೩. ‘ಹಕ್ಕಿ ಹಾರುತಿದೆ ನೋಡಿದಿರಾ?’

‘ಹಕ್ಕಿ ಹಾರುತಿದೆ ನೋಡಿದಿರಾ?’ ಇದು ಬೇಂದ್ರೆಯವರ ಸುಪ್ರಸಿದ್ಧ ಕವನ. ೧೯೨೯ನೆಯ ಇಸವಿಯಲ್ಲಿ ಬೆಳಗಾವಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬೇಂದ್ರೆಯವರು ಈ ಕವನವನ್ನು ಹಾಡಿದರು. ಬೇಂದ್ರೆಯವರ ಉತ್ತರ ಕರ್ನಾಟಕದ ವೇಷ-ಭೂಷ, ಅವರ ಹಾವಭಾವ ಹಾಗೂ ಹಾಡುಗಾರಿಕೆಯ ಗತ್ತು ಇವುಗಳಿಂದ ನೆರೆದ ಸಭಿಕರೆಲ್ಲ ಮಂತ್ರಮುಗ್ಧರಾದರಂತೆ. ಆನಂತರ ೧೯೩೨ರಲ್ಲಿ ಪ್ರಕಟವಾದ ಅವರ ಪ್ರಥಮ ಕವನ ಸಂಕಲನ ’ಗರಿ’ಯಲ್ಲಿ ಈ ಕವನ ಸೇರ್ಪಡೆಯಾಯಿತು.

ಕವನದ ಪೂರ್ತಿಪಾಠ ಹೀಗಿದೆ:

ಇರುಳಿರುಳಳಿದು ದಿನದಿನ ಬೆಳಗೆ
ಸುತ್ತಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದಕೆ
ಎವೆ ತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ?

ಕರಿನೆರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ ಬಣ್ಣಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ?

ನೀಲಮೇಘಮಂಡಲ-ಸಮ ಬಣ್ಣ !
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ !
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ?

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ?

ಯುಗ-ಯುಗಗಳ ಹಣೆಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನೆಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ?

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ?

ಮುಟ್ಟಿದೆ ದಿಗ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ
ಬ್ರಹ್ಮಾಂಡಗಳನು ಒಡೆಯಲು ಎಂದೊ
ಬಲ್ಲರು ಯಾರಾ ಹಾಕಿದ ಹೊಂಚ
ಹಕ್ಕಿ ಹಾರುತಿದೆ ನೋಡಿದಿರಾ?


ಬೇಂದ್ರೆಯವರು ಈ ಕವನದಲ್ಲಿ ಕಾಲವನ್ನು ಹಾರುತ್ತಿರುವ ಹಕ್ಕಿಗೆ ಹೋಲಿಸಿದ್ದಾರೆ. ಈ ಕವನದ ಮೊದಲ ನುಡಿಯಲ್ಲಿ ಕಾಲಪಕ್ಷಿಯನ್ನು ಪರಿಚಯಿಸುವ ವಿಧಾನ ತುಂಬಾ ಸ್ವಾರಸ್ಯಕರವಾಗಿದೆ.
`ಇರುಳು ಅಳಿದು ದಿನವಾಗುವದು'-- ಇದು ಒಂದು ದಿನದ ಕಾಲಮಾನವನ್ನು ಸೂಚಿಸುತ್ತದೆ.
‘ಇರುಳು ಇರುಳು ಅಳಿದು ದಿನದಿನ ಬೆಳಗೆ’ ಅನ್ನುವದು ಈ ಕಾಲಮಾನದ recurrence.
ಈ ರೀತಿಯಾಗಿ ಮೊದಲನೆಯ ಸಾಲಿನ ಮೂಲಕ ಬೇಂದ್ರೆಯವರು ಒಂದು ಚಲನಶೀಲ ಕಾಲವನ್ನು ನಮ್ಮ ಕಣ್ಣೆದುರಿಗೆ ಮೂಡಿಸುತ್ತಾರೆ.

ಈಗ ಕವನದ ಮುಂದಿನ ಸಾಲನ್ನು ನೋಡಿರಿ:
‘ಸುತ್ತಮುತ್ತಲೂ ಮೇಲಕೆ ಕೆಳಗೆ’ ಎನ್ನುವ ಸಾಲು ‘ಅವಕಾಶ’ದ (space) ಮೂರು ಆಯಾಮಗಳನ್ನು (3 co-ordinates) ಬಣ್ಣಿಸುತ್ತದೆ.
ಅಂದರೆ ಈ ಕಾಲವು ‘ವಿಶ್ವವ್ಯಾಪಿ ಕಾಲ’ವಾಯಿತು !
ಕಾಲಪಕ್ಷಿಯ ಬೃಹತ್ ರೂಪವನ್ನು ಈ ರೀತಿಯಾಗಿ ಬೇಂದ್ರೆ ನಿರೂಪಿಸಿದ್ದಾರೆ.

ಈ ಕಾಲಪಕ್ಷಿಯ ಗತಿ ಎಂತಹದು?
‘ಗಾವುದ ಗಾವುದ ಗಾವುದ ಮುಂದಕೆ’!
‘ಮುಂದಕೆ’ ಎಂದು ಹೇಳುವ ಮೂಲಕ ಈ ಕಾಲಪಕ್ಷಿಯು ಕೇವಲ ಗತಿಶೀಲವಲ್ಲ, ಪ್ರ-ಗತಿಶೀಲವೂ ಹೌದು ಎಂದು ಬೇಂದ್ರೆ ಸೂಚಿಸುತ್ತಾರೆ.
ಈ ಗಾವುದ ದೂರವನ್ನು ಚಲಿಸಲು ಈ ಪಕ್ಷಿಗೆ ಬೇಕಾಗುವ ಸಮಯ ಮಾತ್ರ ‘ಎವೆ ತೆರೆದಿಕ್ಕುವ ಹೊತ್ತು’.
ಕೇವಲ ಕಣ್ಣು ಮಿಟುಕಿಸುವ ಸಮಯದಲ್ಲಿ ಈ ಕಾಲಪಕ್ಷಿ ಸುದೂರ ಗಮಿಸಬಲ್ಲದು.
ಸಮಯದ ಅತ್ಯಂತ ಚಿಕ್ಕ ಅಳತೆ ಯಾವುದು ಎಂದರೆ ‘ನಿಮಿಷ’. ಭಾರತೀಯರು ಪೂರ್ವಕಾಲದಿಂದಲೂ ಬಳಸುತ್ತಿದ್ದ ಕಾಲಮಾನ ಇದು. ‘ನಿಮಿಷ’ವನ್ನು ಅಳೆಯುವ ಬಗೆ ಹೇಗೆ? ಕಣ್ಣರೆಪ್ಪೆಯನ್ನು ಬಡಿಯುವ ಕಾಲಮಾನಕ್ಕೆ ‘ನಿಮಿಷ’ ಎನ್ನುತ್ತಾರೆ. ಆದುದರಿಂದ ‘ಎವೆ ತೆರೆದಿಕ್ಕುವ ಹೊತ್ತಿನ ಒಳಗೆ’ ಈ ಪದಪುಂಜದ ಅರ್ಥ=ನಿಮಿಷ. ಇದೇ least unit of time. ಆದುದರಿಂದ ಅತಿ ಚಿಕ್ಕ ಕಾಲಮಾನದಲ್ಲಿ ಈ ಹಕ್ಕಿ ಗಾವುದ ದೂರಕ್ಕೆ ಚಲಿಸಬಲ್ಲದು. ಕಲ್ಪನೆಯಂತೆ ಕಾಣುವ ಪದದಲ್ಲಿ ವಾಸ್ತವತೆಯನ್ನು ಹಿಡಿದಿಡುವ ಬೇಂದ್ರೆ-ಪ್ರತಿಭೆಯನ್ನು ಈ ಸಾಲಿನಲ್ಲಿ ನಾವು ಕಾಣುತ್ತೇವೆ.
(ದೇವತೆಗಳು ಕಣ್ಣು ಮುಚ್ಚುವದಿಲ್ಲ ಅಂದರೆ ಕಣ್ಣರೆಪ್ಪೆ ಬಡೆಯುವದಿಲ್ಲ ; ಆದುದರಿಂದ ಅವರು ‘ಅನಿಮೇಷ’ರು.)

ಈಗ ಈ ನುಡಿಯ ಮತ್ತೊಂದು ಆಯಾಮವನ್ನು ನೋಡೋಣ.
ವಿಶ್ವವನ್ನು ವ್ಯಾಪಿಸಿರುವ ಈ ಕಾಲಪಕ್ಷಿ ತನ್ನ ಚಲನೆಯ ಮೂಲಕ ವಿಶ್ವವನ್ನು ಅಂದರೆ ದೇಶವನ್ನು ಬದಲಾವಣೆಗೆ ಒಳಪಡಿಸುತ್ತದೆ. ಇದೇ ಮಾತನ್ನು ವಿಜ್ಞಾನಿ ಐನ್‍ಸ್ಟೈನ್‍ ‘ಕಾಲ ಮತ್ತು ದೇಶ ಇವೆರಡು ಸಾಪೇಕ್ಷವಾಗಿವೆ’ ಎನ್ನುವ ಮೂಲಕ ತಿಳಿಸಿದರು. (Relativity of space and time.)
ಶಂಕರಾಚಾರ್ಯರೂ ಇದೇ ಮಾತನ್ನು ‘ಮಾಯಾಕಲ್ಪಿತ ದೇಶ,ಕಾಲ ಕಲನಾ’ ಎಂದು philosophically ಹೇಳಿದ್ದಾರೆ (=ದೇಶ ಮತ್ತು ಕಾಲ ಇವು ಕೇವಲ ಭ್ರಮೆ.)

ಆದುದರಿಂದ ಬೇಂದ್ರೆಯವರ ಈ ಕಾಲಪಕ್ಷಿ ಕೇವಲ ಸಮಯದ ಪಕ್ಷಿ ಅಲ್ಲ. ವಿಶ್ವವನ್ನೇ ತನ್ನ ಚಲನೆಯಲ್ಲಿ ಬದಲಾಯಿಸುತ್ತಿರುವ ಬೃಹತ್ ಚೈತನ್ಯಪಕ್ಷಿ!

ಎರಡನೆಯ ನುಡಿಯಲ್ಲಿ ಬೇಂದ್ರೆಯವರು ಈ ಚೈತನ್ಯರೂಪಿ ಕಾಲಪಕ್ಷಿಯ ಭೌತಿಕ ವಿವರಗಳನ್ನು ಕೊಡುತ್ತಾರೆ:

ಕರಿನೆರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ ಬಣ್ಣ-ಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ?

ಈ ನುಡಿಯನ್ನು ಎರಡು ರೀತಿಯಲ್ಲಿ ಅರ್ಥೈಸಬಹುದು:
ಪುಚ್ಚ ಅಂದರೆ ಬಾಲ. ಇದು ಹಕ್ಕಿಯ ಹಿಂದಿರುತ್ತದೆ. ಇದು ಭೂತಕಾಲ. ಆದುದರಿಂದ ಇದರ ಬಣ್ಣ ಕರಿ.
ಈಗ ಕಣ್ಣಿಗೆ ಕಾಣುತ್ತಿರುವ , ಹೊಳೆಯುತ್ತಿರುವ ಗರಿಯ ಬಣ್ಣ ಬಿಳಿ. ಆದುದರಿಂದ ಇದು ವರ್ತಮಾನ ಕಾಲ. ನಮಗೆ ಮುಂದೆ ಕಾಣುವದು ಭವಿಷ್ಯತ್ ಕಾಲ. ಇದು ಉದಯಿಸುತ್ತಿರುವ ಸೂರ್ಯನ ಹಾಗೆ ಕೆಂಪಾಗಿ ಹಾಗೂ ಬಂಗಾರ ಬಣ್ಣದ್ದಾಗಿರುತ್ತದೆ. ಈ ಮೂರೂ ಕಾಲಗಳು ಕಾಲಪಕ್ಷಿಯ ಚಲನೆಯ ಅಂಶಗಳು.

ಎರಡನೆಯದಾಗಿ, ನಮ್ಮ ಪೃಥ್ವಿಯ ಮೇಲಿನ ಜನಾಂಗಗಳನ್ನು ಗಮನಿಸಿರಿ: ಕರಿಯ ಬಣ್ಣದ ಆಫ್ರಿಕನ್ ಜನಾಂಗ, ಬಿಳಿಯ ಬಣ್ಣದ ಕಾ^ಕೇಸಿಯನ್ ಜನಾಂಗ, ಇವೆರಡರ ನಡುವಿನ ಕೆನ್ನನ ಅಂದರೆ brownie ಜನಾಂಗ ಹಾಗೂ ಕೊನೆಯದಾಗಿ ಹಳದಿ ಬಣ್ಣದ ಅಂದರೆ ಹೊನ್ನ ಬಣ್ಣದ ಮಂಗೋಲಿಯನ್ ಜನಾಂಗ.
ಈ ಎಲ್ಲ ಜನಾಂಗಗಳನ್ನು ಈ ಕಾಲಪಕ್ಷಿ ಹೊತ್ತುಕೊಂಡು ಮುನ್ನಡೆದಿದೆ ಎಂದೂ ಅರ್ಥೈಸಬಹುದು.

ಇಂತಹ ಒಂದು ಬೃಹತ್ ಪಕ್ಷಿ ನೋಡಲು ಹೇಗೆ ಕಾಣುತ್ತಿರಬಹುದು?
ಇದರ ಹರಹು ಪೃಥ್ವಿಯನ್ನಷ್ಟೇ ಅಲ್ಲ, ನಮ್ಮ ಆಕಾಶಗಂಗೆಯನ್ನೂ (milky way) ದಾಟಿದೆ. ಬೇಂದ್ರೆ ಇದರ ಅನಂತ ವೈಶಾಲ್ಯವನ್ನು ಹೀಗೆ ಬಣ್ಣಿಸುತ್ತಾರೆ :

ನೀಲಮೇಘಮಂಡಲ-ಸಮ ಬಣ್ಣ !
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ !
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ?

ಆಕಾಶ ಅನಂತವಾದದ್ದು. ಅದರ ಬಣ್ಣ ಈ ಕಾಲಪಕ್ಷಿಯದು, ಅಂದರೆ ಕಾಲವೂ ಸಹ ಅನಂತವೇ. ಆ ಅನಂತವಾದ ಆಕಾಶಕ್ಕೆ ರೆಕ್ಕೆ ಒಡೆದರೆ ಹೇಗಿರಬೇಡ!? ಅಂತಹ ಈ ಕಾಲಪಕ್ಷಿಯು ಚಿಕ್ಕೆಗಳ ಮಾಲೆಯನ್ನು ಅಂದರೆ ಆಕಾಶಗಂಗೆಯೇ(=milky way) ಮೊದಲಾದ ವಿಶ್ವಗಳನ್ನು (=galaxies) ಸೆಕ್ಕಿಸಿಕೊಂಡಿದೆ.
ಬೇಂದ್ರೆಯವರು ‘ಸಿಕ್ಕಿಸಿಕೊಂಡಿದೆ’ ಎಂದು ಹೇಳಿಲ್ಲ . ಸೆಕ್ಕಿಸಿಕೊಂಡಿದೆ ಎಂದು ಹೇಳಿದ್ದಾರೆ. ಸೆಕ್ಕಿಸಿಕೊಳ್ಳುವದು ಅಂದರೆ ದಿಮಾಕಿನಿಂದ ಸಿಕ್ಕಿಸಿಕೊಳ್ಳುವದು.
ಈ ಕಾಲಪಕ್ಷಿಯ ಕಣ್ಣುಗಳು ಸೂರ್ಯ ಹಾಗೂ ಚಂದ್ರ ಎನ್ನುವ ಎರಡು ಪ್ರಭಾಬಿಂಬಗಳು. ಸೂರ್ಯ ಹಾಗೂ ಚಂದ್ರರನ್ನು ನಾವು ಕಾಲಗಣನೆಗೆ ಬಳಸುತ್ತೇವೆ. ಆದುದರಿಂದ ಈ ಪ್ರಭಾಬಿಂಬಗಳು ಕಾಲಪಕ್ಷಿಯ ಕಣ್ಣುಗಳು ಎಂದು ಹೇಳುವದು ಯಥಾರ್ಥವಾಗಿದೆ.
ಇಂತಹ ಅದ್ಭುತ ನೋಟದ ಈ ಕಾಲಪಕ್ಷಿಯು ಮಾಡುತ್ತಿರುವದೇನು?
ಅದನ್ನು ನಾಲ್ಕನೆಯ ನುಡಿಯಲ್ಲಿ ಬೇಂದ್ರೆಯವರು ಈ ರೀತಿಯಾಗಿ ಬಣ್ಣಿಸುತ್ತಾರೆ:

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ?

ಸಣ್ಣ ಪುಟ್ಟ ರಾಜ್ಯಗಳನ್ನು, ದೊಡ್ಡ ದೊಡ್ಡ ಸಾಮ್ರಾಜ್ಯಗಳನ್ನು ಹುಟ್ಟಿಸಿ ಬೆಳೆಯಿಸುವದೇ ಈ ಕಾಲಪಕ್ಷಿ. ಅವುಗಳ ತೆನೆ ಒಕ್ಕುವದು ಅಂದರೆ ಅವುಗಳ ಫಲಿತವನ್ನು harvest ಮಾಡುವದು ಈ ಕಾಲಪಕ್ಷಿ. ಈ ತರಹ ಬೆಳೆದು ನಿಂತ ತೆನೆಗಳನ್ನು ಮುಕ್ಕುವದೂ ಸಹ ಈ ಕಾಲಪಕ್ಷಿಯೇ! (ಸುಗ್ಗಿಯ ಸಮಯದಲ್ಲಿ ಹಕ್ಕಿಗಳು ಹೊಲದಲ್ಲಿಯ ಕಾಳುಗಳನ್ನು ಮುಕ್ಕುವದನ್ನು ನೆನಪಿಸಿಕೊಳ್ಳಿರಿ.) ಭೂಮಂಡಲವೆಲ್ಲ ಈ ಹಕ್ಕಿಯ ಆಹಾರವೇ. ಧರಣಿಮಂಡಲದಲ್ಲಿರುವ ಏಳೂ ಖಂಡಗಳನ್ನು ಈ ಹಕ್ಕಿ ತೇಲಿಸುತ್ತದೆ ಹಾಗೂ ಮುಳುಗಿಸುತ್ತದೆ. ಒಂದು ಕಾಲದಲ್ಲಿ ಏಶಿಯಾ ಖಂಡ ಎಲ್ಲಕ್ಕೂ ಮೇಲೆ ತೇಲುತ್ತಿತ್ತು,ಇದೀಗ ಯುರೋಪ ಹಾಗೂ ಅಮೇರಿಕಾ ಖಂಡಗಳು ಮೇಲೆದ್ದಿವೆ!
(ಭೌತಿಕವಾಗಿಯೂ ಸಹ ಇಡೀ ಭೂಪ್ರದೇಶವು ಮೊದಲು ಗೊಂಡವನ ಖಂಡವೆನ್ನುವ ಒಂದೇ ಭೂಮಿಯಾಗಿದ್ದು, ಅನಂತರ ತುಂಡಾಗಿ ಏಳು ಖಂಡಗಳಾದವು.)
ಈ ಖಂಡಗಳಿಗೆ ತಾವು ಸಾರ್ವಭೌಮರೆಂದುಕೊಂಡು ಬೀಗುತ್ತಿರುವವರ ನೆತ್ತಿಯನ್ನು ಕುಕ್ಕಿ ಅವರ ಅಹಂಕಾರವನ್ನು ಈ ಕಾಲಪಕ್ಷಿ ಮೆಟ್ಟಿ ನಿಂತಿದೆ.
(ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಶ್ ಸಾಮ್ರಾಟರನ್ನು ಅಣಕಿಸುವ ಈ ಸಾಲುಗಳನ್ನು ಬರೆಯಲು ಯಾವುದೇ ಕವಿಗೂ ಅಪಾರ ಧೈರ್ಯ ಬೇಕು. ಸಾಹಿತ್ಯಸಮ್ಮೇಳನದಲ್ಲಿ ಈ ಕವನವನ್ನು ಕೇಳುತ್ತಿದ್ದ ಬಿ.ಎಮ್.ಶ್ರೀಕಂಠಯ್ಯನವರು ಗಾಬರಿಗೊಂಡರೆಂದು ದಾಖಲೆಗಳಿವೆ.)

ಈ ವಿಶ್ವ, ಈ ಭೂಮಿ, ಭೂಮಿಯ ಮೇಲಿನ ಜೀವಜಂತುಗಳು ಇವೆಲ್ಲವುಗಳ ಉಗಮವಾಗಿ ಯಾವ ಕಾಲವಾಯಿತೊ? ಹೊಸ ಯುಗಕ್ಕೊಮ್ಮೆ ಆ ಯುಗದ ಹಣೆಬರಹವನ್ನು ಬರೆಯುವದು, ಹಳೆಯ ಯುಗದ ಹಣೆಬರಹವನ್ನು ಒರೆಸುವದು ಈ ಕಾಲಪಕ್ಷಿಯ ಕೆಲಸ. ಭೂಮಿಯ ಮೇಲಿನ ಶಿಲಾಯುಗ, ಧಾತುಯುಗ, ಪರಮಾಣುಯುಗ ಇವೆಲ್ಲ ಕಾಲದ ಅಧೀನವೇ.
ಆದುದರಿಂದ ಈ ಕಾಲಪಕ್ಷಿಯ ಮಹಿಮೆ ಅಪಾರ. ಅದು ಯುಗ-ಯುಗಗಳನ್ನು, ಮನ್ವಂತರಗಳನ್ನು ತನ್ನ ಆಧೀನದಲ್ಲಿಟ್ಟುಕೊಂಡಿದೆ:

ಯುಗ-ಯುಗಗಳ ಹಣೆಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನೆಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ?

ಕಾಲಪಕ್ಷಿಯ ಕೆಲಸ ಕೇವಲ ವಿನಾಶಕಾರಿಯಲ್ಲ. ಹೊಸ ಮನ್ವಂತರದ ಶುಭೋದಯವಾಗುವದು ಈ ಕಾಲಪಕ್ಷಿಯಿಂದಲೇ. ಯಾಕೆಂದರೆ ತನ್ನ ರೆಕ್ಕೆಗಳನ್ನು ಬೀಸುವ ಮೂಲಕ ಪ್ರಾಣವಾಯುವನ್ನು ಕೊಟ್ಟು ಈ ನಿರ್ಜೀವ (inanimate) ಮನ್ವಂತರಗಳನ್ನು ಚೇತನಗೆ ಒಳಪಡಿಸುವದು ಅಂದರೆ ಸಜೀವಗೊಳಿಸುವದು ಈ ಕಾಲಪಕ್ಷಿ. ನಮ್ಮ ಭೂಮಂಡಲದಲ್ಲಿ ಜರುಗಿದ ಸಾಂಸ್ಕೃತಿಕ ಬದಲಾವಣೆಗಳು, ಪುನಶ್ಚೇತನಗಳು (Renaissances) ಎಲ್ಲವೂ ಈ ಕಾಲಪಕ್ಷಿಯ ಮಹಿಮೆಯೇ! ಹೊಸ ಕಾಲದ ಎಳೆಯ ಮಕ್ಕಳಿಗೆ ಹಾರೈಸಿ ಬೆಳೆಸುವದು ಈ ಕಾಲಪಕ್ಷಿಯೇ. ಇದನ್ನೆಲ್ಲ ಪರಿವೀಕ್ಷಿಸುವ ಕಣ್ಣು ನಮಗೆ ಬೇಕು. ಅಂತಲೇ ಬೇಂದ್ರೆ ನಮ್ಮನ್ನು ಕೇಳುತ್ತಿದ್ದಾರೆ:
“ಹಕ್ಕಿ ಹಾರುತಿದೆ ನೋಡಿದಿರಾ?”

ಮಾನವ ದೃಷ್ಟಿ ತತ್ಕಾಲಕ್ಕೆ ಸೀಮಿತವಾಗಿರುತ್ತದೆ. ಆದರೆ ಕವಿಯ ನೋಟ ಕಾಲಾತೀತ, ದೇಶಾತೀತ.
ಮುಂದಿನ ನುಡಿಯಲ್ಲಿ ಬೇಂದ್ರೆಯವರು ಕಾಲಪಕ್ಷಿಯ ಲಾಘವದ ಭವಿಷ್ಯ ನುಡಿಯುತ್ತಿದ್ದಾರೆ:

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ?

ಕಾಲದ ಓಟದಲ್ಲಿ ಬೆಳ್ಳಿ ಅಂದರೆ ಶುಕ್ರಗ್ರಹವು ಮನುಷ್ಯನಿಗೆ ಕೇವಲ ಹಳ್ಳಿಯಾಗಬಹುದು, ಚಂದ್ರಲೋಕವು ಬರಿ ಊರಾಗಬಹುದು ಹಾಗೂ ಮಂಗಳಲೋಕವು ಭೂಮಿಗೆ ಅಂಗಳವಾಗಬಹುದು. ಮಾನವನಿಗೆ ಈ ಆಕಾಶಕಾಯಗಳು ಆಡಲು, ಹಾಡಲು ಹಾಗೂ ಹಾರಾಡಲು platforms ಆಗಬಹುದು!
ಮಾನವನು ಭೂಮಿಯಿಂದ ಇತರ ಗ್ರಹ, ಉಪಗ್ರಹಗಳಿಗೆ ಸಂಚರಿಸಬಹುದಾದ ದಾರ್ಶನಿಕ ಮುನ್ನೋಟ ಈ ನುಡಿಯಲ್ಲಿ ವ್ಯಕ್ತವಾಗಿದೆ.

ಕೊನೆಯ ನುಡಿಯಲ್ಲಿ ಬೇಂದ್ರೆಯವರು ಈ ಕಾಲಪಕ್ಷಿಯ ಹಾರಾಟ ಮಾನವನ ಕಲ್ಪನೆಗೆ ಮೀರಿದ್ದು ಎನ್ನುವದನ್ನು ವ್ಯಕ್ತಪಡಿಸುತ್ತಾರೆ:

ಮುಟ್ಟಿದೆ ದಿಗ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ
ಬ್ರಹ್ಮಾಂಡಗಳನು ಒಡೆಯಲು ಎಂದೊ
ಬಲ್ಲರು ಯಾರಾ ಹಾಕಿದ ಹೊಂಚ
ಹಕ್ಕಿ ಹಾರುತಿದೆ ನೋಡಿದಿರಾ?

ವಿಶ್ವಗಳು ಅನೇಕವಿರಬಹುದು. ಈ ವಿಶ್ವಗಳ ದಿಕ್ಕುಗಳು ಅನಂತವಾಗಿರಬಹುದು. ಆದರೆ ಈ ಕಾಲಪಕ್ಷಿಯು ಈ ಎಲ್ಲ ಮಂಡಲಗಳ ಅಂಚನ್ನು ಮುಟ್ಟಿದೆ. ಇಷ್ಟೇ ಅಲ್ಲ, ಈ ಅನಂತತೆಯ ಆಚೆಗೂ ಸಹ ಇದು ತನ್ನ ಚುಂಚನ್ನು ಚಾಚಿದೆ. ಅಬ್ಬಾ, ಎಂತಹ ಕಲ್ಪನೆ !
ಈ ಕಾಲಪಕ್ಷಿಯ ಮನೋಗತ ನಮಗೆ ಅರ್ಥವಾಗಬಹುದೆ? ಇದು ಅಸಾಧ್ಯ ಎನ್ನುವ ಹೊಳಹನ್ನು ‘ಬಲ್ಲರು ಯಾರಾ’ ಎನ್ನುವ ಪ್ರಶ್ನೆಯ ಮೂಲಕ ಬೇಂದ್ರೆ ವ್ಯಕ್ತಪಡಿಸುತ್ತಾರೆ.
ಬ್ರಹ್ಮಾಂಡ ಅಂದರೆ ಬ್ರಹ್ಮದೇವನು ಸೃಷ್ಟಿಸಿದ ಬೃಹತ್ ಅಂಡ. ಆ ಬ್ರಹ್ಮಸೃಷ್ಟಿಗಳನ್ನೇ ಈ ಕಾಲಪಕ್ಷಿ ಒಡೆಯಲೆಂದು ಹೊಂಚು ಹಾಕಿ ಹಾರುತ್ತಿದೆಯೆ? ಇರಬಹುದು, ಅಥವಾ ಅಂಡವು ಒಡೆದಾಗಲೇ ಹೊಸ ಸೃಷ್ಟಿ ಹೊರಗೆ ಬರುವದು ಎನ್ನುವ ಅರ್ಥವೂ ಇಲ್ಲಿ ಇರಬಹುದು.
ಇದಕ್ಕೆ ಉತ್ತರ : “ಬಲ್ಲರು ಯಾರಾ?”

ಇಂತಹ ಹಕ್ಕಿ ಹಾರುತ್ತಿರುವದನ್ನು ನೀವು ನೋಡಿದಿರಾ?
ಬಹುಶ: ಈ ಕಾಣ್ಕೆ, ಈ ನೋಟ ವರಕವಿಗೆ ಮಾತ್ರ ಸಾಧ್ಯ!

ಈ ಕವನದ ಕೆಲವು ವೈಶಿಷ್ಟ್ಯಗಳು:
ಈ ಕವನವನ್ನು ಓದಿದಾಗ ಮೂಡುವ ಭಾವನೆ ಎಂದರೆ ಬೆರಗು.
ವಿಸ್ಮಯರಸವೇ ಈ ಕವನದ ಪ್ರಧಾನ ರಸ. ಈ ರಸವನ್ನು ಬೇಂದ್ರೆಯವರು ಹೇಗೆ ಸಾಧಿಸಿದ್ದಾರೆ?
ಕವನದ ಪ್ರತಿಯೊಂದು ನುಡಿಯ ಕೊನೆಯ ಸಾಲು “ಹಕ್ಕಿ ಹಾರುತಿದೆ ನೋಡಿದಿರಾ?” ಎಂದಾಗಿರುವದನ್ನು ನೀವು ಗಮನಿಸಿರಬಹುದು. ಕವನದ ಏಳೂ ನುಡಿಗಳಲ್ಲಿ ಇದು repeat ಆಗಿದೆ. ಆಗಸದಲ್ಲಿ ಹಾರುವ ಹಕ್ಕಿಯೊಂದನ್ನು ನೋಡಿದ ಹುಡುಗನೊಬ್ಬ ಬೆರಗುಪಟ್ಟು ತನ್ನ ಗೆಳೆಯನೊಬ್ಬನಿಗೆ ಆ ಹಕ್ಕಿಯನ್ನು ತೋರಿಸುತ್ತ, ಬಣ್ಣಿಸುತ್ತ, ಪದೇ ಪದೇ ಉದ್ಗರಿಸುವ ಪ್ರಶ್ನೆಯಂತಿದೆ ಈ ಸಾಲು. ಆ ಹುಡುಗನ ಬೆರಗು ಅವನ ಗೆಳೆಯನಿಗೂ ಸಹ ಹಬ್ಬುತ್ತದೆ.
ಇದು ಬೇಂದ್ರೆಯವರು ವಿಸ್ಮಯರಸವನ್ನು ಈ ಕವನದಲ್ಲಿ ಸಾಧಿಸಿದ ವಿಧಾನ.

ಕವನಕ್ಕೆ ಅವಶ್ಯವಾದ ಛಂದಸ್ಸನ್ನು ಆಯ್ಕೆ ಮಾಡುವದು, ಕವನದಲ್ಲಿ ಲಯವನ್ನು ಸಾಧಿಸುವದು ಇವು ಬೇಂದ್ರೆಯವರ ಸಹಜಸಿದ್ಧಿಗಳು. ಈ ಕವನದ ನುಡಿಗಳಲ್ಲಿ ಐದು ಸಾಲುಗಳಿವೆ. ಕವನದಲ್ಲಿ ನಾಲ್ಕು ಸಾಲುಗಳಿರುವದು ಸಹಜ. ದಾಸರ ಹಾಡುಗಳಿಂದ ಹಿಡಿದು, ನವೋದಯದ ಭಾವಗೀತೆಗಳವರೆಗೆ, ಕನ್ನಡದ ಕವನಗಳು ಬಹುತೇಕವಾಗಿ ಚೌಪದಿಗಳೇ ಆಗಿವೆ. ನಡುಗನ್ನಡದ ಕವಿಗಳು ಷಟ್ಪದಿಗಳನ್ನು ರಚಿಸಿದ್ದಾರೆ ನಿಜ, ಆದರೆ ಅವೂ ಸಹ ಚೌಪದಿಗಳೇ. ಉದಾಹರಣೆಗೆ ಚಾಮರಸನ ಪ್ರಭುಲಿಂಗಲೀಲೆಯ ಈ ಪದ್ಯವನ್ನು ಗಮನಿಸಿರಿ:

ಹಿಡಿಹಿಡಿದುಕೊಂಡರ್ತಿಯಲಿ ಬೆಂ-
ಬಿಡದೆ ಶಿಕ್ಷಾಚಾರ್ಯತನದಲಿ
ಜಡಿದು, ಜಂಕಿಸಿ, ಮುದ್ದುತನ ಮಿಗೆ ಮಾಯೆ ತನ್ನಂತೆ|
ನಡೆಯಕಲಿಸಿದಳಂಚೆವಿಂಡಿಗೆ
ನುಡಿಯಕಲಿಸಿದರಗಿಳಿಗೆ
ಸರವಿಡಲು ಕಲಿಸಿದಳಾಕೆ ತನ್ನರಮನೆಯ ಕೋಗಿಲೆಗೆ||

ಭಾಮಿನೀಷಟ್ಪದಿಯ ಈ ನುಡಿಯನ್ನು ಹೀಗೂ ಬರೆಯಬಹುದು:
“ ಹಿಡಿಹಿಡಿದುಕೊಂಡರ್ತಿಯಲಿ, ಬೆಂಬಿಡದೆ ಶಿಕ್ಷಾಚಾರ್ಯತನದಲಿ
ಜಡಿದು ಜಂಕಿಸಿ, ಮುದ್ದುತನ ಮಿಗೆ ಮಾಯೆ ತನ್ನಂತೆ|
ನಡೆಯಕಲಿಸಿದಳಂಚೆವಿಂಡಿಗೆ, ನುಡಿಯಕಲಿಸಿದರಗಿಳಿಗೆ
ಸರವಿಡಲು ಕಲಿಸಿದಳಾಕೆ ತನ್ನರಮನೆಯ ಕೋಗಿಲೆಗೆ ”||
ಇದೀಗ ಚೌಪದಿಯಾಯಿತು!

ಹೀಗಿರುವಾಗ, ಬೇಂದ್ರೆಯವರು ಕವನವನ್ನು ಚೌಪದಿಯನ್ನಾಗಿ ಬರೆಯದೆ, ಪ್ರತಿಯೊಂದು ನುಡಿಗೂ ಐದನೆಯ ಸಾಲೊಂದನ್ನು ಜೋಡಿಸಿದ್ದಾರೆ. ಐದನೆಯ ಸಾಲಿನಲ್ಲಿ ವಿಸ್ಮಯವನ್ನು ಸೂಚಿಸುವ Recurring Lineಅನ್ನು ಇಟ್ಟಿದ್ದಾರೆ.
ಹೀಗೆ ಮಾಡುವಾಗ ಕಾವ್ಯದ ಲಯವು ಕೈತಪ್ಪಿ ಹೋಗಬೇಕು. ಆದರೆ ಏಳು ನುಡಿಗಳ ಈ ಕವನದಲ್ಲಿ ಮೊದಲ ಸಾಲಿನಿಂದ ಕೊನೆಯ ಸಾಲಿನವರೆಗೂ ಕಾವ್ಯದಲಯವು ಸಮಪ್ರವಾಹದಲ್ಲಿ ಹರಿದಿದೆ.

“ಪಾತರಗಿತ್ತಿ ಪಕ್ಕ”ದಲ್ಲಿ ಪುಟ್ಟ ಸಾಲುಗಳ ಮೂಲಕ, ಎರಡೇ ಸಾಲುಗಳ ನುಡಿಯ ಮೂಲಕ, ದೀರ್ಘವಾಗಿರುವ ಇಡೀ ಕವನವನ್ನೇ ಚಿಕ್ಕ ಚಿಟ್ಟೆಯನ್ನಾಗಿ ಪರಿವರ್ತಿಸಿದ ಕವಿ, ಇಲ್ಲಿ ಚೌಪದಿಯ ಬಂಧವನ್ನು ಕಿತ್ತೊಗೆದು, ಕಾವ್ಯದಲಯವನ್ನು ಹಿಡಿತದಲ್ಲಿ ಇಟ್ಟುಕೊಂಡೇ ಕಾಲಪಕ್ಷಿಯ ವಿಶಾಲತೆಯನ್ನು ಓದುಗನ ಅನುಭವಕ್ಕೆ ತರುತ್ತಾರೆ.

ಇನ್ನು ಬೇಂದ್ರೆಯವರ ಕವನಗಳ ಇತರ ಲಕ್ಷಣಗಳು ಈ ಕವನದಲ್ಲೂ ಕಾಣುತ್ತವೆ.
ವಾಸ್ತವತೆಯನ್ನು ಚಮತ್ಕಾರಿಕವಾಗಿ ಬಳಸುವ ಅವರ ಪ್ರತಿಭೆಯನ್ನು ಇಲ್ಲೂ ಕಾಣಬಹುದು. ಉದಾಹರಣೆಗೆ ‘ಎವೆ ತೆರೆದಿಕ್ಕುವ ಹೊತ್ತಿನ ಒಳಗೆ’ ಎನ್ನುವಾಗಿನ ಕಾಲಮಾನದ ವಾಸ್ತವತೆಯನ್ನು ಗಮನಿಸಬಹುದು.

ಬೇಂದ್ರೆಯವರ ಕವನಗಳಲ್ಲಿ ಬರುವ ಪ್ರತೀಕಗಳು ಸಂಕೀರ್ಣವಾಗಿರುತ್ತವೆ. ಕಾಲಪಕ್ಷಿಯ ಪುಚ್ಚ ಹಾಗೂ ಗರಿಗಳ ಪ್ರತೀಕವನ್ನು ಉದಾಹರಣೆಯಾಗಿ ಗಮನಿಸಬಹುದು.

ಬೇಂದ್ರೆಯವರ ಕಲ್ಪನೆ ಅಗಾಧವಾದದ್ದು. ಕಾಲಪಕ್ಷಿಯ ವರ್ಣನೆ, ಅದರ ಆಹಾರ,ಅದರ ಕಾರ್ಯಸೂಚಿಯನ್ನು ಬೇಂದ್ರೆಯವರು ಹೆಣೆದ ಪರಿಯನ್ನು ಗಮನಿಸಿದರೆ, ಅವರ ಕಲ್ಪನಾಸಾಮರ್ಥ್ಯದ ಅರಿವಾಗುವದು. ಇಂತಹ ಅಪಾರ ಕಲ್ಪನೆಯನ್ನು systematic ಆಗಿ ಹೆಣೆಯುತ್ತ, ಕವನದ focus ಅನ್ನು ಕಾಯ್ದುಕೊಂಡು ಹೋಗುವದು ಪ್ರತಿಭಾವಂತ ಕವಿಗೇ ಸಾಧ್ಯ.

ಇಷ್ಟೆಲ್ಲ ಗುಣಗಳಿದ್ದ ಈ ಕವನದಲ್ಲಿ ದೋಷಗಳೂ ಇವೆ.
ಓದುಗನಲ್ಲಿ ಕಾಲಪಕ್ಷಿಯ ಬಗೆಗೆ ಬೆರಗು ಹುಟ್ಟುತ್ತದೆಯೇ ಹೊರತು, ಕಾಲಪಕ್ಷಿಯ ಪ್ರಧಾನಗುಣವಾದ powerಅನ್ನು ಆತ ಅನುಭವಿಸುವದಿಲ್ಲ. ಕಾಲಪಕ್ಷಿಯ powerಅನ್ನು ತಿಳಿಸಲು, ಬೇಂದ್ರೆ ಮೂರು-ನಾಲ್ಕು ನುಡಿಗಳನ್ನು ಬರೆದಿದ್ದಾರೆ. ಆದರೆ ಈ ಸಾಲುಗಳು ಕೇವಲ ವಾಚ್ಯವಾಗಿವೆ. ಕಾಲಪಕ್ಷಿಯ ಶಕ್ತಿ ಓದುಗನ ಅನುಭವಕ್ಕೆ ಬರುವದಿಲ್ಲ.

ಶಂಕರಾಚಾರ್ಯರು ತಮ್ಮ ಸ್ತೋತ್ರವೊಂದರಲ್ಲಿ ಕಾಲದ ಮಹಿಮೆಯನ್ನು ಹೀಗೆ ಬಣ್ಣಿಸಿದ್ದಾರೆ:
“ಕಾಲೋ ಜಗದ್ ಭಕ್ಷಕ:” (=Time swallows universes.)
ಈ ಒಂದು ಸಾಲಿನಲ್ಲಿ ಅನುಭವಕ್ಕೆ ಬರುವ ಕಾಲದ ಶಕ್ತಿಯು, ಬೇಂದ್ರೆಯವರ ೩೫ ಸಾಲುಗಳಲ್ಲಿ ಬರುವದಿಲ್ಲವೆನ್ನುವದು ಕವನದ ಕಳಾಹೀನತೆಯ ನಿದರ್ಶನವಾಗಿದೆ.

ಕಾಮೆಂಟ್‌ಗಳಿಲ್ಲ: