೩.ಊಹೆ.

ಕಣ್ಣು ಹಾಹೆಯ ಛಿದ್ರದಾಚೆ ಬೆಳಕಿನ ಗವಿಯು!
ಬೆಳ್ಳಿ ಪರದೆಯ ಮೇಲೆ ರೂಪದ ವಿರಾಟ್ ಭೂಮ!
ನೆನಹು, ಕನಸಿನ ಕಣಿವೆಯಲ್ಲಿಯ ಜನಸ್ತೋಮ?
ತೇಜಸ್ಸಿನುದರದಲಿ: ಇದ ಕಂಡನಾ ಕವಿಯು.

ಹಾಲಿಲ್ಲ, ಬಟ್ಟಲಿಲ್ಲದ ಗುಟುಕೆ ಸವಿಸವಿಯು
ನಿರ್ವಿಷಯ ಸೃಷ್ಟಿಯಲಿ ಭೋಗ ಆತ್ಮಕ್ರೀಡೆ
ವಾಸನಾ ಸಂಜನಿತ ಸಂಸ್ಕಾರ ಅವಲೀಡೆ
ಭಾಗೀರಥೀಯು ಆಗಿ ಇಳಿದಂಥ ಜಾಹ್ನವಿಯು.

ಇದು ವಿಚಾರದ ಹಳ್ಳವನ್ನು ಒಳಹೊಕ್ಕಿಲ್ಲ;
ಅಂತರಿಕ್ಷದ ಪಕ್ಷಿ ಈಕ್ಷಿಸುತ್ತಿದೆ ಕ್ಷಿತಿಜ
ಬರಿಯ ನೆರಳಾಟ ಮುರುಳಾಟ ಗಾಳಿಗೆ ಸಹಜ;
ಭಾವಭಾವದ ಜಾಲ ಬಲೆಯಲ್ಲಿ ಸಿಕ್ಕಿಲ್ಲ.

ಜೀವನದ ರಂಗದಲೆ ಭರತನಾಟಯುಗವು
ಓಹೋ! ಆಹ! ಊಹೆ! ನವ್ಯ ಈಹಾ ಮೃಗವು.

 
ಭಾವ: ಕವನ ಸೃಷ್ಟಿಕ್ರಿಯೆಯ ವರ್ಣನೆ, ಇದು ಭಗೀರಥನ ತಪಸ್ಸಿನಿಂದ ಭಾಗೀರಥಿಯಾಗಿ ಭೊಲೋಕಕ್ಕೆ ಅವತರಿಸಿದ ಜಾಹ್ನವಿ-ಗಂಗೆಯಂತೆ ಮತ್ತು ಬಲೆಯಲ್ಲಿ ಸಿಗದಿರುವ ಪಕ್ಷಿಯಂತೆ ಇರುತ್ತದೆ. ಕವಿಯ ಕಲ್ಪಕತೆಯ ಅದ್ಭುತ ಕ್ರೀಯೆಯು ನಡೆಯುತ್ತದೆ.

ಶಬ್ದಾರ್ಥ: ಭರತ ನಾಟಕ ಯುಗ=ಮುದ್ರಾಭಿನಯನ ಸಂಕೇತ ಕ್ರೀಯೆ. ಈಹಾಮೃಗ=ತೋಳ ಬಂತು ತೋಳ ಬಂತು ಎಂಬ ಕಥೆಯಂತೆ ಕಲ್ಪಕತೆ ಕವಿಯನ್ನು ಓಡಾಡಿಸುತ್ತದೆ.

ಕಾಮೆಂಟ್‌ಗಳಿಲ್ಲ: