ಕಪ್ಪೆ ರಾಜಕುಮಾರಿಯ ಕತೆ

ಕಪ್ಪೆ ರಾಜಕುಮಾರಿಯ ಕತೆ
ಒಂದೂರಲ್ಲಿ ಒಬ್ಬ ರಾಜ ಇದ್ದ. ಅವನಿಗೆ ಮೂರು ಗಂಡು ಮಕ್ಕಳು. ರಾಜಕುಮಾರರು ಮದುವೆ ವಯಸ್ಸಿಗೆ ಬಂದಾಗ ಅವರಿಗೆ ಮದುವೇ ಮಾಡಲು ರಾಜ ಒಂದು ಸ್ಪರ್ಧೆ ಏರ್ಪಡಿಸುತ್ತಾನೆ. ಮೂರೂ ರಾಜಕುಮಾರರಿಗೂ ಒಂದೊಂದು ಬಿಲ್ಲು ಬಾಣ ಕೊಟ್ಟು, ಯಾರು ಯಾರ ಮನೆಗೆ ಬಾಣವನ್ನು ಕಳಿಸುತ್ತಾರೊ ಅವರ ಮನೆಯಿಂದ ಹೆಣ್ಣನ್ನು ತಂದು ಮದುವೆ ಮಾಡಲಾಗುವುದು ಎಂದು ಹೇಳುತ್ತಾನೆ.
       ಮೊದಲನೇ ರಾಜಕುಮಾರ ಅಗಸರ ಮನೆಗೆ ಬಾಣ ಕಳಿಸುತ್ತಾನೆ. ಸರಿ ಅವನಿಗೆ ಅಗಸರ ಮಗಳೊಡನೆ ಮದುವೆ ಅಗುತ್ತದೆ. ಎರಡನೇ ರಾಜಕುಮಾರ ಕುಂಬಾರನ ಮನೆಗೆ ಬಾಣ ಕಳಿಸುತ್ತಾನೆ. ಅವನಿಗೆ ಕುಂಬಾರನ ಮಗಳೊಡನೆ ಮದುವೆ ಆಗುತ್ತದೆ. ಕಿರಿಯ ರಾಜಕುಮಾರ ಕಪ್ಪೆ ಮನೆಗೆ ಬಾಣ ಕಳಿಸುತ್ತಾನೆ. ರಾಜ ಆಡಿದ ಮಾತಿನಂತೆ, ಕೊನೆಯವನಿಗೆ ಕಪ್ಪೆಯ ಮಗಳೊಡನೆ ಮದುವೆ ಮಾಡುತ್ತಾನೆ. ಕಿರಿಯ ರಾಜಕುಮಾರ ಕಪ್ಪ್ದೆಗಾಗಿ ಒಂದು ಗೂಡನ್ನು ಕಟ್ಟಿ ಅಲ್ಲಿ ಕಪ್ಪೆ ವಾಸಿಸುವಂತೆ ಎರ್ಪಾಡು ಮಾಡುತ್ತಾನೆ.
       ಒಮ್ಮೆ ರಾಜ ತನ್ನ ಮೂರು ಪುತ್ರರನ್ನು ಕರೆದು ನಾಳೆ ನೀವೆಲ್ಲರೂ ನಿಮ್ಮ ಹೆಂಡತಿಯರಿಂದ ಒಂದು ಮಗುವಿನ ಉಡುಗೆಯನ್ನು ತಯಾರಿಸಿಕೊಂಡು ಬರಬೇಕು ಎಂದು ಅಪ್ಪಣೆಯಿತ್ತ. ಅಗಸ ಮತ್ತು ಕುಂಬಾರನ ಮಗಳು ಹೇಗೊ ತಮಗೆ ತಿಳಿದ ಹಾಗೆ ಉಡುಗೆಯನ್ನು  ತಯಾರಿಸಿದರು. ಕಿರಿಯ ರಾಜಕುಮಾರ ತನ್ನ ಮನೆಗೆ ಬಂದು ಅಳುತ್ತಾ ಕುಳಿತ. ಆಗ ಕಪ್ಪೆ ತನ್ನ ಗೂಡಿನಿಂದ ಹೊರಬಂದು ಯಾಕೆ ಅಳುತಿದ್ದೀಯಾ ಎಂದು ಕೇಳಿತು. ಅದಕ್ಕೆ ರಾಜಕುಮಾರ, ಅಪ್ಪ ಹೇಳಿದ್ದಾರೆ ನಿನ್ನ ಕೈಯಿಂದ ಮಕ್ಕಳ ಉಡುಪನ್ನು ತಯಾರಿಸಿಕೊಂಡು ಬರಬೇಕು ಎಂದು, ಆದರೆ ನೀನೊ ಕಪ್ಪೆ ನೀನು ಹೇಗೆ ಉಡುಪನ್ನು ತಯಾರಿಸಬಲ್ಲೆ ಎಂದು ಮತ್ತೆ ಅಳತೊಡಗಿದ. ಆಗ ಕಪ್ಪೆ ಅದಕ್ಯಾಕೆ ಅಳುತ್ತೀಯಾ, ನನಗೆ ಉಡುಗೆ ತಯಾರಿಸುವ ವಿಧಾನ ಗೊತ್ತು ಎಂದು ಹೇಳಿ ತನ್ನ ಗೂಡಿಗೆ ಹೊಗಿ ಹೊರಬರುವಾಗ ಒಂದು ಸುಂದರ ಉಡುಗೆಯನ್ನು ತಂದು ಕಪ್ಪೆ ರಾಜಕುಮಾರನಿಗೆ ನೀಡಿತು. ರಾಜಕುಮಾರನಿಗೆ ಆಶ್ಚರ್ಯವೊ ಆಶ್ಚರ್ಯ. ಸಂತೋಷದಿಂದ ನಾಳೆ ಆಸ್ತಾನಕ್ಕೆ ಉಡುಗೆಯನ್ನು ಕೊಂಡೊಯುತ್ತಾನೆ. ರಾಜ ಮೊದಲಿಗೆ ಅಗಸನ ಮಗಳ ಉಡುಗೆ ನೋಡುತ್ತಾನೆ, ಅಷ್ಟೇನೂ ನಯಗಾರಿಕೆಯಿಲ್ಲದ ಉಡುಗೆ ಎಂದು ತಿರಸ್ಕರಿಸುತ್ತಾನೆ. ನಂತರ ಕುಂಬಾರನ ಮಗಳ ಉಡುಗೆಯನ್ನು ಕೂಡ ತಿರಸ್ಕರಿಸುತ್ತಾನೆ. ಕಿರಿಯ ರಾಜಕುಮಾರ ಉಡುಗೆಯನ್ನು ತೋರಿದಾಗ ರಾಜನ ಕಣ್ಣುಗಳು ಅಗಲವಾಗಿ, ವಾಹ್ ಎಂಬ ಉದ್ಗಾರದೊಂದಿಗೆ ಕಿರಿಯ ಮಗನನ್ನು ಆಲಂಗಿಸಿ ಕಪ್ಪೆ ತಯಾರಿಸಿದ ಉಡುಗೆ ಅತ್ಯುತ್ತಮವಾದುದೆಂದು ಬಹುಮಾನವನ್ನು ಕೊಡುತ್ತಾನೆ.
        ಇನ್ನೂ ಕೆಲವು ದಿನಗಳಾದ ಮೇಲೆ ರಾಜ ಮತ್ತೆ ತನ್ನ ಮೂರು ಪುತ್ರರನ್ನು ಕರೆದು, ಮಕ್ಕಳೆ ನಿಮ್ಮ ಹೆಂಡಂದಿರಿಂದ ಒಂದು ಒಳ್ಲೆಯ ಸಿಹಿತಿಂಡಿಯನ್ನು ಮಾಡಿಸಿ ತನ್ನಿ ಎಂದು ಅಪ್ಪಣೆ ಕೊಡುತ್ತಾನೆ. ಈ ಬಾರಿ ಅಗಸನ ಮಗಳು ಮತ್ತು ಕುಂಬಾರನ ಮಗಳು ಕಪ್ಪೆ ಇಷ್ಟು ಸುಂದರವಾಗಿ ಉಡುಗೆ ಹೊಲಿದುಕೊಟ್ಟಿದೆ ಎಂದರೆ, ಈ ಬಾರಿ ಕಪ್ಪೆ ಏನು ಮಾಡುವುದೋ ಅದನ್ನೇ ನಾವೂ ಮಾಡುವುದು ಎಂದು ತೀರ್ಮಾನಿಸಿ ಕಪ್ಪೆ ಸಿಹಿತಿಂಡಿ ಮಾಡುವುದನ್ನೇ ಕಾಯುತ್ತಾ ಕುಳಿತಿದ್ದರು.
ಕಿರಿಯ ರಾಜಕುಮಾರ ತನ್ನ ಮನೆಗೆ ಬಂದು ಮತ್ತೇ ಅಳುತ್ತಾ ಕುಳಿತ. ಆಗ ಕಪ್ಪೆ ತನ್ನ ಗೂಡಿನಿಂದ ಹೊರಬಂದು ಯಾಕೆ ಅಳುತಿದ್ದೀಯಾ ಎಂದು ಕೇಳಿತು. ಅದಕ್ಕೆ ರಾಜಕುಮಾರ, ಈ ಬಾರಿ ಅಪ್ಪ ಹೇಳಿದ್ದಾರೆ ನಿನ್ನ ಕೈಯಿಂದ  ಸಿಹಿ ತಿಂಡಿಯನ್ನು ತಯಾರಿಸಿಕೊಂಡು ಬರಬೇಕು ಎಂದು, ಆದರೆ ನೀನೊ ಕಪ್ಪೆ ನೀನು ಹೇಗೆ ಸಿಹಿ ತಿಂಡಿ ತಯಾರಿಸಬಲ್ಲೆ ಎಂದು ಮತ್ತೆ ಅಳತೊಡಗಿದ. ಆಗ ಕಪ್ಪೆ ಅದಕ್ಯಾಕೆ ಅಳುತ್ತೀಯಾ, ನನಗೆ ಸಿಹಿತಿಂಡಿ ತಯಾರಿಸುವ ವಿಧಾನ ಗೊತ್ತು ಎಂದು ಹೇಳಿ ತನ್ನ ಗೂಡಿಗೆ ಹೊಗಿ ಹೊರಬರುವಾಗ ಒಂದು ಕೇಕಿನಿಂದ ಮಾಡಿದ ಅರಮನೆಯನ್ನು ತಂದು ಕಪ್ಪೆ ರಾಜಕುಮಾರನಿಗೆ ನೀಡಿತು. ರಾಜಕುಮಾರನಿಗೆ ಆಶ್ಚರ್ಯವೊ ಆಶ್ಚರ್ಯ ಜೊತೆಗೆ ಸಂತೋಷವೂ ಅಯಿತು. ಕಪ್ಪೆ ಅಗಸನ ಮಗಳು ಕುಂಬಾರನ ಮಗಳು ನನ್ನ ಸಿಹಿತಿಂಡಿಯನ್ನು ಕಾಪಿ ಮಾಡಲು ಕಾಯುತ್ತಿರುವುದು ತಿಳಿದು ಎಲ್ಲರಿಗೂ ಕಾಣುವಂತೆ ಕೇಕ್ ಮಾಡಲು ಶುರುಮಾಡಿತು. ಮರೆಯಲ್ಲಿ ಅವಿತು ಅಗಸನ ಮಗಳು ಕುಂಬಾರನ ಮಗಳು ಕಪ್ಪೆ ಮಾಡುವರೀತಿಯಲ್ಲಿ ತಾವು ಕೇಕ್ ಮಾಡಲು ಪ್ರಾರಂಭಿಸಿದರು. ಎಲ್ಲಾಮಾಡಿ ಬೇಯಿಸುವಮುನ್ನ ಕಪ್ಪೆ ಸ್ವಲ್ಪ  ಹಸುವಿನ ಸೆಗಣಿಯನ್ನು ಕೇಕ್ ಮಿಶ್ರಣಕ್ಕೆ ಹಾಕಿತು. ಅಗಸನ ಮಗಳು ಕುಂಬಾರನ ಮಗಳು  ಸಗಣಿಯ ಬಗ್ಗೆ ಸ್ವಲ್ಪ ಅನುಮಾನಿತರಾದರೂ, ಅದನ್ನು ಹಾಕದೇ ಹೊದರೆ ಕೇಕ್ ಚೆನ್ನಾಗಿ ಬರುವುದಿಲ್ಲವೇನೊ ಎಂದುಕೊಂಡು ತಾವು ಸೆಗಣಿಯನ್ನು ಹಾಕಿ ಕೇಕ್ ಮುಗಿಸಿದರು.
          ಮಾರನೇ ದಿನ ಮೊದಲು ಅಗಸನ ಮಗಳ ಕೇಕ್ ತರಿಸಿದ ರಾಜ, ಅದರಿಂದ ಬರುತಿದ್ದ ಸೆಗಣಿ ವಾಸನೇ ನೊಡಿಯೆ ಕೇಕನ್ನು ಕಸದ ಬುಟ್ಟಿಗೆ ಎಸೆದ. ಕುಂಬಾರನ ಮಗಳ ಕೇಕ್ ಕೂಡಾ ಕಸದ ಬುಟ್ಟಿ ಸೇರಿತು. ಕಪ್ಪೆಯ ಕೇಕ್ ನೊಡಿ ರಾಜ ಸಂತೊಷಭರಿತನಾಗಿ ಕಿರಿಯಮಗನಿಗೆ ಮತ್ತೆ ಬಹುಮಾನ ಕೊಟ್ಟ.
ಸ್ವಲ್ಪ ದಿನಗಳ ನಂತರ ರಾಜ ಮತ್ತೆ ತನ್ನ ಮೂರು ಪುತ್ರರನ್ನು ಕರೆದು, ಮಕ್ಕಳೆ ನಾಳೆ ನಿಮ್ಮ ಹೆಂಡತಿಯರು ಸಭಾಂಗಣದಲ್ಲಿ ನೃತ್ಯ ಮಾಡಬೇಕು ಎಂದು ಅಪ್ಪಣೆ ಕೊಟ್ಟನು.ಅಗಸನ ಮಗಳು ಮತ್ತು ಕುಂಬಾರನ ಮಗಳು ತಮಗೆ ಕುಣಿಯುವುದಕ್ಕೆ ಬರದೇ ಇದ್ದರೂ ನಮಗೆ ಕಾಲುಗಳಿವೆ ಮನಸ್ಸಿಗೆ ಬಂದ ಹಾಗೆ ಕುಣಿಯುವುದು ಎಂದು ನಿರ್ಧರಿಸಿದರು. ಕಿರಿಯ ರಾಜಕುಮಾರ ಎಂದಿನಂತೆ ಮನಗೆ ಬಂದು ಅಳುತ್ತಾ ಕುಂತನು. ಕಪ್ಪೆ ತನ್ನ ಗೂಡಿನಿಂದ ಹೊರಬಂದು ಮತ್ತೆ ಯಾಕೆ ಅಳುತಿದ್ದೀಯ ಎಂದಿತು. ಅದಕ್ಕೆ ರಾಜಕುಮಾರನು ’ನೀನು ಬಟ್ಟೆಯನ್ನು ಹೊಲಿದೆ, ಸಿಹಿತಿಂಡಿಯನ್ನೂ ಮಾಡಿದೆ ಆದರೆ ನನ್ನ ತಂದೆ ನಾಳೆ ನೀನು ನೃತ್ಯ ಮಾಡಬೇಕೆಂದು ಹೇಳಿದ್ದಾರೆ ಏನು ಮಾಡುವುದೆಂದು ತಿಳಿಯದೆ ಅಳುತಿದ್ದೇನೆ” ಎಂದ ಹೇಳಿದ. ಇದನ್ನು ಕೇಳಿದ ಕಪ್ಪೆ, ಹೇಳಿತು, ನಾನು ಒಬ್ಬ ಋಶಿಯ ಶಾಪದಿಂದಾಗಿ ಕಪ್ಪೆ ಯಾಗಿದ್ದೇನೆ, ನಾಳೆ, ನೃತ್ಯದ ಸಮಯಕ್ಕೆ ಸರಿಯಾಗಿ ನಾನು ಚಿನ್ನದ ರಥದಲ್ಲಿ ಬಂದಿಳಿದು ನೃತ್ಯವನ್ನು ಮಾಡುತ್ತೆನೆ ಆದರೆ ಒಂದನ್ನು  ನೆನಪಿನಲ್ಲಿಡು ನನ್ನ ಈ ಕಪ್ಪೆ ಯ ಗೂಡನ್ನು ಮಾತ್ರಾ ಸುಟ್ಟು ಹಾಕಬೇಡ. ಇದನ್ನು ಕೇಳಿದ ರಾಜಕುಮಾರನ ಸಂತೊಷಕ್ಕೆ ಎಣೆಯೆಇಲ್ಲ.
ಮಾರನೇದಿನ, ಕುಂಬಾರನ ಮಗಳು ನೃತ್ಯ ಮಾಡಲು ಬಂದಳು, ಅವಳ ನೃತ್ಯವನ್ನು ನೋಡಿ ಎಲ್ಲರೂ ನಗಲಾರಂಬಿಸಿದರು. ಇದೇ ಗತಿ ಅಗಸನ ಮಗಳಿಗೂ ಅಯಿತು. ಆಗ ಭೂಮಿ ನಡುಗಿದಂತಾಗೆ ಎಲ್ಲರೂ ಸದ್ದು ಬಂದ ಕಡೆ ತಿರುಗಿದಾಗ ಬಂಗಾರದ ರಥದಿಂದ ಸುಂದರ ರಾಜಕುಮಾರಿ ಸಭಾಂಗಣಕ್ಕೆ ಬಂದಳು. ಮೂರನೇ ರಾಜಕುಮಾರ ಇವಳೇ ನನ್ನ ಹೆಂಡತಿ ಎಂದು ತಿಳಿಸಿದಾಗ ಎಲ್ಲರಿಗೂ ಸಂತೊಷವಾಯಿತು. ಕಪ್ಪೆ ರಾಜಕುಮಾರಿ ಅದ್ಭುತವಾಗಿ ನೃತ್ಯವನ್ನು ಮಾಡಿ ಎಲ್ಲರ ಮೆಚ್ಚುಗೆಯನ್ನು ಪಡೆದಳು. ಮೂರನೇ ರಾಜಕುಮಾರ ಅತಿಯಾದ ಸಂತೋಷದಿಂದ ಮನೆಗೆ ಹೊದ ಅಲ್ಲಿದ್ದ ಕಪ್ಪೆ ಗೂಡನ್ನು ನೋಡಿ, ಇನ್ನು ಇದು ಯಾಕೆ ಬೇಕು ಎಂದು ಅದನ್ನು ಬೆಂಕಿ ಹಚ್ಚಿ ಸುಟ್ಟುಬಿಟ್ಟನು. ಅತಿಯಾದ ಸಂತೋಷದಲ್ಲಿ ಕಪ್ಪೆ ಹೇಳಿದ್ದ ಮಾತು ಮರೆತುಬಿಟ್ಟಿದ್ದನು. ಮನೆಗೆ ಹಿಂದಿರುಗಿದ ರಾಜಕುಮಾರಿ ಕಪ್ಪೆ ಗೂಡು ಸುಟ್ಟಿದ್ದನ್ನು ನೊಡಿದ ತಕ್ಷಣ ಪಾರಿವಾಳವಾಗಿ ಹಾರಿಹೊದಳು.
          ರಾಜಕುಮಾರನ ಸಂತೋಷ ಒಮ್ಮೆಲೆ ಇಳಿದು ದುಃಖಪೂರಿತನಾದನು. ರಾಜಕುಮಾರಿಯನ್ನು ಬಿಟ್ಟಿರಲಾರದೆ, ಅವಳನ್ನು ಹುಡಿಕಿ ತರುವೇನೆಂದು ರಾಜಕುಮಾರ ಹೊರಟನು. ಬಹಳಾ ದೂರ ನಡೆದಮೇಲೆ ಅವನಿಗೆ ಆಯಾಸವಾಗಿತ್ತು. ಹತ್ತಿರದಲ್ಲೇ ಒಂದು ಮನೆ ಕಾಣಿಸಿತು, ಒಳಗೆ ಹೊದ ರಾಜಕುಮಾರ ಅಲ್ಲಿ ಮುರು ಮೊಳದುದ್ದದ ಮೂಗಿರುವ ಒಬ್ಬ ಅಜ್ಜಿ ಕುಳಿತಿದ್ದುದು ಕಂಡು ತಿನ್ನಲು ಎನಾದರು ಸಿಗುವುದೇ ಎಂದು ಕೇಳಿದ. ಆ ಅಜ್ಜಿ ಅತನನ್ನು ಕೂಡಿಸಿ ಊಟ ಬಡಿಸಿದಳು. ಅಜ್ಜಿ  ನೀನು ಯಾರಪ್ಪ ಎಂದು ಕೇಳಿದಾಗ, ರಾಜಕುಮಾರ ತನ್ನ ಕತೆಯನ್ನು ಸವಿಸ್ತಾರವಾಗಿ ಹೇಳಿದ್ದನ್ನು ಕೇಳಿದ ಅಜ್ಜಿ, ನನಗೆ ನಿನ್ನ ಹೆಂಡತಿ ಎಲ್ಲಿದ್ದಾಳೆ ಎಂಬುದು ತಿಳಿದಿದೆ ಎಂದಳು. ಆಶ್ಚರ್ಯದಿಂದ ಎಲ್ಲಿದ್ದಾಳೆ ಹೇಳಜ್ಜಿ ಎಂದು ದಂಬಾಲು ಬಿದ್ದ. ಆಗ ಅಜ್ಜಿ, ನೀನು ಏಳು ಸಮುದ್ರವನ್ನು ದಾಟಿ ನಂತರ ಏಳು ಬೆಟ್ಟವನ್ನು  ಏರಿ, ಏಳನೇ ಬೆಟ್ಟದ ಮೇಲೆ ಒಂದು ಮರವಿರುತ್ತದೆ, ಅ ಮರವನ್ನು ಕಡಿದರೆ ನಿನಗೆ ಒಂದು ಪೆಟ್ಟಿಗೆ ಕಾಣುತ್ತದೆ, ಪೆಟ್ಟಿಗೇ ತೆರೆದರೆ ಒಂದು ಮೊಲವಿರುತ್ತದೆ, ಹುಷಾರಿಅಗಿರು ಮೊಲ ಓಡಿಹೊಗಬಹುದು. ಮೊಲವನ್ನು ಕತ್ತರಿಸಿದರೆ ಒಳಗೆ ಒಂದು ಪಾರಿವಾಳವಿರುತ್ತದೆ. ಹುಷಾರಾಗಿ ಪಾರಿವಾಳವನ್ನು ಹಿಡಿದಿಕೊ, ಪಾರಿವಾಳವನ್ನು ಕತ್ತರಿಸಿದರೆ ಒಂದು ಮೀನಿರುತ್ತದೆ. ಹುಷಾರಾಗಿ ಮೀನನ್ನು ಹಿಡಿದುಕೊ. ಮೀನನ್ನು ಕತ್ತರಿಸಿದರೆ ಒಳಗೆ ಒಂದು ಮೊಟ್ಟೆ ಕಾಣಿಸುತ್ತದೆ. ಆ ಮೊಟ್ಟೆಯನ್ನು ಒಡೆದರೆ ಒಳಗೆ ಒಂದು ಅರಮನೆಯಿರುತ್ತದೆ. ಅರಮನೆಯ ಮುಂದೆ ಓಂದು ಸೂಜಿಯಿರುತ್ತದೆ ಅದನ್ನು ಎತ್ತಿಕೊಂಡು ಅರಮನೆ ಒಳಗೆ ಹೊದರೆ ಅಲ್ಲಿ ನಿನ್ನ ಹೆಂಡತಿಯನ್ನು ಒಬ್ಬ ರಾಕ್ಷಸ ಚಾಟಿಯಿಂದ ಹೊಡಿಯುತ್ತಿರುತ್ತಾನೆ, ನಿನ್ನಲ್ಲಿರುವ ಸೂಜಿಯಲ್ಲಿ ರಾಕ್ಷಸನ ಪ್ರಾಣವಿರುತ್ತದೆ. ಸೂಜಿಯನ್ನು ಮುರಿ ರಾಕ್ಷಸ ಸಾಯುತ್ತಾನೆ. ನಂತರ ನೀನು ನಿನ್ನ ಹೆಂಡತಿಯನ್ನು ಮನೆಗೆ ಕರೆದೊಯ್ಯಬಹುದು. ಎಲ್ಲವನ್ನೂ ಕೇಳಿದ ರಾಜಕುಮಾರ ಅಜ್ಜಿಯನ್ನು ಕೇಳಿದ ಏಳನೇ ಬೆಟ್ಟದ ಮೇಲೆ ಎಷ್ಟೊಂದು ಮರಗಳಿರುತ್ತವೆ ಅದರಲ್ಲಿ ನೀನು ಹೇಳಿದ ಮರವನ್ನು ಹೇಗೆ ಕಂಡುಹಿಡಿಯುವುದು ಎಂದು ಕೇಳಿದಾಗ ಅಜ್ಜಿ, ನಾನು ನಿನಗೆ ಒಂದು ಮಂತ್ರಿಸಿದ ದಾರದ ಉಂಡೆಯನ್ನು ಕೊಡುತ್ತೇನೆ, ಅ ಉಂಡೆಯನ್ನು ಏಳನೇ ಬೆಟ್ಟದ ಮೇಲೆ ಬಿಡು, ಅ ಉಂಡೆ ಉರುಳಿಕೊಂಡು ಹೋಗಿ ನಿನಗೆ ಮರವನ್ನು ತೋರಿಸುತ್ತದೆ. ಅತಿಯಾದ ಸಂತೋಷದಿಂದ ಅಜ್ಜಿಗೆ ನಮಸ್ಕ್ಚರಿಸಿ ರಾಜಕುಮಾರ ಹೊರಡುತ್ತಾನೆ.
          ಹೋಗುವಾಗ ದಾರಿಯಲ್ಲಿ ಒಂದು ಮೊಲವನ್ನು ಒಂದು ನರಿ ಅಟ್ಟಿಸಿಕೊಂಡು ಹೋಗುತಿದ್ದುದನ್ನು ನೋಡಿ ರಾಜಕುಮಾರ ನರಿಯನ್ನು ಹೆದರಿಸಿ ಒಡಿಸಿ ಮೊಲವನ್ನು ರಕ್ಷಿಸಿದನು. ಮೊಲ ರಾಜನಿಗೆ ನೀನು ನನ್ನ್ನ ಪ್ರಾಣವನ್ನು ಉಳಿಸಿದ್ದರಿಂದ ನಿನ್ನ ಕಷ್ಟಕಾಲದಲ್ಲ್ನಿ ನನ್ನನ್ನು ನೆನೆಸಿಕೊ, ನಾನು ಬಂದು ನಿನಗೆ ಸಹಾಯ ಮಾಡುತ್ತೇನೇ ಎಂದು ಹೇಳಿತು. ರಾಜಕುಮಾರ ಹಾಗೆ ಅಗಲಿ ಎಂದು ತನ್ನ ಪ್ರಯಾಣ ಮುಂದುವರೆಸಿದ. ಸ್ವಲ್ಪ ದೂರದಲ್ಲಿ ಅತಿಯಾದ ಗಾಳಿಯಿಂದಾಗಿ ಒಂದು ಪಾರಿವಾಳದ ಗೂಡು ಮರದ ಮೇಲಿಂದ ಕೆಳಗೆ ಬಿದ್ದು, ಪಾರಿವಾಳಗಳು ದುಃಖಿತಗೊಂಡಿರುವುದನ್ನು ನೋಡಿ ರಾಜಕುಮಾರ, ಪಾರಿವಾಳದ ಗೂಡನ್ನು ಸುರಕ್ಷಿತವಾಗಿ ಎತ್ತಿ ಮರದಮೇಲಿಟ್ಟನು. ಅದನ್ನು ನೋಡಿದ ಪಾರಿವಾಳಗಳು ಸಂತೋಷದಿಂದ, ನಮ್ಮ ಕಷ್ಟಕಾಲದಲ್ಲಿ ನೀನು ಸಹಾಯಮಾಡಿದ್ದೀಯ ನಿನ್ನ ಕಷ್ಟಕಾಲದಲ್ಲಿ ನಮ್ಮನ್ನು ನೆನೆಸಿಕೊ, ನಾವು ಬಂದು ನಿನಗೆ ಸಹಾಯಮಾಡುತ್ತೇವೆ ಎಂದವು. ಹಾಗೆ ಆಗಲಿ ಎಂದು ರಾಜಕುಮಾರ ತನ್ನ ಪ್ರಯಾಣಮುಂದುವರೆಸಿದ. ತಾನು ದಾಟಬೇಕಾಗಿದ್ದ ಏಳು ಸಮುದ್ರಗಳಲ್ಲಿ ಮೊದಲನೇ ಸಮುದ್ರದ ಸಮೀಪ ಬಂದಾಗ, ಕೆಲವು ಮೀನುಗಳು ದಡದಲ್ಲಿ ನೀರಿನಿಂದ ಹೊರಗಡೆ ಒದ್ದಾಡುತ್ತಿರುವುದನ್ನು ಕಂಡು ರಾಜಕುಮಾರ ಎಲ್ಲ ಮೀನುಗಳನ್ನು ಎತ್ತಿ ಸಮುದ್ರದಲ್ಲಿ ಬಿಟ್ಟನು. ಆಗ ಆ ಮೀನುಗಳು ರಾಜಕುಮಾರನಿಗೆ, ನಿನ್ನ ಕಷ್ಟಕಾಲದಲ್ಲಿ ನಮ್ಮನ್ನು ನೆನೆಸಿಕೊ ನಾವು ಬಂದು ಸಹಾಯ ಮಾಡುತ್ತೇವೆ ಎಂದು ಹೇಳಿದವು.
ನಂತರ, ರಾಜಕುಮಾರ ಅಜ್ಜಿ ಹೇಳಿದಂತೆ, ಏಳು ಸಮುದ್ರ ದಾಟಿ ಮತ್ತೆ ಏಳು ಬೆಟ್ಟಗಳನ್ನು ಹತ್ತಿ, ಕೊನೆಯ ಬೆಟ್ಟದ ಮೇಲೆ ಅಜ್ಜಿ ಕೊಟ್ಟಿದ್ದ ದಾರದ ಉಂಡೆಯನ್ನು ಉರುಳಿಬಿಟ್ಟನು. ಆ ದಾರದ ಉಂಡೆ ಉರುಳಿಕೊಂಡು ಹೊಗಿ ಒಂದು ಮರದ ಕೆಳಗೆ ನಿಂತು ಕೊಂಡಿತು. ಆಗ ರಾಜಕುಮಾರನು ಆ ಮರವನ್ನು ಕತ್ತರಿಸಿದನು, ಓಳಗೆ ಅಜ್ಜಿ ಹೇಳಿದ್ದಂತೆ ಒಂದು ಪೆಟ್ಟಿಗೆ ಇತ್ತು. ಪೆಟ್ಟಿಗೆಯ ಮುಚ್ಚಳವನ್ನು ತೇರೆದಾಗ, ಅಲ್ಲಿದ್ದ ಮೊಲ ಚಂಗನೆ ಎಗರಿ ಕಾಡಿನೊಳಗೆ ಓಡಿಹೊಯಿತು. ಆಗ ರಾಜಕುಮಾರನಿಗೆ ಏನು ಮಾಡಬೇಕೊ ತಿಳಿಯದೆ ದುಃಖಿತನಾದನು, ತಟ್ಟನೆ, ತಾನು ಸಹಾಯ ಮಾಡಿದ್ದ ಮೊಲಗಳ ನೆನೆಪಾಗಿ, ಅವುಗಳನ್ನು ನೆನೆಸಿಕೊಂಡನು. ಆಗ ಮೊಲಗಳು ಬಂದು, ನಮ್ಮಿಂದ ಏನಾಗಬೇಕಾಗಿತ್ತು ಎಂದು ಕೇಳಿದವು. ಅಗ ರಾಜಕುಮಾರನು, ಪೆಟ್ಟಿಗೆಯಲ್ಲಿದ್ದ ಮೊಲವನ್ನು ಹಿಡಿದು ತಂದು ಕೊಡಬೇಕಾಗಿ ಕೇಳಿಕೊಂಡನು. ಆಗ ಮೊಲಗಳು ಹೋಗಿ ರಾಜಕುಮಾರನಿಗೆ ಬೇಕಿದ್ದ ಮೊಲವನ್ನು ಹಿಡಿದುಕೊಂಡು ಬಂದವು. ರಾಜಕುಮಾರ ಮೊಲಗಳಿಗೆ ಧನ್ಯವಾದವನ್ನು ಹೇಳಿ, ಮೊಲವನ್ನು ಕತ್ತರಿಸಿದನು, ಆಗ ಒಳಗಿದ್ದ ಪಾರಿವಾಳವು ರೊಯ್ಯನೆ ಹಾರಿಹೊಯಿತು. ಆಗ ರಾಜಕುಮಾರನಿಗೆ ಏನು ಮಾಡಬೇಕೊ ತಿಳಿಯದೆ ದುಃಖಿತನಾದನು, ತಟ್ಟನೆ, ತಾನು ಸಹಾಯ ಮಾಡಿದ್ದ ಪಾರಿವಾಳಗಳ ನೆನೆಪಾಗಿ, ಅವುಗಳನ್ನು ನೆನೆಸಿಕೊಂಡನು. ಆಗ ಪಾರಿವಾಳಗಳು ಬಂದು, ನಮ್ಮಿಂದ ಏನಾಗಬೇಕಾಗಿತ್ತು ಎಂದು ಕೇಳಿದವು. ಅಗ ರಾಜಕುಮಾರನು, ಮೊಲದೊಳಗಿದ್ದ ಪಾರಿವಾಳವು ಹಾರಿಹೊಗಿದೆ ಅದನ್ನು ಹಿಡಿದು ತಂದು ಕೊಡಬೇಕಾಗಿ ಕೇಳಿಕೊಂಡನು.ಆಗ ಪಾರಿವಾಳಗಳು ಹಾರಿ ಹೋಗಿ ರಾಜಕುಮಾರನಿಗೆ ಬೇಕಿದ್ದ ಪಾರಿವಾಳವನ್ನು ಹಿಡಿದುಕೊಂಡು ಬಂದವು. ರಾಜಕುಮಾರ ಪಾರಿವಾಳಗಳಿಗೆ ಧನ್ಯವಾದವನ್ನು ಹೇಳಿ, ಪಾರಿವಾಳವನ್ನು ಕತ್ತರಿಸಿದನು, ಅದರೊಳಗಿದ್ದ ಮೀನು ರಾಜಕುಮಾರನ ಕೈನಿಂದ ಜಾರಿ ನೀರಿನಲ್ಲಿ ಮರೆಯಾಗಿ ಹೋಯಿತು. ಚಿಂತಾಕ್ರಾಂತನಾದ ರಾಜಕುಮಾರ ತಾನು ರಕ್ಷಿಸಿದ್ದ ಮೀನುಗಳನ್ನು ನೆನೆಪಿಸಿಕೊಂಡನು. ಒಡನೆಯ ಮೀನುಗಳು ರಾಜಕುಮಾರನಿದ್ದ ಬಳಿಗೆ ಬಂದು ತಮ್ಮನ್ನು ನೆನೆಪಿಸಿಕೊಂಡ ಕಾರಣ ಕೇಳಿದವು. ರಾಜಕುಮಾರ, ತಪ್ಪಿಸಿಕೊಂಡ ಮೀನಿನ ಬಗ್ಗೆ ತಿಳಿಸಿದಾಗ, ಇತರ ಮೀನುಗಳು ಕ್ಷಣಮಾತ್ರದಲ್ಲಿ ರಾಜಕುಮಾರನಿಗೆ ಬೇಕಿದ್ದ ಮೀನನ್ನು ಹುಡುಕಿ ತಂದೊಪ್ಪಿಸಿದವು. ಹರ್ಷಚಿತ್ತನಾದ ರಾಜಕುಮಾರ ಮೀನನ್ನು ಕತ್ತರಿಸಿದಾಗ, ಅದರೊಳಗೆ ಅಜ್ಜಿ ಹೇಳಿದ್ದ ಹಾಗೆ ಒಂದು ಮೊಟ್ಟೆಯಿತ್ತು. ಅದನ್ನು ಒಡೆದನು, ಮೊಟ್ಟೆಯೊಳಗೆ ಒಂದು ಅರಮನೆಯಿತ್ತು. ಅರಮನೆಯ ಮುಂದೆ ಓಂದು ಸೂಜಿ ಬಿದ್ದಿದ್ದುದನ್ನು ನೊಡಿ ಅಜ್ಜಿ ಹೇಳಿದಂತೆ ಅದನ್ನು ಎತ್ತಿಕೊಂಡು ಅರಮನೆ ಒಳಗೆ ಹೋದನು. ಅಲ್ಲಿ ಒಬ್ಬ ರಾಕ್ಷಸ ತನ್ನ ಹೆಂಡತಿಯಾದ ಕಪ್ಪೆ ರಾಜಕುಮಾರಿಯನ್ನು ಹೊಡೆಯುತಿದ್ದುದನ್ನು ನೋಡಿ, ಆ ರಾಕ್ಷಸನಿಗೆ ತನ್ನ ಹೆಂಡತಿಯನ್ನು ಬಿಟ್ಟು ಬಿಡು ಎಂದು ಹೇಳಿದನು, ಅದಕ್ಕೆ ರಾಕ್ಷಸ ನನಗೆ ಹೇಳಲು ನೀನು ಯಾರು ಎಂದಾಗ, ರಾಜಕುಮಾರನು ತನ್ನ ಕೈಯಲ್ಲ್ಲಿದ್ದ ಸೂಜಿಯನ್ನು ತೊರಿಸಿದನು, ಆಗ ರಾಕ್ಷಸ ಹೆದರಿ, ನನಗೇನು ಮಾಡಬೇಡ ನಿನ್ನ ಹೆಂಡತಿಯನ್ನು ಬಿಟ್ಟುಬಿಡುತ್ತೇನೆ ಎಂದು ಅಂಗಲಾಚಿದ. ರಾಜಕುಮಾರ ಆ ಸೂಜಿಯನ್ನು ಮುರಿದು ರಾಕ್ಷಸನ್ನು ಸಾಯಿಸಿ ತನ್ನ ಹೆಂಡತಿಯನ್ನು ಕರೆದುಕೊಂಡು ತನ್ನ ಅರಮನೆಗೆ ಹಿಂದುರಿಗೆ, ಸುಖವಾಗಿ ನೂರು ವರ್ಷಗಳಕಾಲ ಬದುಕಿದನು.

ಕಾಮೆಂಟ್‌ಗಳಿಲ್ಲ: