೫.‘ಹೂತsದ ಹುಣಸಿ’

ಆಧುನಿಕ ನಾಗರಿಕತೆಯು  ಬಕಾಸುರನೂ ಹೌದು , ಭಸ್ಮಾಸುರನೂ ಹೌದು. ನಿಸರ್ಗದ ಸಂಪತ್ತನ್ನೆಲ್ಲ ಬಕಾಸುರನಂತೆ ನುಂಗುತ್ತಿರುವ ಈ ನಾಗರಿಕತೆಯು ಭಸ್ಮಾಸುರನಂತೆ ಸಾಂಸ್ಕೃತಿಕ ವಿನಾಶವನ್ನು ಮಾಡುತ್ತ ನಡೆದಿದೆ. ಇಂತಹ (ಅ)ನಾಗರಿಕ ವಾತಾವರಣದಲ್ಲಿ ಬದುಕುವ ಜೀವಿಯು ಪ್ರತಿ ದಿನವೂ ಉದ್ವಿಗ್ನತೆಯಲ್ಲಿ ಹಪಹಪಿಸುವದನ್ನು ನಾವು ಕಾಣುತ್ತಲೇ ಇದ್ದೇವೆ. ಈಗಿನ ನಗರಜೀವನವು ತನ್ನ ನಿವಾಸಿಗಳನ್ನು ಅನೇಕ ಮನೋವಿಕಾರಗಳಿಗೆ ಈಡು ಮಾಡಿದೆ ಎಂದು ಹೇಳಿದರ ತಪ್ಪಾಗಲಿಕ್ಕಿಲ್ಲ.

ಔದ್ಯೋಗೀಕರಣದ ಹಾಗು ನಗರೀಕರಣದ ಮೊದಲಿನ ಪರಿಸ್ಥಿತಿ ಹೀಗಿರಲಿಲ್ಲ. ಗ್ರಾಮೀಣ ಜೀವನವು ಪ್ರಶಾಂತವಾಗಿರುತ್ತಿತ್ತು. ಹಳ್ಳಿಗರು ಸುತ್ತಲಿನ ಪ್ರಕೃತಿಯೊಡನೆ ತಾದಾತ್ಮ್ಯತೆಯನ್ನು ಅನುಭವಿಸುತ್ತಿದ್ದರು. ವರಕವಿ ಬೇಂದ್ರೆಯವರು  ತಮ್ಮ ‘ಹೂತsದ ಹುಣಸಿ’ ಕವನದಲ್ಲಿ ಇಂತಹ ನೆಮ್ಮದಿಯ ಬದುಕಿನ ಒಂದು ಮುಖವನ್ನು ತೋರಿಸಿದ್ದಾರೆ.

‘ಹೂತsದ ಹುಣಸಿ’ ಕವನವು  ‘ಸಖೀಗೀತ’ ಸಂಕಲನದಲ್ಲಿ ಅಡಕವಾಗಿದೆ. ‘ಸಖೀಗೀತ’ವು ೧೯೩೭ರಲ್ಲಿ ಪ್ರಕಟವಾಯಿತು.  ಆ ಸಮಯದಲ್ಲಿ ಔದ್ಯೋಗಿಕ ನಾಗರಿಕತೆಯು ಭಾರತದಲ್ಲಿ ಇನ್ನೂ ಕಾಲಿಟ್ಟಿರಲಿಲ್ಲ. ವಿಶೇಷತಃ ಹಳ್ಳಿಯ ಜನರು ನಿರುಮ್ಮಳವಾದ ಬದುಕನ್ನು ನಡೆಯಿಸುತ್ತಿದ್ದರು. ಹಳ್ಳಿಯ ಹಾಡುಹಸೆಗಳು, ಪುರಾಣ ಪುಣ್ಯಕತೆಗಳು ಹಾಗು ಬಯಲಾಟದಂತಹ ಸಂಗತಿಗಳು ಅವರ ಮನರಂಜನೆಗೆ ಹಾಗು ಕಲಾಭಿವೃದ್ಧಿಗೆ ಪೂರಕವಾಗಿದ್ದವು. ಇಂತಹ ವಾತಾವರಣದಲ್ಲಿಬದುಕುತ್ತಿರುವ ಹಳ್ಳಿಗರ ದೈನಂದಿನ ಜೀವನವು ಪ್ರಕೃತಿಯೊಡನೆ ಸಮರಸವಾಗಿ ಸ್ಪಂದಿಸುತ್ತಿತ್ತು.

‘ಹೂತsದ ಹುಣಸಿ’ ಕವನವು ಇಂತಹ ಹಳ್ಳಿಯ ವ್ಯಕ್ತಿಯೊಬ್ಬನ ಚಿತ್ರವನ್ನು ಕೊಡುತ್ತದೆ. ಕಡುಬೇಸಿಗೆಯಲ್ಲಿ ತನ್ನ ಹೊಲದ ಕಡೆಗೆ ತೆರಳುತ್ತಿದ್ದ ಹಳ್ಳಿಗನೊಬ್ಬನು ಹೂವು ಬಿಟ್ಟಂತಹ ಹುಣಸಿಯ ಮರವನ್ನು ನೋಡಿದಾಗ, ಅದರಲ್ಲಿ ಚೆಲುವಿಕೆಯನ್ನು ಗುರುತಿಸುವ, ಆ ಚೆಲುವಿನಲ್ಲೇ ಪರವಶನಾಗುವ, ಹಾಗು ಹಗಲುಗನಸಿನಲ್ಲಿ ತೇಲಿ ಹೋಗುವ ಚಿತ್ರವನ್ನು ಈ ಕವನದಲ್ಲಿ ನೀಡಲಾಗಿದೆ.
-------------------------------------------------------
ಕವನದ ಪೂರ್ಣಪಾಠವು ಹೀಗಿದೆ:

ಹೂತsದ ಹುಣಸಿಯಾ ಚಿಗುರು
ಮದರಂಗಿ ಬಣ್ಣದುಗುರು
ರುಚಿಗೆ ಹುಳಿಯೊಗರು
ನೋಡ್ಯೆ ಜೀವಕ್ಕನಿಸಿತs ಹಗುರು ||ಹೂತsದ || ಪಲ್ಲ ||

ಉಗುರ್ಗೆಂಪು ಹಸಿರು ಬಿಳಿನಿಂಬಿ
ಹುಣಸಿಯಾ ರೆಂಬಿ
ಚಿಗತೀತೇನೊ ಎಂಬಿ
ಕಾಮsನ ಬಿಲ್ಲಿನಾ ಕೊಂಬಿ ||ಹೂತsದ

ಬ್ಯಾಸಿಗಿ ಹೊಡೆದsದ ಬಿಸಿಲಿನಾ ಡೇರೆ
ಮಧ್ಯಾಹ್ನದಾ ಪಾಹರೆ
ಯಾರಿಗಿಲ್ಲ ಹ್ವಾರೆ
ಸದ್ದು ಸುಳಿವು ಇಲ್ಲ ಬ್ಯಾರೆ ||ಹೂತsದ

ಸುಳ್ಳ ಸುಳ್ಳ ಗಾಳಿ ಹಾಕಿತ ಸಿಳ್ಳು
ಕಾಗಿ ಚುಂಚಿನ ಹಳ್ಳು
ಬಿದ್ದು ಆಂತ್ಯು “ಹೊಳ್ಳು”
ಮೈಚಾಚ್ಯsದ ಹುಣಸಿಯ ನೆಳ್ಳು ||ಹೂತsದ

ಅಡ್ಡಾಗತೇನಿ ನೆಳ್ಳಾಗ ಹೀಂಗ
ಹೂವು ಚಿಗುರು ಹ್ಯಾಂಗ
ಅವs ಹಾಸಿಧಾಂಗ
ಹುಳಿ ಚಿಗುರು ನುರಿಸಿ ನಾ ದಂಗ ||ಹೂತsದ

ಬಿಸಿಲ್ಗುದರಿ ಕುಣಿಯಲಿ ದೂರ
ಯಾರಿಗೆ ಬೇಕು ನೀರ
ಹೀಂಗ ನನ್ನಿದಿರ
ಕಣ್ಣಳತಿಯೊಳಗ ನೀ ಬಾರ ||ಹೂತsದ

ಹಾರತಿರಲಿ ಗಾಳಿಗೆ ಬಿಚ್ಚಿದ್ಹೆರಳು
ವಾರಿಯಿರಲಿ ಕೊರಳು
ಬಾಚತಿರಲಿ ಬೆರಳು
ನೋಡ್ತೇನಿ ನಿನ್ನ ಕವಿನೆರಳು ||ಹೂತsದ

ಕಣಕಣ್ಣ ಚಕಮಕಿ ಇತ್ತ
ಕುಡಿಗಣ್ಣಿನತ್ತ
ತಾಕಿ ಹಾರಿತ್ತ
ಗಾಳಿಸವಾರಿಗ್ಹೊರಟಿತ್ತ ಚಿತ್ತ ||ಹೂತsದ

ಅಗೊ ಗಾಳಿ ಧೂಳಿಯಾ ಬಂಬಾ
ನಿಂತ್ಹಾಂಗ ಅದ ಖಂಬಾ
ಅಲ್ಲಿ ರೌದಿ ತುಂಬಾ
ಗಣಿ ಕುಣಿಧಾಂಗ ಡೊಂಬರ ರಂಭಾ ||ಹೂತsದ

ಮ್ಯಾಲೆ ಅಲ್ಲಿ ಪಾರಿವಾಳ ಜೋಡಿ
ಒಂದಕ್ಕೊಂದ ನೋಡಿ
ಬಿಸಿಲ ತೆರೆ ದೂಡಿ
ಹಾರ್ತsದ ನೀಲಿಮುಗಿಲ್ಕೂಡಿ  ||ಹೂತsದ

೧೦
ಕಂಡಂಗಾತು ನೀರಿನ ಕೊಳ
ನೀಲಿ ಮುಗಿಲ ಜಳಾ
ಎಂಥ ಝಳ ಝಳಾ
ಮುಳುಮುಳುಗಿ ಹೋತು ಮನದ ಧೂಳಾ ||ಹೂತsದ

೧೧
ಕಾಲ ಹೋಗತಿತ್ತ ಹಿಂದ ಸರಿದು
ಮನಸು ಆತ ಬರಿದು
ಮಧ್ಯಾನ ಬ್ಯಾಸರ ಮುರಿದು
ಬಿಸಿಲ ತಾನs ಹೋಗತಿತ್ತ ಹರಿದು ||ಹೂತsದ

೧೨
ಕವಿ ಜೀವದ ಬ್ಯಾಸರ ಹರಿಸಾಕ
ಹಾಡ ನುಡಿಸಾಕ
ಹೆಚ್ಚಿಗೇನು ಬೇಕ?
ಒಂದು ಹೂತ ಹುಣಸಿಮರ ಸಾಕ ||ಹೂತsದ
------------------------------------------------------------
ಹುಣಸಿ ಮರವು ಚಿಗುರುವ ಕಾಲದಲ್ಲಿ ಅಂದರೆ ಬಹುಶಃ ವೈಶಾಖ ಮಾಸದಲ್ಲಿ ಈ ಹಳ್ಳಿಗನು ತನ್ನ ಹೊಲಕ್ಕೆ ಹೊರಟಿದ್ದಾನೆ. ಈ ಕಾಲದಲ್ಲಿ ಹೊಲದಲ್ಲಿ ಕೃಷಿ ಕೆಲಸವೇನೂ ಇರುವದಿಲ್ಲ. ಬಹಳವಾದರೆ ಸಣ್ಣ ಪುಟ್ಟ ದುರಸ್ತಿ ಕೆಲಸಗಳು, ನಟ್ಟು ಕಡಿಯುವದು, ಕಳೆ ಕೀಳುವದು ನಡೆಯುತ್ತಿರುತ್ತವೆ. ನಮ್ಮ ನಾಯಕನು ಹೀಗೇ ತನ್ನ ಹೊಲದ ಕಡೆಗೆ ನಡೆದಾಗ ಹೊಲದ ಒಂದು ಭಾಗದಲ್ಲಿ ಇರಬಹುದಾದ ಹುಣಸಿಯ ಮರವು ಇವನ ಕಣ್ಣಿಗೆ ಬೀಳುತ್ತದೆ. ಖಾಲಿಯಾದ ಹೊಲದಂತೆಯೇ ಖಾಲಿಯಾದ ಇವನ ಮನಸ್ಸು ಈಗಷ್ಟೇ ಹೂವು ಬಿಡುತ್ತಿರುವ ಹುಣಸಿಯ ಮರವನ್ನು ಕಂಡು ಬೆರಗಾಗುತ್ತದೆ. ಆಗ ಇವನ ಮನಸ್ಸಿನಲ್ಲಿ ಉಕ್ಕುವ ಭಾವ ಹೀಗಿದೆ:

ಹೂತsದ ಹುಣಸಿಯಾ ಚಿಗುರು
ಮದರಂಗಿ ಬಣ್ಣದುಗುರು
ರುಚಿಗೆ ಹುಳಿಯೊಗರು
ನೋಡ್ಯೆ ಜೀವಕ್ಕನಿಸಿತs ಹಗುರು ||ಹೂತsದ

ಭಾರತದ ಆದಿಕವಿ ವಾಲ್ಮೀಕಿಗೆ ಕಾವ್ಯಸ್ಫುರಣವಾಗಲು ಕ್ರೌಂಚವಧೆಯು ಕಾರಣವಾಯಿತು. ಬೇಂದ್ರೆಯವರ ಕವನದ ನಾಯಕನಾದರೊ ಒಬ್ಬ ಅತಿ ಸಾಮಾನ್ಯ ಗ್ರಾಮೀಣ ವ್ಯಕ್ತಿ. ಈತನು ನಗರಜೀವಿ ಅಲ್ಲದ್ದರಿಂದಲೇ ಇವನ ಪ್ರಕೃತಿ-ಸಂವೇದನೆ ಇನ್ನೂ ಸುಸ್ಥಿತಿಯಲ್ಲಿದೆ ! ಆದುದರಿಂದ ಈಗತಾನೆ ಹೂವು ಬಿಡುತ್ತಿರುವ ಹುಣಸಿಯ ಮರವನ್ನು ಕಂಡಾಗ ಇವನಿಗೆ ಸುಖವೆನಿಸುತ್ತದೆ. ಈ ಸಂಗತಿಯೇ ಇವನ ಭಾವಸ್ಫುರಣಕ್ಕೆ ಕಾರಣವಾಗುತ್ತದೆ. 

ಹುಣಸಿಯ ಚಿಗುರು ನಮ್ಮ ನಾಯಕನಿಗೆ ಮದರಂಗಿ ಬಣ್ಣ ಹಚ್ಚಿದ ಉಗುರಿನಂತೆ ಕಾಣುವದಂತೆ. ಇದರ ಕಾರಣವೇನು?  ಮನುಷ್ಯರ ಅಗ್ರಭಾಗದಲ್ಲಿ ಉಗುರುಗಳು ಇದ್ದಂತೆ, ಮರಗಳ ಅಗ್ರಭಾಗದಲ್ಲಿ ಚಿಗುರುಗಳು ಇರುತ್ತವೆ. ಆದುದರಿಂದ ಹಸಿರು ಎಲೆಗಳಿಂದ ತುಂಬಿದ ಹುಣಸಿಯ ಮರದಲ್ಲಿ ಮೂಡುತ್ತಿರುವಂತಹ  ಕೆಂಪು ಚಿಗುರುಗಳು ಇವನ ಕಣ್ಣಿಗೆ ಮೊದಲು ಬೀಳುತ್ತವೆ. ಇವುಗಳನ್ನು ಕಂಡಾಗಲೇ ಅವನಿಗೆ ಹುಣಸಿಯ ಮರವು ಹೂವು ಬಿಡುತ್ತಿರುವ ಅರಿವು ಆಗುತ್ತದೆ.

ಹಳ್ಳಿಯ ವ್ಯಕ್ತಿಯಾದ ಈತನಿಗೆ ಈ ಕೆಂಪು ಬಣ್ಣವು ಹಳ್ಳಿಯ ಹೆಣ್ಣುಗಳು ತಮ್ಮ ಉಗುರುಗಳಿಗೆ ಹಚ್ಚಿಕೊಂಡಂತಹ ಮದರಂಗಿಯ ಕೆಂಪು ಬಣ್ಣವನ್ನು ಸ್ಮರಣೆಯಲ್ಲಿ ತರುತ್ತವೆ. ಅಂದರೆ ಈತ ಬದುಕನ್ನು ತೆರೆದ ಕಣ್ಣುಗಳಿಂದ ನೋಡಬಲ್ಲ ಹಾಗು ಅನುಭವಿಸಬಲ್ಲ ರಸಿಕ ಮನುಷ್ಯ ಎನ್ನುವದು ಸ್ಪಷ್ಟವಾಗುತ್ತದೆ.
(ಬೇಂದ್ರೆಯವರು ಉಪಮೆಗಳನ್ನು ಬಳಸುವಾಗಲೂ ಸಹ, ವಾಸ್ತವತೆಯನ್ನು ಲಕ್ಷದಲ್ಲಿಟ್ಟಿರುತ್ತಿದ್ದರು ಹಾಗು ಆ ಉಪಮೆಯ ಅನೇಕ ಪ್ರಯೋಜನಗಳನ್ನು ಪಡೆಯುವ ಪ್ರತಿಭೆ ಉಳ್ಳವರು ಎನ್ನುವದು ಇದರಿಂದ ವೇದ್ಯವಾಗುತ್ತದೆ!)

ಇಂತಹ ರಸಿಕ ಮನುಷ್ಯ ಆ ಚಿಗುರನ್ನು ನೋಡಿ ಸುಮ್ಮನೆ ಹೋಗುತ್ತಾನೆಯೆ? ಮುಂದಿನ ಕ್ರಮವೆಂದರೆ, ಆ ಚಿಗುರು ಇವನ ಬಾಯಿಗೆ ಇಳಿಯುತ್ತದೆ ! ಆ ಚಿಗುರಿನ ರುಚಿಯನ್ನು ಈತ ಹುಳಿ ಹಾಗು ಒಗರು ಎಂದು ಅನುಭವಿಸುತ್ತಾನೆ. ಆದರೆ ಇಂತಹ ಕಡುರುಚಿಯಿಂದ ಅವನ ಸುಖ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವದಿಲ್ಲ. ಯಾಕೆಂದರೆ ಪ್ರಕೃತಿಧರ್ಮವನ್ನು ಅನುಸರಿಸುತ್ತಿರುವ ಹುಣಸಿಯ ಮರದ ಚಿಗುರು ಇರಬೇಕಾದದ್ದೇ ಹೀಗೆ! ಅದು ಹೀಗಿದ್ದರೇನೆ ಆತನಿಗೆ ಸಮಾಧಾನ ಸಿಗುವದು. ಆದುದರಿಂದಲೇ ಆತ ಹೇಳುವದು: ‘ನೋಡ್ಯೆ ಜೀವಕ್ಕನಿಸಿತs ಹಗುರು’.
ಋತುಧರ್ಮವು ಸರಿಯಾಗಿ ಕ್ರಮಿಸುತ್ತಿದ್ದರೆ ಮಾತ್ರ ಹಳ್ಳಿಗನ ಮನಸ್ಸಿಗೆ ನೆಮ್ಮದಿಯಿರುತ್ತದೆ.

ಹುಣಸಿಯ ಚಿಗುರನ್ನು ನೋಡಿದ ಬಳಿಕ ಹಾಗು ಮೆಲ್ಲಿದ ಬಳಿಕ ಈತನ ನೋಟವು ಸಹಜವಾಗಿ, ಮುಂದಿನ ಮಜಲಿಗೆ ಅಂದರೆ ಹುಣಸಿಮರದ ರೆಂಬೆಗಳ ಕಡೆಗೆ ಹರಿಯುತ್ತದೆ. ಆ ರೆಂಬೆಗಳು ಈತನಿಗೆ ಕಾಣುವ ಪರಿ ಹೀಗಿದೆ:

ಉಗುರ್ಗೆಂಪು ಹಸಿರು ಬಿಳಿನಿಂಬಿ
ಹುಣಸಿಯಾ ರೆಂಬಿ
ಚಿಗತೀತೇನೊ ಎಂಬಿ
ಕಾಮsನ ಬಿಲ್ಲಿನಾ ಕೊಂಬಿ ||ಹೂತsದ

ಹುಣಸಿ ಮರದ ರೆಂಬೆಯ ಬಣ್ಣಗಳನ್ನು ಈತ ಎಷ್ಟು ಸೂಕ್ಷ್ಮ ವಿವರಗಳೊಡನೆ ಲಕ್ಷಿಸುತ್ತಾನೆ ಎನ್ನುವದನ್ನು ನೋಡಿರಿ. ಈ ರೆಂಬೆಗೆ ಉಗುರಿನ ಕೆಂಪಿದೆ ಹಾಗು ಇನ್ನೂ ಹಣ್ಣಾಗದಿರುವ ಬಿಳಿ-ಹಸಿರು ನಿಂಬಿಯ ಬಣ್ಣವಿದೆ. ಕಾಮನ ಬಿಲ್ಲಿನ ತುದಿಯು ಚಿಗಿತಂತೆ ಇವನಿಗೆ ಅದು ಭಾಸವಾಗುತ್ತದೆ. (ಈ ಬಿಲ್ಲು ಬಾನಿನಲ್ಲಿ ಮೂಡುವ ಕಾಮನ ಬಿಲ್ಲೂ ಹೌದು ; ಕಾಮದೇವನ ಬಿಲ್ಲೂ ಹೌದು !) ಕೆಂಪು, ಹಳದಿ ಹಾಗು ನೀಲಿ ಬಣ್ಣಗಳಿಂದ ಕೂಡಿದ ಕಾಮನ ಬಿಲ್ಲಿನ ವರ್ಣವ್ಯವಸ್ಥೆಯು ಈತನಿಗೆ ಹುಣಸಿಮರದ ರೆಂಬೆಯಲ್ಲಿ ಕಂಡರೆ ಆಶ್ಚರ್ಯವಿಲ್ಲ.
ಇಲ್ಲಿ ಅಡಗಿರುವ ಮತ್ತೊಂದು ಸೂಚನೆ ಎಂದರೆ, ಕಾಮದೇವನ ಬಿಲ್ಲು ಸೃಷ್ಟಿ ಸಂಕೇತವಾಗಿರುವದು. ಚಿಗುರಿನ ನಂತರ ಬರುವದು ಹೂವು, ಹೂವಿನ ನಂತರ ಬರುವದು ಹಣ್ಣು. ಇದು ಕಾಮದೇವನ ಸೃಷ್ಟಿಕ್ರಮ.

ಹುಣಸಿಯ ಮರವು ಹೂವು ಬಿಟ್ಟು ಚೆಲುವಾಗಿದ್ದನ್ನು ಗ್ರಹಿಸಿದ ಇವನ ನೇತ್ರೇಂದ್ರಿಯಕ್ಕೆ ಖುಶಿಯಾಯಿತು. ಚಿಗುರನ್ನು ತಿಂದ ಇವನ ಜಿಹ್ವೇಂದ್ರಿಯಕ್ಕೆ ಖುಶಿಯಾಯಿತು. ಹುಣಸಿಯ ಚೆಲುವಿನಲ್ಲಿ ಪರವಶನಾಗಿದ್ದ ಈತನೀಗ ಬಹಿರ್ಮುಖನಾಗುತ್ತಾನೆ ಹಾಗೂ ಇವನ ಸ್ಪರ್ಶೇಂದ್ರಿಯಕ್ಕೆ ತನ್ನ ಸುತ್ತಲಿನ ಪ್ರಕೃತಿಯ ವಾಸ್ತವ ಮುಖದ ಅಂದರೆ ಬಿಸಿಲಿನ ಅನುಭವವಾಗುತ್ತದೆ :

ಬ್ಯಾಸಿಗಿ ಹೊಡೆದsದ ಬಿಸಿಲಿನಾ ಡೇರೆ
ಮಧ್ಯಾಹ್ನದಾ ಪಾಹರೆ
ಯಾರಿಗಿಲ್ಲ ಹ್ವಾರೆ
ಸದ್ದು ಸುಳಿವು ಇಲ್ಲ ಬ್ಯಾರೆ ||ಹೂತsದ

ವೈಶಾಖ ಮಾಸವೆಂದರೆ ಬಿರುಬೇಸಿಗೆಯ ಕಾಲ. (‘ಬೇಸಿಗೆ’ ಇದು ‘ವೈಶಾಖ’ದ ತದ್ಭವ ಎನ್ನುವದನ್ನು ಗಮನಿಸಬೇಕು.)  ಇದೇನು ಕಡೆತನಕ ಇರುವಂತಹ ಋತು ಅಲ್ಲ. ಎಲ್ಲ ಅಲೆಮಾರಿಗಳಂತೆ ಬೇಸಿಗೆಯೂ ಸಹ ಈತನ ಊರಿನಲ್ಲಿಇದೀಗ ಡೇರೆ ಹೊಡೆದುಕೊಂಡು ಕೂತಿದೆ.

ಗಮನಿಸತಕ್ಕ ಅಂಶವೆಂದರೆ ಡೇರೆಯನ್ನು ಹೊಡೆಯುವದು ಸಮತಟ್ಟಾದ ಬಯಲಿನಲ್ಲಿ. ಅಂದರೆ ಈ ವ್ಯಕ್ತಿಯ ಊರು ಬಯಲಸೀಮೆಯಲ್ಲಿರುವ ಹಳ್ಳಿ. ಅಲ್ಲೊ ಇಲ್ಲೊ ಇರುವ ಬೇವಿನ ಅಥವಾ ಹುಣಸಿಯ ಗಿಡಗಳನ್ನು ಮಾತ್ರ ಇಲ್ಲಿ ಕಾಣಬಹುದು.

ಡೇರೆಯನ್ನು ಹೊಡೆದಿರುವವರು ಇಂದಿಲ್ಲ ನಾಳೆ ಕಿತ್ತುಕೊಂಡು ಹೋಗುತ್ತಾರೆ. ಬೇಸಿಗೆಯೂ ಹೋಗುವಂತಹದೇ. ಈ ವ್ಯಕ್ತಿಯೂ ಆ ಕಾಲಕ್ಕಾಗಿ ಕಾಯುತ್ತಿದ್ದಾನೆ. ಆದರೆ ಬಿಸಿಲು ಮಾತ್ರ ಸದ್ಯದ ಗಳಿಗೆಯಲ್ಲಿ ತನ್ನ ಡೇರೆಯ ಹೊರಗೆ ಮಧ್ಯಾಹ್ನದ ಪಾಳಿಯ ಕಾವಲುಗಾರನಂತೆ ಪಹರೆ ಮಾಡುತ್ತಿದೆ !  ಬೇಸಿಗೆಯ ಬಿಸಿಲಿಗಾದರೊ ಪಹರೆ ಕಾಯುವ ಕೆಲಸವಿದೆ. ಆದರೆ ಈ ಸುಡುಬೇಸಿಗೆಯಲ್ಲಿ ಹಳ್ಳಿಯ ಜನರಿಗೇನು ಕೆಲಸ ? ಬಹುತೇಕ ಜನರು ಎಳೆಬಿಸಿಲಿನಲ್ಲಿಯೇ ಸಣ್ಣ ಪುಟ್ಟ ದುರಸ್ತಿ ಕೆಲಸಗಳನ್ನು ಮುಗಿಸಿಕೊಂಡು ಮನೆಗೆ ಹೋಗಿ ಬಿಟ್ಟಿರುತ್ತಾರೆ. ಯಾರಿಗೂ ಈಗ ಹ್ವಾರೆ(=ಕೆಲಸ) ಇಲ್ಲ. ಆದುದರಿಂದಲೇ ಇಲ್ಲಿ ಯಾವುದೇ ಸದ್ದಿಲ್ಲ ; ಯಾತರದೂ ಸುಳಿವೂ ಇಲ್ಲ.

ಸುಳ್ಳ ಸುಳ್ಳ ಗಾಳಿ ಹಾಕಿತ ಸಿಳ್ಳು
ಕಾಗಿ ಚುಂಚಿನ ಹಳ್ಳು
ಬಿದ್ದು ಆಂತ್ಯು “ಹೊಳ್ಳು”
ಮೈಚಾಚ್ಯsದ ಹುಣಸಿಯ ನೆಳ್ಳು ||ಹೂತsದ

ಪಂಚೇಂದ್ರಿಯಗಳಲ್ಲಿ ನಾಲ್ಕಾದ ನೇತ್ರ,ಜಿಹ್ವೆ, ಘ್ರಾಣ ಹಾಗು ಸ್ಪರ್ಶದ ನಂತರ ಇದೀಗ ಐದನೆಯದಾದ ಕರ್ಣೇಂದ್ರಿಯದ ಸರದಿ. ಇಲ್ಲಿಯ ವರೆಗೆ ಸ್ತಬ್ಧವಾಗಿದ್ದ ವಾತಾವರಣದಲ್ಲಿ ಇದೀಗ ಗಾಳಿಯಿಂದ ಚಲನೆ ಮೂಡುತ್ತದೆ. ಎಲ್ಲರೂ ಊಟ ಮುಗಿಸಿಕೊಂಡು ಮಲಗಿರುವಾಗ, ಈ ಗಾಳಿ ಮಾತ್ರ ಹರಿದಾಡುತ್ತ ಸಿಳ್ಳು ಹಾಕುತ್ತಿದೆ. ಹುಣಸಿಮರದ ಎಲೆಗಳಲ್ಲಿ ಹಾಯ್ದು ಹೋಗುವಾಗ ಅದರಿಂದ ಉಂಟಾಗುವ ಧ್ವನಿ ಸಿಳ್ಳಿನಂತೆ ಕೇಳಿಸುತ್ತದೆ. ಇದು ಕೆಲಸವಿಲ್ಲದ ಉಂಡಾಡಿ ತರುಣನ ನಿಶ್ಚಿಂತ, ವಿನಾಕಾರಣ ಸಿಳ್ಳು ; ಯಾಕೆಂದರೆ ಸಿಳ್ಳು ಹಾಕುವಂತಹ ಯಾವ ಕಾರಣವೂ ಗಾಳಿಗಿಲ್ಲ. ಆದುದರಿಂದ ಬೇಂದ್ರೆ ಇದನ್ನು ‘ಸುಳ್ಳ ಸುಳ್ಳ ಸಿಳ್ಳು’ ಎಂದು ಬಣ್ಣಿಸುತ್ತಾರೆ.  

ಈ ಸಿಳ್ಳಿನ ಪರಿಣಾಮವಾಗಿ ಮರದ ಟೊಂಗೆಯ ಮೇಲೆ ಕುಳಿತ ಕಾಗೆಯೊಂದು ಬೆಚ್ಚಿ ಬೀಳುತ್ತದೆ. ಅದು ಚುಂಚಿನಲ್ಲಿ ಹಿಡಿದುಕೊಂಡಂತಹ ಸಣ್ಣ ಹಳ್ಳೊಂದು ದೊಪ್ಪನೆ ಕೆಳಗೆ ಬೀಳುತ್ತದೆ. ಬಿದ್ದ ಹಳ್ಳು (=ಕಲ್ಲಿನ ಸಣ್ಣ ತುಣುಕು) ನೆಟ್ಟಗೆ ನಿಲ್ಲಲಾರದೆ ಹೊರಳುತ್ತದೆ. ಇಂತಹ ಸಣ್ಣ ಘಟನೆಯೂ ಸಹ ನಮ್ಮ ನಾಯಕನ ಅರಿವಿನಲ್ಲಿ ಮೂಡುತ್ತದೆ. ಇಂತಹದೇ ಮತ್ತೊಂದು ವಿಷಯವನ್ನೂ ಅವನು ಗಮನಿಸುತ್ತಾನೆ. ಅದೇನೆಂದರೆ, ಹುಣಸಿ ಮರದ ನೆರಳೂ ಸಹ ಮೈ ಚಾಚಿ ಮಲಗಿಕೊಂಡಿದೆ! ಅಂದರೆ, ಸಚರಾಚರ ಜಗತ್ತೆಲ್ಲ, ಬಿಸಿಲಿನ ಧಗೆಯನ್ನು ಪರಿಹರಿಸಿಕೊಳ್ಳಲು ಒರಗಿಕೊಂಡಿದೆ. ಇನ್ನು ನಾಯಕನಿಗೇನು ಕೆಲಸ? ಅವನೂ ಸ್ವಗತವೆಂಬಂತೆ ನುಡಿಯುತ್ತಾನೆ:

ಅಡ್ಡಾಗತೇನಿ ನೆಳ್ಳಾಗ ಹೀಂಗ
ಹೂವು ಚಿಗುರು ಹ್ಯಾಂಗ
ಅವs ಹಾಸಿಧಾಂಗ
ಹುಳಿ ಚಿಗುರು ನುರಿಸಿ ನಾ ದಂಗ ||ಹೂತsದ

ಇದೇ ಹುಣಸಿಯ ಮರದ ನೆರಳಿನ ಕೆಳಗೆ ತಾನೂ ಅಡ್ಡಾಗಬೇಕೆನ್ನುವ ಯೋಚನೆ ಅವನಲ್ಲಿ ಬರುತ್ತದೆ. ಮರದ ಕೆಳಗೆ ಒರಗಿದಾಗ, ಅವನಿಗೆ ಮೇಲೆ ಕಾಣುವದೇನು? ಮರದ ತುಂಬೆಲ್ಲ ಹರಡಿದ ಹೂವು ಹಾಗು ಚಿಗುರು ತನ್ನ ಮೇಲೆಯೇ ಹಾಸಿದಂತೆ ಅವನಿಗೆ ಕಾಣುತ್ತದೆ. ಅಲ್ಲಿ ಒರಗಿದಂತೆಯೇ, ಹುಳಿ ಹುಳಿ ಚಿಗುರನ್ನು ನುರಿಸುತ್ತ, ಆ ಕಡುರುಚಿಗೆ ಆತ ಮರುಳಾಗುತ್ತಾನೆ.

ಈಗ ಅವನ ದೃಷ್ಟಿ ಕೆಳಗೆ ಸರಿಯುತ್ತ ಬಯಲಿನ ಕಡೆಗೆ ಹೋಗುತ್ತದೆ. ಕಣ್ಣ ನೋಟವೇ ಮಿತಿಯಾಗಿರುವಂತಹ ವಿಶಾಲವಾದ ಈ ಬಯಲು ಪ್ರದೇಶದಲ್ಲಿ, ಈ ಬಿಸಿಲಿನ ಝಳಕ್ಕೆ ದೂರದಲ್ಲಿ ಮೃಗಜಲದ ಆಭಾಸವಾಗುವದು ಸಹಜ. ನಮ್ಮ ಕವನದ ನಾಯಕನ ಕಣ್ಣಿಗೂ ಇದು ಬೀಳುತ್ತದೆ. ಆದರೆ ಆರಾಮಾಗಿ ಮಲಗಿಕೊಂಡಿರುವ ನಮ್ಮ ನಾಯಕನು ಈ ಮೃಗಜಲಕ್ಕೆ ಗಮನ ಹರಿಸುವದಿಲ್ಲ. ಭ್ರಮೆಯಲ್ಲಿ ಕಾಣಿಸುವ ನೀರು ಆತನಿಗೆ ಬೇಕಾಗಿಲ್ಲ. ಆತನಿಗೆ ಬೇಕಾದದ್ದು ಪ್ರೀತಿಯ ನೀರು. ಬಿಸಿಲುಕುದುರಿ ಬೇಕಾದಷ್ಟು ಕುಣಿಯಲಿ, ಅದಕ್ಕೆ ಅವನು ಲಕ್ಷ್ಯ ಕೊಡಲಾರ. ಅವನನ್ನು  ತಣಿಸುವಂತಹದು ಅವನ ಕೆಳದಿಯ ಒಲವಿನ ಒಡನಾಟ ಮಾತ್ರ. ಆದರೆ ನಮ್ಮ ರಸಿಕ ನಾಯಕನ ಕೆಳದಿ ಇಲ್ಲಿಲ್ಲ. ಹೊಲದಲ್ಲಿ ಏನೂ ಕೆಲಸವಿಲ್ಲದಾಗ, ತನ್ನ ಗಂಡನಿಗೆ ಬುತ್ತಿಯನ್ನು ಕಟ್ಟಿಕೊಂಡು ಬರುವ ಪ್ರಸಂಗವು ಹೆಂಡತಿಗೆ ಬರುವದಿಲ್ಲ.ಅದಕ್ಕಾಗಿ ಆಕೆಯನ್ನು ಆತ ಕರೆಯುವದು ಹೀಗೆ :

ಬಿಸಿಲ್ಗುದರಿ ಕುಣಿಯಲಿ ದೂರ
ಯಾರಿಗೆ ಬೇಕು ನೀರ
ಹೀಂಗ ನನ್ನಿದಿರ
ಕಣ್ಣಳತಿಯೊಳಗ ನೀ ಬಾರ ||ಹೂತsದ

ನಾಯಕ ತನ್ನ ಕೆಳದಿಯನ್ನು  ‘ಕಣ್ಣಳತಿಯೊಳಗೆ ಬಾ’ ಎಂದು ಕರೆಯುತ್ತಾನೆಯೇ ಹೊರತು, ಮೈಗೆ ಮೈ ಹಚ್ಚಿ ಕೂಡುವಷ್ಟು ಹತ್ತಿರ ಕರೆಯುತ್ತಿಲ್ಲ. ಯಾಕೆಂದರೆ ಈ ರಸಿಕನಿಗೆ ಅವಳ ಚೆಲುವನ್ನು ಅಲ್ಪದೂರದಿಂದಲೇ ಕಂಡು ಸುಖಿಸಬೇಕಾಗಿದೆ. ಅದು ಯಾವ ರೀತಿಯ ಚೆಲುವು ಎನ್ನುವದು ಈ ನುಡಿಯಲ್ಲಿ ವ್ಯಕ್ತವಾಗಿದೆ :

ಹಾರತಿರಲಿ ಗಾಳಿಗೆ ಬಿಚ್ಚಿದ್ಹೆರಳು
ವಾರಿಯಿರಲಿ ಕೊರಳು
ಬಾಚತಿರಲಿ ಬೆರಳು
ನೋಡ್ತೇನಿ ನಿನ್ನ ಕವಿನೆರಳು ||ಹೂತsದ

ಬಿಸಿಲಿನಿಂದಾಗಿ ಏಳುತ್ತಿರುವ  ಬಯಲಸೀಮೆಯ ಗಾಳಿಗೆ ಅವಳ ಬಿಚ್ಚಿದ ಹೆರಳು ಹಾರಾಡುತ್ತಿರುವದನ್ನು ಈತ ಕಲ್ಪಿಸಿಕೊಳ್ಳುತ್ತಾನೆ. ಆ ಹಾರುತ್ತಿರುವ ಕೂದಲನ್ನು ಸರಿಪಡಿಸಿಕೊಳ್ಳಲು ಅವಳು ಕೊರಳನ್ನು ಕೊಂಕಿಸಿ, ತನ್ನ ಬೆರಳುಗಳಿಂದ ಬಾಚಿಕೊಳ್ಳುವದನ್ನು ಆತ ಮನದಲ್ಲಿಯೇ ಚಿತ್ರಿಸಿಕೊಳ್ಳುತ್ತಾನೆ. ಅವಳಿಗಿಂತ ಮೊದಲೇ ಅವಳ ನೆರಳು ಇವನ ಹತ್ತಿರಕ್ಕೆ ಬರುವದರಿಂದ, ಅವಳ ಕವಿಯುತ್ತಿರುವ ನೆರಳಿನಿಂದಲೇ ಅವಳು ತನ್ನ ಸನಿಹಕ್ಕೆ ಬಂದದ್ದನ್ನು ಈತ ಊಹಿಸಿಕೊಳ್ಳುತ್ತಾನೆ. ಎಂತಹ ಕಲ್ಪನಾಚತುರನಾಗಿದ್ದಾನೆ ನಮ್ಮ ರಸಿಕ ನಾಯಕ! ಅವನ ಮುಂದಿನ ಕಲ್ಪನೆಯು ಇನ್ನಿಷ್ಟು ಪ್ರಣಯಮಧುರವಾಗಿದೆ.

ಕಣಕಣ್ಣ ಚಕಮಕಿ ಇತ್ತ
ಕುಡಿಗಣ್ಣಿನತ್ತ
ತಾಕಿ ಹಾರಿತ್ತ
ಗಾಳಿಸವಾರಿಗ್ಹೊರಟಿತ್ತ ಚಿತ್ತ ||ಹೂತsದ

ಈ ರಸಿಕ ನಾಯಕನ ರಸಿಕ ಕೆಳದಿಯು ತನ್ನ ನಲ್ಲನನ್ನು ಸಮೀಪಿಸುವದಿಲ್ಲ , ನೇರವಾಗಿ ನೋಡುವದಿಲ್ಲ. ಕೇವಲ ಕುಡಿಗಣ್ಣಿನ ನೋಟವನ್ನು ಬೀರುತ್ತಾಳೆ, ಮತ್ತೆ ನೋಟವನ್ನು ಹೊರಳಿಸುತ್ತಾಳೆ, ಮತ್ತೆ ಅವನೊಡನೆ ಕಣ್ಣುಗಳನ್ನು ಕೂಡಿಸುತ್ತಾಳೆ. ಅವನೂ ಅಷ್ಟೇ! ಬೇಂದ್ರೆಯವರು ಇದನ್ನು ‘ಕಣಕಣ್ಣ ಚಕಮಕಿ’ ಎಂದು ಬಣ್ಣಿಸುತ್ತಾರೆ. ಬೆಣಚುಕಲ್ಲುಗಳ  ಚಕಮಕಿಯಲ್ಲಿ ಕಿಡಿ ಹಾರುವಂತೆ ಈ ಕಣ್ಣುಗಳ ಚಕಮಕಿಯಲ್ಲಿಯೂ ಸಹ ‘ತಾಕಿ ಹಾರಿತ್ತ’. ಆದರೆ ಇಲ್ಲಿ ಹಾರಿದ್ದು ತುಂಟ ಪ್ರಣಯದ ಕಿಡಿ!

ಈ ರೀತಿಯಲ್ಲಿ ನಮ್ಮ ನಾಯಕನ ಚಿತ್ತವು ಗಾಳಿಸವಾರಿಯನ್ನು ಮಾಡುತ್ತಿದೆ. ಅಂದರೆ ಗಾಳಿ ಹೇಗೆ ಎತ್ತೆತ್ತಲೊ ಬೀಸುವದೋ, ಅದೇ ತೆರದಲ್ಲಿ ಈತನ ಚಿತ್ತವೂ ಸಹ ಹಗಲುಗನಸಿನಲ್ಲಿ ಎತ್ತೆತ್ತಲೊ ಹರಿಯುತ್ತಿದೆ.
ಕವನದ ನಾಯಕನು ಈಗ ಹಗಲುಗನಸಿನಿಂದ ಹೊರಬಂದು  ವಾಸ್ತವ ಜಗತ್ತನ್ನು ನೋಡುತ್ತಾನೆ. ಆತನ ದೃಷ್ಟಿಯು ಸಮೀಪದಿಂದ ಸ್ವಲ್ಪ ದೂರದೆಡೆಗೆ ಸಾಗುತ್ತದೆ. ಅಲ್ಲಿ ಅವನಿಗೆ ಕಾಣುವದೇನು?

ಅಗೊ ಗಾಳಿ ಧೂಳಿಯಾ ಬಂಬಾ
ನಿಂತ್ಹಾಂಗ ಅದ ಖಂಬಾ
ಅಲ್ಲಿ ರೌದಿ ತುಂಬಾ
ಗಣಿ ಕುಣಿಧಾಂಗ ಡೊಂಬರ ರಂಭಾ ||ಹೂತsದ

ಸುಂಟರಗಾಳಿಯು ಸೃಷ್ಟಿಸಿದ ಧೂಳಿಯ ಬಂಬು (=bumb, ಪೊಳ್ಳಾಗಿರುವ ಸಿಲಿಂಡರಾಕಾರದ ರಚನೆ) ನಾಯಕನ ಕಣ್ಣಿಗೆ ಗಾಳಿಯ ಕಂಬವೊಂದು ನಿಂತುಕೊಂಡಂತೆ ಕಾಣುತ್ತದೆ. ಅದರ ಒಳಗೆಲ್ಲ ರವದಿಯಂತಹ (=ದಂಟಿನ ಸಿಪ್ಪೆ , ಕಸದಂತಹ) ಕ್ಷುಲ್ಲಕ ವಸ್ತು ತುಂಬಿಕೊಂಡಿದೆ. ಆದರೆ ಇಂತಹ ಸಾಮಾನ್ಯ ನೋಟವೂ ಸಹ ನಮ್ಮ ರಸಿಕ ನಾಯಕನಲ್ಲಿ ಕೌತುಕವನ್ನು ಹುಟ್ಟಿಸಬಲ್ಲದು. ಈ ಗಾಳಿಗಂಬದ ತಿರುಗುವಿಕೆಯು ಇವನ ಕಣ್ಣಿಗೆ ‘ಡೊಂಬರ ರಂಭೆ’ ಕುಣಿದಂತೆ ಕಾಣುವದು. ಹಳ್ಳಿಯಲ್ಲಿ ಕಸರತ್ತು ಮಾಡಿ ಮನರಂಜನೆ ನೀಡುವ ಕೆಲಸವನ್ನು ಡೊಂಬರು ಮಾಡುತ್ತಿದ್ದರು. ಆ ಕಸರತ್ತಿನಲ್ಲಿ ಕುಣಿಯುವ ಹುಡುಗಿ, ಈ ಹಳ್ಳಿಗರ ಪಾಲಿಗೆ ರಂಭೆ! ಈ ರೀತಿಯಾಗಿ ಗಾಳಿಯ ಬಂಬು ಕುಣಿಯುವ ರಂಭೆಯಾಗಿದೆ. ಇದು ರಸಿಕನ ಮನೋಧರ್ಮ.

ಈ ರೀತಿಯಾಗಿ ದೂರಕ್ಕೆ ಹರಿದ ಇವನ ದೃಷ್ಟಿಯು ಅಲ್ಲಲ್ಲಿ ಹರಿದಾಡುತ್ತ ಮತ್ತೆ ತನ್ನ ಸನಿಹದ ಹುಣಿಸೆ ಮರದ ಸನಿಹಕ್ಕೇ ಬರುವದು. ಅಲ್ಲಿ ಮರದ ಮೇಲುಭಾಗದಲ್ಲಿ ಇವನಿಗೆ ಪಾರಿವಾಳದ ಜೋಡಿಯೊಂದು ಕಾಣುವದು. ಬಿಸಿಲು, ಮಳೆ, ಚಳಿ ಇವೆಲ್ಲ ಮನುಷ್ಯಮಾತ್ರರಿಗೆ ಸಹನೀಯವಾಗದಿರಬಹುದು. ಆದರೆ ನಿಸರ್ಗದ ಶಿಶುಗಳಾದ ಪಕ್ಷಿ, ಪ್ರಾಣಿಗಳಿಗೆ ಈ ವೈಪರೀತ್ಯದ ಪರಿವೆಯೇ ಇಲ್ಲ.

ಮ್ಯಾಲೆ ಅಲ್ಲಿ ಪಾರಿವಾಳ ಜೋಡಿ
ಒಂದಕ್ಕೊಂದ ನೋಡಿ
ಬಿಸಿಲ ತೆರೆ ದೂಡಿ
ಹಾರ್ತsದ ನೀಲಿಮುಗಿಲ್ಕೂಡಿ  ||ಹೂತsದ

ಪಾರಿವಾಳದ ಜೋಡಿಯು ಪ್ರೇಮದ ಸಂಕೇತವೇ ಆಗಿದೆ. ಇವುಗಳ ಕೆಳೆತನವನ್ನು ನೋಡಿರಿ. ಅವು ಕ್ಷಣ ಬಿಟ್ಟು ಕ್ಷಣ, ಗೋಣು ಹೊರಳಿಸುತ್ತ ಒಂದನ್ನೊಂದು ನೋಡುತ್ತಲೇ ಇರುತ್ತವೆ. ಈ ಬಿಸಿಲಿನ ಬಾಧೆ ತಮಗೆ ಏನೂ ಅಲ್ಲ ಎಂಬಂತೆ, ಬಿಸಿಲಿನ ತೆರೆಯನ್ನು ದೂಡಿ ಹಾರುತ್ತವೆ. ಎಲ್ಲಿಗೆ?... ಬೇಸಿಗೆಯ ನಿರಭ್ರ, ನೀಲಿ ಆಕಾಶಕ್ಕೆ!

ಅವು ಎಷ್ಟು ಸಮರೂಪವಾಗಿ ಹಾರುತ್ತಿವೆ ಎಂದರೆ, ಅವುಗಳ ಹಾರಾಟವನ್ನು ಪ್ರತ್ಯೇಕಿಸದೆ, ‘ಹಾರುತ್ತಿದೆ ಜೋಡಿ…..ಕೂಡಿ’ ಎಂದು ಬಣ್ಣಿಸಲಾಗಿದೆ ! ಹಾರುತ್ತಿರುವ ಈ ಜೋಡಿಯನ್ನು ಕಂಡಾಗ, ನಮ್ಮ ನಾಯಕನೂ ಸಹ ಮುಗಿಲನ್ನು ನಿಟ್ಟಿಸುತ್ತಾನೆ. ನೀಲಿ ಬಣ್ಣದ ಆಕಾಶದ ಆ ಡುಬರಿಯು ಆತನಿಗೆ ನೀರಿನ ಕೊಳದಂತೆ ಕಾಣುವದು.

ಕಂಡಂಗಾತು ನೀರಿನ ಕೊಳ
ನೀಲಿ ಮುಗಿಲ ಜಳಾ
ಎಂಥ ಝಳ ಝಳಾ
ಮುಳುಮುಳುಗಿ ಹೋತು ಮನದ ಧೂಳಾ ||ಹೂತsದ

ಡುಬರಿಬಿದ್ದ ನೀಲಿ ಆಕಾಶವು ಇವನಿಗೆ ‘ಜಳಾ’ ಅಂದರೆ ‘ಜಲ’ದಿಂದ (=ನೀರಿನಿಂದ) ತುಂಬಿದ ಕೊಳದಂತೆ ಕಾಣುವದು. ಜಳ ಪದಕ್ಕೆ ಸ್ವಚ್ಛ ಎನ್ನುವ ಅರ್ಥವೂ ಇದೆ. ಈ ನೀಲಾಕಾಶವೂ ಸಹ ಸ್ವಚ್ಛವಾದ ನೀರಿನ ಕೊಳದಂತೆ, ‘ಜಳಜಳ’ (=ಸ್ವಚ್ಛ)ವಾಗಿ ಆತನಿಗೆ ತೋರುವದು.
( ‘ಜಳ’ ಅಂದರೆ ಸ್ವಚ್ಛ ; ‘ಜಲ’ ಅಂದರೆ ನೀರು. ಈ ಪದಕ್ಕೆ ಇರುವ ಎರಡೂ ಅರ್ಥಗಳನ್ನು ಬೇಂದ್ರೆಯವರು ಇಲ್ಲಿ ಬಳಸಿಕೊಂಡಿದ್ದಾರೆ.) ಸ್ವಚ್ಛವಾದ ಮುಗಿಲು ಹಾಗು ಅದು ಸೂಸುವ ತಾಪ ಎರಡೂ ಅವನ ಅನುಭವಕ್ಕೆ ಬಂದಾಗ, ಆತ ‘ಎಂಥ ಝಳ ಝಳಾ’ ಎಂದು ಉದ್ಗರಿಸುತ್ತಾನೆ! (ಝಳ ಎಂದರೆ ತಾಪ, ಸೆಕೆ ; ಝಳಝಳ ಎಂದರೆ ಸ್ವಚ್ಛ !)

‘ಶುದ್ಧವಾದ ವಸ್ತುವನ್ನು ನೋಡಿದಾಗ ನಾವೂ ಶುದ್ಧವಾಗುತ್ತೇವೆ’ ಎಂದು ಶಾಸ್ತ್ರ ಹೇಳುತ್ತದೆ. ಹಳ್ಳಿಯ ಈ ಸಾಮಾನ್ಯ ವ್ಯಕ್ತಿಗೆ ಶಾಸ್ತ್ರ ಗೊತ್ತಿಲ್ಲ. ಆದರೆ ಝಳಝಳ ಆಕಾಶದಲ್ಲಿ ಅವನ ನೋಟ ನೆಟ್ಟಾಗ, ಅವನ ಮನಸ್ಸಿನಲ್ಲಿರಬಹುದಾದ ಧೂಳೆಲ್ಲ ಹೊರಟು ಹೋಗಿ ಅವನು ನಿರ್ಮಲ ಚಿತ್ತನಾಗುತ್ತಾನೆ.  ಈ ರೀತಿಯಾಗಿ ಸಮಯ ಸಾಗುತ್ತಿರಲು, ಮನಸ್ಸಿನ ಎಲ್ಲ ಉಪಾಧಿಗಳು ಮಾಯವಾಗಿ ಋಷಿಗಳು ಹೇಳುವ ‘ಶೂನ್ಯಮನೋಸ್ಥಿತಿ’ಯನ್ನು ಈತ ಮುಟ್ಟುತ್ತಾನೆ.

ಕಾಲ ಹೋಗತಿತ್ತ ಹಿಂದ ಸರಿದು
ಮನಸು ಆತ ಬರಿದು
ಮಧ್ಯಾನ ಬ್ಯಾಸರ ಮುರಿದು
ಬಿಸಿಲ ತಾನs ಹೋಗತಿತ್ತ ಹರಿದು ||ಹೂತsದ

ಬಿಸಿಲುಕಾಲದ ಮಧ್ಯಾಹ್ನದಲ್ಲಿ ಏನೂ ಕೆಲಸವಿಲ್ಲದೆ, ರಣರಣ ಹೊಡೆಯುವ ಬಿಸಿಲಿನಿಂದ ಬೇಸರಗೊಂಡ ಈತನ ಮನಸ್ಸು ಹೂತ ಹುಣಸಿಯ ಮರವನ್ನು ಕಂಡ ಬಳಿಕ, ಚಿತ್ತವಿಲಾಸದಲ್ಲಿ ತೊಡಗಿ, ಕೊನೆಗೆ ಅಲೆಗಳಿಲ್ಲದ ಸರೋವರದಂತಹ ನಿರ್ಭಾವವನ್ನು ಮುಟ್ಟುತ್ತದೆ. (ನಿರ್ವಾಣ ಸ್ಥಿತಿ ಎನ್ನೋಣವೆ?) ಇದೇ ರೀತಿ ಕಾಲ ಸರಿದು ಹೋಗುತ್ತಿದೆ, ಬಿಸಿಲು ಹರಿದು ಹೋಗುತ್ತಿದೆ. ಮನಸ್ಸು ನಿರಾಳಸುಖವನ್ನು ಅನುಭವಿಸುತ್ತಿದೆ.

ಪ್ರಕೃತಿಯಲ್ಲಿ ಭಾವಸಮಾಧಿ ಹೊಂದುವ ಇಂತಹ ಮನೋಸ್ಥಿತಿಯು ಸಮಾಧಾನ ಚಿತ್ತವುಳ್ಳ ವ್ಯಕ್ತಿಗೆ ಮಾತ್ರ ಸಾಧ್ಯ! ಇವನೇ ನಿಜವಾದ ಕವಿಹೃದಯ ಉಳ್ಳವನು. ಈತ ಪಂಡಿತನಿರಬೇಕಿಲ್ಲ, ನಾಗರಿಕನಿರಬೇಕಿಲ್ಲ. (ಇರದಿರುವದೇ ಉತ್ತಮ!?) ಅದಕ್ಕೆಂದೇ ಈ ಕವನದ ಕೊನೆಯ ಭರತವಾಕ್ಯವನ್ನು ಬೇಂದ್ರೆ ಈ ರೀತಿ ಹೇಳುತ್ತಾರೆ :

ಕವಿ ಜೀವದ ಬ್ಯಾಸರ ಹರಿಸಾಕ
ಹಾಡ ನುಡಿಸಾಕ
ಹೆಚ್ಚಿಗೇನು ಬೇಕ?
ಒಂದು ಹೂತ ಹುಣಸಿಮರ ಸಾಕ ||ಹೂತsದ

ಕವಿಜೀವದ ಬೇಸರವು ಹರಿದ ಬಳಿಕ, ಕವಿಯ ಸುಖವು ಹಾಡಿನ ರೂಪದಲ್ಲಿಯೇ ಹೊರಹೊಮ್ಮಬೇಕಲ್ಲವೆ? ಆಗ ಆತನು ಹಾಡಿದ ಹಾಡು ಕವಿಗೆ ಸುಖ ನೀಡುವಂತೆಯೆ ಕೇಳುಗರಿಗೂ ಸುಖ ನೀಡುವದು. ಕವಿಗೆ ಹಾಗು ರಸಿಕರಿಗೆ ಸುಖ ನೀಡಲು ಹೂವು ಬಿಟ್ಟ ಹುಣಸಿ ಮರವೇ ಸಾಕು!
-------------------------------------------------------------

ಕವನದ ವೈಶಿಷ್ಟ್ಯಗಳು:
ಕವನಕ್ಕೆ ಸಮರ್ಪಕವಾದ ಛಂದಸ್ಸನ್ನು ಬಳಸುವದರಲ್ಲಿ ಬೇಂದ್ರೆಯವರನ್ನು ಸರಿಗಟ್ಟಬಲ್ಲವರಿಲ್ಲ. ‘ಪಾತರಗಿತ್ತಿ ಪಕ್ಕಾ’ ಕವನದಲ್ಲಿ ಅವರು brief and fluttering ಛಂದಸ್ಸನ್ನು ಬಳಸಿ, ಪಾತರಗಿತ್ತಿಯ ಹಿಂದೆಯೇ ಹಾರುತ್ತಾರೆ. ‘ಹೂತದ ಹುಣಸಿ’ ಕವನದ ಛಂದಸ್ಸನ್ನು ನೋಡಿರಿ. ಹಳ್ಳಿಯ ಸಾಮಾನ್ಯ ವ್ಯಕ್ತಿಯೊಬ್ಬನು ತನ್ನಷ್ಟಕ್ಕೆ ರಾಗವಾಗಿ ಮಾತನಾಡಿಕೊಳ್ಳುತ್ತಿರುವ ಛಂದಸ್ಸು ಈ ಕವನಕ್ಕಿದೆ. ಇಲ್ಲಿ ಬಳಸಲಾದ ಎಲ್ಲ ಪದಗಳೂ ಹಳ್ಳಿಗರು ಬಳಸುವ ದೇಸಿ ಪದಗಳೇ ಆಗಿವೆ. ಅಂತಹ ಪದಗಳಲ್ಲಿಯೇ ವಿವಿಧಾರ್ಥಗಳನ್ನು (pun) ಹೊರಡಿಸಬಲ್ಲ ಸಾಮರ್ಥ್ಯವನ್ನು  ಬೇಂದ್ರೆ ತೋರಿಸಿದ್ದಾರೆ.

ಬೇಂದ್ರೆಯವರ ಚಿತ್ರಕ ಶಕ್ತಿಯೂ ಅದ್ಭುತವಾದದ್ದು. ಕವನವನ್ನು ಓದುತ್ತಿದ್ದಂತೆಯೇ ಹೂವು ಬಿಟ್ಟ ಹುಣಸಿ ಮರವು ಕಣ್ಣಿಗೆ ಕಟ್ಟುತ್ತದೆ. ಅಷ್ಟೇ ಏಕೆ, ಬಿಸಿಲು ಹಾಗು ಗಾಳಿಯಂತಹ ನಿರ್ಜೀವ ವಸ್ತುಗಳಿಗೆ ಬೇಂದ್ರೆ ಇಲ್ಲಿ ಜೀವ ಕೊಟ್ಟಿದ್ದಾರೆ. ಡೇರೆಯನ್ನು ಹೊಡೆದುಕೊಂಡು ಪಹರೆ ಮಾಡುವ ಕಾವಲುಗಾರನ ರೂಪವನ್ನು ಬಿಸಿಲು ತಾಳುತ್ತದೆ. ದಿಕ್ಕು ನೋಡದೆ ಹರಿಯುವ ಗಾಳಿಯು ಸಿಳ್ಳು ಹಾಕುವ ನಿಶ್ಚಿಂತ ತರುಣನ ವ್ಯಕ್ತಿತ್ವವನ್ನು ಪಡೆಯುತ್ತದೆ.  ಸುಂಟರಗಾಳಿಯ ಬಂಬನ್ನು ಅವರು ಬಣ್ಣಿಸುವಾಗ, ಆ ಬಂಬು ಕಣ್ಣೆದುರಿಗೇ ನಿಲ್ಲುತ್ತದೆ. ನಾಯಕನ ಕೆಳದಿಯು ಒನಪು-ವೈಯಾರದ, ಹಳ್ಳಿಯ ಬೆಡಗಿಯಾಗಿ ನಮ್ಮ ಮನದಲ್ಲಿ ನಿಲ್ಲುತ್ತಾಳೆ.

‘ಉಪಮಾ ಕಾಲಿದಾಸಸ್ಯ’ ಎಂದು ಹೇಳುತ್ತಾರೆ. ಉಪಮೆಗಳನ್ನು ಕೊಡುವದರಲ್ಲಿ ಬೇಂದ್ರೆಯವರು ಕಾಲಿದಾಸನಿಗೆ ಸರಿಸಾಟಿ ಎನ್ನಬಹುದು. ಹುಣಸಿಯ ಚಿಗುರುಗಳನ್ನು ಮದರಂಗಿ ಹಚ್ಚಿದ ಉಗುರುಗಳಿಗೆ ಹೋಲಿಸುವದರಲ್ಲಿ , ಹುಣಸಿಯ ರೆಂಬೆಯನ್ನು ಕಾಮನಬಿಲ್ಲಿನ ತುದಿಗಳಿಗೆ ಹೋಲಿಸುವದರಲ್ಲಿ ಅಥವಾ ಸುಂಟರಗಾಳಿಯ ಕುಣಿತವನ್ನು ಡೊಂಬರ ರಂಭೆಯ ಕುಣಿತಕ್ಕೆ ಹೋಲಿಸುವದರಲ್ಲಿ ಇವರ ವಾಸ್ತವಪ್ರಜ್ಞೆ ಹಾಗು ಉಪಮಾ ಪ್ರತಿಭೆ ವ್ಯಕ್ತವಾಗುತ್ತವೆ. ಆದರೆ ನಮ್ಮ ನಾಯಕನ ರಸಿಕ ವ್ಯಕ್ತಿತ್ವವನ್ನು ಬಯಲುಗೊಳಿಸುವದೇ ಈ ಉಪಮೆಗಳ ನೈಜ ಉದ್ದೇಶವಾಗಿದೆ.

ಇಲ್ಲಿ ಮತ್ತೊಂದು ಸಾಮ್ಯವನ್ನು ಗಮನಿಸಬೇಕು. ಚಿಗುರು ಬಿಟ್ಟ ಹುಣಸಿಯ ಮರವು ಫಲಿತವಾಗಲು ದುಂಬಿಗಾಗಿ ಕಾಯುತ್ತದೆ. ಅದರಂತೆಯೇ, ಉಗುರಿಗೆ ಮದರಂಗಿಯನ್ನು ಹಚ್ಚಿಕೊಂಡ ಹುಡುಗಿಯು ತನ್ನ ನಲ್ಲನಿಗಾಗಿ ಕಾತರಿಸುತ್ತಾಳೆ. ಈ ಎರಡೂ ಕ್ರಿಯೆಗಳು ಸೃಷ್ಟಿಗಾಗಿ ಇವೆ. ಆದುದರಿಂದಲೇ, ನಮ್ಮ ನಾಯಕನು ತನ್ನ ಕೆಳದಿಯ  ಹಗಲುಗನಸು ಕಾಣುವ ವರ್ಣನೆ ಮುಂದಿನ ನುಡಿಗಳಲ್ಲಿ ಬರುತ್ತದೆ.

ಉಮರ ಖಯ್ಯಾಮನ ‘ರುಬಾಯತ್’ ಕಾವ್ಯವು ಜೀವನಪ್ರೀತಿಯ ತತ್ವಕ್ಕಾಗಿ ತುಂಬ ಪ್ರಸಿದ್ಧವಾಗಿದೆ. ಆ ಕಾವ್ಯದಲ್ಲಿ ಬರುವ  ‘Come, fill the cup ಎನ್ನುವ ಸಾಲಂತೂ ಎಲ್ಲೆಲ್ಲೂ ಉದ್ಧೃತವಾಗಿದೆ:
ನಮ್ಮ ಹಳ್ಳಿಯ ಗೃಹಸ್ಥನಿಗೆ ಇದಕ್ಕಿಂತ ಹೆಚ್ಚಿನ ತತ್ವಜ್ಞಾನವು ತನ್ನ ಗ್ರಾಮೀಣ ಸಂಸ್ಕೃತಿಯ ಮೂಲಕವೇ ಅರಿವಾಗಿದೆ. ಅದಕ್ಕೆಂದೇ ಆತ ತನ್ನ ಕೆಳದಿಯನ್ನು ಒಲವಿನಿಂದ ನೋಡಬಯಸುವದು ಹೀಗೆ:

ಹಾರತಿರಲಿ ಗಾಳಿಗೆ ಬಿಚ್ಚಿದ್ಹೆರಳು
ವಾರಿಯಿರಲಿ ಕೊರಳು
ಬಾಚತಿರಲಿ ಬೆರಳು
ನೋಡ್ತೇನಿ ನಿನ್ನ ಕವಿನೆರಳು ||ಹೂತsದ

ರಚನೆಯ ವೈಶಿಷ್ಟ್ಯ:
ಹೂವು ಬಿಟ್ಟ ಹುಣಸಿಯ ಮರವು ಎಂತಹ ಮನೋವಿಲಾಸಕ್ಕೆ, ಎಂತಹ ನೆಮ್ಮದಿಗೆ ಕಾರಣವಾಗಬಹುದು ಎನ್ನುವದನ್ನು ಬೇಂದ್ರೆಯವರು ನುಡಿಗೆ ನುಡಿ ಜೋಡಿಸುತ್ತ ಅತ್ಯಂತ ಕ್ರಮಬದ್ಧವಾಗಿ ತೋರಿಸುತ್ತ ಹೋಗಿದ್ದಾರೆ. ನಿರುದ್ದಿಶ್ಯವಾಗಿ ಚಲಿಸುತ್ತಿರುವ ಮನಸ್ಸಿನ ವಿಲಾಸವನ್ನು ಚಿತ್ರಿಸುವ ಕಲ್ಪನಾಸಾಮರ್ಥ್ಯವು ಬೇಂದ್ರೆಯವರ ಪ್ರತಿಭೆಯ ಫಲವಾದರೆ, ಉದ್ದೇಶಪೂರ್ಣ ಕ್ರಮಬದ್ಧತೆಯು ಅವರ ಪಾಂಡಿತ್ಯದ ಫಲವಾಗಿದೆ. ಪ್ರತಿಭೆ ಹಾಗು ಪಾಂಡಿತ್ಯ ಇವೆರಡೂ ಬೇಂದ್ರೆಯವರಲ್ಲಿ ಸಮರಸವಾಗಿ ಮೇಳವಿಸಿರುವದರಿಂದಲೇ ‘ಹೂತದ ಹುಣಸಿ’ಯಂತಹ ಶ್ರೇಷ್ಠ ಕವನವು ಅವರ ಮನದಲ್ಲಿ ಮೂಡಲು ಸಾಧ್ಯವಾಗಿದೆ ಎನ್ನಬಹುದು.

‘ಒಂದು ಹೂತ ಹುಣಸಿಮರವನ್ನು ಕಂಡರೂ ಸಾಕು, ಪ್ರಕೃತಿಯಲ್ಲಿ ಭಾವಸಮಾಧಿ ಹೊಂದಬಲ್ಲ  ಸಾಮರ್ಥ್ಯ ಕವಿಜೀವಕ್ಕೆ ಇದೆ’, ಎಂದು ಬೇಂದ್ರೆ ಕೊನೆಯ ನುಡಿಯಲ್ಲಿ ಹೇಳುತ್ತಾರೆ. ಇಂತಹ ಕಾವ್ಯರಚನೆಯನ್ನು ಮಾಡುವ ಸಾಮರ್ಥ್ಯವು ಕಾವ್ಯದಲ್ಲಿ ಸಮಾಧಿಸ್ಥನಾಗಬಲ್ಲ ವರಕವಿಗೆ ಮಾತ್ರ ಸಾಧ್ಯ, ಅಲ್ಲವೆ.
ಹೆಚ್ಚಿನ ಓದಿಗೆ: http://sallaap.blogspot.com/2010/12/s.html

ಕಾಮೆಂಟ್‌ಗಳಿಲ್ಲ: