ಶ್ರೀ ಸಂಪುಟಂ: ಸಂಚಿಕೆ 12 - ತಪಸ್ಸಿದ್ಧಿ

ಶ್ರೀ ಸಂಪುಟಂ: ಸಂಚಿಕೆ 12 - ತಪಸ್ಸಿದ್ಧಿ
ಈರೈದು ಮೇಲ್ಮೂರು ಸಂವತ್ಸರಗಳುರುಳಿ
ತುದಿಗೆಯ್ದಿವಂದುದು ಚತುರ್ದಶಂ. ವಿರಹದಿಂ
ಸೊರಗಿದಳಯೋಧ್ಯಾ ನಗರನಾರಿ. ಬಂದಿಳಿಕೆ
ಹಿಡಿದುದಿಕ್ಷ್ವಾಕು ನೀರ್ವೊಯ್ದು ನಡಪಿದ ಮರಕೆ.
ರಘು ಜಲಕ್ರೀಡೆಯಾಡಿದ ಸರೋವರ ತಟಂ
ದರೆ ದರಿಸಿ, ಪರ್ಬ್ಬಿದುದು ಸಾಂದ್ರಂ ಜಲಪಿಶಾಚಿ,
ಪಾಚಿ, ನೃಪವರ ದಿಲೀಪಂ ಮೇಯಿಸಿದ ದನದ
ಸಂತಾನ ಶತಶತಗಳಿಂ ತುಂಬಿ, ಸೋರ್ವಮೃತ
ಧಾರೆ ನಿಚ್ಚಂ ತೊಯ್ದಮೃತಶಿಲೆಯ ಗೋಶಾಲೆ,
ತಂತುಕಾರ ಸಹಸ್ರ ಜಾಲ ವೈರೂಪ್ಯದಿಂ,     ೧೦
ಖಿನ್ನಮಿದೆ ಪಾಳೂರ ತುರುಪಟ್ಟಿಯೋಲ್‌. ಅಜಂ
ಸಂಚರಿಸಿದುದ್ಯಾನ ವೀಧಿಗಳೊಳಿರ್ಕೆಲದ
ಪಳು ಸಂಕ್ರಮಿಸಲಳಿದುಮುಳಿದುದೈ ಸ್ಮೃತಿಪಥಂ,
ಕೈಕೆಯಣುಗನ ಮೊಗದ ನವಿರಿಡಿದ ನೋಂಪಿಯೋಲ್‌!
ಸಾಲದೇನಿನಿತೆ ಸೂಚನೆ ನಿನಗೆ, ಓ ವಾಣಿ,
ವಾಗ್ದೇವಿ? ಯಾಚಿಸುವೆ ಕೈಮುಗಿದು, ಪಿಂತಿರುಗು;
ಬಾ, ತಾಯಿ; ಸಾಲ್ಗುಮಾ ಲಂಕೆ, ರಾಕ್ಷಸ ಲಂಕೆ,
ರಣಘೋರ ಲಂಕೆ, ರಾಮನ ಶಂಕೆ ಜಾನಕಿಯ
ಬೆಂಕೆ! ಬಿಡು, ಸಾಲ್ಗುಮಾ ಲಂಕೆ! ತೋರೆಮಗೆಂತು
ಸುವ್ರತನ್‌ ಭರತದೇವಂ? ತಪಮಿರ್ಪಳೆಲ್ಲಿ ಆ ೨೦
ತೋರೂರ್ಮಿಳಾದೇವಿ? ಕೌಸಲ್ಯೆಯಿಹಳೆಂತೊ?
ಬರ್ದುಕಿಹಳೆ ಭರತನಂಬಿಕೆ? ಲಕ್ಷ್ಮಣನ ತಾಯಿ
ತಾನೊರ್ವಳನಿಬರಿಗೆ ಸಂತೈಕೆಯಾಗುತೆ
ಅದೆಂತಿಹಳೊ? ಹಾಡಿ ತೋರೆಮಗೆ, ಓ ತಾಯೆ, ಹೇ
ವಾಗ್ದೇವಿ!
ಲಂಕೆಯಂ ತೊರೆಯಲ್ಕದೆತ್ತಣದು
ಶಂಕೆ ನಿನಗಿನ್‌? ವಿಭೀಷಣನ ಸತ್ಕಾರಮುಂ
ತನಗೆ ಬೇಡದೆ; ಭರತನಂ ಕಾಣುವಳ್ಕರೆಗೆ
ಗಗನ ಗಮನದ ಮನೋವೇಗದ ವರೂಥಮಂ
ಪುಷ್ಟಕವರ್ನೆದು; ಮುನಿವರ ಅಗಸ್ತ್ಯಾಶ್ರಮದಿ
ಮತ್ತೆ ಕಿಷ್ಕಿಂಧೆಯಲಿ, ಪಣ್ಮರವೆ ಗುರಿಯಾಗಿ   ೩೦
ರೆಂಕೆಗೆದರಿದ ಪಕ್ಷಿ ಬೇರೆ ತರುಗಳಿನಿತೆ
ವಿಶ್ರಮಕೆ ನಿಲ್ವಂದದಿಂ ತಂಗುತಲ್ಲಿಂದೆ
ಪಾರ್ದನೈಸಲೆ ರಾಮನುಂ ಲಂಕೆಯಿಂದಾ
ಸುದೂರದಾ ಭರದ್ವಾಜನಾಶ್ರಮಕೆ? ಲಂಕೆಯಂ
ತೊರೆಯಲ್ಕದೆತ್ತಣದ ಶಂಕೆ ನಿನಗಿನ್‌? ಬಾ,
ತಪಸ್ವಿದರ್ಶನಕೆ, ನಂದಿಗ್ರಾಮದಾಶ್ರಮಕೆ!
ಅಣ್ಣನೈತರ್ಪುದರ್ಕಿನ್ನಿರ್ಪವೇಳ್‌ ಪಗಲ್‌.
ಕೈಕೊಳ್ವೆನಾತನ ಸುಖಾಗಮನಕೋಸುಗಂ
ಕಡು ನೋಂಪಿಯಂ. ಪೂಜಿಸುವೆನಗ್ನಿದೇವನಂ,
ಸಚ್ಚಿದಾನಂದ ಇಚ್ಛಾಪ್ರತಿಮನಂ. ಮತ್ತೆ         ೪೦
ವಿಶ್ವದೇವರ್ಕಳಂ ಪ್ರಾರ್ಥಿಸುವೆನಭ್ಯುದಯ
ಸಿದ್ಧಿಗಾ ಸೃಷ್ಟಿನಿಯಮಸ್ಫೂರ್ತಿ ಚಿಚ್ಛಕ್ತಿ
ಮೂರ್ತಿ ಸ್ವರೂಪಂಗಳಂ. ವಾರ್ತೆಯಾದೊಡಂ
ಶ್ವೇತಪಕ್ಷದ ಚೈತ್ರಪಂಚಮಿಯ ವಾಸರಂ
ಮುಗಿವನ್ನೆಗಂ ಬರದಿರಲ್ಕಾಂ ನಿವೇದಿಪೆನ್‌
ವೈಶ್ವಾನರಂಗೀ ಕಳೇಬರವನೆನುತೆ ಋಷಿ
ಭರತಂ, ಗುರು ವಸಿಷ್ಠ ಮಂಗಳಾಶೀರ್ವಾದ
ಹಸ್ತ ಮಸ್ತಕ ನಮ್ರನಾಗಿ, ಸೂರುಳ್‌ ತೊಟ್ಟು,
ತೊಡಗಿದನು ನಿರಶನವ್ರತಸಹಿತಮಾತ್ಮಮಯ
ಯಜ್ಞಮಂ ಕ್ರತುಪೂರ್ಣಮಂ. ಸುದ್ದಿಯಂ ತಿಳಿಯೆ        ೫೦
ಕಳುಪಿದ ಸಮರ್ಥರೋರೊರ್ವರುಂ ಪಿಂತಿರುಗಿ,
ಮುನಿ ಅಗಸ್ತ್ಯಾಶ್ರಮವನುಳಿದು ಮುನ್ನಡೆದವರ್
ಅದೇನಾದರೋ ತಿಳಿಯದೆಂದೆಂದೆ ಪೇಳ್ದರ್
ನಿರಾಶೆಯಂ. ಕೊನೆಯಿರುಳ್‌ ಕಳೆಯುತಿರೆ, ಮರುವಗಲೆ
ಮಾಂಡವಿಯ ಮನದನ್ನನಗ್ನಿ ಪ್ರವೇಶಮಂ
ಮನದಿ ನಿಚ್ಚಯ್ಸುತಿರೆ, ಯಜ್ಞಕುಂಡಾಗ್ನಿಯಿಂ
ಜ್ವಾಲೆಯೇಳ್ವಂದದಿಂ ಜ್ವಾಲಾವಿಲೀನಮೆನೆ
ಮೈದೋರ್ದುದೊಂದಮರ ಸುಂದರ ಸೂಕ್ಷ್ಮತೇಜದ
ಸುರಾಂಗನಾ ಮೂರ್ತಿ:
“ಕಂದ, ನಿನ್ನಗ್ರಜಂ
ಇಂದೊ ನಾಳೆಯೊ ದಿಟಂ ಪಿಂತಿರುಗಿ ಬಂದಪನ್‌.       ೬೦
ಮಾಣ್‌ ಮನದ ತರಸಲ್ಕೆಯಂ.”
“ದೇವಿ, ನೀನಾರ್?
ಸುಧಾ ಸುಖವನೆರೆಯುತಿಹೆ ಬೆಂದೆದೆಗೆ!”
“ಮತ್ತಾರ್
ಸದಾ ನಿನ್ನ ಸುಕ್ಷೇಮ ಚಿಂತನೆಯೊಳಿರ್ಪರಾ
ಮಂಥರೆ ವಿನಾ?”
“ಬೇಡಮಾ ಪೆಸರನೊರೆಯದಿರ್,
ಪೂಜ್ಯೆ. ಆ ಗೂನಿ ಕಾರಣಮಾಗೆ ನಾನಿಂತು,
ಇಂದಿಲ್ಲಿ ಕೈಕೊಂಡೆನೈಸೆ ಕಡುಗಜ್ಜಮಂ.”
“ವತ್ಸ, ಕಾರಣಳಲ್ತು; ಬರಿ ಕರಣಮಾ ಕುಬ್ಜೆ.
ಮಂಥರಾ ಪ್ರೇಮದಂತಃಕರಣಮಂ ಕಾಣೆ
ನೀಂ. ರಾಮನಂ ಮತ್ತೆ, ನಿನ್ನಭ್ಯುದಯಕಾಗಿ,
ಪಿಂ ಮರಳ್ಚುವುದ್ಯೋಗದೊಳ್‌ ತೊಡಗಿರಲ್ಕವಳ್‌      ೭೦
ದವಾಗ್ನಿಗಾಹುತಿಯಾದಳಲ್ತೆ? ಬಹಿರಂಗದೊಳ್‌
ಆ ಕುಬ್ಬೆ ವಿಕೃತಿಯೆಂತಂತೆ ಹೊರನೋಟಕಾ
ಗೂನಿ ಗೆಯ್ದುದು ಪಾಪವೇಷಿ: ನಾನೆಯೆ ನೋಡು,
ನಿನ್ನ ಮಂಥರೆಯಂತರಾತ್ಮದ ಪುಣ್ಯಲಕ್ಷ್ಮಿ!”
“ದಿಟಮೊ? ಮೇಣೆನ್ನ ನಿರಶನದನ್ನರಸ ರಹಿತ
ಪಿತ್ತ ಚಿತ್ತದ ವಿಕಾರಮೊ?”
“ನಿರ್ಧರಿಸು ನೀನೆ!”
ಕಿಡಿಯೊ? ಕಿರುನಗೆ ಮಿನುಗೊ? ಲಗ್ನವಾದುದು ಮೂರ್ತಿ
ಅಗ್ನಿಯುರಿಯಾಗಿ ತಲೆದೂಗಿ! ನಿಬ್ಬೆರಗಾಗಿ
ಕೈಮುಗಿದನಾ ಕೈಕೆಯಣುಗಂ ಹುತಾಶನಗೆ,
ರಾಮಾಗಮನದಾಶ್ವಾಸನದ ಕೃತಜ್ಞತೆಗೆ.     ೮೦
ಬೆಳಗಾದುದಾ ಇರುಳ್‌. ತುಳುಕಿದುದು ಹೊಂಬೆಳಗು,
ರಾಶಿ ರಾಶಿಯೆ, ಪೂರ್ವ ದಿಗ್ವನಿತೆಯೆತ್ತಿರ್ದ
ಸ್ವರ್ಣ ವರ್ಣದ ಪೂರ್ಣ ಕುಂಭದಿಂ, ಕೋಸಲದ
ದೇಶ ದೇವಿಯ ವನ ನದೀ ವಸನ ಭೂಷಣಕೆ
ಲೇಪಿಸುತೆ ಮಧುಕಾಂತಿಯಂ. ಚೈತ್ರ ಪಂಚಮಿಯ
ಶುದ್ಧ ಪಕ್ಷದ ವಾಸರೇಶ್ವರಂ ತಳತಳಿಸಿ
ಮೂಡುತಿರೆ, ತಿರೆಯರಿಯದೇನರಿಯದೊಡೆ ಭರತಂ,
ನಿರಂತರಂ, ಆ ರಾಮನಾಗಮನದಾಹ್ಲಾದಮಂ?
ಟುವಿ ಟುವ್ವಿ! ಟುವ್ವಿ ಟುವಿ! ಟುವ್ವಿ ಟುವಿಟುವಿ ಟುವ್ವಿ!     ೯೦
ಟುವ್ವಿ ಮಾಗಿಗೆ ಟುವ್ವಿ! ಸುವ್ವಿ ಸುಗ್ಗಿಗೆ ಸುವ್ವಿ!
ರಾಮನಾಗಮನದಾಶಂಶನಾಹ್ಲಾದಮಂ,
ಕೋಗಿಲೆಗಳೆಂತೊ ಗಿಳಿವಿಂಡೆಂತೊ ತಾಮಂತೆವೋಲ್‌,
ಪೂವೆರ್ದೆಯ ಜೇನೀಂಟಿ ಸರಗೈದುವಿಂಚರದಿ
ನಲಿವ, ಕುಕಿಲುವ, ಕುಣಿವ, ನೆಗೆವ, ಕುಪ್ಪಳಿಸುಲಿವ
ಬಣ್ಣವಣ್ಣದ ಗರಿಯ ಮಿಂಚೆಸೆವ ತರತರದ
ಕಿರುವಕ್ಕಿಗಳ್‌, ಪೆಸರರಿಯದಾ! ಸುಮಾಕ್ಷತೆಯ
ಶುಭಮೆರಚಿ ರಂಗವಲ್ಲಿಯನಿಕ್ಕಿದುವು ಹೊಂಗೆ.
ಕೆಂದಳಿರ್ ತೋರಣಂಗಟ್ಟಿದುವು ಮಾಮರಂ.
ಪೊಂಜೆತ್ತಿದುವು ಮುತ್ತುಗದ ಮರಂ. ಸಾಲ್ಗೊಂಡು
ಕುಂಕುಮ ಕುಸುಮ ಹಸ್ತದಿಂ ಪಗಲ್‌ದೀವಿಗೆಯ
ಪಿಡಿವವೋಲ್‌. ಗಂಧವಹನೆಂಬ ಬಿರುದಂ ಮರಳಿ
ಪಡೆವೆನೆಂಬೊಂದಹಂಭಾರದಿಂ ಮಂದಮಂದಂ
ಬೀಸಿ ಬಂದಲೆದನೈ ಮಂದಾನಿಲಂ, ದಕ್ಷಿಣ
ದಿಶಾ ಘನೌದಾರ್ಯಸ್ವರೂಪಾಂಜನೇಯನೋಲ್‌?
ಪದಿನಾಲ್ಕು ಬರಿಸಗಳ ಪಿಂದೆ ತಾನರಿತ ಪೂ
ಇಂದು ಪಣ್ಣಾದುದಂ ಕಾಣ್ಬ ತಾನಲೆ ಸುಕೃತಿ?
ಬಿಂದುವೋಲಂದು ತನ್ನತಿಥಿಯಾಗಾಶ್ರಮಕೆ
ಬಂದಾತನಿಂದು ತಾಂ ಸ್ವಸ್ವರೂಪಜ್ಞಾನ
ಪೂರ್ಣ ಸಾಕ್ಷಾತ್ಕಾರದಿಂ ಸಿಂಧು ತಾನಾಗಿ   ೧೧೦
ಬಿಜಯಿಸಿದನೆಂದು, ದಿವ್ಯಜ್ಞಾನಿ ಋತವಿದ್‌
ಭರತದ್ವಾಜನಾತನನಿದಿರ್ಗೊಂಡು, ಸಂಭ್ರಮದಿ
ಸತ್ಕರಿಸಿದನು ಪೂಜಿಪೋಲ್‌, ಪೂರ್ಣಚಂದ್ರಮುಖಿ
ಸೀತಾದ್ವಿತೀಯಂ ಶ್ರೀರಾಮಚಂದ್ರನಂ,
ವಾನರ ಸಮೇತಂ ವಿಮಾನದಿಂದವತರಿಸಿ
ಲಕ್ಷ್ಮಣ ಸಹಿತ ತನಗೆ ಪೊಡಮಟ್ಟನಂ. ತನ್ನಾ
ತಪೋವನದೊಳೊರ್ ಪಗಲ್‌ ಕಳೇಯವೇಳ್ಕೆಂದ ಗುರು
ಗುರುವಚನ ಗೌರವಕಲ್ಲಿ ನಿಂದಾಣದೊಡಮಿರದೆ
ಭರತಂಗೆ ತನ್ನಾಗಮನ ಯೋಗವಾತೆರ್ದಯಂ
ಮುನ್ನರುಹೆ, ತಿಳುಹಿ ಕಳುಹಿದನಾಂಜನೇಯನಂ,        ೧೨೦
ಶೃಂಗಿಬೇರಪುರಪಥದಿಂ ಗುಹನನೊಡಗೂಡಿ
ದಿವ್ಯ ನಂದಿಗ್ರಾಮದಾಶ್ರಮಕೆ.
ಓ, ಏಕೆ
ತಳ್ವುತಿಹೆ, ದಕ್ಷಿಣ ಘನೌದಾರ್ಯಮೂರ್ತಿ, ಹೇ
ಪವನಪ್ರಿಯಕುಮಾರ? ಕ್ಷಣಮುಂ ಪ್ರತೀಕ್ಷಣೆಗೆ
ಯುಗಮಲ್ತೆ? ಬೇಗೆಯಲಿ ಬಾಯಾರಿಹುದೊ ಭರತ
ಹೃಚ್ಚಾತಕಂ! ಬೇಗ ಬಾರೈ,ಸಮೀರಸುತ:
ತಾರಯ್ಯ, ಜೀಮೂತವಾಹನನ ಕರುಣೆಯೋಲ್‌,
ರಾಮವಾರ್ತಾ ವರ್ಷ ಜೀಮೂತಮಂ! ಲಂಕೆಯೊಳ್‌
ನೀನಂದು ಜಾನಕಲಿಗೆ ರಾಮವಾರ್ತೆಯನೊರೆದು
ಪೊರದಂತೆವೋಲಿಂದು ಕೋಸಲದಿ ಪೊರೆಯ ಬಾ     ೧೩೦
ಭರತನಂ. ನಿನಗಾರ್ ಜಗತ್‌ತ್ರಯದಿ ಮಿಗಿಲೊಳರ್?
ಸಂದೇಶ ವಾಹಕ ವರೇಣ್ಯ ಗುರು ನೀನಲ್ತೆ.
ಹೇ ಜಗತ್‌ಪ್ರಾಣ ಮುಖ್ಯಪ್ರಾಣ?
ಅದೇನದೇನ್‌?
ಕೊರಳೆತ್ತಿ ಬೆರಗಾಗಿ ನೋಡುತಿಹರಲ್ಲಲ್ಲಿ
ಕೋಸಲಗ್ರಾಮೀಣ ಪಲ್ಲೀಜನಂ? ಗುಹಂ,
ವ್ಯಾಧರಾಜಂ, ತಾನೆ ಕಡವೆದೇರ್ ನಡಸುತಿರೆ;
ಪಕ್ಕದೊಳ್‌, ಪ್ಲವಗಲಾಂಭನರುಡುಗೆ ತೊಡುಗೆಯಿಂ,
ರಣವೃತ್ತಿ ನಿವೃತ್ತ ನಾಗರಿಕ ಲಕ್ಷಣಗಳಿಂ,
ಕುಳ್ತಾಂಜನೇಯನಿರ್ಕೆಲದೌತ್ತರೇಯ ಪ್ರಕೃತಿ
ಸೌಮ್ಯ ಸೌಂದರ್ಯಮಂ ಮೆಚ್ಚುತೈತಂದು ಪೊಕ್ಕನ್‌   ೧೪೦
ನಂದಿಗ್ರಾಮ ಬಹಿರ್ ವಲಯಮಂ ಕ್ಷೇತ್ರದಾ
ಗೌರವಕೆ ತೇರಿಳಿಯುತಿರ್ವರುಂ ಬರುತಿರಲ್‌,
ಬಟ್ಟೆವಟ್ಟೆಯೊಳೆಲ್ಲಿಯುಂ ಮೂಕವಿಸ್ಮಯದಿ
ನಿಂದುದು ಜನಂ ದಿಟ್ಟಿನಟ್ಟು, ಮರುತಾತ್ಮಜನ
ತೇಜಕ್ಕೆ ಗಾತ್ರಕ್ಕೆ ನೇತ್ರಕಾಂತಿಗೆ ಮತ್ತೆ
ಆತ್ಮದೋಜೆಯ ವಿಶೇಷಾಕೃತಿಗೆ ಮಹಿಮೆಗೇಂ
ಪರಿಚಯವನೊಲರೆಯವೇಳ್ಕುಮೆ? ಮಂದಿ ತಲೆಬಾಗಿ
ವಂದಿಸಿದುದಾ ಮಹಾವೀರಂಗೆ, ಕಿಷ್ಕಿಂಧೆ
ತಾನಯೋಧ್ಯಾ ರಕ್ಷಣೆಗೆ ಪೆತ್ತ ವಿಂಧ್ಯಗಿರಿ
ಸನ್ನಿಭ ಜಗದ್‌ ವಂದ್ಯ ಭವ್ಯ ಗಭೀರಂಗೆ!      ೧೫೦
ಧ್ಯಾನಸ್ತಿಮಿತಲೋಚನಂ ಭರತನೊಯ್ಯನೆಯೆ
ಕಣ್ದೆರೆದು ನೋಡಿ, ಕಂಡನು ಮುಂದೆ ದಿಂಡುರುಳಿ
ದಂಡಪ್ರಾಣಮಮಂ ಗೆಯ್ದಿರ್ದ ಗುಹನಂ,
ನಿಷಾದನೃಪನಂ:
“ಬಾಳ್‌ಗೆಳೆಯ, ಏಳ್‌, ಬಿಯದರರಸ,
ನಿನ್ನಾಳ್ಗಳೇನಾದೊಡಂ ಮಂಗಳವನೆನಗೆ
ತಂದರೇನಣ್ಣನಂ ಕುರಿತ ಶುಭವಾರ್ತೆಯಂ?
ಪೇಳ್‌!” ವಿಷಣ್ಣಾನನದಿ ಕೇಳ್ದ ಭರತಗೆ ಗುಹಂ
ಸುಪ್ರಸನ್ನಂ “ದೂತನೈತಂದಿಹನ್‌!” ಎನುತ್ತೆ,
ಭರತ ಭಾವಸ್ಥಿತಿಯನುದ್ರೇಕಿಸಲ್‌ ಬೆದರಿ
ತನ್ನ ಪುಲಕಾನಂದಮಂ ದಮನಗೆಯ್ಯುತ್ತೆ     ೧೬೦
ನೀರಸಧ್ವನಿಯೊಳೆಂದನ್‌:
“ದೇವ, ತಿಳಿಯೆನಾಂ
ನಿಶ್ಚಿತವನಾದೊಡಂ ನಮಗಿನ್‌ ನಿರಾಶೆಯಂ
ಮಾಣ್ಬುದುಚಿತಂ.”
“ಪೇಳ್‌, ಸಹೋದರಂ ಬರ್ದುಕಿಹನೆ?”
“ಸಲ್ಲದತ್ಯಾಶೆಯುಂ, ದಾಶರಥಿ, ಬರ್ದುಕಿರ್ಪ
ಚಿಹ್ನೆಯಂ ತೋರಲ್‌ ಸಮರ್ಥನೊರ್ವನನಿಲ್ಲಿ
ಕರೆತರೆ ಸಮರ್ಥನೆಂ.”
“ಆರವನ್‌? ನಿನ್ನಾಳೆ?”
“ರಾಮನಾಳ್‌!”
“ರಾಮದೂತನೆ? ಎಲ್ಲಿ? ಎಲ್ಲಿ ತೋರ್!
ಕರೆದು ತಾ!”
“ರಾಮದೂತನೆ? ಎಲ್ಲಿ? ಎಲ್ಲಿ ತೋರ್!
ಕರೆದು ತಾ!”
“ರಾಮನಟ್ಟಿದನೆಂದೆ ನಂಬೆನಾಂ.
ಬಂದನಾ ಗುರು ಭರದ್ವಾಜಶ್ರಮದ ದೆಸೆಯ
ಪಳುವಟ್ಟೆಯಿಂ.”
“ನೋಳ್ಪೆನಾತನಂ ಕರೆದು ತಾ!”     ೧೭೦
“ಗುರು ವಸಿಷ್ಠಂಗತಿಥಿಯಾಗಿಹನ್‌. ಈಗಳೆಯ
ಕರೆತರ್ಪನಾತನಂ.”
“ದಣಿದು ಬಂದಿಹನೆ, ಬಹು
ದೂರದಿಂ? ಏನ್‌ ಪೇಳ್ದನಾತನ್‌ ನಿನಗೆ, ಗುಹ?”
“ದಂಡಕಾರಣ್ಯದೊಳ್‌ ರಾಮಲಕ್ಷ್ಮಣರೊಡನೆ
ರಾಕ್ಷಸಂ ಕಳ್ದುಯ್ದ ಸೀತೆಯಂ….”
“ಏನೇನ್‌?
ಏನೆಂದೆ? ಏನ್‌ ಪೇಳ್ದನತ್ತಿಗೆಯನುಯ್ದರೆ
ನಿಶಾಚರರ್?” ತತ್ತರಿಸುತಿರ್ದನಂ ಕೈವಿಡಿದು
ಕುಳ್ಳಿರಿಸುತುಪಚರಿಸಿ ಗಹನಗೋಚರ ಗುಹಂ:
“ಅಲ್ತಲ್ತು; ತಪ್ಪಿದೆನ್‌, ಲಂಕಾಧಿನಾಥನಂ,
ವಾನರ ಸಹಾಯದಿಂ, ಕಡುಗಾಳೆಗದಿ ಕೊಂದು,….”     ೧೮೦
“ಓಡು, ನಡೆ, ಗುಹ; ಕರೆದು ತಾ ಆ ಮಹಾತ್ಮನಂ.
ರಾಮಕಥೆಯಂ ಪೇಳ್ವ ಜಿಹ್ವೆಯ ಪುನೀತನಂ,
ಶ್ರೀದೂತನಂ!”
ಗುಹಂ ಪೋದತ್ತಲೆಯೆ ದಿಟ್ಟಿ
ಬಸೆದತ್ತು, ರಾಮ ಪಾದುಕೆಯನಿರ್ಕಯ್ಗಳಿಂ
ಹೃದಯಕೊತ್ತಿದನ್‌, ಎತ್ತಿ ಪಣೆಗಿಟ್ಟನ್‌, ಅಲ್ಲಿಂದೆ
ನೆತ್ತಿಗೇರಿಸಿದನದನ್‌ ಅಶ್ರು ಬಿಂದೂತ್ಕರಂ
ಪೊನಲಿಳಿದು ಮರೆಯಾಗುವೋಲ್‌ ಶ್ಮಶ್ರುಮಯ ಮುಖದಿ.
ಭರತನಿಂತಿರೆ ಪೊಕ್ಕನೆಲೆವೆನೆಯ ಬಾಗಿಲಿಂ
ಮರುತಾತ್ಮಜಂ, ಗುರು ಸಹಿತಮಟವಿಗೋಚರಂ
ವೆರಸಿ. ತನ್ನೆವೆಯಿಕ್ಕದಕ್ಷಿಯ ಕವಾಟದಿಂ        ೧೯೦
ರಾಮನೆಯೆ ಹೃನ್ಮಂದಿರಂಬೊಕ್ಕವೋಲಾಗಿ,
ನಿರ್ನಿಮೇಷಂ ಭರತನೀಕ್ಷಿಸಿದನಾ ರುಂದ್ರ
ವಾನರನ ಶ್ರೀಮನ್‌ ಮಹಾಕಾರಮಂ! ತನ್ನ
ಪುರುಷಕಾರವನನಿತುಮಂ ತೂಗಿ ಅಳೆವವೊಲ್‌
ಕಣ್ಣೊಳೆಯ ತಳೆವವೊಲ್‌ ದಿಟ್ಟಿಯಿಂ ಪೀರ್ವವೊಲ್‌
ನಟ್ಟು ನಿಟ್ಟಿಸುತಿರ್ದ ರಾಮಾನುಜಂ, ತನಗೆ
ಮೊದಲಂದು ಪಂಪಾ ಸರಸ್ತೀರದಲಿ ಕಣ್ಗೆ
ಬಿರ್ಳದ ಸೀತಾದುಃಖಿ ರಾಮನಂ ಬಗೆಗೆ ತರೆ,
ನಿಷ್‌ಪಕ್ಷ್ಮನಾಗಿ ಸಮವೀಕ್ಷಿಸಿದನನಿಲಜಂ
ಭರತನ ತಪೋಧನಶ್ರೀರೂಪಮಂ: ಜಟಾ      ೨೦೦
ಜಟಿಲನಂ, ಪಂಕದಿಗ್ಧಾಂಗನಂ, ದಾಂತನಂ,
ಬ್ರಹ್ಮರ್ಷಿ ಸಮತೇಜನಂ, ರಾಮ ಪಾದುಕಾ
ಮಕುಟ ಸಂಪದ್ಯುಕ್ತನಂ, ಭಾವಿತಾತ್ಮನಂ,
ಚೀರವಲ್ಕಲ ಕೃಷ್ಣಮೃಗ ಚಮ್ಮವಸನನಂ,
ದೀನನಂ, ಕೃಶನಂ, ತಪೋಧರ್ಮಚರ್ಮೆಯ
ಮಹದ್‌ ಬ್ರಹ್ಮಚಾರಿಯಂ ಶ್ಮಶ್ರುಮಯ ಮುಖದಿಂದೆ
ಸತ್ಯವಿಕ್ರಮ ಚಿಹ್ನನಂ, ಭ್ರಾತೃವಾತ್ಸಲ್ಯ
ಘನಮೂರ್ತನಂ ನೋಡಿ, ನೋಡಿ, ಒಯ್ಯನೆ ಬಾಗಿ,
ಕರಪುಟಾಂಜಲಿಯಾದನಾಂಜನೇಯಂ:
“ಕುಶಲಿ,
ಮಹಾತ್ಮ, ಸೀತಾ ಲಕ್ಷ್ಮಣರ್ ಸಹಿತನ್‌, ಆರ್ಗೆ ನೀಂ     ೨೧೦
ಜಡೆವೆರಸಿ ತಪಮಿರ್ಪೆಯೋ ಆ ಜಗತ್‌ಪೂಜ್ಯನ್‌,
ಭ್ರಾತೃವತ್ಸಲ ರಾಮಚಂದ್ರಂ!”
ವಿವಶನಂತೆ
ಭರತನೆಳ್ದನು ಹರ್ಷರಸಮೂರ್ಛಿತಂ, ಧಾರೆ
ಸೋರ್ವ ಕಂಬನಿವೆರಸಿ, ಶಿಶು ತೊದೆಲ್ವಂದದಿಂ
ತೊದಲುತೈತಂದು ಬಿಗಿದಪ್ಪಿದನು, ತೋಳ್‌ಬಲಂ
ತರಹರಿಸುವೋಲ್‌, ಕಾಯಮಂ ಕಪಿಧ್ವಜನಾ!
ಮಹಾ ಬಾಹ ಉ ಮರುತಜಂ ತಾನುಮಾತನನಿರದೆ
ತೋಳ ತೊಟ್ಟಿಲೊಳಾನುತಿರೆ, ಪಸುಳೆಯೋಲುಸಿರ್
ಸೋಲ್ತು, ಕಣ್ಮುಚ್ಚಿದನೊ ರಾಮಾನುಜಂ!
ಶಿಶಿರಮಯ
ಶುಶ್ರೀಷೆಗೆಳ್ಚರ್ತ ಭರತಂಗೆ ಮರುತಾತ್ಮಜಂ: ೨೨೦
“ಗುರು ಹರಸಿ ಕೊಡುವನಿದೊ; ಕುಡಿ ಮೊದಲ್‌ ಫಲರಸದ
ಪಾನೀಯಮಂ, ಪೂಜ್ಯ! ಕುಡಿಯಲ್‌ ಸಮರ್ಥನಹೆ,
ತದನಂತರಂ, ನಾನೊರೆಯಲಿರ್ಪ ಜಾನಕೀ
ಚೋರನಂ ರಣಮುಖದಿ ಕೊಂದ ಕೋಸಲ ಧರಾ
ನಾಥ ಮಹಿಮೆಯ ಕಥಾಕ್ಷೀರಮಂ!”
ಪುರೋಹಿತಂ
ಸ್ವಾದು ಫಲರಸ ಪೂರ್ಣಮಂ ಪೂರ್ಣಚಂದ್ರಿಕಾ
ಚಾರು ಚಾಮೀಕರಸ್ಥಾಲಿಯಂ ಕುಡಲ್ಕದಂ
ಕೊಂಡನು ಕೈಗೆ: ‘ರಾಮಚಂದ್ರಂ ಬಾಳ್ಗೆ! ಗೆಲ್ಗೆ
ರಾಮಚರಿತಂ! ಚಿರಂ ಜೀವಿಸುಗೆ ರಾಮದೂತಂ!’
ಎನುತೆ ಹಣ್ಣಿನ ರಸವನೀಂಟುತಿರೆ ಮಾಂಡವೀ          ೨೩೦
ಪ್ರಾಣಪ್ರಿಯಂ, ತಣ್ಣಗೆ ತಣಿವುದಿಳೆಯ ಸುಮನಸರ
ಸಹೃದಯ ದಯಾಮಯ ಮನೋಮಂದಿರಂ!
ಸ್ವಯಂ
ಮುಖ್ಯಪಾತ್ರನೆ ಪೇಳ್ದನೆನೆ, ಕೇಳ್ದನೆನೆ  ಭರತಂ,
ದಿವ್ಯ ರಸಭರಿತಮಂ ಶ್ರೀರಾಮಚರಿತಮಂ
ಮತ್ತೆ ಕಬ್ಬಿಗನೊರೆವುದೇಂ? ಮೊಗೆದನೀಂಟಿದನ್‌,ಮುಳುಗಿದನ್‌, ತೇಲ್ದನೀಜಿದನೇರಿ ದುಮುಕಿದನ್‌;
ನೊರೆಯ ಐರಾವತಗಳೇರ್ದುವೆನೆ ತೆರೆತೆರೆಯ
ಕೈಲಾಸಗಿರಿಗಳಂ, ಕಲ್ಲೋಲಮಯವಾಯ್ತು
ರಾಘವ ಕಥಾಕ್ಷೀರಸಾಗರಂ!
ಗ್ರಾಮದಿಂ
ಗ್ರಾಮಕ್ಕೆ, ನಗರದಿಂ ನಗರಕ್ಕೆ, ಪತ್ತನದಿ        ೨೪೦
ಪತ್ತನಕೆ, ಪಲ್ಲಿಯಿಂ ಪಲ್ಲಿಗಾ ಕೋಸಲದ
ಮೂಲೆ ಮೂಲೆಯೊಳೆಲ್ಲಿಯುಂ ಪರ್ಬಿದುದು ವಾರ್ತೆ
ರಘುರಾಮನಾಗಮನದಾ. ಸುದ್ದಿಯಂ ಬಿಡದೆ
ಹಿಂಬಾಲಿಸಿತು ಭರತನಾಜ್ಞೆ . ಚೈತ್ಯಂಗಳಂ
ದೇವನಿಲಯಂಗಳಂ ಶುಚಿಗೆಯ್ದು, ಸಿಂಗರಿಸಿ,
ವಾದಿತ್ರ ರವದಿಂ ಸುಗಂಧ ಮಾಲ್ಯಂಗಳಿಂ
ಪೂಜಿಸಿದರರ್ಚಕರ್ ದಿವ್ಯ ಚೇತನಗಳಂ,
ಶ್ರೀರಾಮ ಸದ್ಧರ್ಮ ಮಂಗಳಾರ್ಥಂ.
ಬೆಸನಿತ್ತು
ಕಳುಹಿದನು ಭರತನಾ ಶತ್ರುಚೇತನ ಹಾರಿ
ಶತ್ರುಘ್ನನಂ ಪುರಕೆ ಸಾಕೇತಕದನಂದೆ          ೨೫೦
ಕಯ್ಗಯ್ದು, ತನ್ನ ತಾಯ್ವಿರ್ ವೆರಸಿ , ಮಂತ್ರಿಗಳ್‌
ಸೇನೆಗಳ್‌ ಛತ್ರ ಚಾಮರ ಶಂಖಭೇರಿಗಳ್‌
ರಾಜಮರ್ಯಾದೆಯಂ ರಾಜಚಿಹ್ನಂಗಳಂ
ಕೂಡಿಕೊಂಡೊಡನೆ ನಂದಿಗ್ರಾಮಕೈತರ್ಪವೋಲ್‌.
ಶ್ರೀ ವಾರ್ತೆ ಶತ್ರುಘ್ನನಿಂ ತಿಳಿದುದೆಯೆ ತಡಂ
ತೊರೆದುದು ಶವಸ್ಥಿತಿಯನುಸಿರೆಳೆದುದು ಅಯೋಧ್ಯೆ;
ಜಡನಿದ್ರೆಯಿಂದೆಳ್ದುದಯ ‌ನೃಪತಿಮಂದಿರಂ!
ಸುಣ್ಣ ಸೊದೆಯಂ ತಳೆದು ಮನೆಮನೆಯ ಗೋಡೆಗಳ್‌
ಬೆಳ್ಳಿಯಾದುವು ಚೈತ್ರದಾತಪದಿ. ನೀರೆರೆದ
ಬೀದಿಗಳ್‌ ತೋರಣಂಗಟ್ಟಿದುವು. ಕತ್ತುರಿಯ  ೨೬೦
ಪರಿಮಳದ ರಂಗೋಲಿಯಿಕ್ಕಿದುವು ಮನೆಮನೆಯ
ಮುನ್ನೆಲಂಗಳ್‌. ಚಿನ್ನದಂಬಾರಿಯಾನೆಗಳ್‌
ತೇರುಗಳ್‌ ಕುದುರೆಗಳ್‌ ಭಾರಿ ಕಾಲಾಳುಗಳ್‌
ಸಾಲ್ಗೊಂಡು ಸಂಚರಿಸತೊಡಗಿದುವು; ಶಿಲ್ಪಿಗಳ್‌
ಗುಂಪು ಗುಂಪೆಯೆ ನೆರೆದು ಸಮರಿದರ್ ದಾರಿಯಂ,
ನಾಗರಿಕ ಸಂಚಾರ ಸುಭಗಮಪ್ಪಂತೆವೋಲ್‌.
ದಿಗ್ದಂತಿ ಕಿವಿನಿಮಿರೆ ಸಂತೋಷ ಭೇರಿಗಳ್‌
ಸಂಭ್ರಮದಿ ಮೊಳಗಿದುವ ಧಳಧಳಧಳಂ!
ಸರಯೂ
ನದೀ ತಟ ಕುಟೀರದ ತಪಸ್ವಿನಿಗದೇತಕೊ
ತನೂರುಹಂ ನಿಮಿರುತೆ, ಅಪೂರ್ವಮೆಂಬಂದದಿಂ,      ೨೭೦
ಬಹುಕಾಲ ಪೂರ್ವ ಪರಿಚಿತಕೆ ಕಿವಿಗೊಟ್ಟಳಾ
ಗಿರಿವನಗಳುಂ ತಲ್ಲಣಿಸೆ ಮೊಳಗುತೈತಂದ
ಭೇರಿಯ ಧಳಂಧಳಂಧಳಂ ಧಳಧ್ವನನಮಯ
ಸಂಭ್ರಮಕೆ. ಕಂಡಳೊಯ್ಯನೆ ತನ್ನ ತಂಗೆಯಂ
ಕರೆಕರೆಯುತೋಡಿ ಬಂದಶ್ರುರುಚಿರಾಕ್ಷಿಯಂ
ಭರತಸತಿ ಮಾಂಡವಿಯನ್ಮೂರಿಳಾ ದೇವಿ:
“ಏಳ್‌
ಏಳ್‌, ಅಕ್ಕ! ಕೇಳ್‌,ಭೇರಿ ಚೀರುತಿವೆ ವಾರ್ತೆಯಂ!”
ಸುಸ್ಥಿರೆ ತಪಸ್ವಿನಿಗೆ ಜೀವಮಸ್ಥಿರಮಾಗಿ
ಗದ್ಗದಿಸಿದಳ್‌;
“ದೇವರೈತಂದರೇನ್‌ ತಂಗೆ,
ವನವಾಸದಿಂ?”
“ಬೇಗಮೇಳ್‌; ಪೋಗವೇಳ್ಕುಮಾ    ೨೮೦
ಸ್ವಾಮಿ ತಪಮಿರ್ಪ ನಂದಿಗ್ರಾಮದಾಶ್ರಮಕೆ!”
“ಮೀಯದುಡದೆಯೆ ತೊಡದೆ ಪೋಪುದೇನವರೆಡೆಗೆ,
ತಂಗೆ? ಮಂಗಳಮಲ್ತು!”
“ನೋಡಬಾರದೆ ಅವರ್
ನಿನ್ನ ನಿಡು ಕಡುನೋಂಪಿಯಂ?”
“ಚಿಃ! ಕಡಲ್ಗಿದಿರ್
ಪನಿಗೇಂ ಪ್ರದರ್ಶನಂ? ದೇವರ ತಪಕ್ಕಿದಿರ್‌
ನಮ್ಮದೊರ್ ತೃಣಮಲ್ತೆ! ಸಂತೋಷಸಮಯದೊಳ್‌
ತೋರ್ಪುದನುಚಿತವೆಮ್ಮ ಕಷ್ಟಮಂ! ತನ್ನ ತಾನ್‌
ಇಲ್ಲಗೈವುದೆ ಎಲ್ಲ ಸಾಧನೆಗೆ ಕೊನೆಯ ಗುರಿ;
ಮೇಣ್‌ ತಪಕೆ ಕೇಳ್‌, ತಂಗೆ, ಪರಮಪ್ರಯೋಜನಂ!”
ವೀಚಿ ವೀಚಿಯ ಪೊಳೆವ ರೋಚಿಯ ತರಂಗಿಣಿಯ        ೨೯೦
ಕುಣಿಕುಣಿದು ನಲಿವ ತಿಳಿನಗೆಯ ಮಣಿವಾರಿಯೊಳ್‌
ಮುಡಿಮುಳುಗೆ ಮಿಂದಳುಟ್ಟುಳು ಬಿಳಿ ದಳಿಂಬಮಂ,
ಮಡಿಗೆ ನೂರ್ಮಡಿ ಮರೆಯ ಕಡುನೋಂಪಿ. ಸಿರಿಮುಡಿಗೆ
ಪಣೆಗೆ ಮೇಣಡಿಗಳಿಗೆ ಕಟಿಯೆಡೆಗೆ ಸೌಮಿತ್ರಿಯಂ
ನೆನೆದಲಂಕರಿಸಿದಳು ತನ್ನಯ್ದೆತನಮಂ! ತೊರೆಗೆ
ಬನಕೆ ಮೇಣೆಲೆವನಗೆ ನಿತ್ಯಪರಿಚಿತ ಲತಾ
ತರುರೂಪಿ ಚೇತನಗಳಿಗೆ ನಮಿಸಿದಳು, ತಪದ
ಸಫಲತೆಗೆ ವತ್ಸರ ಚತುದರ್ಶಗಳಿಂ ತನಗೆ
ಧೃತಿಯನಿತುಪಕೃತಿಗೆ. ಪಕ್ಕಿಗಳ್ಗಕ್ಕಿಯಂ
ಬಿಕ್ಕಿ, ಮಿಗಗಲಿಗೆಳೆಯ ಗರುಕೆಯಂ ತಿನಲಿತ್ತು,            ೩೦೦
ಸ್ಥಲದೇವತಾ ಚರಣಕಭಿನಮಿಸಿ ಧೂಳಿಯಂ
ಶಿರದೊಳಾಂಪಂತೆ ಪೊಡೆವಟ್ಟು ನೆತ್ತಿಯೊಳಿನಿತು
ಮೃತ್ತಿಕೆಯನಾಂತು ಬೀಳ್ಕೊಟ್ಟಳೆಲೆವನೆಯನಾ
ತವರಿನತ್ತೆಯ ಮನೆಗೆವೋಪಂತೆ. ತಂಗಿಯಂ
ಕೂಡಿ ಬಂದಾಣ್ಮನಂಬಿಕೆಯಡಿಗೆ ಮಣಿದಳಂ
ಪಿಡಿದೆತ್ತಿ ಬಿಗಿದಪ್ಪಿದಳ್‌ ಸುಮಿತ್ರಾದೇವಿ!
“ನಿನ್ನ ತಾಳಿಯ ಪುಣ್ಯಮೈಸಲೆ, ಮಗಳೆ, ಮರಳ್ದುದು
ಕಾಡು ಪಾಲಾದೆಮ್ಮ ಕುಲದೇಳ್ಗೆ! ಪರಿಯತ್ತೆಯರ್
ಕಾದಿಹರೆಮಗೆ ದೇವಿ ಕೌಸಲ್ಯೆ. ಕಿರಿಯತ್ತೆಯಂ
ಕಂಡು, ತನ್ನೊಡನೆ ನಂದಿಗ್ರಾಮಕಾಕೆಯಂ    ೩೧೦
ಕರೆದೊಯ್ವ ಕರ್ತವ್ಯದಲಲಿ ತೊಡಗಿಹಳ್‌ ಪಿರಿಯ
ರಾಣಿ, ಊರ್ಮಿಳೆ, ನಮ್ಮ ಸಂಕಟಕಿಂದು ಬಂದುದು
ವಿರಾಮಮಾ ಕೈಕೆಯ ಮನೋವ್ಯಥೆಗೆ ಪೇಳೆಂದು
ಬರ್ಪುದೊ ಪರಿಸಮಾಪ್ತಿ? ಬಾ. ನಡೆವಮಾಕೆಯಂ
ತಣಿಸಿ ಸಂತೈಸಿ ಕರೆದೊಯ್ವಮಾ ರಘುರಾಮ
ಮೇಣ್‌ ಭರತ ಸಂದರ್ಶನದ ಪುಣ್ಯದರ್ಶನಕೆ೧”
ನಡೆದರನಿಬರು ಕೈಕೆಯರಮನೆಗೆ, ಕಂಡರವಳಂ,
ರಾಮಜನನಿಯ ತೋಳ ತಳ್ಕೆಯೊಳಳುತ್ತಿರ್ದಳಂ,
ಕೃಶ ಮಲಿನ ಮೂಕ ಶೋಕದ ಶಿಲಾಪ್ರತಿಮಳಂ,
ಪಾಳ್‌ವಿಳ್ದ ಪೂಜಾರಹಿತ ದೇವಮಂದಿರದ    ೩೨೦
ವಿಗ್ರಹಂಬೋಲ್‌ ಮ್ಲಾನೆಯಂ, ಸಂಸ್ಕಾರಹೀನೆಯಂ,
ಗುರುದುರಿತ ದುಃಖಭಾರದಿ ಕುಸಿದ ಕಡುದೀನೆಯಂ.
ತನಗೆ ಮಣಿದೂರ್ಮಿಳೆಯನೆತ್ತಿ ಮುತ್ತೊತ್ತಿದಳ್‌
ಕೈಕೆ; ಕಣ್ಬನಿ ಕರೆದಳೇನೊಂದನಾಡದ
ಶಿಲಾ ಮೌನದಿಂ! ಭರತನಂಬಿಕೆಯ ವಕ್ಷದೊಳ್‌
ಮೊಗಮಿಟ್ಟು ಮಗಳಾಗಿ ನುಡಿದಳೂರ್ಮಿಳೆ:
“ಅಮ್ಮ,
ನಿಮ್ಮ ದುಃಖದ ಮೇರೆಯಂ ನಾನಳೆಯಲಾರೆ;
ಚಿಕ್ಕವಳ್‌, ನಮಗಾಗಿ, ನಿಮ್ಮ ಮಕ್ಕಳಿಗಾಗಿ,
ಓಕರಿಸದೀಂಟವೇಳ್ಕಾ ಕಾಳಕೂಟೋಪಮದ
ಹೃತ್ತಾಪಮಂ, ತಾಯಿ, ನಿನಗಲ್ಲದಿನ್ನಾರ್ಗೆ, ಪೇಳ್‌,       ೩೩೦
ಸಂಮಥಿತ ದಶರಥ ತನೂಜ ಜೀವಿತ ಕಥಾ
ಸಾಗರೋತ್ಥಿತ ಘೋರ ಗರಳಮಂ ಧರಿಸುವ
ಶಿವಾ ಶಿವ ಶ್ರೀಕಂಠ ಶಕ್ತಿ? ಆಶೀರ್ವದಿಸು,
ಏಳು, ಬಾರಮ್ಮ; ನೇಸರ್ ಬಳಿಯ ಬಾಳ್‌ ತುಂಬಿ
ಪರಿವುದಾನಂದ ಭಾಗೀರಥಿಯವೋಲ್‌!”
ಸುಯ್ದಳ್‌!
ಊರ್ಮಿಳೆಯ ಸಿರಿಮೊಗವನೆತ್ತಿ ಮುದ್ದಾಡಿದಳ್‌;
ನಸುನಕ್ಕಳಾ ತಾಯಿ, ನೃಪತಿಮಂದಿರಮನಿತು
ಮಂಕುಗಳೆದೊಳ್ಪು ಬೆಳ್ಳನೆ ಬೆಳಗುವೋಲಂತೆ!
ಮೆರವಣಿಗೆವರಿದುದೊ ಅಯೋಧ್ಯೆ, ವನವಾಸಿ ಋಷಿ
ಸಂಸ್ಕೃತಿಯನಿದಿರುಗೊಳೆ ನಡೆವ ನಾಗರಿಕತೆಯ        ೩೪೦
ಸಿರಿಮಾಳ್ಕೆಯಿಂದೆ, ನಂದಿಗ್ರಾಮದತ್ತಣ್ಗೆ;
ಪೃಥಿವಿ ಸಿಂಚಿತಮಾಯ್ತು ಹಿಮಶೀತವಾರಿಯಿಂ.
ಸಮತೆಯಾಂತುದು ನತೋನ್ನತ ವನೋರ್ವೀತಲಂ.
ಪುಷ್ಪಲಾಜೆಯ ಗಂಧ ಬಂಧುರ ಪಥಂ ಜನಕೆ
ಮಾರ್ಗದರ್ಶಕಮಾಯ್ತು ಪೂಜ್ಯ ಪದ ಸನ್ನಿಧಿಗೆ
ರಘುರಾಮನಾ. ಹೇಮಕಕ್ಷ್ಯೆಗಳನಾಂತೆಸೆವ
ಮತ್ತ ನಾಗ ಸಹಸ್ರಗಳ್‌; ಧ್ವಜಪತಾಕೆಗಳ್‌
ವೇಗ ಸಂಜಾತ ಗಿರಿವಿಪಿನ ವಾತಕೆ ತೊನೆಯೆ,
ತಲೆಯೊಲೆವ ಪೋಂದೇರ ಸಾಲುಗಳ್‌; ಮುಖ್ಯರಂ,
ಕನಕರಶ್ಮಿಯನೆಳೆದು ತಮ್ಮ ಖುರಗತಿಗಳಂ  ೩೫೦
ನಿಯಮಿಸುವಮಾತ್ಯರಂ, ಪೊತ್ತ ಪೆರ್ಮೆಗೆ ಕೆನೆದು
ನೆಲಮಂ ಬೆರಂಟುವ ತುರಂಗತತಿಗಳ್‌; ತೈಲ
ಧಾರೋಪಮಂ ಪೊನಲ್ಪರಿದ ಅವಿರಳ ಗತಿಯ
ಅಮಲ ಶಸ್ತ್ರದ್ಯುತಿಯ ವರ್ಣವಸ್ತ್ರಾಕೃತಿಯ
ಶತ ಶತ ಪದಾತಿಗಳ್‌; ಪುರಮಹಿಳೆಯರ್ ವೆರಸಿ
ದಶರಥಸ್ತ್ರೀಜನಂ ಹೇಮಯಾನಂಗಳೊಳ್‌
ನಡುವೆಯೈತರೆ, ವೀರ ಶತ್ರುಘ್ನಂ ಕೂಡಿ
ಪ್ರವಹಿಸಿತಯೋಧ್ಯೆ ನಂದಿಗ್ರಾಮದತ್ತಣ್ಗೆ!
ಆರ್ಯಪಾದಂಗಳಂ-ಬೆಳ್ಮಲರ್ ಮುಡಿದುವಂ-,
ಪೊಂಬಿಡಿಯ ಬೆಳ್ಚವರಿವೀಸಿ, ನೇಸರ್ ಬಳಿಯ         ೩೬೦
ಪಾಲ್‌ನೊರೆಯ ಬಿಳಿಯ ಕೊಡಯಂ ನೆಳಲ ವಿಡಿದೆತ್ತಿ
ಹರ್ಷದುಂದುಭಿ ರವಂ ಮೊಳಗೆ, ತಾಯ್ವಿರ್ ವೆರಸಿ,
ಮಂತ್ರಪಾಲ ಸುಮಂತ್ರ ಜಾಬಾಲಿ ಮೊದಲಪ್ಪ
ಸಚಿವರೈತರೆ ಬಳಸಿ, ಪೌರ ನರ ನಾರಿಯರ್
ಮಂಗಳದ್ರವ್ಯಂಗಳಂ ಪಿಡಿದು ಬರೆ,-ನೆತ್ತಿಯೊಳ್‌
ಪೊತ್ತು ರಾಮನನಿದಿರುಗೊಳ್ವಾತುರದ ಮನದಿ
ಭರತನೆಯ್ದಿದನಾಂಜನೆಯ ಸತ್‌ಸಂಗ ಸುಖಿ,
ತ್ಯಕ್ತ ನಂದಿಗ್ರಾಮನಾ ಭರದ್ವಾಜಶ್ರಮ
ದಿಶಾ ಪ್ರಸಕ್ತಮುಖಿಯಾಗಿ, ಹನುಮನ ಕೂಡೆ
ಕಾತರಿಪ ತನ್ನೆರ್ದೆಯ ಕುದಿಹದನುಮಾನಮಂ            ೩೭೦
ಪೇಳುತೈತರೆ, ಮುಂದೆ ಗೋಮತಿಯನೊಡವೆರೆವ
ವಾಲುಕೀ ವಾಹಿನಿಯ ರಮ್ಯ ಸಾಮೀಪ್ಯದಾ
ಸಾಲವನಮಂ ಬೆಳಗಿದುದು ಬಾಲಸೂರ್ಯನೋಲ್‌
ಸ್ಥಿರೆಗವತರಿಪ ರಾಮವಾಹನಂ,ವ್ಯೋಮ ಚರ
ಕಾಮ ರೂಪ ವಿಮಾನಮಾ ಪುಷ್ಪಕಂ! ಘೇ ಉಘೇ
ಘೋಷಧ್ವನಿಗೆ ಕಂಪ್ರಿಸಿತವನಿ!-ಲೆಕ್ಕಿಪರದಾರ್
ಬೆಕ್ಕಸದ ಪಕ್ಕಿದೇರಂ? ರಾಮ! ಲಕ್ಷ್ಮಣ! ಸೀತೆ!
ನೆರೆದ ಜನಮನಕನ್ಯ ಲಕ್ಷ್ಯಮಿರ್ಪುದೆ? ತನ್ನ
ಮಾನಹಾನಿಗೆ ಮುನಿದೊ ರಾಮನಿಂಗಿತವರಿತೊ
ಪಾರ್ದುದು ವಿಹಂಗಮ ವರೂಥಂ ಕುಬೇರನಂ         ೩೮೦
ಸ್ಮರಿಸಿ, ಮುನ್ನಿನ ತನ್ನ ನೆಲೆಗೆ!
ಮುಗಿದುವು ಕೋಟಿ
ಕರಕಮಲಂ; ಲೆಕ್ಕಂಗಿಡಲ್‌ ಬಾಗಿದುವು ಶಿರಂ;
ಲಕ್ಷೋಪಲಕ್ಷ ಹಸ್ತಂಗಳಿಂದುದುರಿತು ಕಣಾ
ಕುಸುಮವೃಷ್ಟಿ! ಹುಚ್ಚುಹೊಳೆ ಹರಿದುದಾನಂದವೆನೆ
ವರ್ತಿಸಿದರಾ ನಾಗರಿಕರಾಟವಿಕರಂತೆವೋಲ್‌!-
ಅದೊ ರಾಮಚಂದ್ರನದೊ ಅಲ್ಲೆ ಸೀತಾದೇವಿ!
ಅಲ್ಲೆ ಕಾಣದೊ ದೇವ ಲಕ್ಷ್ಮಣಂ! ಗುರುತಿಪುದೆ
ಕ್ಲಿಷ್ಟಮಾಯ್ತೆನಗೆ ಪದಿನಾಲ್ಕು ಬರಿಸಗಳಾಚೆ
ಕಂಡೊಂಗೆ! ಧೀರನಾರವನೊ? ವಾನರ ನೃಪಂ
ಸುಗ್ರೀವನಲ್ತೆ! ಬಳಿಯಿರ್ಪನ್‌? ವಿಭೀಷಣಂ!-  ೩೯೦
ಕೇಳ್ವವರ ಪೇಳ್ವವರ ನೋಳ್ಪಾತುರದಿ ನುರ್ಗ್ಗಿ
ಪೋಪವರ ಬರ್ಪವರ ತುಮುಲಮೇರ್ದುದು ಕಡಲ್‌
ಕಡೆಗೊಂಡವೋಲ್‌. ಮುನ್ನಮಾಳೋಚಿಸಿದ ತೆರದಿ
ನೆಗಳಲಾರೇನ್‌ ಸಮರ್ಥರೆ, ಸಿದ್ಧಿಯೊಳ್‌ ಮುಳುಗೆ
ಬುದ್ಧಿ? ಇಂತೆಯೆ ನಡವೆನಿಂತೆಯೆ ನುಡಿವೆನೆಂಬ
ಕೃತಕ ಮರ್ಯಾದೆಯನಿತುಂ ಮರೆತುದಾನಂದ
ಸಹಜವರ್ತನೆಗೆ ಶರಣಾಗಿ!
ಕಂಡುದೆ ತಡಂ
ರಾಮನಂ, ಭರತಂ ಮರಂಬಟ್ಟನೊಲ್‌ ನಿಂದು
ಚಲಿಸದಾದನ್‌. ಕಂದನಂ ಕಂಢು ಕೌಸಲ್ಯೆ
ಮುಂಬರಿಯಲೆಳಸಿಯುಂ ಬೇರೆಯಾರನೊ ನೋಡಿ     ೪೦೦
ಬೆರಗಾದಳಂತವೋಲ್‌ ಪಿಂಜರಿದು ನಿಂದಳ್‌
ಸಖೀಜನರಡರ್ಪಂ ಬಯಸಿ. ಮುನ್ನಮಿರ್ದ್ದೆರ್ದೆಯ
ಪಾಪಭಾವದ ಭಾರಮನಿತುಂ ಕಳಲ್ದವೋಲ್‌
ತನ್ನಾತ್ಮಕೊಯ್ಕನೆಯೆ ನವಪುಣ್ಯಚೇತನಂ
ಕಾಂತಿಬುಗ್ಗೆಯ ತೆರದಿ ಚಿಮ್ಮಿ ಭರತನ ತಾಯಿ,
ಕೈಕೆ, ರಾಮನ ಮಹಾ ಮಹಿಮೆಯ ವಿಕಾಸನಕೆ
ತಾನೇ ಕಾರಣಳೆಂಬ ಜನಮನಭ್ರಾಂತಿಯಿಂ
ಬಿಡುತೆಗೊಂಡಾ ಕೈಕೆ ನಡೆದಳಿತಿಶಾಂತಿಯಿಂ
ಶ್ರೀರಾಮನೆಡೆಗೆ! ಪಿಡಿದೆತ್ತಿದಳು ತನ್ನಡಿಗೆ
ಮಣಿದಾತನಂ! ನಿನ್ನ ಮೆಯ್ಯಂ ಪೆತ್ತ ತಾಯಲ್ತು,          ೪೧೦
ನಿನ್ನಾತ್ಮಮಂ ಪೆತ್ತಳಾನೆಂಬ ಪೆರ್ಮೆಯಂ
ನುಡಿಯಿಲ್ಲದೆಯೆ ನುಡಿದಳೆಂಬಂತೆ ಪರಸಿದಳ್‌
ಚಿನ್ಮಯ ಮಹಾಮೌನದಿಂ!
ತನ್ನ ತಾಯಿಯ
ವಿಚಿತ್ರ ಚಿತ್ತಸ್ಥಿತಿಗೆ ಭರತನಕಚ್ಚರಿವಡುತೆ
ಮುಂಬರಿದನೆಳ್ಚರ್ತನೋಲ್‌: ಅಪ್ರಕಟಮಾದೊಡೇನ್‌?
ಅಪುಣ್ಯರೂಪದಿ ತೋರ್ದೊಡೇನ್‌? ತಪಂ ತಪಮಲ್ತೆ!
ಭರತನೊಡನೊಡನಿತರರನಿಬರುಂ ನಡೆ ನಡೆದು
ಸಲಿಸಿದರು ತಮತಮಗೆ ತಗುವ ಮರಿಯಾದೆಯಂ
ರಘುವರಗೆ, ಮೈಥಿಲಿಗೆ, ಲಕ್ಷ್ಮಣಗೆ, ಸುಗ್ರೀವ
ಜಾಂಬವ ವಿಭೀಷಣ ನಳಾಂಗದ ದ್ವಿವಿದ ಮೇಣ್‌        ೪೨೦
ಮೈಂದ ನೀಲರ್ಗೆ. ತಾಂ ಪೂಜಿಸಿದ ಪಾದುಕೆಗಳಂ
ಪೂಜ್ಯಪಾದನ ಪದಕೆ ತೊಡಿಸಿದನು ಭರತಂ,
ಕಿರೀಟವನೆ ಚರಣತಲ ಸೇವೆಗೆ ಸಮರ್ಪಿಪೋಲ್‌.
ವಾನರ ಮಹಾಮಹಿಮರುಂ ರಾಕ್ಷಸೇಂದ್ರನುಂ
ಬಾಷ್ಟಲೋಚನರಾಗಿ ಬದ್ಧಾಂಜಲಿಗಳಾಗಿ
ಶಿರ ಬಾಗಿ ದರ್ಶಿಸಿದರಾ ಮಹದ್‌ ದೃಶ್ಯಮಂ!
ಧರಿಸಿ ಆ ಪಾದುಕೆಗಳಂ ಚರಣ ಚರನಾಗಿ
ತನ್ನಾಶ್ರಮಂ ಬೊಕ್ಕನೆನೆ ನೃಪ ಋಷಿ ತಪಸ್ವಿ
ರಾಮಭದ್ರಂ, ಭರತನ ತಪಸ್ಯೆಗಿನ್ನೊಳದೆ
ಪೇಳಧಿಕತರ ಸಿದ್ಧಿ? ಭರತಾಶ್ರಮದೊಳಂದು ೪೩೦
ವಿಶ್ರಮಿಸಿದನು ಜಾನಕೀ ಜೀವಿತೇಶ್ವರಂ
ಬಂಧು ಮಿತ್ರರ್ ವೆರಸಿ, ಮರುದಿನಮಯೋಧ್ಯಾ
ಪ್ರಯಾಣಮಂ ನಿಶ್ಚಯ್ಸಿ. ಭರತನಿಚ್ಚೆಯನರಿತ
ಶತ್ರುಘ್ನನಾಜ್ಞೆಯಿಂ ಸಾಕೇತಪುರಿಗೆಯ್ದಿದರ್
ಮಂತ್ರಿಗಳ್‌, ಗುರು ವಸಿಷ್ಠನ ನಿರೂಪದಿ ಸಮೆಯೆ
ಪಟ್ಟಾಭಿಷೇಕದ ಮಹೋತ್ಸವಕೆ ಸಕಲ ಶುಭ
ಸನ್ನಾಹಮಂ.. ಶ್ಮಶ್ರುವರ್ಧಕ ಕಮ್ಮಕಿತ್ತಲ್‌
ಸುಶೀಘ್ರರುಂ ನಿಪುಣರುಂ ಸುಖಹಸ್ತರುಮೆನಿಪ್ಪ
ಶಿಕ್ಷಿತ ಕ್ಷುರಮರ್ದಿಗಳ್‌ ಬಂದು, ರಾಮೇಚ್ಛೆಯಿಂ
ಭರತಂಗೆ ಕತ್ತರಿಸಿದರ್ ಮೊದಲ್‌ ಜಟೆಗಳಂ; ೪೪೦
ಗೆಯ್ದರ್ ಮುಖಕ್ಷೌರಮಂ, ಚಾರು ಕೂರ್ಚಂಗಳಂ
ಬಿಡಿಸಿ. ಲಕ್ಷ್ಮಣಗೆ, ವಾನರ ಮಹಾ ಮುಖ್ಯರಿಗೆ,
ಸಖ ವಿಭೀಷಣಗೆ ಮೇಣ್‌ ಕೊನೆಗೆ ತನಗುಂ ವದನ
ಸೌಂದರ್ಯ ಸಂಸ್ಕಾರಮಾಗೆ, ಪರಿಮಳ ತೈಲ
ಲೇಪನದಿ ಗಂಧೋದಕದಿ ಮಿಂದರನಿಬರುಂ,
ಕಡೆದ ರನ್ನದ ಕಾಂತಿಯಿರ್ಮಡಿಸುವಂದದಿಂ
ಪೊಳೆಯೆ ಸಹಜಾತ್ಮತೇಜಂ!
ಸೊಸೆಯನಾದರಿಸಿ
ತಣಿದರಿಲ್ಲಂದಿರುಳ್‌ ಕೈಕೆ ಕೌಸಲ್ಯಾದಿ
ದೇವಿಯರ್. ಅಕ್ಕನುಪಚಾರದಲಿ ಮರೆತುದೈ
ತನ್ನತನಮೂರ್ತಿಳೆಗೆ. ಮಾಂಡವೀ ಶ್ರುತಕೀರ್ತಿಯರ್  ೪೫೦
ಸೀತೆಯಂ ಬೆಂಬಿಡದೆ ಮತ್ತೆ ಚಿಕ್ಕವರಾಗಿ
ತಂಗೆತನದಕ್ಕರೆಯನುಕ್ಕಿಸಿದರಕ್ಕಂಗೆ
ತಂದೆ ಜನಕನ ಕಾಣುವಾಸೆಗಳುವುಕ್ಕುವೋಲ್‌!
ಮಗನ ಮನದನ್ನೆಯಂ ಸಂತವಿಟ್ಟಳಿ ತಾಯಿ
ಕೌಸಲ್ಯೆ: “ಮರುದಿನಮೆ ಪಟ್ಟಾಭಿಷೇಕೋತ್ಸವಂ!
ಬಳಿಯಟ್ಟಿ ಕರೆಸದಿರ್ಪನೆ ದಶರಥಾತ್ಮಜಂ,
ಪೇಳ್‌ ಮಗಳೆ, ಮಾವನಂ, ಮಿಥಿಳೇಂದ್ರನಂ, ಪೂಜ್ಯ
ರಾಜರ್ಷಿಯಂ, ಸೀತೆಯಂ ಪೆತ್ತ ಪುಣ್ಯಾತ್ಮನಂ?”

ಕಾಮೆಂಟ್‌ಗಳಿಲ್ಲ: