೮. ಚಳಿಯಾಕೆ

ಸೀಗೆ ಹುಣ್ಣಿವೆ ಮುಂದೆ
ಸೋಗಿನ ಚಂದ್ರಮ
ಸಾಗಿ ಬರುವೊಲು ಬರುವ ಚಳಿಯಾಕೆ.
ಹೊನ್ನ ಸೇವಂತಿಗೆಯ
ಹೆರಳು ಬಂಗಾರದ
ಬೆಳ್ಳಿ ಸೇವಂತಿಗೆಯ ಬಳಿಯಾಕೆ.


ಮುಗಿಲಲ್ಲಾಡುವ
ಬಾವಿಲಿ ಮಲ್ಲಿಗೆ
ಕಿವಿಗೊಪ್ಪು ಓಲೆಕೊಪ್ಪು ಚಳತುಂಬ
ಹೊಳೆಹೊಂಡದುಸಿರನ್ನೆ
ನಯವಾಗಿ ನೆಯ್ದಂಥ
ಮಂಜಿನ ಮೇಲ್ಸೆರಗು ಮೈತುಂಬ.


ಹೊಂಗಡಲು ಹೊಯ್ದಾಡಿ-
ದೊಲು ನೆಲ್ಲು ತಲೆದೂಗೆ,
ಅದರಲ್ಲಿ ಬಾ ಸುಮ್ಮನೀಸಾಡಿ.
ತೆನೆಹಾಲು ದಕ್ಕಲಿ
ಕಕ್ಕಿಸಬೇಡದನು
ನಿನ್ನ ನಂಜಿನ ಸೆರಗ ಬೀಸಾಡಿ.


ಕಣ್ಣಿಗೆ ಕಾಣದೆ
ಮೈಮುಟ್ಟಿ ತುಟಿಮುಟ್ಟಿ
ಮಿಸುಕದೆ ಮುಸುಕಿಗೆ ಹೋಗುವಾಕೆ.
ಅಡಿಗೊಮ್ಮೆ ನಡುನಡುಗಿ
ಇರುಳ ಬೆಳದಿಂಗಳಕೆ
ಬಿಳಿಮೋಡ ನಗುವಂತೆ ನಗುವಾಕೆ.


ಉಸುರುಸಿರಿಗೆ ಮರುಕ
ಹೆಜ್ಜೆಹೆಜ್ಜೆಗೆ ಬೆಡಗು
ಮೆಲ್ಲಗೆ ಮುಂಗಯ್ಯ ಹಿಡಿವಾಕೆ.
ಯಾವ ಜಾತಿಯ ಹೆಣ್ಣೊ
ಹಾವ ಭಾವವೆ ಬೇರೆ
ಅಪ್ಪಿದ ಅಪ್ಪಿಗೆ ಬಿಡದಾಕೆ.
………………………………………………………...........................................


ಈ ಕವನದ ಹಿನ್ನೆಲೆ ಹೀಗಿದೆ:
ಭಾದ್ರಪದ ಮಾಸದ ಕೊನೆಗೆ ವರ್ಷಾ ಋತು ಮುಗಿದು, ಶರತ್ ಋತುವಿನ ಮೊದಲ ಮಾಸವಾದ ಆಶ್ವೀನ ಮಾಸ ಪ್ರಾರಂಭವಾಗುತ್ತದೆ. ಮಳೆಗಾಲದ ಕಾರ್ಮೋಡಗಳು ಕರಗಿ ಹೋಗಿರುತ್ತವೆ. ಅಲ್ಲೊಂದು ಇಲ್ಲೊಂದು ಬಿಳಿಯ ಮೋಡಗಳ ತುಣುಕುಗಳು ಕಾಣುತ್ತಿರುತ್ತವೆ. ಹಗಲು ಕಡಿಮೆಯಾಗುತ್ತ, ರಾತ್ರಿಯು ದೀರ್ಘವಾಗುತ್ತಿರುತ್ತದೆ. ಮುಂಗಾರು ಪೈರಿನಲ್ಲಿ ತೆನೆಗಳು ಮೂಡಿರುತ್ತವೆ. ಕೆರೆ, ಬಾವಿಗಳು ತುಂಬಿಕೊಂಡಿರುತ್ತವೆ.


ಇದು ಎಲ್ಲರಿಗೂ ಉಲ್ಲಾಸದ ಕಾಲ. ಆದುದರಿಂದ ಈ ಮಾಸದ ಮೊದಲ ದಿನದಿಂದಲೇ ಹಬ್ಬಗಳು ಪ್ರಾರಂಭವಾಗುತ್ತವೆ. ಅಷ್ಟಮಿ ತಿಥಿಯಂದು ದುರ್ಗಾಪೂಜೆ, ಮಹಾನವಮಿಯಂದು ಬನ್ನೀಪೂಜೆ, ವಿಜಯದಶಮಿಯಂದು ಬನ್ನಿ-ಬಂಗಾರದ ವಿನಿಮಯ!


ಸೀಗೆ ಹುಣ್ಣಿವೆಯ ದಿವಸ ‘ಚರಗ’ ಚೆಲ್ಲುತ್ತಾರೆ; ಅಂದು ರಾತ್ರಿ ‘ಕೋಜಾಗರಿ’, ಅಂದರೆ ಬೆಳದಿಂಗಳ ಊಟ! ಬೇಂದ್ರೆಯವರ ಕಾಲದ ಹಳ್ಳಿಗಳಲ್ಲಿ ಹಾಗು ಅನೇಕ ಊರುಗಳಲ್ಲಿ ವಿದ್ಯುತ್ ದೀಪ ಇರುತ್ತಿರಲಿಲ್ಲ. ಕುಟುಂಬದ ಸದಸ್ಯರೆಲ್ಲ ರಾತ್ರಿಯ ಊಟವನ್ನು ಮುಗಿಸಿದ ನಂತರ, ಪ್ರಶಾಂತ ವಾತಾವರಣದಲ್ಲಿ ಮನೆಯ ಅಂಗಳದಲ್ಲಿ ಹರಟೆ ಹೊಡೆಯುತ್ತ ಕೂತುಕೊಂಡಿರುತ್ತಿದ್ದರು. ಹುಣ್ಣಿವೆಯ ಬೆಳದಿಂಗಳ ಸೊಬಗನ್ನು ಸವಿಯುತ್ತ , ಚಳಿಯಲ್ಲಿ ನಡುಗುತ್ತ, ಪ್ರಕೃತಿಯಲ್ಲಿ ಸಮರಸರಾಗಿ ಹೋಗುವ ಪರಿ ಇದು. ಇಂತಹ ಸೊಬಗನ್ನು ಬೇಂದ್ರೆಯವರು ಬಣ್ಣಿಸುವದು ಹೀಗೆ:


ಸೀಗೆ ಹುಣ್ಣಿವೆ ಮುಂದೆ
ಸೋಗಿನ ಚಂದ್ರಮ
ಸಾಗಿ ಬರುವೊಲು ಬರುವ ಚಳಿಯಾಕೆ.
ಹೊನ್ನ ಸೇವಂತಿಗೆಯ
ಹೆರಳು ಬಂಗಾರದ
ಬೆಳ್ಳಿ ಸೇವಂತಿಗೆಯ ಬಳಿಯಾಕೆ.


ಬೇಂದ್ರೆಯವರ ಕವನ ‘ಸೋಗಿನ ಚಂದ್ರಮ’ನಿಂದ ಪ್ರಾರಂಭವಾಗುತ್ತದೆ. ಏಕೆಂದರೆ ಇಡೀ ವಾತಾವರಣವೇ ಸೋಗಿನಿಂದ ತುಂಬಿದೆ. ಹರಟೆ ಹೊಡೆಯುವ ದೊಡ್ಡವರ ಸೋಗು ಒಂದು ರೀತಿಯದಾದರೆ, ಕಳ್ಳಾಟದ ಹುಡುಗರ ಸೋಗು ಒಂದು ರೀತಿಯದು. ಇದಕ್ಕೆಲ್ಲ ಪ್ರೇರಣೆ ನೀಡುವ ಚಂದ್ರನಂತೂ ಸೋಗಿನ ಪ್ರಮುಖ ಆಟಗಾರನಾಗಿದ್ದಾನೆ.


ಆಶ್ವೀನ ಮಾಸದಲ್ಲಿ ಬಿಳಿಯ ಮೋಡಗಳ ತುಣುಕುಗಳು ಅಲ್ಲಲ್ಲಿ ಸಾಗುತ್ತಿರುತ್ತವೆ. ಇವುಗಳ ನಡುವಿನ ಅಂತರದಲ್ಲಿ, ಸೀಗೆ ಹುಣ್ಣಿವೆಯ ಪೂರ್ಣಚಂದ್ರನು ಒಮ್ಮೆ ಪ್ರಕಾಶಿಸುವದು, ಒಮ್ಮೆ ಕಣ್ಮರೆಯಾಗುವದು ನಡೆದಿರುತ್ತದೆ. ಇದೇ ಚಂದ್ರನ ಕಣ್ಣುಮುಚ್ಚಾಲೆಯಾಟ ಅಂದರೆ ಸೋಗಿನಾಟ! ಬೇಂದ್ರೆಯವರ ಚಳಿಯಾಕೆಯೂ ಸಹ ಚಂದ್ರಮನ ಸೋಗಿನಾಟಕ್ಕೆ ತಕ್ಕ ಕಳ್ಳಹೆಜ್ಜೆ ಇಡುತ್ತ ಮೆಲ್ಲಮೆಲ್ಲನೆ ಎಲ್ಲವನ್ನೂ ಆವರಿಸುತ್ತಿದ್ದಾಳೆ. ಚಂದ್ರನನ್ನು ಹಾಗು ಚಳಿಯನ್ನು ಒಟ್ಟಾರೆಯಾಗಿ ನಿರೂಪಿಸುವ ವರಕವಿಯ ಕುಶಲತೆಯನ್ನು ಇಲ್ಲಿ ಕಾಣಬಹುದು. ಚಂದ್ರ, ಚಳಿಯಾಕೆ, ಪ್ರಕೃತಿ ಹಾಗು ಮಾನವರು ಇಲ್ಲಿ ಒಂದಾಗಿ ಬೆರತಿದ್ದಾರೆ.

ಪ್ರಕೃತಿಯ ಚೆಲುವನ್ನು ಆಸ್ವಾದಿಸುತ್ತ ಕುಳಿತ ಬೇಂದ್ರೆಯವರು, ಆ ಚೆಲುವನ್ನೆಲ್ಲ ತಮ್ಮ ಚಳಿಯಾಕೆಗೆ ತೊಡಿಸದೆ ಇರಲು ಸಾಧ್ಯವೆ? ವರಕವಿಯ ಕಣ್ಣಿಗೆ ಚಂದ್ರ ಹಾಗು ತಾರೆಗಳು ತಮ್ಮ ಚಳಿಯಾಕೆಯ ಆಭೂಷಣಗಳಾಗಿ ಕಾಣುತ್ತವೆ. ಅಂತಲೇ ಇವಳು ‘ಹೊನ್ನ ಸೇವಂತಿಗೆ’ ಹಾಗು ‘ಹೆರಳು ಬಂಗಾರ’ ಎನ್ನುವ ಒಡವೆಗಳನ್ನು ಧರಿಸಿದ್ದಾಳೆ. ಹೆಣ್ಣುಮಕ್ಕಳು ಹೊನ್ನ ಸೇವಂತಿಗೆಯನ್ನು ತುರುಬಿನಲ್ಲಿ ಧರಿಸುತ್ತಾರೆ ಹಾಗು ಹೆರಳು ಬಂಗಾರವನ್ನು ಜಡೆಯಲ್ಲಿ ಸಿಕ್ಕಿಸಿಕೊಳ್ಳುತ್ತಾರೆ. ಈ ಚಳಿಯಾಕೆಗೆ ನಸುಹಳದಿ ಬಣ್ಣದ ದುಂಡು ಚಂದ್ರನೇ ಹೊನ್ನಸೇವಂತಿಗೆ ಹಾಗು ಅಲ್ಲಲ್ಲಿ ಮಿನುಗುತ್ತಿರುವ ಚಿಕ್ಕೆಗಳೇ ಹೆರಳುಬಂಗಾರ. ಕೆಲವೊಮ್ಮೆ ಚಂದ್ರನ ಸುತ್ತಲೂ ಕಟ್ಟಬಹುದಾದ ‘ಕೆರೆ’ಯೇ ಇವಳ ಬೆಳ್ಳಿಸೇವಂತಿಗೆಯ ಕೈಬಳೆ!


ಇಷ್ಟಾದರೆ ಸಾಕೆ?
ಬೇಂದ್ರೆಯವರು ಚಳಿಯಾಕೆಯ ಕರ್ಣಾಭರಣಗಳ ಹಾಗು ಉಡುಗೆಯ ವರ್ಣನೆಯನ್ನು ಎರಡನೆಯ ನುಡಿಯಲ್ಲಿಯೂ ಮುಂದುವರೆಸುತ್ತಾರೆ. ಈ ರೀತಿಯಾಗಿ ಚಳಿಯ ಮಾನುಷೀಕರಣ ಮಾಡುತ್ತ, ಚಂದ್ರತಾರೆಗಳನ್ನು ಆಭರಣಗಳನ್ನಾಗಿ ಮಾಡುವದರಿಂದ, ಇವೆರಡನ್ನೂ ಒಟ್ಟಾಗಿ ವರ್ಣಿಸುವದು ಸುಲಭವಾಗುತ್ತದೆ. ಇದೊಂದು ಸಾಹಿತ್ಯಕೌಶಲ್ಯ.


ಮುಗಿಲಲ್ಲಾಡುವ
ಬಾವಿಲಿ ಮಲ್ಲಿಗೆ
ಕಿವಿಗೊಪ್ಪು ಓಲೆಕೊಪ್ಪು ಚಳತುಂಬ
ಹೊಳೆಹೊಂಡದುಸಿರನ್ನೆ
ನಯವಾಗಿ ನೆಯ್ದಂಥ
ಮಂಜಿನ ಮೇಲ್ಸೆರಗು ಮೈತುಂಬ.


ಬಿಳಿಯ ತುಂಡುಮೋಡಗಳು ಕೆಳಗೆ ಚಲಿಸುತ್ತಿದ್ದರೆ, ಚಂದ್ರ ಹಾಗು ಚಿಕ್ಕೆಗಳು ಆ ಮೋಡಗಳ ಮೇಲ್ಭಾಗದಲ್ಲಿ ಕಾಣಿಸುತ್ತವೆ. ಇದರಿಂದಾಗಿ ಆಕಾಶವು ತಲೆಕೆಳಗಾದ ‘ಬಾವಿ’ಯಂತೆ ಕಾಣುವದು! ಮೋಡಗಳ ಚಲನೆಯಿಂದಾಗಿ, ಈ ಬಾವಿ ಅಲ್ಲಾಡಿದಂತೆ ತೋರುವದು. ಈ ಅಲ್ಲಾಡುತ್ತಿರುವ ಬಾವಿಯಲ್ಲಿಯ ಮಲ್ಲಿಗೆ ಹೂವುಗಳನ್ನು ಅಂದರೆ ಚಿಕ್ಕಿಗಳನ್ನು ಧರಿಸಿದ್ದಾಳೆ ನಮ್ಮ ಚಳಿಯಾಕೆ! ಈ ಆಕಾಶಮಲ್ಲಿಗೆಗಳೆಲ್ಲ ಅವಳಿಗೆ ಓಲೆಕೊಪ್ಪು ಹಾಗು ಚಳತುಂಬ ಎನ್ನುವ ಕರ್ಣಭೂಷಣಗಳಾಗಿವೆ. ಇನ್ನು ಅವಳು ಮೈತುಂಬ ಹೊದ್ದುಕೊಂಡಂತಹ ಮೇಲ್ಸೆರಗು ಎಂತಹದು?


ತುಂಬಿತುಳುಕುತ್ತಿರುವ ಹೊಳೆ ಹಾಗು ಹೊಂಡಗಳ ನೀರು ಬಾಷ್ಪೀಭವನವಾಗುವದನ್ನು ಬೇಂದ್ರೆಯವರು ಹೊಳೆ,ಹೊಂಡಗಳ ‘ಉಸಿರು’ ಎಂದು ಬಣ್ಣಿಸುತ್ತಾರೆ. ಈ ‘ಉಸಿರ’ನ್ನೇ ನಯವಾಗಿ ನೇಯ್ದಾಗ ಅದು ಮಂಜಾಗುತ್ತದೆ. ಅದೇ ಚಳಿಯಾಕೆಯು ಹೊದ್ದುಕೊಂಡ ತೆಳ್ಳನೆಯ ಮೇಲ್ಸೆರಗು. ವಾಸ್ತವತೆಯನ್ನೇ ಚಮತ್ಕಾರದ ಕಲ್ಪನೆಯನ್ನಾಗಿ ಮಾರ್ಪಡಿಸುವ ಬೇಂದ್ರೆಪ್ರತಿಭೆಯ ಉದಾಹರಣೆ ಇದು!


ಇಲ್ಲಿ ಮತ್ತೊಂದು ಚಮತ್ಕಾರವನ್ನು ಗಮನಿಸಬೇಕು. ಚಳಿಯಾಕೆ ತೊಟ್ಟ ಆಭರಣಗಳು ಆಕಾಶದಲ್ಲಿದ್ದರೆ, ಅವಳು ಉಟ್ಟ ಉಡುಪು ಭೂಮಿಯ ಕೊಡುಗೆ. ಈ ರೀತಿಯಾಗಿ ಅವಳು ಭೂಮಿ ಹಾಗು ಆಕಾಶಗಳನ್ನು ವ್ಯಾಪಿಸಿದ್ದಾಳೆ.


ಮೂರನೆಯ ನುಡಿ ಹೀಗಿದೆ:


ಹೊಂಗಡಲು ಹೊಯ್ದಾಡಿ-
ದೊಲು ನೆಲ್ಲು ತಲೆದೂಗೆ,
ಅದರಲ್ಲಿ ಬಾ ಸುಮ್ಮನೀಸಾಡಿ.
ತೆನೆಹಾಲು ದಕ್ಕಲಿ
ಕಕ್ಕಿಸಬೇಡದನು
ನಿನ್ನ ನಂಜಿನ ಸೆರಗ ಬೀಸಾಡಿ.


ಇಂತಹ ಮಂಜಿನ ಉಡುಗೆಯನ್ನು ಉಟ್ಟ ಚಳಿಯಾಕೆ ಬಿರುಸಾಗಿ ಬಂದರೆ, ಭೂಮಿಯ ಮೇಲಿನ ಬದುಕು ಏನಾಗಬೇಡ?
ಭತ್ತದ ಪೈರು ಬೆಳೆದು ನಿಂತಿರುವ ಕಾಲವಿದು. ಸಾಲುಸಾಲಾಗಿ ಹಬ್ಬಿರುವ ಇದರ ತೆನೆಗಳು, ಬೆಳದಿಂಗಳಿನಲ್ಲಿ ಬಂಗಾರದ ಕಡಲಿನ ತೆರೆಗಳಂತೆ ಶೋಭಿಸುತ್ತವೆ. ಕಡಲ ತೆರೆಗಳು ಹೊಯ್ದಾಡಿದಂತೆ ಇವು ಗಾಳಿಗೆ ತಲೆದೂಗುತ್ತಲಿವೆ! ಭತ್ತದ ಈ ಕಡಲಿನಲ್ಲಿ ಚಳಿಯಾಕೆ ತನ್ನ ನಂಜಿನ ಸೆರಗಾದ ಮಂಜನ್ನು ಬೀಸಾಡಿದರೆ, ತೆನೆಹಾಲೆಲ್ಲ ಕಕ್ಕಿ ಹೋದೀತು. ಆದುದರಿಂದ, ‘ಈ ಹೊಂಗಡಲಿನಲ್ಲಿ ಸಾವಕಾಶವಾಗಿ ಈಜಿದಂತೆ ಬಾ’, ಎಂದು ಬೇಂದ್ರೆಯವರು ಚಳಿಯಾಕೆಯನ್ನು ಪ್ರಾರ್ಥಿಸುತ್ತಾರೆ.
(ಸೀಗೆ ಹುಣ್ಣಿವೆಯ ಹಗಲಿನಲ್ಲಿ ರೈತರೆಲ್ಲ ತಮ್ಮ ಹೊಲಗಳಲ್ಲಿ ‘ಚರಗ ಚೆಲ್ಲಿ’ ಬರುವದರ ಕಾರಣವೂ ಇದೇ ಆಗಿದೆ. ನಿಸರ್ಗದ ಚೈತನ್ಯಗಳು ಬೆಳೆದು ನಿಂತ ಪೈರನ್ನು ರಕ್ಷಿಸಲಿ ಎಂದು ಪ್ರಾರ್ಥಿಸಿ, ‘ಭೂತಬಲಿ’ಯನ್ನು ನೀಡುವದರ ಸಂಕೇತವಿದು.)


ನಾಲ್ಕನೆಯ ನುಡಿ:


ಕಣ್ಣಿಗೆ ಕಾಣದೆ
ಮೈಮುಟ್ಟಿ ತುಟಿಮುಟ್ಟಿ
ಮಿಸುಕದೆ ಮುಸುಕಿಗೆ ಹೋಗುವಾಕೆ.
ಅಡಿಗೊಮ್ಮೆ ನಡುನಡುಗಿ
ಇರುಳ ಬೆಳದಿಂಗಳಕೆ
ಬಿಳಿಮೋಡ ನಗುವಂತೆ ನಗುವಾಕೆ.


ಈ ಚಳಿಯಾಕೆ ಬಲು ಚಾಲಾಕಿ ಹೆಣ್ಣು! ನಿಮ್ಮ ಕಣ್ಣಿಗೆ ಬೀಳದೆಯೆ, ನಿಮ್ಮ ಮೈ ಮುಟ್ಟುತ್ತಾಳೆ. ಆಗ ನಿಮ್ಮ ಮೈ ರೋಮಾಂಚನಗೊಳ್ಳುತ್ತದೆ. ನಿಮ್ಮ ತುಟಿಗೆ ಅವಳು ಸೋಂಕಿದರೆ, ನಿಮ್ಮ ಬಾಯಿ ‘ಅಹಹ’ ಎಂದು ನಡುಗುವದು! ತಾನು ಸ್ವಲ್ಪವೂ ಮಿಸುಕದೆ, ನಿಮಗೆ ತಿಳಿಯಲಾರದಂತೆ ನೀವು ಹೊತ್ತುಕೊಂಡ ಹೊದ್ದಿಕೆಯಲ್ಲಿ ಈ ಅದೃಶ್ಯವನಿತೆ ಸೇರಿಕೊಳ್ಳುತ್ತಾಳೆ! ನೀವು ಚಳಿಯಾಯಿತೆಂದು ನಡುಗುತ್ತ, ಕಾಲು ಮಡಚಿಕೊಂಡು ಮುದ್ದೆಯಾಗುತ್ತೀರಿ. ಆಗ ಈ ಚಳಿಯಾಕೆ ನಗುತ್ತಾಳೆ. ಅವಳ ನಗುವು ಎಷ್ಟು ಚೆಲುವಾಗಿದೆ ಎನ್ನುತ್ತೀರಾ? ಹುಣ್ಣಿವೆಯ ರಾತ್ರಿಯ ಬೆಳದಿಂಗಳನ್ನು ಹೀರಿಕೊಂಡು, ಅದನ್ನೇ ಎಲ್ಲೆಡೆ ಪ್ರತಿಫಲಿಸುವ ಬಿಳಿಮೋಡದ ನಗುವಿನಂತೆ ಈ ಚಳಿಯಾಕೆ ನಿಶ್ಶಬ್ದವಾಗಿ ನಗುತ್ತಾಳೆ. ಬೇಂದ್ರೆಯವರು ಎಂತಹ ರಮ್ಯ ಪ್ರಣಯಿನಿಯನ್ನು ಸೃಷ್ಟಿಸಿದ್ದಾರಲ್ಲವೆ!


ಐದನೆಯ ನುಡಿ:
ಉಸುರುಸಿರಿಗೆ ಮರುಕ
ಹೆಜ್ಜೆಹೆಜ್ಜೆಗೆ ಬೆಡಗು
ಮೆಲ್ಲಗೆ ಮುಂಗಯ್ಯ ಹಿಡಿವಾಕೆ.
ಯಾವ ಜಾತಿಯ ಹೆಣ್ಣೊ
ಹಾವ ಭಾವವೆ ಬೇರೆ
ಅಪ್ಪಿದ ಅಪ್ಪಿಗೆ ಬಿಡದಾಕೆ.


ಚಳಿಯಿಂದ ನಡುಗುತ್ತಿರುವ ನೀವು ಕ್ಷಿಪ್ರವಾಗಿ ಉಸಿರಾಡಿಸುವಾಗ, ಚಳಿಯಾಕೆ ನಿಮ್ಮ ಮೇಲೆ ಮರುಕ ತೋರಿ ಒಂದು ಕ್ಷಣ ಹಿಂದೆಗೆಯುತ್ತಾಳೆ. ಮರು ಉಸಿರಿನಲ್ಲಿ ಮತ್ತೆ ನಿಮ್ಮ ಬಳಿ ಸಾರಿರುತ್ತಾಳೆ. ಈ ರೀತಿಯಾಗಿ ಹಿಂದೆ ಮುಂದೆ ಹೆಜ್ಜೆ ಇಡುತ್ತ ತನ್ನ ಬೆಡಗನ್ನು ತೋರಿಸುತ್ತಲೇ, ನಿಮಗೆ ಅರಿವಾಗದಂತಲೇ, ನಿಮ್ಮ ಮುಂಗೈಯನ್ನು ಹಿಡಿದುಕೊಳ್ಳುತ್ತಾಳೆ. ಇನ್ನು ಇವಳಿಂದ ಬಿಡುಗಡೆಯನ್ನು ಪಡೆಯುವದು ಸಾಧ್ಯವಿಲ್ಲ! ಬೇಂದ್ರೆಯವರು ಈ ಸತ್ಯವನ್ನು ಈಗ ಒಪ್ಪಿಕೊಂಡು ಬಿಟ್ಟರು. ಆದುದರಿಂದ ಇವಳು ತೋರಿಸಿದ ಹಾವಭಾವಗಳಿಂದ ಚಕಿತರಾದ ಅವರು ಇವಳು ಯಾವ ಜಾತಿಯ ಹೆಣ್ಣೊ ಎಂದು ಉದ್ಗಾರ ತೆಗೆಯುತ್ತಾರೆ. ಪ್ರಣಯಕಾಮಿನಿಯರಲ್ಲಿ ‘ಪದ್ಮಿನಿ,ಚಿತ್ತಿನಿ,ಹಸ್ತಿನಿ’ ಮೊದಲಾದ ಜಾತಿಗಳಿವೆ ಎಂದು ನಮ್ಮ ಶಾಸ್ತ್ರಕಾರರು ಹೇಳಿದ್ದಾರೆ. ತನ್ನನ್ನು ಬಿಡದಂತೆ ಬಿಗಿದಪ್ಪಿಕೊಂಡ ಈ ಚಳಿಯಾಕೆ ಯಾವ ಪ್ರಕಾರಕ್ಕೆ ಸೇರಿದವಳು ಎನ್ನುವದು ಬೇಂದ್ರೆಯವರನ್ನು ಅಚ್ಚರಿಗೀಡು ಮಾಡಿದೆ!

ಹೆಚ್ಚಿನ ಓದಿಗೆ:http://sallaap.blogspot.com/2011/06/blog-post.html

ಕಾಮೆಂಟ್‌ಗಳಿಲ್ಲ: