ಹೊಯ್‌ಕೈಯಾರ್ ಜಗತ್ರದ ಧನ್ಯರಲಿ?”
“ಕಂಡೆನಿಮದಿದುವರೆಗೆ ಕೇಳ್ದದಂ. ಪವನಸುತ,
ನಿನ್ನತುಲ ಮಹಿಮೆಯಂ. ಬಲದಲ್ಲಿ, ಶೌರ್ಯದಲಿ,
ಸತ್ತ್ವವಿಕ್ರಮಗಳಲಿ, ದಾಕ್ಷ್ಯದೊಳ್ ತೇಜದೊಳ್‌
ಕ್ಷಮೆಯಲ್ಲಿ, ಧೃತಿ ಧೈರ್ಯ ವಿನಯಂಗಳೊಳ್‌, ಕೇಳ್‌
ದಿಟಂ, ನಿನಗೆ ಹೊಯ್‌ಕಯ್ಗಳಿರರಯ್‌ ಜಗತ್ರಯದಿ!”
“ಔದಾರ್ಯ ಸುರಭೂಜನರ್ಧಾಂಗಿಗರ್ಹಮಂ
ಕೃಪೆಗೆಯ್ದೆ ನೀನೀ ಶುಭಾಶೀರ್ವಚನವೇದಮಂ,
ನನ್ನ ಮುನ್ನಡೆಗೆ ಪಾಥೇಯಮಂ, ನೀನಂದು.              ೧೭೦
ಪೂಜ್ಯೆ. ಚೂಡಾಮಣಿಯನಿತ್ತಮದದಿಂದೆನಗೆ
ಇಂದನುಗ್ರಹಿಸು ಪ್ರತಿಸಂದೇಶಮಂ ಪತಿಯ
ಸನ್ನಿಧಿಗೆ.”
“ಪುರುಷೋತ್ತಮಪ್ರಿಯತಮನ ಪುಣ್ಯ
ದರ್ಶನಮೆ ಪರಮ ಪುರುಷಾರ್ಥಕಿಂ ಮಿಗಲೆನಗೆ
ಪ್ರಿಯತಮಂ, ವತ್ಸ! ಬೇರಿನ್ನುಂಟೆ, ಧರ್ಮಜ್ಞ
ನೀಂ ಪವನಸುತ, ಪೇಳ್‌, ಪತಿವ್ರತಾ ಸತಿಗನ್ಯ
ಜೀವಿತಾರ್ಥಂ? ದಯಿತೆಗಿನಿಯನಂ ನೋಳ್ಪಾಸೆ
ಸಂದೇಶಮಪ್ಪೊಡದನುಯ್ವುದೈ. ಅಜ್ಞತೆಗಳುಕೆ
ನಿನ್ನವೊಲ್‌ ವಿಜ್ಞನಿರೆ ಸಂದೇಶವಾಹಕಂ?”
“ವಿಜ್ಞಾಪಿಸುವೆನಾಜ್ಞೆಯಂ ಮೈಥಿಲೀಪ್ರಿಯಗೆ   ೧೮೦
ರಾಮಾಭಿರಾಮೆಯಭಿಲಾಷೆಯಂ! ದನುಜೇಂದ್ರ”,
ಮೇಘಸಂಕಾಶಂ ಮಹದ್ರೂಪದಿಂ ಬಳಿಯೆ
ನಿಂದು, ಸೀತಾಂಜನೇಯರ ಜಗನ್ಮೋಹಕರ
ಸಂವಾದ ಕಾವ್ಯರಸತೀರ್ಥದೊಳ್‌ ಮುಳುಗಿರ್ದ
ರಾಕ್ಷಸೋತ್ತಮಗೆಂದನಾ ಪ್ಲವಂಗೋತ್ತಮಂ:
“ನೀಂ ಪ್ರಭುವಿನಾಜ್ಞೆಯಂತೀ ಲೋಕಮಾನ್ಯೆಗೆ
ಶಿರಸ್ನಾನಮಂ ಗೆಯ್ಸಿ, ಶೀಘ್ರದಿಂ ಕರೆದು ತಾ,
ದಿವ್ಯಾಮಗರಾಗದಿಂದವತಂಸಯೋಗದಿಂ
ಭೋಗೀಂದ್ರಶಾಯಿಯರ್ಧಾಂಗಿಗೊಪ್ಪುವ ತೆರದಿ
ಸಿಂಗರಿಸಿ ಸುಮಗಂಧದಿಂ.” ಮತ್ತೆ ಮೈಥಿಲಿಗೆ             ೧೯೦
ಪಣೆಮಣಿದು ಕೈಮುಗಿದು ಬೀಳ್ಕೊಟ್ಟನಂಜನಾ
ನಂದನಂ ಪ್ರತಿವಂದನಂಗೆಯ್ದಳಂ, ಪೂಜ್ಯೆ
ರಘುನಂದನಾನಂದೆಯಂ.
ಬಳಿಯೆ ನಿಂದನಿತುಮಂ
ಬಂಡುಣುವವೋಲೀಂಟುತಿರ್ದ ಮಗಳಂ ಕುರಿತು
ಸೀತೆಯಾಲಿಸುವಂತೆ ರಾಕ್ಷಸೇಂದ್ರಂ: “ಅನಲೆ,
ಬೆರಗುಬಡಿದಿಂತೇಕೆ ನಿಂತಿರುವೆ? ತಡೆಯದೆಯೆ
ಯಾನವೇರಿಸು ನಮ್ಮ ಭಾಗ್ಯದೀ ದೇವಿಯಂ.
ತ್ರಿಜಟೆಯ ಸಹಾಯದಿಂ, ನಿನ್ನ ತಾಯೊಡೆಗೂಡಿ,
ಪರಿಮಳ ದ್ರವ್ಯಮಯ ನವ್ಯ ತೈಲಂಗಳಂ
ಪೂಸಿ, ಮೀಯಿಸು ಸುಖೋಷ್ಣೋದಕ ಧಾರೆಯಿಂ,       ೨೦೦
ಪೊಂಗಿಂಡಿಗಳೊಳೆರೆದು ಪೊಯ್‌ನೀರ್ಗಳಂ. ಮತ್ತೆ,
ಜನಕರಾಜನ ಮಗಳಿಗೀ ದಶರಥನ ಸೊಸೆಗೆ,
ರಾಮಪತ್ನಿಗೆ, ಪಳಿಲಜ್ಜೆಯಂ ತೊರೆದು ಬಿಂಕದಿಂ
ಕನಕ ಲಂಕಾಲಕ್ಷ್ಮೀ ತಲೆಯೆತ್ತಿ ನಿಲ್ವಂತೆವೋಲ್‌,
ತೊಡಿಸುಡಿಸು ಮುಡಿಸು ದಿವ್ಯಾಂಬರಾಭರಣಮಂ
ಪುಣ್ಯಪ್ರಸೂನಂಗಳಂ. ಮಿಥಿಲೆಯಿಂದಂದು
ಕೋಸಲಕೆ ದಿಬ್ಬಣಂಬೋದವೋಲಿಂದೆಮ್ಮ
ಲಂಕೆಯಿಂದೇಕೆ, ನವವಧುವೆನಲ್‌, ಪ್ರಭುವೆಡೆಗೆ
ಬೇಗದಿಂ ಪೋಗವೇಳ್ಕುಂ!”
ಕೇಳ್ದದಂ ವೈದೇಹಿ
ಸನ್ನೆಗರೆದನಲೆಗಾಡಿದಳವಳ್‌ ತನ್ನಯ್ಯನಂ   ೨೧೦
ಕುರಿತು: “ಅಸ್ನಾತೆಯಾಗಿಯೆ ಪೂಜ್ಯೆ ತೆರಳಲ್ಕೆ
ಬಯಸುವಳ್‌, ತಂದೆ, ಪತಿಪಾದದರ್ಶನಕೆ.”
“ಆ
ಪ್ರಭುವಾಜ್ಞೆ, ದೇವಿ; ನನ್ನಿಚ್ಛೆಯೆಂದರಿಯದಿರ್/”
ಎಂದು ತನಗೆಯೆ ಪೇಳ್ದ ದನುಜೇಂದ್ರಗಾ ಸಾಧ್ವಿ
“ಮನ್ನಿಸು, ಮಹಾಪ್ರಜ್ಞ,  ಭರ್ತೃವಾಜ್ಞೆಯೆ ಸತಿಗೆ
ಪಥ್ಯಮಯ್‌. ನಿನ್ನಾಡಿತಕೆ ಇದಿರ್ ನುಡಿಯೆನಿನ್‌.
ತಂದೆ ನೀನೆಲನಗಿಲ್ಲಿ. ನೀನೆಂದವೋಲಕ್ಕೆ.
ತಂದೆ!” ಎನುತ್ತನಲೆಯಂ ಪಿಡಿದೆದ್ದಳೊಯ್ಯನೆಯೆ,
ದಂಡಿಗೆಗೆ ನಡೆಯ. ದುಃಖಮ್ಲಾನಸುಖಮಾಯ್ತು
ತನಗೊದಗುವಾ ಶೂನ್ಯಮಂ ಸ್ಮರಿಸಿದೆಲೆವನೆಗೆ!                     ೨೨೦
ಇತ್ತಲನಿಲಾತ್ಮಜಂ ಜವದಿಂದಯೋನಿಜೆಯ
ಹೃದ್‌ಭಾರಮಂ ಪೊತ್ತು ತಂದಾ ರಘೂತ್ತಮನ
ಪದಕಿಳುಹಿದನ್‌. ಕೇಳ್ದು, ಬೆಚ್ಚನ ಎಯ ನಿಡುಸುಯ್ದು,
ತೆಕ್ಕನೆಯೆ ಧ್ಯಾನಸ್ಥನಾದನ್‌. ಅಂಬುಜ ಚಾರು
ಲೋಚನಗಳಿನಿತೆ ತೊಯ್ದುವು. ಪಣೆಗೆ ಸುರ್ಕ್ಕೆಳ್ದು
ಗಂಟಕ್ಕಿದುವು ಪುರ್ಬ್ಬು. ಕರ್ಚ್ಚಿದತ್ತಧರಮಂ
ನಿಷ್ಠುರೋಷ್ಠಂ. ಅನಿರ್ವಚನೀಯ ಸಂಕಟಂ
ಲಿಪಿಕೆತ್ತಿದುದು ಮುಖಮುದ್ರೆಯೊಳ್‌ ದೃಢನಿಶ್ಚಯದ
ವಿನ್ಯಾಸಮಂ. ಕರೆದು ಕಪಿರಾಜನಂ: “ಪ್ಲವಗೇಂಧ್ರ,
ಮಿಥಿಳೇಂದ್ರ ತನುಜೆಯಾಗಮಿಸುವಳ್‌.  ರಾಜ್ಞೀ                                  ೨೩೦
ತಪಸ್ವಿನಿಗೆ ತಗುವ ಮರ್ಯಾದೆಯಿಂದವಳನಾಂ
ಸ್ವೀಕರಿಸವೇಳ್ಕುಂ. ಕಪಿಧ್ವಜಿನಿಗಾ ಶುಭದ
ವಾರ್ತೆಯಂ ಸಾರ್. ತನಗೆ ಬಾಳ್‌ಬೇಳ್ದ ಮಹಿಮರಂ
ನೋಡಿ ಸುಖಿಸುವಳಾ ಕೃತಜ್ಞೆ!”
“ಪುಣ್ಯರೆ ವಲಂ
ವಾನರರ್! ರಘುಕುಲೇಶ್ವರಿಯ ಸಂದರ್ಶನಕೆ
ಕಾತರಿಸುತಿಹರಲ್ತೆ! ದೇವಿಯ ಕೃತಜ್ಞತೆಯೆ ?
ದೇವ, ಆ ನೆಪದಿ ನೀನೆಮಗನುಗ್ರಹಿಪೊಂದು
ಕೃಪೆಯಲ್ತೆ ಈ ಆಜ್ಞೆ? ಡಂಗುರಂಬೊಯ್ಸುವೆನ್‌
ಶಿಬಿರ ಶಿಬಿರದೊಳೀಗಳೆಯೆ ಈ ಸುವಾರ್ತೆಯಂ.
ಕಪಿಕುಲ ಕಲಾಭಿರುಚಿ ಧನ್ಯಮಪ್ಪಂದದಿಂ     ೨೪೦
ಪೂ ತಳಿರ್ ತೋರಣದಿ ಕೈಗೆಯ್ವೆನೀ ವನ್ಯ
ರಂಗಮಂ, ಮಧುವುದಯಮಿದೆ ತಾನೆ ಸಮೆದೊಂದು
ಮದುವೆಗಣಿಗೆಯ್ದ ಮಧುಮಂಟಪಂಬೋ‌. ದೇವ.
ಆ ಕಾರಣಕೆ ಖಿನನ್ನಪ್ಪನಿತು ನಿನಗೇಕೆ ಪೇಳ್‌
ಚಿಂತೆ? ರಾಜ್ಞಿಗೆ ತಗುವವೋಲ್‌ ಸ್ವಾಗತಿಪುದೆಮ್ಮ
ಕೀರ್ತಿಭಾರಂ!”
ತನ್ನ ಅಂತರ್ಮುಖತೆಗಂತು
ತಾತ್ಪರ್ಯಮಂ ಗೆತ್ತು, ಸಂತೈಕೆಯಂ ಮತ್ತೆ
ಧೈರ್ಯಮಂ ಪೇಳ್ದತ್ತಲಾ ಪೋಗುತಿರ್ದಾತನಂ
ನೋಡಿ ಸುಗ್ರೀವನಂ, ನಗೆಯ ಸುಳಿಯೊಂದಿರದೆ
ಸುಳಿಸುಳಿದಡಗಿದುದು ಸಮುದ್ರದೊಳ್‌ ದಶಮುಖ       ೨೫೦
ಧ್ವಂಸಿ ರಾಮನ ಮುಖದ ಗಾಂಭೀರ್ಯದಾ.
ಡಂಗುರಕೆ.
ರಘುರಾಮ ಭಾರೈ ಬಂದಪಳೆಂಬ ಘೋಷಣಕೆ,
ಸಂಭ್ರಮಿಸಿದರ್ ಪ್ಲೊವಗಲಾಂಛನರ್. ಸಂತೋಷ
ಘೋಷಗಳ್‌ ಭೂವ್ಯೋಮ ಸಂಚಾರಿಗಳ್‌, ಕೂಗಿ
ಕೈವಾರಿಗಳವೋಲ್‌, ಅಲೋಕ ಸತ್ತ್ವಂಗಳಂ
ರಾಮ ಸೀತಾ ಮುಹರ್ ಮಿಲನ ಸಂದರ್ಶನಕೆ
ಕರೆದುವೆಳ್ಚರಿಸಿ. ಹೆಬ್ಬಳ್ಳಿಗಳನೆಳೆದೆಳೆದು,
ಮರಮರಕೆ ಹರೆಯಿಂದ ಹರೆಗೆ ತೋರಣವೆಸೆದು,
ವಾಸಂತ ಕಾಂತಾರ ಸಂತೋಷ ಮೂರ್ತಿಗಳೆನಲ್‌
ಮುಡಿರ್ದ ಬಣ್ಣವಣ್ಣದ ಪೂ ತಳಿರ್ದೊಂಗಲಂ   ೨೬೦
ನಿಬಿಡಮೆನೆ ಚಿತ್ರಚಿತ್ರಂ ನೇಲ್ದು, ರಚಿಸಿದರ್
ಗಿರಿಭುಜಪ್ರತ್ಯಂತದೊಳ್‌ ವಿರಾಣ್‌ ಮಂಡಪ
ವಿತಾನಾಶ್ರಯದಿ ಮಹದ್‌ ವೇದಿಯಂ, ದಶರಥನ
ಸೊಸೆಗೆ ಸುಸ್ವಾಗತಂ ಬಯಸಲ್ಕೆ. ಆ ಪಸುರ್
ಚಪ್ಪರದ ಮಾಂದಳಿರನಾಸ್ವಾದಿಸಲ್‌ ನೆರೆದ
ಕೋಗಿಲೆಗಳಿಂಚರಂ, ಜೋಲ್ದ ಪಣ್ಗಳನುಣಲ್‌
ಹಿಂಡು ಹಿಂಡೈತಂದ ಗಿಳಿಗಳುಲಿಹಂ, ಎಳಲ್ದ
ಕಂಪಿನ ಮಲರ್ಗೊಂಚಲುಗಳೆರ್ದೆಯ ಸಾರಮಂ
ಪೀರ್ವ ಜಾತ್ರೆಯ ತೇರ್ಗೆ ತಿಂತಿಣಿಯೊಳೆಯ್ತಂದ         ೨೭೦
ಮಧುಪ ಕೋಟಿಯ ಕೊರಳ ಝೇಂಕಾರಕಮೊರ್ ಚಣಂ
ರಾಮನ  ಮನಕೆ ತಂದುದೀ ಲಂಕೆಯೊಳುಮಾ
ಸ್ವಯಂವರ ಸಮಯ ಮಿಥಿಳೆಯಂ! ಕಪಿಧ್ವಜರಿಂತು
ಮಧುಮಂಟಪೋಪಮಂ ವನದೊಳುದ್ಯಾನಮಂ
ರಚಿಸಿ, ತಂತಮ್ಮ ಕುಲಗೌರವಕೆ ಬಲಕೆ ಮೇಣ್‌
ಸ್ಥಾನಕ್ಕೆ ಮಾನಕ್ಕೆ ಕೀರ್ತಿಗೊಪ್ಪುವ ತೆರದಿ
ವಸ್ತ್ರಭೂಷಣಗಳಿಂ, ಯೋಧಲಾಂಛನಗಳಿಂ,
ರಣಯಶೋವಿಭವಮಂ ಮೆರೆವವೊಲ್‌ ತಳತಳಿಪ
ದಳದಳ ಪತಾಕೆಗಳಿನಿರದೆ ಸಿಂಗರಗೊಂಡು,
ಕಾಂತಿಮಯ ಪಂಕ್ತಿಪಂಕ್ತಿಯ ಫಣಿನ್ಯಾಸದೊಳ್‌
ನಿಂದು ನಿರುಕಿಸಿರೆ,-
ಬಂದುದು ಕಿವಿಗೆ ಸುಸ್ವನಂ,                        ೨೮೦
ಲಂಕಾ ಲತಾಂಗಿಯರ ಗೇಯದಿಂಚರದೊಡನೆ,
ಮಧುರ ನಾನಾ ರಾಗ ಸಂಮಿಲಿತ ಸುಖರಸದ
ನಾಗಸ್ವರಂ. ಕಣ್ಣರಳ್ದುದು; ಕೊರಲ್‌ ನಿಮಿರ‍್ದುದು;
ವಕ್ಷಮುಚ್ಛ್ಸಾಸ ವಿಸ್ಛಾರಿತಂ ತಾನಾಯ್ತು ಕೇಳ್‌
ಸಕಲರಿಗೆ, ಅನೂರುಸೂತಾನ್ವಯೋತ್ತಮ ವಿನಾ!
ನೋಡುತಿರೆ, ಶಶಿಯಂತೆ ಮೂಡಿದುದು ಕಣ್ಬೊಲಕೆ
ನವರತ್ನಮಯ ಕನಕ ಸೂತ್ರಾಂಬರಾವೃತಂ
ಶಶಿರುಚಿರ ದಿವ್ಯದ್ಯುತಿಯ ಶಿಬಿಕೆ. ಪೊಸಮಲರ್
ಮಾಲೆಗಳನಾಂತು ಪೊಂಗಳಸವಿಡಿದಂಗನಾ
ಮಣಿಯರೆಸೆದರು ಬಳಸಿ ಪಲ್ಲಕ್ಕಿಯಂ. ಬಿಚ್ಚು  ೨೯೦
ಕತ್ತಿಗಳನೆತ್ತಿ ರಾಕ್ಷಸಭಟರ್ ಸುತ್ತಣಿಂ
ಕಾಪಿರ್ದರದಕೆ. ರಾಮಂಗರ್ಪಿಸಲ್‌ ಕಾಣ್ಕೆಯಂ
ಪೊತ್ತಿರ್ದ ನಾಗರಿಕರೊಡನಾ ವಿಭೀಷಣಂ
ಕಾಣಿಸಿದನಾ ಸರ್ಪಂಬರ್ಪ ಮೆರವಣಿಗೆಯ
ಫಣಾಮಣಿಯವೋಲ್‌.
ರಾಮಭ್ರುಕುಟಿ ಸಂಜ್ಞೆಯಿಂ
ಸಂಕ್ಷುಬ್ಧ ವಾನರೋಲ್ಲಾಸ ಸಾಗರಮೊಡಂ
ಸ್ತಬ್ಧಮಾದತ್ತು! ಮಧುಕರ ಪಕ್ಷಿಗಳ ರವಂ
ಹೆದರಿ ಹದುಗಿತು ಹೃದಯಕೋಟರದಿ! ಬಂದತಿಥಿ
ಮಧುನೃಪಗೆ ಬಾಡಿತು ಮೊಗಂ! ಸೊರಗಿದುವು ತಳಿರ್;
ಜೋಲ್ದುವು ಮಲರ್; ಸೆಡೆತನು ವಸಂತಮಾರುತಂ;    ೩೦೦
ಚೀರಿದುದೊ ನಿಃಶಬ್ದಮಂಬರಾವನಿ, ಭಯಕೆ
ಕೊರಳಾಗಿ! ರಾಮನ ಮುಖದ ರೌದ್ರಮುದ್ರೆಯಂ
ಕಂಡು ಬೆರಗಿನೊಳಳ್ದುದಿರ್ ತಂಡ೧
ತಾನೇನೊ?
ಮೇಣಿವನವನೊ? ರಾಮಕೋಪಕಾರ್ ಕಾರಣರೊ?
ಎಂದು ಕಪಿ ರಾಕ್ಷಸರ್, ಮುಖ್ಯರುಮಮುಖ್ಯರುಂ,
ತಮತಮಗೆ ಶಂಕೆಯಿಂ ಕಳವಳಿಸಿ ಕುದಿದಿರೆ,
ವಿಭೀಷಣಂ ಧ್ಯಾನಸ್ತಿಮಿತ ರಘುಕುಲೋದ್ವಹನ
ಬಳಿಗೆಯ್ದಿ ಕೈಮುಗಿದು ಬಿನ್ನಯ್ಸಿದನ್‌: “ದೇವಿ
ಸೀತೆಯಂ ಕರೆತಂದೆನಿದೊ ಶಿರಃಸ್ನಾತೆಯಂ೧”
ಕೇಳ್ದೊಡನೆ ಹರ್ಷವರ್ಣದಿ ಮಿಂದ ಮಾಳ್ಕೆಯಿಂ,          ೩೧೦
ದೈನ್ಯ ಧೂಳಿಯೊಳುರುಳಿದಂದದಿಂ, ರೋಷಾಗ್ನಿಯಂ
ಪೊಕ್ಕಂತೆವೋಲಿರ್ದನಿಕ್ಷ್ವಾಕುಕುಲವರ್ಧನಂ,
ಸ್ಥಾಯಿ ತಾನಾದೊಡಂ ರಸನಿಮಿತ್ತಂ ಪೊರ್ದಿದೊಲ್‌
ಭಾವಸಂಚಾರಿತ್ವಮಂ. ಬಿಮ್ಮನೆಯೆ ನಿಂದು
ತುಸುವೊಳ್ತು, ಮುಂಬಟ್ಟೆಯಂ ತನಗೆ ನಿಟ್ಟೆಯಂ
ನಿಶ್ಚಯ್ಸಿ ನರಲೋಕ ನಿಷ್ಠ ಕರ್ತವ್ಯಮಂ,
ದೈತ್ಯೇಂದ್ರಗೆಂದನು ದಶಗ್ರೀವಸೂದನಂ:
“ಮದ್‌ವಿಜಯ ರತನೇಗಳುಂ ನೀಂ, ಸುಹೃದ್ ವರ;
ಧರ್ಮಾತ್ಮಜೆಯನೊರ್ವಳನೆ ಬಿಜಯಗೆಯಸೆನ್ನೆಡೆಗೆ.
ಮಲೆವೆಗಲ್‌ದವಗದಿಂದಿನಿತೆ ಗೆಂಟರ್ಗಿರ್ದ    ೩೨೦
ಶಿಬಿಕೆಯೆಡೆಗೆಯ್ದಿ, ಕುವರಿಗೆ ರಾಮನಿಚ್ಛೆಯಂ
ನುಡಿಯೆ, ನೋಡಿದಳನಲೆ ತನ್ನಯ್ಯನಾಸ್ಯಮಂ; ಮೇಣ್‌
ನಸುನಗುತೆ ಪರಿಹಾಸ್ಯದಿಂ: “ನಾನುಮಾರ್ಯೆಯಂ
ಕೆಳಗೂಡಿ ಬಂದೊಡೇನಾರ್ಯಂಗೆ ತೊಂದರೆಯೆ?”
ಲಘುವಿನೋದದೊಳೊರೆದ ಮಗಳಿಗಿಂಗಿತದಿಂ
ಗುರುಸ್ಥಿತಿಯನರಿವಂತೆ ಮಾಡೆ, ಸುರ್ಕ್ಕಿದ ಮೊಗದಿ
ತೆರಳಿ ಶಿಬಿಕೆಗೆ ತರಳೆಯೊರೆದಳು ಪತಿವ್ರತೆಗೆ.
ಧರಣಿ ಪುಲಕಿಸಲಿಳಿದಳೊಯ್ಯನೆ ಜನಕಜಾತೆ
ಕನಕಮಯ ಯಾನದಿಂ. ಲಜ್ಜಾಪಟಂ ಬಿಡಿದು
ರಾಜಮಹಿಷಿಗೆ ದೀನದೃಷ್ಟಿ ಬೀಳದ ತೆರದಿ     ೩೩೦
ಕೈಂಕರ್ಯವೆಸಗುತಿರೆ ಕಂಚುಕೀ ಜನರಿತ್ತಲ್‌,
ಅತ್ತಲಾ ದರ್ಶನಾತುರ ಚಿತ್ತ ವಾನರರ್
ಮರೆತರು ಗಣನ್ಯಾಸಮಂ. ನುಗ್ಗಿದರೊ ಮುಂದೆ
ಬಿಡಿಬಿಡಿಯೆ, ಗಡಿಬಿಡಿಯೊಳೊದರೆ ಕೋಲಾಹಲಂ!
ಕಂಚುಕೋಷ್ಣೀಷಮಂ ತೊಟ್ಟ ಜರ್ಜರ ವೇತ್ರ
ಪಾಣಿಗಳ್ಗಾಣತಿಯನಿತ್ತನು ವಿಭೀಷಣಂ,
ಪಿಂತಳ್ಳನಾ ದಳಂಗೆಟ್ಟು ಮುಗ್ಗುತ್ತಿರ್ದ
ಕಪಿಕುಲೋತ್ಪನ್ನರಂ. ಗಾಳಿ ಮಸೆವಂಬುಧಿಯ
ಸದ್ದೆದ್ದುದೈ ಗುದ್ದುಮಳಿ ಗದ್ದಲಂ. ಮುಖಂ
ರೋಷ ಕರ್ಕಶಮಾಯ್ತು ರಾಮಂಗದಂ ನೋಡಿ.          ೩೪೦
ಕರೆದನಿಂತೊರೆದನು ವಿಭೀಷಣಗೆ ಭೀಷಣ
ಧ್ವನಿಯಿ೮ಂದೆ: “ನೋಯಿಸುವೆ ಏಕಿಂತುಟೀ ನನ್ನ
ಜನರಂ? ಸ್ವಜನರಲ್ಲದೆನಗನ್ಯರಲ್ತಿವರ್?
ಮಾಣಿಸಾ ವೇತ್ರಹಸ್ತರ ನಿಷ್ಠುರೋದ್ಯೋಗ
ವೈಫಲ್ಯಮಂ, ನನಗೆ ಹೃಚ್ಛಲ್ಯಸದೃಶಮಂ!
ಲಜ್ಜಾಪಟಂ ಅದೇನಗ್ನಿನಿಕಷಮೆ ಪೇಳ್‌
ಪರೀಕ್ಷಿಸಲ್‌ ಸ್ತ್ರೀಮಾನ ಕನಕ ಸಂಶುದ್ಧಿಯಂ?
ವಿಷಮ ಸಂಕಟನಿಕಟೆಯಾಕೆಯಂ ನಿಟ್ಟಿಸಿದೊಡೇಂ
ತನಗಾಗಿ ಕಾಳೆಗದಿ ಸತ್ತುಳಿದ ಪುತ್ರಸಮರೀ
ವಾನರರ್? ಗ್ರಹಿಸದೆನ್ನಂತಸ್ಥಮಂ ಬರಿದೆ ನೀಂ        ೩೫೦
ನಿಗ್ರಹಿಸಲೇವುದೀ ಮಾನಧನರಂ? ಗೃಹಂ
ಪ್ರಾಕಾರ ವಸ್ತ್ರಾದಿಗಳ್‌ ಮಾನಿನಿಯ ಮಾನಮಂ
ರಕ್ಷಿಪ್ಪವೇಂ? ತನ್ನ ಶೀಲ ಶುಭ್ರಾಂಬರಮೆ,
ಬರಿಯರುವೆಮರೆಯಲ್ತು, ಮಾನಯವನಿಕೆಯಲ್ತೆ
ಮಾನಿನಿಗೆ? ಮೇಣ್‌ , ವ್ಯಸನದೊಳ್‌ ಕಷ್ಟದೊಳ್‌ ಮತ್ತೆ
ಸಂಗ್ರಾಮದೊಳ್‌ ಸ್ವಯಂವರ ಸಮಯದೊಳ್‌ ಸ್ತ್ರೀಗೆ
ನಿರ್ದೋಷಮಯ್‌ ದೃಷ್ಟಿ. ಮತ್ತಮಾನಿರಲಿಲ್ಲಿ.
ನನ್ನೆಡೆಗೆ, ನನ್ನಾಜ್ಞೆಯಂತೆ ಬರಲವನಿಜೆಗೆ
ಕಾಣೆನವಮಾನಕಾರಣವನಾಂ, ತಾನಿರಲ್‌
ಸಜ್ಜನ ಸುಹೃಜ್ಜನ ಜಗನ್ಮಾನ್ಯಗೋಷ್ಟಿಯೊಳ್‌!”           ೩೬೦
ಅನ್ಯರಾಗಿರಲನ್ಯ ಸಮಯಮಾಗಿರಲದಂ
ಅಧಿಕಪ್ರಸಂಗಮಂದಿರದಾಡುತಿರ್ದಾ
ವಿಭೀಷಣಂ ತಾಂ ಮಹಾಪುರಷನಸ್ಥಿರತೆಯಂ
ಕಂಡು ಸೋಜಿಗವಡುತೆ, ಸಹಿತಾರ್ಥಮೆಂದರಿತು,
ಮಾರ್ನುಡಿಯದಲ್ಲಿಂ ನಡೆದನಿಂಗಿತಜ್ಞಂ:
ನಮಸ್ಕರಿಸಿ ವಿನಯದಿಂ ಕರೆತಂದನೊಯ್ಯನೆಯೆ
ಮಾನವರ ಮಾನಿನಿಯರಸಮಾನ ಮಾನನಿಧಿ
ವೈದೇಹಿಯಂ ರಾಮಸನ್ನಿಧಿಗೆ. ಕಣ್‌ ತುಂಬಿ
ಮನವಾರೆ, ಹೃತ್‌ಸುಖಂ ಜನ್ಮಸಾರ್ಥಕ್ಯಮಂ
ಬಾಯ್ವಿಟ್ಟು ಸಾರೆ, ಸೆರೆ ಹಿಗ್ಗಿ ಕಣ್‌ ಸೊಗದೊರತೆ         ೩೭೦
ಸೋರೆ, ನುಡಿ ಸೋಲ್ತ ವಾಙ್ಮಯ ಮೂಕಮೌನದಿಂ
ಧನ್ಯಭಾವದಿ ನೋಡಿದುದು ವಾನರಧ್ವಜಿನಿ ಆ
ಸೀತೆಯಂ, ಲೋಕವಿಖ್ಯಾತೆಯಂ, ಮಿಥಿಳೇಂದ್ರ
ಜಾತೆಯಂ, ಧರಣಿಸಂಭೂತೆಯಂ, ಪ್ಲವಗಕುಲ
ಕೀರ್ತಿಕಾರಣ ಜಗನ್ಮಾತೆಯಂ, ರಘುರಾಮ
ಸಂಪ್ರೀತೆಯಂ, ದೈತ್ಯ ಕಂದರ್ಪ ದರ್ಪಹರ
ಹರ ತಪೋನೇತ್ರಾಗ್ನಿ ತೇಜೋಭಿಜಾತೆಯಂ!
ಸಾಲಂಕೃತಂ ಮಹನ್‌ನೌಕೆ ತಾನಂಭೋಧಿ
ವೇಲೆಯಂ ಸಂಶ್ರಯಿಸಿ ಮುಂಬಯಣಕನುವಾಗಿ
ನಿಲ್ವವೊಲ್‌ ಸ್ವಾಮಿ ಸಾನ್ನಿಧ್ಯ ಸಾಗರ ರುಂದ್ರ             ೩೮೦
ಸಮ್ಮುಖದಿ ನಿಂದು, ಸಂಚಲಿತೆಯಾದಳ್‌ ದೇವಿ,
ಪ್ರಿಯಹೃದಯ ಭಾವೋರ್ಮಿಮಾಲಾ ಪ್ರಚೋದಿತಂ
ತಾನೆಂಬವೋಲ್‌.
ಕಡೆಗಣ್ಣುಪೇಕ್ಷೆಯಿಂ ದಾಶರಥಿ
ನೋಡಿದನು ಮಡದಿಯಂ, ಮಿಂದುಟ್ಟು ತೊಟ್ಟಿರ್ದಳಂ.
ಮೂಡಿದುದೊಳಗೆ ತೃಪ್ತಿ; ಮಲಿನೆಯಂ ಕೃಶೆಯಂ
ಪತಿವ್ರತೆಯನೆಂತು ನಿಷ್ಠುರಮಾಡಿ ನೋಯಿಸಿ
ನಿರಾಕರಿಪುದಾತಂಗೆ, ಸಾಧ್ಯಮಾ ದೆಸೆಗಲ್ತೆ
‘ಸೀತೆಯಂ ತಾ, ಶಿರಃಸ್ನಾತೆಯಂ ಸಿಂಗರಿಸಿ!’
ಎಂದು ಬೆಸನಿತ್ತುದು ದಶಗ್ರೀವನವರಜಗೆ?
ತನ್ನೊಳಗೆ ತಾಂ ಪುಗುವೆನೆಂಬಂದದಿಂ ಹದುಗಿ,          ೩೯೦
ಬಳಿಯೆ ನಿಂಧಿರ್ದ ಲಜ್ಜಾಶೀಲೆಯಂ ನುಡಿಸದೆಯೆ
ಬಿನ್ನನಿರ್ದಂಬುಜಸಖಾನ್ವಯನ ಭಂಗಿಯಂ
ಗೆತ್ತಪೇತಾನುರಾಗಕೆ ಭೀತರಾದರು
ಪರಿಸ್ಥಿತಿಗೆ ಹನುಮ ಜಾಂಬವ ಲಕ್ಷ್ಮಣಾದಿಗಳ್‌
ಕುಲಸತಿಯ ಗತಿಗೆ. ಆನತೆ ಅನತನಿದಿರಿನೊಳ್‌
ಕೋಟಿ ಕಣ್ಣುಗಳೊಡ್ಡಿದೊಂದು ಕುದುರಿಗೆ ಕೆಡೆದು
ಸೆಡೆತಳ್‌ ತಿರಸ್ಕೃತಿಗೆ . ವಸ್ತ್ರ ಸಂರುದ್ಧಮುಖಿ
ಮುಂತನರಿಯದೆ, ತಾನೆ, ಪಿಂತೆ ಕರೆದಂದದಿಂ,
ಮೊದಲೆ ತೊದಲಿದಳಾರ್ಯಪುತ್ರ! ಎಂದೊಡನೊಡನೆ
ಕಣ್ಣೀರ್ ಕಡಲ್ವರಿಯಲಳತೊಡಗಿ, ನೋಡಿದಳ್‌         ೪೦೦
ಪತಿದೇವತಾ ಮುಖವನುಕ್ಕುವಾನಂದದಿಂ,
ಮಿಕ್ಕು ಮೀರ್ವನುರಾಗದಿಂ. ವಿಸ್ಮಯಂ ಬಡಿದು
ಮರವಟ್ಟು ನಿಂದಳ್‌ ವಿಮೂಢೆಯೋಲ್‌: ಸೌಮ್ಯನಂ
ಭರ್ತೃವಂ ಕಂಡಳಿಲ್ಲಾ ಸೌಮ್ಯತರ ವದನೆ.
ರಾಜೀವಲೋಚನನ ವದನಾರವಿಂದಮಂ
ಬೈತಿಡುವವೊಲ್‌ ಬೆಳೆದ ಮುಖರೋಮ ರಾಜಿ ತಾಂ
ಪ್ರಕಟಿಸುತ್ತಿರ್ದುದು ದಶಾನನಪ್ರಧ್ವಂಸಿಯಂ!
ಪಾರ್ಶ್ವಸ್ಥಿತೆಯನಂತು ಧಿಕ್ಕರಿಸೆ, ಅಃ! ಇಸ್ಸಿ!
ಏನ್‌ ನಡತೆಯಿದು ರಘುಕುಲೋತ್ತಮಂಗೆಂಬೊಲಾ
ಜನ ಸಂಘ ನೀರವತೆ ತನ್ನನೆ ತಿರಸ್ಕರಿಸಿ       ೪೧೦
ಮೂದಲಿಸೆ, ನಿಶ್ಯಬ್ದತಾ ಭರ್ತ್ಸನೆಗೆ ಪೇಸಿ
ದಾಶರಥಿ ನಿರ್ಭಾವ ಗದ್ಯಧ್ವನಿಯೊಳಿಂತು
ಪೇಳ್ದನಿತಿವೃತ್ತಮಂ: “ರಣದಿ ಜಯಿಸಿದೆನೆನ್ನ
ಶತ್ರುವಂ. ಭದ್ರೆ, ಪಗೆ ಪಳಿಗಳೆರಡಂ ತೀರ್ಚಿ
ಬಳಿಜಸವನೆನ್ನ ಪೌರುಷ ತೇಜಮಂ ಬಿಡದೆ
ಸಾಧಿಸಿರ್ಪೆನ್‌. ಸಫಲಮಾ ಶ್ರಮಂ. ರಾಕ್ಷಸನ
ಚಪಲ ಚಿತ್ತದಿ ಮತ್ತೆ ನಿನ್ನ ದೆಸೆಗಾಗೆನಗೆ
ವಿಧಿ ತಂದ ಕಿಲ್ಪಿಷವನಳಿಸಿದೆನ್‌. ಕಲ್ಯಾಣಿ,
ಕಡಲಂ ನೆಗೆದು ನಿನ್ನ ವಾರ್ತೆಯಂ, ತಂದೀ
ಮರುತ್ಸೂನುವಿಂ, ರುಂದ್ರ ಸೇನಾರ್ಣವಂ ನೆರಪಿ         ೪೨೦
ಸ್ನೇಹಕಾರ್ಯವನೆಸಗಿದೀ ವಾನರೇಂದ್ರನಿಂ,
ನಿರ್ಗುಣಭ್ರಾತೃವಂ ತ್ಯಜಿಸಿ ನನ್ನಾಸೆಯಂ
ತನ್ನಾಸೆ ಏನೊಂದುಮಿಲ್ಲದೆಯೆ ಸಲಿಸಿದ ಈ
ಶುಭಮತಿ ವಿಭೀಷಣೌದಾರ್ಯದಿಂ, ಕ್ಷಾತ್ರದಿಂ,
ನಾನಿಂದು ತೀರ್ಣಪ್ರತಿಜ್ಞನೆಂ, ಇಲ್ಲಿ ನೆರದೀ
ಪ್ಲವಗಪ್ರವೀರರಿಂ, ಮೇಣ್‌ ಬಹುಜನಪ್ರಾಣ
ರಣಯಜ್ಞದಿಂ….“ಬಿಗಿದ ಪಲ್ಗಳಿಂದಿನಿತಿನಿತೆ
ತಡೆತಡೆದು ನುಡಿಕಡುಗಮಂ ಮೋಹಿ ಝಳಪಿಸುತೆ,
ನಿಡಿದಾಗಿ ಸುಯ್ದು; ಹೂ ಮುಡಿದು ಬೆಲೆಯುಡೆಯುಟ್ಟು
ಪರಿಮಳಗಳಂ ಪೂಸಿ, ಸೂಸಿ, ನಿಂದಾಕೆಯಂ             ೪೩೦
ದುರುದರನೆ ನಿಟ್ಟಿಸಿ “ಶಿರಃಸ್ನಾತೆ! ಭೂಜಾತೆ!
ರಾಕ್ಷಸಶ್ರೀಯುತೆ! ಅಲಂಕೃತೆ! ಎನುತ್ತೆನುತೆ,
ವಕ್ರೋಕ್ತಿನಖದಿಂ ನೃಸಿಂಹಾವತಾರಮಂ
ಪುನರಭಿನಯಿಸುವಂತೆ, ಕೋಮಲೆಯ ಹೃದಯಮಂ
ಜಾಳಂದ್ರಗೆಯ್ಯೆ ಖರದೂಷಣ ನಿಷೂದನಂ;
ಮೆಯ್ವಳ್ಳಿ ನಡುಗೆ, ಮೊಗಮಂ ಮುಚ್ಚಿ ಕೆಯ್ಗಳಿಂ,
ಕೇಳ್ದ ಲಂಕಿಗರುರಿಗೆ ಕಿಷ್ಕಿಂಧೆ ಕರಗಿತೆನೆ,
ಬಿಕ್ಕಿಬಿಕ್ಕಳ್ತಳು ಅಶೋಕವನಿಕಾ ಮುಕ್ತೆ,
ಪತಿದೇವ ನಿತ್ಯಾನುರಕ್ತೆ, ಕಾಣುತ್ತದಂ, ಕೇಳ್‌,
ಪುರ್ಬು ಗಂಟಿಕ್ಕಿದುವು ಹರಧನುವ ಮುರಿದಂಗೆ.          ೪೪೦
ವದನ ವಲ್ಮೀಕಮಂ ಬಿರಿದೇಳ್ವ ನಾಲಗೆಯ
ಘಟಸರ್ಪಮೋಕರಿಪ ಗರಳಧಾರೆಗಳೆನಲ್‌
ಕೆರಳಿದುವು ಕೂರಂಬುನುಡಿಗಳೇನೆಂಬೆನಾ
ಮಲಗುಮನೆ ತನಗೆ ಪಾಲ್ಗಡಲಾದೊದಡೇನಹಿಯೆ
ಮಂಚವಾಗಿರೆ ಸಂಗದೋಷದಿಂದೀ ವೀತ
ಸಂಗನಿಂತಾದನೆನುತಂಬರದೊಳಾಡಿಕೊಳೆ
ಗೀರ್ವಾಣ ಗೋಷ್ಠಿ: “ಮಾಣ್‌ ಕಿತವ ನಟನವನಿಲ್ಲಿ,
ಚತುರೆ! ಸಂದುದು ಪೂಣ್ಕೆ ನನಗೆ. ಕುಲತೇಜಮಂ
ಮತ್ತೆನ್ನ ಪುರುಷಕಾರವನುಳಿಸೆ ಜಯಿಸಿದೆನ್‌,
ಕೊಂದೆನ್‌ ದಶಗ್ರೀವನಂ; ನಿನ್ನಂ ಪಡೆಯಲಲ್ತು…..       ೪೫೦
ನೀಂ ಸ್ಫುರದ್ರೂಪಿಣಿಯೆ ದಲ್‌! ದಶಾನನನ್‌ ಅವಶಿ;
ದಶರಥಾತ್ಮಜನಲ್ತು! ತಿಳಿಯುವೊಡೆ ತಿಳಿ, ಸುಜ್ಞೆ,
ಪೇಳ್ದ ವಾಕ್ಯಾರ್ಥಮಂ. ಇಲ್ಲದಿರೆ ತೊಲಗು ನಡೆ,
ಮೂರ್ಖೆ, ನೀನೆಲ್ಲಿಗಾದೊಡಮೆನ್ನ ಕಣ್ಮುಂದೆ
ನಿಲ್ಲದಿರ್. ಕಣ್ಬೇನೆಯಿರ್ಪವನಿದಿರ್ ಸೊಡರ್
ಕುಡಿವಿಡಿಯದಿರ್!”
ಭರ್ತೃವಾಕ್‌ಶಲ್ಯ ರೂಕ್ಷತೆಗೆ
ಬಾಗಿದಳ್‌ ವ್ರೀಡೆಯಿಂ, ಬಡಿಗೆ ಪೊಯ್ದಂತೆವೋಲ್‌
ಬೆನ್ಗೆ, ಕೆಮ್ಮನೆ ನಿಂದು ನಿಶ್ಚಯ್ಸಿದಳ್‌ ತನ್ನ
ಮುಂಬಟ್ಟೆಯಂ. ಸುಯ್ದು, ತಲೆಯೆತ್ತಿದಳ್‌ ಮತ್ತೆಲ
ರಾಜರ್ಷಿ ಜನಕಸುತೆ. ಗದ್ಗದವಿನಿತೆ ಪೊಣ್ಮೆ,   ೪೬೦
ನೇರಮೀಕ್ಷಿಸುತೆ ಪ್ರಿಯ ನಯನಮಂ. ಕೆಯ್ಮುಗಿದು
ಮಪಡಿನುಡಿದಳಿಂತಾ ಮೃಗಾಕ್ಷಿ: “ತರವಲ್ಲದೀ
ಕಿವಿಯಿರಿವ ಸೊಲ್ಗಳಂ ಬರಿದೆ ಏತರ್ಕಾಡಿದೈ,
ಪ್ರಾಕೃತರ್ ಪ್ರಾಕೃತೆಯರಂ ಬಯ್ವ ಪಾಂಗಿಂದೆ, ನೀಂ,
ಇಕ್ಷ್ವಾಕು ರಘುದಿಲೀಪಾದಿ ರಾಜೇಂದ್ರರಂ
ಮಕ್ಕಳೆಂಬುವ ಮಹಾ ರವಿಕುಲದೊಳುತ್ತಮಂ
ತಾನಾಗಿಯುಂ?…ರಾಕ್ಷಸಂ ಮುಟ್ಟಿದನೆ? ನಾನಲ್ತು,
ದೈವಮಪರಾಧಿ. ಮೆಯ್ಯನಲ್ಲದೆ ಮನವನೇಂ
ಮುಟ್ಟಿದನೆ? ಮುಟ್ಟಲಾರದೆ ಸುಟ್ಟು ಸೀದನಯ್,
ನಿನ್ನಲಗಿನೇರ್ಗೆಂತುಟಂತೆ!…ಬಾಲ್ಯದೊಳೆನ್ನ ೪೭೦
ಕೈವಿಡಿದೆ. ಅಂದಿನಿಂದಗಲದೆಯೆ ಒಡವೆರೆದು
ಬಳೆದೆವಿರ್ವರುಮೊಂದೆ ಬಾಳ್ಬೆಸೆದು. ಆ ಬಾಳ್ವೆ
ನನ್ನ ಚಾರಿತ್ರಮಂ, ಭಕ್ತಿಯಂ ಪ್ರೇಮಮಂ
ನಿಷ್ಠೆಯಂ ಶೀಲಮಂ, ನಿನಗಿಂದು ತೋರದಿರೆ
ಕೆಟ್ಟೆನಾನೆಂದೆಂದಿಗುಂ. ವಾದಮೇವುದ ಈ
ಸಂಶಯ ನಿರಾಸಕೆ?” ಎನುತ್ತೆ ನೋಡಿದಳತ್ತ
ದುಮ್ಮಾನದಿಂ ಧ್ಯಾನಪರನಾಗಿ ನಿಂದಿರ್ದ
ಮೈದುನನ ಕಡೆಗೆ: “ಚಿತೆಯಂ ರಚಿಸು, ಸೌಮಿತ್ರಿ!
ಮಿಥ್ಯಾಪವಾದ ಘಾತಕ ಸಿಲ್ಲಿದೆನಗೆ ಬಾಳ್‌
ಮರಗೂಳನೊಂದು ಕೆಂಗೂಳ್‌, ಸಭಾಮಧ್ಯದೊಳ್‌     ೪೮೦
ಪ್ರಭುವಿಂ ತಿರಸ್ಕೃತಳ್‌. ಸದ್ಗತಿಗೆ ಶರಣೆನಗೆ
ಹವ್ಯವಾಹನನಲ್ಲದನ್ಯರಂ ಕಾಣೆ!” ಕಾಣ್‌
ತಿರುಗಿಸಿದನೊಯ್ಯನಣ್ಣನ ಕಡೆಗೆ ಲಕ್ಷ್ಮಣಂ.
ಭ್ರಾತೃಭಂಗಿಯಿನರಿತನಿಂಗಿತವನತಿದುಃಖಿ.
“ಏನುಗ್ರನಗ್ರಜನೊ!” ಎನುತೆ ತನ್ನೊಳಗೆ ತಾನ್‌,
ವಾನರ ಸಹಾಯದಿಂ ಕೃತಿಗೆಯ್ದನೊಂದು
ಬೃಹಚ್ಚಿತೆಯನಾ ಮಂಟಪದ ಮಧ್ಯೆ!
ಸರ್ವರಂ
ಸರ್ವಮಂ ನಿಷ್ಕಾಮದೃಷ್ಟಿಯಿಂ ವೀಕ್ಷಿಸುತೆ
ವಿಗ್ರಹಂಬೋಲುನ್ನತಾನತಂ ನಿಂದಿರ್ದ
ಮನದನ್ನನೆಡೆಗೆಯ್ದಿ, ಬಲಗೊಂಡು, ದಂಡದೊಲ್‌         ೪೯೦
ದಿಂಡುರುಳಿದಳ್‌ ಪದಕೆ ಪಣೆಯೊತ್ತಿ. ತೊಳೆದಳಾ
ಪಾದಂಗಳಂ, ಗೌತಮಸತಿಯ ಶಾಪ ಕಿಲ್ಬಿಷ
ವಿಮೋಚನಾ ಪೂಜ್ಯಂಗಳಂ. ಮೂಡಿದುದು ಶಾಂತಿ
ಚಿಂತನಾತೀತಮತ್ಯನಿರ್ವಚನೀಯಮೆನೆ
ಮನಕೆ. ನಿಸ್ಸಂಗಾಂತರತ್ಮೆ, ರಾಜರ್ಷಿಸುತೆ,
ಸೀತೆ, ಕಂಡವರೆಲ್ಲ ಬೆರಗಾಗೆ ನಸುನಗುತೆ,
ಪತಿದೈವ ಪೂಜೆಯಂಗೆಯ್ದಗ್ನಿಸನ್ನಿಧಿಗೆ
ಚಿತೆಯೆಡೆಗೆ ನಡೆದಳು ಮಹಾಭಾಗ:
“ಓ ಅಗ್ನಿ,
ನೀಂ ಲೋಕಸಾಕ್ಷಿ. ನಡೆನುಡಿಗಳಲಿ ಬಗೆಯಲ್ಲಿ
ರಾಘವೇಂದ್ರನನುಳಿದು ಚರಿಸಿರ್ದೊಡೆನ್ನುಸಿರ್         ೫೦೦
ನನ್ನನಾಹುತಿಗೊಳ್‌. ಆದಿತ್ಯನುಂ ಚಂದ್ರನುಂ
ಸಂಧ್ಯೆಯುಂ ರಾತ್ರಿಯುಂ ಪೃಥಿವಿಯುಂ ಸಾಕ್ಷಿಯಿರೆ,
ಪುರುಷಪುಂಗವನೆನ್ನ ಪತಿಪಾದಪದ್ಮದೊಳ್‌
ನಿಚ್ಚಮುಂ ನೆಲಸಿರ್ಪೆನಾದೊಡಾಂ ಕಾಯ್ದುಕೊಳ್‌,
ಕಾಯ್ದುಕೊಳ್‌, ಕಾಯ್ದುಕೊಳ್‌, ಓ ಅನಿಲಸಖ, ನಿನ್ನ
ಈ ಮಗಳನವಳ ಪತಿಚರಣ ಸೇವಾರ್ಥಮೆನ್ನಂ!”
ಮುಗಿದ ಕೈ ಮುಗಿದಂತೆ, ತಪ್ತ ನವ ಹೇಮಾಭೆ
ಪೊಕ್ಕಳ್‌ ಧಗದ್ಧಗಿಸುವುಜ್ಜ್ವಲ ಚಿತಾಗ್ನಿಯಂ,
ಮಂಗಳಾಜ್ಯಾಹುತಿಯವೋಲ್‌, ಪೂಜ್ಯೆ! ಓಒಓ
ಹೋಯೆಂದು ಹರಿದು ಹಬ್ಬಿದುದಹಾ ರೋದನಂ          ೫೧೦
ರೋದೋತಮಂ!
ನಿಷ್ಠುರಂ ಶಿಲಾಮೂರ್ತಿಯೆನೆ
ನಿಷ್ಪಂದನಾಗಿ ನಿಂದಿನಿತುಮಂ ಸಾಕ್ಷಿಯೊಲ್‌
ನಿಟ್ಟಿಸುತ್ತಿರ್ದ ರಾಮಾನನಂ ತಾನಾಯ್ತು
ದೀಪ್ಯಮಾನಂ, ಚಲಿಸಿದನು ಚಿತೆಗೆ, ನೋಳ್ವರಾ
ವಿಸ್ಮಯಂ ಚಿಂತೆಗೆ ತಿರುಗುವಂತೆ, ಓವೊವೋ
ಎಂಬನಿರರೊಳೆ ತಾಂ ಪ್ರವೇಶಿಸುತ್ತುಜ್ಜ್ವಲಿಪ
ಗೋಪುರೋಪಮದಗ್ನಿ ಮಧ್ಯೆ ಮರೆಯಾದನೈ
ಜಮದಗ್ನಿಜಾತನಂ ಜಯಿಸಿದಾತಂ!
ಪೇಳ್ವೆನೇಂ
ಮುನ್ನಡೆದುದಂ? ಸೇಂದ್ರಿಯಕತೀಂದ್ರಿಯಂ ತನ್ನ
ಪೆರ್ಬಾಗಿಲಂ ತೆರೆದುದೆನೆ ಕೇಳ್ದುದನಿಬರಿಗೆ,   ೫೨೦
ಅಸಂಖ್ಯೇಯ ಗೀರ್ವಾಣ ಕಂಠಸ್ವನಂವೆರಸಿ
ಅಂಬರವೆ ತುಂಬಿಯಾದಶರೀರ ವೀಣಾ
ಸಹಸ್ರತಂತ್ರೀ ನಿಕ್ವಣಂ! ಮೂಗುವಟ್ಟಂತೆ
ಮೌನದಿಂದಾಲಿಸಿತು ಕಪಿ ರಾಕ್ಷಸರ ನೆರವಿ.
ದಿನದಿನದ ಪರಿಚಿತದ ಲೌಕಿಕಸ್ವರಗಳಂ
ಕಣೇಂದ್ರಿಯಂ ತೊರೆದವೋಲೆ ನಯನೇಂದ್ರಿಯಂ
ತಾಂ ಕಂಡುದನ್ನೆಗಂ ಕಾಣದಿರ್ದಚ್ಚರಿಯ
ವರ್ಣಂಗಳಂ: ಮಣ್‌ ತನ್ನ ಜಾಡ್ಯವನುಳಿದು
ಕಾಂತಿಮಯವಾಯ್ತು, ವಿವಿಧಜ್ಯೋತಿಗಳನುಣ್ಮಿ
ಮಿರುಗತೊಡಗಿದುವು ಕಲ್‌. ಮರ್ತ್ಯತೆಯನುಳಿದುವೆನೆ             ೫೩೦
ವರ್ಣಶಿಲ್ಪಿಯ ರುಚಿರ ಸೌಂದರ್ಯಗಳನಾಂತು
ತರುಗಳುಂ ಸೂಸಿದುವು ಚಿನ್ಮಯ ಸುಗಂಧಮಂ.
ಲೌಕಿಕದ ನಿತ್ಯಸಾಧಾರಣತೆಯಂ ತ್ಯಜಿಸಿ,
ತೊಟ್ಟಳು ವಸುಂಧರೆ ಅಲೋಕ ಸಾಮಾನ್ಯಮಂ.
ಸ್ವರ್ಗೀಯ ಕಾಂತಿಕೌಶೇಯಮಂ. ವ್ಯೋಮಮಕಂ
ತೀವಿರ್ದ ಪೊನ್ಮಂಜೊಳೇನೇನೊ ಕಾಂಚನದ
ಕಾಂತಿಗಳ್‌ ಮಿಂಚಿದುವು, ಸಂಚರಿಪ ಚಂಚಲ
ವಿಯಚ್ಚೇತನಾಕಾರಗಳವೋಲ್‌. ಶ್ರೀವಾಣಿಗಳ್‌
ಪಾಡಿದುವು ಮರ್ತ್ಯಮಲ್ಲದ ದಿವ್ಯಭಾಷೆಯೊಳ್‌
ಸ್ತೋತ್ರಂಗಳಂ, ಮಹಚ್ಛಂದೋ ವಿಧಾನದಿಂ;  ೫೪೦
“ಓಂ ನಮೋ ಸಚ್ಚಿದಾನಂದನೆ ನಮೋ ನಮೋ!
ಓಂ ನಮೋ ಸರ್ವಸ್ವತಂತ್ರನೆ ನಮೋ ನಮೋ!
ಆದಿಯಾದಿಯೆ ನಮೋ, ಅಂತ್ಯದಂತ್ಯವೆ ನಮೋ,
ಆದ್ಯಂತಚಾಚೆಗಿರುವಾತನೆ ನಮೋ ನಮಕೋ!
ಅಜ ನಮೋ, ಹರಿ ನಮೋ, ಶಿವ ನಮೋ, ನಮೋ ನಮಃ!
ಕವಿ ನಮೋ, ಋಷಿ ನಮೋ, ಗುರು ನಮೋ, ನಮೋ ನಮಃ!
ನೀನೆ ಚಿದ್ರೂಪಿ ನಮೋ; ನೀನ್‌ ಅಚಿದ್ರೂಪಿ ನಮೋ;
ಚಿದಚಿದಾತೀತ ಪರಬ್ರಹ್ಮವೆ ನಮೋ ನಮಃ!
ಪುರುಷರೂಪಿಯೆ ನಮೋ; ಪ್ರಕೃತಿರೂಪಿಯೆ ನಮೋ;
ಪುರುಷೋತ್ತಮನೆ ನಮೋ, ಪುನರ್ನಮೋ ಮುಹೂರ್ಣಮೋ!     ೫೫೦
ಓಂ ಸ್ವಯಂಪ್ರಭು ನಮೋ! ಓಂ ಋತಪ್ರಭು ನಮೋ!
ಓಂ ನಮೋ ಸರ್ವಲೋಕಸ್ವಾಮಿ ನಮೋ ನಮಃ!
ಹೃದಯಂ ಚತುರ್ಮುಖಂ; ಜಿಹ್ವೆಯ ಸರಸ್ವತೀ;
ಸ್ಥೈರ್ಯಮೀ ವಸುಧಾತಲಂ; ಜಗಮೆ ತಾಂ ಶರೀರಂ;
ನಿನ್ನಿಚ್ಛೆ ವಿಧಿ; ಕೋಪಮಗ್ನಿ; ಲಕ್ಷ್ಮಿಯೆ ಸೀತೆ!
ರಾವಣ ವಧಾರ್ಥಮೀ ನರತನುವನಾಶ್ರಯಿಸಿ
ಬಂದ ಲೀಲಾವತಾರಿಯೆ, ದಶರಥಾತ್ಮಜನೆ,
ಪುರುಷೋತ್ತಮನೆ ನಮೋ! ಪುರುಷಸಿಂಹನೆ, ನಮೋ!
ಪ್ರಭು, ನಮಂಓ! ವಿಭು, ನಮೋ! ಜಗದ್ಗುರು, ನಮೋನಮಃ!
ನಮೋ ನಮೋ, ನಮೋ ನಮೋ, ನಮೋ ನಮೋ ನಮೋ!”     ೫೬೦
ಇಂತತೀಂದ್ರಯವಿಂದ್ರಿಯಕೆ, ರಾಗರಾಗಿಣಿಯರೊಲ್‌
ಭಾವೋತ್ತರೀಯದಿಂದರ್ಥಾಂತರೀಯದಿಂ
ಕಂಗೊಳಿಸಿ, ಕೀರ್ತಿಸಿರೆ ಭಗವದ್‌ವಿಭೂತಿಯಂ
ಭಕ್ತಿರಸ ನಟನಟೀ ಲಾಸ್ಯ ವಿನ್ಯಾಸದಿಂ,
ನವರತ್ನರಾಗಗಳನಾಂತುದು ಚಿತಾಗ್ನಿಯುರಿ!
ವೈಶ್ವಾನರಂ ಬೀಸುವಗ್ನಿ ಚಾಮರದಂತೆವೋಲ್‌
ರಂಜಿಸಿದುವತ್ತಲಿತ್ತಲ್‌ ಬೃಹಚ್‌ಜ್ವಾಲೆಗಳ್‌
ತೊನೆದು, ವೇಷಾಂತರವನಾಂತಾದಿಶೇಷನೆಯೆ
ಓಲೈಸಲೈತಂದವೋಲ್‌! ಹವ್ಯವಾಹನ
ಪವಿತ್ರತನುವಿಂ ಪೊಣ್ಮಿದನು ದಶರಥಾತ್ಮಜಂ                        ೫೭೦
ಜಾನಕೀ ಪಾಣಿಗ್ರಹಣಾ ಕೃಪಾಲು! ಸೀತೆಯಂ
ಪಾವನಾಗ್ನಿಸ್ನಾತೆಯಂ, ಕಿರ್ಚ್ಚಿನುರಿಯಿಂದೆ
ಕಾಯ್ವ ತೆರದಿಂದೆ, ಕರೆತಂದನೊಯ್ಯನೆ ಪೊರಗೆ
ದುರಿತವರಹಿತ ಶಾನ್ತ ಹರಿತಶಾದ್ವಲ ಚಾರು ಆ
ಗಿರಿಯ ವೇದಿಕೆಗೆ. ಶ್ರೀಮದ್‌ ದಿವ್ಯ ದೇಹದಿಂ
ದಿವ್ಯ ಮಾಲ್ಯಾಂಬರಗಳಿಂ ದಿವ್ಯತೇಜದಿಂ
ಶೋಭಿಸುತ್ತಿರ್ದ ಆ ಸೀತಾಸಹಿತ ರಾಮನಂ
ಕಂಡು ಹರ್ಷೋನ್ಮಾದಕದ್ದುದು ಕಪಿಧ್ವಜಿನಿ,
ಫೇ ಫೇ ಜಯಧ್ವನಿಗೈವ ರಾಕ್ಷಸಧ್ವಜಿನಿಯಂ
ಕೂಡಿ, ಪಯೋಧಿಯಪ್ಪುವೊರ್ ಪಾಥೋಧಿಯೋಲ್‌!
……ಓಡಿ             ೫೮೦
ಬಂದನಲೆ ದಿಂಡುಗೆಡೆದಳು ರಾಮಪದತಲದಿ
ಸಂತೋಷಮೂರ್ಛಿತೆಯವೋಲ್‌: “ಮನ್ನಿಸೈ, ಸ್ವಾಮಿ;
ದೇವಿಯಂ ನಿಂದಿಸಿದೆ ನಿನ್ನನೆನಿತೆನಿತೊ ನಾಂ
ಬಯ್ದೆನಯ್‌. ‘ಹದಿಬದೆಯನಗ್ನಿವುಗಿಸುವುದಿರಲಿ,
ತನ್ನಂ ಪರೀಕ್ಷಿಸುವರಾರೊ? ತಾನೇಂ ಪೊರತೊ
ದುರಿತ ದೋಷಕೆ?’ ಎನುತೆ ಶಂಕಿಸಿದೆನಾ ನಿಂದೆ
ಭಸ್ಮವಾಯಿತು, ತಂದೆ, ನೀನೊಡ್ಡಿದೀ ಚಿತೆಯ
ಲೋಕಪಾವಕ ಪವನಸಖನಿಂದೆ: ಪೂಜ್ಯೆಯಂ
ಪಾಲಿಸುವ ನೆವದಿ ನೀನುಂ ಪರೀಕ್ಷಿತನಲಾ!
ಲೋಕತೃಪ್ತಿಗೆ ಲೋಕಮರ್ಯಾದೆಗೊಳಗಾದೆ;            ೫೯೦
ಸರ್ವಲೋಕಪ್ರಭುವೆ, ಲೋಕಗುರು ನೀಂ ದಿಟಂ!”
ಆ ವಿಭೀಷಣ ಕುಮಾರಿಯ ನುಡಿಯೆ ತಮತಮಗೆ
ಹೃದಯದಂತರ್ ಬೋಧೆಯಾಗೆ ಜನಸಾಗರಂ
ಭೋರ್ಗರೆದು,  ತೆರೆತೆರೆಯ ಮೇಲ್ವಾ ಯ್ದು, ರಸಭರದಿ
ಬಂದೆರಗಿದತ್ತು ಸೀತಾರಮರಡಿತಡಿಗೆ:
“ಓಂ ನಮೋ ಸಚ್ಚಿದಾನಂದನೆ ನಮೋ ನಮಃ!
ಓಂ ನಮೋ ಸರ್ವಸ್ವತಂತ್ರನೆ ನಮೋ ನಮಃ!
ಪುಟ್ಟಿತ್ತಯೋಧ್ಯೆಯೊಳ್‌,ಪಣ್ತುದೀ ಲಂಕೆಯೊಳ್‌,
ಶ್ರೀರಾಮ ಲೀಲಾವತಾರ ತರು, ನಮೋ ನಮಃ!
ರಾವಣ ವಧಾರ್ಥಂ ಮನುಷ್ಯತನುವಾಶ್ರಯಿಸಿ                   ೬೦೦
ಬಂದ ಲೀಲಾವತಾರಿಯೆ , ನಮೋ, ನಮೋ ನಮಃ!
ಆದಿಯಾದಿಯೆ ನಮೋ, ಅಂತ್ಯದಂತ್ಯವೆ ನಮೋ,
ಆದ್ಯಂತದಾಚೆಗಿರುವಾತನೆ ನಮೋ ನಮಃ!
ಪುರುಷೋತ್ತಮನೆ ನಮೋ, ಪುರುಷಸಿಂಹನೆ ನಮೋ;
ಕವಿ ನಮೋ, ಖುಷಿ ನಮೋ, ಪ್ರಭು ನಮೋ, ವಿಭು ನಮೋ;
ಗುರು ನಮೋ, ಅಜ ನಮೋ, ಹರಿ ನಮೋ, ಶಿವ ನಮೋ;
ಓಂ ನಮೋ, ಹ್ರೀಂ ನಮೋ;ಪ ಮುಹುರ್ನಮೋ, ಪುನರ್ನಮೋ;
ನಮೋ ನಮೋ ನಮೋ ನಮೋ ನಮೋ ನಮೋ ನಮೋ!”

ಕಾಮೆಂಟ್‌ಗಳಿಲ್ಲ: