೧. ಚಿಗರಿಗಂಗಳ ಚೆಲುವಿ

ವಸುಂಧರಾ ಎನ್ನುವದು ನಮ್ಮ ಪುರಾತನ ಕವಿಗಳು ಭೂಮಿತಾಯಿಗೆ ಕೊಟ್ಟ ಹೆಸರು. ವಸು ಎಂದರೆ ಜೀವಿ. ಭೂಮಿತಾಯಿಯು ಜೀವಿಗಳನ್ನು ಹೊತ್ತವಳು, ಆದುದರಿಂದ ಇವಳು ವಸುಂಧರಾ. ಇವಳಲ್ಲಿ ಅಡಗಿರುವ ಅನೇಕ ಹಾಗೂ ಅಮೂಲ್ಯ ಸಂಪತ್ತಿನಿಂದಾಗಿ ಇವಳನ್ನು ‘ಬಹುರತ್ನಾ ವಸುಂಧರಾ’ ಎಂದು ಬಣ್ಣಿಸಲಾಗಿದೆ.

ಬೇಂದ್ರೆಯವರು ತಮ್ಮ ಕವನದಲ್ಲಿ ಭೂಮಿತಾಯಿಯನ್ನು ‘ಚಿಗರಿಗಂಗಳ ಚೆಲುವಿ’ ಎಂದು ಕರೆದಿದ್ದಾರೆ. ಚಿಗರಿಯ ಕಣ್ಣುಗಳು ಸೌಂದರ್ಯಕ್ಕೆ ಹೆಸರಾದಂತಹವು. ಸಂಸ್ಕೃತ ಸಾಹಿತ್ಯದಲ್ಲಿಯೂ ಸಹ ಸುಂದರ ಕಣ್ಣುಗಳ ಸ್ತ್ರೀಯನ್ನು ‘ಮೃಗನಯನಿ’ ಎಂದು ಕರೆಯಲಾಗಿದೆ. ಆದರೆ ಈ ಕವನದಲ್ಲಿ ಭೂಮಿತಾಯಿ ಸುಂದರ ಕಣ್ಣುಗಳಿಗಾಗಿ ಚಿಗರಿಗಂಗಳ ಚೆಲುವಿಯಾಗಿಲ್ಲ ; ಅವಳು ಇಲ್ಲಿ ಹೆದರಿದ ಹರಿಣಿ. ಹೆದರಿದ ಹರಿಣಿಯನ್ನು ನೋಡುವವರಿಗೆ ಎದ್ದು ಕಾಣುವ ಸಂಗತಿ ಎಂದರೆ, ಹರಿಣಿಯ ಕಣ್ಣುಗಳು ; ಅತ್ತಿತ್ತ ಚಂಚಲವಾಗಿ ಚಲಿಸುವ ಬೆದರಿದ ಕಣ್ಣುಗಳು.

‘ಚಿಗರಿಗಂಗಳ ಚೆಲುವಿ’ ಈ ಕವನವು ಬೇಂದ್ರೆಯವರ ‘ಸಖೀಗೀತ’ ಕವನಸಂಕಲನದಲ್ಲಿ ಸೇರಿದೆ.
‘ಸಖೀಗೀತ’ವು ೧೯೩೭ರಲ್ಲಿ ಪ್ರಕಟವಾಯಿತು.
………………………………………………………………..
‘ಚಿಗರಿಗಂಗಳ ಚೆಲುವಿ’ ಕವನವು ಮಾನವನ ವಿಕೃತ, ಜೀವಿರೋಧಿ ನಾಗರಿಕತೆಯ ದುರಂತವನ್ನು ಸೂಚಿಸುವ ಕವನ.
ಮಾನವನ ನಾಗರಿಕತೆ ಪ್ರಾರಂಭವಾಗುವ ಮೊದಲು ಈ ಸೃಷ್ಟಿಯು ಒಂದು ಸುಂದರವಾದ ಬನವಾಗಿತ್ತು. ಅಲ್ಲಿರುವ ಸಸ್ಯಸಂಕುಲ ಹಾಗೂ ಪ್ರಾಣಿಸಂಕುಲ ಸಾಮರಸ್ಯದಲ್ಲಿ ಜೀವಿಸುತ್ತಿದ್ದವು.
ನಾಗರಿಕತೆ ಪ್ರಾರಂಭವಾದಾಗಿನಿಂದ, ನಿಸರ್ಗದಲ್ಲಿದ್ದ ಸಾಮರಸ್ಯ ಹಾಳಾಯಿತೆನ್ನಬಹುದು.
ಮಾನವನ ಸ್ವಾರ್ಥ ಹಾಗೂ ದುರಾಸೆಯ ಮೊದಲ ಪೆಟ್ಟು ಬಿದ್ದದ್ದು ಸಸ್ಯಸಂಕುಲಕ್ಕೆ ಹಾಗೂ ಇತರ ಪ್ರಾಣಿಗಳಿಗೆ. ಬಳಿಕ ಮನುಷ್ಯವರ್ಗದಲ್ಲಿಯೇ ನಡೆದ ಆಂತರಿಕ ಕಲಹಗಳಿಂದಾಗಿ, ಸಂಕಷ್ಟಗಳ ಸರಪಳಿಯೇ ಪ್ರಾರಂಭವಾಯಿತು. ಇದನ್ನು ಈ ಕವನದಲ್ಲಿ ಹಂತ ಹಂತವಾಗಿ ವರ್ಣಿಸಲಾಗಿದೆ.

ಬೇಂದ್ರೆಯವರ ಕವನಗಳೆಂದರೆ, ಕವಿಯು ತನ್ನ ಭಾವನೆಗಳನ್ನು, ತನ್ನ ಸುಖ, ದುಃಖಗಳನ್ನು, ತನ್ನ ಅನುಭವಗಳನ್ನು ಎಲ್ಲರೊಡನೆ ಹಂಚಿಕೊಳ್ಳುವ ಕವನಗಳು. ಅವರ ಪ್ರಸಿದ್ಧ ಕವನವಾದ “ ಬೆಳಗು” ಕವನವು ಕೊನೆಗೊಳ್ಳುವದು, “ ಇದು ಬರಿ ಬೆಳಗಲ್ಲೊ ಅಣ್ಣಾ” ಎಂದು ಕವಿ ತನ್ನ ಹಿತಾನುಭವವನ್ನು ಹಂಚಿಕೊಳ್ಳುವದರೊಂದಿಗೆ.

“ಚಿಗರಿಗಂಗಳ ಚೆಲುವಿ” ಕವನದಲ್ಲಿಯೂ ಸಹ ಕವಿಯು ತನ್ನ ದುಃಖವನ್ನು, ತನ್ನ ಆಕ್ರೋಶವನ್ನು ತನ್ನ ಗೆಳೆಯನೆದುರಿಗೆ ಹೇಳಿಕೊಳ್ಳುತ್ತಿದ್ದಾನೆ.

ಕವನದ ಪೂರ್ತಿಪಾಠ ಹೀಗಿದೆ:
………………………………………………………………
ಚಿಗರಿಗಂಗಳ ಚೆಲುವಿ ಚೆದsರಿ ನಿಂತಾಳ ನೋಡೋ
ಬೆದsರಿ ನಿಂತಾಳ ||ಪಲ್ಲವಿ||


ಹೊಳಿಹಳ್ಳ ತೊರೆದಾವೋ
ಗೆಣೆಹಕ್ಕಿ ಬೆರೆದಾವೋ
ಆಗದವರ ಹೊಟ್ಟಿ ಉರದಾವೋ
ಗೆಣೆಯಾ ಉರದಾವs
ಅಂಥವರ ದಿಟ್ಟಿ ಮನಿ ಮುರದಾವ;
ಅದನ ತಾ ಕಂಡು ಕೊರಗ್ಯಾsಳೊ
ಮರುಗ್ಯಾsಳೊ
ಸೊರಗ್ಯಾsಳೋ
ಹೂ ಕಾಯಿ ಹಣ್ಣು ತುಂಬಿದ ಬನದಾsಗ || ಚಿಗರಿಗಂಗಳ. . . .


ಬ್ಯಾಟಿ ನಾಯೊದರ್ಯಾವೋ
ಹಸುಜೀವ ಬೆದರ್ಯಾವೋ
ಗಳಗಳನೆ ಗಿಡದೇಲಿ ಉದರ್ಯಾವೋ
ಗೆಣೆಯಾ ಉದರ್ಯಾವs
ದಿನ್ನಿ ಮಡ್ಡಿ ಗುಡ್ಡ ಅದರ್ಯಾವ;
ಅದನ ತಾ ಕಂಡು ನೊಂದಾsಳೊ
ಬೆಂದಾsಳೊ
ಅಂದಾsಳೋ
‘ಇದು ಎಂಥಾ ಜೀವದ ಬ್ಯಾಟಿ ಹಾಡೇ ಹಗಲs’ || ಚಿಗರಿಗಂಗಳ. . .


ಆಳುಗಳ ಹೋರಾಟ
ಆಳುವವರಿಗೆ ಆಟ
ಗಾಳಕ್ಕ ಸಿಕ್ಕ ಮೀನದ ಗೋಳಾಟೊ
ಗೆಣೆಯಾ ಗೋಳಾಟೋ
ಗೆದ್ದವರ ಇದ್ದವರ ಹಾರಾಟ;
ಅರೆಸತ್ತ ಜೀವಾ ಕೊಳೆತಾsವೊ
ಹುಳತಾsವೊ
ಅಳತಾsವೋ
ಹಸುಗೂಸು ತಿರುಗಿ ಹೊಟ್ಟ್ಯಾಗ ಹುಗಿಧ್ಹಾಂಗ || ಚಿಗರಿಗಂಗಳ. . .


ತನ್ನ ತಾ ಸುತ್ತ್ಯಾಳೊ
ಹೊತ್ತಿನ ಬೆನ್ಹತ್ತ್ಯಾಳೊ
ತಿಂಗಳನ ಬಗಲಾಗೆತ್ತ್ಯಾಳೊ
ಗೆಣೆಯಾ ಎತ್ತ್ಯಾಳೊ
ಉಕ್ಕುಕ್ಕುವ ದುಃಖ ಒಳಗೊತ್ತ್ಯಾಳೊ;
ನಿಂತ ನೆಲವೆಂದು ಕಡಿಲಾsಕೊ
ಬಡಿಲಾsಕೊ
ಒಡಿಲಾsಕೊ
ಒಡವ್ಯಲ್ಲೋ ಮಗನೇ ಉಸಿರಿದ್ದೊಡಲಂತಾsಳೋ || ಚಿಗರಿಗಂಗಳ. . .
…………………………………………………………….
ಕವನದ ಮೊದಲ ನುಡಿ ಹೀಗಿದೆ:

ಹೊಳಿಹಳ್ಳ ತೊರೆದಾವೋ
ಗೆಣೆಹಕ್ಕಿ ಬೆರೆದಾವೋ
ಆಗದವರ ಹೊಟ್ಟಿ ಉರದಾವೋ
ಗೆಣೆಯಾ ಉರದಾವs
ಅಂಥವರ ದಿಟ್ಟಿ ಮನಿ ಮುರದಾವ;
ಅದನ ತಾ ಕಂಡು ಕೊರಗ್ಯಾsಳೊ
ಮರುಗ್ಯಾsಳೊ
ಸೊರಗ್ಯಾsಳೋ
ಹೂ ಕಾಯಿ ಹಣ್ಣು ತುಂಬಿದ ಬನದಾsಗ || ಚಿಗರಿಗಂಗಳ. . . .

ಈ ನುಡಿ ಪ್ರಾರಂಭವಾಗುವದು ಸಾಮರಸ್ಯದಿಂದ ಕೂಡಿದ ಸಮೃದ್ಧ ನಿಸರ್ಗದ ವರ್ಣನೆಯೊಂದಿಗೆ :
“ಹೊಳಿಹಳ್ಳ ತೊರೆದಾವೋ
ಗೆಣೆಹಕ್ಕಿ ಬೆರೆದಾವೋ ”

ನಿಸರ್ಗದ ಸಂಪನ್ಮೂಲಗಳಾದ ಹಾಗೂ ಜೀವರಾಶಿಯ ಬೆಳವಣಿಗೆಗೆ ಅವಶ್ಯವಿರುವ ಹೊಳೆಹಳ್ಳಗಳು ತೊರೆಯುತ್ತಿವೆ ಅಂದರೆ ತುಂಬಿಕೊಂಡು ಸಮೃದ್ಧವಾಗಿ ಹರಿಯುತ್ತಿವೆ. ಈ ಸಂಪನ್ಮೂಲಗಳನ್ನು ಭೋಗಿಸುವ ಜೀವರಾಶಿಯಾದ ಹಕ್ಕಿಗಳು ಬೆರೆದಿವೆ ಅಂದರೆ ಹೊಸ ಸೃಷ್ಟಿಯ ಕ್ರಿಯೆಯಲ್ಲಿ ತೊಡಗಿಕೊಂಡಿವೆ. ಇದೆಲ್ಲ ಮನಸ್ಸನ್ನು ಮುದಗೊಳಿಸುವ ನೋಟ.

ಆದರೆ ಈ ಸಾಮರಸ್ಯದ ಪರಿಸ್ಥಿತಿಗೆ ಈಗ ಭಂಗ ಬಂದಿದೆ.
ಯಾಕೆಂದರೆ:

“ಆಗದವರ ಹೊಟ್ಟಿ ಉರದಾವೋ
ಗೆಣೆಯಾ ಉರದಾವs
ಅಂಥವರ ದಿಟ್ಟಿ ಮನಿ ಮುರದಾವ ”

ನಿಸರ್ಗದ ಈ ಸಾಮರಸ್ಯವನ್ನು ಸಹಿಸಲಾರದ ಜೀವಿ ಇಲ್ಲೊಂದಿದೆ. ಅದು ಮಾನವ ಜೀವಿ. ಮಾನವನ ಹೊರತಾಗಿ ಉಳಿದೆಲ್ಲ ಪಶು, ಪಕ್ಷಿಗಳನ್ನು ನಾವು ಆದಿವರ್ಗದ ಜೀವಿಗಳು ಎನ್ನಬಹುದು. ಈ ಅಮಾಯಕ ಜೀವಿಗಳು ನಿಸರ್ಗದೊಡನೆ ಒಂದಾಗಿ ಬಾಳುತ್ತಿವೆ. ಆದರೆ, ಮಾನವ ಎನ್ನುವ ಈ ಜೀವಿಗೆ ದುರಾಸೆ ಬಹಳ. ನಿಸರ್ಗದ ಸಂಪತ್ತನ್ನೆಲ್ಲ ತಾನೇ ಭೋಗಿಸುವ ಸ್ವಾರ್ಥ ಈ ಜೀವಿಗೆ. ಈ ಜೀವಿಗೆ ಬೇರೆ ಜೀವಿಗಳ ಸೌಖ್ಯವನ್ನು ಕಂಡರೆ ಸಹಿಸಲಾಗುವದಿಲ್ಲ. ಇವನಿಗೆ ಉಳಿದ ಜೀವಿಗಳ ಮೇಲೆ ಹೊಟ್ಟೆಕಿಚ್ಚು. ಅದಕ್ಕೆ ಬೇಂದ್ರೆ ಹೇಳುತ್ತಾರೆ:
“ಆಗದವರ ಹೊಟ್ಟಿ ಉರದಾವೋ
ಗೆಣೆಯಾ ಉರದಾವs”

ಇಷ್ಟೇ ಅಲ್ಲ, ಇಂಥವರ ಕೆಟ್ಟ ದೃಷ್ಟಿಯಿಂದಾಗಿ (evil eye) ‘ಮನಿ ಮುರದಾವ’. ಇಲ್ಲಿಯವರೆಗೆ, ಒಂದು ಕ್ರಮದಿಂದ ನಡೆಯುತ್ತಿದ್ದಂತಹ ಸಂಸ್ಥೆ , ಎಲ್ಲ ಜೀವಿಗಳಿಗೆ ನೆಲೆಯಾದ ನಿಸರ್ಗದ ಆಶ್ರಯ (=ಮನಿ) ಈಗ ಭಗ್ನವಾಗುತ್ತಿದೆ.

ಆದರೆ ಭೂಮಿತಾಯಿ ನಿಸ್ಸಹಾಯಕಳು. ತನ್ನ ಒಡಲೆಲ್ಲ ಹೂ,ಕಾಯಿ ಹಾಗು ಹಣ್ಣುಗಳಿಂದ ತುಂಬಿದೆ. ಅದನ್ನೆಲ್ಲ ದುರಾಸೆಯಿಂದ ದೋಚುತ್ತಿರುವವರನ್ನು ಅವಳು ತಡೆಯುವದೆಂತು?
ಹೀಗಾಗಿ, ಅವಳು ಕೊರಗುತ್ತಿದ್ದಾಳೆ (ಪರಿಸ್ಥಿತಿಯ ಬಗೆಗೆ),
ಮರಗುತ್ತಿದ್ದಾಳೆ (ದುರ್ಬಲರ ಬಗೆಗೆ),
ಹಾಗೂ ಈ ಶೋಷಣೆಯಿಂದಾಗಿ ಸೊರಗುತ್ತಿದ್ದಾಳೆ (ಸ್ವತಃ).

“ಅದನ ತಾ ಕಂಡು ಕೊರಗ್ಯಾsಳೊ
ಮರುಗ್ಯಾsಳೊ
ಸೊರಗ್ಯಾsಳೋ
ಹೂ ಕಾಯಿ ಹಣ್ಣು ತುಂಬಿದ ಬನದಾsಗ || ಚಿಗರಿಗಂಗಳ. . . . .”

ಈ ದುರಾಕ್ರಮಣಕ್ಕೆ ಹೆದರಿದ ಅವಳು (ಸ್ಥಿರತೆ=)ಸ್ಥೈರ್ಯವನ್ನು ಕಳೆದುಕೊಂಡಿದ್ದಾಳೆ. ಆದುದರಿಂದ ಧಾವಿಸಲು ಯತ್ನಿಸುವ ಹರಿಣಿಯಂತೆ ಚೆದರಿ(=scattered) ನಿಂತಿದ್ದಾಳೆ. ಯಾವ ಗಳಿಗೆಯಲ್ಲಿ ಯಾರು ಆಕ್ರಮಣ ಮಾಡುತ್ತಾರೊ ಎಂದು ಬೆದರಿ ನಿಂತಿದ್ದಾಳೆ. ಸ್ಥೈರ್ಯ ಹಾಗು ಧೈರ್ಯವನ್ನು ಕಳೆದುಕೊಂಡ ಹರಿಣಿ ಇವಳು. ಇದು ಈ ಕವನದ ಪಲ್ಲವಿ ಅಂದರೆ recurring theme.

“ಚಿಗರಿಗಂಗಳ ಚೆಲುವಿ ಚೆದsರಿ ನಿಂತಾಳ ನೋಡೋ
ಬೆದsರಿ ನಿಂತಾಳ .”
………………………………………………………………
ಮೊದಲನೆಯ ನುಡಿಯಲ್ಲಿ ಒಂದು static picture ಇದೆ. ತಾನು ಸಮೃದ್ಧವಾದ ಬನದಲ್ಲಿದ್ದೂ, ಮನೆಮುರುಕರ ದುರಾಸೆಯ ‘ಕೆಟ್ಟ ಕಣ್ಣಿ’ನಿಂದ ಹೆದರಿದ, ಎಲ್ಲಿ ಓಡಬೇಕೊ ತಿಳಿಯದ ಅಸಹಾಯಕ ಹರಿಣಿಯ ಚಿತ್ರವಿದೆ. ಎರಡನೆಯ ನುಡಿಯಲ್ಲಿ ಆಕ್ರಮಣದ ಚಿತ್ರವಿದೆ.

ಬ್ಯಾಟಿ ನಾಯೊದರ್ಯಾವೋ
ಹಸುಜೀವ ಬೆದರ್ಯಾವೋ
ಗಳಗಳನೆ ಗಿಡದೇಲಿ ಉದರ್ಯಾವೋ
ಗೆಣೆಯಾ ಉದರ್ಯಾವs
ದಿನ್ನಿ ಮಡ್ಡಿ ಗುಡ್ಡ ಅದರ್ಯಾವ;
ಅದನ ತಾ ಕಂಡು ನೊಂದಾsಳೊ
ಬೆಂದಾsಳೊ
ಅಂದಾsಳೋ
‘ಇದು ಎಂಥಾ ಜೀವದ ಬ್ಯಾಟಿ ಹಾಡೇ ಹಗಲs’ || ಚಿಗರಿಗಂಗಳ. . .

ಬೇಂದ್ರೆ ಈ ನುಡಿಯಲ್ಲಿ ಪಳಗಿಸಿದ ಬೇಟೆಯ ನಾಯಿಗಳ ಸಂಕೇತವನ್ನು ಬಳಸುತ್ತಿದ್ದಾರೆ. ಮಾನವನ ನಾಗರಿಕತೆಯಲ್ಲಿ ಜರುಗಿದ revolutionದ, ಅಂದರೆ Hunting stageದ ಚಿತ್ರವಿದು. ಬೇಟೆಯಾಡುವ ಪ್ರಾಣಿಗಳನ್ನು domesticate ಮಾಡಿ, ಅವುಗಳಿಂದ ಬೇಟೆಯಾಡಿಸುವ ಮಾನವ ಬುದ್ಧಿಯ ಚಿತ್ರವಿಲ್ಲಿದೆ. ಈ ಬೇಟೆಗೆ ‘ಹಸುಜೀವ’ ಬೆದರ್ಯಾವೊ. ಹಸು ಇದು ಪಶು ಪದದ ತದ್ಭವವಾಗಿದ್ದರೂ ಸಹ, ರೂಢಿಯಲ್ಲಿ ಹಸು ಅಂದರೆ ಆಕಳು ; ಆದುದರಿಂದ ಹಸುಜೀವ ಅಂದರೆ ಸಾಧು ಪ್ರಾಣಿಗಳು.

By indirect implication, ಇದು invaders ಹಾಗು invaded ಜನಾಂಗದವರನ್ನೂ ಸಹ ಸೂಚಿಸುತ್ತಿದೆ.
ಭಾರತ ದೇಶವನ್ನೇ ಉದಾಹರಣೆಗೆ ತೆಗೆದುಕೊಳ್ಳಬಹುದು. ಪ್ರಾಚೀನ ಕಾಲದಿಂದಲೂ ಈ ದೇಶದ ಮೇಲೆ ಆಕ್ರಮಣಗಳು ನಡೆಯುತ್ತಲೆ ಇವೆ. ಸುಸಂಸ್ಕೃತರಾದ ಹಾಗು ಆ ಕಾರಣದಿಂದಲೇ ದುರ್ಬಲರಾದ ಇಲ್ಲಿಯ ಜನತೆ, barbarian ಆಕ್ರಮಣಕಾರರಿಂದ ಅತ್ಯಾಚಾರಕ್ಕೊಳಗಾಗುತ್ತಲೆ ಬಂದಿದ್ದಾರೆ.
ಈ ಅತ್ಯಾಚಾರದಿಂದ ಪ್ರಕೃತಿಯೂ ಸಹ ಕಂಪಿಸಿದೆ ; ಗಿಡದ ಎಲೆಗಳು ಗಳಗಳನೆ ಉದರಿವೆ. ಅಷ್ಟೇ ಏಕೆ, ನಿರ್ಜೀವ ವಸ್ತುವಾದ ದಿನ್ನಿ, ಮಡ್ಡಿ, ಗುಡ್ಡ ಸಹ ನಡುಗಿವೆ.

ಬೇಂದ್ರೆಯವರು ಈ ವರ್ಣನೆಗಳಲ್ಲಿ gradation ಉಪಯೋಗಿಸುವದನ್ನು ಗಮನಿಸಬೇಕು.
ಮೊದಲು ಸಾಧುಪ್ರಾಣಿಗಳಿಗಾದ ಆಘಾತ ವರ್ಣಿಸಿ, ಆ ಬಳಿಕ ಸಸ್ಯಗಳಿಗಾದ ಆಘಾತವನ್ನು ಬಣ್ಣಿಸಲಾಗಿದೆ. ಆ ಬಳಿಕ ನಿರ್ಜೀವ ವಸ್ತುಗಳಿಗಾದ ಆಘಾತ ಬಣ್ಣಿಸಲಾಗಿದೆ. ಅಲ್ಲೂ ಸಹ, ಮೊದಲು ‘ದಿನ್ನಿ’, ಬಳಿಕ ಅದಕ್ಕಿಂತ ದೊಡ್ಡದಾದ ‘ಮಡ್ಡಿ’, ಬಳಿಕ ಅದಕ್ಕೂ ದೊಡ್ಡ ವಸ್ತುವಾದ ‘ಗುಡ್ಡ’ವನ್ನು ಬಣ್ಣಿಸಲಾಗಿದೆ.
ಈ ರೀತಿಯಾಗಿ ಕಲ್ಪನೆಯಲ್ಲೂ ಸಹ ಕ್ರಮಬದ್ಧತೆಯನ್ನು ಅನುಸರಿಸುವದು ಬೇಂದ್ರೆಯವರ ವೈಶಿಷ್ಟ್ಯವಾಗಿದೆ.

ಮೊದಲನೆಯ ನುಡಿಯ ಎರಡನೆಯ ಭಾಗದಲ್ಲಿ ಭೂಮಿತಾಯಿ ಮರುಗಿದಂತೆ, ಇಲ್ಲೂ ಸಹ ಅವಳು ಸಂಕಟಪಡುವ ಚಿತ್ರವಿದೆ:

ಅದನ ತಾ ಕಂಡು ನೊಂದಾsಳೊ
ಬೆಂದಾsಳೊ
ಅಂದಾsಳೋ
‘ಇದು ಎಂಥಾ ಜೀವದ ಬ್ಯಾಟಿ ಹಾಡೇ ಹಗಲs’ || ಚಿಗರಿಗಂಗಳ. . .

ವಸುಂಧರೆಗೆ ಪ್ರತಿ ಜೀವಿಯೂ,-- ಸಸ್ಯವೇ ಇರಲಿ ಅಥವಾ ಚಿಕ್ಕ ಪ್ರಾಣಿಯೇ ಇರಲಿ,-- ತನ್ನ ಮಗುವೆ. ಹೀಗಾಗಿ ಇಲ್ಲಿ ನಡೆಯುತ್ತಿರುವ ‘ಜೀವದ ಬೇಟೆ’ಯನ್ನು ಕಂಡು ಅವಳು ಶೋಕಿಸುತ್ತಿದ್ದಾಳೆ.
…………………………………………….........
ಮೂರನೆಯ ನುಡಿಯಲ್ಲಿ, ಮಾನವನ ಕ್ರಾಂತಿ ಇನ್ನೂ ಮೇಲಕ್ಕೇರಿದೆ. ಇದೀಗ ಆತ ರಾಜ್ಯಗಳನ್ನು ಕಟ್ಟಿಕೊಂಡಿದ್ದಾನೆ. ಪರರಾಜ್ಯಗಳನ್ನು ಆಕ್ರಮಿಸಿ ಚಕ್ರವರ್ತಿಯಾಗುತ್ತಿದ್ದಾನೆ. ಆದರೆ, ನಾಗರಿಕತೆಯ ಈ ಆಟದಲ್ಲಿ ಸ್ವತಃ ಮಾನವನೇ ಬಲಿಯಾಗುತ್ತಿದ್ದಾನೆ.

ಆಳುಗಳ ಹೋರಾಟ
ಆಳುವವರಿಗೆ ಆಟ
ಗಾಳಕ್ಕ ಸಿಕ್ಕ ಮೀನದ ಗೋಳಾಟೊ
ಗೆಣೆಯಾ ಗೋಳಾಟೋ
ಗೆದ್ದವರ ಇದ್ದವರ ಹಾರಾಟ;
ಅರೆಸತ್ತ ಜೀವಾ ಕೊಳೆತಾsವೊ
ಹುಳತಾsವೊ
ಅಳತಾsವೋ
ಹಸುಗೂಸು ತಿರುಗಿ ಹೊಟ್ಟ್ಯಾಗ ಹುಗಿಧ್ಹಾಂಗ || ಚಿಗರಿಗಂಗಳ. . .

ಹೋರಾಟವೆನ್ನುವದು, ರಾಜ್ಯವಿಸ್ತಾರ ಎನ್ನುವದು ಇವೆಲ್ಲ ಆಳುವವರಿಗೆ ಒಂದು ಆಟ. ಆದರೆ ಹೋರಾಟದಲ್ಲಿ ತೊಡಗಿದ ಆಳುಗಳಿಗೆ ಹಾಗೂ ಅಮಾಯಕ ಪ್ರಜೆಗಳಿಗೆ ಈ ಹೋರಾಟವೆನ್ನುವದು ಒಂದು ದುಃಸ್ವಪ್ನವಿದ್ದಂತೆ. ಕೌರವ-ಪಾಂಡವರ ಯುದ್ಧವೇ ಆಗಲಿ, ಜಾಗತಿಕ ಯುದ್ಧವೇ ಆಗಲಿ, ಸಾಮಾನ್ಯ ಜನತೆಗೆ ಅದು ಬೇಕಾಗಿಲ್ಲದ ಯುದ್ಧ. ಅವರು ಗಾಳಕ್ಕೆ ಸಿಕ್ಕ ಮೀನಿನಂತೆ ಚಡಪಡಿಸುತ್ತಾರೆ. ಎಷ್ಟೇ ಕಣ್ಣೀರು ಹಾಕಿದರೇನು, ಗಾಳವು ಮೀನಿಗೆ ದಯೆ ತೋರುವದೆ?

ಈ ಹೋರಾಟದಲ್ಲಿ ಗೆದ್ದವರು ಹಾಗು ಬದುಕಿದ್ದವರು ಸತ್ತವರ ಮೇಲೆ ಬಾವುಟ ಹಾರಿಸುತ್ತಾರೆ. ಸೋತು ಬದುಕುಳಿದವರ ಪಾಡು ನಾಯಿಪಾಡು. ಅವರು ಅರೆಸತ್ತಂತವರು. ಅವರ ಬದುಕು ಕೊಳೆತು ಹೋಗುತ್ತದೆ, ಹುಳತು ಹೋಗುತ್ತದೆ, ಅಳುವುದೊಂದೇ ಅವರಿಗೆ ಉಳಿದ ಬದುಕು.

ಇದನ್ನು ಕಂಡ ಭೂಮಿತಾಯಿಗೆ ಹೇಗೆ ಅನಿಸುತ್ತದೆ?
ನಾನಾ ಜೀವಿಗಳಿಗೆ ಜನ್ಮ ಕೊಡುತ್ತಿರುವ, ಅನ್ನ ಕೊಡುತ್ತಿರುವ, ತಾಯಿ ವಸುಂಧರೆಗೆ ಹೇಗೆನ್ನಿಸುತ್ತದೆ?
‘ಹಸುಗೂಸು ತಿರುಗಿ ಹೊಟ್ಟ್ಯಾಗ ಹುಗಿಧ್ಹಾಂಗ.’
Her womb is a burial ground for her babies.

ಬೇಂದ್ರೆಯವರ ಉಪಮೆಗಳಲ್ಲಿ ಅತಿ ಕಠೋರವಾದ ಉಪಮೆ ಇದು ಎಂದು ಹೇಳಬಹುದು. ಅವರ ಮತ್ತೊಂದು ರಚನೆ ‘ನೀ ಹೀಂಗ ನೋಡಬ್ಯಾಡ ನನ್ನ’ ಕವನದಲ್ಲಿ ಸಹ ಶೋಕರಸದ ಉನ್ನತ ಉಪಮೆಯೊಂದಿದೆ:
“ಹುಣ್ಣವಿ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲುತ ಹಗಲs”.
ಆದರೆ ಈ ಉಪಮೆಯಲ್ಲಿ ಶೋಕವಷ್ಟೇ ಅಲ್ಲದೆ, ಕ್ರೌರ್ಯವಿದೆ.
……………………………………………………….......
ಕೊನೆಯ ನುಡಿಯಲ್ಲಿ, ಭೂಮಿತಾಯಿಯ ಈ ಬವಣೆ, ಕೊನೆಯಿಲ್ಲದ ಬವಣೆ ಎನ್ನುವ ಭಾವನೆಯನ್ನು ಕವಿ ವ್ಯಕ್ತಪಡಿಸುತ್ತಾರೆ:

ತನ್ನ ತಾ ಸುತ್ತ್ಯಾಳೊ
ಹೊತ್ತಿನ ಬೆನ್ಹತ್ತ್ಯಾಳೊ
ತಿಂಗಳನ ಬಗಲಾಗೆತ್ತ್ಯಾಳೊ
ಗೆಣೆಯಾ ಎತ್ತ್ಯಾಳೊ
ಉಕ್ಕುಕ್ಕುವ ದುಃಖ ಒಳಗೊತ್ತ್ಯಾಳೊ;
ನಿಂತ ನೆಲವೆಂದು ಕಡಿಲಾsಕೊ
ಬಡಿಲಾsಕೊ
ಒಡಿಲಾsಕೊ
ಒಡವ್ಯಲ್ಲೋ ಮಗನೇ ಉಸಿರಿದ್ದೊಡಲಂತಾsಳೋ || ಚಿಗರಿಗಂಗಳ. . . .

ವಾಸ್ತವತೆ ಹಾಗು ಕಲ್ಪನೆಗಳನ್ನು ಕರಗಿಸಿ ಒಂದಾಗಿಸುವ ಬೇಂದ್ರೆ ಪ್ರತಿಭೆ ಇಲ್ಲಿ ಮತ್ತೊಮ್ಮೆ ಕಾಣುತ್ತದೆ.
ಓರ್ವ ಅಸಹಾಯಕ ಸ್ತ್ರೀ, ಸಂಕಟಗಳಿಂದ ಪಾರಾಗಲು ತನ್ನ ಸೀಮಿತ ಪರಿಧಿಯಲ್ಲಿ ಸುತ್ತುವಳು ಎನ್ನುವ ಅರ್ಥವನ್ನು ಕೊಡುವ ಮೊದಲ ಸಾಲು, ಭೂಮಿಯು ತನ್ನ ಅಕ್ಷದ ಸುತ್ತಲೂ ತಿರುಗುವ ವಾಸ್ತವವನ್ನೂ ಹೇಳುತ್ತದೆ. ಅದರಂತೆ ‘ಹೊತ್ತಿನ ಬೆನ್ಹತ್ತ್ಯಾಳೊ’ ಎನ್ನುವ ಸಾಲು ಅವಳು ತನ್ನ ದುಃಖಗಳನ್ನು ನಿವಾರಿಸಲು ಕಾಲವನ್ನು ಕಾಯುತ್ತಿದ್ದಾಳೆ ಎನ್ನುವ ಅರ್ಥದ ಜೊತೆಗೇ, ಸೂರ್ಯನ (=ಹೊತ್ತಿನ) ಸುತ್ತಲೂ ತಿರುಗುವ ಭೂಮಿಯನ್ನೂ ಸಹ ಸೂಚಿಸುತ್ತದೆ. ‘ತಿಂಗಳನ ಬಗಲಾಗೆತ್ತ್ಯಾಳೊ’ ಎನ್ನುವ ಸಾಲು ಹಸುಗೂಸನ್ನು ಎತ್ತಿಕೊಂಡ ಹೆಂಗಸಿನ ಚಿತ್ರವನ್ನು ಕೊಡುತ್ತದೆ; ಅದರಂತೆಯೇ ಚಂದ್ರನು (=ತಿಂಗಳನು) ಭೂಮಿಯ ಸುತ್ತಲೂ ತಿರುಗುತ್ತಿರುವ ವಾಸ್ತವವನ್ನೂ ಒಳಗೊಂಡಿದೆ.

ಇಂತಹ ಭೂಮಿತಾಯಿ ತನ್ನ ದುಃಖವನ್ನು ತನ್ನೊಳಗೇ ಒತ್ತಿ ಹಿಡಿದುಕೊಂಡು, ತನ್ನ ಬುದ್ಧಿಶಾಲಿ (!) ಮಕ್ಕಳಿಗೆ ಅಂದರೆ ಮಾನವರಿಗೆ ಅಂಗಲಾಚುತ್ತಿದ್ದಾಳೆ:

ನಿಂತ ನೆಲವೆಂದು ಕಡಿಲಾsಕೊ
ಬಡಿಲಾsಕೊ
ಒಡಿಲಾsಕೊ
ಒಡವ್ಯಲ್ಲೋ ಮಗನೇ ಉಸಿರಿದ್ದೊಡಲಂತಾsಳೋ.

ಆಳುವವರಿಗೆ ಹೆಣ್ಣು, ಹೊನ್ನು, ಮಣ್ಣು ಇವು ತಮ್ಮ ಘನತೆಯನ್ನು ಸಾರುವ ಆಭರಣಗಳು ;
ದೊಡ್ಡಸ್ತಿಕೆ ತೋರುವ status- symbols.
ನವಾಬನ ಜನಾನಾ ದೊಡ್ಡದಿದ್ದಷ್ಟೂ ಆತ ದೊಡ್ಡ ನವಾಬ.
ಆದರೆ, ಆತನ ದೊಡ್ಡಸ್ತಿಕೆಗಾಗಿ ಬಲಿಯಾಗುವ ಜನರ ಕಣ್ಣೀರನ್ನು ಆತ ಗಮನಿಸುವದಿಲ್ಲ.
ಇದನ್ನೇ ಭೂತಾಯಿ ಹೀಗೆ ಹೇಳುತ್ತಾಳೆ:

ನನ್ನನ್ನು ನಿರ್ಜೀವ ನೆಲವೆಂದು ತಿಳಿದು ಕಡಿಯಬೇಡ; ನಾನು ಕೇವಲ ಒಡವೆ ಅಲ್ಲ, ನಾನು ಉಸಿರಿರುವ ಒಡಲು; ಯಾಕೆಂದರೆ ನನ್ನ ಉಸಿರಿನಿಂದಲೆ ಬದಕುತ್ತಿವೆ ನನ್ನಲ್ಲಿಯ ಕೋಟಿ ಕೋಟಿ ಜೀವಿಗಳು.
‘ಒಡವ್ಯಲ್ಲೊ ಮಗನೆ ಉಸಿರಿದ್ದೊಡಲೊ’!
…………………………………………………….......
ಬೇಂದ್ರೆಯವರ ಕಾಲದಲ್ಲಿಯೇ, ಎಲ್ಲಾ ಯುರೋಪಿಯನ್ ದೇಶಗಳು ಏಶಿಯಾ ಹಾಗೂ ಆಫ್ರಿಕಾ ಖಂಡದ ದೇಶಗಳಲ್ಲಿ ಕ್ರೌರ್ಯದಿಂದ ಅಧಿಕಾರ ಸ್ಥಾಪಿಸಿ, ಆ ದೇಶಗಳನ್ನು ಶೋಷಿಸುತ್ತಿದ್ದವು. ಭಾರತವಂತೂ ಪುರಾತನ ಕಾಲದಿಂದಲೇ ಆಕ್ರಮಣಗಳನ್ನು ಎದುರಿಸುತ್ತ ಬಂದ ನಾಡು.

ಈ ಎಲ್ಲ ಸಂಗತಿಗಳು ಬೇಂದ್ರೆಯವರಿಗೆ ಈ ಕವನವನ್ನು ಬರೆಯಲು ಪ್ರೇರಣೆ ಕೊಟ್ಟಿರಬೇಕು. ಇಂತಹದೇ ಇನ್ನೊಂದು ಕವನವನ್ನು ಅವರು ರಚಿಸಿದ್ದಾರೆ : ‘ಮೊದಲಗಿತ್ತಿ’
(ಮೊದಲಗಿತ್ತಿಯಂತೆ ಮೆರೆಯುವಿಯೇ ತಾಯಿ|
ಮೊದಲಗಿತ್ತಿಯಂತೆ ಮೆರೆಯುತಿಹೆ.)

ಮಾನವನ ನಾಗರಿಕತೆ ಬೆಳೆದಂತೆಲ್ಲ ಶೋಷಣೆಯೂ ಹೆಚ್ಚುತ್ತ ಹೋದದ್ದನ್ನು ಅವರು ತಮ್ಮ ‘ಕರಡಿ ಕುಣಿತ’ ಕವನದಲ್ಲಿ ಬಣ್ಣಿಸಿದ್ದಾರೆ:

ಯಾವ ಕಾಡಡವಿಯಲ್ಲಿ ಜೇನುಂಡು ಬೆಳೆದಿದ್ದ
ಜಾಂಬುವಂತನ ಹಿಡಿದು ತಂದಾನೊ
ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ
ಧಣಿ ದಾನ ಕೊಡುವನು ಎಂದಾನೊ.

ಜಾಂಬುವಂತ ಅಂದರೆ ಮೂಲಜನಾಂಗದ ಪ್ರತಿನಿಧಿ. ಧಣಿ ಅಂದರೆ feudal societyಯ ಪ್ರತಿನಿಧಿ.
ಅಡವಿಯಲ್ಲಿ ಸ್ವತಂತ್ರನಾಗಿ, ಜೇನುಂಡು ಬದುಕುತ್ತಿದ್ದ ಕರಡಿಯನ್ನು, ನಾಗರಿಕ ಮಾನವನು ಹಿಡಿದು ತಂದು, ಧಣಿ ಕೊಡುವ ದಾನಕ್ಕಾಗಿ (!) ಸಲಾಮು ಹೊಡಿಸುತ್ತಾನೆ!

ಬೇಂದ್ರೆಯವರದು ಭಾರತೀಯ ಆದರ್ಶ, ಈಶಾವಾಸ್ಯ ಉಪನಿಷತ್ದಲ್ಲಿ ಹೇಳುವಂತೆ :
“ಈಶಾವಾಸ್ಯಮಿದಮ್ ಸರ್ವಮ್,ಯತ್ಕಿಂಚ ದುರಿತಮ್ ಮಯಿ;
ತೇನ ತ್ಯಕ್ತೇನ ಭುಂಜೀಥಾ:, ಮಾ ಗೃಧ: ಕಸ್ಯಸ್ವಿದ್ಧನಮ್.

ಈ ಆದರ್ಶವನ್ನು ಬಿಂಬಿಸುವ ಕವನಗಳೂ ಸಹ ಅವರಿಂದ ಹೊಮ್ಮಿವೆ. ಉದಾಹರಣೆಗೆ, ಅವರ ‘ಬೈರಾಗಿಯ ಹಾಡು’ ಎನ್ನುವ ಅತಿ ಚಿಕ್ಕ ಕವನವೊಂದನ್ನು ನೋಡಬಹುದು:

ಬೈರಾಗಿಯ ಹಾಡು
ಇಕೋ ನೆಲ-ಅಕೋ ಜಲ
ಅದರ ಮೇಲೆ ಮರದ ಫಲ
ಮನದೊಳಿದೆ ಪಡೆವ ಛಲ
ಬೆಳೆವಗೆ ನೆಲವೆಲ್ಲ ಹೊಲ.
ಜಲಧಿವರೆಗು ಒಂದೆ ಕುಲ
ಅನ್ನವೆ ಧರ್ಮದ ಮೂಲ
ಪ್ರೀತಿಯೆ ಮೋಕ್ಷಕ್ಕೆ ಬಲ
ಇದೇ ಶೀಲ ಸರ್ವಕಾಲ || ಇಕೋ ನೆಲ…..

ಕಾಮೆಂಟ್‌ಗಳಿಲ್ಲ: